ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವ ಒಂದು ಪದವೆಂದರೆ ಅದು GEN-Z. ಎಲ್ಲರ ಬಾಯಲ್ಲಿಯೂ ಅದೊಂದೇ. ದೈನಂದಿನ ಜೀವನದಲ್ಲಿ, ದಿನನಿತ್ಯದ ಕ್ರಿಯೆಗಳಲ್ಲಿ, ತಂತ್ರಜ್ಞಾನದಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಎಲ್ಲೆಡೆಯೂ ಅದರ ಧ್ಯಾನವೇ ಎಂದರೆ ತಪ್ಪಾಗಲಿಕ್ಕಿಲ್ಲ. ಈಗಿನ ಪ್ರಸ್ತುತ ಜಗತ್ತಿನಲ್ಲಿ ತಮ್ಮ ಕೌಶಲ್ಯ ಹಾಗೂ ಇನ್ನಿತರ ಕ್ರಿಯೆಗಳ ಮೂಲಕ ಇಂದಿನ ಯುವಕರು GEN-Z ಎಂಬ ಹೊಸ ಯುಗವನ್ನು ಸೃಷ್ಟಿಸಿದ್ದಾರೆ.
ಹೌದು, ಏನಿದು GEN-Z? ಇಂದಿನ ಪೀಳಿಗೆಗೂ GEN-Z ಗೂ ಏನು ಸಂಬಂಧ? ಎಂದು ಹಲವರಲ್ಲಿ ಈ ಪ್ರಶ್ನೆ ಮೂಡಿದ್ದು ನೂರಕ್ಕೂ ನೂರರಷ್ಟು ಸತ್ಯ. ಸರಳ ಪದದಲ್ಲಿ ಹೇಳುವುದಾದರೆ GEN-Z ಎಂದರೆ ಇಂದಿನ ಪ್ರಸ್ತುತ ಜಗತ್ತು ಎನ್ನಬಹುದು. ವಿವರವಾಗಿ ಏನಿದು GEN-Z? ಎನ್ನುವ ಎಲ್ಲ ಪ್ರಶ್ನೆಗಳಿಗೂ ವಿವರವಾದ ಮಾಹಿತಿ ಇಲ್ಲಿದೆ.

ಏನಿದು GEN-Z?
ಪ್ರಾರಂಭದಿಂದಲೂ ಭೂಮಿ ಉಗಮವಾದಾಗಿನಿಂದ ಒಂದೊಂದು ಆಗಿ ಹೊಸತಾದ ಸೃಷ್ಟಿಗಳಾಗುತ್ತಿವೆ. ದಿನಕ್ಕೊಂದು ಹೊಸ ಹೊಸ ಆವಿಷ್ಕಾರಗಳು ಆಗುತ್ತಿವೆ. ಹೀಗಿರುವಾಗ ಹೊಸ ಸಂಶೋಧನೆ ಹಾಗೂ ಹೊಸ ಹೊಸ ಕಲ್ಪನೆಗಳಿಗೆ ಇಂದಿನ ಯುವಕರ ಪಾತ್ರವೂ ಕೂಡ ಇದೆ. ಅದೇ ರೀತಿ ಕ್ರಿ.ಶ ಪ್ರಾರಂಭವಾದಾಗಿನಿಂದ ಇತಿಹಾಸವನ್ನು ನಾವು ನೋಡುತ್ತಾ ಬಂದರೆ ಹೊಸತನವನ್ನು ಕಾಣಬಹುದು. ಇನ್ನು ಸ್ವತಂತ್ರ ಪೂರ್ವ ಭಾರತಕ್ಕೂ ಹಾಗೂ ಸ್ವಾತಂತ್ರೋತ್ತರ ಭಾರತಕ್ಕೂ ತುಂಬಾ ವ್ಯತ್ಯಾಸವಿದೆ. ಇದೆಲ್ಲದಕ್ಕೂ ಆ ಕಾಲದ ಅಥವಾ ಆ ಯುಗದ ಜನರ, ಅಂದಿನ ಯುವಕರ ಪಾತ್ರ ಪ್ರಮುಖವಾದದ್ದು. ಅದರಂತೆ 1997ರ ಮಧ್ಯದಿಂದ 2012ರ ಮೊದಲ ಭಾಗದವರೆಗೆ ಜನಿಸಿದ ಮಕ್ಕಳನ್ನು ನಾವು GEN-Z ಯುಗದವರು ಎಂದು ಕರೆಯಲಾಗುತ್ತದೆ. ಈ ಯುಗದಲ್ಲಿ ಹುಟ್ಟಿದ ಮಕ್ಕಳು ಜಗತ್ತಿನಲ್ಲಿ ಪ್ರಾರಂಭವಾದ ಕೌತುಕ ಮೂಡಿಸುವ ತಾಂತ್ರಿಕ ಯುಗದೊಂದಿಗೆ ಬೆಳೆದವರು. ಅದಲ್ಲದೆ ಈ ಮಕ್ಕಳು ಹೊಸ ಹೊಸ ಸಂಸ್ಕೃತಿ ಹಾಗೂ ವಿಭಿನ್ನ ಕಲೆಯನ್ನು ತಮ್ಮೊಂದಿಗೆ ಬೆಳೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಯುಗದ ಮಕ್ಕಳನ್ನು GEN-Z ಎಂದು ಕರೆಯುತ್ತಾರೆ.

GEN-Z ಯುಗದ ವಿಭಿನ್ನತೆಯೇನು?
- ಯಾವಾಗ ಭೂಮಿಯ ಮೇಲೆ ಇಂಟರ್ನೆಟ್ ಪ್ರಾರಂಭವಾಯಿತು ಅದೇ ಸಮಯದೊಂದಿಗೆ ಜನಿಸಿದ ಮಕ್ಕಳೇ ಇವರು.
- ಅದಲ್ಲದೆ ಡಿಜಿಟಲ್ ಯುಗ ಸೇರಿದಂತೆ ಇನ್ನಿತರ ಬದಲಾವಣೆಗಳೊಂದಿಗೆ ಈ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಂಡರು.
- 1990ಕ್ಕು ಮುನ್ನ ಮೊಬೈಲ್ ಎನ್ನುವುದು ಒಂದು ವಸ್ತುವಾಗಿತ್ತು. ಆದರೆ ಇದರ ನಂತರ ಇಂಟರ್ನೆಟ್ ಪ್ರಾರಂಭವಾದಂತೆ ಮೊಬೈಲ್ ಎಂಬುದು ಜೀವನದ ಒಂದು ಅವಿಭಾಜ್ಯ ಅಂಗವಾಗಿ ಬದಲಾಗಲು ಪ್ರಾರಂಭವಾಯಿತು.
- ಈ GEN-Z ಯುಗವು ಇಂಟರ್ನೆಟ್, ಸೋಶಿಯಲ್ ಮೀಡಿಯಾ ಮತ್ತು ಮೊಬೈಲ್ ಜ್ಞಾನದೊಂದಿಗೆ ಬೆಳೆದು ಬಂದ ಮೊದಲ ಪೀಳಿಗೆ ಇದಾಗಿದೆ.
- ಈ ಪೀಳಿಗೆ ವರ್ಚುಯಲ್ ಹಾಗೂ ಆಫ್ಲೈನ್ ಅನುಭವಗಳನ್ನ ಪಡೆದುಕೊಳ್ಳುತ್ತಾ ಬೆಳೆದ ಯುಗ ಇದಾಗಿದೆ. ಅತ್ಯಂತ ವೈವಿಧ್ಯಮಯ ಯುಗ ಎಂದರೆ ತಪ್ಪಾಗಲಿಕ್ಕಿಲ್ಲ.
- ಈ ಯುಗದಲ್ಲಿ ಪ್ರಾರಂಭವಾದ ಪ್ರತಿಯೊಂದು ತಂತ್ರಜ್ಞಾನ ಸಮಾಜಕ್ಕೆ ಹೆಚ್ಚಿನ ಲಾಭವನ್ನು ಕೊಡುತ್ತಲೇ ಬರುತ್ತದೆ.
- 1997 ರಿಂದ 2012ರ ಮಧ್ಯದಲ್ಲಿ ಜನಿಸಿದ 13 ರಿಂದ 28 ವರ್ಷದ ಒಳಗಿನವರನ್ನು ಈ GEN-Z ಗೆ ಸೇರಿಸಲಾಗುತ್ತದೆ.
- ಇನ್ನು GEN-Z ಸಮಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಬಂದ ನಂತರ ಇದರ ಬಳಕೆ ಹೆಚ್ಚಾಗಿ ಪ್ರಾರಂಭವಾಯಿತು. ಮೊಬೈಲ್, ಸಾಮಾಜಿಕ ಮಾಧ್ಯಮ ಹಾಗೂ ಅಂತರ್ಜಾಲದ ಪ್ರಭಾವ ಜನರ ಮೇಲೆ ಹೆಚ್ಚಾಗಲು ಪ್ರಾರಂಭಿಸಿತು.

GEN-Zಗೂ ಮುನ್ನ ಇದೇ ರೀತಿ ಹಲವು ಯುಗಗಳೆಂದು ಗುರುತಿಸಲಾಗಿತ್ತು.
- The Greatest Generation 1901-1927 : ಈ ಪೀಳಿಗೆಯು ಎರಡನೇ ಮಹಾಯುದ್ಧದ ಸಮಯದಲ್ಲಿ ಪ್ರಬುದ್ಧವಾಯಿತು. ಈ ಸಮಯದಲ್ಲಿ ತಮ್ಮ ಕೆಲಸ ಹಾಗೂ ತ್ಯಾಗದಿಂದಲೇ ಹೆಸರುವಾಸಿಯಾಗಿದ್ದಾರೆ.
- The Silent Generation 1928-1945: Greatest Generation ಪೀಳಿಗೆಯ ನೆರಳಿನಲ್ಲಿ ಬೆಳೆದ ಈ ಯುಗವು ಯುದ್ಧದ ಸಮಯದಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸಿತು.
- Baby Boomers 1946-1964: ಎರಡನೇ ಮಹಾಯುದ್ಧದ ನಂತರ ಸಂಭವಿಸಿದ “ಬೇಬಿ ಬೂಮ್” ನಿಂದ ಈ ಪೀಳಿಗೆಗೆ ಈ ಹೆಸರು ಬಂದಿದೆ. ಬೂಮರ್‌ಗಳು 1960 ಮತ್ತು 70ರ ದಶಕದ ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು,
- Generation X 1965-1980: ಒಂದೇ ಕುಟುಂಬದಲ್ಲಿ ಇಬ್ಬರು ಆದಾಯ ಪಡೆಯುವವರು ಹಾಗೂ ತಾಯಿ ಅಥವಾ ತಂದೆ ಮಾತ್ರ ಇರುವ ಕುಟುಂಬದಲ್ಲಿ ಕೆಲವು ಮಕ್ಕಳು ಅಗತ್ಯ ಮೀರಿ ಕಾಳಜಿಯಲ್ಲಿ ಬೆಳೆದವು. ಹೀಗಾಗಿ ಜೆನ್ X ಎಂದು ಕರೆದರು. ಇದೇ ಯುಗದಲ್ಲಿ ಕಂಪ್ಯೂಟರ್ ಹಾಗೂ ತಂತ್ರಜ್ಞಾನದ ಉದಯವಾಯಿತು.
- Millennials 1981-1996: ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮದ ಬೆಳವಣಿಗೆಯೊಂದಿಗೆ ಬೆಳೆದ ಮೊದಲ ಪೀಳಿಗೆ.
- Generation Z 1997-2012:1997ರ ಮಧ್ಯದಿಂದ 2012ರ ಮೊದಲ ಭಾಗದವರೆಗೆ ಜನಿಸಿದ ಮಕ್ಕಳನ್ನು ನಾವು GEN-Z ಯುಗದವರು ಎಂದು ಕರೆಯಲಾಗುತ್ತದೆ. ಈ ಯುಗದಲ್ಲಿ ಹುಟ್ಟಿದ ಮಕ್ಕಳು ಜಗತ್ತಿನಲ್ಲಿ ಪ್ರಾರಂಭವಾದ ಕೌತುಕ ಮೂಡಿಸುವ ತಾಂತ್ರಿಕ ಯುಗದೊಂದಿಗೆ ಬೆಳೆದವರು. ಅದಲ್ಲದೆ ಈ ಮಕ್ಕಳು ಹೊಸ ಹೊಸ ಸಂಸ್ಕೃತಿ ಹಾಗೂ ವಿಭಿನ್ನ ಕಲೆಯನ್ನು ತಮ್ಮೊಂದಿಗೆ ಬೆಳೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಯುಗದ ಮಕ್ಕಳನ್ನು GEN-Z ಎಂದು ಕರೆಯುತ್ತಾರೆ.
- Generation Alpha 2013-2024: GEN-Z ಪ್ರಾರಂಭವಾದಂತೆ 2012ರ ನಂತರ ಅಂದರೆ 2013 ರಿಂದ 2020 ರ ವರೆಗೆ ಜನಿಸಿದ ಮಕ್ಕಳನ್ನು ಈ ಯುಗಕ್ಕೆ ಸೇರಿಸಲಾಗುತ್ತದೆ. GEN-Z ಯುಗವನ್ನು ಸಂಪೂರ್ಣವಾಗಿ ಅನುಸರಿಸಿಕೊಂಡು ಬಂದ ಯುಗವನ್ನು GEN- ALPHA ಎಂದು ಕರೆಯಲಾಗುತ್ತದೆ. ಈ ಯುಗದಲ್ಲಿ ಕೃತಕ ಬುದ್ಧಿಮತ್ತೆಯನ್ನು ತಮ್ಮ ದೈನಂದಿನ ಜೀವನದ ಭಾಗವನ್ನಾಗಿಸಿಕೊಂಡು ಡಿಜಿಟಲ್ ಜಗತ್ತಿನಲ್ಲಿ ಮುಂದುವರೆಯುತ್ತಿದ್ದಾರೆ.
- Generation Beta 2025-2039: ಇದು ಮುಂದಿನ ಪೀಳಿಗೆಯಾಗಿದ್ದು, ಇವರನ್ನು ಜೆನ್ Z ನ ಮಕ್ಕಳು ಎನ್ನುತ್ತಾರೆ.

GEN-Zಗೂ ನೇಪಾಳ ದಂಗೆಗೂ ಸಂಬಂಧವೇನು?
ಇತ್ತೀಚಿಗೆ ನೇಪಾಳದಲ್ಲಿ ಯುವಜನರ ದಂಗೆ ಭುಗಿಲೆದ್ದಿತ್ತು. ಹೌದು ನೇಪಾಳ ಸರ್ಕಾರವು ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳನ್ನು ಬಂದ್ ಮಾಡಿದ ಪರಿಣಾಮ ದೊಡ್ಡಮಟ್ಟದ ದಂಗೆ ಪ್ರಾರಂಭವಾಗಿತ್ತು. ಈ ಸಮಯದಲ್ಲಿ ಅಲ್ಲಿನ ಯುವಕರು ವಿಪರೀತಮಟ್ಟಕ್ಕೆ ಹೋಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಈ ದಂಗೆಗೆ ನಿಂತ ಆ ಯುವಪೀಳಿಗೆ GEN-Z ಯುಗಕ್ಕೆ ಸೇರಿದ್ದು.

ನೇಪಾಳ ಸರ್ಕಾರ ದೇಶದಲ್ಲಿ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳನ್ನು ನಿಯಂತ್ರಣಕ್ಕೆ ತರುವ ದೃಷ್ಟಿಯಿಂದ ಕೆಲವು ನಿಯಮಗಳನ್ನ ಜಾರಿ ಮಾಡಿತು. Social networks use management directive 2023ರ ಅಡಿಯಲ್ಲಿ ಸ್ಥಳೀಯವಾಗಿರಲಿ ಅಥವಾ ಬೇರೆ ದೇಶದ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಆಗಿರಲಿ. ಇದೆಲ್ಲವನ್ನ ನಿಯಂತ್ರಣಕ್ಕೆ ತರುವ ದೃಷ್ಟಿಯಿಂದ ನೇಪಾಳದ ಸಂವಾದ, ಮಾಧ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನಿರ್ಧರಿಸಿತ್ತು. ಈ ಸಚಿವಾಲಯದ ಅಡಿಯಲ್ಲಿ ಪ್ಲಾಟ್ ಫಾರ್ಮ್ ಗಳು ನೋಂದಣಿ ಮಾಡಿಸಿಕೊಳ್ಳಬೇಕಿತ್ತು. ಈ ನೋಂದಣಿಗಾಗಿ ಒಂದು ಸೀಮಿತ ಅವಧಿಯನ್ನು ನೀಡಿತ್ತು. ಒಂದು ವೇಳೆ ನೋಂದಣಿ ಮಾಡಿಕೊಳ್ಳದಿದ್ದರೆ ಫ್ಲಾಟ್ ಫಾರ್ಮ್ ಗಳನ್ನು ನಿರ್ಬಂಧ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆ ನಿಯಮಗಳನ್ನು ಪಾಲಿಸಿದ ಪ್ಲಾಟ್ ಫಾರ್ಮ್ ಗಳನ್ನು ಮುಕ್ತಾಯ ದಿನಾಂಕದ ಬಳಿಕ ನಿರ್ಬಂಧಿಸಿತ್ತು. ಅದರಂತೆ ನೇಪಾಳದಲ್ಲಿ ಸೆಪ್ಟಂಬರ್ 4ರಂದು ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಪ್, ಯೂಟ್ಯೂಬ್, X ಸೇರಿದಂತೆ 26 ಸಾಮಾಜಿಕ ಮಾಧ್ಯಮ ಆಪ್ ಹಾಗೂ ಸೈಟ್ಗಳ ಮೇಲೆ ನಿರ್ಬಂಧ ಹೇರಿತ್ತು.

ನಿರ್ಬಂಧದ ಬೆನ್ನಲ್ಲೇ ಈ GEN-Z ಯುವಕರು ಪ್ರತಿಭಟನೆಗಿಳಿದರು. ಯುವಕರ ಮೇಲಿನ ವಾಕ್ ಸ್ವಾತಂತ್ರ್ಯ ಕಸಿದುಕೊಂಡಿತು ಹಾಗೂ ಈ ಮೂಲಕ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಯುವಕರು ಮುಗಿಬಿದ್ದರು. ನೇಪಾಳದ ರಾಜಧಾನಿ ಕಠ್ಮಂಡು ಸೇರಿದಂತೆ ಬೇರೆ ಬೇರೆ ನಗರಗಳಲ್ಲಿ ಆಕ್ರೋಶ ಹೊರಹಾಕಿದರು.
ಈ ಪ್ರತಿಭಟನೆಯಲ್ಲಿ 72 ಜನರು ಸಾವನ್ನಪ್ಪಿದರೆ, ಇನ್ನು ಹಲವರು ಗಾಯಗೊಂಡರು. ಈ ಪ್ರತಿಭಟನೆ ಬಳಿಕ ಸೆಪ್ಟೆಂಬರ್ 8-9ರ ನಡುವೆ ನೇಪಾಳ ಸರ್ಕಾರ ತನ್ನ ಸೋಶಿಯಲ್ ಮೀಡಿಯಾ ಬ್ಯಾನ್ ನಿರ್ಧಾರವನ್ನು ಹಿಂತೆಗೆದುಕೊಂಡಿತು. ಅದರಂತೆ ಸದ್ಯ ಬ್ಯಾನ್ ಆಗಿದ್ದ 26 ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ಗಳು ಮತ್ತೆ ಕಾರ್ಯಾರಂಭಿಸಿದವು.













