Tag: ಪಂಚಾಯಿತಿ ಅಧ್ಯಕ್ಷೆ

  • ದಲಿತ ಪಂಚಾಯ್ತಿ ಅಧ್ಯಕ್ಷೆಯನ್ನು ನೆಲೆದ ಮೇಲೆ ಕೂರಿಸಿ ಸಭೆ – ಫೋಟೋ ವೈರಲ್

    ದಲಿತ ಪಂಚಾಯ್ತಿ ಅಧ್ಯಕ್ಷೆಯನ್ನು ನೆಲೆದ ಮೇಲೆ ಕೂರಿಸಿ ಸಭೆ – ಫೋಟೋ ವೈರಲ್

    – ಧ್ವಜರೋಹಣ ಮಾಡಲು ಅವಕಾಶ ನೀಡದ ಉಪಾಧ್ಯಕ್ಷ

    ಚೆನ್ನೈ: ಗ್ರಾಮ ಪಂಚಾಯಿತಿ ದಲಿತ ಮಹಿಳೆಯನ್ನು ನೆಲೆದ ಮೇಲೆ ಕೂರಿಸಿ ಸಭೆ ನಡೆಸಿರುವ ಅಮಾನವೀಯ ಘಟನೆ ಚೆನ್ನೈನ ಕಡಲೂರು ಜಿಲ್ಲೆಯ ತೆರ್ಕುಟ್ಟಿಟ್ಟೈ ಗ್ರಾಮದಲ್ಲಿ ನಡೆದಿದೆ.

    ತೆರ್ಕುಟ್ಟಿಟ್ಟೈ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಎಸ್ ರಾಜೇಶ್ವರಿಯವರನ್ನು ಮೇಲ್ಜಾತಿಯ ಉಪಾಧ್ಯಕ್ಷ ಮೋಹನ್ ರಾಜನ್ ಸಭೆಯಲ್ಲಿ ಕೆಳಗೆ ಕೂರಿಸಿದ್ದಾನೆ. 2020ರ ಜುಲೈನಲ್ಲಿ ಈ ಘಟನೆ ನಡೆದಿದ್ದು, ಈಗ ಈ ಫೋಟೋಗಳು ವೈರಲ್ ಆಗಿವೆ. ಈ ಕೃತ್ಯದ ವಿರುದ್ಧ ರಾಜೇಶ್ವರಿಯವರು ಕಡಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಜುಲೈನಲ್ಲಿ ನಡೆದ ಸಭೆಯಲ್ಲಿ ರಾಜೇಶ್ವರಿಯವರನ್ನು ಕೆಳಜಾತಿಯವರು ಎಂಬ ಕಾರಣಕ್ಕೆ ನೆಲದ ಮೇಲೆ ಕೂರಿಸಲಾಗಿದೆ. ಜೊತೆಗೆ ಉಳಿದ ಎಲ್ಲ ಪಂಚಾಯತ್ ಸದಸ್ಯರುಗಳು ಕುರ್ಚಿ ಮೇಲೆ ಕುಳಿತುಕೊಂಡಿದ್ದಾರೆ. ಇದರ ವಿರುದ್ಧ ಕ್ರಮ ತೆಗೆದುಕೊಂಡಿರುವ ಕಡಲೂರು ಜಿಲ್ಲಾಧಿಕಾರಿ, ಉಪಾಧ್ಯಕ್ಷ ಮೋಹನ್ ರಾಜನ್ ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಅಮಾನತು ಮಾಡಿ, ತನಿಖೆಗೆ ಆದೇಶ ನೀಡಿದ್ದಾರೆ.

    ಈ ಘಟನೆಯ ಬಗ್ಗೆ ಮಾತನಾಡಿರುವ ರಾಜೇಶ್ವರಿಯವರು, ಸಭೆಯ ವೇಳೆ ನಾನು ಮಾತನಾಡಬಾರದು ಎಂದು ಮೋಹನ್ ರಾಜನ್ ಅವರು ಹೇಳಿದ್ದರು. ಜೊತೆಗೆ ನೀನು ನಮ್ಮ ಜೊತೆ ಕುಳಿತುಕೊಳ್ಳಬೇಡ ನೆಲದ ಮೇಲೆ ಕುಳಿತುಕೊಳ್ಳಲು ಸೂಚಿದರು. ಗ್ರಾಮಗಳ ಸಮಸ್ಯೆ ಬಗ್ಗೆ ನಾವು ಮಾತನಾಡಿ ಪರಿಹಾರ ಕಂಡುಕೊಳ್ಳುತ್ತೇವೆ. ನೀನು ಏನೂ ಮಾತನಾಡುವುದು ಬೇಡ ಎಂದು ಹೇಳಿದ್ದರು. ನನ್ನ ಅಧ್ಯಕ್ಷೆ ಸ್ಥಾನಕ್ಕೂ ಗೌರವ ನೀಡದೆ ನನಗೆ ಅವಮಾನ ಮಾಡಿದರು ಎಂದು ಹೇಳಿದ್ದಾರೆ.

    ನಾನು ಈ ವರ್ಷದ ಜನವರಿಯಲ್ಲಿ ಅಧ್ಯಕ್ಷೆ ಸ್ಥಾನಕ್ಕೆ ಆಯ್ಕೆ ಆಗಿದ್ದೇನೆ. ಜನವರಿಯಿಂದಲೂ ನನಗೆ ಈ ರೀತಿಯ ಹಲವರು ಅವಮಾನ ಮಾಡಿದ್ದಾರೆ. ಕಳೆದ ಆಗಸ್ಟ್ 15ರಂದು ನನಗೆ ಧ್ವಜರೋಹಣ ಮಾಡಲು ಅವಕಾಶ ನೀಡಿಲ್ಲ. ನಾನು ಮಾಡಬೇಕಾದ ಧ್ವಜರೋಹಣವನ್ನು ಉಪಾಧ್ಯಕ್ಷ ಮೋಹನ್ ರಾಜನ್, ಅವರ ತಂದೆಯ ಕೈಯಲ್ಲಿ ಮಾಡಿಸಿದರು ಎಂದು ರಾಜೇಶ್ವರಿಯವರು ತಿಳಿಸಿದ್ದಾರೆ.

    ತೆರ್ಕುಟ್ಟಿಟ್ಟೈ ಪಂಚಾಯತಿ ವ್ಯಾಪ್ತಿಯಲ್ಲಿ ಆರು ವಾರ್ಡಿನ ಸದಸ್ಯರು ಇದ್ದಾರೆ. ಅವರಲ್ಲಿ ನಾಲ್ವರು ಹಿಂದೂ ಜಾತಿಗೆ ಸೇರಿದ್ದವರಾಗಿದ್ದಾರೆ ಮತ್ತು ಇಬ್ಬರು ಹಿಂದೂಳಿದ ಆದಿ-ದ್ರಾವಿಡ ಸಮುದಾಯಕ್ಕೆ ಸೇರಿದ್ದಾರೆ. ರಾಜೇಶ್ವರಿ ಅವರ ಪ್ರಕಾರ, ಇನ್ನೊಬ್ಬ ದಲಿತ ವಾರ್ಡಿನ ಸದಸ್ಯೆ ಸುಗಂತಿ ಅವರನ್ನು ಕೂಡ ಸಭೆಗಳಲ್ಲಿ ನೆಲದ ಮೇಲೆ ಕುಳಿತುಕೊಳ್ಳುವಂತೆ ಮಾಡಿದರು ಎಂದು ಹೇಳಿದ್ದಾರೆ.