Tag: ನೇಪಾಳ ಪ್ರಧಾನಿ

  • ಲಂಕಾ, ಪಾಕ್‌, ಅಫ್ಘಾನ್‌, ಬಾಂಗ್ಲಾ ಆಯ್ತು.. ಈಗ ನೇಪಾಳ ನರಕ – ಸೂಪರ್‌ ಪವರ್‌ ಭಾರತದ ಸುತ್ತ ಏನಾಗ್ತಿದೆ?

    ಲಂಕಾ, ಪಾಕ್‌, ಅಫ್ಘಾನ್‌, ಬಾಂಗ್ಲಾ ಆಯ್ತು.. ಈಗ ನೇಪಾಳ ನರಕ – ಸೂಪರ್‌ ಪವರ್‌ ಭಾರತದ ಸುತ್ತ ಏನಾಗ್ತಿದೆ?

    ʻಹಲವು ವರ್ಷಗಳಿಂದ ನಾವು ಬಳಲುತ್ತಿದ್ದೇವೆ, ಆದ್ರೂ ಮೌನವಾಗಿ ಕುಳಿತಿದ್ದೇವೆ. ಸಮಾಜದ ಜಡತ್ವ ನಮ್ಮನ್ನ ಹತ್ತಿಕ್ಕಿದೆ. ಆದರೀಗ ಕೋಪದ ಜ್ವಾಲೆ ಸ್ಫೋಟಗೊಂಡಿದೆ, ದಂಗೆ ಏಳಬೇಕಾದ ಸಮಯ ಬಂದಿದೆʼ ನೇಪಾಳದ (Nepal) ಮಾಜಿ ಪ್ರಧಾನಿ, ಪ್ರಸಿದ್ಧ ಬರಹಗಾರ ಬಿ.ಪಿ ಕೊಯಿರಾಲ ಅವರ ಪುಸ್ತಕದ ಸಾಲುಗಳಿವು. ಪ್ರಸ್ತುತ ಈಗಿನ ನೇಪಾಳದ ಸ್ಥಿತಿ ನೋಡಿದ್ರೆ ದಶಕಗಳ ಹಿಂದೆಯೇ ಈ ದಂಗೆಯನ್ನ ಊಹಿಸಿದ್ದರು ಅನ್ನೋದು ಗೊತ್ತಾಗುತ್ತೆ. ಆದ್ರೆ ಇದಕ್ಕೂ ಮುನ್ನ ಭಾರತದ ಸುತ್ತ ಏನಾಗ್ತಿದೆ ಅನ್ನೋದನ್ನ ನಾವಿಂದು ತಿಳುದುಕೊಳ್ಳಬೇಕಾಗಿದೆ.

    ಕಳೆದ 4 ವರ್ಷಗಳಿಂದ ದಕ್ಷಿಣ ಏಷ್ಯಾದ (South Asia) ರಾಜಕೀಯ, ಆರ್ಥಿಕ ಪರಿಸ್ಥಿತಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ನಿರ್ದಿಷ್ಟವಾಗಿ ಭಾರತದ ನೆರೆಹೊರೆ ರಾಷ್ಟ್ರಗಳಲ್ಲಿ ಅಧಿಕಾರದ ರಾಜಕೀಯ ಕ್ರಾಂತಿಗಳು, ಸಾಮೂಹಿಕ ಪ್ರತಿಭಟನೆಗಳಿಂದ ಪ್ರಕ್ಷುಬ್ಧತೆ ಸೃಷ್ಟಿಯಾಗಿದೆ. ಇದರಿಂದ ಆಡಳಿತ ಬದಲಾವಣೆಗೆ ಸಾಕ್ಷಿಯಾಗಿವೆ. ಅಫ್ಘಾನಿಸ್ತಾನ, ಶ್ರೀಲಂಕಾ (Sri Lanka), ಪಾಕಿಸ್ತಾನ (Pakistan), ಬಾಂಗ್ಲಾದೇಶದಲ್ಲಿ ಬಿಕ್ಕಟ್ಟು ಎದುರಾಗಿತ್ತು. ಈಗ ನೆರೆಯ ನೇಪಾಳ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಇದೇ ಕಾರಣಕ್ಕೆ ದಶಕಗಳಿಂದ ಜನರನ್ನ ಕಾಡುತ್ತಿದ್ದ ಜ್ವಾಲೆ ಹೋರಾಟ ದಂಗೆ ರೂಪದಲ್ಲಿ ಸ್ಫೋಟಗೊಂಡಿದೆ. ಸದ್ಯ 5 ದಿನಗಳ ಹಿಂದೆ ದೇಶವ್ಯಾಪಿ ಭುಗಿಲೆದ್ದಿದ್ದ ದಂಗೆ‌ ಸೇನೆ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಶಾಂತವಾಗಿದೆ. ನೂತನ ಹಂಗಾಮಿ ಪ್ರಧಾನಿಯಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅಧಿಕಾರ ವಹಿಸಿಕೊಂಡಿದ್ದಾರೆ.

    ಒಂದೆಡೆ ಭಾರತ ಸೂಪರ್ ಪವರ್ ಆಗುತ್ತಿದ್ದರೆ, ಇತ್ತ ನೆರೆಹೊರೆಯ ರಾಷ್ಟ್ರಗಳ ಪರಿಸ್ಥಿತಿ ಢೋಲಾಯಮಾನವಾಗುತ್ತಿದೆ. ಅಷ್ಟಕ್ಕೂ ಭಾರತದ ಸುತ್ತ ಏನಾಗ್ತಿದೆ? ನೆರೆಹೊರೆ ದೇಶಗಳಲ್ಲಿ ಏನೇನಾಯಿತು? ಇದಕ್ಕೆಲ್ಲ ಕಾರಣವೇನು? ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ… ಮೊದಲಿಗೆ ನೇಪಾಳದ ದಂಗೆಗೆ ಮೂಲ ಕಾರಣ ಏನೆಂಬುದನ್ನು ಹಂತಹಂತವಾಗಿ ನೋಡೋಣ..

    ಸಾಲು ಸಾಲು ಹಗರಣಗಳಿಂದ ನೊಂದಿದ್ದ ನೇಪಾಳ!
    ದಶಕಗಳಿಂದ ಜನರು ಅಡಗಿಸಿಟ್ಟಿದ ಆಕ್ರೋಶದ ಜ್ವಾಲೆ ಸ್ಫೋಟಗೊಳ್ಳಲು ಸಾಲು ಸಾಲು ಹಗರಣಗಳೇ ಕಾರಣ ಅನ್ನೋದು ತಿಳಿದ ವಿಷಯ.

    1997ರ ಹೆಲಿಕಾಪ್ಟರ್‌ ಹಗರಣ (Helicopter Scam):
    1997 ರಲ್ಲಿ ಅಂದಿನ ನೇಪಾಳಿ ಕಾಂಗ್ರೆಸ್ ಸರ್ಕಾರವು ವಿಐಪಿ ಹೆಲಿಕಾಪ್ಟರ್‌ಗಳ ಖರೀದಿಗೆ ಟೆಂಡರ್‌ ಕರೆದಿತ್ತು. ಟೆಂಡರ್‌ ತನ್ನದಾಗಿಸಿಕೊಂಡ ಈಜಿಪ್ಟ್‌ನ ಇಂಡೋಟ್ರಾನ್ಸ್ ಏರ್‌ಕ್ರಾಫ್ಟ್ ಸರ್ವೀಸಸ್ ಕಂಪನಿ ನೇಪಾಳಕ್ಕೆ ಎಂಐ-17 ಹೆಲಿಕಾಪ್ಟರ್‌ ಅನ್ನು 18 ದಶಲಕ್ಷ ಡಾಲರ್‌ಗಳಿಗೆ ಮಾರಾಟ ಮಾಡಿತು. ಕ್ರಮೇಣ ಈ ಹೆಲಿಕಾಪ್ಟರ್‌ ಕೆಟ್ಟ ಸ್ಥಿತಿಯಲ್ಲಿದೆ ಅನ್ನೋದು ತನಿಖೆಯಿಂದ ಬಟಾಬಯಲಾಯಿತು. ಜೊತೆಗೆ ಈ ಹೆಲಿಕಾಪ್ಟರ್‌ನ ನಿಜವಾದ ಬೆಲೆ 40 ಲಕ್ಷ ಡಾಲರ್‌ ಅಷ್ಟೇ ಇತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಬಾಕಿ 1.40 ದಶಲಕ್ಷ ಡಾಲರ್‌ ಹಣವನ್ನ ಅಂದಿನ ಪ್ರಧಾನಿ ಗಿರಿಜಾ ಪ್ರಸಾದ್‌ ಕೊಯಿರಾಲಾ ಅವರ ಕುಟುಂಬಸ್ಥರೇ ನುಂಗಿ ನೀರು ಕುಡಿದಿದ್ದರು ಅನ್ನೋದೂ ಗೊತ್ತಾಯ್ತು. ಈ ಹಗರಣದಿಂದಾಗಿ ಕೊಯಿರಾಲ ಸರ್ಕಾರವೇ ಪತನವಾಯ್ತು. ನೇಪಾಳದಲ್ಲಿ ದಂಗೆಯೂ ನಡೆಯಿತು. ನಂತರ ಹಗರಣದ ಸಂಪೂರ್ಣ ತನಿಖೆಗೆ ಒಂದು ಸಮಿತಿಯನ್ನು ರಚಿಸಲಾಯಿತು. ಇದರಿಂದ ಏನೂ ಪ್ರಯೋಜನವಾಗದೇ ಪ್ರಕರಣ ಮುಚ್ಚಿಹೋಯ್ತು.

    1990ರ ಲೌಡಾ ಏರ್‌ ಹಗರಣ (lauda Air Scam)
    1990ರ ದಶಕದಲ್ಲಿ ಭಾರೀ ಸದ್ದು ಮಾಡಿದ್ದ ಹಗರಣ ಇದಾಗಿತ್ತು. 1999ರಲ್ಲಿ ರಾಯಲ್‌ ನೇಪಾಳ ಏರ್‌ಲೈನ್ಸ್‌, ಆಸ್ಟ್ರೀಯಾದ ಲೌಡಾ ಏರ್‌ನಿಂದ ಬೋಯಿಂಗ್‌ 767 ವಿಮಾನವನ್ನ ಗುತ್ತಿಗೆಗೆ ಪಡೆಯಿತು. ಇದಕ್ಕಾಗಿ 6 ವರ್ಷಗಳ ಅವಧಿಗೆ 45 ದಶಲಕ್ಷ ಡಾಲರ್‌ ಒಪ್ಪಂದ ಮಾಡಿಕೊಂಡಿತು. ಕ್ರಮೇಣ ಇದರಲ್ಲಿ ದೊಡ್ಡ ಹಗರಣವೇ ನಡೆದಿದೆ ಅನ್ನೋದು ಬೆಳಕಿಗೆ ಬಂದಿತು. ಏಕೆಂದ್ರೆ ಬೋಯಿಂಗ್‌ 767 ವಿಮಾನದ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು. ಆಗಾಗ್ಗೆ ರಿಪೇರಿಗೆ ಬರುತ್ತಿತ್ತು, ಇದಕ್ಕೆ ದುಪ್ಪಟ್ಟು ವೆಚ್ಚ ಖರ್ಚು ಮಾಡಬೇಕಿತ್ತು. ಇದು ದೇಶವ್ಯಾಪಿ ಸದ್ದು ಮಾಡಿತ್ತು. ಜನ ಬೀದಿಗಿಳಿದು ಪ್ರತಿಭಟನೆ ನಡೆಸಿದ್ರೂ ಪ್ರಯೋಜನ ಆಗಲಿಲ್ಲ.

    2008ರ ಸುಡಾನ್‌ ಹಗರಣ
    ನೇಪಾಳದ ದಂಗೆಗೆ ಈ ಹಗರಣವೂ ಒಂದು ಕಾರಣ. ಆಫ್ರಿಕನ್‌ ದೇಶ ಸುಡಾನ್‌ನಲ್ಲಿ ವಿಶ್ವಸಂಸ್ಥೆಯ ಕಾರ್ಯಾಚರಣೆಗಾಗಿ ನೇಪಾಳ ಪೊಲೀಸರು ಶಸ್ತ್ರಸಜ್ಜಿತ ವಾಹನಗಳು ಹಾಗೂ ಇತರ ಉಪಕರಣಗಳನ್ನು ಖರೀದಿಸಲು ಬ್ರಿಟಿಷ್‌ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದಕ್ಕಾಗಿ ನೇಪಾಳ ಸರ್ಕಾರ ಸುಮಾರು 3 ಕೋಟಿ ಡಾಲರ್‌ ಬಜೆಟ್‌ ಮೀಸಲಿಟ್ಟಿತ್ತು. ಆದ್ರೆ ಈ ವಾಹನಗಳ ಗುಣಮಟ್ಟ ಕಳಪೆಯಾಗಿದ್ದರಿಂದ ವಿಶ್ವಸಂಸ್ಥೆ ಅವುಗಳನ್ನು ಬಳಸಲು ನಿರಾಕರಿಸಿತು. ಇದರಲ್ಲಿ ದೊಡ್ಡ ಹಗರಣ ನಡೆದಿರುವುದು ಬೆಳಕಿಗೆ ಬಂದ ಬಳಿಕ ದೀರ್ಘ ಕಾಲದ ಹೋರಾಟ ನಡೆಯಿತು. ಬಳಿಕ ತಣ್ಣಗಾಯ್ತು.

    ತುಂಬಿದ ಭ್ರಷ್ಟಾಚಾರದಿಂದ ರೋಸಿದ್ದ ಯುವಜನ
    ನೇಪಾಳದಲ್ಲಿ ಭ್ರಷ್ಟಾಚಾರಕ್ಕೆ ಎಲ್ಲೆಯೇ ಇಲ್ಲದಂತಾಗಿತ್ತು, 180 ದೇಶಗಳ ಪೈಕಿ 107ನೇ ಸ್ಥಾನದಲ್ಲಿ ಈಗ ನೇಪಾಳ ಇದೆ. ತುಂಬಿ ತುಳುಕುತ್ತಿದ್ದ ಭ್ರಷ್ಟಾಚಾರ ದೇಶದ ಕೈಗಾರಿಕೆಗೆ ದೊಡ್ಡ ಹೊಡೆತ ನೀಡಿತು. ಇದರಿಂದ ಹೂಡಿಕೆದಾರರು ಹಿಂದೆ ಸರಿದರು, ಕ್ರಮೇಣ ನಿರುದ್ಯೋಗ ಸಮಸ್ಯೆ ಹೆಚ್ಚಾಯ್ತು. ಹೆಚ್ಚಿನ ಯುವಕರು ಕೆಲಸ ಹುಡುಕುತ್ತಾ ವಿದೇಶಗಳಿಗೆ ವಲಸೆ ಕಿತ್ತರು. ಇದರಿಂದ ಯುವಜನರಲ್ಲಿ ರಾಜಕೀಯ ದ್ವೇಶ ಬೆಳೆಯಲು ಶುರುವಾಯ್ತು. ಮತ್ತೊಂದೆಡೆ ರಾಜಪ್ರಭುತ್ವ ಅಂತ್ಯಗೊಂಡು ಪ್ರಜಾಪ್ರಭುತ್ವ ಉದಯವಾದರೂ ರಾಜಕೀಯದ ಮಾತ್ರ ಬದಲಾಗಲಿಲ್ಲ. ಹಳೆಯ ನಾಯಕರು, ಪಕ್ಷದ ಕುಟುಂಬಗಳು ಅಧಿಕಾರ ಕಸಿದುಕೊಳ್ಳುತ್ತಲೇ ಸಾಗಿದ್ದವು. ಇದು ದಂಗೆಗೆ ಮತ್ತೊಂದು ಕಾರಣ.

    ಕಳೆದ 3 ದಶಕಗಳಲ್ಲಿ ಸುಮಾರು 68 ಲಕ್ಷ ನೇಪಾಳಿಗರು ವಿದೇಶಗಳಲ್ಲಿ ಉದ್ಯೋಗಕ್ಕೆ ವಲಸೆ ಹೋಗಿದ್ದಾರೆ. ಈ ಪೈಕಿ 15 ರಿಂದ 17 ಲಕ್ಷ ಮಂದಿ ಭಾರತದಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಪ್ರತಿವರ್ಷ 1 ಲಕ್ಷ ನೇಪಾಳಿ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುತ್ತಿದ್ದಾರೆ.

    ದೀರ್ಘಕಾಲದವರೆಗೆ ಶೋಷಣೆ ಅನುಭವಿಸುತ್ತಿರುವ ಜನ ಒಂದೇ ಸಾರಿ ದಂಗೆ ಎದ್ದಾಗ, ಅವರು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ವ್ಯತ್ಯಾಸ ಮರೆತುಬಿಡುತ್ತಾರೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಮಾಡಿದ ಅನ್ಯಾಯಕ್ಕೆ ತಕ್ಕ ಪ್ರಾಯಶ್ಚಿತ್ತ ಅನುಭವಿಸಬೇಕು ಅನ್ನೋದಕ್ಕೆ ಈಗ ನೇಪಾಳ ದಂಗೆ ಸಾಕ್ಷಿಯಾಗಿದೆ.

    ಅಫ್ಘಾನಿಸ್ತಾನದಿಂದ ಅಮೆರಿಕ ಔಟ್.. ತಾಲಿಬಾನ್ ಇನ್
    ಆಗ ತಾನೇ ಅಮೆರಿಕದಲ್ಲಿ ಜೋ ಬೈಡೆನ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಅದಾಗಲೇ ಬೈಡೆನ್ ತನ್ನ ದೇಶದ ಆರ್ಥಿಕ, ಸೇನಾ ಹಿತದೃಷ್ಟಿಯಿಂದ ಒಂದು ಘೋಷಣೆಯನ್ನು ಮಾಡಿಯೇಬಿಟ್ಟರು. ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಸೈನಿಕರು ವಾಪಸ್ ಕರೆಸಿಕೊಳ್ಳುವುದಾಗಿ ಹೇಳಿದರು. ನುಡಿದಂತೆ ಸೇನೆ ವಾಪಸ್ ಕರೆಸಿಕೊಂಡರು. ಅಫ್ಘಾನಿಸ್ತಾನದಲ್ಲಿನ ರಾಜಕೀಯ ಕ್ರಾಂತಿಯು 2021 ರಲ್ಲಿ ತಾಲಿಬಾನ್‌ನ ಮಿಲಿಟರಿ ಆಕ್ರಮಣದೊಂದಿಗೆ ಪ್ರಾರಂಭವಾಯಿತು. ಅದೇ ವರ್ಷ ಆಗಸ್ಟ್ 15 ರಂದು ಅವರು ಕಾಬೂಲ್ ಅನ್ನು ವಶಪಡಿಸಿಕೊಂಡರು. ಇದು 2001 ರಲ್ಲಿ ಯುಎಸ್ ಆಕ್ರಮಣದ ನಂತರ ಜಾರಿಯಲ್ಲಿದ್ದ ಯುಎಸ್ ಬೆಂಬಲಿತ ಆಫ್ಘನ್ ಸರ್ಕಾರದ ಅಂತ್ಯಕ್ಕೆ ಕಾರಣವಾಯಿತು. ನಂತರ ಅಫ್ಘಾನ್‌ ಅನ್ನು ತಾಲಿಬಾನಿಗಳು ಸಂಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಂಡರು. ಸ್ವಾಧೀನಪಡಿಸಿಕೊಂಡ ನಂತರ ಅಫ್ಘಾನಿಸ್ತಾನವು ಭೀಕರ ಮಾನವೀಯ ಬಿಕ್ಕಟ್ಟು ಎದುರಿಸುತ್ತಿದೆ. ಮಹಿಳೆಯರು ವಿದ್ಯಾರ್ಥಿಗಳಿಗೆ ಒಂದಿಲ್ಲೊಂದು ನಿರ್ಬಂಧ ಹೇರುತ್ತಿರುವ ತಾಲಿಬಾನ್‌ ಸರ್ಕಾರ ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನೊಂದಿಗೆ ಮುಂದುವರಿಯುತ್ತಿದೆ.

    ಪಾಕ್‌ನಲ್ಲಿ ಇಮ್ರಾನ್ ಖಾನ್ ಪದಚ್ಯುತಿ
    2018ರಲ್ಲಿ ಅಧಿಕಾರಕ್ಕೆ ಬಂದಿದ್ದ ಇಮ್ರಾನ್‌ ಖಾನ್‌ರನ್ನ 2022ರ ಏಪ್ರಿಲ್‌ನಲ್ಲಿ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಲಾಯಿತು. ಇದರೊಂದಿಗೆ ಪಾಕಿಸ್ತಾನದ ರಾಜಕೀಯದಲ್ಲಿ ಬದಲಾವಣೆಯಾಯಿತು. ಅತ್ತ ದೇಶದಲ್ಲಿ ರಾಜಕೀಯ ಉದ್ವಿಗ್ನತೆ ನಡುವೆ. ಆರ್ಥಿಕತೆಯ ಅನಿಶ್ಚಿತತೆ ತಲೆದೋರಿತು. ಹಣದುಬ್ಬರ, ಕರೆನ್ಸಿ ಮೌಲ್ಯ ಕುಸಿತ, ವಿವಿಧ ಯೋಜನೆಗಳಿಗೆ ಚೀನಾದಿಂದ ಪಡೆದಿರುವ ಬೃಹತ್ ಸಾಲದಿಂದಾಗಿ ದೇಶ ಬಿಕ್ಕಟ್ಟಿಗೆ ಸಿಲುಕಿತು. ರಾಜಕೀಯ ಅಸ್ಥಿರತೆಯು ಆರ್ಥಿಕ ಚೇತರಿಕೆಯ ಪ್ರಯತ್ನಗಳನ್ನು ಮತ್ತಷ್ಟು ಸಂಕೀರ್ಣಗೊಳಿಸಿತು. ಆರ್ಥಿಕ ಬಿಕ್ಕಟ್ಟಿನ ಜೊತೆಗೆ ದೇಶದಲ್ಲಿ ಆಹಾರ ಅಭದ್ರತೆ ಕಾಡಿತು. ಆಹಾರ ಪದಾರ್ಥ ಹಾಗೂ ಇತರೆ ವಸ್ತುಗಳ ಬೆಲೆ ಗಗನಕ್ಕೇರಿತು. ಆಹಾರ ಪದಾರ್ಥಕ್ಕಾಗಿ ಜನ ಮುಗಿಬೀಳುವ ಪರಿಸ್ಥಿತಿ ಎದುರಾಯಿತು. ಪೆಟ್ರೋಲ್ ಬಂಕ್‌ಗಳಲ್ಲಿ ಕಿಲೋಮೀಟರ್‌ಗಟ್ಟಲೇ ಕ್ಯೂ, ಗೋದಿ ಹಿಟ್ಟಿನ ಮೂಟೆಗಳಿಗಾಗಿ ಜನ ಮುಗಿಬೀಳುತ್ತಿದ್ದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಪ್ರಸ್ತುತ ಇಂದಿಗೂ ಪಾಕಿಸ್ತಾನ ಭೀಕ್ಷೆ ಬೀಡುವ ಸ್ಥಿತಿಯಿಂದ ಹೊರಬಂದಿಲ್ಲ.

    ಶ್ರೀಲಂಕಾ ಉದ್ವಿಗ್ನತೆ; ಅಧ್ಯಕ್ಷ ರಾಜಪಕ್ಸೆ ಪಲಾಯನ
    2022ರ ಜುಲೈನಲ್ಲಿ ಶ್ರೀಲಂಕಾದಲ್ಲಿ ಸರ್ಕಾರದ ವಿರುದ್ಧ ಜನರೇ ಧಂಗೆಯೆದ್ದ ಘಟನೆ ನಡೆಯಿತು. ದೇಶಾದ್ಯಂತ ನಡೆದ ಸಾಮೂಹಿಕ ಪ್ರತಿಭಟನೆ ಪರಿಣಾಮದಿಂದಾಗಿ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದಲೇ ಪಲಾಯನ ಮಾಡಿದರು. ಕೋವಿಡ್-19 ಸಾಂಕ್ರಾಮಿಕ ರೋಗ, ಹೆಚ್ಚುತ್ತಿರುವ ಜಾಗತಿಕ ಇಂಧನ ಬೆಲೆಗಳು, ಚೀನಾಕ್ಕೆ ಹೆಚ್ಚುತ್ತಿರುವ ಸಾಲ ಮತ್ತು ಸಾರ್ವಜನಿಕ ಸಂಪನ್ಮೂಲಗಳ ಅಸಮರ್ಪಕ ನಿರ್ವಹಣೆಯಿಂದ ದೇಶ ಬಿಕ್ಕಟ್ಟಿಗೆ ಸಿಲುಕಿತು. ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟು ಆಹಾರ, ಇಂಧನ ಮತ್ತು ಔಷಧ ಸೇರಿದಂತೆ ಅಗತ್ಯ ವಸ್ತುಗಳ ತೀವ್ರ ಕೊರತೆಗೆ ಕಾರಣವಾಯಿತು. ಹಣದುಬ್ಬರವು ಹೆಚ್ಚಾಗಿ ಸರ್ಕಾರವು ವಿದ್ಯುತ್ ಕಡಿತ ಮತ್ತು ಸೀಮಿತವಾಗಿ ಇಂಧನ ಮಾರಾಟದಂತಹ ಕಠಿಣ ಕ್ರಮಗಳನ್ನು ಕೈಗೊಂಡಿತು. ಇದು ಜನರನ್ನ ಮತ್ತಷ್ಟು ಕೆರಳಿಸಿತ್ತು. ಕ್ರಮೇಣ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ನೆರವು ಪಡೆದು ಚೇತರಿಸಿಕೊಂಡಿತು. ಈ ಸಂದರ್ಭದಲ್ಲಿ ಭಾರತದ ತಮಿಳುನಾಡಿನಿಂದಲೂ ಅಲ್ಲಿನ ತಮಿಳಿಗರಿಗೆ ನೆರವು ಹೋಗಿತ್ತು ಅನ್ನೋದು ಗಮನಾರ್ಹ.

    ಬಾಂಗ್ಲಾ ಬಿಕ್ಕಟ್ಟು; ಹಸೀನಾ ಭಾರತಕ್ಕೆ ಪಲಾಯನ
    ಬಾಂಗ್ಲಾದಲ್ಲೂ ಬಿಕ್ಕಟ್ಟು ಎದುರಾಗಿದೆ. 2024ರ ಆಗಸ್ಟ್ 5 ರಿಂದ ಸರ್ಕಾರದ ವಿರುದ್ಧ ಜನರು ತಿರುಗಿಬಿದ್ದಿದ್ದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದರು. ತೀವ್ರ ಪ್ರತಿಭಟನೆಯಲ್ಲಿ 300ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಇದೇ ವೇಳೆ ಹಿಂದೂಗಳನ್ನು ಗುರಿಯಾಗಿಸಿ ಹಲವೆಡೆ ಹಿಂಸಾಚಾರ ನಡೆದಿತ್ತು. ಹಸೀನಾ ರಾಜೀನಾಮೆ ನೀಡುತ್ತಿದ್ದಂತೆ ದೇಶದಲ್ಲಿ ಸೇನಾಡಳಿತ ಜಾರಿಗೊಳಿಸಲಾಗಿತ್ತು. ನಂತರ ಮಧ್ಯಂತರ ಸರ್ಕಾರ ರಚನೆಯಾಯಿತು.

  • ನೇಪಾಳಕ್ಕೆ ಮೊದಲ ಮಹಿಳಾ ಪ್ರಧಾನಿ – ಪ್ರಮಾಣವಚನ ಸ್ವೀಕರಿಸಿದ ಸುಶೀಲಾ ಕರ್ಕಿ

    ನೇಪಾಳಕ್ಕೆ ಮೊದಲ ಮಹಿಳಾ ಪ್ರಧಾನಿ – ಪ್ರಮಾಣವಚನ ಸ್ವೀಕರಿಸಿದ ಸುಶೀಲಾ ಕರ್ಕಿ

    ಕಠ್ಮಂಡು: ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ಮಧ್ಯಂತರ ಪ್ರಧಾನಿಯಾಗಿ ಶುಕ್ರವಾರ ರಾತ್ರಿ ಪ್ರಮಾಣ ವಚನ ಸ್ವೀಕರಿಸಿದರು.

    ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರು ಕರ್ಕಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಸುಶೀಲಾ ಕರ್ಕಿ ಅವರ ಮಧ್ಯಂತರ ಸಂಪುಟದಲ್ಲಿ ಯಾವುದೇ ಸಚಿವರನ್ನು ಸೇರಿಸಿಕೊಳ್ಳಲಾಗಿಲ್ಲ.

    ಅಧ್ಯಕ್ಷ ರಾಮ್ ಚಂದ್ರ ಪೌಡೆಲ್, ನೇಪಾಳ ಸೇನಾ ಮುಖ್ಯಸ್ಥ ಜನರಲ್ ಅಶೋಕ್ ರಾಜ್ ಸಿಗ್ಡೆಲ್ ಮತ್ತು ವಾರದ ಆರಂಭದಲ್ಲಿ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ರಾಜೀನಾಮೆಗೆ ಕಾರಣವಾದ ಜನರೇಷನ್ ಝಡ್ ಪ್ರತಿಭಟನಾ ಚಳವಳಿಯ ಪ್ರತಿನಿಧಿಗಳ ನಡುವಿನ ಒಮ್ಮತದ ನಂತರ ಪ್ರಧಾನಿ ಸ್ಥಾನಕ್ಕೆ ಕರ್ಕಿ ಅವರ ಹೆಸರನ್ನು ಅಂತಿಮಗೊಳಿಸಲಾಗಿತ್ತು.

    ಭ್ರಷ್ಟಾಚಾರ ಮತ್ತು ನಿರುದ್ಯೋಗದಿಂದ ಬೇಸತ್ತ ಯುವ ನೇಪಾಳಿಗಳು ನಡೆಸಿದ ಸಾಮೂಹಿಕ ಪ್ರತಿಭಟನೆಗಳ ನಂತರ ಈ ಬೆಳವಣಿಗೆಗಳು ನಡೆದವು. ಪ್ರತಿಭಟನೆಯಲ್ಲಿ 51 ಮಂದಿ ಮೃತಪಟ್ಟಿದ್ದಾರೆ. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆ.ಪಿ.ಶರ್ಮಾ ಓಲಿ ಅವರನ್ನು ದೇಶ ತೊರೆಯುವಂತೆ ಒತ್ತಾಯ ಕೇಳಿಬಂದಿತ್ತು.

    ಸಾಮಾಜಿಕ ಜಾಲತಾಣಗಳ ನಿಷೇಧ ಮತ್ತು ಭ್ರಷ್ಟಾಚಾರದ ವಿರುದ್ಧ ನೇಪಾಳ ಜನತೆ ಸಿಡಿದೆದ್ದು ಭಾರೀ ಪ್ರತಿಭಟನೆ ನಡೆಸಿದ್ದರು. ಸರ್ಕಾರಿ ಕಚೇರಿಗಳು, ಸಂಸತ್‌ ಭವನಕ್ಕೆ ನುಗ್ಗಿ ಧ್ವಂಸಗೊಳಿಸಿದರು. ಸಚಿವರನ್ನು ಹಿಡಿದು ಥಳಿಸಿದರು. ಪ್ರತಿಭಟನೆ ತೀವ್ರತೆ ಅರಿತು ಪ್ರಧಾನಿ ಸ್ಥಾನಕ್ಕೆ ಕೆ.ಪಿ.ಶರ್ಮಾ ಓಲಿ ರಾಜೀನಾಮೆ ನೀಡಿದರು. ಈಗ ನೇಪಾಳ ಹಿಂಸಾಚಾರವನ್ನು ಸೇನೆ ನಿಯಂತ್ರಣಕ್ಕೆ ತಂದಿದೆ.

    ಮುಂದಿನ ಚುನಾವಣೆ ವರೆಗೆ ಉಸ್ತುವಾರಿ ಸರ್ಕಾರವನ್ನು ಮುನ್ನಡೆಸಲು ಕಾರ್ಕಿ ನೇತೃತ್ವದಲ್ಲಿ ಹಂಗಾಮಿ ಸರ್ಕಾರ ರಚನೆ ಬಗ್ಗೆ ಚರ್ಚೆ ನಡೆದಿತ್ತು. ಕಠ್ಮಂಡು ಮೇಯರ್ ಬಾಲೇಂದ್ರ ಶಾ ಹೆಸರು ಕೂಡ ಕೇಳಿಬಂದಿತ್ತು. ಆದರೆ, ಬಾಲೇಂದ್ರ ಅವರು ಹಂಗಾಮಿ ಪ್ರಧಾನಿ ಹುದ್ದೆಯನ್ನು ವಹಿಸಿಕೊಳ್ಳಲು ಉತ್ಸುಕರಾಗಿರಲಿಲ್ಲ. ಕರ್ಕಿ ಅವರ ಹೆಸರಿಗೆ ತಮ್ಮ ಬೆಂಬಲ ನೀಡಿದ್ದರು.

  • ನೇಪಾಳ ದಂಗೆ | Gen-Z ನಲ್ಲಿ ಬಿರುಕು – ಮಧ್ಯಂತರ ಪ್ರಧಾನಿ ಹುದ್ದೆಗೆ ಸುಶೀಲಾ ಕರ್ಕಿ Vs ಕುಲ್ಮನ್ ನಡ್ವೆ ಫೈಟ್‌

    ನೇಪಾಳ ದಂಗೆ | Gen-Z ನಲ್ಲಿ ಬಿರುಕು – ಮಧ್ಯಂತರ ಪ್ರಧಾನಿ ಹುದ್ದೆಗೆ ಸುಶೀಲಾ ಕರ್ಕಿ Vs ಕುಲ್ಮನ್ ನಡ್ವೆ ಫೈಟ್‌

    – ಭಾರತದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಓದಿದ್ದ ಘಿಸಿಂಗ್‌ಗೆ ಹೆಚ್ಚಿನ ಒಲವು

    ಕಠ್ಮಂಡು: ನೇಪಾಳದಲ್ಲಿ (Nepal) ಭುಗಿಲೆದ್ದ ಯುಜನರ ದಂಗೆ ಇಂದು ಹೊಸ ತಿರುವು ಪಡೆದುಕೊಂಡಿದೆ. ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ನೇಪಾಳದ ಮಧ್ಯಂತರ ಪ್ರಧಾನಿಯಾಗಿ (Interim PrimeMinister) ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಝೆನ್ ಝಡ್ ಪ್ರತಿಭಟನಾ ಗುಂಪು ಇಂದು ಅಧಿಕೃತವಾಗಿ ಘೋಷಿಸಿದೆ. ಪ್ರತಿಭಟನಾಕಾರರ ಇನ್ನೊಂದು ವರ್ಗ ಸುಶೀಲಾ ಕರ್ಕಿ (Sushila Karki) ಅವರ ವಿರುದ್ಧ ತಿರುಗಿಬಿದ್ದಿದೆ.

    ಸಂವಿಧಾನವು ಅವರನ್ನ ಪ್ರಧಾನಿಯಾಗಲು ಅನುಮತಿಸಲ್ಲ ಎಂದು ಅಸಮಾಧಾನ ಹೊರಹಾಕಿದೆ. ಅಲ್ಲದೇ ನೇಪಾಳ ವಿದ್ಯುತ್ ಪ್ರಾಧಿಕಾರದ (NIA) ಮಾಜಿ ಸಿಇಓ ಕುಲ್ಮನ್ ಘಿಸಿಂಗ್ ಅವರ ಹೆಸರನ್ನು ಮಧ್ಯಂತರ ಪ್ರಧಾನಿ ಹುದ್ದೆಗೆ ಸೂಚಿಸಿದೆ. ಹೀಗಾಗಿ ಜೆನ್-ಝಡ್ ಚಳವಳಿಯ ನಾಯಕರ ನಡುವೆ ಬಿರುಕು ಉಂಟಾಗಿದೆ. ಈ ನಡುವೆ ಧರಣ್‌ ನಗರಪಾಲಿಕೆ ಮೇಯರ್ ಹಾರ್ಕ್ ಸಂಪಂಗ್ ಅವರ ಹೆಸರು ಕೂಡ ಮುನ್ನೆಲೆಗೆ ಬಂದಿದೆ. ಇದರ ಹೊರತಾಗಿ ಕಠ್ಮಂಡು ಮೇಯರ್ ಬಾಲೆನ್ ಶಾ ಈ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧನಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನೇಪಾಳದ 18 ಜಿಲ್ಲೆಗಳ ಜೈಲಿನಿಂದ 6 ಸಾವಿರಕ್ಕೂ ಹೆಚ್ಚು ಕೈದಿಗಳು ಪರಾರಿ

    ಕುಲ್ಮನ್ ಘಿಸಿಂಗ್‌ಗೆ ಹೆಚ್ಚಿನ ಒಲವು
    ಪ್ರತಿಭಟನಾ (Gen Z Protesters) ನಿರತ ಯುವಕರ ಒಂದು ಬಣವು, ಬಾಲೆನ್‌ ಶಾ ಪ್ರಧಾನಿ ಹುದ್ದೆಗೆ ಆಸಕ್ತಿ ಹೊಂದಿಲ್ಲ, ಹಾರ್ಕ್‌ ಸಂಪಂಗ್‌ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಲು ಸಾಧ್ಯವಿಲ್ಲ. ಇನ್ನೂ ಸುಶೀಲಾ ಕರ್ಕಿ 70 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಅನರ್ಹರೂ ಆಗಿದ್ದಾರೆ. ಆದ್ದರಿಂದ ಕುಲ್ಮನ್‌ ಅವರನ್ನೇ ಆಯ್ಕೆ ಮಾಡುವುದು ಸೂಕ್ತ ಎಂದು ಹೇಳಿದೆ. ಹೀಗಾಗಿ ಘಿಸಿಂಗ್‌ ಆಯ್ಕೆ ಬಗ್ಗೆ ಆಸಕ್ತಿ ತೋರಿದೆ. ಇದನ್ನೂ ಓದಿ: ನೇಪಾಳ ಹಿಂಸಾಚಾರಕ್ಕೆ ಸ್ಥಗಿತಗೊಂಡಿದ್ದ ಕಠ್ಮಂಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಓಪನ್

    ಪ್ರಧಾನಿ ಹುದ್ದೆಗೆ ಕುಲ್ಮನ್‌ ಹೆಸರು ಬರಲು ಕಾರಣ ಏನು?
    54 ವರ್ಷದ ಘಿಸಿಂಗ್ ನೇಪಾಳದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದ್ದ ʻಲೋಡ್‌ ಶೇಡ್ಡಿಂಗ್‌ ಸಮಸ್ಯೆಗೆ ಅಂತ್ಯ ಹಾಡಿದ್ದರು. ಅಂದು ದೇಶದಲ್ಲಿ ದಿನಕ್ಕೆ 18 ಗಂಟೆಗಳ ಕಾಲ ವಿದ್ಯುತ್‌ ಸಮಸ್ಯೆ ಎದುರಿಸಬೇಕಿತ್ತು. ಈ ಸಮಸ್ಯೆ ಬಗೆಹರಿಸಿದ್ದರಿಂದ ದೇಶಕ್ಕೆ ಹೆಚ್ಚಿನ ಲಾಭವಾಯಿತು. ಕುಲ್ಮನ್‌ ಭಾರತದ ಜಾರ್ಖಂಡ್‌ನ ಜಮ್ಶೆ‌ದ್‌ಪುರದ ಪ್ರಾದೇಶಿಕ ತಂತ್ರಜ್ಞಾನ ಸಂಸ್ಥೆಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದರು ಎಂಬುದು ಗಮನಾರ್ಹ.

    ಇನ್ನೂ ನೇಪಾಳದಲ್ಲಿ ನಡೆಯುತ್ತಿರುವ ಯುವಜನರ ದಂಗೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 31ಕ್ಕೆ ಏರಿದೆ. ಶವಗಳನ್ನು ಇರಿಸಲಾಗಿರುವ ತ್ರಿಭುವನ್ ವಿಶ್ವವಿದ್ಯಾಲಯ ಬೋಧನಾ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಪ್ರಕಾರ ಮೃತಪಟ್ಟ 5 ಪುರುಷರು ಮತ್ತು ಒಬ್ಬ ಮಹಿಳೆಯ ಗುರುತುಗಳು ಇನ್ನೂ ಪತ್ತೆಯಾಗಿಲ್ಲ. ಇದಲ್ಲದೇ ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಂಗಳವಾರ ಮುಚ್ಚಲಾಗಿತ್ತು. ಇದನ್ನೂ ಓದಿ: ʻತುಂಬಾ ಅಪಾಯಕಾರಿʼ ದೂರವಿರಿ – ರಷ್ಯಾ ಸೇನೆ ಸೇರುತ್ತಿರುವ ಭಾರತೀಯರಿಗೆ MEA ವಾರ್ನಿಂಗ್‌

    ನೇಪಾಳದಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವ ಕಾರಣ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ನೇಪಾಳದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಸಿಕ್ಕಿಕೊಳ್ಳುವಂತಾಗಿತ್ತು. ಸದ್ಯ ತ್ರಿಭುವನ್ ವಿಮಾನ ನಿಲ್ದಾಣ ಪನರಾರಂಭಗೊಂಡಿದ್ದು, ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಕಂಪನಿಗಳು ನೇಪಾಳದಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಕರೆತರಲು ಹೆಚ್ಚುವರಿ ವಿಮಾನಗಳನ್ನ ವ್ಯವಸ್ಥೆ ಮಾಡಿವೆ.