Tag: ನೋಟ್ ಬ್ಯಾನ್

  • ನಿರಾಶಾವಾದಿಗಳಿಂದ ಅಪಪ್ರಚಾರ, ಆರ್ಥಿಕತೆ ಕುಸಿತವಾಗಿಲ್ಲ: ಮೋದಿಯಿಂದ ಅಂಕಿಸಂಖ್ಯೆಯ ಭಾಷಣ

    ನಿರಾಶಾವಾದಿಗಳಿಂದ ಅಪಪ್ರಚಾರ, ಆರ್ಥಿಕತೆ ಕುಸಿತವಾಗಿಲ್ಲ: ಮೋದಿಯಿಂದ ಅಂಕಿಸಂಖ್ಯೆಯ ಭಾಷಣ

    ನವದೆಹಲಿ: ದೇಶದ ಆರ್ಥಿಕತೆ ಕುಸಿದಿಲ್ಲ. ಆದರೆ ನಿರಾಶಾವಾದಿಗಳು ಹಿಂಜರಿತವಾಗಿದೆ ಎನ್ನುವ ಸುದ್ದಿಯನ್ನು ಹರಡಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುವ ಮೂಲಕ ವಿರೋಧಿ ಪಕ್ಷಗಳ ಟೀಕೆಗೆ ಪ್ರತ್ಯುತ್ತರ ನೀಡಿದ್ದಾರೆ.

    ದೆಹಲಿಯ ವಿಜ್ಞಾನ ಭವನದಲ್ಲಿ ಇನ್ಸ್ ಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಅಂಕಿಸಂಖ್ಯೆಗಳಿಂದ ಕೂಡಿದ ಮಾಹಿತಿ ಇರುವ ಭಾಷಣವನ್ನು ಮಾಡುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.

    500, 1ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದರಿಂದ ದೇಶಕ್ಕೆ ಒಳ್ಳೆದಾಗುತ್ತಿದೆ. ನೋಟ್ ಬ್ಯಾನ್ ಬಳಿಕ ನಗದು ಚಲಾವಣೆ ಪ್ರಮಾಣ ಶೇ.12ರಿಂದ ಶೇ.9ಕ್ಕೆ ಕುಸಿದಿದೆ ಎಂದು ಹೇಳಿದರು.

    ದೇಶದ ಆರ್ಥಿಕ ಪ್ರಗತಿ (ಜಿಡಿಪಿ) ಮೊದಲ ತ್ರೈಮಾಸಿಕದಲ್ಲಿ ಮೂರು ವರ್ಷಗಳ ಕನಿಷ್ಠ ಮಟ್ಟವಾದ ಶೇ 5.7ಕ್ಕೆ ಕುಸಿತ ಕಂಡಿದ್ದನ್ನು ಒಪ್ಪಿಕೊಂಡ ಅವರು, ಯುಪಿಎ ಅವಧಿಯಲ್ಲಿ 8 ಬಾರಿ ಶೇ.5.7ಕ್ಕಿಂತ ಕಡಿಮೆ ಜಿಡಿಪಿ ಕುಸಿದಿತ್ತು ಎಂದು ಹೇಳಿದರು. ಆರಂಭದಲ್ಲಿ ಸಮಸ್ಯೆಯಾದರೂ ಭವಿಷ್ಯದಲ್ಲಿ ದೇಶಕ್ಕೆ ಲಾಭವಾಗಲಿದೆ ಎನ್ನುವ ದೃಷ್ಟಿಯನ್ನು ನೋಡಿಕೊಂಡೇ ನೋಟ್ ನಿಷೇಧ ಮಾಡಿ ಸರಕು ಮತ್ತು ಸೇವಾ ತೆರಿಗೆಯನ್ನು(ಜಿಎಸ್‍ಟಿ) ತಂದಿದ್ದೇವೆ. ನಮ್ಮ ಮೂರು ವರ್ಷದ ಅವಧಿಯಲ್ಲಿ ಜಿಡಿಪಿ ದರ ಶೇ.7.5 ಇತ್ತು ಎನ್ನುವುದನ್ನು ಎಲ್ಲರು ತಿಳಿದುಕೊಳ್ಳಬೇಕು. ಮುಂದಿನ ತ್ರೈಮಾಸಿಕದಲ್ಲಿ ಶೇ.7.7 ಜಿಡಿಪಿ ದರ ಬೆಳವಣಿಗೆಯಾಗುವ ನಿರೀಕ್ಷೆಯಲ್ಲಿದೆ ಎಂದು ಹೇಳಿದರು.

    ಹೊಟ್ಟೆ ತುಂಬಿರುವವರು ನನ್ನನ್ನು ದುರ್ಬಲ ಮಾಡಲು ನೋಡುತ್ತಿದ್ದಾರೆ. ದೇಶದ ಭವಿಷ್ಯಕ್ಕಾಗಿ ನಮ್ಮ ಕೆಲಸ ಕಠಿಣವಾಗಿರಬಹುದು. ಆದ್ರೆ, ಹೃದಯ ಮೃದು, ಸಂವೇದನಾಶೀಲವಾಗಿದೆ. ಕಪ್ಪುಹಣವನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ನೊಂದಣಿಯಾದ 3 ಲಕ್ಷ ಕಂಪೆನಿಗಳಲ್ಲಿ 2.1 ಲಕ್ಷಕ್ಕೂ ಅಧಿಕ ಕಂಪೆನಿಗಳು ನಕಲಿಯಾಗಿದೆ ಎನ್ನುವ ವಿಚಾರ ನೋಟ್ ಬ್ಯಾನ್ ಬಳಿಕ ತಿಳಿದು ಬಂದಿದೆ ಎಂದು ವಿವರಿಸಿದರು.

    ಎಫ್‍ಡಿಐನಲ್ಲಿ ದಾಖಲೆಯಾಗಿದ್ದು, 21 ಇಲಾಖೆಗಳಲ್ಲಿ 87 ಸುಧಾರಣೆಗಳನ್ನು ತಂದಿದ್ದೇವೆ. ಜಿಎಸ್‍ಟಿಯಲ್ಲಿ ಸಮಸ್ಯೆಯಾದರೆ ಅಗತ್ಯ ಬದಲಾವಣೆ ತರಲು ಸಿದ್ಧವಾಗಿದ್ದೇವೆ. ದೇಶದ ಆರ್ಥಿಕತೆಯ ಮೂಲ ಸದೃಢವಾಗಿದೆ. ಜನರು ಕಷ್ಟಪಟ್ಟು ದುಡಿದ ಹಣದ ಮಹತ್ವ ಸರ್ಕಾರಕ್ಕೆ ಗೊತ್ತಿದೆ. ನಮ್ಮ ಯೋಜನೆಗಳು ಬಡವರು ಮತ್ತು ಮಧ್ಯಮ ವರ್ಗದ ಜನರ ಉತ್ತಮ ಜೀವನವನ್ನು ಕೇಂದ್ರೀಕರಿಸಿವೆ. 2022ರಲ್ಲಿ ಹೊಸ ಭಾರತಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಲಿದೆ ಎಂದು ಹೇಳಿದರು.

  • ಐಟಿ, ಇಡಿ ದಾಳಿಗೊಳಗಾದ ಸಿಎಂ ಆಪ್ತರಿಗಿಲ್ಲ ರಿ-ಪೋಸ್ಟಿಂಗ್ ಭಾಗ್ಯ!

    ಐಟಿ, ಇಡಿ ದಾಳಿಗೊಳಗಾದ ಸಿಎಂ ಆಪ್ತರಿಗಿಲ್ಲ ರಿ-ಪೋಸ್ಟಿಂಗ್ ಭಾಗ್ಯ!

    ಬೆಂಗಳೂರು: ಐಟಿ ದಾಳಿ, ಇಡಿ ಶಾಕ್‍ನಿಂದ ನಲುಗಿ ಹೋಗಿದ್ದ ಸಿಎಂ ಆಪ್ತರಿಗೆ ಈಗ ಮತ್ತೆ ರೀ-ಪೋಸ್ಟಿಂಗ್ ಇಲ್ಲವಾಗಿದೆ. ದಾಳಿ ಮುಗಿದು ವರ್ಷವಾದ್ರೂ ಮತ್ತೆ ನೌಕರಿ ಕೊಡೋಕೆ ಯಾರು ಸಿದ್ಧರಿಲ್ಲ.

    ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಯೋಜನಾಧಿಕಾರಿ ಜಯಚಂದ್ರ ಹಾಗು ಕಾವೇರಿ ನಿಗಮದ ಮುಖ್ಯಸ್ಥರಾಗಿದ್ದ ಚಿಕ್ಕರಾಯಪ್ಪ ಇಬ್ಬರು ಅಧಿಕಾರಿಗಳು ನೋಟು ಬ್ಯಾನ್ ವೇಳೆ ಐಟಿ ಮತ್ತು ಇಡಿ ರೇಡ್ ಗೆ ತುತ್ತಾಗಿದ್ದರು. ಜೈಲಿಗೆ ಹೋಗಿ, ಮತ್ತೆ ಹೊರಗಡೆ ಬಂದು ಐದಾರು ತಿಂಗಳು ಕಳೆದರು ಮತ್ತೆ ನೌಕರಿ ಭಾಗ್ಯ ಸಿಗುತ್ತಿಲ್ಲ.

    ಈ ಇಬ್ಬರು ಅಧಿಕಾರಿಗಳನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬಹುದೇ ಅಂತ ಡಿಪಿಎಆರ್ ಇಲಾಖೆ, ಐಟಿ, ಇಡಿಗೆ ಪತ್ರ ಬರೆದಿದೆ. ಆದರೆ ಐಟಿ ಮತ್ತು ಆದಾಯ ತೆರಿಗೆ ಇಲಾಖೆಯಿಂದ ಈ ಬಗ್ಗೆ ಯಾವುದೇ ಉತ್ತರ ಸಿಕ್ಕಿಲ್ಲ. ಇದನ್ನೆಲ್ಲಾ ಗಮನಿಸ್ತಿರೋ ಡಿಪಿಎಆರ್ ಇಲಾಖೆ, ಸಿಎಂ ಕಚೇರಿಗೆ ಫೈಲ್ ಕಳುಹಿಸಿದೆ. ಇತ್ತ ಇಬ್ಬರು ಆರೋಪಿಗಳಿಗೆ ಮತ್ತೆ ನೌಕರಿ ಭಾಗ್ಯ ಕೊಟ್ಟರೆ ಮುಜುಗರ ಅನುಭವಿಸಬೇಕಾಗುತ್ತದೆ ಅಂತ ಸಿಎಂ ಕಚೇರಿಯ ಮೂಲಗಳು ತಿಳಿಸಿವೆ.

  • ನೋಟು ನಿಷೇಧದ ಮಾಹಿತಿ ಕೊಟ್ಟ ಆರ್‍ಬಿಐ-10 ತಿಂಗಳ ಸನಿಹದಲ್ಲಿ ಬಯಲಾಯ್ತು ರಹಸ್ಯ

    ನೋಟು ನಿಷೇಧದ ಮಾಹಿತಿ ಕೊಟ್ಟ ಆರ್‍ಬಿಐ-10 ತಿಂಗಳ ಸನಿಹದಲ್ಲಿ ಬಯಲಾಯ್ತು ರಹಸ್ಯ

    ಮುಂಬೈ: ಕಳೆದ ವರ್ಷ ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ ನೋಟು ನಿಷೇಧ ಸಕ್ಸಸ್ ಆಯ್ತಾ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿತ್ತು. ಆ ಪ್ರಶ್ನೆಗೆ ಇಂದು ಉತ್ತರ ಸಿಕಿದ್ದು, 1 ಸಾವಿರ ರೂ. ಮುಖಬೆಲೆಯ 8,900 ಕೋಟಿ ರೂ. ಮೊತ್ತದ 89 ದಶಲಕ್ಷದ ನೋಟ್ ವಾಪಸ್ ಬಂದಿಲ್ಲ ಎಂದು ಆರ್‍ಬಿಐ ಹೇಳಿದೆ.

    ನೋಟು ನಿಷೇಧದ ಬಳಿಕ ಶೇಕಡಾ 98.96ರಷ್ಟು ಹಳೆಯ ನೋಟ್ ಬ್ಯಾಂಕ್‍ಗೆ ವಾಪಸ್ ಬಂದಿವೆ. ಕೇವಲ ಶೇ.1.04 ರಷ್ಟು ನೋಟುಗಳು ಮಾತ್ರ ಬ್ಯಾಂಕ್ ಗೆ ಬಂದಿಲ್ಲ. ಅಂದರೆ ದೇಶದಲ್ಲಿ ಕೇವಲ 16 ಸಾವಿರ ಕೋಟಿ ರೂ. ಮೊತ್ತದ ನೋಟುಗಳಷ್ಟೇ ಕಪ್ಪು ಹಣವಾಗಿತ್ತಾ ಎಂಬ ಮತ್ತೊಂದು ಪ್ರಶ್ನೆ ಎಲ್ಲರಲ್ಲಿ ಮೂಡಿದೆ.

    ನೋಟು ನಿಷೇಧದ ಬಳಿಕ ಕೇವಲ 16 ಸಾವಿರ ಕೋಟಿ ರೂ. ಕಪ್ಪು ಹಣ ಮಾತ್ರ ಕಾಣೆಯಾಗಿದೆ ಎಂದು ಅಂಕಿ ಅಂಶಗಳು ಬಹಿರಂಗಗೊಳಿಸಿವೆ. ಇನ್ನೂ ಹೊಸ ನೋಟುಗಳಾದ 500 ಮತ್ತು 2 ಸಾವಿರ ಮುಖಬೆಲೆಯ ನೋಟುಗಳನ್ನು ಮುದ್ರಿಸಲು 7,695 ಕೋಟಿ ರೂ. ವೆಚ್ಚವಾಗಿದೆ.

    ಹಾಗಾದ್ರೆ ಚಲಾವಣೆಯಲ್ಲಿರುವ ನೋಟುಗಳ ಪ್ರಮಾಣ ಎಷ್ಟು..?
    * 6,57,100 ಕೋಟಿ ರೂ. ಮೊತ್ತದ 2 ಸಾವಿರ ಮುಖಬೆಲೆಯ ನೋಟು
    * 2,94,100 ಕೋಟಿ ರೂ. ಮೊತ್ತದ 500 ರೂ. ಮುಖಬೆಲೆಯ ಹೊಸ ನೋಟು
    * 2,52,800 ಕೋಟಿ ರೂ. ಮೊತ್ತದ 100 ರೂ. ಮುಖಬೆಲೆಯ ನೋಟು
    * 9,28,000 ಕೋಟಿ ರೂ. ಮೊತ್ತದ 10, 20, 50 ರೂಪಾಯಿ ಮುಖಬೆಲೆಯ ನೋಟು

    ನೋಟು ನಿಷೇಧದಿಂದ ನಕಲಿ ನೋಟುಗಳ ಕಥೆ ಏನಾಯ್ತು….?
    * ನೋಟು ನಿಷೇಧ ಬಳಿದ ಬರೋಬ್ಬರೀ 7.62 ಲಕ್ಷದಷ್ಟು ನಕಲಿ ನೋಟುಗಳು ಪತ್ತೆ
    * 2,000 ರೂ. ಮುಖಬೆಲೆಯ 638 ನಕಲಿ ನೋಟು ಪತ್ತೆ
    * 500 ರೂ. ಮುಖಬೆಲೆಯ ಹೊಸ 199 ನಕಲಿ ನೋಟು ಪತ್ತೆ
    * 500 ರೂ. ಮುಖಬೆಲೆಯ 3,17,567 ನಕಲಿ ನೋಟು ಪತ್ತೆ
    * 100 ರೂ. ಮುಖಬೆಲೆಯ 1,77,195 ನಕಲಿ ನೋಟು ಪತ್ತೆ

    ಈ ಮಧ್ಯೆ, ಪ್ಯಾನ್‍ಕಾರ್ಡ್ ಹಾಗು ಆಧಾರ್ ಕಾರ್ಡ್ ಲಿಂಕ್ ಮಾಡೋಕೆ ನಾಳೆ ಕೊನೆದಿನ. ನಾಳೆಯೊಳಗೆ ಪ್ಯಾನ್ ಸಂಖ್ಯೆ ಜೊತೆ ಆಧಾರ್ ಸಂಖ್ಯೆ ಲಿಂಕ್ ಮಾಡದಿದ್ರೆ ತೆರಿಗೆ ರಿಟನ್ರ್ಸ್ ಪ್ರಕ್ರಿಯೆ ಪೂರ್ಣಗೊಳ್ಳೋದಿಲ್ಲ ಎಂದು ಐಟಿ ಇಲಾಖೆ ಹೇಳಿದೆ.

  • 1 ಸಾವಿರ ರೂ. ನೋಟು ಮತ್ತೆ ಪರಿಚಯಿಸೋ ಬಗ್ಗೆ ಪ್ರಸ್ತಾಪ ಇಲ್ಲ: ಸರ್ಕಾರ

    1 ಸಾವಿರ ರೂ. ನೋಟು ಮತ್ತೆ ಪರಿಚಯಿಸೋ ಬಗ್ಗೆ ಪ್ರಸ್ತಾಪ ಇಲ್ಲ: ಸರ್ಕಾರ

    ನವದೆಹಲಿ: ಹೊಸದಾಗಿ 1 ಸಾವಿರ ರೂ. ನೋಟುಗಳನ್ನು ಪರಿಚಯಿಸುವ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಶ್ ಗರ್ಗ್ ತಿಳಿಸಿದ್ದಾರೆ.

