Tag: ನೋಟ್ ಬ್ಯಾನ್

  • ಏ.1ರಿಂದ 3 ಲಕ್ಷಕ್ಕಿಂತ ಹೆಚ್ಚು ಹಣ ಪಡೆದ್ರೆ 3 ಲಕ್ಷ ರೂ. ಫೈನ್ ನೀವೇ ಕಟ್ಬೇಕು!

    ನವದೆಹಲಿ: ಏಪ್ರಿಲ್ 1ರಿಂದ ಯಾವುದೇ ಕಾರಣಕ್ಕೂ ನೀವು 3 ಲಕ್ಷಕ್ಕಿಂತ ನಗದು ಹಣ ಸ್ವೀಕರಿಸಬೇಡಿ. ಒಂದು ವೇಳೆ 3 ಲಕ್ಷಕ್ಕಿಂತ ಹೆಚ್ಚು ಹಣ ಕೊಟ್ಟರೆ ಅಷ್ಟೇ ಮೊತ್ತದ ಫೈನ್ ಕಟ್ಟಬೇಕಾಗುತ್ತದೆ. ಕಪ್ಪು ಹಣದ ವಹಿವಾಟಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಘೋಷಿಸಿರುವ 3 ಲಕ್ಷ ರೂ. ನಗದು ವಹಿವಾಟು ಮಿತಿ ಏಪ್ರಿಲ್ 1ರಿಂದ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಹೇಳಿದ್ದಾರೆ.

    ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನಿಗದಿತ ಮಿತಿಗಿಂತ ಹೆಚ್ಚು ಹಣದ ನಗದು ವಹಿವಾಟು ನಡೆಸಿದರೆ ಭಾರೀ ದಂಡ ಪಾವತಿಸಬೇಕಾಗುತ್ತದೆ. ಇದು ನೀವು ಸ್ವೀಕರಿಸಿದ ಹಣದ ಮೊತ್ತಕ್ಕೆ ಸರಿಸಮನಾಗಿರಬಹುದು ಎಂದು ಹೇಳಿದ್ದಾರೆ.

    ಒಂದು ವೇಳೆ ನೀವು 4 ಲಕ್ಷ ರೂ. ವಹಿವಾಟು ನಡೆಸಿದರೆ ದಂಡ 4 ಲಕ್ಷ ರೂಪಾಯಿ. ನೀವು 50 ಲಕ್ಷ ರೂ.ಗಳ ವಹಿವಾಟು ನಡೆಸಿದರೆ ದಂಡ 50 ಲಕ್ಷ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. ಹಣವನ್ನು ಸ್ವೀಕರಿಸಿದ ವ್ಯಕ್ತಿ ದಂಡವನ್ನು ಪಾವತಿಸಬೇಕಾಗುತ್ತದೆ ಎಂದರು. ಯಾರಾದರೂ ನಗದು ಹಣ ನೀಡಿ ದುಬಾರಿ ವಾಚ್ ಖರೀದಿಸಿದರೆ, ಹಣವನ್ನು ಸ್ವೀಕರಿಸಿದ ಅಂಗಡಿಯ ಮಾಲೀಕರೇ ದಂಡ ಪಾವತಿಸಬೇಕಾಗುತ್ತದೆ. ಭಾರೀ ಪ್ರಮಾಣದ ಹಣದ ವಹಿವಾಟು ನಡೆಸುವುದನ್ನು ತಡೆಗಟ್ಟುವುದೇ ನಮ್ಮ ಉದ್ದೇಶ ಎಂದು ಹೇಳಿದರು.

    ಈ ಹಿಂದೆ ಲೆಕ್ಕ ತೋರಿಸದ ಹಣವನ್ನು ಕೆಲವರು ಪ್ರವಾಸ, ದುಬಾರಿ ಕಾರು, ವಾಚ್ ಹಾಗೂ ಆಭರಣ ಖರೀದಿಗೆ ಬಳಸುತ್ತಿದ್ದರು. ಆದರೆ ಇನ್ನು ಮುಂದೆ ಈ ನಿಯಮಗಳು ಇದಕ್ಕೆ ತಡೆಯೊಡ್ಡಲಿವೆ. ಈ ಮೂಲಕ ಕಪ್ಪು ಹಣ ಚಲಾವಣೆಗೆ ಬ್ರೇಕ್ ಬೀಳಲಿದೆ ಎಂದು ಹೇಳಿದರು. ಹೊಸ ನಿಯಮಗಳು ಬ್ಯಾಂಕಿಂಗ್ ಕಂಪೆನಿಗಳು, ಪೋಸ್ಟ್ ಆಫೀಸ್ ಸೇವಿಂಗ್ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್‍ಗಳಿಗೆ ಅನ್ವಯವಾಗುವುದಿಲ್ಲ.

  • ಶೀಘ್ರವೇ ಚಲಾವಣೆಗೆ ಬರಲಿದೆ 100 ರೂ. ಹೊಸ ನೋಟು

    ನವದೆಹಲಿ: ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ ಬಳಿಕ 1 ಸಾವಿರ ಮುಖಬೆಲೆಯ ನೋಟನ್ನು ಚಲಾವಣೆ ಮಾಡಲು ಸಿದ್ಧತೆ ನಡೆಸುತ್ತಿರುವ ಆರ್‍ಬಿಐ ಈಗ 100 ರೂ. ಮುಖಬೆಲೆಯ ಹೊಸ ನೋಟುಗಳನ್ನೂ ಬಿಡುಗಡೆ ಮಾಡಲು ಮುಂದಾಗುತ್ತಿದೆ.

    ಈಗ ಇರುವ ಮಹಾತ್ಮಗಾಂಧಿ ಸರಣಿಯ 2005ರ ನೋಟುಗಳ ವಿನ್ಯಾಸದಲ್ಲೇ ಹೊಸ ನೋಟುಗಳು ಇರಲಿದ್ದು, ನೋಟಿನ ಹಿಂಭಾಗದಲ್ಲಿ ಮುದ್ರಣ ವರ್ಷ 2017 ಎಂದು ಮುದ್ರಣವಾಗಲಿದೆ. ನೋಟಿನ ನಂಬರ್‍ನಲ್ಲಿ ಇಂಗ್ಲಿಷಿನ ‘ಆರ್’ ಅಕ್ಷರ ಇರಲಿದ್ದು, ಆರ್‍ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿಯೊಂದಿಗೆ ಬರಲಿದೆ.

    ಹಳೆ ನೋಟಿನ ಕತೆ ಏನು?
    ಹೊಸ ನೋಟು ಚಲಾವಣೆ ಬಂದಾಗ ಹಳೆ ನೋಟು ನಿಷೇಧವಾಗುತ್ತಾ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಈ ಪ್ರಶ್ನೆಗೆ ಆರ್‍ಬಿಐ ಉತ್ತರ ನೀಡಿದ್ದು ಹಳೆ ನೋಟುಗಳು ಈಗ ಇರುವಂತೆ ಚಲಾವಣೆಯಲ್ಲಿ ಮುಂದುವರಿಯಲಿದೆ. ಇವುಗಳ ಜೊತೆಗೆ ಹೊಸ ನೋಟುಗಳು ಚಲಾವಣೆಯಾಗಲಿದೆ ಎಂದು ತಿಳಿಸಿದೆ.

  • ನೋಟು ನಿಷೇಧವಾದ ಬಳಿಕ ಬ್ಯಾಂಕ್‍ಗಳಲ್ಲಿ ಒಟ್ಟು 7,147 ಲಕ್ಷ ರೂ. ಅಕ್ರಮ ವಹಿವಾಟು

    ನವದೆಹಲಿ: ನೋಟು ನಿಷೇಧವಾದ ಬಳಿಕ ಬ್ಯಾಂಕ್‍ಗಳ ಮೂಲಕ ಒಟ್ಟು 7,147 ಲಕ್ಷ ರೂ. ಹಣವನ್ನು ಅಕ್ರಮವಾಗಿ ವಿನಿಮಯ ಮಾಡಿ ವ್ಯವಹಾರ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ರಾಜ್ಯ ಖಾತೆಯ ಸಚಿವ ಸಂತೋಷ್ ಕುಮಾರ್ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.

    ಯಾವ ಬ್ಯಾಂಕಿನಿಂದ ಎಷ್ಟು ಅಕ್ರಮ?
    ಅಕ್ರಮ ಎಸಗಿದ್ದಕ್ಕಾಗಿ 5 ಬ್ಯಾಂಕ್‍ಗಳ 20 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಆಕ್ಸಿಸ್ ಬ್ಯಾಂಕ್ 3 ಶಾಖೆಯಲ್ಲಿ 4,629 ಲಕ್ಷ ರೂ. ಅಕ್ರಮ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮಂದಿಯನ್ನು ಅಮಾನತು ಮಾಡಲಾಗಿದೆ.

    ಧನಲಕ್ಷ್ಮಿ ಬ್ಯಾಂಕಿನ 6 ಶಾಖೆಗಳಲ್ಲಿ ನಲ್ಲಿ 2,267 ಲಕ್ಷ ರೂ. ಅಕ್ರಮ ನಡೆದಿದ್ದು 8 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

    ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ 2 ಶಾಖೆಗಳಲ್ಲಿ 190 ಲಕ್ಷ ರೂ. ಅಕ್ರಮ ನಡೆದಿದ್ದು, 4 ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

    ಬ್ಯಾಂಕ್ ಅಫ್ ಮಹಾರಾಷ್ಟ್ರದ 2 ಶಾಖೆಯಲ್ಲಿ 6 ಮಂದಿ 54.90 ಲಕ್ಷ ರೂ. ಅಕ್ರಮ ಎಸಗಿದ್ದರೆ, ಸಿಂಡಿಕೇಟ್ ಬ್ಯಾಂಕಿನ 1 ಶಾಖೆಯಲ್ಲಿ 6 ಲಕ್ಷ ರೂ. ಅಕ್ರಮ ವಹಿವಾಟು ನಡೆದಿದೆ ಎಂದು ಹಣಕಾಸು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

  • ನೋಟ್ ಬ್ಯಾನ್ ನಂತ್ರ ಎಷ್ಟು ಹಣ ಬಂತು? ಎಷ್ಟು ಅಘೋಷಿತ ಆಸ್ತಿ ಪತ್ತೆ ಆಯ್ತು? ಸರ್ಕಾರದ ಉತ್ತರ ಇಲ್ಲಿದೆ

    ನವದೆಹಲಿ: ನವೆಂಬರ್ 8ರಂದು 500, 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ ಬಳಿಕ ಈವರೆಗೆ ಎಷ್ಟು ಹಣ ಮರಳಿ ಬಂದಿದೆ? ಎಷ್ಟು ಅಘೋಷಿತ ಆಸ್ತಿ ಪತ್ತೆಯಾಗಿದೆ ಎಂದು ಜನ ಮತ್ತು ರಾಜಕೀಯ ಪಕ್ಷಗಳು ಸರ್ಕಾರವನ್ನು ಕೇಳಿತ್ತು.

    ಈ ಪ್ರಶ್ನೆಗಳಿಗೆ ಸರ್ಕಾರ ಬಜೆಟ್‍ನಲ್ಲಿ ಉತ್ತರ ನೀಡಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿತ್ತು. ಈಗ ಲೋಕಸಭೆಯ ಬಜೆಟ್ ಅಧಿವೇಶನದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಸಹಾಯಕ ಖಾತೆ ರಾಜ್ಯ ಸಚಿವ ಸಂತೋಷ್ ಗಂಗಾವರ್ ಲಿಖಿತ ಉತ್ತರವನ್ನು ನೀಡುವ ಮೂಲಕ ಜನರ ಕುತೂಹಲವನ್ನು ತಣಿಸುವ ಪ್ರಯತ್ನ ಮಾಡಿದ್ದಾರೆ.

    ಎಷ್ಟು ಹಣ ಬಂದಿದೆ?
    ನೋಟು ನಿಷೇಧವಾಗುವ ಮೊದಲು 17,165 ದಶಲಕ್ಷ 500 ರೂ. ಮುಖಬೆಲೆಯ ನೋಟು ಚಲಾವಣೆಯಲ್ಲಿದ್ದರೆ,  1 ಸಾವಿರ ಮುಖಬೆಲೆಯ 6,858 ದಶಲಕ್ಷ ನೋಟು ಚಲಾವಣೆಯಲ್ಲಿತ್ತು. ನೋಟ್ ಬ್ಯಾನ್ ಬಳಿಕ ಡಿಸೆಂಬರ್ 10ರವರೆಗೆ 12.44 ಲಕ್ಷ ಕೋಟಿ ಹಳೇನೋಟು ವಾಪಸ್ ಬಂದಿದೆ ಎಂದು ಸರ್ಕಾರ ಹೇಳಿದೆ.

    ಜನವರಿ 10ವರೆಗೆ ಎಷ್ಟು ಆಸ್ತಿ ಪತ್ತೆಯಾಗಿದೆ?
    1,100 ಕಡೆ ಆದಾಯ ತೆರಿಗೆ ಇಲಾಖೆ ಶೋಧ ನಡೆಸಿದ್ದು, 5,100 ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ. 610 ಕೋಟಿ ರೂ. ಆಸ್ತಿ- ಪಾಸ್ತಿ ಜಪ್ತಿ ಮಾಡಲಾಗಿದ್ದು ಇದರಲ್ಲಿ 510 ಕೋಟಿ ರೂ. ನೋಟುಗಳನ್ನು ಜಪ್ತಿ ಮಾಡಲಾಗಿದೆ. ಪತ್ತೆಯಾದ ಹಣದಲ್ಲಿ 110 ಕೋಟಿ ರೂ. ಹೊಸನೋಟು ಸಿಕ್ಕಿದೆ. ಒಟ್ಟು 5,400 ಕೋಟಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದೆ.

    ವಿತ್‍ಡ್ರಾ ಮಿತಿ ಕೊನೆ:
    ನೋಟ್‍ಬ್ಯಾನ್ ಬಳಿಕ ಹಣದ ಮರುಪೂರೈಕೆ ಪ್ರಕ್ರಿಯೆ ಬಹುತೇಕ ಮುಕ್ತಾಯಗೊಂಡಿದ್ದು ಗ್ರಾಹಕರ ವಿತ್‍ಡ್ರಾ ಮಿತಿ ಕೊನೆಯಾಗಲಿದೆ ಅಂತ ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ. ಶೀಘ್ರದಲ್ಲೇ ಉಳಿತಾಯ ಖಾತೆಗಳ ಮೇಲಿರುವ ವಾರಕ್ಕೆ 24 ಸಾವಿರ ರೂಪಾಯಿ ವಿತ್‍ಡ್ರಾ ಮಿತಿ ಸೇರಿ ಎಲ್ಲಾ ನಿರ್ಬಂಧಗಳು ಅಂತ್ಯಗೊಳ್ಳಲಿದೆ ಅಂತ ಹಣಕಾಸು ಇಲಾಖೆಯ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

  • ದೇಶದಲ್ಲಿ ಎಷ್ಟು ಜನ ತೆರಿಗೆ ಕಟ್ಟುತ್ತಿದ್ದಾರೆ? ಎಷ್ಟು ಕಂಪೆನಿಗಳು ಆದಾಯ ತೋರಿಸಿವೆ?

    ನವದೆಹಲಿ: ದೇಶದಲ್ಲಿ ಸಂಘಟಿತ ವಲಯದಲ್ಲಿ 4.2 ಕೋಟಿ ಉದ್ಯೋಗಿಗಳಿದ್ದು, ಇವರಲ್ಲಿ 1.74 ಕೋಟಿ ಮಂದಿ ವೇತನ ಆಧಾರಿತ ತೆರಿಗೆ ಸಲ್ಲಿಕೆ ಮಾಡುತ್ತಿದ್ದಾರೆ. ವ್ಯಕ್ತಿಗತ/ಸಂಸ್ಥೆಯ ರೂಪದಲ್ಲಿ 5.6 ಕೋಟಿ ಸಣ್ಣ ಉದ್ದಿಮೆಗಳಿದ್ದು, ಇದರಲ್ಲಿ 1.81 ಕೋಟಿ ಮಂದಿ ತೆರಿಗೆ ಸಲ್ಲಿಕೆ ಮಾಡುತ್ತಿದ್ದಾರೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

    ಮಾರ್ಚ್ 2014ರವರೆಗೆ 13.94 ಲಕ್ಷ ಕಂಪೆನಿಗಳು ನೋಂದಣಿಯಾಗಿದ್ದು, ಇದರಲ್ಲಿ 5.97 ಲಕ್ಷ ಕಂಪೆನಿಗಳು ತೆರಿಗೆಯನ್ನು ಪಾವತಿ ಮಾಡಿವೆ. 2.76 ಲಕ್ಷ ಕಂಪೆನಿಗಳು ನಷ್ಟ ಅಥವಾ ಶೂನ್ಯ ಆದಾಯ ತೋರಿಸಿವೆ. 2.85 ಲಕ್ಷ ಕಂಪನಿಗಳು 1 ಕೋಟಿ ರೂ.ಗಿಂತಲೂ ಕಡಿಮೆ ಆದಾಯ ತೋರಿಸಿದರೆ, 28,667 ಕಂಪೆನಿಗಳು 1 ಕೋಟಿಯಿಂದ 10 ಕೋಟಿ ರೂ. ಲಾಭ ತೋರಿಸಿವೆ. 7,781 ಕಂಪೆನಿಗಳು 10 ಕೋಟಿ ರೂ.ಗೂ ಅಧಿಕ ಲಾಭವಿದೆ ಎಂದು ತೋರಿಸಿವೆ.

    3.7 ಕೋಟಿ ಜನ ತೆರಿಗೆ ಮಾಹಿತಿ ಸಲ್ಲಿಸಿದ್ದು, 99 ಲಕ್ಷ ಜನ 2.50 ಲಕ್ಷ ರೂ.ಗಿಂತ ಕಡಿಮೆ ಆದಾಯ ತೋರಿಸಿದ್ದಾರೆ. 1.95 ಕೋಟಿ ಮಂದಿ  2.50 ಲಕ್ಷ ರೂ. – 5 ಲಕ್ಷ ರೂ ಆದಾಯ ತೋರಿಸಿದರೆ, 52 ಲಕ್ಷ ಮಂದಿ 5 ಲಕ್ಷ – 10 ಲಕ್ಷ ರೂ. ಆದಾಯ ತೋರಿಸಿದ್ದಾರೆ. 24 ಲಕ್ಷ ಮಂದಿ ತಮ್ಮ ಬಳಿ 10 ಲಕ್ಷ ರೂ.ಗಿಂತ ಅಧಿಕ ಆದಾಯವಿದೆ ಎಂದು ಪ್ರಕಟಿಸಿದ್ದಾರೆ.

    76 ಲಕ್ಷ ಮಂದಿ 5 ಲಕ್ಷ ಆದಾಯ ತೋರಿಸಿದ್ದು, ಇವರಲ್ಲಿ 56 ಲಕ್ಷ ವೇತನದಾರರು ಇದ್ದಾರೆ. 1.72 ಲಕ್ಷ ಮಂದಿ 50 ಲಕ್ಷಕ್ಕಿಂತ ಹೆಚ್ಚು ಆದಾಯ ತೋರಿಸಿದ್ದಾರೆ.

    ನ.8ರಿಂದ ಡಿ.30ರವರೆಗೆ 1.09 ಕೋಟಿ ಖಾತೆಗಳಲ್ಲಿ 2 ಲಕ್ಷದಿಂದ 80 ಲಕ್ಷ ರೂ.ವರೆಗೆ ಜಮೆಯಾಗಿದೆ. ಈ ಖಾತೆಗಳಲ್ಲಿ ಸರಾಸರಿ ಜಮೆ 5.03 ಲಕ್ಷ ರೂಪಾಯಿ ಆಗಿದೆ. 1.48 ಲಕ್ಷ ಖಾತೆಗಳಲ್ಲಿ ತಲಾ 80 ಲಕ್ಷ ರೂ.ಗಿಂತ ಅಧಿಕ ಮೊತ್ತ ಜಮೆಯಾಗಿದ್ದು, ಈ ಖಾತೆಗಳಲ್ಲಿ ಸರಾಸರಿ ಜಮೆ 3.31 ಕೋಟಿ ರೂ. ಆಗಿದೆ. ಕಳೆದ 5 ವರ್ಷಗಳಲ್ಲಿ 1.25 ಕೋಟಿ ಕಾರು ಮಾರಾಟವಾಗಿದೆ ಎನ್ನುವ ಅಂಶ ಬಜೆಟ್‍ನಲ್ಲಿದೆ.