Tag: ಪಕ್ಷಾಂತರ

  • ಪಕ್ಷಾಂತರ ಮಾಡಿ ನಾನು ದೊಡ್ಡ ತಪ್ಪು ಮಾಡಿದೆ: ಎಂಟಿಬಿ ನಾಗರಾಜ್

    ಪಕ್ಷಾಂತರ ಮಾಡಿ ನಾನು ದೊಡ್ಡ ತಪ್ಪು ಮಾಡಿದೆ: ಎಂಟಿಬಿ ನಾಗರಾಜ್

    ಚಿಕ್ಕಬಳ್ಳಾಪುರ: ಈಚೆಗಷ್ಟೇ ಇಲ್ಲಿನ ಬಾಗೇಪಲ್ಲಿ ಪಟ್ಟಣದ ಪುರಸಭೆಯಲ್ಲಿ ವಸತಿನಿಲಯಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವ ಎಂಟಿಬಿ ನಾಗರಾಜ್ ನಾನು ಪಕ್ಷಾಂತರ ಮಾಡಿ ದೊಡ್ಡ ತಪ್ಪು ಮಾಡಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    MTB NAGARAJ

    ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಮೊದಲ ಸಚಿವ ಸಂಪುಟ ರಚನೆ ಮಾಡಿದಾಗ ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾದಾನ ವ್ಯಕ್ತಪಡಿಸಿದ ಎಂಟಿಬಿ, ಈ ಹಿಂದಿನ ಮುಖ್ಯಮಂತ್ರಿಗಳು ಮತ್ತು ಈಗಿನ ಮುಖ್ಯಮಂತ್ರಿಗಳು ನನಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಖಾತೆ ಹಂಚಿಕೆಯಲ್ಲಿ ನನಗೆ ಅಸಮಧಾನವಿದೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು. ಇದೀಗ ಮತ್ತೆ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿದ್ಧರಾಮಯ್ಯ ಆಡಳಿತದಲ್ಲಿ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ: ಗೋವಿಂದ ಕಾರಜೋಳ

    ಕಾರ್ಯಕ್ರಮದ ವೇಳೆ ಮಾತನಾಡಿದ್ದ ಅವರು, ಜನರ ಸೇವೆ ಮಾಡಲು ನಾನು ರಾಜಕಾರಣಕ್ಕೆ ಬಂದಿದ್ದು. ಆದ್ರೆ ಇದ್ದ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ಬಂದದ್ದು ನಾನು ಮಾಡಿದ ದೊಡ್ಡ ತಪ್ಪು. ನನ್ನ ಜೀವನದಲ್ಲಿ ನಾನು ಬೇರೆ ಯಾವ ತಪ್ಪು ಮಾಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದರು.

    ಇದೀಗ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಎಂಟಿಬಿ, ಬಿಜೆಪಿ ಬಗ್ಗೆ ಅಸಮಾಧಾನ ಇಲ್ಲ, ನನ್ನ ಹೇಳಿಕೆಗೆ ಬೇರೆ ಅರ್ಥ ಬೇಡ. ಪಕ್ಷಾಂತರದ ಬಗೆಗಿನ ನನ್ನ ಹೇಳಿಕೆ ನೈತಿಕ ಮತ್ತು ಸೈದ್ಧಾಂತಿಕವಾದದ್ದು. ಯಾರೇ ಆಗಲಿ ಪಕ್ಷಾಂತರ ಮಾಡುವುದು ತಪ್ಪು ಎನ್ನುವ ಅರ್ಥದಲ್ಲಿ ಮಾತನಾಡಿದ್ದೇನೆ. ಇದರ ಹೊರತು ಬಿಜೆಪಿ ಬಗ್ಗೆ ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಪಿಎಸ್‍ಐ ಅಕ್ರಮ – ಕೈ ನಾಯಕರು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ: ಅಶ್ವಥ್ ನಾರಾಯಣ

    ನಾನು, ಬಿಜೆಪಿಗೆ ಬಂದಿರುವುದನ್ನು ತಪ್ಪು ಎಂದು ಭಾವಿಸಿಯೂ ಇಲ್ಲ. ಹಾಗೆ ನಾನು ಹೇಳಿಯೂ ಇಲ್ಲ. ಬಿಜೆಪಿಯಲ್ಲಿ ನನಗೆ ಯಾವುದೇ ಅಸಮಾಧಾನ ಇಲ್ಲ. ಪಕ್ಷ ಮತ್ತು ನಾಯಕರು ನನ್ನನ್ನು ವಿಶ್ವಾಸದಿಂದ ನಡೆಸಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

  • ಮಂತ್ರಿಮಂಡಲದ ಮೇಲೆ ಬೊಮ್ಮಾಯಿ ನಿಯಂತ್ರಣ ಸಾಧಿಸಬೇಕು: ಸತೀಶ್ ಜಾರಕಿಹೊಳಿ

    ಮಂತ್ರಿಮಂಡಲದ ಮೇಲೆ ಬೊಮ್ಮಾಯಿ ನಿಯಂತ್ರಣ ಸಾಧಿಸಬೇಕು: ಸತೀಶ್ ಜಾರಕಿಹೊಳಿ

    ಬೆಳಗಾವಿ: ಕ್ಯಾಬಿನೆಟ್ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲು ನಿಯಂತ್ರಣ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಒತ್ತಾಯಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಎಂದರೆ ಎಲ್ಲವೂ ಅವರ ನಿಯಂತ್ರಣದಲ್ಲಿ ಇರಬೇಕು. ಆದರೆ ಬೊಮ್ಮಾಯಿ ಸರ್ಕಾರದ ಮಂತ್ರಿಗಳು ಏನೇನೋ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿಎಂ ಮಾತನ್ನು ಮೀರಿ ಯಾರೂ ಹೇಳಿಕೆ ಕೊಡಬಾರದು ಎಂದು ಸಲಹೆ ನೀಡಿದರು.

