Tag: ನೇಪಾಳ

  • ನೇಪಾಳ ರೇಡಿಯೋದಲ್ಲಿ ಭಾರತ ವಿರೋಧಿ ಹಾಡು!

    ನೇಪಾಳ ರೇಡಿಯೋದಲ್ಲಿ ಭಾರತ ವಿರೋಧಿ ಹಾಡು!

    ನವದೆಹಲಿ: ಹೊಸ ಭೂಪಟದ ಸಂಬಂಧ ನೆರೆರಾಷ್ಟ್ರ ನೇಪಾಳದೊಂದಿಗೆ ವಿವಾದ ಹೆಚ್ಚಾಗುತ್ತಿರುವ ಬೆನ್ನಲ್ಲೇ ಅಲ್ಲಿನ ಸರ್ಕಾರ ಜನರಲ್ಲಿ ಭಾರತದ ವಿರುದ್ಧ ದ್ವೇಷವನ್ನು ಹೆಚ್ಚಿಸಲು ರೇಡಿಯೋಗಳಲ್ಲಿ ಭಾರತ ವಿರೋಧಿ ಹಾಡುಗಳನ್ನು ಪ್ರಸಾರ ಮಾಡುತ್ತಿದೆ ಎಂದು ವರದಿಯಾಗಿದೆ.

    ಗಡಿ ಪ್ರದೇಶದಲ್ಲಿರುವ ಭಾರತದ ಉತ್ತರಾಖಂಡ ರಾಜ್ಯದ ಹಳ್ಳಿಗಳಲ್ಲಿ ನೇಪಾಳ ರೇಡಿಯೋ ಸಿಗ್ನಲ್ ಲಭ್ಯವಾಗುತ್ತವೆ. ಈ ವೇಳೆ ಭಾರತ ವಿರೋಧಿ ಹಾಡುಗಳು ಪ್ರಸಾರವಾಗುತ್ತಿರುವುದು ಖಚಿತವಾಗಿದೆ ಎಂಬ ಮಾಹಿತಿ ಲಭಿಸಿದೆ. ಆ ಮೂಲಕ ಭಾರತ ವಿರುದ್ಧ ವ್ಯವಸ್ಥಿತವಾಗಿ ಜನರಿಗೆ ಅಪಪ್ರಚಾರ ನಡೆಸುವತ್ತ ನೇಪಾಳ ಸರ್ಕಾರ ಮುಂದಾಗಿದೆ. ಇದನ್ನು ಓದಿ: ಚೀನಾ ವೈರಸ್‍ಗಿಂತಲೂ ಭಾರತದ ವೈರಸ್ ಮಾರಕ – ನೇಪಾಳ ಪ್ರಧಾನಿಯಿಂದ ವಿವಾದಾತ್ಮಕ ಮಾತು

    ಕೆಲವು ನೇಪಾಳಿ ರೇಡಿಯೋಗಳು ನೇಪಾಳಿ ಹಾಡುಗಳೊಂದಿಗೆ ಭಾರತದ ವಿರೋಧಿ ಭಾಷಣಗಳನ್ನು ಪ್ರಸಾರ ಮಾಡಲು ಪ್ರಾರಂಭಿಸಿದೆ ಎಂದು ಧಾರ್ಚುಲಾ ಉಪಭಾಗದ ದಂಟು ಗ್ರಾಮದ ನಿವಾಸಿ ಶಾಲು ದತಾಲ್ ಅವರು ಮಾಹಿತಿ ನೀಡಿದ್ದಾರೆ. ಗಡಿಯ ಎರಡೂ ಬದಿಗಳಲ್ಲಿರುವ ಜನರು ನೇಪಾಳಿ ಹಾಡುಗಳನ್ನ ಕೇಳುತ್ತಾರೆ. ಈ ವೇಳೆ ನೇಪಾಳಿ ರಾಜಕೀಯ ನಾಯಕರ ಭಾರತ ವಿರೋಧಿ ಭಾಷಣಗಳು ಸಹ ಪ್ರಸಾರ ಮಾಡಲಾಗುತ್ತಿದೆ ಎಂದು ಪಿಟಿಐ ವರದಿ ಮಾಡಿದೆ. ಇದನ್ನು ಓದಿ: ನೇಪಾಳ ಆಯ್ತು, ಈಗ ಢಾಕಾದತ್ತ ಕೈಚಾಚಿದ ಬೀಜಿಂಗ್‌

    ಸ್ಥಳೀಯ ನಿವಾಸಿ ನೀಡಿರುವ ಮಾಹಿತಿ ಅನ್ವಯ, ನಯಾ ನೇಪಾಳ ಮತ್ತು ಕಲಾಪಾಣಿ ರೇಡಿಯೋ ಸೇರಿದಂತೆ ಕೆಲ ಹಳೆ ವಾಹಿನಿಗಳು ಕೂಡ ಇಂತಹ ಹಾಡು, ಭಾಷಣಗಳಲ್ಲಿ ಕಲಾಪಾನಿ ಪ್ರದೇಶ ನೇಪಾಳದೆಂದು ಬಿಂಬಿಸುತ್ತಿರುವ ವರದಿಗಳನ್ನು ಪ್ರಸಾರ ಮಾಡುತ್ತಿವೆ ಎಂದು ತಿಳಿಸಿದ್ದಾರೆ. ಈ ವಾಹಿನಿಗಳು ನೇಪಾಳದ ಧಾರ್ಚುಲಾದ ಜಿಲ್ಲಾ ಕೇಂದ್ರದ ಸಮೀಪದ ಚಬ್ರಿಗರ್ ಎಂಬ ಪ್ರದೇಶದಿಂದ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ಲಭಿಸಿದೆ. ಕೇವಲ ಮೂರು ವ್ಯಾಪಿಯ ದೂರದಲ್ಲಿ ಇರುವುದರಿಂದ ರೇಡಿಯೋ ತರಂಗಗಳು ಗಡಿ ಪ್ರದೇಶದ ಹಳ್ಳಿಗಳಲ್ಲಿ ಸುಲಭವಾಗಿ ಕೇಳಬಹುದಾಗಿದೆ.

    ‘ಕಾಲಾಪಾನಿ, ಲಿಪುಲೇಕ್, ಲಿಂಪಿಯಾಮುದ್ರ ಪ್ರದೇಶಗಳು ನಮ್ಮದು. ಜನರೇ ಎಚ್ಚೆತ್ತುಕೊಳ್ಳಿ’ ಎಂಬ ಸರಾಂಶವಿರುವ ಹಾಡು, ಭಾಷಣಗಳು ಪ್ರಸಾರವಾಗುತ್ತಿದೆ ಎಂದು ಸ್ಥಳೀಯ ಶಿಕ್ಷಕರೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನು ಓದಿ: ಭಾರತದಿಂದ ನನ್ನ ಎಳೆದೊಯ್ದು ಸುಳ್ಳು ಹೇಳಲು ಒತ್ತಾಯಿಸಿದ್ರು: ನೇಪಾಳದ ವಶದಲ್ಲಿದ್ದ ವ್ಯಕ್ತಿ

    ಇಂತಹ ವರದಿಗಳು ಪ್ರಸಾರವಾಗುತ್ತಿರುವ ಬಗ್ಗೆ ಸ್ಥಳೀಯ ಆಡಳಿತ ಹಾಗೂ ಪೊಲೀಸರಿಗೆ ಮಾಹಿತಿ ಲಭಿಸಿಲ್ಲ ಎನ್ನಲಾಗಿದೆ. ಇಂತಹ ವಿಚಾರಗಳ ಬಗ್ಗೆ ನಮ್ಮ ಗುಪ್ತಚರದಿಂದ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ಪಿಥೋರಗರ್ ಪೊಲೀಸ್ ವರಿಷ್ಠಾಧಿಕಾರಿ ಪ್ರೀತಿ ಪ್ರದರ್ಶಿನಿ ಪ್ರತಿಕ್ರಿಯೆ ನೀಡಿದ್ದಾರೆ.

    ಭಾರತದ ಭೂ ಭಾಗ ಕಾಲಾಪಾನಿ, ಲಿಂಪಿಯಾಧುರಾ, ಲಿಪುಲೇಖ್ ಪ್ರದೇಶಗಳನ್ನು ತನ್ನ ಪ್ರದೇಶ ಎಂದು ನೇಪಾಳ ಹೊಸ ರಾಜಕೀಯ ನಕ್ಷೆ ಬಿಡುಗಡೆ ಮಾಡಿ ಸಂಸತ್‍ನಲ್ಲಿ ಅಂಗೀಕರಿಸಿತ್ತು. ಈ ಕುರಿತು ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದ ಭಾರತ, ನೇಪಾಳದ ಹೊಸ ನಕ್ಷೆ ರಾಜಕೀಯ ಲಾಭಕ್ಕಾಗಿ ಬಿಡುಗಡೆ ಮಾಡಲಾಗಿದೆ ಎಂದಿತ್ತು.

  • ನೇಪಾಳ ಆಯ್ತು, ಈಗ ಢಾಕಾದತ್ತ ಕೈಚಾಚಿದ ಬೀಜಿಂಗ್‌

    ನೇಪಾಳ ಆಯ್ತು, ಈಗ ಢಾಕಾದತ್ತ ಕೈಚಾಚಿದ ಬೀಜಿಂಗ್‌

    ನವದೆಹಲಿ: ಹೊಸ ನಕ್ಷೆ ರಚಿಸಿ ನೇಪಾಳವನ್ನು ಭಾರತದ ವಿರುದ್ಧ ಎತ್ತಿಕಟ್ಟಿದ್ದ ಚೀನಾ, ಇದೀಗ ಬಾಂಗ್ಲಾದೇಶವನ್ನೂ ದಾಳವನ್ನಾಗಿಸಿಕೊಳ್ಳಲು ಮುಂದಾಗಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಭಾರತದ ಮಿತೃತ್ವ ಹೊಂದಿರುವ ದೇಶಗಳನ್ನು ನಿಧನವಾಗಿ ತನ್ನತ್ತ ಸೆಳೆಯುವ ಯತ್ನ ಆರಂಭವಾಗಿದೆ.

    ಭಾರತದಲ್ಲಿ ಚೀನಾ ವಿರುದ್ಧ ಆರ್ಥಿಕ ಸಮರದ ನಡೆಸುವ ಬಗ್ಗೆ ಚರ್ಚೆ ಆಗುತ್ತಿದ್ದರೆ ಬೀಜಿಂಗ್‌ ಢಾಕಾದತ್ತ ಕೈಚಾಚಿದೆ. ಅಭಿವೃದ್ಧಿಯಲ್ಲಿ ನಾವು ಹಿಂದುಳಿದಿರುವುದರಿಂದ ತನ್ನ ರಫ್ತಿನ ಮೇಲೆ ಸುಂಕ ಕಡಿಮೆ ಮಾಡಿ ಅಂತ ಬಾಂಗ್ಲಾದೇಶ ಕೇಳಿಕೊಂಡಿತ್ತು. ಬಾಂಗ್ಲಾ ದೇಶದ ಈ ಮನವಿಯನ್ನು ಚೀನಾ ಪುರಸ್ಕರಿಸಿದ್ದು, ಬಾಂಗ್ಲಾದೇಶದ 5,161 ವಸ್ತುಗಳ ಮೇಲಿನ ಶೇ.97ರಷ್ಟು ರಫ್ತು ಸುಂಕವನ್ನು ರದ್ದುಗೊಳಿಸಲು ಚೀನಾ ಮುಂದಾಗಿದೆ.

    ಕೋವಿಡ್‌ 19 ಹಿನ್ನೆಲೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜೊತೆಗಿನ ದ್ವಿಪಕ್ಷೀಯ ಮಾತುಕತೆಯ ವೇಳೆ ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ರಫ್ತು ಸುಂಕವನ್ನು ಕಡಿಮೆ ಮಾಡುವಂತೆ ಮನವಿ ಮಾಡಿದ್ದರು.

    ಜೂನ್‌ 16 ರಂದು ಚೀನಾ ಬಾಂಗ್ಲಾದೇಶದ ಮನವಿಯನ್ನು ಪುರಸ್ಕರಿಸಿದೆ. ಲಡಾಖ್‌ ಗಲಾಟೆಯ ಮರುದಿನವೇ ಚೀನಾ ಬಾಂಗ್ಲಾ ಮನವಿಯನ್ನು ಒಪ್ಪಿಕೊಂಡಿರುವುದು ವಿಶೇಷ.

    ಏಷ್ಯಾ-ಪೆಸಿಫಿಕ್‌ ವ್ಯಾಪಾರ ಒಪ್ಪಂದದಂತೆ ಈಗಾಗಲೇ ಚೀನಾ ಮತ್ತು ಬಾಂಗ್ಲಾದೇಶದ ನಡುವೆ 3,095 ಉತ್ಪನ್ನಗಳ ವ್ಯವಹಾರ ಸುಂಕ ರಹಿತವಾಗಿ ನಡೆಯುತ್ತಿದೆ. ಈಗ ಒಟ್ಟು 8,256 ಬಾಂಗ್ಲಾ ಉತ್ಪನ್ನಗಳು ಈ ಪಟ್ಟಿಗೆ ಸೇರ್ಪಡೆಯಾಗಿದ್ದು ಜುಲೈ 1 ರಿಂದ ಇದು ಜಾರಿಗೆ ಬರಲಿದೆ.

    ಕೋವಿಡ್‌ 19 ಹಿನ್ನೆಲೆಯಲ್ಲಿ ಆಯೋಜನೆಗೊಂಡಿದ್ದ ಏಷ್ಯಾ ಆಫ್ರಿಕಾ ರಾಷ್ಟ್ರಗಳ ಸಭೆಯಲ್ಲಿ ಚೀನಾ ಬಡ ರಾಷ್ಟ್ರಗಳಿಗೆ ಒಂದು ವರ್ಷ ಕಾಲ ರಫ್ತು ಸುಂಕವನ್ನು ರದ್ದು ಮಾಡಲಾಗುವುದು ಎಂದು ಹೇಳಿತ್ತು. ಕೋವಿಡ್‌ 19 ನಿಂದ ಆರ್ಥಿಕತೆ ಕುಸಿತಗೊಂಡ ರಾಷ್ಟ್ರಗಳಿಗೆ ತನ್ನ ನಿರ್ಧಾರದಿಂದ ನೆರವಾಗಲಿದೆ ಎಂದು ಚೀನಾ ಹೇಳಿತ್ತು.

  • ಭಾರತದಿಂದ ನನ್ನ ಎಳೆದೊಯ್ದು ಸುಳ್ಳು ಹೇಳಲು ಒತ್ತಾಯಿಸಿದ್ರು: ನೇಪಾಳದ ವಶದಲ್ಲಿದ್ದ ವ್ಯಕ್ತಿ

    ಭಾರತದಿಂದ ನನ್ನ ಎಳೆದೊಯ್ದು ಸುಳ್ಳು ಹೇಳಲು ಒತ್ತಾಯಿಸಿದ್ರು: ನೇಪಾಳದ ವಶದಲ್ಲಿದ್ದ ವ್ಯಕ್ತಿ

    – ನನ್ನ ಕೊಂದ್ರೂ ಸರಿ ಭಾರತದ ವಿರುದ್ಧ ಸುಳ್ಳು ಹೇಳಲ್ಲ

    ನವದೆಹಲಿ: ಅಕ್ರಮವಾಗಿ ನಮ್ಮ ಗಡಿಯೊಳಗೆ ಪ್ರವೇಶ ಮಾಡಿದ್ದಾನೆ ಎಂದು ನೇಪಾಳ ಸೇನೆ ಎಳೆದುಕೊಂಡು ಹೋಗಿದ್ದ ಭಾರತದ ಪ್ರಜೆಯನ್ನು ನೇಪಾಳ ಸರ್ಕಾರ ಬಿಡುಗಡೆ ಮಾಡಿದೆ.

    ಬಿಡುಗಡೆ ಮಾಡಿದ ವ್ಯಕ್ತಿಯನ್ನು ಲಗಾನ್ ಕಿಶೋರ್ ಎಂದು ಗುರುತಿಸಲಾಗಿದ್ದು, ನೇಪಾಳದಿಂದ ಬಿಡುಗಡೆಯಾಗಿ ಭಾರತೀಯ ಸೇನೆಯ ನೆರವಿನಿಂದ ತನ್ನ ಸ್ವಂತ ಊರು ಬಿಹಾರಕ್ಕೆ ವಾಪಸ್ ಬಂದಿದ್ದಾರೆ. ಶುಕ್ರವಾರ ಭಾರತ ಮತ್ತು ನೇಪಾಳ ಗಡಿ ಭಾಗದಲ್ಲಿ ಗುಂಡಿನ ದಾಳಿಯಾಗಿತ್ತು. ಇದಾದ ನಂತರ ನೇಪಾಳ ಸೇನೆ ಭಾರತೀಯ ಪ್ರಜೆಯನ್ನು ಬಂಧಿಸಿತ್ತು.

    https://twitter.com/ANI/status/1271673105207853056

    ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಕಿಶೋರ್, ನಾನು ಮತ್ತು ನನ್ನ ಮಗ ನೇಪಾಳಿ ಪ್ರಜೆಯಾಗಿರುವ ನಮ್ಮ ಸೊಸೆಯನ್ನು ಭೇಟಿಯಾಗಲು ನೇಪಾಳ ಮತ್ತು ಭಾರತದ ಗಡಿ ಭಾಗಕ್ಕೆ ಹೋಗಿದ್ದವು. ಈ ವೇಳೆ ನೇಪಾಳದ ಕಡೆಯಿಂದ ಬಂದ ಭದ್ರತಾ ಸಿಬ್ಬಂದಿ ನನ್ನ ಮಗನಿಗೆ ಸುಖಾಸುಮ್ಮನೆ ಹೊಡೆದರು. ಯಾಕೆ ಈ ರೀತಿ ಮಾಡುತ್ತಿದ್ದೀರಾ ಎಂದು ಕೇಳಿದಾಗ ನನ್ನ ಸುಮ್ಮನಿರು ಎಂದು ಹೆದರಿಸಿದರು. ಜೊತೆಗೆ ಇನ್ನೂ ಹತ್ತು ಸಿಬ್ಬಂದಿಯನ್ನು ಕರೆಸಿ ಗಾಳಿಯಲ್ಲಿ ಗುಂಡಿ ಹಾರಿಸಿದರು ಎಂದು ಹೇಳಿದ್ದಾರೆ.

    ಗುಂಡು ಹಾರಿಸಿದ ತಕ್ಷಣ ನಾವು ಭಾರತದ ಕಡೆ ಓಡಿ ಬಂದೆವು. ಆಗ ಅವರು ನಮ್ಮನ್ನು ಭಾರತದ ಕಡೆಯಿಂದ ನೇಪಾಳದ ಕಡೆಗೆ ಎಳೆದುಕೊಂಡು ಹೋದರು. ಅಲ್ಲಿ ನಮ್ಮ ಮೇಲೆ ಬಂದೂಕುಗಳಿಂದ ಹಲ್ಲೆ ಮಾಡಿ ನೇಪಾಳದ ಸಂಗ್ರಂಪುರಕ್ಕೆ ಕರೆದುಕೊಂಡು ಹೋದರು. ಅಲ್ಲಿ ನಾವು ನಿಮ್ಮನ್ನು ನೇಪಾಳ ಗಡಿಯಿಂದ ಕರೆದುಕೊಂಡು ಬಂದಿದ್ದೇವೆ ಎಂದು ತಪ್ಪೊಪ್ಪಿಕೊಳ್ಳಿ ಎಂದು ಒತ್ತಾಯ ಮಾಡಿದರು. ಆದರೆ ನಾನು, ನೀವು ನನ್ನನ್ನು ಕೊಂದರು ಆ ರೀತಿ ಹೇಳುವುದಿಲ್ಲ ಎಂದು ಹೇಳಿದ್ದೆ ಎಂದು ತಿಳಿಸಿದ್ದಾರೆ.

    ಶುಕ್ರವಾರ ನೇಪಾಳದಲ್ಲಿ ಇದ್ದ ತಮ್ಮ ಸೊಸೆಯನ್ನು ನೋಡಲು ಹೋದ ಸ್ಥಳೀಯರ ಮೇಲೆ ನೇಪಾಳ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದರು. ವರದಿಗಳ ಪ್ರಕಾರ ಓರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿತ್ತು. ಈ ಬಗ್ಗೆ ಮಾತನಾಡಿರುವ ಡಿಜಿ ಎಸ್‍ಎಸ್‍ಬಿ ಕುಮಾರ್ ರಾಜೇಶ್ ಚಂದ್ರ ಅವರು, ಘಟನೆಯಲ್ಲಿ ಒಟ್ಟು ಮೂವರು ಗಾಯಗೊಂಡಿದ್ದು, ಅವರನ್ನು ವಿಕೇಶ್ ಯಾದವ್, ಉಮೇಶ್ ರಾಮ್ ಮತ್ತು ಉದಯ್ ಠಾಕೂರ್ ಎಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

    ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ, ಭಾರತವು ನೇಪಾಳದೊಂದಿಗೆ ಅತ್ಯಂತ ಬಲವಾದ ಸಂಬಂಧವನ್ನು ಹೊಂದಿದೆ. ಜೊತೆಗೆ ದೃಢವಾದ ಭೌಗೋಳಿಕ, ಸಾಂಸ್ಕೃತಿಕ, ಐತಿಹಾಸಿಕ, ಧಾರ್ಮಿಕ ಸಂಬಂಧಗಳನ್ನು ಹೊಂದಿದೆ. ನೇಪಾಳದೊಂದಿಗೆ ನಮ್ಮ ಸಂಬಂಧ ಯಾವಾಗಲೂ ಪ್ರಬಲವಾಗಿರುತ್ತದೆ ಮತ್ತು ಭವಿಷ್ಯದಲ್ಲಿ ಸದೃಢವಾಗಿರುತ್ತದೆ ಎಂದು ಹೇಳಿದ್ದಾರೆ.

  • ಟ್ರಕ್‍ಗೆ ವಲಸೆ ಕಾರ್ಮಿಕರಿದ್ದ ವಾಹನ ಡಿಕ್ಕಿ- 12 ಮಂದಿ ಸಾವು

    ಟ್ರಕ್‍ಗೆ ವಲಸೆ ಕಾರ್ಮಿಕರಿದ್ದ ವಾಹನ ಡಿಕ್ಕಿ- 12 ಮಂದಿ ಸಾವು

    – ವಾಹನ ಪೀಸ್ ಪೀಸ್, 21 ಜನರಿಗೆ ಗಂಭೀರ ಗಾಯ

    ಕಾಠ್ಮಂಡು: ವಲಸೆ ಕಾರ್ಮಿಕರಿದ್ದ ವಾಹನವು ರಸ್ತೆಬದಿ ನಿಂತಿದ್ದ ಟ್ರಕ್‍ಗೆ ಡಿಕ್ಕಿ ಹೊಡೆದ ಪರಿಣಾಮ 12 ಮಂದಿ ಸಾವನ್ನಪ್ಪಿದ ಘಟನೆ ನೇಪಾಳದ ಪೂರ್ವ-ಪಶ್ಚಿಮ ಹೆದ್ದಾರಿಯ ಬಂಕೆ ಜಿಲ್ಲೆಯಲ್ಲಿ ನಡೆದಿದೆ.

    ಬಂಕೆ ಜಿಲ್ಲೆಯ ತುರಿಯಾ ಅರಣ್ಯ ಪ್ರದೇಶದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 21 ಮಂದಿ ಗಾಯಗೊಂಡಿದ್ದಾರೆ. ನೇಪಾಳಿ ವಲಸೆ ಕಾರ್ಮಿಕರನ್ನು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಿಂದ ನೇಪಾಳದ ಸಲ್ಯಾನ್ ಜಿಲ್ಲೆಗೆ ಹೋಗುವ ಮಾರ್ಗದಲ್ಲಿ ಕರೆದೊಯ್ಯುತ್ತಿದ್ದ ವಾಹನಕ್ಕೆ ಟ್ರಕ್‍ಗೆ ಡಿಕ್ಕಿ ಹೊಡೆದಿದೆ.

    “ವಲಸೆ ಕಾರ್ಮಿಕರು ಭಾರತದಿಂದ ನೇಪಾಳಕ್ಕೆ ಹಿಂತಿರುಗುತ್ತಿದ್ದರು. ಭಾನುವಾರ ಮಧ್ಯರಾತ್ರಿ ಅಪಘಾತ ಸಂಭವಿಸಿದೆ. ಎಲ್ಲಾ ಮೃತದೇಹ ಮತ್ತು ಗಾಯಾಳುಗಳನ್ನು ನೇಪಾಳಗುಂಜ್ ನಗರದ ಭೇರಿ ಆಸ್ಪತ್ರೆಗೆ ಸಾಗಿಸಲಾಗಿದೆ” ಎಂದು ಬಂಕೆ ಜಿಲ್ಲಾಧಿಕಾರಿ ರಂಬಹಾದೂರ್ ಕುರುಂಗ್ವಾಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ವಲಸೆ ಕಾರ್ಮಿಕರಿದ್ದ ವಾಹನವು ವೇಗವಾಗಿ ಚಲಿಸುತ್ತಿತ್ತು. ಈ ವೇಳೆ ಚಾಲಕ ನಿಯಂತ್ರಣ ತಪ್ಪಿದ ವಾಹನ ರಸ್ತೆಬದಿ ನಿಂತಿದ್ದ ಟ್ರಕ್‍ನ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ಬಂಕೆ ಜಿಲ್ಲೆಯ ಪೊಲೀಸ್ ಅಧಿಕಾರಿ ಹೃದಯೇಶ್ ಸಪ್ಕೋಟಾ ಮಾಹಿತಿ ನೀಡಿದ್ದಾರೆ.

    ಗಾಯಾಳುಗಳ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಜಿಲ್ಲಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸ್ ತಿಳಿಸಿದ್ದಾರೆ.

  • ಚೀನಾ ವೈರಸ್‍ಗಿಂತಲೂ ಭಾರತದ ವೈರಸ್ ಮಾರಕ – ನೇಪಾಳ ಪ್ರಧಾನಿಯಿಂದ ವಿವಾದಾತ್ಮಕ ಮಾತು

    ಚೀನಾ ವೈರಸ್‍ಗಿಂತಲೂ ಭಾರತದ ವೈರಸ್ ಮಾರಕ – ನೇಪಾಳ ಪ್ರಧಾನಿಯಿಂದ ವಿವಾದಾತ್ಮಕ ಮಾತು

    – ಭಾರತದ ಭೂ-ಭಾಗ ಸೇರಿಸಿದ ಹೊಸ ನಕ್ಷೆಗೆ ನೇಪಾಳ ಸಂಸತ್ ಅನುಮೋದನೆ
    – ಹೊಸ ನಕ್ಷೆಗೆ ಬಿಡುಗಡೆಗೆ ಪ್ರಧಾನಿ ಕೆಪಿ ಒಲಿ ಸಮರ್ಥನೆ

    ಕಠ್ಮಂಡು: ನೇಪಾಳ ಹಾಗೂ ಭಾರತದ ನಡುವೆ ದಶಕಗಳಿಂದಲೂ ಉತ್ತಮ ಬಾಂಧವ್ಯ ಹೊಂದಿದೆ. ಆದರೆ ಸದ್ಯ ಚೀನಾ ಬೆಂಬಲ ಪಡೆದಿರುವ ನೇಪಾಳ ಸರ್ಕಾರದ ಪ್ರಧಾನಿ ಕೆಪಿ ಶರ್ಮಾ ಒಲಿ ಭಾರತದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನೇಪಾಳದಲ್ಲಿ ಕೋವಿಡ್-19 ಹೆಚ್ಚಾಗಲು ಭಾರತವೇ ಕಾರಣ ಎಂದಿರುವ ಕೆಪಿ ಶರ್ಮಾ ಒಲಿ, ಭಾರತದಿಂದ ಬರುತ್ತಿರುವ ವೈರಸ್, ಚೀನಾ ಹಾಗೂ ಇಟಲಿ ವೈರಸ್‍ಗಿಂತಲೂ ಪ್ರಮಾದಕರ ಎಂದು ಹೇಳಿದ್ದಾರೆ. ಅಕ್ರಮ ಮಾರ್ಗಗಳ ಮೂಲಕ ಭಾರತದಿಂದ ಜನರು ತಮ್ಮ ದೇಶಕ್ಕೆ ಪ್ರವೇಶ ಮಾಡುತ್ತಿರುವುದೇ ಕೊರೊನಾ ಸೋಂಕು ಹೆಚ್ಚಾಗಲು ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಭಾರತ ಸರ್ಕಾರ ಆರೋಗ್ಯ ಪರೀಕ್ಷೆಯನ್ನು ಸರಿಯಾಗಿ ನಡೆಸದೆ ಜನರನ್ನು ಕರೆತರುತ್ತಿದೆ. ಕೆಲ ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ರಾಜಕೀಯ ಪಕ್ಷ ನಾಯಕರು ಇದಕ್ಕೆ ಜವಾಬ್ದಾರಿ ವಹಿಸಿಕೊಳ್ಳಬೇಕಿದೆ ಎಂದು ಸಂಸತ್‍ನಲ್ಲಿ ಒಲಿ ಹೇಳಿಕೆ ನೀಡಿದ್ದಾರೆ.

    ಇತ್ತ ಭಾರತ ಭೂ ಪ್ರದೇಶಗಳನ್ನು ಸೇರಿಸಿ ಹೊಸದಾಗಿ ನೇಪಾಳ ನಕ್ಷೆಯನ್ನು ಬಿಡುಗಡೆ ಮಾಡಿರುವ ಸರ್ಕಾರ ಕ್ರಮವನ್ನು ಒಲಿ ಸಮರ್ಥನೆ ಮಾಡಿಕೊಂಡಿದ್ದು, ಕಾಲಾಪಾನಿ, ಲಿಂಪಿಯಾಧುರಾ, ಲಿಪುಲೇಖ್ ಪ್ರದೇಶಗಳನ್ನು ಭಾರತದಿಂದ ಮರಳಿ ವಶಕ್ಕೆ ಪಡೆಯುವುದಾಗಿ ಸಂಸತ್‍ನಲ್ಲಿ ಹೇಳಿಕೆ ನೀಡಿದ್ದಾರೆ. ಹೊಸ ನಕ್ಷೆಗೆ ನೇಪಾಳ ಸಂಸತ್‍ನಲ್ಲಿ ಅನುಮೋದನೆಯನ್ನು ನೀಡಲಾಗಿದೆ.

    ಭಾರತ ಹಾಗೂ ನೇಪಾಳ ನಡುವೆ 1,800 ಕಿಮೀ ಗಡಿ ಪ್ರದೇಶವಿದೆ. 1816ರ ಬ್ರಿಟಿಷ್ ಒಪ್ಪಂದ ಅನ್ವಯ ಲಿಪುಲೆಖ್ ತನ್ನದೇ ಎಂದು ನೇಪಾಳವಾದ ಮಂಡಿಸುತ್ತಿದೆ. 1962ರಲ್ಲಿ ಚೀನಾ ಯುದ್ಧದ ಬಳಿಕ ಕಾಲಾಪಾಣಿ, ಲಿಂಪಿಯಾಧುರಾ ಪ್ರದೇಶಗಳನ್ನು ಭಾರತ ಸೇನೆ ವಶಕ್ಕೆ ಪಡೆದಿದೆ. ಆ ಪ್ರದೇಶಗಳು ಕೂಡ ತಮ್ಮದೇ ಎಂದು ನೇಪಾಳ ಪ್ರಧಾನಿ ಹೇಳಿದ್ದಾರೆ.

    ಕೈಲಾಸ ಮಾನಸ ಸರೋವರ ಮಾರ್ಗಕ್ಕಾಗಿ ಲಿಪುಲೆಖ್ ಪ್ರದೇಶದಲ್ಲಿ ಭಾರತ ರಸ್ತೆ ಮಾರ್ಗವನ್ನು ನಿರ್ಮಿಸಿತ್ತು. ಅಲ್ಲದೇ ಮೇ 8ರಂದು ಈ ಮಾರ್ಗದ ಉದ್ಘಾಟನೆ ಕೂಡ ಆಗಿತ್ತು. ಬಳಿಕ ಆ ಮಾರ್ಗದಲ್ಲಿ ಸೆಕ್ಯೂರಿಟಿ ಚೆಕ್ ಪೋಸ್ಟ್ ಕೂಡ ನಿರ್ಮಿಸಿತ್ತು. ಆದರೆ ನೇಪಾಳದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ಇಲಾಖೆ, ಈ ಮಾರ್ಗ ಉತ್ತರಖಂಡ್‍ನ ಪಿತೋರ್ ಗಢ ಜಿಲ್ಲೆಯ ಮೂಲಕ ಸಾಗುತ್ತದೆ. ಈ ಮಾರ್ಗವನ್ನು ಸಂಪೂರ್ಣವಾಗಿ ಭಾರತದ ಭೂ ಪ್ರದೇಶದಲ್ಲೇ ನಿರ್ಮಿಸಲಾಗಿದೆ ಎಂದು ಹೇಳಿದೆ.

  • ಮಕ್ಕಳ ಹುಟ್ಟುಹಬ್ಬಕ್ಕೆ ನೇಪಾಳಕ್ಕೆ ಪ್ರವಾಸ ತೆರಳಿ ಶವವಾದ ಕುಟುಂಬ

    ಮಕ್ಕಳ ಹುಟ್ಟುಹಬ್ಬಕ್ಕೆ ನೇಪಾಳಕ್ಕೆ ಪ್ರವಾಸ ತೆರಳಿ ಶವವಾದ ಕುಟುಂಬ

    ನೇಪಾಳ: ಮೂರು ಮಕ್ಕಳ ಹುಟ್ಟುಹಬ್ಬಕ್ಕೆಂದು ನೇಪಾಳಕ್ಕೆ ಪ್ರವಾಸ ತೆರಳಿದ್ದ ಕೇರಳದ ಕೊಚ್ಚಿ ಮೂಲದ ಕುಟುಂಬವೊಂದು ಹೋಟೆಲ್‍ವೊಂದರಲ್ಲಿ ದುರಂತ ಸಾವಿಗೀಡಾಗಿದೆ.

    ಮೃತರನ್ನು ತಿರುವನಂತಪುರ ನಿವಾಸಿ ಪ್ರವೀಣ್ ಮತ್ತು ಅವರ ಪತ್ನಿ ಸರಣ್ಯ ಹಾಗೂ ಅವರ ಮೂರು ಮಕ್ಕಳಾದ ಅರ್ಚ, ಶ್ರೀಭದ್ರ ಮತ್ತು ಅಭಿನವ್ ಎಂದು ಗುರುತಿಸಲಾಗಿದೆ. ಈ ಮ ಮೂವರು ಮಕ್ಕಳ ವಯಸ್ಸು ಬೇರೆಯಾದರೂ ಜನವರಿ ಒಂದೇ ತಿಂಗಳಲ್ಲಿ ಮೂವರು ಜನಿಸಿದ್ದರು. ಹೀಗಾಗಿ ಅವರ ಹುಟ್ಟುಹಬ್ಬ ಆಚರಿಸಲು ನೇಪಾಳ ಪ್ರವಾಸಕ್ಕೆ ತೆರಳಿದ್ದು, ಅನುಮಾಸ್ಪದವಾಗಿ ಸಾವನ್ನಪ್ಪಿದ್ದಾರೆ.

    ಜನವರಿ 3 ರಂದು ಶ್ರೀಭದ್ರ, 15 ರಂದು ಅಭಿನವ್ ಮತ್ತು 31ರಂದು ಅರ್ಚ ಹುಟ್ಟುಹಬ್ಬವಿತ್ತು. ಕೊನೆಯ ಮಗ ಅಭಿನವ್ ಎಲಮಕ್ಕರದಲ್ಲಿರುವ ಸರಸ್ವತಿ ವಿದ್ಯಾನಿಕೇತನದಲ್ಲಿ ಎಲ್‍ಕೆಜಿ ಓದುತ್ತಿದ್ದ. ಮಗಳು ಶ್ರೀಭದ್ರ ಕಳೆದ ಗುರುವಾರ ಶಾಲೆಯಿಂದ ಮನೆಗೆ ಮರಳಲು ತುಂಬಾ ಖುಷಿಯಾಗಿದ್ದಳು. ನಮ್ಮ ಡ್ಯಾಡಿ ಬಂದಿದ್ದಾರೆ. ನಾವು ನೇಪಾಳ ಪ್ರವಾಸಕ್ಕೆ ಹೋಗುತ್ತಿದ್ದೇವೆ. ಒಂದು ವಾರದ ಬಳಿಕ ಊರಿಗೆ ವಾಪಸ್ ಬರುತ್ತೇವೆ ಎಂದು ಹೇಳಿದ್ದಳು ಎನ್ನಲಾಗಿದೆ.

    ಮಕ್ಕಳನ್ನು ಪ್ರತಿದಿನವು ಅವರ ತಾತ ಶಾಲೆ ಡ್ರಾಪ್ ಮಾಡುತ್ತಿದ್ದರು. ಆದರೆ ಕಳೆದ ಗುರುವಾರ ತಂದೆ ಪ್ರವೀಣ್ ತಾವೇ ಹೋಗಿ ಮಕ್ಕಳನ್ನು ಶಾಲೆಗೆ ಬಿಟ್ಟು, ಪ್ರವಾಸದ ಬಗ್ಗೆ ಶಿಕ್ಷಕರಿಗೆ ಹೇಳಿ ರಜೆ ಕೊಡಿ ಎಂದು ಮನವಿ ಮಾಡಿದ್ದಾರೆ. ಅದರಂತೆ ಮಕ್ಕಳನ್ನು ಕರೆದುಕೊಂಡು ಹುಟ್ಟುಹಬ್ಬದ ಸಂಭ್ರಮಾಚರಣೆಗೆ ನೇಪಾಳಕ್ಕೆ ಬಂದಿದ್ದರು. ಆದರೆ ನೇಪಾಳದ ಹೋಟೆಲ್‍ವೊಂದರಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾರೆ. ರೂಮಿನೊಳಗೆ ಇಡಲಾಗಿದ್ದ ಔಟ್‍ಡೋರ್ ಹೀಟರ್ ನ ವಿಷಕಾರಿ ಕಾರ್ಬನ್ ಮೊನಾಕ್ಸೈಡ್ ಸೇವನೆಯಿಂದ ಈ ಕುಟುಂಬ ಸಾವನ್ನಪ್ಪಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಹೇಳಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ.

  • ಇಂಗ್ಲೆಂಡ್‍ನಿಂದ ನೇಪಾಳಕ್ಕೆ ಓಡುತ್ತಿರುವ 73 ವರ್ಷದ ವೃದ್ಧೆ

    ಇಂಗ್ಲೆಂಡ್‍ನಿಂದ ನೇಪಾಳಕ್ಕೆ ಓಡುತ್ತಿರುವ 73 ವರ್ಷದ ವೃದ್ಧೆ

    – ಭೂಕಂಪ ಸಂತ್ರಸ್ತರ ಕುಟುಂಬಗಳಿಗೆ ನೆರವು ಸಂಗ್ರಹ

    ಇಸ್ತಾಂಬುಲ್: ಭೂಕಂಪ ಸಂತ್ರಸ್ತರ ಕುಟುಂಬಗಳಿಗೆ ನೆರವು ನೀಡಲು ಬ್ರಿಟನ್‍ನ 73 ವರ್ಷದ ರೋಸಿ ಸ್ವೆಲ್ ಪೋಪ್ ಅವರು ಇಂಗ್ಲೆಂಡ್‍ನಿಂದ ನೇಪಾಳಕ್ಕೆ ಓಡುತ್ತಿದ್ದಾರೆ.

    ‘ರನ್ ರೋಸಿ ರನ್’ ಅಭಿಯಾನದ ಅಡಿ 2018ರಲ್ಲಿ ವಿಶ್ವದಾದ್ಯಂತ ಓಡಲು ಪ್ರಾರಂಭಿಸಿದೆ. ರಾತ್ರಿ ವೇಳೆ ನಾನು ಎಲ್ಲಿ ಮಲಗುತ್ತೇನೆ ಎನ್ನುವುದು ನನಗೆ ಗೊತ್ತಿಲ್ಲ. ಕೆಲವೊಮ್ಮೆ ಹೊಲದಲ್ಲಿ, ಬೀದಿಗಳಲ್ಲಿ ಮಲಗುತ್ತೇನೆ. ಮತ್ತೆ ಬೆಳಿಗ್ಗೆ ಎದ್ದು ಓಡಲು ಪ್ರಾರಂಭಿಸಿ, ಮಾರ್ಗ ಮಧ್ಯೆ ಭೇಟಿಯಾಗುವ ಜನರನ್ನು ಮಾತನಾಡಿ ಮುಂದೆ ಸಾಗುತ್ತೇನೆ ಎಂದು ರೋಸಿ ಹೇಳಿದ್ದಾರೆ.

    ರೋಸಿ ತಮಗೆ ಬೇಕಾದ ವಸ್ತುಗಳನ್ನು ಟ್ರಾಲಿಯಲ್ಲಿ ಇಟ್ಟುಕೊಂಡಿದ್ದಾರೆ. ಅದನ್ನು ತಮ್ಮ ಸೊಂಟಕ್ಕೆ ಕಟ್ಟಿಕೊಂಡು ಓಡುತ್ತಾರೆ. ಈವರೆಗೆ ರೋಸಿ 12 ದೇಶಗಳನ್ನು ದಾಟಿದ್ದು, ಭಾನುವಾರ ಇಸ್ತಾಂಬುಲ್ ತಲುಪಿದ್ದಾರೆ. ಪ್ರತಿದಿನ ಸುಮಾರು 20 ಕಿ.ಮೀ ಓಡುವ ಅವರು, ಭೂಕಂಪ ಸಂತ್ರಸ್ತರ ಕುಟುಂಬಗಳಿಗೆ ನೆರವು ನೀಡುವಂತೆ ಮಾರ್ಗ ಮಧ್ಯೆ ಸಿಗುವ ಜನರಿಗೆ ಕೇಳಿಕೊಳ್ಳುತ್ತಾರೆ.

    ರೋಸಿ ತಮ್ಮ ಪ್ರಯಾಣದ ಉದ್ದಕ್ಕೂ ಸಿಗುವ ಜನರೊಂದಿಗೆ ಪರಿಚಯ ಮಾಡಿಕೊಳ್ಳುತ್ತಾರೆ. ಹೀಗಾಗಿ ಪ್ರಪಂಚದಾದ್ಯಂತ ಸಂಬಂಧಗಳನ್ನು ಬೆಳೆಸಿಕೊಂಡಿದ್ದಾರೆ. ರೋಸಿ ತಮ್ಮ ಪ್ರಯಾಣ ಹಾಗೂ ಮಾರ್ಗ ಮಧ್ಯೆ ಸಿಗುವ ವ್ಯಕ್ತಿಗಳ ಜೊತೆಗಿರುವ ವಿಡಿಯೋ, ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ರೋಸಿ ಅವರನ್ನು ವಿಶ್ವದ ಅತಿ ದೂರದ ಏಕವ್ಯಕ್ತಿ ಓಟಗಾರರಲ್ಲಿ ಒಬ್ಬರೆಂದು ಗುರುತಿಸಲಾಗಿದೆ. ಅವರು ಚಾರಿಟಿಗಾಗಿ ಹಣವನ್ನು ಸಂಗ್ರಹಿಸಲು 2004ರಲ್ಲಿ ಪ್ರಪಂಚದಾದ್ಯಂತ ಓಡಲು ಆರಂಭಿಸಿದರು. ರೋಸಿ 2015ರಲ್ಲಿ ಅಮೆರಿಕಾದಾದ್ಯಂತ ಓಡಿದ್ದಾರೆ. ರೋಸಿ ಅವರ ಪತಿ ಕ್ಲೈವ್ ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ನಿಧನರಾದರು. ಹೀಗಾಗಿ ಪತಿಯ ಗೌರವಾರ್ಥವಾಗಿ ರೋಸಿ ನ್ಯೂಯಾರ್ಕ್ ನಿಂದ ಸ್ಯಾನ್ ಫ್ರಾನ್ಸಿಸ್ಕೋ ವರೆಗೂ ಓಡಿದ್ದರು.

  • ಒಂದು ರನ್ ನೀಡದೆ ಆರು ವಿಕೆಟ್ ಕಿತ್ತ ನೇಪಾಳದ ಬೌಲರ್

    ಒಂದು ರನ್ ನೀಡದೆ ಆರು ವಿಕೆಟ್ ಕಿತ್ತ ನೇಪಾಳದ ಬೌಲರ್

    – 8 ಜನ ಶೂನ್ಯಕ್ಕೆ ಔಟ್, 16 ರನ್‍ಗೆ ಮಾಲ್ಡೀವ್ಸ್ ಆಲ್‍ಔಟ್
    – ಕೇವಲ 5 ಎಸೆತಗಳಲ್ಲಿ ಆಟ ಮುಗಿಸಿದ ನೇಪಾಳ ತಂಡ

    ಪೊಖಾರ್ (ನೇಪಾಳ): ಒಂದು ರನ್ ನೀಡದೆ ಆರು ವಿಕೆಟ್ ಪಡೆಯುವ ಮೂಲಕ ಮಹಿಳಾ ಟಿ-20 ಕ್ರಿಕೆಟ್‍ನಲ್ಲಿ ನೇಪಾಳದ ಬೌಲರ್ ಅಂಜಲಿ ಚಾಂದ್ ದಾಖಲೆ ಬರೆದಿದ್ದಾರೆ.

    ಸೌತ್ ಏಷ್ಯನ್ ಗೇಮ್ಸ್ ಟೂರ್ನಿಯಲ್ಲಿ ಸೋಮವಾರ ನಡೆದ ಮಾಲ್ಡೀವ್ಸ್ ಮಹಿಳಾ ತಂಡದ ವಿರುದ್ಧದ ಟಿ-20 ಪಂದ್ಯದಲ್ಲಿ ಅಂಜಲಿ ಈ ದಾಖಲೆ ಮಾಡಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಮಾಲ್ಡೀವ್ಸ್ ಆರಂಭದಲ್ಲಿಯೇ ಆಘಾತಕ್ಕೆ ತುತ್ತಾಯಿತು. 10.1 ಓವರ್ ಆಡಿದ ಮಾಲ್ಡೀವ್ಸ್ ಹಮ್ಜಾ ನಿಯಾಜ್ 9 ರನ್ ( 11 ಎಸೆತ, 2 ಬೌಂಡರಿ), ಅಫ್ತಾ ಅಬ್ದುಲ್ಲಾ 4 ರನ್ (10 ಎಸೆತ, ಬೌಂಡರಿ) ಸಹಾಯದಿಂದ 16 ಗಳಿಸಲು ಶಕ್ತವಾಯಿತು. ಉಳಿದಂತೆ 8 ಜನರ ಆಟಗಾರರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಇದನ್ನೂ ಓದಿ: ಹ್ಯಾಟ್ರಿಕ್ ಸಾಧನೆ ಬಳಿಕ 88 ಸ್ಥಾನ ಜಿಗಿದ ದೀಪಕ್ ಚಹರ್

    ಮಾಲ್ಡೀವ್ಸ್ ವಿರುದ್ಧ ಅಂಜಲಿ ಚಾಂದ್ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿ ಮಿಂಚಿದ್ದಾರೆ. 2.1 ಓವರ್ ಮಾಡಿ (13 ಎಸೆತಗಳಲ್ಲಿ) ಒಂದೇ ಒಂದು ನೀಡದೆ ಎರಡು ಮೆಡನ್ ಸಹಿತ ಅಂಜಲಿ ಆರು ವಿಕೆಟ್ ಕಿತ್ತಿದ್ದಾರೆ. ಮಾಲ್ಡೀವ್ಸ್‍ನ ಮಾಸ್ ಎಲಿಸಾ ಈ ವರ್ಷದ ಆರಂಭದಲ್ಲಿ ಚೀನಾ ಮಹಿಳಾ ಕ್ರಿಕೆಟ್ ತಂಡದ ವಿರುದ್ಧದ ಟಿ-20 ಪಂದ್ಯದಲ್ಲಿ 3 ರನ್ ನೀಡಿ 6 ವಿಕೆಟ್ ಪಡೆದಿದ್ದರು.

    ಮಾಲ್ಡೀವ್ಸ್ ಒಡ್ಡಿದ ಕನಿಷ್ಠ 16 ರನ್‍ಗಳ ಮೊತ್ತವನ್ನು ನೇಪಾಳ ತಂಡವು ಕೇವಲ 5 ಎಸೆತಗಳಲ್ಲಿ ಪೇರಿಸಿ, 10 ವಿಕೆಟ್‍ಗಳಿಂದ ಭರ್ಜರಿ ಗೆಲವು ಸಾಧಿಸಿದೆ. ನೇಪಾಳ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಕೆ.ಶ್ರೇಷ್ಠಾ 5 ಎಸೆತಗಳಲ್ಲಿ 3 ಬೌಂಡರಿ ಸಹಾಯದಿಂದ 13 ಗಳಿಸಿದರು. ಉಳಿದಂತೆ ಇತರೆ 4 ರನ್‍ನಿಂದ ನೇಪಾಳ ಗೆದ್ದು ಬೀಗಿದೆ.

  • ಪಾಸ್‍ಪೋರ್ಟ್ ನವೀಕರಿಸದಿದ್ದರೂ ನಿತ್ಯಾನಂದ ಈಕ್ವೇಡಾರ್‌ಗೆ ಪರಾರಿ?

    ಪಾಸ್‍ಪೋರ್ಟ್ ನವೀಕರಿಸದಿದ್ದರೂ ನಿತ್ಯಾನಂದ ಈಕ್ವೇಡಾರ್‌ಗೆ ಪರಾರಿ?

    ನವದೆಹಲಿ: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಎಲ್ಲಿದ್ದಾನೆ ಎಂಬುದಕ್ಕೆ ಯಾವುದೇ ಸ್ಪಷ್ಟನೆ ಸಿಗುತ್ತಿಲ್ಲ. ನಿತ್ಯಾನಂದ ದೇಶದಲ್ಲಿ ಅಡಗಿ ಕುಳಿತಿರಬಹುದು ಅಥವಾ ನೇಪಾಳ ಮೂಲಕ ಭಾರತವನ್ನು ತೊರೆದಿರಬಹುದು ಎಂದು ವರದಿಗಳು ತಿಳಿಸಿವೆ.

    ನಿತ್ಯಾನಂದನಿಗೆ ಸೇರಿದ ಅಹಮದಾಬಾದ್‍ನ ಆಶ್ರಮದಿಂದ ಇಬ್ಬರು ಬಾಲಕಿಯರು ಸೇರಿದಂತೆ ಮೂವರು ಅಪ್ರಾಪ್ತ ಮಕ್ಕಳನ್ನು ಅಪಹರಿಸಲಾಗಿದೆ ಎಂದು ಮಕ್ಕಳ ಪೋಷಕರು ಗುಜರಾತ್ ಪೊಲೀಸರು ದೂರು ನೀಡಿದ್ದಾರೆ. ಈ ಸಂಬಂಧ ನಿತ್ಯಾನಂದನ ವಿರುದ್ಧ ಮಕ್ಕಳ ಮೇಲೆ ದೌರ್ಜನ್ಯ ಮತ್ತು ಅಪಹರಣ ಪ್ರಕರಣ ದಾಖಲಾಗಿದ್ದು, ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ.  ಇದನ್ನೂ ಓದಿ: ಸ್ವ ಇಚ್ಛೆಯಿಂದ ಸನ್ಯಾಸತ್ವ ಸ್ವೀಕರಿಸಿದ್ದೇನೆ, ಇದು ನನ್ನ ಬದುಕು – ತಂದೆಗೆ ಮಗಳ ಖಡಕ್ ಉತ್ತರ

    2010ರಲ್ಲಿ ನಿತ್ಯಾನಂದನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಅತ್ಯಾಚಾರ ಪ್ರಕರಣದ ಸಂಬಂಧ 2011ರಲ್ಲಿ ನಿತ್ಯಾನಂದನ ಪಾಸ್‍ಪೋರ್ಟ್ ವಶಕ್ಕೆ ಪಡೆಯಲಾಗಿತ್ತು. ಆದಾಗ್ಯೂ, ಧ್ಯಾನ ಮತ್ತು ಯೋಗ ಶಿಬಿರಗಳನ್ನು ನಡೆಸಲು ಮಾನಸರೋವರ್ ಹಾಗೂ ಇತರ ಸ್ಥಳಗಳಿಗೆ ಪ್ರಯಾಣಿಸಲು ನಿತ್ಯಾನಂದ ತನ್ನ ಪಾಸ್‍ಪೋರ್ಟ್ ಕೇಳಿದ್ದ. ಇದರಿಂದಾಗಿ ಪಾಸ್‍ಪೋರ್ಟ್ ಹಸ್ತಾಂತರಿಸಲಾಗಿತ್ತು. ಇದನ್ನೂ ಓದಿ: ನಾನು ಹೇಳಿದ್ದಕ್ಕೆ ತಡವಾಗಿ ಉದಯಿಸಿದ – ಸೂರ್ಯನಿಗೆ ನಿತ್ಯಾನಂದ ಆರ್ಡರ್

    ವರದಿಗಳ ಪ್ರಕಾರ, ನಿತ್ಯಾನಂದ 2018ರ ಆಗಸ್ಟ್  ನಿಂದ ಯಾವುದೇ ಆಶ್ರಮಗಳಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ನೇಪಾಳದ ಮೂಲಕ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ನಿತ್ಯಾನಂದನ ಪಾಸ್‍ಪೋರ್ಟ್ ಅವಧಿ ಸೆಪ್ಟೆಂಬರ್ 2018ರಲ್ಲಿ ಮುಕ್ತಾಯಗೊಂಡಿದ್ದು, ಅತ್ಯಾಚಾರ ಪ್ರಕರಣದಿಂದಾಗಿ ನವೀಕರಿಸಲಾಗಿಲ್ಲ. ಹೀಗಾಗಿ ನೇಪಾಳದ ಮೂಲಕ ಈಕ್ವೆಡಾರ್‍ಗೆ ತೆರಳಿರಬಹುದು ಎಂದು ಶಂಕಿಸಲಾಗಿದೆ. ಈ ಮಧ್ಯೆ ತನ್ನ ಯೂಟ್ಯೂಬ್ ಚಾನೆಲ್‍ನಲ್ಲಿ ಕಾಣಿಸಿಕೊಂಡ ನಿತ್ಯಾನಂದ, ಭಾರತದಲ್ಲಿಯೇ ಇದ್ದೇನೆ ಎಂದು ಹೇಳಿದ್ದಾನೆ. ಆದರೆ ಸ್ಥಳದ ಬಗ್ಗೆ ಸ್ಪಷ್ಟನೆ ನೀಡಿಲ್ಲ.

    2010ರಲ್ಲಿ ನಿತ್ಯಾನಂದನನ್ನು ಒಳಗೊಂಡ ಸೆಕ್ಸ್ ಟೇಪ್ ಬಿಡುಗಡೆಯಾದಾಗ ಆತನು ಪರಾರಿಯಾಗಿದ್ದ. ಆದರೆ ಕೆಲ ದಿನಗಳ ಬಳಿಕ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪತ್ತೆಯಾಗಿದ್ದ. ಹೀಗಾಗಿ ಈಗಲೂ ಭಾರತದಲ್ಲಿರಬಹುದು ಎಂಬ ಊಹಾಪೋಹಗಳಿಗೆ ಕೇಳಿ ಬರುತ್ತಿವೆ.

    ನಿತ್ಯಾನಂದನ ಆಶ್ರಮಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವುದು ಇದೇ ಮೊದಲಲ್ಲ. 2008ರಲ್ಲಿ ಅಪ್ರಾಪ್ತ ಬಾಲಕನೊಬ್ಬ ಅನಾರೋಗ್ಯಕ್ಕೆ ಬಳಲುತ್ತಿದ್ದಾಗ ಆತನನ್ನು ನಿತ್ಯಾನಂದನ ಅನುಯಾಯಿಗಳು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಬಾಲಕ, ತನ್ನನ್ನು ಕೊಲ್ಲಲು ಯತ್ನಿಸಿದ್ದಾರೆ ಎಂದು ವೈದ್ಯರಿಗೆ ಮಾಹಿತಿ ನೀಡಿದ್ದ.

    ನಿತ್ಯಾನಂದ ಪ್ರಸ್ತುತ ಎಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ ಎಂದು ಗುರುವಾರ ವಿದೇಶಾಂಗ ಸಚಿವಾಲಯ ಹೇಳಿದೆ. ಆತನ ಬಗ್ಗೆ ಗುಜರಾತ್ ಪೊಲೀಸರಿಂದ ಹಾಗೂ ಗೃಹ ವ್ಯವಹಾರ ಸಚಿವಾಲಯದಿಂದ (ಎಂಎಚ್‍ಎ) ಯಾವುದೇ ಮಾಹಿತಿ ಬಂದಿಲ್ಲ. ಅಹಮದಾಬಾದ್‍ನ ಹೊರವಲಯದಲ್ಲಿರುವ ನಿತ್ಯಾನಂದನ ಹಿರಾಪುರ ಆಶ್ರಮದಿಂದ ಮೂವರು ಅಪ್ರಾಪ್ತ ಮಕ್ಕಳನ್ನು (ಒಬ್ಬ ಹುಡುಗ ಮತ್ತು ಇಬ್ಬರು ಹುಡುಗಿಯರು) ರಕ್ಷಿಸಿ ಪೋಷಕರಿಗೆ ಒಪ್ಪಿಸಲಾಗಿದೆ. ನಿತ್ಯಾನಂದ ವಿರುದ್ಧ ಗುಜರಾತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

  • ಕೊಳ್ಳೆಗಾಲದಲ್ಲಿ ನೇಣು ಬಿಗಿದುಕೊಂಡ ನೇಪಾಳದ ಯುವಕ

    ಕೊಳ್ಳೆಗಾಲದಲ್ಲಿ ನೇಣು ಬಿಗಿದುಕೊಂಡ ನೇಪಾಳದ ಯುವಕ

    ಚಾಮರಾಜನಗರ: ನೇಪಾಳದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದ ಕೊಳ್ಳೇಗಾಲ ಪಟ್ಟಣದಲ್ಲಿ ನಡೆದಿದೆ.

    ಕೊಳ್ಳೇಗಾಲದ ಓಂ ಶಕ್ತಿ ದೇವಸ್ಥಾನದ ರಸ್ತೆಯ ಚಿಲ್ಲರೆ ಅಂಗಡಿಯೊಂದರ ಬಳಿ ಘಟನೆ ನಡೆದಿದ್ದು, ಅತಿನ್ ಖಡ್ಕ (28) ಎಂಬಾತ ನೇಣಿಗೆ ಶರಣಾಗಿರುವ ನೇಪಾಳಿ ಯುವಕ. ಮೃತ ಯುವಕನ ಬಟ್ಟೆಯಲ್ಲಿ ದೊರೆತ ಪಾಸ್ ಪೋರ್ಟ್‍ನಿಂದ ಹೆಸರು ವಿಳಾಸ ತಿಳಿದು ಬಂದಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

    ಚಿಲ್ಲರೆ ಅಂಗಡಿಯೊಂದರ ಮುಂಭಾಗದ ಸಜ್ಜೆಗೆ ಅಳವಡಿಸಲಾಗಿದ್ದ ಕಬ್ಬಿಣದ ಕೊಕ್ಕೆಗೆ ಪ್ಲಾಸ್ಟಿಕ್ ವೈರ್‍ನಿಂದ ನೇಣು ಬಿಗಿದುಕೊಂಡಿದ್ದಾನೆ. ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ಅಕಸ್ಮಿಕವಾಗಿ ಹೊರ ಬಂದ ಸ್ಥಳೀಯ ನಿವಾಸಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಕಂಡು ಗಾಬರಿಯಾಗಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

    ಸ್ಥಳಕ್ಕಾಗಮಿಸಿದ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಪರಿಶೀಲಿಸಿ, ಮೃತನ ವಾರಸುದಾರರ ಪತ್ತೆಗಾಗಿ ಒಡೆಯರಪಾಳ್ಯ ಟಿಬೆಟ್ ಕ್ಯಾಂಪ್‍ಗೆ ಮಾಹಿತಿ ನೀಡಿದ್ದರೆ. ಶವವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಇರಿಸಲಾಗಿದೆ.