– ಶಾಂತಿಯುತ ಪರೀಕ್ಷೆ ನಡೆಯುತ್ತಿದೆ ಎಂದ ಪ್ರಾಂಶುಪಾಲರು
ಪಾಟ್ನಾ: ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಗುಂಪುಗುಂಪಾಗಿ ಕುಳಿತು ಪರೀಕ್ಷೆ ಬರೆದ ಘಟನೆ ಬಿಹಾರದಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಶ್ಚಿಮ ಚಂಪಾರಣ್ ಜಿಲ್ಲೆಯ ಬೇತಿಯಾ ಪಟ್ಟಣದ ರಾಮ್ ಲಖನ್ ಸಿಂಗ್ ಯಾದವ್ (ಆರ್‌ಎಲ್‍ಎಸ್‍ವೈ) ಕಾಲೇಜಿನಲ್ಲಿ ಪರೀಕ್ಷಾ ನಕಲು ನಡೆದಿದೆ. ಆರ್‌ಎಲ್‍ಎಸ್‍ವೈ ಕಾಲೇಜು ಬಾಬಾ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಬಿಹಾರ ವಿಶ್ವವಿದ್ಯಾಲಯದ ಘಟಕವಾಗಿದ್ದು, ಅಂತಿಮ ವರ್ಷದ ಪದವಿಪೂರ್ವ ಪರೀಕ್ಷೆಯನ್ನು ವಿದ್ಯಾರ್ಥಿಗಳು ಗುಂಪು ಗುಂಪಾಗಿ ಕುಳಿತು ಬರೆದಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳು ಕಾಪಿ ಮಾಡುತ್ತಾರೆ ಎಂದು ತಲೆಗೆ ಡಬ್ಬ ಕಟ್ಟಿದ್ದ ಕಾಲೇಜ್
ವಿಶ್ವವಿದ್ಯಾಲಯ ಪರೀಕ್ಷೆ ನಡೆಸಿದ ಹಲವಾರು ಕಾಲೇಜುಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿದೆ. ಅನೇಕ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್‍ನಲ್ಲಿ ಎಲ್ಲಿಯಾದರೂ ಕುಳಿತು ಸಾಮೂಹಿಕ ನಕಲು ಮಾಡುವಲ್ಲಿ ತೊಡಗಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ವಿದ್ಯಾರ್ಥಿಗಳು ಮಹಡಿಗಳಲ್ಲಿ ಮತ್ತು ಕಾರಿಡಾರ್ ಗಳಲ್ಲಿ ಏಕೆ ಕುಳಿತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆರ್‌ಎಲ್‍ಎಸ್‍ವೈ ಕಾಲೇಜಿನ ಪ್ರಾಂಶುಪಾಲ ರಾಜೇಶ್ವರ್ ಪ್ರಸಾದ್ ಯಾದವ್, ಕಾಲೇಜಿನಲ್ಲಿ ಸ್ಥಳಾವಕಾಶದ ಕೊರತೆ ಇದೆ. ಕಾಲೇಜು ಕಟ್ಟಡದಲ್ಲಿ ಕೇವಲ 2,500 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಸಾಧ್ಯ. ಆದರೆ ವಿಶ್ವವಿದ್ಯಾಲಯವು ನಮ್ಮ ಕಾಲೇಜಿಗೆ ಸುಮಾರು 6,000 ವಿದ್ಯಾರ್ಥಿಗಳನ್ನು ನಿಗದಿಪಡಿಸಿದೆ ಎಂದು ದೂರಿದ್ದಾರೆ.

ಸಾಮೂಹಿಕ ಪರೀಕ್ಷಾ ನಕಲು ನಡೆಯುತ್ತಿದೆ ಎಂಬ ಆರೋಪವನ್ನು ಪ್ರಾಂಶುಪಾಲರು ತಳ್ಳಿ ಹಾಕಿದ್ದಾರೆ. ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರೂ ಪರೀಕ್ಷೆಗಳನ್ನು ಶಾಂತಿಯುತವಾಗಿ ನಡೆಸಲಾಗಿದೆ ಎಂದು ಹೇಳಿದರು.
ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದ ಪದವಿ ವಿದ್ಯಾರ್ಥಿಗಳಿಗೆ ಒಟ್ಟಿಗೆ ಪರೀಕ್ಷೆಗೆ ನಡೆಯುತ್ತಿವೆ. ಒಂದು ದಿನಕ್ಕೆ ಎರಡು ಬ್ಯಾಚ್‍ನಂತೆ ಪರೀಕ್ಷೆ ನಡೆಸಲಾಗುತ್ತಿದೆ. ಬೆಳಗ್ಗೆ 9ರಿಂದ 12 ಗಂಟೆ ವೆರೆಗೆ ನಡೆಯುವ ಮೊದಲ ಬ್ಯಾಚ್‍ನಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ 2,000 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಬಳಿಕ ಮಧ್ಯಾಹ್ನ 2ರಿಂದ 5ಗಂಟೆ ವರೆಗೆ ನಡೆಯುವ ಕಲಾ ಪರೀಕ್ಷೆಗೆ 6,000 ವಿದ್ಯಾರ್ಥಿಗಳು ಬರುತ್ತಾರೆ ಎಂದು ತಿಳಿಸಿದರು.