Tag: ನೋ ಬಾಲ್

  • ನೋ ಬಾಲ್ ವಿವಾದದ ನಡುವೆ ಕುಲ್ಚಾ ಜೋಡಿಯ ಕೀಟ್ಲೆ

    ನೋ ಬಾಲ್ ವಿವಾದದ ನಡುವೆ ಕುಲ್ಚಾ ಜೋಡಿಯ ಕೀಟ್ಲೆ

    ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಮತ್ತು ರಾಜಸ್ಥಾನ ನಡುವಿನ ಪಂದ್ಯದ ನಡುವೆ ನಡೆದ ನೋ ಬಾಲ್ ವಿವಾದ ಬಾರಿ ಚರ್ಚೆಯಾಗುತ್ತಿದೆ. ಈ ನಡುವೆ ಕುಲ್ಚಾ ಜೋಡಿ ಖ್ಯಾತಿಯ ಯಜುವೇಂದ್ರ ಚಹಲ್ ಮತ್ತು ಕುಲ್‍ದೀಪ್ ಯಾದವ್ ನಡುವಿನ ಮಾತುಕತೆ ವೈರಲ್ ಆಗುತ್ತಿದೆ.


    ರಾಜಾಸ್ಥಾನ್ ರಾಯಲ್ಸ್ ನೀಡಿದ 222 ರನ್‍ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರಂಭದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿತ್ತಾದರೂ ನಂತರದಲ್ಲಿ ಪ್ರಮುಖ ವಿಕೆಟ್‍ಗಳನ್ನು ಕಳೆದುಕೊಂಡಿತು. ಕೊನೆಯಲ್ಲಿ ರೋವ್ಮನ್ ಪೋವೆಲ್ ಅವರ ಆಟ ತಂಡಕ್ಕೆ ಗೆಲುವಿನ ಆಸೆ ಚಿಗುರುವಂತೆ ಮಾಡಿತ್ತು. ಅಂತಿಮ ಓವರ್‌ನಲ್ಲಿ ಡೆಲ್ಲಿ ಗೆಲುವಿಗೆ 36 ರನ್‍ಗಳು ಬೇಕಾಗಿತ್ತು. ಆರು ಬಾಲ್‍ನಲ್ಲಿ 6 ಸಿಕ್ಸರ್ ಸಿಡಿಸುವ ಸವಾಲು ಎದುರಾಗಿತ್ತು. ಶೇ.90 ರಷ್ಟು ಗೆಲುವು ಅಸಾಧ್ಯ ಎಂಬುದೂ ಗೊತ್ತಿತ್ತು. ಈ ವೇಳೆ ಕ್ರೀಸ್‍ನಲ್ಲಿದ್ದ ಪೋವೆಲ್ ಸತತ 3 ಎಸೆತಗಳನ್ನೂ ಸಿಕ್ಸರ್‌ಗೆ ಅಟ್ಟಿದರು. ಇನ್ನೂ ಮೂರು ಎಸೆತಗಳು ಬಾಕಿ ಇರುವ ವೇಳೆ ದೊಡ್ಡ ಹೈಡ್ರಾಮವೇ ನಡೆದು ಹೋಯಿತು. ಇದನ್ನೂ ಓದಿ: ಅಂಪೈರ್ ವಿರುದ್ಧ ಸಿಟ್ಟಾಗಿ ಬ್ಯಾಟರ್‌ಗಳನ್ನು ಕರೆದ ಪಂತ್ – ನಿಜಕ್ಕೂ ನಡೆದಿದ್ದು ಏನು?

    Rishabh-Pant-1 ipl

    ಮೆಕಾಯ್ ಅವರ 3 ಎಸೆತಗಳನ್ನೂ ಸಿಕ್ಸ್ ಬಾರಿಸಿದ್ದರು. ಆದರೆ, 3ನೇ ಎಸೆತ ಫುಲ್‍ಟಾಸ್ ಆಗಿದ್ದು ಇದನ್ನು ಕೂಡ ಪೋವೆಲ್ ಸಿಕ್ಸರ್‌ಗಟ್ಟಿದರು. ಈ ಎಸೆತ ವಿವಾದಕ್ಕೆ ಎಡೆಮಾಡಿಕೊಟ್ಟಿತು. ಅಂಪೈರ್ ನೋಬಾಲ್ ಕೊಡದೇ ಇದ್ದರೂ ಡೆಲ್ಲಿ ಆಟಗಾರರು ಕುಳಿತಲ್ಲಿಂದಲೇ ನೋಬಾಲ್ ಸಿಗ್ನಲ್ ತೋರಿಸಿದರು. ಅಂಪೈರ್ ಇದು ನೋ ಬಾಲ್ ಅಲ್ಲ ಎಂದು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಇದರಿಂದ ಸಿಟ್ಟಾದ ಡೆಲ್ಲಿ ನಾಯಕ ರಿಷಭ್ ಪಂತ್ ಇದು ಅನ್ಯಾಯ ಎಂದು ಮೈದಾನದಲ್ಲಿದ್ದ ಪೋವೆಲ್ ಮತ್ತು ಕುಲ್‍ದೀಪ್ ಯಾದವ್ ಅವರನ್ನು ಉದ್ದೇಶಿಸಿ ಬೌಂಡರಿ ಗೆರೆ ಬಳಿ ನಿಂತು ಪೆವಿಲಿಯನ್‍ಗೆ ಬನ್ನಿ ಎಂದು ಕರೆದರು. ಇದನ್ನೂ ಓದಿ: ಡೆಲ್ಲಿಯ ಪ್ರವೀಣ್‌ಗೆ ದಂಡದೊಂದಿಗೆ ಒಂದು ಪಂದ್ಯ ಬ್ಯಾನ್

    ಈ ವೇಳೆ ಕುಲ್‍ದೀಪ್ ಯಾದವ್ ಅಂಪೈರ್ ಜೊತೆ ನೋ ಬಾಲ್ ವಾಗ್ವಾದಕ್ಕೆ ಇಳಿದರು. ಈ ಸಂದರ್ಭ ಪಕ್ಕದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಚಹಲ್ ಬಂದು ಕುಲ್‍ದೀಪ್ ಯಾದವ್‍ರನ್ನು ಸಮಾಧಾನ ಪಡಿಸಲು ಮುಂದಾದರು. ಈ ವೇಳೆ ಕುಲ್‍ದೀಪ್ ಮತ್ತೆ ಅಂಪೈರ್ ಕಡೆ ಮಾತನಾಡಲು ಯತ್ನಿಸುತ್ತಿದ್ದಂತೆ, ಚಹಲ್, ಕುಲ್‍ದೀಪ್‍ರನ್ನು ಹೋಗು ಬ್ಯಾಟಿಂಗ್ ಮಾಡು ಎನ್ನುವಂತೆ ಕೈ ಹಿಡಿದು ತಳ್ಳಿದರು. ಇವರಿಬ್ಬರೂ ಕೂಡ ಟೀಂ ಇಂಡಿಯಾದಲ್ಲಿ ಜೊತೆಯಾಗಿ ಆಡುತ್ತಿದ್ದಾಗ ಉತ್ತಮ ಸ್ನೇಹಿತರಾಗಿದ್ದರು. ಹಾಗಾಗಿ ಈ ಕಿರಿಕ್ ನಡುವೆ ಇವರಿಬ್ಬರು ತಮಾಷೆಗಿಳಿದು ಎಲ್ಲರನ್ನೂ ನಗಿಸಿದ್ದಾರೆ.

  • ನೋಬಾಲ್ ಎಸೆದು ಕೆಂಗಣ್ಣಿಗೆ ಗುರಿಯಾದ ಟೀಂ ಇಂಡಿಯಾ, ಇಂಗ್ಲೆಂಡ್ ಬೌಲರ್​ಗಳು

    ನೋಬಾಲ್ ಎಸೆದು ಕೆಂಗಣ್ಣಿಗೆ ಗುರಿಯಾದ ಟೀಂ ಇಂಡಿಯಾ, ಇಂಗ್ಲೆಂಡ್ ಬೌಲರ್​ಗಳು

    ಲಂಡನ್: ಭಾರತ ಹಾಗೂ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ 3 ಪಂದ್ಯಗಳು ಮುಗಿದಿದೆ. ಈ ಸರಣಿಯ ಮೂರು ಪಂದ್ಯಗಳಲ್ಲಿ ಎರಡು ತಂಡದ ಬೌಲರ್​ಗಳು ಬರೋಬ್ಬರಿ 58 ನೋ ಬಾಲ್ ಹಾಕಿದ್ದಾರೆ.

    ಕ್ರಿಕೆಟ್‍ನಲ್ಲಿ ಒಂದೇ ಒಂದು ನೋ ಬಾಲ್‍ನಿಂದ ಹಲವು ಪಂದ್ಯಗಳ ಚಿತ್ರಣವೇ ಬದಲಾಗಿರುವ ನಿದರ್ಶನಗಳಿವೆ. ಹಾಗಾಗಿ ಬೌಲರ್​ಗಳು ಗೆರೆ ದಾಟಿ ಬೌಲ್ ಮಾಡುವುದನ್ನು ಆದಷ್ಟು ನಿಯಂತ್ರಿಸುತ್ತಾರೆ. ಈ ನಡುವೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ನೋ ಬಾಲ್‍ಗಳ ಸಂಖ್ಯೆ ಅರ್ಧಶತಕ ದಾಟಿದೆ.

    ಭಾರತ ಹಾಗೂ ಇಂಗ್ಲೆಂಡ್ ಸರಣಿಯಲ್ಲಿ  ಮೂರು ಪಂದ್ಯಗಳಿಂದ ಎರಡು ತಂಡದ ಬೌಲರ್​ಗಳು ಒಟ್ಟು 58 ನೋ ಬಾಲ್ ಮಾಡಿದ್ದು, ಅದರಲ್ಲಿ ಭಾರತೀಯ ಬೌಲರ್​ಗಳು 41 ನೋ ಬಾಲ್ ಮತ್ತು ಇಂಗ್ಲೆಂಡ್ ಬೌಲರ್​ಗಳು 17 ನೋ ಬಾಲ್ ಹಾಕಿದ್ದಾರೆ. ಇದನ್ನೂ ಓದಿ: 515 ಓವರ್ ಎಸೆದ ಬಳಿಕ ಸಣ್ಣ ತಪ್ಪು ಮಾಡಿದ ಭುವಿ

    ವೈಯಕ್ತಿಕವಾಗಿ ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಬರೋಬ್ಬರಿ 25 ನೋ ಬಾಲ್  ಹಾಕಿದರೆ, ಇಂಗ್ಲೆಂಡ್ ತಂಡದ ಸ್ಪಿನ್ನರ್ ರಾಬಿನ್ಸನ್ 9 ನೋ ಬಾಲ್ ಮತ್ತು ರವೀಂದ್ರ ಜಡೇಜಾ 6 ನೋ ಬಾಲ್ ಹಾಕಿ ಮೊದಲ ಮೂರು ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ಟಾಪ್ ಬೌಲರ್ ಜೀವನಕ್ಕೆ ಮುಳುವಾಯ್ತು 9 ವರ್ಷ ಹಿಂದಿನ ಟ್ವೀಟ್‍

  • 515 ಓವರ್ ಎಸೆದ ಬಳಿಕ ಸಣ್ಣ ತಪ್ಪು ಮಾಡಿದ ಭುವಿ

    515 ಓವರ್ ಎಸೆದ ಬಳಿಕ ಸಣ್ಣ ತಪ್ಪು ಮಾಡಿದ ಭುವಿ

    ಕೊಲಂಬೋ: ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯನ್ನು ಭಾರತ ಕೈವಶ ಮಾಡಿಕೊಂಡಿದೆ. ಈ ನಡುವೆ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಉಪನಾಯಕ ಭುವನೇಶ್ವರ್ ಕುಮಾರ್ 5 ವರ್ಷಗಳಲ್ಲಿ 515 ಓವರ್ ಎಸೆದ ನಂತರ ಇದೀಗ ಸಣ್ಣ ತಪ್ಪೊಂದನ್ನು ಮಾಡಿದ್ದಾರೆ.

    ಹೌದು ಬೌಲರ್ ಎಸೆಯುವ ನೋ ಬಾಲ್‍ನಿಂದಾಗಿ ಅದೆಷ್ಟೊ ಪಂದ್ಯಗಳ ಚಿತ್ರಣ ಬದಲಾಗಿದೆ. ಹಾಗಾಗಿ ಬೌಲರ್ ನೋ ಬಾಲ್ ಎಸೆಯದೇ ಇರಲು ಸಾಕಷ್ಟು ಶ್ರಮವಹಿಸುತ್ತಾರೆ. ಅದರಲ್ಲೂ ನಿಗದಿತ ಓವರ್‍ ಗಳ ಪಂದ್ಯದಲ್ಲಿ ನೋ ಬಾಲ್‍ಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಒಂದು ನೋ ಬಾಲ್ ಮಾಡಿದರೆ ಅದು ಎದುರಾಳಿ ತಂಡಕ್ಕೆ ವರದಾನ ಒಂದು ಫ್ರೀ ಹಿಟ್ ಅವಕಾಶ ದೊರೆಯುತ್ತದೆ. ಹಾಗಾಗಿ ಸಾಕಷ್ಟು ಬೌಲರ್‍ ಗಳು ನೋ ಬಾಲ್ ಎಸಯದೇ ಇರಲು ಪ್ರಯತ್ನಿಸುತ್ತಾರೆ. ಇದನ್ನೂ ಓದಿ: 8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ದಾಖಲೆ ನಿರ್ಮಿಸಿದ ದೀಪಕ್ ಚಹರ್

    ಭಾರತ ವೇಗಿ ಭುವನೇಶ್ವರ್ ಕುಮಾರ್ ಕೂಡ ನೋಬಾಲ್ ಬಗ್ಗೆ ಹೆಚ್ಚಿನ ಗಮನಹರಿಸಿದ್ದಾರೆ. ಇದಕ್ಕೆ ಉತ್ತಮ ನಿದರ್ಶನ ಅವರು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಬರೋಬ್ಬರಿ 5 ವರ್ಷಗಳ ಬಳಿಕ ಒಂದು ನೋ ಬಾಲ್ ಎಸೆದಿದ್ದಾರೆ.

    ಭುವಿ ಈ ಹಿಂದೆ 2015ರ ಅಕ್ಟೋಬರ್ ನಲ್ಲಿ ನಡೆದ ಪಂದ್ಯವೊಂದರಲ್ಲಿ ನೋ ಬಾಲ್ ಎಸೆದಿದ್ದರು. ಆ ಬಳಿಕ 5 ವರ್ಷಗಳು ಕಳೆದಿದೆ. ಈ ನಡುವೆ 3093 ಎಸೆತಗಳನ್ನು ಎಸೆದಿದ್ದಾರೆ. ಆದರೆ ಒಂದೇ ಒಂದು ನೋಬಾಲ್ ಕೂಡ ಮಾಡಿರಲಿಲ್ಲ. ಇದೀಗ ಶ್ರೀಲಂಕಾ ಸರಣಿಯಲ್ಲಿ ಒಂದು ನೋ ಬಾಲ್ ಮಾಡುವ ಮೂಲಕ 5 ವರ್ಷಗಳ ಬಳಿಕ ಗೆರೆದಾಟಿ ಬೌಲಿಂಗ್ ಮಾಡಿ ಎದುರಾಳಿ ತಂಡಕ್ಕೆ ಫ್ರೀ ಹಿಟ್ ಅವಕಾಶ ನೀಡಿದ್ದಾರೆ.

    ಇದನ್ನು ಗಮನಿಸುತ್ತಿದ್ದಂತೆ ಭುವಿ ತಮ್ಮ ಬೌಲಿಂಗ್ ಬಗ್ಗೆ ಎಷ್ಟು ಚಾಕಚಕ್ಯತೆ ಹೊಂದಿದ್ದಾರೆ ಎಂಬುದರ ಬಗ್ಗೆ ನೆಟ್ಟಿಗರು ಚರ್ಚೆಗಿಳಿದಿದ್ದಾರೆ. ಭುವನೇಶ್ವರ್ ನೋ ಬಾಲ್ ಎಸೆಯದೆ 5 ವರ್ಷಗಳಾಗಿತ್ತು ಇದೀಗ ಅ ತಪಸ್ಸು ಭಂಗವಾಗಿದೆ, ಕೊನೆಗೂ ನೋ ಬಾಲ್ ಎಸೆದಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ, ಭುವನೇಶ್ವರ್ ಕ್ರಿಕೆಟ್ ಬಗ್ಗೆ ಇರುವಂತಹ ಬದ್ಧತೆ ಇದರಿಂದ ತಿಳಿಯುತ್ತದೆ ಎಂದು ಅಭಿಮಾನಿಯೊಬ್ಬರು ಹೊಗಳಿದ್ದಾರೆ. ಹೀಗೆ ಅನೇಕ ಮೆಚ್ಚುಗೆಯ ಮಾತುಗಳು ಕ್ರಿಕೆಟ್‍ವಲಯದಲ್ಲಿ ಕೇಳಿ ಬಂದಿದೆ.

  • ಬರೋಬ್ಬರಿ 2 ವರ್ಷಗಳ ಬಳಿಕ ಲೈನ್ ನೋ-ಬಾಲ್ ಎಸೆದ ಇಂಗ್ಲೆಂಡ್ ಬೌಲರ್

    ಬರೋಬ್ಬರಿ 2 ವರ್ಷಗಳ ಬಳಿಕ ಲೈನ್ ನೋ-ಬಾಲ್ ಎಸೆದ ಇಂಗ್ಲೆಂಡ್ ಬೌಲರ್

    ಓವಲ್: ಇಂಗ್ಲೆಂಡ್ ತಂಡದ ಬೌಲರ್ ಬೆನ್ ಸ್ಟೋಕ್ಸ್, ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಲೈನ್ ನೋ ಬಾಲ್ ಎಸೆದಿದ್ದು, ಈ ಮೂಲಕ ಬೇಡವಾದ ದಾಖಲೆಯನ್ನು ಬರೆದಿದ್ದಾರೆ.

    ಏಕದಿನ ಕ್ರಿಕೆಟ್ ಮಾದರಿಯಲ್ಲಿ 2 ವರ್ಷಗಳ ಬಳಿಕ ಇಂಗ್ಲೆಂಡ್ ಪರ ಸ್ಟೋಕ್ಸ್ ಲೈನ್ ನೋ ಬಾಲ್ ಎಸೆದಿದ್ದಾರೆ. ಪಂದ್ಯದ 48ನೇ ಓವರ್ ಬೌಲ್ ಮಾಡಿದ ಸ್ಟೋಕ್ಸ್ ನೋ ಬಾಲ್ ಎಸೆದರು. ಈ ವೇಳೆ ಸ್ಟ್ರೈಕ್ ನಲ್ಲಿದ್ದ ಹೆಟ್ಮಾಯರ್ ನೋ ಬಾಲ್ ಎಸೆತದಲ್ಲಿ ಒಂದು ರನ್ ಮಾತ್ರ ಪಡೆದರು. ಈ ಹಿಂದೆ 2017 ಜನವರಿಯಲ್ಲಿ ಇಂಗ್ಲೆಂಡ್ ತಂಡದ ಲಿಯಾಮ್ ಪ್ಲಂಕೆಟ್ ಲೈನ್ ನೋ ಬಾಲ್ ಎಸೆದಿದ್ದರು.

    ಕಳೆದ 2 ವರ್ಷಗಳ ಅವಧಿಯಲ್ಲಿ ಇಂಗ್ಲೆಂಡ್ ಬೌಲರ್ ಗಳು 11 ಸಾವಿರಕ್ಕೂ ಹೆಚ್ಚು ಎಸೆತಗಳನ್ನು ಬೌಲ್ ಮಾಡಿದ್ದಾರೆ. ಆದರೆ ಈ ಅವಧಿಯಲ್ಲಿ ಯಾವುದೇ ಲೈನ್ ನೋ ಬಾಲ್ ಆಗಿರಲಿಲ್ಲ.  ನೋ ಬಾಲ್ ಬಳಿಕ ಫ್ರೀ ಹಿಟ್ ಅವಕಾಶ ಪಡೆದ ನರ್ಸ್ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ವಿಫಲರಾಗಿದ್ದು, 1 ರನ್ ಮಾತ್ರ ಗಳಿಸಲು ಯಶಸ್ವಿಯಾದರು. ಇಂಗ್ಲೆಂಡ್ ತನ್ನ ಇನ್ನಿಂಗ್ಸ್ ನಲ್ಲಿ 13 ರನ್ ಹೆಚ್ಚುವರಿಯಾಗಿ ನೀಡಿತ್ತು.

    ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ವಿಂಡೀಸ್ 289 ರನ್ ಗಳಿಸಿದರೆ. ಪ್ರತ್ಯುತ್ತರವಾಗಿ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 263 ರನ್ ಗಳಿಗೆ ಅಲೌಟ್ ಆಯ್ತು. ಪರಿಣಾಮ ವಿಂಡೀಸ್ 26 ರನ್ ಗಳ ಅಂತರ ಜಯ ಪಡೆದು 5 ಪಂದ್ಯಗಳ ಟೂರ್ನಿಯಲ್ಲಿ 1-1ರ ಅಂತರದಲ್ಲಿ ಸಮಬಲ ಸಾಧಿಸಿತು.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv