ಬೆಂಗಳೂರು: ಪಾರ್ಕ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ನಟಿ ಸಂಯುಕ್ತ ಹೆಗ್ಡೆ ಮತ್ತು ಗೆಳತಿಯರಿಗೆ ಬಾಯಿಗೆ ಬಂದಂತೆ ಬೈದಿದ್ದ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ಈಗ ಬಹಿರಂಗ ಕ್ಷಮೆಯಾಚಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ ಅವರು, ನನಗೆ ನನ್ನ ತಪ್ಪು ಗೊತ್ತಾಗಿದೆ. ನೈತಿಕ ಪೊಲೀಸ್‌ಗಿರಿಯನ್ನು ನಾನು ಯಾವಾಗಲೂ ವಿರೋಧಿಸುತ್ತೇನೆ. ಪ್ರಗತಿಪರ ಮಹಿಳೆಯಾಗಿ ಈ ವಿಷಯದಲ್ಲಿ ಸಂಯುಕ್ತಾ ಹೆಗಡೆ ಮತ್ತು ಇಬ್ಬರು ಸ್ನೇಹಿತರ ಜೊತೆ ನಾನು ಹಾಗೂ ಸಾರ್ವಜನಿಕರು ನಡೆದುಕೊಂಡ ಬಗೆಗೆ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.
ಕವಿತಾ ರೆಡ್ಡಿ ಅವರ ಕ್ಷಮೆಯನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಸಂಯುಕ್ತ ಹೆಗ್ಡೆ ಟ್ವೀಟ್ ಮಾಡಿದ್ದು ಕಿರಿಕ್ ಪ್ರಕರಣ ಅಂತ್ಯ ಕಂಡಿದೆ.
ನಡೆದಿದ್ದೇನು?
ಬೆಂಗಳೂರಿನ ಅಗರ ಉದ್ಯಾನವನದಲ್ಲಿ ಸಂಯುಕ್ತಾ ಹೆಗಡೆ ಸ್ನೇಹಿತರೊಂದಿಗೆ ಹುಲಾ ಹೂಪ್ ಅಭ್ಯಾಸ ಮಾಡುತ್ತಿದ್ದರು. ಸಾಮಾಜಿಕ ಅಂತರ ಕಾಪಾಡಿಕೊಂಡು ಸಂಯುಕ್ತಾ ಮತ್ತು ಅವರ ಸ್ನೇಹಿತರು ವರ್ಕೌಟ್ ಮಾಡುತ್ತಿದ್ದರೂ ಕೂಡ ಕವಿತಾ ರೆಡ್ಡಿ ಸಂಯುಕ್ತಾಗೆ ಬೈಯ್ಯುತ್ತಿದ್ದರು. ಈ ವಿಚಾರ ನಟಿ ಸಂಯುಕ್ತ ಹೆಗ್ಡೆ ಪ್ರತಿಕ್ರಿಯಿಸಿದ್ದಾಗ ನಿಮ್ಮ ಮೇಲೆ ಡ್ರಗ್ ಕೇಸ್ ಫಿಟ್ ಮಾಡುತ್ತೇನೆ ಎಂದು ಗದರಿದ್ದರು. ಅಷ್ಟೇ ಅಲ್ಲದೇ ತುಂಡು ಬಟ್ಟೆ ತೊಟ್ಟು ಡ್ಯಾನ್ಸ್ ಮಾಡಿದ್ದಾರೆ ಎಂದು ಕವಿತಾ ರೆಡ್ಡಿ ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಅಲ್ಲಿದ್ದ ಸ್ಥಳೀಯರು ನಟಿಯ ವಿರುದ್ಧ ಧಿಕ್ಕಾರ ಕೂಗಿ, ನಂತರ ಪಾರ್ಕ್ ಗೇಟ್ ಲಾಕ್ ಮಾಡಿ ಪೊಲೀಸರಿಗೆ ಕರೆ ಮಾಡಿದ್ದರು.
https://twitter.com/ShobhaBJP/status/1302112068565266432
ನಂತರ ಏನಾಯ್ತು?
ಸಂಯುಕ್ತ ಹೆಗ್ಡೆ ಲೈವ್ ವಿಡಿಯೋ ಮಾಡಿ ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಕವಿತಾ ರೆಡ್ಡಿ ತನ್ನ ಗೆಳತಿಗೆ ಹಲ್ಲೆ ಮಾಡುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಈ ಕುರಿತು ಟ್ವಿಟ್ಟರ್ ನಲ್ಲಿ ವಿಡಿಯೋ ಹಾಕಿ ಕಿಡಿ ಕಾರಿದ್ದ ಅವರು ನಮ್ಮ ದೇಶದ ಭವಿಷ್ಯವು ಇಂದು ನಾವು ಏನು ಮಾಡುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ. ಅಗರ ಕೆರೆ ಬಳಿಯ ಉದ್ಯಾನವನದಲ್ಲಿ ಕವಿತಾ ರೆಡ್ಡಿ ನಮ್ಮನ್ನು ನಿಂದಿಸಿ, ಅಸಹ್ಯಕರವಾಗಿ ವರ್ತಿಸಿದರು. ಇದಕ್ಕೆ ಹೆಚ್ಚಿನ ವಿಡಿಯೋ ಪುರಾವೆಗಳು ಸಹ ಇವೆ. ಈ ಕುರಿತು ಗಮನಹರಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದು ಬೆಂಗಳೂರು ಪೊಲೀಸರಿಗೆ ಹಾಗೂ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದರು. ದೂರಿನ ಬಳಿಕ ಎಫ್‌ಐಆರ್ ಸಹ ದಾಖಲಾಗಿತ್ತು.
ನೆಟ್ಟಿಗರಿಂದ ವ್ಯಾಪಕ ಬೆಂಬಲ:
ಕವಿತಾ ರೆಡ್ಡಿ ಹೊಡೆಯುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ನೆಟ್ಟಿಗರು ಸಂಯುಕ್ತ ಹೆಗ್ಡೆ ಪರ ಅಭಿಪ್ರಾಯ ಹಂಚಿಕೊಳ್ಳಲು ಆರಂಭಿಸಿದರು. ಶೋಭಾ ಕರಂದ್ಲಾಜೆ, ನಟಿ ರಮ್ಯಾ, ಕಾಜಲ್ ಅಗರ್‌ವಾಲ್, ಜಗ್ಗೇಶ್, ಹಿತಾ ಚಂದ್ರಶೇಖರ್, ಮೇಘನಾ, ಸಂತೋಷ್ ಆನಂದರಾಮ್, ಸಿಂಪಲ್ ಸುನಿ ಸೇರಿದಂತೆ ಅನೇಕರು ಕವಿತಾ ರೆಡ್ಡಿ ನಡೆ ವಿರೋಧಿಸಿ ಟ್ವೀಟ್ ಮಾಡಿದ್ದರು.