Tag: ಪತ್ರಿಕಾ ಹೇಳಿಕೆ

  • ಸುಳ್ಳು ಆರೋಪ ಮಾಡಿದ್ರೆ ದಾಖಲೆ ಸಮೇತ ನಿಮ್ಮ ಅವ್ಯವಹಾರಗಳನ್ನ ಬಯಲು ಮಾಡ್ತೇನೆ: ಸುಧಾಕರ್

    ಸುಳ್ಳು ಆರೋಪ ಮಾಡಿದ್ರೆ ದಾಖಲೆ ಸಮೇತ ನಿಮ್ಮ ಅವ್ಯವಹಾರಗಳನ್ನ ಬಯಲು ಮಾಡ್ತೇನೆ: ಸುಧಾಕರ್

    ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಕಾಂಗ್ರೆಸ್ ಪಕ್ಷದ ಶಾಸಕ ವಿ.ಮುನಿಯಪ್ಪ ಅವರು ನಿನ್ನೆ ಶಾಸಕ ಸುಧಾಕರ್ ಅವರ ಮೇಲೆ ಮಾಡಿದ್ದ ಆರೋಪಗಳಿಗೆ ಅನರ್ಹ ಶಾಸಕ ಸುಧಾಕರ್ ತಿರುಗೇಟು ನೀಡಿದ್ದು, ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದರೆ ನಿಮ್ಮ ಅವ್ಯವಹಾರಗಳನ್ನು ದಾಖಲೆ ಸಮೇತ ಬಯಲು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಿ.ಮುನಿಯಪ್ಪ ಅವರು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನ ಮಾಡಿದ್ದಾರೆ. ಆದರೆ ನಾನು ರಾಜಕಾರಣಕ್ಕೂ ಬರುವ ಮುನ್ನವೇ ಆರ್ಥಿಕವಾಗಿ ಸದೃಢನಾಗಿದ್ದೇನೆ. ಕೋಟ್ಯಾಂತರ ರೂಪಾಯಿ ಸಾಲ ಮಾಡಿ ನಾನು ವಿದ್ಯಾಸಂಸ್ಥೆ ಕಟ್ಟಿರುತ್ತೇನೆ. 20 ವರ್ಷದಿಂದ ನಾನು ಆದಾಯ ತೆರಿಗೆ ಪಾವತಿಸುತ್ತಿದ್ದು ಪಾರದರ್ಶಕವಾಗಿದೆ. ಆದರೆ ರಾಜಕಾರಣಕ್ಕೆ ಬಂದ ಮೇಲೆ ಮುನಿಯಪ್ಪ ಅವರು ಯಾವ ಮಟ್ಟಕ್ಕೆ ಬೆಳೆದಿದ್ದಾರೆ ಎಂಬುದು ಗೊತ್ತು ಎಂದಿದ್ದಾರೆ.

    ಇದೇ  ವೇಳೆ ವಿ.ಮುನಿಯಪ್ಪ ಅವರ ವಿರುದ್ಧವೂ ಆರೋಪ ಮಾಡಿದರುವ ಸುಧಾಕರ್ ಅವರು, ಬೆಂಗಳೂರಿನಲ್ಲಿ ನಿಮಗೆ ಎಷ್ಟು ಕಟ್ಟಡಗಳಿವೆ ಎಷ್ಟು ಬಾಡಿಗೆ ಬರುತ್ತಿದೆ. ವಿದ್ಯಾಸಂಸ್ಥೆಗಳ ವಹಿವಾಟು ಎಷ್ಟರ ಮಟ್ಟಿಗೆ ಅಭಿವೃದ್ಧಿ ಪಡಿಸಿಕೊಂಡಿದ್ದೀರಿ ಎಂಬುವುದು ನನಗೆ ಅರಿವಿದೆ. ನನ್ನ ಶಿಕ್ಷಣದ ಬಗ್ಗೆ ನಿಮಗೇ ಸಂದೇಹಗಳಿದ್ದಾರೆ ಆರ್ ಟಿಐ ಹಾಕಿ ನನ್ನ ವಿದ್ಯಾಭ್ಯಾಸದ ಮಾಹಿತಿ ಪಡೆದುಕೊಳ್ಳಿ. ರಾಜಕೀಯಕ್ಕೆ ಬಂದ ನಂತರ ನನ್ನ ವಹಿವಾಟು ಎಷ್ಟು, ನಿಮ್ಮ ವಹಿವಾಟು ಎಷ್ಟು ಎಂಬ ಮಾಹಿತಿ ಪಡೆಯಿರಿ ಎಂದು ಸವಾಲು ಎಸೆದಿದ್ದಾರೆ.

    ಮಾನ್ಯ ವಿ.ಮುನಿಯಪ್ಪ ಅವರು ಗಣಿ ಇಲಾಖೆಯ ಮಂತ್ರಿಗಳಾಗಿದ್ದಾಗ ಏನೇನು ಅವ್ಯವಾಹಾರ ಮಾಡಿದ್ದೀರಿ. ಅಧಿಕಾರಿಗಳ ವರ್ಗಾವಣೆಯಲ್ಲಿ ಯಾವ ರೀತಿ ದಂಧೆ ಮಾಡಿದ್ದೀರಿ ಗೊತ್ತಿದೆ. ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನ ಮಾಡಿದಲ್ಲಿ ನಾನು ಸಹಿಸುವುದಿಲ್ಲ. ದಾಖಲೆಗಳ ಸಮೇತ ನಿಮ್ಮ ಅವ್ಯವಹಾರಗಳನ್ನ ಬಯಲು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು. ಇದನ್ನು ಓದಿ: ಸುಧಾಕರ್‌ಗೆ ಕೋಟ್ಯಂತರ ಹಣ ಎಲ್ಲಿಂದ ಬರುತ್ತೆ – ವಿ ಮುನಿಯಪ್ಪ ಕಿಡಿ

    ನಿನ್ನೆಯಷ್ಟೇ ಅನರ್ಹ ಶಾಸಕ ಸುಧಾಕರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ, ಅವರು ಸುಧಾಕರ್ ಎಂಬಿಬಿಎಸ್ ಮಾಡಿರುವುದು ಅನುಮಾನ ಎಂದಿದ್ದರು. ಅಲ್ಲದೇ ಸುಧಾಕರ್ ಅವರಿಗೆ ಕೋಟ್ಯಾಂತರ ರೂಪಾಯಿ ಎಲ್ಲಿಂದ ಬರುತ್ತೆ. ಸುಧಾಕರ್ ಕುಟುಂಬ ಗಣಿಗಾರಿಕೆಯಲ್ಲಿ ತೊಡಗಿದ್ದು, ಗಣಿಗಾರಿಕೆ ಮಡುವ ಪ್ರತಿಯೊಬ್ಬರು ಸುಧಾಕರ್ ಗೆ ಪ್ರತಿ ತಿಂಗಳು ಇಂತಿಷ್ಟು ಅಂತ ಹಣ ಅವರಿಗೆ ನೀಡಬೇಕೆಂದು ಆರೋಪ ಮಾಡಿದ್ದರು.

  • ಗಂಭೀರವಾಗಿ ಪರಿಶೀಲಿಸುವೆ – ಪಬ್ಲಿಕ್ ಟಿವಿ ಗ್ರಾಮ ‘ವಾಸ್ತವ’ ವರದಿಗೆ ಸಿಎಂ ಸ್ಪಂದನೆ

    ಗಂಭೀರವಾಗಿ ಪರಿಶೀಲಿಸುವೆ – ಪಬ್ಲಿಕ್ ಟಿವಿ ಗ್ರಾಮ ‘ವಾಸ್ತವ’ ವರದಿಗೆ ಸಿಎಂ ಸ್ಪಂದನೆ

    ಬೆಂಗಳೂರು: ಎಚ್‍ಡಿ ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಸೇರಿ ಸಮ್ಮಿಶ್ರ ಸರ್ಕಾರ ನಡೆಸಿದ್ದ ವೇಳೆ ಕೈಗೊಂಡಿದ್ದ ಗ್ರಾಮ ವಾಸ್ತವ್ಯದ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಗ್ರಾಮ ವಾಸ್ತವ್ಯದ ಲೋಪ ದೋಷಗಳು ಏನು? ಯಾವೆಲ್ಲಾ ಗ್ರಾಮಗಳಲ್ಲಿ ಅಭಿವೃದ್ಧಿ ಆಗಿದೆ. ಇಂದಿಗೂ ಗ್ರಾಮದಲ್ಲಿ ಯಾವೆಲ್ಲಾ ಸಮಸ್ಯೆಗಳು ಇದೆ ಎಂಬುವುದರ ವಾಸ್ತವತೆಯನ್ನು ತೆರೆದಿಟ್ಟಿತ್ತು.

    ಪಬ್ಲಿಕ್ ಟಿವಿಯ ವರದಿಯ ನೋಡಿರುವ ಸಿಎಂ ಕುಮಾರಸ್ವಾಮಿ ಅವರು ವರದಿಯ ಸಕರಾತ್ಮಕ ಅಂಶಗಳನ್ನು ಸ್ವೀಕರಿಸಿ, ಗ್ರಾಮಗಳ ಕುಂದು ಕೊರತೆಗಳ ನಿವಾರಣೆಗೆ ಕಾರ್ಯ ನಿರ್ವಹಿಸುತ್ತೇನೆ. ಅಲ್ಲದೇ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ ಎಂದು ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ವರದಿಯಲ್ಲಿ ಸಿಎಂ ಕುಮಾರಸ್ವಾಮಿ ಅವರು ವಾಸ್ತವ್ಯ ಮಾಡಿದ್ದ ಗ್ರಾಮದಗಳಲ್ಲಿ ಇಂದಿಗೂ ಯಾವ ಸಮಸ್ಯೆಗಳಿವೆ ಎಂಬುವುದನ್ನು ವಿಸ್ತಾವರವಾಗಿ ವಿವರಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ. ಅಧಿಕಾರಿಗಳು, ಸ್ಥಳೀಯ ನಾಯಕರ ಗಮನಕ್ಕೆ ತಂದು ಕಾರ್ಯಗಳನ್ನು ಮಾಡುತ್ತೇನೆ. ಮುಂದಿನ ಕಾರ್ಯಕ್ರಮಗಳಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಾಗುವುದನ್ನು ಅನುಸರಿಸಲು ಖಂಡಿತ ಪ್ರಯತ್ನಿಸುವೆ ಎಂದಿದ್ದಾರೆ. ಇದನ್ನು ಓದಿ: ಸಿಎಂ ವಾಸ್ತವ್ಯ ಮಾಡಿದ್ದ ಗ್ರಾಮಗಳ ಸ್ಥಿತಿ ಈಗ ಹೇಗಿದೆ? ಎಷ್ಟು ಭರವಸೆ ಪೂರ್ಣವಾಗಿದೆ? – ಕಂಪ್ಲೀಟ್ ವರದಿ ಓದಿ

    ಸಿಎಂ ಹೇಳಿಕೆಯಲ್ಲಿ ಏನಿದೆ?
    ನಾನು ಗ್ರಾಮ ವಾಸ್ತವ್ಯ ಮಾಡುವೆನೆಂದು ಘೋಷಿಸಿದ ದಿನದಿಂದ ಮಾಧ್ಯಮಗಳಲ್ಲಿ ನಾನು 2006-07 ರ ಅವಧಿಯಲ್ಲಿ ವಾಸ್ತವ್ಯ ಮಾಡಿದ ಗ್ರಾಮಗಳ ಸ್ಥಿತಿ-ಗತಿ, ಕುಟುಂಬಗಳ ಕುರಿತು ವರದಿಗಳನ್ನು ಪ್ರಕಟಿಸುತ್ತಿರುವುದನ್ನು ಗಮನಿಸುತ್ತಿರುವೆ. ಈ ಹಿನ್ನೆಲೆಯಲ್ಲಿ ಎರಡು ಮಾತು:

    ಗ್ರಾಮ ವಾಸ್ತವ್ಯ ಎನ್ನುವುದು ಯಾವುದೇ ಜನಪ್ರಿಯತೆ ಗಿಟ್ಟಿಸುವ ಗಿಮಿಕ್ ಅಲ್ಲ. ಈ ಪರಿಕಲ್ಪನೆಯ ಮೂಲ ಪುರುಷನೂ ನಾನಲ್ಲ. ನನ್ನ ಗ್ರಾಮ ವಾಸ್ತವ್ಯ ಪ್ರಾರಂಭವಾಗಿದ್ದು ಆಕಸ್ಮಿಕವಾಗಿ, ಪ್ರವಾಹ ಪೀಡಿತ ಕೃಷ್ಣಾ ನದಿ ದಂಡೆಯ ಪಿ.ಕೆ. ನಾಗನೂರಿನಿಂದ ಎನ್ನುವುದು ನಿಮಗೆಲ್ಲಾ ತಿಳಿದ ವಿಚಾರ. ಗ್ರಾಮ ವಾಸ್ತವ್ಯ ಎಂಬ ಪದವನ್ನು ಚಾಲ್ತಿಗೆ ತಂದವರೂ ನಮ್ಮ ಮಾಧ್ಯಮ ಮಿತ್ರರೇ. ಆದರೆ ಈ ಸಂದರ್ಭದಲ್ಲಿ ಜನರು ತೋರಿದ ಪ್ರೀತಿ, ವಿಶ್ವಾಸ ನನ್ನನ್ನು ಮೂಕವಿಸ್ಮಿತನನ್ನಾಗಿಸಿದೆ. ಜನರ ಸಮಸ್ಯೆಗಳು, ಬದುಕಿನ ಕಟು ವಾಸ್ತವಗಳನ್ನು ಅರಿಯಲು ನೆರವಾಗಿದೆ. ಸರ್ಕಾರದಿಂದ ಆಗಬೇಕಾದ್ದು ಏನು ಎಂಬ ಬಗ್ಗೆ ನೇರ, ಸರಳವಾದ ಅತ್ಯುತ್ತಮ ಸಲಹೆಗಳೂ ಬಂದಿವೆ.

    ಸಾರಾಯಿ ನಿಷೇಧ, ಲಾಟರಿ ನಿಷೇಧ, ಸಾಲ ಮನ್ನಾ, ಸಾವಿರಕ್ಕೂ ಹೆಚ್ಚು ಪ್ರೌಢಶಾಲೆಗಳು, 500ಕ್ಕೂ ಹೆಚ್ಚು ಪಿಯು ಹಾಗೂ ಪದವಿ ಕಾಲೇಜುಗಳ ಸ್ಥಾಪನೆ, ಗ್ರಾಮಗಳ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆಯ ಸುವರ್ಣ ಗ್ರಾಮ ಯೋಜನೆ – ಇವೆಲ್ಲಾ ಗ್ರಾಮವಾಸ್ತವ್ಯದ ಫಲಶ್ರುತಿಗಳು. ನನ್ನ ಅಧಿಕಾರಾವಧಿಯ ನಂತರ ಸುವರ್ಣ ಗ್ರಾಮ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ಬಾರದೇ ಇರುವುದು ವಿಷಾದನೀಯ.

    ಗ್ರಾಮ ವಾಸ್ತವ್ಯದ ಮುಖ್ಯ ಗುರಿ, ಆಡಳಿತ ಯಂತ್ರದ ಕಾರ್ಯವೈಖರಿ ಅರಿಯುವುದು. ಸರ್ಕಾರ ರೂಪಿಸಿದ ಯೋಜನೆ ಫಲಕಾರಿಯೇ? ಜನರ ಅಭಿಪ್ರಾಯವೇನು ಎಂಬುದನ್ನು ಅರಿಯುವುದು, ಸುತ್ತಲಿನ ಗ್ರಾಮಗಳ ಜನರೂ ಸೇರುತ್ತಾರೆ. ಅವರಿಂದ ಅಹವಾಲು ಸ್ವೀಕರಿಸಿ ಪರಿಹರಿಸುವುದು. ಕಾನೂನು ವ್ಯಾಪ್ತಿಯಲ್ಲಿ ಇವುಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಕೆಲವು ಮನವಿಗಳನ್ನು ಪರಿಗಣಿಸಲು ಸಾಧ್ಯವಾಗದೆ ಇರಬಹುದು. ಇಂಥವುಗಳನ್ನು ನೀವು ಮತ್ತೆ ಗಮನಕ್ಕೆ ತರುತ್ತಿದ್ದೀರಿ. ಖಂಡಿತವಾಗಿಯೂ ಅವುಗಳನ್ನು ಗಂಭೀರವಾಗಿ ಪರಿಶೀಲಿಸುವೆ. ಆ ಗ್ರಾಮದ ಅಭಿವೃದ್ಧಿ ಗ್ರಾಮ ವಾಸ್ತವ್ಯದ ಫಲಶ್ರುತಿಯ ಒಂದು ಭಾಗವಷ್ಟೆ. ಅದೇ ಕೇಂದ್ರ ಗುರಿಯಲ್ಲ.

    ಜನರಿಗೆ ಅಗತ್ಯವಿರುವ ಯೋಜನೆಗಳನ್ನು ಜಾರಿಗೊಳಿಸಿದಾಗ ಅವು ಸಹಜವಾಗಿಯೇ ಯಶಸ್ವಿಯಾಗುತ್ತವೆ. ಅದೇ ರೀತಿ ಯೋಜನೆಗಳನ್ನು ರೂಪಿಸಿ, ಸರ್ಕಾರ ಜನರ ಮೇಲೆ ಹೇರಿದರೆ ಯಶಸ್ವಿಯಾಗದು. ಈ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದು ನನ್ನ ಅನುಭವ.

    ಅಂತೆಯೇ ಎಚ್‍ಐವಿ ಪೀಡಿತ ಕುಟುಂಬವೊಂದರ ಮನೆಯಲ್ಲಿ ನಾನು ವಾಸ್ತವ್ಯ ಹೂಡಿದ್ದರಿಂದ ಆ ಕುಟುಂಬ ಊರನ್ನೇ ತೊರೆದಿದೆ ಎಂದು ವರದಿಯಾಗಿದೆ. ಇದು ನಿಜಕ್ಕೂ ದುರದೃಷ್ಣಕರ. ಎಚ್‍ಐವಿ/ ಏಯ್ಡ್ಸ್ ಬಗ್ಗೆ ಜನರಿಗಿರುವ ಅಂಧ ವಿಶ್ವಾಸವನ್ನು ದೂರ ಮಾಡುವ ಉದ್ದೇಶದಿಂದ ಏಯ್ಡ್ಸ್ ನಿಯಂತ್ರಣ ಮಂಡಳಿ ಅಧಿಕಾರಿಗಳ ಮನವಿಯ ಮೇರೆಗೆ ಅಲ್ಲಿ ವಾಸ್ತವ್ಯ ಮಾಡಿದ್ದೆ. ಆದರೆ ಸಮಾಜ ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸಿಲ್ಲ ಎನ್ನುವುದು ನಿಜಕ್ಕೂ ಬೇಸರದ ಸಂಗತಿ. ಆದರೆ ವೈಯಕ್ತಿಕವಾಗಿಯೂ ನಾನು ಆ ಕುಟುಂಬಕ್ಕೆ ನೆರವಾಗಿದ್ದು, ಅದನ್ನು ಇಲ್ಲಿ ಚರ್ಚಿಸಲು ಹೋಗುವುದಿಲ್ಲ. ಮತ್ತೊಮ್ಮೆ ಆ ಕುಟುಂಬ ವನ್ನು ಸಂಪರ್ಕಿಸಿ ಹೇಗೆ ನೆರವಾಗಬಹುದು ಎಂದು ಪರಿಶೀಲಿಸುವೆ.

    https://www.youtube.com/watch?v=YgZ7K9ZSD2E

    ಮಾಧ್ಯಮಗಳು ಪ್ರಕಟಿಸುತ್ತಿರುವ ವರದಿಗಳಲ್ಲಿರುವ ಸಕಾರಾತ್ಮಕ ಸಲಹೆಗಳನ್ನು ಮುಕ್ತ, ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸುವೆ. ಮುಂದಿನ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಾಗುವುದನ್ನು ಅನುಸರಿಸಲು ಖಂಡಿತ ಪ್ರಯತ್ನಿಸುವೆ ಎಂದಿದ್ದಾರೆ.

  • ರಾಜಕೀಯ ಸೇಡಿಗೆ ಪೊಲೀಸ್ ವ್ಯವಸ್ಥೆ ದುರುಪಯೋಗ – ರೆಡ್ಡಿ ಪರ ಬಿಎಸ್‍ವೈ ಬ್ಯಾಟಿಂಗ್

    ರಾಜಕೀಯ ಸೇಡಿಗೆ ಪೊಲೀಸ್ ವ್ಯವಸ್ಥೆ ದುರುಪಯೋಗ – ರೆಡ್ಡಿ ಪರ ಬಿಎಸ್‍ವೈ ಬ್ಯಾಟಿಂಗ್

    ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ರಾಜಕೀಯ ಸೇಡು ತೀರಿಸಿಕೊಳ್ಳಲು, ಎಸಿಬಿ ಮತ್ತು ಇತರ ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆರೋಪ ಮಾಡಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿಎಸ್‍ವೈ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಯಾರು ಯಾರ ಮಾತನ್ನೂ ಕೇಳದ ಪರಿಸ್ಥಿತಿಯಲ್ಲಿ ಆಡಳಿತ ಯಂತ್ರ ದುರುಪಯೋಗವಾಗುತ್ತಿದೆ. ರಾಜ್ಯದಲ್ಲಿ ಅದರಲ್ಲೂ ಬೆಂಗಳೂರು ನಗರದಲ್ಲಿ ಹಾಡಹಗಲೇ ಸಮಾಜಘಾತುಕ ಶಕ್ತಿಗಳು ಕತ್ತಿ ಝಳಪಿಸುತ್ತಿವೆ. ಪೊಲೀಸ್ ಇಲಾಖೆಯಲ್ಲಿ ರಾಜಕೀಯ ಶಕ್ತಿಗಳ ಹಸ್ತಕ್ಷೇಪವಾಗುತ್ತಿದ್ದು, ಇದಕ್ಕೆ ಜನಾರ್ದನ ರೆಡ್ಡಿಯವರನ್ನು ಬಂಧಿಸಿ ಬಿಡುಗಡೆಗೊಳಿಸಿರುವುದು ತಾಜಾ ಉದಾಹರಣೆಯಾಗಿದೆ. ರಾಜಕೀಯ ಸೇಡು ತೀರಿಸಿಕೊಳ್ಳಲು, ಎಸಿಬಿ ಮತ್ತು ಇತರ ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ಇದು ಅಧಿಕಾರ ದುರುಪಯೋಗ ಅಲ್ಲದೇ ಮತ್ತೇನು ಎಂದು ಪ್ರಶ್ನೆ ಮಾಡಿದ್ದಾರೆ.

    ನಗರದ ವಿಜಯನಗರದಲ್ಲಿ ಸಿಗರೇಟ್ ವಿಚಾರದಲ್ಲಿ ನಡೆದ ಕೊಲೆಯನ್ನು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖ ಮಾಡಿರುವ ಬಿಎಸ್ ಯಡಿಯೂರಪ್ಪ ಅವರು, ಘಟನೆಯ ವೀಡಿಯೋ ವೈರಲ್ ಆಗಿದ್ದು ಅಮಾನವೀಯ. ಇದು ಬೆಂಗಳೂರಿನಲ್ಲಿ ಇರುವ ಪೊಲೀಸ್ ಕಾನೂನು ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಒಂದು ತಿಂಗಳಿನ ಹಿಂದೆ ಮಂಡ್ಯದಲ್ಲಿ ಸಾಲದ ಹಣ ಮರುಪಾವತಿಸಲಿಲ್ಲ ಎಂದು ಹೆಣ್ಣು ಮಗಳನ್ನು ಎಳೆದುಕೊಂಡು ಜೀಪ್‍ನಲ್ಲಿ ತೆಗೆದುಕೊಂಡು ಹೋದ ಪ್ರಕರಣ ಹಾಗೇ ಮುಚ್ಚಿಹೋಗಿದ್ದು, ಅಭಿವೃದ್ಧಿ ಕಾರ್ಯವಲ್ಲದೇ ಸರ್ಕಾರದ ಎಲ್ಲಾ ಅಂಗಗಳೂ ಮುರಿದು ಬಿದ್ದಿವೆ ಎಂದು ತಿಳಿಸಿದ್ದಾರೆ.

    ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟರೆ ಯಾವುದೇ ಉದ್ದಿಮೆದಾರ ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುವುದಿಲ್ಲ. ಈ ಎಲ್ಲ ಅಪರಾಧ ಘಟನೆಗಳು ರಾಜ್ಯದ ಅಭಿವೃದ್ಧಿ ಮತ್ತು ಹೂಡಿಕೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದೆಲ್ಲಕ್ಕೂ ಪೊಲೀಸ್ ವ್ಯವಸ್ಥೆಯಲ್ಲಿ ರಾಜಕೀಯ ಶಕ್ತಿಗಳ ಹಸ್ತಕ್ಷೇಪವೇ ಕಾರಣವಾಗಿದೆ ಎಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನನಗೆ ಮಕ್ಕಳಿರೋದು ಸಾಬೀತಾದರೆ ಪೀಠ ತ್ಯಾಗ ಮಾಡುತ್ತೇನೆ: ಪೇಜಾವರ ಶ್ರೀ

    ನನಗೆ ಮಕ್ಕಳಿರೋದು ಸಾಬೀತಾದರೆ ಪೀಠ ತ್ಯಾಗ ಮಾಡುತ್ತೇನೆ: ಪೇಜಾವರ ಶ್ರೀ

    ಚೆನ್ನೈ: ನನ್ನ ವಿರುದ್ಧ ಶೀರೂರು ಶ್ರೀಗಳು ಮಾಡಿದ್ದಾರೆ ಎನ್ನಲಾದ ಆರೋಪ ಸಾಬೀತಾದರೆ ನಾನು ಪೀಠ ತ್ಯಾಗ ಮಾಡುತ್ತೇನೆ ಎಂದು ಪೇಜಾವರಶ್ರೀಗಳು ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ನಾನು ಯಾವುದೇ ಪರೀಕ್ಷೆ ಅಥವಾ ವಿಚಾರಣೆ ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ. ಶೀರೂರು ಶ್ರೀಗಳ ಸಾವಿನ ಬಳಿಕ ದಿನಕ್ಕೊಂದು ವಿಚಾರಗಳು ಬೆಳಕಿಗೆ ಬರುತ್ತಿದ್ದು, ಇದರಲ್ಲಿ ಪೇಜಾವರ ಶ್ರೀಗಳು ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ ಎಂಬ ವಾಟ್ಸಪ್ ಆಡಿಯೋ ಕೂಡಾ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಸದ್ಯ ಪೇಜಾವರಶ್ರೀಗಳು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

    ಪೇಜಾವರ ಶ್ರೀಗಳ ಹೇಳಿಕೆಯಲ್ಲೇನಿದೆ..?: ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಪೇಜಾವರ ಶ್ರೀಗಳು ಒಂದು ಪುಟದ ಹೇಳಿಕೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಅದರ ಪೂರ್ಣ ರೂಪ ಇಂತಿದೆ.

    ಶೀರೂರು ಮಠದ ಗತಿಸಿದ ಶ್ರೀ ಲಕ್ಷ್ಮೀವರತೀರ್ಥರ ಆಪ್ತವರ್ಗವು ಬಹಿರಂಗಗೊಳಿಸಿದ ಆಡಿಯೋದಲ್ಲಿ ತಾರುಣ್ಯದಲ್ಲಿ ನನಗೆ ಸ್ತ್ರೀ ಸಂಗವಿತ್ತು. ಪದ್ಮಾ ಎಂಬ ಹೆಣ್ಣು ಮಗಳು ತಮಿಳುನಾಡಿನಲ್ಲಿದ್ದಾಳೆಂಬ ಶುದ್ಧ ಸುಳ್ಳು ಸಂಗತಿಯನ್ನು ಉಲ್ಲೇಖಿಸಲಾಗಿದೆ. ಡಿಸೆಂಬರ್‍ನಲ್ಲಿ ಇವರೇ ಕಳುಹಿಸಿರಬಹುದಾದ ಪತ್ರದಲ್ಲಿ ಅವನು ಗಂಡು ಮಗನೆಂದು ಅವನ ಕುಲನಾಮವನ್ನು ಉಲ್ಲೇಖಿಸಲಾಗಿದೆ. ಈ ವ್ಯತ್ಯಾಸದಿಂದ ಇದು ಕಲ್ಪನೆಯೆಂದು ಗೊತ್ತಾಗುತ್ತದೆ. ಇದನ್ನು ನಮ್ಮ ದೇಶದ ಯಾರೂ ನಂಬುವುದಿಲ್ಲವೆಂದು ನನಗೆ ಗೊತ್ತಿದೆ. ಈ ಬಗ್ಗೆ ಯಾವ ವಿಚಾರಣೆ ಹಾಗೂ ಪರೀಕ್ಷೆಯನ್ನು ಎದುರಿಸಲು ನಾನು ಸಿದ್ಧನಿದ್ದೇನೆ. ಇದು ಬರೇ ಸುಳ್ಳು ಆರೋಪ.

    ಇದನ್ನು ಸಿದ್ದಪಡಿಸಲು ಸಾಧ್ಯವೇ ಇಲ್ಲ. ಇದು ಸಿದ್ಧವಾದರೆ ನಾನು ತಕ್ಷಣ ಪೀಠ ತ್ಯಾಗ ಮಾಡುವೆನು. ಲಕ್ಷೀವರ ತೀರ್ಥರ ನಿಧನದ ನಂತರ ಅವರ ಅವ್ಯವಹಾರದ ಬಗ್ಗೆ ಹೇಳಿಕೆ ಸರಿಯಿಲ್ಲವೆಂದು ಕೆಲವರು ಆಕ್ಷೇಪಿಸಿದ್ದಾರೆ. ಲಕ್ಷೀವರತೀರ್ಥರಿಗೆ ವಿಠಲ ದೇವರನ್ನು ಯಾಕೆ ಕೊಟ್ಟಿಲ್ಲ? ಅವರ ಅಂತ್ಯದರ್ಶನಕ್ಕೆ ಯಾಕೆ ಹೋಗಿಲ್ಲ ಮುಂತಾದ ಪ್ರಶ್ನೆ, ಆಕ್ಷೇಪವನ್ನು ಮಾದ್ಯಮದವರು ಮಾಡಿದ್ದರಿಂದ ಅದಕ್ಕೆ ಉತ್ತರವಾಗಿ ಅವರು ಸನ್ಯಾಸಧರ್ಮವನ್ನು ಪೂರ್ಣವಾಗಿ ಉಲ್ಲಂಘಿಸಿದ್ದಾರೆಂಬುದನ್ನು ಅನಿವಾರ್ಯವಾಗಿ ನಾನು ವಿವರಿಸ ಬೇಕಾಯಿತು.

    ಹಿಂದಿನ ಪಲಿಮಾರು ಸ್ವಾಮಿಗಳಾದ ರಘುವಲ್ಲಭ ತೀರ್ಥರು, ಹಿಂದಿನ ಶೀರೂರು ಸ್ವಾಮಿಗಳಾದ ಮನೋಜ್ಞ ತೀರ್ಥರು, ಸುಬ್ರಹ್ಮಣ್ಯ ಮಠದ ಸ್ವಾಮಿಗಳಾದ ವಿದ್ಯಾಭೂಷಣರು ಪೀಠ ತ್ಯಾಗ ಮಾಡಲು ನನ್ನ ಪಾತ್ರವೇನೂ ಇಲ್ಲ. ಅವರನ್ನು ಪೀಠದಲ್ಲಿ ಉಳಿಸಲು ಎಲ್ಲಾ ಪ್ರಯತ್ನ ಮಾಡಿದ್ದೇನೆ. ಅವರಾಗಿ ಸ್ವೇಚ್ಛೆಯಿಂದ ಹೋಗಿದ್ದಾರೆ. ಅದಕ್ಕಾಗಿ ನನ್ನನ್ನು ಹಂತಕನನ್ನಾಗಿ ದೂಷಿಸುವುದು ಸರ್ವಥಾ ತಪ್ಪು. ರಘುವಲ್ಲಭರಿಗೆ 5 ಲಕ್ಷ ರೂ. ಕೊಟ್ಟಿರುವೆನೆಂದು ಆರೋಪಿಸುವುದೂ ಪೂರ್ಣ ಸುಳ್ಳು. ಅವರಿಗೆ ಇದಕ್ಕಾಗಿ ಒಂದು ಪೈಸೆ ಕೂಡ ಕೊಟ್ಟಿಲ್ಲ. ವಿಶ್ವ ವಿಜಯರನ್ನು ನಾನು ಕಳುಹಿಸಿಯೇ ಇಲ್ಲ. ಅವರಾಗಿಯೇ ಹೋದರು. ಹೋದರೆ ಅನೇಕ ಸಮಸ್ಯೆಯಾಗುವುದೆಂದು ನಾನು ಹೇಳಿದ್ದೆ. ಆದರೂ ಹೋದರು. ಬಂದ ಮೇಲೆ ಸೂಕ್ತ ವ್ಯವಸ್ಥೆಯನ್ನು ಮಾಡುವುದಾಗಿಯೂ ಹೇಳಿದೆ. ಆದರೆ ಅವರು ನನಗೆ ತಿಳಿಸದೇ ಪೀಠ ತ್ಯಾಗ ಮಾಡಿದ್ದಾರೆ. ವ್ಯಾಸರಾಜ ಸ್ವಾಮಿಗಳ ಆಶ್ರಮ, ಸುವಿದ್ಯೇಂದ್ರರ ಆಶ್ರಮ ಸ್ವೀಕಾರ ಮತ್ತು ಪೀಠ ತ್ಯಾಗದಲ್ಲಿ ನನ್ನ ಪಾತ್ರ ಕಿಂಚಿತ್ತು ಇಲ್ಲ. ಆದರೂ ಇದೆಲ್ಲವುಗಳಿಗೂ ನಾನೇ ಕಾರಣವೆಂದು ದೂಷಿಸುವುದು ಸರ್ವಾಥಾ ಸರಿಯಲ್ಲ. ಶೀರೂರು ಸ್ವಾಮಿಗಳಿಂದ ನಾನು ಯಾವುದೇ ರೀತಿಯ ಹಣವನ್ನು ಅಪೇಕ್ಷಿಸಲೂ ಇಲ್ಲ, ಕೇಳಲೂ ಇಲ್ಲ. ಇದೆಲ್ಲದರ ಬಗ್ಗೆಯೂ ಬಹಿರಂಗ ವಿಚಾರಣೆಗೆ ನಾನು ಯಾವಾಗಲೂ ಸಿದ್ಧ.

     

    ಡಿವಿಆರ್ ಎಲ್ಲಿ?: ಇನ್ನು ಶೀರೂರು ಶ್ರೀಗಳು ನೆಲೆಸಿದ್ದ ಮೂಲಮಠದ ಸಿಸಿಟಿವಿಯ ಡಿವಿಆರ್ ನಾಪತ್ತೆಯಾಗಿರುವ ಅಂಶ ಬೆಳಕಿಗೆ ಬಂದಿದ್ದು, ಪ್ರಕರಣ ಮತ್ತಷ್ಟು ನಿಗೂಢವಾಗುತ್ತಿದೆ. ಶ್ರೀಗಳು ಆಸ್ಪತ್ರೆಗೆ ದಾಖಲಾದ ದಿನವೇ ಡಿವಿಆರ್ ನಾಪತ್ತೆಯಾಗಿದೆ. ಅಷ್ಟೇ ಅಲ್ಲ ಶೀರೂರು ಮೂಲಮಠದಿಂದ ಇನ್ನು ಕೆಲ ವಸ್ತುಗಳು ಕಾಣೆಯಾಗಿವೆ. ಉದ್ದೇಶಪೂರ್ವಕವಾಗಿ ಡಿವಿಆರ್ ತೆಗೆದುಕೊಂಡು ಹೋಗಿದ್ದಾರಾ ಅಥವಾ ಸಿಸಿಟಿವಿ ಬರಿ ಪ್ರದರ್ಶನಕ್ಕೆ ಮಾತ್ರ ಅಳವಡಿಸಲಾಗಿತ್ತಾ ಎಂಬುವುದರ ಕುರಿತು ಎಸ್‍ಪಿ ಲಕ್ಷ್ಮಣ್ ನಿಂಬರ್ಗಿ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.

    ಇದೇ ವೇಳೆ ಇನ್ನೆರಡು ದಿನಗಳಲ್ಲಿ ಶ್ರೀಗಳ ಮರಣೋತ್ತರ ಪರೀಕ್ಷೆಯ ತಾತ್ಕಾಲಿಕ ವರದಿ ಬರಲಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ. ಈ ನಡುವೆ ಪಟ್ಟದ ದೇವರ ವಾಪಸ್ ಗಾಗಿ ಶಿರೂರು ಶ್ರೀಗಳು ಸಲ್ಲಿಸಿದ್ದ ಕೇವಿಯಟ್ ಅರ್ಜಿ ಸ್ವಾಮೀಜಿಗಳ ಸಾವಿನಿಂದಾಗಿ ಅನೂರ್ಜಿತವಾಗಿದೆ. ಹೀಗಾಗಿ ಕೃಷ್ಣ ಮಠದ ಆರು ಮಠಾಧೀಶರಿಗೆ ಬಿಗ್ ರಿಲೀಫ್ ಸಿಕ್ಕಿದೆ.