ನವದೆಹಲಿ: ಏಷ್ಯಾಕಪ್ ಕ್ರಿಕೆಟ್ ನಲ್ಲಿ ಮಿಥಾಲಿ ರಾಜ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ವೇಳೆ ನೀಡಿದ ನಗದು ಬಹುಮಾನದ ಮೊತ್ತಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ಷೇಪ ಕೇಳಿಬಂದಿದೆ.
ಏಷ್ಯಾ ಕಪ್‍ನ ಟಿ 20 ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಟೀಂ ಇಂಡಿಯಾ 142 ರನ್‍ಗಳ ಭರ್ಜರಿ ಗೆಲುವನ್ನು ಸಾಧಿಸಿತ್ತು. ಈ ಪಂದ್ಯದಲ್ಲಿ ಮಿಥಾಲಿ ರಾಜ್ 97 ರನ್ (13ಬೌಂಡರಿ, 1 ಸಿಕ್ಸರ್) ಸಿಡಿಸಿ ತಂಡದ ಗೆಲುವಿನ ಪ್ರಮುಖ ಪಾತ್ರವಹಿಸಿದ್ದಕ್ಕೆ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದಿತ್ತು. 250 ಯು ಎಸ್ ಡಾಲರ್ (ಸುಮಾರು 16,781.25 ರೂ.) ನಗದು ಬಹುಮಾನವನ್ನು ಮಿಥಾಲಿ ರಾಜ್ ಅವರಿಗೆ ನೀಡಿ ಗೌರವಿಸಲಾಗಿತ್ತು.

ಸಾಮಾನ್ಯವಾಗಿ ಈ ಸಾಧನೆಯನ್ನು ಮಾಡಿದ ಪುರುಷ ಕ್ರಿಕೆಟರ್ ಗಳಿಗೆ ಸುಮಾರು 2000 ಯು ಎಸ್ ಡಾಲರ್ (ಸುಮಾರು 1.34 ಲಕ್ಷ ರೂ.) ನಗದು ಬಹುಮಾನವನ್ನು ನೀಡಲಾಗುತ್ತದೆ. ಆದರೆ ಮಹಿಳಾ ಕ್ರಿಕೆಟ್ ಪಟುಗಳಿಗೆ ನಗದು ಬಹುಮಾನದ ಮೊತ್ತ ಕಡಿಮೆ ಯಾಕೆ ಎಂದು ಜನ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ತಮ್ಮ ಪ್ರಶ್ನೆ ಮಾಡಿರುವ ಅಭಿಮಾನಿಗಳು ಮಹಿಳಾ ಕ್ರಿಕೆಟರ್ ಗಳು ಪರಿಶ್ರಮ ಪಟ್ಟರೂ ಉತ್ತಮ ಸಂಭಾವನೆ ಸಿಗುತ್ತಿಲ್ಲ. ರಣಜಿ ಆಟಗಾರರೂ ಕೂಡ ಇದಕ್ಕಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಾರೆ. ಇದು ಬಿಪಿಎಲ್ ವ್ಯಕ್ತಿಯೊಬ್ಬನ ಮಾಸಿಕ ವೇತನಕ್ಕೆ ಸಮನಾಗಿದೆ. ಅಧಿಕಾರಿಗಳ ಈ ನಡೆ ಆಟಗಾರ್ತಿಯರಿಗೆ ಮಾಡಿದ ಅಪಮಾನ ಎಂದು ಕಮೆಂಟ್ ಮಾಡಿದ್ದಾರೆ.

