Tag: ನ್ಯೂ ಇಯರ್

  • ನ್ಯೂ ಇಯರ್ ಕೇಕ್ – ಪುಷ್ಕರಣಿ ವಿನ್ಯಾಸಕ್ಕೆ ಮನಸೋತ ಮಂದಿ

    ನ್ಯೂ ಇಯರ್ ಕೇಕ್ – ಪುಷ್ಕರಣಿ ವಿನ್ಯಾಸಕ್ಕೆ ಮನಸೋತ ಮಂದಿ

    ದಾವಣಗೆರೆ: ಎಲ್ಲೆಡೆ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತ ಮಾಡಲು ಜನರು ಕಾಯುತ್ತಿದ್ದಾರೆ. ಇತ್ತ ದಾವಣಗೆರೆಯಲ್ಲಿ ಕೇಕ್ ಮೇಳಗಳು ನಡೆದು ಹೊಸ ವರ್ಷಕ್ಕೆ ಮತ್ತಷ್ಟು ಮೆರಗು ತರುತ್ತಿವೆ.

    ದಾವಣಗೆರೆಯ ಎಸಿಸಿ ಬಿ ಬ್ಲಾಕ್‍ನ ಸ್ನೇಹ ಕೇಕ್ ಪ್ಯಾಲೇಸ್ ಹಾಗೂ ಪಿಬಿ ರಸ್ತೆಯಲ್ಲಿರುವ ಅಹಾರ್ 2000ನಲ್ಲಿ ಗ್ರಾಹಕರಿಗಾಗಿ ಕೇಕ್ ಮೇಳವನ್ನೇ ಆಯೋಜನೆ ಮಾಡಿದ್ದಾರೆ. ಸ್ನೇಹ ಕೇಕ್ ಪ್ಯಾಲೇಸ್‍ನಲ್ಲಿ ಐತಿಹಾಸಿಕ ಸಂತೇಬೆನ್ನೂರು ಪುಷ್ಕರಣಿ ವಿನ್ಯಾಸ ಎಲ್ಲರನ್ನು ಆಕರ್ಷಿಸುತ್ತಿದ್ದು, ಪುಷ್ಕರಣಿ ಮಾದರಿ ಕೇಕನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

    ಹೊಸ ವರ್ಷ ಸಂಭ್ರಮದಲ್ಲಿರುವ ಜನರಿಗೆ ಹೊಸತನವನ್ನ ಕೇಕಿನಲ್ಲೇ ನೀಡಬೇಕು ಎಂಬ ಉದ್ದೇಶದಿಂದ ಹೋಟೆಲ್ ಮಾಲೀಕ ಸಂತೇಬೆನ್ನೂರಿನ ಪುಷ್ಕರಣಿ ನಿರ್ಮಾಣದಲ್ಲಿ ಕೇಕ್ ತಯಾರು ಮಾಡಿದ್ದಾರೆ.

    ಕೇಕ್‍ಗೆ ಬಳಕೆ ಮಾಡಿದ ಸಾಮಗ್ರಿಗಳು:
    ಸುಮಾರು 4 ಅಡಿ ಎತ್ತರ, ಮೂರುವರೆ ಅಡಿ ಅಗಲ ಈ ಕೇಕ್ ಇದ್ದು, 250 ಕೆಜಿ ಐಶಿನ್ ಸಕ್ಕರೆ, ಐದು ಕೆಜಿ ಜಿಲೇಟಿಯನ್, 300 ಮೊಟ್ಟೆ, ಐದು ಕೆಜಿ ಗ್ಲೇಜ್ ಬಳಸಿ ಈ ಕೇಕ್ ತಯಾರು ಮಾಡಲಾಗಿದೆ. ಇದನ್ನು ತಯಾರು ಮಾಡಲು 15 ದಿನ ತೆಗೆದುಕೊಂಡಿದ್ದು, ಸಂತೇಬೆನ್ನೂರು ಐತಿಹಾಸಿಕ ಪುಷ್ಕರಣಿಯ ಕೇಕ್ ಕಲಾಕೃತಿಯನ್ನ ನೋಡಲು ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಜೊತೆಗೆ ಕೇಕ್ ಎದುರು ಫೋಟೋ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.

    ಈ ಪುಷ್ಕರಣಿಯ ಜೊತೆಗೆ ವೆಡ್ಡಿಗ್ ಕೇಕ್, ಬೇಬಿ ಡಾಲ್, ಗಿಟಾರ್, ವಿವಿಧ ಹಣ್ಣಿನ ಮಾದರೀಯ ಸಾವಿರಾರು ಕೇಕ್‍ಗಳನ್ನು ತಯಾರು ಮಾಡಲಾಗಿದ್ದು, ಜನರು ಕೇಕ್‍ಗಳ ಮಾದರಿಗಳನ್ನು ಕಣ್ ತುಂಬಿಕೊಳ್ಳುತ್ತಿದ್ದಾರೆ. ಐದು ದಿನಗಳ ಕಾಲ ಕೇಕ್ ಪ್ರದರ್ಶನಕ್ಕೆ ಇಡಲಾಗಿದ್ದು, ಇದನ್ನು ನೋಡಲು ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ಜನರು ಆಗಮಿಸಿ ಸಂತೇಬೆನ್ನೂರು ಪುಷ್ಕರಣಿಯ ಜೊತೆಯ ವಿವಿಧ ಕೇಕ್ ಮಾದರಿಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

  • ಹೊಸ ವರ್ಷಾಚರಣೆಗೆ ಗೋವಾ ಖಾಲಿ ಖಾಲಿ – ಬಿಕೋ ಎನ್ನುತ್ತಿದೆ ಬೀಚ್‌ಗಳು

    ಹೊಸ ವರ್ಷಾಚರಣೆಗೆ ಗೋವಾ ಖಾಲಿ ಖಾಲಿ – ಬಿಕೋ ಎನ್ನುತ್ತಿದೆ ಬೀಚ್‌ಗಳು

    ಕಾರವಾರ: ಪ್ರವಾಸಿಗರ ಸ್ವರ್ಗ ಗೋವಾ ಎಂದೇ ಪ್ರಸಿದ್ಧ. ಹಾಗೆಯೇ ಕರ್ನಾಟಕದ ಕರಾವಳಿ ಭಾಗದ ಉತ್ತರ ಕನ್ನಡ ಜಿಲ್ಲೆಯೂ ಪ್ರವಾಸೋದ್ಯಮಕ್ಕೆ ಪ್ರಸಿದ್ಧ. ಪ್ರತಿ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ರಜೆಯ ಮೋಜು ಅನುಭವಿಸಲು ಕರಾವಳಿ ತೀರಾ ಹಾಗೂ ಗೋವಾ ರಾಜ್ಯಕ್ಕೆ ದೇಶ ವಿದೇಶಿಗರು ಮುಗಿ ಬೀಳುತ್ತಿದ್ದರು. ಆದರೆ ಈ ವರ್ಷ ದೇಶ, ವಿದೇಶಿಗರ ಪ್ರವಾಸಿ ಸಂಖ್ಯೆ ಇಳಿಮುಖವಾಗಿದೆ.

    ಗೋವಾ ರಾಜ್ಯದಲ್ಲಿ ಹೊಸವರ್ಷದ ಸಂಭ್ರಮಾಚರಣೆಗೆ ದೇಶ ವಿದೇಶದ ಜನರು ಕಿಕ್ಕಿರಿದು ತುಂಬುತ್ತಿದ್ದರು. ಈ ವರ್ಷದ ಕ್ರಿಸ್‍ಮಸ್ ಆಚರಣೆಯ ಹಬ್ಬದಂದು ವಾರವಿಡೀ ಪ್ರವಾಸಿಗರ ನಿರೀಕ್ಷೆಯನ್ನು ಮಾಡಲಾಗಿತ್ತು. ಆದರೆ ನಿರೀಕ್ಷೆಯಂತೆ ಪ್ರವಾಸಿಗರು ಬರಲಿಲ್ಲ. ಕಳೆದ ಬಾರಿ ಹೋಲಿಸಿದರೆ ಈ ಬಾರಿ ಡಿಸೆಂಬರ್ ಅಂತ್ಯದಲ್ಲಿ ಪ್ರವಾಸಿಗರ ಆಗಮನದ ಸಂಖ್ಯೆ ಶೇ.50ರಷ್ಟು ಇಳಿಮುಖವಾಗಿದೆ.

    ಗೋವಾ ರಾಜ್ಯಕ್ಕೆ ಪ್ರತಿ ವರ್ಷ 6 ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ ಎಂದು ಗೋವಾ ರಾಜ್ಯದ ಪ್ರವಾಸೋಧ್ಯಮ ಇಲಾಖೆ ಹೇಳುತ್ತದೆ. ಈ ಬಾರಿ ಹೊಸ ವರ್ಷಾಚರಣೆಗೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ ಎಂಬುದರ ಬಗ್ಗೆ ಅಂಕಿ ಅಂಶ ಕಲೆ ಹಾಕಲಾಗಿದೆ. ಅದರ ಪ್ರಕಾರ ಈ ವರ್ಷದ ಡಿಸೆಂಬರ್ ನಲ್ಲಿ ಶೇ.50ರಷ್ಟು ಕಮ್ಮಿಯಾಗಿರುವ ಕುರಿತು ಮಾಹಿತಿ ನೀಡಿದೆ.

    ಗೋವಾ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳಲು ಕಾರಣಗಳು:
    ದೇಶದಲ್ಲಿ ಪ್ರತಿಭಟನೆ ಹೆಚ್ಚಾಗಿತ್ತು. ಜೊತೆಗೆ ಇಂದು ಗೋವಾದಲ್ಲಿ ಮಹದಾಯಿ ಹೋರಾಟ ಪ್ರತಿಭಟನೆ ದೊಡ್ಡ ಮಟ್ಟದಲ್ಲಿ ನಡೆಸಲು ಅಲ್ಲಿನ ಸಂಘಟನೆಗಳು ಕರೆಕೊಟ್ಟಿದ್ದರು. ಇದರ ಜೊತೆ ದೇಶ ವಿದೇಶದಿಂದ ಪ್ರವಾಸಿಗರನ್ನು ಕರೆ ತರುತ್ತಿದ್ದ ಪ್ರವಾಸೋಧ್ಯಮ ಕಂಪನಿಗಳು ಆರ್ಥಿಕ ಸಂಕಟದಿಂದ ಮುಚ್ಚಿರುವುದು ಕೂಡ ಗೋವಾ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ.

    ನೆರೆಯ ಗೋವಾಕ್ಕೆ ಹೋಲಿಸಿದರೆ ಕರ್ನಾಟಕದ ಕರಾವಳಿ ಭಾಗ ಅಲ್ಪ ಮಟ್ಟಿಗೆ ಖುಷಿ ಪಡಬಹುದು. ಉತ್ತರ ಕನ್ನಡ ಜಿಲ್ಲೆ ಗೋವಾ ರಾಜ್ಯವನ್ನು ಅಂಟಿಕೊಂಡಿದೆ. ಹೀಗಾಗಿ ಗೋವಾಕ್ಕೆ ಪ್ರತಿ ವರ್ಷ ಹೊಸ ವರ್ಷಾಚರಣೆ ಮಾಡುವ ಪ್ರವಾಸಿಗರು ಇಲ್ಲಿನ ಗೋಕರ್ಣ, ಕಾರವಾರ, ಮುರಡೇಶ್ವರದತ್ತ ಮುಖ ಮಾಡುತ್ತಾರೆ. ಈ ಬಾರಿ ಕಳೆದ ಬಾರಿಗಿಂತ ಇಳಿಮುಖವಾಗಿದ್ದು, ಜನರಲ್ಲಿ ಆಸಕ್ತಿ ಕಡಿಮೆ ಮಾಡಿದೆ. 2018ರ ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಪ್ರಕಾರ, ದೇಶಿಯರ ಪ್ರವಾಸಿಗರ ಸಂಖ್ಯೆ 6,10,994, ವಿದೇಶಿಗರ ಪ್ರವಾಸಿಗರು -2023 ಒಟ್ಟು 6,13,016 ಲಕ್ಷ ಜನ ಡಿಸೆಂಬರ್ ತಿಂಗಳಲ್ಲಿ ಭೇಟಿ ನೀಡಿದ್ದಾರೆ. ಆದರೆ 2019ರ ಪ್ರಕಾರ ದೇಶಿಯ ಪ್ರವಾಸಿಗರು – 5,21,880 ವಿದೇಶಿಯ ಪ್ರವಾಸಿಗರು 3839, ಒಟ್ಟು 5,25,719 ಇದ್ದು ಈ ಬಾರಿ ಇಳಿಮುಖವಾಗಿದೆ.

    ವಿದೇಶಿ ಪ್ರವಾಸಿಗರಲ್ಲಿ ಏರಿಕೆ
    ಕಳೆದ ಬಾರಿ ಹೋಲಿಸಿದರೆ ಈ ಬಾರಿ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. 2018 ಡಿಸೆಂಬರ್ ರಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳವಾದ ಗೋಕರ್ಣಕ್ಕೆ 836, ಓಂ ಬೀಚ್ 625, ಮುರಡೇಶ್ವರ 395, ಕಾರವಾರ ಕಡಲ ತೀರ 94 ಜನ ಭೇಟಿ ನೀಡಿದ್ದು, ಒಟ್ಟು ವಿದೇಶಿ ಪ್ರವಾಸಿಗರು 2023 ಆಗಿದೆ. 2019 ಡಿಸೆಂಬರ್ ನಲ್ಲಿ ಗೋಕರ್ಣಕ್ಕೆ 2568, ಓಂ ಬೀಚ್ 650, ಮುರಡೇಶ್ವರ 347, ಕಾರವಾರ 100, ಕಾಸರಕೋಡು ಬೀಚ್ 150 ಒಟ್ಟು ವಿದೇಶಿಯ ಪ್ರವಾಸಿಗರು 3839 ಆಗಿದ್ದು, ಕಳೆದ ಬಾರಿಗಿಂತ ಈ ಬಾರಿ ಏರಿಕೆ ಕಂಡಿದೆ.

    ಹೊಸ ವರ್ಷಕ್ಕಿಲ್ಲ ಸೆಲಬ್ರೇಷನ್:
    ಕಳೆದ ವರ್ಷ ದೊಡ್ಡ ದೊಡ್ಡ ಪಾರ್ಟಿಯನ್ನು ಆಯೋಜನೆ ಮಾಡುವ ಮೂಲಕ ಹೊಸ ವರ್ಷಾಚರಣೆಯನ್ನು ವಿಜ್ರಂಭಣೆಯಿಂದ ಆಚರಣೆ ಮಾಡಲಾಗಿತ್ತು. ಇದಕ್ಕಾಗಿ ಖಾಸಗಿ ಹೋಟಲ್, ರೆಸಾರ್ಟ್ ಗಳಲ್ಲಿ ಮ್ಯೂಸಿಕಲ್ ಪಾರ್ಟಿ ಸಹ ಇರುತ್ತಿತ್ತು. ಆದರೆ ಕೇಂದ್ರ ಸರ್ಕಾರದ ಜಿ.ಎಸ್‍ಟಿ ಹಾಗೂ ಮನೋರಂಜನಾ ಶುಲ್ಕ ಆಯೋಜಕರಿಗೆ ದುಬಾರಿಯಾಗಿದ್ದು, ಇದರ ಜೊತೆ ಪ್ರವಾಹದಿಂದ ಜಿಲ್ಲೆಗೆ ಆದ ಹಾನಿಗಳಿಂದ ಜನರಲ್ಲಿ ಆರ್ಥಿಕ ಸಮಸ್ಯೆ ಉಂಟಾಗಿದೆ. ಈ ಕಾರಣದಿಂದ ಕಾರವಾರದಲ್ಲಿ ಕೇವಲ ಒಂದು ಹೋಟೆಲ್, ಗೋಕರ್ಣದಲ್ಲಿ ಒಂದು ರೆಸಾರ್ಟ್ ಹೊರತುಪಡಿಸಿ ಉಳಿದ ಭಾಗದಲ್ಲಿ ಹೊಸ ವರ್ಷಾಚರಣೆಯ ಕಾರ್ಯಕ್ರಮಗಳು ಆಯೋಜನೆ ಗೊಂಡಿಲ್ಲ. ಒಟ್ಟಿನಲ್ಲಿ ಈ ವರ್ಷದ ಹೊಸ ವರ್ಷಾಚರಣೆ ಪ್ರವಾಸಿಗರ ಸ್ವರ್ಗದ ನಾಡಿನಲ್ಲಿ ಬಿಕೋ ಎನ್ನಿಸುತ್ತಿದ್ದು, ಹೊಸ ವರ್ಷವನ್ನು ಬರಮಾಡಿಕೊಳ್ಳುವ ಉತ್ಸುಕತೆ ಜನರಲ್ಲಿ ಅಷ್ಟಾಗಿ ಕಾಣುತ್ತಿಲ್ಲ.

  • ಹೊರ ಜಿಲ್ಲೆ, ರಾಜ್ಯಕ್ಕೆ ಹೋಗ್ತಿರೋ ಕಾಫಿನಾಡಿಗರು

    ಹೊರ ಜಿಲ್ಲೆ, ರಾಜ್ಯಕ್ಕೆ ಹೋಗ್ತಿರೋ ಕಾಫಿನಾಡಿಗರು

    ಚಿಕ್ಕಮಗಳೂರು: ಹೊಸ ವರ್ಷ ಆಚರಣೆಗೆ ಕಾಫಿನಾಡು ಈಗಾಗಲೇ ಸನ್ನದ್ಧವಾಗಿದೆ. ಹೊಸ ವರ್ಷವನ್ನು ವೆಲ್‍ಕಮ್ ಹೇಳಲು ಕಾಫಿನಾಡಿಗರು ಹೊರ ಜಿಲ್ಲೆ-ರಾಜ್ಯಕ್ಕೆ ಹೋಗುತ್ತಿದ್ದಾರೆ. ಹೊರರಾಜ್ಯ ಹಾಗೂ ಜಿಲ್ಲೆಯವರು ಕಾಫಿನಾಡಿನಲ್ಲಿ ಜಮಾಯಿಸಿದ್ದಾರೆ. ಆದರೆ ಪೊಲೀಸ್ ಇಲಾಖೆ ಹೊಸ ವರ್ಷ ಆಚರಣೆಗೆ ಚಿಕ್ಕಮಗಳೂರಿಗೆ ಬರೋ ಪ್ರವಾಸಿಗರಿಗೆ ಹಾಗೂ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

    ಪೊಲೀಸ್ ಇಲಾಖೆ ಪ್ರವಾಸಿಗರಿಗೆ ನೀಡಿರುವ ಸೂಚನೆಗಳು:
    ಸವಾರರು ಪಾನಮತ್ತರಾಗಿ ವಾಹನ ಚಲಾಯಿಸುವಂತಿಲ್ಲ. ಅಲ್ಲದೇ ಏಕಾಂಗಿಯಾಗಿ ಅಥವಾ ಸಣ್ಣ ಗುಂಪುಗಳಾಗಿ ಪ್ರತ್ಯೇಕ ಸ್ಥಳಗಳಿಗೆ ಹಾಗೂ ಎಲ್ಲೆಂದರಲ್ಲಿ ಹೋಗುವಂತಿಲ್ಲ. ಇನ್ನೂ ನೋಂದಾಯಿಸದೇ ಇರುವ ಸ್ಥಳ, ಅಂಗಡಿ ಅಥವಾ ವ್ಯಕ್ತಿಗಳಿಂದ ಮದ್ಯವನ್ನ ಖರೀದಿಸಬೇಡಿ ಎಂದು ಸೂಚಿಸಿದೆ.

    ಅಕ್ರಮ ಹಾಗೂ ಮಾದಕ ವಸ್ತುಗಳ ಬಳಕೆಯ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಅಂತಹ ವಸ್ತುಗಳ ಬಳಕೆದಾರರಾಗಲಿ ಅಥವಾ ಮಾರಾಟಗಾರರು ಕಂಡು ಬಂದಲ್ಲಿ ಅವರ ವಿರುದ್ಧ ತಕ್ಷಣ ಬಂಧಿಸಿ ಕಾನೂನು ಕ್ರಮ ಜರುಗಿಸೋದಾಗಿ ಎಚ್ಚರಿಸಿದ್ದಾರೆ. ಅಲ್ಲದೇ ರಸ್ತೆಗಳಲ್ಲಿ ಕುಡಿದು ಗಲಾಟೆ ಮಾಡೋದಾಗಲಿ, ಅವ್ಯವಸ್ಥೆ ಮಾಡೋದು ಕಂಡು ಬಂದಲ್ಲಿ ಅಥವಾ ವೇಗವಾಗಿ ವಾಹನಗಳನ್ನ ಓಡಿಸಿದರೆ ಅಂತಹ ವಾಹನಗಳನ್ನ ವಶಪಡಿಸಿಕೊಂಡು ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.

    ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಮಾಲೀಕರಿಗೆ ನೀಡಿರೋ ಸೂಚನೆಗಳು:
    ಅನುಮತಿ ನೀಡಿರುವ ಸಮಯವನ್ನ ಮೀರಿ ಮದ್ಯ ಮಾರಾಟ ಮಾಡೋದಾದರೆ ಎಲ್ಲಾ ಸಂಸ್ಥೆಗಳು ಅಬಕಾರಿ ಹಾಗೂ ಪೊಲೀಸ್ ಇಲಾಖೆಯಿಂದ ಸೂಕ್ತವಾದ ಅನುಮತಿ ಪಡೆದಿರಬೇಕು. ಅನುಮತಿ ನೀಡಿದ ಸಮಯ ಬಿಟ್ಟು ಹೊರಾಂಗಣ ಅಥವಾ ಒಳಾಂಗಣದಲ್ಲಾಗಲಿ ಲೌಡ್‍ಸ್ಪೀಕರ್ ಹಾಗೂ ಡಿ.ಜೆ.ಗಳನ್ನ ಬಳಸುವಂತಿಲ್ಲ. ಒಂದು ವೇಳೆ ಬಳಸೋದಾದರೆ ಅನುಮತಿ ಕಡ್ಡಾಯ.

    ಹೋಂಸ್ಟೇಗಳು ಕೂಡ ವಾಣಿಜ್ಯೇತರ ಸಂಸ್ಥೆಗಳಾಗಿವೆ. ಆದ್ದರಿಂದ ಅನುಮತಿಯ ಸಮಯವನ್ನ ಮೀರಿ ಹೋಂಸ್ಟೇಗಳ ಹೊರಾಂಗಣದಲ್ಲಿ ಲೌಡ್ ಸ್ಪೀಕರ್ ಹಾಗೂ ಡಿ.ಜೆಗಳ ಬಳಕೆಗೆ ಅನುಮತಿ ಇಲ್ಲ. ಹೋಂಸ್ಟೇಗಳಲ್ಲಿ ಬಾರ್ ಹಾಗೂ ಮದ್ಯ ಮಾರಾಟಕ್ಕೆ ತಾತ್ಕಾಲಿಕ ಅಥವಾ ಶಾಶ್ವತವಾಗಿ ಅನುಮತಿ ಇಲ್ಲ. ಹೋಂಸ್ಟೇಗಳಿಗೆ ಸಂಬಂಧಿಸಿದ ಯಾರೇ ಆದರು ಮದ್ಯವನ್ನ ಮಾರಾಟ ಮಾಡುವುದು ಕಂಡು ಬಂದರೆ ಅವರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಡಿ ಕ್ರಮ ಕೈಗೊಳ್ಳುತ್ತದೆ.

    ಸಾರ್ವಜನಿಕ ಸ್ಥಳಗಳಲ್ಲಿ ಹೊರಾಂಗಣ ಚಟುವಟಿಕೆಗಳನ್ನ ಆಯೋಜಿಸಲು ಪೊಲೀಸ್ ಹಾಗೂ ನಗರಗಳಲ್ಲಿ ನಗರಸಭೆ ಅನುಮತಿಯನ್ನ ಕಡ್ಡಾಯವಾಗಿ ಪಡೆದಿರಬೇಕು. ಪ್ರವಾಸಿಗರು ತಮ್ಮ ವಾಹನಗಳನ್ನ ಎಲ್ಲೆಂದರಲ್ಲಿ, ಹೇಗಂದರೆ ಹಾಗೆ ಅಪಾಯಕಾರಿಯಾಗಿ ಪಾರ್ಕ್ ಮಾಡುವಂತಿಲ್ಲ. ಸಂಸ್ಥೆಗಳು ಅವರ ನಿರೀಕ್ಷಿತ ಜನಸಂದಣಿಗೆ ಅನುಗುಣವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಇದರಿಂದ ಟ್ರಾಫಿಕ್ ಜಾಮ್ ಆದರೆ ಸಂಬಂಧಪಟ್ಟ ಸಂಸ್ಥೆಗಳು ಸಮಾನ ಹೊಣೆ ಹೊರಬೇಕಾಗುತ್ತೆ.

    ಹೊಸ ವರ್ಷದ ಆಚರಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಪ್ರವಾಸಿಗರು ಹಾಗೂ ಹೊಸ ವರ್ಷದ ಆಚರಣೆಗೆ ಕಾಫಿನಾಡಿಗೆ ಬರೋರ ಸ್ವಾತಂತ್ರಕ್ಕೂ ಧಕ್ಕೆಯಾಗದಂತೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡಿದೆ.

  • ನ್ಯೂ ಇಯರ್ ನೆಪದಲ್ಲಿ ಅನೈತಿಕ ಚಟುವಟಿಕೆ ಮಾಡಿದ್ರೆ ನಿರ್ದಾಕ್ಷಿಣ್ಯ ಕ್ರಮ – ಪೊಲೀಸ್ ಆಯುಕ್ತರ ಎಚ್ಚರಿಕೆ

    ನ್ಯೂ ಇಯರ್ ನೆಪದಲ್ಲಿ ಅನೈತಿಕ ಚಟುವಟಿಕೆ ಮಾಡಿದ್ರೆ ನಿರ್ದಾಕ್ಷಿಣ್ಯ ಕ್ರಮ – ಪೊಲೀಸ್ ಆಯುಕ್ತರ ಎಚ್ಚರಿಕೆ

    ಹುಬ್ಬಳ್ಳಿ: ಹೊಸ ವರ್ಷಾಚರಣೆ ಹೆಸರಲ್ಲಿ ಅನೈತಿಕ ವರ್ತನೆ ಕಂಡು ಬಂದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಆರ್.ದಿಲೀಪ್ ಎಚ್ಚರಿಕೆ ನೀಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಹೊಸ ವರ್ಷವನ್ನು ಸಂತೋಷದಿಂದ ಆಚರಣೆ ಮಾಡುವ ಮೂಲಕ ಯಾವುದೇ ಅವಘಡ ಸಂಭವಿಸದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಯಾವುದೇ ಸಂಘಟನೆಗಳ ಹೆಸರಲ್ಲಿ ಸಾರ್ವಜನಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಹುಬ್ಬಳ್ಳಿ-ಧಾರವಾಡ ಮಹಾನಗರದ ಎಲ್ಲ ಹೋಟೆಲ್ ಹಾಗೂ ರೆಸ್ಟೋರೆಂಟುಗಳಿಗೂ ಮಾಹಿತಿ ನೀಡಲಾಗಿದ್ದು, ಬೌನ್ಸರ್ ಹಾಗೂ ನೈಟ್ ವಿಷನ್ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಸೂಚಿಸಲಾಗಿದೆ. ಗಾಂಜಾ ಅಫೀಮು ಹಾಗೂ ಇತರ ಮಾದಕ ವಸ್ತುಗಳ ಸೇವನೆ ಅವಕಾಶ ನೀಡಿದರೆ ಅಂತಹ ಹೋಟೆಲ್ ಹಾಗೂ ರೆಸ್ಟೋರೆಂಟ್ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಯಾವುದೇ ಸಂದರ್ಭದಲ್ಲಿ ಅವಘಡ ಸಂಭವಿಸಿದರೂ ಪೊಲೀಸರಿಗೆ ಮಾಹಿತಿ ನೀಡಬೇಕು. ಹೆಸರು ಕೆಡುತ್ತದೆ ಎಂದು ಹೋಟೆಲ್ ಹಾಗೂ ರೆಸ್ಟೋರೆಂಟುಗಳು ಘಟನೆ ಮರೆಮಾಚಲು ಪ್ರಯತ್ನಿಸಬಾರದು ಎಂದು ಸೂಚನೆ ನೀಡಿದರು.

    ಹೊಸ ವರ್ಷ ಹರ್ಷದಿಂದ ಕೂಡಿರಲಿ, ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಬೇಡಿ. ಅಲ್ಲದೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದ ವೇಳೆ ಸಾರ್ವಜನಿಕರು ಪೊಲೀಸ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಬಾರದು. ಬಾರ್ ಮತ್ತು ರೆಸ್ಟೋರೆಂಟುಗಳು ಸ್ಪೇರ್ ಆ್ಯಂಡ್ ಕ್ಯಾಬ್ ವ್ಯವಸ್ಥೆ ಮಾಡುವ ಮೂಲಕ ಕುಡಿದ ಅಮಲಿನಲ್ಲಿರುವ ಗ್ರಾಹಕರನ್ನು ಮನೆಗೆ ಕಳುಹಿಸುವ ಕಾರ್ಯ ಮಾಡಬೇಕು. ಒಂದು ವೇಳೆ ಸಾಧ್ಯವಾಗದಿದ್ದರೆ ಪೊಲೀಸರ ಗಮನಕ್ಕೆ ತರಬೇಕು. ಹೊಸ ವರ್ಷದ ಆಚರಣೆಯನ್ನು ಸಂತೋಷದಿಂದ ಹಾಗೂ ಶಾಂತಿ ಸುವ್ಯವಸ್ಥೆಯಿಂದ ಆಚರಿಸಬೇಕು ಎಂದು ತಿಳಿಸಿದರು.

  • ಹೊಸ ವರ್ಷಾಚರಣೆ – ರಕ್ಷಣೆಗೆ ಆರೋಗ್ಯ ಕವಚ ಅಂಬುಲೆನ್ಸ್ ಸನ್ನದ್ಧ

    ಹೊಸ ವರ್ಷಾಚರಣೆ – ರಕ್ಷಣೆಗೆ ಆರೋಗ್ಯ ಕವಚ ಅಂಬುಲೆನ್ಸ್ ಸನ್ನದ್ಧ

    ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆ ವೇಳೆ ರಸ್ತೆ ಅಪಘಾತ ಸೇರಿದಂತೆ ಇತರೆ ಅವಘಡಗಳು ಸಂಭವಿಸಬಹುದು ಎಂಬ ಉದ್ದೇಶದಿಂದ ಮುನ್ನಚ್ಚರಿಕಾ ಕ್ರಮವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ 108 ಸಿಬ್ಬಂದಿ ಸನ್ನದ್ಧರಾಗಿದ್ದಾರೆ.

    ಜಿಲ್ಲೆಯ 16 ಆರೋಗ್ಯ ಕವಚ ಅಂಬುಲೆನ್ಸ್ ಗಳು ಸೇವೆಗೆ ಸಿದ್ಧವಾಗಿದ್ದು, ಸಿಬ್ಬಂದಿ ಸಹ ಜನರ ಸೇವೆಗೆ ನಾವಿದ್ದೇವೆ ಅಂತಿದ್ದಾರೆ. ಹೊಸ ವರ್ಷಾಚರಣೆ ವೇಳೆ ಉಳಿದ ದಿನಕ್ಕಿಂತ ಶೇ.30 ರಿಂದ 35 ರಷ್ಟು ಹೆಚ್ಚಿನ ಅಪಘಾತ ಸಂಭವಿಸುತ್ತವೆ ಎಂದು ಹಿಂದಿನ ಅಂಕಿ ಅಂಶಗಳಿಂದ ಋಜುವಾತಾಗಿದೆ. ಹೀಗಾಗಿ ಹೊಸ ವರ್ಷಾಚರಣೆ ವೇಳೆ ಸಂಭವಿಸುವ ರಸ್ತೆ ಅಪಘಾತಗಳಿಂದ ಉಂಟಾಗುವ ಪ್ರಾಣ ಹಾನಿಯನ್ನು ತಪ್ಪಿಸಲು 108 ಆರೋಗ್ಯ ಕವಚ ಸೇವೆ ಸನ್ನದ್ಧಗೊಂಡಿದೆ.

    ಹೊಸ ವರ್ಷಾಚರಣೆ ನಡೆಯುವ ಸ್ಥಳ ಹಾಗೂ ಪ್ರಮುಖವಾಗಿ ಆಕ್ಸಿಡೆಂಟಲ್ ಜೋನ್ ಸೇರಿದಂತೆ ಹೈವೇಗಳಲ್ಲಿ ಹೆಚ್ಚುವರಿ ಅಂಬುಲೆನ್ಸ್ ಗಳನ್ನು ನಿಯೋಜನೆ ಮಾಡಲಾಗುತ್ತದೆ. ಹೆಚ್ಚುವರಿ ಸೇವೆಗಾಗಿ 108 ಅಂಬುಲೆನ್ಸ್ ಸಿಬ್ಬಂದಿಗಳು ಹೆಚ್ಚಿನ ಕೆಲಸ ಮಾಡುವಂತೆ ಪ್ರೇರೇಪಿಸಿ, ಕಾಲ್ ಸೆಂಟರ್ ಹಾಗೂ ಇತರೆ ಸಿಬ್ಬಂದಿಯ ರಜೆಗಳನ್ನು ಸಹ ರದ್ದುಗೊಳಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ಜಿಲ್ಲೆಯ ನಂದಿ ಗಿರಿಧಾಮ ತಪ್ಪಲು ಸೇರಿದಂತೆ ಪ್ರಸಿದ್ಧ ಪ್ರವಾಸಿ ತಾಣಗಳು ಹಾಗೂ ಅಪಘಾತ ನಡೆಯುಬಹುದಾದ ರಸ್ತೆಗಳ ಬಳಿ ಅಂಬುಲೆನ್ಸ್ ಗಳನ್ನ ನಿಯೋಜಿಸಲಾಗುವುದು. ಸಾರ್ವಜನಿಕರು ಯಾವುದೇ ತುರ್ತು ಸಂದರ್ಭಸಲ್ಲಿ ಟೋಲ್ ಫ್ರೀ ನಂಬರ್ 108 ಗೆ ಕರೆ ಮಾಡುವಂತೆ ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಕವಚ ಸೇವೆಯ 108 ಅಂಬುಲೆನ್ಸ್‍ಗಳ ಜಿಲ್ಲಾ ವ್ಯವಸ್ಥಾಪಕ ಕಪಿಲ್ ತಿಳಿಸಿದ್ದಾರೆ.

  • ಕಾವೇರಿ ತೀರದಲ್ಲಿ ಮೋಜು ಮಸ್ತಿ ಬಂದ್ – 2 ದಿನ 144 ಸೆಕ್ಷನ್ ಜಾರಿ

    ಕಾವೇರಿ ತೀರದಲ್ಲಿ ಮೋಜು ಮಸ್ತಿ ಬಂದ್ – 2 ದಿನ 144 ಸೆಕ್ಷನ್ ಜಾರಿ

    -ಯುವಕ, ಯುವತಿಯರ ಅಸಭ್ಯ ವರ್ತನೆ ತಡೆಯಲು

    ಮಂಡ್ಯ: ಹೊಸ ವರ್ಷದ ಸಂಭ್ರಮಾಚರಣೆಯನ್ನು ಕಾವೇರಿ ನದಿ ತೀರದಲ್ಲಿ ಫುಲ್ ಮೋಜು ಮಸ್ತಿ ಮೂಲಕ ಎಂಜಾಯ್ ಮಾಡಬೇಕು ಅಂದುಕೊಂಡಿದ್ದ ಜನರಿಗೆ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಶಾಕ್ ನೀಡಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕಾವೇರಿ ನದಿ ತೀರದ ಪ್ರವಾಸಿ ಸ್ಥಳ ಸೇರಿದಂತೆ ಮಂಡ್ಯ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಮಂಡ್ಯ ಎಸ್‍ಪಿ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

    ಡಿಸಂಬರ್ 31 ಮತ್ತು ಜನವರಿ 01ಕ್ಕೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾವೇರಿ ನದಿ ತೀರದಲ್ಲಿ ಬರುವ ಪ್ರವಾಸಿ ಸ್ಥಳಗಳು, ಮಳವಳ್ಳಿ ತಾಲೂಕಿನ ಪ್ರವಾಸಿ ಸ್ಥಳಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶ್ರೀರಂಗಪಟ್ಟಣದ ಬಲಮುರಿ, ಎಡಮುರಿ, ಸಂಗಮ, ಕರಿಘಟ್ಟ ಸೇರಿದಂತೆ ಇನ್ನಿತರ ಕಾವೇರಿ ಜಲಾನಯನ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿ ಮಾಡುವ ಮೂಲಕ ಹೊಸ ವರ್ಷದ ಮೋಜು ಮಸ್ತಿಗೆ ಬ್ರೇಕ್ ಹಾಕಲಾಗಿದೆ. ಇದಲ್ಲದೇ ಮಳವಳ್ಳಿ ತಾಲೂಕಿನ ಮುತ್ತತ್ತಿಗೂ ಸಹ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ಪ್ರಮುಖವಾಗಿ ಕಾವೇರಿ ತೀರದಲ್ಲಿ ನಿಷೇಧಾಜ್ಞೆ:
    ಮಂಡ್ಯ ಜಿಲ್ಲೆ ಎಂದರೆ ಕಾವೇರಿ ನದಿ ತೀರದ ಜಿಲ್ಲೆ ಎಂದು ರಾಜ್ಯದಲ್ಲಿ ಹೆಸರುವಾಸಿ ಪಡೆದಿದೆ. ಕಾವೇರಿ ತೀರದಲ್ಲಿ ಹಲವು ರಮಣೀಯವಾದ ಪ್ರವಾಸಿ ಸ್ಥಳಗಳು ಇವೆ. ಈ ನಿಟ್ಟಿನಲ್ಲಿ ಪ್ರತಿನಿತ್ಯ ಈ ಭಾಗಕ್ಕೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಾರೆ. ಅದರಲ್ಲೂ ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಅಪಾರ ಜನರು ಬಂದು ಮೋಜು ಮಸ್ತಿ ಮಾಡುತ್ತಾರೆ. ಇಲ್ಲೆ ಮಂಸಾಹಾರವನ್ನು ತಯಾರು ಮಾಡಿಕೊಂಡು ಮದ್ಯಪಾನ ಸೇವನೆ ಮಾಡಿಕೊಂಡು ಫುಲ್ ಎಂಜಾಯ್ ಮಾಡ್ತಾರೆ. ಈ ವೇಳೆ ಈ ಭಾಗದಲ್ಲಿ ಸಾಕಷ್ಟು ಅವಘಡಗಳು ಸಹ ಜರುಗಿವೆ. ಅಲ್ಲದೆ ಸಾರ್ವಜನಿಕರಿಗೂ ಕಿರಿಕಿರಿ ಉಂಟಾಗುತ್ತದೆ. 2013 ರಿಂದ 2019ನೇ ಸಾಲಿನ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಸುಮಾರು 55 ಮಂದಿ ಇಲ್ಲಿ ಸಾವನ್ನಪ್ಪಿದ್ದಾರೆ. ಈ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಎಸ್‍ಪಿ ಪರಶುರಾಮ್ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

    ಅಸಭ್ಯ ವರ್ತನೆ ತಡೆಯುವ ಉದ್ದೇಶ:
    ಇತ್ತೀಚಿಗೆ ದೇಶದ ಹಲವು ಭಾಗದಲ್ಲಿ ಸಾರ್ವಜನಿಕ ಸ್ಥಳಗಳಲ್ಲೇ ಯುವಕ ಯುವತಿಯರು ಅಸಭ್ಯವಾಗಿ ವರ್ತನೆ ಮಾಡುವಂತಹ ಘಟನೆಗಳು ಬೆಳಕಿಗೆ ಬರುತ್ತಿವೆ. ಅದೇ ರೀತಿ ಕಾವೇರಿ ನದಿ ತೀರದ ಪ್ರದೇಶಗಳಲ್ಲೂ ಸಹ ಯುವಕ ಯುವತಿಯರು ಅಸಭ್ಯವಾಗಿ ವರ್ತನೆ ಮಾಡುತ್ತಿರುವುದು ಬೆಳಕಿಗೆ ಬರುತ್ತಿದೆ. ಈ ಒಂದು ಘಟನೆಗಳನ್ನು ತಡೆಯುವುದು ಪೊಲೀಸ್ ಇಲಾಖೆಯ ಉದ್ದೇಶವಾಗಿದೆ.

    ಪೇಜಾವರ ಶ್ರೀಗಳ ಶೋಕಾಚರಣೆ:
    ರಾಜ್ಯದಲ್ಲಿ ಮೂರು ದಿನಗಳ ಕಾಲ ಪೇಜಾವರ ಶ್ರೀಗಳ ನಿಧನ ಹಿನ್ನೆಲೆ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯಾದ್ಯಾಂತ ಹೊಸ ವರ್ಷ ಸಂಭ್ರಮಾಚರಣೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡುವಂತಿಲ್ಲ. ಅತೀ ಹೆಚ್ಚು ಸೌಂಡ್‍ ಕೊಟ್ಟುಕೊಂಡು ಧ್ವನಿ ವರ್ಧಕಗಳನ್ನು ಸಹ ಬಳಸಿಕೊಳ್ಳುವ ಹಾಗೆ ಇಲ್ಲ. ಸರಳವಾಗಿ ಸಂಭ್ರಮಾಚರಣೆ ಆಚರಣೆ ಮಾಡಬೇಕೆಂದು ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಹೇಳಿದ್ದಾರೆ.

  • ಮಧ್ಯರಾತ್ರಿ 2 ಗಂಟೆಯವರೆಗೆ ಪಾರ್ಟಿ – ಹೊಸ ವರ್ಷದಂದು ನೈಟ್ ಲೈಫ್ ವಿಸ್ತರಣೆ

    ಮಧ್ಯರಾತ್ರಿ 2 ಗಂಟೆಯವರೆಗೆ ಪಾರ್ಟಿ – ಹೊಸ ವರ್ಷದಂದು ನೈಟ್ ಲೈಫ್ ವಿಸ್ತರಣೆ

    ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ತುದಿಗಾಲಲ್ಲಿ ನಿಂತಿರುವ ಸಿಲಿಕಾನ್ ಸಿಟಿ ಮಂದಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಗುಡ್ ನ್ಯೂಸ್ ನೀಡಿದ್ದಾರೆ.

    ಪಾರ್ಟಿ ಪ್ರಿಯರಿಗೆ ಪೊಲೀಸ್ ಆಯುಕ್ತರು ಗುಡ್ ನ್ಯೂಸ್ ನೀಡಿದ್ದು, ಹೊಸ ವರ್ಷದ ದಿನ ಮಧ್ಯರಾತ್ರಿ ಎರಡು ಗಂಟೆಯವರೆಗೆ ನೈಟ್ ಲೈಫ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಹೊಸ ವರ್ಷದ ದಿನದಂದು ಬಾರ್, ಪಬ್ ರೆಸ್ಟೊರೆಂಟ್, ಹೋಟೆಲುಗಳ ವ್ಯಾಪಾರದ ಸಮಯವನ್ನು ಮಧ್ಯರಾತ್ರಿ ಎರಡು ಗಂಟೆಯವರೆಗೆ ವಿಸ್ತರಿಸಿದ್ದಾರೆ.

    ಪ್ರತಿ ದಿನ ರಾತ್ರಿ ಒಂದು ಗಂಟೆಗೆ ಮುಚ್ಚುತ್ತಿದ್ದ ನೈಟ್ ಲೈಫ್ ಅವಧಿ, 31ರ ರಾತ್ರಿ ಒಂದು ಗಂಟೆ ವಿಸ್ತರಣೆಯಾಗಿದ್ದು, ರಾತ್ರಿ 2 ಗಂಟೆಯವರೆಗೆ ಎಂಜಾಯ್ ಮಾಡಬಹುದಾಗಿದೆ. ಪಾರ್ಟಿ ಪ್ರಿಯರು ಯಾವುದೇ ಭಯ ಆತಂಕವಿಲ್ಲದೆ, ಎರಡು ಗಂಟೆಯವರೆಗೆ ಪಾರ್ಟಿ ನಡೆಸಬಹುದಾಗಿದೆ.

    ಮೆಟ್ರೋ ಅವಧಿ ವಿಸ್ತರಣೆ
    ಹೊಸ ವರ್ಷ ಆಚರಣೆ ಹಿನ್ನೆಲೆ ಡಿ.31ರಂದು ಮಧ್ಯರಾತ್ರಿ 2ಗಂಟೆಯವರೆಗೂ ಮೆಟ್ರೋ ಸೇವೆ ವಿಸ್ತರಿಸಲು ಬಿಎಂಆರ್ ಸಿಎಲ್ ನಿರ್ಧರಿಸಿದ್ದು, ಪಾರ್ಟಿ ಮುಗಿಸಿ ಮೆಟ್ರೋದಲ್ಲಿ ಮನೆಗೆ ತೆರಳಬಹುದಾಗಿದೆ.

    ಡಿಸೆಂಬರ್ 31ರಂದು ಮಧ್ಯರಾತ್ರಿ 2ಗಂಟೆ ವರೆಗೂ ಮೆಟ್ರೋ ಸಂಚರಿಸಲಿದೆ. ಇದರ ಜೊತೆಗೆ ಬಂಪರ್ ಕೊಡುಗೆಯನ್ನು ಸಹ ನೀಡಿದ್ದು, 50 ರೂ. ಮೇಲ್ಪಟ್ಟು ಟಿಕೆಟ್ ಖರೀದಿಸಿದರೆ ಯಾವುದೇ ನಿಲ್ದಾಣದಲ್ಲಿ ಹತ್ತಿ ಯಾವುದೇ ನಿಲ್ದಾಣದಲ್ಲಿ ಇಳಿಯಬಹುದಾಗಿದೆ. ಇದರ ಜೊತೆಗೆ ಷರತ್ತನ್ನು ಸಹ ವಿಧಿಸಿದ್ದು, ಕುಡಿದು ಪ್ರಯಾಣಿಸುವವರಿಗೆ ಎಚ್ಚರಿಕೆ ನೀಡಿದೆ. ಕುಡಿದು ಅಸಭ್ಯವಾಗಿ ವರ್ತಿಸಿದರೆ ಮೆಟ್ರೋದಿಂದ ಕಿಕ್ ಔಟ್ ಮಾಡುವುದಾಗಿ ಬಿಎಂಆರ್‍ಸಿಎಲ್ ತಿಳಿಸಿದೆ.

  • ಹೊಸ ವರ್ಷದ ಸ್ವಾಗತಕ್ಕೆ 800 ಕೆಜಿಯಲ್ಲಿ ಸಿದ್ಧವಾಯ್ತು 1000 ಕೇಕ್

    ಹೊಸ ವರ್ಷದ ಸ್ವಾಗತಕ್ಕೆ 800 ಕೆಜಿಯಲ್ಲಿ ಸಿದ್ಧವಾಯ್ತು 1000 ಕೇಕ್

    ಚಿಕ್ಕಬಳ್ಳಾಪುರ: ಹೊಸ ವರ್ಷದ ಸ್ವಾಗತಕ್ಕೆ ಕೆಲವೇ ಗಂಟೆಗಳು ಬಾಕಿ ಇವೆ. ಎಲ್ಲೆಡೆ ವರ್ಷಕ್ಕೆ ಸ್ವಾಗತ ಕೋರಲು ಸಿದ್ಧತೆಗಳು ಬಲು ಜೋರಾಗಿವೆ.

    ಚಿಕ್ಕಬಳ್ಳಾಪುರ ನಗರದಲ್ಲೂ ಸಂಭ್ರಮಾಚರಣೆ ಮನೆ ಮಾಡಿದ್ದು, ಗಣೇಶ್ ಬೇಕರಿ ಮಾಲೀಕರಾದ ಚೆಲುವರಾಜು ಹಾಗೂ ರಾಘವೇಂದ್ರ 800 ಕೆಜಿಯಲ್ಲಿ 1000ಕ್ಕೂ ಹೆಚ್ಚು ಕೇಕ್‍ಗಳನ್ನು ತಯಾರಿ ಮಾಡಿದ್ದಾರೆ. ಗ್ರಾಹಕರನ್ನು ಬರ ಸೆಳೆದು ಮಾರಾಟ ಮಾಡಲೆಂದೇ ಅಂತ ಬಣ್ಣ ಬಣ್ಣದ ತರಹೇವಾರಿ ಕೇಕ್‍ಗಳನ್ನು ತಯಾರಿಸಲಾಗಿದ್ದು ನೋಡುಗರ ಮನಸೆಳೆಯುತ್ತಿವೆ.

    ವಿಶೇಷವಾಗಿ ಬಾರ್ಬಿ ಗರ್ಲ್ ಕೇಕ್, ಕಪಲ್ ಕೇಕ್ ಅಂತ 12-15 ಕೆಜಿಯ ಕೇಕ್ ತಯಾರಿಸಿದ್ದು, ಎಲ್ಲರನ್ನು ತನ್ನತ್ತ ಸೆಳೆಯುತ್ತಿವೆ. ಸರದಿ ಸಾಲಿನಲ್ಲಿ ಸಾವಿರಕ್ಕೂ ಹೆಚ್ಚು ಕೇಕ್ ಒಂದೆಡೆ ಜೋಡಿಸಲಾಗಿದ್ದು, ಗ್ರಾಹಕರು ಕೇಕ್ ಖರೀದಿಗೆ ಮುಗಿಬಿದ್ದಿದ್ದಾರೆ.

    ಕಳೆದ ಎರಡು ದಿನಗಳಿಂದ ನಿರಂತರವಾಗಿ ಕೇಕ್ ಗಳನ್ನು ತಯಾರಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಪ್ರತಿ ವರ್ಷವೂ ಹೆಚ್ಚು ಹೆಚ್ಚು ಕೇಕ್ ಗಳನ್ನು ತಯಾರಿ ಮಾಡುತ್ತಿರುವ ಮಾಲೀಕರು ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚಿನ ಕೇಕ್ ಗಳನ್ನು ತಯಾರಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಟ ಮಟ ಮಧ್ಯಾಹ್ನವೇ ಪೆಗ್ ಹಾಕಿ ನ್ಯೂ ಇಯರ್ ಸೆಲೆಬ್ರೇಶನ್‍ನಲ್ಲಿ ಕುಡುಕರು

    ಮಟ ಮಟ ಮಧ್ಯಾಹ್ನವೇ ಪೆಗ್ ಹಾಕಿ ನ್ಯೂ ಇಯರ್ ಸೆಲೆಬ್ರೇಶನ್‍ನಲ್ಲಿ ಕುಡುಕರು

    ಬೆಂಗಳೂರು: 2018 ಇಯರ್ ಎಂಡ್ ಸೆಲೆಬ್ರೇಶನ್ ಸಿಲಿಕಾನ್ ಸಿಟಿ ಜೋರಾಗಿದ್ದು, ಹೊಸ ವರ್ಷದ ಆಚರಣೆಯ ಮೂಡ್ ನಲ್ಲಿ ನಗರದ ಬಹುತೇಕ ಮದ್ಯದಂಗಡಿ ಫುಲ್ ರಶ್ ಆಗಿದೆ.

    ಮಟ ಮಟ ಮಧ್ಯಾಹ್ನವೇ ಗಂಟಲಿಗೆ ಪೆಗ್ ಇಳಿಸಿಕೊಂಡಿರುವ ಕುಡುಕರು ಎಣ್ಣೆ ಕಿಕ್‍ನಲ್ಲಿದ್ದಾರೆ. ಬೆಂಗಳೂರು ರೋಡ್‍ನಲ್ಲಿ ಕೆಲವರು ಡಿಸ್ಕೋ ಡ್ಯಾನ್ಸ್ ಶುರು ಮಾಡಿದರೆ, ಮತ್ತೆ ಕೆಲವರು ವಿವಿಧ ಭಂಗಿಗಳಲ್ಲಿ ಆಕಾಶ ನೋಡುತ್ತಾ ನಿದ್ರೆ ಲೋಕಕ್ಕೆ ಜಾರಿದ್ದಾರೆ. ಇನ್ನು ಕೆಲವರು ಟೈಟ್ ಆಗಿ ಕೈಕಾಲು ನೆಲದಲ್ಲಿ ನಿಲ್ಲದೇ ತೂರಾಡುತ್ತಾ ಫುಲ್ ಝೂಮ್‍ನಲ್ಲಿ ಹ್ಯಾಪಿ ನ್ಯೂ ಇಯರ್ ಎಂದು ವಿಶ್ ಮಾಡುತ್ತಿದ್ದಾರೆ.

    ಅಷ್ಟೇ ಅಲ್ಲದೇ ರಾತ್ರಿಗೂ ರೌಂಡ್ ಟೇಬಲ್‍ಗೆ ಫುಲ್ ಪ್ಲಾನ್ ನಡೆಯುತ್ತಿದೆ. ಮುಂದಿನ ವರ್ಷ ಎಣ್ಣೆ ಮುಟ್ಟಲ್ಲ ಅಂತಾ ಕೆಲ ಕುಡುಕರು ಹುಸಿ ಪ್ರಾಮಿಸ್ ಬೇರೆ ಮಾಡಿದ್ದಾರೆ. ಇನ್ನು ಕೆಲವರು ಮುಂದಿನ ವರ್ಷದಿಂದ ಎಣ್ಣೆ ರೇಟು ಕಡಿಮೆ ಆದರೆ ಅದೇ ದೊಡ್ಡ ಗಿಫ್ಟ್. ಆದರೆ ಅವರು ರೇಟ್ ಕಡಿಮೆ ಮಾಡುವುದಿಲ್ಲ, ನಾವು ಕುಡಿಯೋದು ಬಿಡಂಗಿಲ್ಲ ಅಂತಾ ಫೀಲ್ ನಲ್ಲಿ ಮಾತನಾಡಿದ್ದಾರೆ.

    ನಗರದಲ್ಲಿ ಹೊಸ ವರ್ಷ ಆಚರಣೆ ವೇಳೆ ಸಾರ್ವಜನಿಕರಿಗೆ ಯಾವುದೇ ತೊಂದರೆಗಳು ಆಗಬಾರದೆಂದು ಖಾಕಿ ಪಡೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಬೆಂಗಳೂರಿನೆಲ್ಲೆಡೆ ಬಿಗಿ ಪೊಲೀಸರು ಬಂದೋಬಸ್ತ್ ಮಾಡಿದ್ದಾರೆ. ಅಲ್ಲದೆ ನಗರದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

    ಬಂದೋಬಸ್ತ್‍ಗಾಗಿ 5 ಜನ ಹೆಚ್ಚುವರಿ ಆಯುಕ್ತರು, 15 ಜನ ಡಿಸಿಪಿಗಳು, 45 ಎಸಿಪಿಗಳು, 220 ಇನ್ಸ್ ಪೆಕ್ಟರ್, 430 ಪಿಎಸ್‍ಐ, 10 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಹಾಗೆಯೇ ಹೋಂಗಾರ್ಡ್ 1500, ಗರುಡಾ ಪೋರ್ಸ್ 1, ಕ್ಯೂಅರ್ಟಿ 2 ಪಡೆ, ವಾಟರ್ ಜೆಟ್ 2, ಕೆಎಸ್‍ಆರ್ ಪಿ 50 ತುಕಡಿ, ಸಿಎಆರ್ 30 ತುಕಡಿಗಳನ್ನು ನಿಯೋಜಿಸಲಾಗಿದೆ.

    ನಗರದ ಜನದಟ್ಟನೆ ಇರುವ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ 1 ಸಾವಿರ ಸಿಸಿಟಿವಿಗಳನ್ನು ಅಳವಡಿಕೆ ಮಾಡಲಾಗಿದೆ. ಹಾಗೆಯೇ 15 ವಾಚ್ ಟವರ್, ನಾಲ್ಕು ಎಲ್‍ಇಡಿ ಸ್ಕ್ರೀನ್ ಅಳವಡಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2019ಕ್ಕೆ ಪಾರ್ಟಿ ಮೂಡ್‍ನಲ್ಲಿರುವವರು ಈ ಸುದ್ದಿ ಓದಲೇಬೇಕು

    2019ಕ್ಕೆ ಪಾರ್ಟಿ ಮೂಡ್‍ನಲ್ಲಿರುವವರು ಈ ಸುದ್ದಿ ಓದಲೇಬೇಕು

    ಬೆಂಗಳೂರು: 2018 ಮುಗಿತು 2019ಕ್ಕೆ ವೆಲ್‍ಕಮ್ ಮಾಡಲು ಪಾರ್ಟಿ ಮೂಡ್‍ನಲ್ಲಿ ಇರುವವರು ಈ ಸುದ್ದಿ ಓದಲೇ ಬೇಕು. ನ್ಯೂಯರ್ ಕಿಕ್‍ನಲ್ಲಿ ಗಲಾಟೆ ಮಾಡಿದರೆ ಎಚ್ಚರವಾಗಿರಿ. ಏಕೆಂದರೆ ಪೊಲೀಸರಿಗೆ ಮಾರ್ಷಲ್ ಸಾಥ್ ಕೊಡುತ್ತಿದ್ದಾರೆ.

    ಬೆಂಗಳೂರಿನ ಪಾಲಿಕೆಯ ಮಾರ್ಷಲ್ ಗಳು ಕಸ ವಿಲೇವಾರಿ ವಿಚಾರದಲ್ಲಿ ನಗರದ ಹಲವೆಡೆ ಗಸ್ತು ಕಾಯಲಿದ್ದಾರೆ. ನ್ಯೂ ಇಯರ್ ದಿನ ಎಲ್ಲೆಂದರಲ್ಲಿ ಕುಡಿದು ಬಾಟೆಲ್ ಎಸೆದರೆ, ಸಿಕ್ಕ ಸಿಕ್ಕ ಕಡೆ ಪಾಲಿಕೆ ಗೋಡೆಯನ್ನು ಶೌಚಾಲಯದಂತೆ ಬಳಸಿದರೆ ಮುಗಿತು. ತಿಂಡಿ ಪ್ಯಾಕೆಟ್ ತಿಂದು ರಸ್ತೆ, ಕಂಬ, ಫುಟ್ ಪಾತ್ ಮೇಲೆ ಸಿಕ್ಕ ಕಡೆ ಎಸೆದರೆ ಶಿಕ್ಷೆಗೆ ಗುರಿಯಾಗುತ್ತಿರಿ.

    ಮೋಜು ಮಸ್ತಿ ಅಂತ ಕಸ ಹಾಕಿದರೆ 500 ರೂ. ನಿಂದ 50 ಸಾವಿರವರೆಗೂ ದಂಡ ಹಾಕಲು ಪಾಲಿಕೆ ಸಜ್ಜಾಗಿದೆ. ಈ ನಿಟ್ಟಿನಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ ಅಂತ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಇಂದಿರಾ ನಗರ, ಕೋರಮಂಗಲ ಎಲ್ಲೆಲ್ಲಿ ಪಾರ್ಟಿ ಮಾಡುತ್ತಿರಾ ಅಲ್ಲಿ ಮಾರ್ಷಲ್ ಹಾಜರಿರುತ್ತಾರೆ. ಬೆಂಗಳೂರಿನ 50 ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಮಾರ್ಷಲ್ ಸಜ್ಜಾಗಿರುತ್ತಾರೆ. ಫೈನ್ ಹಾಕಲು ಬೆತ್ತ ಹಿಡಿದು ನಾಳೆ ಸಂಜೆ 4 ಗಂಟೆಯಿಂದಲೇ ಗಲ್ಲಿ ಗಲ್ಲಿಗಳಲ್ಲಿ ಗಸ್ತು ಕಾಯುತ್ತಾ ನಿಂತಿರುತ್ತಾರೆ.

    ಹೊಸ ವರ್ಷದ ಕಿಕ್ ನಲ್ಲಿ ನಗರದ ಸೌಂದರ್ಯಕ್ಕೆ ಧಕ್ಕೆ ತರುವ ಮುನ್ನ ಎಚ್ಚರವಾಗಿರಿ. ನಗರದ ಸ್ವಚ್ಚತೆ ಕಾಪಾಡಲು ಮಾರ್ಷಲ್ ಗಳನ್ನು ನೇಮಕ ಮಾಡಲಾಗಿದೆ. ಮಾರ್ಷಲ್ ಗಳು ಸಮವಸ್ತ್ರ ಹಾಗೂ ಬೆತ್ತದ ಆಯುಧ ಹೊಂದಿರುತ್ತಾರೆ. ನ್ಯೂ ಇಯರ್ ದಿನ ಸದ್ದು ಮಾಡಿ ಕುಣಿಯಿರಿ, ಮಸ್ತಿ ಅಂತ ಮ್ಯೂಸಿಕ್ ಕೇಳಿ, ಸುತ್ತಾಡಿ, ಓಡಿ, ಹಾಡು ಹೇಳಿಕೊಳ್ಳಿ ಆದರೆ ಗಲೀಜು ಮಾಡಬೇಡಿ. ಹೊಸ ವರ್ಷವನ್ನು ಸ್ವಚ್ಚತೆಯೊಂದಿಗೆ ವೆಲ್‍ಕಮ್ ಮಾಡಿ ಎಂದು ಬಿಬಿಎಂಪಿ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv