Tag: ಪತ್ರ ಚಳುವಳಿ

  • ಪೌರತ್ವ ಕಾಯ್ದೆ ಬೆಂಬಲಿಸಿ ಬಿಜೆಪಿಯಿಂದ ಕೋಟಿ ಪತ್ರ ಚಳುವಳಿ

    ಪೌರತ್ವ ಕಾಯ್ದೆ ಬೆಂಬಲಿಸಿ ಬಿಜೆಪಿಯಿಂದ ಕೋಟಿ ಪತ್ರ ಚಳುವಳಿ

    ಬೆಂಗಳೂರು: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆಯ ಕಾವು ನಿಧಾನಕ್ಕೆ ಕಮ್ಮಿಯಾಗಿತೊಡಗಿದೆ. ಪ್ರತಿಭಟನೆಗಳ ಬಿಸಿಯೂ ತಗ್ಗತೊಡಗಿದೆ. ಆದರೆ ಬಿಜೆಪಿ ಕಾಯ್ದೆ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಚುರುಕುಗೊಳಿಸಿದೆ. ರಾಜ್ಯದಲ್ಲೂ ಈಗಾಗಲೇ ಕೆಲವು ಸಭೆಗಳನ್ನು ಬಿಜೆಪಿ ನಾಯಕರು ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಜನವರಿ 1 ರಿಂದ 15 ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾಯ್ದೆ ಪರ ಜಾಗೃತಿ ಕಾರ್ಯಕ್ರಮ ನಡೆಸಲು ರಾಜ್ಯ ಬಿಜೆಪಿ ಮುಂದಾಗಿದೆ. ಇದರ ಜೊತೆಗೆ ಪ್ರಮುಖ ಹಂತವಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಪರ ಪತ್ರ ಚಳುವಳಿ ನಡೆಸಲು ತೀರ್ಮಾನಿಸಲಾಗಿದೆ.

    ಇವತ್ತು ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‍ಮಾಧವ್ ನೇತೃತ್ವದಲ್ಲಿ ಪೌರತ್ವ ಕಾಯ್ದೆ ಕುರಿತು ಸಂಸದರು ಮತ್ತು ಶಾಸಕರ ವಿಶೇಷ ಸಭೆ ನಡೆಸಲಾಯಿತು. ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಡಿ ವಿ ಸದಾನಂದಗೌಡ, ಸಚಿವರಾದ ಬಸವರಾಜ ಬೊಮ್ಮಾಯಿ, ಆರ್ ಅಶೋಕ್, ಸಿ ಟಿ ರವಿ, ಜೆ ಸಿ ಮಾಧುಸ್ವಾಮಿ, ಸಂಸದೆ ಶೋಭಾ ಕರಂದ್ಲಾಜೆ, ಪಕ್ಷದ ಹಲವು ಶಾಸಕರು ಭಾಗವಹಿಸಿದ್ದರು.

    ಪೌರತ್ವ ಕಾಯ್ದೆ ಕುರಿತು ಜನರಲ್ಲಿ ಅರಿವು ಮೂಡಿಸಲು ಎಲ್ಲರೂ ಒಗ್ಗೂಡಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಯ್ತು. ಪೌರತ್ವ ಕಾಯ್ದೆ ಪರವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜನವರಿ 1 ರಿಂದ 15ರ ವರೆಗೆ ಜಿಲ್ಲೆ ಮತ್ತು ವಿಧಾನಸಭೆ ಕ್ಷೇತ್ರವಾರು ನಾನಾ ಕಾರ್ಯಕ್ರಮಗಳನ್ನು ನಡೆಸಲು ಸಭೆಯಲ್ಲಿ ಸೂಚನೆ ನೀಡಲಾಯ್ತು. ಕನಿಷ್ಠ ಒಂದು ಸಾವಿರ ಕಡೆಗಳಲ್ಲಿ ಸಾರ್ವಜನಿಕ ಸಭೆಗಳನ್ನು ಹಮ್ಮಿಕೊಳ್ಳಲು ನಿರ್ಧಾರ ಕೈಗೊಳ್ಳಲಾಯ್ತು.

    ಕಾಯ್ದೆ ಪರ ಕೋಟಿ ಪತ್ರ ಚಳುವಳಿ
    ಪೌರತ್ವ ಕಾಯ್ದೆ ಬೆಂಬಲಿಸಿ ಪ್ರಧಾನಿಯವರಿಗೆ ಒಂದು ಕೋಟಿ ಪತ್ರ ಬರೆಯಲು ಬಿಜೆಪಿ ಶಾಸಕರ ಸಭೆಯಲ್ಲಿ ನಿರ್ಧರಿಸಲಾಯ್ತು. ಪಕ್ಷದ ಸಂಸದರು, ಶಾಸಕರು, ಪರಿಷತ್ ಸದಸ್ಯರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು ಹೀಗೆ ಎಲ್ಲರೂ ಕಾಯ್ದೆ ಬೆಂಬಲಿಸಿ ಪ್ರಧಾನಿ ಮೋದಿಯವರಿಗೆ ಪತ್ರಗಳನ್ನು ಬರೆಯುವಂತೆ ಸಭೆಯಲ್ಲಿ ಸೂಚನೆ ಕೊಡಲಾಯ್ತು. ಆ ಮೂಲಕ ಪೌರತ್ವ ಕಾಯ್ದೆ ಜಾರಿ ಹಿನ್ನೆಲೆಯಲ್ಲಿ ಕೇಂದ್ರ ಸರಕಾರಕ್ಕೆ ನೈತಿಕ ಶಕ್ತಿ ಕೊಡಲು ಸೂಚಿಸಲಾಯ್ತು.

  • ಪರಿಹಾರಕ್ಕಾಗಿ ಪ್ರಧಾನಿ ಮೋದಿಗೆ 1 ಸಾವಿರ ಪತ್ರ ಕಳುಹಿಸಲು ಮುಂದಾದ ಕಾರಂಜಾ ಸಂತ್ರಸ್ತರು

    ಪರಿಹಾರಕ್ಕಾಗಿ ಪ್ರಧಾನಿ ಮೋದಿಗೆ 1 ಸಾವಿರ ಪತ್ರ ಕಳುಹಿಸಲು ಮುಂದಾದ ಕಾರಂಜಾ ಸಂತ್ರಸ್ತರು

    ಬೀದರ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಚಳುವಳಿ ಮಾಡಲು ಕಾರಂಜಾ ಸಂತ್ರಸ್ತರು ಮಂದಾಗಿದ್ದಾರೆ.

    ಬರೋಬ್ಬರಿ 40 ವರ್ಷಗಳಿಂದ ಕಾರಂಜಾ ಹಿನ್ನೀರಿನಲ್ಲಿ ಕಳೆದುಕೊಂಡ ತಮ್ಮ ಭೂಮಿಯ ಪರಿಹಾರಕ್ಕಾಗಿ ಹೋರಾಟ ಮಾಡುತ್ತಾ ಬಂದರೂ ಇನ್ನೂ ನೈಯಾಪೈಸೆಯ ಪರಿಹಾರ ಸಿಕ್ಕಿಲ್ಲ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಬೇಸತ್ತಿರುವ ಕಾರಂಜಾ ಸಂತ್ರಸ್ತರು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಅಂಚೆ ಪತ್ರ ಚಳುವಳಿ ಮಾಡಲು ಮುಂದಾಗಿದ್ದಾರೆ.

    ಈಗಾಗಲೇ ಕಾರಂಜಾ ಹಿನ್ನೀರಿನಲ್ಲಿ ಭೂಮಿ ಕಳೆದುಕೊಂಡಿರುವ 28 ಹಳ್ಳಿಗಳಲ್ಲಿ ಪತ್ರಗಳನ್ನು ಹಂಚಲಾಗುತ್ತದೆ. ಈ ಪತ್ರಗಳನ್ನು ಕಾರಂಜಾ ಸಂತ್ರಸ್ತರು ಮೋದಿಗೆ ಪೋಸ್ಟ್ ಮಾಡಲಿದ್ದು, ಪ್ರಧಾನಿಯಿಂದಾದ್ರು ಪರಿಹಾರ ಸಿಗಬಹುದು ಎಂಬ ಭರವಸೆಯಲ್ಲಿ ಇದ್ದಾರೆ.

    2013 ರ ಸಾರ್ವತ್ರಿಕ ಚುನಾವಣೆಯಲ್ಲಿ ಬೀದರ್ ಜಿಲ್ಲೆಯನ್ನು ಮಿನಿ ಸಿಂಗಾಪೂರ್ ಮಾಡುವುದಾಗಿ ಭರವಸೆ ನೀಡಿ ವಿಜಯಶಾಲಿಯಾಗಿದ್ದ ನೈಸ್ ಖ್ಯಾತಿಯ ಅಶೋಕ್ ಖೇಣಿ ಸಾಹೇಬ್ರು ಕೂಡಾ ಕಾರಂಜಾ ಸಂತ್ರಸ್ತರಿಗೆ ನಾನು ಗೆದ್ದು ಬಂದರೆ ಪರಿಹಾರ ಕೊಡಿಸುವುದಾಗಿ ಮಾತುಕೊಟ್ಟು ತಪ್ಪಿದ್ದರು. ಹೀಗಾಗಿ ಎಲ್ಲಾ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಹುಸಿ ಭರವಸೆಯಿಂದ ಬೇಸತ್ತಿರುವ ಕಾರಂಜಾ ಸಂತ್ರಸ್ತರು 1 ಸಾವಿರ ಅಂಚೆ ಪತ್ರಗಳನ್ನು ಪ್ರಧಾನಿಗೆ ಕಳಿಸಲು ನಿರ್ಧಾರ ಮಾಡಿದ್ದಾರೆ.