Tag: ಪತ್ರೋಡೆ

  • ಕರಾವಳಿ ಫೇಮಸ್ ರೆಸಿಪಿ ‘ಪತ್ರೋಡೆ’ ಮಾಡಿ ಸವಿಯಿರಿ

    ಕರಾವಳಿ ಫೇಮಸ್ ರೆಸಿಪಿ ‘ಪತ್ರೋಡೆ’ ಮಾಡಿ ಸವಿಯಿರಿ

    ಡುಪಿ ಮತ್ತು ಮಂಗಳೂರಿನ ಕರಾವಳಿ ಸ್ಥಳವು ಸಾತ್ವಿಕ ಪಾಕಪದ್ಧತಿಗೆ ಹೆಸರುವಾಸಿಯಾಗಿದೆ. ಇದು ಉಪಾಹಾರ, ಬಾಳೆ ಎಲೆ ಊಟಕ್ಕೆ ವ್ಯಾಪಕವಾಗಿ ಜನಪ್ರಿಯವಾಗಿದೆ. ಆದರೆ ಪತ್ರೋಡೆ ರೆಸಿಪಿ ಸಾಂಪ್ರದಾಯಿಕ ಸ್ನ್ಯಾಕ್ಸ್‌ ಪಾಕವಿಧಾನವಾಗಿದ್ದು, ಕೊಲೊಕೇಶಿಯಾ/ಕೆಸು ಎಲೆಯಲ್ಲಿ ಮಾಡಲಾಗುತ್ತದೆ. ಈ ವಿಧಾನ ಸುಲಭವಾಗಿದ್ದು, ಮನೆಯಲ್ಲಿ ಮಾಡಿ ಸವಿಯಿರಿ.

    ಬೇಕಾಗಿರುವ ಪದಾರ್ಥಗಳು:
    * ಅಕ್ಕಿ – 1 ಕಪ್
    * ಉದ್ದಿನ ಬೇಳೆ – 2 ಟೇಬಲ್ಸ್ಪೂನ್
    * ತುರಿದ ತೆಂಗಿನಕಾಯಿ – 1 ಕಪ್
    * ಕೊತ್ತಂಬರಿ ಬೀಜ – 2 ಟೀಸ್ಪೂನ್
    * ಜೀರಿಗೆ – 1 ಟೀಸ್ಪೂನ್
    * ಮೆಂತ್ಯೆ ಬೀಜ – ಅರ್ಧ ಟೀಸ್ಪೂನ್
    * ಅರಿಶಿನ – ಅರ್ಧ ಟೀಸ್ಪೂನ್
    * ಬೆಲ್ಲ – ಅರ್ಧ ಕಪ್
    * ಹುಣಿಸೇಹಣ್ಣು – 30 ಗ್ರಾಂ
    * ಉಪ್ಪು – 1 ಟೀಸ್ಪೂನ್
    * ಒಣಗಿದ ಕೆಂಪು ಮೆಣಸಿನಕಾಯಿ – 7
    * ಕೊಲೊಕೇಶಿಯಾ ಎಲೆಗಳು/ ಕೆಸುವಿನ ಎಲೆ – 20

    ಒಗ್ಗರಣೆಗೆ ಬೇಕಾದ ಪದಾರ್ಥ:
    * ತೆಂಗಿನ ಎಣ್ಣೆ – 2 ಟೇಬಲ್ಸ್ಪೂನ್
    * ಸಾಸಿವೆ – 1 ಟೀಸ್ಪೂನ್
    * ಉದ್ದಿನ ಬೇಳೆ – 1 ಟೀಸ್ಪೂನ್
    * ಕಡ್ಲೆ ಬೇಳೆ – 1 ಟೀಸ್ಪೂನ್
    * ಕಡ್ಲೆ ಬೀಜ – 2 ಟೇಬಲ್ಸ್ಪೂನ್
    * ಕರಿ ಬೇವಿನ ಎಲೆ – ಅರ್ಧ ಕಪ್
    * ತುರಿದ ತೆಂಗಿನಕಾಯಿ – ಅರ್ಧ ಕಪ್
    * ಬೆಲ್ಲ – 2 ಟೇಬಲ್ಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ, ದೊಡ್ಡ ಬಟ್ಟಲಿನಲ್ಲಿ 1 ಕಪ್ ಅಕ್ಕಿ ಮತ್ತು 2 ಟೇಬಲ್ಸ್ಪೂನ್ ಉದ್ದಿನ ಬೇಳೆಯನ್ನು 3 ಗಂಟೆಗಳ ಕಾಲ ನೆನೆಸಿಡಿ. ನೆನೆಸಿದ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಮಿಕ್ಸರ್ ಹಾಕಿ ರುಬ್ಬಿಕೊಳ್ಳಿ.
    * ಈ ಮಿಶ್ರಣಕ್ಕೆ ತೆಂಗಿನಕಾಯಿ, ಕೊತ್ತಂಬರಿ ಬೀಜ, ಜೀರಾ, ಮೆಂತ್ಯೆ ಮತ್ತು ಅರಿಶಿನವನ್ನು ಸೇರಿಸಿ ಮಿಕ್ಸ್ ಮಾಡಿ.
    * ಬೆಲ್ಲ, ಹುಣಿಸೇಹಣ್ಣು, ಉಪ್ಪು ಮತ್ತು ಕೆಂಪು ಮೆಣಸಿನಕಾಯಿಯನ್ನು ಸೇರಿಸಿ. ಅಗತ್ಯವಿರುವಂತೆ ನೀರನ್ನು ಸೇರಿಸಿ ರುಬ್ಬಿಕೊಳ್ಳಿ. ಈಗ ಮಸಾಲಾ ಪೇಸ್ಟ್ ಸಿದ್ಧವಾಗಿದೆ.
    * ಕೆಸುವಿನ ಎಲೆಗಳನ್ನು ತೆಗೆದುಕೊಂಡು ಗೆರೆಗಳನ್ನು ಟ್ರಿಮ್ ಮಾಡಿ. ಮಸಾಲಾ ಪೇಸ್ಟ್ ಎಲೆಗೆ ಸಮವಾಗಿ ಹರಡಿ.
    * ಕೆಸುವಿನ ಎಲೆಗಳಿಗೆ 4 ಬಾರಿ ಮಸಾಲಾ ಪೇಸ್ಟ್ ಹರಡಿ. ಈಗ ಎಲೆಯ ಒಂದು ಬದಿಗಳನ್ನು ಮಡಚಿ ರೋಲ್ ಮಾಡಿ. 30 ನಿಮಿಷಗಳ ಕಾಲ ಸ್ಟೀಮ್ ಮಾಡಿ. ತಣ್ಣಗಾದ ಮೇಲೆ ಅದನ್ನು ಕಟ್ ಮಾಡಿ.
    * ತೆಂಗಿನ ಎಣ್ಣೆಯನ್ನು ಬಿಸಿ ಮಾಡುವ ಮೂಲಕ ಒಗ್ಗರಣೆಯನ್ನು ತಯಾರಿಸಿ. ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ಕಡ್ಲೆ ಬೇಳೆ, ಪೀನಟ್ಸ್ ಮತ್ತು ಕರಿ ಬೇವಿನ ಎಲೆಗಳನ್ನು ಸೇರಿಸಿ.
    * ಅದಕ್ಕೆ ತೆಂಗಿನಕಾಯಿ ಮತ್ತು ಬೆಲ್ಲವನ್ನು ಸೇರಿಸಿ. ಒಂದು ನಿಮಿಷ ಅಥವಾ ತೆಂಗಿನಕಾಯಿ ವಾಸನೆ ಹೋಗುವವರೆಗೂ ಫ್ರೈ ಮಾಡಿ.
    * ಅಲ್ಲದೇ ತುಂಡರಿಸಿದ ಪತ್ರೋಡೆ ತುಣುಕುಗಳನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.

    – ಪತ್ರೋಡೆಯನ್ನು ಬೆಳಗಿನ ತಿಂಡಿ ಅಥವಾ ಸಂಜೆಯ ಸ್ನ್ಯಾಕ್ಸ್‌ ಗೆ ಮಾಡಿ ಆನಂದಿಸಿ.

  • ಕೆಸುವಿನ ಎಲೆಯ ಖಾದ್ಯಕ್ಕೆ ಕಂಗನಾ ಫಿದಾ – ಕರಾವಳಿಯ ಪತ್ರೋಡೆ ಸವಿದ ನಟಿ

    ಕೆಸುವಿನ ಎಲೆಯ ಖಾದ್ಯಕ್ಕೆ ಕಂಗನಾ ಫಿದಾ – ಕರಾವಳಿಯ ಪತ್ರೋಡೆ ಸವಿದ ನಟಿ

    – ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ
    – ಪತ್ರೋಡೆ ಮಾಡುವ ವಿಧಾನ

    ಮುಂಬೈ: ಕರಾವಳಿಯ ಖಾದ್ಯ ಪತ್ರೋಡೆಯನ್ನು ಬಾಲಿವುಡ್ ನಟಿ ಕಂಗನಾ ರಾಣಾವತ್ ಸವಿದಿದ್ದು, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

    ಮಳೆಗಾಲದಲ್ಲಿ ತುಳುನಾಡಿನ ಗದ್ದೆ, ತೋಟಗಳಲ್ಲಿ ಯಥೇಚ್ಚವಾಗಿ ಬೆಳೆಯುವ ಕೆಸುವಿನ ಎಲೆಯ ಖಾದ್ಯಕ್ಕೆ ಕಂಗನಾ ರಾಣಾವತ್ ಬೌಲ್ಡ್ ಆಗಿದ್ದಾರೆ. ತುಳುನಾಡಿನ ಖಾದ್ಯ ಪತ್ರೊಡೆಯ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕಂಗನಾ ಬರೆದುಕೊಂಡಿದ್ದಾರೆ.

    ಮಳೆಗಾಲ ಬಂತೆಂದರೆ ಸಾಕು ಕರಾವಳಿ ಭಾಗದಲ್ಲಿ ಕೆಸು ಬೆಳೆಯಲು ಆರಂಭಿಸುತ್ತದೆ. ಮೂರ್ನಾಲ್ಕು ತಿಂಗಳುಗಳ ಕಾಲ ಕೆಸುವಿನ ಎಲೆಯಲ್ಲಿ ಹಲವಾರು ಖಾದ್ಯಗಳನ್ನು ಕರಾವಳಿಗರು ತಯಾರು ಮಾಡುತ್ತಾರೆ. ಕೆಸುವಿನ ಎಲೆಯ ಪತ್ರೊಡೆ, ಕೆಸುವಿನ ಎಲೆಯ ಸಾರು, ಕೆಸುವಿನ ಎಲೆಯ ಚಟ್ನಿ, ಕೆಸುವಿನ ಕಾಂಡದ ಪಲ್ಯ ಹೀಗೆ ವಿವಿಧ ಖಾದ್ಯಗಳು ಕೆಸುವಿಂದ ಆಗುತ್ತದೆ.

    ಹಿಮಾಚಲ ಪ್ರದೇಶದ ಕಂಗನಾಳಿಗೂ ಕೆಸುವಿನ ಪತ್ರೊಡೆ ಅಂದರೆ ಇಷ್ಟ. ತಮ್ಮ ತಾಯಿ ಪತ್ರೊಡೆಯನ್ನು ತಯಾರು ಮಾಡಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕಂಗನಾ ಟ್ವೀಟ್‍ಗೆ ಕರಾವಳಿಯ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದು, ಖುಷಿ ವ್ಯಕ್ತಪಡಿಸಿದ್ದಾರೆ.

    ಕೆಸುವಿನ ಎಲೆಯಲ್ಲಿ ಅಗಾಧವಾದ ರೋಗನಿರೋಧಕ ಶಕ್ತಿ ಇದ್ದು, ಮಳೆಗಾಲದಲ್ಲಿ ಎಲೆಯನ್ನು ತಿಂದರೆ ದೇಹದ ಶಕ್ತಿ ವೃದ್ಧಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹೊಟ್ಟೆ ಸೇರಿರುವ ಉಗುರು, ತಲೆಗೂದಲಿನಂತಹ ಕರಗದ ವಸ್ತುಗಳನ್ನು ಕರಗಿಸುವ ಶಕ್ತಿ ಕೆಸುವಿನ ಎಲೆಗೆ ಮಾತ್ರ ಇರುತ್ತದೆ ಎಂಬುದು ಆಯುರ್ವೇದದಲ್ಲಿ ಸಾಬೀತಾಗಿದೆ. ಕರಾವಳಿಗರು ಮಳೆಗಾಲದಲ್ಲಿ ಒಂದೆರಡು ಬಾರಿಯಾದರೂ ಆಹಾರದಲ್ಲಿ ಕೆಸುವನ್ನು ಬಳಸುತ್ತಾರೆ. ಇದೀಗ ಕಂಗನಾ ರಾಣಾವತ್ ಪತ್ರೋಡೆ ಬಗ್ಗೆ ಪ್ರಸ್ತಾಪ ಮಾಡಿದ್ದು, ಕೆಸುವಿಗೆ ದೇಶ ಮಟ್ಟದಲ್ಲಿ ಪ್ರಚಾರ ಸಿಕ್ಕಂತಾಗಿದೆ.

    ಪತ್ರೋಡೆ ಮಾಡುವ ವಿಧಾನ:
    ಮೊದಲೇ ಅಕ್ಕಿ, ತೊಗರಿ ಬೇಳೆ ನೆನೆಸಿಡಬೇಕು. ಒಣ ಮೆಣಸಿನಕಾಯಿ, ಕೊತ್ತಂಬರಿ, ಅಕ್ಕಿ, ಉಪ್ಪು, ಹುಳಿ, ಬೆಲ್ಲ, ಸ್ವಲ್ಪ ಮೆಂತೆ, ಕೊಂಚ ತೊಗರಿ ಬೇಳೆಯನ್ನು ರುಬ್ಬಿ ಪೇಸ್ಟ್ ತಯಾರಿಸಬೇಕು. ಮಿಶ್ರಣದ ಪೇಸ್ಟನ್ನು ಕೆಸುವಿನ ಎಲೆಯ ಮೇಲೆ ತೆಳುವಾಗಿ ಹಚ್ಚಬೇಕು. ಇನ್ನೊಂದು ಕೆಸುವಿನ ಎಲೆಯನ್ನು ಅದರ ಮೇಲಿಟ್ಟು ಅದಕ್ಕೂ ಹಚ್ಚಬೇಕು. ಹೀಗೆ ಐದಾರು ಎಲೆಗಳನ್ನು ಮೇಲಿಂದ ಮೇಲೆ ಇಟ್ಟು ಮಸಾಲೆ ಹಚ್ಚಿ, ಕೊನೆಗೆ ಸುತ್ತಿ ಇಡ್ಲಿ ಪಾತ್ರೆಯಲ್ಲಿ ಬೇಯಿಸಬೇಕು. ಬೆಂದ ನಂತರ ರೌಂಡ್ ಆಕಾರದಲ್ಲಿ ಕಟ್ ಮಾಡಿ, ತುಪ್ಪ ಹಚ್ಚಿ ಕಾವಲಿಯಲ್ಲಿ ಎರಡು ಬದಿ ಕಾಯಿಸಿದರೆ ರುಚಿಕರವಾದ ಪತ್ರೊಡೆ ಸಿದ್ಧವಾಗುತ್ತದೆ.