    ಜಾರಕಿಹೊಳಿ ಬ್ರದರ್ಸ್ ವಿರುದ್ಧ ಸಚಿವ ಉಮೇಶ್ ಕತ್ತಿ ಮತ್ತು ಅವರ ತಂಡ ಸಿಎಂಗೆ ದೂರು ವಿಚಾರವಾಗಿ ಮಾತನಾಡಿ, ಅವರ ಪಕ್ಷ ಇದೆ. ಎರಡು ಗುಂಪು ಇದೆ. ಆ ವಿಷಯದ ಕುರಿತಾಗಿ ಸಿಎಂ ಅವರು ಉತ್ತರ ಹೇಳಬೇಕು. ಅದರ ಬಗ್ಗೆ ನಾವು ಹೇಳೋಕೆ ಆಗಲ್ಲ. ನಾನು ಮಾಧ್ಯಮಗಳಲ್ಲಿ ಗಮನಿಸಿದೆ ಅದು ಅವರ ಪಕ್ಷಕ್ಕೆ ಸಂಬಂಧಿಸಿದ್ದು ಎಂದು ತಿಳಿಸಿದ ಅವರು, ರಮೇಶ್ ಜಾರಕಿಹೊಳಿ ಕಾಂಗ್ರೆಸ್‍ಗೆ ಬರುವುದು ಜಗತ್ತಿನ ಎಂಟನೇ ಅದ್ಭುತ. ಅವರು ಅಲ್ಲೇ ಇದ್ದಾರೆ ಅಲ್ಲೇ ಇರಲಿ ಎಂದು ವ್ಯಂಗ್ಯವಾಡಿದರು.

    satish jarkiholi

    ಇದೇ ವೇಳೆ ಕತ್ತಿ ಸಹೋದರರು ಕಾಂಗ್ರೆಸ್‍ಗೆ ಬರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ರಮೇಶ್ ಕತ್ತಿ, ಉಮೇಶ್ ಕತ್ತಿ ಅವರೇ ಇದಕ್ಕೆ ಉತ್ತರಿಸಬೇಕು. ಈ ವರೆಗೂ ನಮ್ಮ ಗಮನಕ್ಕೆ ಬಂದಿಲ್ಲ ಹಾಗೂ ಯಾರೂ ನಮ್ಮನ್ನು ಕೇಳಿಲ್ಲ ಎಂದ ಅವರು, ಇನ್ನೂ ಹೊಗೆ ಏನೂ ಆಡಿಲ್ಲ. ಇದಕ್ಕೆ ಒಂದು ವರ್ಷ ಕಾಯಬೇಕು. ಆಗ ಡೋರ್ ಓಪನ್ ಇರುತ್ತದೆ. ಈಗ ಡೋರ್ ಕ್ಲೋಸ್ ಇದೆ. ಆ ಸಂದರ್ಭದಲ್ಲಿ ಫ್ಲೈಟ್, ಟ್ರೇನ್‍ನಲ್ಲಿ ಸೀಟ್ ಬ್ಲಾಕ್ ಮಾಡಿದ ಹಾಗೇ ಬ್ಲಾಕ್ ಮಾಡೋದು ಅಷ್ಟೇ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಸೋಮವಾರದಿಂದ ಶಾಲೆ ಆರಂಭ: ಬಿ.ಸಿ ನಾಗೇಶ್

    ಪಂಚರಾಜ್ಯ ಚುನಾವಣೆ ಅದರಲ್ಲೂ ಯುಪಿ ಚುನಾವಣೆ ಇಡೀ ದೇಶದ ಮೇಲೆ ಎಫೆಕ್ಟ್ ಆಗುತ್ತದೆ ಎಂದ ಅವರು, ಪಕ್ಷಾಂತರವಾಗುವುದಕ್ಕೆ ಇನ್ನು ಒಂದು ವರ್ಷ ಕಾಯಬೇಕು. ಈ ಬಜೆಟ್ ಅಲ್ಲ ಮುಂದಿನ ಬಜೆಟ್‍ಗೆ ಪಕ್ಷಾಂತರ ಪರ್ವ ಶುರು ಆಗುತ್ತದೆ. ಮುಂದಿನ ಫೆಬ್ರವರಿ 1 ರಂದು ಹೇಳುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ನೈಟ್ ಕರ್ಫ್ಯೂ ರದ್ದು – ಸಿನಿಮಾಗೆ ಶೇ.50 ರಷ್ಟು ನಿರ್ಬಂಧ ಮುಂದುವರಿಕೆ

    bjp - congress

    ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್‍ಗೆ ಯಾರೂ ಸೇರುತ್ತಾರೆ ಎನ್ನುವುದು ಗೊತ್ತಿಲ್ಲ ಎಂದ ಅವರು, ಮುಂದಿನ ಮಾರ್ಚ್‍ನಲ್ಲಿ ಬಜೆಟ್ ಮೇಲೆ ಆ ಪರ್ವ ಶುರುವಾಗುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ 10ರಿಂದ 12 ಕ್ಷೇತ್ರ ಗೆಲ್ಲುವ ಟಾರ್ಗೆಟ್ ಮಾಡಿಕೊಂಡಿದ್ದೇವೆ. ಬೆಳಗಾವಿಯಲ್ಲಿ 10 ರಿಂದ 12 ಕ್ಷೇತ್ರ ಗೆದ್ದರೆ ರಾಜ್ಯದಲ್ಲಿ ಸರ್ಕಾರ ರಚಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ನಾಳೆ ಬೆಳಗ್ಗೆಯೇ ಬಹುಮತ ಸಾಬೀತುಪಡಿಸಿ- ಕೈ ಸರ್ಕಾರಕ್ಕೆ ಎಂಪಿ ರಾಜ್ಯಪಾಲ ಆದೇಶ

    ನಾಳೆ ಬೆಳಗ್ಗೆಯೇ ಬಹುಮತ ಸಾಬೀತುಪಡಿಸಿ- ಕೈ ಸರ್ಕಾರಕ್ಕೆ ಎಂಪಿ ರಾಜ್ಯಪಾಲ ಆದೇಶ

    – ರಾಜ್ಯಪಾಲರ ಭಾಷಣದ ಬಳಿಕ ವಿಶ್ವಾಸ ಮತಯಾಚನೆ
    – ಮುಂದೂಡುವುದು, ವಿಳಂಬ, ಅಮಾನತು ಸಾಧ್ಯವಿಲ್ಲ
    – ಆರು ಸಚಿವರ ರಾಜೀನಾಮೆ ಅಂಗೀಕಾರ

    ಭೋಪಾಲ್: ಮಧ್ಯಪ್ರದೇಶ ರಾಜಕೀಯ ಹೈ ಡ್ರಾಮಾ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದ್ದು, ಕಾಂಗ್ರೆಸ್ಸಿನ 22 ಶಾಸಕರ ರಾಜೀನಾಮೆ ಪೈಕಿ ಇದೀಗ ಆರು ಸಚಿವರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದು, ಮತ್ತೊಂದೆಡೆ ನಾಳೆಯೇ ಬಹುಮತ ಸಾಬೀತು ಪಡಿಸುವಂತೆ ಕಮಲ್‍ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮಧ್ಯಪ್ರದೇಶದ ರಾಜ್ಯಪಾಲ ಲಾಲ್‍ಜೀ ಟಂಡನ್ ನಿರ್ದೇಶಿಸಿದ್ದಾರೆ.

    ಈ ಮೂಲಕ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಕೇವಲ 15 ತಿಂಗಳಿಗೆ ಬೀಳುವ ಹಂತಕ್ಕೆ ತಲುಪಿದೆ. ಮಾರ್ಚ್ 16ರಂದು ಬೆಳಗ್ಗೆ 11ಕ್ಕೆ ನನ್ನ ಭಾಷಣದ ಮೂಲಕ ಅಧಿವೇಶನ ಆರಂಭವಾಗಲಿದೆ. ಇದಾದ ಬಳಿಕ ಮೊದಲ ಕೆಲಸವೇ ವಿಶ್ವಾಸ ಮತಯಾಚನೆ ಮಾಡುವುದಾಗಿದೆ ಎಂದು ರಾಜ್ಯಪಾಲರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

    ಬಟನ್ ಒತ್ತುವ ಮೂಲಕ ವಿಶ್ವಾಸ ಮತಯಾಚನೆ ಪ್ರಕ್ರಿಯೆ ನಡೆಯಲಿದೆ. ಇನ್ನಾವುದೇ ಮತದಾನ ಪ್ರಕ್ರಿಯೆ ಸ್ವೀಕಾರಾರ್ಹವಲ್ಲ. ಅಲ್ಲದೆ ಮಾರ್ಚ್ 16ರಂದೇ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಈ ಪ್ರಕ್ರಿಯೆಯನ್ನು ಮುಂದೂಡುವುದು, ವಿಳಂಬ ಮಾಡುವುದು ಅಥವಾ ಅಮಾನತುಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

    ಸಚಿವರ ರಾಜೀನಾಮೆ ಅಂಗೀಕಾರ:
    ಆರು ಬಂಡಾಯ ಮಂತ್ರಿಗಳ ರಾಜೀನಾಮೆಯನ್ನು ಮಧ್ಯಪ್ರದೇಶದ ವಿಧಾನಸಭಾ ಸ್ಪೀಕರ್ ನರ್ಮದಾ ಪ್ರಸಾದ್ ಪ್ರಜಾಪತಿ ಅವರು ಶನಿವಾರ ಅಂಗೀಕರಿಸಿದ್ದಾರೆ. ಗೋವಿಂದ್ ಸಿಂಗ್ ರಜಪೂತ್, ಮಹೇಂದ್ರ ಸಿಂಗ್ ಸಿಸೋಡಿಯಾ, ಪ್ರಭುರಾಮ್ ಚೌಧರಿ, ಪ್ರದುಮನ್ ತೋಮರ್, ತುಳಸಿರಾಮ್ ಸಿಲಾವತ್ ಹಾಗೂ ಇಮಾರ್ತಿ ದೇವಿ ಅವರನ್ನು ಕಾಂಗ್ರೆಸ್ ಸರ್ಕಾರದ ಸಮ್ಮುಖದಲ್ಲಿ ರಾಜ್ಯಪಾಲರು ಸಚಿವ ಸಂಪುಟದದಿಂದ ವಜಾ ಮಾಡಿದ್ದಾರೆ.

    ಇತ್ತೀಚೆಗಷ್ಟೇ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷಕ್ಕೆ ಗುಡ್‍ಬೈ ಹೇಳಿದ್ದರು. ಅವರೊಂದಿಗೆ ಸಿಂಧಿಯಾ ಆಪ್ತರಾಗಿದ್ದ 22 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದರು. ನಂತರ ಜ್ಯೋತಿರಾದಿತ್ಯ ಸಿಂದಿಯಾ ಬಿಜೆಪಿ ಸೇರಿದ್ದರು. ಒಟ್ಟು 22 ಶಾಸಕರ ರಾಜೀನಾಮೆಯಿಂದ ಕಮಲನಾಥ್ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. 230 ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಇಬ್ಬರು ಶಾಸಕರ ನಿಧನದಿಂದ ಸದ್ಯ 228 ಶಾಸಕರಿದ್ದಾರೆ. ಸದ್ಯ 22 ಮಂದಿ ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದ ಸಿಎಂ ಕಮಲನಾಥ್ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಈಗ ಸದನದಲ್ಲಿ 206 ಶಾಸಕರಿದ್ದು ಬಹುಮತ ಸಾಧಿಸಲು 104 ಶಾಸಕರ ಬೆಂಬಲ ಬೇಕಿದೆ. ಬಿಜೆಪಿ ಬಳಿ 107 ಶಾಸಕರಿದ್ದರೆ, ಕಾಂಗ್ರೆಸ್ ಬಳಿ 92 ಶಾಸಕರಿದ್ದಾರೆ.

    ಒಟ್ಟು 230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ 114, ಬಿಜೆಪಿ 109, ಪಕ್ಷೇತರ 1, ಬಿಎಸ್‍ಪಿ 2, ಎಸ್‍ಪಿ 2 ಕ್ಷೇತ್ರದಲ್ಲಿ ಜಯಗಳಿಸಿತ್ತು. 2019ರ ಲೋಕಸಭಾ ಚುನಾವಣೆಯ ಒಟ್ಟು 29 ಕ್ಷೇತ್ರಗಳ ಪೈಕಿ ಬಿಜೆಪಿ 28 ರಲ್ಲಿ ಗೆದ್ದಿದ್ದರೆ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು.

  • ಕಾಂಗ್ರೆಸ್ ತೊರೆಯುವ ಸುಳಿವು ನೀಡಿದ ಮಾಜಿ ಶಾಸಕ ಸತೀಶ್ ಸೈಲ್

    ಕಾಂಗ್ರೆಸ್ ತೊರೆಯುವ ಸುಳಿವು ನೀಡಿದ ಮಾಜಿ ಶಾಸಕ ಸತೀಶ್ ಸೈಲ್

    ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ಕಾಂಗ್ರೆಸ್ ಪಕ್ಷ ತೊರೆಯುವ ಕುರಿತು ಮಾತನಾಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿಲ್ಲ. ಪಕ್ಷೇತರನಾಗಿ ರಿಕ್ಷಾ ಚಿಹ್ನೆಯಲ್ಲಿ ಗೆದ್ದಿದ್ದೇನೆ. ರಾಜಕೀಯ ಮಾಡುವಷ್ಟು ದಿನ ಮಾಡಬೇಕು. ಉಳಿದ ಸಮಯದಲ್ಲಿ ಬೇರೆಯವರನ್ನು ಮುಂದೆ ತರಬೇಕು. ನಮ್ಮ ತೀರ್ಮಾನವನ್ನು ಜನರ ಮುಂದೆ ಹೇಳಬೇಕು. ಆ ಬಳಿಕವೇ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

    ಸಾಗರಮಾಲಾ ಯೋಜನೆ ವಿರೋಧಿ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದು ಹೇಳಿದ ಅವರು, ನಾನು ಕಾರವಾರದ ಸಲುವಾಗಿ ಸಮಸ್ತ ಜೀವವನ್ನು ಮುಡಿಪಾಗಿಟ್ಟಿದ್ದೇನೆ. ಪಕ್ಷ ತೊರೆಯುವ ಕುರಿತು ನಾನು ನನ್ನ ನಿರ್ಣಯ ನಾನು ತೆಗೆದುಕೊಳ್ಳುತ್ತೇನೆ. ಪಕ್ಷದಲ್ಲಿ ಇರಲಿ ಹೊರಗಿರಲಿ ನನ್ನ ಕೆಲಸ ಮಾಡುತ್ತೇನೆ. ನಾನು ಪಕ್ಷದಲ್ಲೇ ಇರಬೇಕು ಎಂದೇನೂ ಇಲ್ಲ ಎಂದರು. ಇದನ್ನು ಓದಿ: ಸಾಗರಮಾಲಾ ಯೋಜನೆಗೆ ಮೀನುಗಾರರ ವಿರೋಧ – ಜನಪ್ರತಿನಿಧಿಗಳ ಭಾವಚಿತ್ರಕ್ಕೆ ಸಗಣಿ, ಚಪ್ಪಲಿ

    ಸದ್ಯ ನಾನು ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ. ಮುಂದಿನ ನನ್ನ ಅಭಿಪ್ರಾಯವನ್ನು ಜನರ ಮುಂದೆ ಹೇಳಬೇಕು. ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ. ಆದರೆ ಮಾಧ್ಯಮಗಳಲ್ಲಿ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ವರದಿಯಾಗಿದೆ. ನಾನು ಯಾವುದೇ ಕಾರಣಕ್ಕೂ ರಾಜಕೀಯದಿಂದ ದೂರ ಸರಿಯುವುದಿಲ್ಲ. ಗಡಿ ಜಿಲ್ಲೆಯಾಗಿರುವ ಕಾರಣ ಇಲ್ಲಿ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ. ಕಾರವಾರಕ್ಕೆ ಆಸ್ಪತ್ರೆ ತರುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೆ. ಮೆಡಿಕಲ್ ಕಾಲೇಜು ತರುವುದಕ್ಕೂ ಪ್ರಯತ್ನ ಮಾಡಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ನಾನು ರಾಜಕೀಯದಲ್ಲಿ ಇಲ್ಲಿದ್ದರೂ ಕ್ಷೇತ್ರಕ್ಕಾಗಿ ಕೆಲಸ ಮಾಡುತ್ತೇನೆ ಎಂದರು.

  • ಹಳ್ಳಿಹಕ್ಕಿ ಬಗ್ಗೆ ಸಾರಾ ಸಾಫ್ಟ್ – ದಾಖಲೆ ಬಿಡುಗಡೆಗೆ ನಕಾರ

    ಹಳ್ಳಿಹಕ್ಕಿ ಬಗ್ಗೆ ಸಾರಾ ಸಾಫ್ಟ್ – ದಾಖಲೆ ಬಿಡುಗಡೆಗೆ ನಕಾರ

    ಮೈಸೂರು: ಅನರ್ಹ ಶಾಸಕ ಹೆಚ್.ವಿಶ್ವನಾಥ್ ಬಗ್ಗೆ ಮಾಜಿ ಸಚಿವ ಸಾರಾ ಮಹೇಶ್ ಸಾಫ್ಟ್ ಕಾರ್ನಾರ್ ತೋರಿದ್ದು, ವಿಶ್ವನಾಥ್ ಈಗಲೇ ನೋವಿನಲ್ಲಿದ್ದಾರೆ ಬಿಡಿ ವಿಡಿಯೋ ಬಿಡುಗಡೆ ಮಾಡುವುದು ಬೇಡ ಎಂದು ಸಾಗ ಹಾಕಿದ್ದಾರೆ.

    ಮಾಜಿ ಸಚಿವ ಸಾರಾ ಮಹೇಶ್ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ಮೂರು ವಿಚಾರಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಮಾಜಿ ಸಚಿವ ಎಚ್.ವಿಶ್ವನಾಥ್ ಬಗ್ಗೆ ದಾಖಲೆ ಬಿಡುಗಡೆ, ಜೆಡಿಎಸ್ ನ ಕೆಲ ಶಾಸಕರು ಪಕ್ಷ ಬಿಡುವ ವಿಚಾರ ಹಾಗೂ ಕೆ.ಆರ್.ನಗರದಲ್ಲಿ ನಡೆದಿದ್ದ ಗಲಾಟೆ ಸಂಬಂಧದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಆದರೆ ವಿಶ್ವನಾಥ್ ಕುರಿತು ದಾಖಲೆ ಬಿಡುಗಡೆ ಮಾಡುವುದನ್ನು ನಿರಾಕರಿಸಿದ್ದಾರೆ. ಸದ್ಯ ವಿಶ್ವನಾಥ್ ಅವರೇ ನೋವಿನಲ್ಲಿದ್ದಾರೆ. ಈ ಸಂದರ್ಭದಲ್ಲಿ ಅದೆಲ್ಲ ಬೇಡ. ಮುಂದೆ ನೋಡೋಣ ಬಿಡಿ ಎಂದು ಹೇಳಿದರು.

    ಸಾಲಿಗ್ರಾಮ ಕೋಮು ಗಲಾಟೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಪ್ರಕರಣ ಸಂಬಂಧ ಇನ್ನೂ ಯಾವುದೇ ಶಾಂತಿ ಸಭೆ ಏರ್ಪಟ್ಟಿಲ್ಲ. ಹೆಸರ ಹಿಂದೆ ಸಾ.ರಾ. ಇದ್ದವರೆಲ್ಲ ನನ್ನ ಸಹೋದರರಾಗಲ್ಲ. ಸಾಲಿಗ್ರಾಮದಲ್ಲಿ ಯಾರ ತಂದೆ ರಾಮೇಗೌಡ ಆಗಿರುತ್ತಾರೋ ಅವರ ಹೆಸರ ಹಿಂದೆ ಸಾ.ರಾ. ಅಂತ ಇರುತ್ತದೆ. ನನ್ನ ಒಬ್ಬ ಸಹೋದರ ಮಾತ್ರ ಪ್ರಕರಣದಲ್ಲಿ ಸಿಲುಕಿದ್ದಾನೆ. ಒಬ್ಬ ಸಹೋದರ ಜಿ.ಪಂ. ಸದಸ್ಯ ಆಗಿದ್ದಾನೆ. ಈಗ ಪ್ರಕರಣದಲ್ಲಿ ಸಿಲುಕಿರುವ ಸಹೋದರ ಯಾರು ಎಂಬುದೇ ಗೊತ್ತಿಲ್ಲ. ಆದರೆ ಈಗ ಎಲ್ಲರಿಗೂ ಆತನ ಬಗ್ಗೆ ಗೊತ್ತಾಗುವಂತೆ ಆಗಿದೆ ಎಂದರು.

    ಇಡೀ ಪ್ರಕರಣವನ್ನು ವಿರೋಧ ಪಕ್ಷದ ಕೆಲವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಾನು ಶಾಸಕ ಆಗುವುದಕ್ಕೂ ಮೊದಲಿನಿಂದ ಸಾಲಿಗ್ರಾಮದಲ್ಲಿ ಇಂತಹ ಘಟನೆಗಳು ನಡೆದಿವೆ. ಹಿಂದೆ ಗೋಲಿಬಾರ್ ಸಹ ಆಗಿದೆ. ನನ್ನನ್ನು ಶಾಸಕ ಮಾಡಿದ ಮೇಲೆ ಸ್ವಲ್ಪ ಹತೋಟಿಗೆ ಬಂದಿದೆ. ಎರಡೂ ಕಡೆಯ ಹಲವು ಮಂದಿ ತಲೆ ಮರೆಸಿಕೊಂಡಿದ್ದಾರೆ. ಅವರೆಲ್ಲ ಸಿಕ್ಕ ನಂತರ ಒಂದು ಕಡೆ ಕುಳಿತು ಸಭೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

    ಜೆಡಿಎಸ್ ನ ಮತ್ತಿಬ್ಬರು ಶಾಸಕರು ಪಕ್ಷಾಂತರ ಮಾಡುವ ಕುರಿತು ಪ್ರತಿಕ್ರಿಯಿಸಿದ ಅವರು, ಸದ್ಯ ಜೆಡಿಎಸ್ ಪಕ್ಷವನ್ನು ಯಾರೂ ಬಿಟ್ಟು ಹೋಗುತ್ತಿಲ್ಲ. ಇದು ಸತ್ಯಕ್ಕೆ ದೂರವಾದ ವಿಚಾರ. ಎಲ್ಲರೊಂದಿಗೆ ನಿತ್ಯ ಮಾತನಾಡುತ್ತಲೇ ಇದ್ದೇವೆ. ಹಲವರು ನಿನ್ನೆ ಕೂಡ ಕುಮಾರಸ್ವಾಮಿಯವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ನಮ್ಮ ಪಕ್ಷವನ್ನು ಯಾರೂ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

  • ಲೋಕಲ್ ಟ್ರೈನ್ ಹತ್ತಿ ಬಂದ ಸಮುದಾಯ ನಮ್ಮದಲ್ಲ- ಪಕ್ಷಾಂತರರಿಗೆ ಹೆಗಡೆ ಟಾಂಗ್

    ಲೋಕಲ್ ಟ್ರೈನ್ ಹತ್ತಿ ಬಂದ ಸಮುದಾಯ ನಮ್ಮದಲ್ಲ- ಪಕ್ಷಾಂತರರಿಗೆ ಹೆಗಡೆ ಟಾಂಗ್

    ಕಾರವಾರ: ಲೋಕಲ್ ಟ್ರೈನ್ ಹತ್ತಿ ಬಂದ ಸಮುದಾಯ ನಮ್ಮದಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ ಅವರು ಪಕ್ಷಾಂತರ ಮಾಡುವವರಿಗೆ ಟಾಂಗ್ ನೀಡಿದ್ದಾರೆ.

    ಇಂದು ಕಾರವಾರದ ಆಶ್ರಮ ಮಠ ರಸ್ತೆಯಲ್ಲಿನ ಹಳದಿಪುರಕರ್ ಮನೆಯಲ್ಲಿ ನಡೆದ ಗಾಂಧಿ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಲೋಕಲ್ ಟ್ರೈನ್ ಹತ್ತಿ ಬಂದ ಸಮುದಾಯ ನಮ್ಮದಲ್ಲ. ಆ ಪಕ್ಷದಲ್ಲಿ ಇರುವುದು, ಅಲ್ಲಿ ಸೀಟ್ ಕೊಟ್ಟಿಲ್ಲ ಎಂದರೆ ಈ ಪಕ್ಷಕ್ಕೆ ಬರುವುದು ಇತ್ತೀಚೆಗೆ ಶುರುವಾಗಿ ಹೋಗಿದೆ. ಆದರೆ ನಾವು ಆ ರೀತಿ ಮಾಡಿದವರಲ್ಲ. ನಮ್ಮದು ಬಲಿಷ್ಠ ಸಂಘಟನೆಯಾಗಿದ್ದು, ಪ್ರತಿಯೊಂದು ವಿಚಾರಕ್ಕೂ ಸ್ಪಷ್ಟವಾದ ನಿಲುವು ನಮ್ಮಲ್ಲಿದೆ ಎಂದು ಹೇಳಿದರು.

    ಎಲ್ಲ ಕಡೆ ಹೋದರೂ ಒಂದೇ ಮುಖ ನೋಡುತ್ತಿದ್ದೇವೆ. ಶತಾಬ್ಧಿ ಎಕ್ಸ್‍ಪ್ರೆಸ್ ಹಾಗೂ ಲೋಕಲ್ ಟ್ರೈನ್ ಯಾವುದೇ ಹತ್ತಿದರೂ ಸಹ ನಾವು ಒಂದೇ ಮುಖವನ್ನು ಕಾಣುತ್ತೇವೆ. ಈ ತರ ಟ್ರೈನ್ ಹತ್ತಿ ಬಂದಿರುವ ಸಮುದಾಯ ನಮ್ಮದಲ್ಲ ಎಂದು ಕುಟುಕಿದರು.

    ದೇಶದ ಆರ್ಥಿಕತೆ ಬಿದ್ದು ಹೋಗಿದೆ ಎಂದು ಸೋಗಲಾಡಿ ಆರ್ಥಿಕ ತಜ್ಞರ ಜಿಜ್ಞಾಸೆ ಶುರುವಾಗಿದೆ. ಸೋಗಲಾಡಿ ವಿಚಾರವಾದಿಗಳು, ಆರ್ಥಿಕ ತಜ್ಞರು ಭಾಷಣ ಬಿಗಿಯುತ್ತಿದ್ದಾರೆ. ನಾವು ರಾಜಕೀಯಕ್ಕೆ ಬರಬೇಕು ಎಂಪಿ, ಎಂಎಲ್‍ಎ ಆಗಬೇಕು, ನಮ್ಮ ಸರ್ಕಾರ ಬರಬೇಕು ಎಂದು ಪಕ್ಷ ಕಟ್ಟಿಲ್ಲ. ರಾಜಕೀಯದಲ್ಲಿ ಮೇಲಾಟಗಳು ಸಹಜ. ಆದರೆ ನಮಗೆ ನಮ್ಮದೇ ಆದ ಸ್ಪಷ್ಟತೆ ಇದೆ, ಗುರಿ ಇದೆ ಎಂದು ಟೀಕಾಕಾರ ಆರೋಪಗಳಿಗೆ ತಿರುಗೇಟು ನೀಡಿದರು.

  • ದೆಹಲಿಯ ಆಪ್‌ನ  ಇಬ್ಬರು ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್

    ದೆಹಲಿಯ ಆಪ್‌ನ ಇಬ್ಬರು ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್

    ನವದೆಹಲಿ: ಕರ್ನಾಟಕದ ಸ್ಪೀಕರ್ ಹಾದಿಯನ್ನೇ ದೆಹಲಿ ಸ್ಪೀಕರ್ ಸಹ ತುಳಿದಿದ್ದು, ಎಎಪಿ ತೊರೆದು ಬಿಜೆಪಿ ಸೇರಿದ್ದ ಇಬ್ಬರು ಶಾಸಕರನ್ನು ಅನರ್ಹಗೊಳಿಸಿ ತೀರ್ಪು ನೀಡಿದ್ದಾರೆ.

    ದೆಹಲಿ ವಿಧಾನಸಭೆಯ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಗುರುವಾರ ಈ ಆದೇಶ ಹೊರಡಿಸಿದ್ದು, ಎಎಪಿ ತೊರೆದು ಬಿಜೆಪಿ ಸೇರಿದ್ದ ಇಬ್ಬರು ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿದ್ದಾರೆ. ಅನಿಲ್ ಬಜ್ಪಾಯಿ ಮತ್ತು ದೇವಿಂದರ್ ಸಿಂಗ್ ಶರಾವತ್ ಇಬ್ಬರು ಶಾಸಕರು ಎಎಪಿ ಟಿಕೆಟ್‍ನಿಂದ ಗೆದ್ದು ಬಂದಿದ್ದರು. ಆದರೆ ಆಡಳಿತಾರೂಢ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದರು ಹೀಗಾಗಿ ಅಮಾನತುಗೊಳಿಸಿದ್ದಾರೆ.

    ಗಾಂಧಿ ನಗರ ಶಾಸಕ ಅನಿಲ್ ಬಜ್ಪಾಯಿ ಅವರು ಮೇ 3 ರಂದು ಎಎಪಿ ತೊರೆದಿದ್ದರು. ಬಿಜೆಪಿಯ ಕುದುರೆ ವ್ಯಾಪಾರಕ್ಕೊಳಗಾಗಿ ಎಎಪಿ ತೊರೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆ ಸಮಯದಲ್ಲಿ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಏಳು ಶಾಸಕರಿಗೆ ತಲಾ 10 ಕೋಟಿ ರೂ. ಆಫರ್ ನೀಡಿ ಬಿಜೆಪಿ ನಮ್ಮ ಶಾಸಕರನ್ನು ಖರೀದಿಸುತ್ತಿದೆ ಎಂದು ಆರೋಪಿಸಿದ್ದರು.

    ಈ ಆರೋಪವನ್ನು ಬಜ್ಪಾಯಿ ನಿರಾಕರಿಸಿದ್ದರು. ಅಲ್ಲದೆ, ಬಿಜೆಪಿಯಿಂದ ನಾನು ಯಾವುದೇ ರೀತಿಯ ಹಣ ಪಡೆದಿಲ್ಲ. ಮತ್ತೊಬ್ಬರ ಮೇಲೆ ಆರೋಪ ಹೊರಿಸುವುದು, ನಂತರ ಕ್ಷಮೆಯಾಚಿಸುವುದು ಅರವಿಂದ ಕೇಜ್ರಿವಾಲ್ ಅವರ ಹವ್ಯಾಸವಾಗಿದೆ ಎಂದು ಆರೋಪಿಸಿದ್ದಾರೆ.

    ಬಜ್ಪಾಯಿ ಅವರು ಬಿಜೆಪಿ ಸೇರಿದ ನಾಲ್ಕು ದಿನಗಳ ನಂತರ ಮೇ.7 ರಂದು ಬಿಜ್ವಾಸನ್ ಶಾಸಕ ದೇವಿಂದರ್ ಶರಾವತ್ ಅವರು ಬಿಜೆಪಿ ಸೇರಿದ್ದರು. ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ್ದ ದೇವಿಂದರ್ ಸಿಂಗ್ ಶರಾವತ್, ಎಎಪಿ ಸಂಪೂರ್ಣವಾಗಿ ಕಡೆಗಣಿಸಿ, ನನ್ನನ್ನು ಮೂಲೆಗುಂಪು ಮಾಡಿದೆ. ಅಲ್ಲದೆ, ಪಕ್ಷದ ಸಮಾರಂಭಗಳಿಗೂ ಆಹ್ವಾನಿಸದೇ ನಿರ್ಲಕ್ಷ್ಯವಹಿಸಿದೆ. ಪಕ್ಷ ನನ್ನನ್ನು ಅವಮಾನಿಸಿದರೂ ಸಹ ನಾನು ಅದನ್ನು ಗಂಭೀರವಾಗಿ ಪರಿಗಣಿಸದೆ, ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿದ್ದರು.

    ಸ್ಪೀಕರ್ ರಾಮ್ ನಿವಾಸ್ ಗೋಯಲ್ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಶಾಸಕ ಕಪಿಲ್ ಮಿಶ್ರಾ ಅವರನ್ನು ಅನರ್ಹಗೊಳಿಸಿದ್ದರು.

    ಆಗಸ್ಟ್ 2ರಂದು ಕರವಾಲ್ ನಗರದ ಶಾಸಕ ಮಿಶ್ರಾ ಅವರನ್ನು ಅನರ್ಹಗೊಳಿಸಿ ಸ್ಪೀಕರ್ ಆದೇಶಿಸಿದ್ದರು. ಜನವರಿ 27ರಂದು ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕರು ಭಾಗವಹಿಸಿದಾಗಿನಿಂದ ಈ ಆದೇಶ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.

  • ಹರಿಯಾಣದಲ್ಲಿಯೂ ಪಕ್ಷಾಂತರ ಪರ್ವ- ಮೂವರು ಶಾಸಕರು ಬಿಜೆಪಿಗೆ ಸೇರ್ಪಡೆ

    ಹರಿಯಾಣದಲ್ಲಿಯೂ ಪಕ್ಷಾಂತರ ಪರ್ವ- ಮೂವರು ಶಾಸಕರು ಬಿಜೆಪಿಗೆ ಸೇರ್ಪಡೆ

    ಚಂಡೀಗಢ: ಕರ್ನಾಟಕ, ಮಹಾರಾಷ್ಟ್ರದ ನಂತರ ಹರಿಯಾಣದಲ್ಲಿಯೂ ಪಕ್ಷಾಂತರ ಪರ್ವ ಮುಂದುವರಿದಿದ್ದು, ಇಂಡಿಯನ್ ನ್ಯಾಷನಲ್ ಲೋಕದಳ(ಐಎನ್‍ಎಲ್‍ಡಿ)ದ ಇಬ್ಬರು ಹಾಗೂ ಪಕ್ಷೇತರ ಶಾಸಕರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ.

    ಹರಿಯಾಣ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವಾಗಲೇ ಪಕ್ಷಾಂತರ ಕಾರ್ಯ ಚುರುಕುಗೊಂಡಿದೆ. ಇತ್ತೀಚೆಗಷ್ಟೇ ರಾಜೀನಾಮೆ ನೀಡಿದ್ದ ಸಿರ್ಸಾ ಜಿಲ್ಲೆಯ ರಾನಿಯಾ ವಿಧಾನಸಭಾ ಕ್ಷೇತ್ರದ ಐಎನ್‍ಎಲ್‍ಡಿ ಶಾಸಕ ರಾಮ್ ಚಂದರ್ ಕಾಂಬೋಜ್, ಫಿರೋಜ್‍ಪುರ್ ಝಿರ್ಕಾದ ಶಾಸಕ ನಸೀಮ್ ಅಹ್ಮದ್ ಬಿಜೆಪಿ ಪಾಳಯ ಸೇರಿದ್ದಾರೆ.

    ಸಫಿಡನ್ ಕ್ಷೇತ್ರದ ಪಕ್ಷೇತರ ಶಾಸಕ ಜಸ್ಬಿರ್ ದೇಸ್ವಾಲ್ ಸಹ ಬಿಜೆಪಿಗೆ ಬೆಂಬಲ ನೀಡಿದ್ದು, ಇಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲಾ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ವಿಶೇಷವೆಂದರೆ ಮೇ 12 ರಂದು 6ನೇ ಹಂತದ ಲೋಕಸಭಾ ಚುನಾವಣೆ ನಡೆಯುವುದಕ್ಕೂ ಕೆಲವೇ ದಿನಗಳ ಮುಂಚೆ ನಸೀಮ್ ಅಹ್ಮದ್ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದರು. ಇದೀಗ ಮತ್ತೆ ಬಿಜೆಪಿಗೆ ಜಂಪ್ ಆಗಿದ್ದಾರೆ.

    ಈ ಮೂವರು ಶಾಸಕರೂ ಯಾವುದೇ ಷರತ್ತುಗಳಿಲ್ಲದೇ ಬಿಜೆಪಿ ಸೇರಿದ್ದಾರೆ ಎಂದು ಸುಭಾಷ್ ಬರಾಲಾ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ರತಿಯಾದ ಐಎನ್‍ಎಲ್‍ಡಿ ಶಾಸಕ ರವೀಂದರ್ ಬಲೈಲಾ ಅವರು ಮಾಜಿ ಸಚಿವ ಜಗದೀಶ್ ಯಾದವ್ ಅವರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದರು. ಇದೀಗ ಮತ್ತೆ ಇಬ್ಬರು ಐಎನ್‍ಎಲ್‍ಡಿ ಶಾಸಕರು ಕೇಸರಿ ತೆಕ್ಕೆಗೆ ಜಾರಿದ್ದಾರೆ.

    ಚೌತಾಲಾ ಕುಟುಂಬದಲ್ಲಿನ ದ್ವೇಷದಿಂದ ಕಳೆದ ವರ್ಷ ಐಎನ್‍ಎಲ್‍ಡಿ ವಿಭಜನೆಯಾಯಿತು. ಆ ಸಂದರ್ಭದಲ್ಲಿಯೂ ಸಹ ಹಲವಾರು ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗಿದ್ದರು.

  • ಕೇರಳದಲ್ಲೂ ಕಾಂಗ್ರೆಸ್ಸಿಗೆ ಶಾಕ್ – ಶೀಘ್ರವೇ ಶಾಸಕರು, ಸಂಸದರು ಬಿಜೆಪಿಗೆ ಜಂಪ್?

    ಕೇರಳದಲ್ಲೂ ಕಾಂಗ್ರೆಸ್ಸಿಗೆ ಶಾಕ್ – ಶೀಘ್ರವೇ ಶಾಸಕರು, ಸಂಸದರು ಬಿಜೆಪಿಗೆ ಜಂಪ್?

    ಕೊಚ್ಚಿ: ಕರ್ನಾಟಕ, ಗುಜರಾತ್, ಗೋವಾದಲ್ಲಿ ಶಾಸಕರ ಪಕ್ಷಾಂತರದಿಂದ ಆಘಾತಗೊಂಡಿರುವ ಕಾಂಗ್ರೆಸ್ಸಿಗೆ ಈಗ ಕೇರಳದಲ್ಲೂ ಬಿಗ್ ಶಾಕ್ ಸಿಗುವ ಸಾಧ್ಯತೆಯಿದೆ.

    ಕೇರಳದ 6 ಕಾಂಗ್ರೆಸ್ ಸಂಸದರು ಮತ್ತು 3 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಎನ್‍ಡಿಎ ಮಿತ್ರಪಕ್ಷ ಕೆಜೆಎಸ್‍ಪಿ ನಾಯಕ ಪಿ.ಸಿ.ಜಾರ್ಜ್ ಹೇಳಿಕೆ ನೀಡಿ ದೇಶದಲ್ಲಿ ಸಂಚಲನ ಮೂಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇರಳದ 6 ಕಾಂಗ್ರೆಸ್ ಸಂಸದರು ಮತ್ತು 3 ಶಾಸಕರು ಬಿಜೆಪಿ ಹೈಕಮಾಂಡ್ ಜೊತೆ ಸಂಪರ್ಕದಲ್ಲಿದ್ದಾರೆ. ಈಗಾಗಲೇ ನಾಯಕರ ಜೊತೆ ಮಾತುಕತೆ ನಡೆದಿರುವ ಬಗ್ಗೆ ನನಗೆ ಮಾಹಿತಿ ಸಿಕ್ಕಿದ್ದು, ಶೀಘ್ರವೇ ಈ ನಾಯಕರು ಬಿಜೆಪಿ ಸೇರುವ ಸಾಧ್ಯತೆಯಿದೆ ಎಂದು ಹೇಳಿಕೆ ನೀಡಿದ್ದಾರೆ.

    ಮಾಧ್ಯಮಗಳು ಈ ವಿಚಾರದ ಬಗ್ಗೆ ಮತ್ತಷ್ಟು ಪ್ರಶ್ನೆ ಕೇಳಿದಾಗ, ಶೀಘ್ರವೇ ಕೇರಳ ಕಾಂಗ್ರೆಸ್‍ನಿಂದ ಬಿಜೆಪಿ ಕಡೆಗೆ ಭಾರೀ ಹರಿವು ಸಂಭವಿಸಲಿದೆ ಎಂದಷ್ಟೇ ಹೇಳಿ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

    ಜಾರ್ಜ್ ಹೇಳಿಕೆಗೆ ಕೇರಳ ಕಾಂಗ್ರೆಸ್ ಉಪಾಧ್ಯಕ್ಷ ವಿಡಿ ಸತೀಶನ್ ಪ್ರತಿಕ್ರಿಯಿಸಿ, ಕೇರಳದ ಯಾವೊಬ್ಬ ಸಂಸದ, ಶಾಸಕ ಬಿಜೆಪಿಗೆ ಸೇರ್ಪಡೆಯಾಗುವುದಿಲ್ಲ. ಮಾಧ್ಯಮಗಳ ಮುಂದೆ ಪ್ರಚಾರಕ್ಕೆ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ.

  • ಪಕ್ಷಾಂತರಿಗಳನ್ನ ನಾಯಿಗೆ ಹೋಲಿಸಿದ ವಾಟಾಳ್ ನಾಗರಾಜ್

    ಪಕ್ಷಾಂತರಿಗಳನ್ನ ನಾಯಿಗೆ ಹೋಲಿಸಿದ ವಾಟಾಳ್ ನಾಗರಾಜ್

    ಹುಬ್ಬಳ್ಳಿ: ಚುನಾವಣೆಯಲ್ಲಿ ಒಂದು ಪಕ್ಷದಿಂದ ಗೆದ್ದ ಬಳಿಕ ಮತ್ತೊಂದು ಪಕ್ಷಕ್ಕೆ ಹಾರುವ ಶಾಸಕರನ್ನು ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನಾಯಿಗಳಿಗೆ ಹೋಲಿಕೆ ಮಾಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷಾಂತರ ಮಾಡುಲು ಪ್ರಯತ್ನಿಸುತ್ತಿರುವ ನಾಯಕರಿಗೆ ಯಾವುದೇ ಭಯ ಇಲ್ಲ. ಆಪರೇಷನ್ ಮಾಡ ಹೊರಟಿರುವ ಇವರ ಈ ನಡೆ ಸಂವಿಧಾನದ ವಿರುದ್ಧವಾಗಿದ್ದು, ರಾಜ್ಯದ ಜನತೆ ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದರು.

    ರಾಜ್ಯದಲ್ಲಿ ಪಕ್ಷದವಾದರು ಆಡುತ್ತಿರುವ ನಾಟಕ ಚುನಾವಣಾ ಆಯೋಗಕ್ಕೆ ಗೊತ್ತು. ಆದರೆ ಆಯೋಗ ಕಣ್ಣು ಮುಚ್ಚಿ ಕುಳಿತಿದೆ. ಇದನ್ನು ನೋಡುತ್ತಿರುವ ರಾಜ್ಯದ ಜನತೆ ಮಾತ್ರ ಸುಮ್ಮನೆ ಇರಲ್ಲಾ. ಅವರಿಗೆ ಪಕ್ಕ ಪಾಠ ಕಲಿಸುತ್ತಾರೆ ಎಂದರು. ಅಲ್ಲದೇ ಒಂದು ಸಾಕು ನಾಯಿ ತನ್ನನ್ನು ಸಾಕಿದ ಮಾಲೀಕನಿಗೆ ಕೊನೆಯವರೆಗೂ ನಿಯತ್ತಿನಿಂದ ಇರುತ್ತೆ. ಆದರೆ ಒಂದು ಪಕ್ಷದಲ್ಲಿ ಗೆದ್ದು ಮತ್ತೊಂದು ಪಕ್ಷಕ್ಕೆ ಹೋಗುವವರು ನಾಯಿಗಂತ ಕಡೆ ಎಂದು ಹೇಳುವ ಮೂಲಕ ಪಕ್ಷಾಂತರ ಹೊರಟ ನಾಯಕರ ವಿರುದ್ಧ ಗುಡುಗಿದರು.

    ಇದಕ್ಕೂ ಮುನ್ನ ನಾಡೋಜ ಡಾ. ಪಾಟೀಲ ಪುಟ್ಟಪ್ಪರವರಿಗೆ 100 ನೇ ವರ್ಷ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ಅವರು ಪಾಟೀಲ್ ಪುಟ್ಟಪ್ಪರವರ ಮನೆಗೆ ಭೇಟಿ ನೀಡಿ ಸನ್ಮಾನ ಮಾಡಿದರು. ಈ ವೇಳೆ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳು ಬೇಗ ಗುಣಮುಖರಾಗಲಿ ಎಂದು ನಾಡಿನ ಜನತೆ ಎಲ್ಲ ಜನತೆ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. ನಾನೂ ಕೂಡಾ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು. ಬಳಿಕ ಶ್ರೀಗಳಿಗೆ ಭಾರತರತ್ನ ನೀಡಬೇಕು ಎಂದು ಬಿಜೆಪಿ ನಾಯಕರು ಕೇವಲ ಭಾಷಣ ಮಾಡಿ, ಕಥೆ ಕಾದಂಬರಿ ಹೇಳಿ ಹೋಗಬಾರದು, ನೂರ ಜನ ಶಾಸಕರನು ಕೂಡಿ ಹಾಕುವ ಬದಲು, ಅದೇ ನೂರ ಜನ ಶಾಸಕರನ್ನು ಕರೆದುಕೊಂಡು ಹೋಗಿ ಶ್ರೀಗಳಿಗೆ ಭಾರತರತ್ನ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹಾಕಬೇಕು. ಇದೇ ಜನವರಿ 26 ರಂದು ಭಾರತರತ್ನ ಕೊಡಬೇಕು. ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ಕೊಟ್ಟರೆ, ಪ್ರಶಸ್ತಿಗೆ ಮತ್ತಷ್ಟು ಬೆಲೆ ಬರಲಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv