Tag: ಪತ್ನಿಯರು

  • ಪತ್ನಿಗೆ ಹಿಂಸೆ- ದೇಶದಲ್ಲೇ ಕರ್ನಾಟಕ ನಂಬರ್‌ ಒನ್‌

    ಪತ್ನಿಗೆ ಹಿಂಸೆ- ದೇಶದಲ್ಲೇ ಕರ್ನಾಟಕ ನಂಬರ್‌ ಒನ್‌

    ಬೆಂಗಳೂರು: ಹೌದು ಇದು ಇಡೀ ರಾಜ್ಯವೇ ತಲೆ ತಗ್ಗಿಸುವ ಸುದ್ದಿ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿಗಿಲ್ವ ರಕ್ಷಣೆ ಅನ್ನುವ ಪ್ರಶ್ನೆಯನ್ನು ಮೂಡಿಸುತ್ತಿದೆ. ಇನ್ನು ಈ ವಿಚಾರದಲ್ಲಿ ನಮ್ಮ ಕರ್ನಾಟಕ ಬಿಹಾರವನ್ನು ಹಿಂದಿಕ್ಕಿದೆ.

    ಇಡೀ ದೇಶದಲ್ಲಿ ಹೆಂಡತಿಗೆ ಹಿಂಸೆ ಕೊಡುವುದರ ಪೈಕಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ಇದು ಬೆಳಕಿಗೆ ಬಂದಿದ್ದು ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆಯಲ್ಲಿ. ಎನ್‍ಹೆಚ್‍ಎಫ್‍ಎಸ್ ಎಲ್ಲಾ ರಾಜ್ಯಗಳ ಸರ್ವೆಯಲ್ಲಿ ಈ ಆಘಾತಕಾರಿ ಅಂಶ ಬಯಲಾಗಿದೆ.

    ಎನ್‍ಹೆಚ್‍ಎಫ್‍ಎಸ್ ಕೊಟ್ಟ ವರದಿಯಲ್ಲಿ ಏನಿದೆ?
    * ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆಯಲ್ಲಿ ಹೆಂಡತಿ ಹಿಂಸೆಯಲ್ಲಿ ರಾಜ್ಯ ಮೊದಲು.
    * ರಾಜ್ಯದ ಶೇ. 48 ರಷ್ಟು ಮಹಿಳೆಯರು ತಮ್ಮ ಪತಿಯಿಂದಲೇ ಹಿಂಸೆಗೆ ಒಳಪಟ್ಟಿರುವ ಅಂಶ ಬಯಲು.
    * ಬಿಹಾರಗಿಂತ ರಾಜ್ಯದಲ್ಲಿ ಸಂಗಾತಿ ಹಿಂಸೆ ಅಧಿಕ.
    * ಬಿಹಾರದಲ್ಲಿ ಶೇ. 43ರಷ್ಟು ಮಹಿಳೆಯರಿಗೆ ಸಂಗಾತಿ ಹಿಂಸೆ ಪ್ರಕರಣ.
    * ಮಾನಸಿಕ, ದೈಹಿಕ ಹಾಗೂ ಲೈಂಗಿಕ ಹಿಂಸೆಗೆ ಒಳಗಾಗುತ್ತಿರುವ ಮಹಿಳೆಯರು.
    * ಚಿತ್ರಹಿಂಸೆಗೆ ಒಳಪಡುತ್ತಿರುವ ಮಹಿಳೆಯರು.
    * ತನ್ನ ಪತಿಯಿಂದಲೇ ಪತ್ನಿ ದೈಹಿಕ ಹಲ್ಲೆಗೆ ಒಳಪಡುತ್ತಿರುವ ಅಂಶ ಬಯಲು.
    * ಸಂಗಾತಿ ಹಿಂಸೆಯಿಂದ ಹಲವು ರೀತಿಯ ಹಲ್ಲೆ, ಗಾಯಗಳಿಗೆ ತುತ್ತಾಗುತ್ತಿರುವುದು ಪತ್ತೆ.

    ಯಾವ ರೀತಿಯ ಹಲ್ಲೆ?
    * ಪತಿಯಿಂದ ವಿವಿಧ ರೀತಿಯ ಹಲ್ಲೆಗೆ ಒಳಪಡುತ್ತಿರುವ ಮಹಿಳೆ.
    * ಶೇ. 7ರಷ್ಟು ಮಹಿಳೆಯರಿಗೆ ಕಣ್ಣಿನ ಗಾಯ, ಕೈ ಕಾಲು ಮುರಿತ, ಬರೆಯಂತಹ ಹಲ್ಲೆ.
    * ಶೇ. 6ರಷ್ಟು ಮಹಿಳೆಯರಿಗೆ ತೀವ್ರ ತರದ ಗಾಯ, ಮೂಳೆ ಮುರಿತ, ಹಲ್ಲು ಮುರಿತ.
    * ಶೇ. 3ರಷ್ಟು ಮಹಿಳೆಯರಿಗೆ ಬೆಂಕಿಯಿಂದ ಸುಡುವ ಚಿತ್ರಹಿಂಸೆ.

    ಮೌನಕ್ಕೆ ಶರಣಾದ ಮಹಿಳೆಯರೆಷ್ಟು? ಸಹಾಯ ಪಡೆದವರೆಷ್ಟು?
    * ಪತಿಯಿಂದ ಹಿಂಸೆಗೆ ಒಳಪಡುವ ಭಾಗಶಃ ಮಹಿಳೆಯರು ಸಮಾಜಕ್ಕೆ ಹೆದರಿ ಮೌನ.
    * ಶೇ. 58ರಷ್ಟು ಮಹಿಳೆಯರು ತವರು ಮನೆಯವರಿಂದ ಸಹಾಯ ಪಡೆಯಲು ಮುಂದಾಗಿದ್ದಾರೆ.
    * ಶೇ. 27ರಷ್ಟು ಮಹಿಳೆಯರು ಅತ್ತೆ, ಮಾವನ ಮನೆಯವರಿಂದ ಸಹಾಯ ಪಡೆಯಲು ಮುಂದಾಗಿದ್ದಾರೆ.
    * ಶೇ. 9ರಷ್ಟು ಮಹಿಳೆಯರು ಸಂಸ್ಥೆಗಳಿಂದ ಸಹಾಯ ಪಡೆಯಲು ಮುಂದಾಗಿದ್ದಾರೆ.
    * ಶೇ. 2ರಷ್ಟು ಮಹಿಳೆಯರು ಧಾರ್ಮಿಕ ಸಂಸ್ಥೆಗಳಿಂದ ಸಹಾಯ ಪಡೆಯಲು ಮುಂದಾಗಿದ್ದಾರೆ.
    * ಕೇವಲ ಶೇ. 1ರಷ್ಟು ಮಹಿಳೆಯರು ಮಾತ್ರ ಪೊಲೀಸ್ ಹಾಗೂ ವಕೀಲರಿಂದ ಸಹಾಯ ಪಡೆಯಲು ಮುಂದಾಗಿದ್ದಾರೆ.

  • ಮೂವರು ಪತ್ನಿಯರಿಗೆ ಆಸ್ತಿ ಹಂಚಿಕೆ ಭಯ- 6 ಲಕ್ಷ ಸುಪಾರಿ ಕೊಟ್ಟು ಮೊದ್ಲ ಪತ್ನಿಯಿಂದ ಕೊಲೆ

    ಮೂವರು ಪತ್ನಿಯರಿಗೆ ಆಸ್ತಿ ಹಂಚಿಕೆ ಭಯ- 6 ಲಕ್ಷ ಸುಪಾರಿ ಕೊಟ್ಟು ಮೊದ್ಲ ಪತ್ನಿಯಿಂದ ಕೊಲೆ

    – ಕೊಲೆ ಮಾಡಿದ 6 ದಿನದಲ್ಲಿ ಆರೋಪಿಗಳು ಅರೆಸ್ಟ್
    – 3 ವರ್ಷದಲ್ಲಿ ಮೂರು ವಿವಾಹ

    ಲಕ್ನೋ: ಮಹಿಳೆಯೊಬ್ಬಳು ಆಸ್ತಿಗೋಸ್ಕರ ಸುಪಾರಿ ನೀಡಿ ಪತಿಯನ್ನೇ ಕೊಲೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಬಾಗಪತ್‍ನಲ್ಲಿ ನಡೆದಿದೆ.

    ವಿಕಾಸ್ ಸಿಂಗ್ ಕೊಲೆಯಾದ ವ್ಯಕ್ತಿ. ಆರೋಪಿ ಪತ್ನಿ ರಜನಿ ಆರು ಲಕ್ಷ ರೂಪಾಯಿ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾಳೆ. ಆರೋಪಿ ಮಹಿಳೆಯನ್ನು ಗುರುವಾರ ಬಂಧಿಸಲಾಗಿದೆ. ಮೃತನಿಗೆ ನಾಲ್ವರು ಹೆಂಡತಿಯರಿದ್ದು, ಅವರೊಂದಿಗೆ ಆಸ್ತಿಯನ್ನು ಹಂಚಿಕೊಳ್ಳುವುದಕ್ಕೆ ಇಷ್ಟಪಡಲಿಲ್ಲ. ಹೀಗಾಗಿ ಆತನನ್ನು ಕೊಲೆ ಮಾಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ವಿಕಾಸ್ ಸಿಂಗ್ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದನು. ವಿಕಾಸ್ ಸಿಂಗ್ ಕೆಲವು ದಿನಗಳ ಹಿಂದೆ ಬಾಗಪತ್‍ನಲ್ಲಿರುವ ತಮ್ಮ ಗ್ರಾಮಕ್ಕೆ ಬಂದಿದ್ದನು. ಜೂನ್ 19 ರಂದು ಗ್ರಾಮದಲ್ಲಿ ಆತನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ಕೊಲೆಯಾದ ಆರು ದಿನದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಮಹಿಳೆ ದೆಹಲಿಯ ನಂಗ್ಲೋಯಿ ಪ್ರದೇಶದವಳು ಎಂದು ಇನ್ಸ್ ಪೆಕ್ಟರ್ ಪ್ರವೀಣ್ ಕುಮಾರ್ ಹೇಳಿದ್ದಾರೆ.

    ಮೃತ ವಿಕಾಸ್ ಸಿಂಗ್ ಮತ್ತು ಆರೋಪಿ ರಜನಿ 2009ರಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೆ ಮೃತ ವಿಕಾಶ್ ಸಿಂಗ್ 2017 ಮತ್ತು 2020ರ ನಡುವೆ ಮತ್ತೆ ಮೂವರು ಮಹಿಳೆಯರನ್ನು ಮದುವೆಯಾಗಿದ್ದನು. ಇದರಿಂದ ಆರೋಪಿ ರಜನಿಗೆ ತನ್ನ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಶುರುವಾಗಿತ್ತು. ವಿಕಾಸ್ ತನಗೆ ವಿಚ್ಛೇದನ ನೀಡುತ್ತಾನೆ ಮತ್ತು ತನ್ನ ಆಸ್ತಿಯನ್ನು ಮೂವರು ಪತ್ನಿಯರೊಂದಿಗೆ ಹಂಚಿಕೊಳ್ಳುತ್ತಾನೆ ಎಂದು ಆರೋಪಿ ಭಯಪಟ್ಟಿದ್ದಳು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಕೊನೆಗೆ ರಜನಿ ಆಸ್ತಿಗೋಸ್ಕರ ಪತಿಯನ್ನ ಕೊಲೆ ಮಾಡಿಸಲು ಪ್ಲಾನ್ ಮಾಡಿಕೊಂಡಿದ್ದಳು. ಅದರಂತೆಯೇ ಕೊಲೆ ಮಾಡಲು ಕಿಲ್ಲರ್ ಸುಧೀರ್ ಸಿಂಗ್‍ಗೆ ಆರು ಲಕ್ಷ ರೂ. ನೀಡಿದ್ದಳು. ಸುದೀಪ್ ಸಿಂಗ್ ಕೊಲೆ ಮಾಡಲು ಮೂವರು ಸ್ಥಳೀಯ ಶೂಟರ್‌ಗಳನ್ನು ನೇಮಿಸಿದ್ದನು. ನಂತರ ಮೂವರು ವಿಕಾಸ್ ಸಿಂಗ್ ಮನೆಗೆ ಹೋಗಿ ಗುಂಡಿಕ್ಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.

    ಸದ್ಯಕ್ಕೆ ಆರೋಪಿಗಳಾದ ರಜನಿ, ಸುದೀರ್ ಸಿಂಗ್ ಮತ್ತು ರೋಹಿತ್ ಸಿಂಗ್‍ನನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳಾದ ಸಚಿನ್ ಸಿಂಗ್ ಮತ್ತು ರವಿ ಸಿಂಗ್ ಪರಾರಿಯಾಗಿದ್ದಾರೆ.

  • ಡೆಮೋ ಮಾಡಿ ಟಿಕ್‍ಟಾಕ್‍ಗೆ ವಿಡಿಯೋ ಅಪ್ಲೋಡ್- ವ್ಯಕ್ತಿ ನೇಣಿಗೆ ಶರಣು

    ಡೆಮೋ ಮಾಡಿ ಟಿಕ್‍ಟಾಕ್‍ಗೆ ವಿಡಿಯೋ ಅಪ್ಲೋಡ್- ವ್ಯಕ್ತಿ ನೇಣಿಗೆ ಶರಣು

    – ವೈರಲಾಯ್ತು ವಿಡಿಯೋ

    ದಾವಣಗೆರೆ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಟಿಕ್‍ಟಾಕ್‍ನಲ್ಲಿ ವಿಡಿಯೋ ಮಾಡಿಕೊಂಡು ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮಾಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ನಾಗರಾಜು ಅಲಿಯಾಸ್ ರಾಜು (34) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ನಾಗರಾಜ್ ಯಾವಾಗಲೂ ಟಿಕ್‍ಟಾಕ್‍ನಲ್ಲಿಯೇ ಕಾಲ ಕಳೆಯುತ್ತಿದ್ದನು. ಇತ್ತೀಚೆಗೆ ಪತ್ನಿಯ ಜೊತೆ ಜಗಳ ಮಾಡಿಕೊಂಡು ಇಬ್ಬರೂ ದೂರವಾಗಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ನಾಗರಾಜು ಮದ್ಯಪಾನ ವ್ಯಸನಿಯಾಗಿದ್ದನು.

    ಮೂರು ದಿನಗಳ ಹಿಂದೆ ನೇಣು ಬಿಗಿದುಕೊಂಡಂತೆ ವಿಡಿಯೋವನ್ನು ಮಾಡಿ ಅದನ್ನು ಟಿಕ್‍ಟಾಕ್‍ನಲ್ಲಿ ಅಪ್ಲೋಡ್ ಮಾಡಿದ್ದಾನೆ. ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೇಣು ಬಿಗಿದುಕೊಂಡ ವಿಡಿಯೋ ಟಿಕ್‍ಟಾಕ್‍ನಲ್ಲಿ ಈಗ ಸಾಕಷ್ಟು ವೈರಲ್ ಆಗಿದೆ.

    ನೇಣು ಬಿಗಿದುಕೊಂಡ ನಾಗರಾಜ್ ಎರಡು ಮದುವೆ ಮಾಡಿಕೊಂಡಿದ್ದು, ಮೂರು ಜನ ಹೆಣ್ಣು ಮಕ್ಕಳಿದ್ದರು. ಮೊದಲನೆಯ ಪತ್ನಿಯನ್ನು ಬಿಟ್ಟು ಹೋಗಿ, ಮತ್ತೊಂದು ಮದುವೆ ಮಾಡಿಕೊಂಡು ಜೀವನ ನಡೆಸುತ್ತಿದ್ದನು. ಆದರೆ ಕೆಲ ದಿನಗಳ ಹಿಂದೆ ಎರಡನೆಯ ಪತ್ನಿಯ ಜೊತೆಯೂ ಕೂಡ ಜಗಳ ಮಾಡಿಕೊಂಡಿದ್ದಾನೆ. ಇದಕ್ಕೆ ಮನನೊಂದ ನಾಗರಾಜು ನೇಣಿಗೆ ಶರಣಾಗಿದ್ದಾರೆ.

    ಈತನಿಗೆ ಮೂವರು ಮಕ್ಕಳಿದ್ದು, ಇವನನ್ನೇ ನಂಬಿಕೊಂಡ ಕುಟುಂಬ ಈಗ ಕಂಗಾಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಾರದಲ್ಲಿ ತಲಾ 3 ದಿನ ಪತಿಯೊಂದಿಗೆ ಇರಲು ಇಬ್ಬರು ಪತ್ನಿಯರ ಒಪ್ಪಂದ

    ವಾರದಲ್ಲಿ ತಲಾ 3 ದಿನ ಪತಿಯೊಂದಿಗೆ ಇರಲು ಇಬ್ಬರು ಪತ್ನಿಯರ ಒಪ್ಪಂದ

    – ಪತಿಗೆ ವಾರದಲ್ಲಿ ಒಂದು ದಿನದ ರಜೆ

    ರಾಂಚಿ: ಜಾರ್ಖಂಡ್ ರಾಜಧಾನಿ ರಾಂಚಿಯ ಸದರ್ ಪೊಲೀಸ್ ಠಾಣೆಯಲ್ಲಿ ಶನಿವಾರ ಒಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಪತ್ನಿಯರು ಪತಿಯನ್ನು ವಾರದಲ್ಲಿ ಮೂರು ದಿನಗಳಂತೆ ವಿಭಜಿಸಿಕೊಂಡಿದ್ದಾರೆ.

    ರಾಂಚಿಯ ರಾಜೇಶ್ ಕುಮಾರ್ ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದ. ಹೀಗಾಗಿ ಪತಿ ರಾಜೇಶ್ ಇಬ್ಬರ ಬಳಿಯು ತಲಾ ಮೂರು ದಿನ ಇರುವುದಾಗಿ ಒಪ್ಪಂದ ಮಾಡಿಕೊಂಡಿದ್ದ. ಆದರೆ ಶನಿವಾರ ಆತನ ಎರಡನೇ ಪತ್ನಿ ಸದರ್ ಪೊಲೀಸ್ ಠಾಣೆಗೆ ಹೋಗಿ, ನನ್ನ ಪತಿ ಐದು ದಿನಗಳಿಂದ ಮನೆಗೆ ಬಂದಿಲ್ಲ. ಅವನು ತನ್ನ ಮೊದಲ ಪತ್ನಿಯೊಂದಿಗೆ ವಾಸಿಸುತ್ತಿದ್ದಾನೆ ಎಂದು ದೂರಿದ್ದಳು.

    ಮಹಿಳೆ ದೂರಿನಿಂದ ಪೊಲೀಸರು ಕೂಡ ತೊಂದರೆಗೆ ಸಿಲುಕಿದರು. ಹೀಗಾಗಿ ಪ್ರಕರಣ ದಾಖಲಿಸಿಕೊಳ್ಳದೆ ಪೊಲೀಸರು ಪತಿ ರಾಜೇಶ್ ಕುಮಾರ್ ನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ಈ ವೇಳೆ ಪತ್ನಿಯರ ವಾದ ಆಲಿಸಿದ ಪೊಲೀಸರು ಕಂಗಾಲಾದರು.

    ಪತಿಯೊಂದಿಗೆ ವಾಸಿಸಲು ತಲಾ ಮೂರು ದಿನವನ್ನು ವಿಂಗಡಿಸಿಕೊಂಡಿದ್ದೇವೆ. ಅದರಂತೆ ಪತಿಯು ವಾರದಲ್ಲಿ ಮೂರು ದಿನಗಳು ಮೊದಲ ಪತ್ನಿಯೊಂದಿಗೆ ಮತ್ತು ಮೂರು ದಿನ ಎರಡನೇ ಪತ್ನಿಯೊಂದಿಗೆ ಪತಿ ಇರಬೇಕು. ಜೊತೆಗೆ ವಾರದಲ್ಲಿ ಒಂದು ದಿನ ಆತನಿಗೆ ರಜೆ ನೀಡಲಾಗಿದೆ ಎಂದು ಪತ್ನಿಯರು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.

    ಆದರೆ, ಪತಿ ಮೊದಲ ಹೆಂಡತಿಯೊಂದಿಗೆ ಐದು ದಿನಗಳ ಕಾಲ ಇದ್ದರಿಂದ, ಎರಡನೇ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಇದನ್ನು ಆಲಿಸಿದ ಪೊಲೀಸರು ಹೊಂದಾಣಿಕೆಯಿಂದ ಬಾಳಿ ಎಂದು ಪೊಲೀಸರು ದಂಪತಿಗೆ ಹೇಳಿ ಕಳಿಸಿದ್ದಾರೆ.

  • ಗಂಡನ 2ನೇ ಪತ್ನಿಯ ಕತ್ತನ್ನು ಕಡಿದು ಪರಾರಿಯಾದ್ಳು!

    ಗಂಡನ 2ನೇ ಪತ್ನಿಯ ಕತ್ತನ್ನು ಕಡಿದು ಪರಾರಿಯಾದ್ಳು!

    ಮಡಿಕೇರಿ: ಇಬ್ಬರು ಪತ್ನಿಯರ ನಡುವೆ ಕಲಹ ಏರ್ಪಟ್ಟು ಮೊದಲನೆಯ ಪತ್ನಿ 2ನೇ ಪತ್ನಿಯ ಕತ್ತನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ಕೊಡಗು ಜಿಲೆಯ ವಿರಾಜಪೇಟೆ ತಾಲೂಕಿನ ಅರೆಕಾಡು ಗ್ರಾಮದಲ್ಲಿ ನಡೆದಿದೆ.

    ವಶಿಕಾ ದೇವಿ (27) ಕೊಲೆಯಾದ ಮಹಿಳೆ. ಮೂಲತಃ ಜಾರ್ಖಂಡ್ ರಾಜ್ಯದ ದಯಾನಂದ್‍ನ ಮೊದಲನೆಯ ಪತ್ನಿ ಆಶಿಕಾ ಗುಪ್ತ ಕೊಲೆ ಮಾಡಿ ಪರಾರಿಯಾಗಿದ್ದಾಳೆ.

    ಏನಿದು ಪ್ರಕರಣ?
    ದಯಾನಂದ್ ಕಳೆದ 7 ವರ್ಷಗಳ ಹಿಂದೆ ಆಶಿಕಾ ಗುಪ್ತಳನ್ನು ಮದುವೆಯಾಗಿದ್ದನು. ಒಂದು ವರ್ಷದ ನಂತರ ವಶಿಕಾ ದೇವಿಯನ್ನು ಪ್ರೀತಿಸಿ ವಿವಾಹವಾಗಿದ್ದಾನೆ. ಮೊದಲನೆಯ ಪತ್ನಿಗೆ ಒಂದು ಮಗು ಹಾಗೂ 2ನೇ ಪತ್ನಿಗೆ ಕೂಡ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಹೆಂಡತಿ ಮತ್ತು ಮೂರು ಮಕ್ಕಳೊಂದಿಗೆ ದಯಾನಂದ್ ಸಿದ್ದಾಪುರ ಸಮೀಪದ ಬಳಂಜಿಗೆರೆ ಖಾಸಗಿ ತೋಟದ ಲೈನ್ ಮನೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸವಾಗಿದ್ದನು.

    ಮೂವರು ಜೊತೆಯಲ್ಲಿ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಕೆಲ ದಿನಗಳಿಂದ ಇಬ್ಬರು ಹೆಂಡತಿಯರ ನಡುವೆ ವೈಮನಸ್ಸು ಉಂಟಾಗಿ ಸಣ್ಣ ಪುಟ್ಟ ಮಾತಿನ ಕಲಹಗಳು ಏರ್ಪಟ್ಟಿತು ಎನ್ನಲಾಗಿದೆ. ಶನಿವಾರ ಪತಿಯೊಂದಿಗೆ ಇಬ್ಬರು ತೋಟ ಕೆಲಸಕ್ಕೆ ತೆರಳಿ ಲೈನ್ ಮನೆಗೆ ಹಿಂದಿರುಗುವಾಗ ಇಬ್ಬರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ.

    ಆಗ ಆಶಿಕಾ ಗುಪ್ತ, ವಶಿಕಾ ದೇವಿಯ ಕುತ್ತಿಗೆಯನ್ನು ಕತ್ತಿಯಿಂದ ಕಡಿದು ಪರಾರಿಯಾಗಿದ್ದಾಳೆ. ತೀವ್ರ ರಕ್ತಸ್ರಾವದಿಂದ ವಶಿಕಾ ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾಳೆ. ದಯಾನಂದ್ ತೋಟದಿಂದ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಸಿದ್ದಾಪುರ ಠಾಣಾಧಿಕಾರಿ ಬೋಜಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಇಬ್ಬರು ಪತ್ನಿಯರ ನಡುವೆ ಕಲಹ ಓರ್ವಳ ಕೊಲೆಯಲ್ಲಿ ಅಂತ್ಯ

    ಇಬ್ಬರು ಪತ್ನಿಯರ ನಡುವೆ ಕಲಹ ಓರ್ವಳ ಕೊಲೆಯಲ್ಲಿ ಅಂತ್ಯ

    ಮಡಿಕೇರಿ: ಓರ್ವ ಇಬ್ಬರನ್ನು ಮದುವೆಯಾಗಿ ನಾಲ್ಕು ವರ್ಷಗಳ ಕಾಲ ಒಂದೇ ಮನೆಯಲ್ಲಿ ವಾಸವಾಗಿದ್ದು, ಇಬ್ಬರು ಪತ್ನಿಯರ ನಡುವೆ ಕಲಹ ಏರ್ಪಟ್ಟು ಮೊದಲನೆಯ ಪತ್ನಿ ಎರಡನೆಯ ಪತ್ನಿಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ಕೊಡಗಿನಲ್ಲಿ ನಡೆದಿದೆ.

    ವಿರಾಜಪೇಟೆ ತಾಲೂಕಿನ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅರೆಕಾಡು ಗ್ರಾಮದ ಕಾಫಿ ತೋಟದಲ್ಲಿ ಶನಿವಾರ ಸಂಜೆ ನಡೆದಿದ್ದು, ಮೂಲತಃ ಜಾರ್ಖಂಡ್ ರಾಜ್ಯದ ದಯಾನಂದ್‍ನ ಮೊದಲನೆಯ ಪತ್ನಿ ಆಶಿಕಾ ಗುಪ್ತ (26) ಎಂಬಾಕೆ ಎರಡನೆಯ ಪತ್ನಿ ವಶಿಕಾ ದೇವಿ (27) ಯನ್ನು ಕತ್ತಿಯಿಂದ ಕುತ್ತಿಗೆ ಕಡಿದು ಕೊಲೆ ಮಾಡಿ ಪರಾರಿಯಾಗಿದ್ದಾಳೆ.

    ದಯಾನಂದ್ ಕಳೆದ 7 ವರ್ಷಗಳ ಹಿಂದೆ ಆಶಿಕಾ ಗುಪ್ತಳನ್ನು ಮದುವೆಯಾಗಿದ್ದು, ಬಳಿಕ ಒಂದು ವರ್ಷದ ನಂತರ ವಶಿಕಾ ದೇವಿಯನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ಮೊದಲನೆಯ ಪತ್ನಿಗೆ ಒಂದು ಮಗು ಹಾಗೂ ಎರಡನೆಯ ಪತ್ನಿಗೆ ಇಬ್ಬರು ಮಕ್ಕಳಿದ್ದು, ಇಬ್ಬರು ಹೆಂಡತಿ ಮೂರು ಮಕ್ಕಳೊಂದಿಗೆ ಸಿದ್ದಾಪುರ ಸಮೀಪದ ಬಳಂಜಿಗೆರೆ ಖಾಸಗಿ ತೋಟದ ಲೈನ್ ಮನೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸವಾಗಿದ್ದರು.

    ಮೂವರು ಜೊತೆಯಲ್ಲಿ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಕೆಲ ದಿನಗಳಿಂದ ಇಬ್ಬರು ಹೆಂಡತಿಯರ ನಡುವೆ ವೈಮನಸ್ಸು ಉಂಟಾಗಿ ಸಣ್ಣ ಪುಟ್ಟ ಮಾತಿನ ಕಲಹಗಳು ಏರ್ಪಟ್ಟಿತು ಎನ್ನಲಾಗಿದೆ. ಶನಿವಾರ ಪತಿಯೊಂದಿಗೆ ಇಬ್ಬರು ತೋಟದ ಕೆಲಸಕ್ಕೆ ತೆರಳಿ ಲೈನ್ ಮನೆಗೆ ಹಿಂತಿರುಗಿದಾಗ ಇಬ್ಬರ ನಡುವೆ ಮಾತಿನ ಚಕಮಕಿಯಾಗಿ ಕಲಹ ಏರ್ಪಟ್ಟು ಆಶಿಕಾ ಗುಪ್ತ ವಶಿಕಾ ದೇವಿಯ ಕುತ್ತಿಗೆಗೆ ಕತ್ತಿಯಿಂದ ಕಡಿದು ಪರಾರಿಯಾಗಿದ್ದಾಳೆ. ತೀವ್ರ ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾಳೆ.

    ದಯಾನಂದ್ ತೋಟದಿಂದ ಕೆಲಸ ಮುಗಿಸಿ ಮನೆಗೆ ಬಂದು ನೋಡಿದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ. ಮೃತದೇಹವನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸಿದ್ದಾಪುರ ಠಾಣಾಧಿಕಾರಿ ಬೋಜಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಆತ್ಮಹತ್ಯೆಗೆ ಶರಣಾದ ಪತಿಯ ಮೃತದೇಹಕ್ಕಾಗಿ 7 ಜನ ಪತ್ನಿಯರ ಕಿತ್ತಾಟ

    ಆತ್ಮಹತ್ಯೆಗೆ ಶರಣಾದ ಪತಿಯ ಮೃತದೇಹಕ್ಕಾಗಿ 7 ಜನ ಪತ್ನಿಯರ ಕಿತ್ತಾಟ

    ಡೆಹ್ರಾಡೂನ್: ಆತ್ಮಹತ್ಯೆಗೆ ಶರಣಾದ ಪತಿಯ ಮೃತದೇಹಕ್ಕಾಗಿ 7 ಜನ ಪತ್ನಿಯರು ಕಿತ್ತಾಡಿಕೊಂಡ ವಿಚಿತ್ರ ಪ್ರಸಂಗವೊಂದು ಉತ್ತರಾಖಂಡ ರಾಜ್ಯದಲ್ಲಿ ನಡೆದಿದೆ.

    ಹರಿದ್ವಾರದ ರವಿದಾಸ್ ಬಸ್ತಿಯ ನಿವಾಸಿ ಪವನ್ ಕುಮಾರ್ (40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಪವನ್ ಕುಮಾರ್ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದೇ ದಿನ ರಾತ್ರಿ ಐವರು ಮಹಿಳೆಯರು ಹಾಗೂ ಮಾರನೇ ದಿನ ಇಬ್ಬರು ಪವನ್ ಕುಮಾರ್ ನನ್ನ ಪತಿ ಎಂದು ಪರಸ್ಪರ ಕಿತ್ತಾಡಿಕೊಂಡು ಹೈಡ್ರಾಮಾ ಸೃಷ್ಟಿಸಿದ್ದಾರೆ.

    ಚಾಲಕನಾಗಿ ಕೆಲಸ ಮಾಡುತ್ತಿದ್ದ ಪವನ್ ಕುಮಾರ್ ಭಾನುವಾರ ರಾತ್ರಿ ವಿಷ ಕುಡಿದು ಒದ್ದಾಡುತ್ತಿದ್ದ. ಇದನ್ನು ನೋಡಿದ ಪತ್ನಿ ಪವನ್ ಕುಮಾರ್ ನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದೌಡಾಯಿಸಿದ ನಾಲ್ವರು ಮಹಿಳೆಯರು ಪವನ್ ಕುಮಾರ್ ತಮ್ಮ ಪತಿ ಎಂದು ವಾದಿಸಲು ಆರಂಭಿಸಿದರು. ಅವರ ವಾದವನ್ನು ತಳ್ಳಿ ಹಾಕಿದ ಪವನ್ ಕುಮಾರ್ ಪತ್ನಿ, ನನ್ನ ಪತಿ ನನ್ನನ್ನು ಬಿಟ್ಟರೆ ಬೇರೆ ಯಾವ ಮಹಿಳೆಯ ಜೊತೆಗೂ ಸಂಪರ್ಕ ಇಟ್ಟುಕೊಂಡಿಲ್ಲ ಎಂದು ತಿಳಿಸಿದ್ದಾರೆ.

    ಐವರು ಪತ್ನಿಯರು ಆಸ್ಪತ್ರೆ ಹೊರಗೆ ಜಗಳವಾಡುತ್ತಿದ್ದರು. ಇದನ್ನು ನೋಡಿದ ಪೊಲೀಸರಿಗೆ ಏನು ಮಾಡಬೇಕು ಎನ್ನುವುದೇ ಅರ್ಥವಾಗಲಿಲ್ಲ. ಪವನ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎನ್ನುವುದಕ್ಕಿಂತ ಆತ ಯಾರ ಪತಿ ಎಂಬ ಕುರಿತೇ ಕುತೂಹಲ ಹೆಚ್ಚಾಗಿತ್ತು. ಕೊನೆಗೂ ಆ ಐವರು ಪತ್ನಿಯರ ಒಪ್ಪಿಗೆ ಬಳಿಕ ಪತಿಯ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

    ಆದರೆ ಐವರು ಪತ್ನಿರ ಕಿತ್ತಾಟಕ್ಕೆ ಪವನ್ ಕುಮಾರ್ ಸ್ಟೋರಿ ಮುಕ್ತಾಯವಾಗಲಿಲ್ಲ. ಆತನ ಅಂತ್ಯಸಂಸ್ಕಾರ ನೆರವೇರಿಸಿದ ಮಾರನೇ ದಿನ (ಸೋಮವಾರ) ಮತ್ತೆ ಇಬ್ಬರು ಮಹಿಳೆಯರು ಪೊಲೀಸ್ ಠಾಣೆಗೆ ಬಂದು ತಮಗೆ ತಿಳಿಸದೆ ಪತಿಯ ಅಂತ್ಯಸಂಸ್ಕಾರ ಮಾಡಿರುವುದು ಸರಿಯಲ್ಲ ಎಂದು ಗಲಾಟೆ ಮಾಡಿದ್ದಾರೆ. ಈ ಬೆಳವಣಿಗೆಯಿಂದ ಶಾಕ್‍ಗೆ ಒಳಗಾದ ಪೊಲೀಸರು, ಮತ್ತೆ ಯಾರಾದರು ಪವನ್ ಕುಮಾರ್ ತಮ್ಮ ಪತಿ ಅಂತ ಪೊಲೀಸ್ ಠಾಣೆಗೆ ಬರುತ್ತಾರಾ ಎಂದು ಕಾದು ನೋಡುತ್ತಿದ್ದಾರೆ. ಹೀಗಾಗಿ ನಾಲ್ಕೈದು ದಿನ ಕಾದು ನೋಡಿ ಪ್ರಕರಣದ ಕುರಿತು ತನಿಖೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

    ಮಹಿಳೆಯರು ಹಣಕ್ಕಾಗಿ ಪವನ್ ಕುಮಾರ್ ತಮ್ಮ ಪತಿ ಎಂದು ಹೇಳುತ್ತಿದ್ದಾರೆ ಎಂಬ ಅನುಮಾನ ಪೊಲೀಸರಿಗೆ ಮೂಡಿತ್ತು. ಈ ಸಂಬಂಧ ವಿವಾರಣೆ ಮಾಡಿದಾಗ, ಪವನ್ ಕುಮಾರ್ ಖಾತೆಯಲ್ಲಿ ಹಣವೇ ಇಲ್ಲ. ಅಷ್ಟೇ ಅಲ್ಲದೆ ಆತ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ಯಾರು ನಿಜವಾದ ಪತ್ನಿ, ಬೇರೆಯವರು ಯಾಕೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಮೂರನೇ ಮದ್ವೆಯಾಗಲು ಹೊರಟ ಪತಿಗೆ ಗೂಸ ಕೊಟ್ಟ ಪತ್ನಿಯರು

    ಮೂರನೇ ಮದ್ವೆಯಾಗಲು ಹೊರಟ ಪತಿಗೆ ಗೂಸ ಕೊಟ್ಟ ಪತ್ನಿಯರು

    ಚೆನ್ನೈ: ಮೂರನೇ ಮದುವೆಯಾಗಲು ಹೋದ 26 ವರ್ಷದ ಗಂಡನನ್ನು ಹಿಡಿದು ಪತ್ನಿಯರಿಬ್ಬರು ಥಳಿಸಿರುವ ಘಟನೆ ತೆಮಿಳುನಾಡಿದ ಕೊಯಮತ್ತೂರಿನಲ್ಲಿ ನಡೆದಿದೆ.

    2016 ರಲ್ಲಿ ಮೊದಲನೇ ಮದುವೆಯಾದ ಈತ ಮದುವೆ ನಂತರ ತನ್ನ ಮೊದಲ ಹೆಂಡತಿಗೆ ಹೊಡೆಯುವುದು. ಕೆಟ್ಟ ಪದಗಳಿಂದ ನಿಂದಿಸುವುದನ್ನು ಮಾಡುತ್ತಿದ್ದನು. ದಿನ ಪತಿ ಕೊಡುತ್ತಿದ್ದ ಚಿತ್ರ ಹಿಂಸೆಯನ್ನು ಸಹಿಸಲಾಗಿದೆ ಆಕೆ ಅವನನ್ನು ಬಿಟ್ಟು ತನ್ನ ತವರು ಮನೆ ಸೇರಿದ್ದಳು.

    ಮೊದಲ ಹೆಂಡತಿ ಪೋಷಕರ ಮನೆ ಸೇರಿದ ನಂತರ 2019 ರಲ್ಲಿ ನನಗೆ ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ ಆಗಲೇ ಮದುವೆಯಾಗಿ ವಿಚ್ಛೇದವಾಗಿದ್ದ 26 ವರ್ಷದ ಯುವತಿಯನ್ನು ಮ್ಯಾಟ್ರಿಮೋನಿಯಲ್ ಭೇಟಿ ಆಗಿ ವಿವಾಹವಾಗಿದ್ದಾನೆ. ನಂತರ ಎರಡನೇ ಹೆಂಡತಿಗೂ ದಿನ ವರದಕ್ಷಿಣೆ ವಿಚಾರವಾಗಿ ನಿಂದಿಸುವುದು ಮತ್ತು ಹೊಡೆಯುವುದು ಮಾಡಿದ್ದಾನೆ. ಇದರಿಂದ ಬೇಸತ್ತ ಯುವತಿ ಆತನನ್ನು ಬಿಟ್ಟು ಆಕೆಯೂ ಹೆತ್ತವರ ಮನೆ ಸೇರಿದ್ದಾಳೆ.

    ಕಳೆದ ವಾರ ಈ ಪತಿರಾಯ ಮೂರನೇ ಮದುವೆಯಾಗಲು ಮ್ಯಾಟ್ರಿಮೋನಿಯಲ್‍ನಲ್ಲಿ ಯುವತಿಯನ್ನು ಹುಡುಕುತ್ತಿದ್ದಾನೆ ಎಂಬ ವಿಚಾರ ಈ ಇಬ್ಬರು ಹೆಂಡತಿಯರಿಗೆ ತಿಳಿದು ಬಂದಿದೆ. ಈ ವಿಚಾರವಾಗಿ ಪತಿಯನ್ನು ಭೇಟಿಯಾಗಲು ಇಬ್ಬರು ಅವನು ಕೆಲಸ ಮಾಡುತ್ತಿದ್ದ ಕೊಯಮತ್ತೂರಿನ ರಾಸಿಪಾಲಯಂನ ಅವನ ಕಂಪನಿ ಬಳಿ ಬಂದಿದ್ದಾರೆ. ಆದರೆ ಆ ಕಂಪನಿಯವರು ಅವರಿಗೆ ಒಳಗೆ ಹೋಗಲು ಅನುಮತಿ ನೀಡಿಲ್ಲ.

    ಇದರಿಂದ ಕೋಪಗೊಂಡ ಪತ್ನಿಯರು ಕಂಪನಿಯ ಮುಂದೆ ಪ್ರತಿಭಟನೆ ಮಾಡಿದ್ದಾರೆ. ನಂತರ ಕಂಪನಿಯಿಂದ ಹೊರಬಂದ ಪತಿಯನ್ನು ಗೇಟಿನ ಬಳಿ ಹಿಡಿದುಕೊಂಡು ಇಬ್ಬರು ಥಳಿಸಿದ್ದಾರೆ. ಈ ಸಂಬಂಧ ಇಬ್ಬರು ಮಾಜಿ ಪತ್ನಿಯರು ತಮ್ಮ ಮಾಜಿ ಗಂಡನ ಮೇಲೆ ಸುಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

  • ಹುಬ್ಬಳ್ಳಿಯ ಮಾರುಕಟ್ಟೆಯಲ್ಲಿ ಮಹಿಳೆಯರ ಹೊಡೆದಾಟ

    ಹುಬ್ಬಳ್ಳಿಯ ಮಾರುಕಟ್ಟೆಯಲ್ಲಿ ಮಹಿಳೆಯರ ಹೊಡೆದಾಟ

    ಹುಬ್ಬಳ್ಳಿ: ಮಹಿಳೆಯರು ಹುಬ್ಬಳ್ಳಿಯ ಶಾ ಬಜಾರ್ ಮಾರುಕಟ್ಟೆಯಲ್ಲಿ ಪರಸ್ಪರ ಹೊಡೆದಾಡಿಕೊಂಡಿರುವ ವಿಡಿಯೋ ಸ್ಥಳೀಯರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಬುಧವಾರ ಸಂಜೆ ಮಹಿಳೆಯರು ಮಾರುಕಟ್ಟೆಗೆ ತಮ್ಮ ಗಂಡಂದಿರ ಜೊತೆ ಬಂದಿದ್ದರು. ಈ ವೇಳೆ ಓರ್ವ ಬೈಕ್ ತೆಗೆಯುವಾಗ ಮಹಿಳೆಗೆ ತಾಗಿದೆ. ಬೈಕ್ ತಾಗಿದ್ದರಿಂದ ಕುಪಿತಗೊಂಡ ಮಹಿಳೆ ಸವಾರನನ್ನು ನಿಂದಿಸಿದ್ದಾಳೆ. ಪತಿಯನ್ನು ನಿಂದಿಸುತ್ತಿದ್ದ ನೋಡಿದ ಸವಾರನ ಪತ್ನಿ ಮಹಿಳೆ ಮೇಲೆ ಎರಗಿದ್ದಾಳೆ.

    ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ಏರ್ಪಟ್ಟಿದ್ದು, ಕೊನೆಗೆ ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿದ್ದಾರೆ. ಕೊನೆಗೆ ಇಬ್ಬರು ಮಹಿಳೆಯರ ಗಂಡಂದಿರನ್ನು ತಮ್ಮ ಪತ್ನಿಯರನ್ನು ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

  • 7 ಮೀನುಗಾರರು ನಾಪತ್ತೆಯಾಗಿ 100 ದಿನ – ರಕ್ಷಣಾ ಸಚಿವೆ ಕಂಡು ಕಣ್ಣೀರು ಹಾಕಿದ್ರು ಪತ್ನಿಯರು

    7 ಮೀನುಗಾರರು ನಾಪತ್ತೆಯಾಗಿ 100 ದಿನ – ರಕ್ಷಣಾ ಸಚಿವೆ ಕಂಡು ಕಣ್ಣೀರು ಹಾಕಿದ್ರು ಪತ್ನಿಯರು

    ಉಡುಪಿ: ಡಿಸೆಂಬರ್ ತಿಂಗಳಲ್ಲಿ ಮೀನುಗಾರಿಕೆಗೆ ಹೊರಟು ಬೋಟ್ ಸಮೇತ ನಾಪತ್ತೆಯಾಗಿದ್ದ ಮೀನುಗಾರರ ಮನೆಗಳಿಗೆ ಇಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಭೇಟಿ ಕೊಟ್ಟು, ಅವರ ಕುಟುಂಬಕ್ಕೆ ಸಮಾಧಾನ ಹೇಳಿದ್ದಾರೆ.

    ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಜೊತೆ ನಿರ್ಮಲಾ ಸೀತಾರಾಮನ್ ಅವರು ಮಲ್ಪೆಯಲ್ಲಿರುವ ಮೀನುಗಾರರ ಮನೆಗೆ ಭೇಟಿ ಕೊಟ್ಟಾಗ ಬಂಧುಗಳ ಕಣ್ಣೀರ ಕಟ್ಟೆ ಒಡೆಯಿತು.

    ಮೂರು ತಿಂಗಳ ಹಿಂದೆ ಮೀನುಗಾರಿಕೆಗೆ ತೆರಳಿದ ಮೀನುಗಾರರ ಹುಡುಕಾಟ ಇನ್ನೂ ನಡೆಯುತ್ತಲೇ ಇದೆ. ಕುಟುಂಬಸ್ಥರು ಇವತ್ತು ಬರ್ತಾರೆ ನಾಳೆ ಬರ್ತಾರೆ ಎಂದು ಕಾಯುತ್ತಲೇ ಇದ್ದಾರೆ. ಕಾಣೆಯಾದ ಚಂದ್ರಶೇಖರ, ದಾಮೋದರ ಅವರ ಮನೆಗಳಿಗೆ ಭೇಟಿ ನೀಡಿದಾಗ ಅವರಿಬ್ಬರ ಪತ್ನಿಯರ ಆಕ್ರಂದನ ನೋಡಿ ರಕ್ಷಣಾ ಸಚಿವೆ ಅಸಹಾಯಕರಾದರು.

    ಕೊನೆಗೆ ದುಃಖಿತರನ್ನು ಸಮಾಧಾನಪಡಿಸಿ, ನಾಪತ್ತೆಯಾದ ಮೀನುಗಾರರನ್ನು ಆದಷ್ಟು ಬೇಗ ಹುಡುಕಿ ಕೊಡುತ್ತೇವೆ. ಘಟನೆ ನಡೆದ ದಿನದಿಂದ ಮೀನುಗಾರರನ್ನು ಹುಡುಕಲು ಕಾರ್ಯಪ್ರವೃತರಾಗಿದ್ದೇವೆ ಎಂದು ದುಃಖತಪ್ತ ಕುಟುಂಬಕ್ಕೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.