Tag: ಪಟಿಯಾಲ

  • ಭಾರೀ ಹೈಡ್ರಾಮಾ ಬಳಿಕ ಟ್ರಯಲ್ಸ್‌ನಲ್ಲಿ ವಿನೇಶ್‌ಗೆ ವಿಜಯ – ಪ್ಯಾರಿಸ್‌ ಒಲಿಂಪಿಕ್ಸ್‌ ಕನಸು ಜೀವಂತ

    ಭಾರೀ ಹೈಡ್ರಾಮಾ ಬಳಿಕ ಟ್ರಯಲ್ಸ್‌ನಲ್ಲಿ ವಿನೇಶ್‌ಗೆ ವಿಜಯ – ಪ್ಯಾರಿಸ್‌ ಒಲಿಂಪಿಕ್ಸ್‌ ಕನಸು ಜೀವಂತ

    – ರವಿ ದಹಿಯಾ, ಬಜರಂಗ್ ಪೂನಿಯಾಗೆ ಸೋಲು

    ನವದೆಹಲಿ: ಏಷ್ಯನ್‌ ಗೇಮ್ಸ್‌ ಹಾಗೂ ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತೆ ವಿನೇಶ್‌ ಫೂಗಟ್‌ (Vinesh Phogat) ಒಲಿಂಪಿಕ್ಸ್‌ಗೆ ನಡೆದ ಕುಸ್ತಿ ಆಯ್ಕೆ ಟ್ರಯಲ್ಸ್‌ನಲ್ಲಿ 50 ಕೆಜಿ ವಿಭಾಗದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಕನಸನ್ನು ಜೀವಂತವಾಗಿಸಿಕೊಂಡಿದ್ದಾರೆ.

    ಮೂರು ಗಂಟೆ ಭಾರೀ ಹೈಡ್ರಾಮಾ:
    ಪಟಿಯಾಲದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಕೇಂದ್ರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಹಿಳಾ ಕುಸ್ತಿ ಟ್ರಯಲ್ಸ್‌ನಲ್ಲಿ (Wrestling Trials) ಸುಮಾರು ಮೂರು ಗಂಟೆಗಳ ಕಾಲ ಭಾರೀ ಹೈಡ್ರಾಮಾ ನಡೆಯಿತು. ಮೊದಲಿಗೆ ವಿನೇಶ್‌ ಫೋಗಟ್‌ ಕುಸ್ತಿಯಲ್ಲಿ ಪಾಲ್ಗೊಳ್ಳಲು ಒಪ್ಪದೇ ಹೈಡ್ರಾಮಾ ಸೃಷ್ಟಿಸಿದ್ರು. 53 ಮತ್ತು 50 ಕೆ.ಜಿ ಎರಡೂ ವಿಭಾಗದಲ್ಲಿ ಟ್ರಯಲ್ಸ್‌ಗೆ ಒಪ್ಪಿಗೆ ನೀಡುವಂತೆ ಪಟ್ಟು ಹಿಡಿದಿದ್ದರು. ಅಧಿಕಾರಿಗಳು ಎರಡೂ ವಿಭಾಗದಲ್ಲಿ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅನುಮತಿ ನೀಡಿದ ನಂತರವೇ ಕಣಕ್ಕಿಳಿಯಲು ಮುಂದಾದರು. ಪ್ರತಿ ಬಾರಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ವಿನೇಶ್‌ ಫೋಗಟ್‌ ಈ ಬಾರಿ 50 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಇದನ್ನೂ ಓದಿ: ಖೇಲೋ ಇಂಡಿಯಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಉಡುಪಿ ಯುವಕ

    ಸೋತು ಗೆದ್ದ ವಿನೇಶ್‌:
    53 ಕೆಜಿ ವಿಭಾಗದಲ್ಲಿ ವಿನೇಶ್‌ ಕೇವಲ 18 ಸೆಕೆಂಡುಗಳಲ್ಲೇ ಪರಾಭವಗೊಂಡರು. ಪ್ರತಿಸ್ಪರ್ಧಿ ಅಂಜು ಆಕೆಯನ್ನ ಸೋಲಿಸಿದರು. ಬಳಿಕ ವಿನೇಶ್‌ 50 ಕೆಜಿ ವಿಭಾಗದಲ್ಲಿ ಎದುರಾಳಿ ಶಿವಾನಿ ಅವರನ್ನ ಸೋಲಿಸಿದರು. 53 ಕೆಜಿ ವಿಭಾಗದಲ್ಲಿ 1-4ರಲ್ಲಿ ಸೋತಿದ್ದ ವಿನೇಶ್‌ ಬಳಿಕ ಶಿವಾನಿ ವಿರುದ್ಧ 11-6 ಅಂಕಗಳೊಂದಿಗೆ ಗೆದ್ದು ಕಂಬ್ಯಾಕ್‌ ಮಾಡಿದರು. ಒಲಿಂಪಿಕ್ಸ್‌ಗೂ ಮುನ್ನ ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ನಡೆಯಲಿರುವ ಏಷ್ಯನ್ ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ಫೋಗಟ್‌ ಪಾಲ್ಗೊಳ್ಳಲಿದ್ದಾರೆ.

    ಎದುರು ಮಂಡಿಯೂರಿದ ದಹಿಯಾ, ಬಜರಂಗ್:
    ಇನ್ನೂ ಕಳೆದ ಬಾರಿ ಟೋಕಿಯೊ ಒಲಿಂಪಿಕ್ಸ್​ ಪದಕ ವಿಜೇತ ಕುಸ್ತಿಪಟುಗಳಾದ ಬಜರಂಗ್‌ ಪೂನಿಯ (Bajrang Punia) ಮತ್ತು ರವಿ ದಹಿಯಾ ಈ ವರ್ಷದ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ರಾಷ್ಟ್ರೀಯ ತಂಡಕ್ಕಾಗಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಸೋಲು ಕಂಡ ಕಾರಣ ಇಬ್ಬರಿಗೂ ಭಾರೀ ಹಿನ್ನಡೆಯಾಗಿದೆ. ಇದನ್ನೂ ಓದಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ʻಚಿನ್ನʼ ಗೆದ್ದವರಿಗೆ 6 ಕೋಟಿ ರೂ. ಗಿಫ್ಟ್‌ – ಬೆಂಗ್ಳೂರಿಗೇ ಬರಲಿದೆ ʻಕ್ರೀಡಾ ನಗರʼ

    ಭಾನುವಾರ ನಡೆದಿದ್ದ 65 ಕೆಜಿ ವಿಭಾಗದ ಫ್ರೀಸ್ಟೈಲ್‌ ಸೆಮಿಫೈನಲ್‌ ಕಾದಾಟದಲ್ಲಿ ಬಜರಂಗ್‌ ಪೂನಿಯ ಅವರು ಪ್ರತಿಸ್ಪರ್ಧಿ ರೋಹಿತ್‌ ಕುಮಾರ್‌ ಎದುರು 9-1 ಅಂತರದಿಂದ ಪರಾಭವಗೊಂಡರು. 57 ಕೆಜಿ ವಿಭಾಗದಲ್ಲಿ ಅಮಾನ್‌ ಸೆಹ್ರಾವತ್‌ ವಿರುದ್ಧ 14-13 ರಿಂದ ರವಿ ದಹಿಯಾ ಸೋಲು ಕಂಡರು.

    ಜುಲೈ 26 ರಿಂದ ಒಲಿಂಪಿಕ್ಸ್​ ಶುರು: ಮಹತ್ವದ ಕ್ರೀಡಾಕೂಡವಾದ ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭಕ್ಕೆ ದಿನಾಂಕ ನಿಗದಿಯಾಗಿದೆ. ಜು.26ರಂದು ಉದ್ಘಾಟನಾ ಕಾರ್ಯಕ್ರಮ ನೆರವೇರಲಿದ್ದು, ಆಗಸ್ಟ್ 11ರವರೆಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ. 1900, 1924ರ ಬಳಿಕ ಪ್ಯಾರಿಸ್‌ ಆತಿಥ್ಯದಲ್ಲಿ 3ನೇ ಬಾರಿಗೆ ನಡೆಯುತ್ತಿರುವ ಟೂರ್ನಿ ಇದಾಗಿದೆ.

  • ಗುರುದ್ವಾರದಲ್ಲಿ ಮದ್ಯಪಾನ ಮಾಡಿದ ಮಹಿಳೆಯ ಗುಂಡಿಕ್ಕಿ ಹತ್ಯೆ

    ಗುರುದ್ವಾರದಲ್ಲಿ ಮದ್ಯಪಾನ ಮಾಡಿದ ಮಹಿಳೆಯ ಗುಂಡಿಕ್ಕಿ ಹತ್ಯೆ

    ಚಂಡೀಗಢ: ಗುರುದ್ವಾರದ (Gurudwara) ಆವರಣದಲ್ಲಿ ಮದ್ಯಪಾನ ಮಾಡಿದ ಆರೋಪದ ಮೇಲೆ ಮಹಿಳೆಯನ್ನು (Woman) ಗುಂಡಿಕ್ಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಪಂಜಾಬ್‌ನ (Punjab) ಪಟಿಯಾಲದಲ್ಲಿ (Patiala) ನಡೆದಿದೆ.

    ಪರ್ಮಿಂದರ್ ಕೌರ್ (32) ಎಂದು ಗುರುತಿಸಲಾದ ಮಹಿಳೆ ಹತ್ಯೆಯಾಗಿದ್ದು, ಗುರುದ್ವಾರಕ್ಕೆ ನಿತ್ಯ ಭೇಟಿ ನೀಡುತ್ತಿದ್ದ ನಿರ್ಮಲಜಿತ್ ಸಿಂಗ್ ಸೈನಿ ಮಹಿಳೆ ಮೇಲೆ 5 ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಪಟಿಯಾಲ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವರುಣ್ ಶರ್ಮಾ ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಭಾನುವಾರ ರಾತ್ರಿ ಪರ್ಮಿಂದರ್ ಕೌರ್ ದುಖ್ನಿವಾರ್ನ್ ಸಾಹಿಬ್ ಗುರುದ್ವಾರದ ಪವಿತ್ರ ನೀರಿನ ಕೊಳದ ಬಳಿ ಮದ್ಯಪಾನ ಮಾಡುತ್ತಿದ್ದಳು. ಇದನ್ನು ಗಮನಿಸಿದ ಗುರುದ್ವಾರದ ಸಿಬ್ಬಂದಿ ಆಕೆಯನ್ನು ಮ್ಯಾನೇಜರ್ ಕಚೇರಿಗೆ ಕರೆದೊಯ್ಯಲು ನಿರ್ಧರಿಸಿದರು. ಆದರೆ ಅಷ್ಟು ಹೊತ್ತಿಗಾಗಲೇ ನಿರ್ಮಲಜಿತ್ ಸಿಂಗ್ ಸೈನಿ ಕೋಪದಿಂದ ತನ್ನ ಪರವಾನಗಿ ಪಡೆದ ರಿವಾಲ್ವರ್‌ನಿಂದ ಮಹಿಳೆ ಮೇಲೆ ಹಲವು ಬಾರಿ ಗುಂಡು ಹಾರಿಸಿದ್ದಾನೆ. ಇದನ್ನೂ ಓದಿ: ಬಜರಂಗದಳಕ್ಕೆ ಪಿಎಫ್‍ಐ ಹೋಲಿಕೆ – ಖರ್ಗೆಗೆ ಕೋರ್ಟ್ ಸಮನ್ಸ್

    ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಆರೋಪಿ ನಿರ್ಮಲಜಿತ್ ಆಸ್ತಿ ಡೀಲರ್ ಆಗಿದ್ದು, ಯಾವುದೇ ಅಪರಾಧ ಚಟುವಟಿಕೆಗಳ ಇತಿಹಾಸ ಹೊಂದಿಲ್ಲ ಎನ್ನಲಾಗಿದೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಕಳ್ಳಭಟ್ಟಿ ಸೇವಿಸಿ 10 ಸಾವು – 30ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

  • ಪಂಜಾಬಿ ಖ್ಯಾತ ಗಾಯಕ ದಲೇರ್ ಮೆಹಂದಿಗೆ ಎರಡು ವರ್ಷ ಜೈಲು ಶಿಕ್ಷೆ

    ಪಂಜಾಬಿ ಖ್ಯಾತ ಗಾಯಕ ದಲೇರ್ ಮೆಹಂದಿಗೆ ಎರಡು ವರ್ಷ ಜೈಲು ಶಿಕ್ಷೆ

    ಬಾಲಿವುಡ್ ನ ಖ್ಯಾತ ಗಾಯಕ ದಲೇರ್ ಮೆಹಂದಿಗೆ ಮಾನವ ಕಳ್ಳಸಾಗಣೆ ಸಂಬಂಧಿಸಿದ ಪ್ರಕರಣಕ್ಕೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ. 2003ರ ಪ್ರಕರಣಕ್ಕೆ ಸಂಬಂಧಿಸಿದ ಶಿಕ್ಷೆ ಇದಾಗಿದ್ದು, ಪಟಿಯಾಲ ನ್ಯಾಯಾಲಯವು ಶಿಕ್ಷೆಗೆ ಆದೇಶಿಸಿದೆ.

    ಮಾನವ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ದಲೇರ್ ಮೆಹಂದಿ ದೋಷಿಯೆಂದು ಸಾಬೀತಾಗುತ್ತಿದ್ದಂತೆಯೇ ದಲೇರಿ ಭಾವುಕರಾಗಿದ್ದರು. 2003ರಲ್ಲಿ ದಲೇರ್ ಮೆಹಂದಿ ಮತ್ತು ಆತನ ಸಹೋದರ ಶಂಶೇರ್ ಸಿಂಗ್ ವಿರುದ್ಧ ಒಟ್ಟು 31 ಪ್ರಕರಣಗಳು ದಾಖಲಾಗಿದ್ದವು. ಇವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಶಿಕ್ಷೆಯ ವಿರುದ್ಧ ಅವರು ಮೇಲ್ಮನವಿ ಸಲ್ಲಿಸಿದ್ದರು. ಪಟಿಯಾಲ ಜಿಲ್ಲಾ ನ್ಯಾಯಾಲಯವು ಅದನ್ನು ವಜಾಗೊಳಿಸಿದೆ. ಇದನ್ನೂ ಓದಿ:ರಾಮ್ ಗೋಪಾಲ್ ವರ್ಮಾ ‘ಲಡಕಿ’ ನೋಡಿ ಬೆಚ್ಚಿ ಬಿದ್ದರಂತೆ ಸೆನ್ಸಾರ್ ಟೀಮ್

    19 ವರ್ಷಗಳ ಹಿಂದೆ ದಲೇರ್ ಮತ್ತು ಸಹೋದರ ಜನರನ್ನು ಅಕ್ರಮವಾಗಿ ವಿದೇಶಕ್ಕೆ ಕಳುಹಿಸಲು ಹಣ ತಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಮಾನವ ಕಳ್ಳಸಾಗಣೆ ಮತ್ತು ಪಿತೂರಿಗಾಗಿ ಅವರ ಮೇಲೆ ಆರೋಪ ಹೊರಿಸಲಾಗಿತ್ತು. 2018ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಆ ಮೇಲ್ಮನಿವಿ ಕೂಡ ವಜಾಗೊಂಡಿದ್ದು, ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಎತ್ತಿ ಹಿಡಿದಿದೆ.

    Live Tv
    [brid partner=56869869 player=32851 video=960834 autoplay=true]

  • ಪಟಿಯಾಲದ ಕಾಳಿ ದೇವಿ ಮುಂಭಾಗ ಹಿಂಸಾಚಾರ – 2 ಮಂದಿಗೆ ಗಾಯ

    ಪಟಿಯಾಲದ ಕಾಳಿ ದೇವಿ ಮುಂಭಾಗ ಹಿಂಸಾಚಾರ – 2 ಮಂದಿಗೆ ಗಾಯ

    ಚಂಡೀಗಢ: ದೇಶಾದ್ಯಂತ ಧಾರ್ಮಿಕ ವಿಚಾರವಾಗಿ ಎಲ್ಲೆಡೆ ಹಿಂಸಾಚಾರ ವರದಿಗಳು ಆಗುತ್ತಲೇ ಇವೆ. ಇದೀಗ ಪಂಜಾಬ್‌ನ ಪಟಿಯಾಲದಲ್ಲೂ ಹಿಂಸಾಚಾರ ವರದಿಯಾಗಿದೆ.

    ಶುಕ್ರವಾರ ಪಂಜಾಬ್‌ನ ಪಟಿಯಾಲದಲ್ಲಿ ಕಾಳೀ ದೇವಿ ದೇವಾಲಯದ ಮುಂಭಾಗದಲ್ಲಿ ಹಿಂಸಾಚಾರ ವರದಿಯಾಗಿದೆ. ಘಟನೆ ವೇಳೆ ಒಂದು ಗುಂಪು ಖಾಲಿಸ್ತಾನ್ ವಿರೋಧಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ಸಂಘರ್ಷ ನಡೆದಿದೆ.

    ಹಿಂಸಾಚಾರದ ವೇಳೆ ಇಬ್ಬರಿಗೆ ಗಾಯಗಳಾಗಿವೆ. ಈ ವೇಳೆ ಪಟಿಯಾಲದ ಕೆಲವು ಭಾಗಗಳಲ್ಲೂ ಉದ್ವಿಗ್ನತೆ ವರದಿಯಾಗಿದ್ದು, ಹಲವೆಡೆ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

    ಘರ್ಷಣೆಯ ಸಂದರ್ಭದಲ್ಲಿ ನೆರೆದಿದ್ದ ಒಂದು ಗುಂಪು ಮಹಾರಾಷ್ಟ್ರದ ಶಿವಸೇನೆಯದ್ದು ಎಂಬುದು ತಿಳಿದುಬಂದಿದೆ. ಇಲ್ಲಿ ಮೆರವಣಿಗೆಗೆ ಯಾವುದೇ ಅನುಮತಿ ಇಲ್ಲದ ಕಾರಣ ಶಿವಸೇನೆ ಮುಖ್ಯಸ್ಥ ಹರೀಶ್ ಸಿಂಗ್ಲಾ ಜೊತೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಪಟಿಯಾಲ ಡಿಎಸ್‌ಪಿ ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್‌ ಸಮಸ್ಯೆ – ಕಲ್ಲಿದ್ದಲು ಸಾಗಾಟಕ್ಕೆ 650ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳ ಸಂಚಾರ ರದ್ದು

    ಪಂಜಾಬ್ ಸಿಎಂ ಪ್ರತಿಕ್ರಿಯೆ:
    ಪಟಿಯಾಲದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಪಂಜಾಬ್ ಸಿಎಂ ಭಗವಂತ್ ಮಾನ್, ಪಟಿಯಾಲದಲ್ಲಿ ನಡೆದ ಹಿಂಸಾಚಾರ ಅತ್ಯಂತ ದುರದೃಷ್ಟಕರ. ನಾನು ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಹಾಗೂ ಆ ಪ್ರದೇಶದಲ್ಲಿ ಶಾಂತಿಯನ್ನು ಪುನಃ ಸ್ಥಾಪಿಸಲಾಗಿದೆ. ಘಟನೆ ಬಗ್ಗೆ ನಾವು ಗಂಭೀರವಾಗಿ ಗಮನಿಸುತ್ತಿದ್ದೇವೆ. ರಾಜ್ಯದಲ್ಲಿ ಇಂತಹ ಗೊಂದಲ ಸೃಷ್ಟಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಪಂಜಾಬ್‌ನ ಶಾಂತಿ ಹಾಗೂ ಸೌಹಾರ್ದತೆ ಅತ್ಯಂತ ಮಹತ್ವದ್ದಾಗಿದೆ ಎಂದು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಮೀಸಲಾತಿ ಅಭ್ಯರ್ಥಿಗಳು ಅಧಿಕ ಅಂಕ ಗಳಿಸಿದ್ರೆ ಸಾಮಾನ್ಯ ವರ್ಗದಡಿ ಪರಿಗಣನೆ: ಸುಪ್ರೀಂ

     

  • ಸತತ ಏಳೂವರೆ ಗಂಟೆ ಸರ್ಜರಿ – ಪಂಜಾಬ್ ಎಎಸ್‍ಐ ಕೈ ಜೋಡಿಸಿದ ವೈದ್ಯರು

    ಸತತ ಏಳೂವರೆ ಗಂಟೆ ಸರ್ಜರಿ – ಪಂಜಾಬ್ ಎಎಸ್‍ಐ ಕೈ ಜೋಡಿಸಿದ ವೈದ್ಯರು

    – ವೈದ್ಯರಿಗೆ ಮುಖ್ಯಮಂತ್ರಿ ಧನ್ಯವಾದ

    ಪಟಿಯಾಲ: ಕರ್ಫ್ಯೂ ಪಾಸ್ ತೋರಿಸುವಂತೆ ಒತ್ತಾಯಿಸಿದ್ದಕ್ಕೆ ನಿಹಾಂಗ್ ಸಿಖ್ಖರ ಗುಂಪೊಂದು ಪೊಲೀಸ್ ಅಧಿಕಾರಿಯೊಬ್ಬರ ಕೈ ಕತ್ತರಿಸಿತ್ತು. ಇದೀಗ ಅಧಿಕಾರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಮರಳಿ ಕೈಯನ್ನು ಜೋಡಿಸಲಾಗಿದೆ.

    ನಿಹಾಂಗ್‍ನ ಎಎಸ್‍ಐ ಹರ್ಜಿತ್ ಸಿಂಗ್ ಅವರ ಕೈಯನ್ನು ವ್ಯಕ್ತಿಯೊಬ್ಬ ಕತ್ತರಿಸಿದ್ದನು. ತಕ್ಷಣ ಅವರನ್ನು ಪಟಿಯಾಲದಿಂದ ಚಂಡೀಗಢ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಸತತ ಏಳೂವರೆ ಗಂಟೆ ಶಸ್ತ್ರ ಚಿಕಿತ್ಸೆ ಮಾಡಿ ಕತ್ತರಿಸಿದ್ದ ಪೊಲೀಸ್ ಅಧಿಕಾರಿಯ ಕೈಯನ್ನು ಯಶಸ್ವಿಯಾಗಿ ಮರಳಿ ಜೋಡಿಸಿದ್ದಾರೆ ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಕರ್ಫ್ಯೂ ಪಾಸ್ ತೋರಿಸು ಎಂದಿದ್ದಕ್ಕೆ ಎಎಸ್‍ಐ ಕೈ ಕತ್ತರಿಸಿದ ಗುಂಪು

    ಈ ಬಗ್ಗೆ ಟ್ವೀಟ್ ಮಾಡಿರುವ ಅಮರಿಂದರ್ ಸಿಂಗ್ ಅವರು, “ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರ ತಂಡ ಮತ್ತು ಸಹಾಯಕ ಸಿಬ್ಬಂದಿಗೆ ಧನ್ಯವಾದ ಹೇಳುತ್ತೇನೆ. ಎಎಸ್‍ಐ ಹರ್ಜೀತ್ ಸಿಂಗ್ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

    ಇದೇ ವಿಚಾರವಾಗಿ ಪಂಜಾಬ್ ಪೊಲೀಸ್ ಮುಖ್ಯಸ್ಥ ದಿನಕರ್ ಗುಪ್ತಾ ಕೂಡ ಟ್ವೀಟ್ ಮಾಡಿದ್ದು, ಹಂಜೀತ್ ಸಿಂಗ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.

    ಮತ್ತೊಂದು ಟ್ವೀಟ್ ಮಾಡಿ, “ನಮ್ಮ ಕೆಚ್ಚೆದೆಯ ಕೊರೊನಾ ಯೋಧ ಎಎಸ್‍ಐ ಹರ್ಜೀತ್ ಸಿಂಗ್ ಅವರಿಗೆ ಯುಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಪ್ರಮುಖ ಪ್ಲಾಸ್ಟಿಕ್ ಸರ್ಜನ್ ಅವರೊಂದಿಗೆ ಮಾತನಾಡಿದ್ದೇನೆ. ಅಲ್ಲದೇ ಹರ್ಜೀತ್ ಅವರೊಂದಿಗೆ ಮಾತನಾಡಿದೆ. ಸದ್ಯಕ್ಕೆ 5 ದಿನಗಳವರೆಗೂ ಅವರು ಆಸ್ಪತ್ರೆಯಲ್ಲಿಯೇ ಇರುಬೇಕು” ಎಂದು ಗುಪ್ತಾ ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಮಂಡಿ ಬೋರ್ಡ್ ಠಾಣೆಯ ಪೊಲೀಸರು ಪಟಿಯಾಲದ ತರಕಾರಿ ಮಾರುಕಟ್ಟೆಯ ಬಳಿ ನಿಯೋಜನೆಗೊಂಡಿದ್ದರು. ಈ ವೇಳೆ ಭಾನುವಾರ ಬೆಳಗ್ಗೆ 6 ಗಂಟೆಗೆ ಐವರಿಂದ ಆರು ಜನರಿದ್ದ ವಾಹನವನ್ನು ಅವರು ತಡೆದು ಲಾಕ್‍ಡೌನ್ ಪಾಸ್ ತೋರಿಸುವಂತೆ ಒತ್ತಾಯಿಸಿದ್ದರು. ಆಗ ಗುಂಪು ತರಕಾರಿ ಮಾರುಕಟ್ಟೆಯ ಸಿಬ್ಬಂದಿಯೊಂದಿಗೆ ಜಗಳ ಆರಂಭಿಸಿತ್ತು. ಅಷ್ಟೇ ಅಲ್ಲದೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಬ್ಯಾರಿಕೇಡ್ ಅನ್ನು ಮುರಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಈ ವೇಳೆ ಅಲ್ಲಿ ನಿಂತಿದ್ದ ಪೊಲೀಸರು ವಾಹವನ್ನು ಸುತ್ತುವರಿದರು. ಪೊಲೀಸರು ವಾಹನವನ್ನು ನಿಲ್ಲಿಸಿದ ಕೂಡಲೇ ಕತ್ತಿ, ಮಾರಕಾಸ್ತ್ರಗಳನ್ನು ಎತ್ತಿಕೊಂಡ ಗುಂಪು ದಾಳಿ ನಡೆಸಿ, ಎಎಸ್‍ಐ ಹರ್ಜಿತ್ ಸಿಂಗ್ ಅವರ ಕೈ ಕತ್ತರಿಸಿ ಪರಾರಿಯಾಗಿತ್ತು.

    ನಿಹಾಂಗ್ ಸಿಖ್ಖರು ನಡೆಸಿದ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಬಿಕರ್ ಸಿಂಗ್ ಮತ್ತು ಓರ್ವ ಪೇದೆ ಸಹ ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಈವರೆಗೆ 9 ಜನರನ್ನು ಬಂಧಿಸಲಾಗಿದೆ.

  • ಕರ್ಫ್ಯೂ ಪಾಸ್ ತೋರಿಸು ಎಂದಿದ್ದಕ್ಕೆ ಎಎಸ್‍ಐ ಕೈ ಕತ್ತರಿಸಿದ ಗುಂಪು

    ಕರ್ಫ್ಯೂ ಪಾಸ್ ತೋರಿಸು ಎಂದಿದ್ದಕ್ಕೆ ಎಎಸ್‍ಐ ಕೈ ಕತ್ತರಿಸಿದ ಗುಂಪು

    – ಗುರುದ್ವಾರದಲ್ಲಿ ಬಚ್ಚಿಟ್ಟುಕೊಂಡಿದ್ದ 9 ಮಂದಿ ಅರೆಸ್ಟ್
    – ಪಿಸ್ತೂಲ್, ಸೇಬರ್, ಪೆಟ್ರೋಲ್ ಬಾಂಬ್, 7 ಚೀಲ ಗಾಂಜಾ ವಶ

    ಪಟಿಯಾಲ: ಕರ್ಫ್ಯೂ ಪಾಸ್ ತೋರಿಸುವಂತೆ ಒತ್ತಾಯಿಸಿದ್ದಕ್ಕೆ ನಿಹಾಂಗ್ ಸಿಖ್ಖರ ಗುಂಪೊಂದು ಪೊಲೀಸರ ಮೇಲೆ ಹಲ್ಲೆ ನಡೆಸಿ, ಓರ್ವ ಅಧಿಕಾರಿಯ ಕೈ ಕತ್ತರಿಸಿದ ಘಟನೆ ಪಂಜಾಬ್‍ನ ಪಟಿಯಾಲ ಜಿಲ್ಲೆಯಲ್ಲಿ ನಡೆದಿದೆ.

    ನಿಹಾಂಗ್‍ನ ಎಎಸ್‍ಐ ಹರ್ಜಿತ್ ಸಿಂಗ್ ಅವರ ಕೈಯನ್ನು ವ್ಯಕ್ತಿಯೊಬ್ಬ ಕತ್ತರಿಸಿದ್ದಾನೆ. ಅಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದ ಹರ್ಜಿತ್ ಸಿಂಗ್ ಜೇಬಿನಿಂದ ಕರವಸ್ತ್ರವನ್ನು ತೆಗೆದುಕೊಂಡು ಅವರ ಕೈಗೆ ಕಟ್ಟಿದ್ದರು. ಗಾಯವಾಗಿದ್ದರೂ ಹರ್ಜಿತ್ ಸಿಂಗ್ ದೀರ್ಘಕಾಲ ಸ್ಥಳದಲ್ಲಿಯೇ ಇದ್ದರು. ಸ್ವಲ್ಪ ಸಮಯದ ನಂತರ ಓರ್ವ ಕತ್ತರಿಸಿ ಬಿದ್ದಿದ್ದ ಕೈಯನ್ನು ಅವರಿಗೆ ಕೊಟ್ಟನು. ಆಗ ಹರ್ಜಿತ್ ಸಿಂಗ್ ಅವರು ಮತ್ತೊಂದು ಕೈಯಲ್ಲಿ ಹಿಡಿದುಕೊಂಡು ದ್ವಿಚಕ್ರದಲ್ಲಿ ಆಸ್ಪತ್ರೆಗೆ ಹೋದರು ಎಂದು ವರದಿಯಾಗಿದೆ.

    ಎಎಸ್‍ಐ ಹರ್ಜಿತ್ ಸಿಂಗ್ ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಪಟಿಯಾಲದಿಂದ ಚಂಡೀಗಢ ಆಸ್ಪತ್ರೆಗೆ ದಾಖಲಿಸಿಲಾಗಿದೆ. ನಿಹಾಂಗ್ ಸಿಖ್ಖರು ನಡೆಸಿದ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಬಿಕರ್ ಸಿಂಗ್ ಮತ್ತು ಓರ್ವ ಪೇದೆ ಸಹ ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಈವರೆಗೆ 9 ಜನರನ್ನು ಬಂಧಿಸಲಾಗಿದೆ.

    ಈ ಕುರಿತು ಮಾಹಿತಿ ನೀಡಿರುವ ಎಸ್‍ಪಿ ಮಂದೀಪ್ ಸಿಂಗ್ ಸಿಧು, ಮಂಡಿ ಬೋರ್ಡ್ ಠಾಣೆಯ ಪೊಲೀಸರು ಪಟಿಯಾಲದ ತರಕಾರಿ ಮಾರುಕಟ್ಟೆಯ ಬಳಿ ನಿಯೋಜನೆಗೊಂಡಿದ್ದರು. ಈ ವೇಳೆ ಇಂದು ಬೆಳಗ್ಗೆ ಆರು ಗಂಟೆಗೆ ಐವರಿಂದ ಆರು ಜನರಿದ್ದ ವಾಹನವನ್ನು ಅವರು ತಡೆದು ಲಾಕ್‍ಡೌನ್ ಪಾಸ್ ತೋರಿಸುವಂತೆ ಒತ್ತಾಯಿಸಿದ್ದರು. ಆಗ ಗುಂಪು ತರಕಾರಿ ಮಾರುಕಟ್ಟೆಯ ಸಿಬ್ಬಂದಿಯೊಂದಿಗೆ ಜಗಳ ಆರಂಭಿಸಿತ್ತು. ಅಷ್ಟೇ ಅಲ್ಲದೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಬ್ಯಾರಿಕೇಡ್ ಅನ್ನು ಮುರಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಈ ವೇಳೆ ಅಲ್ಲಿ ನಿಂತಿದ್ದ ಪೊಲೀಸರು ವಾಹವನ್ನು ಸುತ್ತುವರಿದರು. ಪೊಲೀಸರು ವಾಹನವನ್ನು ನಿಲ್ಲಿಸಿದ ಕೂಡಲೇ ಕತ್ತಿ, ಮಾರಕಾಸ್ತ್ರಗಳನ್ನು ಎತ್ತಿಕೊಂಡ ಗುಂಪು ದಾಳಿ ನಡೆಸಿ, ಎಎಸ್‍ಐ ಹರ್ಜಿತ್ ಸಿಂಗ್ ಅವರ ಕೈ ಕತ್ತರಿಸಿ ಪರಾರಿಯಾಗಿತ್ತು ಎಂದು ತಿಳಿಸಿದ್ದಾರೆ.

    ನಿಹಾಂಗ್ ಬಾಲ್‍ಬರಾ ಪ್ರದೇಶದ ಗುರುದ್ವಾರದಲ್ಲಿ ಆರೋಪಿಗಳು ಅಡಗಿಕೊಂಡಿದ್ದರು. ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬೆನ್ನಟ್ಟುವ ಮೂಲಕ ಗುರುದ್ವಾರವನ್ನು ತಲುಪಿದರು. ಪಟಿಯಾಲ ವಲಯದ ಐ.ಜಿ.ಜತೀಂದರ್ ಸಿಂಗ್ ಅವರು ನಿಹಾಂಗ್‍ಗಳನ್ನು ಶರಣಾಗುವಂತೆ ಎಚ್ಚರಿಸಿದರು. ಆದರೆ ಅವರು ಗುರುದ್ವಾರದ ಒಳಗಿನಿಂದ ಪೊಲೀಸರಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದರು. ಅವರು ಒಳಗಿನಿಂದಲೂ ಗುಂಡು ಹಾರಿಸಿದರು. ನಂತರ ಕಮಾಂಡೋ ತಂಡವನ್ನು ಗುರುದ್ವಾರದೊಳಗೆ ಕಳುಹಿಸಲಾಯಿತು.

    ಗುರುದ್ವಾರದ ಒಳಗೆ ಸ್ಥಳೀಯ ಪಿಸ್ತೂಲ್, ಸೇಬರ್, ಪೆಟ್ರೋಲ್ ಬಾಂಬ್, 7 ಚೀಲ ಗಾಂಜಾ ಮತ್ತು ದೊಡ್ಡ ಪ್ರಮಾಣದ ರಾಸಾಯನಿಕ ತರಹದ ದ್ರವವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಟ್ಟು 9 ಜನರನ್ನು ಬಂಧಿಸಲಾಗಿದೆ ಎಂದು ಎಸ್‍ಪಿ ಮಂದೀಪ್ ಸಿಂಗ್ ಸಿಧು ಹೇಳಿದ್ದಾರೆ. ಶಸ್ತ್ರಾಸ್ತ್ರಗಳಲ್ಲದೆ, ಅವರಿಂದಲೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈವರೆಗೆ 35 ಲಕ್ಷ ರೂ.ಗಳು ಸಿಕ್ಕಿದ್ದು, ಇನ್ನೂ ಕಾರ್ಯಾಚರಣೆ ನಡೆದಿದೆ.

    ಪಟಿಯಾಲದಲ್ಲಿ ನಡೆದ ಘಟನೆ ದುರದೃಷ್ಟಕರ ಎಂದು ಪಂಜಾಬ್ ಡಿಜಿಪಿ ದಿನಕರ್ ಗುಪ್ತಾ ಹೇಳಿದ್ದಾರೆ. ಗಾಯಗೊಂಡ ಎಎಸ್‍ಐಗೆ ಚಿಕಿತ್ಸೆ ನೀಡಲು ಪಿಜಿಐಎಂಆರ್ ನ ಉನ್ನತ ಪ್ಲಾಸ್ಟಿಕ್ ಸರ್ಜನ್ ಅವರನ್ನು ನೇಮಿಸಲಾಗಿದೆ.