Tag: ಪದವಿ

  • ಪದವಿ, ಸ್ನಾತಕೋತ್ತರ ಕೋರ್ಸ್‌ಗೆ ರಾಜ್ಯಕ್ಕೆ ಏಕರೂಪದ ಶೈಕ್ಷಣಿಕ ವೇಳಾಪಟ್ಟಿ: ಅಶ್ವಥ್ ನಾರಾಯಣ

    ಪದವಿ, ಸ್ನಾತಕೋತ್ತರ ಕೋರ್ಸ್‌ಗೆ ರಾಜ್ಯಕ್ಕೆ ಏಕರೂಪದ ಶೈಕ್ಷಣಿಕ ವೇಳಾಪಟ್ಟಿ: ಅಶ್ವಥ್ ನಾರಾಯಣ

    ಬೆಂಗಳೂರು: 2022-23ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ಇಡೀ ರಾಜ್ಯಕ್ಕೆ ಅನ್ವಯಿಸುವ ಹಾಗೆ ಏಕರೂಪದ ವೇಳಾಪಟ್ಟಿಯನ್ನು ಇದೇ ಮೊದಲ ಬಾರಿಗೆ ಸಿದ್ಧಪಡಿಸಲಾಗಿದೆ. ರಾಜ್ಯದ ಎಲ್ಲಾ ವಿ.ವಿ.ಗಳು ಮತ್ತು ಕಾಲೇಜುಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಈ ಏಕರೂಪದ ಕಾರ್ಯಕ್ರಮ ಪಟ್ಟಿಯಂತೆ, ರಾಜ್ಯದ ಉದ್ದಗಲಕ್ಕೂ ಪದವಿ ತರಗತಿಗಳಿಗೆ ಜುಲೈ 11ರಿಂದ ಪ್ರವೇಶಾತಿ ಆರಂಭವಾಗಲಿದ್ದು, ಆಗಸ್ಟ್ 17ರಿಂದ 22ರ ನಡುವೆ ತರಗತಿಗಳು ಆರಂಭವಾಗಲಿವೆ. ಇದೇ ರೀತಿಯಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಿಗೆ ಅಕ್ಟೋಬರ್ 15ರಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದ್ದು, ನವೆಂಬರ್ 2ರಿಂದ 14ರ ನಡುವೆ ತರಗತಿಗಳಿಗೆ ಚಾಲನೆ ಸಿಗಲಿದೆ ಎಂದಿದ್ದಾರೆ. ಇದನ್ನೂ ಓದಿ: ಪರಿಸರ ಸಂರಕ್ಷಣೆಗೆ ಯುವಪೀಳಿಗೆಯನ್ನು ಜಾಗೃತಗೊಳಿಸಲು ರಾಜ್ಯಪಾಲರ ಕರೆ

    EDUCATION
    ಸಾಂದರ್ಭಿಕ ಚಿತ್ರ

    ಇದುವರೆಗೂ ರಾಜ್ಯದಲ್ಲಿ ಒಂದೊಂದು ವಿ.ವಿ.ಯೂ ತಮ್ಮ ಅನುಕೂಲಕ್ಕೆ ತಕ್ಕಂತೆ ಶೈಕ್ಷಣಿಕ ವೇಳಾಪಟ್ಟಿ ರೂಪಿಸಿಕೊಳ್ಳುತ್ತಿದ್ದವು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಗೊಂದಲ ಮತ್ತು ಅನನುಕೂಲ ಆಗುತ್ತಿತ್ತು. ಇದನ್ನು ಗಮನಿಸಿ ಈ ಏಕರೂಪದ ವೇಳಾಪಟ್ಟಿಯನ್ನು ತರಲಾಗಿದೆ ಎಂದು ಅವರು ಹೇಳಿದ್ದಾರೆ.

    ಈ ವೇಳಾಪಟ್ಟಿಯಲ್ಲಿ ಪ್ರತೀ ಸೆಮಿಸ್ಟರುಗಳ ಆರಂಭ, ದಂಡರಹಿತ ಮತ್ತು ದಂಡ ಸಹಿತ ಪ್ರವೇಶಾತಿ ಅವಧಿ, ಪ್ರತಿ ಸೆಮಿಸ್ಟರುಗಳಿಗೆ ಬೋಧನಾ ತರಗತಿಗಳು ಆರಂಭವಾಗುವ ಮತ್ತು ಮುಗಿಯುವ ದಿನ, ಪರೀಕ್ಷೆ ಆರಂಭವಾಗುವ ದಿನ, ಮೌಲ್ಯಮಾಪನ ಆರಂಭ ಮತ್ತು ಫಲಿತಾಂಶ ಪ್ರಕಟಣೆಯ ದಿನ, ರಜೆ ಆರಂಭದ ದಿನಗಳನ್ನೆಲ್ಲ ಸ್ಪಷ್ಟವಾಗಿ ಸೂಚಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

    ಈ ಪಟ್ಟಿಯಲ್ಲಿ ಪದವಿಯ 6, ಸ್ನಾತಕೋತ್ತರ ಮಟ್ಟದ 4 ಮತ್ತು ವೃತ್ತಿಪರ ಕೋರ್ಸುಗಳ 8 ಸೆಮಿಸ್ಟರುಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ಸೆಮಿಸ್ಟರ್ ಮುಗಿದ ನಂತರದ ರಜೆ ಅವಧಿಯಲ್ಲಿ ಪರೀಕ್ಷಾ ಕರ್ತವ್ಯ ಬಂದರೆ, ಉಪನ್ಯಾಸಕರು ಆ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಅಮರನಾಥಕ್ಕೆ ರಾಜ್ಯದಿಂದ 100ಕ್ಕೂ ಹೆಚ್ಚು ಯಾತ್ರಿಕರು ಭೇಟಿ: ಎಲ್ಲ ಕನ್ನಡಿಗರ ರಕ್ಷಣೆಗೆ ಕ್ರಮ: ಸಿಎಂ ಬೊಮ್ಮಾಯಿ

    ಉನ್ನತ ಶಿಕ್ಷಣ ಪರಿಷತ್ ಮುಖ್ಯಸ್ಥರಾದ ಬಿ.ತಿಮ್ಮೇಗೌಡರ ಅಧ್ಯಕ್ಷತೆಯಲ್ಲಿ ಈ ಸಂಬಂಧ ಇದೇ 7ರಂದು ಎಲ್ಲಾ ವಿ.ವಿ.ಗಳ ಕುಲಪತಿಗಳು ಮತ್ತು ರಿಜಿಸ್ಟ್ರಾರ್ಸ್ ಜತೆ ವರ್ಚುಯಲ್ ಸಭೆ ನಡೆಸಿ, ಸಮಾಲೋಚನೆ ನಡೆಸಲಾಗಿತ್ತು ಎಂದು ಸಚಿವರು ವಿವರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜುಲೈ 11ರಿಂದ ಪದವಿ ಕಾಲೇಜು ದಾಖಲಾತಿ- ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಕೆ: ಅಶ್ವಥ್ ನಾರಾಯಣ

    ಜುಲೈ 11ರಿಂದ ಪದವಿ ಕಾಲೇಜು ದಾಖಲಾತಿ- ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಕೆ: ಅಶ್ವಥ್ ನಾರಾಯಣ

    ಬೆಂಗಳೂರು: ಪದವಿ ಕಾಲೇಜುಗಳಿಗೆ ಜುಲೈ 11ರಿಂದ 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ತಿಳಿಸಿದ್ದಾರೆ.

    ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಮೂಲಕ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ. ಎಲ್ಲವೂ ಆನ್ ಲೈನ್ ನಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಸಿಂಗಲ್ ಲಾಗಿನ್ ನಿಂದಲೇ ಯಾವ ಕಾಲೇಜಿಗೆ ಬೇಕಾದರೂ ಅರ್ಜಿ ಹಾಕಬಹುದು ಎಂದು ಮಾಹಿತಿ ನೀಡಿದರು.

    ಅರ್ಜಿ ಹಾಕಲು ಬೇರೆ ಬೇರೆ ಸಂಸ್ಥೆಗಳಿಗೆ ಓಡಾಡುವ ಅಗತ್ಯ ಇಲ್ಲ. ಪಿಯುಸಿ ನಂಬರ್ ಹಾಕಿದರೆ ಆಂಕಪಟ್ಟಿಗೆ ಸಂಬಂಧಿಸಿದ ಮಾಹಿತಿ ಸಿಗಲಿದೆ. ಉಳಿದಂತೆ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ ಇತ್ಯಾದಿಗಳು ಕೂಡ ಆಧಾರ್ ದೃಢೀಕರಣದಿಂದ ಸಿಗಲಿವೆ ಎಂದು ಸಚಿವರು ವಿವರಿಸಿದರು.

    ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರದಲ್ಲಿ ಎರಡನೇ ವರ್ಷಕ್ಕೆ ಬೇಕಾದ ಪಠ್ಯಕ್ರಮದ ಬಗ್ಗೆ ಇತ್ತೀಚೆಗೆ ಕುಲಪತಿಗಳ ಸಭೆ ನಡೆಸಲಾಗಿದೆ. ಹಾಗೆಯೇ ಮೊದಲನೇ ವರ್ಷದಲ್ಲಿ ಎನ್ ಇ ಪಿ 2020 ಅನುಷ್ಠಾನವನ್ನು ಪರಿಣಾಮಕಾರಿಯಾಗಿಸುವ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ ಎಂದರು.

    ರಾಜ್ಯದ 440 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 100 ಸರ್ಕಾರಿ ಪಾಲಿಟೆಕ್ನಿಕ್ ಹಾಗೂ 14 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸಂಗ್ರಹವಾಗುವ ಶುಲ್ಕವನ್ನು ಇನ್ನು ಮುಂದೆ ಕಾಲೇಜುಗಳಲ್ಲೇ ಬಳಸಲು ಅವಕಾಶ ನೀಡಲಾಗಿದೆ. ಸ್ವಾತಂತ್ರ್ಯ ಬಂದ ಮೇಲೆ ಇದೇ ಮೊದಲು ಈ ರೀತಿಯ ತೀರ್ಮಾನ ಮಾಡಲಾಗಿದೆ. ವರ್ಷಕ್ಕೆ ಕನಿಷ್ಠ 50 ಕೋಟಿ ರೂಪಾಯಿ ಹಣ ಕಾಲೇಜುಗಳಲ್ಲೇ ಉಳಿಯಲಿದ್ದು ಅದರಿಂದ ಕಾಲೇಜುಗಳಲ್ಲಿನ ಸಣ್ಣಪುಟ್ಟ ಖರ್ಚುಗಳಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು.

    ಈಗ ವಿ.ವಿ.ಗಳ ಮೂಲಕ ಸರ್ಕಾರಕ್ಕೆ ಭೌತಿಕ ಕಡತ ಸಲ್ಲಿಸಲು ಅವಕಾಶ ನಿರಾಕರಿಸಲಾಗಿದೆ. ಎಲ್ಲಾ ಕಡತಗಳು ಇ-ಆಫೀಸ್ ಮೂಲಕವೇ ಬರುತ್ತಿದ್ದು, 32,000 ಇ- ಕಡತಗಳು ಸೃಜನೆಗೊಂಡಿವೆ. ಜೊತೆಗೆ 11 ಲಕ್ಷ ವಿದ್ಯಾರ್ಥಿಗಳಿಗೆ 1600 ಕೋಟಿ ರೂಪಾಯಿಗಳನ್ನು ಪೋರ್ಟಲ್ ಮೂಲಕ ಅವರವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ. ಎಲ್ಲಾ ವಿ.ವಿ.ಗಳಲ್ಲೂ ಎಚ್.ಆರ್.ಎಂ.ಎಸ್. ಪ್ಲ್ಯಾಟ್ ಫಾರ್ಮ್ ಮೂಲಕವೇ ವೇತನ ಪಾವತಿ ಆಗುತ್ತಿದೆ ಎಂದು ಹೇಳಿದರು.

    ಐಐಎಂ ಮಾದರಿಯಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಡಾ.ವಾಸುದೇವ ಅತ್ರೆ ಸಮಿತಿ ವರದಿ ಕೊಟ್ಟಿದೆ. ಇದರ ಪ್ರಕಾರ ಹೊಸ ಕಾಯ್ದೆ ರಚಿಸಲು ಉದ್ದೇಶಿಸಿದ್ದು ಅದನ್ನು ಸಾರ್ವಜನಿಕರ ಅವಗಹನೆಗೆ ಉನ್ನತ ಶಿಕ್ಷಣ ಇಲಾಖೆ ವೆಬ್ ಸೈಟ್ ನಲ್ಲಿ ಹಾಕಲಾಗಿದೆ. ಸಾರ್ವಜನಿಕರು ಹೊಸ ಕಾಯ್ದೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು ಎಂದರು.

    Live Tv
    [brid partner=56869869 player=32851 video=960834 autoplay=true]

  • ಬುಧವಾರದಿಂದ ಪಿಯು, ಪದವಿ ಕಾಲೇಜು ಆರಂಭ

    ಬುಧವಾರದಿಂದ ಪಿಯು, ಪದವಿ ಕಾಲೇಜು ಆರಂಭ

    ಬೆಂಗಳೂರು: ಬುಧವಾರದಿಂದ ಪಿಯುಸಿ ಹಾಗೂ ಪದವಿ ಕಾಲೇಜುಗಳು ಆರಂಭವಾಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

    ಕಾಲೇಜುಗಳ ಆರಂಭ ವಿಚಾರ ಸಂಬಂಧ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ರೇಸ್‍ಕೋರ್ಸ್ ರಸ್ತೆಯ ಶಕ್ತಿ ಭವನದಲ್ಲಿ ಸಭೆ ನಡೆಸಿದ್ದಾರೆ. ಸಭೆ ಬಳಿಕ ಮಾತನಾಡಿದ ಗೃಹ ಸಚಿವರು, ರಾಜ್ಯದ ಪರಿಸ್ಥಿತಿ ಬಗ್ಗೆ ಚರ್ಚೆ ನಡೆದಿದೆ. ಬುಧವಾರದಿಂದ ಪಿಯು ಮತ್ತು ಡಿಗ್ರಿ ಕಾಲೇಜ್ ಗಳು ಓಪನ್ ಆಗಲಿವೆ ಎಂದರು. ಇದನ್ನೂ ಓದಿ: ಹಿಜಬ್ ಧರಿಸಿ ಕಲಾಪಕ್ಕೆ ಆಗಮಿಸಿದ ಕಲಬುರಗಿ ಕಾಂಗ್ರೆಸ್‍ ಶಾಸಕಿ

    ಕೋರ್ಟ್ ಸೂಚನೆಗಳನ್ನು ಕಡ್ಡಾಯವಾಗಿ ಫಾಲೋ ಮಾಡಬೇಕು. ಪೋಷಕರು, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸುತ್ತೇವೆ. ಪೊಲೀಸ್ ಇಲಾಖೆ ಇದಕ್ಕೆ ಬೇಕಾದ ಬಂದೋಬಸ್ತ್ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮ ಮುಖ್ಯ ಎಂದು ಪರೀಕ್ಷೆಯನ್ನೇ ಬಹಿಷ್ಕರಿಸಿದ ಶಿವಮೊಗ್ಗ ವಿದ್ಯಾರ್ಥಿನಿಯರು

    ಒಟ್ಟಿನಲ್ಲಿ ಇಂದು ಪ್ರೌಢಶಾಲಾ ತರಗತಿಯ ಆರಂಭವಾಗಿದೆ. ಕೆಲ ಪ್ರೌಢಶಾಲೆಗಳಲ್ಲಿ ಹಿಜಾಬ್ ಸಂಘರ್ಷ ಮುಂದುವರಿದಿದೆ. ಜೊತೆಗೆ ಪಿಯು ಮತ್ತು ಡಿಗ್ರಿ ಕಾಲೇಜು ಆರಂಭ ವಿಚಾರವಾಗಿ ಇಂದು ಸಿಎಂ ಚರ್ಚೆ ನಡೆಸಿದರು. ಸಭೆಯಲ್ಲಿ ಶಿಕ್ಷಣ ಸಚಿವ ಬಿಸಿ ನಾಗೇಶ್, ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಹಾಗೂ ಇಲಾಖೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

  • ಶಿಕ್ಷಣದಲ್ಲಿ ರಾಜಕೀಯ ಯಾಕೆ? : ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ

    ಶಿಕ್ಷಣದಲ್ಲಿ ರಾಜಕೀಯ ಯಾಕೆ? : ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ

    ಬೆಂಗಳೂರು: ಶಿಕ್ಷಣದಲ್ಲಿ ರಾಜಕೀಯವನ್ನು ಯಾಕೆ ಬೆರೆಸುತ್ತಿದ್ದೀರಿ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

    ಪದವಿ ಕೋರ್ಸ್​ಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಮಾಡಿರುವ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಂಸ್ಕೃತ ಭಾರತ ಟ್ರಸ್ಟ್ ಸೇರಿದಂತೆ ವಿವಿಧ ಸಂಘಟನೆಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಇಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆಯಿತು.

    ಅಕ್ಟೋಬರ್‌ 26 ರಂದು ಪೀಠ ಈ ಆದೇಶವನ್ನು ಮರು ಪರಿಶೀಲಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಇಂದಿನ ವಿಚಾರಣೆಯ ಆರಂಭದಲ್ಲಿ ಕನ್ನಡವನ್ನು ಭಾಷೆಯಾಗಿ ಕಲಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಭಾಷೆಯನ್ನು ಕಲಿಯುವುದನ್ನು ಪ್ರೋತ್ಸಾಹಿಸಲು ಅವಕಾಶವಿದೆ ಎಂದು ರಾಜ್ಯ ಸರ್ಕಾರದ ವಕೀಲರು ತಿಳಿಸಿದರು. ಇದನ್ನೂ ಓದಿ: ಐಸಿಸ್ ಉಗ್ರ ಸಂಘಟನೆಗೆ ಹಿಂದುತ್ವ ಹೋಲಿಕೆ – ವಿವಾದಕ್ಕೆ ಸಿಲುಕಿದ ಖುರ್ಷಿದ್ ಪುಸ್ತಕ

    ಈ ಉತ್ತರಕ್ಕೆ ಅಸಮಾಧಾನಗೊಂಡ ಪೀಠ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕಡ್ಡಾಯಕ್ಕೆ ಅವಕಾಶವಿದೆಯೇ? ಹೊರರಾಜ್ಯದ ವಿದ್ಯಾರ್ಥಿಗಳ‌ ಕನ್ನಡ ಕಲಿಕೆ ಕಡ್ಡಾಯಗೊಳಿಸಬಹುದೇ? ಉನ್ನತ ಶಿಕ್ಷಣದಲ್ಲಿ ಕಡ್ಡಾಯಗೊಳಿಸಲು ಅವಕಾಶವಿದೆಯೇ ಎಂದು ಪ್ರಶ್ನಿಸಿತು.

    ಈ ನೀತಿಯಿಂದಾಗಿ ಎಷ್ಟು ವಿದ್ಯಾರ್ಥಿಗಳು ಹೊರಹೋಗಿದ್ದಾರೆ ಗೊತ್ತೇ? ಉನ್ನತ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಗೊಳಿಸಲು ಅವಕಾಶ ಎಲ್ಲಿದೆ ಎಂದು ಖಾರವಾಗಿ ಹೈಕೋರ್ಟ್ ಪ್ರಶ್ನಿಸಿತು.

    ಸರ್ಕಾರಿ ವಕೀಲರು ವಾದ ಮಂಡನೆಗೆ ಅವಕಾಶ ಕೋರಿದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ನ.15 ಕ್ಕೆ ಹೈಕೋರ್ಟ್‌ ಮುಂದೂಡಿತು.

    ಅರ್ಜಿದಾರರ ಮನವಿ ಏನು?
    ರಾಜ್ಯದಲ್ಲಿ ಎಲ್ಲ ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆಯನ್ನು ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆಗಸ್ಟ್ 7ರಂದು ಆದೇಶ ಹೊರಡಿಸಿತ್ತು. ಈ ಆದೇಶ ಸಂವಿಧಾನದ ವಿಧಿ 14, 19, 21, 29 ಹಾಗೂ 30ರ ಆಶಯಗಳಿಗೆ ವಿರುದ್ಧವಾಗಿದೆ ಎಂದು ಸಂಸ್ಕೃತಿ ಭಾರತಿ ಟ್ರಸ್ಟ್ ಸೇರಿದಂತೆ ವಿವಿಧ ಸಂಘಟನೆಗಳು ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಿವೆ. ಇದನ್ನೂ ಓದಿ: ಜನಧನ್ ಖಾತೆಗಳಿಂದ 2 ರೂ.ನಂತೆ 6,000 ಕೋಟಿ ರೂ. ಅಕ್ರಮ ವರ್ಗಾವಣೆಯಾಗಿದೆ: ಎಚ್‍ಡಿಕೆ

    ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಇಲ್ಲದಿದ್ದರೂ, ಸರ್ಕಾರ 12ನೇ ತರಗತಿ ಓದಿ ಶಿಕ್ಷಣಕ್ಕಾಗಿ ರಾಜ್ಯದ ಕಾಲೆಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ ಮಾಡಿದೆ. ಪದವಿ ಹಂತದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸುವುದು ಸರಿಯಲ್ಲ. ಸರ್ಕಾರದ ಆದೇಶದಿಂದ ಭಾಷೆ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತದೆ. ಹೀಗಾಗಿ ಪದವಿ ಹಂತದಲ್ಲಿ ಕನ್ನಡ ಕಡ್ಡಾಯ ಮಾಡಿರುವ ಸರ್ಕಾರದ ಆದೇಶವನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಲಾಗಿದೆ.

  • ಪದವಿ, ಡಿಪ್ಲೂಮಾ, ವಿದ್ಯಾರ್ಥಿಗಳಿಗೆ KSRTC ಗುಡ್ ನ್ಯೂಸ್- ಬಸ್ ಪಾಸ್ ವಿಸ್ತರಣೆ

    ಪದವಿ, ಡಿಪ್ಲೂಮಾ, ವಿದ್ಯಾರ್ಥಿಗಳಿಗೆ KSRTC ಗುಡ್ ನ್ಯೂಸ್- ಬಸ್ ಪಾಸ್ ವಿಸ್ತರಣೆ

    ಬೆಂಗಳೂರು : ಪದವಿ, ಡಿಪ್ಲೂಮಾ, ಬಿಇಡಿ ವಿದ್ಯಾರ್ಥಿಗಳಿಗೆ ಕೆಎಸ್ಆರ್‌ಟಿಸಿ ಸಿಹಿಸುದ್ದಿಯೊಂದನ್ನು ನೀಡಿದ್ದು, ಕಳೆದ ಸಾಲಿನ ವಿದ್ಯಾರ್ಥಿ ಬಸ್ ಪಾಸ್ ಅವಧಿಯನ್ನು ಈ ಬಾರಿಯ ಪರೀಕ್ಷಾ ಅವಧಿವರೆಗೆ ವಿಸ್ತರಿಸಿದೆ.

    ಅಕ್ಟೋಬರ್​ನಲ್ಲಿ ಡಿಪ್ಲೂಮಾ, ಬಿಇಡಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಇರುವುದರಿಂದ ಕೆಎಸ್ಆರ್‌ಟಿಸಿ ಕಳೆದ ಸಾಲಿನ ವಿದ್ಯಾರ್ಥಿ ಬಸ್ ಪಾಸ್ ಅವಧಿಯನ್ನು ನವೆಂಬರ್ ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ 8 ತಿಂಗಳಿಂದ ಸಾಮೂಹಿಕ ಅತ್ಯಾಚಾರ – 26 ಆರೋಪಿಗಳ ಬಂಧನ!

    ಈ ಮೂರು ಕೋರ್ಸ್‍ಗಳ ಪರೀಕ್ಷೆಗಳು ನವೆಂಬರ್‌ಗೆ ಮುಂಚಿತವಾಗಿ ಮುಗಿದರೆ ಪರೀಕ್ಷಾ ಅವಧಿವರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿದೆ. ಹೀಗಾಗಿ ವಿದ್ಯಾರ್ಥಿಗಳು ಪಾಸ್ ಕೌಂಟರ್ ನಲ್ಲಿ ಅವಧಿ ವಿಸ್ತರಣೆಯ ಸಹಿ ಹಾಗೂ ಮೊಹರು ಪಡೆಯುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಏರಿಕೆ ಆಯ್ತು ಡೆಂಗ್ಯೂ, ಚಿಕನ್ ಗುನ್ಯಾ ಪ್ರಕರಣಗಳು

  • ತಾಲಿಬಾನಿಗಳ ಕ್ರೂರತ್ವ- ಮನೆ, ಮನೆಗೆ ನುಗ್ಗಿ ಯುವಕರ ಬರ್ಬರ ಹತ್ಯೆ

    ತಾಲಿಬಾನಿಗಳ ಕ್ರೂರತ್ವ- ಮನೆ, ಮನೆಗೆ ನುಗ್ಗಿ ಯುವಕರ ಬರ್ಬರ ಹತ್ಯೆ

    -ಅಮರುಲ್ಲಾ ಸಲೇಹ್ ಸಹೋದರ ವಶ

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕ್ರೂರತ್ವ ಮಿತಿಮೀರಿ ಹೋಗುತ್ತಿದೆ. ಪಂಜ್‍ಶೀರ್ ಪ್ರಾಂತ್ಯದಲ್ಲಿ ತಾಲಿಬಾನ್ ವಿರೋಧಿ ನಾರ್ದನ್ ಅಲಯನ್ಸ್ ಯೋಧರು ದಿಟ್ಟ ಹೋರಾಟದ ನಡುವೆಯೂ ತಾಲಿಬಾನಿಗಳು ಪಂಜ್‍ಶೀರ್‍ ಗೆ ನುಗ್ಗಿದ್ದಾರೆ. ಅಲ್ಲದೆ ಮನೆ, ಮನೆಗೆ ನುಗ್ಗಿ ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಿ ಮಾರಣಹೋಮ ನಡೆಸುತ್ತಿದ್ದಾರೆ.

    ತಾಲಿಬಾನಿಗಳಿಂದ ತಪ್ಪಿಸಿಕೊಳ್ಳಲು ಅಲ್ಲಿಯ ಜನರು ಗ್ರಾಮಗಳನ್ನು ತೊರೆಯುತ್ತಿದ್ದಾರೆ. ಹಂಗಾಮಿ ಉಪಾಧ್ಯಕ್ಷ, ನಾರ್ದನ್ ಅಲಯನ್ಸ್ ಅನ್ನು ಮುನ್ನಡೆಸುತ್ತಿರುವ ಅಮರುಲ್ಲಾ ಸಲೇಹ್ ಸದ್ಯ ಪಂಜ್‍ಶೀರ್ ಅನ್ನು ತೊರೆದಿದ್ದಾರೆ. ಅಲ್ಲಿ ಸಿಕ್ಕ ಸಲೇಹ್ ಸಹೋದರ ರೋಹುಲ್ಲಾ ಸಲೇಹ್ ರನ್ನು ವಶಕ್ಕೆ ಪಡೆದ ತಾಲಿಬಾನಿಗಳು ಚಿತ್ರಹಿಂಸೆ ನೀಡಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಆಡಿದ್ರೆ ದೇಹ ಪ್ರದರ್ಶನವಾಗುತ್ತೆ – ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಕ್ರೀಡೆ ನಿಷೇಧ

    ಇಂದು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ. 2001 ಇದೇ ದಿನ ಅಮೆರಿಕಾ ಮೇಲೆ ಅಲ್‍ಕೈದಾ ದಾಳಿ ನಡೆಸಿತ್ತು. ಹೀಗಾಗಿ ಅಮೆರಿಕಾಗೆ ಠಕ್ಕರ್ ಕೊಡುವುದಕ್ಕಾಗಿ ಅಫ್ಘಾನ್‍ನಲ್ಲಿ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಇಂದೇ ಬರುವ ನಿರೀಕ್ಷೆ ಇದೆ. ಇದನ್ನೂ ಓದಿ: ತಾಲಿಬಾನ್‍ನಲ್ಲಿ ಸರ್ಕಾರ ಘೋಷಣೆ – ಮೋಸ್ಟ್ ವಾಂಟೆಡ್ ಉಗ್ರ ಈಗ ಆಂತರಿಕ ಸಚಿವ

    ಪದವಿಗಳಿಗೆ ಬೆಲೆ ಇಲ್ಲ:
    ತಾಲಿಬಾನ್ ಆಡಳಿತದಲ್ಲಿ ಪಿಹೆಚ್‍ಡಿಗಳಿಗೆ, ಪದವಿಗಳಿಗೆ ಬೆಲೆ ಇಲ್ಲ. ಇದನ್ನು ಅಲ್ಲಿನ ಶಿಕ್ಷಣ ಮಂತ್ರಿಯೇ ಅಧಿಕೃತವಾಗಿ ಘೋಷಿಸಿದ್ದಾರೆ. ನೀವೇ ನೋಡಿ ಅಧಿಕಾರ ನಡೆಸ್ತಿರುವ ಮುಲ್ಲಾಗಳು, ತಾಲಿಬಾನಿಗಳಿಗೆ ಪಿಹೆಚ್‍ಡಿಯ ಕೋಡು ಇವೆಯಾ? ಅವರಿಗೆ ಕನಿಷ್ಠ ಹೈಸ್ಕೂಲ್ ಶಿಕ್ಷಣ ಕೂಡ ಇಲ್ಲ. ಆದ್ರೂ ಎಲ್ಲರಿಗಿಂತ ಉತ್ತಮ ಆಡಳಿತ ನೀಡ್ತಿದ್ದು, ಅವರೇ ಎಲ್ಲರಿಗಿಂತ ಶ್ರೇಷ್ಠ ಎಂದು ತಾಲಿಬಾನ್ ಸರ್ಕಾರದ ಶಿಕ್ಷಣ ಮಂತ್ರಿ ಶೇಖ್ ಮೌಲ್ವಿ ನೂರಲ್ಲಾ ಹೇಳಿದ್ದಾರೆ.

  • ತಮಿಳುನಾಡು ಸರ್ಕಾರಿ ಶಾಲೆಯಲ್ಲಿ ಓದಿದವರಿಗೆ ಪದವಿ ಪ್ರವೇಶದ ವೇಳೆ ಶೇ.7.5 ಮೀಸಲಾತಿ

    ತಮಿಳುನಾಡು ಸರ್ಕಾರಿ ಶಾಲೆಯಲ್ಲಿ ಓದಿದವರಿಗೆ ಪದವಿ ಪ್ರವೇಶದ ವೇಳೆ ಶೇ.7.5 ಮೀಸಲಾತಿ

    ಚೆನ್ನೈ: ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ತಮಿಳುನಾಡು ಸರ್ಕಾರ ಗುಡ್‍ನ್ಯೂಸ್ ನೀಡಿದೆ. 6 ರಿಂದ 12ನೇ ತರಗತಿಯವರೆಗೆ ಓದಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‍ಗಳ ಪ್ರವೇಶಾತಿ ವೇಳೆ ಶೇ.7.5 ಮೀಸಲಾತಿ ಕಲ್ಪಿಸುವ ಮಸೂದೆ ಮಂಡನೆಯಾಗಿದೆ.

    ಎಂಜಿನಿಯರಿಂಗ್, ಕೃಷಿ, ಮೀನುಗಾರಿಕೆ ಮತ್ತು ಕಾನೂನಿನಂತಹ ವೃತ್ತಿಪರ ಶಿಕ್ಷಣದಲ್ಲಿ ಶೇ.7.5 ಮೀಸಲಾತಿ ನೀಡುವ ಮಸೂದೆಯನ್ನು ಮುಖ್ಯಮಂತ್ರಿ ಸ್ಟಾಲಿನ್ ವಿಧಾನಸಭೆಯಲ್ಲಿ ಇಂದು ಮಂಡಿಸಿದ್ದಾರೆ.

    ಮೀಸಲಾತಿ ಜಾರಿಯಾದರೆ 6ನೇ ತರಗತಿಯಿಂದ 12ನೇ ತರಗತಿಯವರೆಗೆ ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳು, ಖಾಸಗಿ ಕಾಲೇಜುಗಳು, ಸರ್ಕಾರಿ ಅನುದಾನಿತ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ನೀಡಲಾಗುವ ಪದವಿ ಕೋರ್ಸ್‍ಗಳ ಪ್ರವೇಶದ ವೇಳೆ ಮೀಸಲಾತಿಯನ್ನು ಪಡೆಯಲಿದ್ದಾರೆ.  ಇದನ್ನೂ ಓದಿ: ಗ್ಯಾಂಗ್‍ರೇಪ್ ಎಸಗಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ ಕಿರಾತಕರು! 

    ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ಸಂಬಂಧ ನಿವೃತ್ತ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ ಮುರುಗೇಶನ್ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು. ಈ ಆಯೋಗದ ಶಿಫಾರಸಿನಂತೆ ಕಳೆದ ತಿಂಗಳು ಮಸೂದೆ ಮಂಡಿಸಲು ಕ್ಯಾಬಿನೆಟ್ ಒಪ್ಪಿಗೆ ನೀಡಿತ್ತು. ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಸರ್ಕಾರ ತಿಳಿಸಿತ್ತು.

    ಮಸೂದೆಯನ್ನು ಮಂಡಿಸಿ ಮಾತನಾಡಿದ ಸ್ಟಾಲಿನ್, ಬಡತನ ಮತ್ತು ಅರಿವಿನ ಕೊರತೆಯಿಂದಾಗಿ ಸರ್ಕಾರಿ ಶಾಲೆಗಳಿಂದ ವೃತ್ತಿಪರ ಕೋರ್ಸ್ ಪ್ರವೇಶಿಸುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ. ಈ ಸಂಖ್ಯೆ ಏರಿಸಲು ಈ ಮಸೂದೆ ನೆರವಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಮ್ಮನಿಂದ ದೂರವಾದ ಕಂದಮ್ಮನನ್ನ ರಕ್ಷಿಸಿದ ಟರ್ಕಿ ಸೈನಿಕರು

    ಸರ್ಕಾರಿ ಶಾಲೆಯಲ್ಲಿ ಓದಿದವರ ಪೈಕಿ 2020-21ರಲ್ಲಿ ಅಣ್ಣಾ ವಿಶ್ವವಿದ್ಯಾಲಯದಲ್ಲಿ ಕೇವಲ ಶೇ.0.83 ವಿದ್ಯಾರ್ಥಿಗಳು ದಾಖಲಾಗಿದ್ದರು. ಸರ್ಕಾರಿ ಮತ್ತು ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕ್ರಮವಾಗಿ ಶೇ.6.31 ಮತ್ತು ಶೇ.0.44 ರಷ್ಟು ಮಂದಿ ದಾಖಲಾಗಿದ್ದರೆ, ಪಶುವೈದ್ಯಕೀಯ ವಿಜ್ಞಾನದಲ್ಲಿ ಶೇ.3.7, ಮೀನುಗಾರಿಕೆಯಲ್ಲಿ ಶೇ.4.89, ತಿರುಚಿಯಲ್ಲಿರುವ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಶೇ.1ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗಿದ್ದರು.

  • ನಮ್ಮ ಧರ್ಮ, ನಮ್ಮ ಧರ್ಮ ಎನ್ನುವವರು ಪರಧರ್ಮ ಸಹಿಷ್ಣುಗಳಾಗಿ: ಸಿದ್ದರಾಮಯ್ಯ

    ನಮ್ಮ ಧರ್ಮ, ನಮ್ಮ ಧರ್ಮ ಎನ್ನುವವರು ಪರಧರ್ಮ ಸಹಿಷ್ಣುಗಳಾಗಿ: ಸಿದ್ದರಾಮಯ್ಯ

    ಬಾಗಲಕೋಟೆ: ಜಾತಿ ರಹಿತವಾದ ಸಮಾಜ ನಿರ್ಮಾಣ ಮಾಡಬೇಕು ಅನ್ನೋದು ನಮ್ಮ ಆಶಯ. ಬರೀ ನಮ್ಮ ಧರ್ಮ ನಮ್ಮ ಧರ್ಮ ಎನ್ನುತ್ತಾರೆ. ನಮ್ಮ ಧರ್ಮ ಇಟ್ಕೊಳ್ರಪ್ಪ. ಪರಧರ್ಮದ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಿ ಎಂದು ಬಾದಾಮಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

    ಬಾದಾಮಿ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಕ್ಕಳಿಗೆ ಟ್ಯಾಬ್ ವಿತರಿಸಿ ಮಾತನಾಡಿದ ಅವರು, ನೀವೆಲ್ಲ ಪದವಿ ಶಿಕ್ಷಣ ಪಡೆಯುತ್ತಿದ್ದೀರಿ ಮೊದಲು ಮನುಷ್ಯತ್ವ ಬೆಳೆಸಿಕೊಳ್ಳಿ. ಕೆರೂರನಲ್ಲಿ ಇಲ್ಲಿಯವರೆಗೆ ಪ್ರಥಮ ದರ್ಜೆ ಕಾಲೇಜ್ ಗೆ ಹೊಸ ಕಟ್ಟಡ ಇರಲಿಲ್ಲ. ಜಾಗ ಇಲ್ಲದ ಕಾರಣ ಕಟ್ಟಡ ಇರಲಿಲ್ಲ. ಕೆಐಎಡಿಬಿ ಇಂದ 29 ಎಕರೆ ಜಾಗ ಕೊಡಿಸಿದ್ದೀನಿ. ಅದು ಕೋರ್ಟ್‍ಗೆ ಹೋಗಿತ್ತು, ನಾನು ಹೈ ಕೋರ್ಟ್ ಗೆ ಹೋಗಿ ನಂತರ ಆ ಜಾಗ ಕೆಐಎಡಿಬಿಗೆ ಬಂತು. ನಾನು ಕೆಐಎಡಿಬಿಯಿಂದ ಕಾಲೇಜ್ ಗೆ 29 ಎಕರೆ ಜಾಗ ಕೊಡಿಸಿದ್ದೀನಿ, ದುಡ್ಡು ಕೊಡಿಸಿದ್ದೀನಿ. ನಾಳೆಯಿಂದಲೇ ಸರ್ಕಾರಿ ಪ್ರಥಮದರ್ಜೆ ಕಾಲೇಜ್ ಕಟ್ಟಡ ಕಾಮಗಾರಿ ಆರಂಭವಾಗುತ್ತೆ ಎಂದರು.

    ಅಧಿಕಾರಿಗಳು ಬಹಳ ಸೋಮಾರಿಗಳಿದ್ದಾರೆ. ಇನ್ನೂ ಕೂಡ ಕಾಮಗಾರಿ ಶುರುನೇ ಮಾಡಿಲ್ಲ. ನಾನು ನಿನ್ನೆ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದೆ. ನಾಳೆಯಿಂದ ಶುರುಮಾಡ್ತೀವಿ ಅಂತಾ ಹೇಳಿದ್ದಾರೆ. ಕೆಲ ಸಾರ್ವಜನಿಕರು ಪೀಠೋಪಕರಣ ಕೊಡಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೆ ಶಿಕ್ಷಣ ಸಿಗಬೇಕು. ಜ್ಞಾನ ಬೆಳವಣಿಗೆಯಾಗಬೇಕು. ಪ್ರತಿಯೊಬ್ಬರಿಗೂ ಸಮಾಜದ ಋಣ ಇರುತ್ತೆ. ಸಮಾಜದ ಋಣ ತೀರಿಸಬೇಕು. ಓದಿದವರು ಜಾತಿ ಮಾಡಲು ಹೋಗಬೇಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಇದನ್ನೂ ಓದಿ: ಯುವತಿ ನೇಣಿಗೆ ಶರಣು, ಯುವಕನ ಮನೆಗೆ ಬೆಂಕಿ – ಪತಿಯನ್ನ ಬಿಟ್ಟು ಇನಿಯನ ಜೊತೆ ಮದ್ವೆ

    ಓದಿಕೊಂಡು ಹೋಗಿ, ಹಳ್ಳಿಗಳಲ್ಲಿ ಜಾತಿ ನೋಡುತ್ತಾರೆ. ಬಸವಣ್ಣನವರ ವಚನದಲ್ಲಿರುವಂತೆ, ಇವನಾರವ ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯ ಎಂದು ಬಸವಣ್ಣನವರು ಹೇಳಿದ್ದಾರೆ. ನಮ್ಮ ಜಾತಿಯವನು ಅಂತಾ ಅಲ್ಲ, ಎಲ್ಲ ಜಾತಿಯವರು ನಮ್ಮವರೇ ಎಂದು ತಿಳಿಯಬೇಕು. ಕೊಳಕು ಬಟ್ಟೆ, ಚಡ್ಡಿ ಹರಿದೋಗಿದೆ ಅಂದ್ರೆ ಅದು ಅವನ ಹಣೆಬರಹ. ಯಾವ ದೇವರು ಇದನ್ನು ಹೇಳಿದ್ಯಾ, ಹಾಗಿದ್ರೆ ಅದು ದೇವರೇ ಅಲ್ಲ. ಎಲ್ಲರಿಗೂ ರಕ್ಷಣೆ ಕೊಡೋಣು ದೇವರು. ಈ ಕಂದಾಚಾರಗಳು ಹೋಗಬೇಕು. ಉಳ್ಳವರು ಶಿವಾಲಯ ಮಾಡವರು, ನಾನೇನು ಮಾಡಲಿ ಬಡವನಯ್ಯ ಎಂದು ಹೇಳಿದ್ದಾರೆ. ದೇವರೆಲ್ಲೂ ಇಲ್ಲ, ದೇವರು ನಮ್ಮಲ್ಲೇ ಇದ್ದಾನೆ ಎಂದು ಬಸವಣ್ಣನವರು ಹೇಳಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ನೀತಿ ಪಾಠ ಹೇಳಿದರು.

    ಟ್ಯಾಬ್ ಸರಿಯಾಗಿ ಉಪಯೋಗಿಸಿಕೊಂಡು ಶಿಕ್ಷಣ ಪಡೆಯಿರಿ. ಬುದ್ದಿವಂತಿಕೆ ಯಾರಪ್ಪನ ಸ್ವತ್ತಲ್ಲ. ನಮ್ಮೂರಲ್ಲಿ ಶಾನಭೋಗ ಅಂತಾ ಇದ್ದ. ವಕೀಲ ವೃತ್ತಿ ಶೂದ್ರರಿಗೆ ಹತ್ತಲ್ಲ, ಮೇಲ್ಜಾತಿಯವರಿಗೆ ಹತ್ತುತ್ತೆ ಎಂದು ನಮ್ಮಪ್ಪನಿಗೆ ಹೇಳಿದ್ದ. ಪ್ರತಿಯೊಬ್ಬರು ಬುದ್ದಿವಂತಿಕೆಯನ್ನು ಬೆಳೆಸಿಕೊಳ್ಳಬೇಕು. ಬಾಬಾಸಾಹೇಬ್ ಅಂಬೇಡ್ಕರ್ ಮೇಲ್ಜಾತಿಯಲ್ಲಿ ಹುಟ್ಟಿದ್ರಾ? ರಾಮಾಯಣ ಬರೆದವರು ಮೇಲ್ಜಾತಿಯಲ್ಲಿ ಹುಟ್ಟಿದ್ರಾ? ವಾಲ್ಮೀಕಿ ಯಾವ ಜಾತಿಯಲ್ಲಿ ಹುಟ್ಟಿದ್ರು? ಬುದ್ದಿವಂತಿಕೆ ಜಾತಿಯಿಂದ ಬರಲ್ಲ. ನಮ್ಮ ತಂದೆ ತಾಯಿ, ನಿನಗ್ಯಾಕಪ್ಪ ಕುರಿ ಮೇಯಿಸು, ದನ ಮೇಯಿಸು ಎಂದು ಹೇಳುತ್ತಾರೆ ಆದರೆ ಪ್ರತಿಯೊಬ್ಬರು ವೈಚಾರಿಕ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

  • 11 ವರ್ಷಕ್ಕೆ ಡಿಗ್ರಿ ಮುಗಿಸಿದ ಬಾಲಕ

    11 ವರ್ಷಕ್ಕೆ ಡಿಗ್ರಿ ಮುಗಿಸಿದ ಬಾಲಕ

    ಬ್ರಸೆಲ್ಸ್: 11 ವರ್ಷಕ್ಕೆ ಭೌತಶಾಸ್ತ್ರ ವಿಷಯದಲ್ಲಿ ಡಿಗ್ರಿ ಮುಗಿಸುವ ಮೂಲಕವಾಗಿ ಬೆಲ್ಜಿಯಮ್ ಬಾಲಕನೋರ್ವ ಸುದ್ದಿಯಾಗಿದ್ದಾನೆ.  ಇದನ್ನೂ ಓದಿ:  ಗಂಡು ಮಗುವಿನ ತಂದೆಯಾದ ಹರ್ಭಜನ್ ಸಿಂಗ್

     20 ವರ್ಷಕ್ಕೆ ಮುಗಿಸಬೇಕಾದ ಡಿಗ್ರಿಯನ್ನು ಲೌರೆಂಟ್ ಸಿಮೋನ್ಸ್ ಕೇವಲ 11 ವರ್ಷಕ್ಕೆ ಪೂರ್ಣಗೊಳಿಸಿದ್ದಾನೆ. ಅತೀ ಸಣ್ಣ ವಯಸ್ಸಿನಲ್ಲೇ ಈ ಬಾಲಕ ಮಾಡಿದ ಸಾಧನೆಗೆ ಎಲ್ಲರ ಹುಬ್ಬೇರುವಂತೆ ಮಾಡಿದೆ.

    ಬೆಲ್ಜಿಯಂನ ಒಸ್ಟೆಂಡ್‍ನ ನಿವಾಸಿಯಾದ ಸಿಮೋನ್ಸ್ 11 ವರ್ಷಕ್ಕೆ ವಿಶ್ವವಿದ್ಯಾಲಯವೊಂದರಲ್ಲಿ ಡಿಗ್ರಿ ಸರ್ಟಿಫಿಕೇಟ್ ಪಡೆಯುವ ಮೂಲಕವಾಗಿ ಜಗತ್ತಿನ 2ನೇ ಅತೀ ಪುಟ್ಟ ಪದವೀಧರ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ. ಸಿಮೋನ್ಸ್ ಆಂಟ್ವರ್ಪ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದಗಲ್ಲಿ ಪದವಿ ಪ್ರಮಾಣ ಪತ್ರ ಪಡೆದಿದ್ದಾನೆ. ಸಾಮಾನ್ಯವಾಗಿ ಎಲ್ಲರೂ ಮೂರು ವರ್ಷ ಡಿಗ್ರಿ ಮುಗಿಸುತ್ತಾರೆ. ಆದರೆ, ಸಿಮೋನ್ಸ್ ಮಾತ್ರ ಕೇವಲ ಒಂದೇ ವರ್ಷದಲ್ಲಿ ಪದವಿ ಪೂರ್ಣಗೊಳಿಸಿ ಸಾಧನೆ ಮಾಡಿದ್ದಾನೆ.

    ಬಾಲಕ ಶೇ. 85 ಅಂಕ ಗಳಿಸಿದ್ದಾನೆ. ಈ ಬಾಲಕ ಸಣ್ಣ ವಯಸ್ಸಿನಲ್ಲೇ ಪದವಿಯನ್ನು ಪಡೆದ 2ನೇ ಅತೀ ಚಿಕ್ಕ ಪುಟ್ಟ ಬಾಲಕನಾಗಿದ್ದಾನೆ. ಈ ಹಿಂದೆ 1994ರಲ್ಲಿ ಮೈಕಲ್ ಕೀರ್ನಿ ಎಂಬವ 10ವರ್ಷದವನಿದ್ದಾಗಲೇ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಭಾಗದಲ್ಲಿ ಪದವಿ ಸಂಪಾದಿಸಿದ್ದ. ಈ ದಾಖಲೆಯನ್ನು ಸಿಮೋನ್ಸ್ ಮರಿಯಬಹುದಿತ್ತು. ಆದರೆ 2019ರಲ್ಲಿ ನೆದರ್‍ಲೆಂಡ್‍ನ ಐಂಡ್‍ಹೋವನ್ ವಿಶ್ವವಿದ್ಯಾಲಯವು ಸಿಮೋನ್ಸ್ ಗೆ 10 ವರ್ಷ ವಯಸ್ಸಾಗದ ಹೊರತ ಡಿಗ್ರಿ ಓದಲು ಅವಕಾಶ ಇಲ್ಲ ಎಂದು ಹೇಳಿತ್ತು. ಬಾಲಕನ ಈ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಡಿತ ಇಲ್ಲ: ಅಶ್ವತ್ಥ ನಾರಾಯಣ

    ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಡಿತ ಇಲ್ಲ: ಅಶ್ವತ್ಥ ನಾರಾಯಣ

    ಬೆಂಗಳೂರು: ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆಯನ್ನು ಮೊಟಕುಗೊಳಿಸುವ ಯಾವುದೇ ಚಿಂತನೆ ಅಥವಾ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.

    ಗುರುವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸ್ಥಳೀಯ ಹಾಗೂ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚು ಮನ್ನಣೆ ನೀಡಿ ಆ ಭಾಷೆಗಳಲ್ಲೇ ವೃತ್ತಿಪರ ಶಿಕ್ಷಣ ಸೇರಿ ಎಲ್ಲ ವಿಭಾಗದ ಉನ್ನತ ಶಿಕ್ಷಣವನ್ನು ಬೋಧಿಸಬೇಕು ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯ. ಈ ಅಂಶಕ್ಕೆ ಶಿಕ್ಷಣ ನೀತಿಯಲ್ಲಿ ಹೆಚ್ಚು ಒತ್ತು ನೀಡಲಾಗಿದೆ ಎಂದಿದ್ದಾರೆ.

    ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ, ಪದವಿ ಶಿಕ್ಷಣ ಸಂರಚನೆ ಹೀಗಿರುತ್ತದೆ. ಮೂರು ವರ್ಷ ವ್ಯಾಸಂಗ ಮಾಡಿದರೆ ಪದವಿ ಮುಗಿಯುತ್ತದೆ. ನಾಲ್ಕು ವರ್ಷ ಓದಿದರೆ ಅದನ್ನು ‘ಡಿಗ್ರಿ ಆನರ್ಸ್’ ಎಂದು ಪರಿಗಣಿಸಲಾಗುತ್ತದೆ, ಮತ್ತೂ ಐದು ವರ್ಷ ವ್ಯಾಸಂಗ ಮಾಡಿದರೆ ಸ್ನಾತಕೋತ್ತರ ಪದವಿಯೇ ಪೂರ್ಣಗೊಳಿಸಿದಂತೆ ಆಗುತ್ತದೆ. ಇದು ಪೂರ್ವ ವ್ಯವಸ್ಥೆಯ ಸುಧಾರಣಾ ಕ್ರಮವಷ್ಟೇ ಎಂದು ಡಿಸಿಎಂ ವಿವರಿಸಿದ್ದಾರೆ.

    ಈ ವಿಷಯ ಇನ್ನು ಕರಡು ತಯಾರಿಕೆ ಹಂತದಲ್ಲಿದೆ. ಈಗಲೇ ಅದರ ಬಗ್ಗೆ ಆತಂಕಪಡುವ ಅಗತ್ಯ ಇಲ್ಲ. ಮುಖ್ಯವಾಗಿ ಪದವಿ ಶಿಕ್ಷಣದಲ್ಲಿ ಎರಡು ವರ್ಷ ಕನ್ನಡ ಬೋಧನೆ ಆಗುತ್ತಿರುವ ಹಾಲಿ ವ್ಯವಸ್ಥೆಯಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ. ಮಾತೃಭಾಷೆ ಕಲಿಕೆಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿಲ್ಲ ಎಂದು ಡಾ.ಅಶ್ವತ್ಥನಾರಾಯಣ ಸ್ಪಷ್ಟವಾಗಿ ಪುನುರುಚ್ಛರಿಸಿದ್ದಾರೆ. ಇದನ್ನೂ ಓದಿ: ಡಿಸಿಎಂ ಅಶ್ವತ್ಥನಾರಾಯಣ ಅವರಿಗೆ ಐಟಿಸಿಎ ಫೆಲೋಶಿಪ್

    ಶಿಕ್ಷಣದಲ್ಲಿ ಗುಣಮಟ್ಟ ಹಾಗೂ ಜಾಗತಿಕ ದೃಷ್ಟಿ ಇಟ್ಟುಕೊಂಡು ಅತ್ಯಂತ ಪುರಾತನ ಭಾಷೆಯಾದ ಕನ್ನಡದ ಭೋಧನೆ ಮತ್ತು ಕಲಿಕೆಯನ್ನು ಮತ್ತಷ್ಟು ವಿಸ್ತೃತಗೊಳಿಸುವ ಉದ್ದೇಶ ಸರಕಾರಕ್ಕೆ ಇದೆಯೇ ವಿನಾ, ಅದಕ್ಕೆ ಧಕ್ಕೆ ಉಂಟು ಮಾಡುವ ಯಾವುದೇ ಚಿಂತನೆ ಹೊಂದಿಲ್ಲ. ಈ ಬಗ್ಗೆ ಯಾವುದೇ ತಪ್ಪು ಅಭಿಪ್ರಾಯ ಉಂಟಾಗುವುದು ಬೇಡ ಎಂದು ಡಿಸಿಎಂ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಡಾ.ಅಶ್ವತ್ಥನಾರಾಯಣ್ ಫೌಂಡೇಶನ್‍ನಿಂದ ಮಲ್ಲೇಶ್ವರ ಕ್ಷೇತ್ರದಲ್ಲಿ 25,000 ಲಸಿಕೆ -ಡಿಸಿಎಂ

    ಈ ವರ್ಷದಿಂದಲೇ ಶಿಕ್ಷಣ ನೀತಿ ಜಾರಿ ಆಗುತ್ತದೆ. ಅಂದರೆ, ಮೊದಲ ವರ್ಷವನ್ನು ಶೂನ್ಯವರ್ಷ ಎಂದು ಪರಿಗಣಿಸಲಾಗಿದೆ. ಆಡಳಿತಾತ್ಮಕ-ಕಾನೂನಾತ್ಮಕ ಸಿದ್ಧತೆಗಳನ್ನು ಪ್ರಸಕ್ತ ವರ್ಷದಲ್ಲಿ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಅದರ ರೂಪುರೇಶೆಯಷ್ಟೇ ಸದ್ಯಕ್ಕೆ ಸಿದ್ಧವಾಗುತ್ತಿದೆ. ಕನ್ನಡ ಕಲಿಕೆಯನ್ನು ಮೊಟಕುಗೊಳಿಸಲಾಗುತ್ತದೆ ಎಂದು ಈಗಲೇ ಆತಂಕಪಡುವುದು ಬೇಡ. ಸೂಕ್ತ ಮಾಹಿತಿ ಪಡೆದುಕೊಂಡು ಗೊಂದಲ ಬಗೆಹರಿಸಿಕೊಳ್ಳಬಹುದು ಎಂದು ಡಿಸಿಎಂ ಮನವಿ ಮಾಡಿದರು. ಇದನ್ನೂ ಓದಿ: ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ವ್ಯಾಕ್ಸಿನ್: ಅಶ್ವತ್ಥನಾರಾಯಣ್