Tag: ನೋಟ್ ಬ್ಯಾನ್

  • ನೋಟ್ ಬ್ಯಾನ್ ಎಫೆಕ್ಟ್: ರಾಯಚೂರು ಗ್ರಾಮೀಣ ಭಾಗದ ಬ್ಯಾಂಕ್‍ಗಳಲ್ಲಿ ಇನ್ನೂ ಹಣದ ಕೊರತೆ

    ನೋಟ್ ಬ್ಯಾನ್ ಎಫೆಕ್ಟ್: ರಾಯಚೂರು ಗ್ರಾಮೀಣ ಭಾಗದ ಬ್ಯಾಂಕ್‍ಗಳಲ್ಲಿ ಇನ್ನೂ ಹಣದ ಕೊರತೆ

    ರಾಯಚೂರು: ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1 ಸಾವಿರ ರೂಪಾಯಿ ನೋಟುಗಳ ಅಮೌಲ್ಯೀಕರಣ ಮಾಡಿ 8 ತಿಂಗಳು ಕಳೆದ್ರೂ ಅದರ ಎಫೆಕ್ಟ್ ರಾಯಚೂರಿನ ಗ್ರಾಮೀಣ ಭಾಗದಲ್ಲಿ ಇನ್ನೂ ಮುಂದುವರೆದಿದೆ.

    ಬ್ಯಾಂಕ್‍ನಲ್ಲಿ ಹಣ ಸಿಗದೆ ಮೂರ್ನಾಲ್ಕು ದಿನಗಳ ಕಾಲ ಜನ ಬ್ಯಾಂಕ್ ಮುಂದೆ ಈಗಲೂ ಕ್ಯೂ ನಿಲ್ಲುತ್ತಿದ್ದಾರೆ. ಇಡೀ ದೇಶ ಈಗ ಜಿಎಸ್‍ಟಿ ಗೊಂದಲ ಹಾಗೂ ಕುತೂಹಲದಲ್ಲಿ ಮುಳುಗಿದ್ದರೆ, ರಾಯಚೂರಿನ ಗ್ರಾಮೀಣ ಭಾಗದಲ್ಲಿ ಮಾತ್ರ ಇನ್ನೂ ನೋಟ್ ಬ್ಯಾನ್ ಹೊಡೆತದಿಂದ ಸುಧಾರಿಸಿಕೊಳ್ಳದೆ ಪರಿತಪಿಸುತ್ತಿದ್ದಾರೆ.

    ರಾಯಚೂರು ತಾಲೂಕಿನ ಯರಗೇರಾ ಗ್ರಾಮದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‍ನ ಮುಂದೆ ಯಾವಾಗ ನೋಡಿದ್ರೂ ಗ್ರಾಹಕರ ಸಾಲು ಕಾಣುತ್ತೆ. ಇವತ್ತು ಬ್ಯಾಂಕಿಗೆ ಬಂದ್ರೆ ಎರಡು ದಿನ ಬಳಿಕ ಹಣ ಸಿಗುತ್ತೆ. ಅದೂ ನಿರೀಕ್ಷೆಗಿಂತಲೂ ಕಡಿಮೆ ಹಣವನ್ನ ಬ್ಯಾಂಕ್ ಅಧಿಕಾರಿಗಳು ನೀಡುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಬ್ಯಾಂಕ್‍ನಲ್ಲಿ ಹಣದ ಕೊರತೆ. ದಿನಕ್ಕೆ ಎರಡರಿಂದ ಮೂರು ಲಕ್ಷ ರೂ. ಮಾತ್ರ ಒಟ್ಟು ಗ್ರಾಹಕರಿಗೆ ಸಿಗುತ್ತಿದೆ. ಒಬ್ಬರಿಗೆ 5 ಸಾವಿರ ರೂ. ಮಾತ್ರ ಹಣ ಕೊಡುತ್ತಿದ್ದಾರೆ. ಇದರಿಂದ ರೈತರು, ಮಹಿಳೆಯರು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.

    ರಾಯಚೂರು ತಾಲೂಕಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಆದ್ರೆ ಬೀಜ, ರಸಗೊಬ್ಬರ ಸೇರಿದಂತೆ ಇತರೆ ವಸ್ತುಗಳನ್ನ ಕೊಳ್ಳಲು ಹಣವಿಲ್ಲದೆ ಪರದಾಡುವಂತಾಗಿದೆ. ಮಾಸದೊಡ್ಡಿ, ಜುಲಮಗೇರಿ, ಗಧಾರ, ಜಾಲಿಬೆಂಚಿ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಗ್ರಾಮದ ಜನ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‍ನ ಯರಗೇರಾ ಶಾಖೆಯನ್ನ ಅವಲಂಬಿಸಿದ್ದಾರೆ. ಒಟ್ಟು ಆರು ಗ್ರಾಮ ಪಂಚಾಯ್ತಿಗಳ ಎನ್.ಆರ್.ಇ.ಜಿ. ಹೌಸಿಂಗ್ ಖಾತೆಗಳು ಇದೇ ಬ್ಯಾಂಕ್‍ನಲ್ಲಿ ಇರುವುದರಿಂದ ಪ್ರತಿನಿತ್ಯ ಕ್ಯೂ ದೊಡ್ಡದಾಗಿ ಇರುತ್ತೆ. ಬ್ಯಾಂಕ್ ಅಧಿಕಾರಿಗಳು ಮಾತ್ರ ಪ್ರತಿದಿನ 10 ರಿಂದ 15 ಲಕ್ಷ ತರುತ್ತಿದ್ದೇವೆ. ಜನ ಹೆಚ್ಚಾಗಿ ಬರುತ್ತಿರುವುದರಿಂದ ತೊಂದರೆಯಾಗುತ್ತಿದೆ ಎಂದು ಹೇಳುತ್ತಿದ್ದಾರೆ.

    ಒಟ್ನಲ್ಲಿ ಇಲ್ಲಿನ 30ಕ್ಕೂ ಹೆಚ್ಚು ಗ್ರಾಮಗಳ ಜನ ತಮ್ಮ ದುಡ್ಡನ್ನ ತಾವು ಪಡೆಯಲು ನಿತ್ಯ ಪರದಾಡುತ್ತಿದ್ದಾರೆ. ಒಂದೇ ಬ್ಯಾಂಕ್ ಅವಲಂಬಿಸಿರುವುದು ಸಹ ಈ ಸಮಸ್ಯೆಗೆ ಕಾರಣವಾಗಿದೆ. ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತು ಸಮಸ್ಯೆಗೆ ಪರಿಹಾರ ಒದಗಿಸಬೇಕಿದೆ.

  • ನೋಟ್ ಬ್ಯಾನ್ ಬೆಂಬಲಿಸಿ, ರಂಜಾನ್ ಪ್ರಯುಕ್ತ 10 ಪೈಸೆಗೊಂದು ಸೀರೆ ಮಾರಾಟ

    ನೋಟ್ ಬ್ಯಾನ್ ಬೆಂಬಲಿಸಿ, ರಂಜಾನ್ ಪ್ರಯುಕ್ತ 10 ಪೈಸೆಗೊಂದು ಸೀರೆ ಮಾರಾಟ

    ಬೀದರ್: ಪ್ರಧಾನಿ ಮೋದಿ ಸರ್ಕಾರದ ನೋಟ್ ಬ್ಯಾನ್ ಬೆಂಬಲಿಸಿ ನಗರದ ವರ್ತಕರೊಬ್ಬರು ರಂಜಾನ್ ಹಬ್ಬದ ಪ್ರಯುಕ್ತವಾಗಿ 10 ಪೈಸೆಗೆ ಒಂದು ಸೀರೆಯನ್ನ ಮಾರಾಟ ಮಾಡುತ್ತಿದ್ದಾರೆ.

    ನಗರದ ದೃಷ್ಟಿ-ಸೃಷ್ಟಿ ಸ್ಯಾರಿ ಸೆಂಟರ್‍ನಲ್ಲಿ 10 ಪೈಸೆಗೊಂದು ಸೀರೆಯನ್ನು ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಸೀರೆಗಳನ್ನು ಕೊಳ್ಳಲು ಕೇವಲ ಹಳೆಯ 10, 25 ಮತ್ತು 50 ಪೈಸೆಯ ನಾಣ್ಯಗಳನ್ನು ನೀಡಿದರೆ ಸೀರೆ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.

    ಮೋದಿಯವರು ನೋಟ್ ಬ್ಯಾನ್ ಮಾಡಿ ದೇಶಕ್ಕೆ ಒಳ್ಳೆಯದನ್ನು ಮಾಡಿದ್ದಾರೆ. ಅದರ ಪ್ರಯುಕ್ತವಾಗಿ ನಾನು ಸೀರೆಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡ್ತಾಯಿದ್ದೀನಿ. ಫ್ರೀಯಾಗಿ ನೀಡಿದ್ರೆ ಜನ ತೆಗೆದುಕೊಳ್ಳಲು ಮುಂದೆ ಬರಲ್ಲ. ಅದಕ್ಕಾಗಿ ಒಂದು ಸೀರೆಗಾಗಿ 10 ಪೈಸೆಯನ್ನು ನಿಗದಿ ಮಾಡಲಾಗಿದೆ. ಇದು ವಿಶೇಷವಾಗಿ ರಂಜಾನ್ ಹಬ್ಬಕ್ಕಾಗಿ ಈ ಆಫರ್‍ನ್ನು ಕೊಡಲಾಗಿದೆ ಎಂದು ಅಂಗಡಿಯ ಮಾಲೀಕ ಚಂದ್ರಶೇಖರ್ ಪರಸಂಗಿ ಹೇಳಿದ್ದಾರೆ.

    10 ಪೈಸೆ ಯಾಕೆ? 10 ಪೈಸೆ ಬಹಳಷ್ಟು ಮಂದಿಯ ಜೊತೆಗೆ ಇಲ್ಲದ ಕಾರಣ ಮಾಲೀಕರು ಈ ಆಫರ್ ಇಟ್ಟಿದ್ದಾರೆ. ಆದರೆ ಒಂದು ರೂ. ನೀಡಿ 10 ಸೀರೆಯನ್ನು ಪಡೆಯಲು ಸಾಧ್ಯವಿಲ್ಲ.

    ಸೀರೆ ಖರೀದಿಸಲು ಮಹಿಳೆಯರು ಬೆಳಗ್ಗೆಯಿಂದ ಬಿಸಿಲನ್ನು ಲೆಕ್ಕಿಸದೇ ಸರತಿ ಸಾಲಿನಲ್ಲಿ ನಿಂತು ಸೀರೆ ಖರೀದಿಸಿ ಖುಷಿಯಿಂದ ಮನೆಗೆ ತೆರಳುತ್ತಿದ್ದಾರೆ. ಇತ್ತ ಪುರುಷರು ತಮ್ಮ ಪತ್ನಿಯರಿಗಾಗಿ 10 ಪೈಸೆ ನೀಡಿ ಸೀರೆ ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ.

    ಮಂಗಳವಾರದಿಂದ ಈ ವಿಶೇಷ ಆಫರ್ ಪ್ರಾರಂಭವಾಗಿದ್ದು, ಜುಲೈ 15ರವರೆಗೂ ನಿಮಗೆ ನಗರದ ದೃಷ್ಟಿ-ಸೃಷ್ಟಿ ಸ್ಯಾರಿ ಸೆಂಟರ್‍ನಲ್ಲಿ 10 ಪೈಸೆಗೊಂದು ಸೀರೆ ಸಿಗಲಿದೆ. ಕೆಲವು ತಿಂಗಳ ಹಿಂದೆ ಇದೇ ಚಂದ್ರಶೇಖರ್ 20 ರೂ.ಗೆ ಒಂದು ಸೀರೆಯನ್ನು ಮಾರಾಟ ಮಾಡಿದ್ದರು.

     

  • ತಮಿಳುನಾಡಿನ ಕುದುರೆ ವ್ಯಾಪಾರ ಹೇಗಿತ್ತು? ಯಾರು ಎಷ್ಟು ಕೋಟಿಯ ಆಫರ್ ನೀಡಿದ್ರು?

    ತಮಿಳುನಾಡಿನ ಕುದುರೆ ವ್ಯಾಪಾರ ಹೇಗಿತ್ತು? ಯಾರು ಎಷ್ಟು ಕೋಟಿಯ ಆಫರ್ ನೀಡಿದ್ರು?

    ನವದೆಹಲಿ: ಜಯಲಲಿತಾ ನಿಧನರಾದ ಮೇಲೆ ತಮಿಳುನಾಡಿನಲ್ಲಿ ಸಿಎಂ ಕುರ್ಚಿಗಾಗಿ ನಡೆದ ಕುದುರೆ ವ್ಯಾಪಾರ ಈಗ ಬಯಲಾಗಿದೆ.

    ರೆಸಾರ್ಟ್ ನಲ್ಲಿದ್ದ ಶಾಸಕರಿಗೆ ಶಶಿಕಲಾ ಬಣದ ಹಾಲಿ ಸಿಎಂ ಇ.ಪಳನಿಸ್ವಾಮಿ ಟೀಂ ಕೋಟಿ ಕೋಟಿ ಸುರಿದಿದೆ. ರಾಷ್ಟ್ರೀಯ ಇಂಗ್ಲಿಷ್ ಚಾನೆಲ್‍ವೊಂದು ಸ್ಟಿಂಗ್ ಆಪರೇಷನ್ ನಡೆಸಿ ಈ ರಹಸ್ಯವನ್ನ ಭೇದಿಸಿದೆ.

    ಮೊದಲು ಪನ್ನೀರ್ ಸೆಲ್ವಂ ಬಣ ಪ್ರತಿ ಶಾಸಕರಿಗೆ 1 ಕೋಟಿ ಆಫರ್ ನೀಡಿತ್ತು. ಆದ್ರೆ ಶಶಿಕಲಾ ಬಣ 2 ಕೋಟಿಯಿಂದ 6 ಕೋಟಿಯಷ್ಟು ಹಣ, ಜೊತೆಗೆ ಚಿನ್ನ ಕೊಟ್ಟು ಶಾಸಕರನ್ನ ಖರೀದಿಸಿದೆ. ಈ ಸತ್ಯವನ್ನು ಅಣ್ಣಾಡಿಎಂಕೆ ಶಾಸಕ ಶರವಣನ್ ಸ್ಟಿಂಗ್ ಆಪರೇಷನ್‍ನಲ್ಲಿ ಬಾಯ್ಬಿಟ್ಟಿದ್ದಾರೆ.

    ನಾನು 2 ಕೋಟಿ ಪಡೆದು ಇ.ಪಳನಿಸ್ವಾಮಿಯವರಿಗೆ ಬೆಂಬಲ ನೀಡಿದ್ದೇನೆ. ಕೆಲವರು 6 ಕೋಟಿವರೆಗೂ ಹಣ ಪಡೆದಿದ್ದಾರೆ ಅಂತಾ ಒಪ್ಪಿಕೊಂಡಿದ್ದಾರೆ. ನಾವು ಮೊದಲು ರೆಸಾರ್ಟ್‍ಗೆ ಹೋಗಲು ಬಸ್ ಹತ್ತಿದಾಗ 2 ಕೋಟಿ, ರಾಜ್ಯಪಾಲರರ ಭೇಟಿಗೆ ಏರ್‍ಪೋರ್ಟ್‍ಗೆ ಬಂದಾಗ 4 ಕೋಟಿ, ಕೊಯಂಬತ್ತೂರು ತಲುಪಿದಾಗ ಕೆಲವರಿಗೆ 6 ಕೋಟಿ ಹಣ ಸಂದಾಯವಾಗಿದೆ ಅಂತಾ ಹೇಳಿದ್ದಾರೆ.

    ನೋಟು ಅಮಾನ್ಯವಾಗಿದ್ರಿಂದ ಹಣದ ಕೊರತೆ ಇತ್ತು. ಅದಕ್ಕೆ ಕೆಲವರಿಗೆ ಚಿನ್ನದ ರೂಪದಲ್ಲಿ ಶಶಿಕಲಾ ಅಂಡ್ ಇಪಿಎಸ್ ಕಡೆಯವ್ರು ಬಾಕಿ ಸಂದಾಯ ಮಾಡಿದ್ರು ಅಂತಾನೂ ಹೇಳಿದ್ದಾರೆ. ಅಷ್ಟೇ ಅಲ್ಲ ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ವೋಟ್ ಮಾಡೋದಕ್ಕೂ ನಮ್ಮದು ಕೆಲವು ಡಿಮ್ಯಾಂಡ್‍ಗಳಿರುತ್ತೆ ಅಂತ ಹೇಳಿಕೊಂಡಿರೋದು ಈಗ ವಿವಾದ ಹುಟ್ಟುಹಾಕಿದೆ.

     

  • ಬ್ಯಾನ್ ಆಗಿದ್ರೂ  2 ಲಕ್ಷ ರೂ. ನಗದು ವ್ಯವಹಾರ ನಡೆಸೋ ಮಂದಿಗೆ ಐಟಿ ವಾರ್ನಿಂಗ್

    ಬ್ಯಾನ್ ಆಗಿದ್ರೂ 2 ಲಕ್ಷ ರೂ. ನಗದು ವ್ಯವಹಾರ ನಡೆಸೋ ಮಂದಿಗೆ ಐಟಿ ವಾರ್ನಿಂಗ್

    ನವದೆಹಲಿ: 2 ಲಕ್ಷ ರೂಪಾಯಿ ಅಥವಾ ಅದಕ್ಕಿಂತಲೂ ಹೆಚ್ಚಿನ ನಗದು ವ್ಯವಹಾರವನ್ನು ಇನ್ನೂ ನೀವು ಮಾಡುತ್ತಿದ್ದರೆ ಅಷ್ಟೇ ಅಪ್ರಮಾಣದ ದಂಡವನ್ನು ಕಟ್ಟಲು ರೆಡಿಯಾಗಿ.

    ಹೌದು. 2 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ನಗದು ವ್ಯವಹಾರ ನಡೆಸುವ ಮಂದಿಗೆ ಅಷ್ಟೇ ಪ್ರಮಾಣದ ದಂಡವನ್ನು ವಿಧಿಸಲಾಗುವುದು ಎಂದು ಶುಕ್ರವಾರ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

    ಕೇಂದ್ರ ಸರ್ಕಾರ ಈ ವರ್ಷದ ಏಪ್ರಿಲ್ 1ರ ಬಳಿಕ 2 ಲಕ್ಷ ರೂ. ನಗದು ವ್ಯವಹಾರವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ನಿಷೇಧ ಇದ್ದರೂ 2 ಲಕ್ಷ ರೂ. ನಗದು ವ್ಯವಹಾರ ನಡೆಸಿದರೆ ಅಂತವರ ಮೇಲೆ ದಂಡ ವಿಧಿಸುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ.

    ಅಕ್ರಮವಾಗಿ 2 ಲಕ್ಷ ರೂ.ಗಿಂತ ಹೆಚ್ಚಿನ ನಗದು ವ್ಯವಹಾರ ನಡೆಸಿದವರ ಮಾಹಿತಿಯನ್ನು blackmoneyinfo@incometax.gov.in ಇಮೇಲ್ ಮಾಡುವಂತೆ ತೆರಿಗೆ ಇಲಾಖೆ ಜನರಲ್ಲಿ ಕೇಳಿಕೊಂಡಿದೆ.

    ಸಚಿವ ಅರುಣ್ ಜೇಟ್ಲಿ ತಮ್ಮ ಹಣಕಾಸು ಬಜೆಟ್ ನಲ್ಲಿ 2 ಲಕ್ಷ ರೂ.ಗಿಂತ ಹೆಚ್ಚಿನ ನಗದು ವ್ಯವಹಾರವನ್ನು ನಿಷೇಧಿಸುವ ಪ್ರಸ್ತಾಪವನ್ನು ಮಂಡಿಸಿದ್ದರು. ಈ ಬಜೆಟ್‍ಗೆ ಮಾರ್ಚ್ ತಿಂಗಳಿನಲ್ಲಿ ಸಂಸತ್ತು ಅನುಮೋದನೆ ನೀಡಿತ್ತು.

    ನವೆಂಬರ್ 8ರಂದು 1 ಸಾವಿರ ರೂ. ಮತ್ತು 500 ರೂ.ಗಳನ್ನು ನಿಷೇಧಗೊಂಡ ಬಳಿಕ ಸರ್ಕಾರ ಕಪ್ಪು ಹಣವನ್ನು ತಡೆಗಟ್ಟಲು, ಜನರಿಗೆ ಕಪ್ಪುಕುಳಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲು blackmoneyinfo@incometax.gov.in ಇಮೇಲ್ ತೆರೆಯಲಾಗಿದೆ.

  • ಗಮನಿಸಿ, ಎಸ್‍ಬಿಐ ಎಟಿಎಂನಿಂದ ಹಣ ಡ್ರಾ ಮಾಡಿದ್ರೆ 25 ರೂ. ಶುಲ್ಕ ಇಲ್ಲ

    ಗಮನಿಸಿ, ಎಸ್‍ಬಿಐ ಎಟಿಎಂನಿಂದ ಹಣ ಡ್ರಾ ಮಾಡಿದ್ರೆ 25 ರೂ. ಶುಲ್ಕ ಇಲ್ಲ

    – ಸುತ್ತೋಲೆ ಬಳಿಕ ಸ್ಪಷ್ಟನೆ ನೀಡಿದ ಎಸ್‍ಬಿಐ

    ನವದೆಹಲಿ: ಎಟಿಎಂನಿಂದ ಹಣವನ್ನು ಡ್ರಾ ಮಾಡಿದ್ರೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ ಎಂದು ಎಸ್‍ಬಿಐ ಸ್ಪಷ್ಟನೆ ನೀಡಿದೆ.

    ಎಸ್‍ಬಿಐ ಬಡ್ಡಿ  ಮತ್ತು ಮೊಬೈಲ್ ವ್ಯಾಲೆಟ್ ಬಳಸಿ ಎಟಿಎಂನಿಂದ ಹಣ ವನ್ನು ತೆಗೆಯುವ ಗ್ರಾಹಕರಿಗೆ ಮಾತ್ರ 25 ರೂ. ಶುಲ್ಕ ಅನ್ವಯವಾಗಲಿದೆ. ಇದು ಉಳಿತಾಯ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ ಅನ್ವಯವಾಗುವುದಿಲ್ಲ ಎಂದು  ಎಂದು ಎಸ್‍ಬಿಐ ತಿಳಿಸಿದೆ.

    ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾದ ಬಳಿಕ, ಎಸ್‍ಬಿಐ ಆಡಳಿತ ನಿರ್ದೇಶಕ ರಜನೀಶ್ ಕುಮಾರ್ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದು, ಶೀಘ್ರವೇ ಮತ್ತೊಂದು ಸುತ್ತೋಲೆ ಹೊರಡಿಸಲಾಗುವುದು. ಅಷ್ಟೇ ಅಲ್ಲದೇ ನೂತನ ಸೇವಾ ಶುಲ್ಕ ಜೂನ್ 1ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

    ಹೀಗಾಗಿ ಬುಧವಾರ ಎಸ್‍ಬಿಐ ಹೊರಡಿಸಿದ ಸುತ್ತೋಲೆಯಲ್ಲಿ ಏನಿತ್ತು ಎನ್ನುವುದಕ್ಕೆ ಅದರ ಪ್ರತಿಯನ್ನು ಇಲ್ಲಿ ನೀಡಲಾಗಿದೆ.

    ಯಾವುದಕ್ಕೆ ಎಷ್ಟು ಶುಲ್ಕ?
    ಐಎಂಪಿಎಸ್ ಹಣ ವರ್ಗಾವಣೆ:
    1 ಲಕ್ಷ ರೂ.ವರೆಗಿನ ಹಣಕ್ಕೆ 5 ರೂ. ಮತ್ತು ಸೇವಾ ಶುಲ್ಕ ವಿಧಿಸಿದರೆ, 1 ಲಕ್ಷ ದಿಂದ ಮೇಲ್ಪಟ್ಟು 2 ಲಕ್ಷರೂ ವರೆಗಿನ ವ್ಯವಹಾರಕ್ಕೆ  15 ರೂ. ಮತ್ತು ಸೇವಾ ಶುಲ್ಕ ವಿಧಿಸಲಿದೆ. 2 ಲಕ್ಷದಿಂದ ಮೇಲ್ಪಟ್ಟು 5 ಲಕ್ಷ ರೂ.ವರೆಗಿನ ವ್ಯವಹಾರಕ್ಕೆ 25 ರೂ.

    ಚೆನ್ನಾಗಿಲ್ಲದ ನೋಟ್‍ಗಳ ಬದಲಾವಣೆಗೆ:
    5 ಸಾವಿರ ರೂ. ವರೆಗೆ ಅಥವಾ 20 ನೋಟ್‍ಗಳ ಬದಲಾವಣೆಗೆ ಯಾವುದೇ ಶುಲ್ಕ ಇಲ್ಲ. ಆದ್ರೆ 20ಕ್ಕಿಂತ ಹೆಚ್ಚು ನೋಟ್‍ಗಳಿದ್ರೆ ಒಂದು ನೋಟ್‍ಗೆ 2 ರೂ. ಜೊತೆಗೆ ಸೇವಾ ಶುಲ್ಕ ಕೊಡಬೇಕಾಗುತ್ತದೆ. ಇನ್ನು 5 ಸಾವಿರ ರೂ. ಗಿಂತ ಹೆಚ್ಚಿನ ಮೊತ್ತವಿದ್ರೆ ಪ್ರತಿ ನೋಟ್‍ಗೆ 2 ರೂ. ಅಥವಾ ಪ್ರತಿ 1000 ರೂಪಾಯಿಗೆ 5 ರೂ. ಯಾವುದು ಅಧಿಕವೋ ಆ ಮೊತ್ತ ಜೊತೆಗೆ ಸೇವಾ ಶುಲ್ಕ ತೆರಬೇಕಾಗುತ್ತದೆ.

    ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ ಖಾತೆಗಳ ಸೇವಾ ಶುಲ್ಕ
    10 ಹಾಳೆಗಳ ಚೆಕ್ ಬುಕ್ ಪಡೆಯಲು 30 ರೂ. ಜೊತೆಗೆ ಸೇವಾ ಶುಲ್ಕ ಕೊಡಬೇಕು. ಹಾಗೆ 25 ಹಾಳೆಗಳ ಚೆಕ್‍ಬುಕ್‍ಗೆ 75 ರೂ. ಜೊತೆಗೆ ಸೇವಾ ಶುಲ್ಕ, 50 ಹಾಳೆಗಳ ಚೆಕ್ ಬುಕ್‍ಗೆ 150 ರೂ. ಜೊತೆಗೆ ಸೇವಾ ಶುಲ್ಕ ತೆರಬೇಕಾಗುತ್ತದೆ.

    ಎಟಿಎಂ ಕಾರ್ಡ್‍ಗಾಗಿ
    ಕೇವಲ ರುಪೇ ಕಾರ್ಡ್‍ಗಳನ್ನ ಮಾತ್ರ ಉಚಿತವಾಗಿ ನೀಡಲಾಗುತ್ತದೆ. ಎಟಿಎಂನಿಂದ ಹಣ ವಿತ್‍ಡ್ರಾ ಮಾಡಲು ತಿಂಗಳ ಮೊದಲ 4 ವಿತ್‍ಡ್ರಾವಲ್‍ಗೆ ಯಾವುದೇ ಶುಲ್ಕ ಇರುವುದಿಲ್ಲ. 4 ಕ್ಕಿಂತ ಹೆಚ್ಚಿನ ವಿತ್‍ಡ್ರಾವಲ್ ಮಾಡಿದ ಬಳಿಕ ಎಸ್‍ಬಿಐ ಶಾಖೆಯಲ್ಲೇ ಮತ್ತೆ ವಿತ್‍ಡ್ರಾ ಮಾಡಿದ್ರೆ ಪ್ರತಿ ವಿತ್‍ಡ್ರಾವಲ್‍ಗೆ 50 ರೂ. ಜೊತೆಗೆ ಸೇವಾ ಶುಲ್ಕ, ಬೇರೆ ಬ್ಯಾಂಕ್‍ಗಳ ಎಟಿಎಂನಲ್ಲಿ ವಿತ್‍ಡ್ರಾ ಮಾಡಿದ್ರೆ ಪ್ರತಿ ವಿತ್‍ಡ್ರಾವಲ್‍ಗೆ 20 ರೂ. ಜೊತೆಗೆ ಸೇವಾ ಶುಲ್ಕ ಕೊಡಬೇಕು. ಹಾಗೆ ಎಸ್‍ಬಿಐ ಎಟಿಎಂಗಳಲ್ಲಿ ವಿತ್‍ಡ್ರಾ ಮಾಡಿದ್ರೆ 10 ರೂ. ಜೊತೆಗೆ ಸೇವಾ ಶುಲ್ಕ ವಿಧಿಸಲಾಗುತ್ತದೆ.

  • ಗಮನಿಸಿ, ರಿಯಲ್ ಎಸ್ಟೇಟ್ ಉದ್ಯಮಿಗಳು ನಿಮ್ಮನ್ನು ಯಾಮಾರಿಸೋ ಮೊದಲು ಈ ಸುದ್ದಿ ಓದಿ

    ಗಮನಿಸಿ, ರಿಯಲ್ ಎಸ್ಟೇಟ್ ಉದ್ಯಮಿಗಳು ನಿಮ್ಮನ್ನು ಯಾಮಾರಿಸೋ ಮೊದಲು ಈ ಸುದ್ದಿ ಓದಿ

    ನವದೆಹಲಿ: ಕಪ್ಪುಹಣ ತಡೆಗಟ್ಟಲು 500, 1 ಸಾವಿರ ಮುಖಬೆಲೆಯ ನೋಟನ್ನು ನಿಷೇಧಿಸಿದ ಮೋದಿ ಸರ್ಕಾರ ಈಗ ರಿಯಲ್ ಎಸ್ಟೇಟ್ ನಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ತಡೆಗಟ್ಟಲು ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ (ಆರ್‍ಇಆರ್‍ಎ) ಜಾರಿಗೆ ತಂದಿದೆ.

    ಹೌದು. 9 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಆರ್‍ಇಆರ್‍ಎ ಕಾಯ್ದೆ 2016 ಇಂದಿನಿಂದ ಜಾರಿಗೆ ಬರಲಿದೆ. ಗ್ರಾಹಕ ಕೇಂದ್ರಿತ ಈ ಕಾಯ್ದೆ ಜಾರಿಯಿಂದ, ಖರೀದಿದಾರನೇ ದೊರೆಯಾಗುವ ಹೊಸ ಶಕೆ ಆರಂಭವಾಗಲಿದೆ. ಇದನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಕೂಡ ಸ್ವಾಗತಿಸಿದ್ದಾರೆ. ಇದರಿಂದ ಬಡವರು ಮಧ್ಯಮವರ್ಗದವರಿಗೆ ಮೋಸ ಮಾಡಿದ್ರೆ ಡೆವಲಪರ್ಸ್‍ಗಳಿಗೆ ಬ್ರೋಕರ್‍ಗಳಿಗೆ ಹಾಗೂ ಖರೀದಿದಾರರಿಗೂ ಜೈಲು ಶಿಕ್ಷೆ ಗ್ಯಾರಂಟಿಯಾಗುತ್ತದೆ.

    ರಿಯಲ್ ಎಸ್ಟೇಟ್(ನಿಯಂತ್ರಣ ಅಮತ್ತು ಅಭಿವೃದ್ಧಿ) ಮಸೂದೆ-2016 ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿಯೇ ಸಂಸತ್ತಿನಲ್ಲಿ ಅಂಗೀಕಾರವಾಗಿತ್ತು. ಕಾಯ್ದೆಯ ಎಲ್ಲ 92 ಸೆಕ್ಷನ್‍ಗಳು ಮೇ 1 ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿವೆ.

    ಒಟ್ಟಿನಲ್ಲಿ ದೇಶದ ರಿಯಲ್ ಎಸ್ಟೇಟ್ ವಲಯದಲ್ಲಿ ತ್ವರಿತ ಮತ್ತು ವ್ಯಾಪಕ ಬದಲಾವಣೆ ತರುವ ಮಹತ್ವದ ಕಾಯ್ದೆಯನ್ನ ಮೋದಿ ಸರ್ಕಾರ ಅಧಿಕೃತವಾಗಿ ಜಾರಿಗೊಳಿಸಿದೆ. ಮನೆ ಖರೀದಿಸುವವರು, ಸೈಟು ಖರೀದಿ ಮಾಡೋರನ್ನ ರಕ್ಷಿಸಲು ಮತ್ತು ಪ್ರಾಮಾಣಿಕ ಖಾಸಗಿ ಉದ್ಯಮಿಗಳನ್ನು ಉತ್ತೇಜಿಸಲು ಅಗತ್ಯವಾದ ನಿಯಮಗಳೂ ಈ ಕಾಯ್ದೆಯಲ್ಲಿ ಇವೆ.

    ಏನಿದು ರಿಯಲ್ ಎಸ್ಟೇಟ್ ಕಾಯ್ದೆ?
    * ಗೃಹ ನಿರ್ಮಾಣದ ಯೋಜನೆಗಳು ಕಡ್ಡಾಯವಾಗಿ ನೋಂದಣಿಯಾಗಬೇಕು.
    * ಗ್ರಾಹಕರಿಂದ ಸಂಗ್ರಹಿಸಿದ ಹಣದ ಶೇ.70ರಷ್ಟನ್ನು ಪ್ರತ್ಯೇಕ ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಡಬೇಕು.
    * ಸಕಾಲದಲ್ಲಿ ಯೋಜನೆ ಪೂರ್ಣಗೊಳಿಸಬೇಕು. ಯೋಜನೆ ವಿಳಂಬವಾದರೆ ದಂಡ-ಜೈಲು ಶಿಕ್ಷೆ.

    * ಯೋಜನೆಗಳ ವಿವರ ಮತ್ತು ಪ್ರಗತಿಯನ್ನು ನಿಯಂತ್ರಣ ಸಂಸ್ಥೆಯ ಅಂತರ್ಜಾಲ ತಾಣದಲ್ಲಿ ಪ್ರಕಟಿಸಬೇಕು.
    * ಯೋಜನೆ ವಿಳಂಬವಾದರೆ ಖರೀದಿದಾರ ಪಡೆದ ಬ್ಯಾಂಕ್ ಸಾಲದ ತಿಂಗಳ ಬಡ್ಡಿಯನ್ನು ಕಟ್ಟಡ ನಿರ್ಮಾಣಗಾರ ಭರಿಸಬೇಕು.
    * ಮೇಲ್ಮನವಿ ನ್ಯಾಯಮಂಡಳಿ ಮತ್ತು ನಿಯಂತ್ರಣ ಪ್ರಾಧಿಕಾರಗಳ ಆದೇಶ ಉಲ್ಲಂಘಿಸಿದರೆ ಜೈಲು ಶಿಕ್ಷೆ ಜೊತೆ ದಂಡ.
    * ಡೆವಲಪರ್ಸ್ ಗಳಿಗೆ 3 ವರ್ಷ ಮತ್ತು ಏಜೆಂಟ್ ಹಾಗೂ ಖರೀದಿದಾರರಿಗೆ 1 ವರ್ಷ ಜೈಲು ಶಿಕ್ಷೆ.
    * ಪ್ರಾಧಿಕಾರ ರಚಿಸದೇ ಹೋದರೆ ಆಯಾ ರಾಜ್ಯ ಸರ್ಕಾರದ ವಿರುದ್ಧ ಜನರೇ ದೂರು ನೀಡಬಹುದು.

    https://www.youtube.com/watch?v=p4LyXI3xRA0

  • ಬಸ್ಸಿನಲ್ಲಿ ಅಕ್ರಮವಾಗಿ ಸಾಗಿಸ್ತಿದ್ದ 1.30 ಕೋಟಿ ರೂ. ಹಳೇ ನೋಟ್‍ಗಳು ಜಪ್ತಿ- 3 ಮಹಿಳೆಯರು ವಶಕ್ಕೆ

    ಬಸ್ಸಿನಲ್ಲಿ ಅಕ್ರಮವಾಗಿ ಸಾಗಿಸ್ತಿದ್ದ 1.30 ಕೋಟಿ ರೂ. ಹಳೇ ನೋಟ್‍ಗಳು ಜಪ್ತಿ- 3 ಮಹಿಳೆಯರು ವಶಕ್ಕೆ

    ಉತ್ತರ ಕನ್ನಡ: ಬಸ್ಸಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1 ಕೋಟಿ 30 ಲಕ್ಷ ರೂ. ಮೌಲ್ಯದ ನಿಷೇಧಿತ 500 ಮತ್ತು 1 ಸಾವಿರ ಮುಖಬೆಲೆಯ ನೋಟುಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ಹಣ ಸಾಗಿಸುತ್ತಿದ್ದ ಮೂವರು ಮಹಿಳೆಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಮುಂಡಗೋಡು ಮೂಲದ ಜಯಶ್ರೀ ಹನುಮಂತಗೌಳಿ, ಭವಾನಿ ಹಾಗೂ ಮೀನಾಕ್ಷಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದವರು. ಗೋವಾದ ಮಡಗಾಂ ನಿಂದ ಮುಂಡಗೋಡಿಗೆ ಹಣ ಸಾಗಿಸುತ್ತಿರುವಾಗ ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ಬಳಿ ಚಿತ್ತಾಕುಲ ಪೊಲೀಸರು ಹಣ ಜಪ್ತಿ ಮಾಡಿ ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ.

    ಮುಂಡಗೋಡು ಪಟ್ಟಣದ ವಾಣಿ ಪ್ರಭು ಎಂಬ ವೈದ್ಯೆಗೆ ಸೇರಿದ ಹಣವಿದು ಎಂದು ಮಹಿಳೆಯರು ಪೊಲೀಸರಿಗೆ ತಿಳಿಸಿದ್ದಾರೆ. ಈ ಸಂಬಂಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ನೋಟ್ ಬ್ಯಾನ್: ಬರೋಬ್ಬರಿ 246 ಕೋಟಿ ರೂ. ಹಣವನ್ನು ಠೇವಣಿ ಇಟ್ಟ ತಮಿಳುನಾಡು ಉದ್ಯಮಿ!

    ನೋಟ್ ಬ್ಯಾನ್: ಬರೋಬ್ಬರಿ 246 ಕೋಟಿ ರೂ. ಹಣವನ್ನು ಠೇವಣಿ ಇಟ್ಟ ತಮಿಳುನಾಡು ಉದ್ಯಮಿ!

    ಚೆನ್ನೈ: ನವೆಂಬರ್ 8ರಂದು 500, 1 ಸಾವಿರ ರೂ. ಮುಖಬೆಲೆಯ ನೋಟುಗಳು ನಿಷೇಧವಾದ ಬಳಿಕ ತಮಿಳುನಾಡು ಮೂಲದ ಉದ್ಯಮಿಯೊಬ್ಬರು ಬರೊಬ್ಬರಿ 246 ಕೋಟಿ ರೂ. ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ.

    ನಾಮಕ್ಕಳ್ ಜಿಲ್ಲೆಯ ತಿರುಚಿನ್ಗೊಡ್‍ನ ಉದ್ಯಮಿ ಇಷ್ಟೊಂದು ಮೊತ್ತದ ಹಳೆ ನೋಟುಗಳನ್ನು ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡಿದ್ದಾರೆ. ಉದ್ಯಮಿ ಹೆಸರನ್ನು ಐಟಿ ಅಧಿಕಾರಿಗಳು ಬಹಿರಂಗ ಪಡಿಸಿಲ್ಲ. ಆದರೆ ಈ ಠೇವಣಿಗೆ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ(ಪಿಎಂಜಿಕೆವೈ) ಅಡಿಯಲ್ಲಿ ಶೇ.45ರಷ್ಟು ತೆರಿಗೆ ಬೀಳಲಿದೆ.

    ಜಮೆ ಮಾಡಿದ ಬಳಿಕ ಉದ್ಯಮಿ ನಾಪತ್ತೆಯಾಗಿದ್ದು, 15 ದಿನಗಳ ಬಳಿಕ ಆದಾಯ ತೆರಿಗೆ ಅಧಿಕಾರಿಗಳು ಪಿಎಂಜಿಕೆವೈ ಯೋಜನೆ ಬಗ್ಗೆ ತಿಳಿಸಿದ್ದಾರೆ. ಇದಾದ ಬಳಿಕ ಉದ್ಯಮಿ ಈ ಯೋಜನೆಯ ಅಡಿಯಲ್ಲಿ ಹಣವನ್ನು ಠೇವಣಿ ಇಡುವುದಾಗಿ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ತಮಿಳುನಾಡು ಮತ್ತು ಪುದುಚ್ಚೇರಿಯಲ್ಲಿ 200 ಕ್ಕೂ ಹೆಚ್ಚು ವ್ಯಕ್ತಿಗಳು ಮತ್ತು ಕಂಪೆನಿಗಳು ಸುಮಾರು 600 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಿವಿಧ ಬ್ಯಾಂಕ್ ಗಳಲ್ಲಿ ಠೇವಣಿ ಇಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

    ಈಗಾಗಲೇ ಬಹಳಷ್ಟು ಜನ ಪಿಎಂಜಿಕೆವೈ ಯೋಜನೆಯ ಅಡಿಯಲ್ಲಿ ಹಣವನ್ನು ಇಟ್ಟಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಹಣವನ್ನು ಇಡಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ಈ ಅವಧಿಯ ಒಳಗಡೆ ಹಣವನ್ನು ಠೇವಣಿ ಇಡದಿದ್ದರೆ, ಏಪ್ರಿಲ್ 1 ರಿಂದ ದಂಡದ ಮೊತ್ತ ಏರಿಸಲಾಗುವುದು ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

    ಏನಿದು ಪಿಎಂಜಿಕೆವೈ?
    ಪಿಎಂಜಿಕೆವೈ ಯೋಜನೆ ಅಡಿ ಠೇವಣಿ ಇಟ್ಟ ಹಣ ಕಪ್ಪು ಹಣಗಳಿಗೆ ಶೇ. 49.9 ರಷ್ಟು ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೇ ಶೇ.25ರಷ್ಟು ಹಣವನ್ನು ಆರ್‍ಬಿಐಯಲ್ಲಿ 4 ವರ್ಷಗಳ ಕಾಲ ಠೇವಣಿ ಇಡಬೇಕಾಗುತ್ತದೆ. ಈ ರೀತಿಯಾಗಿ ಠೇವಣಿ ಇರಿಸಿದ ಹಣಕ್ಕೆ ಯಾವುದೇ ಬಡ್ಡಿ ಸಿಗುವುದಿಲ್ಲ. ಈ ಯೋಜನೆ ಹೊರತುಪಡಿಸಿ ಸಾಮಾನ್ಯ ಪ್ರಕ್ರಿಯೆ ಮೂಲಕ ತಮ್ಮ ಕಪ್ಪು ಹಣ ಘೋಷಿಸಿಕೊಂಡರೆ ಶೇ. 77.2ರಷ್ಟು ದಂಡ ಸೇರಿದಂತೆ ತೆರಿಗೆ ಕಟ್ಟಬೇಕಾಗುತ್ತದೆ.

    ಇಲಾಖೆ ನಡೆಸುವ ದಾಳಿಯಲ್ಲಿ ಕಪ್ಪು ಹಣ ಸಿಕ್ಕಿ ಬಿದ್ದರೆ ಶೇ.137.25ರಷ್ಟು ದಂಡ ಹಾಗೂ ಬೇನಾಮಿ ಕಾಯ್ದೆ ಅನ್ವಯ ಏಳು ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ಆದಾಯ ತೆರಿಗೆ ಇಲಾಖೆ ತಿಳಿಸಿದೆ.

  • 50 ಲಕ್ಷ ರೂ. ಹಳೆ ನೋಟು ಬದಲಾವಣೆಗೆ ಮುಂದಾಗಿದ್ದ ಇಬ್ಬರ ಸೆರೆ

    50 ಲಕ್ಷ ರೂ. ಹಳೆ ನೋಟು ಬದಲಾವಣೆಗೆ ಮುಂದಾಗಿದ್ದ ಇಬ್ಬರ ಸೆರೆ

    – ವಿದೇಶದಲ್ಲಿದ್ದ ಲೆಕ್ಕ ತೋರಿಸಿ ನೋಟ್ ಎಕ್ಸ್ ಚೇಂಜ್ ದಂಧೆ

    ಬೆಂಗಳೂರು: ನೋಟ್ ಬ್ಯಾನ್ ಆದ ಬಳಿಕ ನೋಟ್ ಎಕ್ಸ್ ಚೇಂಜ್ ಮಾಡಿಕೊಡ್ತೀವಿ ಎಂದು ಪರ್ಸೆಂಟೇಜ್ ಲೆಕ್ಕದಲ್ಲಿ ಹಣ ಪೀಕುತ್ತಿದ್ದ ವಿಷಯ ನಿಮಗೆ ಗೊತ್ತೇ ಇದೆ. ಇದೇ ರೀತಿಯ ದಂಧೆ ಮಾಡುವ ಇಬ್ಬರು ಖದೀಮರು ಸಿಸಿಬಿ ಬಲೆಗೆ ಬಿದ್ದಿದ್ದಾರೆ.

    ವಿದೇಶದಲ್ಲಿರುವ ಭಾರತೀಯರಿಗೆ ನೋಟ್ ಎಕ್ಸ್ ಚೇಂಜ್ ಮಾಡಿಕೊಳ್ಳಲು ಸರ್ಕಾರ ನೀಡಿರುವ ಗಡುವಿನಲ್ಲಿ ಇನ್ನೂ 13 ದಿನಗಳು ಬಾಕಿ ಇದ್ದು ಇದನ್ನೇ ಬಂಡವಾಳ ಮಾಡಿಕೊಂಡ ಇಬ್ಬರು ಪರ್ಸೆಂಟೇಜ್ ಡೀಲ್ ನಡೆಸುವಾಗ ಸಿಕ್ಕಿ ಬಿದ್ದಿದ್ದಾರೆ. ಬೆಂಗಳೂರಿನ ಆನಂದ್ ಜೈನ್ ಮತ್ತು ವಿನಾಯಕ್ ಪ್ರಸಾದ್ ಬಂಧಿತರು. ಇವರಿಂದ ಸುಮಾರು 50 ಲಕ್ಷ ರೂ. ಮೌಲ್ಯದ 500 ಹಾಗೂ 1 ಸಾವಿರ ರೂ.ಗಳ ಹಳೆಯ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಇನ್ನು ಸಿಕ್ಕಿ ಬಿದ್ದಿರುವ ಇಬ್ಬರು ಆರೋಪಿಗಳು ಬ್ರೋಕರ್ ಕೆಲಸ ಮಾಡಿಕೊಂಡಿರೋದಾಗಿ ಹೇಳಿಕೊಂಡಿದ್ದಾರೆ. ಇವರು ಬ್ಯಾಂಕ್ ಸಿಬ್ಬಂದಿ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿಯೂ ಸಿಕ್ಕಿದೆ. ಅಶೋಕ ನಗರ ಬಳಿ ಇರುವ ಲಿಂಕ್ ಫೋರ್ಡ್ ರಸ್ತೆಯ ಮನೆಯೊಂದರಲ್ಲಿ ಈ ಇಬ್ಬರು ಆರೋಪಿಗಳು ಡೀಲ್ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ತಂಡ ದಾಳಿ ಮಾಡಿತ್ತು. ದಾಳಿ ನಡೆಸುವ ಸಂದರ್ಭದಲ್ಲಿ ಪರಾರಿಯಾದ ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿರುವುದಾಗಿ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ರವಿ ಹೇಳಿದ್ದಾರೆ. ಸಾರ್ವಜನಿಕರು ಕೂಡಾ ಇಂತಹ ವ್ಯಕ್ತಿಗಳು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

     

  • ನೋಟ್ ಬ್ಯಾನ್‍ನಿಂದ ಸಾವನ್ನಪ್ಪಿರುವವರ ‘ಅಧಿಕೃತ ವರದಿ’ ಇಲ್ಲ: ಕೇಂದ್ರ ಸರ್ಕಾರ

    ನೋಟ್ ಬ್ಯಾನ್‍ನಿಂದ ಸಾವನ್ನಪ್ಪಿರುವವರ ‘ಅಧಿಕೃತ ವರದಿ’ ಇಲ್ಲ: ಕೇಂದ್ರ ಸರ್ಕಾರ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 500 ಹಾಗೂ 1000 ರೂ. ನೋಟ್ ಬ್ಯಾನ್ ಮಾಡಿದ ವೇಳೆ ನೋಟು ಬದಲಾವಣೆಗೆ ಕ್ಯೂನಲ್ಲಿ ನಿಂತು ಜನರು ಸಾವನ್ನಪ್ಪಿರುವ ಬಗ್ಗೆ ಯಾವುದೇ ‘ಅಧಿಕೃತ ವರದಿ’ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

    ಲೋಕಸಭೆಯಲ್ಲಿ ಈ ಬಗ್ಗೆ ಲಿಖಿತ ಉತ್ತರ ನೀಡಿರುವ ಹಣಕಾಸು ಇಲಾಖೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್, ಜನರು ಸಾವನ್ನಪ್ಪಿರುವಂತಹ ಅಧಿಕೃತ ವರದಿ ನಮಗಿನ್ನೂ ಬಂದಿಲ್ಲ ಎಂದು ಹೇಳಿದ್ದಾರೆ.

    ಕೇಂದ್ರ ಸರ್ಕಾರದ ನೋಟ್ ಬ್ಯಾನ್ ನಿರ್ಧಾರದಿಂದ ತೊಂದರೆಗೆ ಸಿಲುಕಿ ಎಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಿಪಿಎಂ ಸಂಸದ ಜಿತೇಂದ್ರ ಚೌಧರಿ ಹಾಗೂ ಬಿಜೆಪಿ ಸಂಸದ ಮನೋಜ್ ತಿವಾರಿ ಪ್ರಶ್ನೆ ಕೇಳಿದ್ದರು. ಇದಕ್ಕೆ ಸಚಿವರು ಇಂದು ಲಿಖಿತ ಉತ್ತರ ನೀಡಿದ್ದಾರೆ.

    ನೋಟ್ ಬ್ಯಾನ್ ಮಾಡಿದ್ದಾಗ, ದೇಶದ ಹಲವೆಡೆ ಜನ ಕ್ಯೂನಲ್ಲಿ ನಿಂತಿದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದರು ಎಂಬ ವರದಿಗಳೂ ಬಂದಿದ್ದವು. ಕಳೆದ ನವೆಂಬರ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 500 ಹಾಗೂ 1 ಸಾವಿರ ರೂ.ಗಳ ನೋಟನ್ನು ಬ್ಯಾನ್ ಮಾಡಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದರು. ಈ ವೇಳೆ ನೋಟುಗಳನ್ನು ಜಮೆ ಮಾಡಲು ಜನರು ಸರತಿ ಸಾಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು.

    ಇದನ್ನೂ ಓದಿ:ಮತ್ತೆ 2,000 ನೋಟು ನಿಷೇಧವಾಗುತ್ತಾ: ಜನ್ರಲ್ಲಿ ಮೂಡಿದ್ದ ಪ್ರಶ್ನೆಗೆ ಜೇಟ್ಲಿ ಉತ್ತರಿಸಿದ್ರು