ನವದೆಹಲಿ: ರಾಜ್ಯಸಭೆಯ ಮೊದಲ ಭಾಷಣದಲ್ಲೇ ಪಕೋಡಾವನ್ನು ಮಾರಾಟ ಮಾಡಿ ಮೋದಿ ಹೇಳಿಕೆಯನ್ನು ಟೀಕಿಸುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಯಾವುದೇ ಒಬ್ಬ ವ್ಯಕ್ತಿ ನಿರುದ್ಯೋಗಿಯಾಗಿ ಇರುವುದಕ್ಕಿಂತ ಕಾರ್ಮಿಕನಾಗಿ ಅಥವಾ ಪಕೋಡಾ ವ್ಯಾಪಾರಿ ಆಗುವುದು ಉತ್ತಮ. ಪಕೋಡಾ ಮಾರಾಟ ಮಾಡಲು ಯಾವುದೇ ಮುಜುಗರ ಪಡಬೇಕಿಲ್ಲ ಎಂದರು.

ದೇಶದ ಯುವ ಜನತೆಗೆ ಹೊಸ ಉದ್ಯೋಗ ಸೃಷ್ಟಿ ಮಾಡಲು ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಈ ಹಿಂದಿನ ಹಲವು ಸರ್ಕಾರಗಳು ಬಡತನ ನಿರ್ಮೂಲನೆ ಎಂಬ ಘೋಷಣೆಗಳನ್ನು ಇಟ್ಟು ಅಧಿಕಾರ ವಹಿಸಿಕೊಂಡರೂ ಯಶಸ್ವಿಯಾಗಿರಲಿಲ್ಲ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದು ಜಾರಿಗೆ ಬರುತ್ತಿದೆ. ಉದ್ಯೋಗ ಸೃಷ್ಟಿಯ ಬಗ್ಗೆ ನಮ್ಮ ಸರ್ಕಾರ ಜಾಗೃತವಾಗಿದೆ. ಆದರೆ ಒಮ್ಮಿದೊಮ್ಮೆಗೆ ಬದಲಾವಣೆ ಮಾಡಲು ಸಾಧ್ಯವೇ? ವಿರೋಧಿಗಳ ಟೀಕೆಗಳನ್ನು ಕೇಳಲು ನಮಗೆ ಸಂತಸವಾಗುತ್ತಿದೆ ಎಂದು ಹೇಳಿ ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ 60 ವಷಗಳ ಅಧಿಕಾರ ಅವಧಿಯಲ್ಲಿ ಉದ್ಯೋಗ ಸೃಷ್ಟಿಗೆ ನೀಡಿದ ಕೊಡುಗೆ ಏನು ಎನ್ನುವುದನ್ನು ಪ್ರಶ್ನಿಸಿಕೊಳ್ಳಬೇಕಿದೆ. ನಾವು ಈಗಾಗಲೇ ಉದ್ಯೋಗ ಸೃಷ್ಟಿಯ ಬಗ್ಗೆ ಕಾರ್ಯಪ್ರವೃತ್ತವಾಗಿದ್ದೇವೆ. ಸರ್ಕಾರದ ಸ್ಮಾರ್ಟ್ ಆಫ್ ಇಂಡಿಯಾ, ಮುದ್ರಾ ಯೋಜನಾ ಮುಂತಾದ ಯೋಜನೆಗಳು ಪ್ರಗತಿಯಲ್ಲಿದೆ ಎಂದರು.

2014 ರಲ್ಲಿ ದೇಶದ ಜನರು ಶಕ್ತಿಶಾಲಿ ಸರ್ಕಾರಕ್ಕೆ ಮತ ಹಾಕುವ ಮೂಲಕ ಐತಿಹಾಸಿಕ ನಿರ್ಣಯ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡಿ ಅಭಿವೃದ್ಧಿ, ಶಾಂತಿಯನ್ನು ಬಯಸಿದ್ದಾರೆ. ಸರ್ಕಾರ ರಚನೆ ಮಾಡಲು ಸಂಪೂರ್ಣ ಬಹುಮತವಿದ್ದರೂ ಬಿಜೆಪಿ ಎನ್‍ಡಿಎ ಒಕ್ಕೂಟದ ಮಿತ್ರ ಪಕ್ಷಗಳ ಮೂಲಕ ಸರ್ಕಾರ ರಚನೆ ಮಾಡಿದೆ ಎಂದರು.
ಅಮಿತ್ ಶಾ ಮೊದಲ ಭಾಷಣ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿದ್ದು, ಟ್ವಿಟ್ಟರ್ ನಲ್ಲಿ ಭಾರತದಲ್ಲಿ #ShahSpeaksInRajyaSabha ಹ್ಯಾಶ್ ಟ್ಯಾಗ್ ನಂಬರ್ ಒನ್ ಟ್ರೆಂಡಿಂಗ್ ಟಾಪಿಕ್ ಆಗಿತ್ತು.
ಕೆಲ ದಿನಗಳ ಹಿಂದೆ ಖಾಸಗಿ ಮಾಧ್ಯಮದ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಅವರು ಪಕೋಡಾ ಮಾರಾಟ ಮಾಡುವುದು ಒಂದು ಸ್ವಯಂ ಉದ್ಯೋಗವಾಗಿದ್ದು, ಪಕೋಡಾ ಮಾರಾಟ ಮಾಡುವ ವ್ಯಕ್ತಿ ಪ್ರತಿದಿನ ಸಂಜೆ 200 ರೂ. ಗಳಿಸುತ್ತಾರೆ ಎಂದಿದ್ದರು. ಮೋದಿ ಅವರ ಈ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿ ದೇಶಾದ್ಯಂತ ಪ್ರತಿಭಟನೆಯನ್ನು ನಡೆಸಿತ್ತು.

ಬೆಂಗಳೂರಿನ ಆರಮನೆ ಮೈಧಾನದಲ್ಲಿ ಭಾನುವಾರ ನಡೆದ ಪರಿವರ್ತನಾ ಯಾತ್ರೆ ವೇಳೆಯು ಪ್ರಧಾನಿಗಳ ವಿರುದ್ಧ ಪ್ರತಿಭಟನೆ ನಡೆಸಿತ್ತು. ವಿಶ್ವವಿದ್ಯಾಲಯ ಘಟಿಕೋತ್ಸವದ ದಿನ ವಿದ್ಯಾರ್ಥಿಗಳು ಧರಿಸುವ ಗೌನ್ ಹಾಕಿಕೊಂಡಿದ್ದ ವಿದ್ಯಾರ್ಥಿಗಳು ಪಕೋಡಾ ಮಾರಾಟ ಮಾಡಿ ಪ್ರತಿಭಟನೆ ನಡೆಸಿದ್ದರು.