    500, 1 ಸಾವಿರ ರೂ. ನೋಟುಗಳು ಬ್ಯಾನ್ ಆದ ಬಳಿಕ ಹೊಸದಾಗಿ 2 ಸಾವಿರ, 500 ರೂ., 200 ರೂ., 50 ರೂ.ಗಳನ್ನು ಬಿಡುಗಡೆ ಮಾಡಿರುವ ಆರ್‍ಬಿಐ 1 ಸಾವಿರ ರೂ. ನೋಟು ಚಲಾವಣೆಗೆ ತರಲು ಮುಂದಾಗುತ್ತಿದೆ ಎನ್ನುವ ಸುದ್ದಿ ಸೋಮವಾರ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

    ಈ ಸುದ್ದಿಗಳಿಗೆ ಸುಭಾಶ್ ಗರ್ಗ್, 1 ಸಾವಿರ ರೂ. ನೋಟುಗಳನ್ನು ಮತ್ತೆ ಪರಿಚಯಿಸುವ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಟ್ವೀಟ್ ಮಾಡುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

    ಆರ್‍ಬಿಐ ಶೀಘ್ರದಲ್ಲೇ 1 ಸಾವಿರ ರೂ. ನೋಟುಗಳನ್ನು ಮುದ್ರಿಸಲಿದೆ. ಡಿಸೆಂಬರ್ ನಲ್ಲಿ ಚಲಾವಣೆಗೆ ಬರಲಿದ್ದು, ಮೈಸೂರು ಮತ್ತು ಸಾಲ್ಬೋನಿಯಲ್ಲಿ ಹೊಸ ನೋಟುಗಳು ವಿಶೇಷ ಭದ್ರತಾ ವೈಶಿಷ್ಟ್ಯಗಳೊಂದಿಗೆ ಮುದ್ರಣವಾಗಲಿದೆ ಎಂದು ವರದಿ ತಿಳಿಸಿತ್ತು.

    ಕಪ್ಪುಹಣವನ್ನು ತಡೆಗಟ್ಟಲು ನವೆಂಬರ್ 8 ರಂದು 500 ಮತ್ತು 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿ ತಿಳಿಸಿದ್ದರು. ಮೈಸೂರಿನ ಮೇಟಗಳ್ಳಿ, ಮಹಾರಾಷ್ಟ್ರದ ನಾಸಿಕ್, ಮಧ್ಯಪ್ರದೇಶದ ದೇವಾಸ್, ಪಶ್ಚಿಮ ಬಂಗಾಳದ ಸಾಲ್ಬೋನಿಯಲ್ಲಿ ಆರ್‍ಬಿಐ ಮುದ್ರಣ ಘಟಕವನ್ನು ಹೊಂದಿದೆ.



  • ಡಿಸೆಂಬರ್ ನಲ್ಲಿ ಚಲಾವಣೆಗೆ ಬರಲಿದೆ 1 ಸಾವಿರ ರೂ. ಹೊಸ ನೋಟು!

    ಡಿಸೆಂಬರ್ ನಲ್ಲಿ ಚಲಾವಣೆಗೆ ಬರಲಿದೆ 1 ಸಾವಿರ ರೂ. ಹೊಸ ನೋಟು!

    ನವದೆಹಲಿ: 500, 1 ಸಾವಿರ ರೂ. ನೋಟುಗಳು ಬ್ಯಾನ್ ಆದ ಬಳಿಕ ಹೊಸದಾಗಿ 2 ಸಾವಿರ, 500 ರೂ., 200 ರೂ., 50 ರೂ.ಗಳನ್ನು ಬಿಡುಗಡೆ ಮಾಡಿರುವ ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ಈಗ 1 ಸಾವಿರ ರೂ. ನೋಟು ಚಲಾವಣೆಗೆ ತರಲು ಮುಂದಾಗುತ್ತಿದೆ.

    ಹೌದು. ಆರ್‍ಬಿಐ ಶೀಘ್ರದಲ್ಲೇ 1 ಸಾವಿರ ರೂ. ನೋಟುಗಳನ್ನು ಮುದ್ರಿಸಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದ್ದು, ಈ ಹೊಸ ನೋಟುಗಳು ಡಿಸೆಂಬರ್ ನಲ್ಲಿ ಚಲಾವಣೆಗೆ ಬರಲಿದೆ ಎಂದು ಹೇಳಿದೆ.

    ಮೈಸೂರು ಮತ್ತು ಸಾಲ್ಬೋನಿಯಲ್ಲಿ ಈ ಹೊಸ ನೋಟುಗಳು ವಿಶೇಷ ಭದ್ರತಾ ವೈಶಿಷ್ಟ್ಯಗಳೊಂದಿಗೆ ಮುದ್ರಣವಾಗಲಿದೆ ಎಂದು ವರದಿ ತಿಳಿಸಿದೆ.

    ನೋಟ್ ಬ್ಯಾನ್ ಬಳಿಕ ಬಿಡುಗಡೆಯಾದ 2000 ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ಆರ್ಬಿಐ ನಿಲ್ಲಿಸಿದೆ ಎಂದು ಮಾಧ್ಯಮವೊಂದು ಈ ಹಿಂದೆ ವರದಿ ಮಾಡಿತ್ತು. ಮೈಸೂರಿನಲ್ಲಿರುವ ಪ್ರಿಂಟಿಂಗ್ ಪ್ರೆಸ್ ನಲ್ಲಿ ಈಗಾಗಲೇ 2000 ರೂ. ನೋಟ್ ಮುದ್ರಣ ಕಾರ್ಯ ಸ್ಥಗಿತಗೊಂಡಿದ್ದು, ಈ ಹಣಕಾಸು ವರ್ಷದಲ್ಲಿ 2 ಸಾವಿರ ರೂ.ನೋಟುಗಳನ್ನು ಮುದ್ರಿಸುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು.

    2 ಸಾವಿರ ರೂ. ನೋಟುಗಳ ಚಲಾವಣೆ ಹಂತ ಹಂತವಾಗಿ ಕಡಿಮೆ ಮಾಡುತ್ತಿರುವುದರಿಂದ ಜನರ ವ್ಯವಹಾರಕ್ಕೆ ಸಮಸ್ಯೆ ಆಗದೇ ಇರಲು ಮತ್ತು ಚಿಲ್ಲರೆ ಸಮಸ್ಯೆಯನ್ನು ಕಡಿಮೆ ಮಾಡಲು 200 ರೂ. ನೋಟುಗಳನ್ನು ಬಿಡುಗಡೆ ಮಾಡಿದೆ.

    500 ರೂ. ಮತ್ತು 1 ಸಾವಿರ ರೂ. ನೋಟು ನಿಷೇಧಗೊಂಡ ಹಿನ್ನೆಲೆಯಲ್ಲಿ ಆರ್‍ಬಿಐ ಸುಮಾರು 7.4 ಲಕ್ಷ ಕೋಟಿ ರೂ. ಮೌಲ್ಯದ 3.7 ಶತಕೋಟಿ 2000 ರೂ. ನೋಟುಗಳನ್ನು ಜುಲೈ ವರೆಗೆ ಮುದ್ರಿಸಿತ್ತು. ಇದು ನೋಟು ನಿಷೇಧವಾಗಿರುವ 1 ಸಾವಿರ ರೂ. ಮುಖಬೆಲೆಯ 6.3 ಶತಕೋಟಿ ನೋಟುಗಳಿಗಿಂತ ಅಧಿಕವಾಗಿದೆ ಎಂದು ಮೂಲಗಳು ತಿಳಿಸಿವೆ.

    ನವೆಂಬರ್ 4ರ ವೇಳೆಗೆ ದೇಶದಲ್ಲಿ 17.7 ಲಕ್ಷ ಕೋಟಿ ನೋಟುಗಳು ಚಲಾವಣೆಯಲ್ಲಿದ್ದರೆ, ಜುಲೈ 14ರ ವೇಳೆಗೆ ದೇಶದಲ್ಲಿ 15.22 ಲಕ್ಷ ಕೋಟಿ ನೋಟುಗಳು ಚಲಾವಣೆಯಾಗುತ್ತಿದೆ ಎಂದು ಆರ್‍ಬಿಐ ತಿಳಿಸಿದೆ.

    ಆರ್‍ಬಿಐ ಹಂತ ಹಂತವಾಗಿ 2 ಸಾವಿರ ರೂ. ನೋಟುಗಳ ಚಲಾವಣೆಯನ್ನು ಕಡಿಮೆ ಮಾಡುತ್ತಿದೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಪೂರಕ ಎಂಬಂತೆ ಎಟಿಎಂಗಳಲ್ಲಿ ಈಗ ಹೆಚ್ಚಾಗಿ 2 ಸಾವಿರ ರೂ. ನೋಟುಗಳ ಬದಲಿಗೆ 500 ರೂ. ನೋಟುಗಳು ಸಿಗುತ್ತಿದೆ.

    ಬ್ಯಾಂಕ್ ಗಳಿಗೆ ಆರ್‍ಬಿಐ ಈಗ ಹೆಚ್ಚಾಗಿ 500 ರೂ. ನೋಟುಗಳನ್ನು ಹೆಚ್ಚು ಪೊರೈಕೆ ಮಾಡುತ್ತಿದೆ. 2 ಸಾವಿರ ರೂ. ನೋಟುಗಳನ್ನು ಕೌಂಟರ್ ಗಳಲ್ಲಿ ಮಾತ್ರ ವಿತರಣೆ ಮಾಡುತ್ತಿದ್ದೇವೆ ಎಂದು ಬ್ಯಾಂಕ್ ಅಧಿಕಾರಿಗಳ ಹೇಳಿಕೆಯನ್ನು ಆಧಾರಿಸಿ ಕೆಲ ದಿನಗಳ ಹಿಂದೆ ಮಾಧ್ಯಮವೊಂದು ವರದಿ ಪ್ರಕಟಿಸಿತ್ತು.

    ಕಪ್ಪುಹಣವನ್ನು ತಡೆಗಟ್ಟಲು ನವೆಂಬರ್ 8 ರಂದು 500 ಮತ್ತು 1 ಸಾವಿರ ರೂ. ಮುಖಬೆಲೆಯ ನೋಟುಗನ್ನು ನಿಷೇಧಿಸಿಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿ ತಿಳಿಸಿದ್ದರು. ಮೈಸೂರಿನ ಮೇಟಗಳ್ಳಿ, ಮಹಾರಾಷ್ಟ್ರದ ನಾಸಿಕ್, ಮಧ್ಯಪ್ರದೇಶದ ದೇವಾಸ್, ಪಶ್ಚಿಮ ಬಂಗಾಳದ ಸಾಲ್ಬೋನಿಯಲ್ಲಿ ಆರ್‍ಬಿಐ ಮುದ್ರಣ ಘಟಕವನ್ನು ಹೊಂದಿದೆ.

     

  • 71ನೇ ಸ್ವತಂತ್ರ್ಯ ದಿನಾಚರಣೆಯಲ್ಲಿ ಮೋದಿ ಭಾಷಣ- ನೋಟ್ ಬ್ಯಾನ್‍ನಿಂದ ಬ್ಯಾಂಕ್ ಸೇರಿದ ಹಣವಿಷ್ಟು

    71ನೇ ಸ್ವತಂತ್ರ್ಯ ದಿನಾಚರಣೆಯಲ್ಲಿ ಮೋದಿ ಭಾಷಣ- ನೋಟ್ ಬ್ಯಾನ್‍ನಿಂದ ಬ್ಯಾಂಕ್ ಸೇರಿದ ಹಣವಿಷ್ಟು

    -ಚೀನಾ, ಪಾಕ್‍ಗೆ ಪರೋಕ್ಷ ಎಚ್ಚರಿಕೆ, ಪ್ರೀತಿಯಿಂದ ಕಾಶ್ಮೀರ ಗೆಲ್ತೇವೆ ಅಂದ್ರು ಪ್ರಧಾನಿ

    ನವದೆಹಲಿ: ಇಂದು ದೇಶದ ಜನರು ಸ್ವಾತಂತ್ರ ದಿನಾಚರಣೆಯ ಜೊತೆಗೆ ಕೃಷ್ಣ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಎಲ್ಲರಿಗೂ 71ನೇ ಸ್ವತಂತ್ರ ದಿನಾಚರಣೆಯ ಶುಭಾಶಯಗಳನ್ನು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

    ಹಲವು ದಿನಗಳಿಂದ ಪ್ರಕೃತಿ ವಿಕೋಪಗಳಿಂದ ಜನರು ತೊಂದರೆಯನ್ನು ಅನುಭವಿಸಿದ್ದಾರೆ. ಪ್ರವಾಹದಿಂದ ನೊಂದವರಿಗೆ ನಮ್ಮ ಹೃದಯ ಮಿಡಿಯುತ್ತದೆ. ಕೆಲವು ದಿನಗಳ ಹಿಂದೆ ಗೊರಖ್‍ಪುರ ಆಸ್ಪತ್ರೆಯಲ್ಲಿ ಮಕ್ಕಳು ಸಾವನ್ನಪ್ಪಿದ್ದಕ್ಕೆ ದುಃಖವಿದೆ ಅಂದ್ರು. ದೇಶಕ್ಕಾಗಿ ಬಲಿದಾನ ಮಾಡಿದವರಿಗೆ ದೇಶದ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

    ಕಳೆದ ವಾರವೇ ನಾವು ಕ್ವಿಟ್ ಇಂಡಿಯಾ ಚಳವಳಿಯ 75ನೇ ವರ್ಷದ ದಿನವನ್ನು ಆಚರಿಸಿದ್ದೇವೆ. ನಮ್ಮ ಮುಂದೆ ಇನ್ನೂ ಹಲವು ಸವಾಲುಗಳಿವೆ. ನಾವೆಲ್ಲರೂ ಆ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಿರಬೇಕು. ಚಂಪಾರಣ್ಯ ಶತಾಬ್ದಿಯ ಸಂಭ್ರಮವನ್ನು ನಾವು ಆಚರಿಸಿದ್ದೇವೆ. ಸಮೃದ್ಧ ಭಾರತವನ್ನು ಕಟ್ಟಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಿಳಿಸಿದರು.

    2022ರೊಳಗೆ ನವಭಾರತ ನಿರ್ಮಾಣವಾಗಬೇಕು. ಸರ್ಜಿಕಲ್ ಸ್ಟ್ರೈಕ್ ನಡೆದಾಗ ಜಗತ್ತಿಗೆ ನಮ್ಮ ಶಕ್ತಿ ಏನೆಂಬುದು ತಿಳಿದಿದೆ. ದೇಶದ ವಿರುದ್ಧ ಕೆಲಸ ಮಾಡುವರರನ್ನು ನಾವು ದ್ವೇಷಿಸುತ್ತವೆ. ದೇಶದ ಭದ್ರತೆಗೆ ಮೊದಲ ಆದ್ಯತೆಯನ್ನು ಕೇಂದ್ರ ಸರ್ಕಾರ ನೀಡಿದೆ ಅಂತ ಹೇಳಿದ್ರು.

    ಎಲ್ಲವೂ ಬದಲಾಗುತ್ತಿದೆ: ಬದಲಾಗಿದೆ, ಬದಲಾಗುತ್ತಿದೆ, ಬದಲಾಗಬೇಕು ಅನ್ನೋ ವಿಶ್ವಾಸದಿಂದ ಮುನ್ನಡೆಯಿರಿ. ನಡೆಯುತ್ತೆ, ನಡೆಯಲಿದೆ ಎಂಬ ನಂಬಿಕೆಯಿರಲಿ. ಒಗ್ಗಟ್ಟಿನಿಂದ ಮಾತ್ರ ಬದಲಾವಣೆ ತರಲು ಸಾಧ್ಯ. ಇಂದು ನವಭಾರತದ ಸಂಕಲ್ಪದೊಂದಿಗೆ ಮುನ್ನಡೆಯಬೇಕಾಗಿದೆ ಎಂದು ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ.

    `ಕೇಂದ್ರ ಸರ್ಕಾರ ದೊಡ್ಡ ಅಣ್ಣ, ರಾಜ್ಯ ಸರ್ಕಾರ ತಮ್ಮ’ ಎಂಬ ಮಾತುಯಿತ್ತು. ಆ ವ್ಯವಸ್ಥೆಯನ್ನು ನಾವು ಬದಲಾಯಿಸಿದ್ದೇವೆ. ನನಗೆ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರ ಅನುಭವವಿದೆ, ನಾವು ಇಂದು ಎಲ್ಲ ರಾಜ್ಯಗಳನ್ನು ಒಟ್ಟಾಗಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇವೆ. ದೇಶಗಳ ಅಭಿವೃದ್ಧಿಯಲ್ಲಿ ರಾಜ್ಯಗಳು ಪ್ರಮುಖ ಪಾತ್ರ ವಹಿಸುತ್ತೇವೆ. ಕೇಂದ್ರ ಸರ್ಕಾರ ರಾಜ್ಯಗಳನ್ನು ಸೇರಿಸಿಕೊಂಡು ದೇಶದ ಅಭಿವೃದ್ಧಿಯತ್ತ ಸಾಗುತ್ತಿದೆ. ಇದೇ ವೇಳೆ ಜಮ್ಮು ಕಾಶ್ಮೀರವನ್ನು ಸ್ವರ್ಗ ಮಾಡಲು ನಾವು ಬದ್ಧರಾಗಿದ್ದೇವೆ ಅಂದ್ರು.

    ಎಲ್ಲದಕ್ಕೂ ಬುಲೆಟ್ ಒಂದೇ ಪರಿಹಾರವಲ್ಲ: `ನಾ ಗಾಲಿ ಸೇ, ಗೋಲಿ ಸೇ'(ಬೈಗುಳದಿಂದಾಗಲೀ, ಬುಲೆಟ್‍ನಿಂದಾಗಲೀ) ಪರಿವರ್ತನೆ ಆಗಲು ಸಾಧ್ಯವಿಲ್ಲ.ನಮ್ಮ ಸೇನೆ ಬಲಿಷ್ಠವಾಗಿದೆ. ಸರ್ಜಿಕಲ್ ಸ್ಟ್ರೈಕ್‍ಗೆ ಇಡೀ ವಿಶ್ವವೇ ಬೆನ್ನು ತಟ್ಟಿದೆ. ಒಳನುಸುಳುಕೋರರಿಗೆ ಕಡಿವಾಣ ಹಾಕಿದ್ದೆವೆ. ಇಡೀ ಜಗತ್ತೇ ಭಯೋತ್ಪಾದನೆ ವಿರುದ್ಧ ತಿರುಗಿಬಿದ್ದಿದೆ. ಎಲ್ಲದಕ್ಕೂ ಬುಲೆಟ್ ಒಂದೇ ಪರಿಹಾರವಲ್ಲ. ಶಾಂತಿಯಿಂದಲೇ ಕಾಶ್ಮೀರಿ ಸಮಸ್ಯೆಯನ್ನ ಬಗೆಹರಿಸುತ್ತೇವೆ ಅಂದ್ರು.

    ಬೇನಾಮಿ ಆಸ್ತಿಗಳನ್ನು ಕಲೆಹಾಕುವ ಕೆಲಸ ಮಾಡಲಾಗುತ್ತಿದೆ. ಬಡವರ ಅನ್ನ ಕಿತ್ತುಕೊಂಡಿರುವರಿಗೆ ನಿದ್ದೆ ಬರುತ್ತಿಲ್ಲ. ಕಪ್ಪು ಹಣವನ್ನು ಸಂಗ್ರಹಿಸಿದ ವ್ಯಕ್ತಿಗಳ ಬೇಟೆಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಭಯತ್ಪೋದಾನೆ ಹೋರಾಟದಲ್ಲಿ ನಾವು ಈಗ ಒಂಟಿಯಾಗಿಲ್ಲ. ನಮ್ಮ ಜೊತೆ ಹಲವರು ಕೈ ಜೋಡಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ದೇಶದ ಜನತೆ ನಮ್ಮೊಂದಿಗೆ ಸಹಕಾರ ನೀಡುತ್ತಿದ್ದಾರೆ, ಗ್ಯಾಸ್ ಸಬ್ಸಿಡಿ ಬಿಟ್ಟುಕೊಡಿ ಎಂದು ಕೇಳಿದಾಗ ನಮ್ಮ ಮಾತಿಗೆ ತಕ್ಕಂತೆ ಹಲವರು ಸಬ್ಸಿಡಿಯನ್ನು ತ್ಯಜಿಸಿದರು. ನೋಟ್ ಬ್ಯಾನ್ ಮಾಡಿದಾಗ ಹಲವರು ಇದು ಮೋದಿಯ ಅಂತ್ಯ ಎಂದು ಟೀಕಿಸಿದ್ರು. ಆದರೆ ದೇಶದ ಪ್ರತಿಯೊಬ್ಬರು ನಮಗೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ ಅಂದ್ರು.

    ತ್ರಿವಳಿ ತಲಾಖ್: ತ್ರಿವಳಿ ತಲಾಖ್ ವಿರುದ್ಧ ಹೋರಾಡುತ್ತಿರುವ ತಾಯಂದಿರ ಜೊತೆಗೆ ಸರ್ಕಾರ ಯವಾಗಲೂ ಇರುತ್ತದೆ. ತೀನ್ ತಲಾಖ್ ವಿರುದ್ಧ ದೇಶದಲ್ಲಿ ದೊಡ್ಡದೊಂದು ಅಭಿಯಾನ ಆರಂಭವಾಗಿದೆ ಅಂದ್ರು. ತ್ರಿವಳಿ ತಲಾಖ್‍ನಿಂದ ನೊಂದಿರುವ ಮತ್ತು ಹೋರಾಡುತ್ತಿರುವ ಮಹಿಳೆಯರಿಗೆ ಮೋದಿ ಅಭಿನಂದನೆ ಸಲ್ಲಿಸಿದರು.

    2019ರ ಒಳಗೆ ದೇಶದ ಎಲ್ಲ ರೈತರ ಭೂಮಿಗೆ ನೀರಾವರಿ ಸೌಲಭ್ಯ. ನಮ್ಮ ಸರ್ಕಾರದ ನೀತಿಗಳಿಂದಾಗಿ ಉದ್ಯೋಗ ಸೃಷ್ಟಿಯಾಗಿವೆ. ಹೆರಿಗೆ ರಜೆಯನ್ನು ನಮ್ಮ ಸರ್ಕಾರ ಹೆಚ್ಚಳ ಮಾಡಿದೆ. ನೋಟ್ ಬ್ಯಾನ್ ನಿಂದಾಗಿ 3 ಲಕ್ಷ ಕೋಟಿ ರೂ. ಬ್ಯಾಂಕ್ ವ್ಯವಸ್ಥೆಯನ್ನು ಸೇರಿದೆ. ಈಗಾಗಲೇ ನಕಲಿ 2.75 ಲಕ್ಷ ಕಂಪನಿಗಳ ಲೈಸನ್ಸ್ ರದ್ದು ಮಾಡಲಾಗಿದೆ. ಒಟ್ಟು 1.25 ಲಕ್ಷ ಕೋಟಿ ಕಪ್ಪು ಹಣವನ್ನು ಹೊರತೆಗೆದಿದ್ದೇವೆ ಎಂದು ಅಂಕಿ ಅಂಶಗಳನ್ನು ಬಹಿರಂಗಪಡಿಸಿದರು.

    ಹೊಸ ಸಂಕಲ್ಪದೊಂದಿಗೆ ದೇಶವನ್ನು ಮುನ್ನಡೆಸೋಣ. ದೇಶದ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಾಟಿಗಿ ದುಡಿಯೋಣ. ಹೊಸ ಟೀಂ ಇಂಡಿಯಾವನ್ನು ನಾವು ಕಟ್ಟಲು ಪಣ ತೊಡೋಣ ಎಂದು ದೇಶದ ಜನತೆಗೆ ಮೋದಿ ಕರೆ ಕೊಟ್ಟರು.

  • ಶೀಘ್ರದಲ್ಲೇ ದೇಶವೇ ಬೆಚ್ಚಿ ಬೀಳಿಸೋ ಐಟಿ ದಾಳಿ-ಬಾಲಿವುಡ್ ತಾರೆಯರು, ಬಿಲ್ಡರ್‍ಗಳೇ ಟಾರ್ಗೆಟ್!

    ಶೀಘ್ರದಲ್ಲೇ ದೇಶವೇ ಬೆಚ್ಚಿ ಬೀಳಿಸೋ ಐಟಿ ದಾಳಿ-ಬಾಲಿವುಡ್ ತಾರೆಯರು, ಬಿಲ್ಡರ್‍ಗಳೇ ಟಾರ್ಗೆಟ್!

    ಬೆಂಗಳೂರು: ನೋಟು ನಿಷೇಧದ ಬಳಿಕ ಪ್ರಭಾವಿ ವ್ಯಕ್ತಿಗಳ ಮೇಲೆ ಐಟಿ ದಾಳಿ ನಿರಂತರವಾಗಿ ನಡೆಯುತ್ತಿದೆ. ಸದ್ಯ ಐಟಿ ಇಲಾಖೆ ಬಾಲಿವುಡ್ ನಟರು, ನಿರ್ಮಾಪಕರು, ಬಿಲ್ಡರ್‍ಗಳ ಮೇಲೆ ಬೃಹತ್ ದಾಳಿಗೆ ಸಜ್ಜಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಐಟಿ ದಾಳಿಯ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಮತ್ತು ಸೆಬಿ ಕೂಡ ದಾಳಿ ನಡೆಸಲು ಸಿದ್ಧವಾಗಿದೆ. ಈಗಾಗಲೇ ಐಟಿ ಇಲಾಖೆ ಬ್ಲಾಕ್ ಅಂಡ್ ವೈಟ್ ದಂಧೆ ನಡೆಸಿದ್ದ 331 ಶೆಲ್ ಕಂಪನಿಗಳ ಪಟ್ಟಿ ಮಾಡಿದೆ. ಈ ಸಂಬಂಧ ಹಲವರಿಗೂ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದೆ.

    ಹಲವಾರು ಸಣ್ಣ ದಲ್ಲಾಳಿಗಳು ಈಗಾಗಲೇ ಶಂಕಿತ ಶೆಲ್ ಕಂಪನಿಗಳ ಜೊತೆ ಅಕ್ರಮದಲ್ಲಿ ತೊಡಗಿದ್ದು, ಹಣದುಬ್ಬರವನ್ನು ಸೃಷ್ಟಿಸುವಲ್ಲಿ ಇವರ ಪಾತ್ರವಿದೆ ಎಂದು ಗೊತ್ತಾಗಿದೆ. ಹಲವಾರು ಕಂಪನಿಗಳು, ರಿಯಲ್ ಎಸ್ಟೇಟ್, ಸಿನಿಮಾ ಹಾಗೂ ಟಿವಿ ಉದ್ಯಮದಲ್ಲಿ ಬ್ಯಾಂಕಿಂಗ್ ಅಲ್ಲದ ಹಣಕಾಸು ವ್ಯವಹಾರದಲ್ಲಿ ಮುಳುಗಿವೆ.

    ನೋಟು ನಿಷೇಧದ ಬಳಿಕ 500ಕ್ಕೂ ಹೆಚ್ಚು ಸ್ಟಾರ್ ನಟ, ನಟಿಯರಿಂದ ಅಕ್ರಮ ಹಣ ವಿನಿಮಯ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಇಲಾಖೆ ಮಾತ್ರ ಯಾವ ಸ್ಟಾರ್‍ಗಳ ಹೆಸರನ್ನೂ ಹೊರಹಾಕದೇ ಡೈರೆಕ್ಟ್ ರೇಡ್ ಮಾಡಲು ಸಜ್ಜಾಗುತ್ತಿದೆ ಎಂದು ಇಲಾಖೆಯ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

  • ನೋಟ್ ಬ್ಯಾನ್ ಅವಧಿಯಲ್ಲಿ 2 ಸಾವಿರ ಕೋಟಿ ರೂ. ಬದಲಾವಣೆ ಮಾಡಿಸಿದ್ರಂತೆ ಡಿಕೆಶಿ: ಇಡಿಯಲ್ಲಿ ದೂರು

    ನೋಟ್ ಬ್ಯಾನ್ ಅವಧಿಯಲ್ಲಿ 2 ಸಾವಿರ ಕೋಟಿ ರೂ. ಬದಲಾವಣೆ ಮಾಡಿಸಿದ್ರಂತೆ ಡಿಕೆಶಿ: ಇಡಿಯಲ್ಲಿ ದೂರು

    ಬೆಂಗಳೂರು/ನವದೆಹಲಿ:ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರ ಸಂಪೂರ್ಣ ವ್ಯವಹಾರವನ್ನು ಜಾಲಾಡುತ್ತಿದ್ದಾರೆ. ಬುಧವಾರ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿರುವ ಐಟಿ ರೇಡ್ ಗುರುವಾರ ರಾತ್ರಿಯೂ ಕೂಡ ಮುಂದುವರಿದಿದೆ. ಡಿಕೆ ಶಿವಕುಮಾರ್ ಭಾರತದಲ್ಲಿ ಮಾತ್ರವಲ್ಲದೆ ಲಂಡನ್, ಸಿಂಗಾಪುರ್‍ನಲ್ಲೂ ಶಿವಕುಮಾರ್ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಮಾಡಿ ಹೂಡಿಕೆ ಮಾಡಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ.

    ಇವತ್ತು ಡಿಕೆಶಿ ಆಪ್ತರನ್ನೂ ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ರು. ಶರ್ಮಾ ಟ್ರಾವೆಲ್ಸ್ ಮಾಲೀಕ ಸುರೇಶ್ ಶರ್ಮಾ ಅವರ ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

    ಕಾಂಗ್ರೆಸ್ ನಾಯಕ ಡಿಪಿ ಶರ್ಮಾ ಅವರ ಪುತ್ರರಾಗಿರುವ ಸುರೇಶ್ ಶರ್ಮಾ ಡಿಕೆಶಿ ಆಪ್ತರಾಗಿದ್ದಾರೆ. ಇನ್ನೂ ಗ್ಲೋಬಲ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಕೇರ್ ಟೇಕರ್ ನಂದೀಶ್ ಮನೆ ಮೇಲೂ ದಾಳಿ ನಡೆದಿದ್ದು ಸುಮಾರು 11 ಕೆಜಿ ಚಿನ್ನಾಭರಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಜೊತೆಗೆ ರಾಜರಾಜೇಶ್ವರಿ ನಗರದಲ್ಲಿರುವ ಡಿಕೆ ಶಿವಕುಮಾರ್ ಅವರ ಒಡೆತನದ ಇಂಟರ್‍ನ್ಯಾಷನಲ್ ಶಾಲೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಇಲ್ಲಿಯವರೆಗೂ ಒಟ್ಟು 10ಕ್ಕೂ ಹೆಚ್ಚು ಕಡೆ ದಾಳಿ ಮಾಡಿ ಆಪ್ತರು, ಸಂಬಂಧಿಕರ ಹೆಸರಿನಲ್ಲಿ ಇರುವ ಬೇನಾಮಿ ಆಸ್ತಿಗಳನ್ನು ಪತ್ತೆ ಮಾಡಿದ್ದಾರೆ. ಐಟಿ ಅಧಿಕಾರಿಗಳಿಗೆ ಇಲ್ಲೀವರೆಗೂ 10 ಕೋಟಿಗೂ ಹೆಚ್ಚು ನಗದು ಸಿಕ್ಕಿದೆ ಅನ್ನೋ ಮಾಹಿತಿ ಸಿಕ್ಕಿದೆ. ಈಗಾಗಲೇ 20 ಕಡೆ ನಡೆದ ದಾಳಿ ಮುಕ್ತಾಯವಾಗಿದೆ. ಇದರ ಜೊತೆಗೆ 2 ಸಾವಿರ ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ)ಯಲ್ಲಿ ದೂರು ದಾಖಲಾಗಿದೆ. ಮಹಾಲಕ್ಷ್ಮೀ ಲೇಔಟ್‍ನ ನಿವಾಸದಲ್ಲಿ ನೋಟ್ ಬ್ಯಾನ್ ಬಳಿಕ ಈ ವ್ಯವಹಾರ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಇಡಿಗೆ ನೀಡಿರುವ ದೂರಿನಲ್ಲಿರುವ ಆರೋಪಗಳೇನು?
    ನೋಟ್ ಬ್ಯಾನ್ ಆದ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಸಾವಿರಾರು ಕೋಟಿ ರೂ. ಹಣವನ್ನು ಡಿಸೆಂಬರ್- ಜನವರಿ ಅವಧಿಯಲ್ಲಿ ಬದಲಾವಣೆ ಮಾಡಿದ್ದಾರೆ. ತಮ್ಮ ಕ್ಷೇತ್ರದ ಜನರಿಗೆ ಸುಮಾರು 2 ಲಕ್ಷ ರೂ. ಹಣವನ್ನು ಹಂಚಿದ್ದಾರೆ. ಸಚಿನ್ ನಾರಾಯಣ್ ಮೂಲಕ ಸುಮಾರು 2 ಸಾವಿರ ಕೋಟಿ ರೂ. ಹೊಸ ನೋಟುಗಳನ್ನು ಪಡೆದುಕೊಂಡಿದ್ದಾರೆ.

    ಜ್ಯೋತಿಷಿ ದ್ವಾರಕಾನಾಥ್ ಅವರು ಹವಾಲ ಏಜೆಂಟ್ ಆಗಿದ್ದು, ಈ ವ್ಯಕ್ತಿಯ ಮೂಲಕ ಡಿಕೆ ಶಿವಕುಮಾರ್ ಹಣವನ್ನು ವರ್ಗಾವಣೆ ಮಾಡುತ್ತಿದ್ದರು. ಕಪ್ಪು ಹಣವನ್ನು ದ್ವಾರಕಾನಾಥ್ ಮೂಲಕ ತಮಗೆ ಬೇಕಾದ ಉದ್ಯಮಿಗಳಿಗೆ, ವ್ಯಕ್ತಿಗಳಿಗೆ ತಲುಪಿಸುತ್ತಿದ್ದರು.

    ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಪೈಕಿ ಹಲವು ಮಂದಿ ದ್ವಾರಕಾನಾಥ್ ಮನೆಗೆ ಬರುತ್ತಿದ್ದರು. ಕೆಎಲ್ ಮಂಜುನಾಥ್, ಎನ್ ಕುಮಾರ್ ಸೇರಿದಂತೆ ಹಲವು ಮಂದಿ ಜಡ್ಜ್ ಗಳನ್ನು ದ್ವಾರಕಾನಾಥ್ ನಿಯಂತ್ರಿಸುತ್ತಿದ್ದರು. ಫೋನ್ ಕರೆಗಳ ಪರಿಶೀಲನೆ ನಡೆಸಿದಾಗ ದ್ವಾರಕನಾಥ್ ಪ್ರತಿದಿನ ಕೆಎಲ್ ಮಂಜುನಾಥ್ ಅವರ ಮನೆಗೆ ಹೋಗಿ ಹೈಕೋರ್ಟ್ ಕೇಸ್ ಗಳ ಬಗ್ಗೆ ಚರ್ಚಿಸಿ ತಮ್ಮ ಆಪ್ತರ ಪರವಾಗಿ ಬರುವಂತೆ ನೋಡಿಕೊಳ್ಳುತ್ತಿದ್ದರು.

    ಸಾವಿರಾರು ಕೋಟಿ ಎಲೆಕ್ಟ್ರಿಕಲ್ ಗುತ್ತಿಗೆಗಳನ್ನು ಏಷ್ಯನ್ ಫ್ಯಾಬ್ ಟೆಕ್ ಕಂಪೆನಿಗೆ ನೀಡಲಾಗಿದೆ. ಈ ಕಂಪೆನಿಯ ಮಾಲೀಕ ಪುಟ್ಟಸ್ವಾಮಿ ಗೌಡ ಆಗಿದ್ದು, ಇವರು ಡಿಕೆ ಶಿವಕುಮಾರ್ ಅವರ ಹೂಡಿಕೆಯ ಸಂಸ್ಥೆಯಲ್ಲಿ ಪಾಲುದಾರರಾಗಿದ್ದಾರೆ. ಹಣಕಾಸು ಅಕ್ರಮ ಆರೋಪ ಬಂದ ಹಿನ್ನೆಲೆಯಲ್ಲಿ ಪುಟ್ಟಸ್ವಾಮಿ ಗೌಡ ಅವರ ನಿವಾಸದ ಮೇಲೆ ಜನವರಿ ಐಟಿ ದಾಳಿ ಆಗಿದೆ.

    ದೆಹಲಿಯಲ್ಲಿರುವ ಹಲವು ಕಾಂಗ್ರೆಸ್ ನಾಯಕರಿಗೆ ಡಿಕೆ ಶಿವಕುಮಾರ್ ಅವರು ತಮ್ಮ ಆಪ್ತ ಸಹಾಯಕನಾಗಿರುವ ಶ್ರೀಧರ್ ಮೂಲಕ ನೂರಾರು ಕೋಟಿ ರೂ. ಹಣವನ್ನು ಸಂದಾಯ ಮಾಡಿದ್ದಾರೆ. ತುಮಕೂರಿನ ಪಾವಗಡದಲ್ಲಿ ಮೆಗಾ ಸೋಲಾರ್ ಘಟಕ ನಿರ್ಮಾಣವಾಗುತ್ತಿದೆ. ಈ ಘಟಕ ನಿರ್ಮಾಣಕ್ಕೆ ರೈತರಿಗೆ ಹೆದರಿಸಿ ಬಲವಂತವಾಗಿ ಜಮೀನು ಖರೀದಿಸಲಾಗಿದೆ. ಈ ಎಲ್ಲ ಜಮೀನು ಡಿಕೆ ಶಿವಕುಮಾರ್ ಬೇನಾಮಿ ಆಸ್ತಿಯಾಗಿದ್ದು, ಈ ಜಾಗವನ್ನು ಈಗ ಸೋಲಾರ್ ಕಂಪೆನಿಗೆ ವಿದ್ಯುತ್ ಉತ್ಪಾದಿಸಲು ಲೀಸ್ ಗೆ ನೀಡಲಾಗಿದೆ.

    ಪರಿಷತ್ ಸದಸ್ಯ ಗೋವಿಂದರಾಜ್ ನಿವಾಸದಲ್ಲಿ ಪತ್ತೆಯಾದ ಡೈರಿಯಲ್ಲಿ ಉಲ್ಲೇಖಿಸಲ್ಪಟ್ಟಿರುವ ಡಿಕೆಎಸ್ ಹೆಸರು ಡಿಕೆ ಶಿವಕುಮಾರ್ ಅವರದ್ದು. ಹವಲಾ ಏಜೆಂಟ್‍ಗಳ ಮೂಲಕ ಡಿಕೆ ಶಿವಕುಮಾರ್ ಹಣವನ್ನು ಸಾಗಿಸಿದ್ದಾರೆ.

    ಡಿಕೆ ಶಿವಕುಮಾರ್ ಅವರು ತನ್ನ ವೈಯಕ್ತಿಕ ವ್ಯವಹಾರದ ಬಗ್ಗೆ ಏನಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು ಬೆಂಗಳೂರು ಮತ್ತು ಹುಬ್ಬಳ್ಳಿಯ ಆದಾಯ ತೆರಿಗೆ ಕಚೇರಿಗೆ ಈ ಹಿಂದೆ ವಿವಿಧ ಗೆಟಪ್ ನಲ್ಲಿ ಭೇಟಿ ನೀಡಿದ್ದಾರೆ. ಇವರು ಭೇಟಿ ನೀಡಿರುವ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

    ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿದರುವ ಅಧಿಕಾರಿಗಳು ತಮಗೆ ಬೇಕಾದ ಹುದ್ದೆಯನ್ನು ಪಡೆಯಲು ಡಿಕೆ ಶಿವಕುಮಾರ್ ಅವರಿಗೆ ಹಣವನ್ನು ಸಂದಾಯ ಮಾಡುತ್ತಿದ್ದರು. ಈ ಸಂದಾಯದ ಹಿನ್ನೆಲೆಯಲ್ಲಿ ಅವರಿಗೆ ಬೇಕಾದ ಜಾಗದಲ್ಲಿ ಹುದ್ದೆ ಸಿಗುತಿತ್ತು.

    ಡಿಕೆ ಶಿವಕುಮಾರ್ 60ಕ್ಕೂ ಹೆಚ್ಚು ಬಾರಿ ದುಬೈ ಮತ್ತು ಯುರೋಪ್‍ಗೆ ಪ್ರಯಾಣ ಬೆಳೆಸಿದ್ದಾರೆ. ಕಪ್ಪು ಹಣವನ್ನು ಬಿಳಿಯಾಗಿಸಲು ಶಿವಕುಮಾರ್ ಪ್ರಯಾಣ ಬೆಳೆಸಿದ್ದಾರೆ. ಅಷ್ಟೇ ಅಲ್ಲದೇ ವಿದೇಶದಲ್ಲಿ ಹಲವು ಕಡೆ ಹಣವನ್ನು ಹೂಡಿಕೆ ಮಾಡಿದ್ದಾರೆ. ಹೀಗಾಗಿ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಜೊತೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಅಡಿ ಪ್ರಕರಣದ ದಾಖಲಿಸಿ ನೀವು ತನಿಖೆ ನಡೆಸಬೇಕು.

    ಇದನ್ನೂ ಓದಿ: ಸಿಎಂ ವಿರುದ್ಧ ಕಿಡಿಕಾರಿದ ಡಿಕೆ ಶಿವಕುಮಾರ್ ತಾಯಿ

  • ನೋಟ್ ಬ್ಯಾನ್ ಬಳಿಕ ಮತ್ತೊಂದು ಬ್ರಹ್ಮಾಸ್ತ್ರ ಪ್ರಯೋಗಿಸಲಿದ್ದಾರೆ ಮೋದಿ

    ನೋಟ್ ಬ್ಯಾನ್ ಬಳಿಕ ಮತ್ತೊಂದು ಬ್ರಹ್ಮಾಸ್ತ್ರ ಪ್ರಯೋಗಿಸಲಿದ್ದಾರೆ ಮೋದಿ

    ನವದೆಹಲಿ: ನೀವು ಹೊಸ ಕಾರು ಖರೀದಿಸಿ ಫೇಸ್ ಬುಕ್‍ಗೆ ಫೋಟೋ ಹಾಕ್ತೀರಾ. ಹಾಗಾದ್ರೆ ಮುಂದಿನ ದಿನಗಳಲ್ಲಿ ನಿಮ್ಮ ಮನೆಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬಂದರೆ ಅಚ್ಚರಿಯಿಲ್ಲ.

    ಹೌದು. ಕಪ್ಪು ಕುಳಗಳನ್ನು ಮಣಿಸಲು ನೋಟ್ ನಿಷೇಧ ಕೈಗೊಂಡ ಮೋದಿ ಸರ್ಕಾರ ಈಗ ಆದಾಯ ತೆರಿಗೆಯನ್ನು ಕಟ್ಟದೇ ಶೋಕಿ ಮಾಡೋ ಕುಳಗಳನ್ನು ಹಿಡಿಯಲು ಪ್ಲಾನ್ ಮಾಡಿದೆ.

    ಇಲ್ಲಿಯವರೆಗೆ ಆದಾಯ ತೆರಿಗೆ ಇಲಾಖೆ ಬ್ಯಾಂಕ್ ಮೂಲಗಳನ್ನು ಮಾತ್ರ ಪರಿಶೀಲನೆ ನಡೆಸಿ ತೆರಿಗೆ ವಂಚಿಸುತ್ತಿದ್ದ ಕುಳಗಳನ್ನು ಪತ್ತೆ ಹಚ್ಚುತಿತ್ತು. ಈಗ ಇವುಗಳ ಜೊತೆ ಸಾಮಾಜಿಕ ಜಾಲತಾಣಗಳ ಮೂಲಕ ಶೋಕಿ ಮಾಡು ಮಂದಿಯನ್ನು ಪತ್ತೆ ಹಚ್ಚಲು ಮುಂದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಹೇಗೆ?
    ನೀವು ಎಲ್ಲಿ ಹೋಗಿದ್ದೀರಿ..? ಎಷ್ಟು ಖರ್ಚು ಮಾಡಿದ್ದೀರಿ..? ಏನು ಖರೀದಿ ಮಾಡಿದ್ದೀರಿ ಎನ್ನುವ ಮಾಹಿತಿ ಸಂಗ್ರಹಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ರೂಪಿಸಿದ್ದು ಆಗಸ್ಟ್ ನಿಂದ ಕಾರ್ಯಾರಂಭ ಮಾಡಲಿದೆ. ಒಂದು ಸಾವಿರ ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು ಫೇಸ್‍ಬುಕ್, ಇನ್‍ಸ್ಟಾ ಗ್ರಾಮ್‍ನಿಂದ ಫೋಟೋ, ವಿಡಿಯೋಗಳ ಮಾಹಿತಿಯನ್ನು ಮಾಹಿತಿಯನ್ನು ಸಂಗ್ರಹಿಸಲಿದೆ.

    ಕಾರ್ಯಾಚರಣೆ ಹೀಗೆ ಇರುತ್ತೆ:
    ಮೊದಲ ಹಂತದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ, ಆಸ್ತಿ ಮತ್ತು ಸ್ಟಾಕ್ ಗಳಲ್ಲಿ ಹೂಡಿಕೆ, ಹಣವನ್ನು ಖರ್ಚು ಮಾಡಿದ್ದು ಮತ್ತು ಠೇವಣಿ ಇಟ್ಟ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ಎರಡನೇ ಹಂತ ಡಿಸೆಂಬರ್ ನಿಂದ ಆರಂಭವಾಗಲಿದ್ದು, ತೆರಿಗೆಯನ್ನು ವಂಚಿಸಿ ವ್ಯವಹಾರ ನಡೆಸುತ್ತಾರೋ ಅವರ ಮಾಹಿತಿಯನ್ನು ಸಂಗ್ರಹಿಸಲು ವೈಯಕ್ತಿಕ ಪ್ರೊಫೈಲ್ ಕ್ರಿಯೆಟ್ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಫೇಸ್ ಬುಕ್, ಇನ್ ಸ್ಟಾಗ್ರಾಮ್ ನಲ್ಲಿ ಹಾಕಿರುವ ಕಾರುಗಳು, ವಿದೇಶ ಪ್ರವಾಸದ ಫೋಟೋ, ಶಾಪಿಂಗ್ ಫೋಟೋ ಇತ್ಯಾದಿ. ಎಲ್ಲ ಮಾಹಿತಿ ಸಂಗ್ರಹಿಸಿದ ಬಳಿಕ 2018ರ ಮೇ ತಿಂಗಳಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳು ನೇರವಾಗಿ ಕಾರ್ಯಾಚರಣೆಗೆ ಇಳಿಯಲಿದ್ದಾರೆ.

    ನವೆಂಬರ್ 8ರಂದು ನೋಟ್ ಬ್ಯಾನ್ ಮಾಡಿದ ಬಳಿಕ ಡಿಸೆಂಬರ್ 31 ರಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಸಂದರ್ಭದಲ್ಲಿ ದೇಶದಲ್ಲಿ 2 ಕೋಟಿಗೂ ಅಧಿಕ ಮಂದಿ ಕಳೆದ ವರ್ಷ ವಿದೇಶ ಪ್ರವಾಸವನ್ನು ಕೈಗೊಂಡಿದ್ದಾರೆ. ಆದರೆ ಕೇವಲ 32 ಲಕ್ಷ ಮಂದಿ ಮಾತ್ರ ತಮ್ಮ ಬಳಿಕ 10 ಲಕ್ಷಕ್ಕೂ ಹೆಚ್ಚು ಅಧಿಕ ಆದಾಯವಿದೆ ಎಂದು ಘೋಷಿಸಿದ್ದಾರೆ. ಹೀಗಾಗಿ ತೆರಿಗೆ ವಂಚಿಸುವ ಜನರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಮೋದಿ ಎಚ್ಚರಿಕೆ ನೀಡಿದ್ದರು.

  • ಮತ್ತೆ 500, 1 ಸಾವಿರ ರೂ. ಹಳೆ ನೋಟುಗಳಿಗೆ ಮರುಜೀವ?

    ಮತ್ತೆ 500, 1 ಸಾವಿರ ರೂ. ಹಳೆ ನೋಟುಗಳಿಗೆ ಮರುಜೀವ?

    ನವದೆಹಲಿ: ನೋಟ್ ಬ್ಯಾನ್ ಬಳಿಕ ಮೂಲೆಗುಂಪಾಗಿದ್ದ ಹಳೆಯ 500, ಸಾವಿರ ನೋಟಿಗೆ ಸುಪ್ರೀಂಕೋರ್ಟ್ ಮತ್ತೆ ಮರುಜೀವ ನೀಡಿದೆ.

    ಯಾವ ವ್ಯಕ್ತಿ ಪ್ರಾಮಾಣಿಕವಾಗಿ ಹಳೆಯ ನೋಟುಗಳನ್ನು ಇಟ್ಟುಕೊಂಡಿದ್ದಾರೋ ಅಂಥವರಿಗೆ ಮತ್ತೊಮ್ಮೆ ಹಣವನ್ನು ಠೇವಣಿ ಇಡಲು ಅವಕಾಶ ನೀಡಬೇಕು. ಈ ಬಗ್ಗೆ ನಿಮ್ಮ ನಿಲುವು ಏನು ಎನ್ನುವುದನ್ನು ತಿಳಿಸಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

    ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಹಣಕಾಸು ಸಚಿವಾಲಯ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಬೇಕು. ಇದಕ್ಕಾಗಿ 2 ವಾರಗಳ ಕಾಲ ಕಾಲಾವಕಾಶ ನೀಡುತ್ತಿದ್ದೇವೆ. ಒಂದುವೇಳೆ ನೀವು ಉತ್ತರ ನೀಡದೇ ಇದ್ದರೆ ಇದೊಂದು ಗಂಭೀರ ಪ್ರಕರಣ ಎಂದು ಪರಿಗಣಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

    ಜುಲೈ 18ರಂದು ಮತ್ತೆ ಅರ್ಜಿ ವಿಚಾರಣೆಗೆ ಕೋರ್ಟ್ ಸಮಯ ನಿಗದಿಪಡಿಸಿದ್ದು, ಇಂದಿನ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೇಹರ್, ಪ್ರಾಮಾಣಿಕವಾಗಿ ಹಣವನ್ನು ಇಟ್ಟುಕೊಂಡವರಿಗೆ ಅವರಿಗೆ ಮತ್ತೊಮ್ಮೆ ಠೇವಣಿ ಇಡಲು ಅವಕಾಶ ನೀಡಬೇಕು. ಒಂದು ವೇಳೆ ಅವಕಾಶ ನೀಡದೇ ಇದ್ದಲ್ಲಿ ಇದನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ನವೆಂಬರ್ 8ರಂದು ನೋಟು ಬ್ಯಾನ್ ನಿರ್ಧಾರ ಕೈಗೊಂಡ ಬಳಿಕ ಮಾರ್ಚ್ 31ರ ವರೆಗೆ ಹಳೆಯ ನೋಟುಗಳನ್ನು ಠೇವಣಿ ಇಡಲು ಆರ್‍ಬಿಐ ಅನುಮತಿ ನೀಡಿತ್ತು.