Tag: ಪತ್ರ

  • ಪ್ರತಾಪ್ ಸಿಂಹಗೆ ಕೊಡಗಿನ ಬಾಲಕಿ ಬರೆದ ಭಾವನಾತ್ಮಕ ಪತ್ರ ವೈರಲ್

    ಪ್ರತಾಪ್ ಸಿಂಹಗೆ ಕೊಡಗಿನ ಬಾಲಕಿ ಬರೆದ ಭಾವನಾತ್ಮಕ ಪತ್ರ ವೈರಲ್

    ಮಡಿಕೇರಿ: ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಜಿಲ್ಲೆಯ ಪರಿಸರದ ಮೇಲೆ ನಡೆಯುತ್ತಿರುವ ಶೋಷಣೆ, ಅದರಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಕೊಡಗಿನ ಪುಟಾಣಿಯೊಬ್ಬಳು ಸಂಸದ ಪ್ರತಾಪ್ ಸಿಂಹ ಅವರಿಗೆ ಬರೆದಿರುವ ಭಾವನಾತ್ಮಕ ಪತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ಪತ್ರಕ್ಕೆ ಪ್ರತಾಪ್ ಸಿಂಹ ಕೂಡ ಉತ್ತರ ಕೊಟ್ಟಿದ್ದು, ಬಾಲಕಿಯ ಸಾಮಾಜಿಕ ಕಳಕಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. 2005ರ ತನಕ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇರಲಿಲ್ಲ. ಆದರೂ ಕೊಡಗಿನವರು ಚೆನ್ನಾಗಿಯೇ ಇದ್ದರು. ಆದರೆ ನಂತರ ಬಂದಿರುವ ಯೋಜನೆಗಳು ನಮ್ಮನ್ನು ಕೊಲ್ಲುತ್ತಿವೆ ಎನ್ನುವ ಅರ್ಥದಲ್ಲಿ ಪತ್ರ ಬರೆಯಲಾಗಿದೆ. ನೀವು ಒಬ್ಬ ಮಗಳ ತಂದೆ, ನಾನು ಒಬ್ಬ ತಂದೆಯ ಮಗಳು ಎನ್ನುತ್ತಾ ರಾಷ್ಟ್ರೀಯ ಹೆದ್ದಾರಿ ಕೊಡಗಿಗೆ ಬರುವುದರಿಂದ ಜಿಲ್ಲೆಯ ಪರಿಸರಕ್ಕೆ ಮಾರಕವಾಗುತ್ತದೆಯೇ ಹೊರತು ಇಲ್ಲಿನವರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾಳೆ.

    ಯಾರ್ಯಾರು? ಯಾವ್ಯಾವ? ರೀತಿಯಲ್ಲಿ ಜಿಲ್ಲೆಗೆ ಮಾರಕವಾಗಲಿದ್ದಾರೆ ಎನ್ನುವುದನ್ನೂ ಬಾಲಕಿ ವಿವರಿಸಿದ್ದಾಳೆ. ಶೇ. 18ರಷ್ಟು ಮಂದಿ ಪ್ರವಾಸಿಗರಿಗೋಸ್ಕರ ರಾಷ್ಟ್ರೀಯ ಹೆದ್ದಾರಿ ಸೇರಿ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಇದರಿಂದಾಗಿಯೇ ಜಿಲ್ಲೆಯಲ್ಲಿ ಅರಣ್ಯ ನಾಶ ಆಗುತ್ತಿದೆ. ಜಿಲ್ಲೆಯ ಮಳೆಯ ಪ್ರಮಾಣ ಕುಸಿತಕ್ಕೆ ಕಾರಣವಾಗುತ್ತಿದೆ. ವಾರ್ಷಿಕ ಸರಾಸರಿ 220 ಇಂಚು ಮಳೆಯಾಗುತ್ತಿದ್ದಲ್ಲಿ ಈಗ 170 ಇಂಚು ಮಳೆಯಾಗುತ್ತಿದೆ. ಮಣ್ಣಿನ ಫಲವತ್ತತೆ ನಾಶವಾಗುತ್ತಿದೆ. ಅಪರೂಪದ ಪ್ರಾಣಿ, ಪಕ್ಷಿಗಳು ಕಣ್ಮರೆಯಾಗುತ್ತಿದೆ ಎಂದು ಬಾಲಕಿ ಪತ್ರದಲ್ಲಿ ಹೇಳಿದ್ದಾಳೆ.

    ಜಿಲ್ಲೆಯ ಹವಾಮಾನದಲ್ಲಿ ಬದಲಾವಣೆಗಳು ಕಂಡುಬರುತ್ತಿದೆ. ಕೊಡಗು ಪ್ಲಾಸ್ಟಿಕ್‍ಮಯ ಆಗುತ್ತಿದೆ ಎಂದು ಆತಂಕ ತೋಡಿಕೊಂಡಿದ್ದಾಳೆ. ಜಿಲ್ಲೆಯ ಶೇ. 82ರಷ್ಟು ಮಂದಿ ಪಶ್ಚಿಮಘಟ್ಟದ ಕಾಡು, ಕಾವೇರಿ ನದಿಯನ್ನು ರಕ್ಷಿಸುವ ವ್ಯವಸಾಯವನ್ನೇ ನಂಬಿಕೊಂಡಿದ್ದಾರೆ ಎಂದು ಬಾಲಕಿ ತಿಳಿಸಿದ್ದಾಳೆ.

    ಬಾಲಕಿಯ ಮನವಿಗೆ ಪ್ರತಾಪ್ ಸಿಂಹ ಹೇಳಿದ್ದೇನು?
    ಬಾಲಕಿಯ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ ಅವರು, ನನ್ನ ಪ್ರೀತಿಯ ರಾಜ್‍ಕುಮಾರಿ ನೀನು ಈ ದೇಶದ ಭವಿಷ್ಯ. ಜನಪ್ರತಿನಿಧಿಯಾಗಿ ನಿನ್ನ ಭವಿಷ್ಯವನ್ನು ರಕ್ಷಿಸುವುದು ನನ್ನ ಕರ್ತವ್ಯ. ನಾನು ಈ ಬಗ್ಗೆ ವಿವರಣೆಯನ್ನು ನೀಡುತ್ತೇನೆ. ಆದರೆ ಸದ್ಯ ಸಂಸತ್ ಹಾಗೂ ಕೆಲ ಯೋಜನೆಗಳ ಕೆಲಸದಲ್ಲಿ ಬ್ಯುಸಿ ಇದ್ದೇನೆ. ನನಗೆ ಪ್ರತಿಕ್ರಿಯಿಸಲು ಒಂದೆರೆಡು ದಿನ ಸಮಯ ಕೊಡು. ಫೇಸ್‍ಬುಕ್ ಲೈವ್ ಬಂದು ಉತ್ತರಿಸಲಾ ಅಥವಾ ಬರವಣೆಗೆ ರೂಪದಲ್ಲಿ ಪ್ರತಿಕ್ರಿಯಿಸಲಾ ಎಂದು ಬರೆದು ಬಾಲಕಿ ಪತ್ರ ಹಿಡಿದು ನಿಂತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

  • ಮಾಧ್ಯಮಗಳ ಮೇಲಿನ ನಿಷೇಧ ವಾಪಸ್ ಪಡೆಯಲು ಪ್ರಿಯಾಂಕ್ ಖರ್ಗೆ ಮನವಿ

    ಮಾಧ್ಯಮಗಳ ಮೇಲಿನ ನಿಷೇಧ ವಾಪಸ್ ಪಡೆಯಲು ಪ್ರಿಯಾಂಕ್ ಖರ್ಗೆ ಮನವಿ

    ಕಲಬುರಗಿ: ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಅಂಗ ಎಂದು ಪರಿಗಣಿಸಲ್ಪಡುವ ಮಾಧ್ಯಮವನ್ನು ಪ್ರಸ್ತುತ ನಡೆಯುತ್ತಿರುವ ಕಲಾಪಕ್ಕೆ ನಿರ್ಬಂಧಿಸುವುದು ಸಮಂಜಸವಾದ ಕ್ರಮವಲ್ಲ. ಹಾಗಾಗಿ ಈ ಕೂಡಲೇ ನಿರ್ಬಂಧವನ್ನು ವಾಪಸ್ ಪಡೆಯುವಂತೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

    ಸಂವಿಧಾನದ ಆಶಯದ ಕುರಿತು ವಿಧಾನಸಭೆ ಕಲಾಪದಲ್ಲಿ ಚರ್ಚಿಸಲು ನಿರ್ಧರಿಸಿದ್ದು ಸ್ವಾಗತಾರ್ಹ ಬೆಳವಣಿಗೆ. ಆದರೆ ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಅಂಗವಾದ ಮಾಧ್ಯಮದ (ಎಲೆಕ್ಟ್ರಾನಿಕ್ ಹಾಗೂ ಪ್ರಿಂಟ್) ಪ್ರತಿನಿಧಿಗಳಿಗೆ ಕಲಾಪದ ಒಳಗಡೆ ಪ್ರವೇಶ ನಿರ್ಬಂಧಿಸಿರುವ ಕ್ರಮ ಸರಿಯಾದುದದಲ್ಲ.

    ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ಕಲಾಪದಲ್ಲಿ ಪಾಲ್ಗೊಂಡು ಜನರ ಸಮಸ್ಯೆಗಳನ್ನು ಚರ್ಚಿಸುವ ಹಾಗೂ ಪರಿಹಾರ ಕಂಡುಕೊಳ್ಳುವ ಬಗ್ಗೆ ಜನರು ತಿಳಿದುಕೊಳ್ಳಬೇಕು. ಅದು ಕೇವಲ ಮಾಧ್ಯಮಗಳಿಂದ ಸಾಧ್ಯ. ಹಾಗಾಗಿ ಮಾಧ್ಯಮಗಳಿಗೆ ನಿರ್ಬಂಧಿಸಿದರೆ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದರ ಜೊತೆಗೆ ಜನರಿಗೆ ಕಲಾಪಗಳ ಮಾಹಿತಿ ದೊರಕದಂತೆ ತಡೆದಂತಾಗುತ್ತದೆ. ಹಾಗಾಗಿ ಮಾಧ್ಯಮಗಳಿಗೆ ವರದಿ ಮಾಡಲು ಅವಕಾಶ ನೀಡಬೇಕೆಂದು ಅವರು ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.

  • ನಂಗೆ ಮುಜುಗರವಾಗುತ್ತಿದೆ – ಅಧಿಕಾರಿಗಳಿಗೆ ಮೇಯರ್ ಲೆಟರ್

    ನಂಗೆ ಮುಜುಗರವಾಗುತ್ತಿದೆ – ಅಧಿಕಾರಿಗಳಿಗೆ ಮೇಯರ್ ಲೆಟರ್

    ಬೆಂಗಳೂರು: ನನಗೆ ಮುಜುಗರವಾಗುತ್ತಿದೆ ಎಂದು ಸಾರ್ವಜನಿಕವಾಗಿ ಅಧಿಕಾರಿಗಳಿಗೆ ಪತ್ರ ಬರೆದು ಬಿಬಿಎಂಪಿ ಮೇಯರ್ ಸುದ್ದಿ ಆಗಿದ್ದಾರೆ.

    ಬಿಬಿಎಂಪಿಯ ಆಗುಹೋಗು, ಬಿಬಿಎಂಪಿಯಿಂದ ಸರ್ಕಾರಕ್ಕೆ ಹೋಗುವ ಕಡತ ಸೇರಿದಂತೆ ಬಿಬಿಎಂಪಿಯಲ್ಲಿ ಆಗುವ ಯಾವ ಕೆಲಸದ ಬಗ್ಗೆಯೂ ಮೇಯರ್ ಗೌತಮ್ ಕುಮಾರ್ ಅವರಿಗೆ ಮಾಹಿತಿ ಹೋಗುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ಮೇಯರ್ ನನಗೆ ಮುಜುಗರವಾಗುತ್ತಿದೆ. ಮಾಧ್ಯಮದ ಜೊತೆ ಮಾತಾನಾಡುವಾಗ ನನ್ನ ಬಳಿ ಮಾಹಿತಿಯೇ ಇರಲ್ಲ, ನನಗೆ ಇನ್ಮುಂದೆ ಎಲ್ಲಾ ಬಿಬಿಎಂಪಿಯ ಮಾಹಿತಿ ಕೊಡಬೇಕು ಎಂದು ಅಧಿಕಾರಿಗಳಿಗೆ ಸಿಟ್ಟಿಗೆದ್ದು ಪತ್ರ ಬರೆದಿದ್ದಾರೆ. ಈ ಪತ್ರ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೊರಗೆ ಚನ್ನಾಗಿ ನಗುನಗುತ್ತಾ ಪೋಸ್ ಕೊಡುವ ಬೆಂಗಳೂರು ಮೇಯರ್ ಕಮೀಷನರ್ ಒಳಗೊಳಗೆ ಕಿತ್ತಾಡ್ತಾರೆ ಎನ್ನುವ ಸುದ್ದಿ ಬಿಬಿಎಂಪಿಯಲ್ಲಿ ಹೆಚ್ಚಾಗಿದೆ. ಹೀಗಾಗಿ ಯೋಜನೆ ವಿವರ, ಗುತ್ತಿಗೆ ಮಾಹಿತಿ, ಅದರ ವ್ಯಾಜ್ಯಗಳು, ಕಾನೂನು ಕೋಶದ ಮಾಹಿತಿ ಯಾವುದು ಇರಲ್ಲ ಎಂದು ಪತ್ರವನ್ನು ಕಮೀಷನರ್‍ಗೂ ರವಾನಿಸಿದ್ದಾರೆ.

    ಮೇಯರ್ ಬಹಿರಂಗ ಪತ್ರ ಈಗ ನಾನಾ ವಿವಾದವನ್ನು ಸೃಷ್ಟಿಸಿದೆ. ಬಿಬಿಎಂಪಿಯಲ್ಲಿ ಮೇಯರ್ ಮಾತೇ ನಡೆಯಲ್ಲ. ಇನ್ನು ಈ ಅಧಿಕಾರಿಗಳು ನಮ್ಮ ಮಾತು ಕೇಳ್ಳುತ್ತಾರಾ ಎಂದು ಬೆಂಗಳೂರು ಜನ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುತ್ತಾರೆ.

  • ಬಿಎಸ್‍ವೈ ನಾಯಕತ್ವದ ವಿರುದ್ಧ ಪಕ್ಷದೊಳಗೆ ಭಾರೀ ಅಸಹನೆ?- 4 ಪುಟಗಳ ಅನಾಮಧೇಯ ಪತ್ರ ವೈರಲ್

    ಬಿಎಸ್‍ವೈ ನಾಯಕತ್ವದ ವಿರುದ್ಧ ಪಕ್ಷದೊಳಗೆ ಭಾರೀ ಅಸಹನೆ?- 4 ಪುಟಗಳ ಅನಾಮಧೇಯ ಪತ್ರ ವೈರಲ್

    ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರಕ್ಕೆ 6 ತಿಂಗಳಾಗಿದೆ. ಆದರೆ ಈ ಆರು ತಿಂಗಳಲ್ಲಿ ನಡೆದ ವಿದ್ಯಮಾನಗಳು ಹತ್ತುಹಲವು. ಯಡಿಯೂರಪ್ಪ ಅವರಿಗೆ ಈಗಿನ ಸರ್ಕಾರ ನಡೆಸುವುದು ಕತ್ತಿ ಮೇಲಿನ ನಡಿಗೆಯಂತಾಗಿದೆ. ಒಂದು ಕಡೆ ಬಿಜೆಪಿ ಹೈಕಮಾಂಡ್ ಅಸಹಕಾರ. ಇನ್ನೊಂದು ಕಡೆ ಸ್ವಪಕ್ಷೀಯರ ಅಸಹಕಾರ, ಅಸಹನೆ. ಇನ್ನೊಂದು ಕಡೆ ಆರ್ಥಿಕ ದುಸ್ಥಿತಿ. ಮತ್ತೊಂದು ಕಡೆ ವಲಸಿಗರನ್ನು ನಿಭಾಯಿಸೋ ತಲೆನೋವು. ಸಚಿವಾಕಾಂಕ್ಷಿಗಳ ಒತ್ತಡ ಲಾಬಿ. ಇಷ್ಟೆಲ್ಲವನ್ನೂ ಸಂಭಾಳಿಸಿಕೊಂಡು ಸಿಎಂ ಯಡಿಯೂರಪ್ಪ ಆಡಳಿತ ನಡೆಸುವ ಅನಿವಾರ್ಯತೆಗೆ ಸಿಕ್ಕಿಬಿದ್ದಿದ್ದಾರೆ.

    ಆದರೆ ಈಗ ಯಡಿಯೂರಪ್ಪರಿಗೆ ಆಘಾತಕಾರಿ ತರುವ ಬೆಳವಣಿಗೆಯೊಂದು ಸ್ಪಪಕ್ಷೀಯರಿಂದಲೇ ನಡೆದಿದೆ. ಯಡಿಯೂರಪ್ಪ ನಾಯಕತ್ವದ ವಿರುದ್ಧವೇ ವಿರೋಧಿ ಬಣ ತೆರೆ ಹಿಂದೆಯೇ ನಿಂತುಕೊಂಡು ದನಿ ಎತ್ತಿದೆ. ಯಡಿಯೂರಪ್ಪ ಕಾರ್ಯವೈಖರಿ ಬಗ್ಗೆ ಪಕ್ಷದ ಒಳಗಿನವರಲ್ಲೇ ಅಸಹನೆ, ಅತೃಪ್ತಿ ಮನೆ ಮಾಡಿದೆಯಾ ಎಂಬ ಅನುಮಾನ ಬಲವಾಗಿ ಮೂಡಿದೆ. ಇದಕ್ಕೆ ಕಾರಣವಾಗಿರೋದು ಆ ನಾಲ್ಕು ಪುಟಗಳ ಅನಾಮಧೇಯ ಪತ್ರ.

    ಹೌದು. ಕಳೆದ ಕೆಲವು ದಿನಗಳಿಂದಲೂ ರಾಜ್ಯ ಬಿಜೆಪಿ ಪಾಳಯದಲ್ಲಿ ನಾಲ್ಕು ಪುಟಗಳ ಆ ಅನಾಮಧೇಯರು ಬರೆದ ಅನಾಮಧೇಯ ಪತ್ರವೊಂದು ಹರಿದಾಡ್ತಿದೆ. ಸಾಮಾಜಿಕ ಜಾಲತಾಣದಲ್ಲೂ ಈ ಪತ್ರ ಭಾರೀ ಸದ್ದು ಮಾಡ್ತಿದೆ ಎನ್ನಲಾಗಿದೆ. ಸಿಎಂ ಯಡಿಯೂರಪ್ಪರ ಕಾರ್ಯವೈಖರಿ, ಪುತ್ರ ವಿಜಯೇಂದ್ರರ ಬಗ್ಗೆ ಈ ಅನಾಮಧೇಯ ಪತ್ರದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಯಡಿಯೂರಪ್ಪರನ್ನು ಒಂದೆಡೆ ಹೊಗಳಲಾಗಿದ್ದರೆ, ಇನ್ನೊಂದೆಡೆ ಅವರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಲಾಗಿದೆ. ಇತ್ತ ಆಡಳಿತದಲ್ಲಿ ಮೂಗು ತೂರಿಸುತ್ತಿರುವ ಪುತ್ರ ವಿಜಯೇಂದ್ರರ ಬಗ್ಗೆನೂ ಆಕ್ಷೇಪ ಪತ್ರದಲ್ಲಿ ವ್ಯಕ್ತಪಡಿಸಲಾಗಿದೆ.

    ಅನಾಮಧೇಯ ಪತ್ರದಲ್ಲಿ ಏನಿದೆ..?
    ಯಡಿಯೂರಪ್ಪ ರಾಜಕೀಯವಾಗಿ ನಿವೃತ್ತಿ ತೆಗೆದುಕೊಂಡು ಪಕ್ಷದಲ್ಲಿ ಹಿರಿಯ ಮಾರ್ಗದರ್ಶಕರಾಗಿ ಮುಂದುವರಿಯಲಿ ಅನ್ನೋದು ಈ ಪತ್ರದ ಪ್ರಮುಖ ಆಗ್ರಹ. ಯಡಿಯೂರಪ್ಪ ಮಾರ್ಗದರ್ಶಕರಾದರೂ ಆಗಲಿ ಅಥವಾ ಯಾವುದಾದರೊಂದು ರಾಜ್ಯದ ರಾಜ್ಯಪಾಲರಾಗಲಿ. ಆದರೆ ಸದ್ಯ ಸಿಎಂ ಸ್ಥಾನದಲ್ಲಿ ಮುಂದುವರಿಯುವುದು ಬೇಡ ಅನ್ನೋ ಭಾವನೆಯನ್ನು ಅನಾಮಧೇಯರು ಪತ್ರದ ಮೂಲಕ ರವಾನಿಸಿದ್ದಾರೆ. ನಾವು ಯಡಿಯೂರಪ್ಪ ಅವರ ನಿಷ್ಠಾವಂತ ಬಳಗದಲ್ಲಿರುವವರು. ಆದರೆ ನಮ್ಮ ನೋವು ಯಾರ ಬಳಿ ತೋಡಿಕೊಳ್ಳುವುದು? ಹೈಕಮಾಂಡ್ ಬಳಿ ಹೋದರೆ ಸ್ವಲ್ಪ ದಿನ ಕಾಯಿರಿ ಅಂತಾರೆ ಎಂದು ಅನಾಮಧೇಯರು ತಮ್ಮ ಬೇಗುದಿಯನ್ನು ಈ ಪತ್ರದಲ್ಲಿ ಹೊರ ಹಾಕಿದ್ದಾರೆ. ಯಡಿಯೂರಪ್ಪ ಅವರ ದೈಹಿಕ ಅಸಮರ್ಥತೆಯಿಂದ ಸರ್ಕಾರ ನಿಷ್ಕ್ರಿಯವಾಗಿದೆ. ಹಾಗಾಗಿ ಸಿಎಂ ಸ್ಥಾನ ತ್ಯಜಿಸಲಿ. ಯಡಿಯೂರಪ್ಪ ತಮ್ಮ ಸಮುದಾಯದ ಯಾರನ್ನೂ ರಾಜಕೀಯವಾಗಿ ಬೆಳೆಸಿಲ್ಲ. ಅಸೂಯೆ ಮತ್ತು ದ್ವೇಷಗಳನ್ನು ಯಡಿಯೂರಪ್ಪ ಮೈಗೂಡಿಸಿಕೊಂಡಿದ್ದಾರೆ. ಯಡಿಯೂರಪ್ಪ ಪಕ್ಷ ಸಿದ್ಧಾಂತ ಮತ್ತು ಸಂವಿಧಾನ ವಿರುದ್ಧ ನಡೆದುಕೊಳ್ತಿದ್ದಾರೆ. ಇಂತಹ ಯಡಿಯೂರಪ್ಪ ಅವರನ್ನು ಹೈಕಮಾಂಡ್ ನಿವೃತ್ತಿಗೊಳಿಸಲಿ. ಅವರ ಅನುಭವದ ಮೇರೆಗೆ ಮಾರ್ಗದರ್ಶಕರಾಗಿ ಮಾಡಲಿ ಎಂದು ಹೈಕಮಾಂಡ್ಗೆ ಅನಾಮಧೇಯರು ಒತ್ತಾಯ ಮಾಡಿದ್ದಾರೆ.

    ಯಡಿಯೂರಪ್ಪ ಅವರನ್ನು ರಾಜ್ಯಪಾಲರಾಗಿ ಮಾಡಲಿ. ಯಡಿಯೂರಪ್ಪ ಸಿಎಂ ಆಗಿ ಆಡಳಿತ ನಡೆಸಲು ದೈಹಿಕವಾಗಿ ಅಸಮರ್ಥರು. ಅವರಿಗೆ ಆಡಳಿತ ನಡೆಸಲು ದೇಹದ ಆರೋಗ್ಯ ಸ್ಪಂದಿಸುತ್ತಿಲ್ಲ. ಯಡಿಯೂರಪ್ಪ ವಯೋಸಹಜ ದೈಹಿಕ ಅಸಮರ್ಥತೆಯಿಂದ ನರಳುತ್ತಿದ್ದಾರೆ. ಯಡಿಯೂರಪ್ಪ ಸುತ್ತ ಒಂದು ಕೊಟೆಯೇ ಸೃಷ್ಟಿಯಾಗಿದೆ. ಅವರ ವಂಶದ ನಾಲ್ಕು ತಲೆಮಾರಿನವರೇ ಯಡಿಯೂರಪ್ಪ ಸುತ್ತ ಇದ್ದಾರೆ ಎಂದು ಪತ್ರದಲ್ಲಿ ಅಸಮಾಧಾನ ಹೊರ ಹಾಕಲಾಗಿದೆ.

    ವಿಜಯೇಂದ್ರ ವಿರುದ್ಧವೂ ಅಸಮಧಾನ:
    ವಿಜಯೇಂದ್ರ ಸೂಪರ್ ಸಿಎಂ, ಡೀಫ್ಯಾಕ್ಟೋ ಸಿಎಂ ಅಂತ ವಿಪಕ್ಷ ಮತ್ತು ಸ್ವಪಕ್ಷದಲ್ಲೇ ಹೇಳುತ್ತಿದ್ದಾರೆ. ಶಿವಾನಂದ ಸರ್ಕಲ್ ಬಳಿ ಇರುವ ವಿಜಯೇಂದ್ರರ ಅಪಾರ್ಟ್‍ಮೆಂಟ್ ಮತ್ತೊಂದು ಪವರ್ ಸೆಂಟರ್ ಆಗಿದೆ ಎಂದು ಪತ್ರದಲ್ಲಿ ಕಿಡಿ ಕಾರಿದ್ದಾರೆ. ಯಡಿಯೂರಪ್ಪ ಭೇಟಿಗೆ ಬರೋರು ಮೊದಲು ವಿಜಯೇಂದ್ರರ ಭೇಟಿ ಮಾಡುವ ಅಗತ್ಯ ಇದೆ. ತಮ್ಮ ಭೇಟಿಗೆ ಬರೋರನ್ನು ವಿಜಯೇಂದ್ರ ಬಳಿ ಖುದ್ದು ಯಡಿಯೂರಪ್ಪ ಕಳಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಜಯೇಂದ್ರ ಅವರ ಬಗ್ಗೆ ಗುಣಗಾನ ರೂಪದಲ್ಲಿರುವ ಪತ್ರದ ಮಾತುಗಳು ಪರೋಕ್ಷವಾಗಿ ಅಣಕಿಸುವಂತಿವೆ.

    ಸದ್ಯ ಈ ಅನಾಮಧೇಯ ಪತ್ರ ಬಿಜೆಪಿ ಪಾಳಯದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಯಡಿಯೂರಪ್ಪ ಸಹ ಪತ್ರದ ಬಗ್ಗೆ ಗಂಭೀರವಾಗಿದ್ದು, ಆಪ್ತರ ಬಳಿ ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗಿದೆ.  ಪತ್ರದ ಜನಕರ ಪತ್ತೆಗೆ ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

  • ಶಾಲಾ ಪಠ್ಯದಲ್ಲಿ ವ್ಯವಸಾಯ ಶಾಸ್ತ್ರ ಸೇರಿಸಿ, ನಿರುದ್ಯೋಗ ಓಡಿಸಿ – ರೈತನ ಮಗನ ಪತ್ರ ವೈರಲ್

    ಶಾಲಾ ಪಠ್ಯದಲ್ಲಿ ವ್ಯವಸಾಯ ಶಾಸ್ತ್ರ ಸೇರಿಸಿ, ನಿರುದ್ಯೋಗ ಓಡಿಸಿ – ರೈತನ ಮಗನ ಪತ್ರ ವೈರಲ್

    ಬೆಂಗಳೂರು: ಬೇಡಿಕೆ ಈಡೇರಿಸುವಂತೆ ಒತ್ತಾಯ ಮಾಡಲು ಹಲವು ವಿಧಾನಗಳಲ್ಲಿ ಸಾರ್ವಜನಿಕರು, ರೈತರು ಸರ್ಕಾರಕ್ಕೆ ಪತ್ರಗಳನ್ನ ಬರೆಯುವುದನ್ನ ನೋಡಿದ್ದೇವೆ. ಆದರೆ ರೈತರ ಮಗನೋರ್ವ ಪತ್ರದ ಮೂಲಕ ಒಂದು ವಿಶೇಷ ಒತ್ತಾಯ ಮಾಡಿದ್ದಾರೆ. ಈ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಈ ಪತ್ರದಲ್ಲಿ ವಿನಂತಿ ಮಾಡಿರುವ ವಿಷಯ ನಿಜಕ್ಕೂ ವಿಷೇಶವಾಗಿದ್ದು, ಶಾಲಾ ಪಠ್ಯಪುಸ್ತಕಗಳಲ್ಲಿ ಗಣಿತ ಶಾಸ್ತ್ರ, ವಿಜ್ಞಾನ, ಸಮಾಜಶಾಸ್ತ್ರ ಇರುವಂತೆ ವ್ಯವಸಾಯ ಶಾಸ್ತ್ರವನ್ನು ಒಂದು ವಿಷಯವನ್ನಾಗಿ ಸೇರಿಸಿ. ಹೀಗೆ ಮಾಡುವುದರಿಂದ ಈಗಿನ ಮಕ್ಕಳಲ್ಲಿ ಕೃಷಿ ಬಗ್ಗೆ ತಿಳುವಳುಕೆ ಮೂಡುತ್ತೆ. ಮಕ್ಕಳು ಬೆಳೆದಂತೆ ಆಸಕ್ತಿ ಇರೋರು ವ್ಯವಸಾಯಕ್ಕೆ ಬರುತ್ತಾರೆ. ಇದರಿಂದ ನಿರುದ್ಯೋಗದ ಸಮಸ್ಯೆ ಸಹ ಬಗೆಹರಿಯುತ್ತೆ. ಜೊತೆಗೆ ಮಕ್ಕಳಿಗೆ ವ್ಯವಸಾಯ ಏನು ಎನ್ನುವ ತಿಳುವಳಿಕೆ ಮೂಡುತ್ತೆ ಎಂದು ಪತ್ರದಲ್ಲಿ ಬರೆಯಲಾಗಿದೆ.

    ಈಗಾಗಲೇ ಹಳ್ಳಿಗಳನ್ನ ತೊರೆದು ಯುವಕರು ಕೆಲಸ ಅರಸಿ ಸಿಟಿಗಳನ್ನು ಸೇರಾಗಿದೆ. ಈ ರೀತಿ ಮುಂದುವರಿದರೆ ಎಲ್ಲರೂ ಕಷ್ಟಕ್ಕೆ ಸಿಲುಕಬೇಕಾಗುತ್ತೆ. ಆದ್ದರಿಂದ ಕೃಷಿ ಬಗ್ಗೆ ತಿಳುವಳಿಕೆಯನ್ನ ಶಾಲಾ ಪಠ್ಯಗಳಿಂದ ನೀಡಬೇಕು ಎಂಬ ಒತ್ತಾಯದ ಈ ಪತ್ರ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಪತ್ರ ಯಾರೇ ಬರೆದಿದ್ದರೂ ಉದ್ದೇಶ ಮಾತ್ರ ಒಳ್ಳೆಯದ್ದಾಗಿದೆ ಎಂದು ನೆಟ್ಟಿಗರು ಪತ್ರದ ವಿಷಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಹಣ ಕಳುಹಿಸಿದ್ದ ಅಭಿಮಾನಿಯನ್ನ ಭೇಟಿ ಮಾಡಿದ ರಿಷಬ್

    ಹಣ ಕಳುಹಿಸಿದ್ದ ಅಭಿಮಾನಿಯನ್ನ ಭೇಟಿ ಮಾಡಿದ ರಿಷಬ್

    ಮೈಸೂರು: ತನಗೆ ಹಣ ಕಳುಹಿಸಿದ್ದ ಅಭಿಮಾನಿಯನ್ನು ನಟ, ನಿರ್ದೇಶಕ ರಿಷಬ್‍ ಶೆಟ್ಟಿ ಭೇಟಿಯಾಗಿದ್ದು, ಅಪರೂಪದ ಅಭಿಮಾನಿಗೆ ಧನ್ಯವಾದ ತಿಳಿಸಿದ್ದಾರೆ.

    ರಿಷಬ್ ಶೆಟ್ಟಿ ಅಭಿಮಾನಿ ಭರತ್ ರಾಮಸ್ವಾಮಿಯನ್ನು ಭೇಟಿ ಮಾಡಿದ್ದಾರೆ. ಮೈಸೂರಿನ ಅಂಬೇಡ್ಕರ್ ರಸ್ತೆಯಲ್ಲಿ ಭರತ್ ರಾಮಸ್ವಾಮಿ ನಡೆಸುತ್ತಿರುವ ಸಮಾನತೆ ಪ್ರಕಾಶನ ಸಂಸ್ಥೆಗೆ ಭೇಟಿ ನೀಡಿ, ಪತ್ರ ಹಾಗೂ ಹಣ ಕಳುಹಿಸಿದ್ದಕ್ಕೆ ಧನ್ಯವಾದ ತಿಳಿಸಿದರು. ಇದನ್ನೂ ಓದಿ: ಪಾಪ ಪ್ರಜ್ಞೆ ಕಾಡುತ್ತಿದೆ – ರಿಷಬ್ ಚಿತ್ರ ನೋಡಿ 200 ರೂ. ಕಳುಹಿಸಿಕೊಟ್ಟ ಅಭಿಮಾನಿ

    ಈ ವೇಳೆ ಮಾತನಾಡಿದ ರಿಷಬ್ ಶೆಟ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ನೋಡಿ 200 ರೂ. ಕಳುಹಿಸಿದ್ದ ಅಭಿಮಾನಿ ಭರತ್ ರಾಮಸ್ವಾಮಿರನ್ನ ಭೇಟಿ ಮಾಡಬೇಕು ಅಂತ ಯೋಚಿಸಿದ್ದೆ. ಇಂದು ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಬಂದಿದ್ದೆ. ಹೀಗಾಗಿ ಅವರನ್ನ ಭೇಟಿಯಾದೆ. ಇಂತಹ ಅಭಿಮಾನಿಗಳಿಂದ ಒಳ್ಳೆ ಚಿತ್ರಗಳು ಗೆಲ್ಲುತ್ತವೆ ಎಂದು ಹೇಳಿದರು.

    ಪತ್ರ ನೋಡಿ ಬಂದ ನಟ ರಿಷಬ್ ಶೆಟ್ಟಿಯನ್ನು ನೋಡಿ ಅಭಿಮಾನಿ ಭರತ್ ರಾಮಸ್ವಾಮಿ ಖುಷಿ ವ್ಯಕ್ತಪಡಿಸಿದರು. ನಂತರ ರಿಷಬ್ ಶೆಟ್ಟಿ ಕೆಲಕಾಲ ಅಭಿಮಾನಿಯ ಜೊತೆ ಕಾಲಕಳೆದು ಬೆಂಗಳೂರಿಗೆ ವಾಪಸ್ಸಾದರು.

    ನಟ ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರ 2018ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಈಗ ನೋಡಿದ ಮೈಸೂರಿನ ಭರತ್ ರಾಮಸ್ವಾಮಿ ರಿಷಬ್ ಶೆಟ್ಟಿಗೆ ಪತ್ರ ಬರೆದು ಕ್ಷಮೆ ಕೇಳಿ ಜೊತೆಗೆ 200 ರೂ. ಹಣವನ್ನು ಕಳುಹಿಸಿಕೊಟ್ಟಿದ್ದರು.

  • ಪಾಪ ಪ್ರಜ್ಞೆ ಕಾಡುತ್ತಿದೆ – ರಿಷಬ್ ಚಿತ್ರ ನೋಡಿ 200 ರೂ. ಕಳುಹಿಸಿಕೊಟ್ಟ ಅಭಿಮಾನಿ

    ಪಾಪ ಪ್ರಜ್ಞೆ ಕಾಡುತ್ತಿದೆ – ರಿಷಬ್ ಚಿತ್ರ ನೋಡಿ 200 ರೂ. ಕಳುಹಿಸಿಕೊಟ್ಟ ಅಭಿಮಾನಿ

    ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ನೋಡಿ ಅಭಿಮಾನಿಯೋರ್ವ ಅವರಿಗೆ ಪತ್ರ ಬರೆದು ಜೊತೆಗೆ 200 ರೂ. ದುಡ್ಡನ್ನು ಕಳುಹಿಸಿಕೊಟ್ಟಿದ್ದಾರೆ.

    ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ 2018 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಈಗ ನೋಡಿದ ಮೈಸೂರಿನ ಅಭಿಮಾನಿಯೋರ್ವ ರಿಷಬ್ ಶೆಟ್ಟಿಗೆ ಪತ್ರ ಬರೆದು ಕ್ಷಮೆ ಕೇಳಿ ಜೊತೆಗೆ 200 ರೂ. ದುಡ್ಡನ್ನು ಕಳುಹಿಸಿಕೊಟ್ಟಿದ್ದಾರೆ.

    ರಿಷಬ್‍ಗೆ ಪತ್ರ ಬರೆದಿರುವ ಮೈಸೂರಿನ ಅಭಿಮಾನಿ ಭರತ್ ರಾಮಸ್ವಾಮಿ, ನನ್ನ ಹೆಸರು ಭರತ್ ರಾಮಸ್ವಾಮಿ, ನಾನು ಮೈಸೂರಿನವನು. ವೃತ್ತಿಯಲ್ಲಿ ಒಬ್ಬ ಪುಸ್ತಕ ಪ್ರಕಾಶಕ. ನಾನು ಜನವರಿ 12 ರಂದು ನೀವು ನಿರ್ದೇಶನ ಮಾಡಿದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಎಂಬ ಸಿನಿಮಾವನ್ನು ಒಂದು ವೆಬ್‍ಸೈಟಿನಲ್ಲಿ ನೋಡಿದೆ. ಈ ಚಿತ್ರ ನನ್ನ ಊಹೆಗೂ ಮೀರಿದ್ದಾಗಿತ್ತು. ನಾನೊಬ್ಬ ಚಿತ್ರ ರಸಿಕ. ನಿಮ್ಮ ನಿರೂಪಣಾ ಶೈಲಿ ಮತ್ತು ಸ್ಕ್ರೀನ್ ಪ್ಲೇ ಅತ್ಯದ್ಭುತವಾಗಿದೆ ಎಂದು ಹೊಗಳಿದ್ದಾರೆ.

    ಕನ್ನಡದ ಅಸ್ಮಿತೆ ಮತ್ತು ಕನ್ನಡದ ಮೇಲೆ ನಮಗಿರುವ ಭಾವನೆಗಳನ್ನು ಅನಂತ್ ನಾಗ್ ಅವರು ಮಾಡಿರುವ ಪಾತ್ರದ ಮೂಲಕ ಹೇಳಿಸಿದ ಶೈಲಿ ಮನ ಮುಟ್ಟುವಂತಿತ್ತು. ಇಂತಹ ರಚನಾತ್ಮಕ ಆಲೋಚನೆಗಳಿಂದ ಕೂಡಿದ ಸಿನಿಮಾವನ್ನು ಇಷ್ಟು ತಡವಾಗಿ ನೋಡಿದ ಮತ್ತು ದುಡ್ಡು ಕೊಟ್ಟು ಚಿತ್ರಮಂದಿರದಲ್ಲಿ ನೋಡದ ಪಾಪ ಪ್ರಜ್ಞೆ ನನ್ನನ್ನು ಕಾಡುತ್ತಿದೆ. ಆದ್ದರಿಂದ ಈ ಪತ್ರದೊಡನೆ 200 ರೂಪಾಯಿ ಟಿಕೆಟ್ ದರವನ್ನು ನನ್ನ ಮೆಚ್ಚುಗೆಯ ಸಂಕೇತವಾಗಿ ಕಳುಹಿಸಿರುತ್ತೇನೆ ಎಂದು ಪತ್ರದಲ್ಲಿ ಭರತ್ ತಿಳಿಸಿದ್ದಾರೆ.

    ಈ ನನ್ನ ಕ್ರಿಯೆ ನಿಮಗೆ ಹಾಸ್ಯಾಸ್ಪದವೆನಿಸಿದರೂ ನನ್ನೊಳಗಿನ ಸಿನಿಮಾ ರಸಿಕನಿಗೆ ತೃಪ್ತಿ ತರುವಂತಾಗಿದೆ. ಮುಂದೆಯೂ ಇಂತಹುದೇ ಪ್ರಗತಿಪರ ಸಿನಿಮಾಗಳನ್ನು ನಿಮ್ಮ ಮೂಲಕ ತಯಾರಾಗಲಿ ಎಂದು ಆಶಿಸುತ್ತೇನೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

    ಅಭಿಮಾನಿಯ ಪತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಸಮೇತ ಟ್ವೀಟ್ ಮಾಡಿರುವ ರಿಷಬ್ ಶೆಟ್ಟಿ, ಇಂತಹ ಚಿತ್ರಪ್ರೇಮಿಗಳಿರುವ ತನಕ ಒಳ್ಳೆಯ ಕನ್ನಡ ಚಿತ್ರಗಳಿಗೆ ಎಂದಿಗೂ ಸೋಲಿಲ್ಲ. ಪ್ರೇಕ್ಷಕರ ಒಲವೇ ಚಿತ್ರದ ನಿಜವಾದ ಗೆಲುವು. ಭರತ್ ರಾಮಸ್ವಾಮಿ ಅವರಿಗೆ ಧನ್ಯವಾದಗಳು. ನಿಮ್ಮ ಈ ಪ್ರೀತಿಯ ಕಾಣಿಕೆಯನ್ನು ಅದರ ದುಪ್ಪಟ್ಟು ಪ್ರೀತಿಯಿಂದ ಸ್ವೀಕರಿಸುತ್ತೇವೆ. (ಜೊತೆಗೆ ಚಿತ್ರದ ಕಲೆಕ್ಷನ್ ತಿದ್ದುಪಡಿ ಮಾಡಿಕೊಳ್ಳುತ್ತೇವೆ) ಎಂದು ಬರೆದುಕೊಂಡಿದ್ದಾರೆ.

    2018 ಆಗಸ್ಟ್ 24 ರಂದು ಬಿಡುಗಡೆಗೊಂಡಿದ್ದ ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಮಕ್ಕಳ ಜೊತೆ ಹಿರಿಯ ನಟ ಅನಂತ್ ನಾಗ್ ಅವರು ಮನಮಿಡಿಯುವಂತೆ ಅಭಿನಯಿಸಿದ್ದರು. ಕನ್ನಡ ಭಾಷೆ, ಕನ್ನಡ ಮಾಧ್ಯಮ ಶಾಲೆಯ ಅವಶ್ಯಕತೆಯನ್ನು ಮಕ್ಕಳ ಮೂಲಕ ಮನಮುಟ್ಟುವಂತೆ ಹೇಳಿದ್ದ ಈ ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಎಂದು ರಾಷ್ಟ್ರೀಯ ಪ್ರಶಸ್ತಿ ಕೂಡ ಬಂದಿದೆ.

  • ಸರ್ವ ಸಂಕಷ್ಟದಿಂದ ಪಾರು ಮಾಡುವಂತೆ ಗಡೇ ದುರ್ಗಾದೇವಿಗೆ ಪತ್ರ ಬರೆದ ಡಿಕೆಶಿ

    ಸರ್ವ ಸಂಕಷ್ಟದಿಂದ ಪಾರು ಮಾಡುವಂತೆ ಗಡೇ ದುರ್ಗಾದೇವಿಗೆ ಪತ್ರ ಬರೆದ ಡಿಕೆಶಿ

    ಯಾದಗಿರಿ: ಸರ್ವ ಸಂಕಷ್ಟದಿಂದ ಪಾರು ಮಾಡುವಂತೆ ಯಾದಗಿರಿಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪತ್ರ ಬರೆದು ವಿಶೇಷ ಸಲ್ಲಿಸಿದ್ದಾರೆ.

    ಕಲಬುರಗಿ ಜಿಲ್ಲೆಯಿಂದ ರಸ್ತೆ ಮಾರ್ಗವಾಗಿ ಗೋನಾಲ ಗ್ರಾಮಕ್ಕೆ ಆಗಮಿಸಿದ ಡಿಕೆ ಶಿವಕುಮಾರ್ ಅವರನ್ನು ಗೋನಾಲ ಗ್ರಾಮಸ್ಥರು ಮೇರವಣಿಗೆ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು. ಗಡೇ ದುರ್ಗಾದೇವಿ ಜಾತ್ರೆಯಲ್ಲಿ ಭಾಗಿಯಾದ ಡಿಕೆ ಶಿವಕುಮಾರ್ ಅವರು ದುರ್ಗಾದೇವಿ ಮಂದಿರದ ಗರ್ಭ ಗುಡಿಯೊಳಗೆ ಪ್ರವೇಶಿಸಿ, ಅರ್ಚಕ ಮಹಾದೇವಪ್ಪ ಪೂಜಾರಿ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವಿಗೆ ಮೊರೆಯಿಟ್ಟಿದ್ದಾರೆ.

    ಬಳಿಕ ಮಾತನಾಡಿದ ಅವರು, ಕಳೆದ ಬಾರಿ ಬರುತ್ತೇನೆ ಅಂತ ಮಾತುಕೊಟ್ಟಿದ್ದೆ. ಆದರೆ ಮೈತ್ರಿ ಸರ್ಕಾರ ಮತ್ತು ಕೆಲ ಒತ್ತಡದಿಂದ ಬರುವುದಕ್ಕೆ ಆಗಿರಲಿಲ್ಲ. ಈಗ ಬಂದಿದ್ದೇನೆ. ರಾಜ್ಯ ಮತ್ತು ನನ್ನ ಕುಟುಂಬಕ್ಕೆ ಒಳಿತು ಮಾಡುವಂತೆ ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು.

    ಡಿಕೆ ಶಿವಕುಮಾರ್ ಅವರು ಕೇವಲ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾತ್ರವಲ್ಲ, ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಅಂತ ಗೋನಾಲ ದುರ್ಗಾದೇವಿಯ ಪೂಜಾರಿ ಮಹಾದೇವಪ್ಪ ಭವಿಷ್ಯ ನುಡಿದಿದ್ದಾರೆ.

    ಇದಕ್ಕೂ ಮುನ್ನ ಬೆಳಗ್ಗೆ ಕಲಬುರಗಿಯಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಆಯ್ಕೆಗೆ ನಾನು ಅರ್ಜಿನೂ ಹಾಕಿಲ್ಲ. ಆಕಾಂಕ್ಷಿನೂ ಅಲ್ಲ. ಸದ್ಯ ದಿನೇಶ್ ಗುಂಡೂರಾವ್ ಅವರೇ ಅಧ್ಯಕ್ಷರು. ಅವರ ರಾಜೀನಾಮೆ ಅಂಗೀಕಾರವಾಗಿಲ್ಲ. ಹೀಗಾಗಿ ಕೆಪಿಸಿಸಿ ಹುದ್ದೆ ಖಾಲಿ ಇಲ್ಲ. ಆ ಹುದ್ದೆಯೇ ಕೇಳಿಲ್ಲ ಅಂದ್ರೆ ಯಾರು ತಾನೆ ಅಡ್ಡಗಾಲು ಹಾಕಲು ಸಾಧ್ಯ ಎಂದು ಹೇಳಿದ್ದರು.

  • ‘ಜನ ಕೊಡಿ ಕೆಲಸ ಮಾಡ್ತೀವಿ!’- ಸರ್ಕಾರಕ್ಕೆ ಪತ್ರ ಬರೆದ ಲೋಕಾಯುಕ್ತರು

    ‘ಜನ ಕೊಡಿ ಕೆಲಸ ಮಾಡ್ತೀವಿ!’- ಸರ್ಕಾರಕ್ಕೆ ಪತ್ರ ಬರೆದ ಲೋಕಾಯುಕ್ತರು

    ಬೆಂಗಳೂರು: ಮೊದಲೇ ಹಲ್ಲಿಲ್ಲದ ಹಾವಿನಂತಿರುವ ಲೋಕಾಯುಕ್ತ ಈಗ ಸಿಬ್ಬಂದಿಯೂ ಇಲ್ಲದೆ ಸೊರಗಿ ಹೋಗಿದೆ. ಮಾಡಕೋ ಸಾಕಷ್ಟು ಕೆಲಸ ಇದೆ. ಆದರೆ ಸಂಸ್ಥೆಯಲ್ಲಿ ಸಿಬ್ಬಂದಿ ಮಾತ್ರ ಇಲ್ಲ. ಹೀಗಿರೋವಾಗ ಕೆಲಸ ಮಾಡೋಕೆ ಹೇಗೆ ಸಾಧ್ಯ ಮೊದಲು ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಡಿ ಎಂದು ಲೋಕಾಯುಕ್ತ ನ್ಯಾ. ವಿಶ್ವನಾಥಶೆಟ್ಟಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

    ಈಗಿರುವ ಸಿಬ್ಬಂದಿಗಳು ಎಲ್ಲಾ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಈಗಾಗಲೇ ಕೆಲ ರಾಜಕಾರಣಿಗಳು ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ನೀಡಿದ್ದಾರೆ. ಇದನ್ನ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲು ಸಿಬ್ಬಂದಿಗಳ ಕೊರತೆ ಇದೆ. ಹಾಗೆ ಗ್ರೂಪ್ ಬಿ ಹಾಗೂ ಗ್ರೂಪ್ ಸಿ ವಿಭಾಗದ ಸಿಬ್ಬಂದಿಗಳು ಇಲ್ಲ. ಬಹುಮುಖ್ಯವಾಗಿ ಅಡಿಷನಲ್ ರಿಜಿಸ್ಟ್ರಾರ್ ಹುದ್ದೆಯೂ ಖಾಲಿ ಇದೆ. ಇದಕ್ಕೆ ತಕ್ಕಂತೆ ಹೈಕೋರ್ಟ್ ನಿವೃತ್ತ ನ್ಯಾಯಾಮೂರ್ತಿಗಳನ್ನು ನೇಮಕ ಮಾಡಬೇಕಾಗುತ್ತೆ. ಇದುವರೆಗೂ ಸರ್ಕಾರ ಯಾರನ್ನೂ ನೇಮಕ ಮಾಡಿಲ್ಲ.

    ಕೂಡಲೇ ಸಿಬ್ಬಂದಿಗಳ ನೇಮಕ ಮಾಡಿದ್ದಲ್ಲಿ ಹಳೆ ಪ್ರಕರಣಕ್ಕೂ ಮುಕ್ತಿ ಹಾಡಬಹುದು. ಈ ಹಿಂದೆಯೂ ಸಿಬ್ಬಂದಿ ನೇಮಕಕ್ಕೆ ಮನವಿ ಮಾಡಿದ್ದರೂ ಸರ್ಕಾರ ಸ್ಪಂಧಿಸಿಲ್ಲ. ಈ ಬಾರಿ ಅಗತ್ಯವಾಗಿ ಸಿಬ್ಬಂದಿಗಳ ನೇಮಕ ಮಾಡಿ ಎಂದು ಪತ್ರದ ಮೂಲಕ ವಿಶ್ವನಾಥ್ ಶೆಟ್ಟಿ ಮನವಿ ಮಾಡಿದ್ದಾರೆ.

  • ‘ದೂರು ಕೊಟ್ರೆ ಶೂಟ್ ಮಾಡ್ತೀನಿ’ – ಪಿಎಸ್‍ಐ ವಿರುದ್ಧ ಆರೋಪ

    ‘ದೂರು ಕೊಟ್ರೆ ಶೂಟ್ ಮಾಡ್ತೀನಿ’ – ಪಿಎಸ್‍ಐ ವಿರುದ್ಧ ಆರೋಪ

    ಕೊಪ್ಪಳ: ಮಾಮೂಲಿ ಕೊಡಲು ನಿರಾಕರಿಸಿದ ವ್ಯಕ್ತಿ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ಮಾಧ್ಯಮಗಳಿಗೆ ಅಥವಾ ಅಧಿಕಾರಿಗಳಿಗೆ ದೂರು ಕೊಟ್ಟರೆ ಶೂಟ್ ಮಾಡುತ್ತೇನೆ ಎಂದು ಪಿಎಸ್‍ಯ ಒಬ್ಬರು ಬೆದರಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

    ಜಿಲ್ಲೆಯ ಕಾರಟಗಿ ಪಿಎಸ್‍ಐ ವಿಜಯಕೃಷ್ಣ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದೆ. ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನ ಮುಕ್ಕುಂದ ಗ್ರಾಮದ ಭಾಷಾಸಾಬ್ ಅವರಿಗೆ ಪಿಎಸ್‍ಐ ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಗೊಂಡ ಭಾಷಾಸಾಬ್ ‘ನನ್ನ ಜೀವಕ್ಕೆ ಏನಾದರು ಆದರೆ ಅದಕ್ಕೆ ವಿಜಯಕೃಷ್ಣ ಕಾರಣ’ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

    ಮರಳು ಸಾಗಾಟ ವಿಚಾರದಲ್ಲಿ ಭಾಷಾಸಾಬ್ ಹಾಗೂ ಕಾರಟಗಿ ಪೊಲೀಸರ ನಡುವೆ ವಾಗ್ವಾದ ನಡೆದಿತ್ತು. ತಮ್ಮ ಠಾಣಾ ವ್ಯಾಪ್ತಿ ಮೀರಿ ಪೊಲೀಸರು ಭಾಷಾಸಾಬ್ ಟ್ರ್ಯಾಕ್ಟರ್ ಸೀಜ್ ಮಾಡಿದ್ದರು. ಈ ವಿಷಯ ಮಾಧ್ಯಮದಲ್ಲಿ ಭಿತ್ತರವಾಗುತ್ತಿದ್ದಂತೆ ರಿವೇಂಜ್ ತಗೆದುಕೊಂಡ ಪೊಲೀಸರು ಭಾಷಾಸಾಬ್ ವಿರುದ್ಧ ಐಪಿಸಿ ಸೆಕ್ಷನ್ 307 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಈ ವಿಷಯ ಮಾಧ್ಯಮದವರಿಗೆ ತಿಳಿಸಿದರೆ ರಿವಾಲ್ವರ್ ಇಟ್ಟು ಶೂಟ್ ಮಾಡುತ್ತೇನೆ ಎಂದು ಪಿಎಸ್‍ಐ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಜೀವಭಯದಲ್ಲಿರುವ ಭಾಷಾಸಾಬ್ ವಿಜಯಕೃಷ್ಣ ವಿರುದ್ಧ ಸಿಎಂಗೆ ಪತ್ರ ಬರೆದಿದ್ದಾರೆ.

    ಈ ಘಟನೆಗೆ ಪ್ರಮುಖ ಕಾರಣ ಕಾರಟಗಿ ಪೊಲೀಸ್ ಠಾಣೆ ಪೇದೆ ಭೀಮಣ್ಣ ಎನ್ನಲಾಗಿದೆ. ಕಳೆದ ಮೂರು ತಿಂಗಳ ಹಿಂದೆ ಮುಕ್ಕುಂದ ಗ್ರಾಮದಲ್ಲಿ ಮರಳು ಸಾಗಾಟದ ಮಾಮೂಲಿ ವಸೂಲಿಗೆ ಪೊಲೀಸರು ಹೋಗಿದ್ದರು. ಆದರೆ ಭಾಷಾಸಾಬ್ ನಮ್ಮ ಗ್ರಾಮ ನಿಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರಲ್ಲ ಎಂದು ಪೊಲೀಸರ ಬಳಿ ಗಲಾಟೆ ಮಾಡಿದ್ದರು. ಅಲ್ಲದೇ ಮೊಬೈಲ್‍ನಲ್ಲಿ ಗಲಾಟೆಯ ದೃಶ್ಯವನ್ನು ಸೆರೆಹಿಡಿದಿದ್ದರು. ಹೀಗಾಗಿ ಪೊಲೀಸರು ಭಾಷಾಸಾಬ್‍ರನ್ನ ಟಾರ್ಗೆಟ್ ಮಾಡಿದ್ದರು. ಆದ್ದರಿಂದಲೇ ಭಾಷಾಸಾಬ್ ವಿರುದ್ಧ ಸುಳ್ಳು ಕೇಸ್ ದಾಖಲು ಮಾಡಿ ಪೊಲೀಸರು ಹಗೆ ಸಾಧಿಸಿದ್ದಾರೆ.

    ಮಾಮೂಲಿ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಪೊಲೀಸರು ಟಾರ್ಗೆಟ್ ಮಾಡುತಿದ್ದು, ಭಾಷಾಸಾಬ್ ಊರು ಬಿಟ್ಟು ಅಲೆಯುತ್ತಿದ್ದಾರೆ. ಅಲ್ಲದೆ ಪಿಎಸ್‍ಐ ವಿಜಯಕೃಷ್ಣ ಗೂಂಡಾಗಳನ್ನ ಬಿಟ್ಟು ಭಾಷಾಸಾಬ್‍ಗೆ ಧಮ್ಕಿ ಹಾಕಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.