Tag: ಪಡ್ಡೆಹುಲಿ

  • ‘ಪಡ್ಡೆಹುಲಿ’ ‘ವಿಷ್ಣು ಪ್ರಿಯ’ನಿಂದ ಹುಟ್ಟು ಹಬ್ಬದ ಶುಭಾಶಯಗಳು!

    ‘ಪಡ್ಡೆಹುಲಿ’ ‘ವಿಷ್ಣು ಪ್ರಿಯ’ನಿಂದ ಹುಟ್ಟು ಹಬ್ಬದ ಶುಭಾಶಯಗಳು!

    ‘ಪಡ್ಡೆ ಹುಲಿ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶ್ರೇಯಸ್ ಮೊದಲ ಸಿನಿಮಾದಲ್ಲೇ ಎಲ್ಲರ ಮನಸ್ಸನ್ನ ಗೆದ್ದಿದ್ರು. ‘ಪಡ್ಡೆ ಹುಲಿ’ ಮೂಲಕ ಸ್ಯಾಂಡಲ್‍ವುಡ್ ಒಬ್ಬ ಒಳ್ಳೆ ನಟನ ಪರಿಚಯ ಆಗಿದ್ದು, ಉತ್ತಮ ನಟನಾಗುವ ಎಲ್ಲಾ ಭರವಸೆಯನ್ನು ಶ್ರೇಯಸ್ ಮೂಡಿಸಿದ್ರು. ಹಾಗಾಗಿ ಎರಡನೇ ಸಿನಿಮಾವೂ ಬಲು ಬೇಗನೇ ಸೆಟ್ಟೇರಿತು. ‘ಪಡ್ಡೆಹುಲಿ’ಯಾಗಿ ಮಿಂಚಿದ್ದ ಶ್ರೇಯಸ್ ಇದೀಗ ‘ವಿಷ್ಣು ಪ್ರಿಯ’ನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ.

    ಖ್ಯಾತ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್. ‘ಪಡ್ಡೆಹುಲಿ’ಯಲ್ಲಿ ಲವ್ವರ್ ಬಾಯ್ ಆಗಿ ಹೆಂಗಳೆಯರ ಮನಸ್ಸನ್ನು ಕದ್ದಿದ್ರು. ಇವರ ಎರಡನೇ ಸಿನಿಮಾ ‘ವಿಷ್ಣು ಪ್ರಿಯ’ ಚಿತ್ರವನ್ನು ಮಲೆಯಾಳಂನ ವಿ.ಕೆ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ಇಂದು ಲವ್ವರ್ ಬಾಯ್ ಶ್ರೇಯಸ್ ಮಂಜುಗೆ ಹುಟ್ಟು ಹಬ್ಬದ ಸಂಭ್ರಮ. ಇಡೀ ಚಿತ್ರತಂಡ ಶ್ರೇಯಸ್‍ಗೆ ಶುಭ ಹಾರೈಸಿದೆ. ಹೊಸ ಎರಡು ಪೋಸ್ಟರ್ ರಿಲೀಸ್ ಮಾಡುವ ಮೂಲಕ, ಅದ್ಭುತವಾದ ಗಿಫ್ಟ್ ನ್ನು ಶ್ರೇಯಸ್‍ಗೆ ನೀಡಿದ್ದಾರೆ.

    ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಶ್ರೇಯಸ್ ಪಾತ್ರ ಹೇಗಿರಲಿದೆ ಎಂಬುದು ಸ್ಪಷ್ಟವಾಗುತ್ತಿದೆ. ಒಂದು ಪೋಸ್ಟರ್ ನಲ್ಲಿ ಲವ್ವರ್ ಬಾಯ್ ಆಗಿ ಕಾಣಿಸಿಕೊಂಡಿದ್ದು, ಇನ್ನೊಂದು ಪೋಸ್ಟರ್ ನಲ್ಲಿ ಮಾಸ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಫೈಟ್ ಮಾಡೋಕು ಸೈ, ಡ್ಯೂಯೆಟ್ ಹಾಡೋಕು ಜೈ ಅಂತಿದ್ದಾರೆ ನಮ್ಮ ಹೀರೋ ಶ್ರೇಯಸ್.

    ಶ್ರೇಯಸ್‍ಗೆ ನಾಯಕಿಯಾಗಿ ಮಲೆಯಾಳಂ ಬೆಡಗಿ, ಕಣ್ಸನ್ನೆ ಸುಂದರಿ ಪ್ರಿಯಾ ವಾರಿಯರ್ ಜೊತೆಯಾಗಿದ್ದಾರೆ. ಮಲೆಯಾಳಂ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರಂ ಸಂಗೀತ ನೀಡಲಿದ್ದಾರೆ. ಕೆ. ಮಂಜು ನಿರ್ಮಾಣದಲ್ಲಿ, ವಿನೋದ್ ಭಾರತೀ ಛಾಯಾಗ್ರಹಣ, ಸುರೇಶ್ ಯುಆರ್‍ಎಸ್ ಸಂಕಲನ ಇರಲಿದೆ. ಚಿತ್ರೀಕರಣ ಕಡೆ ಹಂತದಲ್ಲಿದ್ದು, ಸದ್ಯದಲ್ಲೇ ರಿಲೀಸ್ ಆಗಲಿದೆ.

  • ಗೆಲ್ಲುವ ಛಲಕ್ಕೆ ಮಾಸ್ಟರ್ ಪೀಸ್ ಈ ಪಡ್ಡೆಹುಲಿ!

    ಗೆಲ್ಲುವ ಛಲಕ್ಕೆ ಮಾಸ್ಟರ್ ಪೀಸ್ ಈ ಪಡ್ಡೆಹುಲಿ!

    ಹೆಜ್ಜೆ ಹೆಜ್ಜೆಗೂ ಅಬ್ಬರಿಸುತ್ತಾ ಸಾಗಿ ಬಂದಿದ್ದ ಪಡ್ಡೆಹುಲಿಯೀಗ ಪ್ರೇಕ್ಷಕರನ್ನು ಮುಖಾಮುಖಿಯಾಗಿದೆ. ಈ ಚಿತ್ರ ನೆಲದ ಸೊಗಡಿನ ಯುವ ಸಮುದಾಯದ ಕಥೆಯೊಂದಿಗೆ, ಎಲ್ಲವನ್ನೂ ದಾಟಿಕೊಂಡು ಗುರಿಯತ್ತ ಮುನ್ನುಗ್ಗೋ ಛಲಕ್ಕೆ ಕಸುವು ತುಂಬುವಂತೆ ಮತ್ತು ಕೇವಲ ಯುವ ಸಮೂಹ ಮಾತ್ರವಲ್ಲದೇ ಒಂದಿಡೀ ಫ್ಯಾಮಿಲಿ ಒಟ್ಟಾಗಿ ನೋಡಿ ಎಂಜಾಯ್ ಮಾಡುವ ರೀತಿಯಲ್ಲಿ ಮೂಡಿ ಬಂದಿದೆ. ಉಳಿದೆಲ್ಲ ಭಾವಗಳ ಜೊತೆಗೆ ಕನ್ನಡತನ, ಸಂಗೀತ ಪ್ರೇಮವನ್ನೂ ಉಸಿರಾಗಿಸಿಕೊಂಡಿರೋ ಮಾಸ್ ಗೆಟಪ್ಪಿನ ಪಡ್ಡೆಹುಲಿ ಒಂದೇ ಸಲಕ್ಕೆ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆದುಕೊಂಡಿದೆ.

    ಗುರುದೇಶಪಾಂಡೆ ನಿರ್ದೇಶನದ ಚಿತ್ರಗಳೆಂದರೇನೇ ನೆಲದ ಘಮಲಿನ ಕಥೆಯ ನಿರೀಕ್ಷೆಗಳೇಳುತ್ತವೆ. ಆದರೆ ಕಾಲೇಜು ಸ್ಟೋರಿ ಎಂಬಂತೆ ಬಿಂಬಿತವಾಗಿದ್ದ ಪಡ್ಡೆಹುಲಿಯೂ ಅಂಥಾದ್ದೇ ಸಾರ ಹೊಂದಿರುತ್ತದಾ ಎಂಬ ಬಗ್ಗೆ ಅನೇಕರಿಗೆ ಅನುಮಾನಗಳಿದ್ದವು. ಆದರೆ, ಪಡ್ಡೆಹುಲಿಯ ಕಥೆ ಕಾಲೇಜು ಕಾರಿಡಾರಿನಾಚೆಗೂ ಬಳಸಿ ಬಂದು, ಅಪ್ಪಟ ನೆಲದ ಸೊಗಡಿನ ಘಮಲನ್ನು ಪ್ರೇಕ್ಷಕರೆದೆಗೂ ಮೊಗೆದು ತಂದು ಸುರುವಿದೆ. ಅಂಥಾ ಪುಳಕ, ಥ್ರಿಲ್ಲಿಂಗ್, ಮೈನವಿರೇಳಿಸೋ ಸಾಹಸ, ಹನಿಗಣ್ಣಾಗುವಂಥಾ ತಿರುವುಗಳು, ಗಾಢ ಪ್ರೇಮ ಮತ್ತು ಸಂಗೀತಮಯ ಪಯಣ… ಇದಿಷ್ಟೂ ಭಾವಗಳೊಂದಿಗೆ ಪಡ್ಡೆಹುಲಿ ಅಪರೂಪದ ಚಿತ್ರ ನೋಡಿದ ಅನುಭವವೊಂದಕ್ಕೆ ಪ್ರೇಕ್ಷಕರನ್ನೆಲ್ಲ ವಾರಸುದಾರರನ್ನಾಗಿಸುತ್ತದೆ.

    ಶಾಲಾ ಆವರಣದಲ್ಲಿ ಕನ್ನಡ ಪ್ರೇಮದ ಹಿಮ್ಮೇಳದೊಂದಿಗೇ ಪಡ್ಡೆಹುಲಿಯ ಕಥೆ ಅನಾವರಣಗೊಳ್ಳುತ್ತಾ ಸಾಗುತ್ತದೆ. ಕನ್ನಡಕ್ಕೆ ಅವಮಾನಿಸಿದರೆ ಶಾಲೆಯ ಮುಖ್ಯಸ್ಥರ ಕಪಾಳಕ್ಕೆ ಬಾರಿಸಲೂ ಹಿಂದೆ ಮುಂದೆ ನೋಡದ ತಂದೆಯಾಗಿ ಕ್ರೇಜಿóಸ್ಟಾರ್ ರವಿಚಂದ್ರನ್ ನಟಿಸಿದ್ದಾರೆ. ಕಥೆಯೆಂಬುದು ಕಾಲೇಜಿನೊಳಗೇ ನಡೆದರೂ ಕೂಡಾ ಅದರ ಭಾವಗಳು ಬದುಕಿನ ನಾನಾ ಮುಖಗಳಿಗೆ ಕನ್ನಡಿ ಹಿಡಿಯುತ್ತವೆ. ಕಾಲೇಜೊಂದರ ಭಾವಲೋಕವನ್ನು ಹಸಿ ಹಸಿಯಾಗಿ ಹಿಡಿದಿಡೋ ಚಿತ್ರಗಳು ಸಾಕಷ್ಟು ಬಂದಿರಬಹುದು. ಆದರೆ ಪಡ್ಡೆಹುಲಿಯಷ್ಟು ಪರಿಣಾಮಕಾರಿಯಾದ ಎನರ್ಜಿಟಿಕ್ ಕಥೆಗಳು ತುಂಬಾನೇ ವಿರಳ. ಅದನ್ನು ಪರಿಣಾಮಕಾರಿಯಾಗಿಸುವಲ್ಲಿ ನಿರ್ದೇಶಕ ಗುರು ದೇಶಪಾಂಡೆಯವರು ಹಾಕಿರುವ ಶ್ರಮ ನಿಜಕ್ಕೂ ಸಾರ್ಥಕವಾಗಿದೆ.

    ಇಲ್ಲಿ ಕಷ್ಟದಿಂದಲೇ ಕಾಲೇಜು ಕಾರಿಡಾರಿಗೆ ಕಾಲಿಟ್ಟು ಆ ಬಳಿಕ ತಾನೇ ತಾನಾಗಿ ಆ ಲೋಕದ ನಾನಾ ಪಲ್ಲಟಗಳಿಗೆ ಪಕ್ಕಾಗುವ ಮಧ್ಯಮ ವರ್ಗದ ಹುಡುಗನ ಕಥೆಯಿದೆ. ಈ ಹಾದಿಯಲ್ಲೆದುರಾಗೋ ಎಲ್ಲ ಸವಾಲುಗಳನ್ನೂ ಎದುರಿಸುತ್ತಾ ತಾನಂದುಕೊಂಡಿದ್ದನ್ನು ಸಾಧಿಸಲು ಮುಂದಾಗುವ ಪಕ್ಕಾ ಮಾಸ್ ಪಾತ್ರಕ್ಕೆ ನಾಯಕ ಶ್ರೇಯಸ್ ಜೀವ ತುಂಬಿದ್ದಾರೆ. ಪ್ರತೀ ಫ್ರೇಮಿನಲ್ಲಿಯೂ ಪಳಗಿದ ನಟನಂಥಾ ಪ್ರೌಢ ನಟನೆಯನ್ನೂ ಅವರು ನೀಡಿದ್ದಾರೆ. ನಾಯಕಿ ನಿಶ್ವಿಕಾ ನಾಯ್ಡು ಕೂಡಾ ಅದಕ್ಕೆ ಭರ್ಜರಿಯಾಗಿಯೇ ಸಾಥ್ ಕೊಟ್ಟಿದ್ದಾರೆ. ರವಿಚಂದ್ರನ್, ಸುಧಾ ರಾಣಿ, ರಕ್ಷಿತ್ ಶೆಟ್ಟಿ ಸೇರಿದಂತೆ ಎಲ್ಲರೂ ಪಡ್ಡೆಹುಲಿಯ ಆವೇಗಕ್ಕೆ ಕಸುವು ತುಂಬಿದ್ದಾರೆ.

    ಪಡ್ಡೆಹುಲಿಯ ಕಥೆ ತೆರೆದುಕೊಳ್ಳೋದೇ ಚಿತ್ರದುರ್ಗದ ನೆಲದಿಂದ. ಇಲ್ಲಿನ ಮಧ್ಯಮವರ್ಗದ ಕನ್ನಡ ಮೇಷ್ಟರ ಕುಟುಂಬದ ಕೂಸಾದ ನಾಯಕ ಸಂಪತ್ ರಾಜ್ ಪಾಲಿಗೆ ಸಂಗೀತವೆಂದರೆ ಬಾಲ್ಯದಿಂದಲೂ ಪ್ರಾಣ. ತಾನು ಜಗತ್ತೇ ಬೆರಗಾಗಿ ನೋಡುವಂಥಾ ಸಂಗೀತಗಾರನಾಗಬೇಕೆಂಬ ಕನಸು ಆತನ ಮನಸಲ್ಲಿ ಎಳವೆಯಿಂದಲೇ ಮೊಳಕೆಯೊಡೆದು ಬಿಟ್ಟಿರುತ್ತೆ. ಆದರೆ ಹೆತ್ತವರಿಗೆ ಮಗ ಚೆನ್ನಾಗಿ ಓದಿಕೊಂಡು ಒಳ್ಳೆ ಕೆಲಸ ಪಡೆಯಬೇಕೆಂಬ ಆಸೆ. ಅತ್ತ ಜೀವದಂತೆ ಪ್ರೀತಿಸೋ ಹೆತ್ತವರ ಆಸೆಯನ್ನೂ ಹೊಸಕುವಂತಿಲ್ಲ. ತನ್ನ ಕನಸನ್ನೂ ಕೈ ಬಿಡುವಂತಿಲ್ಲ. ಕಡೆಗೂ ಹೆತ್ತವರ ಆಸೆಯಂತೆಯೇ ದುರ್ಗದಿಂದ ಬೆಂಗಳೂರಿಗೆ ಬಂದು ಇಂಜಿನಿಯರಿಂಗ್ ಕಾಲೇಜಿಗೆ ಅಡಿಯಿರಿಸೋ ದುರ್ಗದ ಪಡ್ಡೆ ಹುಲಿಗೆ ನಾನಾ ಸವಾಲುಗಳೆದುರಾಗುತ್ತವೆ. ಅವಮಾನಗಳು ಎದೆಗಿರಿಯುತ್ತವೆ. ಇದೆಲ್ಲದರಾಚೆಗೆ ಪಡ್ಡೆಹುಲಿ ಸಂಗೀತಗಾರನಾಗೋ ಕನಸನ್ನು ನನಸು ಮಾಡಿಕೊಳ್ತಾನಾ ಎಂಬುದೇ ಅಸಲೀ ಕುತೂಹಲ. ಇದನ್ನಿಟ್ಟುಕೊಂಡು ಯಾರೇ ಚಿತ್ರಮಂದಿರಕ್ಕೆ ತೆರಳಿದರೂ ಪಡ್ಡೆ ಹುಲಿಯ ಕಡೆಯಿಂದ ಅಪೂರ್ವ ಅನುಭವವಾಗೋದು ಗ್ಯಾರೆಂಟಿ!

    ದುರ್ಗದಿಂದ ಆರಂಭವಾಗಿ ಕಾಲೇಜು ಕಾರಿಡಾರಿನಲ್ಲಿ ಹರಿದಾಡೋ ಈ ಕಥೆ ಅಪರೂಪದ್ದು. ಫ್ಯಾಮಿಲಿ, ಪ್ರೀತಿ, ಸಾಹಸ, ಸೆಂಟಿಮೆಂಟ್ ಸೇರಿದಂತೆ ನಾನಾ ಭಾವ ಹೊಂದಿರೋ ಈ ಕಥೆಯಲ್ಲಿ ಆಪ್ತವಾಗೋದು ಪಡ್ಡೆಹುಲಿಯ ಗೆಲ್ಲುವ ಛಲ. ಈ ಚಿತ್ರವನ್ನು ಯಾರೇ ನೋಡಿದರೂ ಪಡ್ಡೆಹುಲಿಯಾಗಿ ಅಬ್ಬರಿಸಿರೋ ಶ್ರೇಯಸ್ ಪಾತ್ರ ಮನಸೊಳಗೆ ಪ್ರತಿಷ್ಠಾಪಿತವಾಗುತ್ತೆ. ಶ್ರೇಯಸ್ ಅವರಂತೂ ಇದು ಮೊದಲ ಚಿತ್ರವೆಂಬ ಸುಳಿವೇ ಬಿಟ್ಟುಕೊಡದಂತೆ ಅಬ್ಬರಿಸಿದ್ದಾರೆ. ಡ್ಯಾನ್ಸ್, ಫೈಟ್ ಸೇರಿದಂತೆ ಎಲ್ಲದರಲ್ಲಿಯೂ ಗಮನ ಸೆಳೆಯುತ್ತಾರೆ. ಥರ ಥರದ ಗೆಟಪ್ಪುಗಳಲ್ಲಿ ಅದಕ್ಕೆ ತಕ್ಕುದಾಗಿ ಅಭಿನಯಿಸೋ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ. ಈ ಮೂಲಕವೇ ಮಾಸ್ ಹೀರೋ ಆಗಿ ನೆಲೆಗೊಳ್ಳುವ ಸೂಚನೆಯನ್ನೂ ನೀಡಿದ್ದಾರೆ. ಇನ್ನುಳಿದಂತೆ ಈ ಚಿತ್ರದ ಅಖಂಡ ಹನ್ನೊಂದು ಹಾಡುಗಳು ಹೊರ ಬಂದಿದ್ದಕ್ಕೂ ಕಥೆಗೂ ನೇರಾ ನೇರ ಕನೆಕ್ಷನ್ನುಗಳಿವೆ. ಅದೇನೆಂಬುದೂ ಕೂಡಾ ಈ ಕಥೆಯ ಪ್ರಧಾನ ಸಾರ.

    ಹೊಸಾ ನಾಯಕನ ಆಗಮನಕ್ಕೆ ಏನೇನು ಬೇಕೋ ಅಂಥಾ ಎಲ್ಲ ಅಂಶಗಳೊಂದಿಗೆ ಗುರುದೇಶಪಾಂಡೆ ಅವರು ಪಡ್ಡೆಹುಲಿಯನ್ನು ರೂಪಿಸಿದ್ದಾರೆ. ರವಿಚಂದ್ರನ್ ಸೇರಿದಂತೆ ಎಲ್ಲ ಪಾತ್ರಗಳಲ್ಲಿಯೂ ಹೊಸತನವಿದೆ. ನಿರ್ಮಾಪಕ ರಮೇಶ್ ರೆಡ್ಡಿಯವರ ಧಾರಾಳತನವೆಂಬುದು ಪಡ್ಡೆಹುಲಿಯನ್ನು ಪ್ರತೀ ಹಂತದಲ್ಲಿಯೂ ಲಕ ಲಕಿಸುವಂತೆ ಮಾಡಿದೆ. ಕೊಂಚ ಆಚೀಚೆ ಆಗಿದ್ದರೂ ಸಾಮಾನ್ಯ ಕಥೆಯಾಗಬಹುದಾಗಿದ್ದ ಪಡ್ಡೆಹುಲಿಯ ಚಮತ್ಕಾರವನ್ನು ವಿಶೇಷವಾಗಿಸಿರೋದು ನಿರ್ದೇಶಕರ ಜಾಣ್ಮೆ. ಒಟ್ಟಾರೆಯಾಗಿ ಕನ್ನಡಕ್ಕೆ ಮಾಸ್ ಹೀರೋ ಎಂಟ್ರಿಯಾಗಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಶ್ರೇಯಸ್ ಪಡ್ಡೆಹುಲಿಯಾಗಿ ಖಂಡಿತಾ ಇಷ್ಟವಾಗುತ್ತಾರೆ.

    ರೇಟಿಂಗ್: 4/5

  • ಪಡ್ಡೆಹುಲಿಯ ಮೇಲೆ ಚಾಲೆಂಜಿಂಗ್ ಸ್ಟಾರ್ ಗೂ ಲವ್ವಾಯ್ತು!

    ಪಡ್ಡೆಹುಲಿಯ ಮೇಲೆ ಚಾಲೆಂಜಿಂಗ್ ಸ್ಟಾರ್ ಗೂ ಲವ್ವಾಯ್ತು!

    ಬೆಂಗಳೂರು: ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಅಡಿಯಲ್ಲಿ ನಿರ್ಮಾಣ ಮಾಡಿರೋ ಚಿತ್ರ ಪಡ್ಡೆಹುಲಿ. ಗುರುದೇಶಪಾಂಡೆ ನಿರ್ದೇಶನದ ಈ ಸಿನಿಮಾ ಈಗಾಗಲೇ ಹಾಡು ಮತ್ತು ಟ್ರೈಲರ್ ಮೂಲಕ ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿಸಿದೆ. ಹೊಸ ಹುಡುಗನ ಚಿತ್ರವೊಂದನ್ನು ಈ ಪರಿಯಾಗಿ ಅದ್ಧೂರಿತನದೊಂದಿಗೆ ರೂಪಿಸಿರೋ ಪರಿ ಕಂಡು ಎಲ್ಲರೂ ಅಚ್ಚರಿಗೊಂಡಿದ್ದಾರೆ.

    ಸಿನಿಮಾ ರಂಗದಲ್ಲಿಯೇ ಪಡ್ಡೆಹುಲಿ ನಾಯಕ ಶ್ರೇಯಸ್ ಮೊದಲ ಸಿನಿಮಾಗಾಗಿ ರೆಡಿಯಾಗಿರೋ ರೀತಿಯ ಬಗ್ಗೆ ಬೆರಗು ಹರಡಿಕೊಂಡಿದೆ. ಹಾಗಿದ್ದ ಮೇಲೆ ಯಾರೇ ಹೊಸಬರು ಸಿನಿಮಾ ಮಾಡಿದರೂ ಅದನ್ನು ಗಮನಿಸುತ್ತಾ ಬೆನ್ತಟ್ಟುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಬಗ್ಗೆ ಮಾತಾಡದಿರಲು ಸಾಧ್ಯವೇ?

    ಪಡ್ಡೆಹುಲಿಯಾಗಿ ಮಿಂಚಲು ಸಜ್ಜಾಗಿರೋ ಶ್ರೇಯಸ್ ಅವರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಡಿ ಹೊಗಳಿದ್ದಾರೆ. ನಾಯಕನಾಗಬೇಕನ್ನೋ ಕನಸು ಮಾಮೂಲು. ಒಂದಷ್ಟು ಮಂದಿ ನಾಯಕರಾಗಿ ಅಡಿಯಿರಿಸುತ್ತಾರೆ. ಆದರೆ ಅದಕ್ಕೊಂದು ಪೂರ್ವ ತಯಾರಿ, ಕಠಿಣ ಪರಿಶ್ರಮ ಬೇಕೇ ಬೇಕೆಂಬುದು ಅನೇಕರಿಗೆ ಗೊತ್ತಿರೋದಿಲ್ಲ. ಆದರೆ ಶ್ರೇಯಸ್ ಮೊದಲ ಸಿನಿಮಾಗೆ ಹೇಗೆಲ್ಲ ತಯಾರಾಗಬೇಕೆಂಬುದಕ್ಕೆ ಮಾದರಿಯಂತಿದ್ದಾರೆಂದು ದರ್ಶನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಮೂಲಕ ವಿಷ್ಣು ಅಭಿಮಾನಿಗಳ ಜೊತೆಗೆ ದರ್ಶನ್ ಅಭಿಮಾನಿಗಳೂ ಕೂಡಾ ಪಡ್ಡೆಹುಲಿ ಚಿತ್ರದತ್ತ ಚಿತ್ತ ನೆಟ್ಟಿದ್ದಾರೆ. ಇದರಿಂದಾಗಿಯೇ ಪಡ್ಡೆಹುಲಿಯ ಗೆಲುವು ಮತ್ತಷ್ಟು ನಿಚ್ಚಳವಾದಂತಾಗಿದೆ.

  • ಶ್ರೇಯಸ್ ಪಡ್ಡೆಹುಲಿಯಾದದ್ದರ ಹಿಂದಿದೆ ಪರಿಶ್ರಮದ ಕಹಾನಿ!

    ಶ್ರೇಯಸ್ ಪಡ್ಡೆಹುಲಿಯಾದದ್ದರ ಹಿಂದಿದೆ ಪರಿಶ್ರಮದ ಕಹಾನಿ!

    ಬೆಂಗಳೂರು: ಪಡ್ಡೆಹುಲಿ ಚಿತ್ರದ ನವನಾಯಕ ಶ್ರೇಯಸ್ ಅವರ ಶ್ರದ್ಧೆ ಎಂಥಾದ್ದೆಂಬುದರ ಝಲಕುಗಳು ಈಗಾಗಲೇ ಅನಾವರಣಗೊಂಡಿವೆ. ಶ್ರೇಯಸ್ ಅವರಲ್ಲೊಬ್ಬ ಪಳಗಿದ ನಟನ ಚಹರೆಯನ್ನ ಕಂಡು ಪ್ರೇಕ್ಷಕರು ಕೂಡಾ ಥ್ರಿಲ್ ಆಗಿದ್ದಾರೆ. ಎಂ.ರಮೇಶ್ ರೆಡ್ಡಿ ನಿರ್ಮಾಣ ಮಾಡಿರೋ ಈ ಚಿತ್ರ, ಗುರುದೇಶಪಾಂಡೆಯವರ ನಿರ್ದೇಶನದಲ್ಲಿ ಇದೇ ಏಪ್ರಿಲ್ 19ರಂದು ತೆರೆ ಕಾಣಲು ರೆಡಿಯಾಗಿದೆ.

    ಈ ಹಿಂದೆ ರಾಜಾಹುಲಿ ಎಂಬ ಸೂಪರ್ ಹಿಟ್ ಕೊಟ್ಟಿದ್ದವರು ನಿರ್ದೇಶಕ ಗುರು ದೇಶಪಾಂಡೆ. ಅವರು ಪಡ್ಡೆಹುಲಿ ಚಿತ್ರವನ್ನೂ ಕೂಡಾ ರಾಜಾಹುಲಿಯಂತೆಯೇ ಬಲು ಕಾಳಜಿಯಿಂದ ರೂಪಿಸಿದ್ದಾರೆ. ಪ್ರತಿಯೊಂದರಲ್ಲಿಯೂ ಪರಿಪೂರ್ಣತೆ ಬಯಸುವ ಗುರುದೇಶಪಾಂಡೆ ಆ ದಿಸೆಯಲ್ಲಿಯೇ ಶ್ರೇಯಸ್ ಅವರನ್ನು ಪಳಗಿದ ನಟನಂತೆ ರೂಪಿಸಿದ್ದಾರೆ.

    ಈ ಸಿನಿಮಾಗಾಗಿಯೇ ದೈಹಿಕವಾಗಿಯೂ ಫಿಟ್ ಆಗಿರೋ ಶ್ರೇಯಸ್ ನಟನೆಯಲ್ಲಿಯೂ ತರಬೇತಿ ಪಡೆದುಕೊಂಡಿದ್ದಾರೆ. ಡ್ಯಾನ್ಸ್, ಫೈಟ್ ಸೇರಿದಂತೆ ಈ ಚಿತ್ರಕ್ಕೆ ಏನೇನು ಬೇಕೋ ಅದೆಲ್ಲದರಲ್ಲಿಯೂ ಪಳಗಿಕೊಂಡಿದ್ದಾರೆ. ಎಂಥಾ ರಿಸ್ಕೀ ಸನ್ನಿವೇಶಗಳಿದ್ದರೂ ಮತ್ತೊಂದು ಯೋಚನೆ ಮಾಡದೆ ಅಖಾಡಕ್ಕಿಳಿದು ಬಿಡುತ್ತಿದ್ದ ಶ್ರೇಯಸ್ ಅವರ ಬದ್ಧತೆಯ ಬಗ್ಗೆ ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಇಡೀ ಚಿತ್ರತಂಡದಲ್ಲೊಂದು ಮೆಚ್ಚುಗೆಯಿದೆ.

    ಇಂಥಾ ಪರಿಶ್ರಮಕ್ಕೆ ಯಾವತ್ತಿದ್ದರೂ ಫಲ ಇದ್ದೇ ಇರುತ್ತೆ. ಹೀಗೆ ಶ್ರಮ ವಹಿಸಿ ಬಂದವರನ್ನು ಕನ್ನಡದ ಸಹೃದಯಿ ಪ್ರೇಕ್ಷಕರು ದೂರ ತಳ್ಳಿದ ಉದಾಹರಣೆಗಳೇ ಇಲ್ಲ. ಪಡ್ಡೆಹುಲಿಯನ್ನೂ ಕೂಡಾ ಪ್ರೇಕ್ಷಕರು ಅಂಥಾದ್ದೇ ಮನಸ್ಥಿತಿಯೊಂದಿಗೆ ಸ್ವೀಕರಿಸಿ ಗೆಲ್ಲಿಸೋ ಎಲ್ಲ ಲಕ್ಷಣಗಳೂ ದಟ್ಟವಾಗಿವೆ.

  • ಪಡ್ಡೆಹುಲಿ: ಇಂದು ಬಿಡುಗಡೆಯಾಗಲಿದೆ ಮತ್ತೊಂದು ಲಿರಿಕಲ್ ವೀಡಿಯೋ ಸಾಂಗ್!

    ಪಡ್ಡೆಹುಲಿ: ಇಂದು ಬಿಡುಗಡೆಯಾಗಲಿದೆ ಮತ್ತೊಂದು ಲಿರಿಕಲ್ ವೀಡಿಯೋ ಸಾಂಗ್!

    ಬೆಂಗಳೂರು: ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣ ಮಾಡಿರುವ ಚಿತ್ರ ಪಡ್ಡೆಹುಲಿ. ಗುರು ದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಪ್ರೇಕ್ಷಕರಿಗೆ ಹತ್ತಿರವಾದದ್ದೇ ಹಾಡುಗಳ ಮೂಲಕ. ಈ ವಿಚಾರದಲ್ಲಿ ಈ ಚಿತ್ರದ ದಾಖಲೆಯನ್ನು ಯಾರೂ ಸದ್ಯಕ್ಕೆ ಮುರಿಯೋದು ಕಷ್ಟವಿದೆ. ಇದೀಗ ಮತ್ತೊಂದು ಹಾಡನ್ನು ಬಿಡುಗಡೆ ಮಾಡಲು ಚಿತ್ರ ತಂಡ ಮುಂದಾಗಿದೆ!

    ಬದುಕು ಜಟಕಾ ಬಂಡಿ ಎಂಬ ಈ ಹಾಡು ಇಂದು ರಾತ್ರಿ ಒಂಬತ್ತು ಘಂಟೆಗೆ ಪಿಆರ್ ಕೆ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಲಿದೆ. ಹೀಗೆ ಹೊರ ಬರಲಿರೋ ಲಿರಿಕಲ್ ವೀಡಿಯೋ ಕೂಡಾ ಪಡ್ಡೆಹುಲಿಯ ಹಿಟ್ ಲಿಸ್ಟಿಗೆ ಸೇರಿಕೊಳ್ಳೋದರಲ್ಲಿ ಯಾವ ಸಂಶಯವೂ ಇಲ್ಲ.

    ಹಲವಾರು ವಿಚಾರಗಳಲ್ಲಿ ಪಡ್ಡೆಹುಲಿ ಮುಖ್ಯವಾಗುತ್ತದಾದರೂ ಶ್ರೇಯಸ್ ನಾಯಕನಾಗಿ ಲಾಂಚ್ ಆಗುತ್ತಿರೋ ಈ ಚಿತ್ರದ ಬಗ್ಗೆ ಹೇಳ ಹೊರಟರೆ ಮೊದಲು ಕಾಣಸಿಗೋದೇ ಹಾಡುಗಳ ಮೆರವಣಿಗೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಮಾಡಿರೋ ಹನ್ನೊಂದು ಹಾಡುಗಳೂ ಈಗ ಟ್ರೆಂಡಿಂಗ್‍ನಲ್ಲಿವೆ. ಅದರಲ್ಲಿ ಐದು ಹಾಡುಗಳಂತೂ ನಿಜಕ್ಕೂ ವಿಶೇಷವಾದವುಗಳು. ಅದರಲ್ಲಿ ಈಗ ಬಿಡುಗಡೆಯಾಗಲಿರೋ ಬದುಕು ಜಟಕಾಬಂಡಿ ಕೂಡಾ ಸೇರಿಕೊಂಡಿದೆ.

    ಬಹುಶಃ ಪ್ರೇಮಲೋಕದ ನಂತರದಲ್ಲಿ ಪಡ್ಡೆಹುಲಿಯೇ ಹಾಡುಗಳ ವಿಚಾರದಲ್ಲಿ ಫಸ್ಟ್. ಇಷ್ಟು ಸಂಖ್ಯೆಯ ಹಾಡುಗಳು ಯಾವ ಚಿತ್ರದಲ್ಲಿಯೂ ಇರಲಿಲ್ಲ. ಅಷ್ಟು ಸಂಖ್ಯೆಯ ಹಾಡುಗಳೆಲ್ಲವೂ ಹಿಟ್ ಆಗಿವೆ ಅನ್ನೋದು ಪಡ್ಡೆಹುಲಿಯ ನಿಜವಾದ ಹೆಗ್ಗಳಿಕೆ.

  • ಆರ್‌ಸಿಬಿ ಸೋತ್ರೂ ಲವ್ವಲ್ಲಿ ಕಪ್ ನಮ್ದೇ ಅಂತು ಪಡ್ಡೆಹುಲಿ!

    ಆರ್‌ಸಿಬಿ ಸೋತ್ರೂ ಲವ್ವಲ್ಲಿ ಕಪ್ ನಮ್ದೇ ಅಂತು ಪಡ್ಡೆಹುಲಿ!

    ಕೆಲ ದಿನಗಳ ಹಿಂದಷ್ಟೇ ಪಡ್ಡೆ ಹುಲಿ ಚಿತ್ರದ ಹಾಡುಗಳ ಜ್ಯೂಕ್ ಬಾಕ್ಸ್ ಬಿಡುಗಡೆಯಾಗಿದೆ. ಪ್ರೇಕ್ಷಕರು ಅಷ್ಟೂ ಹಾಡುಗಳನ್ನ ಒಟ್ಟೊಟ್ಟಿಗೇ ಕೇಳಿ ಸಂಭ್ರಮಿಸುತ್ತಾ ಪಡ್ಡೆಹುಲಿಯನ್ನು ಟ್ರೆಂಡಿಂಗ್ ನಲ್ಲಿಟ್ಟಿದ್ದಾರೆ. ಈ ಜ್ಯೂಕ್ ಬಾಕ್ಸ್ ನಲ್ಲಿ ಬರೋಬ್ಬರಿ ಹತ್ತು ಹಾಡುಗಳಿವೆ. ಅದಾಗಲೇ ಅದಕ್ಕೆ ಮತ್ತೊಂದು ಹಾಡನ್ನು ಚಿತ್ರತಂಡ ಸೇರಿಸಿ ಬಿಟ್ಟಿದೆ!

    ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿಗೆ ನೆನ್ನೆ ನಡೆದ ಐಪಿಎಲ್ ಲೀಗ್ ನಲ್ಲಿ ಆರ್‌ಸಿಬಿ ಸೋತು ಸುಣ್ಣವಾಗಿದ್ದೇ ಸ್ಫೂರ್ತಿಯಾಗಿ ಹೊಸ ಹಾಡೊಂದನ್ನು ರೂಪಿಸಲಾಗಿದೆ. ಈ ಹಾಡು ಇದೀಗ ಭರ್ಜರಿಯಾಗಿಯೇ ಬಿಡುಗಡೆಯಾಗಿದೆ.

    ಐಪಿಎಲ್ ಹೋಗಲಿ ಆರ್‌ಸಿಬಿ ಬೀಳಲಿ ಈ ಸಲ ಲವ್ವಲ್ಲಿ ಕಪ್ ನಮ್ದೆ… ಎಂಬ ವೀಡಿಯೋ ಹಾಡೀಗ ಬಿಡುಗಡೆಯಾಗಿದೆ. ಚೂರ್ ಚೂರಾಗಿದೆ ಅನ್ನೋ ಶೀರ್ಷಿಕೆಯ ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಜನೀಶ್ ಮತ್ತು ಸಿಆರ್ ಬಾಬ್ಬಿ ಈ ಹಾಡನ್ನು ಹಾಡಿದ್ದಾರೆ.

    ಎನರ್ಜಿಟಿಕ್ ಆಗಿ ಮೂಡಿ ಬಂದಿರೋ ಈ ವೀಡಿಯೋ ಸಾಂಗ್ ನಲ್ಲಿ ನಾಯಕ ಶ್ರೇಯಸ್ ಕೂಡಾ ಎಂದಿನಂತೆ ಎನರ್ಜಿಟಿಕ್ ಆಗಿಯೇ ಸ್ಟೆಪ್ಸ್ ಹಾಕಿದ್ದಾರೆ. ಸಮ್ಮೋಹಕವಾಗಿ ಮೂಡಿ ಬಂದಿರೋ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿರುವವರು ಜಾನಿ ಮಾಸ್ಟರ್. ರಾಜಕುಮಾರ ಚಿತ್ರದ ಅಪ್ಪು ಡ್ಯಾನ್ಸ್ ಮತ್ತು ನಟಸಾರ್ವಭೌಮ ಚಿತ್ರದ ಓಪನ್ ದ ಬಾಟಲ್ ಮುಂತಾದ ಹಿಟ್ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದು ಇದೇ ಜಾನಿ ಮಾಸ್ಟರ್. ಅಲ್ಲು ಅರ್ಜುನ್, ಪ್ರಭಾಸ್ ಮುಂತಾದವರ ಚಿತ್ರಗಳಿಗೂ ನೃತ್ಯ ಸಂಯೋಜನೆ ಮಾಡಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆ ಹೊಂದಿರೋ ಜಾನಿ ಮಾಸ್ಟರ್ ಪಡ್ಡೆಹುಲಿ ಹಾಡಿಗೆ ಚೆಂದದ ನೃತ್ಯ ಸಂಯೋಜನೆ ಮಾಡಿದ್ದಾರೆ.

    ಇಂದು ಹನ್ನೊಂದು ಘಂಟೆಗೆ ಬಿಡುಗಡೆಯಾಗಿರೋ ಈ ಹಾಡೂ ಕೂಡಾ ಪಡ್ಡೆಹುಲಿಯ ಹಿಟ್ ಲಿಸ್ಟಿಗೆ ಸೇರಿಕೊಳ್ಳಲಿರೋದು ಪಕ್ಕಾ. ಇದೀಗ ಎಲ್ಲೆಡೆ ಐಪಿಎಲ್ ಜ್ವರ ಏರಿಕೊಂಡಿದೆ. ಆರ್‍ಸಿಬಿ ಸೋತಿರೋದು ಎಲ್ಲರಿಗೂ ನಿರಾಸೆ ತಂದಿದೆ. ಇದೇ ಹೊತ್ತಿನಲ್ಲಿ ಬಿಡುಗಡೆಯಾಗಿರೋ ಈ ಹಾಡು ಪಡ್ಡೆಹುಲಿಯನ್ನು ಮತ್ತಷ್ಟು ಜನರಿಗೆ ತಲುಪಿಸೋದರಲ್ಲಿ ಯಾವುದೇ ಸಂಶಯಗಳಿಲ್ಲ.

  • ಪಡ್ಡೆಹುಲಿಯ ಹತ್ತು ಹಾಡುಗಳನ್ನು ಒಟ್ಟಿಗೇ ಕೇಳೋ ಅವಕಾಶ!

    ಪಡ್ಡೆಹುಲಿಯ ಹತ್ತು ಹಾಡುಗಳನ್ನು ಒಟ್ಟಿಗೇ ಕೇಳೋ ಅವಕಾಶ!

    ಎಮ್. ರಮೇಶ್ ರೆಡ್ಡಿ ನಿರ್ದೇಶನ ಮಾಡಿರುವ ಪಡ್ಡೆಹುಲಿ ಚಿತ್ರದ ಹಾಡುಗಳು ಸೃಷ್ಟಿಸಿರುವ ಕ್ರೇಜ್ ಕಡಿಮೆಯದ್ದೇನಲ್ಲ. ರವಿಚಂದ್ರನ್ ಸೃಷ್ಟಿಸಿದ್ದ ಪ್ರೇಮಲೋಕ ಮತ್ತೊಮ್ಮೆ ಸೃಷ್ಟಿಯಾದಂಥಾ ಸಂಭ್ರಮವೊಂದು ಈ ಹಾಡುಗಳ ಮೂಲಕವೇ ಪ್ರೇಕ್ಷಕರೆದೆಗೂ ದಾಟಿಕೊಂಡಿದೆ. ಇದುವರೆಗೂ ಒಂದೊಂದಾಗಿ ಹೊರ ಬಂದಿದ್ದ ಹಾಡುಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಆದರೀಗ ಪಡ್ಡೆ ಹುಲಿಯ ಅಷ್ಟೂ ಹಾಡುಗಳನ್ನು ಒಟ್ಟಿಗೆ ಕೇಳುವ ಸದಾವಕಾಶ ಕೂಡಿ ಬಂದಿದೆ.

    ಯಾಕೆಂದರೆ, ಚಿತ್ರತಂಡ ಪಡ್ಡೆಹುಲಿ ಹಾಡುಗಳ ಜ್ಯೂಕ್ ಬಾಕ್ಸನ್ನು ಇದೀಗ ಅನಾವರಣಗೊಳಿಸಿದೆ. ಇದು ಕನ್ನಡ ಪ್ರೇಕ್ಷಕರ ಪಾಲಿಗೆ ಅಕ್ಷರಶಃ ಹಬ್ಬ. ಯಾಕೆಂದರೆ, ಹಿಟ್ ಹಾಡುಗಳ ಸರಮಾಲೆಯೇ ಈ ಜ್ಯೂಕ್ ಬಾಕ್ಸ್ ನಲ್ಲಿದೆ. ಒಂದು ಚಿತ್ರವೆಂದರೆ ಮೂರರಿಂದ ಆರು ಹಾಡುಗಳಿರೋದು ಮಾಮೂಲಿ. ಆದರೆ ಪಡ್ಡೆಹುಲಿ ಚಿತ್ರದ ಈ ಜ್ಯೂಕ್ ಬಾಕ್ಸ್ ನಲ್ಲಿ ಬರೋಬ್ಬರಿ ಹತ್ತು ಹಾಡುಗಳಿದ್ದಾವೆ. ಅವೆಲ್ಲವನ್ನೂ ಒಟ್ಟೊಟ್ಟಾಗಿ ಕೇಳೋ ಸದಾವಕಾಶವೊಂದು ಈಗ ಪ್ರೇಕ್ಷಕರ ಪಾಲಿಗೆ ಕೂಡಿ ಬಂದಿದೆ.

    ನಾನ್ ತುಂಬಾ ಹೊಸಬ ಬಾಸು, ಯಂಡ ಯೆಂಡತಿ, ಬದುಕು ಜಟಕಾ ಬಂಡಿ, ಒಂದು ಮಾತಲ್ಲಿ, ನಿನ್ನ ಪ್ರೇಮದ ಪರಿಯ, ಚೂರ್ ಚೂರ್, ಕಳಬೇಡ ಕೊಲಬೇಡ, ಜೀ ಜೀ ಜೀ, ಹೇಳಿ ಹೋಗು ಕಾರಣ ಹಾಗೀ ಟೈಟಲ್ ಸಾಂಗ್ ಸೇರಿದಂತೆ ಒಟ್ಟು ಹತ್ತು ಹಾಡುಗಳು ಈ ಜ್ಯೂಕ್ ಬಾಕ್ಸ್ ನಲ್ಲಿವೆ. ನಿರ್ದೇಶಕ ಗುರುದೇಶಪಾಂಡೆಯವರ ಸಾರಥ್ಯದಲ್ಲಿ ಈ ಹಾಡುಗಳೆಲ್ಲವೂ ಕೂಡಾ ಈಗಾಗಲೇ ಹಿಟ್ ಆಗಿವೆ. ಈ ಮೂಲಕ ಭರತ್ ಬಿಜೆ ಸಂಗೀತ ಮೋಡಿ ಮಾಡಿದೆ.

    ಇದೆಲ್ಲದಕ್ಕಿಂತಲೂ ವಿಶೇಷವಾಗಿ ಈ ಹಾಡುಗಳ ಮೂಲಕವೇ ನವನಾಯಕ ಶ್ರೇಯಸ್ ಅವರ ನಟನಾ ಚಾತುರ್ಯವೂ ಅನಾವರಣಗೊಂಡಿದೆ. ಖ್ಯಾತ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಈ ಚಿತ್ರಕ್ಕಾಗಿ ಎಂಥಾ ತಯಾರಿ ಮಾಡಿಕೊಂಡಿದ್ದಾರೆಂಬುದೂ ಹಾಡುಗಳ ಮೂಲಕವೇ ಜಾಹೀರಾಗಿದೆ. ಈ ಬಗ್ಗೆ ಪ್ರೇಕ್ಷಕರೂ ಕೂಡಾ ಮೆಚ್ಚುಗೆಯಿಂದಲೇ ಈ ಚಿತ್ರಕ್ಕಾಗಿ ಕಾತರದಿಂದ ಕಾಯಲಾರಂಭಿಸಿದ್ದಾರೆ.

  • ಪಡ್ಡೆಹುಲಿಯ ಬಾಯಲ್ಲಿ ಬಸವಣ್ಣನ ವಚನ!

    ಪಡ್ಡೆಹುಲಿಯ ಬಾಯಲ್ಲಿ ಬಸವಣ್ಣನ ವಚನ!

    ಬೆಂಗಳೂರು: ಎಂ. ರಮೇಶ್ ರೆಡ್ಡಿ ನಿರ್ಮಾಣ ಮಾಡಿರೋ ಪಡ್ಡೆಹುಲಿ ಚಿತ್ರ ಹಾಡುಗಳ ಮೂಲಕವೇ ಹುಟ್ಟಿಸಿರೋ ಕ್ರೇಜ್ ಸಣ್ಣದ್ದೇನಲ್ಲ. ಆದರೆ ನಿರ್ದೇಶಕ ಗುರುದೇಶಪಾಂಡೆ ಒಂದರ ಹಿಂದೊಂದರಂತೆ ಹೊಸ ಪ್ರಯೋಗದ, ಎಲ್ಲರನ್ನೂ ಸೆಳೆಯುವಂಥಾ ಹಾಡುಗಳನ್ನು ರೂಪಿಸುತ್ತಲೇ ಇದ್ದಾರೆ. ಇದೀಗ ಮಹಾಶಿವರಾತ್ರಿಯ ಕೊಡುಗೆಯೆಂಬಂತೆ ಬಸವಣ್ಣನವರ ಪ್ರಸಿದ್ಧ ವಚನವೊಂದನ್ನು ಹಾಡಾಗಿಸಿ ಬಿಡುಗಡೆಗೊಳಿಸಿದ್ದಾರೆ.

    ಅಜನೀಶ್ ಲೋಕನಾಥ್ ಈ ಮೂಲಕ ಮತ್ತೊಂದು ಕಮಾಲ್ ಸೃಷ್ಟಿಸಿದ್ದಾರೆ. ಬಸವಣ್ಣನವರ ಜನಪ್ರಿಯ ‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ’ ಎಂಬ ವಚನಕ್ಕೆ ಯುವ ಸಮುದಾಯವನ್ನು ಆವರಿಸಿಕೊಳ್ಳುವಂಥಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಜೀವನದ ಅಸಲಿ ಮೌಲ್ಯ ಸಾರುವ ಈ ವಚನವನ್ನು ಯುವ ಸಮುದಾಯಕ್ಕೂ ದಾಟಿಸುವಂಥಾ ಈ ಪ್ರಯತ್ನಕ್ಕೆ ನಾರಾಯಣ ಶರ್ಮಾ ಅದ್ಭುತವಾಗಿಯೇ ಧ್ವನಿಯಾಗಿದ್ದಾರೆ. ಈ ಹಾಡಿನ ಮೂಲಕವೇ ನಾರಾಯಣ ಶರ್ಮಾ ಕನ್ನಡದ ಭರವಸೆಯ ಗಾಯಕರಾಗಿಯೂ ಹೊರ ಹೊಮ್ಮಿದ್ದಾರೆ.

    ಇದು ಈಗಿನ ಕಾಲಕ್ಕೆ ತುರ್ತಾಗಿ ಬೇಕಾಗಿದ್ದ ಪ್ರಯತ್ನ. ಇದರ ಮೂಲಕವೇ ಕೆ.ಮಂಜು ಅವರ ಪುತ್ರ ಶ್ರೇಯಸ್ ಮತ್ತೊಂದು ಅಚ್ಚರಿದಾಯಕ ಶೇಡಿನಲ್ಲಿಯೂ ಗಮನ ಸೆಳೆದಿದ್ದಾರೆ. ಈ ಹಾಡು ಮೂಡಿ ಬಂದಿರೋ ರೀತಿಯೇ ಶ್ರದ್ಧೆಗೆ ಯಾವತ್ತಿಗೂ ಸೋಲಿಲ್ಲ ಎಂಬುದಕ್ಕೂ ತಾಜಾ ಉದಾಹರಣೆ. ಒಂದೇ ಗುಕ್ಕಿನಲ್ಲಿ ಒಳಗಿಳಿದು ಬಿಡುವಂತಿರೋ ಈ ಹಾಡು ಬಸವಣ್ಣನವರ ವಚನಗಳನ್ನು ಈ ಪೀಳಿಗೆಗೂ ಪರಿಣಾಮಕಾರಿಯಾಗಿಯೇ ದಾಟಿಸಿರೋದು ನಿಜವಾದ ವಿಶೇಷ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಡ್ಡೆಹುಲಿ ಟ್ರೈಲರ್ ಲಾಂಚ್ ಮಾಡಿದ್ರು ಚಾಲೆಂಜಿಂಗ್ ಸ್ಟಾರ್!

    ಪಡ್ಡೆಹುಲಿ ಟ್ರೈಲರ್ ಲಾಂಚ್ ಮಾಡಿದ್ರು ಚಾಲೆಂಜಿಂಗ್ ಸ್ಟಾರ್!

    ಎಮ್. ರಮೇಶ್ ರೆಡ್ಡಿ ನಿರ್ಮಾಣದ, ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ನಾಯಕನಾಗಿ ಅಭಿನಯಿಸಿರುವ ಪಡ್ಡೆಹುಲಿ ಚಿತ್ರದ ಟ್ರೈಲರ್ ಲಾಂಚ್ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರೀತಿಯಿಂದ ಈ ಟ್ರೈಲರ್ ಅನ್ನು ಅನಾವರಣಗೊಳಿಸಿ ಶುಭ ಕೋರಿದ್ದಾರೆ. ಹೀಗೆ ಯಜಮಾನನ ಕಡೆಯಿಂದ ಹೊರ ಬಂದಿರೋ ಈ ಟ್ರೈಲರ್ ನಿಜಕ್ಕೂ ಬೆರಗಾಗಿಸುವಂತಿದೆ!

    ಪಡ್ಡೆಹುಲಿ ಎಂಬ ಹೆಸರು ಕೇಳಿದಾಕ್ಷಣ ಇದು ಯುವ ಆವೇಗ ಹೊಂದಿರೋ ಮಾಸ್ ಸಿನಿಮಾ ಎಂಬ ನಿರ್ಧಾರಕ್ಕೆ ಬಂದಿದ್ದರು. ಆದರೆ ಅದು ಅರ್ಧ ಸತ್ಯ ಎಂಬುದನ್ನು ನಿರೂಪಸುತ್ತಲೇ ಈ ಟ್ರೈಲರ್ ಬೇರೆಯದ್ದೇ ಲೋಕವೊಂದನ್ನು ಎಲ್ಲರ ಮುಂದೆ ತೆರೆದಿಟ್ಟಿದೆ. ಪ್ರಧಾನವಾಗಿ ಹೇಳಬೇಕೆಂದರೆ ಪಡ್ಡೆಹುಲಿ ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್. ಇದರೊಳಗೆ ಫ್ಯಾಮಿಲಿ ಸೆಂಟಿಮೆಂಟ್, ಪ್ರೀತಿ, ಮಾಸ್, ಕಾಮಿಡಿ ಸೇರಿದಂತೆ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಬಲ್ಲ ಸಕಲ ಅಂಶಗಳೂ ಇದ್ದಾವೆ. ಈ ವಿಚಾರವನ್ನ ಟ್ರೈಲರ್ ಸಾಕ್ಷೀಕರಿಸಿದೆ.

    ಗುರುದೇಶಪಾಂಡೆ ನಿರ್ದೇಶನದ ಈ ಚಿತ್ರದ ಟ್ರೈಲರ್ ನಲ್ಲಿ ಶ್ರೇಯಸ್ ಕಾಣಿಸಿಕೊಂಡಿರೋ ರೀತಿ ಎಂಥವರನ್ನೂ ಸೆಳೆಯುವಂತಿವೆ. ಅವರು ಮಾಸ್ ಸನ್ನಿವೇಶಗಳಲ್ಲಿ ಯಾವ ಥರ ವಿಜೃಂಭಿಸಿದ್ದಾರೆಂದರೆ, ಎಂಥವರೂ ಶಿಳ್ಳೆ ಹೊಡೆದು ಕನ್ನಡದ ಟೈಗರ್ ಶ್ರಾಫ್ ಅಂತ ಹೇಳಿ ಬಿಡುವಷ್ಟು ಚೆಂದಗೆ ಕಾಣಿಸಿಕೊಂಡಿದ್ದಾರೆ. ಶ್ರೇಯಸ್‍ಗೆ ಜೋಡಿಯಾಗಿ ನಿಶ್ವಿತಾ ನಾಯ್ಡು ಮುದ್ದುಮುದ್ದಾಗಿ ಕಾಣಿಸಿಕೊಂಡಿದ್ದಾರೆ.

    ವಿಶೇಷ ಅಂದ್ರೆ ಒಂದು ಕಾಲದಲ್ಲಿ ಜೋಡಿಯಾಗಿ ನಟಿಸಿದ್ದ ಸುಧಾರಾಣಿ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಪಡ್ಡೆಹುಲಿಯಲ್ಲಿಯೂ ಜೋಡಿಯಾಗಿ ನಟಿಸಿದ್ದಾರೆ. ಅವರಿಲ್ಲಿ ಮತ್ತೊಂದು ಸಲ ಮೋಡಿ ಮಾಡೋ ಸೂಚನೆಗಳೂ ಕಾಣಿಸಿವೆ. ಒಟ್ಟಾರೆಯಾಗಿ ಈ ಟ್ರೈಲರ್ ಪಡ್ಡೆಹುಲಿಯ ಅಸಲೀ ಖದರ್ ಏನೆಂಬುದನ್ನ ಸ್ಪಷ್ಟವಾಗಿಯೇ ಜಾಹೀರು ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಡ್ಡೆಹುಲಿ ಟ್ರೈಲರ್ ಲಾಂಚ್ ಮಾಡಲಿದ್ದಾರೆ ದರ್ಶನ್!

    ಪಡ್ಡೆಹುಲಿ ಟ್ರೈಲರ್ ಲಾಂಚ್ ಮಾಡಲಿದ್ದಾರೆ ದರ್ಶನ್!

    ಬೆಂಗಳೂರು: ಚಿತ್ರರಂಗಕ್ಕೆ ಪಾದಾರ್ಪಣೆ ಮಾಡೋ ಹೊಸಬರ ಬೆನ್ತಟ್ಟಿ ಪ್ರೋತ್ಸಾಹಿಸುತ್ತಾ ಸಹಕಾರ ನೀಡುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ದೊಡ್ಡ ಗುಣ. ಅದೇ ರೀತಿ ಅವರು ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಗೂ ಕೂಡಾ ಆರಂಭದಿಂದಲೂ ಬೆಂಬಲ ಸೂಚಿಸುತ್ತಾ ಬಂದಿದ್ದಾರೆ.

    ಇದೀಗ ಶ್ರೇಯಸ್ ಅಭಿನಯದ ಪಡ್ಡೆಹುಲಿ ಚಿತ್ರದ ಟ್ರೈಲರ್ ಅನ್ನು ಖುದ್ದು ದರ್ಶನ್ ಅವರೇ ಬಿಡುಗಡೆ ಮಾಡಲಿದ್ದಾರೆ!

    ನಾಳೆ ಅಂದರೆ ಫೆಬ್ರವರಿ 26ರಂದು ಸಂಜೆ 6 ಗಂಟೆಗೆ ಈ ಟ್ರೈಲರ್ ಅನಾವರಣಗೊಳ್ಳಲಿದೆ. ಪಿಆರ್‍ಕೆ ಸಂಸ್ಥೆಯ ಯೂಟ್ಯೂಬ್ ಚಾನಲ್ ಮೂಲಕ ದರ್ಶನ್ ಇದನ್ನು ಅನಾವರಣಗೊಳಿಸಲಿದ್ದಾರೆ. ಈ ಹಿಂದೆ ಪಡ್ಡೆಹುಲಿ ಚಿತ್ರದ ಒಂದು ಹಾಡನ್ನು ನೋಡಿ ಮೆಚ್ಚಿಕೊಂಡಿದ್ದ ದರ್ಶನ್ ಮೆಚ್ಚುಗೆಯ ಮಾತಾಡಿದ್ದರು. ಶ್ರೇಯಸ್ ಸಾಕಷ್ಟು ತಯಾರಿ ಮಾಡಿಕೊಂಡೇ ಅಖಾಡಕ್ಕಿಳಿದಿದ್ದರ ಬಗ್ಗೆ ಭೇಷ್ ಅಂದಿದ್ದರು.

    ಇಂಥಾ ಅಗಾಧವಾದ ಪೂರ್ವ ತಯಾರಿಯೊಂದಿಗೇ ಚಿತ್ರೀಕರಣಗೊಂಡು ಭಾರೀ ಸದ್ದು ಮಾಡುತ್ತಿರೋ ಚಿತ್ರ ಪಡ್ಡೆಹುಲಿ. ತೇಜಸ್ವಿನಿ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಎಮ್. ರಮೇಶ್ ರೆಡ್ಡಿಯವರು ನಿರ್ಮಾಣ ಮಾಡಿರೋ ಈ ಚಿತ್ರ ಈಗಾಗಲೇ ಹಾಡೂ ಸೇರಿದಂತೆ ನಾನಾ ರೀತಿಯಲ್ಲಿ ಸುದ್ದಿ ಕೇಂದ್ರದಲ್ಲಿದೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಟ್ರೈಲರ್ ಬಿಡುಗಡೆ ಮಾಡಲು ಮುಂದಾಗೋ ಮೂಲಕ ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿಯ ಖದರ್ ಮತ್ತಷ್ಟು ಹೆಚ್ಚಿದಂತಾಗಿದೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv