Tag: ಪಠ್ಯಪ್ರಮ

  • ರಾಜಸ್ತಾನದ ಶಾಲಾ ಪಠ್ಯಪುಸ್ತಕಗಳಲ್ಲಿ ವೀರಯೋಧ ಅಭಿನಂದನ್!

    ರಾಜಸ್ತಾನದ ಶಾಲಾ ಪಠ್ಯಪುಸ್ತಕಗಳಲ್ಲಿ ವೀರಯೋಧ ಅಭಿನಂದನ್!

    ಜೈಪುರ: ಪಾಕ್ ಕಪಿಮುಷ್ಟಿಯಿಂದ ಭಾರತಕ್ಕೆ ವಾಪಾಸ್ಸಾಗಿರುವ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಈ ವೇಳೆ ವೀರಯೋಧನ ಕಥೆಯನ್ನು ಪಾಠವಾಗಿ ಶಾಲಾ ಪಠ್ಯಪುಸ್ತಕಗಳಲ್ಲಿ ಸೇರಿಸಬೇಕು ಎಂದು ರಾಜಸ್ತಾನದ ಶಿಕ್ಷಣ ಮಂತ್ರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

    ಹೌದು, ಭಾರತದ ಹೆಮ್ಮೆಯ ಪುತ್ರ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಗೌರವ ಸಲ್ಲಿಸಲು ರಾಜಸ್ತಾನ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಅಭಿನಂದನ್ ಅವರ ಶೌರ್ಯ, ಪರಾಕ್ರಮವನ್ನು ಮಕ್ಕಳು ತಿಳಿಯಬೇಕು ಎಂದು ಜೋಧಪುರದ ಪೈಲಟ್ ಶಿಕ್ಷಣ ಶಾಲೆಯ ಪಠ್ಯಪುಸ್ತಕದಲ್ಲಿ ಅಭಿನಂದನ್ ಅವರ ಬಗ್ಗೆ ಪಾಠವನ್ನು ಸೇರಿಸಲಾಗುತ್ತದೆ. ಈ ಮೂಲಕ ವೀರಯೋಧನಿಗೆ ನಮ್ಮ ಕಡೆಯಿಂದ ಗೌರವ ಸಲ್ಲಿಸುತ್ತಿದ್ದೇವೆ ಎಂದು ರಾಜಸ್ತಾನದ ಶಿಕ್ಷಣ ಮಂತ್ರಿ ಗೋವಿಂದ್ ಸಿಂಗ್ ದೋತಸ್ರಾ ಸೋಮವಾರದಂದು ಟ್ವೀಟ್ ಮಾಡಿದ್ದಾರೆ.

    ಯಾವ ತರಗತಿಯ ಪಠ್ಯದಲ್ಲಿ ಅಭಿನಂದನ್ ಅವರ ಪಾಠವನ್ನು ಸೇರಿಸಲಾಗುತ್ತಿದೆ ಎಂಬುದರ ಕುರಿತು ರಾಜಸ್ತಾನ ಶಿಕ್ಷಣ ಮಂತ್ರಿಗಳು ತಿಳಿಸಿಲ್ಲ. ಈ ಹಿಂದೆ ರಾಜಸ್ತಾನದ ಶಿಕ್ಷಣ ಮಂತ್ರಿಗಳು ಪುಲ್ವಾಮಾ ದಾಳಿಯ ಬಗ್ಗೆ ಪಾಠವನ್ನು ಶಾಲಾ ಪಠ್ಯದಲ್ಲಿ ಸೇರಿಸಬೇಕು ಎಂದು ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿದ್ದರು. ಅದನ್ನು ಪಠ್ಯಕ್ರಮ ವಿಮರ್ಶೆ ಸಮಿತಿ ಒಪ್ಪಿಕೊಂಡಿತ್ತು. ಶಾಲಾ ಪಠ್ಯಕ್ರಮಗಳ ಬಗ್ಗೆ ಗಮನ ವಹಿಸಲು ಈಗಾಗಲೇ ಎರಡು ಸಮಿತಿಯನ್ನು ರಾಜಸ್ತಾನ ಸರ್ಕಾರ ನಿಯೋಜಿಸಿದೆ. ಈಗ ಅಭಿನಂದನ್ ಅವರ ಕುರಿತು ಪಾಠವನ್ನು ಶಾಲಾ ಪಠ್ಯದಲ್ಲಿ ಸೇರಿಸಬೇಕು ಎಂದು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

    ಈ ಹಿಂದೆ ಇದ್ದ ಸರ್ಕಾರ ಶಾಲಾ ಪಠ್ಯಕ್ರಮಗಳಲ್ಲಿಯೂ ರಾಜಕಾರಣ ನಡೆಸಿದೆ. ನಮ್ಮ ದೇಶದ ಸಂಸ್ಕೃತಿ, ಕಲೆ, ಇತಿಹಾಸ ಹಾಗೂ ಮಹಾನ್ ವ್ಯಕ್ತಿಗಳ ಕುರಿತು ಪಠ್ಯಕ್ರಮದಲ್ಲಿ ನಿರ್ಲಕ್ಷಿಸಿದ್ದಾರೆ ಎಂದು ಶಿಕ್ಷಣ ಮಂತ್ರಿಗಳು ಆರೋಪಿಸಿದ್ದಾರೆ.

    ಕಳೆದ ಕೆಲವು ದಿನಗಳ ಹಿಂದೆಯಷ್ಟೇ, ಸುಮಾರು 31.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ನೂತನ ಸರ್ಕಾರಿ ಸೇನಾ ಅಕಾಡೆಮಿಯನ್ನು ಸಿಕರ್‍ನಲ್ಲಿ ರಾಜಸ್ತಾನ ಶಿಕ್ಷಣ ಇಲಾಖೆ ಉದ್ಘಾಟನೆ ಮಾಡಿತ್ತು. ಹಾಗೆಯೇ ಈ ಅಕಾಡೆಮಿಗೆ ಮಹಾರಾವ್ ಶೇಖಾಜಿ ಶಶಸ್ತ್ರ ಬಲ್ ಪ್ರಸಿಕ್ಷಣ್ ಅಕಾಡೆಮಿ ಎಂದು ಹೆಸರಿಡಲಾಗಿತ್ತು. ಈ ಅಕಾಡೆಮಿ ಮೂಲಕ ಯುವಕರು ಭಾರತೀಯ ಭೂ ಸೇನೆ, ವಾಯುಪಡೆ ಹಾಗೂ ನೌಕಾಪಡೆಗೆ ಸೇರಲು ಸಹಾಯವಾಗುವ ತರಬೇತಿಯನ್ನು ನೀಡಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv