Tag: ಪತಿ

  • ಅಮ್ಮಾ, ನಿಮ್ಮ ಅಳಿಯ ಒಳ್ಳೆಯವನಲ್ಲ: ಆತ್ಮಹತ್ಯೆಗೆ ಶರಣಾದ ಗೃಹಿಣಿ

    ಅಮ್ಮಾ, ನಿಮ್ಮ ಅಳಿಯ ಒಳ್ಳೆಯವನಲ್ಲ: ಆತ್ಮಹತ್ಯೆಗೆ ಶರಣಾದ ಗೃಹಿಣಿ

    – ಮಕ್ಕಳನ್ನ ಗಂಡನ ಜೊತೆ ಕಳುಹಿಸಬೇಡ
    – ತವರಿನಲ್ಲಿದ್ರೆ ನಿಮಗೂ ಅವಮಾನ, ಕ್ಷಮಿಸು ಅಮ್ಮ

    ಮೈಸೂರು: ಪತಿಯ ಕಿರುಕುಳದಿಂದ ನೊಂದ ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಕೆ.ಆರ್.ನಗರದಲ್ಲಿ ನಡೆದಿದೆ. ಇಂದು ಬೆಳಗ್ಗೆ ಗೃಹಿಣಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು, ಮನೆಯಲ್ಲಿ ಡೆತ್ ನೋಟ್ ಲಭ್ಯವಾಗಿದೆ.

    ಬಿಂದುಶ್ರೀ ಆತ್ಮಹತ್ಯೆಗೆ ಶರಣಾದ ಗೃಹಿಣಿ. ಏಳು ವರ್ಷಗಳ ಹಿಂದೆ ಹಾಸನ ಜಿಲ್ಲೆಯ ಅರಸಿಕೆರೆಯ ಚಂದ್ರಶೇಖರ್ ಜೊತೆ ಬಿಂದುಶ್ರೀಯನ್ನ ಮದುವೆ ಮಾಡಿಕೊಡಲಾಗಿತ್ತು. ಆದ್ರೆ ಚಂದ್ರಶೇಖರ್ ಪತ್ನಿತಯ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದನು. ಪತಿಯ ಕಿರುಕುಳದಿಂದ ಬೇಸತ್ತ ಬಿಂದುಶ್ರೀ ಕೆಲ ದಿನಗಳ ಹಿಂದೆ ತವರು ಸೇರಿದ್ದರು. ಇತ್ತೀಚೆಗೆ ಕೆ.ಆರ್.ನಗರಕ್ಕೆ ಬಂದಿದ್ದ ಚಂದ್ರಶೇಖರ್ ಪತ್ನಿಯನ್ನ ಕಳುಹಿಸಿ ಕೊಡಿ. ಚೆನ್ನಾಗಿ ನೋಡಿಕೊಳ್ಳುತ್ತೆನೆಂದು ಭರವಸೆ ನೀಡಿದ್ದನು.

    ಡೆತ್‍ನೋಟ್ ನಲ್ಲಿ ಏನಿದೆ?: ಅಮ್ಮ ನಾನು ಇರೋದು ನಿನಗೆ ಇಷ್ಟ ಇಲ್ಲ. ಅಲ್ಲಿಗೆ ಹೋದ್ರೆ ಚೆನ್ನಾಗಿ ನೋಡಿಕೊಳ್ಳಲ್ಲ, ಮತ್ತೆ ಹಿಂಸೆ ಕೊಡುತ್ತಾನೆ. ಹೋಗಲ್ಲ ಅಂದ್ರೆ ಹಿಂಸೆ ಮಾಡಿ ಕಳುಹಿಸುತ್ತಿದ್ದೀರಿ. ಹೋದ್ರೆ ದಿನ ದಿನ ಸಾಯೋದಕ್ಕೆ ನನಗೆ ಆಗಲ್ಲ. ಹಾಗಾಗಿ ಒಂದೇ ದಿನ ಸಾಯೋದು ಒಳ್ಳೆಯದಲ್ವಾ? ಮತ್ತೆ ನಾನು ಸತ್ತನೆಂದು ಮಕ್ಕಳನ್ನ ಅವನ ಜೊತೆ ಕಳುಹಿಸಬೇಡ. ನನ್ನಿಂದ ನಿಮಗೆ ತುಂಬಾ ಬೇಜಾರು ಆಗಿದೆ ಅಂತ ಗೊತ್ತು. ನನ್ನಿಂದ ನಿಮ್ಮ ಮರ್ಯಾದೆ ಸಹ ಹಾಳಾಗಿದೆ.

    ನೀವು ಚೆನ್ನಾಗಿರಬೇಕು ಅಷ್ಟೆ. ಅವನು ನೀವು ಅಂದುಕೊಂಡಿರುವಷ್ಟು ಒಳ್ಳೆಯವನಲ್ಲ. ಅಲ್ಲಿ ಹೋಗಿ ದಿನ ಸಾಯೋದಕ್ಕಿಂತ ಒಂದೇ ದಿನ ಸಾಯುತ್ತಿದ್ದೇನೆ. ಈ ತರ ಮಾಡ್ತೀರೋದಕ್ಕೆ ದಯವಿಟ್ಟು ಕ್ಷಮಿಸಿ. ನನ್ನನ್ನು ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳಿ. ಪ್ಲೀಸ್ ಅಮ್ಮ. ಆ ಆ್ಯಮ್ ಸಾರಿ ಅಮ್ಮ..

    ಚಂದ್ರಶೇಖರ್ ಭರವಸೆ ನೀಡಿದ್ದರಿಂದ ಬಿಂದುಶ್ರೀಯನ್ನ ಕಳುಗಹಿಸಲು ಒಪ್ಪಿದ್ದರು. ಆದ್ರೆ ಪತಿಯ ಬಗ್ಗೆ ಗೊತ್ತಿದ್ದ ಬಿಂದುಶ್ರೀ ಅವರಿಗೆ ಅರಸಿಕೆರೆಗೆ ಹೋಗಲು ಇಷ್ಟವಿರಲಿಲ್ಲ. ತವರಿನಲ್ಲಿಯೇ ಮಾತ್ರೆಗಳನ್ನ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನೀನು ಕಪ್ಪು, ದಪ್ಪ, ಕೊಳಕು – ಪತಿ ವಿರುದ್ಧ ದೂರು ನೀಡಿದ ಪತ್ನಿ

    ನೀನು ಕಪ್ಪು, ದಪ್ಪ, ಕೊಳಕು – ಪತಿ ವಿರುದ್ಧ ದೂರು ನೀಡಿದ ಪತ್ನಿ

    ಗಾಂಧಿನಗರ: ಪತ್ನಿ ಕಪ್ಪು ಹಾಗೂ ನೋಡಲು ದಪ್ಪ, ಕೊಳಕು ಎಂದು ಕಿರುಕುಳ ನೀಡುತ್ತಿದ್ದ ಪತಿ ವಿರುದ್ಧ 23 ವರ್ಷದ ಮಹಿಳೆ ಗುಜರಾತಿನ ಅಹಮದಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

    ಮಹಿಳೆ 2008ರಲ್ಲಿ ವಿವಾಹವಾಗಿದ್ದು, ಆಕೆಯ ಪತಿ ವರದಕ್ಷಿಣೆ ನೀಡುವಂತೆ ಕಿರುಕುಳ ಕೊಡುತ್ತಿದ್ದ ಎಂದು ಆರೋಪಿಸಿದ್ದಾಳೆ. ಅಲ್ಲದೆ ಮಹಿಳೆಯ ಪೋಷಕರು ವರದಕ್ಷಿಣೆ ನೀಡಲು ಸಾಧ್ಯವಾಗದಿದ್ದಾಗ ಅವಳ ಪತಿ ನೀನು ದಪ್ಪಗಿದ್ದೀಯಾ, ನೋಡಲು ನೀನು ಕಪ್ಪಾಗಿರುವೆ ಎಂದು ಅಣಕಿಸಿ ಥಳಿಸುತ್ತಿದ್ದನು. ಜೊತೆಗೆ ತನ್ನ ಗರ್ಲ್ ಫ್ರೆಂಡ್ ನೋಡಲು ಬಹಳ ತೆಳ್ಳಗಿದ್ದಾಳೆ ಹಾಗೂ ಬಿಳುಪಾಗಿದ್ದಾಳೆ ಎಂದು ಹೋಲಿಸಿದ್ದಾನೆ. ಜೊತೆಗೆ ಉತ್ತಮವಾಗಿ ಅಡುಗೆ ಮಾಡುವುದಿಲ್ಲ, ತನಗೆ ಕಿರುಕುಳ ನೀಡುತ್ತಾಳೆ ಎಂದು ಪತಿ ಕೂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ ಎಂದು ಮಹಿಳೆ ತಿಳಿಸಿದ್ದಾಳೆ.

