Tag: ನೋಟ್ ಬ್ಯಾನ್

  • ಮಟಾಶ್ ಅಂದ್ರೆ ಅಂತ್ಯವಷ್ಟೇ ಮುಕ್ತಾಯವಲ್ಲ!

    ಮಟಾಶ್ ಅಂದ್ರೆ ಅಂತ್ಯವಷ್ಟೇ ಮುಕ್ತಾಯವಲ್ಲ!

    ಬೆಂಗಳೂರು: ಎಸ್.ಡಿ ಅರವಿಂದ್ ನಿರ್ದೇಶನದ ಮಟಾಶ್ ಚಿತ್ರದ ಸುತ್ತ ಎಲ್ಲೆಡೆ ಚರ್ಚೆಗಳಾಗುತ್ತಿವೆ. ಈ ಚಿತ್ರ ನೋಟು ಅಮಾನ್ಯೀಕರಣದ ಸುತ್ತಲಿನ ಸತ್ಯ ಘಟನೆಯನ್ನಾಧರಿಸಿದೆ ಅಂತೊಂದು ಸುದ್ದಿ ಹೊರ ಬಿದ್ದ ಕ್ಷಣದಿಂದಲೇ ಜನ ಇತ್ತಲೇ ದೃಷ್ಟಿ ನೆಟ್ಟಿದ್ದಾರೆ. ಹಾಗಾದರೆ ಈ ಚಿತ್ರ ಅಸಲೀ ಕಥೆಗೇ ದೃಶ್ಯ ರೂಪ ನೀಡಿದೆಯಾ? ನೋಟು ಅಮಾನ್ಯೀಕರಣ ಸರಿ ಮತ್ತು ತಪ್ಪುಗಳೆಂಬ ವಾದ ಚಾಲ್ತಿಯಲ್ಲಿದೆಯಲ್ಲಾ? ಈ ಚಿತ್ರ ಈ ಬಗ್ಗೆ ಒಂದು ನಿಲುವು ಪ್ರಕಟಿಸುತ್ತದೆಯಾ… ಇಂಥಾ ಪ್ರಶ್ನೆಗಳ ಸರಮಾಲೆಯೇ ಇದೆ.

    ಆದರೆ ನಿರ್ದೇಶಕ ಎಸ್.ಡಿ ಅರವಿಂದ್ ಇದೊಂದು ಸತ್ಯ ಘಟನೆಯಾಧಾರಿತ ಕಾಲ್ಪನಿಕ ಕಥಾ ಹಂದರ ಹೊಂದಿರುವ ಚಿತ್ರ ಎಂಬ ಖಚಿತ ವಿಚಾರವನ್ನು ಹೊರ ಹಾಕುತ್ತಾರೆ. ಆದರೆ ಕಾಲ್ಪನಿಕ ಕಥೆಯಲ್ಲಿಯೇ ವಾಸ್ತವ ಎದುರಾಗಲೂ ಬಹುದೆಂಬ ಸುಳಿವು ಕೊಡುವ ಮೂಲಕ ಕುತೂಹಲವನ್ನು ಮತ್ತಷ್ಟು ನಿಗಿ ನಿಗಿಸುವಂತೆಯೂ ಮಾಡುತ್ತಾರೆ. ನಿಖರವಾಗಿ ಹೇಳ ಬೇಕೆಂದರೆ ಇದು ಪಕ್ಕಾ ಕಮರ್ಷಿಯಲ್ ಅಂಶಗಳನ್ನು ಹೊಂದಿರೋ ಚಿತ್ರವಂತೆ.

    ಯೂಥ್‍ಫುಲ್ ಸಬ್ಜೆಕ್ಟಿನ ಈ ಚಿತ್ರ ನೋಟು ಅಮಾನ್ಯೀಕರಣ ನಡೆದಾದ ನಂತರದ ಐವತ್ತು ದಿನಗಳಲ್ಲಿ ನಡೆದ ಕಥಾವಳಿಗಳನ್ನಿಟ್ಟಿಕೊಂಡೇ ಒಂದು ಔಟ್ ಆಂಡ್ ಔಟ್ ಎಂಟರ್ಟೈನರ್ ಕಥೆಯನ್ನು ಹೇಳ ಹೊರಟಿದೆ. ಈ ಮೂಲಕವೇ ಈ ಹೊತ್ತಿನ ಯುವ ಜನಾಂಗದ ಮನಸ್ಥಿತಿಯನ್ನೂ ಅನಾವರಣಗೊಳಿಸಲಿದೆಯಂತೆ. ಇಲ್ಲಿ ಅಂದದ ಹಾಡುಗಳಿರುತ್ತವೆ, ಮೈ ನವಿರೇಳಿಸೋ ಚೇಸಿಂಗ್ ಸೀನುಗಳಿರುತ್ತವೆ. ರೋಮಾಂಚನಗೊಳಿಸೋ ಎಲ್ಲ ಅಂಶಗಳೂ ಇರುತ್ತವೆ ಎಂಬುದು ನಿರ್ದೇಶಕರ ಅಭಿಪ್ರಾಯ.

    ಹೀಗೆ ಬಹಳಷ್ಟು ಕುತೂಹಲ ಕೆರಳಿಸಿರುವ ಈ ಚಿತ್ರದ ವಿಚಾರದಲ್ಲಿ ಅರವಿಂದ್ ಅವರು ಭಾರೀ ಪರಿಶ್ರಮ ವಹಿಸಿದ್ದಾರೆ. ಈ ಚಿತ್ರವನ್ನು ಅವರೇ ಸ್ವತಃ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಹನ್ನೊಂದು ಹಾಡುಗಳಿವೆ. ಅವೆಲ್ಲದಕ್ಕೂ ಅವರೇ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಅದರಲ್ಲೊಂದಷ್ಟು ಹಾಡುಗಳಿಗೆ ಸಾಹಿತ್ಯವನ್ನೂ ಬರೆದಿದ್ದಾರೆ. ಹೆಚ್ಚೂ ಕಮ್ಮಿ ಈ ಚಿತ್ರವನ್ನವರು ಒನ್ ಮ್ಯಾನ್ ಆರ್ಮಿಯಂತೆಯೇ ನಿಭಾಯಿಸಿದ್ದಾರೆ.

    ಈ ಚಿತ್ರಕ್ಕೆ ಮಟಾಶ್ ಅಂತ ಹೆಸರಿಡಲೂ ಕಾರಣವಿದೆ. ಮಟಾಶ್ ಅಂದರೆ ಪರಿಪೂರ್ಣತೆ ಇಲ್ಲದ ಅಂತ್ಯ ಎಂಬ ಅರ್ಥ ಧ್ವನಿಸುತ್ತೆ. ನೋಟು ಅಮಾನ್ಯೀಕರಣದ ವಿಚಾರದಲ್ಲಿ ಹಳೇ ನೋಟುಗಳ ಕಥೆ ಮುಗಿದಂತೆ ಕಂಡರೂ ಅದರ ಪರಿಣಾಮ ಇನ್ನೂ ಬಾಕಿ ಉಳಿದುಕೊಂಡಿದೆ. ಉದ್ದೇಶವೂ ಸಂಪೂರ್ಣವಾಗಿ ಈಡೇರಿದಂತಿಲ್ಲ. ಈ ಕಾರಣದಿಂದಷ್ಟೇ ಈ ಚಿತ್ರಕ್ಕೆ ಮಟಾಶ್ ಎಂಬ ಹೆಸರಿಡಲಾಗಿದೆಯಂತೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜನಪ್ರಿಯತೆ ಹೆಚ್ಚಿಸಿಕೊಳ್ಳಲು ನೋಟ್ ಬ್ಯಾನ್ ಮಾಡಲಾಗಿತ್ತು: ಶಿವಸೇನೆ

    ಜನಪ್ರಿಯತೆ ಹೆಚ್ಚಿಸಿಕೊಳ್ಳಲು ನೋಟ್ ಬ್ಯಾನ್ ಮಾಡಲಾಗಿತ್ತು: ಶಿವಸೇನೆ

    ಮುಂಬೈ: ನೋಟು ಅಮಾನ್ಯೀಕರಣ ವಿಫಲವಾಗಿದ್ದಕ್ಕೆ ಪ್ರಧಾನಿ ಮೋದಿ ಹೇಗೆ ಪ್ರಾಯಶ್ಚಿತ ಮಾಡಿಕೊಳ್ಳುತ್ತಾರೆ. ಮೋದಿ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ನೋಟ್‍ಬ್ಯಾನ್ ಮಾಡಿದ್ದರು ಎಂದು ಬಿಜೆಪಿ ವಿರುದ್ಧ ಮಿತ್ರಪಕ್ಷ ಶಿವಸೇನೆ ಕಿಡಿಕಾರಿದೆ.

    ನೋಟ್ ಬ್ಯಾನ್ ಬಳಿಕ ಶೇ.99.3ರಷ್ಟು ಹಳೆಯ ನೋಟುಗಳು ವಾಪಾಸ್ಸಾಗಿವೆ ಎಂದು ಆರ್‍ಬಿಐ ಸ್ಪಷ್ಟಪಡಿಸಿದೆ. ನೋಟು ಅಮಾನ್ಯೀಕರಣದಿಂದ ದೇಶದ ಆರ್ಥಿಕ ಸ್ಥಿತಿ ದಾರಿ ತಪ್ಪಲು ಕಾರಣವಾಗಿದೆ. ನೋಟು ಅಮಾನ್ಯೀಕರಣದ ಪರಿಣಾಮದಿಂದಾಗಿ ಇಂದು ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯಲ್ಲಿ ಕುಸಿಯುತ್ತಿದೆ. ಅಂದು ನೋಟ್ ಬ್ಯಾನ್ ನಿಂದಾಗಿ ಸುಮಾರು 100 ಜನರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎಂದು ಶಿವಸೇನೆ ಹೇಳಿದೆ.

    ಇಂದಿನ ದೇಶದ ಆರ್ಥಿಕ ಪರಿಸ್ಥಿತಿಗೆ ಪ್ರಧಾನಿ ಮೋದಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ನೋಟು ಅಮಾನ್ಯೀಕರಣದ ವಿಫಲ ಯತ್ನಕ್ಕೆ ಯಾವ ರೀತಿಯಲ್ಲಿ ಪ್ರಾಯಶ್ಚಿತ ಮಾಡಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದೆ. ಕೇವಲ ಪ್ರಚಾರಕ್ಕಾಗಿ ನೋಟ್ ಬ್ಯಾನ್ ಮಾಡಲಾಗಿತ್ತು ಎಂದು ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಟೀಕಿಸಿದೆ.

     

    500 ಮತ್ತು 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣದ ಬಳಿಕ ಮಾತನಾಡಿದ್ದ ಪ್ರಧಾನಿ ಮೋದಿ, ನನಗೆ 50 (ಡಿಸೆಂಬರ್ 30, 2018ವರೆಗೆ) ದಿನಗಳ ಅವಕಾಶ ನೀಡಿ. ಒಂದು ವೇಳೆ ನಾನು ತೆಗೆದುಕೊಂಡಿರುವ ಈ ನಿರ್ಧಾರ ತಪ್ಪಾಗಿದ್ದರೆ, ನೀವು ನೀಡುವ ಶಿಕ್ಷೆಯನ್ನು ಅನುಭವಿಸಲು ನಾನು ಸಿದ್ಧನಾಗಿರುತ್ತೇನೆ ಎಂದು ಹೇಳಿದ್ದರು. ಈ ಹೇಳಿಕೆಯನ್ನಾಧರಿಸಿ ಶಿವಸೇನೆ ನಿಮ್ಮ ತಪ್ಪಿಗೆ ಪ್ರಾಯಶ್ಚಿತವೇನು ಎಂದು ವ್ಯಂಗ್ಯ ಮಾಡಿದೆ.

    ಅರುಣ್ ಜೇಟ್ಲಿ ತಿರುಗೇಟು:
    ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಗೊಳಿಸಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಸರ್ಕಾರದ ಈ ಕ್ರಮದಿಂದ ಇಂದು ದೇಶದ ಆರ್ಥಿಕತೆ ಸುಗಮವಾಗಿ ನಡೆಯಲು ಸಹಾಯಕವಾಗಿದೆ. ಅಲ್ಲದೇ ದಾಖಲೆಯ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿದೆ. ನೋಟು ಅಮಾನ್ಯೀಕರಣದ ಮೊದಲು 2 ವರ್ಷಗಳಲ್ಲಿ ತೆರಿಗೆ ಸಂಗ್ರಹ ಕೇವಲ ಶೇ.6.6 ರಿಂದ ಶೇ.9 ರಷ್ಟಿತ್ತು. ನೋಟು ನಿಷೇಧದ ಬಳಿಕ ಇದರ ಪ್ರಮಾಣ ಶೇ.15 ರಿಂದ ಶೇ.18ಕ್ಕೆ ಗಣನೀಯವಾಗಿ ಏರಿಕೆಯಾಗಿದೆ. 2014 ರಲ್ಲಿ ಆದಾಯ ತೆರಿಗೆ ಪಾವತಿಸುತ್ತಿದ್ದವರ ಸಂಖ್ಯೆ ಕೇವಲ 3.8 ಕೋಟಿಯಷ್ಟಿತ್ತು, ಸದ್ಯ 2017-18ನೇ ಸಾಲಿನಲ್ಲಿ 6.86 ಕೋಟಿ ಗ್ರಾಹಕರು ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಟೀಕಾಕಾರಿಗೆ ಉತ್ತರಿಸಿದ್ದಾರೆ.

    ನೋಟು ಅಮಾನ್ಯೀಕರಣದಿಂದಾಗಿ 2016ರ ನವೆಂಬರ್ 8 ರವರೆಗು ಚಲಾವಣೆಯಲ್ಲಿದ್ದ 500 ಹಾಗೂ 1,000 ಮುಖಬೆಲೆಯ 15.41 ಲಕ್ಷ ಕೋಟಿ ರೂಪಾಯಿಗಳ ಪೈಕಿ 15.31 ಲಕ್ಷ ಕೋಟಿ ರೂಪಾಯಿಗಳು ಭಾರತೀಯ ರಿಸರ್ವ್ ಬ್ಯಾಂಕಿಗೆ ಜಮೆಯಾಗಿದೆ.

    ಹೊಸ ನೋಟುಗಳ ಮುದ್ರಣದ ವೆಚ್ಚ:
    ನೋಟು ನಿಷೇಧದ ಬಳಿಕ 2016-17 ರ ಅವಧಿಯಲ್ಲಿ ಆರ್‍ಬಿಐ 7,965 ಕೋಟಿ ರೂ. ಗಳನ್ನು ಹೊಸ 500 ಹಾಗೂ 2 ಸಾವಿರ ರೂ. ಮುಖಬೆಲೆಯ ನೋಟು ಮುದ್ರಣಕ್ಕಾಗಿ ವೆಚ್ಚ ಮಾಡಿದೆ. ಈ ಅವಧಿಯಲ್ಲಿ ನೋಟು ಮುದ್ರಣದ ವೆಚ್ಚ ಕಳೆದ ವರ್ಷದಲ್ಲಿ ಮಾಡಿದ್ದ ವೆಚ್ಚಕ್ಕಿಂತಲೂ ಎರಡರಷ್ಟು ಹೆಚ್ಚಾಗಿದೆ. ಇನ್ನು 2017-18 (ಜುಲೈ 2017 ರಿಂದ ಜೂನ್ 2018) ಅವಧಿಯಲ್ಲಿ 4,912 ಕೋಟಿ ರೂ. ಗಳನ್ನು ನೋಟು ಮುದ್ರಣಕ್ಕಾಗಿ ಆರ್‍ಬಿಐ ವೆಚ್ಚಮಾಡಿದೆ.

    ನೋಟು ನಿಷೇಧ ವೇಳೆ ಈ ಕ್ರಮ ಕಪ್ಪು ಹಣದ ಪತ್ತೆ, ಭ್ರಷ್ಟಚಾರ ನಿಯಂತ್ರಣ ಮತ್ತು ಖೋಟಾ ನೋಟು ಪರಿಶೀಲನೆಗೆ ಸಹಾಯವಾಗುತ್ತದೆ ಎಂಬ ವಾದ ಕೇಳಿ ಬಂದಿತ್ತು. ಆದರೆ ಈ ವೇಳೆ 500 ರೂ. ಹಾಗೂ 1 ಸಾವಿರ ರೂ ಮುಖಬೆಲೆ ನಕಲಿ ನೋಟುಗಳ ಪತ್ತೆ ಪ್ರಮಾಣ ಕ್ರಮವಾಗಿ 59.7% ಮತ್ತು 59.6% ಕಡಿಮೆ ಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ 100 ರೂ. ಹಾಗೂ 50 ರೂ ಮುಖಬೆಲೆಯ ನಕಲಿ ನೋಟುಗಳ ಪತ್ತೆ ಪ್ರಮಾಣ ಕ್ರಮವಾಗಿ 35%, 154.3% ರಷ್ಟು ಪತ್ತೆಯಾಗಿದೆ. ನೋಟು ನಿಷೇಧ ಕ್ರಮದಿಂದಾಗಿ 2017-18 ಆರ್ಥಿಕ ವರ್ಷದ ಮೇಲೆ ಪ್ರಭಾವ ಬೀರಿತ್ತು ಎಂದು ಆರ್ ಬಿಐ ಹೇಳಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನೇ ಬದಲಿಸಬೇಕು- ವೀರಪ್ಪ ಮೊಯ್ಲಿ

    2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನೇ ಬದಲಿಸಬೇಕು- ವೀರಪ್ಪ ಮೊಯ್ಲಿ

    ಬೆಂಗಳೂರು: 2019 ರ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಪ್ರಧಾನಿ ಮೋದಿಯನ್ನೆ ಬದಲಾಯಿಸಬೇಕೆಂಬ ಕೂಗು ಕೇಳಿ ಬರುತ್ತಿದೆ ಎಂದು ಲೋಕಸಭಾ ಸದಸ್ಯ ವೀರಪ್ಪ ಮೊಯ್ಲಿ  ಹೇಳಿದ್ದಾರೆ.

    ಚಿಕ್ಕಬಳ್ಳಾಪುದಲ್ಲಿ ಮಾತನಾಡಿದ ಅವರು ನೋಟು ಅಮಾನ್ಯೀಕರಣದಿಂದ ದೇಶದ ಅರ್ಥಿಕ ಪರಿಸ್ಥಿತಿ ಆಧೋಗತಿಗೆ ತಲುಪಿದೆ. ಎಫ್‍ಡಿಐ ಕಡಿಮೆ ಆಗಿ, ರೂಪಾಯಿ ಮೌಲ್ಯ ಕನಿಷ್ಠ ಮಟ್ಟದಲ್ಲಿದೆ. ಹಾಗಾಗಿ 2019 ರ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಮೋದಿಯನ್ನೆ ಬದಲಾಯಿಸಬೇಕೆಂಬ ಕೂಗು ಕೇಳಿ ಬರುತ್ತಿದೆ ಎಂದು ಹೇಳಿದರು.

    ದೇಶದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿಷ್ಕ್ರೀಯವಾಗಿದೆ. ನೋಟು ಬ್ಯಾನ್ ನಿಂದ ಕಪ್ಪು ಹಣಕ್ಕೆ ಕಡಿವಾಣ ಹಾಕಲಾಗಿಲ್ಲ. ನೋಟು ಅಮಾನ್ಯೀಕರಣ ಕೂಡ ಕಪ್ಪು ಹಣವನ್ನು ಬಿಳಿ ಹಣ ಮಾಡುವ ಯೋಜನೆಯಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.

    ಪ್ರಧಾನಿ ನೆರೇಂದ್ರ ಮೋದಿ ನೇತೃತ್ವದ ಸರ್ಕಾರ ಭಾಷಣದ ಸರ್ಕಾರ. ಅದು ಕೇವಲ ಆಶ್ವಾಸನೆಗಳನ್ನು ಕೊಡುವ ಸರ್ಕಾರ ಎಂದು ಕಿಡಿ ಕಾರಿದರು.

    ದೇಶದಲ್ಲಿನ ಕಪ್ಪುಹಣವನ್ನು ಹೊರತರುವ ದೃಷ್ಟಿಯಿಂದ ಮೋದಿ ನೇತೃತ್ವದ ಸರ್ಕಾರ ನೋಟು ಅಮಾನ್ಯೀಕರಣ ಮಾಡಿತು. ಆದರೆ ದೇಶದಲ್ಲಿ ಕಪ್ಪು ಹಣ ಈಗಲೂ ಹೆಚ್ಚಾಗುತ್ತಿದೆ. ಇನ್ನು ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತರುವುದಾಗಿ ಮೋದಿ ಹೇಳಿದ್ದರು. ಆದರೆ ಕಪ್ಪುಹಣ ತರುವ ಬದಲು ಮತ್ತೆ ದೇಶದಲ್ಲಿ ಕಪ್ಪುಹಣ ಹೆಚ್ಚಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

  • ಜನರ ನಡುವೆ 18.5 ಲಕ್ಷ ಕೋಟಿ ರೂ. ನಗದು ಹಣ ಚಲಾವಣೆಯಲ್ಲಿದೆ:ಆರ್ ಬಿ ಐ

    ಜನರ ನಡುವೆ 18.5 ಲಕ್ಷ ಕೋಟಿ ರೂ. ನಗದು ಹಣ ಚಲಾವಣೆಯಲ್ಲಿದೆ:ಆರ್ ಬಿ ಐ

    ನವದೆಹಲಿ: ನೋಟ್ ಬ್ಯಾನ್ ಬಳಿಕ ಸದ್ಯ ದೇಶದಲ್ಲಿ ಚಲಾವಣೆಯಲ್ಲಿರುವ ನಗದು ಹಣದ ಮೊತ್ತ 18.5 ಲಕ್ಷ ಕೋಟಿ ರೂ. ತಲುಪಿದೆ. 500, 1000 ರೂ. ಮೌಲ್ಯದ ನೋಟುಗಳ ಅಮಾನ್ಯೀಕರಣ ಸಂದರ್ಭದಲ್ಲಿ 17 ಲಕ್ಷ ಕೋಟಿ ರೂ. ನಗದು ಹಣ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿತ್ತು ಎಂದು ಆರ್ ಬಿ ಐ ತಿಳಿಸಿದೆ.

    ಬ್ಯಾಂಕ್ ಮತ್ತು ಜನರ ಬಳಿಯಲ್ಲಿರುವ ಹಣ ಒಟ್ಟಾರೆ ದೇಶದಲ್ಲಿರುವ ನಗದು ಹಣವಾಗುತ್ತದೆ. ಕಳೆದ ಕೆಲವು ತಿಂಗಳ ಹಿಂದೆ ನೋಟಿನ ಕೊರತೆ ಕಂಡುಬಂದಿತ್ತು. ಚಲಾವಣೆ ಮಾಡದೆ ನಗದು ಹಣವನ್ನು ಶೇಖರಣೆ ಮಾಡಿರುವುದು ಇದಕ್ಕೆ ಕಾರಣ ಎಂದು ಆರ್ ಬಿ ಐ ಅಭಿಪ್ರಾಯ ವ್ಯಕ್ತಪಡಿಸಿತ್ತು.

    ಅಪನಗದೀಕರಣ ಮಾಡಿದ 500, 1000 ರೂ ನೋಟುಗಳ ಒಟ್ಟು ಮೌಲ್ಯ 15.44 ಲಕ್ಷ ಕೋಟಿ ರೂ. ಆಗಿತ್ತು. ನೋಟ್ ಬ್ಯಾನ್ ಬಳಿಕ 15.28 ಲಕ್ಷ ಕೋಟಿ ರೂ. ವಾಪಸ್ ಬಂದಿದೆ ಎಂದು 2017 ಜೂನ್ 30 ರ ಪ್ರಕಟಣೆಯಲ್ಲಿ ಆರ್ ಬಿ ಐ ತಿಳಿಸಿತ್ತು.

    ಅಪನಗದೀಕರಣದ ನಂತರ 2000, 500, 200, 50 ಮುಖಬೆಲೆಯ ನೋಟುಗಳನ್ನು ಆರ್ ಬಿ ಐ ಬಿಡುಗಡೆ ಮಾಡಿದೆ. ಚಲಾವಣೆಯಲ್ಲಿರುವ ಒಟ್ಟು ನಗದು ಹಣದ ಮಾಹಿತಿಯನ್ನು ವಾರಕ್ಕೊಮ್ಮೆ ಆರ್ ಬಿ ಐ ಪ್ರಕಟ ಮಾಡುತ್ತದೆ. ಇನ್ನು ಜನರ ನಡುವೆ ಚಲಾವಣೆಯಲ್ಲಿರುವ ನಗದು ಹಣದ ಮಾಹಿತಿಯನ್ನು 15 ದಿನಕ್ಕೊಮ್ಮೆ ಪ್ರಕಟ ಮಾಡುತ್ತದೆ.

    ಜನರ ನಡುವೆ ಚಲಾವಣೆಯಲ್ಲಿರುವ ಮತ್ತು ಆರ್ ಬಿ ಐ ಸೇರಿದಂತೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿರುವ ಒಟ್ಟಾರೆ ಹಣದ ಮೊತ್ತ 140 ಲಕ್ಷ ಕೋಟಿ ರೂ. 2013 ರಲ್ಲಿ 100 ಲಕ್ಷ ಕೋಟಿ ರೂ. ಗಿಂತ ಕಡಿಮೆ ಇತ್ತು ಎಂದು ಆರ್ ಬಿ ಐ ಸ್ಪಷ್ಟಪಡಿಸಿದೆ.

  • ‘ನೋ ಕ್ಯಾಶ್’ ಬೋರ್ಡ್ ಹಾಕಿರುವ ATMಗಳ ತಿಥಿ ಮಾಡಿದ ಜನರು

    ‘ನೋ ಕ್ಯಾಶ್’ ಬೋರ್ಡ್ ಹಾಕಿರುವ ATMಗಳ ತಿಥಿ ಮಾಡಿದ ಜನರು

    ರಾಯಚೂರು: ಒಂದು ತಿಂಗಳಿಂದ ಸರಿಯಾಗಿ ಕೆಲಸ ಮಾಡದೇ ನೋ ಕ್ಯಾಶ್ ಬೋರ್ಡ್ ಹಾಕಿರುವ ಎಟಿಂಎಂಗಳು ಸತ್ತಿವೆ ಅಂತಾ ರಾಯಚೂರಿನಲ್ಲಿ ಸಾರ್ವಜನಿಕರು ತಿಥಿ ಕಾರ್ಯ ಮಾಡುವ ಮೂಲಕ ಆಕ್ರೋಶವನ್ನು ಹೊರ ಹಾಕಿದ್ದಾರೆ.

    ನಗರದ ಅಂಬೇಡ್ಕರ್ ವೃತ್ತದ ಬಳಿಯಿರುವ ವಿವಿಧ ಬ್ಯಾಂಕ್ ಎಟಿಎಂಗಳ ಮುಂದೆ ಜನಾಂದೋಲನ ಮಹಾಮೈತ್ರಿ ಸಂಘಟನೆ ತಿಥಿ ಕಾರ್ಯ ಮಾಡಿದೆ. ಸಾರ್ವಜನಿಕರು ಒಂದು ತಿಂಗಳಿಂದ ಎಟಿಂಎಂ ನಲ್ಲಿ ಹಣವಿಲ್ಲದೆ ಇರುವದರಿಂದ ಪರದಾಡುವಂತಾಗಿದೆ. ಕೇಂದ್ರ ಸರ್ಕಾರದ ನಿಲುವುಗಳಿಂದಾಗಿ ಕಾರ್ಪೋರೇಟ್ ಸಂಸ್ಥೆಗಳು ಹಣ ಲೂಟಿ ಮಾಡುತ್ತಿವೆ, ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಜನಸಂಗ್ರಾಮ ಪರಿಷತ್ ಮುಖಂಡ ಡಾ.ವಿ.ಎ.ಮಾಲೀಪಾಟೀಲ್ ಆರೋಪಿಸಿದ್ರು.

    ಕೇಂದ್ರ ಸರ್ಕಾರವು ಸುಮಾರು 2 ಲಕ್ಷ ಕೋಟಿ ರೂ. ಕಾರ್ಪೋರೇಟ್ ಸಾಲವನ್ನು ಮನ್ನಾ ಮಾಡಿದ್ದು, ಅದರ ಜೊತೆಗೆ ಲಲಿತ್ ಮಹಲ್ 6 ಸಾವಿರ ಕೋಟಿ ರೂ., ವಿಜಯ್ ಮಲ್ಯ 9 ಸಾವಿರ ಕೋಟಿ ರೂ. ಮತ್ತು ನೀರವ್ ಮೋದಿ 11 ಸಾವಿರದ 700 ಕೋಟಿ ರೂ. ಸಾಲವನ್ನ ತೆಗೆದುಕೊಂಡು ದೇಶದಿಂದ ಓಡಿಹೋಗಿದ್ದಾರೆ. ಆದ್ದರಿಂದ ಬ್ಯಾಂಕ್ ನಲ್ಲಿ ಹಣ ಕಡಿಮೆಯಾಗಿ ಈ ರೀತಿ ಸಮಸ್ಯೆಯಾಗುತ್ತಿದೆ ಅಂತಾ ಮಾಲೀಪಾಟೀಲ್ ಹೇಳಿದ್ರು.

    ಕೇಂದ್ರ ಸರ್ಕಾರ ಜನಸಾಮಾನ್ಯರು ದುಡಿದ ಶ್ರಮದ ಹಣವನ್ನು ಬ್ಯಾಂಕ್ ಗೆ ಕಟ್ಟಿಸಿಕೊಂಡು ಅದನ್ನು ದೊಡ್ಡ ಜನರಿಗೆ ನೀಡುತ್ತದೆ. ಆದ್ರೆ ಅವರು ತಪ್ಪಿಸಿಕೊಂಡು ವಿದೇಶಕ್ಕೆ ಓಡಿಹೋಗುತ್ತಾರೆ. ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗಿತ್ತಿದೆ. ನೋಟು ರದ್ದತಿಯಾದಾಗಲೂ ಎಟಿಎಂನಲ್ಲಿ ಹಣ ಇರಲಿಲ್ಲ, ಈಗಲೂ ಹಣವಿಲ್ಲದೆ ಬಾಗಿಲು ಮುಚ್ಚಿವೆ. ಅದಕ್ಕೆ ಈ ಸಮಸ್ಯೆಯನ್ನು ಸರ್ಕಾರಕ್ಕೆ ತಿಳಿಸಬೇಕೆಂದು ತಿಥಿ ಕಾರ್ಯ ಮಾಡಿದ್ದೇವೆಂದು ಅಂತಾ ಮಹಾಮೈತ್ರೆದ ಸಂಚಾಲಕ ಎಂ.ಆರ್.ಭೇರಿ ತಿಳಿಸಿದ್ರು.

    https://www.youtube.com/watch?v=f394ewblo58

  • ನೋಟ್‍ಬ್ಯಾನ್ ಆಗಿ ವರ್ಷವಾದ್ರೂ ಬೆಂಗ್ಳೂರಿನ ದೇಗುಲಗಳಲ್ಲಿ ಧೂಳು ತಿನ್ನುತ್ತಿರೋ ಲಕ್ಷ ಲಕ್ಷ ಹಳೇ ನೋಟು

    ನೋಟ್‍ಬ್ಯಾನ್ ಆಗಿ ವರ್ಷವಾದ್ರೂ ಬೆಂಗ್ಳೂರಿನ ದೇಗುಲಗಳಲ್ಲಿ ಧೂಳು ತಿನ್ನುತ್ತಿರೋ ಲಕ್ಷ ಲಕ್ಷ ಹಳೇ ನೋಟು

    ಬೆಂಗಳೂರು: ಮೋದಿ ಸರ್ಕಾರ ಕಪ್ಪು ಹಣದ ವಿರುದ್ಧ ಸಮರ ಸಾರಿ ಹಳೆಯ 500 ಮತ್ತು 1000 ರೂ. ಮುಖಬೆಲೆಯ ಮೋಟುಗಳನ್ನ ಬ್ಯಾನ್ ಮಾಡಿ ವರ್ಷವೇ ಕಳೆದಿದೆ. ಆದರೆ ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ದೇವಾಲಯಗಳಲ್ಲಿ ಹಳೆಯ 500 ಮತ್ತು 1000 ರೂ. ಮುಖಬೆಲೆಯ ನೋಟುಗಳು ಧೂಳು ತಿನ್ನುತ್ತಿವೆ.

    ಹೆಚ್ಚಿನ ದೇವಾಲಯಗಳು ಹಳೆಯ ನೋಟುಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿ ದೇವಾಲಯದ ಅಭಿವೃದ್ಧಿಗೆ ಸದುಪಯೋಗಪಡಿಸಿಕೊಂಡಿದ್ದರು. ಆದರೆ ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ದೇವಾಲಯಗಳಲ್ಲಿ ಮಾತ್ರ ಹಳೇ ನೋಟುಗಳು ಧೂಳು ತಿನ್ನುತ್ತಾ ಬಿದ್ದಿವೆ.

    ಬೆಂಗಳೂರಿನ ಶ್ರೀ ಮಹಾಗಣಪತಿ ಮತ್ತು ಸಮೂಹ ದೇವಸ್ಥಾನ, ಶ್ರೀ ರಾಯರಾಯ ಕಲ್ಯಾಣ ಮಂಟಪ ಮತ್ತು ಸಮೂಹ ದೇವಾಲಯಗಳು, ಬನಶಂಕರಿ, ಪ್ರಸನ್ನ ವೀರಾಂಜನೇಯ ಸ್ವಾಮಿ, ದೊಡ್ಡಗಣಪತಿ ಸೇರಿದಂತೆ ಒಟ್ಟು 54 ದೇವಾಲಯಗಳಲ್ಲಿ ಕಳೆದ ಮಾರ್ಚ್ 27ರಂದು ಅಧಿಕಾರಿಗಳು ಹುಂಡಿ ತೆರೆದಿದ್ದರು. ಈ ವೇಳೆ 20 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ಹಳೇ ನೋಟುಗಳು ಪತ್ತೆಯಾಗಿದ್ದವು. ಆದರೆ ಅಧಿಕಾರಿಗಳು ಈ ನೋಟುಗಳನ್ನು ಬ್ಯಾಂಕಿಗೆ ಹಾಕದೆ ಸ್ಟ್ರಾಂಗ್ ರೂಮ್‍ನಲ್ಲಿ ಧೂಳು ಹಿಡಿಯಲು ಬಿಟ್ಟಿದ್ದಾರೆ. ಆರ್ ಟಿಐ ಕಾರ್ಯಕರ್ತ ರವಿಕುಮಾರ್ ಧಾರ್ಮಿಕ ದತ್ತಿ ಇಲಾಖೆಯಿಂದ ಆರ್ ಟಿಐ ಕಾಯ್ದೆ ಅಡಿ ಪಡೆದ ಮಾಹಿತಿಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಬಹಿರಂಗವಾಗಿದೆ.

    ಬೆಂಗಳೂರಿನ ಒಟ್ಟು 54 ದೇವಾಲಯಗಳ ಹುಂಡಿಗಳಲ್ಲಿ 20 ಲಕ್ಷ ರೂಪಾಯಿ ಹಳೇ ನೋಡು ಕೊಳೆಯುತ್ತಾ ಬಿದ್ದಿದೆ. ದೇವಾಲಯಗಳ ಅಭಿವೃದ್ಧಿಗೆ ಈ ಹಣವನ್ನ ಬಳಸಬಹುದಿತ್ತು. ಅಷ್ಟು ದುಡ್ಡಿಗೆ ಬೆಲೆನೇ ಇಲ್ವಾ? ಮುಜರಾಯಿ ಸಚಿವರು, ಅಧಿಕಾರಿಗಳೇ ಇದಕ್ಕೆ ಕಾರಣ. ಅವರೇ ಇದಕ್ಕೆ ಉತ್ತರ ಕೊಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ರವಿ ಆಗ್ರಹಿಸಿದ್ದಾರೆ.

  • ಸಮೀಕ್ಷೆಗಳು ಏನೇ ಹೇಳಲಿ ಗುಜರಾತ್‍ನಲ್ಲಿ ಗೆಲ್ಲೋದು ನಾವೇ: ಕೈ ಆತ್ಮವಿಶ್ವಾಸಕ್ಕೆ ಕಾರಣ ಏನು?

    ಸಮೀಕ್ಷೆಗಳು ಏನೇ ಹೇಳಲಿ ಗುಜರಾತ್‍ನಲ್ಲಿ ಗೆಲ್ಲೋದು ನಾವೇ: ಕೈ ಆತ್ಮವಿಶ್ವಾಸಕ್ಕೆ ಕಾರಣ ಏನು?

    ಎಲ್ಲ ಸಮೀಕ್ಷೆಗಳು ಗುಜರಾತ್ ನಲ್ಲಿ ಈ ಬಾರಿ ಮತ್ತೆ ಕಮಲ ಅರಳಲಿದೆ ಎಂದು ಹೇಳಿದ್ದರೂ ಕಾಂಗ್ರೆಸ್ ಮಾತ್ರ ಈ ಬಾರಿ ಗೆಲುವು ನಮ್ಮದೇ ಎಂದು ಆತ್ಮವಿಶ್ವಾಸದಿಂದ ಪ್ರಚಾರದಲ್ಲಿ ತೊಡಗುತ್ತಿದೆ. ಮೋದಿ ಅಲೆ ಇಲ್ಲ, ಈಗ ಇಲ್ಲಿ ಇರುವುದು ಆಡಳಿತ ವಿರೋಧಿ ಅಲೆ. ಹೀಗಾಗಿ ಬಿಜೆಪಿ ಆಡಳಿತ ಈ ವರ್ಷಕ್ಕೆ ಕೊನೆಯಾಗಲಿದ್ದು ಮತ್ತ ಮತದಾರ ನಮ್ಮ ಕೈ ಹಿಡಿಯಲಿದ್ದಾನೆ ಎನ್ನುತ್ತಿದ್ದಾರೆ ಕಾಂಗ್ರೆಸ್ ನಾಯಕರು. ಇಷ್ಟು ಘಂಟಾಘೋಷವಾಗಿ ಕಾಂಗ್ರೆಸ್ ಹೇಳಿಕೊಳ್ಳಲು ಕಾರಣ ಏನಿರಬಹುದು ಎನ್ನುವುದಕ್ಕೆ ಇಲ್ಲಿ ಕೆಲ ಮಾಹಿತಿಗಳನ್ನು ನೀಡಲಾಗಿದೆ.

    1. ಬಿಜೆಪಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ
    ಕಳೆದ ಇಪ್ಪತ್ತು ವರ್ಷದ ನಿರಂತರ ಆಡಳಿತ ನಡೆಸುತ್ತಿರುವ ಬಿಜೆಪಿ ಮತ್ತೊಮ್ಮೆ ಗುಜರಾತ್ ಚುನಾವಣೆ ಹೋಗುತ್ತಿದೆ. ಸುದೀರ್ಘ ಕಾಲ ಆಡಳಿತ ನಡೆಸಿರುವ ಬಿಜೆಪಿ ಸಾಕಷ್ಟು ಕೆಲಸಗಳ ಮಾಡಿದರೂ ಅದರ ಹೊರತಾಗಿ ಆಡಳಿತ ವಿರೋಧಿ ಅಲೆ ಎದ್ದಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಹೆಚ್ಚು ರೈತ ವರ್ಗವಿರುವ ಅಲ್ಲಿ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ಬೆಲೆಗಳು ಇಳಿಕೆಯಾಗಿದ್ದರೂ ಕೆಲ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಜೊತೆಗೆ ಸರ್ಮಪಕ ನೀರಾವರಿ ಸೌಲಭ್ಯ ಕಲ್ಪಿಸಿದ್ದರೂ ಅದು ಕೆಲ ರೈತರ ಪಾಲಾಗಿದೆ. ಸಾಕಷ್ಟು ರೈತರು ನೀರಾವರಿ ಯೋಜನೆ ಲಾಭ ಪಡೆದಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸಿಎಂ ಬದಲಾದರೂ ಪರಿಣಾಮಕಾರಿ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ ಎನ್ನುವ ಆರೋಪವಿದೆ.

    2. ಮತ ಹಂಚಿಕೆಯಲ್ಲಿ ಕುಸಿತ
    2012ರಲ್ಲಿ 72.5% ಮತದಾನ ನಡೆದಿದ್ದು, 47% ಮತ ಪಡೆಯುವ ಮೂಲಕ ಬಿಜೆಪಿ 115 ಸ್ಥಾನಗಳನ್ನು ಗಳಿಸಿದ್ದರೆ, 38.9% ಮತ ಪಡೆದ ಕಾಂಗ್ರೆಸ್ 61 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 63.6% ಮತದಾನ ನಡೆದಿದ್ದು, ಎಲ್ಲ 26 ಸ್ಥಾನಗಳನ್ನು ಬಿಜೆಪಿ ಜಯಗಳಿಸಿತ್ತು. ಬಿಜೆಪಿಗೆ 60.1% ಮತ ಬಿದ್ದರೆ, ಕಾಂಗ್ರೆಸ್‍ಗೆ 33.5% ಮತ ಬಿದ್ದಿತ್ತು. ವಿಧಾನ ಸಭಾ ಚುನಾವಣೆಗೆ ಹೋಲಿಸಿದರೆ ಲೋಕಸಭೆಯಲ್ಲಿ ಬಿಜಿಪಿಗೆ ಬಿದ್ದ ಪ್ರಮಾಣ ಕಡಿಮೆಯಾಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ವಿವಿಧ ಚುನಾವಣೆಯಲ್ಲಿ ಬಿಜೆಪಿಗೆ ಬೀಳುತ್ತಿರುವ ಮತ ಪ್ರಮಾಣ ಕಡಿಮೆಯಾಗಿದೆ. ಕೆಲ ದಿನಗಳ ಹಿಂದೆ ಪ್ರಕಟವಾದ ಉತ್ತರ ಪ್ರದೇಶದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದು ಸಾಬೀತಾಗಿದೆ.

    3. ನಾಯಕತ್ವದ ಸಮಸ್ಯೆ
    ಪ್ರಧಾನಿ ಹುದ್ದೆಯಲ್ಲಿರುವ ನರೇಂದ್ರ ಮೋದಿ ಅವರಂತಹ ಡೈನಾಮಿಕ್ ಮುಖ್ಯಮಂತ್ರಿ ಅಭ್ಯರ್ಥಿ ಸದ್ಯ ಬಿಜೆಪಿಯಲ್ಲಿ ಯಾರು ಕಂಡು ಬರುತ್ತಿಲ್ಲ. ಮೋದಿ ಬಳಿಕ ಆನಂದಿ ಬೆನ್ ಮುಖ್ಯಮಂತ್ರಿ ಆದರೂ ನಂತರದ ಬೆಳವಣಿಗೆಯಲ್ಲಿ ಅವರನ್ನು ಕೆಳಗೆ ಇಳಿಸಿ ವಿಜಯ್ ರೂಪಾನಿ ಸಿಎಂ ಆಗಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇರುವುದು ಸ್ಪಷ್ಟವಾಗಿದೆ.

    4. ಬಹುಪಾಲು ಗ್ರಾಮೀಣ ವಿಧಾನಸಭಾ ಕ್ಷೇತ್ರಗಳು
    ಸುಮಾರು 50% ಜನಸಂಖ್ಯೆ ಗುಜರಾತ್‍ನ ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿದೆ. ಸಾಂಪ್ರದಾಯಿಕವಾಗಿ ನಗರ ಪ್ರದೇಶಗಳಲ್ಲಿ ಬಿಜೆಪಿ ಶಕ್ತಿಶಾಲಿಯಾಗಿದೆ. ನಗರದ ಯುವ ಜನತೆ ಮೋದಿ ಪರವಾಗಿದ್ದರೆ ಹಳ್ಳಿ ಮಂದಿ ಇನ್ನು ಕಾಂಗ್ರೆಸ್ ಪರವಾಗಿದ್ದಾರೆ. ಬಿಜೆಪಿಯಲ್ಲಿ 54% ಶಾಸಕರು ನಗರ ಭಾಗದಿಂದ ಆಯ್ಕೆಯಾದರೆ, ಕಾಂಗ್ರೆಸ್ ನ 74% ಶಾಸಕರು ಗ್ರಾಮೀಣ ಭಾಗದಿಂದ ಆಯ್ಕೆಯಾಗಿ ಬರುತ್ತಾರೆ. ಈ ಹಿಂದೆ ಬಿಜೆಪಿ ಗೆದ್ದಿರುವ ಆರು ಮುನ್ಸಿಪಲ್ ಪ್ರದೇಶಗಳು ನಗರ ಪ್ರದೇಶ ವ್ಯಾಪ್ತಿಯದು. ಗ್ರಾಮೀಣ ಪ್ರದೇಶಗಳಲ್ಲಿ 79 ಸ್ಥಾನಗಳ ಪೈಕಿ ಕೇವಲ ಏಳು ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಗುಜರಾತ್ ವಿಧಾನಸಭೆ ಸ್ಥಾನಗಳ ಸಂಖ್ಯೆ 182 ಈ ಪೈಕಿ ಗ್ರಾಮೀಣ ಭಾಗದಲ್ಲಿ 112 ಸೀಟುಗಳಿದ್ದರೆ, ನಗರ ಭಾಗದಲ್ಲಿ 70 ಸೀಟುಗಳಿವೆ. ಹೀಗಾಗಿ ಮೇಲಿನ ಮುನ್ಸಿಪಲ್ ಚುನಾವಣಾ ಫಲಿತಾಂಶದ ಅಂಕಿ ಅಂಶಗಳನ್ನು ಗಮನಿಸಿದರೆ ಬಿಜೆಪಿಗಿಂತ ಕಾಂಗ್ರೆಸ್ ಒಂದು ಕೈ ಮೇಲಿದೆ.

    5. ಕಾಂಗ್ರೆಸ್‍ನತ್ತ ಮುಸ್ಲಿಮರು ವಾಪಸ್?
    ಸುಮಾರು 20-25% ರಷ್ಟು ಪ್ರಮಾಣದಲ್ಲಿ ಮುಸ್ಲಿಮರು ಗುಜರಾತ್ ನಲ್ಲಿ ವಾಸವಾಗಿದ್ದಾರೆ. 2012 ರ ಮಾಹಿತಿ ಪ್ರಕಾರ 31% ಮತಗಳನ್ನು ಇವರು ಬಿಜೆಪಿ ಪರವಾಗಿ ಚಲಾಯಿಸಿದ್ದಾರೆ ಎನ್ನಲಾಗಿದೆ. ಆದರೆ ಬಿಜೆಪಿ ಮುಸ್ಲಿಮ್ ಸಮುದಾಯವನ್ನು ಕಡೆಗಣಿಸುತ್ತಿದ್ದು ಈ ಬಾರಿ ಒಬ್ಬರಿಗೂ ಟಿಕೆಟ್ ನೀಡಿಲ್ಲ. ಇತ್ತೀಚಿಗೆ ಗೋವು ಹಾಗೂ ಲವ್ ಜಿಹಾದ್ ಹೆಸರಿನಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದಾಳಿ ಪರಿಣಾಮ ಬೀರಬಹುದು. ರಾಜ್ಯದ ಜನಸಂಖ್ಯೆಯಲ್ಲಿ 10% ಮುಸ್ಲಿಂ ಮತಗಳ ಪಾಲನ್ನು ಬಿಜೆಪಿ ಹೊಂದಿದೆ. ಹೀಗಾಗಿ ಮೂರನೇ ಎರಡು ಭಾಗದಷ್ಟು ಮತಗಳ ಕಳೆದುಕೊಂಡರೆ ಇದು ರಾಜ್ಯದ 36 ಸ್ಥಾನಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಇದನ್ನೂ ಓದಿ:ಗುಜರಾತ್ ಚುನಾವಣೆ: ಮತ್ತೆ ಮೋದಿ ಗೆಲುವಿಗೆ ಕಾಂಗ್ರೆಸ್ ಹಾಕಿ ಕೊಟ್ಟಿತಾ ರೆಡ್ ಕಾರ್ಪೆಟ್?

    6. ಕೇಂದ್ರ ಸರ್ಕಾರದ ಪ್ರಭಾವ
    ಈ ವರ್ಷದ ಅಂತ್ಯದ ವೇಳೆಗೆ ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಮೂರುವರೆ ವರ್ಷಗಳನ್ನು ಪೂರೈಸಲಿದೆ. ಕೇಂದ್ರ ಸರ್ಕಾರದ ಆಡಳಿತವೂ ಕೂಡಾ ಗುಜರಾತ್ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗೆಳೆಯುಂತಿಲ್ಲ. ಗುಜರಾತಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಿಗಳಿದ್ದಾರೆ. ಹೀಗಾಗಿ ನೋಟ್‍ಬ್ಯಾನ್, ಜಿಎಸ್‍ಟಿ ಜಾರಿಯಿಂದ ತೊಂದರೆಯಾಗಿ ವ್ಯಾಪಾರ ಕುಂಠಿತಗೊಂಡಿದ್ದಲ್ಲಿ ಅವರ ಮತ ನಮಗೆ ಬಿದ್ದೇ ಬೀಳುತ್ತದೆ ಎಂದು ಹೇಳುತ್ತಿದ್ದಾರೆ ಕಾಂಗ್ರೆಸ್ ನಾಯಕರು.

    7. ಪಾಟೀದಾರ್ ಸಮುದಾಯದ ವಿರೋಧ
    ಪಾಟೀದಾರ್ ಮೀಸಲಾತಿ ಆಂದೋಲನವನ್ನು ನಿರ್ವಹಿಸುವಲ್ಲಿ ಬಿಜೆಪಿ ಆರಂಭದಲ್ಲಿ ಎಡವಿತ್ತು. ಇದರಿಂದ ಇದು ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಈ ಆಂದೋಲನವಾಗಿ ಬೆಳೆಯತೊಡಗಿತು ಇದರ ಜೊತೆಗೆ ಆನಂದಿಬೇನ್ ಪಟೇಲ್ ಸಿಎಂ ಆದ ಬಳಿಕವೂ ಈ ಹೋರಾಟಕ್ಕೆ ಸರ್ಕಾರದಿಂದ ಸೂಕ್ತ ಬೆಂಬಲ ವ್ಯಕ್ತವಾಗದ ಹಿನ್ನೆಲೆ ಪಾಟೀದಾರರು ಬದಲಿ ರಾಜಕೀಯ ಆಯ್ಕೆಗಳನ್ನು ಹುಡುಕಿಕೊಳ್ಳುವಂತೆ ಮಾಡಿದೆ. ಗುಜರಾತ್ ನಲ್ಲಿ ಸುಮಾರು 16% ಪಾಟೀದಾರ್ ಸಮುದಾಯವಿದೆ. ಇವರು ಸಾಂಪ್ರದಾಯಿಕವಾಗಿ ಬಿಜೆಪಿ ಬೆಂಬಲಿರಾಗಿದ್ದು ಕಳೆದ ಲೋಕಸಭೆಯಲ್ಲಿ 70% ಮತಗಳನ್ನು ಬಿಜೆಪಿ ಪರವಾಗಿ ಚಲಾಯಿಸಿದ್ದಾರೆ ಎನ್ನಲಾಗುತ್ತಿದೆ. ಪಾಟೀದಾರ್ ಸಮುದಾಯ ಬಿಜೆಪಿಯ ಒಟ್ಟು ಮತಹಂಚಿಕೆಯಲ್ಲಿ ಐದನೇ ಒಂದು ಭಾಗವನ್ನು ಹೊಂದಿದ್ದು, 73 ಸ್ಥಾನಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಆದ್ದರಿಂದ ಈ ಮತಗಳು ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಐತಿಹಾಸಿಕ ಗೆಲುವಿಗೆ ಸಹಕಾರಿಯಾಗಲಿದೆ. 2012 ರಲ್ಲಿ ಮಾಜಿ ಸಿಎಂ ಕೇಶುಭಾಯಿ ಪಟೇಲ್ ನೇತೃತ್ವದ ಗುಜರಾತ್ ಪರಿವರ್ತನಾ ಪಾರ್ಟಿ 3.6% ಮತಗಳನ್ನು ಪಡೆದುಕೊಂಡಿತು ಇದಷ್ಟೇ ಅಲ್ಲದೇ ಸೌರಾಷ್ಟ್ರ ಮತ್ತು ಕಚ್ ನಲ್ಲಿ 23 ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿತ್ತು. 2012ಕ್ಕೆ ಹೋಲಿಸಿಕೊಂಡರೆ ಇದರ ಪ್ರಮಾಣ ಮತ್ತಷ್ಟು ದೊಡ್ಡದಾಗಿದ್ದು ಪಾಟೀದಾರ್  ಅವರನ್ನು ನ್ನು ಯಾರೇ ಎದುರು ಹಾಕಿಕೊಂಡರು ಅಪಾಯ ಖಚಿತ. ಇದನ್ನೂ ಓದಿ: ಮತ್ತೆ ಗುಜರಾತ್‍ನಲ್ಲಿ ಕಮಲ ಅರಳೋದು ಖಚಿತ! ಯಾವ ಸಮೀಕ್ಷೆ ಏನು ಹೇಳಿದೆ?

     

  • ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಏರಿಕೆ

    ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಏರಿಕೆ

    ನವದೆಹಲಿ: ನೋಟ್ ಬ್ಯಾನ್ ಮತ್ತು ತರಾತುರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿಗೊಳಿಸಿದ್ದರಿಂದ ದೇಶದ ಆರ್ಥಿಕ ಬೆಳವಣಿಗೆ ದರ(ಜಿಡಿಪಿ) ಕುಸಿದಿದೆ ಎನ್ನುವ ಮಂದಿ ಉತ್ತರ ಎನ್ನುವಂತೆ ಸೆಪ್ಟೆಂಬರ್ ಅಂತ್ಯಕ್ಕೆ ಮುಕ್ತಾಯವಾದ ಎರಡನೇ ತ್ರೈಮಾಸಿಕದಲ್ಲಿ ಏರಿಕೆಯಾಗಿದೆ.

    ಜುಲೈ, ಅಗಸ್ಟ್, ಸೆಪ್ಟೆಂಬರ್ ಅವಧಿಯ ಜಿಡಿಪಿ ದರ 6.3% ಏರಿಕೆಯಾಗಿದೆ ಎಂದು ಕೇಂದ್ರ ಸಾಂಖ್ಯಿಕ ಕಚೇರಿ ತಿಳಿಸಿದೆ. ಏಪ್ರಿಲ್ ನಿಂದ ಜೂನ್ ವರೆಗೆ ಅಂತ್ಯಗೊಂಡ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರ 5.7% ದಾಖಲಿಸುವ ಮೂಲಕ ಕುಸಿದಿತ್ತು. ನೋಟು ರದ್ದತಿಯ ಬಳಿಕ ಜಿಡಿಪಿ ಪ್ರಗತಿ ಶೇ 1.3 ರಷ್ಟು ಇಳಿಕೆ ಕಂಡಿತ್ತು.

    ಜಿಡಿಪಿ ದರ ಏರಿಕೆಯಾಗಿರುವ ವಿಚಾರ ಪ್ರಕಟವಾದ ಬಳಿಕ ಬಿಜೆಪಿ ನಾಯಕರು ಟ್ವೀಟ್ ಮಾಡಿ ಸರ್ಕಾರದ ಸಾಧನೆಯನ್ನು ಹೊಗಳುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಹಿಂದೆ ಟೀಕಿಸಿದ್ದ ಮಂದಿ ಎಲ್ಲಿದ್ದೀರಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. (ಇದನ್ನೂ ಓದಿ: 13 ವರ್ಷದ ಬಳಿಕ ಏರಿಕೆ ಕಂಡಿತು ಭಾರತದ ಮೂಡೀಸ್ ರೇಟಿಂಗ್)

    ಜಿಡಿಪಿ ದರ ಇಳಿಕೆ ತಾತ್ಕಾಲಿಕ ಮುಂದಿನ ದಿನಗಳಲ್ಲಿ ಏರಿಕೆಯಾಗಲಿದೆ ಎಂದು ಈ ಹಿಂದೆ ವಿಶ್ವಬ್ಯಾಂಕ್ ಹೇಳಿತ್ತು.(ಇದನ್ನೂ ಓದಿ:ನೋಟು ಬ್ಯಾನ್ ಆದ್ರೂ ಆರ್ಥಿಕ ಅಭಿವೃದ್ಧಿ ದರದಲ್ಲಿ ವಿಶ್ವದಲ್ಲಿ ಭಾರತವೇ ನಂಬರ್ ಒನ್)

    ನವೆಂಬರ್ 8ರಂದು 500, 1 ಸಾವಿರ ರೂ. ಮುಖಬೆಲೆ ನೋಟುಗಳನ್ನು ನಿಷೇಧಿಸಿದ ಬಳಿಕ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಭಾರತದ ಜಿಡಿಪಿ ಇಳಿಕೆಯಾಗಲಿದೆ ಎಂದು ಹೇಳಿತ್ತು. 2015 -16ರಲ್ಲಿ ಶೇ. 7.6 ರಷ್ಟಿದ್ದ ಜಿಡಿಪಿ ದರ 2016- 17ರಲ್ಲಿ ಶೇ 6.6 ರಷ್ಟು ಕಡಿಮೆ ಮಟ್ಟದಲ್ಲಿರಲಿದೆ ಎಂದು ಅದು ತಿಳಿಸಿತ್ತು.

    ಮಮತಾ ಟೀಕೆ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕೆ ಮಾಡಿ ಈ ಹಿಂದೆ ಈ ಅವಧಿಯಲ್ಲಿ 7.5% ದಾಖಲಾಗಿತ್ತು. ಆದರೆ ಈಗ 6.3% ದಾಖಲಾಗಿದೆ. ಈ ಸರ್ಕಾರ ಕೇವಲ ಭಾಷಣ ಮಾತ್ರ ಮಾಡುತ್ತಿದೆ ಹೊರತು ಯಾವುದೇ ಕೆಲಸ ಮಾಡುವುದಿಲ್ಲ .ಉದ್ಯೋಗದಲ್ಲಿ ಯಾವುದೇ ಪ್ರಗತಿ ಆಗಿಲ್ಲ ಎಂದು  ಸರಣಿ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದ್ದಾರೆ.

    ಯಾವ ಅವಧಿಯಲ್ಲಿ ಎಷ್ಟಿತ್ತು?
    ಮಾರ್ಚ್ 2016 – 9.2%
    ಜೂನ್ 2016 – 7.9%
    ಸೆಪ್ಟೆಂಬರ್ 2016 – 7.5%
    ಡಿಸೆಂಬರ್ 2016 – 7%
    ಮಾರ್ಚ್ 2017 – 6.1%
    ಜೂನ್ 2017 – 5.7%
    ಸೆಪ್ಟೆಂಬರ್ 2017 – 6.3%

  • 13 ವರ್ಷದ ಬಳಿಕ ಏರಿಕೆ ಕಂಡಿತು ಭಾರತದ ಮೂಡೀಸ್ ರೇಟಿಂಗ್

    13 ವರ್ಷದ ಬಳಿಕ ಏರಿಕೆ ಕಂಡಿತು ಭಾರತದ ಮೂಡೀಸ್ ರೇಟಿಂಗ್

    ಮುಂಬೈ: ಸುಲಭ ವಹಿವಾಟು ಸೂಚ್ಯಂಕ ಪಟ್ಟಿಯಲ್ಲಿ 30 ಸ್ಥಾನ ಜಿಗಿದು 100ನೇ ಸ್ಥಾನ ಪಡೆದಿದ್ದ ಭಾರತಕ್ಕೆ ಈಗ ಜಾಗತಿಕ ಮಟ್ಟದ ರೇಟಿಂಗ್ ಏಜೆನ್ಸಿ `ಮೂಡೀಸ್’ ಬಿಎಎ2 ರೇಟಿಂಗ್ ನೀಡಿ ಮೋದಿ ಸರ್ಕಾರದ ಆರ್ಥಿಕ ನೀತಿಯನ್ನು ಹೊಗಳಿದೆ.

    13 ವರ್ಷದ ಬಳಿಕ ಮೂಡೀಸ್ ರೇಟಿಂಗ್ ಮೇಲ್ದರ್ಜೆಗೆ ಏರಿದ್ದು, 2004ರಲ್ಲಿ ಭಾರತಕ್ಕೆ `ಬಿಎಎ3′ ರೇಟಿಂಗ್ ನೀಡಿತ್ತು. ನೋಟು ನಿಷೇಧ, ಜಿಎಸ್‍ಟಿ ಜಾರಿ, ಬ್ಯಾಂಕ್ ಖಾತೆಗಳಿಗೆ ಹಾಗೂ ಸರ್ಕಾರದ ಸೌಲಭ್ಯಗಳಿಗೆ ಆಧಾರ್ ಕಡ್ಡಾಯಗೊಳಿಸಿದ ಪರಿಣಾಮ ದೇಶದ ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮ ಬೀರಿದೆ ಎಂದು ಮೂಡಿಸ್ ತನ್ನ ವರದಿಯಲ್ಲಿ ತಿಳಿಸಿದೆ.

    ದೇಶಿ ಮತ್ತು ವಿದೇಶಿ ಹೂಡಿಕೆ ಬೆಳವಣಿಗೆ ಆಗುತ್ತಿದೆ. ಉತ್ಪಾದನೆ, ಉದ್ಯಮಗಳಿಗೆ ಪೂರಕ ವಾತಾವರಣ ನಿರ್ಮಾಣವಾಗುತ್ತಿರುವುದರಿಂದ ದೇಶದ ಅರ್ಥವ್ಯವಸ್ಥೆ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಮೂಡಿಸ್ ಹೇಳಿದೆ.

    ನೋಟ್ ಬ್ಯಾನ್ ಮತ್ತು ತರಾತುರಿಯಲ್ಲಿ ಜಿಎಸ್‍ಟಿಯನ್ನು ಜಾರಿಗೊಳಿಸಿದ್ದರಿಂದ ದೇಶದ ಅರ್ಥವ್ಯವಸ್ಥೆ ಕುಸಿದುಬಿದ್ದಿದೆ ಎಂದು ಪ್ರತಿಪಕ್ಷಗಳು ಮೋದಿ ಸರ್ಕಾರದ ಆರ್ಥಿಕ ನೀತಿಯನ್ನು ಟೀಕಿಸಿತ್ತು. ಆದರೆ ಈಗ ಮೂಡಿಸ್ ರೇಟಿಂಗ್ ಏರಿಸಿದ್ದರಿಂದ ಪ್ರತಿಪಕ್ಷಗಳ ಟೀಕೆಗೆ ಉತ್ತರ ನೀಡಲು ಬಿಜೆಪಿಗೆ ಪ್ರಬಲ ಅಸ್ತ್ರವೊಂದು ಈಗ ಸಿಕ್ಕಿದಂತಾಗಿದೆ.

    2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಇದ್ದಾಗ ಮೂಡಿಸ್ ರೇಟಿಂಗ್ ಏರಿಕೆಯಾಗಿತ್ತು. ಈಗ ಎನ್‍ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮತ್ತೊಮ್ಮೆ ರೇಟಿಂಗ್ ಏರಿಕೆಯಾಗಿದೆ.

    ಏನಿದು ಮೂಡಿಸ್ ರೇಟಿಂಗ್?
    ಅಮೆರಿಕದ ಮೂಲದ ಮೂಡೀಸ್ ಅರ್ಥವ್ಯವಸ್ಥೆ, ವಿದೇಶಿ ಹೂಡಿಕೆ, ಸಾಲ ಯೋಗ್ಯತೆಯ ಪರಿಸ್ಥಿತಿ ಮತ್ತು ಅದರ ಮೇಲೆ ಪರಿಣಾಮ ಬೀರುತ್ತಿರುವ ವಾಸ್ತವ ಅಂಶಗಳ ಬಗ್ಗೆ ಅಧ್ಯಯನ ನಡೆಸಿ ವಿವಿಧ ದೇಶಗಳಿಗೆ ರೇಟಿಂಗ್ ನೀಡುತ್ತದೆ. 1909ರಲ್ಲಿ ಈ ಮೂಡಿಸ್ ಕಂಪೆನಿ ಆರಂಭಗೊಂಡಿದ್ದು, ಉತ್ತಮ ರೇಟಿಂಗ್ ನೀಡಿದರೆ ಹೂಡಿಕೆದಾರರು ಆ ದೇಶದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಾರೆ. ಜಾಗತಿಕ ಮಟ್ಟದಲ್ಲಿ ಮೂಡೀಸ್ ಜತೆಗೆ ಸ್ಟ್ಯಾಂಡರ್ಡ್ ಅಂಡ್ ಪೂರ್, ಫೆಚ್ ಸೇರಿದಂತೆ ಕೆಲವು ಪ್ರತಿಷ್ಠಿತ ರೇಟಿಂಗ್ ಏಜೆನ್ಸಿಗಳು ಕಾರ್ಯ ನಿರ್ವಹಿಸುತ್ತಿವೆ.

    ಏನಿದು ಬಿಎಎ2 ರೇಟಿಂಗ್?
    ಮಧ್ಯಮ ಪ್ರಮಾಣದ ಆರ್ಥಿಕ ಅಭಿವೃದ್ಧಿಯನ್ನು ಬಿಎಎ2 ರೇಟಿಂಗ್ ಸೂಚಿಸುತ್ತದೆ. ಅಭಿವೃದ್ಧಿ ಹೊಂದಿದ ಅರ್ಥ ವ್ಯವಸ್ಥೆಗೆ ಎಎಎ ರೇಟಿಂಗ್ ನೀಡಲಾಗುತ್ತದೆ.

    ಬ್ರಿಕ್ಸ್ ರೇಟಿಂಗ್ ಬೇಕು ಎಂದಿದ್ದ ಮೋದಿ:
    ಈ ವರ್ಷ ಚೀನಾದಲ್ಲಿ ನಡೆದ ಬ್ರಿಕ್ಸ್(ಬ್ರೆಜೆಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಪಾಶ್ಚಿಮಾತ್ಯ ರಾಷ್ಟ್ರಗಳು ನೀಡುವ ಕ್ರೆಡಿಟ್ ರೇಟಿಂಗ್ ಬದಲಾಗಿ ಬ್ರಿಕ್ಸ್ ರಾಷ್ಟ್ರಗಳು ತಮ್ಮದೇ ಆದ ರೇಟಿಂಗ್ ಏಜೆನ್ಸಿಯನ್ನು ಸ್ಥಾಪಿಸಬೇಕು ಎಂದು ಹೇಳಿದ್ದರು.

    ಇದನ್ನೂ ಓದಿ: ಸುಲಭ ವಹಿವಾಟು ವಿಶ್ವದ ಸೂಚ್ಯಂಕ ಪಟ್ಟಿಯಲ್ಲಿ 30 ಸ್ಥಾನ ಏರಿ 100ನೇ ಸ್ಥಾನಕ್ಕೆ ಜಿಗಿದ ಭಾರತ

     

  • ನೋಟ್‍ ಬ್ಯಾನ್‍ಗೆ 1 ವರ್ಷ- 125 ಕೋಟಿ ಭಾರತೀಯರು ಹೋರಾಡಿ ಗೆದ್ದಿದ್ದಾರೆ ಎಂದ ಮೋದಿ, ದುರಂತವೆಂದು ಟೀಕಿಸಿದ ರಾಗಾ

    ನೋಟ್‍ ಬ್ಯಾನ್‍ಗೆ 1 ವರ್ಷ- 125 ಕೋಟಿ ಭಾರತೀಯರು ಹೋರಾಡಿ ಗೆದ್ದಿದ್ದಾರೆ ಎಂದ ಮೋದಿ, ದುರಂತವೆಂದು ಟೀಕಿಸಿದ ರಾಗಾ

    ನವದೆಹಲಿ: ಕಪ್ಪುಹಣ, ಭ್ರಷ್ಟಾಚಾರ, ಖೋಟಾ ನೋಟು ಹಾಗೂ ಭಯೋತ್ಪಾದನೆ ತಡೆಯಲೆಂದು ಪ್ರಧಾನಿ ನರೇಂದ್ರ ಮೋದಿ ಏಕಾಏಕಿ ನೋಟ್ ಬ್ಯಾನ್ ಮಾಡಿ ಇಂದಿಗೆ ಒಂದು ವರ್ಷವೇ ಕಳೆಯಿತು. ಹೀಗಾಗಿ ನೋಟ್ ಬ್ಯಾನ್‍ಗೆ ಸಹಕರಿಸಿದ ಜನತೆಗೆ ಪ್ರಧಾನಿ ಮೋದಿ ಧನ್ಯವಾದ ಸಲ್ಲಿಸಿದ್ದಾರೆ.

    125 ಕೋಟಿ ಭಾರತೀಯರು ನಿರ್ಣಾಯಕ ಯುದ್ಧದಲ್ಲಿ ಹೋರಾಡಿ ಗೆದ್ದಿದ್ದಾರೆ ಅಂತ ಟ್ವೀಟ್ ಮಾಡಿರುವ ಪ್ರಧಾನಿ ನೋಟ್ ಬ್ಯಾನ್‍ನಿಂದ ಆಗಿರೋ ಪ್ರಯೋಜನದ ಬಗ್ಗೆ ಕಿರುಚಿತ್ರವನ್ನು ಟ್ವೀಟಿಸಿದ್ದಾರೆ.

    ಇನ್ನು ನೋಟು ಅಮಾನ್ಯ ಒಂದು ದುರಂತ ಅಂತ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ. ಮುಂದಾಲೋಚನೆ ಇಲ್ಲದೇ ಕೈಗೊಂಡಿರುವ ನೋಟ್ ಬ್ಯಾನ್‍ನಿಂದ ಕೋಟ್ಯಾಂತರ ಜನರ ಬದುಕು ನಾಶವಾಗಿದೆ. ಪ್ರಾಮಾಣಿಕ ಭಾರತೀಯರ ಜೊತೆ ಸದಾ ನಾವಿರುತ್ತೇವೆ ಅಂತ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

    ದೇಶದಲ್ಲಿ ನೋಟ್ ಬ್ಯಾನ್ ಆಗಿ ಇಂದಿಗೆ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ದೇಶಾದ್ಯಂತ ಕರಾಳ ದಿನ ಆಚರಣೆ ಮಾಡಲು ಮುಂದಾಗಿದೆ. ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ದೇಶದಾದ್ಯಂತ ಸಾವನ್ನಪ್ಪಿದ 150ಕ್ಕೂ ಹೆಚ್ಚು ಜನರಿಗೆ ಮೊಂಬತ್ತಿ ಬೆಳಗಿ ನಮನ ಸಲ್ಲಿಸಲಾಗುತ್ತದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಯಲಿದೆ ಅಂತಾ ಕಾಂಗ್ರೆಸ್ ಮೂಲಗಳು ತಿಳಿಸಿವೆ.

    ನೋಟ್ ಬ್ಯಾನ್ ವರ್ಷಾಚರಣೆ ಹಿನ್ನೆಲೆಯಲ್ಲಿ ದೆಹಲಿ ಪ್ರದೇಶ ಕಾಂಗ್ರೆಸ್ ಮತ್ತು ಎಐಸಿಸಿ ನೇತೃತ್ವದಲ್ಲಿ ಹಲವೆಡೆ ಪ್ರತಿಭಟನೆ ನಡೆಯಲಿದೆ. ದೆಹಲಿ ಪ್ರದೇಶ ಕಾಂಗ್ರೆಸ್ ವತಿಯಿಂದ ಆರ್‍ಬಿಐ ಮುಂಭಾಗ ಪ್ರತಿಭಟನೆ ಹಾಗೂ ರಾಜೀವ್ ಚೌಕ್ ಮೆಟ್ರೋ ನಿಲ್ದಾಣದ ಬಳಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ನೋಟ್ ಬ್ಯಾನ್ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.

    https://www.youtube.com/watch?v=R5Cc-PrwTBU

    https://www.youtube.com/watch?v=vBwvhMHsHMY