Tag: ನೈರುತ್ಯ ರೈಲ್ವೇ

  • 44.12 ಮಿಲಿಯನ್ ಟನ್ ಸರಕು ಸಾಗಣೆ – ಕಳೆದ ವರ್ಷಕ್ಕಿಂತ ನೈರುತ್ಯ ರೈಲ್ವೇ 15.5% ಸಾಧನೆ

    44.12 ಮಿಲಿಯನ್ ಟನ್ ಸರಕು ಸಾಗಣೆ – ಕಳೆದ ವರ್ಷಕ್ಕಿಂತ ನೈರುತ್ಯ ರೈಲ್ವೇ 15.5% ಸಾಧನೆ

    ಬೆಂಗಳೂರು: ನೈರುತ್ಯ ರೈಲ್ವೇಯು 2021-22ರ ಆರ್ಥಿಕ ವರ್ಷದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದೆ.

    ಗ್ರಾಹಕ ಸ್ನೇಹಿ ವಿಧಾನದೊಂದಿಗೆ, ರೈಲ್ವೇ ಸರಕು ಮತ್ತು ಪಾರ್ಸೆಲ್ ಸಂಚಾರಕ್ಕೆ ಅತ್ಯಂತ ಆದ್ಯತೆಯ ಸಾರಿಗೆ ವಿಧಾನವಾಗಿದೆ. 2021-22ರ ಹಣಕಾಸು ವರ್ಷದಲ್ಲಿ, ನೈರುತ್ಯ ರೈಲ್ವೆಯು 44.12 ಮಿಲಿಯನ್ ಟನ್ ಸರಕು ಸಾಗಣೆ ಮಾಡಿದ್ದು, ಕಳೆದ ಹಣಕಾಸು ವರ್ಷಕ್ಕಿಂತ 15.5% ಅಭಿವೃದ್ಧಿಯನ್ನು ದಾಖಲಿಸಿದೆ. ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ

    7.04 ಮಿಲಿಯನ್ ಟನ್ ಕಬ್ಬಿಣದ ಅದಿರು, 9.13 ಮಿಲಿಯನ್ ಟನ್ ಕಲ್ಲಿದ್ದಲು, 9.05 ಮಿಲಿಯನ್ ಟನ್ ಪೆಡಸು ಕಬ್ಬಿಣ ಮತ್ತು ಫಿನಿಶ್ಡ್ ಉಕ್ಕು, 0.77 ಮಿಲಿಯನ್ ಟನ್ ಆಹಾರ ಧಾನ್ಯಗಳು, 0.98 ಮಿಲಿಯನ್ ಟನ್ ಸಿಮೆಂಟ್ ಇತ್ಯಾದಿಗಳನ್ನು ಸಾಗಿಸಿದೆ. 2021-22 ರ ಅವಧಿಯಲ್ಲಿ ಸರಕು ಸಾಗಾಣಿಕೆಯಿಂದ 4160 ಕೋಟಿ ರೂ. ಆದಾಯಗಳಿಸಿದೆ. ಇದು 2020-21ರ ಹಣಕಾಸು ವರ್ಷದಲ್ಲಿ 28.72% ಕ್ಕಿಂತ ಹೆಚ್ಚಳವಾಗಿದೆ. ಇದನ್ನೂ ಓದಿ: ಹೆಬ್ಬಾಳದಲ್ಲಿ ಸರಣಿ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿ

    2021-22 ರಲ್ಲಿ ನೈರುತ್ಯ ರೈಲ್ವೇಯು ಪಾರ್ಸೆಲ್‍ನಿಂದ 121.56 ಕೋಟಿ ರೂ.ಆದಾಯ ಸಂಗ್ರಹವಾಗಿದೆ. 2021-22 ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆಯು 238 ಆಟೋಮೊಬೈಲ್ ರೇಕ್‍ಗಳನ್ನು ಲೋಡ್ ಮಾಡಲಾಗಿದೆ. ಸಂಡ್ರಿ ಆದಾಯ 1.52% ಹೆಚ್ಚಳದೊಂದಿಗೆ 275.7 ಕೋಟಿ ರೂ. ಗಳಿಸಿದೆ.. ಗುಜರಿ ವಸ್ತುಗಳ ಮಾರಾಟದಿಂದ 138.04 ಕೋಟಿ ರೂ. ದಾಖಲೆಯ ಆದಾಯ ಸಂಗ್ರಹವಾಗಿದ್ದು, ರೈಲ್ವೆ ಬೋರ್ಡ್ ನಿಗದಿಪಡಿಸಿದ ಗುರಿಯನ್ನು ಮೀರಿದೆ.

    ನೈರುತ್ಯ ರೈಲ್ವೆಯ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತುವನ್ನು ನೀಡಿದೆ. 2021-22ರ ಅವಧಿಯಲ್ಲಿ, 187 ಕಿಮೀ ದ್ವಿಪಥೀಕರಣ ಮತ್ತು 22 ಕಿಮೀ ಹೊಸ ಮಾರ್ಗಗಳು ಮತ್ತು 511.7 ಕಿಮೀ ವಿದ್ಯುದ್ದೀಕರಣ ಪೂರ್ಣಗೊಳಿಸಲಾಗಿದೆ. ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುವ ನಿಟ್ಟಿನಲ್ಲಿ, ನೈರುತ್ಯ ರೈಲ್ವೇಯು 2021-22 ಹಣಕಾಸು ವರ್ಷದಲ್ಲಿ 26 ರೈಲುಗಳನ್ನು ಎಲೆಕ್ಟ್ರಿಕ್ ಟ್ರಾಕ್ಷನ್‍ನಲ್ಲಿ ಚಲಿಸುವಂತೆ ಪರಿವರ್ತಿಸಲಾಗಿದೆ. ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ 40 ರೈಲುಗಳು ಪವರ್ ಕಾರ್‍ಗಳನ್ನು ಎಲೆಕ್ಟ್ರಿಕ ಟ್ಯಾಕ್ಷನ್‍ಗಳಲ್ಲಿ ಸಂಚರಿಸಲಾಗುತ್ತದೆ. ಹಸಿರು ಉಪಕ್ರಮವಾಗಿ, ನೈರುತ್ಯ ರೈಲ್ವೇಯು ತನ್ನ ವ್ಯಾಪ್ತಿಯಾದ್ಯಂತ 70 ಸಾವಿರ ಹಣ್ಣು ಕೊಡುವ ಮರಗಳನ್ನು ನೆಡಲಾಗಿದೆ.

    ಇಂದು ಪ್ರಧಾನ ವ್ಯವಸ್ಥಾಪಕರಾದ ಸಂಜೀವ್ ಕಿಶೋರ್‍ರವರು ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ವಿಭಾಗಗಳ ಇಲಾಖೆಯ ಪ್ರಧಾನ ಮುಖ್ಯಸ್ಥರ ಮತ್ತು ವಿಭಾಗೀಯ ರೈಲ್ವೇ ವ್ಯವಸ್ಥಾಪಕರೊಂದಿಗೆ ಸಭೆಯನ್ನು ನಡೆಸಿದರು. ಪ್ರಮುಖ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆಯನ್ನು ದಾಖಲಿಸಿದ್ದಕ್ಕಾಗಿ ನೈರು ರೈಲ್ವೆಯ ನೌಕರರ ಮೇಲೆ ಅವರು ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಮೊದಲು ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆಯನ್ನು ನೀಡಿದರು. ಮುಂದಿನ ವರ್ಷ ಇನ್ನೂ ಉತ್ತಮ ಸಾಧನೆಯನ್ನು ಸಾಧಿಸುವಲ್ಲಿ ತಮ್ಮ ಮಟ್ಟವನ್ನು ಅತ್ಯುತ್ತಮವಾಗಿ ಪ್ರಯತ್ನಿಸುವಂತೆ ಹೇಳಿದರು.

  • ಕೊರೊನಾ ಎಫೆಕ್ಟ್- ಜನಶತಾಬ್ದಿ ಸೇರಿದಂತೆ ಹಲವು ರೈಲುಗಳ ಸಂಚಾರ ನಾಳೆಯಿಂದ ರದ್ದು

    ಕೊರೊನಾ ಎಫೆಕ್ಟ್- ಜನಶತಾಬ್ದಿ ಸೇರಿದಂತೆ ಹಲವು ರೈಲುಗಳ ಸಂಚಾರ ನಾಳೆಯಿಂದ ರದ್ದು

    ಹುಬ್ಬಳ್ಳಿ: ಜಾಗತಿಕ ಮಟ್ಟದಲ್ಲಿ ಮಾರಣಾಂತಿಕ ವೈರಸ್ ಎಂದು ಬಿಂಬಿತವಾಗಿರುವ ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೇ ಇಲಾಖೆ ಕೆಲವೊಂದು ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈ ಆದೇಶವು ಇಂದಿನಿಂದ ಮಾರ್ಚ್ 31ರವರೆಗೂ ಜಾರಿಯಲ್ಲಿರಲಿದೆ.

    ಹುಬ್ಬಳ್ಳಿಯಿಂದ ಬೆಂಗಳೂರು ಹೋಗುವ ಗಾಡಿ ಸಂಖ್ಯೆ 12079/12080 ಜನಶತಾಬ್ದಿ ಎಕ್ಸ್‌ಪ್ರೆಸ್, ಮೈಸೂರು-ಯಲಹಂಕ-ಮೈಸೂರ ಮಾಲ್ಗುಡಿ ಸಂಚರಿಸಲಿರುವ ಗಾಡಿ ಸಂಖ್ಯೆ 16023/16024 ಮಾಲ್ಗುಡಿ ಎಕ್ಸ್‌ಪ್ರೆಸ್, ಯಶವಂತಪುರದಿಂದ ಪಂಢರಪುರ ಸಂಚರಿಸುವ ಗಾಡಿ ಸಂಖ್ಯೆ 16541/16542 ಯಶವಂತಪುರ ಎಕ್ಸ್‌ಪ್ರೆಸ್, ಬೆಂಗಳೂರಿನಿಂದ ಮೈಸೂರು ಸಂಚರಿಸಲಿರುವ ಗಾಡಿ ಸಂಖ್ಯೆ 16557/16558 ರಾಜಾರಾಣಿ ಎಕ್ಸ್‌ಪ್ರೆಸ್, ಶಿವಮೊಗ್ಗದಿಂದ ಯಶವಂತಪುರ ಸಂಚರಿಸುವ ಗಾಡಿ ಸಂಖ್ಯೆ 06539/06540 ನಾಲ್ಕು ದಿನಕ್ಕೊಮ್ಮೆ ಸಂಚರಿಸುವ ವಿಕ್ಲಿ ಎಕ್ಸ್‌ಪ್ರೆಸ್ ನಾಳೆಯಿಂದ ಸಂಚಾರ ನಿಲ್ಲಿಸಲಿವೆ.

    ಮೈಸೂರನಿಂದ ರೇಣುಗುಂಟಾ ಗಾಡಿ ಸಂಖ್ಯೆ 11065/11066 ಮೈಸೂರು ಎಕ್ಸ್‌ಪ್ರೆಸ್, ಸಾಯಿನಗರ ಶಿರಡಿ ಸಂಚರಿಸುವ ಗಾಡಿ ಸಂಖ್ಯೆ 16217/16218 ಮೈಸೂರು ಎಕ್ಸ್‌ಪ್ರೆಸ್, ಯಶವಂತಪುರದಿಂದ ಮೈಸೂರಿಗೆ ಸಂಚರಿಸುವ ಗಾಡಿ ಸಂಖ್ಯೆ 16565/16566 ಯಶವಂತಪುರ ವಿಕ್ಲಿ ಎಕ್ಸ್‌ಪ್ರೆಸ್, ಬೆಳಗಾವಿಯಿಂದ ಮೈಸೂರು ಹೋಗುವ ಗಾಡಿ ಸಂಖ್ಯೆ 17326 ವಿಶ್ವಮಾನವ ಎಕ್ಸ್‌ಪ್ರೆಸ್ ಹಾಗೂ ಮೈಸೂರಿನಿಂದ ಬೆಳಗಾವಿ ಹೋಗುವ ಗಾಡಿ ಸಂಖ್ಯೆ 17325 ವಿಶ್ವಮಾನವ ಎಕ್ಸ್‌ಪ್ರೆಸ್ ಗಾಡಿಗಳು ಮಾರ್ಚ್ 31ರ ವರೆಗೂ ತಾತ್ಕಾಲಿಕವಾಗಿ ರದ್ದುಗೊಳಿಸಿ ರೈಲ್ವೇ ಸಚಿವಾಲಯ ಆದೇಶ ಹೊರಡಿಸಿದೆ.

    ಹಣ ವಾಪಸ್ ಹೇಗೆ?:
    ಆನ್‍ಲೈನ್ ಮೂಲಕ ಮುಂಗಡ ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರ ಬ್ಯಾಂಕ್ ಖಾತೆಗೆ ಹಣ ಜಮೆ ಆಗಲಿದೆ. ಈಗಾಗಲೇ ಕೌಂಟರ್ ನಲ್ಲಿ ಟಿಕೆಟ್ ಪಡೆದಿದ್ದರೆ ಅಂತಹ ಪ್ರಯಾಣಿಕರ ಮೊಬೈಲ್ ಸಂಖ್ಯೆಗೆ ಮೆಸೇಜ್ ಬರಲಿದೆ. ಆ ಬಳಿಕ ಅವರು ಪ್ರಯಾಣಿಕರು ಬಂದು ಹಣ ಪಡೆಯಬಹದು ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

  • ರೈಲ್ವೇ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ವಂಚಕರ ಬಂಧನ

    ರೈಲ್ವೇ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ವಂಚಕರ ಬಂಧನ

    ಧಾರವಾಡ: ನೈರುತ್ಯ ರೈಲ್ವೇಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ  ಯುವಕರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪದ ಮೇಲೆ ನಾಲ್ವರು ವಂಚಕರನ್ನು ಇಲ್ಲಿನ ರೈಲ್ವೇ ಪೊಲೀಸರು ಬಂಧಿಸಿದ್ದಾರೆ.

    16 ಯುವಕರಿಂದ ತಲಾ ಮೂರು ಲಕ್ಷ ರೂ. ಪಡೆದು ಹುಬ್ಬಳ್ಳಿಯಲ್ಲಿ ದೈಹಿಕ ಹಾಗೂ ಮೌಖಿಕ ಪರೀಕ್ಷೆ ನಕಲಿ ಪರೀಕ್ಷೆ ನಡೆಸುತ್ತಿದ್ದ ರೈಲ್ವೇ ನೌಕರ ಸೇರಿ ನಾಲ್ವರನ್ನು ರೈಲ್ವೇ ರಕ್ಷಣಾ ದಳ (ಆರ್‍ಪಿಎಫ್) ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

    ಚಾಮರಾಜ ನಗರ ಜಿಲ್ಲೆಯ ಕೊಳ್ಳೇಗಾಲದ ಮೂಲದ ವಂಚಕರಾದ ಆನಂದ ಪಿ (36), ರಮೇಶ್ (42) ಹಾಗೂ ಮನೋಜ್ (24) ಮತ್ತು ಸಚಿನ್ (32) ಬಂಧಿತರು. ಇದರಲ್ಲಿ ಆನಂದ ಪಿ ಹಾಗೂ ರಮೇಶ ಇಬ್ಬರೂ ರೈಲ್ವೇ ಇಲಾಖೆಯ ಸಿಬ್ಬಂದಿಗಳಾಗಿದ್ದರು.

    ಹಲವು ವರ್ಷಗಳಿಂದ ಅಭ್ಯರ್ಥಿಗಳಿಗೆ ದೈಹಿಕ ಹಾಗೂ ಮೌಖಿಕ ಪರೀಕ್ಷೆ ನಡೆಸಿದ್ದರು. ನೈಋತ್ಯ ರೈಲ್ವೇ ಮುಖ್ಯ ಕಚೇರಿ ಹುಬ್ಬಳ್ಳಿಯಲ್ಲಿ ಸೋಮವಾರ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಯುವಕರಿಗೆ ತಿಳಿಸಿದ್ದರು. ಹೀಗಾಗಿ ರೈಲ್ವೇ ಆಸ್ಪತ್ರೆಯ ಒಂದು ಕೋಣೆಯಲ್ಲಿ ನಕಲಿ ವೈದ್ಯಕೀಯ ತಪಾಸಣೆ ಏರ್ಪಾಟು ಮಾಡಿದ್ದರು. ಖಚಿತ ಮಾಹಿತಿ ಮೇರೆಗೆ ಆರ್‍ಪಿಎಫ್ ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಆರೋಪಿಗಳಿಗೆ ರೈಲ್ವೇ ಆಸ್ಪತ್ರೆಯಲ್ಲೇ ನಕಲಿ ವೈದ್ಯಕೀಯ ಪರೀಕ್ಷೆ ಮಾಡಿಸುವಷ್ಟು ಧೈರ್ಯ ಇದೆ ಎಂದರೆ ಪ್ರಕರಣದಲ್ಲಿ ಮೇಲಾಧಿಕಾರಿಗಳೂ ಶಾಮೀಲಾಗಿದ್ದಾರೆಯೇ ಎಂಬ ಶಂಕೆ ಮೂಡುತ್ತಿದೆ. ಪ್ರಕರಣದಲ್ಲಿ ಇನ್ನೂ ಹಲವರು ವಂಚನೆಗೊಳಗಾಗಿರುವ ಸಾಧ್ಯತೆಗಳಿದ್ದು, ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.

    ಈ ನಡುವೆ ಬಂಧಿತ ನಾಲ್ವರು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ವಿಚಾರಣೆ ನೆಡೆಸುತ್ತಿದ್ದಾರೆ.