Tag: ಪತ್ರಿಕಾ ಪ್ರಕಟಣೆ

  • ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭ

    ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭ

    ಬೆಂಗಳೂರು: ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ 2023ರ ವೇಳಾಪಟ್ಟಿಯಂತೆ ಈಗಾಗಲೇ ಚುನಾವಣೆ (Election) ಘೋಷಿಸಿದ್ದು, ಮೇ 10ರಂದು ಮತದಾನ ಹಾಗೂ ಮೇ 13ರಂದು ಮತ ಎಣಿಕೆಯನ್ನು ನಿಗದಿಪಡಿಸಲಾಗಿದೆ. ಈ ಕುರಿತು ಗುರುವಾರ ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತಿದೆ. ಏಪ್ರಿಲ್ 13ರಿಂದ ನಾಮಪತ್ರ (Nomination Paper) ಸಲ್ಲಿಕೆ ಆರಂಭವಾಗಲಿದ್ದು, ಏಪ್ರಿಲ್ 20ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ.

    ನಾಮಪತ್ರಗಳನ್ನು ಸಲ್ಲಿಸಲು ಸಮಯವನ್ನು ನಿಗದಿಪಡಿಸಲಾಗಿದ್ದು, ಆಯಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ (Election Officer) ಕಚೇರಿಯಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ. ಏಪ್ರಿಲ್ 14ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಮತ್ತು 16ರಂದು ಭಾನುವಾರ ಸಾರ್ವತ್ರಿಕ ರಜಾ ದಿನವಾಗಿದ್ದು, ಅಂದು ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರ್. ಶಂಕರ್ 

    ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿ ಸೇರಿದಂತೆ ಒಟ್ಟು 5 ಜನರಿಗೆ ಮಾತ್ರ ಚುನಾವಣಾಧಿಕಾರಿಗಳ ಕಚೇರಿಗೆ ಪ್ರವೇಶಿಸಲು ಅವಕಾಶವಿದ್ದು, 100 ಮೀಟರ್ ವ್ಯಾಪ್ತಿಯಲ್ಲಿ 3 ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶವಿರುತ್ತದೆ. ಏಪ್ರಿಲ್ 21ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಏಪ್ರಿಲ್ 24ರಂದು ಮಧ್ಯಾಹ್ನ 3 ಗಂಟೆಯೊಳಗಾಗಿ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಇದನ್ನೂ ಓದಿ: ರಾಜಕಾರಣ ನನಗೆ ಹೊಸದಲ್ಲ, ಹೊಂದಾಣಿಕೆ ಮಾತೇ ಇಲ್ಲ: ಡಿಕೆಶಿ 

    ರಾಜ್ಯದಲ್ಲಿ ಈಗಾಗಲೇ ಚುನಾವಣೆಗೆ ಅವಶ್ಯವಿರುವ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, 146 ವೆಚ್ಚ ನಿರ್ವಹಣಾ ವೀಕ್ಷಕರು, 120 ಸಾಮಾನ್ಯ ವೀಕ್ಷಕರು ಸೇರಿದಂತೆ 37 ಪೊಲೀಸ್ ವೀಕ್ಷಕರನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಯಶಸ್ವಿಯಾಗಿದ್ದೇವೆ, ಯಾವ ಬಂಡಾಯಕ್ಕೆ ಹೆದರಬೇಡಿ – ಬೊಮ್ಮಾಯಿಗೆ ಹೈಕಮಾಂಡ್‌ ಭರವಸೆ

    ಗುರುವಾರ ಅಧಿಕೃತ ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಗುತ್ತಿದ್ದು, ಮತದಾನದ ಸಮಯ ಸೇರಿದಂತೆ ಇತರೆ ಪ್ರಮುಖ ವಿಷಯಗಳನ್ನು ಅಧಿಸೂಚನೆ ಒಳಗೊಂಡಿರುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ (Press Release) ತಿಳಿಸಿರುತ್ತಾರೆ. ಇದನ್ನೂ ಓದಿ: ಮತ್ತೆ ಜೆಡಿಎಸ್‌ ಬಾಗಿಲು ತಟ್ಟಿದ ದತ್ತಾ

  • ರಸಗೊಬ್ಬರ, ಕೀಟನಾಶಕ ದಾಸ್ತಾನು ಬೇಕಷ್ಟಿದೆ –  ಡಿವಿಎಸ್ ಭರವಸೆ

    ರಸಗೊಬ್ಬರ, ಕೀಟನಾಶಕ ದಾಸ್ತಾನು ಬೇಕಷ್ಟಿದೆ –  ಡಿವಿಎಸ್ ಭರವಸೆ

    ನವದೆಹಲಿ: ಕರ್ನಾಟಕವೂ ಸೇರಿದಂತೆ ದೇಶದ ಯಾವುದೇ ಭಾಗದಲ್ಲಿ ರಸಗೊಬ್ಬರ ಅಥವಾ ಕೀಟನಾಶಕಗಳ ಕೊರತೆ ಉಂಟಾಗಿಲ್ಲ. ಕರ್ನಾಟಕದಲ್ಲಿ ಸದ್ಯ 7.3 ಲಕ್ಷ ಟನ್ ರಸಗೊಬ್ಬರವಿದೆ. ಏಪ್ರಿಲ್ ತಿಂಗಳಲ್ಲಿ ರಾಜ್ಯದ ಬೇಡಿಕೆ 2.57 ಲಕ್ಷ ಟನ್. ಹಾಗಾಗಿ ರೈತರು ಈ ಸಲವೂ ಮಾಮೂಲಿಯಾಗಿ ಮುಂಗಾರು ಬಿತ್ತನೆಗೆ ತಯಾರಿ ಮಾಡಿಕೊಳ್ಳಬಹುದು ಎಂದು ಕೇಂದ್ರ ರಾಸಾಯನಿ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ಭರವಸೆ ನೀಡಿದ್ದಾರೆ.

    ಲಾಕ್‍ಡೌನ್‍ನಿಂದಾಗಿ ಆರಂಭದಲ್ಲಿ ಒಂದೆರಡು ದಿನ ಸರಕು ಸಾಗಣೆಗೆ ತೊಂದರೆಯಾಗಿತ್ತು. ಆದರೆ ರಸಗೊಬ್ಬರ, ಕೀಟನಾಶಕ ಸೇರಿಂತೆ ಕೃಷಿಸಂಬಂಧಿತ ಎಲ್ಲ ಪರಿಕರಗಳನ್ನು ಅತ್ಯವಶ್ಯಕ ವಸ್ತುಗಳ ಪಟ್ಟಿಗೆ ಸೇರಿಸಿ ಉತ್ಪಾದನೆ ಹಾಗೂ ಸಾಗಣೆ ಮೇಲಿನ ನಿರ್ಬಂಧವನ್ನು ಕೇಂದ್ರ ಸರ್ಕಾರವು ಸಂಪೂರ್ಣ ತೆಗೆದುಹಾಕಿತು. ರಸಗೊಬ್ಬರ ಕಾರ್ಖಾನೆಗಳು, ಗೋಡೌನ್‍ಗಳು, ಬಂದರಗಳು, ವಿತರಣಾ ಕೇಂದ್ರಗಳ ಮಧ್ಯೆ ರಸಗೊಬ್ಬರ ಸಾಗಣೆಗೆ ಬೇಡಿಕೆಗೆ ಅನುಗುಣವಾಗಿ ಗೂಡ್ಸ್ ರೈಲುಗಳನ್ನು ಒದಗಿಸುವಂತೆ ರೇಲ್ವೆ ಇಲಾಖೆಗೆ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಆದೇಶ ನೀಡಿದೆ. ಹಾಗೆಯೇ ಜಲ ಹಾಗೂ ಭೂಸಾರಿಗೆಗೆ ರಸಗೊಬ್ಬರ, ಕೀಟನಾಶಕ ಮತ್ತಿತರ ಕೃಷಿಸಂಬಂಧಿತ ಸರಕುಗಳನ್ನು ಸಾಗಣೆಗೆ ಮುಕ್ತ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ.

    ದೇಶದ ಬಹುತೇಕ ರಸಗೊಬ್ಬರ ಕಾರ್ಖಾನೆಗಳು ಪೂರ್ಣ ಪ್ರಮಾಣದಲ್ಲಿ ಉತ್ಪಾದನೆಯಲ್ಲಿ ತೊಡಗಿವೆ. ಈ ಸಂದರ್ಭದಲ್ಲಿ ಲಾಕ್‍ಡೌನ್‍ ನಿಯಮಗಳನ್ನು (ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮುಖಗವಸು ಧರಿಸುವುದು ಇವೇ ಮುಂತಾದವು) ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚಿಸಲಾಗಿದೆ. ದೇಶದಲ್ಲಿ ಇನ್ನೂ ಹಲವು ತಿಂಗಳಿಗೆ ಸಾಕಾಗುವಷ್ಟು ರಸಗೊಬ್ಬರ ದಾಸ್ತಾನು ಇದೆ. ಸದ್ಯ 86.87 ಲಕ್ಷ ಮೆಟ್ರಿಕ್ ಟನ್ ಯೂರಿಯಾ ದಸ್ತಾನು ಇದೆ. ಆದಾಗ್ಯೂ ಮುಂಜಾಗ್ರತಾ ಕ್ರಮವಾಗಿ 7.57 ಲಕ್ಷ ಟನ್ ಯೂರಿಯಾ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಲಾಗಿದೆ.

    ದೇಶಾದ್ಯಂತ ರಸಗೊಬ್ಬರ ಮಳಿಗೆಗಳೂ ತೆರೆದಿದ್ದು ಎಂದಿನಂತೆ ವಹಿವಾಟು ನಡೆಸಿವೆ. ಕರ್ನಾಟಕದಲ್ಲಿ ಸಾಗಣೆ, ಪೂರೈಕೆಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ ಕೃಷಿ ಸಹಾಯವಾಣಿ 080-22212818 / 22210237 ಗೆ ಕರೆಮಾಡಿ ಬಗೆಹರಿಸಿಕೊಳ್ಳಬಹುದು. ನಾನು ಮತ್ತೆ ಸ್ಪಷ್ಟಪಡಿಸುತ್ತಿದ್ದೇನೆ. ರಸಗೊಬ್ಬರ, ಕೀಟನಾಶಕಗಳ ಕೊರತೆ ಇಲ್ಲ. ದಾಸ್ತಾನು ಸಾಕಷ್ಟಿದೆ. ಬೇಕಾದಷ್ಟು ಗೊಬ್ಬರ ಪೂರೈಸುವ ಜವಾಬ್ದಾರಿ ನಮ್ಮದು. ರೈತಬಾಂಧವರಿಗೆ ನನ್ನ ಮನವಿ. ನೀವು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬೇಡಿ. ನಿರಾತಂಕವಾಗಿ ಮುಂಗಾರು ಬಿತ್ತನೆಗೆ ತಯಾರಿಮಾಡಿಕೊಳ್ಳಿ. ನಿಮಗೆ ಶುಭವಾಗಲಿ ಎಂದು ಡಿವಿಎಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಮನೆ-ಮನೆಗೆ ಜನೌಷಧಿ: ಈ ಮಧ್ಯೆ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ (PMBJP) ಜನೌಷಧಿ ಕೇಂದ್ರಗಳ ಮೂಲಕ ಮನೆಗೇ ಔಷಧ ಸರಬರಾಜು ಮಾಡುವ ಸೌಲಭ್ಯವನ್ನು ಆರಂಭಿಸಲಾಗಿದೆ. ಅಗತ್ಯವಿರುವವರು ವಿಶೇಷವಾಗಿ ಹಿರಿಯ ನಾಗರಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಅದಕ್ಕಾಗಿ ನಿಮ್ಮ ಸ್ಮಾರ್ಟ್ ಫೋನಿನಲ್ಲಿ ನಮ್ಮ ಸರ್ಕಾರವೇ ಅಭಿವೃದ್ಧಿಪಡಿಸಿರುವ ‘ಜನೌಷಧಿ ಸುಗಮ್, ಎಂಬ ಆ್ಯಪ್ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

    ಈ ಆ್ಯಪಿನಲ್ಲಿ ಹತ್ತಿರದ ಜನೌಷಧಿ ಕೇಂದ್ರ (ವಿಳಾಸ ಸಮೇತ), ಆ ಕೇಂದ್ರದ ಲೊಕೇಶನ್ ಮ್ಯಾಪ್, ಕೇಂದ್ರದಲ್ಲಿ ನಿಮಗೆ ಬೇಕಾದ ಔಷಧಿ ಲಭ್ಯತೆ ಇದೆಯೋ ಅಥವಾ ಇಲ್ಲವೋ, ಅಂಗಡಿಯ ದೂರವಾಣಿ ನಂಬರ್ – ಹೀಗೆ ಎಲ್ಲ ವಿವರಗಳು ಲಭ್ಯ. ಲಾಕ್‍ಡೌನ್ ಈ ಸಂದರ್ಭದಲ್ಲಿ ಔಷಧ ಅಂಗಡಿಗಳ ಬಳಿ ಗುಂಪು ಸೇರುವ ಅಗತ್ಯವಿಲ್ಲ. ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಡಂತೆಯೂ ಆಯಿತು ಎಂದು ತಿಳಿಸಲಾಗಿದೆ.

    ಜನೌಷಧಿ ಸುಗಮ್ ಆ್ಯಪ್ ಡೌನ್‍ಲೋಡ್ ಮಾಡಲು ಕ್ಲಿಕ್ ಮಾಡಿ: ಜನೌಷಧಿ ಸುಗಮ್

  • ನೀವು ಮನೆಯಲ್ಲೇ ಇದ್ದರೆ ಬೇಗ ಲಾಕ್‍ಡೌನ್ ಮುಗಿಯುತ್ತೆ: ಸಿಎಂ ಮನವಿ

    ನೀವು ಮನೆಯಲ್ಲೇ ಇದ್ದರೆ ಬೇಗ ಲಾಕ್‍ಡೌನ್ ಮುಗಿಯುತ್ತೆ: ಸಿಎಂ ಮನವಿ

    ಬೆಂಗಳೂರು: ಲಾಕ್‍ಡೌನ್ ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಎಂ ಯಡಿಯೂರಪ್ಪ ಜನತೆಯಲ್ಲಿ ಮನವಿ ಮಾಡಿದ್ದರೆ.

    ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಅವರು, ಲಾಕ್‍ಡೌನ್ ಅವದಿ ಮುಂದುವರೆಯುವುದಿಲ್ಲ. ಅದೂ ನಾವು ಅದನ್ನು ಹೇಗೆ ಕಟ್ಟುನಿಟ್ಟಿನ ಪಾಲನೆ ಮಾಡುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ನಾಡಿನ ಜನತೆ ಲಾಕ್‍ಡೌನ್ ಅನ್ನು ನಮ್ಮೆಲ್ಲರ ಒಳಿತಿಗಾಗಿ ಕಟ್ಟುನಿಟ್ಟಾಗಿ ಪಾಲನೆ ಮಾಡಿ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಹೆಚ್ಚು ಶಿಸ್ತು ಪಾಲನೆ ಮಾಡಬೇಕಾಗಿರುತ್ತದೆ. ಕೊರೊನಾ ವೈರಸ್ ನಮ್ಮ ತಾಳ್ಮೆಯನ್ನು ಪರೀಕ್ಷಿಸಲೆಂದೇ ಬಂದ ಒಂದು ವಿಪತ್ತು ಎಂದು ಸಿಎಂ ತಿಳಿಸಿದ್ದಾರೆ.

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ 21 ದಿನಗಳ ಕಾಲ ಲಾಕ್‍ಡೌನ್ ವಿಧಿಸಿದ್ದಾರೆ. ಅನಿವಾರ್ಯ ಪರಿಸ್ಥಿತಿಯಿಂದಾಗಿ ಇಡೀ ದೇಶದ ಜನತೆಯಲ್ಲಿ ಕ್ಷಮೆಯನ್ನು ಪ್ರಧಾನಿಗಳು ಕೇಳಿದ್ದಾರೆ. ಒಬ್ಬ ಪ್ರಧಾನಮಂತ್ರಿ ದೇಶದ ಜನತೆಯ ಕ್ಷಮೆ ಕೇಳುವ ಅನಿವಾರ್ಯತೆ ಇದೆಯೆಂದರೆ ಪರಿಸ್ಥಿತಿಯ ಗಂಭೀರತೆಯನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳಬೇಕಾಗಿದೆ. ದೇಶಕ್ಕೆ ಯಾಕೆ ಜಗತ್ತಿನ ಇತಿಹಾಸದಲ್ಲಿಯೇ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ಈಗ ಇಂತಹ ಪರಿಸ್ಥಿತಿ ಬಂದಿದೆ ಎಂದರೆ ಅದನ್ನು ನಾವು ಎದುರಿಸಲೇಬೇಕಾಗಿದೆ ಎಂದು ಹೇಳಿದ್ದಾರೆ.

    ನಾವು ಪ್ರಧಾನಿಗಳ ಕೆಲಸದ ಬಗ್ಗೆ ಮೆಚ್ಚುಗೆ ಮತ್ತು ಹೆಮ್ಮೆ ಪಡುವುದು ಮಾತ್ರವಲ್ಲದೇ ಅವರ ಆಜ್ಞೆಯನ್ನು ಪಾಲಿಸಬೇಕಿದೆ. ಜಾಗೃತ ನಾಗರಿಕರಾದ ನಾವೆಲ್ಲ ಪ್ರಧಾನಮಂತ್ರಿಯವರ ಈ ದಿಟ್ಟ ನಿಲುವನ್ನು ಮತ್ತು ನಿರ್ಧಾರವನ್ನು ಬೆಂಬಲಿಸಬೇಕಾಗಿದೆ. ರಾಜ್ಯದಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಆದರೆ ಕೆಲವು ನಗರ ಪ್ರದೇಶಗಳಲ್ಲಿನ ಜನತೆ ಕರ್ಫ್ಯೂ ಧಿಕ್ಕರಿಸಿ ರಸ್ತೆಗಳಲ್ಲಿ ಓಡಾಡುವುದು ಮಾಡುತ್ತಿದ್ದಾರೆ. ಈ ಸಮಯದಲ್ಲಿ ನನ್ನ ಕಳಕಳಿಯ ಮನವಿ ಏನೆಂದರೆ, ಎಲ್ಲರೂ ಮೋದಿಯವರ ಕರೆಗೆ ಬೆಲೆ ಕೊಡಿ ಮತ್ತು ಲಾಕ್‍ಡೌನ್ ಪಾಲಿಸಿ ಎಂದು ಸಿಎಂ ಕೇಳಿಕೊಂಡಿದ್ದಾರೆ.

    ಪೊಲೀಸರು ಕೂಡ ನಿಮ್ಮ ಹಿತವನ್ನೇ ಬಯಸುವವರು ಅವರೇನು ನಿಮ್ಮ ವೈರಿಗಳಲ್ಲ. ಪೊಲೀಸರಿಗೆ ಅನಿವಾರ್ಯತೆಯನ್ನು ಸೃಷ್ಟಿಸಬೇಡಿ. ಇನ್ನೂ 16 ದಿನಗಳು ನಿಮ್ಮ ಮನೆಯಲ್ಲಿಯೇ ಇರಿ. ಇದನ್ನು ಮನೆಯವರೊಂದಿಗೆ ಕಾಲ ಕಳೆಯಲು ನಿಮಗೆ ಒದಗಿ ಬಂದ ಒಂದು ಸದಾವಕಾಶ ಎಂದು ಭಾವಿಸಿ. ನೀವು ಎಷ್ಟು ಮನೆಯ ಒಳಗಡೆ ಇರುತ್ತೀರೋ ಅದರಿಂದ ನಿಮಗೆ ಮತ್ತು ದೇಶಕ್ಕೆ ಒಳ್ಳೆಯದಾಗುತ್ತದೆ. ಮನೆಯಲ್ಲೇ ಕುಳಿತು ಪುಸ್ತಕಗಳನ್ನು ಓದಿರಿ. ಬಡವರು ಕೂಡ ನೀವಿದ್ದ ಸ್ಥಳದಲ್ಲಿಯೇ ಸಕಾರಾತ್ಮಕ ಸದಾಕಾಲ ಚಟುವಟಿಕೆಗಳಲ್ಲಿ ಕಾಲ ಕಳೆಯಿರಿ ಎಂದು ಸಿಎಂ ಜನರಿಗೆ ಸಲಹೆ ನೀಡಿದ್ದಾರೆ.

    ಈ ಸಂದರ್ಭದಲ್ಲಿ ಕೊರೊನಾ ವೈರಸ್ ಪೀಡಿತ ನೂರಾರು ಜನರ ಪ್ರಾಣ ಉಳಿಸಲು ಸತತವಾಗಿ ಕೆಲಸದಲ್ಲಿ ತೊಡಗಿರುವ ವೈದ್ಯರು, ದಾದಿಯರು, ಆರೋಗ್ಯ ಸಿಬ್ಬಂದಿ ಮತ್ತು ನಾಗರಿಕ ಸೇವೆಯಲ್ಲಿ ತೊಡಗಿರುವ ಸಾವಿರಾರು ಕಾರ್ಯಕರ್ತರಿಗೆ ನಾವುಗಳು ನೈತಿಕ ಬೆಂಬಲ ವ್ಯಕ್ತಪಡಿಸೋಣ. ಅವರಿಗೆ ಮನೋಸ್ಥೈರ್ಯ ಕುಗ್ಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಲಾಕ್‍ಡೌನ್ ಬೇಗ ಮುಗಿಯಲು ಕಟ್ಟುನಿಟ್ಟಿನ ಪಾಲನೆ ಅಗತ್ಯ. ನಿಮ್ಮ ಆಹಾರ, ಊಟಕ್ಕೆ ತೊಂದೆರೆಯಾಗದಂತೆ ಸರ್ಕಾರ ಎಚ್ಚರವಹಿಸಿದೆ ಎಂದು ತಿಳಿಸಿದರು.

    ಯಾವುದೇ ಸುಳ್ಳು ಸುದ್ದಿಗಳಿಗೆ ಮತ್ತು ವದಂತಿಗಳಿಗೆ ಕಿವಿಗೊಡಬೇಡಿ. ನೀವು ಎಷ್ಟು ಕಟ್ಟುನಿಟ್ಟಿನಿಂದ ಮನೆಯಲ್ಲಿ ಇರುವುದನ್ನು ಪಾಲಿಸುತ್ತೀರೋ ಅಷ್ಟು ಬೇಗ ಅಂದರೆ ಏಪ್ರಿಲ್-14 ಕ್ಕೆ ಲಾಕ್‍ಡೌನ್ ಮುಗಿಯುವುದು. ಲಾಕ್‍ಡೌನ್ ಪರಿಸ್ಥಿತಿ ನಿಮ್ಮ ಕಫ್ರ್ಯೂ ಪಾಲನೆ ಮೇಲೆ ಅವಲಂಬಿತವಾಗಿದೆ. ಇನ್ನೊಮ್ಮೆ ನಿಮ್ಮೆಲ್ಲರಲ್ಲಿ ಮನವಿ ಏನೆಂದರೆ ಕಟ್ಟುನಿಟ್ಟಾಗಿ ಕರ್ಫ್ಯೂ ಪಾಲಿಸಿ ಎಂದು ಸಿಎಂ ಮನವಿ ಮಾಡಿಕೊಂಡಿದ್ದಾರೆ.

  • ಬಂದ್ ಯಾವುದೇ ಪರಿಣಾಮ ಬೀರದು – ಸಿಎಂ ಬಿಎಸ್‍ವೈ

    ಬಂದ್ ಯಾವುದೇ ಪರಿಣಾಮ ಬೀರದು – ಸಿಎಂ ಬಿಎಸ್‍ವೈ

    ಬೆಂಗಳೂರು: ವಿವಿಧ ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿರುವ ಬಂದ್ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

    ರಾಜ್ಯದ ಎಲ್ಲಾ ನಗರಗಳು, ಅದರಲ್ಲೂ ಬೆಂಗಳೂರಿನಲ್ಲಿ ಜನಜೀವನ ಎಂದಿನಂತೆ ಸಾಮಾನ್ಯವಾಗಿರುತ್ತದೆ ಮತ್ತು ಜನರ ದಿನನಿತ್ಯದ ಕಾರ್ಯಗಳಿಗೆ ಯಾವುದೇ ತಡೆ ಇರುವುದಿಲ್ಲ. ಶಾಲಾ-ಕಾಲೇಜು ಎಂದಿನಂತೆ ಕಾರ್ಯನಿರ್ವಹಿಸುತ್ತವೆ ಮತ್ತು ಸಾರಿಗೆ ಕೂಡ ಸಾಮಾನ್ಯವಾಗಿರುತ್ತದೆ.

    ಯಾವುದೇ ಸಮಾಜ ವಿರೋಧಿ ಶಕ್ತಿಗಳು ಬಂದ್ ನಲ್ಲಿ ಭಾಗವಹಿಸಲು ಒತ್ತಾಯ ಮಾಡಿದರೆ ಅಥವಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಪ್ರಯತ್ನಿಸಿದರೆ ಅಂತಹವರ ವಿರುದ್ಧ ಪೊಲೀಸ್ ವ್ಯವಸ್ಥೆ ಕಠಿಣ ಕ್ರಮ ಕೈಗೊಳ್ಳುತ್ತದೆ. ಬಂದ್‍ಗಳು ಜನವಿರೋಧಿ ಎಂದು ಹಿಂದೆ ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಈ ವಿಷಯ ಬಂದ್‍ಗೆ ಕರೆ ಕೊಟ್ಟವರ ಗಮನದಲ್ಲಿ ಇರಬೇಕು.

    ಜನರು ಯಾವುದೇ ಪ್ರಚೋದನೆಗೆ ಒಳಗಾಗದೆ ಶಾಂತಿ ಕಾಪಾಡಿಕೊಂಡು ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು ಎನ್ನುವುದು ನನ್ನ ಕಳಕಳಿಯ ಮನವಿ ಎಂದು ಮುಖ್ಯಮಂತ್ರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಸಂಸದ ಪ್ರಜ್ವಲ್ ರೇವಣ್ಣಗೆ ಸಮನ್ಸ್

    ಸಂಸದ ಪ್ರಜ್ವಲ್ ರೇವಣ್ಣಗೆ ಸಮನ್ಸ್

    ಹಾಸನ: ಲೋಕಸಭೆ ಚುನಾವಣೆಯಲ್ಲಿ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡಲಾಗಿದೆ ಎಂಬ ಆರೋಪ ಸಂಬಂಧ ಪತ್ರಿಕಾ ಪ್ರಕಟಣೆ ನೀಡಲಾಗಿದೆ.

    ಸೆಪ್ಟಂಬರ್ 30ರಂದು ವಿಚಾರಣೆಗೆ ಹಾಜರಾಗುವಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸುವ ಮೂಲಕ ಹೈಕೋರ್ಟ್ ಸಮನ್ಸ್ ಜಾರಿಗೊಳಿಸಲಾಗಿದೆ. ದೂರುದಾರ ಮಾಜಿ ಸಚಿವ ಎ.ಮಂಜು ಹಾಗೂ ವಕೀಲ ಜಿ. ದೇವರಾಜೇಗೌಡ ಅವರು ಪ್ರತ್ಯೇಕವಾಗಿ ದಾಖಲಿಸಿರುವ ಪ್ರಕರಣಗಳ ವಿಚಾರಣೆಗೆ ಸೆ.30ರಂದು ಬೆಳಗ್ಗೆ 10.30ಕ್ಕೆ ಖುದ್ದಾಗಿ ಇಲ್ಲವೇ ವಕೀಲರ ಮೂಲಕ ಹಾಜರಾಗುವಂತೆ ಹೈ ಕೋರ್ಟ್ ಸಮನ್ಸ್ ನಲ್ಲಿ ಸೂಚಿಸಲಾಗಿದೆ.

    ಈ ಹಿಂದೆ ತಮಗೆ ಪ್ರಕರಣ ಸಂಬಂಧ ನ್ಯಾಯಾಲಯದ ಸಮನ್ಸ್ ತಲುಪಿಲ್ಲ ಎಂದು ಸಂಸದ ಪ್ರಜ್ವಲ್ ಹೇಳಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್ ಸಂಸದರಿಗೆ ಪತ್ರಿಕೆಯ ಜಾಹೀರಾತು ಮೂಲಕ ಸಮನ್ಸ್ ಜಾರಿ ಮಾಡಲು ಅನುಮತಿ ನೀಡಿತ್ತು. ಅದರಂತೆ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡಲಾಗಿದೆ. ಇದರಿಂದ 30ರಂದು ಪ್ರಜ್ವಲ್ ಇಲ್ಲವೇ ಅವರ ಪರವಾಗಿ ವಕೀಲರು ನ್ಯಾಯಾಧೀಶರ ಮುಂದೆ ಹಾಜರಾಗಬೇಕು ಎಂದು ದೂರದಾರ ಹೇಳಿದ್ದಾರೆ.

  • ಟೆಲಿಫೋನ್ ಕದ್ದಾಲಿಕೆ ಹೇಳಿಕೆ- ಡಿಕೆಶಿ ಸ್ಪಷ್ಟನೆ

    ಟೆಲಿಫೋನ್ ಕದ್ದಾಲಿಕೆ ಹೇಳಿಕೆ- ಡಿಕೆಶಿ ಸ್ಪಷ್ಟನೆ

    ಬೆಂಗಳೂರು: ಟೆಲಿಫೋನ್ ಕದ್ದಾಲಿಕೆ ಪ್ರಕರಣ ಸಂಬಂಧ ಮಾಜಿ ಸಚಿವ ಎಂ.ಬಿ. ಪಾಟೀಲ್ ವಿರುದ್ಧ ತಾವು ಯಾವುದೇ ಹೇಳಿಕೆ ನೀಡಿಲ್ಲ. ಆದರೆ ತಾವು ಮಾಜಿ ಗೃಹ ಸಚಿವ ಆರ್. ಅಶೋಕ್ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಮಾಡಿದ್ದ ಆರೋಪವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಟೆಲಿಪೋನ್ ಕದ್ದಾಲಿಕೆ ವಿಚಾರದಲ್ಲಿ ಹಿಂದಿನ ಗೃಹ ಸಚಿವರು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದ್ದು ಬಿಜೆಪಿ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಆರ್. ಅಶೋಕ್ ಅವರನ್ನು ಕುರಿತೇ ಹೊರತು ಎಂ.ಬಿ.ಪಾಟೀಲ್ ಅವರನ್ನು ಉದ್ದೇಶಿಸಿದ್ದಲ್ಲ. ಆದರೆ ಮಾಧ್ಯಮಗಳಲ್ಲಿ ಇದು ತಪ್ಪಾಗಿ ಬಿಂಬಿತವಾಗಿದೆ ಎಂದು ಶಿವಕುಮಾರ್ ಅವರು ಪತ್ರಿಕಾ ಹೇಳಿಕೆಯಲ್ಲಿ ಇಂದು ತಿಳಿಸಿದ್ದಾರೆ.

    ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಟೆಲಿಫೋನ್ ಕದ್ದಾಲಿಕೆ ನಡೆದಿಲ್ಲ. ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಾಗಲಿ ಅಥವಾ ಗೃಹ ಸಚಿವ ಎಂ.ಬಿ. ಪಾಟೀಲ್ ಅವರಾಗಲಿ ಈ ಕೆಲಸ ಮಾಡಿಲ್ಲ ಎಂದು ಸಂಗಮ ನೆರೆಪೀಡಿತ ಪ್ರದೇಶಕ್ಕೆ ಎರಡು ದಿನಗಳ ಹಿಂದೆ ಭೇಟಿ ನೀಡಿದ್ದ ಸಂದರ್ಭದಲ್ಲೂ ಮಾಧ್ಯಮದವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ಹೀಗಾಗಿ ಈ ವಿಚಾರದಲ್ಲಿ ಎಂ.ಬಿ. ಪಾಟೀಲ್ ಅವರ ಹೆಸರನ್ನು ಎಳೆದು ತರುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ. ಇದನ್ನು ಓದಿ: ಡಿಕೆಶಿ ಹೇಳಿದ್ದು ಆರ್. ಆಶೋಕ್‍ಗೆ ನನಗಲ್ಲ: ಎಂಬಿಪಿ

    ಎಂ.ಬಿ. ಪಾಟೀಲ್ ಹಾಗೂ ತಮ್ಮ ನಡುವೆ ತಂದಿಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದಕ್ಕೆ ಜಾತಿ ಲೇಪವನ್ನೂ ಹಚ್ಚಲಾಗಿದೆ. ಇಂಥ ಪ್ರಯತ್ನಗಳು ಹಿಂದೆಯೂ ನಡೆದಿವೆ. ಈಗಲೂ ನಡೆಯುತ್ತಿವೆ. ಆದರೆ ಇಂಥ ಪ್ರಯತ್ನಗಳಿಂದ ತಮ್ಮಿಬ್ಬರ ಸಂಬಂಧ ಹಾಳು ಮಾಡಲು ಸಾಧ್ಯವಿಲ್ಲ. ಇಂಥ ಪ್ರಯತ್ನಗಳನ್ನು ದಾಟಿ ಮುನ್ನಡೆಯುವ ಮನೋಬಲ ಇಬ್ಬರಿಗೂ ಇದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.

    ಜನರ ಮತ್ತು ಸಂವಿಧಾನದ ಆಶೋತ್ತರಗಳಿಗೆ ವ್ಯತಿರಿಕ್ತವಾಗಿ ಅಧಿಕಾರ ಹಿಡಿದಿರುವ ರಾಜ್ಯದ ಬಿಜೆಪಿ ಮುಖಂಡರಿಗೆ ಪ್ರವಾಹದಿಂದ ತತ್ತರಿಸಿ ಹೋಗಿರುವ ರಾಜ್ಯದ ಪರಿಸ್ಥಿತಿ ನಿಭಾಯಿಸಲು ಆಗುತ್ತಿಲ್ಲ. ಜತೆಗೆ ಸಂಪುಟ ರಚನೆ ಮತ್ತಿತರ ಆಂತರಿಕ ವಿಚಾರಗಳಿಂದಲೂ ಜರ್ಝರಿತರಾಗಿ ಹೋಗಿದ್ದಾರೆ. ಹೀಗಾಗಿ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಹಾಗೂ ರಾಜಕೀಯ ಕಾರಣಗಳಿಗಾಗಿ ಟೆಲಿಫೋನ್ ಕದ್ದಾಲಿಕೆ ಎಂಬ ಸುಳ್ಳು ಆರೋಪವನ್ನು ತೇಲಿ ಬಿಟ್ಟಿದ್ದಾರೆ. ಆದರೆ ಮೂರು ವಾರಗಳಿಂದ ರಾಜ್ಯದಲ್ಲಿ ಏನಾಗುತ್ತಿದೆ ಎಂಬುದು ಜನರಿಗೆ ಸ್ಪಷ್ಟವಾಗಿ ಗೊತ್ತಿದೆ. ಅವರ ಗಮನ ಸೆಳೆಯಲು ಬಿಜೆಪಿ ಮುಖಂಡರು ಯಾವುದೇ ನಾಟಕ ಆಡಿದರೂ ಪ್ರಯೋಜನವಾಗುವುದಿಲ್ಲ ಎಂದು ಶಿವಕುಮಾರ್ ಹೇಳಿದ್ದಾರೆ.

    ಬಿಜೆಪಿ ಮುಖಂಡರು ರಾಜ್ಯದ ಸಂಕಷ್ಟಕ್ಕೆ ಸ್ಪಂದಿಸುವ ಬದ್ಧತೆ ಮತ್ತು ಇಚ್ಛಾಶಕ್ತಿ ಪ್ರದರ್ಶಿಸಲಿ. ಅದನ್ನು ಬಿಟ್ಟು ಈ ರೀತಿಯ ಸುಳ್ಳು ಆಪಾದನೆಗಳನ್ನು ಮಾಡಿಕೊಂಡು ಜನರ ದಿಕ್ಕು ತಪ್ಪಿಸುವ ಪ್ರಯತ್ನವನ್ನು ಇನ್ನಾದರೂ ಬಿಡಲಿ ಎಂದು ಅವರು ಕಿವಿಮಾತು ಹೇಳಿದ್ದಾರೆ.

  • ಸ್ಯಾಂಡಲ್‍ವುಡ್ ಐಟಿ ದಾಳಿ ಪ್ರಕರಣ – ಸಿಕ್ಕಿದ್ದು ಕೋಟಿ ಕೋಟಿ ಆಸ್ತಿ !

    ಸ್ಯಾಂಡಲ್‍ವುಡ್ ಐಟಿ ದಾಳಿ ಪ್ರಕರಣ – ಸಿಕ್ಕಿದ್ದು ಕೋಟಿ ಕೋಟಿ ಆಸ್ತಿ !

    ಬೆಂಗಳೂರು: ಚಂದನವನದ ನಟ, ನಿರ್ಮಾಪಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿದಂತೆ ಐಟಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಬರೋಬ್ಬರಿ 109 ಕೋಟಿ ರೂ. ಮೌಲ್ಯದ ಅಘೋಷಿತ ಆದಾಯದ ದಾಖಲೆ ಹಾಗೂ 25.3 ಕೆಜಿ ಚಿನ್ನಾಭರಣ, 2.85 ಕೋಟಿ ರೂ. ನಗದು ವಶಕ್ಕೆ ಪಡೆದಿರುವುದಾಗಿ ಮಾಹಿತಿ ನೀಡಿದ್ದಾರೆ.

    ಸಿನಿಮಾ ಕ್ಷೇತ್ರ ವಿವಿಧ ನಟ, ನಿರ್ಮಾಪಕರ ಮೇಲೆ ನಡೆದ ಈ ದಾಳಿಯಲ್ಲಿ ಕರ್ನಾಟಕ ಮತ್ತು ಗೋವಾ ಆದಾಯ ತೆರಿಗೆ ಇಲಾಖೆಗೆ ಸಂಬಂಧಿಸಿದ 180 ಅಧಿಕಾರಿಗಳು ಭಾಗವಹಿಸಿದ್ದು, 21 ಕಡೆ ದಾಳಿ ಮಾಡಿ ಇದರಲ್ಲಿ 5 ಸ್ಥಳಗಳಲ್ಲಿ ಹುಡುಕಾಟವನ್ನು ನಡೆಸಲಾಗಿದೆ.

    ದಾಳಿ ನಡೆಸಲು ಇಲಾಖೆ ಕಳೆದ 3 ತಿಂಗಳಿನಿಂದ ಕೂಡ ಮಾಹಿತಿ ಸಂಗ್ರಹಿಸಿದ್ದು, ಈ ವೇಳೆ ಗುರುತಿಸಲಾದ ವ್ಯಕ್ತಿಗಳು ಹಾಗೂ ಸ್ಥಳಗಳ ಮೇಲೆ ದಾಳಿ ನಡೆದಿದೆ. ಇದರಲ್ಲಿ ಸಿನಿಮಾ ನಿಮಾರ್ಪಕರು, ನಟರು, ಸಿನಿಮಾ ಸಂಸ್ಥೆಗಳು ಕೂಡ ಸೇರಿದೆ. ದಾಳಿಯ ವೇಳೆ ಆಘೋಷಿತ ಆಸ್ತಿ, ಹಣ ಸೇರಿದಂತೆ ವಿವಿಧ ಆದಾಯಕ್ಕೆ ಸಂಬಂಧಿಸಿದ ದಾಖಲೆಗಳು ಕೂಡ ಲಭ್ಯವಾಗಿದೆ. ಪ್ರಮುಖವಾಗಿ ಸಿನಿಮಾ ರಂಗದಲ್ಲಿ ಚಿತ್ರಮಂದಿರದಿಂದ ಬರುವ ಆದಾಯವನ್ನು ಬೇರೆಡೆ ವರ್ಗಾವಣೆ ಮಾಡಿ ಹೂಡಿಕೆ ಮಾಡಿರುವ ಬಗ್ಗೆ ತಿಳಿದುಬಂದಿದ್ದು, ಬಹು ದೊಡ್ಡ ಆರ್ಥಿಕ ಅವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

    ಸಿನಿಮಾ ಹಕ್ಕುಗಳ ಮಾರಾಟ, ಡಿಜಿಟಲ್ ರೈಟ್ಸ್, ಚಿತ್ರ ಮಂದಿರದ ಆದಾಯ, ಟಿವಿ ಹಕ್ಕುಗಳು, ಆಡಿಯೋ ಮತ್ತು ಸ್ಯಾಟಲೈಟ್ ಹಕ್ಕುಗಳು ಸೇರಿದಂತೆ ಇತರೇ ಮೂಲಗಳಿಂದ ಗಳಿಸಿದ ಆದಾಯದ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.

    ಸಿನಿಮಾದಿಂದ ಪಡೆದ ಆದಾಯದೊಂದಿಗೆ ಬೇರೆ ಬೇರೆ ವ್ಯವಹಾರಗಳಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಸ್ಪಷ್ಟವಾಗಿದ್ದು, ಈ ಮೂಲಗಳಿಂದ ಬಂದ ಆದಾಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದ್ದರಿಂದ ಒಟ್ಟು ಮೊತ್ತದಲ್ಲಿ ಹೆಚ್ಚಾಗುವ ಸಾಧ್ಯತೆಯ ಬಗ್ಗೆಯೂ ಐಟಿ ಇಲಾಖೆ ತಿಳಿಸಿದೆ. ಐಟಿ ಅಧಿಕಾರಿಗಳು ಸಂಗ್ರಹಿಸಿರುವ ಮಾಹಿತಿಯನ್ನು ಇಡಿ ಇಲಾಖೆಗೆ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಒಂದೊಮ್ಮೆ ಇಡಿ ಅಧಿಕಾರಿಗಳು ಪ್ರಕರಣಕ್ಕೆ ಪ್ರವೇಶ ಪಡೆದರೆ ಎಲ್ಲರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ತೆರಿಗೆ ವಂಚನೆ ಮಾಡಲು ಹಣ ವರ್ಗಾವಣೆ ಮಾಡಿರುವುದು ಸಾಬೀತಾದರೆ ಇಡಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ಸದ್ಯ ಲಭ್ಯವಾಗಿರುವ ಮಾಹಿತಿ ಅನ್ವಯ ಐಟಿ ಕಾಯ್ದೆ 278 (ಡಿ) ಅಡಿ ಪ್ರಕರಣ ದಾಖಲಿಸಲು ಐಟಿ ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ.

    ಕಳೆದ 3 ದಿನಗಳಿಂದ ನಡೆದ ದಾಳಿಯ ವೇಳೆ ಪತ್ತೆಯಾದ ಆಸ್ತಿ, ಹಣ, ಆದಾಯದ ಒಟ್ಟು ಮಾಹಿತಿಯನ್ನು ಮಾತ್ರ ಐಟಿ ಅಧಿಕಾರಿಗಳು ನೀಡಿದ್ದಾರೆ. ಆದರೆ ವೈಯಕ್ತಿಕವಾಗಿ ಯಾವುದೇ ನಟ, ನಿರ್ಮಾಪಕರ ಮನೆಯಲ್ಲಿ ಎಷ್ಟು ಹಣ ಲಭಿಸಿದೆ ಎಂಬ ಬಗ್ಗೆ ಮಾಹಿತಿ ನೀಡಿಬೇಕಿದೆ. ಸದ್ಯ ಐಟಿ ಇಲಾಖೆ ವಶಕ್ಕೆ ಪಡೆದಿರುವ ಆದಾಯ ಹಾಗೂ ಹಣದ ಬಗ್ಗೆ ನಾಳೆಯಿಂದ ವಿಚಾರಣೆ ನಡೆಸುವ ಸಾಧ್ಯತೆ ಇದೆ. ನಟ ಹಾಗೂ ನಿರ್ಮಾಪಕರು ಐಟಿ ಇಲಾಖೆಗೆ ಆಗಮಿಸಿ ಸೂಕ್ತ ದಾಖಲೆ ಹಾಗೂ ಸ್ಪಷ್ಟನೆ ನೀಡಲು ಅವಕಾಶ ಇದೆ. ಜನವರಿ 3 ರಂದು ನಡೆದ ಐಟಿ ದಾಳಿಯಲ್ಲಿ ನಾಲ್ವರು ನಿರ್ಮಾಪಕರು ಹಾಗೂ ನಾಲ್ವರು ಸ್ಟಾರ್ ನಟರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv