Tag: ಪಟ್ಟಾಭಿಷೇಕ

  • ಮಂತ್ರಾಲಯದಲ್ಲಿಂದು ರಾಯರ ಜನ್ಮದಿನಾಚರಣೆ- 7 ದಿನಗಳ ಗುರುವೈಭವೋತ್ಸವಕ್ಕೆ ಅದ್ಧೂರಿ ತೆರೆ

    ಮಂತ್ರಾಲಯದಲ್ಲಿಂದು ರಾಯರ ಜನ್ಮದಿನಾಚರಣೆ- 7 ದಿನಗಳ ಗುರುವೈಭವೋತ್ಸವಕ್ಕೆ ಅದ್ಧೂರಿ ತೆರೆ

    ರಾಯಚೂರು: ಗುರು ರಾಯರ ಸನ್ನಿಧಿ ಮಂತ್ರಾಲಯದಲ್ಲಿ ಕಳೆದ ಆರು ದಿನಗಳಿಂದ ನಡೆಯುತ್ತಿರುವ ರಾಯರ ಗುರು ವೈಭವೋತ್ಸವದ ಸಂಭ್ರಮಕ್ಕೆ ಇಂದು ವಿದ್ಯುಕ್ತ ತೆರೆ ಬೀಳಲಿದೆ. ಗುರು ರಾಘವೇಂದ್ರ ಸ್ವಾಮಿಯ 399ನೇ ಪಟ್ಟಾಭಿಷೇಕ ಹಾಗೂ 425ನೇ ವರ್ಧಂತಿ ಉತ್ಸವ ಅಂಗವಾಗಿ ಆಚರಣೆಗೆ ಬಂದಿರುವ ಗುರು ವೈಭವೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಇಂದು ರಾಯರ 425ನೇ ಹುಟ್ಟುಹಬ್ಬವಾಗಿದ್ದು, ರಾಯರ ಜನ್ಮದಿನವನ್ನ ಭಕ್ತರು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ.

    ಫೆಬ್ರವರಿ 25 ರಂದು ರಾಯರ 399ನೇ ಪಟ್ಟಾಭಿಷೇಕ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ರಾಯರ ಪಟ್ಟಾಭಿಷೇಕ ಹಾಗೂ ವರ್ಧಂತಿ ಉತ್ಸವ ಹಿನ್ನೆಲೆ ಮಂತ್ರಾಲಯದಲ್ಲಿ ಏಳು ದಿನ ಕಾಲ ಗುರು ವೈಭವೋತ್ಸವವನ್ನು ಆಚರಿಸಲಾಗುತ್ತಿದೆ. ಈ ಏಳು ದಿನ ಕಾಲ ಬೆಳಗ್ಗೆಯಿಂದಲೇ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಮೂಲ ರಾಮದೇವರ ಪೂಜೆ ನಡೆಯುತ್ತವೆ. ಇಂದು ರಾಯರ ಪಾದುಕೆಗಳನ್ನು ನವರತ್ನಖಚಿತ ರಥದಲ್ಲಿಟ್ಟು ಮೆರವಣಿಗೆ ಮಾಡಲಾಯಿತು. ಹಿಂದಿನಿಂದ ಬಂದ ಪರಂಪರೆಯನ್ನು ಮಠದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಮೆರವಣಿಗೆ ಬಳಿಕ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಭಕ್ತರಿಗೆ ಆಶಿರ್ವಚನ ನೀಡಿದರು.

    ಪ್ರತೀ ಬಾರಿಯಂತೆ ಈ ಬಾರಿಯೂ ವರ್ಧಂತಿ ಉತ್ಸವಕ್ಕೆ ವಿಶೇಷವಾಗಿ ತಿರುಪತಿ ತಿರುಮಲ ದೇವಾಲಯದಿಂದ ರಾಯರಿಗೆ ಶೇಷವಸ್ತ್ರಗಳ ಸಮರ್ಪಣೆ ನಡೆಯಿತು. ತಮಿಳುನಾಡಿನ ಚೆನೈನ ನಾದಹಾರ ಸೇವಾ ಟ್ರಸ್ಟ್ ನ 400 ಕ್ಕೂ ಹೆಚ್ಚು ಕಲಾವಿದರು ಒಟ್ಟಿಗೆ ಹಾಡುವ ಮೂಲಕ ನಾದಸೇವೆಯನ್ನು ಮಾಡಿದರು. ಕಳೆದ 16 ವರ್ಷಗಳಿಂದ ನಾದಹಾರ ಸೇವೆಯನ್ನು ಈ ಭಕ್ತರು ನೆರವೇರಿಸತ್ತಾ ಬಂದಿದ್ದಾರೆ. ದೇಶದ ಮೂಲೆ ಮೂಲೆಯಿಂದ ಬಂದ ಭಕ್ತರು ಭಾವಪರವಶರಾಗಿದ್ದರು.

    ಗುರು ವೈಭವೋತ್ಸವ ಹಿನ್ನೆಲೆ ಮಠದಲ್ಲಿ ಪ್ರತಿದಿನ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಪ್ರವಚನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಮಾಡಲಾಗುತ್ತದೆ. ಇಂದು ಉತ್ಸವಕ್ಕೆ ತೆರೆಬೀಳಲಿದ್ದು, ನಾನಾ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಠಕ್ಕೆ ಆಗಮಿಸಿದ ಭಕ್ತರು ಗುರುವೈಭವೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ.

  • ಲಿಂಗಾಯತ ಮಠಕ್ಕೆ ಮುಸ್ಲಿಂ ಸ್ವಾಮೀಜಿ ಪಟ್ಟಾಭಿಷೇಕ – ಪೀಠಾರೋಹಣದ ಜೊತೆ ಸರ್ವಧರ್ಮದ ಸಾಮೂಹಿಕ ವಿವಾಹ

    ಲಿಂಗಾಯತ ಮಠಕ್ಕೆ ಮುಸ್ಲಿಂ ಸ್ವಾಮೀಜಿ ಪಟ್ಟಾಭಿಷೇಕ – ಪೀಠಾರೋಹಣದ ಜೊತೆ ಸರ್ವಧರ್ಮದ ಸಾಮೂಹಿಕ ವಿವಾಹ

    ಗದಗ: ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದ ಮುಸ್ಲಿಂ ಯುವಕನಿಗೆ ಖಜೂರಿ ಮಠದ ಕೊರಣೇಶ್ವರ ಮುರುಘರಾಜೇಂದ್ರ ಶ್ರೀಗಳು ಲಿಂಗದೀಕ್ಷೆ ನೀಡಿ ತಮ್ಮ ಶಿಷ್ಯನಾಗಿಸಿಕೊಂಡಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ ಬುಧವಾರ ಈ ಮುಸ್ಲಿಂ ಸ್ವಾಮೀಜಿ ಅವರ ಅಧಿಕೃತ ಪೀಠಾರೋಹಣದ ಪಟ್ಟಾಭಿಷೇಕ ನಡೆಯಿತು.

    ಒಂದು ವಾರದ ಹಿಂದಷ್ಟೇ ಮುರುಘರಾಜೇಂದ್ರ ಶ್ರೀಗಳು ಮುಸ್ಲಿಂ ಯುವಕ ದಿವಾನ್ ಶರೀಫ್ ಅವರಿಗೆ ಲಿಂಗ ದೀಕ್ಷೆ ನೀಡಿ, ಅಸೂಟಿ ಕೊರಣೇಶ್ವರ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡಿದ್ದರು. ಲಿಂಗಾಯತ ಮಠಕ್ಕೆ ಮುಸ್ಲಿಂ ವ್ಯಕ್ತಿ ಪೀಠಾಧಿಪತಿಯಾಗಿ ನೇಮಕ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರ ನಡುವೆ ದಿವಾನ್ ಶರೀಫ್ ಸ್ವಾಮೀಜಿ ಅವರ ಅಧಿಕೃತ ಪೀಠಾರೋಹಣದ ಪಟ್ಟಾಭಿಷೇಕ ನಡೆಯಿತು. ಪೀಠಾರೋಹಣ ನಿಮಿತ್ಯ ಮಠದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ ನೆರವೇರಿಸಲಾಯಿತು.

    ಶ್ರೀಗಳ ಸಮ್ಮುಖದಲ್ಲಿ ಏಳು ಜೋಡಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯದ ದಿನಗಳಲ್ಲಿ ಬಡವರು ಮದುವೆ ಮಾಡುವುದೇ ತುಂಬಾನೆ ಕಷ್ಟವಾಗಿದೆ. ಇದನ್ನರಿತ ಸ್ವಾಮೀಜಿ, ಉಚಿತವಾಗಿ ಸರಳ ಮದುವೆ ಮಾಡುವ ಮೂಲಕ ಬಡವರ ಬಾರ ಇಳಿಸುವ ಜೊತೆಗೆ ಸಮಾಜಕ್ಕೆ ಹೊಸ ಸಂದೇಶ ಸಾರಲು ಮುಂದಾಗಿದ್ದಾರೆ. ಈ ಮಠ ಮುಂದೆಯೂ ಹೀಗೆ ಸರ್ವಧರ್ಮದ ಮಠವಾಗಲಿ ಎಂಬ ಉದೇಶಕ್ಕೆ ಈ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಮುರುಘರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.

    ಅವರು ಜಾತಿಯಲ್ಲಿ ಮುಸ್ಲಿಂ ಆದರೂ ಬಸವ ತತ್ವಕ್ಕೆ ಮಾರುಹೋಗಿ ಸ್ವಾಮೀಜಿ ಆಗಿದ್ದಾರೆ. ಈ ಮುಸ್ಲಿಂ ಸ್ವಾಮೀಜಿ ಮಠದ ಜಾತ್ರೆಯನ್ನಾಗಿ ಮಾಡಿದರು. ಅಸೂಟಿ ಗ್ರಾಮದ ಹೊರವಲಯದ ಕೋರಣೇಶ್ವರ ಶಾಂತಿಧಾಮದಲ್ಲಿ ಬೃಹತ್ ವೇದಿಕೆಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಜರುಗಿದವು. ಮಠದ ನೂತನ ಉತ್ತರಾಧಿಕಾರಿ ಮುಸ್ಲಿಂ ಸ್ವಾಮೀಜಿಗೆ ಅನೇಕ ಸಂಘ ಸಂಸ್ಥೆಗಳು, ಸ್ವಾಮಿಜಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಾಥ್ ನೀಡಿದರು. ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಡಲಾಗ್ತಿರೋ ಪುಣ್ಯದ ಕೆಲಸಕ್ಕೆ ಎಲ್ಲರಿಂದಲೂ ಹಾರೈಕೆಗಳು ವ್ಯಕ್ತವಾಗಿವೆ.

    ಜಾತಿಯತೆಯನ್ನು ಮೀರಿ ಸ್ವಾಮೀಜಿಗಳು ಮಾಡುತ್ತಿರುವ ಕಾರ್ಯವೂ ಸಮಾಜಕ್ಕೆ ಮಾದರಿಯಾಗಿದೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. ಶಾಂತಿಧಾಮದ ವತಿಯಿಂದ ನವ ದಂಪತಿಗಳಿಗೆ ತಾಳಿ, ಕಾಲುಂಗುರ, ಬಟ್ಟೆಗಳನ್ನು ಉಚಿತವಾಗಿ ನೀಡಲಾಯಿತು. ಮುಸ್ಲಿಂ ಸ್ವಾಮೀಜಿಯ ಈ ಸಾಮಾಜಿಕ ಕಾರ್ಯಕ್ಕೆ ಸದ್ಯ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಧರ್ಮದ ಎಲ್ಲೆಯನ್ನು ಮೀರಿ ಬಸವ ತತ್ವದಡಿ ಲಿಂಗ ದೀಕ್ಷೆ ಪಡೆದಿರೋ ಸ್ವಾಮೀಜಿ ಅವರು ಮುಂದಿನ ದಿನಗಳಲ್ಲಿಯೂ ಸಮಾಜವನ್ನು ತಿದ್ದಿ, ತೀಡಿ ಮುನ್ನಡೆಸುವ ಶಕ್ತಿ ನೀಡಲಿ ಎಂಬುದು ಎಲ್ಲರ ಆಶಯವಾಗಿದೆ.

  • ಪಲಿಮಾರು ಮಠಕ್ಕೆ ನೂತನ ಉತ್ತರಾಧಿಕಾರಿ- ಯಶಸ್ವಿಯಾಗಿ ನಡೆಯಿತು 31ನೇ ಯತಿಯ ಪಟ್ಟಾಭಿಷೇಕ

    ಪಲಿಮಾರು ಮಠಕ್ಕೆ ನೂತನ ಉತ್ತರಾಧಿಕಾರಿ- ಯಶಸ್ವಿಯಾಗಿ ನಡೆಯಿತು 31ನೇ ಯತಿಯ ಪಟ್ಟಾಭಿಷೇಕ

    ಉಡುಪಿ: ಪಲಿಮಾರು ಮಠದ ನೂತನ ಉತ್ತರಾಧಿಕಾರಿಗೆ ಇಂದು ಪಟ್ಟಾಭಿಷೇಕವಾಗಿದೆ. ಕೃಷ್ಣಮಠದ ಸರ್ವಜ್ಞ ಪೀಠದ ಮುಂದೆ, ಮಾಧ್ವ ಪರಂಪರೆಯ ಗಣ್ಯ ಮಠಾಧೀಶರ ಉಪಸ್ಥಿತಿಯಲ್ಲಿ ಈ ಅಪೂರ್ವ ಕಾರ್ಯಕ್ರಮ ನಡೆಯಿತು.

    ಪರ್ಯಾಯದ ಅವಧಿಯಲ್ಲೇ ಪಲಿಮಾರು ಸ್ವಾಮಿಗಳು ಶಿಷ್ಯ ಸ್ವೀಕಾರ ಮಾಡಿ ಯತಿಪೀಠದ ಮೆರುಗು ಹೆಚ್ಚಿಸಿದ್ದಾರೆ. ಹೌದು. ಉಡುಪಿಯ ಅಷ್ಟಮಠಗಳಲ್ಲಿ ಪಲಿಮಾರು ಮಠವೂ ಒಂದಾಗಿದ್ದು, ಸದ್ಯ ಕೃಷ್ಣ ಪೂಜೆಯನ್ನು ಇದೇ ಮಠದ ಯತಿ ವಿದ್ಯಾಧೀಶ ಶ್ರೀಗಳು ಮಾಡುತ್ತಿದ್ದಾರೆ. ಐದು ದಿನಗಳ ಕಾಲ ಹಲವು ವಿಧಿವಿಧಾನ ನಡೆದು ಪಟ್ಟಾಭಿಷೇಕ ಸಂಪನ್ನಗೊಂಡಿದೆ.

    ಮಠದ 31 ನೇ ಉತ್ತರಾಧಿಕಾರಿಯಾಗಿ ವಿದ್ಯಾರಾಜೇಶ್ವರ ತೀರ್ಥರು ಅಧಿಕಾರ ವಹಿಸಿದ್ದಾರೆ. ಕಳೆದ ಎಂಟ್ನೂರು ವರ್ಷಗಳಲ್ಲಿ 30 ಯತಿಗಳು ಈ ಮಠಕ್ಕೆ ಮಠಾಧೀಶರಾಗಿದ್ದಾರೆ. ಸದ್ಯ ಕೃಷ್ಣಪೂಜೆಯನ್ನು ನಡೆಸುತ್ತಿರುವ ಪಲಿಮಾರು ವಿದ್ಯಾಧೀಶ ತೀರ್ಥರು ಈ ಪರಂಪರೆಯ ಮೂವತ್ತನೆಯ ಯತಿಯಾಗಿದ್ದಾರೆ. ಇದೀಗ ಅವರು ಶಿಷ್ಯ ಸ್ವೀಕಾರ ಮಾಡಿದ್ದು 31ನೇ ಯತಿಯ ಪಟ್ಟಾಭಿಷೇಕ ಇಂದು ನಡೆಯಿತು.

    ಕಳೆದ ನಾಲ್ಕು ದಿನಗಳಿಂದಲೂ ವಿವಿಧ ಧಾರ್ಮಿಕ ಕಾಯಕ್ರಮಗಳು ಆಯೋಜನೆಗೊಂಡಿತ್ತು. ಇಂದು ನವಯತಿಯ ರಾಜಗಾಂಭೀರ್ಯದ ಪಟ್ಟಾಭಿಷೇಕ ಜರುಗಿತು. ಕೃಷ್ಣ ದೇವರಿಗೆ ಮಹಾಪೂಜೆಯ ನಂತರ ಸನ್ನಿಧಾನದಲ್ಲಿ ಚತುರ್ವೇದ, ಭಾಗವತ, ಭಗವದ್ಗೀತೆ – ರಾಮಾಯಣ ಮೊದಲಾದ ಗ್ರಂಥಗಳ ಪಾರಾಯಣ ನಡೆಯಿತು.

    ಮಹಿಳೆಯರು ಲಕ್ಷ್ಮೀ ಶೋಭಾನೆ ಪಠಿಸಿದರು. ಇದೇ ವೇಳೆಯಲ್ಲಿ ಪಲಿಮಾರು ಮಠದ ಹಿರಿಯ ಸ್ವಾಮೀಜಿ ವಿದ್ಯಾಧೀಶ ತೀರ್ಥರು, ಕೃಷ್ಣ-ವೇದವ್ಯಾಸರ ವಿಗ್ರಹ ಹಾಗೂ ವಿಶ್ವಂಭರ ಸಾಲಿಗ್ರಾಮವನ್ನು ನೂತನ ಶಿಷ್ಯನ ತಲೆಯ ಮೇಲಿಟ್ಟು ಅಭಿಷೇಕ ಮಾಡಿದರು. ಭಕ್ತರ ಜಯಘೋಷದ ನಡುವೆ, ಪಲಿಮಾರು ಮಠದ ಉತ್ತರಾಧಿಕಾರಿಗೆ ವಿದ್ಯಾ ರಾಜೇಶ್ವರ ತೀರ್ಥ ಎಂಬ ನಾಮಕರಣ ಮಾಡಲಾಯಿತು.

    ಮಾಧ್ವ ಯತಿ ಪರಂಪರೆಯಲ್ಲಿ ಇದೊಂದು ಅಪೂರ್ವ ಸಂದರ್ಭ. ಪರ್ಯಾಯದ ಸಂದರ್ಭದಲ್ಲೇ ಸರ್ವಜ್ಞ ಪೀಠದ ಸಮ್ಮುಖದಲ್ಲಿ ಉತ್ತರಾಧಿಕಾರಿ ನೇಮಕವಾಗಿದ್ದು ವಿಶೇಷ. ಈ ವೇಳೆಯಲ್ಲಿ ಪೇಜಾವರ ಸ್ವಾಮಿಗಳ ಹಿರಿತನದಲ್ಲಿ ಕೃಷ್ಣಾಪುರ, ಕಾಣಿಯೂರು, ಸೋದೆ, ಅದಮಾರು, ಸುಬ್ರಹ್ಮಣ್ಯ, ಭೀಮನಕಟ್ಟೆ ಮಠದ ಸ್ವಾಮಿಗಳು ಹಾಜರಿದ್ದು ನವಯತಿಯನ್ನು ಹರಸಿದರು. ಅಷ್ಟಮಠದ ಮಠಾಧೀಶರು ಸರ್ವಜ್ಞ ಪೀಠದ ಸುತ್ತಲೂ ಕುಳಿತು ನವಯತಿಗೆ ಶುಭ ಹಾರೈಸಿ, ಆಶೀರ್ವಾದ ಮಾಡಿದರು.

    ಈ ಸಂದರ್ಭ ಲೋಕ ಕಲ್ಯಾಣಾರ್ಥ ಪ್ರಾರ್ಥನೆಯೂ ನೆರವೇರಿತು. ದೇಶ ಮತ್ತು ಈ ದೇಶವನ್ನು ಮುಂದಕ್ಕೆ ಆಳಲಿರುವ ಪ್ರಧಾನ ಮಂತ್ರಿಗೆ ಒಳಿತಾಗಲಿ ಎಂದು ಸಾಮೂಹಿಕ ಮಂಗಲಾಷ್ಟಕ ಪಠನವೂ ನಡೆಯಿತು. ಕಳೆದ ಕೆಲವು ದಿನಗಳಿಂದ ಕೃಷ್ಣಮಠ ಹಾಗೂ ಅಷ್ಟಮಠಗಳ ರಥಬೀದಿಯಲ್ಲಿ ಹೊಸ ಯತಿಯನ್ನು ಬರಮಾಡಿಕೊಳ್ಳುವ ಸಂಭ್ರಮ ಮನೆಮಾಡಿದೆ. ವಟು ಶೈಲೇಶ ಉಪಾಧ್ಯಾಯ ಇನ್ನು ಮುಂದೆ ವಿದ್ಯಾ ರಾಜೇಶ್ವರನಾಗಿ ಭಕ್ತರ ಸೇವೆಗೆ ಲಭ್ಯರಾಗಿದ್ದಾರೆ. ಅಷ್ಟೇ ಅಲ್ಲದೆ ವಿಶ್ವಪ್ರಸಿದ್ಧ ಕ್ಷೇತ್ರದ ಗೌರವ ಕಾಪಾಡುವ ನಿಟ್ಟಿನಲ್ಲಿ ಈ ಕೃಷ್ಣಪೂಜಕ ಯತಿ ಯಶಸ್ವಿಯಾಗಲಿ ಎಂದು ಸಾವಿರಾರು ಭಕ್ತರ ಹಾರೈಸಿದರು.