Tag: ಪತ್ರಕರ್ತರು

  • ಪತ್ರಕರ್ತರು ಜನರ ಧ್ವನಿಯಾಗಿ ಕೆಲಸ ಮಾಡಬೇಕು: ಎಸ್.ಪಿ ಋಷಿಕೇಶ್ ಸೋನಾವಣೆ

    ಪತ್ರಕರ್ತರು ಜನರ ಧ್ವನಿಯಾಗಿ ಕೆಲಸ ಮಾಡಬೇಕು: ಎಸ್.ಪಿ ಋಷಿಕೇಶ್ ಸೋನಾವಣೆ

    -“ಪತ್ರಿಕಾ ದಿನಾಚರಣೆ- ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ”

    ಮಂಗಳೂರು: ಪ್ರಜಾಪ್ರಭುತ್ವದ ಪ್ರಮುಖ ಅಂಗವಾಗಿರುವ ಪತ್ರಕರ್ತರು ಸಮಾಜದಲ್ಲಿ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡಿದಾಗ ಅದಕ್ಕೆ ಪೂರಕವಾಗಿ ಇಲಾಖೆಯಿಂದಲೂ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಅಭಿಪ್ರಾಯಪಟ್ಟಿದ್ದಾರೆ.

    ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳೂರು ಪ್ರೆಸ್‍ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ನ ಸಹಕಾರದಲ್ಲಿ ಆಯೋಜಿಸಲಾದ ಪತ್ರಿಕಾ ದಿನಾಚರಣೆ ಹಾಗೂ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಋಷಿಕೇಶ್ ಸೋನಾವಣೆ ಅವರು, ಧನಾತ್ಮಕ ಪ್ರತಿಕ್ರಿಯೆಯ ಕಾರ್ಯವಿಧಾನ ಸಮಾಜದಲ್ಲಿ ಅಭಿವೃದ್ಧಿಯ ದಿಕ್ಕಿನಲ್ಲಿ ಅತೀ ಅಗತ್ಯವಾಗಿದ್ದು, ಪತ್ರಕರ್ತರು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.

    ಈ ಸಂದರ್ಭ ಕನ್ನಡ ಪ್ರಭ ಪತ್ರಿಕೆಯ ಹಿರಿಯ ವರದಿಗಾರ ಡಾ. ಸಂದೀಪ್ ವಾಗ್ಲೆ ಅವರಿಗೆ ಪ್ರಸಕ್ತ ಸಾಲಿನ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ ಮಾಡಲಾಯಿತು.

    ನಾಳೆಯ ಪತ್ರಕರ್ತರು: ಉಪನ್ಯಾಸ
    ಹಿರಿಯ ಪತ್ರಕರ್ತ ಜೋಗಿ (ಗಿರೀಶ್ ರಾವ್ ಹತ್ವಾರ್) ಅವರು ನಾಳೆಯ ಪತ್ರಕರ್ತರು ಎಂಬ ವಿಷಯದ ಕುರಿತು ಮಾತನಾಡಿ, ಪತ್ರಿಕೋದ್ಯಮದಲ್ಲಿ ಮುಂದಿನ 10 ವರ್ಷಗಳಲ್ಲಿ ನಿರೀಕ್ಷಿಸಲಾಗಿದ್ದ ಸ್ಥಿತ್ಯಂತರವನ್ನು ಕೊರೊನದಿಂದಾಗಿ ಕಳೆದ ಎರಡು ವರ್ಷಗಳಲ್ಲೇ ಅನುಭವಿಸುವಂತಾಗಿದೆ. ಕೊರೊನ ಸಾಂಕ್ರಾಮಿಕದಿಂದಾಗಿ ಬಹಳಷ್ಟು ಪತ್ರಿಕೆಗಳ ಮುದ್ರಣ ನಿಂತು ಹೋಗಿ ಆನ್‍ಲೈನ್ ಪತ್ರಿಕೆಯಾಗಿ ಹೊಸ ಸ್ವರೂಪವನ್ನು ಪಡೆಯುತ್ತಿದೆ. ಕಳೆದ ಹಲವು ವರ್ಷಗಳಿಂದಲೂ ಮುದ್ರಣ ಮಾಧ್ಯಮ ಕೊನೆಯಾಗುತ್ತದೆ ಎಂಬ ಭೀತಿಯನ್ನೇ ಎದುರಿಸುತ್ತಿದೆ. ಆದರೆ ವಾಸ್ತವದಲ್ಲಿ ಮುದ್ರಣ ಮಾಧ್ಯಮ ಕಾಲಕ್ಕನುಸಾರವಾಗಿ ಹೊಸ ಸ್ವರೂಪ, ವಿನ್ಯಾಸದೊಂದಿಗೆ ನಮಗೆ ಲಭ್ಯವಾಗುತ್ತದೆ. ಮುದ್ರಣ ಮಾಧ್ಯಮಕ್ಕೆ ಇರುವ ನಂಬಿಕೆ ಇದಕ್ಕೆ ಕಾರಣ ಎಂದು ಸಂವಾದದ ವೇಳೆ ಕಿರಿಯ ಪತ್ರಕರ್ತರೊಬ್ಬರ ಪ್ರಶ್ನೆಗೆ ಜೋಗಿಯವರು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಅಂಬುಲೆನ್ಸ್‌ಗೆ ದಾರಿ ಬಿಡದೇ ಕಿ.ಮೀಗಟ್ಟಲೇ ಚಾಲನೆ – ಕಾರು ಚಾಲಕ ಅರೆಸ್ಟ್

    ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿರಾಜ್ ಎಚ್.ಜಿ, ಮಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಬಿ ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು. ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.

  • ಆರ್ಥಿಕ ಸಂಕಷ್ಟದಲ್ಲಿರುವ ಪತ್ರಕರ್ತರಿಗೂ ನೆರವು ನೀಡಲು ಸಿಎಂಗೆ ಮನವಿ

    ಆರ್ಥಿಕ ಸಂಕಷ್ಟದಲ್ಲಿರುವ ಪತ್ರಕರ್ತರಿಗೂ ನೆರವು ನೀಡಲು ಸಿಎಂಗೆ ಮನವಿ

    ಬೆಂಗಳೂರು: ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ತಮಿಳುನಾಡಿನ ಮಾದರಿ ಪರಿಹಾರ ನೀಡಬೇಕೆಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಒತ್ತಾಯಿಸಿದ್ದು, ಸಿಎಂ ಯಡಿಯೂರಪ್ಪ ಪರಿಶೀಲನೆ ಮಾಡುವ ಭರವಸೆ ನೀಡಿದ್ದಾರೆ.

    ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರನ್ನು ಭೇಟಿ ಮಾಡಿ, ಕೋವಿಡ್ ಲಾಕ್‍ಡೌನ್ ಕಾರಣದಿಂದಾಗಿ ಮಾಧ್ಯಮಗಳು ಸಂಕಷ್ಟದಲ್ಲಿ ಸಿಲುಕಿದ್ದು, ಇದೇ ವೃತ್ತಿ ಅವಲಂಬಿಸಿರುವ ಹಲವು ಪತ್ರಕರ್ತರ ಬದುಕು ಕೂಡ ಅಯೋಮಯವಾಗಿದೆ. ಗ್ರಾಮೀಣ ಪತ್ರಕರ್ತರ ಪರಿಸ್ಥಿತಿ ಕೂಡ ಬಹಳ ಕಷ್ಟದಲ್ಲಿದೆ. ಇದನ್ನೂ ಓದಿ: ಲಾಕ್‍ಡೌನ್ ಪೂರ್ಣಗೊಂಡ ತಕ್ಷಣ ಶಿಕ್ಷಕರ ಹಾಜರಿಗೆ ಸೂಚನೆ: ಸುರೇಶ್ ಕುಮಾರ್

    ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ, ಪತ್ರಕರ್ತರಿಗೆ (ತಮಿಳುನಾಡಿನಲ್ಲಿ ತಲಾ 5 ಸಾವಿರ ನೀಡಿದ ಮಾದರಿಯಲ್ಲಿ) ಹಲವು ರಾಜ್ಯಗಳಲ್ಲಿ ನೆರವು ನೀಡಲಾಗಿದೆ. ಅದೇ ರೀತಿ ರಾಜ್ಯದಲ್ಲಿಯೂ ತಲಾ 10 ಸಾವಿರ ನೆರವು ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದೇ ಸಂದರ್ಭದಲ್ಲಿ ನಾಗರಾಜ್ ಅವರಿಗೆ ಚಿಕಿತ್ಸೆ ಭಾಗವಾಗಿ ಒಂದು ಲಕ್ಷ ರೂ. ನೆರವನ್ನು ಮುಖ್ಯಮಂತ್ರಿ ಮಂಜೂರು ಮಾಡಿದರು. ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ: ಸಿಎಂ ಘೋಷಣೆ

  • ಕೊರೊನಾದಿಂದ ಮೃತಪಟ್ಟ ಪತ್ರಕರ್ತರಿಗೆ 10 ಲಕ್ಷ ಪರಿಹಾರ: ಸಿಎಂ ಯೋಗಿ ಆದಿತ್ಯನಾಥ್

    ಕೊರೊನಾದಿಂದ ಮೃತಪಟ್ಟ ಪತ್ರಕರ್ತರಿಗೆ 10 ಲಕ್ಷ ಪರಿಹಾರ: ಸಿಎಂ ಯೋಗಿ ಆದಿತ್ಯನಾಥ್

    ಲಕ್ನೋ: ಕೊರೊನಾದಿಂದ ಸಾವನ್ನಪ್ಪಿದ ಪತ್ರಕರ್ತರ ಕುಟುಂಬಕ್ಕೆ 10 ಲಕ್ಷ ರೂ. ಆರ್ಥಿಕ ನೆರವು ನೀಡುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.

    ಹಿಂದಿ ಪತ್ರಿಕೋದ್ಯಮ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಚಳವಳಿಯಿಂದ ಇಂದಿನವರೆಗೂ ಹಿಂದಿ ಪತ್ರಿಕೋದ್ಯಮ ಸಾಮಾಜಿಕ ಜಾಗೃತಿ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಅಭೂತಪೂರ್ವ ಕೊಡುಗೆ ನೀಡಿದೆ. ಹಿಂದಿ ಪತ್ರಿಕೋದ್ಯಮದ ಎಲ್ಲ ಪತ್ರಕರ್ತರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು. ಪತ್ರಕರ್ತರಿಗೆ ಎಲ್ಲ ಬೆಂಬಲ ನೀಡಲು ಸರ್ಕಾರ ಬದ್ಧವಾಗಿದ್ದು, ಅವರನ್ನು ಪ್ರೋತ್ಸಾಹಿಸುವುದನ್ನು ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.

    ಪ್ರಸ್ತುತ ಸವಾಲಿನ ಸಂದರ್ಭದಲ್ಲಿ ಪತ್ರಕರ್ತರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು 24×7  ಕೆಲಸ ಮಾಡಿ ನಮಗೆ ಮಾಹಿತಿಯನ್ನು ತಲುಪಿಸುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಕೊರೊನಾ ಎರಡನೆ ಅಲೆ ವೇಳೆ ದೇಶಾದ್ಯಂತ ಅನೇಕ ಪತ್ರಕರ್ತರು ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ಅವರ ಕುಟುಂಬಗಳು ಅಸಹಾಯಕರಾಗಿದ್ದಾರೆ ಎಂದು ಯುಪಿ ಸರ್ಕಾರ ತಿಳಿಸಿದೆ. ಇದನ್ನು ಓದಿ: ದೆಹಲಿ, ಕೇರಳದಲ್ಲಿ ಲಾಕ್‍ಡೌನ್ ವಿಸ್ತರಣೆ

  • ಉಡುಪಿಯಲ್ಲಿ ಪತ್ರಕರ್ತರಿಗೆ ಕೊರೊನಾ ವ್ಯಾಕ್ಸಿನೇಶನ್ ಕ್ಯಾಂಪ್

    ಉಡುಪಿಯಲ್ಲಿ ಪತ್ರಕರ್ತರಿಗೆ ಕೊರೊನಾ ವ್ಯಾಕ್ಸಿನೇಶನ್ ಕ್ಯಾಂಪ್

    ಉಡುಪಿ: ಕರ್ನಾಟಕದ ಪತ್ರಕರ್ತರು ಮತ್ತು ಮಾಧ್ಯಮದವರನ್ನು ರಾಜ್ಯ ಸರ್ಕಾರ ಕೊರೊನಾ ಫ್ರಂಟ್ ಲೈನ್ ವಾರಿಯರ್ಸ್ ಎಂಬುದಾಗಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಯಿತು.

    ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಉಡುಪಿ ಜಿಲ್ಲೆಯ ಪತ್ರಕರ್ತರಿಗೆ ಕೋವಿಶೀಲ್ಡ್ ಮೊದಲ ಡೋಸನ್ನು ನೀಡುವ ಲಸಿಕೆ ಅಭಿಯಾನ ಇಂದು ನಡೆಯಿತು. ಉಡುಪಿಯ ಬ್ರಹ್ಮಗಿರಿ ಪ್ರೆಸ್‍ಕ್ಲಬ್ ಸಮೀಪದ ಐಎಂಎ ಭವನದಲ್ಲಿ ಉಚಿತ ಲಸಿಕೆ ನೀಡುವ ಕಾರ್ಯಕ್ಕೆ ಬೆಳಿಗ್ಗೆ ಚಾಲನೆ ನೀಡಲಾಯಿತು. ಉಡುಪಿ ಡಿಎಚ್‍ಒ ಡಾ. ಸುಧೀರ್ ಚಂದ್ರಚೂಡ, ಲಸಿಕಾ ನೋಡೆಲ್ ಅಧಿಕಾರಿ ಡಾ. ಎಂ.ಜಿ. ರಾಮ, ಅಭಿಯಾನ ಸಂದರ್ಭದಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡಿದರು.

    ಉಡುಪಿ ನಗರ, ಕಾರ್ಕಳ, ಕುಂದಾಪುರ, ಬ್ರಹ್ಮಾವರ, ಹೆಬ್ರಿ, ಕಾಪು ಸಹಿತ ಜಿಲ್ಲೆಯ 128 ಜನ ಪತ್ರಕರ್ತರು ಈ ಲಸಿಕೆ ಅಭಿಯಾನದಲ್ಲಿ ಭಾಗವಹಿಸಿ ಲಸಿಕೆ ಪಡೆದುಕೊಂಡರು. ಈಗಾಗಲೇ ಕೋವಿಶೀಲ್ಡ್ ಒಂದನೇ ಡೋಸ್ ಪಡೆದು ಅವಧಿ ಮೀರಿದವರಿಗೆ ಎರಡನೇ ಡೋಸ್ ಪಡೆಯಲು ಇಲ್ಲಿ ಅವಕಾಶ ಕಲ್ಪಿಸಲಾಯಿತು.

    ಉಡುಪಿ ಜಿಲ್ಲಾಡಳಿತ ಆರೋಗ್ಯ ಇಲಾಖೆ ಮತ್ತು ಲಸಿಕಾ ಅಭಿಯಾನಕ್ಕೆ ಸಹಕರಿಸಿದ ಐಎಂಎ ಅಧ್ಯಕ್ಷರು ಸದಸ್ಯರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಕೃತಜ್ಞತೆ ಸಲ್ಲಿಸಿದ್ದಾರು.

  • ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಿಎಂಗೆ ಅಭಿನಂದನೆ

    ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಿಎಂಗೆ ಅಭಿನಂದನೆ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ಪತ್ರಕರ್ತರನ್ನು ಫ್ರಂಟ್ ಲೈನ್ ವರ್ಕರ್ಸ್ ಎಂದು ಘೋಷಿಸಿದ್ದಾರೆ. ಈ ಸಂಬಂಧ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಿಎಂ ಅವರಿಗೆ ಅಭಿನಂದನೆ ಸಲ್ಲಿಸಲಾಗಿದೆ.

    ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (KUWJ) ಮನವಿಯನ್ನು ಪುರಸ್ಕರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪತ್ರಕರ್ತರನ್ನು ಕೋವಿಡ್ ಫ್ರಂಟ್ ಲೈನ್ ವರ್ಕರ್ಸ್ ಎಂದು ಘೋಷಣೆ ಮಾಡಿದ್ದಾರೆ.

    ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದಲ್ಲಿ ಇಂದು ಮುಖ್ಯಮಂತ್ರಿ ಭೇಟಿ ಮಾಡಿದ ನಿಯೋಗಕ್ಕೆ ಭರವಸೆ ನೀಡಿದ್ದಲ್ಲದೆ, ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ. ನಿಯೋಗದಲ್ಲಿ ಪಬ್ಲಿಕ್ ಟಿವಿ ಪ್ರತಿನಿಧಿ ರವೀಶ್, ಪತ್ರಕರ್ತರಾದ ರಾಚಪ್ಪ, ಅರುಣ್ ಕುಮಾರ್ ಮತ್ತಿತರರು ಹಾಜರಿದ್ದರು.

    ಕೆಯುಡಬ್ಲ್ಯೂಜೆ ಮನವಿ ಪರಿಗಣಿಸಿ ಈ ಕ್ರಮ ಕೈಗೊಂಡ ಯಡಿಯೂರಪ್ಪ ಅವರನ್ನು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಭಿನಂದಿಸಿದ್ದಾರೆ.

  • ಮಂಗಳೂರು ಪ್ರೆಸ್‍ಕ್ಲಬ್ ಗೌರವ ಸನ್ಮಾನಕ್ಕೆ ಪತ್ರಕರ್ತರ ಆಯ್ಕೆ

    ಮಂಗಳೂರು ಪ್ರೆಸ್‍ಕ್ಲಬ್ ಗೌರವ ಸನ್ಮಾನಕ್ಕೆ ಪತ್ರಕರ್ತರ ಆಯ್ಕೆ

    ಮಂಗಳೂರು: ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪ್ರತಿ ವರ್ಷ ಪ್ರೆಸ್ ಕ್ಲಬ್ ದಿನಾಚರಣೆ ಅಂಗವಾಗಿ ಹಿರಿಯ ಪತ್ರಕರ್ತರಿಗೆ ಮಂಗಳೂರು ಪ್ರೆಸ್ ಕ್ಲಬ್ ಗೌರವ ಸನ್ಮಾನ ನೆರವೇರಿಸಲಾಗುತ್ತಿದ್ದು, ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.

    ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರ ಹಿರಿತನ, ಸೇವಾವಧಿಯನ್ನು ಪರಿಗಣಿಸಿ ಮಂಗಳೂರು ಪ್ರೆಸ್ ಕ್ಲಬ್ ಸಮಿತಿ ಗೌರವ ಸನ್ಮಾನಕ್ಕೆ ಪತ್ರಕರ್ತರನ್ನು ಆಯ್ಕೆ ಮಾಡಿದೆ.

    2021ನೇ ಸಾಲಿನಲ್ಲಿ ಹಿರಿಯ ಪತ್ರಕರ್ತರಾದ ಕೇಶವ ಕುಂದರ್, ಹಿಲರಿ ಕ್ರಾಸ್ತಾ(ಉದಯವಾಣಿ), ಕೆ.ಆನಂದ ಶೆಟ್ಟಿ, ಗುರುವಪ್ಪ.ಎನ್.ಟಿ.ಬಾಳೆಪುಣಿ (ಹೊಸ ದಿಗಂತ), ಯು.ಕೆ.ಕುಮಾರ್‍ನಾಥ್, ಸುಧಾಕರ ಎರ್ಮಾಳ್ (ವಿಜಯ ಕರ್ನಾಟಕ), ಜಗನ್ನಾಥ ಶೆಟ್ಟಿ ಬಾಳ (ಜಯಕಿರಣ), ಪಿ.ಬಿ.ಹರೀಶ್ ರೈ(ವಿಜಯವಾಣಿ), ಎಸ್.ಜಯರಾಮ್ (ಪಿಟಿಐ) ಅವರು ಗೌರವ ಸನ್ಮಾನಕ್ಕೆ
    ಆಯ್ಕೆಯಾಗಿದ್ದಾರೆ.

    ಮಾ.21ರಂದು ಬೆಳಗ್ಗೆ 11ಕ್ಕೆ ರಾಣಿ ಅಬ್ಬಕ್ಕ ಕ್ರೂಸ್‍ನಲ್ಲಿ ನಡೆಯಲಿರುವ ಪ್ರೆಸ್‍ಕ್ಲಬ್ ದಿನಾಚರಣೆಯಲ್ಲಿ ಡಾ.ಎಂ.ಮೋಹನ ಅಳ್ವ ಅವರು ಗೌರವ ಸನ್ಮಾನ ನೆರವೇರಿಸಲಿದ್ದಾರೆ ಎಂದು ಮಂಗಳೂರು ಪ್ರೆಸ್ ಕ್ಲಬ್‍ನ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆರಿಫ್ ತಿಳಿಸಿದ್ದಾರೆ.

  • ರಾಜ್ಯದ ಎಲ್ಲ ಪ್ರೇಕ್ಷಣೀಯ ಸ್ಥಳಗಳಿಗೆ ಕಾಯಕಲ್ಪ: ಯೋಗೇಶ್ವರ್

    ರಾಜ್ಯದ ಎಲ್ಲ ಪ್ರೇಕ್ಷಣೀಯ ಸ್ಥಳಗಳಿಗೆ ಕಾಯಕಲ್ಪ: ಯೋಗೇಶ್ವರ್

    ಮಂಗಳೂರು: ರಾಜ್ಯದ ಎಲ್ಲ ಪ್ರೇಕ್ಷಣೀಯ ಸ್ಥಳಗಳಿಗೆ ಕಾಯಕಲ್ಪ ನೀಡುವ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುವುದು ಎಂದು ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.

    ನಗರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ಸಹಭಾಗಿತ್ವದಲ್ಲಿ ಆರಂಭಿಸಲಾಗಿರುವ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಚಾಲನೆ ನೀಡಿ ಮಾತನಾಡಿದರು.

    ಕೆರೆಕಟ್ಟೆ ತುಂಬಿಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದರಿಂದ ಸಣ್ಣ ನೀರಾವರಿ ಇಲಾಖೆಯ ಸಚಿವನಾಗುವ ನಿರೀಕ್ಷೆಯಲ್ಲಿದ್ದೆ. ಆದರೆ ಆಕಸ್ಮಿಕವಾಗಿ ಪ್ರವಾಸೋದ್ಯಮ ಇಲಾಖೆ ದೊರೆಕಿದ್ದು, ಅಭಿವೃದ್ಧಿಯ ದೃಷ್ಟಿಯಿಂದ ಬಹಳಷ್ಟು ಆಲೋಚನೆ ಮಾಡಿದ್ದೇನೆ. ಈಗಾಗಲೇ ಮೈಸೂರು ಹಾಗೂ ಮಂಗಳೂರಿಗೆ ತಲಾ ಎರಡು ಬಾರಿ ಭೇಟಿ ನೀಡಿರುವುದಾಗಿ ತಿಳಿಸಿದರು.

    ಈ ಸಂದರ್ಭದಲ್ಲಿ ಸಚಿವ ಯೋಗೇಶ್ವರ್ ಹಾಗೂ ಮಾಜಿ ಸಚಿವ ಕೃಷ್ಣ.ಜೆ.ಪಾಲೆಮಾರ್ ವೈಯಕ್ತಿಕವಾಗಿ ತಲಾ 5 ಲಕ್ಷ ರೂ.ಗಳ ದೇಣಿಗೆಯನ್ನು ಘೋಷಿಸಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು.

    ಮೇಯರ್ ಪ್ರೇಮಾನಂದ ಶೆಟ್ಟಿ, ಪತ್ರಕರ್ತರ ಬೇಡಿಕೆಗಳಿಗೆ ಸರ್ಕಾರದ ಸೂಚನೆ ನಿಯಮಗಳ ಮೇರೆಗೆ ಪಾಲಿಕೆ ವತಿಯಿಂದ ಸಹಕಾರ ನೀಡಲಾಗುವುದು ಎಂದರು.

    ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕರಾದ ಕುಮಾರ್ ಪುಷ್ಕರ್ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಆನಂದ್ ಶೆಟ್ಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ್ ಶೆಟ್ಟಿ ಬಾಳ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಹಿರಿಯ ಪತ್ರಕರ್ತ ಬಿ.ರವೀಂದ್ರ ಶೆಟ್ಟಿ ಉಪಸ್ಥಿರಿದ್ದರು.

  • ಪತ್ರಕರ್ತರ ಗ್ರಾಮ ವಾಸ್ತವ್ಯ ಪೂರ್ವ ತಯಾರಿ ಸಭೆ

    ಪತ್ರಕರ್ತರ ಗ್ರಾಮ ವಾಸ್ತವ್ಯ ಪೂರ್ವ ತಯಾರಿ ಸಭೆ

    ಮಂಗಳೂರು: ಸರಕಾರಿ ಕಾರ್ಯಕ್ರಮಗಳನ್ನು ಜನರ ಬಳಿ ತಲುಪಿಸಲು ಅಧಿಕಾರಿಗಳ ಹಾಗೂ ಜನಸಹಭಾಗಿತ್ವದ ಗ್ರಾಮ ವಾಸ್ತವ್ಯ ಮಹತ್ವದ ಕಾರ್ಯಕ್ರಮ ಎಂದು ಪುತ್ತೂರು ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ತಿಳಿಸಿದ್ದಾರೆ.

    ಅವರು ಕಡಬ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳೂರು, ಕಡಬ ತಾಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ಜ.31 ರಂದು ಕಡಬದ ಕೊಂಬಾರು ಹಿ.ಪ್ರಾ ಶಾಲೆಯಲ್ಲಿ ನಡೆಯಲಿರುವ ಪತ್ರಕರ್ತರ ಗ್ರಾಮ ವಾಸ್ತವ್ಯ ಮತ್ತು ಜಾಗೃತಿ ಶಿಬಿರದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

    ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು ಅಧಿಕಾರಿಗಳ ಹೊಣೆಗಾರಿಕೆಯಾಗಿದ್ದು ಈ ನಿಟ್ಟಿನಲ್ಲಿ ಪತ್ರಕರ್ತರು ಸ್ವಯಂ ಪ್ರೇರಿತರಾಗಿ ಗ್ರಾಮಾಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.

    ಈಗಾಗಲೇ ಸರಕಾರದ ಕಂದಾಯ ಸಚಿವರು ನೀಡಿದ ಸೂಚನೆಯ ಪ್ರಕಾರ ಪ್ರತಿ ತಿಂಗಳ ಮೂರನೇ ಶನಿವಾರ ಕಂದಾಯ ಇಲಾಖೆಗೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದರಿಂದ ಜನರ ಸಮಸ್ಯೆ ಪರಿಹರಿಸಲು ಸಹಕಾರಿಯಾಗಲಿದೆ ಎಂದು ಡಾ.ಯತೀಶ್ ಉಳ್ಳಾಲ್ ತಿಳಿಸಿದ್ದಾರೆ.

    ಈ ಸಂದರ್ಭದಲ್ಲಿ ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಹಶೀಲ್ದಾರ್ ಅನಂತ ಶಂಕರ,ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಉಮೇಶ್ ಉಪ್ಪಳಿಗೆ,ದ.ಕ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಕೋಶಾಧಿಕಾರಿ ಪುಷ್ಪರಾಜ ಬಿ.ಎನ್, ಕಾರ್ಯದರ್ಶಿ ಸಿದ್ದಿಕ್ ನೀರಾಜೆ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ ರೈ ಕಟ್ಟ, ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಎನ್.ಕೆ, ಸ್ಥಾಪಕಾಧ್ಯಕ್ಷ ಬಾಲಕೃಷ್ಣ ಕೊಯಿಲ, ಕಾರ್ಯದರ್ಶಿ ವಿಜಯ ಕುಮಾರ್ ಪೆರ್ಲ, ಮೊದಲಾದವರು ಉಪಸ್ಥಿತರಿದ್ದರು.

  • ಕುಂದಾಪುರದ ನಕಲಿ ಪತ್ರಕರ್ತರಿಗೆ ಉಡುಪಿಯಲ್ಲಿ ಗೂಸಾ

    ಕುಂದಾಪುರದ ನಕಲಿ ಪತ್ರಕರ್ತರಿಗೆ ಉಡುಪಿಯಲ್ಲಿ ಗೂಸಾ

    ಉಡುಪಿ: ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ನಕಲಿ ಪತ್ರಕರ್ತರಿಗೆ ಉಡುಪಿಯಲ್ಲಿ ಹಿಗ್ಗಾಮುಗ್ಗಾ ಗೂಸಾ ಬಿದ್ದಿದೆ. ಉಡುಪಿ ಜಿಲ್ಲೆ ಮಲ್ಪೆ ಸಮೀಪದ ರೆಸಾರ್ಟ್ ಮಾಲೀಕರೊಬ್ಬರಿಗೆ ಕುಂದಾಪುರ ಮೂಲದ ತಂಡವೊಂದು ಕಿರುಕುಳ ನೀಡುತ್ತಿತ್ತು.

    ಹಣಕ್ಕಾಗಿ ಪೀಡಿಸುತ್ತಿದ್ದ ನಕಲಿ ಪತ್ರಕರ್ತರ ಗ್ಯಾಂಗ್ ಕಳೆದ ಒಂದು ತಿಂಗಳಿಂದ ಬ್ಲ್ಯಾಕ್‌ಮೇಲ್ ಮಾಡುತ್ತಿತ್ತು. ರೆಸಾರ್ಟ್ ಸಿಬ್ಬಂದಿ ನಕಲಿ ಪತ್ರಕರ್ತರನ್ನು ಉಡುಪಿಗೆ ಕರೆಸಿ ಹಣ ನೀಡುವುದಾಗಿ ಹೇಳಿ ಹಿಗ್ಗಾಮುಗ್ಗಾ ಕಜ್ಜಾಯ ಕೊಟ್ಟಿದ್ದಾರೆ. ಸುಮಾರು ಒಂದು ಕಿಲೋಮೀಟರ್ ದೂರ ಅಟ್ಟಾಡಿಸಿಕೊಂಡು ಹೋಗಿ ಚಳಿ ಬಿಡಿಸಿದ್ದಾರೆ.

    ಹಣ ಪಡೆಯಲು ಬಂದ ತಂಡಕ್ಕೆ ರೆಸಾರ್ಟ್‌ ಸಿಬ್ಬಂದಿಗಳು ಧರ್ಮದೇಟು ನೀಡಿದ ವೀಡಿಯೋ ಲಭ್ಯವಾಗಿದೆ. ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿದ ನಂತರ ಧರ್ಮದೇಟು ನಿಂತಿದೆ. ರೆಸಾರ್ಟ್ ಸಿಬ್ಬಂದಿ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  • ಶ್ರೀಕಂಠೇಗೌಡ ಮತ್ತೆ ಉದ್ಧಟತನ – ತಪ್ಪು ಒಪ್ಪಿಕೊಳ್ಳದೇ ಪತ್ರಕರ್ತರ ವಿರುದ್ಧವೇ ದೂರು

    ಶ್ರೀಕಂಠೇಗೌಡ ಮತ್ತೆ ಉದ್ಧಟತನ – ತಪ್ಪು ಒಪ್ಪಿಕೊಳ್ಳದೇ ಪತ್ರಕರ್ತರ ವಿರುದ್ಧವೇ ದೂರು

    ಮಂಡ್ಯ: ಜೆಡಿಎಸ್ ಎಂಎಲ್‍ಸಿ ಕೆ.ಟಿ.ಶ್ರೀಕಂಠೇಗೌಡ ಗೂಡಾಂಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಒಪ್ಪಿಕೊಳ್ಳದೇ ಪತ್ರಕರ್ತರ ವಿರುದ್ಧವೇ ದೂರು ದಾಖಲಿಸಿದ್ದಾರೆ.

    ಎಂಎಲ್‍ಸಿ ಕೆ.ಟಿ.ಶ್ರೀಕಂಠೇಗೌಡ ಹಾಗೂ ಪುತ್ರ ನಾಲ್ವರು ಪತ್ರಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ. ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಪತ್ರಕರ್ತರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿತ್ತು. ಈ ವೇಳೆ ಎಂಎಲ್‍ಸಿ ಕೆ.ಟಿ.ಶ್ರೀಕಂಠೇಗೌಡ ಹಾಗೂ ಪುತ್ರ ಬಂದು ಇಲ್ಲಿ ಕೋವಿಡ್ ಟೆಸ್ಟ್ ಮಾಡಬಾರದು ಎಂದು ಗಲಾಟೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶ್ರೀಕಂಠೇಗೌಡರಿಂದ ನಾಲ್ವರು ಪತ್ರಕರ್ತರ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ.

    ಹಲ್ಲೆ ಮತ್ತು ತೇಜೋವಧೆ ಮಾಡಲು ಯತ್ನಿಸಿದರೆಂದು ಶ್ರೀಕಂಠೇಗೌಡರು ದೂರು ನೀಡಿದ್ದಾರೆ. ಪಶ್ಚಿಮ ಠಾಣೆಯಲ್ಲಿ ಎಂಎಲ್‍ಸಿ ಶ್ರೀಕಂಠೇಗೌಡ ದೂರು ಆಧರಿಸಿ ಪತ್ರಕರ್ತರ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

    ಸದ್ಯಕ್ಕೆ ಪತ್ರಕರ್ತರ ಸಂಘ ಕೋರ್ಟ್ ಮೊರೆ ಹೋಗಲು ಚಿಂತನೆ ನಡೆಸಿದೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಸೆಕ್ಷನ್‍ಗಳ ಅಡಿ ದೂರು ದಾಖಲಿಸಿಕೊಳ್ಳಲು ಕೋರ್ಟಿಗೆ ಮನವಿ ಮಾಡಲಿದ್ದಾರೆ. ಮಂಡ್ಯ ಪತ್ರಕರ್ತರ ಸಂಘದಿಂದ ಖಾಸಗಿ ದೂರು ಸಲ್ಲಿಕೆಗೆ ಚಿಂತನೆ ಮಾಡಲಾಗಿದ್ದು, ಜಿಲ್ಲಾಡಳಿತದ ಮೌನ ನಡೆಯಿಂದ ಬೇಸತ್ತು ಪತ್ರಕರ್ತರು ಕೋರ್ಟ್ ಮೊರೆಹೋಗಲಿದ್ದಾರೆ.

    ಪೊಲೀಸರು ದೂರು ದಾಖಲಿಸಿಕೊಳ್ಳುವ ವಿಚಾರದಲ್ಲೂ ನಿರ್ಲಕ್ಷ್ಯ ತೋರಿದ್ದರು. ಈ ಘಟನೆ ನಡೆದ ದಿನ ನಾಲ್ವರು ಪರ್ತಕರ್ತರ ದೂರು ನೀಡಿದ್ದರು. ಆದರೆ ಈ ಪೈಕಿ ಓರ್ವ ಪತ್ರಕರ್ತನ ದೂರು ಆಧರಿಸಿ ಎಂಎಲ್‍ಸಿ ಮತ್ತು ಅವರ ಪುತ್ರನ ವಿರುದ್ಧ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಕ್ಕೆ ಎಫ್‍ಐಆರ್ ದಾಖಲಿಸಿದ್ದರು.

    ಕೊರೊನಾ ವಾರಿಯರ್ಸ್ ಮೇಲೆ ದಾಳಿಗಳು ನಡೆದ್ರೆ, ಅವ್ರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ರೆ ಆರು ತಿಂಗಳಿಂದ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ರಾಜ್ಯ ಸರ್ಕಾರ ಕೂಡ 3 ವರ್ಷ ಜೈಲು ಶಿಕ್ಷೆ ಅಂತ ಸುಗ್ರೀವಾಜ್ಞೆ ಹೊರಡಿಸಿದೆ. ಆದ್ರೆ ಇದು ಗೊತ್ತಿದ್ದರೂ ಜನರಿಗೆ ತಿಳುವಳಿಕೆ ಹೇಳಬೇಕಾದ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಗಲಾಟೆ ಮಾಡಿದ್ದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು. ಗಲಾಟೆ ಮಾಡಿದ ದಿನವೇ ಶ್ರೀಕಂಠೇಗೌಡ ಮತ್ತು ಪುತ್ರ ಕೃಷಿಕ್ ಗೌಡನಿಗೆ ಜೆಎಂಎಫ್‍ಸಿ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.

    ಆರೋಪಿಗಳು ಯಾರು?
    ಎ1 – ಇತರರು (ಅಪರಿಚಿತರು ಎಂದು ಉಲ್ಲೇಖಿಸಲಾಗಿದೆ)
    ಎ2 – ಶ್ರೀಕಂಠೇಗೌಡ, ಎಂಎಲ್‍ಸಿ
    ಎ3 – ಕೃಷಿಕ್ ಗೌಡ, ಶ್ರೀಕಂಠೇಗೌಡರ ಪುತ್ರ
    ಎ4 – ಚಂದ್ರಕಲಾವತಿ, ಶ್ರೀಕಂಠೇಗೌಡರ ಬೆಂಬಲಿಗ
    ಎ5 – ಜಗದೀಶ್, ಶ್ರೀಕಂಠೇಗೌಡರ ಬೆಂಬಲಿಗ
    ಎ6 – ರಾಜು@ ಪಿಳ್ಳೆ, ಶ್ರೀಕಂಠೇಗೌಡರ ಬೆಂಬಲಿಗ

    ಯಾವ್ಯಾವ ಸೆಕ್ಷನ್ ಮೇಲೆ ಕೇಸ್?
    * 143 – ಅಕ್ರಮವಾಗಿ ಗುಂಪು ಸೇರುವಿಕೆ
    * 149 – ಉದ್ದೇಶಪೂರ್ವಕವಾಗಿ ದೊಂಬಿ
    * 341 – ಉದ್ದೇಶಪೂರ್ವಕವಾಗಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು
    * 323 – ಉದ್ದೇಶಪೂರ್ವಕವಾಗಿ ಹಾನಿ ಯತ್ನ
    * 501 – ಜನರನ್ನು ಪ್ರಚೋದಿಸುವ ರೀತಿಯ ನಡವಳಿಕೆ
    * 269 – ಜೀವ ಹಾನಿ ಉಂಟು ಮಾಡುವ ರೋಗ ಹರಡಲು ಯತ್ನ
    * 270 – ರೋಗ ಹರಡುವ ಉದ್ದೇಶದಿಂದ ತಪ್ಪು ಮಾಹಿತಿ
    * 504 – ಜೀವ ಬೆದರಿಕೆ
    * ಎನ್‍ಡಿಎಂಎ ಕಾಯ್ದೆ(ವಿಪತ್ತು ನಿರ್ವಹಣಾ ಕಾಯ್ದೆ 2005) ಸೆಕ್ಷನ್ 51 – ಸಕಾರಣ ಇಲ್ಲದೇ ಕರ್ತವ್ಯಕ್ಕೆ ಅಡ್ಡಿ ಯತ್ನ