Tag: ಪದವಿ ಕಾಲೇಜು

  • ವಿಧಾನಸಭೆಯಲ್ಲಿ ಡ್ರೆಸ್ ಕೋಡ್ ವಿಚಾರ ಪ್ರಸ್ತಾಪಿಸಿದ ಸಿದ್ದರಾಮಯ್ಯ

    ವಿಧಾನಸಭೆಯಲ್ಲಿ ಡ್ರೆಸ್ ಕೋಡ್ ವಿಚಾರ ಪ್ರಸ್ತಾಪಿಸಿದ ಸಿದ್ದರಾಮಯ್ಯ

    ಬೆಂಗಳೂರು: ವಿಧಾನಸಭೆಯಲ್ಲಿ ಪದವಿ ಕಾಲೇಜುಗಳಲ್ಲಿ ಡ್ರೆಸ್ ಕೋಡ್ ವಿಚಾರವನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದ್ರು. ಚಾಮರಾಜನಗರದಲ್ಲಿ ನಿನ್ನೆ ಅಶ್ವಥ್ ನಾರಾಯಣ್ ಡಿಗ್ರಿ ಕಾಲೇಜ್‍ಗಳಲ್ಲಿ ಸಮವಸ್ತ್ರ ಕಡ್ಡಾಯ ಅಲ್ಲ ಅಂತ ಹೇಳಿದ್ದಾರೆ. ಈ ಬಗ್ಗೆ ಸಿಎಂ ಸ್ಪಷ್ಟನೆ ಕೊಡ್ಬೇಕು. ಅದಕ್ಕೆ ಬದ್ಧರಾಗಿರಬೇಕು ಅಂದ್ರು.

    ಸಿಎಂ ಬೊಮ್ಮಾಯಿ ಉತ್ತರಿಸಿ, ಎಲ್ಲಿ ಡ್ರೆಸ್ ಕೋಡ್ ಇದೆ. ಅಲ್ಲಿ ನಿಯಮ ಫಾಲೋ ಮಾಡಿ ಅಂತ ಹೈಕೋರ್ಟ್ ಆದೇಶವೂ ಸ್ಪಷ್ಟವಾಗಿದೆ. ಉನ್ನತ ಶಿಕ್ಷಣ ಸಚಿವರು ಕ್ಲಿಯರ್ ಆಗಿ ಹೇಳಿದ್ದಾರೆ. ಅದಕ್ಕೆ ಮತ್ತೆ ಸ್ಪಷ್ಟೀಕರಣ ಅಗತ್ಯ ಇಲ್ಲ ಅಂದ್ರು. ಸಚಿವರು ಹೇಳಿದ್ದು ಸರಿ, ನೀವು ಸ್ಪಷ್ಟನೆ ಕೊಡಿ ಅಂತ ಸಿದ್ದರಾಮಯ್ಯ ಕೇಳಿದ್ರು. ಸಚಿವರೇ ಹೇಳಿದ್ಮೇಲೆ ನನ್ನ ಸ್ಪಷ್ಟನೆ ಅನಗತ್ಯ ಅಂತ ಸಿಎಂ ಉತ್ತರಿಸಿದ್ರು.

    ಇತ್ತ ಸದನದಲ್ಲಿ ಕಾಂಗ್ರೆಸ್ ಸದಸ್ಯರು ನಡೆದುಕೊಂಡ ರೀತಿ ಸರಿಯಲ್ಲ ಅಂತ ಸಿಎಂ ಬೊಮ್ಮಾಯಿ ಕಿಡಿಕಾರಿದ್ದಾರೆ. ರಾಷ್ಟ್ರಧ್ವಜವನ್ನು ರಾಜಕೀಯ ತೆವಲಿಗೆ ದುರ್ಬಳಕೆ ಮಾಡಿಕೊಳ್ತಿದ್ದಾರೆ. ಕಾನೂನಾತ್ಮಕವಾಗಿ ಈಶ್ವರಪ್ಪನವರು ಮಾತನಾಡಿರುವುದರಲ್ಲಿ ತಪ್ಪಿಲ್ಲ ಅಂದ್ರು. ಈಶ್ವರಪ್ಪ ಮಾತಾಡಿ, ನಾನು ಭಗವಾಧ್ವಜ ಹಾರಿಸಿದ್ದೇನೆ ಅಂತ ಹೇಳಿದ್ದರೆ ಈಗಲೇ ರಾಜೀನಾಮೆ ಕೊಡುತ್ತೇನೆ ಅಂದ್ರು.

    ಘಟನೆ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ-ಡಿಕೆಶಿ, ಈಶ್ವರಪ್ಪ ಅವರನ್ನು ಅಮಾನತು ಮಾಡದಿದ್ದರೆ ನಾಳೆ ಬೆಳಗ್ಗೆ 11 ಗಂಟೆಗೆ ಅಹೋರಾತ್ರಿ ಧರಣಿ ಬಗ್ಗೆ ತೀರ್ಮಾನ ಮಾಡ್ತೇವೆ. ಇನ್ನು, ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಯಾವ ಪುರುಷಾರ್ಥಕ್ಕೆ ಧರಣಿ ಮಾಡ್ತಿದ್ದಾರೆ. ಓಟ್‍ಗಾಗಿ 2 ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನೇ ಹಾಳು ಮಾಡಲು ಹೊರಟಿವೆ ಅಂತ ವಾಗ್ದಾಳಿ ನಡೆಸಿದ್ರು.

  • ಮುಗಿಯದ ಕೇಸರಿ ಶಲ್ಯ ವಿವಾದ – ಠಾಣೆ ಮೆಟ್ಟಿಲೇರಿದ ವಿದ್ಯಾರ್ಥಿಗಳ ಗಲಾಟೆ

    ಮುಗಿಯದ ಕೇಸರಿ ಶಲ್ಯ ವಿವಾದ – ಠಾಣೆ ಮೆಟ್ಟಿಲೇರಿದ ವಿದ್ಯಾರ್ಥಿಗಳ ಗಲಾಟೆ

    ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಬಾಳಗಡಿ ಗ್ರಾಮದಲ್ಲಿರುವ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಭವವಾಗಿದ್ದ ಕೇಸರಿ ಶಲ್ಯ-ಸ್ಕಾರ್ಫ್ ವಿವಾದ ತಣ್ಣಗಾಗುತ್ತಿದ್ದಂತೆ ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಅದೇ ಸಮಸ್ಯೆ ಎದುರಾಗಿದೆ.

    ಪದವಿ ಪೂರ್ವ ಕಾಲೇಜಿನಲ್ಲಿ ಕೇಸರಿ ಶಲ್ಯ ಹಾಗೂ ಸ್ಕಾರ್ಫ್ ವಿವಾದಕ್ಕೆ ವಿದ್ಯಾರ್ಥಿಗಳ ಮಧ್ಯೆ ಗಲಾಟೆ ನಡೆದಿದೆ. ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆಯಲ್ಲಿ ಕೆಲ ವಿದ್ಯಾರ್ಥಿಗಳೂ ಆಸ್ಪತ್ರೆಗೆ ದಾಖಲಾಗಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೊರೊನಾ ಪಾಸಿಟಿವ್

    ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅನ್ಯ ಕೋಮಿನ ವಿದ್ಯಾರ್ಥಿಗಳು ಸ್ಕಾರ್ಫ್ ಧರಿಸಿಕೊಂಡು ಕಾಲೇಜಿಗೆ ಬರುವುದನ್ನ ವಿರೋಧಿಸಿದ್ದರು. ಈ ಪರಿಣಾಮ ಎಬಿವಿಪಿ ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಧರಿಸಿಕೊಂಡು ಬಂದು ಪ್ರತಿಭಟನೆ ನಡೆಸಿದ್ದರು. ಸ್ಕಾರ್ಫ್ ಧರಿಸುವುದರಿಂದ ಸಮವಸ್ತ್ರದ ಮೂಲ ಉದ್ದೇಶ ಉಲ್ಲಂಘನೆಯಾಗುತ್ತಿದೆ ಎಂದು ಪಿಯುಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

    ಈಗ ಅದೇ ಸ್ಕಾರ್ಫ್-ಕೇಸರಿ ಶಲ್ಯ ವಿಚಾರಕ್ಕೆ ಎರಡು ಗುಂಪುಗಳ ವಿದ್ಯಾರ್ಥಿಗಳು ಗಲಾಟೆ ಮಾಡಿಕೊಂಡಿದ್ದಾರೆ. ಕಾಲೇಜಿನ ಆವರಣದಲ್ಲಿಯೇ ಹೊಡೆದಾಡಿಕೊಂಡಿದ್ದು, ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಪದವಿ ಕಾಲೇಜಿನಲ್ಲಿ ಉದ್ಭವವಾಗಿದ್ದ ಸಮಸ್ಯೆ ತಣ್ಣಗಾಗುತ್ತಿದ್ದಂತೆ ಈಗ ಪದವಿ ಪೂರ್ವ ಕಾಲೇಜಿನಲ್ಲಿ ಒಂದು ಹಂತ ಮುಂದಕ್ಕೆ ಹೋಗಿ ಹೊಡೆದಾಡುವ ಮಟ್ಟ ತಲುಪಿದೆ.

    ಈ ವಿವಾದದ ಆರಂಭದಲ್ಲಿಯೇ ಇತ್ಯರ್ಥಗೊಳಿಸುವಲ್ಲಿ ಕಾಲೇಜು ಆಡಳಿತ ಮಂಡಳಿ ಮುಂದಾಗಬೇಕಿತ್ತು. ಪ್ರಾಚಾರ್ಯರು ಹಾಗೂ ಆಡಳಿತ ಮಂಡಳಿ ಬೇಜವಾಬ್ದಾರಿಯಿಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ ಎಂದು ಸ್ಥಳಿಯರು ಕಾಲೇಜು ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಕಾಫಿನಾಡಲ್ಲಿ ಸ್ಕಾರ್ಫ್, ಕೇಸರಿ ಶಲ್ಯ ವಿವಾದ – ಪೋಷಕರ ಸಭೆಯಲ್ಲಿ ಇತ್ಯರ್ಥ

    ಪದವಿ ಕಾಲೇಜಿನಲ್ಲಿ ಉದ್ಭವವಾಗಿದ್ದ ಇದೇ ಸಮಸ್ಯೆಗೆ ಕಾಲೇಜಿನ ಪ್ರಾಂಶುಪಾಲರು ಪೋಷಕರ ಸಭೆ ಕರೆದು ಸಮಸ್ಯೆಗೆ ತಿಲಾಂಜಲಿ ಇಟ್ಟಿದ್ದರು. ಈಗ ಪದವಿ ಪೂರ್ವ ಕಾಲೇಜಿನಲ್ಲಿ ಸ್ಕಾರ್ಫ್ ವಿವಾದ ಜೋರಾಗಿದೆ.

  • ಜುಲೈ 19ರಿಂದ ಪದವಿ ಕಾಲೇಜುಗಳು ಪ್ರಾರಂಭ?

    ಜುಲೈ 19ರಿಂದ ಪದವಿ ಕಾಲೇಜುಗಳು ಪ್ರಾರಂಭ?

    ಬೆಂಗಳೂರು: ಜುಲೈ 19ರಿಂದ ಪದವಿ ಕಾಲೇಜು ಪ್ರಾರಂಭ ಮಾಡಲು ಸರ್ಕಾರದ ನಿರ್ಧರಿಸಿದ್ದು, ಅಧಿಕೃತ ಆದೇಶ ಹೊರಬೀಳುವುದೊಂದೇ ಬಾಕಿ ಇದೆ.

    ಒಂದು ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ಕಾಲೇಜಿಗೆ ಬರಲು ಅವಕಾಶ ಕಲ್ಪಿಸಲಾಗುತ್ತಿದೆ. ಈಗಾಗಲೇ ಶೇ.65ರಷ್ಟು ಲಸಿಕೆ ಅಭಿಯಾನ ಮುಕ್ತಾಯವಾಗಿದೆ. ಜುಲೈ 19ರ ವರೆಗೆ ಉಳಿದ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಕಡ್ಡಾಯವಾಗಿ ಒಂದು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಕಾಲೇಜಿಗೆ ಬರಲು ಅವಕಾಶ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ. ಆಫ್ ಲೈನ್ ಜೊತೆಗೆ ಆನ್ ಲೈನ್ ತರಗತಿಗಳನ್ನು ನಡೆಸಲು ಸಹ ತೀರ್ಮಾನಿಸಲಾಗಿದೆ.

    ಆಫ್ ಲೈನ್ ಅಥವಾ ಆನ್ ಲೈನ್ ಎರಡರಲ್ಲಿ ಯಾವುದಾದರೂ ಒಂದು ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಾಗಿ ಇರಬೇಕು. ಉನ್ನತ ಶಿಕ್ಷಣ ಇಲಾಖೆಯಿಂದ ನಿಯಮ ಜಾರಿ ಮಾಡಲಾಗಿದ್ದು, ವಿದ್ಯಾರ್ಥಿಗಳು ಮತ್ತು ಬೋಧಕ-ಬೋಧಕೇತರ ಸಿಬ್ಬಂದಿ ಕಡ್ಡಾಯವಾಗಿ ಒಂದು ಡೋಸ್ ಆದರೂ ಲಸಿಕೆ ಹಾಕಿಸಿರಬೇಕು. ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡಿದ್ದರಿಂದ ಕಾಲೇಜು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಅದರಲ್ಲೂ ತರಗತಿಗಳಿಗೆ ಹಾಜರಾಗಬೇಕಾದಲ್ಲಿ ಒಂದು ಡೋಸ್ ಆದರೂ ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ.

  • ಇನ್ನು ಮುಂದೆ ಅತಿಥಿ ಉಪನ್ಯಾಸಕರೆಂಬ ಪರಿಕಲ್ಪನೆಯೇ ಇರುವುದಿಲ್ಲ: ಅಶ್ವಥ್ ನಾರಾಯಣ್

    ಇನ್ನು ಮುಂದೆ ಅತಿಥಿ ಉಪನ್ಯಾಸಕರೆಂಬ ಪರಿಕಲ್ಪನೆಯೇ ಇರುವುದಿಲ್ಲ: ಅಶ್ವಥ್ ನಾರಾಯಣ್

    – ಪದವಿ ಕಾಲೇಜುಗಳಿಗೆ 8,000 ಬೋಧಕರ ನೇಮಕಕ್ಕೆ ಬೇಡಿಕೆ

    ಮೈಸೂರು: ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ತರುವುದು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿ ಹಿನ್ನೆಲೆಯಲ್ಲಿ ಇನ್ನು ಮುಂದೆ ಆತಿಥಿ ಉಪನ್ಯಾಸಕರೆಂಬ ಪರಿಕಲ್ಪನೆಯೇ ಇರದಂತೆ 8,000 ಖಾಯಂ ಉಪನ್ಯಾಸಕರ ನೇಮಕಾತಿಗೆ ಅನುಮತಿ ನೀಡುವಂತೆ ಕೋರಿ ಮುಖ್ಯಮಂತ್ರಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದರು.

    ಮೈಸೂರು ಜಿಲ್ಲೆಯ ಕೆ.ಆರ್ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉತ್ತಮ ಕಲಿಕೆ, ಬೋಧನೆಯು ಶಿಕ್ಷಣ ನೀತಿಯ ಆಶಯ. ಅದಕ್ಕೆ ತಕ್ಕಂತೆ ಗುಣಮಟ್ಟದ ಬೋಧಕರನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಈ ಬಗ್ಗೆ ಬಜೆಟ್ ಪೂರ್ವ ಸಭೆಯಲ್ಲಿ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದರು.

    ಉನ್ನತ ಶಿಕ್ಷಣ ಇಲಾಖೆಯಲ್ಲಿ ಮೂಲಸೌಕರ್ಯ ಸೇರಿದಂತೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅನುದಾನ ಸಾಲುತ್ತಿಲ್ಲ. ಬಜೆಟ್‍ನಲ್ಲಿ ಹಂಚಿಕೆಯಾಗುವ ಒಟ್ಟು ಅನುದಾನದಲ್ಲಿ ಶೇ.88ರಷ್ಟು ಅನುದಾನ ವೇತನಕ್ಕೇ ಹೋಗುತ್ತಿದೆ. ಇದುವರೆಗೂ ಒಟ್ಟಾರೆ ಬಜೆಟ್‍ನಲ್ಲಿ ಶೇ.2ರಷ್ಟು ಅನುದಾನವನ್ನಷ್ಟೇ ಉನ್ನತ ಶಿಕ್ಷಣಕ್ಕೆ ನೀಡಲಾಗುತ್ತಿತ್ತು. ಈ ಪ್ರಮಾಣವನ್ನು ಶೇ.3.5ಕ್ಕೆ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಕೋರಲಾಗಿದೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಡಿಸಿಎಂ ಹೇಳಿದರು.

    ಅತಿಥಿ ಉಪನ್ಯಾಸಕರ ಮುಂದುವರಿಕೆ:
    ಕಳೆದ ಶೈಕ್ಷಣಿಕ ವರ್ಷದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ಅತಿಥಿ ಉಪನ್ಯಾಸಕರನ್ನು ಈ ವರ್ಷವೂ ಮುಂದುವರಿಸಲಾಗಿದೆ. ವೇತನ ಏರಿಕೆ, ಸೇವೆ ಖಾಯಂ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಅತಿಥಿ ಉಪನ್ಯಾಸಕರು ಮುಂದಿಟ್ಟಿದ್ದಾರೆ. ಆ ಬೇಡಿಕೆಗಳನ್ನು ಈಡೇರಿಸಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿಗಳು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

    ಗುಣಮಟ್ಟಕ್ಕೆ ಕ್ರಮ:
    ಸರ್ಕಾರಿ ಸ್ವಾಮ್ಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಪದವಿ ಕಾಲೇಜುಗಳ ಗುಣಮಟ್ಟ ಹೆಚ್ಚಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಉತ್ತಮ ಫಲಿತಾಂಶ ಬರಬೇಕು. ನ್ಯಾಕ್ ಮಾನ್ಯತೆ ಸಿಗಬೇಕು. ಜೊತೆಗೆ ಆರ್ಥಿಕ ಮತ್ತು ಶೈಕ್ಷಣಿಕ ಸ್ವಾಯತ್ತತೆ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

    2 ಕೋಟಿ ಅನುದಾನ:
    ಕೆ.ಆರ್. ನಗರ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಹಿಳಾ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಕೆಲ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಈ ಶೈಕ್ಷಣಿಕ ವರ್ಷದಲ್ಲಿ ಎರಡೂ ಕಾಲೇಜುಗಳಿಗೆ 2 ಕೋಟಿ ರೂ. ಅನುದಾನ ನೀಡಲಾಗುವುದು. ಇನ್ನೂ ಹೆಚ್ಚಿನ ಅನುದಾನ ನೀಡಲು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

    ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ನೀಡಲಾಗಿದೆ. ಎಲ್ಲವನ್ನು ಪರಿಶೀಲನೆ ನಡೆಸಿದ ನಂತರ ಖಂಡಿತಾ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಸಾ.ರಾ.ಮಹೇಶ್, ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಮುಂತಾದವರು ಹಾಜರಿದ್ದರು.

  • ಮುಂಜಾಗ್ರತಾ ಕ್ರಮಗಳೊಂದಿಗೆ ಕಾಲೇಜು ಪ್ರಾರಂಭಕ್ಕೆ ಸರ್ಕಾರದ ನಿರ್ಧಾರ!

    ಮುಂಜಾಗ್ರತಾ ಕ್ರಮಗಳೊಂದಿಗೆ ಕಾಲೇಜು ಪ್ರಾರಂಭಕ್ಕೆ ಸರ್ಕಾರದ ನಿರ್ಧಾರ!

    ಬೆಂಗಳೂರು: ಕೊರೊನಾ ಮುಂಜಾಗ್ರತಾ ಕ್ರಮಗಳೊಂದಿಗೆ ಪದವಿ ಕಾಲೇಜುಗಳನ್ನ ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿವೆ.

    ಸೆಪ್ಟೆಂಬರ್ 1 ರಿಂದ ಆನ್‍ಲೈನ್ ತರಗತಿಗಳು ಮತ್ತು ಅಕ್ಟೋಬರ್ 1 ರಿಂದ ಆಫ್‍ಲೈನ್ ತರಗತಿ ಪ್ರಾರಂಭಿಸಲಾಗುತ್ತಿರುವ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಮೂಲಗಳ ಮಾಹಿತಿ ತಿಳಿದು ಬಂದಿದೆ. ಯುಜಿಸಿ ಸೂಚನೆ ಮೇರೆಗೆ ರಾಜ್ಯದಲ್ಲಿ ತರಗತಿ ಪ್ರಾರಂಭಕ್ಕೆ ಸರ್ಕಾರದ ನಿರ್ಧಾರ ಮಾಡಿದೆ ಎನ್ನಲಾಗಿದೆ.

    ಅನ್‍ಲಾಕ್ 4.O ಮಾರ್ಗಸೂಚಿಗಾಗಿ ಕೆಲವೇ ದಿನಗಳಲ್ಲಿ ಪ್ರಕಟವಾಗಲಿದೆ. ಈ ಮಾರ್ಗಸೂಚಿಯಲ್ಲಿ ಏನಿರುತ್ತೆ? ಏನಿರಲ? ಎಂಬುದರ ಬಗ್ಗೆ ಕುತೂಹಲ ಮನೆ ಮಾಡಿದೆ. ಸೆಪ್ಟೆಂಬರ್ ಒಂದರಿಂದ ಶಾಲೆ-ಕಾಲೇಜುಗಳ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡುತ್ತಾ ಅಥವಾ ಇನ್ನಷ್ಟು ದಿನ ಮುಂದೂಡುತ್ತಾ ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

  • ಹೊಸ ವೇಳಾಪಟ್ಟಿ ಬಿಡುಗಡೆಗೊಳಿಸಿದ ಯುಜಿಸಿ

    ಹೊಸ ವೇಳಾಪಟ್ಟಿ ಬಿಡುಗಡೆಗೊಳಿಸಿದ ಯುಜಿಸಿ

    ನವದೆಹಲಿ: ಕೊರೊನಾ ಲಾಕ್‍ಡೌನ್ ನಿಂದಾಗಿ ಮಾರ್ಚ್ ಮಧ್ಯದಲ್ಲಿಯೇ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಹೀಗಾಗಿ ಯುಜಿಸಿ ವಾರ್ಷಿಕ ಪರೀಕ್ಷೆ ಸಮಯ ಮತ್ತು 2020-21ರ ಶೈಕ್ಷಣಿಕ ವರ್ಷದ ಹೊಸ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ.

    ಪದವಿ ಸೆಮಿಸ್ಟರ್ ಪರೀಕ್ಷೆಗಳು ಜುಲೈ ತಿಂಗಳಲ್ಲಿ ನಡೆಯಲಿವೆ. ಹಳೆಯ ವಿದ್ಯಾರ್ಥಿಗಳಿಗೆ ಆಗಸ್ಟ್ ನಲ್ಲಿ ಕಾಲೇಜು ಆರಂಭಗಗೊಂಡ್ರೆ, ಹೊಸ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ. ಕೊರೊನಾ ವೈರಸ್ ನಿಂದಾಗಿ ದೇಶದಾದ್ಯಂತ ಶಾಲೆ, ಕಾಲೇಜುಗಳ ಬಂದ್ ಆಗಿವೆ.

    2019-2020 ಶೈಕ್ಷಣಿಕ ವರ್ಷದ ಬಾಕಿ ಉಳಿದಿರುವ ಪರೀಕ್ಷೆಗಳನ್ನು ನಡೆಸಲು ಪರ್ಯಾಯ ಮಾರ್ಗಗಳ ಅನುಸರಿಸುವ ಮೂಲಕ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಸರಳವಾಗಿ ನಡೆಸಲು ಯುಜಿಸಿ ತೀರ್ಮಾನಿಸಿದೆ. ನಡೆಯಬೇಕಿರುವ ಪರೀಕ್ಷೆಗಳು ಕಡಿಮೆ ಅವಧಿಯಲ್ಲಿ ಮುಗಿಯಲಿವೆ. ಪರೀಕ್ಷಾ ಅವಧಿಯನ್ನು 3 ರಿಂದ 2 ಗಂಟೆಗೆ ಇಳಿಸಲು ಚಿಂತನೆ ನಡೆಸಿದೆ. ಎಲ್ಲ ವಿಧದ ಪರೀಕ್ಷೆಗಳು ನಡೆಯಲಿದ್ದು, ಶಿಕ್ಷಣ ಸಂಸ್ಥೆಗಳು ಕೋವಿಡ್-19 ನಿಯಮ(ಮಾಸ್ಕ್, ಸಾಮಾಜಿಕ ಅಂತರ)ಗಳನ್ನು ಕಡ್ಡಾಯಾಗಿ ಪಾಲಿಸಬೇಕು.

    ಎಂ.ಫಿಲ್/ಪಿಎಚ್‍ಡಿ ಅವಧಿಯನ್ನು 6 ತಿಂಗಳು ವಿಸ್ತರಿಸಲಾಗಿದೆ. ಎಂ.ಫಿಲ್/ಪಿಎಚ್‍ಡಿ ವಿದ್ಯಾರ್ಥಿಗಳ ಮೌಖಿಕ ಪರೀಕ್ಷೆಗಳನ್ನು ಯುನಿವರ್ಸಿಟಿಗಳು ಆನ್‍ಲೈನ್ ವಿಡಿಯೋ ಕಾನ್ಪರೆನ್ಸ್ ಮೂಲಕವೇ ನಡೆಸಲು ಯುಜಿಸಿ ಸೂಚಿಸಿದೆ.

    2019-20 ಶೈಕ್ಷಣಿಕ ವರ್ಷದ ಬದಲಾದ ವೇಳಾಪಟ್ಟಿ
    * ಪರೀಕ್ಷೆಯ ಬಳಿಕ ಕಾಲೇಜ್ ಆರಂಭಗೊಂಡಿದ್ದು: 01-01-2020
    * ತರಗತಿ ಸ್ಥಗಿತಗೊಂಡಿದ್ದು: 16-03-2020
    * ಆನ್‍ಲೈನ್ ಕ್ಲಾಸ್ : 16-03-2020 ರಿಂದ 31-05-2020
    * ಪರೀಕ್ಷಾ ತಯಾರಿ/ ಪ್ರೊಜೆಕ್ಟ್ ವರ್ಕ್/ ಇ-ಲ್ಯಾಬ್ಸ್ / ಪ್ರಾಯೋಗಿಕ ಪರೀಕ್ಷೆ / ಅಸೈನ್‍ಮೆಂಟ್ / ಪ್ಲೇಸಮೆಂಟ್ ಡ್ರೈವ್ ಇತ್ಯಾದಿ: 01-06-2020 ರಿಂದ 15-06-2020
    ರಜೆ: 16-06-2020 ರಿಂದ 30-06-2020
    ಪರೀಕ್ಷಾ ಅವಧಿ
    1. ಟರ್ಮಿನಲ್ ಸೆಮಿಸ್ಟರ್/ವಾರ್ಷಿಕ: 01-07-2020 ರಿಂದ 15-07-2020
    2. ಇಂಟರ್ ಮೀಡಿಯೆಟ್ ಸೆಮಿಸ್ಟರ್ / ವಾರ್ಷಿಕ: 16-07-2020 ರಿಂದ 31-07-2020
    ಪರೀಕ್ಷಾ ಫಲಿತಾಂಶ:
    1. ಟರ್ಮಿನಲ್ ಸೆಮಿಸ್ಟರ್/ವಾರ್ಷಿಕ: 31-07-2020
    2. ಇಂಟರ್ ಮೀಡಿಯೆಟ್ ಸೆಮಿಸ್ಟರ್ / ವಾರ್ಷಿಕ: 14-08-2020

    2020-21 ಶೈಕ್ಷಣಿಕ ವರ್ಷದ ವೇಳಾಪಟ್ಟಿ ಹೀಗಿದೆ:
    * ದಾಖಲಾತಿ ಆರಂಭ: 01-08-2020 ರಿಂದ 31-08-2020
    * ತರಗತಿ ಆರಂಭ:
    1. ಹಳೆಯ ವಿದ್ಯಾರ್ಥಿಗಳು(2 ಮತ್ತು 3ನೇ ವರ್ಷದವರಿಗೆ): 01-08-2020
    2. ಮೊದಲ ವರ್ಷದ ವಿದ್ಯಾರ್ಥಿಗಳಿಗೆ: 01-09-2020
    * ಪರೀಕ್ಷಾ ಅವಧಿ: 01-01-2021 ರಿಂದ 25-01-2021
    * ಕಾಲೇಜು ಪುನರಾರಂಭ: 27-01-2021
    * ಕ್ಲಾಸ್ ನಡೆಯುವ ಕೊನೆಯ ದಿನ: 25-05-2021
    * ಪರೀಕ್ಷಾ ಅವಧಿ: 26-05-2021 ರಿಂದ 25-06-2021
    * ರಜೆ ಅವಧಿ: 01-07-2021 ರಿಂದ 30-07-2021
    * ಹೊಸ ಶೈಕ್ಷಣಿಕ ವರ್ಷ ಆರಂಭ (2021-2022): 02-08-2021

  • ತರಗತಿಗೆ ಚಕ್ಕರ್ ಹೊಡೆಯಲು ಕಾಂಪೌಂಡ್ ಹಾರಿದ ವಿದ್ಯಾರ್ಥಿನಿಯರು!

    ತರಗತಿಗೆ ಚಕ್ಕರ್ ಹೊಡೆಯಲು ಕಾಂಪೌಂಡ್ ಹಾರಿದ ವಿದ್ಯಾರ್ಥಿನಿಯರು!

    ಶಿವಮೊಗ್ಗ: ತರಗತಿಗೆ ಚಕ್ಕರ್ ಹೊಡೆಯಲು ಮಲೆನಾಡಿನ ವಿದ್ಯಾರ್ಥಿನಿಯರು ಕಾಂಪೌಂಡ್ ಹಾರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಜಿಲ್ಲೆಯ ಹೊಸನಗರ ಪಟ್ಟಣದಲ್ಲಿರುವ ಕೊಡಚಾದ್ರಿ ಪ್ರಥಮ ದರ್ಜೆ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಈ ರೀತಿ ಸಾಹಸ ಮಾಡಿದ್ದಾರೆ. ಕಾಲೇಜು ಬೆಳಗ್ಗೆ 10-30ರಿಂದ ಸಂಜೆ 4.30ರ ವರೆಗೆ ನಡೆಯುತ್ತದೆ. ಆದರೆ ಮಧ್ಯಾಹ್ನದ ನಂತರ ತರಗತಿಗಳು ಖಾಲಿ ಖಾಲಿ ಆಗುತ್ತವೆ. ಇದಕ್ಕೆ ಉಪಾಯ ಕಂಡುಹಿಡಿದ ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯ ಡಾ.ಮಾರ್ಷಲ್ ಸರಾಮ್ ಅವರು ಕಾಲೇಜಿನ ಗೇಟ್‍ಗೆ ಬೀಗ ಹಾಕಿದ್ದಾರೆ.

    ಗೇಟ್‍ಗೆ ಬೀಗ ಹಾಕಿದ್ದರಿಂದ ಕೆಲವು ವಿದ್ಯಾರ್ಥಿನಿಯರು, ಕಾಲೇಜು ಅವಧಿ ಮುಗಿಯುವುದಕ್ಕೂ ಮೊದಲೇ ಕಾಂಪೌಂಡ್ ಹಾರಿ ಹೋಗುತ್ತಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ಕಾಲೇಜಿನ ಪ್ರಾಚಾರ್ಯ ಡಾ.ಮಾರ್ಷಲ್ ಸರಾಮ್ 995 ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಇದ್ದಾರೆ. ಕಳೆದ 15 ದಿನಗಳಿಂದ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಭಾರೀ ಇಳಿಕೆಯಾಗಿತ್ತು. ಮೊದಲನೇ ಅವಧಿಯ ಕ್ಲಾಸ್‍ಗೆ ಇದ್ದ ವಿದ್ಯಾರ್ಥಿಗಳು ಎರಡನೇ ಅವಧಿಯ ವೇಳೆ ಇರುತ್ತಿರಲಿಲ್ಲ. ಇದರಿಂದಾಗಿ ಮಧ್ಯಾಹ್ನ ಬೆರಳೆಣಿಕೆ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಇರುತಿದ್ದರು. ಇದನ್ನು ಸರಿಪಡಿಸಲು ಕಾಲೇಜಿನ ಮುಖ್ಯ ಗೇಟ್‍ಗೆ ಕೀಲಿ ಹಾಕಲಾಗಿತ್ತು. ಈ ಕುರಿತು ವಿದ್ಯಾರ್ಥಿಗಳ ಪೋಷಕರಿಗೂ ಮಾಹಿತಿ ನೀಡಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಮಾರ್ಷಲ್ ಸರಾಮ್ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ನಿಮ್ಮ ಕಾಲೇಜಿನ ವಿದ್ಯಾರ್ಥಿಗಳು ಮಧ್ಯಾಹ್ನವಾಗುತ್ತಿದ್ದಂತೆ ನಗರದಲ್ಲಿ ಸುತ್ತಾಡುತ್ತಾರೆ ಅಂತ ಅನೇಕರು ದೂರು ನೀಡಿದ್ದಾರೆ. ಕಾಂಪೌಂಡ್ ಹಾಕಿದ್ದಕ್ಕೆ ನಮಗೆ ತೊಂದರೆ ಆಗುತ್ತಿದೆ ಅಂತ ಒಂದು ಬಾರಿಯೂ ವಿದ್ಯಾರ್ಥಿನಿಯರು ದೂರು ನೀಡಿಲ್ಲ. ಹೀಗಿರುವಾಗ ಯಾಕೆ ಹೀಗೆ ಮಾಡಿದ್ದಾರೆ ಎನ್ನುವ ಕುರಿತು ವಿಚಾರಿಸಿ ಮುಂದಿನ ತಿರ್ಮಾನ ಕೈಕೊಳ್ಳಲಾಗುತ್ತದೆ ಎಂದು ಹೇಳಿದರು.

    https://www.youtube.com/watch?v=4dAdH_-gARo

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv