Tag: ನ್ಯಾ. ಚಂದ್ರಚೂಡ್‌

  • ಎಲ್ಲಾ ಖಾಸಗಿ ಆಸ್ತಿ ಮೇಲೆ ಸರ್ಕಾರಕ್ಕೆ ಹಕ್ಕಿಲ್ಲ – ಸುಪ್ರೀಂ ಐತಿಹಾಸಿಕ ತೀರ್ಪು

    ನವದೆಹಲಿ: ಖಾಸಗಿ ಆಸ್ತಿಗಳ (Private Property) ಮೇಲೆ ಸರ್ಕಾರಿ ಹಕ್ಕಿನ ವ್ಯಾಪ್ತಿ ಎಲ್ಲಿಯವರೆಗೆ ಇದೆ ಎಂಬ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಐತಿಹಾಸಿಕ ತೀರ್ಪು ನೀಡಿದೆ. ಎಲ್ಲಾ ಖಾಸಗಿ ಹಕ್ಕುಗಳ ಮೇಲೆ ರಾಜ್ಯ ಸರ್ಕಾರಗಳ ಮೇಲೆ ಹಕ್ಕುಗಳು ಇರುವುದಿಲ್ಲ ಎಂದು ಕೋರ್ಟ್‌ ಸ್ಪಷ್ಟವಾಗಿ ತಿಳಿಸಿದೆ.

    ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ, ಖಾಸಗಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂದು ನ್ಯಾ. ಕೃಷ್ಣಯ್ಯರ್ ನೀಡಿದ್ದ ತೀರ್ಪನ್ನು 8:1 ಬಹುಮತದೊಂದಿಗೆ ವಜಾ ಮಾಡಿದೆ. ಸಂವಿಧಾನದ ಆರ್ಟಿಕಲ್ 39(ಬಿ)ಪ್ರಕಾರ ಖಾಸಗಿಯವರ ಮಾಲೀಕತ್ವದ ಎಲ್ಲಾ ಸಂಪನ್ಮೂಲಗಳನ್ನು ವಶಕ್ಕೆ ಪಡೆಯುವ ಹಕ್ಕು ರಾಜ್ಯ ಸರ್ಕಾರಗಳಿಗೆ ಇರಲ್ಲ ಎಂದು ಸಿಜೆಐ ಚಂದ್ರಚೂಡ್‌ ನೇತೃತ್ವದ 9 ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನಿಕ ಪೀಠ ಸ್ಪಷ್ಟವಾಗಿ ತಿಳಿಸಿದೆ. ಇದನ್ನೂ ಓದಿ: ಉದ್ಯೋಗದಲ್ಲಿ ಮಹಿಳೆಯರಿಗೆ 35% ಮೀಸಲಾತಿ: ಮಧ್ಯಪ್ರದೇಶ ಸರ್ಕಾರದ ಮಹತ್ವದ ನಿರ್ಧಾರ

     

    ಕೆಲವೇ ಪ್ರಕರಣಗಳಲ್ಲಿ ಇದಕ್ಕೆ ವಿನಾಯ್ತಿ ಇರಲಿದೆ ಎಂದು ಸಾಂವಿಧಾನಿಕ ಪೀಠ ತಿಳಿಸಿದೆ. ಈ ವಿಚಾರವನ್ನು 1950ರ ಭಾರತವನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಲಾಗದು. ಅಂದು ರಾಷ್ಟ್ರೀಕರಣ ನಡೆದಿತ್ತು. ಆದರೆ ಇಂದು ಹೂಡಿಕೆ ವಾಪಸಾತಿ ನಡೆಯುತ್ತಿದೆ. ಖಾಸಗಿ ಹೂಡಿಕೆ ಇದೆ. ಇದು ಪರಿವರ್ತನೆ. ಹೀಗಾಗಿ ಇಂದಿನ ಸ್ಥಿತಿಗೆ ಅನುಗುಣವಾಗಿ ಮತ್ತು ಭವಿಷ್ಯವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಈ ತೀರ್ಪು ನೀಡಿದ್ದೇವೆ ಎಂದು ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿದೆ.

    ಈ ತೀರ್ಪಿನೊಂದಿಗೆ, ಎಲ್ಲಾ ಖಾಸಗಿ ಆಸ್ತಿಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಬಹುದು ಎಂದು ಹೇಳಿದ್ದ ನ್ಯಾ. ಕೃಷ್ಣ ಅಯ್ಯರ್ ಅವರ 1978 ರ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ ತೀರ್ಪು ಖಾಸಗಿ ವ್ಯಕ್ತಿಗಳ ಎಲ್ಲಾ ಆಸ್ತಿಗಳನ್ನು ಸಮುದಾಯದ ಆಸ್ತಿ ಎಂದು ಕರೆಯಬಹುದು ಎಂದು ಹೇಳಿತ್ತು.

  • Article 370 Verdict – ಕೇಂದ್ರದ ಎಲ್ಲಾ ನಿರ್ಧಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ: ಸುಪ್ರೀಂ ಐತಿಹಾಸಿಕ ತೀರ್ಪಿನಲ್ಲಿ ಏನಿದೆ?

    ನವದೆಹಲಿ: ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು (Jammu and Kashmir Special Status) ರದ್ದು ಪಡಿಸಿದ ಕೇಂದ್ರ ಸರ್ಕಾರ ಸರಿ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್‌ (Supreme Court) ಐತಿಹಾಸಿಕ ತೀರ್ಪು ನೀಡಿದೆ.

    2019ರ ಆಗಸ್ಟ್‌ 6 ರಂದು ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರ ಲಡಾಖ್, ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಹಲವು ಮಂದಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದರು.

    ವಿಶೇಷ ಸ್ಥಾನವನ್ನು ರದ್ದು ಪಡಿಸಿದ ಕೇಂದ್ರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ಮುಕ್ತಾಯಗೊಳಿಸಿದ್ದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಸಂವಿಧಾನ ಪೀಠ ಸರ್ವಾನುಮತದ ತೀರ್ಪು ಪ್ರಕಟಿಸಿ ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದಿದೆ.  ಇದನ್ನೂ ಓದಿ: 3,500 ಕಿ.ಮೀ ದೂರದ ಥೈಲ್ಯಾಂಡ್‌ನಿಂದ ಅಯೋಧ್ಯೆ ರಾಮಮಂದಿರಕ್ಕೆ ಬರಲಿದೆ ವಿಶೇಷ ಮಣ್ಣು 

    ತೀರ್ಪುನಲ್ಲಿರುವ ಪ್ರಮುಖ ಅಂಶಗಳು
    ಆರ್ಟಿಕಲ್ 356 (ರಾಷ್ಟ್ರಪತಿ ಆಳ್ವಿಕೆ ಹೇರಿಕೆ) ಅಡಿಯಲ್ಲಿ ರಾಜ್ಯದ ಪರವಾಗಿ ಕೇಂದ್ರವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಆರ್ಟಿಕಲ್ 356ರ ಅಡಿಯಲ್ಲಿ ಘೋಷಣೆ ಜಾರಿ ಮಾಡುವ ಮೊದಲು ಕೇಂದ್ರವು ಲೆಕ್ಕವಿಲ್ಲದಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಒಂದು ವೇಳೆ ಅ ನಿರ್ಧಾರವನ್ನು ಪ್ರಶ್ನಿಸಿ ಅನುಮತಿ ನೀಡಿದರೆ ಅದು ಅವ್ಯವಸ್ಥೆಗೆ ಕಾರಣವಾಗುತ್ತದೆ.

    ಜಮ್ಮು ಮತ್ತು ಕಾಶ್ಮೀರದ ಸಂವಿಧಾನಕ್ಕಿಂತಲೂ ಭಾರತದ ಸಂವಿಧಾನ ಮೇಲಿದೆ. 370ನೇ ವಿಧಿಯ ಅಡಿ ನೀಡಲಾದ ವಿಶೇಷ ಸ್ಥಾನಮಾನ ತಾತ್ಕಾಲಿಕ. ಇದು ಶಾಶ್ವತವಲ್ಲ. ಅಂದಿನ ಪರಿಸ್ಥಿತಿಯನ್ನು ಪರಿಗಣಿಸಿ ಈ ವಿಶೇಷ ಸ್ಥಾನ ನೀಡಲಾಗಿದೆ.

    ಜಮ್ಮು ಕಾಶ್ಮೀರಕ್ಕೆ ಭಾರತದ ಸಂವಿಧಾನದ ಅಡಿಯಲ್ಲೇ ವಿಶೇಷ ಸ್ಥಾನ ಮಾನ ನೀಡಿದ್ದರಿಂದ ಇದು ಭಾರತದ ಅವಿಭಾಜ್ಯ ಅಂಗ.

    356 ನೇ ವಿಧಿಯಡಿ ಘೋಷಣೆಯ ಸಮಯದಲ್ಲಿ ಕೇಂದ್ರವು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬ ಅರ್ಜಿದಾರರ ವಾದ ಒಪ್ಪಲು ಸಾಧ್ಯವಿಲ್ಲ. ರಾಷ್ಟ್ರಪತಿ ಆಳ್ವಿಕೆಯ ಸಮಯದದಲ್ಲಿ ಕೇಂದ್ರವು  ರಾಜ್ಯದ ಶಾಸಕಾಂಗದ ಅಧಿಕಾರವನ್ನು ಚಲಾಯಿಸಬಹುದು.

    ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ಸಭೆಯು ಅಸ್ತಿತ್ವದಲ್ಲಿಲ್ಲದಿರುವಾಗ, 370 ನೇ ವಿಧಿಯ ವಿಶೇಷ ಷರತ್ತು ಅಸ್ತಿತ್ವದಲ್ಲಿರುವುದಿಲ್ಲ. ಸಂವಿಧಾನ ರಚನಾ ಸಭೆಯು ಜಮ್ಮು ಮತ್ತು ಕಾಶ್ಮೀರವನ್ನು ಎಂದಿಗೂ ಶಾಶ್ವತ ಸಂಸ್ಥೆಯಾಗಲು ಉದ್ದೇಶಿಸಿರಲಿಲ್ಲ.

    ಜಮ್ಮು ಕಾಶ್ಮೀರ ಭಾರತದೊಂದಿಗೆ ವಿಲೀನಗೊಂಡಾಗ ತನ್ನ ಸಂಪೂರ್ಣ ಸಾರ್ವಭೌಮತ್ವವನ್ನು ಒಪ್ಪಿತ್ತು. ಭಾರತಕ್ಕೆ ಸೇರಿದ ನಂತರ ಅದರ ಪ್ರತ್ಯೇಕ ಸಾರ್ವಭೌಮತ್ವ ಉಳಿಯುವುದಿಲ್ಲ.

    ಲಡಾಖ್‌ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾಡಲಾದ ನಿರ್ಧಾರ ಸರಿಯಾಗಿದೆ.  ಕೇಂದ್ರ ಚುನಾವಣಾ ಆಯೋಗ 2024ರ ಸೆಪ್ಟೆಂಬರ್‌ 30ರ ಒಳಗಡೆ ಜಮ್ಮು ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಸಬೇಕು.

  • ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಲು ಸಾಧ್ಯವಿಲ್ಲ: ಸುಪ್ರೀಂ ತೀರ್ಪಿನಲ್ಲಿ ಏನಿದೆ?

    ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಲು ಸಾಧ್ಯವಿಲ್ಲ: ಸುಪ್ರೀಂ ತೀರ್ಪಿನಲ್ಲಿ ಏನಿದೆ?

    ನವದೆಹಲಿ: ಸಲಿಂಗ ವಿವಾಹಕ್ಕೆ (Same Sex Marriage) ಕಾನೂನಿನ ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ (Supreme Court) ಐತಿಹಾಸಿಕ ತೀರ್ಪು ನೀಡಿದೆ.

    ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ 21 ಅರ್ಜಿಗಳನ್ನು ವಜಾಗೊಳಿಸಿದ ಕೋರ್ಟ್‌ ಕೇವಲ ಸಂಸತ್ತು ಮಾತ್ರ ವಿಶೇಷ ವಿವಾಹ ಕಾಯ್ದೆಯಲ್ಲಿ ಬದಲಾವಣೆ ತರಬಹುದು. ನ್ಯಾಯಾಲಯಗಳು ಕಾನೂನುಗಳನ್ನು ಮಾಡುವ ಬದಲಿಗೆ ಅವುಗಳನ್ನು ವ್ಯಾಖ್ಯಾನಿಸುತ್ತದೆ ಎಂದು ಹೇಳಿದೆ.

    ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ (Dy Chandrachud) ನೇತೃತ್ವದ ಸಾಂವಿಧಾನಿಕ ಪೀಠದಲ್ಲಿ ನ್ಯಾಯಮೂರ್ತಿಗಳಾದ ಸಂಜಯ ಕಿಶನ್‌ ಕೌಲ್, ಎಸ್‌.ರವೀಂದ್ರ ಭಟ್, ಹಿಮಾ ಕೊಹ್ಲಿ, ಪಿ.ಎಸ್.ನರಸಿಂಹ ಅವರಿದ್ದ ಪೀಠಕ್ಕೆ 10 ದಿನಗಳ ಕಾಲ ವಿಚಾರಣೆ ನಡೆಸಿ ಮೇ 11ರಂದು ತೀರ್ಪು ಕಾಯ್ದಿರಿಸಿತ್ತು.

    ಐದು ನ್ಯಾಯಾಧೀಶರು ಸಹ ಸಲಿಂಗ ವಿವಾಹವನ್ನು ಅನುಮತಿಸಲು ವಿಶೇಷ ವಿವಾಹ ಕಾಯ್ದೆ – 1954 ತಿರುಚಲು ಸಾಧ್ಯವಿಲ್ಲ ಎಂದು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ.

    ಕೋರ್ಟ್‌ ಹೇಳಿದ್ದೇನು?
    ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಯಾವುದೇ ತಾರತಮ್ಯ ಆಗದಂತೆ ನೋಡಿಕೊಳ್ಳಬೇಕು.

    ಪಿಂಚಣಿ, ಪಡಿತರ ಚೀಟಿ, ಗ್ರಾಚ್ಯುಟಿ ಮತ್ತು ಉತ್ತರಾಧಿಕಾರ ಸಮಸ್ಯೆಗಳಂತಹ ಸಲಿಂಗ ದಂಪತಿಯ ಪ್ರಾಯೋಗಿಕ ಕಾಳಜಿಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಬೇಕು.

    ತೃತೀಯ ಲಿಂಗಿ ಸಮುದಾಯದ ವಿರುದ್ಧ ಸೇವೆಗಳ ಪೂರೈಕೆಯಲ್ಲಿ ಯಾವುದೇ ತಾರತಮ್ಯವನ್ನು ಮಾಡಬಾರದು. ಈ ಬಗ್ಗೆ ಸಾರ್ವಜನಿಕರನ್ನು ಜಾಗೃತಿಗೊಳಿಸಬೇಕು.  ಯಾವುದೇ ರೀತಿಯ ಕಿರುಕುಳ ಆಗದಂತೆ ತಡೆಗಟ್ಟಬೇಕು.

    ಬಲವಂತವಾಗಿ ಮಕ್ಕಳ ಲಿಂಗ ಪರಿವರ್ತನೆ ಮಾಡುವಂತಿಲ್ಲ.  ಹಾರ್ಮೋನ್‌ ಬದಲಾವಣೆಗಾಗಿ ಯಾವುದೇ ವ್ಯಕ್ತಿಯನ್ನು ಬಲವಂತ ಮಾಡುವಂತಿಲ್ಲ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]