Tag: ಪಕ್ಷೇತರ ಅಭ್ಯರ್ಥಿ

  • ಬಿಜೆಪಿಗೆ ಶಾಕ್- ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪುತ್ತಿಲ ಕಣಕ್ಕೆ

    ಬಿಜೆಪಿಗೆ ಶಾಕ್- ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪುತ್ತಿಲ ಕಣಕ್ಕೆ

    ಮಂಗಳೂರು: ಲೋಕಸಭಾ ಚುನಾವಣೆ (Loksabha Election 2024) ಸಮೀಪಿಸುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ಸೇರುವ ಬಗ್ಗೆ ಭಾರೀ ಕುತೂಹಲ ಮೂಡಿಸಿತ್ತು. ಈ ನಡುವೆ ಇದೀಗ ಅರುಣ್ ಕುಮಾರ್ ಪುತ್ತಿಲ (Arun Kumar Puttila) ಅವರು ಈ ಬಾರಿಯ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂಬುದು ಸದ್ಯದ ಸುದ್ದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಶಾಕ್ ಎದುರಾಗಿದೆ.

    ಇಂದು ಪುತ್ತೂರಿನಲ್ಲಿ ಪುತ್ತಿಲ ಪರಿವಾರ ಅಧ್ಯಕ್ಷ ಪ್ರಸನ್ನ ಮಾರ್ತ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈಗಾಗಲೇ ಬಿಜೆಪಿ (BJP) ಪಕ್ಷದ ನಾಯಕರಾದ ಯಡಿಯೂರಪ್ಪ, ಸಂತೋಷ್ ಜಿ, ವಿಜಯೇಂದ್ರ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಅವರೊಂದಿಗೆ ಮಾತುಕತೆ ನಡೆದಿತ್ತು. ಎಲ್ಲರಿಂದಲೂ ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿದೆ. ಆದರೆ ಇಲ್ಲಿಯ ತನಕ ಯಾವ ನಿರ್ಧಾರವನ್ನು ಅವರು ಕೈಗೊಂಡಿಲ್ಲ. ಹಾಗಾಗಿ ಪುತ್ತಿಲ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದರು.

    ಬಹಿರಂಗವಾಗಿ ಪುತ್ತೂರು ಮಂಡಲ ಅಧ್ಯಕ್ಷ ನೀಡಬೇಕೆಂದು ಬೇಡಿಕೆ ಇಟ್ಟಿದ್ದೆವು. ಅದರೆ ಅದ್ಯಾವುದೂ ಈವರೆಗೆ ಸಫಲವಾಗಿಲ್ಲ. ಕಾರ್ಯಕರ್ತರ ಒತ್ತಾಸೆಯಂತೆ ಅರುಣ್ ಕುಮಾರ್ ಪುತ್ತಿಲ ಸ್ಪರ್ಧಿಸಲಿದ್ದಾರೆ. ಪುತ್ತೂರು ತಾಲೂಕಿನಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಂಘಟನೆ ಇದ್ರೆ ಅದು ಪುತ್ತಿಲ ಪರಿವಾರ. ಈಗಾಗಲೇ ನಾವು ಚಾಪು ಮೂಡಿಸಿದ್ದೇವೆ. ಮುಂದೆ ಇನ್ನೂ ಹೆಚ್ಚು ಸೇವೆ ಸಲ್ಲಿಸುವ ಸಲುವಾಗಿ ನಮ್ಮ ಆರೋಗ್ಯ ಘಟಕದಿಂದ ಬೆಟ್ಟಂಪಾಡಿ ವಿಭಾಗದಲ್ಲಿ ಮಾ.3ಕ್ಕೆ ಅಂಬುಲೆನ್ಸ್ ಸೇವೆ ಆರಂಭಿಸಲಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: BBMP Budget 2024: ಪಾಲಿಕೆಯ ಶಾಲಾ/ಕಾಲೇಜು ವಿದ್ಯಾರ್ಥಿಗಳು, ಪೋಷಕರಿಗೆ ‘ಆಯುಷ್ಮಾನ್‌ ಭಾರತ್‌’ ವಿಮೆ!

    ಮುಂದಿನ ದಿನ ಜಿಲ್ಲೆಯಾದ್ಯಂತ ಸಂಘಟನೆ ಗಟ್ಟಿಗೊಳಿಸುವ ಕೆಲಸ ಮಾಡುತ್ತೇವೆ. ಸಂಘಟನೆಯನ್ನು ರಾಜ್ಯಕ್ಕೆ ವಿಸ್ತರಿಸಲಿದ್ದೇವೆ. ಸಮಾಲೋಚನಾ ಸಭೆಯ ಬಳಿಕ ಮುಂದಿನ ಎಲ್ಲಾ ಚುನಾವಣೆಯಲ್ಲಿ ನಮ್ಮ ಸ್ಪರ್ಧೆ ಇರಬೇಕೆಂದು ನಾವು ತೀರ್ಮಾನ ಕೈಗೊಂಡಿದ್ದೇವೆ. ಮುಂದೆ ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಸ್ಪರ್ಧೆ ಮಾಡಲಿದೆ. ರಾಜ್ಯಕ್ಕೂ ಸೇವಾ ಸಂಘಟನೆ ವಿಸ್ತರಣೆ ಮಾಡಲಿದ್ದೇವೆ ಎಂದು ಹೇಳಿದರು.

  • 10 ಸಾವಿರ ಮನೆಗಳಲ್ಲಿ ಭಿಕ್ಷೆ ಬೇಡಿ ನಾಮಪತ್ರ ಸಲ್ಲಿಕೆ – ನಾಣ್ಯ ಎಣಿಸಿ ಸುಸ್ತಾದ ಅಧಿಕಾರಿಗಳು

    10 ಸಾವಿರ ಮನೆಗಳಲ್ಲಿ ಭಿಕ್ಷೆ ಬೇಡಿ ನಾಮಪತ್ರ ಸಲ್ಲಿಕೆ – ನಾಣ್ಯ ಎಣಿಸಿ ಸುಸ್ತಾದ ಅಧಿಕಾರಿಗಳು

    ಯಾದಗಿರಿ: ಯಾದಗಿರಿ (Yadgiri) ಜಿಲ್ಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯೊಬ್ಬರು  ತಮ್ಮ ಠೇವಣಿ (Deposite) ಹಣ 10,000 ರೂ.ಗಳನ್ನು ಸಂಪೂರ್ಣವಾಗಿ ಒಂದು ರೂಪಾಯಿ ನಾಣ್ಯಗಳಲ್ಲಿ ಪಾವತಿಸಿದ್ದು, ಹತ್ತು ಸಾವಿರ ನಾಣ್ಯಗಳನ್ನು ಎಣಿಸುವಲ್ಲಿ ಅಧಿಕಾರಿಗಳು ಸುಸ್ತಾಗಿದ್ದಾರೆ.

    ಒಂದೊಂದು ರೂ. ನಾಣ್ಯಗಳನ್ನು ನೀಡಿ ಹತ್ತು ಸಾವಿರ ಠೇವಣಿ ಭರಿಸಿರುವ ಪಕ್ಷೇತರ ಅಭ್ಯರ್ಥಿ (Independent Candidate) ಹೆಸರು ಯಂಕಪ್ಪ. ಇವರು ಕಳೆದ ಒಂದು ವರ್ಷದಿಂದ ಯಾದಗಿರಿ ವಿಧಾನಸಭಾ ಕ್ಷೇತ್ರದ 10 ಸಾವಿರ ಮನೆಗಳಲ್ಲಿ ಭಿಕ್ಷೆ (Beg) ಬೇಡಿ, ಪ್ರತೀ ಮನೆಯಲ್ಲಿ ಒಂದು ರೂ.ಗಳಂತೆ ಹತ್ತು ಸಾವಿರ ಸಂಗ್ರಹಿಸಿದ್ದಾರೆ. ಒಂದು ವರ್ಷ ಮನೆಬಿಟ್ಟು ಠೇವಣಿ ಸಂಗ್ರಹಿಸಿರುವ ಇವರು, ಯಾವುದೇ ಗ್ರಾಮದಲ್ಲಿ ವಾಸ್ತವ್ಯ ಹೂಡಬೇಕಿದ್ದರೂ ಅಲ್ಲಿನ ದೇವಸ್ಥಾನಗಳಲ್ಲೇ ಇರುತ್ತಿದ್ದರು. ಅದೇ ಊರಿನ ಮನೆಗಳಲ್ಲಿ ಭಿಕ್ಷೆ ಬೇಡಿ ಊಟವನ್ನೂ ಮಾಡುತ್ತಿದ್ದರು. ಇದನ್ನೂ ಓದಿ: ಮತ್ತೊಂದು ವಿಕೆಟ್ ಪತನ – ಆಯನೂರು ಮಂಜುನಾಥ್ ಬಿಜೆಪಿಗೆ ಗುಡ್ ಬೈ 

    ಯಂಕಪ್ಪ ತಮ್ಮ ಕೊರಳಿಗೆ ಹಾಕಿಕೊಂಡಿದ್ದ ಪೋಸ್ಟರ್‌ನಲ್ಲಿ 12ನೇ ಶತಮಾನದ ಸಮಾಜ ಸುಧಾರಕರಾದ ಜ್ಞಾನಜ್ಯೋತಿ ಬಸವೇಶ್ವರ, ಸಂತ ಕವಿ ಕನಕದಾಸ, ಸ್ವಾಮಿ ವಿವೇಕಾನಂದ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿತ್ರಗಳು ಮತ್ತು ಸಂವಿಧಾನದ ಪೀಠಿಕೆ ಹಾಕಿಕೊಂಡು ಊರೂರು ಸುತ್ತಾಡಿ ಹಣ ಸಂಗ್ರಹಿಸಿದ್ದಾರೆ. ಇದು ಜನರನ್ನು ಆಕರ್ಷಿಸಿದೆ. ಈ ಚಿತ್ರಗಳ ಕೆಳಗೆ ಕನ್ನಡದಲ್ಲಿ ಕೇವಲ ಒಂದು ರೂಪಾಯಿ ಅಲ್ಲ, ನಿಮ್ಮ ಒಂದು ಮತ, ನೀವು ಒಂದು ದಿನ ನನಗೆ ಮತ ನೀಡಿ, ನಾನು ನಿಮಗೆ ಬಡತನದಿಂದ ಮುಕ್ತಿ ನೀಡುತ್ತೇನೆ ಎಂಬ ಘೋಷವಾಕ್ಯದೊಂದಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಇದನ್ನೂ ಓದಿ: ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷನ ಬರ್ಬರ ಹತ್ಯೆ 

    ಕಲಬುರಗಿ (Kalaburagi) ಜಿಲ್ಲೆಯ ಗುಲ್ಬರ್ಗ (Gulbarga) ವಿಶ್ವವಿದ್ಯಾನಿಲಯದಿಂದ ಕಲಾ ಪದವೀಧರರಾಗಿರುವ ಇವರು, 60 ಸಾವಿರ ರೂ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಅವರ ತಂದೆ ದೇವಿಂದ್ರಪ್ಪ ಒಂದು ಎಕರೆ 16 ಗುಂಟೆ ಜಮೀನು ಹೊಂದಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಪರ ಕಿಚ್ಚ ಸುದೀಪ್ ಕ್ಯಾಂಪೇನ್ – ಶಿಗ್ಗಾಂವಿ ಕ್ಷೇತ್ರದಲ್ಲಿ ಇಂದು ಮಿಂಚಿನ ಸಂಚಾರ 

    ಒಟ್ಟಿನಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಗೆ (Election) ನಾಮಪತ್ರ (Nomination Papers) ಸಲ್ಲಿಸುವ ವೇಳೆ ಹಲವು ಕುತೂಹಲಕಾರಿ ವಿಷಯಗಳು ಹೊರಬರುತ್ತಿವೆ. ಕೆಲವೆಡೆ ಅಭ್ಯರ್ಥಿಗಳ ಆಸ್ತಿ ಘೋಷಣೆ ಕೇಳಿ ಜನಸಾಮಾನ್ಯರು ತಲೆ ಕೆಡಿಸಿಕೊಂಡರೆ ಮತ್ತೆ ಕೆಲವು ಅಭ್ಯರ್ಥಿಗಳು ಚುನಾವಣಾ ಠೇವಣಿ ಹಣ ಕಟ್ಟುವ ಸಮಯದಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ. ಇದನ್ನೂ ಓದಿ: ಕೈ ಅಭ್ಯರ್ಥಿಯ ಬಿ ಫಾರಂಗೆ ತಡೆ – ಪದ್ಮನಾಭನಗರದಲ್ಲಿ ಅಶೋಕ್‌ ವಿರುದ್ಧ ಡಿಕೆ ಸುರೇಶ್‌ ಕಣಕ್ಕೆ?

  • 2018ರ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ಒಡ್ಡಿದ್ದ ಅಭ್ಯರ್ಥಿಯ ಜಾತಿ ಪ್ರಮಾಣಪತ್ರ ರದ್ದು

    2018ರ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ಒಡ್ಡಿದ್ದ ಅಭ್ಯರ್ಥಿಯ ಜಾತಿ ಪ್ರಮಾಣಪತ್ರ ರದ್ದು

    ರಾಯಚೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರ ಮಾನ್ವಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಪೈಪೋಟಿ ನೀಡಿ ಎರಡನೇ ಸ್ಥಾನ ಪಡೆದಿದ್ದ ಡಾ.ತನುಶ್ರಿ ಜಾತಿ ಪ್ರಮಾಣಪತ್ರ ರದ್ದಾಗಿದೆ.

    ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಚುನಾವಣೆ ಎದುರಿಸಿದ್ದಾರೆ ಎಂದು ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್.ರಘುವೀರ ನಾಯಕ ಹಾಗೂ ರಂಗಾರೆಡ್ಡಿ ಎಂಬುವವರು ದೂರು ದಾಖಲಿಸಿದ್ದರು‌. ಇದನ್ನೂ ಓದಿ: ಚುನಾವಣಾ ರಾಜಕಾರಣಕ್ಕೆ ಈಶ್ವರಪ್ಪ ಗುಡ್‍ಬೈ

    ಬೀದರ್ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಜಾತಿ ಪ್ರಮಾಣಪತ್ರ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ. ನಮ್ಮ ಹೋರಾಟಕ್ಕೆ ಐದು ವರ್ಷದ‌ ಬಳಿಕ ಜಯ ಸಿಕ್ಕಿದೆ ಎಂದು ರಘುವೀರ್ ನಾಯಕ್ ಹೇಳಿದ್ದಾರೆ.

    ಹಿಂದುಳಿದ ವರ್ಗದ ಧನಗಾರ ಜಾತಿಯಲ್ಲಿದ್ದರೂ ಗೊಂಡ ಎಂದು ನಮೂದಿಸಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಪಡೆದಿದ್ದರು ಎಂದು ಆರೋಪಿಸಿ ರಾಯಚೂರು ಹಾಗೂ ಬೀದರ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ತನುಶ್ರೀ ಕಳೆದ ಚುನಾವಣೆಯಲ್ಲಿ 37,733 ಮತಗಳನ್ನು ಪಡೆದು ರಾಜಾ ವೆಂಕಟಪ್ಪ ನಾಯಕ್ ವಿರುದ್ಧ ಪರಾಭವಗೊಂಡಿದ್ದರು. ಇದನ್ನೂ ಓದಿ: ಪಕ್ಷೇತರನಿಗೆ ಬಿದ್ದ ಅನಿರೀಕ್ಷಿತ ಮತ ಸಿದ್ದು ಪಾಲಿಗೆ ವರವಾಯ್ತು!

  • ಪಾಲಿಕೆ ಚುನಾವಣೆ – ಪಕ್ಷೇತರ ಅಭ್ಯರ್ಥಿ ಮರಳಿ ಬಿಜೆಪಿ ತೆಕ್ಕೆಗೆ

    ಪಾಲಿಕೆ ಚುನಾವಣೆ – ಪಕ್ಷೇತರ ಅಭ್ಯರ್ಥಿ ಮರಳಿ ಬಿಜೆಪಿ ತೆಕ್ಕೆಗೆ

    ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಪಕ್ಷೇತರ ಸದಸ್ಯೆ ದುರ್ಗಮ್ಮ ಬಿಜವಾಡ ಮರಳಿ ಬಿಜೆಪಿ ಆಗಮಿಸುವುದು ಬಹುತೇಕ ಖಚಿತವಾಗಿದೆ.

    ವಾರ್ಡ್ ನಂಬರ್ 69 ರಲ್ಲಿ ಗೆಲುವು ಸಾಧಿಸಿರುವ ಪಕ್ಷೇತರ ಅಭ್ಯರ್ಥಿ ದುರ್ಗಮ್ಮ ಬಿಜವಾಡ ಪತಿ ಶಶಿಕಾಂತ್ ಬಿಜವಾಡ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಮೂಲಕ ಬಿಜೆಪಿ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಪಾಲಿಕೆ ಗದ್ದುಗೆ ಹಿಡಿಯುವುದು ಖಚಿತವಾಗಿದೆ.  ಇದನ್ನೂ ಓದಿ: ಆಪರೇಷನ್‌ ಕಲಬುರಗಿ: ಖರ್ಗೆ, ದೇವೇಗೌಡರು ಚರ್ಚಿಸಿದ್ದಾರೆ ಎಂದ ಡಿ.ಕೆ. ಶಿವಕುಮಾರ್

    ದುರ್ಗಮ್ಮ ಪತಿ ಶಶಿಕಾಂತ್ ಬಿಜವಾಡ ಅವರು ಪ್ರದೀಪ್ ಶೆಟ್ಟರ್ ಆತ್ಮೀಯರು. 15 ವರ್ಷಗಳಿಗೂ ಅಧಿಕ ಕಾಲ ಬಿಜೆಪಿಯಲ್ಲೇ ಕಾರ್ಯನಿರ್ವಹಿಸಿದ್ದ ಶಶಿಕಾಂತ ಅವರು ಬಿಜೆಪಿ ಟಿಕೆಟ್ ದೊರೆಯದ ಕಾರಣ ತಮ್ಮ ಪತ್ನಿ ದುರ್ಗಮ್ಮ ಅವರನ್ನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದರು. ವಾರ್ಡ್ ನಂಬರ್ 69 ರಲ್ಲಿ ದುರ್ಗಮ್ಮ ಅವರು ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಕೊಟ್ಟ ಮಾತು ಉಳಿಸಿಕೊಂಡ ಸಿಎಂ – ಶಿಗ್ಗಾಂವಿ ಅಜ್ಜಿ ಮನೆಗೆ ಡಿಸಿ ಭೇಟಿ, 3 ತಿಂಗಳಲ್ಲಿ ಮನೆ ಭರವಸೆ

    ಸದ್ಯ ಉಪಮೇಯರ್ ಸ್ಥಾನ ಪರಿಶಿಷ್ಠ ಜಾತಿ ಮಹಿಳೆಗೆ ಮೀಸಲಾಗಿದ್ದು ಈ ಮೀಸಲಿಗೆ ಅರ್ಹರಾದ ಪಾಲಿಕೆ ಸದಸ್ಯರು ಬಿಜೆಪಿಯಲ್ಲಿ ಯಾರೂ ಇಲ್ಲ. ಅಲ್ಲದೇ ದುರ್ಗಮ್ಮ ಶಶಿಕಾಂತ ಬಿಜವಾಡ ಅವರು ಈ ಮೀಸಲಿಗೆ ಅರ್ಹರಾಗಿದ್ದಾರೆ. ಹೀಗಾಗಿ ಎಂಎಲ್‍ಸಿ ಪ್ರದೀಪ ಶೆಟ್ಟರ್ ಹಾಗೂ ಶಶಿಕಾಂತ್ ಭೇಟಿ ಹಿನ್ನೆಲೆಯಲ್ಲಿ ದುರ್ಗಮ್ಮ ಅವರು ಬಿಜೆಪಿಗೆ ಬರುವುದು ಬಹುತೇಕ ಖಚಿತವಾಗಿದ್ದು, ದುರ್ಗಮ್ಮ ಬಿಜವಾಡರಿಗೆ ಉಪಮೇಯರ್ ಸ್ಥಾನ ಖಚಿತವಾಗಿದೆ.

  • ಚಂದ್ರಲೋಕಕ್ಕೆ ಟ್ರಿಪ್, ಮನೆಗೊಂದು ಹೆಲಿಕಾಪ್ಟರ್ – ಪಕ್ಷೇತರ ಅಭ್ಯರ್ಥಿಯಿಂದ ಅಚ್ಚರಿಯ ಪ್ರಣಾಳಿಕೆ

    ಚಂದ್ರಲೋಕಕ್ಕೆ ಟ್ರಿಪ್, ಮನೆಗೊಂದು ಹೆಲಿಕಾಪ್ಟರ್ – ಪಕ್ಷೇತರ ಅಭ್ಯರ್ಥಿಯಿಂದ ಅಚ್ಚರಿಯ ಪ್ರಣಾಳಿಕೆ

    – ವಿಭಿನ್ನ ಆಶ್ವಾಸನೆಗೆ ಸ್ಪಷ್ಟನೆ ನೀಡಿದ ಸರವಣನ್

    ಚೆನ್ನೈ: ಸಾಮಾನ್ಯವಾಗಿ ಚುನಾವಣೆ ಬಂದಾಗ ಅಭ್ಯರ್ಥಿಗಳು ತಮ್ಮ ಪ್ರಣಾಳಿಕೆಯಲ್ಲಿ ಅಭಿವೃದ್ಧಿಯ ಬಗ್ಗೆ ಹೇಳುವುದನ್ನು ಕೇಳಿದ್ದೇವೆ. ಇತ್ತೀಚೆಗೆ ಮನೆಗೆ ವಾಷಿಂಗ್ ಮೆಷಿನ್ ಹಾಗೂ ಇನ್ನಿತರ ವಸ್ತುಗಳನ್ನು ನೀಡುವುದನ್ನು ಕೂಡ ನೋಡಿದ್ದೇವೆ. ಆದರೆ ಇದೀಗ ತಮಿಳುನಾಡಿನ ಪಕ್ಷೇತರ ಅಭ್ಯರ್ಥಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

    ಹೌದು. ಮಧುರೈ ದಕ್ಷಿಣ ಕ್ಷೇತ್ರದಿಂದ ತುಲಮ್ ಸರವಣನ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ. ಇದೀಗ ಇವರು ಇತರ ಅಭ್ಯರ್ಥಿಗಳಿಗಿಂದ ತುಂಬಾನೇ ವಿಭಿನ್ನವಾದ ಪ್ರಣಾಳಿಕೆ ಬಿಡುಗಡೆ ಮಾಡುವ ಮೂಲಕ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದ್ದಾರೆ. ಸದ್ಯ ಈ ಚುನಾವಣಾ ಪ್ರಣಾಳಿಕೆ ತಮಿಳುನಾಡಿನಲ್ಲಿ ಭಾರೀ ಸದ್ದು ಮಾಡುತ್ತಿದೆ. ಇವರ ಚುನಾವಣಾ ಚಿಹ್ನೆ ‘ಕಸದ ಬುಟ್ಟಿ’ಯಾಗಿದೆ.

    ಪ್ರಣಾಳಿಕೆಯಲ್ಲೇನಿದೆ..?
    ನಾನು ಗೆದ್ದು ಬಂದರೆ ಮಿನಿ ಹೆಲಿಕಾಪ್ಟರ್, ಪ್ರತಿ ಮನೆಗೂ ವರ್ಷಕ್ಕೆ 1 ಕೋಟಿ, ಮದುವೆಗಳಿಗೆ ಚಿನ್ನಾಭರಣ, ಮೂರು ಮಹಡಿಯ ಮನೆ ನೀಡುತ್ತೇನೆ. ಅಲ್ಲದೆ ಚಂದ್ರನಲ್ಲಿಗೆ ಪ್ರವಾಸ ಹೋಗಲು ಅನುಕೂಲ ಮಾಡಿಕೊಡುತ್ತೇನೆ ಎಂದು ಹೇಳುವ ಮೂಲಕ ಮತದಾರರ ಅಂಗೈಯಲ್ಲಿ ಚಂದ್ರನನ್ನು ತೋರಿಸಿದ್ದಾರೆ.

    ಇಷ್ಟು ಮಾತ್ರವಲ್ಲದೆ ಬೇಸಿಗೆಯ ಬಿಸಿಲನ್ನು ನಿಯಂತ್ರಿಸಲು ತಮ್ಮ ಕ್ಷೇತ್ರದಲ್ಲಿ 300 ಅಡಿ ಎತ್ತರದ ಕೃತಕ ಮಂಜುಗಡ್ಡೆಯನ್ನೇ ನಿರ್ಮಿಸುತ್ತೇನೆ. ಗೃಹಿಣಿಯರಿಗೆ ಮನೆಕೆಲಸದಲ್ಲಿ ಸಹಾಯ ಮಾಡಲು ರೋಬೋಟ್, ಪ್ರತಿ ಮನೆಗೆ ದೋಣಿ ನೀಡುತ್ತೇನೆ. ಮದುವೆಯಾಗದೆ ಇದ್ದ ಯುವಕರು ತಮ್ಮ ವೃದ್ಧ ಪೋಷಕರೊಂದಿಗೆ ಇದ್ದರೆ ಅಂತವರಿಗೂ ಸಹಾಯ ಮಾಡುತ್ತೇನೆ. ಹೀಗೆ ಅನೇಕ ಆಶ್ವಾಸನೆಗಳನ್ನು ನೀಡುವ ಮೂಲಕ ಮತದಾರರ ಗಮನ ಸೆಳೆಯುವಂತೆ ಮಾಡಿದ್ದಾರೆ.

    ವಿಭಿನ್ನ ಆಶ್ವಾಸನೆಗೆ ಕಾರಣವೇನು..?
    ರಾಜಕೀಯ ಪಕ್ಷಗಳು ವಿವಿಧ ಭರವಸೆಗಳನ್ನು ನೀಡುತ್ತಾ ಇದೂವರೆಗೆ ಗೆಲ್ಲುತ್ತಾ ಬಂದಿವೆ. ಆದರೆ ಪ್ರಣಾಳಿಕೆಯಲ್ಲಿ ನೀಡಿದ್ದ ಯಾವುದೇ ಆಶ್ವಾಸನೆಗಳನ್ನು ಅವರು ಈಡೇರಿಸಲಿಲ್ಲ. ಹೀಗಾಗಿ ಇಂತಹ ಜನ ರಾಜಕಾರಣಿಗಳ ಆಶ್ವಾಸನೆಗಳಿಗೆ ಮರುಳಾಗಬಾರದು. ಹಣದ ಹಿಂದೆ ಹೋಗಬಾರದು. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂಬುದೇ ನನ್ನ ಗುರಿಯಾಗಿದೆ. ಈ ಬಗ್ಗೆ ನಾನು ಜನರಲ್ಲಿ ಅರಿವು ಕೂಡ ಮೂಡಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ನಾನು ಇಡೀ ವಿಶ್ವದಲ್ಲಿಯೇ ಯಾರೂ ನೀಡದಂತಹ ಹಾಗೂ ಯಾರಿಂದಲೂ ಈಡೇರಿಸಲಾಗದಂತಹ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇನೆ. ಜನರನ್ನು ಜಾಗೃತಿಗೊಳಿಸುವ ಉದ್ದೇಶ ಇದಾಗಿದೆ. ಈ ಮೂಲಕ ಮತದಾರರು ಸುಲಭವಾಗಿ ಮೋಸ ಹೋಗುತ್ತಿದ್ದಾರೆ ಎಂಬುದನ್ನು ತಿಳಿಸುವ ಸಲುವಾಗಿ ಇಂತಹ ಪ್ರಣಾಳಿಕೆ ಬಿಡುಗಡೆ ಮಾಡಿರುವುದಾಗಿ 33 ವರ್ಷದ ಪತ್ರಕರ್ತ ಹಾಗೂ ಚುನಾವಣಾ ಅಭ್ಯರ್ಥಿ ಸರವಣನ್ ಸ್ಪಷ್ಟಪಡಿಸಿದ್ದಾರೆ.

    ಚುನಾವಣಾ ಪ್ರಚಾರ ಮಾಡಲು ನನ್ನ ಬಳಿ ಹಣವಿರಲಿಲ್ಲ. ಹೀಗಾಗಿ ನಾನು ಸ್ನೇಹಿತರು ಹಾಗೂ ಸಂಬಂಧಿಕರ ಸಹಾಯ ಕೋರಿದ್ದೇನೆ. ಸದ್ಯ ನನ್ನ ವಾಟ್ಸಪ್ ಮೆಸೇಜ್ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ತಾನು ಈಗಾಗಲೇ ನೀಡಿರುವ ದೊಡ್ಡ ದೊಡ್ಡ ಆಶ್ವಾಸನೆಗಳನ್ನು ನೋಡಿ ಜನ ಯೋಚನೆ ಮಾಡುತ್ತಿದ್ದಾರೆ. ಅಲ್ಲದೆ ಈ ಆಸ್ವಾನೆಗಳ ಹಿಂದೆ ಏನಿದೆ ಎಂದು ಗೊಂದಕ್ಕೀಡಾಗಿದ್ದಾರೆ. ಒಂದು ವೇಳೆ ನಾನು ಸೋತರೂ ಇದೇ ನನ್ನ ಗೆಲುವು ಎಂದು ಸರವಣನ್ ತಿಳಿಸಿದ್ದಾರೆ.

  • ಉಪಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಗೆ ಹೃದಯಾಘಾತ

    ಉಪಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಗೆ ಹೃದಯಾಘಾತ

    ಮೈಸೂರು: ಹುಣಸೂರು ಉಪಚುನಾವಣಾ ಕಣದಲ್ಲಿದ್ದ ಪಕ್ಷೇತರ ಅಭ್ಯರ್ಥಿಗೆ ತೀವ್ರ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    ಹುಣಸೂರು ನಗರದ ಕುಲ್ಕಣಿ ಉಮೇಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಉಪ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ಆದರೆ ಗುರುವಾರ ಆಯಾಸಗೊಂಡಿದ್ದ ಅವರು ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದಿದ್ದರು. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಅವರನ್ನು ತಕ್ಷಣವೇ ಮೈಸೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

    ಚುನಾವಣಾ ಅಧಿಕಾರಿಗಳು ಉಮೇಶ್ ಅವರಿಗೆ ಕ್ರಮಸಂಖ್ಯೆ 9 ಹಾಗೂ ಫ್ರಾಕ್ ಗುರುತು ನೀಡಿದ್ದಾರೆ. ಬಿಜೆಪಿಯಿಂದ ಎಚ್.ವಿಶ್ವನಾಥ್, ಕಾಂಗ್ರೆಸ್‍ನಿಂದ ಎಚ್.ಪಿ.ಪಾಟೀಲ್, ಜೆಡಿಎಸ್‍ನಿಂದ ಸೋಮಶೇಖರ್ ಸ್ಪರ್ಧೆ ಮಾಡುತ್ತಿದ್ದಾರೆ.

    2018ರ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಎಚ್.ವಿಶ್ವನಾಥ್ 91,667 ಮತಗಳನ್ನು ಪಡೆದು ಗೆದ್ದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ 83,092 ಹಾಗೂ ಪಕ್ಷೇತರ ಅಭ್ಯರ್ಥಿ ಎಚ್.ಪಿ.ಲಕ್ಷ್ಮಣ 83,092 ಮತ ಗಳಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ಜೆ.ಎಸ್.ರಮೇಶ್ ಕುಮಾರ್ ಕೇವಲ 6,406 ಮತ ಪಡೆಯಲು ಶಕ್ತವಾಗಿದ್ದರು.

  • ಪಕ್ಷೇತರ ಅಭ್ಯರ್ಥಿಗೆ ಚಪ್ಪಲಿ ಗುರುತು- ಗೊಂದಲದಲ್ಲಿ ಚುನಾವಣಾ ಸಿಬ್ಬಂದಿ!

    ಪಕ್ಷೇತರ ಅಭ್ಯರ್ಥಿಗೆ ಚಪ್ಪಲಿ ಗುರುತು- ಗೊಂದಲದಲ್ಲಿ ಚುನಾವಣಾ ಸಿಬ್ಬಂದಿ!

    ಕೊಪ್ಪಳ: 2ನೇ ಹಂತದ ಚುನಾವಣೆಗೆ ಇನ್ನೂ ಕೇವಲ ಒಂದು ದಿನ ಬಾಕಿ ಇರಬೇಕಾದರೆ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಸಿಬ್ಬಂದಿ ಗೊಂದಲದಲ್ಲಿದ್ದಾರೆ.

    ಹೌದು. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ 14 ಜನ ಕಣದಲ್ಲಿದ್ದಾರೆ. ಆದರೆ ಒಬ್ಬ ಪಕ್ಷೇತರ ಅಭ್ಯರ್ಥಿಯ ಚಿಹ್ನೆ ಚಪ್ಪಲಿ ಗುರುತು ಇರುವುದರಿಂದ ಚುನಾವಣಾ ಸಿಬ್ಬಂದಿ ಚಪ್ಪಲಿ ಹಾಕಬೇಕಾ ಬೇಡವಾ ಎನ್ನುವ ಚಿಂತನೆಯಲ್ಲಿ ಇದ್ದಾರೆ.

    ಚುನಾವಣಾ ಆಯೋಗದ ಪ್ರಕಾರ ಮತಗಟ್ಟೆಯಿಂದ 100 ಮೀಟರ್ ವರೆಗೂ ಎಲ್ಲಿಯೂ ಅಭ್ಯರ್ಥಿಯ ಚಿಹ್ನೆ ಕಾಣುವಂತಿಲ್ಲ. ಆದರೆ ಪಕ್ಷೇತರ ಅಭ್ಯರ್ಥಿ ಪ.ಯ ಗಣೇಶ್ ಅವರ ಚಿಹ್ನೆ ಚಪ್ಪಲಿ ಇರುವುದರಿಂದ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರೇ ಇದಕ್ಕೆ ಏನು ಮಾಡೋದು ಎಂದು ಯೋಚನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

    ಸಿಬ್ಬಂದಿ ವಿಚಾರವಿರಲಿ ಮತಗಟ್ಟೆಗೆ ಮತ ಹಾಕಲು ಬರುವ ಮತದಾರರು ಚಪ್ಪಲಿ ಹಾಕಿಕೊಳ್ಳಬೇಕಾ ಅಥವಾ ಬಿಟ್ಟು ಬರಬೇಕಾ ಎನ್ನುವುದು ಇದೀಗ ಕೊಪ್ಪಳದಲ್ಲಿ ಜನರು ಚರ್ಚೆ ಮಾಡುವಂತಾಗಿದೆ.

  • ಶಿವಮೊಗ್ಗದ ಪಕ್ಷೇತರ ಅಭ್ಯರ್ಥಿ ನಾಪತ್ತೆ!

    ಶಿವಮೊಗ್ಗದ ಪಕ್ಷೇತರ ಅಭ್ಯರ್ಥಿ ನಾಪತ್ತೆ!

    ಶಿವಮೊಗ್ಗ: ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಯೂಸೂಫ್ ಖಾನ್ ನಾಪತ್ತೆ ಆಗಿದ್ದಾರೆ. ಈ ಕುರಿತು ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸೂಳೆಬೈಲಿನಲ್ಲಿ ಇರುವ ತಮ್ಮ ಮನೆಯಿಂದ ಗುರುವಾರ ಮುಂಜಾನೆ ಕಾರಿನಲ್ಲಿ ಹೋದವರು ಮರಳಿ ಬಂದಿಲ್ಲ ಎಂದು ಅವರ ಮಗ ಮಹಮ್ಮದ್ ಸುಲೇಮಾನ್ ದೂರಿನಲ್ಲಿ ತಿಳಿಸಿದ್ದಾರೆ.

    ರಿಯಲ್ ಎಸ್ಟೇಟ್ ಹಾಗೂ ಟಿಂಬರ್ ವ್ಯವಹಾರ ಮಾಡುತ್ತಿದ್ದ ಯೂಸೂಫ್ ಖಾನ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐಎಂಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 397 ಮತಗಳನ್ನು ಪಡೆದಿದ್ದರು. ಅಲ್ಲದೆ ಚುನಾವಣೆಗೆ ಒಂದು ವಾರ ಇರುವಾಗ ಎದೆ ನೋವು ಎಂದು ಆಸ್ಪತ್ರೆಗೆ ಸೇರಿದ್ದರು.

    ಇದೀಗ ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ತುಂಗಾ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ರೀತಿ ಅಭ್ಯರ್ಥಿ ನಾಪತ್ತೆ ಪ್ರಕರಣ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದಯಾನಂದ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

  • 75 ಲಕ್ಷ ಕೊಡಿ ಇಲ್ಲ ಕಿಡ್ನಿ ಮಾರಲು ಬಿಡಿ- ಚುನಾವಣಾ ಆಯೋಗಕ್ಕೆ ಪತ್ರ ಬರೆದ ಅಭ್ಯರ್ಥಿ

    75 ಲಕ್ಷ ಕೊಡಿ ಇಲ್ಲ ಕಿಡ್ನಿ ಮಾರಲು ಬಿಡಿ- ಚುನಾವಣಾ ಆಯೋಗಕ್ಕೆ ಪತ್ರ ಬರೆದ ಅಭ್ಯರ್ಥಿ

    ಭೋಪಾಲ್: ಚುನಾವಣೆಗಾಗಿ 75 ಲಕ್ಷ ರೂಪಾಯಿ ಕೊಡಿ, ಇಲ್ಲವಾದರೆ ತನ್ನ ಕಿಡ್ನಿಯನ್ನಾದರೂ ಮಾರಾಟ ಮಾಡಲು ಅನುಮತಿ ನೀಡಿ ಎಂದು ಮಧ್ಯಪ್ರದೇಶದ ಸಮಾಜವಾದಿ ಪಕ್ಷದ(ಎಸ್‍ಪಿ) ಮಾಜಿ ನಾಯಕ ಹಾಗೂ ಬಾಲಘಾಟ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೊಬ್ಬರು ಕೇಂದ್ರ ಚುನಾವಣಾ ಆಯೋಗದ ಮುಂದೆ ವಿಚಿತ್ರ ಮನವಿಯೊಂದನ್ನು ಇಟ್ಟಿದ್ದಾರೆ.

    ಪಕ್ಷೇತರ ಅಭ್ಯರ್ಥಿ ಕಿಶೋರ್ ಸಮ್ರಿತ್ ಅವರು ಜಿಲ್ಲಾ ಚುನಾವಣಾ ಅಧಿಕಾರಿ ದೀಪಕ್ ಆರ್ಯ ಅವರಿಗೆ ಈ ರೀತಿ ವಿಚಿತ್ರ ಕೋರಿಕೆ ಮುಂದಿಟ್ಟು ಪತ್ರ ಬರೆದಿದ್ದಾರೆ. ಚುನಾವಣಾ ವೆಚ್ಚಕ್ಕೆ 75 ಲಕ್ಷವನ್ನು ತಮಗೆ ಚುನಾವಣಾ ಆಯೋಗವೇ ನೀಡಲಿ ಅಥವಾ ಬ್ಯಾಂಕ್‍ನಿಂದ ಲೋನ್ ಕೊಡಿಸಲಿ. ಈ ಎರಡು ಕೆಲಸ ಅವರಿಂದ ಆಗದಿದ್ದರೆ ನನ್ನ ಕಿಡ್ನಿಯನ್ನಾದರೂ ಮಾರಾಟ ಮಾಡಲು ಅನುಮತಿ ನೀಡಲಿ ಎಂದು ಚುನಾವಣಾ ಆಯೋಗಕ್ಕೆ ಕೇಳಿಕೊಂಡಿದ್ದಾರೆ.

    ಚುನಾವಣಾ ಆಯೋಗವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು 75 ಲಕ್ಷ ರೂ.ಗಳಿಗೆ ನಿಗದಿಗೊಳಿಸಿದೆ. ಆದ್ರೆ ಅಷ್ಟು ಹಣ ತಮ್ಮ ಬಳಿ ಇಲ್ಲದ ಕಾರಣ ಕಿಶೋರ್ ಸಮ್ರಿತ್ ಈ ರೀತಿ ಮನವಿ ಮಾಡಿದ್ದಾರೆ.

    ಈ ಕುರಿತು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಕಿಶೋರ್ ಸಮ್ರಿತ್ ಅವರು, ಚುನಾವಣಾ ಆಯೋಗ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಕೇವಲ 15 ದಿನಗಳ ಅವಕಾಶವನ್ನು ನೀಡದೆ. ಇಷ್ಟು ಹಣವನ್ನು ಈ ಅವಧಿಯಲ್ಲಿ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ನನ್ನ ಬಳಿ ಅಷ್ಟೊಂದು ಹಣವಿಲ್ಲ. ನಾನು ಸಮಾಜದಲ್ಲಿರುವ ಬಡವರನ್ನು ಉದ್ಧಾರ ಮಾಡಬೇಕು ಆದ್ದರಿಂದ ಗೆಲವು ಸಾಧಿಸಬೇಕು. ನನ್ನ ವಿರುದ್ಧ ಸ್ಪರ್ಧಿಸಿದವರು ಭ್ರಷ್ಟಾಚಾರಿಗಳು. ಅವರು ಆ ಅನ್ಯಾಯದ ಹಣವನ್ನು ಚುನಾವಣಾ ಪ್ರಚಾರಕ್ಕೆ ಖರ್ಚು ಮಾಡುತ್ತಿದ್ದಾರೆ. ಆದ್ರೆ ನನಗೆ ಆ ರೀತಿ ಅನ್ಯಾಯವಾಗಿ ಹಣ ಸಂಗ್ರಹಿಸಲು ಆಗಲ್ಲ. ಆದ್ದರಿಂದ ಚುನಾವಣಾ ಆಯೋಗ ನನ್ನ ಮನವಿಯನ್ನು ಪರಿಗಣಿಸಬೇಕೆಂದು ಕೋರಿದ್ದಾರೆ.

  • ಪ್ರಚಾರಕ್ಕೆ ಬಂದ್ರೆ ದುಡ್ಡು ಕೊಡ್ತೀನಿ ಎಂದು ಹೇಳಿ ಕೈ ಕೊಟ್ಟ ಪ್ರಕಾಶ್ ರೈ!

    ಪ್ರಚಾರಕ್ಕೆ ಬಂದ್ರೆ ದುಡ್ಡು ಕೊಡ್ತೀನಿ ಎಂದು ಹೇಳಿ ಕೈ ಕೊಟ್ಟ ಪ್ರಕಾಶ್ ರೈ!

    ಬೆಂಗಳೂರು: ಚುನಾವಣಾ ಪ್ರಚಾರದಲ್ಲಿ ಭಾಗಿಯಾದ್ರೆ ಒಂದಿಷ್ಟು ದುಡ್ಡು ಸಿಗುತ್ತದೆ ಎಂದು ಬಡ ಜನರು ಹೋಗ್ತಾರೆ. ಆದ್ರೆ ಬೆಂಗೂರು ಕೇಂದ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಹಣ ಕೊಡುತ್ತೇನೆ ಎಂದು ಚುನಾವಣಾ ಪ್ರಚಾರಕ್ಕೆ ಮಹಿಳೆಯರನ್ನ ಕರೆದೊಯ್ದು ಹಣ ಕೊಡದೇ ವಂಚನೆ ಮಾಡಿದ ಆರೋಪವೊಂದು ಕೇಳಿಬಂದಿದೆ.

    ಹೌದು. ಲೋಕಸಭಾ ಚುನಾವಣೆಗೆ ಉಳಿದಿರುವುದು ಇನ್ನೂ ಕೇವಲ ನಾಲ್ಕು ದಿನ ಮಾತ್ರ. ಹೀಗಾಗಿ ಪ್ರಚಾರದ ಭರಾಟೆ ಎಲ್ಲೆಡೆ ಜೋರಾಗಿದೆ. ಜನ ಇಲ್ಲದಿದ್ದರೂ ಹಣ ಕೊಟ್ಟು ಜನರನ್ನು ಸೇರಿಸಿ ಪ್ರಚಾರ ಮಾಡುತ್ತಿದ್ದಾರೆ. ಅದರಂತೆ ಬೆಂಗಳೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಕೂಡ ಹಣ ಕೊಡುತ್ತೇನೆ ಎಂದು ಮಹಿಳೆಯರನ್ನ ಪ್ರಚಾರಕ್ಕೆ ಕರೆದೊಯ್ದು ವಂಚನೆ ಮಾಡಿದ್ದಾರೆ ಎಂಬ ಆರೋಪಿಸಲಾಗುತ್ತಿದೆ.

    ಕಳೆದ ಐದು ದಿನಗಳ ಹಿಂದೆ ಬೆಂಗಳೂರಿನ ಗೌರಿಪಾಳ್ಯದ ಮೂವತ್ತು ಜನ ಮಹಿಳೆಯರನ್ನ ಪ್ರಚಾರಕ್ಕೆ ಕರೆದುಕೊಂಡು ಹೋಗಿದ್ದ ಪ್ರಕಾಶ್ ರೈ, ಪ್ರಚಾರದ ಬಳಿಕ ದುಡ್ಡು ಕೇಳಿದ್ರೆ ಇವತ್ತು ಕೊಡುತ್ತೇನೆ, ನಾಳೆ ಕೊಡುತ್ತೇನೆ ಎಂದು ಹೇಳಿ ಯಾಮಾರಿಸ್ತಿದ್ದಾರೆ ಅಂತ ಪ್ರಚಾರಕ್ಕೆ ಹೋಗಿದ್ದ ಮಹಿಳೆಯೊಬ್ಬರು ಆರೋಪ ಮಾಡುತ್ತಿದ್ದಾರೆ.

    ಪ್ರಕಾಶ್ ರೈ ಕಚೇರಿಗೆ ಹೋಗಿ ವಿಚಾರಿಸಿದ್ರೆ ಅವರು ಕೂಡ ನಾಳೆ ಬನ್ನಿ, ನಾಡಿದ್ದು ಬನ್ನಿ. ನಿಮ್ಮ ಕರೆದುಕೊಂಡು ಬಂದಿದವರಿಗೆ ದುಡ್ಡು ಕೊಟ್ಟಿದ್ದೇನೆ ಎಂದು ಒಂದೊಂದು ರೀತಿಯಲ್ಲಿ ಮಾತಾಡುತ್ತಾರೆ ಎಂದು ಪ್ರಚಾರಕ್ಕೆ ಹೋಗದಿದ್ದ ಅರುಣ್ ಕುಮಾರ್ ಕಿಡಿಕಾರಿದ್ದಾರೆ.