Tag: ಪತನ

  • ಇಂಡೋನೇಷ್ಯಾ ವಿಮಾನ ದುರಂತ: ಒಟ್ಟು 190 ಪ್ರಯಾಣಿಕರಲ್ಲಿ ಒಬ್ಬ ಬದುಕುಳಿದ!

    ಇಂಡೋನೇಷ್ಯಾ ವಿಮಾನ ದುರಂತ: ಒಟ್ಟು 190 ಪ್ರಯಾಣಿಕರಲ್ಲಿ ಒಬ್ಬ ಬದುಕುಳಿದ!

    ಸಾಂದರ್ಭಿಕ ಚಿತ್ರ

    ಜಕಾರ್ತ: ಇಂಡೋನೇಷ್ಯಾದ ಲಯನ್ ಏರ್‌‌ಲೈನ್ಸ್‌ ಸಂಸ್ಥೆಗೆ ಸೇರಿದ್ದ ವಿಮಾನ ಪತನವಾಗಿ 189 ಮಂದಿ ಜಲಸಮಾಧಿಯಾಗಿದ್ದರೂ, ಓರ್ವ ಪ್ರಯಾಣಿಕ ಮಾತ್ರ ಅದೃಷ್ಟವಶಾತ್ ಬದುಕುಳಿದಿದ್ದಾರೆ.

    ಹೌದು, ಸೋಮವಾರ ಬೆಳಗ್ಗೆ ಸಂಭವಿಸಿದ ದುರಂತದಲ್ಲಿ ಲಯನ್ ಏರ್‌‌ಲೈನ್ಸ್‌ನ ಜಿಟಿ 610 ವಿಮಾನದಲ್ಲಿದ್ದ 189 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರೂ, ಓರ್ವ ಪ್ರಯಾಣಿಕ ಟ್ರಾಫಿಕ್ ಜಾಮ್‍ನಿಂದಾಗಿ ಬದುಕಿದ್ದಾರೆ.

    ಇಂಡೋನೇಷ್ಯಾದ ಹಣಕಾಸು ಸಚಿವಾಲಯದ ಅಧಿಕಾರಿ ಸೋನಿ ಸೆಟ್ಯಾವಾನ್ ಪತನಗೊಂಡ ವಿಮಾನದಲ್ಲಿ ಪಂಗ್‍ಕಲ್ ಪಿನಾಂಗ್ ದ್ವೀಪಕ್ಕೆ ತೆರಳಬೇಕಿತ್ತು. ಆದರೆ ಟ್ರಾಫಿಕ್ ಜಾಮ್ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದೆ. ಇದನ್ನೂ ಓದಿ: ಇಂಡೋನೇಷ್ಯಾ ವಿಮಾನ ದುರಂತ: ಭಾರತೀಯ ಕ್ಯಾಪ್ಟನ್ ಪೈಲಟ್ ಸಾವು

    ಈ ಕುರಿತು ಪ್ರತಿಕ್ರಿಯಿಸಿರುವ ಸೆಟ್ಯಾವಾನ್, ನಾನು ವಾರಕ್ಕೊಮ್ಮೆ ನನ್ನ ಸಹೋದ್ಯೋಗಿಗಳೊಂದಿಗೆ ಪಂಗ್‍ಕಲ್ ಪಿನಾಂಗ್ ದ್ವೀಪಕ್ಕೆ ಹೋಗುತ್ತಲೇ ಇದ್ದೆ. ಎಂದಿನಿಂತೆ ಸೋಮವಾರ ಪ್ರಯಾಣಕ್ಕಾಗಿ ಲಯನ್ ಏರ್‌‌ಲೈನ್ಸ್‌ನ ವಿಮಾನವನ್ನು ಬುಕ್ ಮಾಡಿದ್ದೆ. ಇದಕ್ಕಾಗಿ ಸೋಮವಾರ ಬೆಳಗಿನ ಜಾವ 3ರ ಸುಮಾರಿಗೆ ಜಕಾರ್ತ ವಿಮಾನ ನಿಲ್ದಾಣಕ್ಕೆ ಹೊರಟಿದ್ದೆ. ಆದರೆ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾದ ಕಾರಣ ನಾನು ಬೆಳಗ್ಗೆ 6.20ರ ಸುಮಾರಿಗೆ ಏರ್‌ಪೋರ್ಟ್‌ ತಲುಪಿದೆ.

    ವಿಮಾನ ನಿಲ್ದಾಣದಲ್ಲಿ ನನ್ನ ತಪಾಸಣೆ ಮುಗಿಸುವಷ್ಟರಲ್ಲಿ, ವಿಮಾನ ಟೇಕ್ ಆಫ್ ಆಗಿತ್ತು. ಅದಾದ ನಂತರ ನಾನು ಮತ್ತೊಂದು ವಿಮಾನ ಬಳಸಿ ಪಿನಾಂಗ್ ದ್ವೀಪ ತಲುಪಿದೆ. ನಾನು ಲ್ಯಾಂಡ್ ಆಗುತ್ತಲೇ ಲಯನ್ ವಿಮಾನ ಸಮುದ್ರದಲ್ಲಿ ಪತನವಾಗಿ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವಿಗೀಡಾದ ಶಾಕಿಂಗ್ ಮಾಹಿತಿ ಸಿಕ್ಕಿತ್ತು. ವಿಮಾನದ ಪತನದ ಸುದ್ದಿ ಕೇಳಿ ನನಗೆ ತುಂಬಾ ಆಘಾತವಾಗಿದೆ. ಅಲ್ಲದೇ ಪತನಗೊಂಡ ವಿಮಾನದಲ್ಲಿ ನನ್ನ ಸ್ನೇಹಿತರೂ ಸಹ ಪ್ರಯಾಣಿಸುತ್ತಿದ್ದರು ಎಂದು ನೆನೆದು ಕಣ್ಣೀರು ಹಾಕಿದ್ದಾರೆ.

    ಏನಿದು ವಿಮಾನ ದುರಂತ?
    ಸೋಮವಾರ ಬೆಳಗ್ಗೆ ರಾಜಧಾನಿ ಜಕಾರ್ತದಿಂದ ಪಾಂಗ್‍ಕಲ್ ಪಿನಾಗ್ ದ್ವೀಪಕ್ಕೆ ಲಯನ್ಸ್ ಏರ್‌‌ಲೈನ್ಸ್‌ ಸಂಸ್ಥೆಗೆ ಸೇರಿದ್ದ ಜಿಟಿ 610 ವಿಮಾನ ಎಂದಿನಂತೆ 6.20ರ ಸುಮಾರಿಗೆ ಟೇಕ್ ಆಫ್ ಆಗಿ ಹೊರಟಿತ್ತು. ಸುಮಾರು 7.30ರ ಹೊತ್ತಿಗೆ ಪಾಂಗ್‍ಕಲ್ ಪಿನಾಂಗ್ ತಲುಪಬೇಕಿದ್ದ ವಿಮಾನ, ಟೇಕಾಫ್ ಆದ 13 ನಿಮಿಷಗಳ ಬಳಿಕ ಏಕಾಏಕಿ ರೇಡಾರ್ ಸಂಪರ್ಕದಿಂದ ನಾಪತ್ತೆಯಾಗಿತ್ತು. ಅಲ್ಲದೇ ಕೊನೆಯ ಬಾರಿಗೆ ವಿಮಾನವು ಬೋಯಿಂಗ್ 737 ಮ್ಯಾಕ್ಸ್ 8 ಲಯನ್ ವಿಮಾನದ ಸಂಪರ್ಕಕ್ಕೆ 6.33ರಲ್ಲಿ ಯತ್ನಿಸಿತ್ತು. ಇದಾದ ಬಳಿಕ ಪಾಂಗ್‍ಕಲ್ ದ್ವೀಪದ ಬಳಿ ಸಮುದ್ರದಲ್ಲಿ ವಿಮಾನ ಪತನಗೊಂಡು, ವಿಮಾನದಲ್ಲಿದ್ದ ಎಲ್ಲಾ 188 ಪ್ರಯಾಣಿಕರು ಮೃತಪಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಂಡೋನೇಷ್ಯಾ ವಿಮಾನ ದುರಂತ: ಭಾರತೀಯ ಕ್ಯಾಪ್ಟನ್ ಪೈಲಟ್ ಸಾವು

    ಇಂಡೋನೇಷ್ಯಾ ವಿಮಾನ ದುರಂತ: ಭಾರತೀಯ ಕ್ಯಾಪ್ಟನ್ ಪೈಲಟ್ ಸಾವು

    ಜಕಾರ್ತ: ಇಂಡೋನೇಷ್ಯಾದ ಲಯನ್ಸ್ ಏರ್‌‌ಲೈನ್ಸ್‌ ದುರಂತದಲ್ಲಿ ವಿಮಾನದ ಮುಖ್ಯ ಕ್ಯಾಪ್ಟನ್ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಭಾರತದ ಭಾವ್ಯೆ ಸುನೆಜಾ ಮೃತಪಟ್ಟಿದ್ದಾರೆ.

    ದುರಂತ ಸಂಭವಿಸಿದ ಲಯನ್ ಏರ್‌‌ಲೈನ್ಸ್‌ ಸಂಸ್ಥೆಯ ಜಿಟಿ610 ವಿಮಾನದ ಮುಖ್ಯ ಕ್ಯಾಪ್ಟನ್ ಪೈಲಟ್ ಆಗಿದ್ದ ಭಾರತದ ಭಾವ್ಯೆ ಸುನೆಜಾ ಅವರು ಮೃತಪಟ್ಟಿರುವುದಾಗಿ ಜಕಾರ್ತದ ಭಾರತೀಯ ರಾಯಭಾರಿ ಕಚೇರಿ ಅಧಿಕೃತವಾಗಿ ತಿಳಿಸಿದೆ.

    ಮಾಹಿತಿಗಳ ಪ್ರಕಾರ ಸುನೆಜಾ 2011 ರಿಂದ ಲಯನ್ ಏರ್‌‌ಲೈನ್ಸ್‌ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದಕ್ಕೂ ಮುಂಚೆ ಅವರು ಎಮಿರೇಟ್ಸ್ ವಿಮಾನ ಸಂಸ್ಥೆಯಲ್ಲಿ ತರಬೇತಿ ಪೈಲೆಟ್ ಆಗಿಯೂ ಸೇವೆ ಸಲ್ಲಿಸಿದ್ದರು. ಸುನೆಜಾರವರು ದೆಹಲಿ ಮೂಲದವರಾಗಿದ್ದು, ಪೂರ್ವ ದೆಹಲಿಯ ಮಯೂರ್ ವಿಹಾರ್ ದಲ್ಲಿನ ಅಹಲ್ಕಾನ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಣ ಮುಗಿಸಿದ್ದರು.

    ಮುಖ್ಯ ಪೈಲಟ್ ಆಗಿದ್ದ ಸುನೆಜಾ ಅವರಿಗೆ 6 ಸಾವಿರ ಗಂಟೆಯ ವಿಮಾನ ಹಾರಾಟ ನಡೆಸಿದ ಅನುಭವವಿತ್ತು. ಇದಲ್ಲದೇ ಇಂಡೋನೇಷ್ಯಾದ ಹಾರ್ವಿನೋದಲ್ಲಿ ಸಹ ಪೈಲಟರ್ ಆಗಿ 5,000 ಕ್ಕೂ ಅಧಿಕ ಗಂಟೆಯ ಅನುಭವವನ್ನು ಸಹ ಹೊಂದಿದ್ದರು ಎನ್ನುವ ಮಾಹಿತಿಯನ್ನು ಲಯನ್ ಏರ್‌‌ಲೈನ್ಸ್‌ ಸಂಸ್ಥೆ ತಿಳಿಸಿದೆ.

    ಸುನೆಜಾ ಸಾವಿನ ಕುರಿತು ಜಕಾರ್ತ ಭಾರತೀಯ ರಾಯಭಾರಿ ಕಚೇರಿಯು ತನ್ನ ಟ್ವಿಟ್ಟರಿನಲ್ಲಿ, ಜಕಾರ್ತ ಬಳಿ ಲಯನ್ ಏರ್‌‌ಲೈನ್ಸ್‌ ವಿಮಾನ ದುರಂತದಲ್ಲಿ ಮೃತಪಟ್ಟವರ ಬಗ್ಗೆ ತೀವ್ರ ಸಂತಾಪವಿದೆ. ಆದರೆ ಘಟನೆಯಲ್ಲಿ ದುರದಷ್ಟಕರ ವಿಚಾರವೆಂದರೆ, ವಿಮಾನ ಚಲಾಯಿಸುತ್ತಿದ್ದ ಭಾರತೀಯ ಪೈಲಟ್ ಭವ್ಯೆ ಸುನೆಜಾ ಸಹ ದುರಂತದಲ್ಲಿ ಮೃತಪಟ್ಟಿದ್ದಾರೆ. ರಾಯಭಾರ ಕಚೇರಿಯು ರಕ್ಷಣಾ ಕೇಂದ್ರದ ಜೊತೆ ಸಂಪರ್ಕದಲ್ಲಿದ್ದು, ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದೆ ಎಂದು ಬರೆದುಕೊಂಡಿದೆ.

    ಏನಿದು ವಿಮಾನ ದುರಂತ?
    ಇಂದು ಬೆಳಗ್ಗೆ ರಾಜಧಾನಿ ಜಕಾರ್ತದಿಂದ ಪಾಂಗ್‍ಕಲ್ ಪಿನಾಗ್ ದ್ವೀಪಕ್ಕೆ ಲಯನ್ಸ್ ಏರ್‌‌ಲೈನ್ಸ್‌ ಸಂಸ್ಥೆಗೆ ಸೇರಿದ್ದ ಜಿಟಿ 610 ವಿಮಾನ ಎಂದಿನಂತೆ 6.20ರ ಸುಮಾರಿಗೆ ಟೇಕ್ ಆಫ್ ಆಗಿ ಹೊರಟಿತ್ತು. ಸುಮಾರು 7.30ರ ಹೊತ್ತಿಗೆ ಪಾಂಗ್‍ಕಲ್ ಪಿನಾಂಗ್ ತಲುಪಬೇಕಿತ್ತು. ಆದರೆ ಟೇಕಾಫ್ ಆದ 13 ನಿಮಿಷಗಳ ಬಳಿಕ ಏಕಾಏಕಿ ರೇಡಾರ್ ಸಂಪರ್ಕದಿಂದ ವಿಮಾನ ನಾಪತ್ತೆಯಾಗಿತ್ತು. ಅಲ್ಲದೇ ಕೊನೆಯ ಬಾರಿಗೆ ಜಿಟಿ610 ವಿಮಾನವು ಬೋಯಿಂಗ್ 737 ಮ್ಯಾಕ್ಸ್ 8 ಲಯನ್ ವಿಮಾನದ ಸಂಪರ್ಕಕ್ಕೆ 6.33ರಲ್ಲಿ ಯತ್ನಿಸಿತ್ತು. ಇದಾದ ಬಳಿಕ ಪಾಂಗ್‍ಕಲ್ ದ್ವೀಪದ ಬಳಿ ಸಮುದ್ರದಲ್ಲಿ ವಿಮಾನ ಪತನಗೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಂಡೋನೇಷ್ಯಾ ವಿಮಾನ ಪತನ: 189 ಮಂದಿ ದಾರುಣ ಸಾವು- ವಿಡಿಯೋ ನೋಡಿ

    ಇಂಡೋನೇಷ್ಯಾ ವಿಮಾನ ಪತನ: 189 ಮಂದಿ ದಾರುಣ ಸಾವು- ವಿಡಿಯೋ ನೋಡಿ

    ಸಾಂದರ್ಭಿಕ ಚಿತ್ರ

    ಜಕಾರ್ತ: ಇಂಡೋನೇಷ್ಯಾದ ಲಯನ್ ಏರ್‌‌ಲೈನ್ಸ್‌ ಸಂಸ್ಥೆಗೆ ಸೇರಿದ್ದ ವಿಮಾನವೊಂದು ಸಮುದ್ರದಲ್ಲಿ ಪತನಗೊಂಡ ಪರಿಣಾಮ 189 ಮಂದಿ ಪ್ರಯಾಣಿಕರು ದಾರುಣವಾಗಿ ಮೃತಪಟ್ಟ ಘಟನೆ ಪಾಂಗ್‍ಕಲ್ ದ್ವೀಪದ ಬಳಿ ಸಂಭವಿಸಿದೆ.

    ಇಂದು ಬೆಳಗ್ಗೆ ರಾಜಧಾನಿ ಜಕಾರ್ತದಿಂದ ಪಾಂಗ್‍ಕಲ್ ಪಿನಾಗ್ ದ್ವೀಪಕ್ಕೆ ಲಯನ್ಸ್ ಏರ್‌‌ಲೈನ್ಸ್‌ ಸಂಸ್ಥೆಗೆ ಸೇರಿದ್ದ ಜಿಟಿ610 ವಿಮಾನ ಎಂದಿನಂತೆ 6.20ರ ಸುಮಾರಿಗೆ ಟೇಕ್ ಆಫ್ ಆಗಿ ಹೊರಟಿತ್ತು. ಸುಮಾರು 7.30ರ ಹೊತ್ತಿಗೆ ಪಾಂಗ್‍ಕಲ್ ಪಿನಾಂಗ್ ತಲುಪಬೇಕಿತ್ತು. ಆದರೆ ಟೇಕಾಫ್ ಆದ 13 ನಿಮಿಷಗಳ ಬಳಿಕ ಏಕಾಏಕಿ ರೇಡಾರ್ ಸಂಪರ್ಕದಿಂದ ವಿಮಾನ ನಾಪತ್ತೆಯಾಗಿತ್ತು. ಅಲ್ಲದೇ ಕೊನೆಯ ಬಾರಿಗೆ ಜಿಟಿ610 ವಿಮಾನವು ಬೋಯಿಂಗ್ 737 ಮ್ಯಾಕ್ಸ್ 8 ಲಯನ್ ವಿಮಾನದ ಸಂಪರ್ಕಕ್ಕೆ 6.33ರಲ್ಲಿ ಯತ್ನಿಸಿತ್ತು. ಇದಾದ ಬಳಿಕ ಪಾಂಗ್‍ಕಲ್ ದ್ವೀಪದ ಬಳಿ ಸಮುದ್ರದಲ್ಲಿ ವಿಮಾನ ಪತನಗೊಂಡಿದೆ.

    ವಿಮಾನ ಬೀಳುತ್ತಿರುವ ದೃಶ್ಯವನ್ನು ಜಕಾರ್ತ ಬಂದರಿನಿಂದ ಹೊರಟಿದ್ದ ಬೋಟ್ ಸಿಬ್ಬಂದಿ ನೋಡಿದ್ದು, ಕೂಡಲೇ ರಕ್ಷಣಾ ತಂಡಗಳಿಗೆ ವಿಷಯವನ್ನು ಮುಟ್ಟಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ರಕ್ಷಣಾ ತಂಡಗಳು ಪ್ರಯಾಣಿಕರಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿವೆ. ಅಲ್ಲದೇ ವಿಮಾನ ಪತನವಾದ ಸ್ಥಳದಲ್ಲಿ ವಿಮಾನದ ಅವಶೇಷಗಳು ಸಹ ಪತ್ತೆಯಾಗಿವೆ.

    ಸಮುದ್ರದಲ್ಲಿ ಪತನವಾದ ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ ಒಟ್ಟು 189 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. ವಿಮಾನವು 210 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದ್ದು, ಕೆಲವರು ಬದುಕುಳಿದರಬಹುದೆಂಬ ಶಂಕೆಯನ್ನು ರಕ್ಷಣಾ ಪಡೆಗಳು ವ್ಯಕ್ತಪಡಿಸಿವೆ.

    ಈ ಕುರಿತು ಪ್ರತಿಕ್ರಿಯಿಸಿರುವ ಲಯನ್ ಏರ್‌‌ಲೈನ್ಸ್‌ ನಿರ್ವಾಹಕ ಎಡ್ವರ್ಡ್ ಸಿರೈಟ್, ಸದ್ಯ ನಾವು ಮಾಹಿತಿಯನ್ನು ಕಲೆಹಾಕುತ್ತೀದ್ದೇವೆ. ಈ ಕ್ಷಣದಲ್ಲಿ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ. ಇಂದು ಸಂಜೆ ಪತ್ರಿಕಾಗೋಷ್ಠಿ ನಡೆಸಿ ಘಟನೆ ಸಂಪೂರ್ಣ ವರದಿ ನೀಡುತ್ತೇವೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಡಬಿಡಂಗಿ ಸರ್ಕಾರ ಬೀಳುತ್ತೆ, ಜನಾದೇಶ ಪಡೆದ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ಅನಂತ್ ಕುಮಾರ್

    ಎಡಬಿಡಂಗಿ ಸರ್ಕಾರ ಬೀಳುತ್ತೆ, ಜನಾದೇಶ ಪಡೆದ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ಅನಂತ್ ಕುಮಾರ್

    ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರವು ಶುದ್ಧ ಎಡಬಿಡಂಗಿ ಸರ್ಕಾರವಾಗಿದ್ದು, ಇನ್ನೂ ಸ್ವಲ್ಪ ದಿನಗಳಲ್ಲೇ ಅಧಿಕಾರಕಳೆದುಕೊಂಡು ಜನಾದೇಶ ಪಡೆದಿರುವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆಂದು ಕೇಂದ್ರ ರಾಸಾಯನಿಕ ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ತಿಳಿಸಿದ್ದಾರೆ.

    ನಗರದ ಬಸವನಗುಡಿಯ ನಿವಾಸದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮೈತ್ರಿ ಒಂದು ಅಪವಿತ್ರ ಮೈತ್ರಿಯಾಗಿದೆ. ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದಗಿನಿಂದಲೂ ಶೀತಲ ಸಮರ ನಡೆಯುತ್ತಲೇ ಇದೇ. ಈ ಎಡಬಿಡಂಗಿ ಸರ್ಕಾರದ ನಾಯಕರುಗಳು ಚುನಾವಣಾ ಪೂರ್ವದಲ್ಲಿ ಒಬ್ಬರಿಗೊಬ್ಬರು ಪರಸ್ಪರ ಕೆಸರೆರಚಾಟ ನಡೆಸಿದ್ದರು. ಇದರಿಂದಾಗಿ ಇಬ್ಬರೂ ಒಟ್ಟಿಗೆ ಉಳಿಯಲು ಸಾಧ್ಯವಿಲ್ಲ. ಕುಮಾರಸ್ವಾಮಿಯವರ ಸರ್ಕಾರ ಬಾಲಗ್ರಹಪೀಡಿತ ಸರ್ಕಾರವಾಗಿದೆ. ಹೀಗಾಗಿ ಈ ಸರ್ಕಾರ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ. ಸರ್ಕಾರ ಬಿದ್ದ ಕೂಡಲೇ ಹೊಸ ಸಮೀಕರಣ ಆಗುತ್ತದೆ. ಆಗ ಜನಾದೇಶ ಪಡೆದ ಬಿಜೆಪಿಯು ಮತ್ತೊಮ್ಮೆ ಅಧಿಕಾರದ ಗದ್ದುಗೆಯನ್ನು ಹಿಡಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಈ ವೇಳೆ ಬಿಬಿಎಂಪಿ ಹೊಸ ತೆರಿಗೆ ಕುರಿತು ಮಾತನಾಡಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಹೇರಲು ಹೊರಟಿರುವ ಹೊಸ ತೆರಿಗೆ ಸರಿಯಲ್ಲ. ಮೊದಲು ತಮ್ಮ ಸಂಸ್ಥೆಯಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಗಟ್ಟಲಿ. ಇದರಿಂದಾಗಿ ಸರ್ಕಾರಕ್ಕೆ ಸುಮಾರು 3 ಸಾವಿರ ಕೋಟಿ ರೂಪಾಯಿ ಉಳಿಕೆಯಾಗುತ್ತದೆ. ಕೇವಲ 40 ಕೋಟಿ ರೂಪಾಯಿ ತೆರಿಗೆ ಸಂಗ್ರಹಕ್ಕೆ ಜನಸಾಮಾನ್ಯರಿಗೆ ಹೊರೆ ಹಾಕುವುದು ಸರಿಯಲ್ಲ ಎಂದು ಹೇಳಿದರು.

    ತೆಲಂಗಾಣದಿಂದ ಕರ್ನಾಟಕದ ಶಿವರಾಮಪುರದಲ್ಲಿ ಅತಿಕ್ರಮಣ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರತಿರಾಜ್ಯವು ತನ್ನದೆಯಾದ ಗಡಿಯನ್ನು ಹೊಂದಿದ್ದು, ಅದರ ನೆಲ, ಜಲ ಹಾಗೂ ನಾಡುನುಡಿಯನ್ನು ಕಾಯ್ದುಕೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ತೆಲಂಗಾಣದ ಕ್ರಮ ಸರಿಯಲ್ಲ. ಕೂಡಲೇ ಸಿಎಂ ಕುಮಾರಸ್ವಾಮಿಯವರು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ಜೊತೆ ಈ ಬಗ್ಗೆ ಮಾತುಕತೆ ನಡೆಸಬೇಕೆಂದು ಆಗ್ರಹಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡುವ ಮೊದಲು ಅನಂತ್ ಕುಮಾರ್ ಮನೆಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧ ಹಾಗೂ ಇನ್ನೂ ಅನೇಕ ಬಿಬಿಎಂಪಿ ಸದಸ್ಯರು ಪಾಲ್ಗೊಂಡಿದ್ದರು. ಈ ವೇಳೇ ತಾರಾರವರು ಅನಂತ್ ಕುಮಾರ್ ರವರಿಗೆ ರಾಖಿ ಕಟ್ಟುವ ಮೂಲಕ ಶುಭ ಹಾರೈಸಿದರು. ಅಲ್ಲದೇ ಅಣ್ಣ-ತಂಗಿಯ ವಿಶೇಷವಾದ ದಿನದಂದು ಎಲ್ಲರೂ ಪರಸ್ಪರ ರಕ್ಷಿಸಿಕೊಂಡು, ಭಾರತ ಮಾತೆ ಹಾಗೂ ಪ್ರಕೃತಿ ಮಾತೆಯನ್ನು ರಕ್ಷಣೆ ಮಾಡಬೇಕೆಂದು ಸಚಿವರು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇವೇಗೌಡ್ರಿಗೇ ಮೋಸ ಮಾಡ್ದೋರು ಕುಮಾರಸ್ವಾಮಿನ ಬಿಡ್ತರಾ: ಸುರೇಶ್ ಅಂಗಡಿ

    ದೇವೇಗೌಡ್ರಿಗೇ ಮೋಸ ಮಾಡ್ದೋರು ಕುಮಾರಸ್ವಾಮಿನ ಬಿಡ್ತರಾ: ಸುರೇಶ್ ಅಂಗಡಿ

    ಬೆಳಗಾವಿ: ಮಾಜಿ ಪ್ರಧಾನಿ ದೇವೇಗೌಡ ಅವರಿಗೇ ಮೋಸ ಮಾಡಿರುವ ಕಾಂಗ್ರೆಸ್ಸಿನವರು ಇನ್ನು ಕುಮಾರಸ್ವಾಮಿಯವರನ್ನು ಬಿಡುತ್ತಾರೆಯೇ ಎಂದು ಬಿಜೆಪಿ ಸಂಸದ ಸುರೇಶ್ ಅಂಗಡಿ ಪ್ರಶ್ನಿಸಿದ್ದಾರೆ.

    ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಹಾಗೂ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ ಅಸ್ಥಿ ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಸುದ್ದಿಗಾರರು ಸಿಎಂ ಸಿದ್ದರಾಮಯ್ಯನರ ಹೇಳಿಕೆ ಕುರಿತು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಸುರೇಶ್, ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗುತ್ತೇನೆ ಎನ್ನುವ ಮೂಲಕ ಸಮ್ಮಿಶ್ರ ಸರ್ಕಾರದಲ್ಲಿ ಹೊಸದಾದ ಅಲೆಯನ್ನು ಎಬ್ಬಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರಿಗೇ ಮೋಸ ಮಾಡಿರುವ ಕಾಂಗ್ರೆಸ್ಸಿನವರು ಇನ್ನು ಕುಮಾರಸ್ವಾಮಿಯವರನ್ನು ಬಿಡುತ್ತಾರಾ. ಇನ್ನು ಕೆಲವೇ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಹೇಳಿದ್ರು.

    ಈಗಾಗಲೇ ಸಮ್ಮಿಶ್ರ ಸರ್ಕಾರದಲ್ಲಿ ಹಗ್ಗ-ಜಗ್ಗಾಟ ಪ್ರಾರಂಭವಾಗಿದೆ. ಇವರಿಬ್ಬರ ಕಿತ್ತಾಟದಿಂದ ರಾಜ್ಯದಲ್ಲಿ ಯಾವುದೇ ಕೆಲಸ-ಕಾರ್ಯಗಳು ನಡೆಯುತ್ತಿಲ್ಲ. ಖುದ್ದು ಸಿದ್ದರಾಮಯ್ಯನವರೇ ಚಾಪೆ ಜಗ್ಗುವ ಕೆಲಸ ಮಾಡುತ್ತಿದ್ದಾರೆ. ಎರಡು ಪಕ್ಷಗಳ ಸಮ್ಮಿಶ್ರ ಮ್ಯಾರೇಜ್ ಯಾವಾಗ ಬೇಕಾದರೂ ಡೈವರ್ಸ್ ಆಗಬಹುದು. 15 ದಿನಗೊಳಗಾಗಿ ಈ ಸಮ್ಮಿಶ್ರ ಸರ್ಕಾರ ಪತನವಾಗಿ ನೂತನ ಸರ್ಕಾರಿ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರ ಅದಾಗೇ ಬೀಳೋವರೆಗೂ ನಾವು ಬೀಳಿಸುವ ಕೆಲಸಕ್ಕೆ ಕೈ ಹಾಕಲ್ಲ: ಸಿ.ಟಿ. ರವಿ

    ಸರ್ಕಾರ ಅದಾಗೇ ಬೀಳೋವರೆಗೂ ನಾವು ಬೀಳಿಸುವ ಕೆಲಸಕ್ಕೆ ಕೈ ಹಾಕಲ್ಲ: ಸಿ.ಟಿ. ರವಿ

    ಚಿಕ್ಕಮಗಳೂರು: ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅದಾಗೇ ಬೀಳುವವರೆಗೂ, ನಾವು ಬೀಳಿಸುವ ಕೆಲಸಕ್ಕೆ ಕೈ ಹಾಕಲ್ಲ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.

    ಸಮ್ಮಿಶ್ರ ಸರ್ಕಾರದ ಕುರಿತು ಪ್ರತಿಕ್ರಿಯಿಸಿದ ಅವರು, ಒಂದು ಹೊಟ್ಟೆ ತುಂಬುವವರೆಗೂ ಅಥವಾ ಹಿಟ್ಟು ಖಾಲಿಯಾಗೋವರೆಗೂ ಈ ಸರ್ಕಾರ ಇರಬಹುದು. ಈ ಸರ್ಕಾರ ಅದಾಗೇ ಅದು ಬೀಳೂವವರೆಗೂ, ನಾವು ಬೀಳಿಸುವ ಕೆಲಕ್ಕೆ ಕೈ ಹಾಕಲ್ಲ ಎಂದರು.

    ಜನರ ಬಯಕೆಯಲ್ಲೂ ಈ ಸರ್ಕಾರ ಇರಬೇಕೆಂದು ಇಲ್ಲ. ಅಷ್ಟೇ ಅಲ್ಲದೆ ಇರಬೇಕೆಂಬ ರೀತಿಯಲ್ಲಿ ಕೆಲಸ, ಕಾರ್ಯಗಳನ್ನ ಈ ಸರ್ಕಾರ ಮಾಡುತ್ತಿಲ್ಲ. ನಾನು ಮೊದಲೇ ಹೇಳಿದಂತೆ ಹಿಟ್ಟು ಹಳಸಿತ್ತು ನಾಯಿ ಕಾದಿತ್ತು ಎಂಬಂತಾಗಿದೆ ಈ ಸರ್ಕಾರದ ಪಾಡು ಎಂದು ವ್ಯಂಗ್ಯವಾಡಿದರು.

    ಈ ವೇಳೆ ವಿವೇಕಾನಂದರದ್ದು ಆಕಸ್ಮಿಕ ಸಾವಲ್ಲ, ಕೊಲೆ ಎಂಬ ಭಗವಾನರ ಹೇಳಿಕೆಗೂ ತಿರುಗೇಟು ನೀಡಿದ ಅವರು, ಕೆಲವರು ಪ್ರಚಾರದಲ್ಲಿ ಇರಲು ಹಾಗೂ ನಮಗೆ ಈ ರೀತಿಯೂ ಬುದ್ಧಿ ಭ್ರಮಣೆಯಾಗಿದೆ ಎಂದು ತೋರಿಸೋದಕ್ಕೆ ಕೆಲ ಹೇಳಿಕೆಯನ್ನ ಕೊಡುತ್ತಿರುತ್ತಾರೆ. ಭಗವಾನ್ ಹೇಳಿಕೆ ಹೊಸದೇನಲ್ಲ ಎಂದು ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮುಂಬೈ ದುರಂತ: ಜೀವ ಪಣಕ್ಕಿಟ್ಟು ಅಪಘಾತದ ಅನಾಹುತದಿಂದ ಹಲವರನ್ನು ರಕ್ಷಿಸಿದ ಪೈಲಟ್!

    ಮುಂಬೈ ದುರಂತ: ಜೀವ ಪಣಕ್ಕಿಟ್ಟು ಅಪಘಾತದ ಅನಾಹುತದಿಂದ ಹಲವರನ್ನು ರಕ್ಷಿಸಿದ ಪೈಲಟ್!

    ಮುಂಬೈ: ನಗರದ ವಸತಿ ಪ್ರದೇಶದಲ್ಲಿ ಪತನಗೊಳ್ಳಬೇಕಿದ್ದ ಲಘು ವಿಮಾನವನ್ನು ತನ್ನ ಜೀವ ಪಣಕ್ಕಿಟ್ಟು ನಿರ್ಜನ ಪ್ರದೇಶದ ಕಡೆ ಚಾಲಿಸುವಂತೆ ಮಾಡಿ ಇಬ್ಬರು ಪೈಲಟ್ ಹಲವರ ಜೀವ ರಕ್ಷಿಸಿದ್ದಾರೆ.

    ಹೌದು, ಗುರುವಾರ ಮುಂಬೈನ ವಸತಿ ಪ್ರದೇಶದಲ್ಲಿ ಪತನವಾದ ಖಾಸಗಿ ಕಂಪೆನಿಯ ಲಘು ವಿಮಾನ ಜನ ವಸತಿ ಪ್ರದೇಶದಲ್ಲಿ ಪತನವಾಗಬೇಕಿತ್ತು. ಆದರೆ ಈ ವೇಳೆ ಸಮಯಪ್ರಜ್ಞೆ ತೋರಿದ ಪೈಲಟ್ ಗಳು ನಿರ್ಜನ ಪ್ರದೇಶದ ಕಡೆ ಚಲಿಸಿವಂತೆ ಮಾಡಿ ತಮ್ಮ ಜೀವ ಕಳೆದು ಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ವಿಮಾನಯಾನ ಖಾತೆ ಮಾಜಿ ಸಚಿವ ಪ್ರಫುಲ್ ಪಟೇಲ್ ಪೈಲಟ್ ತ್ಯಾಗವನ್ನು ಮೆಚ್ಚಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    ನಾಲ್ಕು ಜನರಿದ್ದ ವಿಮಾನವು ಮುಂಬೈನ ಘಟಕೋಪರ್ ಭಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದಕ್ಕೆ ಅಪ್ಪಳಿಸಿತ್ತು. ಬೀಚ್ ಕ್ರಾಫ್ಟ್ ಕಿಂಗ್ ಏರ್ ಸಿ 90 ಟರ್ಬೋಪ್ರಾಪ್ ಹೆಸರಿನ ಲಘು ವಿಮಾನ ಅಪಘಾತಕ್ಕೀಡಾದ ಪರಿಣಾಮ ವಿಮಾನದಲ್ಲಿದ್ದ ಮುಖ್ಯ ಪೈಲಟ್ ಪಿಎಸ್ ರಜಪೂತ್, ಕೋ ಪೈಲಟ್ ಮಾರಿಯಾ ಝುಬೇರಿ, ಎಂಜಿನಿಯರ್ ಸುರ್ಬಿ ಮತ್ತು ಟೆಕ್ನಿಶಿಯನ್ ಮನೀಶ್ ಪಾಂಡೆ ಹಾಗೂ ಓರ್ವ ಸ್ಧಳೀಯ ವ್ಯಕ್ತಿ ಸೇರಿ ಐವರು ಸಜೀವ ದಹನವಾಗಿದ್ದರು.

    ವಿಮಾನ ಪತನಗೊಳ್ಳುತ್ತಿದ್ದಂತೆಯೇ ಬೆಂಕಿ ಕಾಣಿಸಿಕೊಂಡು ದಟ್ಟವಾದ ಹೊಗೆ ಸುತ್ತಲಿನ ಪ್ರದೇಶವನ್ನು ಆವರಿಸಿಕೊಂಡಿತ್ತು. ಈ ವೇಳೆ ಅಗ್ನಿಶಾಮಕದಳದ ವಾಹನಗಳು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಆದರೆ ಘಟನೆಯನ್ನು ಯಾರನ್ನು ರಕ್ಷಣೆ ಮಾಡಲು ಸಾಧ್ಯವಾಗಿರಲಿಲ್ಲ. ವಿಮಾನ ನಿಗಧಿತ ಗುರಿ ತಲುಪಲು ಕೇವಲ 7 ಮೈಲಿ ದೂರ ಪ್ರಯಾಣ ಮಾಡ ಬೇಕಾಗಿತ್ತು. ಕೇವಲ ಮೂರಿಂದ ನಾಲ್ಕು ನಿಮಷ ಸಮಯದಲ್ಲಿ ವಿಮಾನ ಲ್ಯಾಂಡ್ ಆಗುತ್ತಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ. ಸದ್ಯ ಘಟನೆಯ ಕುರಿತು ನಾಗರಿಕಾ ವಿಮಾನಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ) ತನಿಖೆಗೆ ಆದೇಶ ನೀಡಿದೆ.

  • ಪಿಡಿಪಿ ಮೈತ್ರಿಯಿಂದ ಹಿಂದೆ ಸರಿದ ಬಿಜೆಪಿ- ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ?

    ಪಿಡಿಪಿ ಮೈತ್ರಿಯಿಂದ ಹಿಂದೆ ಸರಿದ ಬಿಜೆಪಿ- ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ?

    ನವದೆಹಲಿ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ರಚನೆಯಾಗಿದ್ದ ಪಿಡಿಪಿ(ಪೀಪಲ್ ಡೆಮೋಕ್ರೇಟಿಕ್ ಪಾರ್ಟಿ) ಮತ್ತು ಬಿಜೆಪಿ ನೇತೃತ್ವದ ಸರ್ಕಾರ ಮುರಿದು ಬಿದ್ದಿದೆ.

    ದೆಹಲಿಯ ಬಿಜೆಪಿಯ ಮುಖ್ಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ರವರು “ದೇಶದ ಭದ್ರತೆಯ ದೃಷ್ಟಿಯಿಂದ ನಾವು ಕಣಿವೆ ರಾಜ್ಯದಲ್ಲಿ ಮೈತ್ರಿಯಿಂದ ಹಿಂದೆ ಸರಿಯುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

    ಈ ವೇಳೆ ಮಾತನಾಡಿದ ಅವರು, ವರಿಷ್ಠ ನಾಯಕರ ಜೊತೆ ಸಮಾಲೋಚನೆ ನಡೆಸಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ದಿನೇ ದಿನೇ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚುತ್ತಿದೆ. ರಾಜ್ಯದ ಜನತೆಯ ಮೂಲಭೂತ ಹಕ್ಕು ಅಪಾಯದಲ್ಲಿದೆ. ಇತ್ತೀಚೆಗೆ ನಡೆದ ಪತ್ರಕರ್ತ ಶುಜಾತ್ ಬುಖರಿ ಹಾಗೂ ಸೇನೆಯ ಔರಂಗಜೇಬ್ ಸೈನಿಕನ ಹತ್ಯೆಯಿಂದ ಕಣಿವೆ ರಾಜ್ಯದಲ್ಲಿ ಸರ್ಕಾರದ ವಿರುದ್ಧ ಜನ ದಂಗೆ ಎದ್ದಿದ್ದಾರೆ ಎಂದು ಹೇಳಿದರು.

    ಕಣಿವೆ ರಾಜ್ಯದಲ್ಲಿ ಸೂಕ್ತ ಹಿಡಿತ ಸಾಧಿಸಲು ಹಾಗೂ ಭದ್ರತೆಯ ದೃಷ್ಠಿಯಿಂದ ರಾಜ್ಯಪಾಲರ ಆಳ್ವಿಕೆಯೊಂದೇ ಪರಿಹಾರವಾಗಿದೆ. ಹೀಗಾಗಿ ರಾಜ್ಯಪಾಲರ ಆಳ್ವಿಕೆಗೆ ಬಿಜೆಪಿ ಆಗ್ರಹಿಸುತ್ತಿದೆ ಎಂದು ರಾಮ್ ಮಾಧವ್ ತಿಳಿಸಿದರು.

    2014ರ ಚುನಾವಣೆಯಲ್ಲಿ 87 ಕ್ಷೇತ್ರಗಳಿದ್ದ ಜಮ್ಮು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ 28 ಸ್ಥಾನಗಳಿಸಿದ್ದ ಪಿಡಿಪಿ ಮತ್ತು 25 ಸ್ಥಾನಗಳಿಸಿದ್ದ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಬಿಜೆಪಿಯ ದಿಢೀರ್ ನಿರ್ಧಾರದಿಂದ ಅಧಿಕಾರದಲ್ಲಿದ್ದ ಮೆಹಬೂಬ ಮುಫ್ತಿ ನೇತೃತ್ವದ ಸರ್ಕಾರವು ಪತನವಾಗಿದೆ.

     

  • ಜಾಗ್ವಾರ್ ವಿಮಾನ ಪತನ: ಪೈಲಟ್, ದನಕರು ಸಾವು

    ಜಾಗ್ವಾರ್ ವಿಮಾನ ಪತನ: ಪೈಲಟ್, ದನಕರು ಸಾವು

    ಗಾಂಧಿನಗರ: ಭಾರತೀಯ ವಾಯುಪಡೆಯ (ಐಎಎಫ್) ಯುದ್ಧ ವಿಮಾನವೊಂದು ಪತನಗೊಂಡ ಪರಿಣಾಮ ಪೈಲಟ್ ಸೇರಿದಂತೆ ಅನೇಕ ದನಕರುಗಳು ಮೃತಪಟ್ಟ ಘಟನೆ ಗುಜರಾತ್‍ನ ಕಛ್ ಸಮೀಪದಲ್ಲಿ ಮಂಗಳವಾರ ನಡೆದಿದೆ.

    ವಾಯುಪಡೆ ಕಮಾಂಡರ್ ಸಂಜಯ್ ಚೌಹಾನ್ ಮೃತಪಟ್ಟಿದ್ದಾರೆ. ಜಾಗ್ವಾರ್ ಪತನಗೊಂಡ ಯುದ್ಧ ವಿಮಾನವಾಗಿದ್ದು, ವೈಮಾನಿಕ ಪರೀಕ್ಷೆಗಾಗಿ ಜಾಮ್‍ನಗರನಿಂದ ಹಾರಾಟ ನಡೆಸಿತ್ತು. ಕಛ್ ಸಮೀಪದ ಗ್ರಾಮವೊಂದರ ಗೋಮಾಳದಲ್ಲಿ ವಿಮಾನ ಪತನಗೊಂಡ ಪರಿಣಾಮ ಪೈಲಟ್ ಸೇರಿದಂತೆ ಅನೇಕ ದನಕರುಗಳು ಮೃತಪಟ್ಟಿವೆ.

    ಎಂದಿನಂತೆ ಇಂದು ಬೆಳಿಗ್ಗೆ 10:30 ಗಂಟೆಗೆ ವೈಮಾನಿಕ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು, ವಿಮಾನ ಪತನದ ಕುರಿತು ತನಿಖೆ ನಡೆಸುವಂತೆ ವಾಯುಪಡೆ ಆದೇಶಿಸಿದೆ. ಜಾಗ್ವಾರ್ ಯುದ್ಧ ವಿಮಾನವು ಎರಡು ಎಂಜಿನ್ ಹೊಂದಿದ್ದು, ಶತ್ರುಪಡೆಗಳ ಮೇಲೆ ಬಾಂಬ್ ದಾಳಿ ನಡೆಸಲು ಬಳಕೆ ಮಾಡಲಾಗುತಿತ್ತು.

    ಪ್ರತಿ ಗಂಟೆಗೆ 1,350 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದ ಜಾಗ್ವಾರ್ 1979ರಲ್ಲಿಯೇ ವಾಯುಪಡೆ ಸೇರಿತ್ತು.

  • ಅಲ್ಜೀರಿಯಾ ಮಿಲಿಟರಿ ವಿಮಾನ ಪತನ – 100 ಸೈನಿಕರು ಸಾವು: ವಿಡಿಯೋ ನೋಡಿ

    ಅಲ್ಜೀರಿಯಾ ಮಿಲಿಟರಿ ವಿಮಾನ ಪತನ – 100 ಸೈನಿಕರು ಸಾವು: ವಿಡಿಯೋ ನೋಡಿ

    ಆಲ್ಜೀರ್ಸ್: ಆಲ್ಜೀರಿಯನ್ ಮಿಲಿಟರಿ ವಿಮಾನವೊಂದು ರಾಜಧಾನಿ ಆಲ್ಜೀರ್ಸ್‍ನ ವಿಮಾನ ನಿಲ್ದಾಣ ಹೊರಗೆ ಪತನಗೊಂಡಿದ್ದು 100 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

    ನೈಋತ್ಯ ಆಲ್ಜೀರಿಯಾದ ಬೆಚಾರ್ ನತ್ತ ಈ ವಿಮಾನ ಹೊರಟಿದ್ದ ವೇಳೆ ಅವಘಡ ಸಂಭವಿಸಿದೆ. ವಿಮಾನದಲ್ಲಿ 100ಕ್ಕೂ ಹೆಚ್ಚು ಮಿಲಿಟರಿ ಸಿಬ್ಬಂದಿಗಳಿದ್ದರು ಎಂದು ವರದಿಯಾಗಿದೆ.

    ವಿಮಾನ ಅಪಘಾತದಿಂದ ಆಲ್ಜೀರ್ಸ್ ನಗರದ ಪ್ರಮುಖ ಬೀದಿಗಳು ಕಪ್ಪು ಹೊಗೆಯಿಂದ ತುಂಬಿದೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

    ಬೌಫಾರಿಕ್ ಪ್ರದೇಶವೂ ನೈರುತ್ಯ ಅಲ್ಜೀರಿಯಾ ದಿಂದ ಸುಮಾರು 30 ಕಿಮೀ ದೂರವಿದೆ. ವಿಮಾನ ಅಪಘಾತವಾಗಿರುವ ದೃಶ್ಯಗಳು ಮಾಧ್ಯಮದಲ್ಲಿ ಪ್ರಸಾರವಾಗಿದ್ದು, ಅಪಘಾತಕ್ಕೆ ಒಳಗಾದ ವಿಮಾನದ ಬಾಲದ ತುದಿಯ ತುಣುಕು ಆಲಿವ್ ಮರದ ಮೇಲೆ ಸಿಕ್ಕಿಹಾಕಿಕೊಂಡಿದೆ ಕಾಣಿಸುತ್ತದೆ.

    ವಿಮಾನ ಪತನ ಹೊಂದಲು ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ.