Tag: ಪತ್ರಕರ್ತರು

  • ಶ್ರೀಕಂಠೇಗೌಡ್ರು ದರ್ಪ ಅಹಂಕಾರದಿಂದ ವರ್ತಿಸಿದ್ದಾರೆ: ಪ್ರತಾಪ್ ಸಿಂಹ ಗರಂ

    ಶ್ರೀಕಂಠೇಗೌಡ್ರು ದರ್ಪ ಅಹಂಕಾರದಿಂದ ವರ್ತಿಸಿದ್ದಾರೆ: ಪ್ರತಾಪ್ ಸಿಂಹ ಗರಂ

    – ಸುಗ್ರೀವಾಜ್ಞೆ ಅಡಿಯಲ್ಲಿ ಶಿಕ್ಷೆ ಆಗಬೇಕು

    ಮೈಸೂರು: ಲಾಕ್‍ಡೌನ್ ವೇಳೆ ಮಾಧ್ಯಮದವರು ವೈದ್ಯರು ಮತ್ತು ಪೊಲೀಸರ ರೀತಿ ಪ್ರತಿದಿನ ಕೆಲಸ ಮಾಡುತ್ತಿದ್ದಾರೆ. ಅಂತವರ ಮೇಲೆ ಗೌರವ ಭಾವನೆ ಇಟ್ಟುಕೊಳ್ಳುವುದು ಬಿಟ್ಟು, ದೌರ್ಜನ್ಯ ಎಸಗುವುದು ಸರಿಯಲ್ಲ. ಅವರ ಮೇಲೆಯೇ ಶ್ರೀಕಂಠೇಗೌಡರು ದರ್ಪ ಅಹಂಕಾರದಿಂದ ವರ್ತಿಸಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ಮಂಡ್ಯದಲ್ಲಿ ಎಂಎಲ್‍ಸಿ ಶ್ರೀಕಂಠೇಗೌಡ ಮತ್ತು ಅವರ ಪುತ್ರ ಮಾಧ್ಯಮಗಳ ಪ್ರತಿನಿಧಿಗಳ ಜೊತೆ ನಡೆದುಕೊಂಡ ರೀತಿ ನಾಗರೀಕ ಸಮಾಜವೇ ಒಂದು ರೀತಿ ತಲೆ ತಗ್ಗಿಸುವಂತಾಗಿದೆ. ಇಡೀ ದೇಶದ ಜನರು ಮೋದಿ ಅವರ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ಪೊಲೀಸರು ನಿರ್ವಹಿಸುತ್ತಿರುವ ಕರ್ತವ್ಯದಿಂದ ಇಡೀ ದೇಶಾದ್ಯಂತ ಲಾಕ್‍ಡೌನ್ ಯಶಸ್ವಿಯಾಗುತ್ತಿದೆ ಎಂದರು. ಇದನ್ನೂ ಓದಿ: ದುಡುಕಿ ಮಾತನಾಡಿಲ್ಲ – ಕೊರೊನಾ ಕಿರಿಕ್‍ಗೆ ಶ್ರೀಕಂಠೇಗೌಡ ಸಮರ್ಥನೆ

    ಅದೇ ರೀತಿ ಕೊರೊನಾ ಬಗ್ಗೆ ಮಾಹಿತಿ ನೀಡುವಲ್ಲಿ, ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮತ್ತು ಲಾಕ್‍ಡೌನ್ ನಿಮಯ ಉಲ್ಲಂಘಿಸುವರಿಗೆ ಏನು ಶಿಕ್ಷೆ ಎಂಬುದನ್ನು ಮಾಧ್ಯಮಗಳು ಜನರಿಗೆ ತಿಳಿಸುತ್ತಿದ್ದಾರೆ. ಈ ಮೂಲಕ ಮಾಧ್ಯಮಗಳು ಕೊರೊನಾ ವಿರುದ್ಧದ ಹೋರಾಟದಲ್ಲಿ ಬಹು ದೊಡ್ಡ ಪಾತ್ರವನ್ನು ನಿರ್ವಹಿಸುತ್ತಿವೆ. ಇಂತಹ ಮಾಧ್ಯಮಗಳ ಬಗ್ಗೆ ಗೌರವ ಭಾವನೆ ಇಟ್ಟುಕೊಳ್ಳುವುದು ಬಿಟ್ಟು, ಅವರ ಮೇಲೆ ದೌರ್ಜನ್ಯ ಎಸಗುವುದು ಸರಿಯಲ್ಲ. ಅವರ ಮೇಲೆಯೇ ಶ್ರೀಕಂಠೇಗೌಡರು ದರ್ಪ ಅಹಂಕಾರದಿಂದ ವರ್ತಿಸಿದ್ದಾರೆ ಎಂದು ಪ್ರತಾಪ್ ಸಿಂಹ ಖಂಡಿಸಿದರು. ಇದನ್ನೂ ಓದಿ: ಗೂಂಡಾಗಿರಿ ಮಾಡಿ ಎಂಎಲ್‍ಸಿ ಆಗಿ ಮುಂದುವರಿಯೋಕೆ ಯಾವ ಅರ್ಹತೆ ಇದೆ: ಶ್ರೀಕಂಠೇಗೌಡ ವಿರುದ್ಧ ಸುಮಲತಾ ಕಿಡಿ

    ಇವತ್ತು ಇಡೀ ದೇಶಾದ್ಯಂತ ಆಶಾ ಕಾರ್ಯಕರ್ತೆರಿಂದ ಹಿಡಿದು ಆರೋಗ್ಯ ಅಧಿಕಾರಿಗಳವರೆಗೂ ಸೋಂಕು ಪೀಡಿತರ ಆರೋಗ್ಯ ನೋಡಿಕೊಂಡು ಅವರ ರಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ ಆರ್ಶಾ ಕಾರ್ಯಕರ್ತೆಯರು, ವೈದ್ಯರು ಮತ್ತು ಪೊಲೀಸರ ವಿರುದ್ಧ ದೌರ್ಜನ್ಯ ಮಾಡಿದವರಿಗೆ ಸುಗ್ರೀವಾಜ್ಞೆ ಅಡಿಯಲ್ಲಿ ಶಿಕ್ಷೆ ನೀಡಲಾಗುತ್ತದೆ. ಹೀಗಾಗಿ ಪತ್ರಕರ್ತರ ಮೇಲಿನ ದೌರ್ಜನ್ಯವನ್ನು ಸುಗ್ರೀವ್ರಾವಾಜ್ಞೆ ಅಡಿಗೆ ತರಬೇಕು. ಅವರಿಗೂ ರಕ್ಷಣೆ ಕೊಡಬೇಕು ಎಂದರು.

    ಶ್ರೀಕಂಠೇಗೌಡ ಹಾಗೂ ಅವರ ಮಗನ ವಿರುದ್ಧ ಇದೇ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಬೇಕು. ಇಂದು ಲಾಕ್‍ಡೌನ್ ನಿಯಮದ ಬಗ್ಗೆ ಮಾಧ್ಯಮಗಳು ವರದಿ ಕೊಡುತ್ತಿದೆ. ನಾವೆಲ್ಲರೂ ಮನೆಯಲ್ಲಿದ್ದೇವೆ. ಆದರೆ ವೈದ್ಯರು, ಪೊಲೀಸರು ಮತ್ತು ಪತ್ರಕರ್ತರು ಮಾತ್ರ ಮನೆಯಲ್ಲಿರದೆ ಪ್ರತಿದಿನ ಕೆಲಸ ಮಾಡುತ್ತಿದ್ದಾರೆ. ಅಂತವರ ಮೇಲೆ ದೌರ್ಜನ್ಯ ಮಾಡುವುದು ತಪ್ಪು. ದೌರ್ಜನ್ಯ ಮಾಡಿದವರಿಗೆ ಸುಗ್ರಿವಾಜ್ಞೆ ಅಡಿಯಲ್ಲಿ ಶಿಕ್ಷೆ ನೀಡಬೇಕು ಎಂದು ಪ್ರತಾಪ್ ಸಿಂಹ ಆಗ್ರಹಿಸಿದರು.

  • ತಮ್ಮ ಪಕ್ಷದ ಎಂಎಲ್‍ಸಿಯನ್ನು ಸಮರ್ಥಿಸಿಕೊಂಡ ಮಾಜಿ ಎಂಪಿ ಶಿವರಾಮೇಗೌಡ

    ತಮ್ಮ ಪಕ್ಷದ ಎಂಎಲ್‍ಸಿಯನ್ನು ಸಮರ್ಥಿಸಿಕೊಂಡ ಮಾಜಿ ಎಂಪಿ ಶಿವರಾಮೇಗೌಡ

    – ವಸತಿ ಪ್ರದೇಶದಲ್ಲಿ ಟೆಸ್ಟ್ ಮಾಡುವುದು ತಪ್ಪು

    ಮಂಡ್ಯ: ವಸತಿ ಪ್ರದೇಶದಲ್ಲಿ ಕೊರೊನಾ ಟೆಸ್ಟ್ ಮಾಡುವುದು ತಪ್ಪು ಎಂದು ಹೇಳುವ ಮೂಲಕ ಮಾಜಿ ಸಂಸದ ಶಿವರಾಮೇಗೌಡ ತಮ್ಮ ಪಕ್ಷದ ಎಂಎಲ್‍ಸಿ ಶಿವರಾಮೇಗೌಡರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಮಂಡ್ಯದಲ್ಲಿ ಜೆಡಿಎಸ್ ಎಂಎಲ್‍ಸಿ ಶ್ರೀಕಂಠೇಗೌಡ ಮತ್ತು ಅವರ ಪುತ್ರ ಪತ್ರಕರ್ತರ ಮೇಲೆ ಮಾಡಿದ ಹಲ್ಲೆಯ ವಿಚಾರವಾಗಿ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಶಿವರಾಮೇಗೌಡ, ಮಾಧ್ಯಮ ಮಿತ್ರರ ಮೇಲೆ ಹಲ್ಲೆ ಮಾಡಿದ್ದು ತಪ್ಪು. ಅದನ್ನು ನಾನು ಖಂಡಿಸುತ್ತೇನೆ. ಆದರೆ ವಸತಿ ಪ್ರದೇಶದ ಮಧ್ಯದಲ್ಲಿ ಇರುವ ಅಂಬೇಡ್ಕರ್ ಭವನದಲ್ಲಿ ಕೊರೊನಾ ಟೆಸ್ಟ್ ಮಾಡಲು ಅಧಿಕಾರಿಗಳು ಅನುಮತಿ ನೀಡಿದ್ದು ಎಷ್ಟು ಸರಿ? ಅಂತಹ ಅಧಿಕಾರಿಗಳುನ್ನು ಅಮಾನತು ಮಾಡಬೇಕು ಎಂದರು.

    ಕೊರೊನಾ ವಾರಿಯರ್ಸ್‍ಗೆ ಪೊಲೀಸರಿಗೆ ಮತ್ತು ಪತ್ರಕರ್ತರಿಗೆ ಕೊರೊನಾ ಟೆಸ್ಟ್ ಮಾಡಬೇಡಿ ಎಂದು ಹೇಳಿಲ್ಲ. ಅವರ ಆರೋಗ್ಯ ತಪಾಸಣೆಯಾಗಬೇಕು. ಆದರೆ ಅದನ್ನು ವಸತಿ ಪ್ರದೇಶದ ಮಧ್ಯೆ ಇರುವ ಭವನದಲ್ಲಿ ಮಾಡಿದರೆ, ಜನರು ಸಾಮಾನ್ಯವಾಗಿಯೇ ಭಯಪಡುತ್ತಾರೆ. ಜೊತೆಗೆ ಶ್ರೀಕಂಠೇಗೌಡ ಅವರ ಮನೆಯೂ ಅದೇ ಪ್ರದೇಶದಲ್ಲಿ ಇರುವ ಕಾರಣ ಅವರು ಅದನ್ನು ಕೇಳಲು ಬಂದಿದ್ದಾರೆ ಅಷ್ಟೇ ಎಂದು ಶಿವರಾಮೇಗೌಡ ಹೇಳಿದ್ದಾರೆ.

    ನಾನು ಜಿಲ್ಲಾಧಿಕಾರಿಗೆ ಮನವಿ ಮಾಡುತ್ತೇನೆ ಅಲ್ಲಿ ಕೊರೊನಾ ಪರೀಕ್ಷೆ ಮಾಡಲು ಅನುಮತಿ ಕೊಟ್ಟ ಅಧಿಕಾರಿಯನ್ನು ಅಮಾನತು ಮಾಡಬೇಕು. ಈ ಕೊರೊನಾ ಪರೀಕ್ಷೆಯನ್ನು ಊರಿನಿಂದ ಹೊರಗೆ ಹಲವಾರು ಕಟ್ಟಡಗಳು ಇವೆ ಅಲ್ಲಿ ಮಾಡಬೇಕು. ಅದನ್ನು ಬಿಟ್ಟು ಊರ ಒಳಗೆ ಯಾಕೆ ಮಾಡಬೇಕು. ಅಲ್ಲಿನ ಸ್ಥಳೀಯ ನಿವಾಸಿಗಳು ಹೆದರಿಕೊಂಡು ನನಗೆ 50 ಜನ ಕರೆ ಮಾಡಿದ್ದರು. ಕೆಲ ಸ್ಥಳೀಯ ಮಟ್ಟದ ಅಧಿಕಾರಿಗಳ ಮಾತನನ್ನು ಸರ್ಕಾರ ಕೇಳಬಾರದು ಎಂದು ಸಮರ್ಥನೆ ಮಾಡಿಕೊಂಡರು.

    ನಡೆದಿದ್ದೇನು?
    ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಇಂದು ಪತ್ರಕರ್ತರ ಕೋವಿಡ್-19 ಟೆಸ್ಟ್ ಇತ್ತು. ಆದರೆ ಅಂಬೇಡ್ಕರ್ ಭವನದ ಬಳಿಯೇ ವಿಧಾನಸಭಾ ಸದಸ್ಯ ಕೆ.ಟಿ ಶ್ರೀಕಂಠೇಗೌಡ ಅವರ ಮನೆಯಿದೆ. ಹೀಗಾಗಿ ಇಲ್ಲಿ ಟೆಸ್ಟ್ ಮಾಡಬೇಡಿ ಎಂದು ತನ್ನ ಸಂಗಡಿಗರನ್ನು ಕರೆದುಕೊಂಡು ಬಂದು ಖ್ಯಾತೆ ತೆಗೆದಿದ್ದಾರೆ. ಅಲ್ಲದೆ ಕೋವಿಡ್ ಟೆಸ್ಟ್ ನಿಲ್ಲಿಸುವಂತೆ ಜಗಳ ಮಾಡಿದ್ದಾರೆ. ಇದೇ ವೇಳೆ ಕೆಟಿಎಸ್ ಪುತ್ರ ಪತ್ರಕರ್ತರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಗೂಂಡಾಗಿರಿ ಮಾಡಿ ಎಂಎಲ್‍ಸಿ ಆಗಿ ಮುಂದುವರಿಯೋಕೆ ಯಾವ ಅರ್ಹತೆ ಇದೆ: ಶ್ರೀಕಂಠೇಗೌಡ ವಿರುದ್ಧ ಸುಮಲತಾ ಕಿಡಿ

    ಗೂಂಡಾಗಿರಿ ಮಾಡಿ ಎಂಎಲ್‍ಸಿ ಆಗಿ ಮುಂದುವರಿಯೋಕೆ ಯಾವ ಅರ್ಹತೆ ಇದೆ: ಶ್ರೀಕಂಠೇಗೌಡ ವಿರುದ್ಧ ಸುಮಲತಾ ಕಿಡಿ

    ಮಂಡ್ಯ: ಇಂದು ಪತ್ರಕರ್ತರ ಕೋವಿಡ್-19 ಪರೀಕ್ಷೆ ನಡೆಸುತ್ತಿದ್ದ ವೇಳೆ ಅಡ್ಡಿಪಡೆಸಿ, ಗಲಾಟೆ ಮಾಡಿದ ಎಂಎಲ್‍ಸಿ ಕೆ.ಟಿ ಶ್ರೀಕಂಠೇಗೌಡ ಹಾಗೂ ಅವರ ಪುತ್ರನ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ಕಿಡಿಕಾರಿದ್ದಾರೆ. ಈ ರೀತಿ ಗೂಂಡಾಗಿರಿ ಮಾಡಿ, ಗಲಾಟೆ ಮಾಡೋರಿಗೆ ಎಂಎಲ್‍ಸಿ ಆಗಿ ಮುಂದುವರಿಯೋಕೆ ಯಾವ ಅರ್ಹತೆ ಇದೆ ಎಂದು ಪ್ರಶ್ನಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ದೂರವಾಣಿಯಲ್ಲಿ ಮಾತನಾಡಿದ ಅವರು, ಎಸ್‍ಪಿ, ಪೊಲೀಸ್ ಅಧಿಕಾರಿಗಳು, ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುತ್ತಿದ್ದ ಪತ್ರಕರ್ತರ ಕೋವಿಡ್-19 ಪರೀಕ್ಷೆಗೆ ಅಡ್ಡಿಪಡೆಸಿ, ರೌಡಿಗಿರಿ ಮೆರೆದಿದ್ದು ಖಂಡನೀಯ. ಶ್ರೀಕಂಠೇಗೌಡರು ತಪ್ಪು ಮಾಡಿದ್ದಾರೆ. ಅವರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುತ್ತೆ, ಅದನ್ನು ಅವರು ಎದುರಿಸಲೇಬೇಕು. ಅವರು ನಿಯಮಗಳನ್ನು ಉಲ್ಲಂಘಿಸಿ ಕಾನೂನಿನ ವಿರುದ್ಧ ಹೋಗಿದ್ದಾರೆ. ಸರ್ಕಾರದ ಅನುಮತಿ ಪಡೆದು ಮಂಡ್ಯದಲ್ಲಿ ಪತ್ರಕರ್ತರ ಕೋವಿಡ್-19 ಪರೀಕ್ಷೆ ನಡೆಸಲಾಗುತ್ತಿದೆ. ಫೀಲ್ಡ್ ಅಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಸೋಂಕು ತಗುಲಿದರೆ ಅದು ಬೇರೆ ಅವರಿಗೆ ಹರಡುವ ಸಾಧ್ಯತೆ ಹೆಚ್ಚು, ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಪರೀಕ್ಷೆ ಕೈಗೊಳ್ಳಲಾಗಿದೆ ಅದನ್ನು ಶ್ರೀಕಂಠೇಗೌಡರು ಅರ್ಥ ಮಾಡಿಕೊಳ್ಳಬೇಕು ಎಂದು ಹರಿಹಾಯ್ದರು.

    ಇಲ್ಲಿ ಪರೀಕ್ಷೆ ಮಾಡಬೇಡಿ, ನಮ್ಮ ಮನೆ ಇದೆ ಎಂದರೆ ಬೇರೆ ಕಡೆ ಪರೀಕ್ಷೆ ಮಾಡಿದರೂ ಮನೆಗಳು ಇರುತ್ತೆ ಅಲ್ವಾ? ಪರಿಸ್ಥಿತಿ ಅರ್ಥಮಾಡಿಕೊಳ್ಳದೇ ಹೀಗೆ ಗಲಾಟೆ ಮಾಡಿದರೆ ಈ ಘಟನೆಗೂ ಪಾದರಾಯನಪುರದಲ್ಲಿ ನಡೆದ ಘಟನೆಗೂ ಏನು ವ್ಯತ್ಯಾಸ? ಇಲ್ಲಿ ಕೋವಿಡ್-19 ಪರೀಕ್ಷೆ ನಡೆಸಿದರೆ ನಿಮಗೂ ಕೊರೊನಾ ಬರುತ್ತೆ, ಇದನ್ನು ವಿರೋಧಿಸಿ ಎಂದು ಶ್ರೀಕಂಠೆಗೌಡರು ಸ್ಥಳೀಯರಿಗೆ ಹೇಳಿರುವುದು ಅವರ ಸಂಸ್ಕಾರವನ್ನು ತೋರಿಸುತ್ತದೆ. ಇದು ಬಹಳ ಶೋಷನೀಯ. ಒಬ್ಬರು ಎಂಎಲ್‍ಸಿ ಆಗಿ ಈ ರೀತಿ ಹೇಳಿಕೆ ಕೊಡುತ್ತಾರೆ ಎಂದರೆ ಅವರ ಶಿಕ್ಷಣ ಹಾಗೂ ಮಾಹಿತಿ ಎಷ್ಟರ ಮಟ್ಟಿಗೆ ತಿಳಿದುಕೊಂಡಿದ್ದಾರೆ ಎನ್ನೋದನ್ನ ನಾವು ಪ್ರಶ್ನಿಸಬೇಕಾಗಿದೆ ಎಂದರು.

    ಕೊರೊನಾ ಪರೀಕ್ಷೆ ಮಾಡಿದರೆ ಸೋಂಕು ಹರಡುತ್ತೆ ಎಂದು ಎಲ್ಲೂ ಹೇಳಿಲ್ಲ. ಬದಲಾಗಿ ಅತೀ ಹೆಚ್ಚು ಪರೀಕ್ಷೆ ಮಾಡಿ ಎಂದಿದ್ದಾರೆ. ಕೊರೊನಾ ಇರುವ ಅದೆಷ್ಟೋ ಮಂದಿಗೆ ಸೋಂಕಿನ ಲಕ್ಷಣಗಳು ಇರುವುದಿಲ್ಲ. ಹೀಗಾಗಿ ಪರೀಕ್ಷೆ ಮಾಡುವುದು ಅಗತ್ಯ. ಇದನ್ನು ಅರ್ಥ ಮಾಡಿಕೊಳ್ಳದೇ ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಬೇರೆ ಸಮಯದಲ್ಲಿ ಮಾಡುವಂತೆ ಗೂಂಡಾಗಿರಿ, ಗಲಾಟೆ, ರಾಜಕಾರಣ ಮಾಡುವುದು ಸರಿಯಲ್ಲ. ಹೀಗೆ ಮಾಡಿ ಜನಪ್ರತಿನಿಧಿಯಾಗುವ ಅರ್ಹತೆಯನ್ನೇ ಇವರು ಕಳೆದುಕೊಂಡಿದ್ದಾರೆ ಎನ್ನಬಹುದು ಎಂದು ಕಿಡಿಕಾರಿದ್ದಾರೆ.

    ಈಗಾಗಲೇ ನಾನು ಪೊಲೀಸ್ ಅಧಿಕಾರಿಗಳ ಜೊತೆ ಈ ಬಗ್ಗೆ ಮಾತನಾಡಿದ್ದೇನೆ. ಅವರು ಎಫ್‍ಐಆರ್ ದಾಖಲಾದ ಮೇಲೆ ಅದರ ಕಾಫಿಯನ್ನ ಕಳುಹಿಸುವುದಾಗಿ ಹೇಳಿದ್ದಾರೆ. ಈ ರೀತಿ ತಪ್ಪು ಮಾಡಿದರೆ ಸಾಮಾನ್ಯ ವ್ಯಕ್ತಿ ಮೇಲೆ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೋ ಅದೇ ರೀತಿ ಕ್ರಮವನ್ನು ಎಂಎಲ್‍ಸಿ ಮೇಲೂ ತೆಗೆದುಕೊಳ್ಳಬೇಕು. ತಪ್ಪು ಯಾರೇ ಮಾಡಿದರು ತಪ್ಪು ತಪ್ಪೇ. ಎಂಎಲ್‍ಸಿ, ಎಂಪಿ, ಎಂಎಲ್‍ಎ ಯಾರೇ ಮಾಡಿದರೂ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಎಷ್ಟೆಲ್ಲಾ ರಿಸ್ಕ್ ತೆಗೆದುಕೊಂಡು ಅಗತ್ಯ ಸೇವೆಗಳಲ್ಲಿ ಇರುವವರು ಕೆಲಸ ಮಾಡುತ್ತಿದ್ದಾರೆ ಎನ್ನುವುದು ಇವರಿಗೆ ಅರ್ಥ ಆಗುತ್ತಿಲ್ಲ. ಇವರು ನಾವು ಮಾತ್ರ ಸುರಕ್ಷಿತವಾಗಿರಬೇಕು ಎನ್ನುವ ಉದ್ದೇಶದಲ್ಲಿ ಇದ್ದಾರೋ ಏನೋ ಗೊತ್ತಿಲ್ಲ. ಆದರೆ ಈ ಸಂಬಂಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸುಮಲತಾ ಅವರು ಒತ್ತಾಯಿಸಿದ್ದಾರೆ.

  • ಮಂಗಳೂರು ಪೊಲೀಸರಿಂದ ಪತ್ರಕರ್ತರಿಗೆ ಫೇಸ್‍ಶೀಲ್ಡ್ ವಿತರಣೆ

    ಮಂಗಳೂರು ಪೊಲೀಸರಿಂದ ಪತ್ರಕರ್ತರಿಗೆ ಫೇಸ್‍ಶೀಲ್ಡ್ ವಿತರಣೆ

    ಮಂಗಳೂರು: ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಫೀಲ್ಡ್ ನಲ್ಲಿರುವ ಪತ್ರಕರ್ತರಿಗೆ ಸೋಂಕು ತಗುಲುತ್ತಿರುವುದು ಆತಂಕವನ್ನು ಸೃಷ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೋಲಿಸ್ ಕಮಿಷನರ್ ಡಾ.ಪಿ.ಎಸ್ ಹರ್ಷ ಅವರು ಪತ್ರಕರ್ತರ ಕಾಳಜಿ ಬಗ್ಗೆ ಗಮನ ಹರಿಸಿದ್ದಾರೆ.

    ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಕೊರೊನಾ ಸೋಂಕಿನಿಂದ ರಕ್ಷಣೆಗಾಗಿ ಫೇಸ್‍ಶೀಲ್ಡ್ ಅನ್ನು ವಿತರಿಸಿದ್ದಾರೆ. ಲಾಕ್‍ಡೌನ್ ನಡುವೆಯೂ ಪೊಲೀಸರು, ಪತ್ರಕರ್ತರು, ಆಶಾ ಕಾರ್ಯಕರ್ತೆಯರು, ಸಾಮಾಜಿಕ ಕಾರ್ಯಕರ್ತರು ಜನರ ನಡುವೆ ಇರುತ್ತಾರೆ. ಈ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಫೇಸ್‍ಶೀಲ್ಡ್ ಬಳಕೆ ಸೂಕ್ತ ಎಂಬುದು ಕಮಿಷನರ್ ಹರ್ಷಾ ಅವರ ಅಭಿಪ್ರಾಯವಾಗಿದೆ.

    ಹೀಗಾಗಿ ನಗರದ ಉರ್ವಾ ಸ್ಟೇಷನ್‍ನಲ್ಲಿ ಈ ಫೇಸ್‍ಶೀಲ್ಡ್ ಗಳನ್ನು ಪತ್ರಕರ್ತರಿಗೆ ವಿತರಿಸುವ ಕಾರ್ಯ ನಡೆಯಿತು. ಉರ್ವಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶರೀಫ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ನಗರದ ಎಲ್ಲಾ ಪತ್ರಕರ್ತರಿಗೂ ಫೇಸ್‍ಶೀಲ್ಡ್ ಗಳನ್ನು ಆಯುಕ್ತರ ಪರವಾಗಿ ವಿತರಿಸಿದರು.

  • ಹಗಲು, ರಾತ್ರಿ ಶ್ರಮಪಟ್ಟು ಸುದ್ದಿ ಕೊಡುವ ಪತ್ರಕರ್ತರಿಗೂ ಕೊರೊನಾ ಕಾಟ – 53 ಮಂದಿಗೆ ಸೋಂಕು

    ಹಗಲು, ರಾತ್ರಿ ಶ್ರಮಪಟ್ಟು ಸುದ್ದಿ ಕೊಡುವ ಪತ್ರಕರ್ತರಿಗೂ ಕೊರೊನಾ ಕಾಟ – 53 ಮಂದಿಗೆ ಸೋಂಕು

    -ದೇಶದಲ್ಲಿ 18 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು

    ಮುಂಬೈ: ಭಾರತದಲ್ಲಿ ಕೊರೊನಾ ವೈರಸ್ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಿದ್ದು, ದೇಶದಲ್ಲಿ ಈವರಗೆ 18,032 ಮಂದಿಗೆ ಸೋಂಕು ತಗುಲಿರುವುದು ವರದಿಯಾಗಿದ್ದು, ವರದಿಗಾರಿಕೆಗೆ ತೆರೆಳಿದ್ದ 53 ಮಂದಿ ಪತ್ರಕರ್ತರಿಗೂ ಕೊರೊನಾ ತಗುಲಿರುವುದು ದೃಢಪಟ್ಟಿದೆ.

    ಭಾರತದಲ್ಲಿ ಅತೀ ವೇಗವಾಗಿ ಕೊರೊನಾ ಹರಡುತ್ತಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 223 ಮಂದಿ ಸಾವನ್ನಪ್ಪಿದ್ದು, ಕೊರೊನಾ ಸೋಂಕಿತರ ಸಂಖ್ಯೆ 4,483ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಮುಂಬೈವೊಂದರಲ್ಲೇ ವಿವಿಧ ಮಾಧ್ಯಮ ಸಂಸ್ಥೆಗಳ 53 ಪತ್ರಕರ್ತರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದರಲ್ಲೂ ಮುಂಬೈನ ಧಾರಾವಿ ಸ್ಲಾಮ್‍ಗೆ ತೆರೆಳಿ ವರದಿಗಾರಿಕೆ ಮಾಡಿದ್ದ ಪತ್ರಕರ್ತರಿಗೆ ಹೆಚ್ಚು ಸೋಂಕು ತಗುಲಿದೆ.

    ಹಗಲು ರಾತ್ರಿ ಶ್ರಮಪಟ್ಟು ಜನರಿಗೆ ಕೊರೊನಾ ಬಗ್ಗೆ ಮಾಹಿತಿ ಮುಟ್ಟಿಸುವ ಪತ್ರಕರ್ತರಿಗೆಂದೇ ಮಹಾರಾಷ್ಟ್ರ ಸರ್ಕಾರ ವಿಶೇಷ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಿತ್ತು. ಈವೆಲೆ 167ಕ್ಕೂ ಅಧಿಕ ಮಂದಿ ಪತ್ರಕರ್ತರನ್ನು ತಪಾಸಣೆಗೆ ಒಳಪಡಿಸಿ, ಅವರ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ 53 ಮಂದಿಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ ಎಂದು ಮುಂಬೈ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಮಾಹಿತಿ ನೀಡಿದೆ.

    ಅಲ್ಲದೇ ಮತ್ತಷ್ಟು ಪತ್ರಕರ್ತರಿಗೂ ಸೋಂಕು ತಗುಲುವ ಸಾಧ್ಯತೆಗಳಿದೆ ಎಂದು ಪಾಲಿಕೆ ಎಚ್ಚರಿಸಿದೆ. ಸೋಂಕಿತರಲ್ಲಿ ಹೆಚ್ಚಿನವರು ಎಲೆಕ್ಟ್ರಾನಿಕ್ ಮಾಧ್ಯಮಗಳ ವರದಿಗಾರರು, ಕ್ಯಾಮೆರಾಮನ್‍ಗಳು ಹಾಗೂ ಫೋಟೋಗ್ರಾಫರ್ ಗಳು ಸೇರಿದ್ದಾರೆ ಎಂದು ಪಾಲಿಕೆ ತಿಳಿಸಿದೆ.

    ಈ ಬಗ್ಗೆ ಆರೋಗ್ಯ ಇಲಾಕೆಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಪ್ರತಿಕ್ರಿಯಿಸಿ, ಯಾವಾಗಲೂ ಕೆಲಸದಲ್ಲಿ ನಿರತರಾಗಿರುವ ಪತ್ರಕರ್ತರು ದಯವಿಟ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಫಿಲ್ಡ್ ಗೆ ಇಳಿಯಿರಿ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೆಲಸ ಮಾಡಿ. ನಿಮ್ಮ ಬಗ್ಗೆಯೂ ಕಾಲಜಿ ವಹಿಸಿ ಎಂದು ಹೇಳಿದ್ದಾರೆ.

  • ಕೊಡಗಿನ ಬಡವರ ಕಷ್ಟಕ್ಕೆ ಮಾಧ್ಯಮ ‘ಸ್ಪಂದನ’

    ಕೊಡಗಿನ ಬಡವರ ಕಷ್ಟಕ್ಕೆ ಮಾಧ್ಯಮ ‘ಸ್ಪಂದನ’

    ಮಡಿಕೇರಿ: ಸಮಾಜದಲ್ಲಿ ಪತ್ರಕರ್ತರಿಂದ ಹೆಚ್ಚು ಪ್ರಚಾರಗಿಟ್ಟಿಸಿಕೊಳ್ಳುವವರೇ ಹೆಚ್ಚು. ಅದರಲ್ಲೂ ಈ ಲಾಕ್‍ಡೌನ್ ಸಮಯದಲ್ಲಿ ಬಡ ಜನರಿಗೆ ಸೇವೆ ಮಾಡುವ ಅನೇಕ ಸಂಘ ಸಂಸ್ಥೆಗಳು ಮಾಧ್ಯಮದವರು ಹಾಗೂ ಪತ್ರಕರ್ತರನ್ನು ಕರೆದುಕೊಂಡು ಹೋಗಿ ಪ್ರಚಾರ ಪಡೆದುಕೊಳ್ಳುತ್ತಾರೆ.

    ಪ್ರಚಾರ ಕೊಡುವ ಪತ್ರಕರ್ತರೇ ಯಾರಿಗೂ ತಿಳಿಯದಂತೆ ಸಂಕಷ್ಟದಲ್ಲಿ ಇರುವವರಿಗೆ ಮಾಧ್ಯಮ ಸ್ಪಂದನ ತಂಡ ಕಟ್ಟಿಕೊಂಡು ಜಿಲ್ಲೆಯ ವಿವಿಧೆಡೆ ತಮ್ಮ ಕೈಯಿಂದ ಆಗುವ ಸಹಾಯವನ್ನು ಮಾಡುತ್ತಿದ್ದಾರೆ. ಹೌದು, ಕೊಡಗಿನಲ್ಲಿ ಹಲವಾರು ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಊಟದ ವ್ಯವಸ್ಥೆಗೂ ಆಹಾರ ಪದಾರ್ಥಗಳು ಸಿಗುವುದು ಕಷ್ಟವಾಗಿದೆ. ಇದರಿಂದಾಗಿ ಕೊಡಗು ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಸೇರಿ ಸಂಕಷ್ಟದಲ್ಲಿರುವರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ.

    ಪತ್ರಕರ್ತರು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ದಾನಿಗಳ ಮೂಲಕ ಸಮಸ್ಯೆಯನ್ನು ಪರಿಹಾರ ಮಾಡಿಸಿಕೊಡುತ್ತಿದ್ದಾರೆ. ಸಮಸ್ಯೆ ಇರುವ ಕಡೆಗಳಿಂದ ಕರೆ ಬಂದರೆ ತಕ್ಷಣ ಮಾಧ್ಯಮದವರ ತಂಡ ನೆರವಿಗೆ ಬರುತ್ತಿದೆ. ಈಗಾಗಲೇ ಜಿಲ್ಲೆಯ ಹಲವು ಬಡ ಕುಟುಂಬಗಳಿಗೆ ಮಾಧ್ಯಮ ತಂಡದ ಸದಸ್ಯರು ಮನೆಗೆ ನೇರವಾಗಿ ತೆರಳಿ ಆಹಾರ ಪದಾರ್ಥಗಳನ್ನು ವಿತರಿಸುವ ಕೆಲಸ ಮಾಡುತ್ತಿದ್ದಾರೆ.

    ಜಿಲ್ಲೆಯ ವಿವಿಧೆಡೆ ಇರುವ ಪತ್ರಕರ್ತರು ತಮ್ಮ ವೃತ್ತಿಯೊಂದಿಗೆ ಈ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತೋಟದಲ್ಲಿ ಕೂಲಿ ಮಾಡುವ ಕಾರ್ಮಿಕರು, ಅನಾರೋಗ್ಯ ಪೀಡಿತರು ಹಾಗೂ ಬಡವರಿಗೆ ಗರ್ಭಿಣಿಯರಿಗೆ ಮಾಧ್ಯಮ ಸ್ಪಂದನಾ ತಂಡ ನೆರವಾಗುತ್ತಿದೆ. ತಮ್ಮ ಕಾಯಕದ ನಡುವೆಯೂ ಕೊಡಗಿನ ಮಾಧ್ಯಮದ ವರದಿಗಾರರು ಈ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇತರರಿಗೂ ಮಾದರಿಯಾಗಿದ್ದಾರೆ.

  • ಸಮಾಜದ ಸ್ವಾಸ್ಥ್ಯ ಕಾಪಾಡಲು ಪತ್ರಕರ್ತರ, ಪೊಲೀಸರ ಪಾತ್ರ ಅಗತ್ಯ: ಎಎಸ್‍ಪಿ ಕುಮಾರಚಂದ್ರ

    ಸಮಾಜದ ಸ್ವಾಸ್ಥ್ಯ ಕಾಪಾಡಲು ಪತ್ರಕರ್ತರ, ಪೊಲೀಸರ ಪಾತ್ರ ಅಗತ್ಯ: ಎಎಸ್‍ಪಿ ಕುಮಾರಚಂದ್ರ

    ಉಡುಪಿ: ಪತ್ರಕರ್ತರು ಪೊಲೀಸರ ಮಾದರಿಯಲ್ಲೇ ಸಮಾಜದ ಸ್ವಾಸ್ಥ್ಯ ಕಾಪಾಡುವವರು. ಪೊಲೀಸರಂತೆ ಮಾಧ್ಯಮದ ಸದಸ್ಯರು ಕುಟುಂಬದಿಂದ, ಖಾಸಗಿ ಜೀವನದ ಸಂಭ್ರಮದಿಂದ ದೂರ ಉಳಿದು ಬಿಟ್ಟಿದ್ದಾರೆ. ನಿಜಕ್ಕೂ ಈ ಎರಡು ಕ್ಷೇತ್ರ ಬಹಳ ಚಾಲೆಂಜಿಂಗ್ ಮತ್ತು ತ್ಯಾಗದ್ದು ಎಂದು ಉಡುಪಿ ಅಡಿಷನಲ್ ಎಸ್‍ಪಿ ಕುಮಾರಚಂದ್ರ ಹೇಳಿದರು.

    ಉಡುಪಿಯ ಕಟಪಾಡಿಯಲ್ಲಿ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡೋತ್ಸವದ ಬಹುಮಾನ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕುಮಾರಚಂದ್ರ ಮಾತನಾಡಿದರು. ಸಾರ್ವಜನಿಕರು ಮತ್ತು ಸರ್ಕಾರಿ ವ್ಯವಸ್ಥೆ ಜೊತೆ ಪತ್ರಕರ್ತರ ಕಾರ್ಯ ಬಹಳ ಮಹತ್ವದ್ದು ಎಂದು ಹೇಳಿದರು.

    ಕಾಪು ತಾಲೂಕು ಅಧ್ಯಕ್ಷ ಪ್ರಮೋದ್ ಸುವರ್ಣ ಕಟಪಾಡಿ ಮಾತನಾಡಿ, ಪತ್ರಕರ್ತರು ಸಮಾಜದ ಎಲ್ಲರೊಂದಿಗೆ ಸ್ನೇಹ ಮತ್ತು ನಿಷ್ಠುರದ ವ್ಯಕ್ತಿತ್ವ ಇಟ್ಟುಕೊಳ್ಳಬೇಕಾದವರು. ಪಕ್ಷಾತೀತ, ಜಾತ್ಯಾತೀತವಾಗಿ ಸಮಾಜದ ನೊಂದವರ ಪರವಾಗಿ ಪತ್ರಕರ್ತರು ಮುಂದೆಯೂ ಕೆಲಸ ಮಾಡುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.

    ನಿವೃತ್ತ ಪೊಲೀಸ್ ಉಪನಿರೀಕ್ಷಕ ರಾಜಗೋಪಾಲ್, ಗೃಹ ರಕ್ಷಕದಳದ ಲಕ್ಷ್ಮೀನಾರಾಯಣ ರಾವ್, ಅಗ್ನಿಶಾಮಕ ದಳದ ಅಶ್ವಿನ್ ಸನಿಲ್, ಯೋಗ ಸಾಧಕಿ ತನುಶ್ರೀ, ಕರಾಟೆ ಸಾಧಕಿ ಚೈತ್ರ ಸಾಲಿಯಾನ್, ರುದ್ರಭೂಮಿ ನಿರ್ವಾಹಕ ಕಿಶೋಕ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

    ಕಾಪು ವಲಯ ಪ್ರೆಸ್ ಕ್ಲಬ್‍ನ ಪತ್ರಕರ್ತರಿಗೆ ಹಲವಾರು ಕ್ರೀಡಾ ಚಟುವಟಿಕೆ ನಡೆದಿದ್ದು, ಅದರ ಪ್ರಶಸ್ತಿಗಳನ್ನು ವಿತರಣೆ ಮಾಡಲಾಯಿತು. ರಾಜಕೀಯ, ಸಮಾಜ ಸೇವಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಟುಂಬ ಸದಸ್ಯರ ಸ್ನೇಹ ಮಿಲನ ಕಾರ್ಯಕ್ರಮ ಆಯೋಜಿಸಿದ್ದು ಕುಟುಂಬದವರು ಪಾಲ್ಗೊಂಡರು. ಸ್ಥಳೀಯ ಸಂಘ ಸಂಸ್ಥೆಗಳು, ಪೊಲೀಸ್ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

  • ಕಾಗೇರಿ ವಿರುದ್ಧ ಮಾಧ್ಯಮಗಳಿಂದ ಪ್ರತಿಭಟನೆ

    ಕಾಗೇರಿ ವಿರುದ್ಧ ಮಾಧ್ಯಮಗಳಿಂದ ಪ್ರತಿಭಟನೆ

    ಬೆಂಗಳೂರು: ವಿಧಾನಸಭೆ ಕಲಾಪಕ್ಕೆ ಮಾಧ್ಯಮಗಳ ಮೇಲೆ ಹೇರಲಾದ ನಿರ್ಬಂಧವನ್ನು ಖಂಡಿಸಿ ಮಾಧ್ಯಮಗಳ ಪ್ರಮುಖರು ಸಿಲಿಕಾನ್ ಸಿಟಿಯಲ್ಲಿ ಪ್ರತಿಭಟನೆ ನಡೆಸಿದರು.

    ಖಾಸಗಿ ಟಿವಿ ಮಾಧ್ಯಮಗಳ ನೇರಪ್ರಸಾರ ಮತ್ತು ಖಾಸಗಿ ಮಾಧ್ಯಮಗಳ ಫೋಟೋಗ್ರಾಫರ್ ಗಳಿಗೆ ನಿಷೇಧ ಹೇರಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಿರ್ಧಾರವನ್ನು ಖಂಡಿಸಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ವತಿಯಿಂದ ಮೌರ್ಯ ಸರ್ಕಲ್‍ನಲ್ಲಿ ಇರುವ ಗಾಂಧಿ ಪ್ರತಿಮೆ ಎದುರು ಆಯೋಜನೆಗೊಂಡಿದ್ದ ಪ್ರತಿಭಟನೆಯಲ್ಲಿ ಟಿವಿ ಮತ್ತು ಮುದ್ರಣ ಮಾಧ್ಯಮದ ಸಂಪಾದಕರು, ಪತ್ರಕರ್ತರು ಭಾಗವಹಿಸಿ ಸರ್ಕಾರದ ನಡೆಯನ್ನು ಖಂಡಿಸಿದರು.

    ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಮಾಜಿ ಸಿಎಂ ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು. ಮಾಧ್ಯಮದ ಮಿತ್ರರು ಸಾಂಕೇತಿಕ ಪ್ರತಿಭಟನೆ ಮಾಡುತ್ತಿದ್ದೀರಿ. ಈ ರೀತಿಯ ತೀರ್ಮಾನ ಯಾವ ಸಂದರ್ಭದಲ್ಲಿಯೂ ಆಗಿರಲಿಲ್ಲ. ಮಾಧ್ಯಮಗಳನ್ನ ಹತ್ತಿಕ್ಕುವ ಕೆಲಸವನ್ನ ನಾನು ಸಿಎಂ ಆಗಿದ್ದಾಗ ಮಾಡಿರಲಿಲ್ಲ. ಅಧಿವೇಶನದಲ್ಲಿ ನಡೆಯುವುದನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸ ಮಾಡುತ್ತೀರಿ. ನಾಲ್ಕನೇ ಪಿಲ್ಲರ್ ಗೆ ಮುಕ್ತ ಅವಕಾಶ ಇರಬೇಕು. ಆದರೆ ಅದನ್ನು ಈ ಸರ್ಕಾರ ಮೊಟಕು ಮಾಡಿದೆ. ಇವತ್ತಿನ ಅಧಿವೇಶನದಲ್ಲಿ ಮಾಧ್ಯಮವನ್ನ ಬಹಿಷ್ಕರಿಸಿದ್ದರ ಬಗ್ಗೆ ಮಾತನಾಡುತ್ತೇನೆ. ಸ್ಪೀಕರ್ ಗೆ ಈ ಮಾಧ್ಯಮ ನಿಷೇಧವನ್ನ ಹಿಂಪಡೆಯಲು ಒತ್ತಾಯ ಮಾಡುವುದಾಗಿ ಭರವಸೆ ನಿಡಿದರು.

  • ಕಟೀಲು ದೇವಾಲಯದಲ್ಲಿ ಪತ್ರಕರ್ತರಿಗೆ ಅವಾಚ್ಯ ಪದಗಳಿಂದ ಬೈದ ರೇವಣ್ಣ

    ಕಟೀಲು ದೇವಾಲಯದಲ್ಲಿ ಪತ್ರಕರ್ತರಿಗೆ ಅವಾಚ್ಯ ಪದಗಳಿಂದ ಬೈದ ರೇವಣ್ಣ

    ಮಂಗಳೂರು: ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ದೇವರ ಮೊರೆ ಹೋಗಿರುವ ಸಚಿವ ರೇವಣ್ಣ ಕರಾವಳಿಯ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿದ್ದು, ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಿಯ ಎದುರೇ ಪತ್ರಕರ್ತರರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.

    ಶಾಸಕರ ರಾಜೀನಾಮೆ ಪರ್ವದಿಂದ ಕೋಮಾದಲ್ಲಿರುವ ರಾಜ್ಯ ಸರ್ಕಾರವನ್ನು ಉಳಿಸಿಕೊಳ್ಳಲು ರೇವಣ್ಣ ಆರು ದಿನಗಳಿಂದ ಟೆಂಪಲ್ ರನ್ ಕೈಗೊಂಡಿದ್ದು, ಇಂದು ಕರಾವಳಿ ಜಿಲ್ಲೆಯ ದೇವಾಲಯಗಳ ದರ್ಶನ ಮಾಡಿದರು.

    ದೇವಿಯ ದರ್ಶನ ಪಡೆಯಲು ರೇವಣ್ಣ ಇಂದು ಕಟೀಲಿಗೆ ಬಂದಿದ್ದರು. ಈ ವಿಚಾರ ತಿಳಿದು ಪತ್ರಕರ್ತರು ಎಂದಿನಂತೆ ಸುದ್ದಿ ಮಾಡಲು ದೇವಾಲಯಕ್ಕೆ ತೆರಳಿದ್ದರು. ದೇವಾಲಯ ಮುಂಭಾಗ ತೀರ್ಥ ಪ್ರಸಾದ ಸ್ವೀಕರಿಸಲು ರೇವಣ್ಣ ಬಂದಾಗ ಅಲ್ಲಿದ್ದ ವಾಹಿನಿಗಳ ವಿಡಿಯೋಗ್ರಾಫರ್ ಗಳು ವಿಡಿಯೋ ಮಾಡುತ್ತಿದ್ದರು.

    ಪತ್ರಕರ್ತರನ್ನು ನೋಡುತ್ತಿದ್ದಂತೆ ಕೋಪಗೊಂಡ ರೇವಣ್ಣ, ಕ್ಯಾಮೆರಾ ಆಫ್ ಮಾಡುವಂತೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಅಲ್ಲದೇ ಪೊಲೀಸರಿಗೆ ವಿಡಿಯೋ ಡಿಲೀಟ್ ಮಾಡಿಸಿ ಎಂದು ಸೂಚಿಸಿದ್ದಾರೆ. ದೇವಿಯ ಎದುರೇ ಅವಾಚ್ಯವಾಗಿ ಬೈದಿರೋದು ದೇವಿಗೆ ಅವಮಾನ ಮಾಡಿದಂತೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೇವಣ್ಣ ದೇವಿಯ ಬಳಿ ಕ್ಷಮಾಪಣೆ ಕೇಳಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.

    ಸತತವಾಗಿ ದೇವರ ದರ್ಶನ ಮಾಡುತ್ತಿರುವ ರೇವಣ್ಣ, ಇಂದು ಉಡುಪಿಯ ಕೊಲ್ಲೂರು ಮುಕಾಂಬಿಕೆಯ ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ. ಶನಿವಾರ ಮೃತ್ಯುಂಜಯ ಹೋಮ ಮಾಡಿಸಿದ್ದರು. ಶುಕ್ರವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದುಕೊಂಡು ಬಂದಿದ್ದರು. ಗುರುವಾರವೂ ದೇವಸ್ಥಾನಕ್ಕೆ ಹೋಗಿದ್ದು, ಮಂಗಳವಾರ ಬರಿಗಾಲಲ್ಲಿ ಶೃಂಗೇರಿ ದೇವಾಲಯಕ್ಕೆ ಹೋಗಿದ್ದರು. ಹೀಗೇ ರೇವಣ್ಣ ಬರಿಗಾಲಲ್ಲಿ ಟೆಂಪಲ್ ರನ್ ಮಾಡುತ್ತಿದ್ದಾರೆ.

  • ಪಬ್ಲಿಕ್ ಟಿವಿಯ ಬದ್ರುದ್ದೀನ್ ಮಾಣಿಯವರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಿ ಸನ್ಮಾನ

    ಪಬ್ಲಿಕ್ ಟಿವಿಯ ಬದ್ರುದ್ದೀನ್ ಮಾಣಿಯವರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಿ ಸನ್ಮಾನ

    ಬೆಂಗಳೂರು: ಸೋಮವಾರದಂದು ಬೆಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ನಡೆದ 2018ರ ವರ್ಷದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಬ್ಲಿಕ್ ಟಿವಿಯ ರಾಜಕೀಯ ವಿಭಾಗದ ಮುಖ್ಯಸ್ಥ ಬದ್ರುದ್ದೀನ್.ಕೆ.ಮಾಣಿ ಅವರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಈ ಸಮಾರಂಭದಲ್ಲಿ ನಗರಾಭಿವೃದ್ದಿ ಸಚಿವ ಜಿ ಪರಮೇಶ್ವರ್ ಮತ್ತು ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಸೇರಿದಂತೆ ಪತ್ರಿಕೋದ್ಯಮದ ಎಲ್ಲಾ ಹಿರಿಯ ಪತ್ರಕರ್ತರು ಭಾಗಿಯಾಗಿದ್ದರು. ಇದೇ ವೇಳೆ ಸಚಿವ ಜಿ. ಪರಮೇಶ್ವರ್ ಮತ್ತು ಸುಧಾಮೂರ್ತಿ ಅವರಿಗೆ ಸನ್ಮಾನ ಮಾಡಲಾಯಿತು. ಹಾಗೆಯೇ ಸಚಿವ ಜಿ ಪರಮೇಶ್ವರ್ ಮತ್ತು ಸುಧಾಮೂರ್ತಿ ಅವರು ಸಾಧನೆ ಮಾಡಿರುವ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು.

    ಪಬ್ಲಿಕ್ ಟಿವಿಯ ಬದ್ರುದ್ದೀನ್ ಕೆ. ಮಾಣಿ, ಕೆ.ಎನ್ ತಿಲಕ್ ಕುಮಾರ್, ರವಿ ಹೆಗಡೆ, ಕೆ.ಎಸ್.ಸಚ್ಚಿದಾನಂದ ಮೂರ್ತಿ (ಸಚ್ಚಿ), ತಿಮ್ಮಪ್ಪ ಭಟ್, ಎ.ಬಾಲಚಂದ್ರ, ವೆಂಕಟನಾರಾಯಣ, ರಾಮಣ್ಣ ಎಚ್. ಕೋಡಿ ಹೊಸಹಳ್ಳಿ, ತುಂಗಾ ರೇಣುಕ, ಕೆ.ವಿ.ಪ್ರಭಾಕರ್, ಡಿ.ಸಿ.ನಾಗೇಶ್, ರಾಜಶೇಖರ ಹತ್ ಗುಂದಿ, ವೇದಂ ಜಯಶಂಕರ್, ರಾಜಶೇಖರ ಅಬ್ಬೂರು, ಶಿವಾಜಿ ಗಣೇಶನ್ ಅವರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

    ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ಬದ್ರುದ್ದೀನ್ ಕೆ. ಮಾಣಿ, ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದರಿಂದ ನನ್ನ ಜವಾಬ್ದಾರಿ ಹೆಚ್ಚಾದಂತೆ ಅನಿಸುತ್ತಿದೆ. ಈ ಪ್ರಶಸ್ತಿಯನ್ನು ದೃಶ್ಯ ಮಾಧ್ಯಮದ ನನ್ನ ಎಲ್ಲಾ ಗೆಳೆಯರಿಗೆ ಸಮರ್ಪಿಸುತ್ತೇನೆ. ನನ್ನನ್ನು ಗುರುತಿಸಿ ಬೆಳೆಸಿದಂತಹ ಪಬ್ಲಿಕ್ ಟಿವಿಗೆ ನಾನು ಆಭಾರಿಯಾಗಿದ್ದೇನೆ. ಕಳೆದ ನಾಲ್ಕು ವರ್ಷದಿಂದ ರಾಜಕೀಯ ವಿಭಾಗದಲ್ಲಿ ನನಗೆ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ. ಈ ಪ್ರಶಸ್ತಿಯು ನನ್ನ ಪಬ್ಲಿಕ್ ಟಿವಿ ಸಂಸ್ಥೆಗೂ ಸಲ್ಲುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv