Tag: ನೇಪಾಳ

  • ರಾಮೇಶ್ವರದಲ್ಲಿರುವ ರಾಮನಾಥನಿಗೆ ಪೂಜೆ – ಶೃಂಗೇರಿ ಶ್ರೀಗಳಿಂದ ದೀಕ್ಷೆ

    ರಾಮೇಶ್ವರದಲ್ಲಿರುವ ರಾಮನಾಥನಿಗೆ ಪೂಜೆ – ಶೃಂಗೇರಿ ಶ್ರೀಗಳಿಂದ ದೀಕ್ಷೆ

    ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ಮಠದ ಜಗದ್ಗುರು ಶ್ರೀ ಭಾರತೀತೀರ್ಥ ಜಗದ್ಗುರುಗಳು ತಮಿಳುನಾಡಿನ ರಾಮೇಶ್ವರ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಲು ಶ್ರೀ ರಾಮೇಶ್ವರ ದೇವಾಲಯದ ಅರ್ಚಕ ಶರವಣನ್ ರಾನಡೆ ಅವರಿಗೆ ದೀಕ್ಷೆ ನೀಡಿದ್ದಾರೆ.

    ರಾಮೇಶ್ವರದಲ್ಲಿರುವ ಶ್ರೀ ರಾಮನಾಥ ಸ್ವಾಮಿಗೆ ಯಾರು ಪೂಜೆ ಮಾಡಬೇಕು ಎಂದು ಜಗದ್ಗುರು ಶ್ರೀ ಆದಿಶಂಕರಾಚಾರ್ಯರು ಕಟ್ಟುನಿಟ್ಟಿನ ಸಂಪ್ರದಾಯ ಮತ್ತು ನಿರ್ಬಂಧಗಳನ್ನು ಹಾಕಿದ್ದಾರೆ. ಈ ಹಕ್ಕನ್ನು ನೇಪಾಳದ ಮಹಾರಾಜರು ಪಡೆದಿದ್ದು ಶೃಂಗೇರಿ ಮಠದ ಗುರು ಪರಂಪರೆ ಇದನ್ನ ದೈವಿಕವಾಗಿ ಪಡೆದಿದೆ. ಇದನ್ನೂ ಓದಿ: ತುರುವೆಕೆರೆಯಲ್ಲಿ ಮಳೆ ಅಬ್ಬರ- ರೈತರ ಮೊಗದಲ್ಲಿ ಮಂದಹಾಸ

    ನಿರ್ದಿಷ್ಟ ಸಮುದಾಯದಿಂದ ಬರುವ ಅರ್ಚಕರು ಶೃಂಗೇರಿ ಮಠದ ಜಗದ್ಗುರುಗಳಿಂದ ಮಂತ್ರೋಪದೇಶ ದೀಕ್ಷೆ ಸ್ವೀಕರಿಸಿದ ನಂತರವೇ ಶ್ರೀ ರಾಮನಾಥ ಸ್ವಾಮಿಯ ಸೇವೆ ಮಾಡಬಹುದು ನಿಯಮವಿದೆ. ಹಾಗಾಗಿ, ರಾಮೇಶ್ವರಂ ಕ್ಷೇತ್ರದ ಅರ್ಚಕ ಶರವಣನ್ ರಾನಡೆ ಅವರು ಶೃಂಗೇರಿ ಕ್ಷೇತ್ರಕ್ಕೆ ಭೇಟಿ ನೀಡಿ ಭಾರತೀತೀರ್ಥ ಸ್ವಾಮೀಜಿಗಳಿಂದ ಮಂತ್ರೋಪದೇಶ ದೀಕ್ಷೆ ಪಡೆದಿದ್ದಾರೆ.

    ಐತಿಹಾಸಿಕವಾಗಿ ಶೃಂಗೇರಿ ದಕ್ಷಿಣಾಮ್ನಯ ಮಹಾಸಂಸ್ಥಾನ ಪೀಠ ಹಾಗೂ ರಾಮೇಶ್ವರ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ಜಗದ್ಗುರು ಶ್ರೀ ಆದಿಶಂಕರಾಯಚಾರ್ಯರು ಮತ್ತು ರಾಮೇಶ್ವರ ದೇವಾಲದಯದ ಧಾರ್ಮಿಕ ಆಚರಣೆ ಮತ್ತು ಸಂವಿಧಾನದ 25ನೇ ಪರಿಚ್ಛೇದದ ಅಡಿಯಲ್ಲಿ ಖಾತ್ರಿಪಡಿಸಿದ ಮೂಲಭೂತ ಹಕ್ಕು ಕೂಡ ಆಗಿದೆ. ಆದ್ದರಿಂದ ಗುರುಭವನದಲ್ಲಿ ನಡೆದ ವಿವಿಧ ಧಾರ್ಮಿಕ ವಿಧಿವಿಧಾನದ ನಂತರ ಶೃಂಗೇರಿ ಪೀಠದ ಜಗದ್ಗುರುಗಳು ರಾಮೇಶ್ವರ ದೇವಾಲಯದ ಅರ್ಚಕರಿಗೆ ದೀಕ್ಷೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ವಿಧುಶೇಖರ ಭಾರತೀತೀರ್ಥ ಸ್ವಾಮೀಜಿಗಳು ಇದ್ದರು.

  • 4 ದಿನ ನೇಪಾಳದಲ್ಲಿ ಶಾಲಾ, ಕಾಲೇಜುಗಳು ಬಂದ್‌

    4 ದಿನ ನೇಪಾಳದಲ್ಲಿ ಶಾಲಾ, ಕಾಲೇಜುಗಳು ಬಂದ್‌

    ಕಠ್ಮಂಡು: ಮುಂದಿನ 4 ದಿನಗಳ ಕಾಲ ರಾಷ್ಟ್ರದಲ್ಲಿರುವ ಎಲ್ಲ ಶಾಲೆ ಮತ್ತು ಕಾಲೇಜುಗಳನ್ನು ಬಂದ್‌ ಮಾಡುವ ನಿರ್ಧಾರವನ್ನು ನೇಪಾಳ ಸರ್ಕಾರ ಕೈಗೊಂಡಿದೆ.

    ಕೊರೊನಾ ಕಾರಣಕ್ಕೆ ಶಾಲೆಗಳು ಬಂದ್‌ ಆಗುತ್ತಿಲ್ಲ. ವಿಪರೀತ ವಾಯುಮಾಲಿನ್ಯ ಕಾರಣದಿಂದ ಇದೇ ಮೊದಲ ಬಾರಿಗೆ ಏಪ್ರಿಲ್‌ 2ರವರೆಗೆ ಶಾಲೆ, ಕಾಲೇಜುಗಳನ್ನು ಬಂದ್‌ ಮಾಡಲಾಗುತ್ತಿದೆ.

    ದಿನೇ ದಿನೇ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದ್ದು, ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹೇಳಿದೆ.

    ಉಸಿರಾಟ ಸಮಸ್ಯೆ ಮತ್ತು ಇತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಜನರು ಮನೆಯಿಂದ ಹೊರಬಂದರೆ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ಸರ್ಕಾರ ತಿಳಿಸಿದೆ.

    ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಕಾಡ್ಗಿಚ್ಚು ಆರಂಭವಾಗಿದ್ದು, ಮಾನ್ಸೂನ್ ಪ್ರಾರಂಭವಾಗುವವರೆಗೂ ಮುಂದುವರಿಯುತ್ತದೆ. ಏಪ್ರಿಲ್ ಕೊನೆಯ ವಾರದಲ್ಲಿ ಗರಿಷ್ಠ ಪ್ರಮಾಣದಲ್ಲಿ ಕಾಡ್ಗಿಚ್ಚು ಸಂಭವಿಸುತ್ತದೆ.

    ಅರಣ್ಯ ಮತ್ತು ಪರಿಸರ ಸಚಿವಾಲಯದ ಪ್ರಕಾರ, ನೇಪಾಳದಾದ್ಯಂತ ಇಲ್ಲಿಯವರೆಗೆ 480 ಕಾಡ್ಗಿಚ್ಚು ಪ್ರಕರಣಗಳು ವರದಿಯಾಗಿದೆ. ಪ್ರಮುಖ ನಗರಗಳ ವಾಯು ಗುಣಮಟ್ಟವು ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಶುಕ್ರವಾರ ಕಠ್ಮಂಡು ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ  ಪಡೆದಿತ್ತು.

    ವಾಯು ಮಾಲಿನ್ಯದ ಪ್ರಮಾಣದ ಎಷ್ಟಿದೆ ಎಂದರೆ ಹತ್ತಿರದಲ್ಲಿ ಕಾಣುತ್ತಿದ್ದ ಬೆಟ್ಟ ಗುಡ್ಡಗಳು ಸಹ ಕಾಣುತ್ತಿಲ್ಲ. ಕಳೆದ ಬುಧವಾರದಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ಕಂಪನಿಗಳು ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ.

  • ಭಾರತೀಯ ಸೇನೆಯಿಂದ ನೇಪಾಳದ ಸೇನೆಗೆ 1 ಲಕ್ಷ ಕೊರೊನಾ ಲಸಿಕೆ ಗಿಫ್ಟ್

    ಭಾರತೀಯ ಸೇನೆಯಿಂದ ನೇಪಾಳದ ಸೇನೆಗೆ 1 ಲಕ್ಷ ಕೊರೊನಾ ಲಸಿಕೆ ಗಿಫ್ಟ್

    ನವದೆಹಲಿ: ಕೊರೊನಾ ಮಾಹಾಮಾರಿಗೆ ಲಸಿಕೆ ಕಂಡು ಹಿಡಿದಿರುವ ಭಾರತ ಹಲವು ದೇಶಗಳಿಗೆ ಈಗಾಗಲೇ ಲಸಿಕೆಯನ್ನು ನೀಡಿ ಸಹಾಯ ಮಾಡಿದೆ. ಇದೀಗ ಭಾರತೀಯ ಸೇನೆ, ನೇಪಾಳದ ಸೇನೆಗೆ 1 ಲಕ್ಷ ಡೋಸ್ ಲಸಿಕೆಯನ್ನು ಉಡುಗೊರೆಯಾಗಿ ನೀಡಿದೆ.

    ಭಾರತದ ಪಕ್ಕದ ರಾಷ್ಟ್ರವಾಗಿರುವ ನೇಪಾಳ ಕೊರೊನಾದಿಂದಾಗಿ ನಲುಗಿ ಹೋಗಿತ್ತು. ಹಾಗಾಗಿ ಭಾರತೀಯ ಸೇನೆ ತ್ರಿಭುವನ್ ಇಂಟರ್ ನ್ಯಾಷನಲ್ ಏರ್ ಪೋರ್ಟ್‍ನಲ್ಲಿ ಕೋವಿಡ್ ಲಸಿಕೆಯನ್ನು ನೇಪಾಳದ ಸೇನೆಗೆ ಗಿಫ್ಟ್ ಆಗಿ ನೀಡಿದೆ. ಈ ಮೂಲಕ ಭಾರತ ಮತ್ತು ನೇಪಾಳದ ಸಂಬಂಧ ಇನ್ನಷ್ಟು ಗಟ್ಟಿಗೊಂಡಂತಾಗಿದೆ.

    ಭಾರತದ ಸೇನೆ ನೇಪಾಳದ ಸೇನೆಗೆ ಉಡುಗೊರೆಯಾಗಿ ಲಸಿಕೆಯನ್ನು ನೀಡಿರುವ ಕುರಿತು ಭಾರತೀಯ ರಾಯಭಾರ ಕಚೇರಿ ಟ್ಟಿಟ್ಟರ್‍ ನಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ತಿಳಿಸಿದೆ. ಈ ಮೊದಲು ಚೀನಾ ನೇಪಾಳಕ್ಕೆ 8 ಲಕ್ಷ ಲಸಿಕೆ ನೀಡಿತ್ತು.

  • ಪತಿಯನ್ನು ಹೆಗಲ ಮೇಲೆ ಹೊತ್ತು ಓಡಿದ ಮಹಿಳೆಯರು

    ಪತಿಯನ್ನು ಹೆಗಲ ಮೇಲೆ ಹೊತ್ತು ಓಡಿದ ಮಹಿಳೆಯರು

    ಕಠ್ಮಂಡು: ಗಂಡದಿರು ಪತ್ನಿಯನ್ನು ಹೆಗಲ ಮೇಲೆ ಹೊತ್ತು ಓಡುವುದು ಸಾಮಾನ್ಯ. ಆದರೆ ನೇಪಾಳದಲ್ಲಿ ಪತ್ನಿಯರು ಗಂಡದಿರನ್ನು ಹೆಗಲ ಮೇಲೆ ಹೊತ್ತುಕೊಂಡು ಓಡುವ ಸ್ಪರ್ಧೆಯೊಂದರಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.

    ಮಹಿಳಾ ದಿನಾಚರಣೆಯ ಅಂಗವಾಗಿ ದೇವ್ಘಾಟ್ ಗ್ರಾಮವೊಂದರ ಸ್ಥಳೀಯ ಶಾಲೆಯ ಆಡಳಿತ ಮಂಡಳಿ ಆಯೋಜಿಸಿದ್ದ 100 ಮೀ. ಓಡುವ ರೇಸ್ ಸ್ಪರ್ಧೆಯಲ್ಲಿ ವಿವಾಹಿತ ಮಹಿಳೆಯರು ತಮ್ಮ ಪತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಓಡಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿವಿಧ ವಯೋಮಾನದ 16 ಜೋಡಿಗಳು ಭಾಗವಹಿಸಿದ್ದರು.

    ಈ ಸುದ್ದಿ ಹಬ್ಬುತ್ತಿದಂತೆಯೇ ರಾಜಧಾನಿ ಕಠ್ಮಂಡುವಿನಿಂದ 150 ಕಿಲೋ ಮೀಟರ್ ದೂರದಲ್ಲಿರುವ ಶಾಲೆಯ ಮೈದಾನಕ್ಕೆ ಪಂದ್ಯ ವೀಕ್ಷಿಸಲು ಹಳ್ಳಿಯ ಸುತ್ತಮುತ್ತಲಿನ ಜನರು ಗುಂಪು ಗುಂಪಾಗಿ ಸೇರಿದ್ದರು. ಅಲ್ಲದೆ ಪಂದ್ಯದಲ್ಲಿ ಭಾಗವಹಿಸಿದ ಪ್ರತಿ ದಂಪತಿಗೂ ಪ್ರಮಾಣಪತ್ರ ನೀಡಿ ಶ್ಲಾಘಿಸಲಾಯಿತು.

    ಪಂದ್ಯದಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರು, ಈ ಸ್ಪರ್ಧೆಯಲ್ಲಿ ಭಾಗವಹಿಸಲು ನಾನು ತುಂಬಾ ಧೈರ್ಯ ಮಾಡಿ ಬಂದಿದ್ದೆ. ನಾನು ಸ್ಪರ್ಧೆಯಲ್ಲಿ ಉತ್ತಮ ಸ್ಥಾನ ಪಡೆಯದೇ ಇದ್ದರೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಮತ್ತು ಗೌರವ ನೀಡುತ್ತಿರುವುದಕ್ಕೆ ನನಗೆ ಬಹಳ ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ.

  • ಮೌಂಟ್ ಎವರೆಸ್ಟ್ ಎತ್ತರ ಮತ್ತಷ್ಟು ಹೆಚ್ಚಿದೆ: ನೇಪಾಳ, ಚೀನಾ

    ಮೌಂಟ್ ಎವರೆಸ್ಟ್ ಎತ್ತರ ಮತ್ತಷ್ಟು ಹೆಚ್ಚಿದೆ: ನೇಪಾಳ, ಚೀನಾ

    ನವದೆಹಲಿ: ವಿಶ್ವದ ಅತೀ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಎತ್ತರ ಮತ್ತಷ್ಟು ಹೆಚ್ಚಿದೆ ಎಂದು ನೇಪಾಳ ಹಾಗೂ ಚೀನಾ ಹೇಳಿವೆ.

    ಹೊಸ ಅಧ್ಯಯನದ ಪ್ರಕಾರ ಮೌಂಟ್ ಎವರೆಸ್ಟ್ ಎತ್ತರ 8,848.86 ಮೀಟರ್ ಎಂದು ನೇಪಾಳ ಮತ್ತು ಚೀನಾ ಜಂಟಿಯಾಗಿ ಘೋಷಣೆ ಮಾಡಿವೆ. ಈ ಮೂಲಕ ಮೌಂಟ್ ಎವರೆಸ್ಟ್ ಮತ್ತಷ್ಟು ಎತ್ತರ ಬೆಳೆದಿದೆ. 1954ಕ್ಕೆ ಹೋಲಿಸಿದರೆ ಮೌಂಟ್ ಎವರೆಸ್ಟ್ ಎತ್ತರ 86 ಸೆಂಟಿಮೀಟರ್ ಹೆಚ್ಚಿದೆ ಎಂದು ತಿಳಿಸಿದೆ.

    2015ರಲ್ಲಿ ಸಂಭವಿಸಿದ ಭೂಕಂಪ ಸೇರಿದಂತೆ ಹಲವು ಕಾರಣಗಳಿಂದಾಗಿ ಪರ್ವತದ ಎತ್ತರ ಹೆಚ್ಚಿರಬಹುದು ಎನ್ನಲಾಗಿದ್ದು, ನೇಪಾಳ ಸರ್ಕಾರ ನಿರ್ಧರಿಸಿತ್ತು. ಇದೀಗ ಎರಡೂ ದೇಶಗಳು ಮೌಂಟ್ ಎವರೆಸ್ಟ್ ಎತ್ತರ ಹೆಚ್ಚಿದ ಕುರಿತು ಘೋಷಿಸಿವೆ. 1954ರಲ್ಲ ಭಾರತದ ನಡೆಸಿದ ಸಮೀಕ್ಷೆ ಪ್ರಕಾರ ಮೌಂಟ್ ಎವರೆರಸ್ಟ್ ಎತ್ತರ 8,848 ಮೀ. ಇತ್ತು. ಬಳಿಕ 1975 ಹಾಗೂ 2005ರಲ್ಲಿ ಚೀನಾದ ಸರ್ವೇಯರ್‍ಗಳು ನಡೆಸಿದ 6 ಸುತ್ತಿನ ಸಮೀಕ್ಷೆ ಹಾಗೂ ಸಂಶೋಧನೆಯಲ್ಲಿ ಮೌಂಟ್ ಎವರೆಸ್ಟ್ ಎತ್ತರ 8,848.13 ಮೀಟರ್ ಹಾಗೂ 8,844.43 ಮೀ. ಎಂದು ದಾಖಲಿಸಲಾಗಿದೆ.

    ಮೌಂಟ್ ಎವರೆಸ್ಟ್ ತುದಿಯ ಮೂಲಕ ಗಡಿ ರೇಖೆ ಸಾಗುವುದಕ್ಕೆ ಒಪ್ಪಿಗೆ ನೀಡಿ 1961ರಲ್ಲಿ ಚೀನಾ ಹಾಗೂ ನೇಪಾಳ ಗಡಿ ಸಮಸ್ಯೆಯನ್ನು ಇತ್ಯರ್ಥಗೊಳಡಿಸಿಕೊಂಡಿದ್ದವು. ಮೌಂಟ್ ಎವರೆಸ್ಟ್ ನಿಖರ ಎತ್ತರ ಪತ್ತೆಯಿಂದ ಹಿಮಾಲಯ ಹಾಗೂ ಕ್ವಿನ್‍ಘೈ-ಟಿಬೆಟ್ ಪ್ರಸ್ಥಭೂಮಿಯಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಅಧ್ಯಯನ ನಡೆಸಲು ಸಹಕಾರಿಯಾಗಲಿದೆ ಎಂದು ಚೈನೀಶ್ ಅಕಾಡೆಮಿ ಆಫ್ ಸೈನ್ಸ್ ನ ವಿಜ್ಞನಿ ಗಾವ್ ಡೆಂಗೈ ತಿಳಿಸಿದ್ದಾರೆ.

    ಪೀಕ್ ಕ್ಲೈಂಬಿಂಗ್ ವೇಳೆ 2015ರಲ್ಲಿ ಸಂಭವಿಸಿದ ಭಾರೀ ಭೂಕಂಪನದಿಂದ ನೇಪಾಳದ ಸುಮಾರು 9 ಸಾವಿರ ಜನ ಸಾವನ್ನಪ್ಪಿದ್ದರು. ವಿಶ್ವದಲ್ಲಿನ ಅತೀ ಎತ್ತರದ 14 ಶಿಖರಗಳ ಪೈಕಿ ನೇಪಾಳದಲ್ಲಿ 7 ಪರ್ವತ ಶಿಖರಗಳಿವೆ. ಇದೀಗ ಎವರೆಸ್ಟ್ ಅಳತೆ ಮಾಡಲು ಕಳೆದ ವರ್ಷ ಮೇನಲ್ಲಿ ಸರ್ವೇ ತಂಡವನ್ನು ಕಳುಹಿಸಿತ್ತು.

  • ಭಾರತದ ವರ, ನೇಪಾಳದ ವಧು- 15 ನಿಮಿಷದಲ್ಲಿ ನಡೆದ ಮದುವೆ

    ಭಾರತದ ವರ, ನೇಪಾಳದ ವಧು- 15 ನಿಮಿಷದಲ್ಲಿ ನಡೆದ ಮದುವೆ

    -ಮದ್ವೆಗಾಗಿ ತೆರೆದ ಸೇತುವೆ

    ನವದೆಹಲಿ: ಭಾರತ ಮತ್ತು ನೇಪಾಳದ ಗಡಿಯಲ್ಲೊಂದು ವಿಶೇಷ ಮದುವೆ ನಡೆದಿದೆ. ಈ ಮದುವೆಗಾಗಿ ಎರಡೂ ದೇಶಗಳ ನಡುವಿನ ಸೇತುವೆಯನ್ನು ತೆರೆಯಲಾಗಿದ್ದು, 15 ನಿಮಿಷದಲ್ಲಿ ವಿವಾಹ ನೆರವೇರಿದೆ.

    ಉತ್ತರಾಖಂಡ ಪಿಥೌರಾಗಢ ನಿವಾಸಿ ಕಮಲೇಶ್ ಮತ್ತು ನೇಪಾಳದ ದಾರ್ಚುಲಾದ ರಾಧಿಕಾ ಸಾಂಸರಿಕ ಜೀವನಕ್ಕೆ ಕಾಲಿಟ್ಟ ನವ ದಂಪತಿ. ಇಬ್ಬರ ಮದುವೆ ಮಾರ್ಚ್ 22ರಂದು ನಿಗದಿಯಾಗಿತ್ತು. ಆದ್ರೆ ಕೊರೊನಾ ಮಾಹಾಮಾರಿಯಿಂದ ಮದುವೆ ದಿನಾಂಕವನ್ನು ಎರಡೂ ಕುಟುಂಬಗಳು ಮುಂದೂಡುತ್ತಾ ಬಂದಿದ್ದವು.

    ಮದುವೆ ಮುಂದೂಡುತ್ತಾ ಬಂದಾಗ ಯುವಕ ಮತ್ತು ಯುವತಿ ಗಡಿಯಲ್ಲಿಯೇ ಮದುವೆಯಾಗಲು ನಿರ್ಧರಿಸಿದ್ದರು. ಈ ಸಂಬಂಧ ಇಂಡೋ-ನೇಪಾಳ ಗಡಿಯಿಂದ ಅನುಮತಿಯೂ ಜೋಡಿಗೆ ಸಿಕ್ಕಿತ್ತು. 15 ನಿಮಿಷದಲ್ಲಿ ಮದುವೆ ಕಾರ್ಯಗಳು ನಡೆಯಬೇಕು ಎಂದು ನೇಪಾಳಕ್ಕೆ ವರ, ವರನ ತಂದೆ ಮತ್ತು ಇಬ್ಬರು ಸಂಬಂಧಿಕರಿಗೆ ಕಳುಹಿಸಲಾಗಿತ್ತು. ಸೇನೆಯ ಷರತ್ತುಗಳಂತೆ ಮದುವೆ ಮಾಡಿಕೊಂಡು ವಧುವನ್ನು ಭಾರತಕ್ಕೆ ಕರೆ ತರಲಾಗಿದೆ.

  • ರಾಮ ಜನ್ಮಭೂಮಿ ನೇಪಾಳದಲ್ಲಿದೆ, ಮೊಬೈಲ್‌ ಇಲ್ಲದ ಆ ಸಮಯದಲ್ಲಿ ವಿವಾಹ ಮಾತುಕತೆ ನಡೆದಿದ್ದು ಹೇಗೆ :ಪ್ರಧಾನಿ ಓಲಿ

    ರಾಮ ಜನ್ಮಭೂಮಿ ನೇಪಾಳದಲ್ಲಿದೆ, ಮೊಬೈಲ್‌ ಇಲ್ಲದ ಆ ಸಮಯದಲ್ಲಿ ವಿವಾಹ ಮಾತುಕತೆ ನಡೆದಿದ್ದು ಹೇಗೆ :ಪ್ರಧಾನಿ ಓಲಿ

    ಕಠ್ಮಂಡು: ವಿವಾದಿತ ನಕ್ಷೆ ವಿಚಾರ ಭಾರತದ ಜೊತೆ ಕಿರಿಕ್‌ ಮಾಡಿಕೊಂಡಿದ್ದ ಚೀನಾ ಸ್ನೇಹಿ ನೇಪಾಳದ ಪ್ರಧಾನಿ ಕೆಪಿ ಶರ್ಮಾ ಓಲಿ ಈಗ ರಾಮನ ಜನ್ಮ ಭೂಮಿ ಅಯೋಧ್ಯೆ ಇರುವುದು ನೇಪಾಳದಲ್ಲಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ರಾಮ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಹುಟ್ಟಿದ್ದಾನೆ ಎಂದು ಭಾರತ ಹೇಳುತ್ತಿರುವ ಕಾರಣ ಸೀತೆ ಭಾರತದ ರಾಜಕುಮಾರ ರಾಮನನ್ನು ವಿವಾಹವಾಗಿದ್ದಳು ಎಂದು ನಾವು ನಂಬಿದ್ದೇವೆ. ಆದರೆ  ನಿಜವಾದ ಅಯೋಧ್ಯೆ ಬಿರ್‌ಗುಂಜ್‌ನ ಪಶ್ಚಿಮ ಭಾಗದಲ್ಲಿರುನ ಥೋರಿ ನಗರದಲ್ಲಿದೆ ಎಂದು ಓಲಿ ಹೇಳಿದ್ದಾರೆ.

    https://twitter.com/SanjayBragta/status/1282708542420475910

    ತನ್ನ ನಿವಾಸದಲ್ಲಿ ನಡೆದ ಭಾನುಭಕ್ತ ಆಚಾರ್ಯ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಯೋಧ್ಯೆ ಹೆಸರಿನ ಗ್ರಾಮ ಬಿರ್‌ಗುಂಜ್‌ನಲ್ಲಿದೆ. ನಾವು ಸಾಂಸ್ಕೃತಿಕವಾಗಿ ಭಾರತದ ದಬ್ಬಾಳಿಕೆಗೆ ಒಳಗಾಗಿದ್ದೇವೆ. ವಾಲ್ಮೀಕಿ ಆಶ್ರಮ ನೇಪಾಳದಲ್ಲಿದಲ್ಲಿದೆ. ರಾಜ ದಶರಥ ಪುತ್ರನನ್ನು ಪಡೆಯಲು ಧಾರ್ಮಿಕ ವಿಧಿಗಳನ್ನು ನೆರವೇರಿಸಿದ್ದು ರಿಧಿಯಲ್ಲಿ ಎಂದಿದ್ದಾರೆ.

    ಯಾವುದೇ ಸಂಪರ್ಕ ವ್ಯವಸ್ಥೆ ಇಲ್ಲದೇ ಇರುವ ಸಂದರ್ಭದಲ್ಲಿ ರಾಮ ಸೀತೆಯನ್ನು ಮದುವೆಯಾಗಲು ಜನಕಪುರಿಗೆ ಬಂದಿದ್ದು ಹೇಗೆ? ಜನಕಪುರಿ ನೇಪಾಳದಲ್ಲಿರುವಾಗ ಭಾರತದಲ್ಲಿರುವ ಅಯೋಧ್ಯೆಯಿಂದ ರಾಮ ಜನಕಪುರಿಗೆ ಬರುವುದು ಅಸಾಧ್ಯ. ಫೋನ್‌ ಅಥವಾ ಮೊಬೈಲ್‌ ಇಲ್ಲದ ಆ ಸಮಯದಲ್ಲಿ ವಿವಾಹ ಮಾತುಕತೆ ನಡೆಯುತ್ತದೆ. ರಾಮನಿಗೆ ಜನಕಪುರಿ ಬಗ್ಗೆ ಹೇಗೆ ಗೊತ್ತು ಎಂದು ನೇಪಾಳದ ಪ್ರಧಾನಿ ಪ್ರಶ್ನಿಸಿ ಮತ್ತೆ ವಿವಾದವನ್ನು ಎಳೆದುಕೊಂಡಿದ್ದಾರೆ.

    ವಿವಾದ ಮೊದಲೆನಲ್ಲ:
    ಚೀನಿ ತಾಳಕ್ಕೆ ಕುಣಿಯುತ್ತಿರುವ ಓಲಿ ಭಾರತದ ವಿರುದ್ಧ ಹೇಳಿಕೆ ನೀಡುತ್ತಿರುವುದು ಇದು ಮೊದಲೆನಲ್ಲ. ಕೊರೊನಾ ವೈರಸ್‌ ಚೀನಾದಿಂದಲೇ ವಿಶ್ವಕ್ಕೆ ಹರಡಿದೆ ಎಂಬ ವಿಚಾರ ವಿಶ್ವಕ್ಕೆ ತಿಳಿದಿದ್ದರೂ ಒಲಿ ಭಾರತದಿಂದ ಕೋವಿಡ್‌ 19 ನೇಪಾಳಕ್ಕೆ ಬಂದಿದೆ ಎಂದು ದೂರಿದ್ದರು.

    ಇದಾದ ಬಳಿಕ ಭಾರತದ ಕಾಲಪಾನಿ, ಲಿಂಪಿಯಾಧುರಾ ಮತ್ತು ಲಿಪುಲೇಖ್ ಪ್ರದೇಶ ತನ್ನದು ಎಂದು ನೇಪಾಳ ಹೇಳಿತ್ತು. ಕೆಪಿ ಶರ್ಮಾ ಓಲಿ ಅವರ ಈ ನಿರ್ಧಾರ ಹಿಂದೆ ಚೀನಾ ಇದೆ ಎನ್ನುವುದು ಗೊತ್ತಿದ್ದರೂ ನೇಪಾಳದ ಹೊಸ ನಕ್ಷೆಯನ್ನು ಅಲ್ಲಿನ ಕ್ಯಾಬಿನೆಟ್ ಅನುಮೋದಿಸಿತ್ತು. ಈ ನಿರ್ಧಾರ ಕೈಗೊಳ್ಳಬೇಡಿ ಎಂದು ಭಾರತ ಸರ್ಕಾರ ಹೇಳಿದ್ದರೂ ನೇಪಾಳ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ವಿವಾದಿತ ನಕ್ಷೆಯನ್ನು ಬಿಡುಗಡೆ ಮಾಡಿತ್ತು.

    ಮೊದಲಿನಿಂದಲೂ ನೇಪಾಳ ಜೊತೆ ಮಿತೃತ್ವ ಹೊಂದಿರುವ ಭಾರತದ ವಿರುದ್ಧ ಕಠು ನಿರ್ಧಾರ ತೆಗೆದುಕೊಂಡಿದ್ದಕ್ಕೆ ಪಕ್ಷರ ಸದಸ್ಯರೇ ನೇಪಾಳ ಹಾಗೂ ಭಾರತದ ಸಂಬಂಧಕ್ಕೆ ಧಕ್ಕೆ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಪಕ್ಷದ ಸದಸ್ಯರು ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರೆ ಒಲಿ ನನ್ನ ವಿರುದ್ಧ ಭಾರತ ಷಡ್ಯಂತ್ರ ಮಾಡಿದೆ ಎಂದು ಆರೋಪಿಸಿದ್ದರು.

  • ಗಡಿ ಪ್ರದೇಶದಲ್ಲಿ ಕಾಲು ಸೇತುವೆ ಬಂದ್ ಮಾಡ್ತಿರೋ ನೇಪಾಳ!

    ಗಡಿ ಪ್ರದೇಶದಲ್ಲಿ ಕಾಲು ಸೇತುವೆ ಬಂದ್ ಮಾಡ್ತಿರೋ ನೇಪಾಳ!

    ನವದೆಹಲಿ: ಚೀನಾ ಪ್ರಚೋದನೆಯಿಂದ ನೇಪಾಳ ಗಡಿ ಪ್ರದೇಶದಲ್ಲಿ ಖ್ಯಾತೆ ತೆಗೆದಿದ್ದು, ಹೊಸ ಭೂಪಟದೊಂದಿಗೆ ಭಾರತ ಪ್ರದೇಶಗಳನ್ನು ತನ್ನದೆಂದು ವಾದ ಮಂಡಿಸಿದ್ದು ಎಲ್ಲರಿಗೂ ತಿಳಿದಿದೆ. ಸದ್ಯ ಭಾರತದ ವಿರುದ್ಧ ದ್ವೇಷ ಸಾಧಿಸುವ ಮತ್ತಷ್ಟು ಕ್ರಮಗಳಿಗೆ ಮುಂದಾದಂತೆ ಕಾಣುತ್ತಿರುವ ನೇಪಾಳ, ಗಡಿ ಪ್ರದೇಶದಲ್ಲಿ ಭಾರತದೊಂದಿಗೆ ಸಂಪರ್ಕ ಕಲ್ಪಿಸುವ ಕಾಲು ಸೇತುವೆ (ಕಾಲುಸಂಕ)ಗಳನ್ನು ಹಲವು ಬಾರಿ ಬಂದ್ ಮಾಡಿರುವ ಕುರಿತು ವರದಿಯಾಗಿದೆ.

    ನೇಪಾಳ ಕಾಲುಸಂಕಗಳನ್ನು ಬಂದ್ ಮಾಡುತ್ತಿರುವ ಪರಿಣಾಮ ಗಡಿ ಪ್ರದೇಶದಲ್ಲಿ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಉತ್ತರಾಖಂಡ ಧಾರ್ಚುಲಾದ ಸಬ್ ಡಿವಿಜನ್ ಮ್ಯಾಜಿಸ್ಟ್ರೇಟ್ ಅನಿಲ್ ಕುಮಾರ್ ತಿಳಿಸಿದ್ದಾರೆ. ಇದನ್ನು ಓದಿ: ನೇಪಾಳದ 10 ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದೆ ಚೀನಾ- ನೇಪಾಳ ಸರ್ಕಾರದ ವರದಿ

    Recently, a number of times Nepal closed the footbridge connecting India-Nepal, disrupting the supply of essential commodities into their country. We’ll raise this issue in our next friendly meeting with Nepal: Anil Kumar Shukla, SDM Dharchula, Uttarakhand pic.twitter.com/rTEIkKYHaN

    ಧಾರ್ಚುಲಾ ಸಮೀಪದ ಭಾರತ ಮತ್ತು ನೇಪಾಳ ಒಂದು ಮಾಡುವ ಸೇತುವೆಯನ್ನು ನೇಪಾಳ ಭಾಗದಲ್ಲಿ ಹಲವು ಬಾರಿ ಬಂದ್ ಮಾಡಲಾಗಿದೆ ಎಂದು ಅನಿಲ್ ಕುಮಾರ್ ಹೇಳಿದ್ದಾರೆ. ಇತ್ತೀಚೆಗೆ ನೇಪಾಳ ಈ ರೀತಿ ಮಾಡುತ್ತಿದೆ ಎಂದು ಅವರು ತಿಳಿಸಿದ್ದು, ಈ ಕುರಿತು ಮುಂದಿನ ಸಭೆಗಳಲ್ಲಿ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ. ಇದನ್ನು ಓದಿ: ಭಾರತದಿಂದ ನನ್ನ ಎಳೆದೊಯ್ದು ಸುಳ್ಳು ಹೇಳಲು ಒತ್ತಾಯಿಸಿದ್ರು: ನೇಪಾಳದ ವಶದಲ್ಲಿದ್ದ ವ್ಯಕ್ತಿ

    ಕಳೆದ ತಿಂಗಳು ಭಾರತ ವಿರುದ್ಧ ಗಂಭೀರ ಆರೋಪ ಮಾಡಿದ್ದ ನೇಪಾಳ ಪ್ರಧಾನಿ ಕೆಪಿ ಒಲಿ, ನೇಪಾಳದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗಲು ಭಾರತದ ವೈರಸ್ ಕಾರಣ ಎಂದಿದ್ದರು. ಅಲ್ಲದೇ ಚೀನಾ ಮತ್ತು ಇಟಲಿ ವೈರಸ್‍ಗಿಂತಲೂ ಭಾರತ ವೈರಸ್ ಪ್ರಮಾದಕರ ಎಂದು ಆರೋಪಿಸಿದ್ದರು.

  • ನೇಪಾಳದ 10 ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದೆ ಚೀನಾ- ನೇಪಾಳ ಸರ್ಕಾರದ ವರದಿ

    ನೇಪಾಳದ 10 ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದೆ ಚೀನಾ- ನೇಪಾಳ ಸರ್ಕಾರದ ವರದಿ

    – ನದಿಗಳ ಹರಿವು ಬದಲಿಸಿ, 33 ಹೆಕ್ಟೇರ್ ಅತಿಕ್ರಮಣ
    – ಈಗಾಗಲೇ ರಸ್ತೆ ನಿರ್ಮಿಸುತ್ತಿದೆ ಪಾಪಿ ಚೀನಾ

    ಕಠ್ಮಂಡು: ಚೀನಾ ತನ್ನ ನೆರೆಯ ಎಲ್ಲ ದೇಶಗಳ ಗಡಿಯನ್ನು ಅತಿಕ್ರಮಣ ಮಾಡಿಕೊಳ್ಳುತ್ತಿರುವುದು ತಿಳಿದ ವಿಚಾರ. ಇತ್ತೀಚೆಗೆ ಭಾರತದೊಂದಿಗೆ ತಂಟೆ ತೆಗೆದಿದೆ. ಇದೀಗ ಇನ್ನೊಂದು ಭಯಾನಕ ಅಂಶವನ್ನು ನೇಪಾಳ ಸರ್ಕಾರ ಬಹಿರಂಗಪಡಿಸಿದೆ. ನೇಪಾಳದ ಬರೋಬ್ಬರಿ 10 ಪ್ರದೇಶಗಳನ್ನು ಚೀನಾ ಈಗಾಗಲೇ ಆಕ್ರಮಿಸಿಕೊಂಡಿದೆ ಎಂದು ನೇಪಾಳ ಸರ್ಕಾರ ತನ್ನ ವರದಿಯಲ್ಲಿ ತಿಳಿಸಿದೆ.

    ಲಡಾಖ್‍ನ ಗಲ್ವಾನ್ ವ್ಯಾಲಿಯಲ್ಲಿ ಭಾರತದ-ಚೀನಾದ ಗಡಿ ತಂಟೆ ನಡೆದ ಕೆಲವೇ ದಿನಗಳ ನಂತರ ನೇಪಾಳ ಈ ಕುರಿತು ಸರ್ವೇ ವರದಿಯನ್ನು ಬಿಡುಗಡೆ ಮಾಡಿದ್ದು, ಈ ವೇಳೆ 10 ಪ್ರದೇಶಗಳನ್ನು ವಶಪಡಿಸಿಕೊಂಡಿರುವ ಕುರಿತು ಬಹಿರಂಗವಾಗಿದೆ. ನೇಪಾಳದ ಜಾಗವನ್ನು ಅತಿಕ್ರಮಣ ಮಾಡಿಕೊಳ್ಳಲೆಂದೇ ಟಿಬೆಟ್‍ನಲ್ಲಿ ಚೀನಾ ರಸ್ತೆ ನಿರ್ಮಾಣ ಮಾಡುತ್ತಿದ್ದು, ನಂತರ ಮುಂದಿನ ದಿನಗಳಲ್ಲಿ ತನ್ನ ಗಡಿಯಲ್ಲಿ ಚೆಕ್ ಪೋಸ್ಟ್ ನಿರ್ಮಿಸಲು ಉದ್ದೇಶಿಸಿದೆ.

    ನೇಪಾಳದ ಕೃಷಿ ಸಚಿವಾಲಯದ ಸರ್ವೇ ಇಲಾಖೆ ಒಟ್ಟು 11 ಸ್ಥಳಗಳನ್ನು ಪಟ್ಟಿ ಮಾಡಿದ್ದು, ಇದರಲ್ಲಿ 10 ಪ್ರದೇಶಗಳನ್ನು ಚೀನಾ ವಶಪಡಿಸಿಕೊಂಡಿದೆ. ಸುಮಾರು 33 ಹೆಕ್ಟೇರ್‍ನಷ್ಟು ಪ್ರದೇಶವನ್ನು ಚೀನಾ ಅತಿಕ್ರಮಣ ಮಾಡಿಕೊಂಡಿದೆ. ಇನ್ನೂ ಅಚ್ಚರಿಯ ಸಂಗತಿ ಎಂದರೆ ತನ್ನ ಪ್ರದೇಶವನ್ನು ಹೆಚ್ಚಳ ಮಾಡಿಕೊಳ್ಳಲು ನದಿಗಳ ಹರಿವಿನ ದಿಕ್ಕನ್ನೂ ಬದಲಿಸಿದೆಯಂತೆ.

    ಹುಮ್ಲಾ ಜಿಲ್ಲೆಯಲ್ಲಿ ಬಗ್ದಾರೆ ಖೊಲಾ ಹಾಗೂ ಕರ್ನಾಲಿ ನದಿಗಳನ್ನು ತಿರುಗಿಸಿ ಚೀನಾ ನಿರ್ಮಾಣ ಕಾರ್ಯ ನಡೆಸುತ್ತಿದ್ದು, ಒಟ್ಟು 10 ಹೆಕ್ಟೇರ್ ಪ್ರದೇಶವನ್ನು ಅತಿಕ್ರಮಿಸಿಕೊಂಡಿದೆ. ಅಲ್ಲದೆ ಟಿಬೆಟ್‍ನಲ್ಲಿ ನಡೆಯುತ್ತಿದ್ದ ನಿರ್ಮಾಣ ಕಾರ್ಯವನ್ನು ರಸುವಾ ಜಿಲ್ಲೆಯ ಸಿಂಜೆನ್, ಭುರ್ಜುಕ್ ಜಾಗೂ ಜಂಬು ಖೊಲಾ ಪ್ರದೇಶಗಳ ಮಾಡಿದ್ದು, ಇದರಿಂದಾಗಿ ಆರು ಹೆಕ್ಟೇರ್ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದೆ.

    ಚೀನಾ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ತನ್ನ ರಸ್ತೆ ಸಂಪರ್ಕವನ್ನು ಭಾರೀ ಪ್ರಮಾಣದಲ್ಲಿ ವಿಸ್ತರಿಸುತ್ತಿದ್ದು, ಈ ಮೂಲಕ ನೇಪಾಳದ ಕಡೆ ಹರಿಯುತ್ತಿದ್ದ ಕೆಲ ನದಿಗಳ ದಿಕ್ಕನ್ನು ಬದಲಿಸುತ್ತಿದೆ. ನದಿಗಳು ಕ್ರಮೇಣವಾಗಿ ನೇಪಾಳಿ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಿದ್ದು, ಹೀಗೆ ಮುಂದುವರಿದರೆ ನದಿಗಳು ನೇಪಾಳದ ಭೂಮಿಯ ಗರಿಷ್ಟ ಭಾಗ ಚೀನಾದ ಟೆಬೆಟ್ ವಶವಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ನದಿಗಳ ಹರಿವನ್ನು ಹೀಗೆ ಬದಲಿಸಿದರೆ ನೇಪಾಳದ ನೂರಾರು ಹೆಕ್ಟೇರ್ ಭೂಮಿ ಸ್ವಾಭಾವಿಕವಾಗಿ ಟೆಬೆಟ್‍ಗೆ ಒಳಪಡುತ್ತದೆ. ಕಾಲಾನಂತರದಲ್ಲಿ ಚೀನಾ ತನ್ನ ಸಶಸ್ತ್ರ ಪೊಲೀಸ್ ಪಡೆಗಳ ಮೂಲಕ ಬಾರ್ಡರ್ ಅಬ್ಸರ್ವೇಶನ್ ಪೋಸ್ಟ್ ನಿರ್ಮಿಸುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಲಡಾಖ್‍ನ ಕಲ್ವಾನ್ ವ್ಯಾಲಿಯಲ್ಲಿ ನಡೆದ ಭಾರತ-ಚೀನಾ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ನೇಪಾಳ ಈ ವರದಿಯನ್ನು ಬಿಡುಗಡೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಚೀನಾದ ಪುಂಡಾಟಿಕೆ ಇಲ್ಲಿಗೇ ನಿಲ್ಲುವುದಲ್ಲ ವಿಯಟ್ನಾಂ, ಮಲೇಶಿಯಾ, ತೈವಾನ್ ದೇಶಗಳ ಗಡಿ ವಿಚಾರದಲ್ಲಿ ಸಹ ವಿವಾದ ಹೊಂದಿದೆ.

  • ನೇಪಾಳದ ಗಡಿಯನ್ನು ವಶಪಡಿಸಿಕೊಂಡಿದೆ ಚೀನಾ- ಬುದ್ಧಿ ಕಲಿಯದ ನೇಪಾಳ

    ನೇಪಾಳದ ಗಡಿಯನ್ನು ವಶಪಡಿಸಿಕೊಂಡಿದೆ ಚೀನಾ- ಬುದ್ಧಿ ಕಲಿಯದ ನೇಪಾಳ

    – ಭಾರತದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ನೇಪಾಳ

    ನವದೆಹಲಿ: ಚೀನಾ ಕೇವಲ ಭಾರತ ಮಾತ್ರವಲ್ಲ ಇತರೆ ನೆರೆ ದೇಶಗಳ ಗಡಿಗಳನ್ನು ಅತಿಕ್ರಮಿಸಿಕೊಳ್ಳುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ನೇಪಾಳದ ಗೂರ್ಖಾದ ಪ್ರದೇಶವನ್ನು ಚೀನಾ ಅತಿಕ್ರಮಿಸಿಕೊಂಡಿರುವ ಕುರಿತು ವರದಿಯಾಗಿದೆ. ಆದರೆ ಇದೆಲ್ಲವನ್ನು ಬಿಟ್ಟು ನೇಪಾಳ ಭಾರತದ ಗಡಿ ಕುರಿತು ಇದೀಗ ಹೆಚ್ಚು ಚರ್ಚೆ ನಡೆಸುತ್ತಿದೆ. ಅಲ್ಲದೆ ನೇಪಾಳದ ಜನರಲ್ಲಿ ಭಾರತ ವಿರೋಧಿ ಅಲೆಯನ್ನು ಎಬ್ಬಿಸುತ್ತಿದೆ.

    ಮ್ಯಾಪ್‍ನಲ್ಲಿ ರುಯಿ ಗೌನ್ ಪ್ರದೇಶ ನೇಪಾಳಕ್ಕೆ ಒಳಪಟ್ಟಿದೆ. ಆದರೆ ಗೂರ್ಖಾದ ರುಯಿ ಭೋಟ್ ಅಧೀನದಲ್ಲಿದ್ದ ರುಯಿ ಗೌನ್ ಪ್ರದೇಶವನ್ನು ಚೀನಾ ಸ್ವಾಯತ್ತ ಪ್ರದೇಶಕ್ಕೆ ಒಳಪಡಿಸಿದೆ. 60ಕ್ಕೂ ಹೆಚ್ಚು ವರ್ಷಗಳಿಂದ ಇದನ್ನು ಟಿಬೆಟ್ ಅಧೀನಕ್ಕೆ ಒಳಪಡಿಸಲಾಗಿದೆ. ಸರ್ಕಾರಗಳ ದಿವ್ಯ ನಿರ್ಲಕ್ಷ್ಯ ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳ ಅಸಡ್ಡೆಯಿಂದಾಗಿ 72 ಮನೆಗಳಿರುವ ಹಳ್ಳಿಗೆ ಚೀನಾ ಒಳ ನುಸುಳಲು ಅವಕಾಶ ಮಾಡಿಕೊಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

    ಈ ಪ್ರದೇಶವೀಗ ಸಂಪೂರ್ಣವಾಗಿ ಚೀನಾ ಹಿಡಿತದಲ್ಲಿದ್ದು, ಗಡಿ ಕಂಬಗಳನ್ನು ಸಹ ಸ್ಥಳಾಂತರಿಸುವ ಮೂಲಕ ಚೀನಾ ಒತ್ತುವರಿ ಮಾಡಿಕೊಂಡಿದೆ. ಆದರೆ ಗೂರ್ಖಾ ಭೂ ಕಂದಾಯ ಅಧಿಕಾರಿಗಳ ಮಾಹಿತಿ ಪ್ರಕಾರ, ರುಯಿ ಗ್ರಾಮದ ನಿವಾಸಿಗಳಿಂದ ಕಂದಾಯ ಸಂಗ್ರಹಿಸಿದ ಕುರಿತು ಈಗಲೂ ದಾಖಲೆಗಳಿವೆ ಎಂದು ತಿಳಿಸಿದ್ದಾರೆ.

    ಇತಿಹಾಸ ತಜ್ಞ ರಮೇಶ್ ಧುಂಗಲ್ ಸಹ ಈ ಕುರಿತು ಸ್ಪಷ್ಟಪಡಿಸಿದ್ದು, ರುಯಿ ಹಾಗೂ ಟೈಘಾ ಗ್ರಾಮಗಳು ಗೂರ್ಖಾ ಜಿಲ್ಲೆಯ ಉತ್ತರ ಭಾಗಗಳು. ರುಯಿ ಗೌನ್ ಸಹ ನೇಪಾಳದ ಭಾಗ ಎಂದು ಹೇಳಿದ್ದಾರೆ. ಅಲ್ಲದೆ ಚೀನಾ ಗಡಿ ಕಂಬಗಳನ್ನು ನೆಡುವಾಗ ನೇಪಾಳ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ನೇಪಾಳ ರುಯಿ ಹಾಗೂ ಟೆಘಾ ಗ್ರಾಮಗಳನ್ನು ಕಳೆದುಕೊಂಡಿದೆ. ಇದೀಗ ಇವು ಟಿಬೆಟ್‍ಗೆ ಒಳಪಟ್ಟಿವೆ ಎಂದು ವಿವರಿಸಿದ್ದಾರೆ.

    ಕೆಲ ಭ್ರಷ್ಠ ನೇಪಾಳಿ ಅಧಿಕಾರಿಗಳ ಕೃತ್ಯದಿಂದಾಗಿ ಚೀನಾ 35ನೇ ನಂಬರ್ ಪಿಲ್ಲರ್‍ನ್ನು ಸ್ಯಾಂಬೋ ಹಾಗೂ ರುಯಿ ಗೌನ್ ಪ್ರದೇಶದಲ್ಲಿ ನೆಟ್ಟಿದೆ. ಇದರಿಂದಾಗಿ ಈ ಪ್ರದೇಶಗಳು ಚೀನಾ ನಿಯಂತ್ರಣದಲ್ಲಿವೆ. ಅಲ್ಲದೆ ಗೌನ್, ಸ್ಯಾಂಬ್ಡೊ, ರುಯಿ ಪ್ರದೇಶಗಳ ಭಾಷೆ, ಸಂಸ್ಕøತಿ, ಸಂಪ್ರದಾಯ ಹಾಗೂ ಆಚರಣೆಗಳು ಒಂದೇಯಾಗಿವೆ. ಪ್ರಾರ್ಥನಾ ಮಂದಿರಗಳು ಸಹ ಒಂದೇ ರೀತಿ ಇವೆ ಎಂದು ಚುಮನುಬ್ರಿ ಗ್ರಾಮೀಣ ಮುನ್ಸಿಪಾಲಿಟಿ ವಾರ್ಡ್ ನಂ.1ರ ಅಧ್ಯಕ್ಷ ಬಿರ್ ಬಹದ್ದೂರ್ ಲಾಮಾ ತಿಳಿಸಿದ್ದಾರೆ.

    ಟಿಬೆಟ್ ಜೊತೆಗೆ ಸೇರಿಕೊಳ್ಳಲು ಇಷ್ಟವಾಗದವರು ಸ್ಯಾಂಬ್ಡೊಗೆ ವಲಸೆ ಹೋದರು. ಅವರೆಲ್ಲರೂ ನಮ್ಮೊಂದಿಗೆ ಸಾವಿರಾರು ವರ್ಷಗಳ ಐತಿಹಾಸಿಕ ಹಾಗೂ ಸಾಂಸ್ಕøತಿಕ ದಾಖಲೆಗಳನ್ನು ಹೊಂದಿದ್ದಾರೆ ಎಂದು ಬಿರ್ ಬಹದ್ದೂರ್ ಲಾಮಾ ವಿವರಿಸಿದ್ದಾರೆ.

    ಚೀನಾದೊಂದಿಗೆ ಇಷ್ಟೆಲ್ಲ ಗಡಿ ವಿವಾದಗಳಿದ್ದರೂ ಹೊಸ ಭೂಪಟದ ಸಂಬಂಧ ನೇಪಾಳ ವಿವಾದ ಹೆಚ್ಚಿಸುತ್ತಿದೆ. ಅಲ್ಲದೆ ಸರ್ಕಾರ ನೇಪಾಳದ ಜನರಲ್ಲಿ ಭಾರತದ ವಿರುದ್ಧ ದ್ವೇಷವನ್ನು ಹೆಚ್ಚಿಸಲು ರೇಡಿಯೋಗಳಲ್ಲಿ ಭಾರತ ವಿರೋಧಿ ಹಾಡುಗಳನ್ನು ಪ್ರಸಾರ ಮಾಡುತ್ತಿದೆ ಎಂದು ವರದಿಯಾಗಿತ್ತು. ಗಡಿ ಪ್ರದೇಶದಲ್ಲಿರುವ ಭಾರತದ ಉತ್ತರಾಖಂಡ ರಾಜ್ಯದ ಹಳ್ಳಿಗಳಲ್ಲಿ ನೇಪಾಳ ರೇಡಿಯೋ ಸಿಗ್ನಲ್ ಲಭ್ಯವಾಗುತ್ತವೆ. ಈ ವೇಳೆ ಭಾರತ ವಿರೋಧಿ ಹಾಡುಗಳು ಪ್ರಸಾರವಾಗುತ್ತಿರುವುದು ಖಚಿತವಾಗಿತ್ತು. ಈ ಮೂಲಕ ಭಾರತದ ವಿರುದ್ಧ ವ್ಯವಸ್ಥಿತವಾಗಿ ಜನರಿಗೆ ಅಪಪ್ರಚಾರ ನಡೆಸುವತ್ತ ನೇಪಾಳ ಸರ್ಕಾರ ಮುಂದಾಗಿದೆ.