Tag: ಪಂಚರಾಜ್ಯ

  • ಪಂಚರಾಜ್ಯಗಳ ಚುನಾವಣೆ ಸೋಲಿನ ಬಳಿಕ ಎಚ್ಚೆತ್ತ ಕಾಂಗ್ರೆಸ್ – ಗುಜರಾತ್ ಎಲೆಕ್ಷನ್ ಮೇಲೆ ಕಣ್ಣು

    ಪಂಚರಾಜ್ಯಗಳ ಚುನಾವಣೆ ಸೋಲಿನ ಬಳಿಕ ಎಚ್ಚೆತ್ತ ಕಾಂಗ್ರೆಸ್ – ಗುಜರಾತ್ ಎಲೆಕ್ಷನ್ ಮೇಲೆ ಕಣ್ಣು

    ನವದೆಹಲಿ: ಐದು ರಾಜ್ಯಗಳಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಉತ್ತಮ ಸಾಧನೆ ಮಾಡಲು ಪ್ರಯತ್ನ ಆರಂಭಿಸಿದೆ. ಗುಜರಾತ್ ವಿಧಾನಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ಕಾಂಗ್ರೆಸ್ ಹೈಕಮಾಂಡ್ ತನ್ನ ಉನ್ನತ ನಾಯಕರ ಸಭೆ ನಡೆಸಿದೆ.

    ನವದೆಹಲಿ 10 ಜನಪಥ್‍ನಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಹಿರಿಯ ನಾಯಕರ ಸಭೆ ನಡೆಯಿತು. ಸಭೆಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಎ.ಕೆ ಆ್ಯಂಟನಿ, ಅಜಯ್ ಮಾಕನ್, ದಿಗ್ವಿಜಯ ಸಿಂಗ್ ಮತ್ತು ಅಂಬಿಕಾ ಸೋನಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಭಾಗಿಯಾಗಿದ್ದರು. ಇದನ್ನೂ ಓದಿ: ಈಶ್ವರಪ್ಪ ಬಿಜೆಪಿಯಿಂದ ಹಲಾಲ್ ಆದ ಮೊದಲ ವ್ಯಕ್ತಿ: ಸತೀಶ್ ಜಾರಕಿಹೊಳಿ ವ್ಯಂಗ್ಯ

    ಈ ಸಭೆಯ ವೇಳೆ ಚುನಾವಣಾ ಚಾಣಕ್ಯ ಎಂದೇ ಖ್ಯಾತರಾಗಿರುವ ಪ್ರಶಾಂತ್ ಕಿಶೋರ್ ಕೂಡಾ ಸೋನಿಯಾಗಾಂಧಿ ನಿವಾಸದಲ್ಲಿ ಉಪಸ್ಥಿತರಿದ್ದರು. ಅವರು ಈ ಮಹತ್ವದ ಸಭೆಯಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ.

    ಸಭೆಯಲ್ಲಿ ಗುಜರಾತ್‍ನ ರಾಜಕೋಟ್ ಖೋಡಿಯಾರ್ ದೇವಿಯ ಭವ್ಯ ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ, ಖೋಡಲ್ಧಾಮ್ ಟ್ರಸ್ಟ್‌ನ ಅಧ್ಯಕ್ಷ ನರೇಶ್ ಪಟೇಲ್ ಅವರನ್ನು ಕಾಂಗ್ರೆಸ್‍ಗೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ಲೆಯುವಾ ಪಾಟೀದಾರ್ ಸಮುದಾಯದ ಪ್ರಮುಖ ನಾಯಕರಾಗಿರುವ ಹಿನ್ನಲೆ ಕಾಂಗ್ರೆಸ್ ಬಲ ಬರಲಿದೆ ಎನ್ನುವುದು ಕಾಂಗ್ರೆಸ್ ನಾಯಕರ ಲೆಕ್ಕಚಾರವಾಗಿದೆ. ಇದನ್ನೂ ಓದಿ: ಮೇ 15ರಿಂದ ರಷ್ಯಾದ ಕಚ್ಚಾತೈಲ ಆಮದು ಕಡಿತ

    ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಾಟೀದಾರ್ ಸಮುದಾಯವನ್ನು ವಿಶೇಷವಾಗಿ ಕೇಂದ್ರಿಕರಿಸಬೇಕು ಅದಕ್ಕಾಗಿ ಪಕ್ಷದಲ್ಲಿ ಪಾಟೀದಾರ್ ಸಮುದಾಯದ ನಾಯಕರ ಅವಶ್ಯಕತೆ ಇದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಸೋನಿಯಾ ಗಾಂಧಿ ಜೊತೆಗೆ ಚರ್ಚಿಸಿದ್ದರು.

  • ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಧಾನಿ ಮೋದಿಗೆ ಎಚ್ಚರಿಕೆಯ ಗಂಟೆ- ಅಣ್ಣಾ ಹಜಾರೆ

    ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಧಾನಿ ಮೋದಿಗೆ ಎಚ್ಚರಿಕೆಯ ಗಂಟೆ- ಅಣ್ಣಾ ಹಜಾರೆ

    ನವದೆಹಲಿ: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದ್ದು, ಇನ್ನಾದರೂ ಮೋದಿ ಸರ್ಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕೆಂದು ಹಿರಿಯ ಸಾಮಾಜಿಕ ಹೋರಾಟಗಾರ ಹಾಗೂ ಗಾಂಧಿವಾದಿ ಅಣ್ಣಾ ಹಜಾರೆ ಹೇಳಿದ್ದಾರೆ.

    ಪಂಚರಾಜ್ಯಗಳ ಫಲಿತಾಂಶದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಸರ್ಕಾರ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಚುನವಣಾ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಪ್ರಧಾನಿ ಮೋದಿಯೂ ಸೇರಿದಂತೆ ಬಿಜೆಪಿ ನಾಯಕರು ಮರೆತಿದ್ದಾರೆ. ಹೀಗಾಗಿ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ತನ್ನ ಹಿಡಿತದಲ್ಲಿದ್ದ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‍ಗಡ ರಾಜ್ಯಗಳಲ್ಲಿ ಬಿಜೆಪಿ ಸೋತಿದೆ. ಈ ಮೂಲಕ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ.

    ಮೋದಿ ಸರ್ಕಾರ ಚುನಾವಣೆಗೂ ಮುನ್ನ ಕಪ್ಪುಹಣವನ್ನು ದೇಶಕ್ಕೆ ವಾಪಾಸ್ ತರುವ ವಿಚಾರ, ರೈತರ ಬೆಳೆಗೆ ಬೆಂಬಲ ಬೆಲೆ, ಕೃಷಿ ಉತ್ಪಾದನೆಗಳಿಗೆ ಪ್ರೋತ್ಸಾಹ, ಅಧಿಕಾರದಲ್ಲಿ ಜನರ ಭಾಗವಹಿಸುವಿಕೆ ಸೇರಿದಂತೆ ಇನ್ನೂ ಮುಂತಾದ ಆಶ್ವಾಸನೆಗಳನ್ನು ನೀಡಿದ್ದರು. ಆದರೆ ಇದೂವರೆಗೂ ಯಾವುದೇ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಕೊಟ್ಟ ಮಾತನ್ನು ಅವರು ಮರೆತಿರಬಹುದು. ಆದರೆ ಮೋದಿಯವರ ಮೇಲೆ ಭರವಸೆ ಇಟ್ಟು ಮತ ಹಾಕಿದ್ದ ಜನ ಎಂದಿಗೂ ಅದನ್ನು ಮರೆಯುವುದಿಲ್ಲ. ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಮೋದಿ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಮುಂಬರುವ ಲೋಕಸಭಾ ಚುನಾವಣಾ ವೇಳೆಗೆ ತಾನು ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸದಿದ್ದರೇ, ಇದೇ ರೀತಿಯ ಫಲಿತಾಂಶ ಮತ್ತೆ ಮರುಕಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಪ್ರಧಾನಿ ಮೋದಿಯವರ ನೋಟು ನಿಷೇಧ ನಿರ್ಧಾರದ ಕುರಿತು ಮಾತನಾಡಿ, ನೋಟು ನಿಷೇಧ ಮೋದಿ ಸರ್ಕಾರದ ತಪ್ಪು ನಡೆಯಾಗಿದೆ. ಅದನ್ನು ಯಾವ ಉದ್ದೇಶದಿಂದ ಜಾರಿಗೆ ತಂದರೋ, ಅದು ಇದೂವರೆಗೂ ಈಡೇರಿಲ್ಲ. ಕಪ್ಪುಹಣವನ್ನು ಬಯಲಿಗೆಳೆಯುವ ಅವರ ಉದ್ದೇಶ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ? ಆರ್‍ಬಿಐ ಮಾಹಿತಿಗಳ ಪ್ರಕಾರ ನೋಟು ಅಮಾನ್ಯೀಕರಣದ ಬಳಿಕ ಶೇ.99ರಷ್ಟು ನಿಷೇಧಿತ ನೋಟುಗಳು ಬ್ಯಾಂಕುಗಳಲ್ಲಿ ಸಂಗ್ರಹವಾಗಿದೆ. ಹಾಗಾದರೆ ಕಪ್ಪುಹಣ ಎಲ್ಲಿಗೆ ಹೋಯಿತು? ಪ್ರಜಾಪ್ರಭುತ್ವದಲ್ಲಿ ಇಂತಹ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನುರಿತ ತಜ್ಞರೊಂದಿಗೆ ಪ್ರಧಾನಿ ಚರ್ಚೆ ನಡೆಸಬೇಕಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇದೇ ವೇಳೆ ರಾಮಮಂದಿರದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ದೇಶದಲ್ಲಿ ರಾಮಮಂದಿರ ವಿಚಾರವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಏಕೆಂದರೆ ರಾಮಮಂದಿರಕ್ಕಿಂತಲೂ ಗಂಭೀರ ಸಮಸ್ಯೆಗಳು ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿವೆ. ಶ್ರೀರಾಮ ಮಂದಿರದಲ್ಲಿ ಇಲ್ಲ. ಬಡವರ ಮನಸ್ಸಿನಲ್ಲಿದ್ದಾನೆ. ಬಡವರನ್ನು ಉದ್ಧಾರ ಮಾಡಿದಾಗ ಮಾತ್ರ, ರಾಮನಿಗೆ ತೃಪ್ತಿ ಸಿಗುತ್ತದೆ. ನಾವು ಮಾಡುವ ಒಳ್ಳೆಯ ಕೆಲಸದಲ್ಲೇ, ಶ್ರೀರಾಮನನ್ನು ಕಾಣಬೇಕು. ಇದನ್ನೇ ಶ್ರೀರಾಮ ಕೂಡ ಹೇಳಿದ್ದಾನೆಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಾಂಗ್ರೆಸ್ ಗೆಲುವನ್ನು ರೈತರಿಗೆ, ಕಾರ್ಯಕರ್ತರಿಗೆ ಅರ್ಪಿಸಿದ ರಾಹುಲ್ ಗಾಂಧಿ

    ಕಾಂಗ್ರೆಸ್ ಗೆಲುವನ್ನು ರೈತರಿಗೆ, ಕಾರ್ಯಕರ್ತರಿಗೆ ಅರ್ಪಿಸಿದ ರಾಹುಲ್ ಗಾಂಧಿ

    ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಗೆಲುವನ್ನು ರೈತರು ಹಾಗೂ ಕಾರ್ಯಕರ್ತರಿಗೆ ಅರ್ಪಿಸಿದ್ದಾರೆ.

    ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ಸನ್ನು ಬೆಂಬಲಿಸಿದ ಎಲ್ಲಾ ಮತದಾರರಿಗೂ ಅಭಿನಂದನೆ ಸಲ್ಲಿಸುತ್ತೇವೆ. ವಿಶೇಷವಾಗಿ ಈ ಕಾಂಗ್ರೆಸ್ ಗೆಲುವನ್ನು ದೇಶದ ರೈತರು, ಕಾರ್ಯಕರ್ತರು ಹಾಗೂ ದುಡಿಯುವ ಕೈಗಳಿಗೆ ಅರ್ಪಿಸುತ್ತೇನೆಂದು ಹೇಳಿದರು.

    ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‍ಗಡದಲ್ಲಿ ನಾವು ಬಿಜೆಪಿಯನ್ನು ಕಿತ್ತುಹಾಕಿದ್ದೇವೆ. ಆದರೆ ಮಿಜೋರಾಂ ಹಾಗೂ ತೆಲಂಗಾಣದಲ್ಲಿ ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಆದರೂ ಆಡಳಿತರೂಢ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಶಕ್ತಿಯನ್ನು ತೋರಿಸಿಕೊಟ್ಟಿದ್ದೇವೆ ಎಂದರು.

    ಮೂರು ರಾಜ್ಯಗಳಲ್ಲಿರುವ ಕೆಲಸ ಮಾಡಿರುವ ಮುಖ್ಯಮಂತ್ರಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಜನರು ಬದಲಾವಣೆಯನ್ನು ನಿರೀಕ್ಷಿಸಿ, ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಮುಖ್ಯಮಂತ್ರಿಗಳನ್ನಾಗಿ ಆಯ್ಕೆ ಮಾಡಿ, ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಚುನಾವಣೆಯಲ್ಲಿ ಕಾಂಗ್ರೆಸ್ ಕೊಟ್ಟಿದ್ದ ಮಾತಿನಂತೆ ಎಲ್ಲಾ ಆಶ್ವಾಸನೆಗಳನ್ನ ಈಡೇರಿಸುತ್ತದೆ. ಬಿಜೆಪಿ ಸರ್ಕಾರದ ಉತ್ತಮ ಯೋಜನೆಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.

    ಇದೇ ವೇಳೆ ಇಲೆಕ್ಟ್ರಾನಿಕ್ ಮತ ಯಂತ್ರದ ಬಗ್ಗೆ ಮಾತನಾಡಿ, ಇವಿಎಂಗಳಿದ್ದರೂ ಖಂಡಿತವಾಗಿ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲುತ್ತದೆ. ಅದರ ಬಗ್ಗೆ ಎರಡು ಮಾತಿಲ್ಲ. ಆದರೆ ಇವಿಎಂ ಗಳ ಬಗ್ಗೆ ಜನ ಅನುಮಾನ ವ್ಯಕ್ತಪಡಿಸುತ್ತಲೇ ಇದ್ದಾರೆ. ಹೀಗಾಗಿ ನಾವು ಕೂಡ ಅದರ ಬಗ್ಗೆ ಅನುಮಾನ ಹೊಂದಿದ್ದೇವೆ. ಇವಿಎಂಗಳಲ್ಲಿರುವ ಚಿಪ್ ಅನ್ನು ದುರುಪಯೋಗ ಮಾಡಿಕೊಳ್ಳಬಹುದು. ಇದರಿಂದಾಗಿ ದೇಶದ ಚುನಾವಣಾ ವ್ಯವಸ್ಥೆ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಇದರ ಬದಲು ಬ್ಯಾಲೆಟ್ ಪೇಪರ್‍ಗಳನ್ನು ಬಳಸಿದರೆ ಯಾವುದೇ ತೊಂದರೆಯಾಗುವುದಿಲ್ಲ ಅಭಿಪ್ರಾಯಪಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪಂಚರಾಜ್ಯಗಳ ಫಲಿತಾಂಶ ಲೋಕಸಭಾ ಚುನಾವಣೆಗೆ ಪರಿಣಾಮ ಬೀರಲ್ಲ- ಬಿಎಸ್‍ವೈ

    ಪಂಚರಾಜ್ಯಗಳ ಫಲಿತಾಂಶ ಲೋಕಸಭಾ ಚುನಾವಣೆಗೆ ಪರಿಣಾಮ ಬೀರಲ್ಲ- ಬಿಎಸ್‍ವೈ

    ಬೆಂಗಳೂರು: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಚುನಾವಣಾ ಫಲಿತಾಂಶದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ದೇಶದಲ್ಲಿ ನಡೆದ ಪಂಚರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಸ್ಥಳೀಯ ಆಡಳಿತ ವಿರೋಧಿ ಅಲೆಯಿಂದ ಬಿಜೆಪಿಗೆ ಸೋಲಾಗಿದೆ. ಕಳೆದ ಹತ್ತು ಹದಿನೈದು ವರ್ಷಗಳ ಕಾಲ ಬಿಜೆಪಿ ಆ ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಆದರಿಂದ ನಮಗೆ ಹಿನ್ನಡೆಯಾಗಿದೆ. ಈ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವೆಂದು ಹೇಳಿದ್ದಾರೆ.

    ಈ ಬಗ್ಗೆ ಮುಂದಿನ ದಿನಗಳಲ್ಲಿ ಎಲ್ಲರೂ ಕೂತು ಚರ್ಚಿಸಿ, ಮುಂದುವರಿಯುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿಯವರನ್ನು ಘೋಷಣೆ ಮಾಡಲಾಗಿದೆ. ಹೀಗಾಗಿ ಆ ಚುನಾವಣೆಗೆ ಯಾವುದೇ ತೊಂದರೆ ಆಗುವುದಿಲ್ಲವೆಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಇದು ಪ್ರಜಾಪ್ರಭುತ್ವದ ಗೆಲುವು – ಕಾಂಗ್ರೆಸ್ ಸಂಭ್ರಮಾಚರಣೆ

    ಇದು ಪ್ರಜಾಪ್ರಭುತ್ವದ ಗೆಲುವು – ಕಾಂಗ್ರೆಸ್ ಸಂಭ್ರಮಾಚರಣೆ

    ನವದೆಹಲಿ: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಜಾಪ್ರಭುತ್ವದ ಗೆಲುವೆಂದು ಹೇಳಿ ಕಾಂಗ್ರೆಸ್ ಸಂಭ್ರಮಿಸಿದೆ.

    ಇಂದು ಭಾರತವು ದ್ವೇಷವನ್ನು ಬಿಟ್ಟು ಪ್ರೀತಿ ಮತ್ತು ಸ್ನೇಹವನ್ನು, ಹಿಂಸೆಯನ್ನು ಬಿಟ್ಟು ಶಾಂತಿಯನ್ನು, ಸುಳ್ಳನ್ನು ಬಿಟ್ಟು ಸತ್ಯವನ್ನು ಆಯ್ಕೆ ಮಾಡಿಕೊಂಡಿದೆ. ಈ ಜಯ ನಿಮ್ಮದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

    5 ರಾಜ್ಯಗಳ ಫಲಿತಾಂಶ ದೇಶದ ಜನತೆ ಬಿಜೆಪಿ ಆಡಳಿತದಲ್ಲಿ ವಿಶ್ವಾಸ ಕಳೆದುಕೊಂಡಿರುವುದು ತೋರಿಸುತ್ತದೆ. ಸುಳ್ಳುಗಳು, ಕೋಮು ದ್ವೇಷ ಹರಡುವ ವಿಷಯಗಳ ಮೇಲಿನ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ. ನೈಜ ವಿಚಾರಗಳು ಮತ್ತು ಅಭಿವೃದ್ಧಿ ಬಯಸಿ ಮತ ಚಲಾವಣೆಯಾಗಿದೆ. ಈ ಬದಲಾವಣೆ 2019ರ ಲೋಕಸಭಾ ಚುನಾವಣೆಯಲ್ಲೂ ಮುಂದುವರಿಯಲಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

    ಮೂರು ರಾಜ್ಯಗಳ ಭರ್ಜರಿ ಜಯದಿಂದಾಗಿ ದೆಹಲಿಯ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಅಲ್ಲದೇ ಕಾಂಗ್ರೆಸ್ ಮತದಾರರಿಗೆ ಟ್ವೀಟ್ ಮೂಲಕ ಧನ್ಯವಾದವನ್ನು ಸಲ್ಲಿಸಿದೆ.

    ಈ ಗೆಲುವು ಪ್ರಜಾಪ್ರಭುತ್ವದ ಗೆಲುವಾಗಿದೆ. ದ್ವೇಷದ ಮೇಲಿನ ಪ್ರೀತಿಯನ್ನು, ಹಿಂಸೆಯ ಮೇಲಿನ ಶಾಂತಿಯನ್ನು ಹಾಗೂ ಸುಳ್ಳಿನ ಮೇಲಿನ ಸತ್ಯವನ್ನು ಆಯ್ಕೆಮಾಡಿಕೊಂಡ ಭಾರತಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತದೆ. ಈ ಜಯ ನಿಮ್ಮದು ಎಂದು ಬರೆದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ : ಸಿಎಂ ಎಚ್‍ಡಿಕೆ

    ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ : ಸಿಎಂ ಎಚ್‍ಡಿಕೆ

    ಬೆಂಗಳೂರು: ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

    ಪಂಚರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸಗಢ ಹಾಗೂ ಮಿಜೋರಾಂನಲ್ಲಿನ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಮುಂಬರುವ ಲೋಕಸಭಾ ಚುನಾವಣೆಯ ಮುನ್ಸೂಚನೆಯಂದು ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

    ಐದು ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ. ಈ ಚುನಾವಣೆಯಲ್ಲಿ ಮತದಾರ ನೀಡಿರುವ ತೀರ್ಪು ಜಾತ್ಯತೀತ ಪಕ್ಷಗಳತ್ತ ರಾಷ್ಟ್ರ ಸಾಗುತ್ತಿರುವುದರ ದ್ಯೋತಕವಾಗಿದೆ. ದೇಶಾದ್ಯಂತ ಏಕಪಕ್ಷೀಯ ಆಡಳಿತದ ನಿರೀಕ್ಷೆ ಇಟ್ಟುಕೊಂಡು ವಿರೋಧ ಪಕ್ಷಗಳನ್ನು ದಮನ ಮಾಡಲು ಮುಂದಾಗಿದ್ದವರಿಗೆ ಮುಖಭಂಗವಾಗಿದೆ ಎಂದು ಹೇಳಿದ್ದಾರೆ.

    ಈ ಐದೂ ರಾಜ್ಯಗಳ ಫಲಿತಾಂಶ ಜಾತ್ಯತೀತ ಪಕ್ಷಗಳೆಲ್ಲವೂ ಜೊತೆಯಾಗಿ ಚುನಾವಣೆ ಎದುರಿಸುವ ವೇದಿಕೆಯನ್ನು ದೊರಕಿಸಿಕೊಟ್ಟಿದೆ. ಕಾಂಗ್ರೆಸ್ ಪಕ್ಷದ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ಅಧ್ಯಕ್ಷ ಶ್ರೀ ರಾಹುಲ್ ಗಾಂಧಿ ಅವರ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಸಮಾನ ಮನಸ್ಕ ರಾಜಕೀಯ ನಾಯಕರನ್ನು ಒಂದೆಡೆಗೆ ತರಲು ರಾಹುಲ್ ಗಾಂಧಿ ಹಾಗೂ ಜಾತ್ಯತೀತ ಪಕ್ಷಗಳ ನಾಯಕರು ಮುಂದಾಗಬೇಕೆಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ: ಸಿದ್ದರಾಮಯ್ಯ

    ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ: ಸಿದ್ದರಾಮಯ್ಯ

    ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದರ ಕುರಿತು ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಪಂಚರಾಜ್ಯ ಚುನಾವಣೆಯ ಫಲಿತಾಂಶಗಳ ಪೈಕಿ ಕಾಂಗ್ರೆಸ್ ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಬಹುಮತದತ್ತ ಮುನ್ನುಗ್ಗುತ್ತಿದೆ. ಅಲ್ಲದೇ ಛತ್ತೀಸಗಢದಲ್ಲಿ ಸ್ಪಷ್ಟ ಮುನ್ನಡೆಯನ್ನು ಪಡೆದಿದೆ. ಈ ಕುರಿತು ಸಿದ್ದರಾಮಯ್ಯ ಟ್ವೀಟ್ ಮಾಡಿಕೊಂಡಿದ್ದಾರೆ.

    ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಪ್ರಚಾರದ ಗಾಳಿಪಟಗಳು ನೆಲಕ್ಕುರುಳುತ್ತಿವೆ. ಇದು ಗೆದ್ದು ಬೀಗುವ ಸಮಯವಲ್ಲ. ಸೈದ್ಧಾಂತಿಕವಾಗಿ ಗಟ್ಟಿಕೊಂಡು ನೆಲದಲ್ಲಿ ಕಾಲೂರಿ ಹೋರಾಟದಲ್ಲಿ ತೊಡಬೇಕಾದ ಕಾಲ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

    ಕೇಂದ್ರದಲ್ಲಿರುವ ಆಡಳಿತಾರೂಢ ಬಿಜೆಪಿ ಹಾಗೂ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಆರೋಪ ಮಾಡಿ, ಚುನಾವಣೆಯಲ್ಲಿ ಅಬ್ಬರದ ಪ್ರಚಾರದ ಗಾಳಿಪಟಗಳು ನೆಲಕ್ಕುರುಳುತ್ತಿವೆ. ಈ ವೇಳೆ ಕಾರ್ಯಕರ್ತರಿಗೆ ಇದು ಗೆದ್ದು ಬೀಗುವ ಸಮಯವಲ್ಲ. ಎಚ್ಚರಿಕೆಯಿಂದ ಮುನ್ನಡೆಯಬೇಕೆಂದು ಸಲಹೆ ನೀಡಿದ್ದಾರೆ.

    ಮಧ್ಯಾಹ್ನ 2.45ರ ವೇಳೆಗೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 110 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 109 ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ರಾಜಸ್ಥಾನದಲ್ಲಿ 101 ಸ್ಥಾನಗಳನ್ನು ಕಾಯ್ದುಕೊಂಡಿದ್ದು, ಬಿಜೆಪಿ 71 ಸ್ಥಾನಗಳಲ್ಲಿ ಮುನ್ನಡೆ ಹೊಂದಿದೆ. ಇದಲ್ಲದೇ ಛತ್ತೀಸಗಢದಲ್ಲಿ ಈ ಬಾರಿ 67 ಸ್ಥಾನಗಳಲ್ಲಿ ಮುನ್ನಡೆ ಹೊಂದಿದೆ. ಆದರೆ ಮಿಜೋರಾಮ್ ಹಾಗೂ ತೆಲಂಗಾಣದಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv