Tag: ಪತ್ಯೇಕ ರಾಜ್ಯ

  • ಮೋದಿಯಿಂದ ದೇಶ ವಿಭಜನೆ, ಬಿಎಸ್‍ವೈಯಿಂದ ರಾಜ್ಯ ವಿಭಜನೆ: ಆನಂದ್ ಅಸ್ನೋಟಿಕರ್

    ಮೋದಿಯಿಂದ ದೇಶ ವಿಭಜನೆ, ಬಿಎಸ್‍ವೈಯಿಂದ ರಾಜ್ಯ ವಿಭಜನೆ: ಆನಂದ್ ಅಸ್ನೋಟಿಕರ್

    ಕಾರವಾರ: ಯುವಕರನ್ನು ಬಳಸಿ ಹಿಂದುತ್ವದ ಆಧಾರದ ಮೇಲೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ವಿಭಜನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲಿ ಯಡಿಯೂರಪ್ಪನವರು ಕರ್ನಾಟಕವನ್ನು ವಿಭಜನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕಿಡಿಕಾರಿದ್ದಾರೆ.

    ಪ್ರತ್ಯೇಕ ರಾಜ್ಯ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪ್ರಖ್ಯಾತಿಯನ್ನು ಸಹಿಸಲಾಗದೇ ಯಡಿಯೂರಪ್ಪನವರು ಹಾಗೂ ಬಿಜೆಪಿಯವರು ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡುವ ಕುರಿತು ರೈತರನ್ನು ಬಲಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

    ಬಡ ರೈತರನ್ನು, ಯುವಕರನ್ನು ಬಳಸಿ ಹಿಂದುತ್ವದ ಆಧಾರದ ಮೇಲೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ವಿಭಜನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲಿ ಯಡಿಯೂರಪ್ಪನವರು ಕರ್ನಾಟಕವನ್ನು ವಿಭಜನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಸ್ನೋಟಿಕರ್ ದೂರಿದರು.

    ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುವ ಸಾಧ್ಯತೆಗಳಿಲ್ಲ, ಕೇಂದ್ರದಲ್ಲಿ ಮಂತ್ರಿಯಾಗುತ್ತೇನೆ ಎನ್ನುವ ಉದ್ದೇಶವಿಟ್ಟುಕೊಂಡು ಹೀಗೆ ಮಾಡುತ್ತಿದ್ದಾರೆ. ಇವರ ಮೇಲಿರುವ ಕೇಸುಗಳನ್ನು ಮುಗಿಸಿಕೊಳ್ಳಬೇಕಿದೆ ಹೀಗಾಗಿ ಈ ರೀತಿ ಮಾಡುತ್ತಿದ್ದಾರೆ. ಇದೊಂದು ಪೊಲಿಟಿಕಲ್ ಗೇಮ್. ಮುಂಬರುವ ಲೋಕಸಭಾ ಚುನಾವಣೆಯೇ ಮುಖ್ಯ ಉದ್ದೇಶ ಎಂದು ತಿಳಿಸಿದರು.

    ಅಮಿತ್ ಶಾ ರವರಿಗೆ ಕರ್ನಾಟಕದಲ್ಲಿ ತಾನೇನೋ ಮಾಡುತ ದ್ದೇನೆ ಎಂದು ತೋರಿಸಿಕೊಳ್ಳಲು ಯಡಿಯೂರಪ್ಪನವರು ಹೀಗೆ ಮಾಡುತ್ತಿದ್ದಾರೆ. ಅವರು ಇನ್ನು ಮುಂದೆ ರಾಜ್ಯದ ಮುಖ್ಯಮಂತ್ರಿಯಾಗುವುದಿಲ್ಲ. ಕುಮಾರಸ್ವಾಮಿಯವರ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸುತ್ತದೆ. ತಾವು ವಿರೋಧ ಪಕ್ಷದಲ್ಲಿದ್ದು ರಾಜ್ಯಕ್ಕಾಗಿ ಒಳ್ಳೆಯ ಹೋರಾಟ ಮಾಡಿ ಎಂದು ಯಡಿಯೂರಪ್ಪನವರಿಗೆ ಸಲಹೆ ನೀಡಿದರು.

  • ಸಮಗ್ರ ಕರ್ನಾಟಕವನ್ನು ಕೇಕ್ ನಂತೆ ಕತ್ತರಿಸುವುದು ಸರಿಯಲ್ಲ: ಗಂಗಾವತಿ ಪ್ರಾಣೇಶ್

    ಸಮಗ್ರ ಕರ್ನಾಟಕವನ್ನು ಕೇಕ್ ನಂತೆ ಕತ್ತರಿಸುವುದು ಸರಿಯಲ್ಲ: ಗಂಗಾವತಿ ಪ್ರಾಣೇಶ್

    ಕೊಪ್ಪಳ: ಸಮಗ್ರ ಕರ್ನಾಟಕವನ್ನು ಕೇಕ್ ನಂತೆ ಕತ್ತರಿಸಿ, ಪ್ರತ್ಯೇಕಗೊಳಿಸುವುದು ಸರಿಯಲ್ಲ ಎಂದು ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಅಭಿಪ್ರಾಯಪಟ್ಟಿದ್ದಾರೆ.

    ಕೊಪ್ಪಳದ ಗಂಗಾವತಿಯಲ್ಲಿ ನಡೆಯುತ್ತಿರುವ 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಹಾಸ್ಯ ರೂಪದಲ್ಲಿ ತಮ್ಮ ಭಾಷಣದಲ್ಲಿ ಪ್ರಾಣೇಶ ಪ್ರತಿಕ್ರಿಯೆ ನೀಡಿದ್ದು, ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಕೇಕ್ ಉದಾಹರಣೆಯನ್ನು ತೆಗೆದುಕೊಂಡು, ರಾಜ್ಯವನ್ನು ಕೇಕ್ ನಂತೆ ಕತ್ತರಿಸಿ, ಪ್ರತ್ಯೇಕಗೊಳಿಸುವುದು ಸರಿಯಲ್ಲವೆಂದು ವಿರೋಧ ವ್ಯಕ್ತಪಡಿಸಿದ್ದಾರೆ.

    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ಸರಿಯಲ್ಲ, ಅಖಂಡ ಕರ್ನಾಟಕವಿದ್ದರೆ ರಾಜ್ಯಕ್ಕೆ ಗೌರವ. ಪ್ರತ್ಯೇಕ ರಾಜ್ಯಕ್ಕಿಂತ ಇಲ್ಲಿನ ಸಮಸ್ಯೆಗಳ ಬಗ್ಗೆ ಅವರಿಗೆ ಮನಮುಟ್ಟುವಂತೆ ತಿಳಿಸೋಣ ಜೊತೆಗೆ ಉತ್ತರ ಕರ್ನಾಟಕದ ಸಮಸ್ಯೆಗಳ ಗಮನ ಸೆಳೆಯುವ ಕೆಲಸ ಆಗಬೇಕಾಗಿದೆ ಎಂದು ತಿಳಿಸಿದರು.

    ಪ್ರತ್ಯೇಕ ರಾಜ್ಯಕ್ಕಿಂತ ಇಲ್ಲಿನ ಸಮಸ್ಯೆಗಳ ಪರಿಹಾರದ ಹಾದಿ ಹುಡುಕೋಣ. ಈ ಹಿಂದೆ ಮಹದಾಯಿ ಯೋಜನೆ ಹೋರಾಟ ನಡೆಯುವಾಗ ರೈತರನ್ನು ನಗಿಸುವ ಕೆಲಸ ಮಾಡಿದ್ದೇವೆ. ತುಂಗಭದ್ರಾ ಹೂಳು ತೆಗೆಯುವಾಗ ನಮ್ಮ ಹಾಸ್ಯ ತಂಡ ಭೇಟಿ ನೀಡಿ ಧನ ಸಹಾಯ ಕೂಡ ಮಾಡಿತ್ತು ಎಂದು ನೆನಪಿಸಿಕೊಂಡರು.

    ನಾವು ಉತ್ತರ ಕರ್ನಾಟಕದ ಭಾಷೆ ಬಳಸಿ ಬೆಂಗಳೂರಿನಲ್ಲಿ ದುಡಿಯುತ್ತಿದ್ದೇವೆ. ಹೀಗಾಗಿ ಪ್ರತ್ಯೇಕ ರಾಜ್ಯ ಮಾಡಿದರೆ ಅವರು ನಮ್ಮನ್ನು ಆಹ್ವಾನಿಸುವುದಿಲ್ಲ ಎಂದು ಈ ವೇಳೆ ಹಾಸ್ಯ ಚಟಾಕಿ ಹಾರಿಸಿದರು.

  • ಪ್ರತ್ಯೇಕ ರಾಜ್ಯ ಬಂದ್‍ಗೆ ಬೆಂಬಲ ನೀಡಲ್ಲ- ಉತ್ತರ ಕರ್ನಾಟಕ ಸಂಘಟನೆಗಳಿಂದ ವಿರೋಧ

    ಪ್ರತ್ಯೇಕ ರಾಜ್ಯ ಬಂದ್‍ಗೆ ಬೆಂಬಲ ನೀಡಲ್ಲ- ಉತ್ತರ ಕರ್ನಾಟಕ ಸಂಘಟನೆಗಳಿಂದ ವಿರೋಧ

    ಹುಬ್ಬಳ್ಳಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗಿಗೆ ಅಪಸ್ವರ ಕಂಡುಬಂದಿದ್ದು, ಜಿಲ್ಲೆಯ ಹಲವು ಸಂಘಟನೆಗಳು ಪ್ರತ್ಯೇಕ ರಾಜ್ಯ ಬಂದ್‍ಗೆ ಬೆಂಬಲ ನೀಡಲ್ಲ ಎಂದು ಹೇಳಿವೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಳಸಾ ಸಮನ್ವಯ ಸಮಿತಿ ಹಾಗೂ ವಿವಿಧ ಸಂಘಟನೆಗಳ ಮುಖಂಡರುಗಳು, ಆಗಸ್ಟ್ 2 ರಂದು ಕರೆ ನೀಡಿದ್ದ ಪ್ರತ್ಯೇಕ ರಾಜ್ಯ ಬಂದ್ ಗೆ ನಮ್ಮ ಬೆಂಬಲವಿಲ್ಲ. ಪ್ರತ್ಯೇಕ ರಾಜ್ಯದ ಕೂಗಿಗೆ ಬಿಜೆಪಿಯವರು ಕುಮ್ಮಕ್ಕು ನೀಡುತ್ತಿದ್ದಾರೆಂದು ಆರೋಪಿಸಿದರು.

    ಪ್ರತ್ಯೇಕ ರಾಜ್ಯದ ಕೂಗು ಎತ್ತಿರುವ ಜನಪ್ರತಿನಿಧಿಗಳು ಇದುವರೆಗೂ ಉತ್ತರ ಕರ್ನಾಟಕಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು. ಮೊದಲು ಇಲ್ಲಿನ ಜನಪ್ರತಿನಿಧಿಗಳು ಉತ್ತರ ಕರ್ನಾಟಕ ಅಭಿವೃದ್ದಿಗೆ ಏನು ಕೊಡುಗೆ ಕೊಟ್ಟಿದ್ದಾರೆಂದು ಮನವರಿಕೆ ಮಾಡಿಕೊಳ್ಳಲಿ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿದರು.

    ಪ್ರತ್ಯೇಕತೆಯ ಕೂಗಿಗೆ ಅವಕಾಶ ಕೊಡದೆ, ಅಖಂಡ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಲಿ. ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು. ಸರ್ಕಾರಗಳು ಎಚ್ಚೆತ್ತುಕೊಂಡು ವಿವಿಧ ತಜ್ಞರು ಹಾಗೂ ಚಿಂತಕರ ಜೊತೆ ಚರ್ಚೆ ಮಾಡಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಸಂಪೂರ್ಣ ಚರ್ಚೆ ನಡೆಸಿ ಸಮಗ್ರ ಕರ್ನಾಟಕದ ಅಭಿವೃದ್ದಿಗೆ ಶ್ರಮಿಸಬೇಕೆಂದು ಒತ್ತಾಯಿಸಬೇಕು. ಒಂದು ವೇಳೆ ಹೀಗೆ ನಿರ್ಲಕ್ಷ್ಯ ಮುಂದುವರಿಸಿದರೆ, ಉಗ್ರ ಹೋರಾಟ ಕೈಗೊಳ್ಳುವುದು ನಿಶ್ಚಿತ ಎಂದು ಸಂಘಟನೆಯ ಮುಖಂಡರುಗಳು ತಿಳಿಸಿದರು.

    ಬಂದ್‍ಗೆ ಕಳಸಾ ಸಮನ್ವಯ ಸಮಿತಿ ಸೇರಿದಂತೆ ಕನ್ನಡಪರ ಸಂಘಟನೆ, ರೈತಪರ ಸಂಘಟನೆ, ಆಟೋ ಚಾಲಕರ ಸಂಘಟನೆ ಹಾಗೂ ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿವೆ.