Tag: ನೊಟೀಸ್

  • ಮಾರ್ಚ್ ಒಳಗಾಗಿ ಎಲ್ಲಾ ಯೋಜನೆಗಳ ಅನುಷ್ಠಾನ: ಡಿ.ಸಿ ಕೆ.ಬಿ ಶಿವಕುಮಾರ್

    ಮಾರ್ಚ್ ಒಳಗಾಗಿ ಎಲ್ಲಾ ಯೋಜನೆಗಳ ಅನುಷ್ಠಾನ: ಡಿ.ಸಿ ಕೆ.ಬಿ ಶಿವಕುಮಾರ್

    ಶಿವಮೊಗ್ಗ: ಎಲ್ಲಾ ಇಲಾಖೆಗಳು ಮಾರ್ಚ್ ಅಂತ್ಯದ ಒಳಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಎಲ್ಲಾ ಯೋಜನೆಗಳ ಗುರಿಯನ್ನು ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಅವರು ಸೂಚಿಸಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಡಿಸಿ ಪ.ಜಾತಿ/ಪಂಗಡ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿ ಬಹುತೇಕ ಎಲ್ಲಾ ಇಲಾಖೆಗಳಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆದು ಕಾರ್ಯಕ್ರಮ ಅನುಷ್ಠಾನದ ಹಂತದಲ್ಲಿದೆ. ಆದರೆ ಇನ್ನೂ ಫಲಾನುಭವಿಗಳ ಆಯ್ಕೆ ಮಾಡದೇ ಇರುವ ಇಲಾಖೆಗಳು ತಕ್ಷಣ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ, ವರದಿ ನೀಡಬೇಕು. ಫಲಾನುಭವಿಗಳಿಗೆ ಬ್ಯಾಂಕ್ ಮೂಲಕ ಸಬ್ಸಿಡಿ ನೀಡುವ ಯೋಜನೆ ಹೊಂದಿರುವ ನಿಗಮ ಮಂಡಳಿಗಳು ಫೆಬ್ರವರಿ ಅಂತ್ಯದ ಒಳಗಾಗಿ ಫಲಾನುಭವಿಗಳ ಪಟ್ಟಿಯನ್ನು ಬ್ಯಾಂಕ್‍ಗಳಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಗುರಿ ಸಾಧಿಸದ ಇಲಾಖೆಗಳಿಗೆ ನೊಟೀಸ್:
    ಎಸ್‍ಸಿಪಿ/ಟಿಎಸ್‍ಪಿ ಯೋಜನೆಯಡಿ ನಿಗದಿತ ಗುರಿಯನ್ನು ಸಾಧಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಯಾಗುತ್ತಾರೆ. ಜನವರಿ ಕೊನೆಯ ಒಳಗೆ ನಿಗದಿತ ಗುರಿಯನ್ನು ಸಾಧಿಸದಿರುವ ಇಲಾಖೆಗಳಿಗೆ ನೊಟೀಸ್ ಜಾರಿಗೊಳಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಯೋಜನೆ ಅನುಷ್ಠಾನ ಮಂದಗತಿಯಲ್ಲಿದ್ದು, ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಸೇರಿದಂತೆ ಎಲ್ಲಾ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

  • ಸರಣಿ ಕಳ್ಳತನ – ಪೋಲಿಸ್ ಪೇದೆ ತಲೆದಂಡ, ಎಸ್‍ಐಗೆ ನೋಟಿಸ್

    ಸರಣಿ ಕಳ್ಳತನ – ಪೋಲಿಸ್ ಪೇದೆ ತಲೆದಂಡ, ಎಸ್‍ಐಗೆ ನೋಟಿಸ್

    ಚಾಮರಾಜನಗರ: ಗುಂಡ್ಲುಪೇಟೆ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಸರಣಿ ಕಳ್ಳತನಕ್ಕೆ ಸಂಬಂಧಿಸಿದಂತೆ ಓರ್ವ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ.

    ಗುಂಡ್ಲುಪೇಟೆ ಪಟ್ಟಣ ಪೊಲೀಸ್ ಠಾಣೆಯ ಪೇದೆ ಕುಮಾರ್ ಅವರನ್ನು ಎಸ್‍ಪಿ ಆನಂದ್ ಕುಮಾರ್ ಅಮಾನತು ಮಾಡಿದ್ದಾರೆ. ಜೊತೆಗೆ ಕಾರಣ ಕೇಳಿ ಪಿಎಸ್‍ಐ ಲತೇಶ್ ಕುಮಾರ್ ಅವರಿಗೂ ನೋಟಿಸ್ ನೀಡಲಾಗಿದೆ.

    ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ. ಸರಣಿ ಕಳ್ಳತನ ನಡೆದಿರುವುದರ ಹಿಂದೆ ಪೊಲೀಸರ ಬೇಜವಾಬ್ದಾರಿಯೂ ಕಾರಣವಾಗಿದೆ. ಈ ಅಮಾನತು ಆದೇಶದಿಂದ ಇತರರಿಗೂ ಕಠಿಣ ಸಂದೇಶ ರವಾನೆಯಾಗುತ್ತದೆ ಎಂದು ಎಸ್ಪಿ ಆನಂದ್ ಕುಮಾರ್ ತಿಳಿಸಿದ್ದಾರೆ.

  • ಐಎಂಎ ವಂಚನೆ ಪ್ರಕರಣ- ಇಂದು ಇಡಿ ಅಧಿಕಾರಿಗಳಿಂದ ಜಮೀರ್ ವಿಚಾರಣೆ

    ಐಎಂಎ ವಂಚನೆ ಪ್ರಕರಣ- ಇಂದು ಇಡಿ ಅಧಿಕಾರಿಗಳಿಂದ ಜಮೀರ್ ವಿಚಾರಣೆ

    ಬೆಂಗಳೂರು: ಬಹುಕೋಟಿ ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣ ಸಂಬಂಧ ಇಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಜಾರಿ ನಿರ್ದೇಶನಾಲಯ(ಇಡಿ)ದ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ.

    ರಿಚ್ಮಂಡ್ ಟೌನ್‍ನ ಸರ್ಫೆಂಟೈನ್ ರಸ್ತೆಯಲ್ಲಿರುವ ನಿವೇಶನವನ್ನ ಮನ್ಸೂರ್ ಖಾನ್‍ಗೆ ಸಚಿವ ಜಮೀರ್ ಮಾರಾಟ ಮಾಡಿದ್ದರು. ಈ ಬಗ್ಗೆ ವಿವರಣೆಗೆ ಹಾಜಾರಾಗುವಂತೆ ಇ.ಡಿ ಅಧಿಕಾರಿಗಳು ಜಮೀರ್ ಅವರಿಗೆ  ನೋಟೀಸ್ ನೀಡಿದ್ದರು. ಜೂನ್ 5ರಂದು ಖುದ್ದು ಹಾಜರಾಗಿ ಐಎಂಎ ಹಗರಣ ಆರೋಪಿ ಮನ್ಸೂರ್ ಖಾನ್ ಜೊತೆ ನಡೆಸಿದ ನಿವೇಶನ ಮಾರಾಟ ಸಂಬಂಧ ಮಾಹಿತಿ ನೀಡುವಂತೆ ನೋಟಿಸ್ ಜಾರಿಗೊಳಿಸಲಾಗಿತ್ತು.

    ಕಳೆದ ವಾರ ಸಚಿವರ ಸೆವೆನ್ ಮಿನಿಸ್ಟರ್ಸ್ ಕ್ವಾಟ್ರಸ್‍ನ ಸರ್ಕಾರಿ ಮನೆಗೆ ಹೋಗಿ ಸಚಿವರ ಕೈಗೆ ಇಡಿ ಅಧಿಕಾರಿಗಳು ನೋಟಿಸ್ ಕೊಟ್ಟಿದ್ದರು. ನೋಟಿಸ್ ತಲುಪಿದ ನಂತರ ಪ್ರತಿಕ್ರಿಯೆ ನೀಡಿದ್ದ ಜಮೀರ್ ಅವರು, ಕಾನೂನು ಪ್ರಕಾರವಾಗಿ ನಿವೇಶನ ಮಾರಾಟ ಮಾಡಿದ್ದೇನೆ. ಇಡಿ ವಿಚಾರಣೆಗೆ ಹಾಜರಾಗಿ ಎಲ್ಲಾ ದಾಖಲಾತಿಗಳನ್ನ ನೀಡಿ ವಿವರಣೆ ನೀಡುತ್ತೇನೆ ಎಂದಿದ್ದರು.

    ನೋಟೀಸ್ ನೀಡಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಶಾಂತಿನಗರದ ಇಡಿ ಕಚೇರಿಗೆ ಸಚಿವರು ಹಾಜರಾಗಲಿದ್ದು, ಅಧಿಕಾರಿಗಳು ನಡೆಸುವ ವಿಚಾರಣೆ ಎದುರಿಸಲಿದ್ದಾರೆ ಎನ್ನಲಾಗಿದೆ.