    ನನ್ನ ಪತಿ ನನ್ನನ್ನು ದಪ್ಪ, ಕಪ್ಪು ಮತ್ತು ಕೊಳಕು ಎಂದು ವ್ಯಂಗ್ಯ ಮಾಡಿ ತನ್ನ ಗರ್ಲ್ ಫ್ರೆಂಡ್ ನೋಡಲು ತೆಳ್ಳಗೆ ಹಾಗೂ ಬಿಳುಪಾಗಿದ್ದು ಸುಂದರವಾಗಿದ್ದಾಳೆ ಎಂದು ಅವಳೊಟ್ಟಿಗೆ ತನ್ನನ್ನು ಹೋಲಿಸುತ್ತಾನೆ. ಇದನ್ನು ನಾನು ವಿರೋಧಿಸಿದಾಗ ಹಲ್ಲೆ ನಡೆಸಿ ಕಿರುಕುಳ ನೀಡುತ್ತಿದ್ದನು.

    ಪತಿ ಮನೆಯವರು ಕೂಡ ನನ್ನನ್ನು ಹೊಡೆಯಲು ಪ್ರಚೋದಿಸುತ್ತಿದ್ದರು ಎಂದು ಆರೋಪಿಸಿ ದೂರು ದಾಖಲಿಸಿದ್ದಾಳೆ. ಅಲ್ಲದೆ ಹೆಣ್ಣು ಮಗುವಿಗೆನಾದರೂ ಜನ್ಮ ನೀಡಿದರೆ ತೀವ್ರವಾಗಿ ಪರಿಣಾಮವನ್ನು ಹೆದರಿಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿದ್ದಾಳೆ.

  • ಮಗುವಿಗೆ ಹಾಲುಣಿಸುತ್ತಿದ್ದ ಪತ್ನಿಯನ್ನ ಕೊಂದ ಗಂಡ

    ಮಗುವಿಗೆ ಹಾಲುಣಿಸುತ್ತಿದ್ದ ಪತ್ನಿಯನ್ನ ಕೊಂದ ಗಂಡ

    – ಕುಡುಕ ಪತಿಗೆ ಧರ್ಮದೇಟು

    ಬಳ್ಳಾರಿ/ವಿಜಯನಗರ: ಮಗುವಿಗೆ ಹಾಲುಣಿಸುತ್ತಿದ್ದ ಪತ್ನಿಯನ್ನ ಕೊಡಲಿಯಿಂದ ಹೊಡೆದು ಕೊಲೆಗೈದ ಹೃದಯ ವಿದ್ರಾವಕ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪಾಲಯ್ಯನಕೋಟೆಯಲ್ಲಿ ನಡೆದಿದೆ.

    25 ವರ್ಷದ ಶಾಂತಮ್ಮ ಕೊಲೆಯಾದ ಮಹಿಳೆ. ಶಾಂತಮ್ಮ ತವರು ಮನೆಯಲ್ಲಿದ್ದಾಗ ಬಂದ ಪತಿ ಮಂಜುನಾಥ್ ಹಿಂದಿನಿಂದ ಕೊಡಲಿಯಿಂದ ದಾಳಿ ನಡೆಸಿ ಕೊಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವವಾಗಿದ್ದರಿಂದ ಶಾಂತಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಐದು ವರ್ಷಗಳ ಹಿಂದೆ ಮೊದಲ ಪತ್ನಿಯಿಂದ ದೂರವಾಗಿದ್ದ ಹುರುಳಿಹಾಳು ಮೂಲದ ಮಂಜುನಾಥ್ ಜೊತೆ ಶಾಂತಮ್ಮ ಅವರನ್ನ ಮದುವೆ ಮಾಡಿಕೊಡಲಾಗಿತ್ತು.

    ಮದ್ಯ ವ್ಯಸನಿಯಾಗಿದ್ದ ಮಂಜುನಾಥ್ ಕ್ಷುಲ್ಲಕ ವಿಚಾರಕ್ಕೆ ಪತ್ನಿ ಜೊತೆ ಜಗಳ ಮಾಡುತ್ತಿದ್ದನು. ತವರಿನಲ್ಲಿದ್ದ ಪತ್ನಿ ಬಳಿ ಬಂದ ಮಂಜುನಾಥ್ ನಶೆಯಲ್ಲಿ ಶಾಂತಮ್ಮರನ್ನ ಕೊಲೆ ಮಾಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಮಗುವನ್ನ ರಕ್ಷಿಸಿದ್ದಾರೆ. ಮಂಜುನಾಥ್ ಗೆ ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಹೊಸಹಳ್ಳಿ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

  • ಪತಿಯನ್ನು ಹೆಗಲ ಮೇಲೆ ಹೊತ್ತು ಓಡಿದ ಮಹಿಳೆಯರು

    ಪತಿಯನ್ನು ಹೆಗಲ ಮೇಲೆ ಹೊತ್ತು ಓಡಿದ ಮಹಿಳೆಯರು

    ಕಠ್ಮಂಡು: ಗಂಡದಿರು ಪತ್ನಿಯನ್ನು ಹೆಗಲ ಮೇಲೆ ಹೊತ್ತು ಓಡುವುದು ಸಾಮಾನ್ಯ. ಆದರೆ ನೇಪಾಳದಲ್ಲಿ ಪತ್ನಿಯರು ಗಂಡದಿರನ್ನು ಹೆಗಲ ಮೇಲೆ ಹೊತ್ತುಕೊಂಡು ಓಡುವ ಸ್ಪರ್ಧೆಯೊಂದರಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.

    ಮಹಿಳಾ ದಿನಾಚರಣೆಯ ಅಂಗವಾಗಿ ದೇವ್ಘಾಟ್ ಗ್ರಾಮವೊಂದರ ಸ್ಥಳೀಯ ಶಾಲೆಯ ಆಡಳಿತ ಮಂಡಳಿ ಆಯೋಜಿಸಿದ್ದ 100 ಮೀ. ಓಡುವ ರೇಸ್ ಸ್ಪರ್ಧೆಯಲ್ಲಿ ವಿವಾಹಿತ ಮಹಿಳೆಯರು ತಮ್ಮ ಪತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಓಡಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿವಿಧ ವಯೋಮಾನದ 16 ಜೋಡಿಗಳು ಭಾಗವಹಿಸಿದ್ದರು.

    ಈ ಸುದ್ದಿ ಹಬ್ಬುತ್ತಿದಂತೆಯೇ ರಾಜಧಾನಿ ಕಠ್ಮಂಡುವಿನಿಂದ 150 ಕಿಲೋ ಮೀಟರ್ ದೂರದಲ್ಲಿರುವ ಶಾಲೆಯ ಮೈದಾನಕ್ಕೆ ಪಂದ್ಯ ವೀಕ್ಷಿಸಲು ಹಳ್ಳಿಯ ಸುತ್ತಮುತ್ತಲಿನ ಜನರು ಗುಂಪು ಗುಂಪಾಗಿ ಸೇರಿದ್ದರು. ಅಲ್ಲದೆ ಪಂದ್ಯದಲ್ಲಿ ಭಾಗವಹಿಸಿದ ಪ್ರತಿ ದಂಪತಿಗೂ ಪ್ರಮಾಣಪತ್ರ ನೀಡಿ ಶ್ಲಾಘಿಸಲಾಯಿತು.

    ಪಂದ್ಯದಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರು, ಈ ಸ್ಪರ್ಧೆಯಲ್ಲಿ ಭಾಗವಹಿಸಲು ನಾನು ತುಂಬಾ ಧೈರ್ಯ ಮಾಡಿ ಬಂದಿದ್ದೆ. ನಾನು ಸ್ಪರ್ಧೆಯಲ್ಲಿ ಉತ್ತಮ ಸ್ಥಾನ ಪಡೆಯದೇ ಇದ್ದರೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಮತ್ತು ಗೌರವ ನೀಡುತ್ತಿರುವುದಕ್ಕೆ ನನಗೆ ಬಹಳ ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ.

  • ಶೀಲ ಶಂಕಿಸಿ ಪತ್ನಿಯ ಕೈ, ಕಾಲನ್ನೇ ಕೊಡಲಿಯಿಂದ ಕೊಚ್ಚಿದ ಪತಿ

    ಶೀಲ ಶಂಕಿಸಿ ಪತ್ನಿಯ ಕೈ, ಕಾಲನ್ನೇ ಕೊಡಲಿಯಿಂದ ಕೊಚ್ಚಿದ ಪತಿ

    – ದೇಹದ ಭಾಗಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಸಾಗಿಸಿದ್ರು

    ಭೋಪಾಲ್: ಪತ್ನಿಯ ಶೀಲ ಶಂಕಿಸಿದ ಪತಿ, ಮಲಗಿದ್ದಾಗ ಕೊಡಲಿಯಿಂದ ಆಕೆಯ ಕೈ ಹಾಗೂ ಕಾಲುಗಳನ್ನೇ ಕತ್ತರಿಸಿರುವ ಆಘಾತಕಾರಿ ಘಟನೆ ನಡೆದಿದೆ.

    ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಸೋಮವಾರ ಘಟನೆ ನಡೆದಿದ್ದು, ಕೊಡಲಿಯಿಂದ ಪತ್ನಿಯ ಕೈ ಹಾಗೂ ಕಾಲುಗಳನ್ನು ತುಂಡರಿಸಿದ್ದಾನೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಪೊಲೀಸರ ಮೇಲೆ ಸಹ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ. ಆರೋಪಿಯನ್ನು ಪ್ರೀತಮ್ ಸಿಂಗ್ ಎಂದು ಗುರುತಿಸಲಾಗಿದ್ದು, ಹೋಶಂಗಾಬಾದ್‍ನ ಸಿಯೋನಿ ಮಾಲ್ವಾ ನಿವಾಸಿಯಾಗಿದ್ದಾನೆ. ಸಿಂಗ್ 2012ರಲ್ಲಿ ಸಂಗೀತಾಳನ್ನು ವಿವಾಹವಾಗಿದ್ದು, ದಂಪತಿಗೆ ಈಗ 7 ವರ್ಷದ ಮಗ ಸಹ ಇದ್ದಾನೆ.

    ಸಂಗೀತಾ ಇಂದೋರ್ ಮೂಲದವರಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಿಂಗ್ ಮಗನೊಂದಿಗೆ ನಿಶಾಂತ್‍ಪುರದ ಪಾರಸ್ ನಗರದಲ್ಲಿ ವಾಸವಿದ್ದ. ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ.

    ಇತ್ತೀಚೆಗೆ ಸಂಗೀತಾ ರಜೆ ಪಡೆದು ಭೋಪಾಲ್‍ಗೆ ಬಂದಿದ್ದಳು. ಮಂಗಳವಾರ ತನ್ನ 7 ವರ್ಷದ ಮಗನೊಂದಿಗೆ ಆಕೆ ಮಲಗಿದ್ದಾಗ ಕೊಡಲಿಯಿಂದ ದಾಳಿ ನಡೆಸಿದ್ದಾನೆ. ಸಿಟ್ಟಿಗೆದ್ದು ಮೊದಲು ಮಹಿಳೆಯ ಎಡಗೈ, ನಂತ ಎಡಗಾಲನ್ನು ಕೊಡಲಿಯಿಂದ ಕೊಚ್ಚಿದ್ದಾನೆ. ಸಂಗೀತಾ ಮೇಲೆ ದಾಳಿ ಮಾಡುವಾಗ ಆರೋಪಿ ಪಾನಮತ್ತನಾಗಿದ್ದ.

    ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ನಿಶಾಂತ್‍ಪುರ ಠಾಣೆಯ ಇಬ್ಬರು ಪೊಲೀಸ್ ಪೇದೆ ಸ್ಥಳಕ್ಕೆ ಭೇಟಿ ನೀಡಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತುಂಡರಿಸಿದ ದೇಹದ ಭಾಗಗಳನ್ನು ಪ್ಲಾಸ್ಟಿಕ್ ಕವರ್‍ನಲ್ಲಿ ಹಾಕಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

    ಆರೋಪಿ ಮಹಿಳೆಯ ಶೀಲ ಶಂಕಿಸಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಘಟನೆ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ಬಂಧಿಸಲು ಹತ್ತಿರ ಬರುತ್ತಿದ್ದಂತೆ ಅವರಿಗೂ ಬೆದರಿಕೆ ಹಾಕಿದ್ದು, ನನ್ನ ಹತ್ತಿರ ಬಂದರೆ ನಿಮ್ಮ ತಲೆಯನ್ನೇ ಕೊಚ್ಚುತ್ತೇನೆ ಎಂದು ಹೇಳಿದ್ದಾನೆ. ಬಳಿಕ ಹೇಗೋ ಮಾಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

  • ಪತಿ ಚಪ್ಪಲಿ ಕೊಡಿಸದ ಕೋಪಕ್ಕೆ ಮಗುವನ್ನ ನದಿಗೆ ಎಸೆದ್ಳು

    ಪತಿ ಚಪ್ಪಲಿ ಕೊಡಿಸದ ಕೋಪಕ್ಕೆ ಮಗುವನ್ನ ನದಿಗೆ ಎಸೆದ್ಳು

    – ಗಂಡ, ಹೆಂಡ್ತಿ ಜಗಳದಲ್ಲಿ 3ರ ಕಂದಮ್ಮ ಬಲಿ

    ಲಕ್ನೋ: ಪತಿ ಚಪ್ಪಲಿ ಕೊಡಿಸದಿದ್ದಕ್ಕೆ ಮಹಿಳೆ ತನ್ನ ಮೂರು ವರ್ಷದ ಮಗುವನ್ನ ನದಿಗೆ ಎಸೆದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ಈ ಘಟನೆ ನಡೆದಿದ್ದು, ಪೊಲೀಸರು ಮಗುವಿನ ಶವವನ್ನ ನದಿಯಿಂದ ಮೇಲೆಕ್ಕೆತ್ತಿದ್ದಾರೆ.

    ಬಾಂದಾ ಜಿಲ್ಲೆಯ ಗಂಛಾ ಗ್ರಾಮದ ಪಪ್ಪು ನಿಷಾದ್ ಮತ್ತು ರನ್ನೋ ನಡುವೆ ಸದಾ ಜಗಳ ನಡೆಯುತ್ತಿತ್ತು. ಶನಿವಾರ ಪಪ್ಪು ಪತ್ನಿಗೆ ಚಪ್ಪಲಿ ಕೊಡಿಸಲು ಹಿಂದೇಟು ಹಾಕಿದ್ದಾರೆ. ಇದೇ ವಿಷಯಕ್ಕೆ ಇಬ್ಬರ ನಡುವೆ ಜಗಳ ಆಗಿದೆ. ಕೆಲವೇ ದಿನಗಳಲ್ಲಿ ಹಣ ನೀಡೋದಾಗಿ ಪತಿ ಹೇಳಿದ್ದಾನೆ.

    ಶನಿವಾರ ಮಗು ಕಾಣದಿದ್ದಾಗ ಕುಟುಂಬಸ್ಥರು ಆತಂಕಗೊಂಡು ರನ್ನೋಳನ್ನ ವಿಚಾರಿಸಿದ್ದಾರೆ. ಆರಂಭದಲ್ಲಿ ತನಗೆ ಏನು ತಿಳಿಯದಂತೆ ನಾಟಕ ಮಾಡಿದ್ದಾಳೆ. ಅನುಮಾನಗೊಂಡ ಕುಟುಂಬಸ್ಥರು ಪೊಲೀಸರಿಗೆ ಮಗು ಕಾಣೆಯಾಗಿರುವ ಬಗ್ಗೆ ದೂರು ಸಲ್ಲಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ರನ್ನೋಳನ್ನ ವಿಚಾರಣೆಗೆ ಒಳಪಡಿಸಿದಾಗ ಮಗುವನ್ನ ಕೇನ್ ನದಿಯಲ್ಲಿ ಎಸೆದಿರೋದಾಗಿ ಹೇಳಿದ್ದಾಳೆ.

    ಪೊಲೀಸರು ನದಿಗೆ ತೆರಳಿ ಸ್ಥಳೀಯ ಮೀನುಗಾರರು ಮತ್ತು ಗ್ರಾಮಸ್ಥರ ಸಹಾಯದೊಂದಿಗೆ ಮಗುವಿಗಾಗಿ ಶೋಧ ನಡೆಸಿದ್ದಾರೆ. ಕೆಲ ಗಂಟೆ ಬಳಿಕ ಮಗುವಿನ ಮೃತದೇಹ ಪತ್ತೆಯಾಗಿದೆ. ಆದ್ರೆ ರನ್ನೋ ಮಗುವನ್ನ ಎಷ್ಟೊತ್ತಿಗೆ ನದಿಗೆ ಎಸೆದಿರುವ ಬಗ್ಗೆ ಹೇಳದೇ ಮೌನವಾಗಿದ್ದಾಳೆ. ಪ್ರಕರಣಂ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಯನ್ನ ಬಂಧಿಸಿದ್ದಾರೆ.

     

  • ಪತಿ ಮನೆ ಸೇರುವ ಮೊದಲೇ ಮಸಣ ಸೇರಿದ ನವವಧು!

    ಪತಿ ಮನೆ ಸೇರುವ ಮೊದಲೇ ಮಸಣ ಸೇರಿದ ನವವಧು!

    ಭುವನೇಶ್ವರ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು ಗಂಡನ ಮನೆಗೆ ಹೋಗುವ ವೇಳೆ ಬಿಕ್ಕಿ ಬಿಕ್ಕಿ ಅತ್ತು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಒಡಿಶಾದ ಸೋನೆಪುರದಲ್ಲಿ ನಡೆದಿದೆ.

    ರೋಸಿ ಸಾಹು ಸಾವನ್ನಪ್ಪಿರುವ ಯುವತಿಯಾಗಿದ್ದಾಳೆ. ಜುಲಂಡಾ ಗ್ರಾಮದ ನಿವಾಸಿಯಾಗಿದ್ದ ಯುವತಿ ಟೆಂಟಲು ಗ್ರಾಮದ ಬಿಸಿಕೇಶನ್ ಎಂಬ ವ್ಯಕ್ತಿಯೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಯುವತಿ ಗಂಡನ ಮನೆಗೆ ಹೋಗುವ ವೇಳೆ ಸಾವನ್ನಪ್ಪಿದ್ದಾಳೆ.

    ಮದವೆಯಾಗಿರುವ ರೋಸಿಯನ್ನು ಗಂಡನ ಮನೆಗೆ ಕಳುಹಿಸುವ ಶಾಸ್ತ್ರವನ್ನು ಮಾಡಲಾಗುತ್ತಿತ್ತು. ಈ ವೇಳೆ ರೋಸಿ ತವರು ಮನೆಯಿಂದ ಪತಿಯ ಮನೆಗೆ ಹೋಗಬೇಕು ಎಂದು ಕಣ್ಣಿರು ಹಾಕಿದ್ದಾಳೆ. ಈ ವೇಳೆ ಹೃದಯಾಘಾತದಿಂದ ನಿಂತಲ್ಲೇ ಕುಸಿದು ಬಿದ್ದಿದ್ದಾಳೆ. ಕೂಡಲೇ ಅಲ್ಲಿ ಇದ್ದವರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯುವತಿ ಆಸ್ಪತ್ರೆಗೆ ಕರೆತರುವ ಮೊದಲೇ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಮದುವೆ ಸಂಭ್ರಮದಲ್ಲಿ ಇರಬೇಕಾದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.

  • ಪತ್ನಿ ನಡತೆ ಅನುಮಾನಿಸಿದ ಪತಿಯ ಕಿವಿಯೇ ಕಟ್..!

    ಪತ್ನಿ ನಡತೆ ಅನುಮಾನಿಸಿದ ಪತಿಯ ಕಿವಿಯೇ ಕಟ್..!

    ಚಿತ್ರದುರ್ಗ: ಪತ್ನಿಯ ನಡತೆ ಅನುಮಾನಿಸಿದ ಪತಿಯ ಕಿವಿಯನ್ನೇ ಕಟ್ ಮಾಡಿರುವ ವಿಲಕ್ಷಣ ಘಟನೆಯೊಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಗಾಂಧಿನಗರದಲ್ಲಿ ನಡೆದಿದೆ.

    ಮೈಲಾರಿ (39) ತೀವ್ರ ಹಲ್ಲೆಗೊಳಗಾದ ವ್ಯಕ್ತಿ. ಘಟನೆಯ ಬಳಿಕ ಮೈಲಾರಿ ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಕ್ಷಿಗಾಗಿ ಪ್ಲಾಸ್ಟಿಕ್ ಬಾಟ್ಲಿಯಲ್ಲಿ ಕಿವಿಯನ್ನು ತುಂಬಿಸಿ ಆಸ್ಪತ್ರೆಗೆ ಮೈಲಾರಿ ತಂದಿದ್ದಾರೆ.

    ಮೈಲಾರಿ ಕಿವಿಯನ್ನು ಬಾಮೈದ ತನ್ನ ಬಾಯಲ್ಲಿ ಕಚ್ಚಿ ಕಿತ್ತುಹಾಕಿದ್ದಾನೆ ಎನ್ನಲಾಗಿದೆ. ಕಿವಿ ಕಳೆದುಕೊಂಡ ಮೈಲಾರಿ ಸ್ಥಿತಿ ಕಂಡು ಸಂಬಂಧಿಕರು ಕಣ್ಣೀರು ಹಾಕಿದ್ದಾರೆ.

    ಹಲವು ಬಾರಿ ಬೇರೆಯವರೊಂದಿಗೆ ಓಡಾಡ್ತಿದ್ದ ಹೆಂಡತಿಗೆ ಪತಿ ಮೈಲಾರಿ ವಾರ್ನಿಂಗ್ ಕೊಟ್ಟಿದ್ದ. ಇದೇ ಸಿಟ್ಟಿನಿಂದ ಪತ್ನಿ ಕಡೆಯವರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು, ಹೆಂಡತಿ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

    ಈ ಸಂಬಂಧ ಚಳ್ಳಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರೀತಿಸಿ ವಿವಾಹದ ಪತಿ ಶೀಲ ಶಂಕಿಸಿದ- ಬೇಸತ್ತ ಪತ್ನಿ ನೇಣಿಗೆ ಶರಣು

    ಪ್ರೀತಿಸಿ ವಿವಾಹದ ಪತಿ ಶೀಲ ಶಂಕಿಸಿದ- ಬೇಸತ್ತ ಪತ್ನಿ ನೇಣಿಗೆ ಶರಣು

    ತುಮಕೂರು: ಪತಿ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

    ನಗರದ ಉಪ್ಪಾರಹಳ್ಳಿ ನಿವಾಸಿ ಹೀನಾಬಾನು(22) ಮೃತ ದುರ್ದೈವಿ. ಪತಿಯ ಅನುಮಾನಕ್ಕೆ ಬೇಸತ್ತು ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಒಂದು ವರ್ಷದ ಹಿಂದಷ್ಟೇ ಸಿಫತ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಪತಿ ಯಾವಾಗಲೂ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ. ಇದರಿಂದ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಪತ್ನಿ ಶೀಲದ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದರಿಂದ ಬೇಸತ್ತು ಮಹಿಳೆ ನೇಣು ಬಿಗಿದುಕೊಂಡಿದ್ದು, ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಕುಡಿದ ಮತ್ತಲ್ಲಿ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ- ತಡೆಯಲು ಬಂದ ತಂದೆಯನ್ನೇ ರಾಡ್ ನಿಂದ ಹೊಡೆದು ಕೊಂದ

    ಕುಡಿದ ಮತ್ತಲ್ಲಿ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ- ತಡೆಯಲು ಬಂದ ತಂದೆಯನ್ನೇ ರಾಡ್ ನಿಂದ ಹೊಡೆದು ಕೊಂದ

    ಬಾಗಲಕೋಟೆ: ಕುಡಿದ ಮತ್ತಿನಲ್ಲಿ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆಗೆ ಮುಂದಾಗಿದ್ದ ಮಗನನ್ನು ತಡೆಯಲು ಬಂದ ಸ್ವಂತ ತಂದೆಯನ್ನೇ ರಾಡ್ ನಿಂದ ಹೊಡೆದು ಕೊಲೆ ಮಾಡಿರುವ ಭಯಾನಕ ಘಟನೆ ನಡೆದಿದೆ.

    ಜಿಲ್ಲೆಯ ಹುನಗುಂದ ತಾಲೂಕಿನ ಚೌಡ ಕಮಲದಿನ್ನಿ ಗ್ರಾಮದಲ್ಲಿ ಘಟನೆ ನಡೆದಿದ್ದು, ರಾಜೇಂದ್ರ ಗೌಡರ್ ತನ್ನ ತಂದೆಯನ್ನು ಕೊಲೆ ಮಾಡಿದ್ದಾನೆ. ಪತ್ನಿ ಮೇಲೆ ಅನುಮಾನಗೊಂಡು ಪ್ರತಿದಿನ ಹಲ್ಲೆ ಮಾಡುತ್ತಿದ್ದ ಆರೋಪಿ ರಾಜೇಂದ್ರ, ನಿನ್ನೆ ತಡರಾತ್ರಿ ಸಹ ಕುಡಿದ ಮತ್ತಿನಲ್ಲಿ ಮನೆಗೆ ಬಂದ ವೇಳೆ ಪತ್ನಿ ಲಕ್ಷ್ಮಿಬಾಯಿ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಲು ಮುಂದಾಗಿದ್ದ. ಈ ವೇಳೆ ರಾಜೇಂದ್ರನ ತಂದೆ 72 ವರ್ಷದ ಶಿವಾನಂದ್ ಗೌಡರ್ ಮಗನನ್ನು ತಡೆಯಲು ಮುಂದಾಗಿದ್ದಾರೆ.

    ಕೋಪಗೊಂಡ ಆರೋಪಿ ರಾಜೇಂದ್ರ, ನಿನಗೂ ನನ್ನ ಪತ್ನಿಗೂ ಏನು ಸಂಬಂಧ ಎಂದು ಹೇಳಿ ತಂದೆ ಎನ್ನುವುದನ್ನೂ ನೋಡದೆ ಶಿವಾನಂದ್ ಗೌಡರ್ ಮೇಲೆ ರಾಡ್ ನಿಂದ ಹಲ್ಲೆ ಮಾಡಿದ್ದಾನೆ. ರಾಡ್ ನಿಂದ ಹೊಡೆದಿದ್ದಕ್ಕೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ವೃದ್ಧ ಶಿವಾನಂದ್ ಗೌಡರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾರಣಾಂತಿಕ ಹಲ್ಲೆಗೆ ಒಳಗಾಗಿರುವ ಆರೋಪಿ ರಾಜೇಂದ್ರನ ಪತ್ನಿ ಲಕ್ಷ್ಮೀಬಾಯಿ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರಾಜೇಂದ್ರನನ್ನ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.