Tag: ಪಕ್ಷೇತರರು

  • ಹರ್ಯಾಣ ರಾಜಕೀಯ ಹೈ ಡ್ರಾಮಾಕ್ಕೆ ತೆರೆ – ಎಲ್ಲ ಪಕ್ಷೇತರರು ಬಿಜೆಪಿಗೆ ಬೆಂಬಲ

    ಹರ್ಯಾಣ ರಾಜಕೀಯ ಹೈ ಡ್ರಾಮಾಕ್ಕೆ ತೆರೆ – ಎಲ್ಲ ಪಕ್ಷೇತರರು ಬಿಜೆಪಿಗೆ ಬೆಂಬಲ

    ನವದೆಹಲಿ: ಚುನಾವಣಾ ಫಲಿತಾಂಶದ ನಂತರ ಹರ್ಯಾಣ ರಾಜಕೀಯ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಎಲ್ಲ ಪಕ್ಷೇತರ 7 ಹಾಗೂ ಹರ್ಯಾಣ ಲೋಕಹಿತ ಪಕ್ಷದ ಒಬ್ಬ ಶಾಸಕರು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

    ಹರ್ಯಾಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ತಂತ್ರ ಹೆಣೆಯುತ್ತಿವೆ. ಒಂದೆಡೆ ಕಾಂಗ್ರೆಸ್ ಜನನಾಯಕ್ ಜನತಾ ಪಕ್ಷ(ಜೆಜೆಪಿ)ದ ನಾಯಕ ದುಶ್ಯಂತ್ ಚೌಟಾಲಾ ಅವರನ್ನು ಸೆಳೆಯಲು ಯತ್ನಿಸುತ್ತಿದೆ. ಬಿಜೆಪಿಯು ಸಹ ಗುರುವಾರ ಚೌಟಾಲಾ ಅವರನ್ನು ಸಂಪರ್ಕಿಸಲು ಯತ್ನಿಸಿತ್ತು. ಆದರೆ ಚೌಟಾಲಾ ಅವರು ಮುಖ್ಯಮಂತ್ರಿ ಹುದ್ದೆ ನೀಡುವವರಿಗೆ ತಮ್ಮ ಬೆಂಬಲ ಎಂದು ಪಟ್ಟು ಹಿಡಿದ್ದಾರೆ.

    ಗುರುವಾರ ಪ್ರಕಟವಾಗಿರುವ ವಿಧಾನಸಭಾ ಚುನಾವಣೆಯ ಫಲಿತಾಂಶ ಅಂತಂತ್ರ ಸ್ಥಿತಿಯನ್ನು ತಂದೊಡ್ಡಿದೆ. ಒಟ್ಟು 90 ಸ್ಥಾನಗಳ ಪೈಕಿ ಬಿಜೆಪಿ 40, ಕಾಂಗ್ರೆಸ್ 31 ಹಾಗೂ ಜನನಾಯಕ್ ಜನತಾ ಪಕ್ಷ 10 ಸೀಟ್‍ಗಳನ್ನು ಗೆದ್ದಿವೆ. ಇನ್ನು ಪಕ್ಷೇತರರು 7 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಇತರೆ ಪಕ್ಷಗಳು ಎರಡು ಸ್ಥಾನಗಳನ್ನು ಪಡೆದಿವೆ. ಬಿಜೆಪಿ ಸರ್ಕಾರ ರಚಿಸಲು ಕೇವಲ 6 ಸ್ಥಾನಗಳ ಕೊರತೆ ಉಂಟಾಗಿದೆ. 31 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಜೆಜೆಪಿ ಹಾಗೂ ಪಕ್ಷೇತರರ ಬೆಂಬಲದಿಂದ ಸರ್ಕಾರ ರಚಿಸಲು ಮುಂದಾಗಿತ್ತು. ಹೀಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ಪೈಪೋಟಿ ನಡೆಸುತಿತ್ತು.

    ನಿನ್ನೆ ಚೌಟಾಲಾ ಅವರನ್ನು ಎರಡೂ ರಾಜಕೀಯ ಪಕ್ಷಗಳ ನಾಯಕರು ಸಂಪರ್ಕಿಸಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಚೌಟಾಲಾ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಇಂದು ತಮ್ಮ ನಿರ್ಧಾರ ತಿಳಿಸುವುದಾಗಿ ಗುರುವಾರ ಹೇಳೀದ್ದರು. ಇದೀಗ ಭಾರೀ ಬೆಳವಣಿಗೆ ನಡೆದಿದ್ದು, 8 ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿ ಹರ್ಯಾಣದಲ್ಲಿ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ಹರ್ಯಾಣ ರಾಜಕೀಯ ದಂಗಲ್‍ಗೆ ತೆರೆ ಬಿದ್ದಿದೆ.

    ಬಿಜೆಪಿ ಸೋಲಿಗೆ ಕಾರಣಗಳೇನು?
    ಬಿಜೆಪಿಯಲ್ಲಿ ಪಕ್ಷ ನಿಷ್ಠರ ಕಡೆಗಣಿಸಿ, ಪಕ್ಷಾಂತರಿಗಳಿಗೆ ಮಣೆ ಹಾಕಲಾಯಿತು. ಇದರಿಂದಾಗಿ ಟಿಕೆಟ್ ಹಂಚಿಕೆಯಲ್ಲಿ ಅಸಮಾಧಾನ ಸ್ಫೋಟಗೊಂಡಿತ್ತು. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ರಾಜ್ಯದಲ್ಲಿ ಮಿತಿಮೀರಿದ ನಿರುದ್ಯೋಗ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ತೋರಿದ್ದರು. ರಾಜ್ಯದಲ್ಲಿ ಜಾಟ್ ಸಮುದಾಯ ಹೆಚ್ಚಿದ್ದರೂ ಬ್ರಾಹ್ಮಣ ಸಮುದಾಯದ ಖಟ್ಟರ್ ಅವರಿಗೆ ಸಿಎಂ ಪಟ್ಟ ನೀಡದ ಪರಿಣಾಮ ಜಾಟ್ ಸಮುದಾಯದವರು ಜೆಜೆಪಿಯನ್ನು ಬೆಂಬಲಿಸಿದ್ದರು. ಬಿಜೆಪಿ ನಾಯಕರು ಪ್ರಚಾರದ ವೇಳೆ ಸಂವಿಧಾನದ 370ನೇ ವಿಧಿ ರದ್ದತಿ, ವೀರ್ ಸಾವರ್ಕರ್ ಅವರಿಗೆ ಭಾರತರತ್ನ ವಿಚಾರ ನೀಡುವ ವಿಚಾರವನ್ನು ಅಸ್ತ್ರವಾಗಿ ಬಳಸಿಕೊಂಡಿತ್ತು. ಅದು ಕೂಡ ಬಿಜೆಪಿಗೆ ಫಲಿಸಲಿಲ್ಲ. ಜೊತೆಗೆ ಅತಿಯಾದ ಆತ್ಮವಿಶ್ವಾಸ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಪ್ರಚಾರ ಫಲಕೊಡಲಿಲ್ಲ.

  • ಚಾಮುಂಡೇಶ್ವರಿಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೋಲಿಸಲು ಒಂದಾದ ಪಕ್ಷೇತರರು

    ಚಾಮುಂಡೇಶ್ವರಿಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೋಲಿಸಲು ಒಂದಾದ ಪಕ್ಷೇತರರು

    ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಎಲ್ಲಾ ಪಕ್ಷೇತರ ಅಭ್ಯರ್ಥಿಗಳು ಒಂದಾಗಿ ಮೂರು ಪಕ್ಷಗಳ ವಿರುದ್ಧ ಸಮರ ಸಾರಿದ್ದಾರೆ.

    ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ವಿರುದ್ಧ ಗೆಲುವು ಸಾಧಿಸಲು ಪಕ್ಷೇತರ ಅಭ್ಯರ್ಥಿಗಳು ಖಾಸಗಿ ಹೋಟೆಲ್‍ನಲ್ಲಿ ಸಭೆ ನಡೆಸಿ ಒಟ್ಟಾಗಿ ಹೋರಾಟ ಮಾಡಲು ತೀರ್ಮಾನಿಸಿದ್ದಾರೆ.

    12 ಜನ ಪಕ್ಷೇತರ ಅಭ್ಯರ್ಥಿಗಳಲ್ಲಿ ಯಾರಿಗಾದರೂ ಮತ ಹಾಕಿ. ಆದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಮತ ಹಾಕಬೇಡಿ ಎಂದು ಜನರಲ್ಲಿ ಮನವಿ ಮಾಡುವ ತೀರ್ಮಾನ ಮಾಡಿದ್ದಾರೆ.

    ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್ ನ ಹಾಲಿ ಶಾಸಕ ಜಿ ಟಿ ದೇವೇಗೌಡ ಅವರ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಅಭ್ಯರ್ಥಿ ಇದ್ದರೂ ಸಿದ್ದರಾಮಯ್ಯ ಅವರನ್ನು ಮಣಿಸಲು ಜೆಡಿಎಸ್ ಜೊತೆ ಕೈಜೋಡಿಸಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬಂದಿದೆ.

    ಗುರುಮಲ್ಲೇಶ್ (ಆಲ್ ಇಂಡಿಯಾ ಮಹಿಳಾ ಎಂಪ್‍ಪವರ್‍ಮೆಂಟ್ ಪಾರ್ಟಿ), ಎಂ.ಎಸ್.ಪ್ರವೀಣ್ (ಭಾರತೀಯ ಜನಶಕ್ತಿ ಕಾಂಗ್ರೆಸ್), ಎಂ.ಮಾದೇಶ (ಸಾಮಾನ್ಯ ಜನತಾ ಪಾರ್ಟಿ-ಲೋಕತಾಂತ್ರಿಕ್), ಪಿ.ಕರಿಗೌಡ, ಕೆ.ಸಿ.ನಂದೀಶ, ಪಿ.ಪುರುಷೋತ್ತಮ, ಆರ್.ಬಿ.ಬಸವೇಗೌಡ, ಎಂ.ಎಂ.ಮಹೇಶಗೌಡ, ಎಂ.ಮಂಜು, ಎಂ.ಎಸ್.ರಾಚಣ್ಣ, ಶಾಂತರಾಜು, ಪಿ.ಸುರೇಶನಾಯಕ (ಪಕ್ಷೇತರರು) ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

  • ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಬಿಗ್ ಶಾಕ್!

    ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಬಿಗ್ ಶಾಕ್!

    ಚಿಕ್ಕಬಳ್ಳಾಪುರ: ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಫರ್ಧೆ ಮಾಡಲಿರುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಬಿಗ್ ಶಾಕ್ ಕೊಟ್ಟಿದೆ. ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಫರ್ಧಿಸಲು ಇಚ್ಚಿಸಿರುವ ಅಭ್ಯರ್ಥಿಗಳು, ನಾಮಪತ್ರ ಸಲ್ಲಿಸುವವರೆಗೂ ಯಾವುದೇ ಸಭೆ-ಸಮಾರಂಭ ನಡೆಸಿ ಚುನಾವಣಾ ಪ್ರಚಾರ ನಡೆಸುವಂತಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

    ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕ ಡಾ ಎಂ ಸಿ ಸುಧಾಕರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದು, ಚುನಾವಣಾ ಪ್ರಚಾರ ನಡೆಸಲು ಅನುಮತಿ ಕೋರಿದ್ದಾರೆ. ಆದರೆ ಇದಕ್ಕೆ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಮುಖ್ಯ ಚುನಾವಣಾಧಿಕಾರಿ, ಸ್ವತಂತ್ರ ಅಭ್ಯರ್ಥಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸುವವರೆಗೂ ಚುನಾವಣಾ ಪ್ರಚಾರಕ್ಕೆ ಅನುಮತಿ ನೀಡಲು ಅವಕಾಶವಿಲ್ಲ ಅಂತ ಹಿಂಬರಹ ನೀಡಿದ್ದಾರೆ. ಹೀಗಾಗಿ ಸಹಜವಾಗಿ ಆಯೋಗದ ಇಬ್ಬಗೆಯ ನೀತಿ ವಿರುದ್ಧ ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಆದರೆ ಪಕ್ಷದ ಆಭ್ಯರ್ಥಿಗಳು ತಮ್ಮ ಪಕ್ಷದ ಹೆಸರಲ್ಲಿ ಸಭೆ ಸಮಾರಂಭ ನಡೆಸಿ, ಪ್ರಚಾರ ನಡೆಸಬಹುದಾಗಿದೆ. ಹೀಗಾಗಿ ಪಕ್ಷದ ಅಭ್ಯರ್ಥಿಗಳಿಗೊಂದು ನೀತಿ, ಪಕ್ಷೇತರ ಸ್ವತಂತ್ರ ಅಭ್ಯರ್ಥಿಗಳಿಗೊಂದು ನೀತಿ ಎಂಬಂತೆ, ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಇಟ್ಟಂತಿದೆ ಚುನಾವಣಾ ಆಯೋಗದ ನೀತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಏನು ಹೇಳುತ್ತೆ ಆಯೋಗ?
    ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾರೊಬ್ಬರು ವ್ಯಕ್ತಿ ಪರವಾಗಿ ಚುನಾವಣಾ ಪ್ರಚಾರ ಸಂಬಂಧದ ಸಭೆ-ಸಮಾವೇಶ ನಡೆಸುವಂತಿಲ್ಲ. ನಾಮಪತ್ರ ಸಲ್ಲಿಕೆಯಾಗುವವರೆಗೂ ಅಭ್ಯರ್ಥಿಗಳ ಹೆಸರು ಅಂತಿಮ ಕೂಡ ಆಗುವುದಿಲ್ಲ ಎನ್ನುವುದು ಆಯೋಗದ ಸಮರ್ಥನೆ. ಹೀಗಾಗಿ ಯಾರೊಬ್ಬರು ತನಗೆ ಮತ ನೀಡಿ ಎಂದು ಮನವಿ ಮಾಡಿಕೊಳ್ಳುವಂತಿಲ್ಲ. ಆದರೆ, ಪಕ್ಷಗಳ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿ, ಪಕ್ಷದ ಪರ ಮಾತ್ರವೇ ಪ್ರಚಾರ ನಡೆಸಬೇಕು. ನಾಮಪತ್ರ ಸಲ್ಲಿಕೆಯಾದ ಬಳಿಕ ಅಭ್ಯರ್ಥಿಗಳು ತಮ್ಮ ಪರವಾಗಿ ಸಭೆ ಸಮಾವೇಶಗಳನ್ನ ನಡೆಸಬಹುದಾಗಿದೆ ಎನ್ನುತ್ತಿದೆ ಚುನಾವಣಾ ಆಯೋಗ.

    ಪಕ್ಷೇತರ ಅಭ್ಯರ್ಥಿಗಳ ವಾದ ಏನು?
    ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಬಹುತೇಕರಿಗೆ ಈಗಾಗಲೇ ಅಧಿಕೃತವಾಗಿ ಟಿಕೆಟ್ ಘೋಷಣೆಯಾಗಿದೆ. ಹೀಗಾಗಿ ಪಕ್ಷಗಳ ಹೆಸರಿನಲ್ಲಿ ದೊಡ್ಡ ದೊಡ್ಡ ಸಭೆ ಸಮಾರಂಭ, ಸಮಾವೇಶಗಳನ್ನ ಮಾಡುವ ಮೂಲಕ ಪರೋಕ್ಷವಾಗಿ ಮತ ಯಾಚಿಸುತ್ತಿದ್ದಾರೆ. ಕೆಲವೊಮ್ಮೆ ಇಂತಹವರನ್ನೇ ಗೆಲ್ಲಿಸಿ, ಎಂದು ಬಹಿರಂಗವಾಗಿಯೇ ಹೇಳಿರುವ ನಿದರ್ಶನಗಳು ಕೂಡ ಇವೆ. ಇದೆಲ್ಲ ಚುನಾವಣಾ ಆಯೋಗಕ್ಕೆ ಕಾಣುತ್ತಿಲ್ಲವೇ? ಪಕ್ಷೇತರರಾದ ನಾವು ಚುನಾವಣೆಗೆ ಸ್ಫರ್ಧಿಸಲು ತೀರ್ಮಾನಿಸಿದ್ದರೂ, ನಮ್ಮ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲು ಕಾರಣವೇನು? ಪಕ್ಷಗಳಿಗೊಂದು, ಪಕ್ಷೇತರರಿಗೊಂದು ನ್ಯಾಯ ಮಾಡುತ್ತಿರುವುದು ಸರಿಯಲ್ಲ. ಪಾರ್ಟಿ ಫಂಡ್ ಹೆಸರಿನಲ್ಲಿ ಕೃಷ್ಣನ ಲೆಕ್ಕ ತೋರಿಸಿ, ಪಕ್ಷದಡಿ ಸ್ಫರ್ಧಿಸಲು ಮುಂದಾಗಿರುವ ಸ್ವಯಂ ಘೋಷಿತ ಅಭ್ಯರ್ಥಿಗಳು ಸುಲಭವಾಗಿ ಆಯೋಗದ ಮುಷ್ಟಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂಬ ಅಸಮಾಧಾನದ ಮಾತುಗಳು ಪಕ್ಷೇತರರಿಂದ ಕೇಳಿಬರುತ್ತಿವೆ.

    23 ದಿನಗಳಲ್ಲಿ ಪ್ರಚಾರ ಸಾಧ್ಯವೇ?
    ನಾಮಪತ್ರ ಸಲ್ಲಿಕೆಗೆ ಏ.17ರಿಂದ 24ರವರೆಗೂ ಅವಕಾಶ ನೀಡಿದ್ದು. ಬಹಿರಂಗ ಪ್ರಚಾರ ಮೇ.10 ಕಡೆದಿನ. ಹೀಗಾಗಿ ನಾಮಪತ್ರ ಸಲ್ಲಿಕೆಯ ಮೊದಲ ದಿನವೇ ನಾಮಪತ್ರ ಸಲ್ಲಿಸಿದರೂ, ಬಹಿರಂಗ ಪ್ರಚಾರಕ್ಕೆ ಕೇವಲ 23 ದಿನಗಳು ಮಾತ್ರವೇ ಉಳಿದುಕೊಳ್ಳಲಿದೆ. ಹೀಗಾಗಿ ಇಷ್ಟು ಕಡಿಮೆ ದಿನಗಳ ಅಂತರದಲ್ಲಿ ಪಕ್ಷೇತರರ ಪ್ರಚಾರ ಸಾಧ್ಯವೇ ಇಲ್ಲ. ಜೊತೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ 28 ಲಕ್ಷದೊಳಗೆ ಖರ್ಚು ಮಾಡಬೇಕಿದೆ. ಇದಕ್ಕೂ ಮೊದಲೇ ಪಕ್ಷದಿಂದ ನಿಲ್ಲುವವರು ಪಕ್ಷದ ಹೆಸರಿನಲ್ಲಿ ಮಾಡಿರುವ ಖರ್ಚಿಗೆ ಲೆಕ್ಕ ಕೇಳುವಂತಿಲ್ಲ ಎಂಬ ಪ್ರಶ್ನೆಗಳು ಪಕ್ಷೇತರರಲ್ಲಿ ಕಾಡುತ್ತಿವೆ. ಇದೆಲ್ಲದರ ನಡುವೆ ಪಕ್ಷದಿಂದ ಸ್ಫರ್ಧಿಸುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗದ ನೀತಿಗಳು ಅನುಕೂಲಕರವಾಗಿದ್ದು, ಪಕ್ಷೇತರರಾಗಿ ಅನಾನುಕೂಲಕರವಾಗಿವೆ ಅಂತ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ ಪಕ್ಷೇತರರು.