Tag: ನೇತ್ರಾವತಿ

  • ಉಪ್ಪಿನಂಗಡಿ ಬಳಿ ರಸ್ತೆಗೆ ನುಗ್ಗಿದ ನೀರು – ಮಂಗಳೂರು, ಬೆಂಗಳೂರು ರಸ್ತೆ ಸಂಪರ್ಕ ಬಂದ್

    ಉಪ್ಪಿನಂಗಡಿ ಬಳಿ ರಸ್ತೆಗೆ ನುಗ್ಗಿದ ನೀರು – ಮಂಗಳೂರು, ಬೆಂಗಳೂರು ರಸ್ತೆ ಸಂಪರ್ಕ ಬಂದ್

    ಮಂಗಳೂರು: ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಕುಮಾರಧಾರಾ ಮತ್ತು ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಪ್ರವಾಹದ ಭೀತಿ ಎದುರಾಗಿದೆ.

    ಕುಮಾರಾಧಾರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ನೆಲ್ಯಾಡಿ ಸಮೀಪದ ಉದನೆಯಲ್ಲಿ ಹೆದ್ದಾರಿಗೆ ನೀರು ನುಗ್ಗಿದ ಪರಿಣಾಮ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ಸದ್ಯಕ್ಕೆ ಬಂದ್ ಆಗಿದೆ. ಹೆದ್ದಾರಿಯಲ್ಲಿ ಉದ್ದಕ್ಕೂ ವಾಹನಗಳ ಸರತಿ ಸಾಲಿನಲ್ಲಿ ನಿಂತುಕೊಂಡಿದ್ದು, ಉಪ್ಪಿನಂಗಡಿ ಪೊಲೀಸರು ಹೆದ್ದಾರಿಯಲ್ಲಿ ಬಂದೋಬಸ್ತ್ ಕಲ್ಪಿಸಿದ್ದಾರೆ.

    ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದಲ್ಲಿ ಕುಮಾರಧಾರಾ ನದಿ ನೀರು ನುಗ್ಗಿದ ಪರಿಣಾಮ ನಾಲ್ಕು ಮನೆಗಳಿಗೆ ತೊಂದರೆಯಾಗಿದೆ. ಮನೆಯವರು ಮುಂಜಾಗ್ರತಾ ಕ್ರಮವಾಗಿ ಬೇರೆಡೆಗೆ ಸ್ಥಳಾಂತರಗೊಂಡಿದ್ದು, ಸಂತ್ರಸ್ತರಿಗೆ ಗಂಜಿ ಕೇಂದ್ರದ ವ್ಯವಸ್ಥೆ ಮಾಡಲಾಗುತ್ತಿದೆ.

    ಕುಮಾರಧಾರಾ ನದಿ ನೀರು ಸುಬ್ರಹ್ಮಣ್ಯ ಸ್ನಾನಘಟ್ಟದ ಬಳಿ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಗೂ ನುಗ್ಗಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಅಲ್ಲದೆ ಸುಳ್ಯ-ಸುಬ್ರಹ್ಮಣ್ಯ-ಸಕಲೇಶಪುರ ಸಂಪರ್ಕಿಸುವ ಬಿಸಿಲೆ ಘಾಟ್ ರಸ್ತೆಯಲ್ಲೂ ಮರ ಹಾಗೂ ಗುಡ್ಡ ಕುಸಿದ ಪರಿಣಾಮ ಬಿಸಿಲೆ ಘಾಟ್ ರಸ್ತೆಯಲ್ಲೂ ಸಂಚಾರಕ್ಕೆ ತೊಡಕಾಗಿದೆ.

    ಮತ್ತೆ ಕುಸಿತ: ಚಾರ್ಮಾಡಿ ಘಾಟ್ ನಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ನಾಲ್ಕು ಕಡೆಗಳಲ್ಲಿ ಗುಡ್ಡೆ ರಸ್ತೆಗೆ ಜಾರಿದೆ. 6 ಜೆಸಿಬಿ ಯಂತ್ರದ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ರಸ್ತೆ ಸಂಚಾರವನ್ನು ನಿಷೇಧಿಸಲಾಗಿದೆ.

  • ಎಸ್‍ಎಂಕೆ ಅಳಿಯ ನಾಪತ್ತೆ- ಪೊಲೀಸರಿಂದ ಸಿದ್ದಾರ್ಥ್ ಡ್ರೈವರ್ ವಿಚಾರಣೆ

    ಎಸ್‍ಎಂಕೆ ಅಳಿಯ ನಾಪತ್ತೆ- ಪೊಲೀಸರಿಂದ ಸಿದ್ದಾರ್ಥ್ ಡ್ರೈವರ್ ವಿಚಾರಣೆ

    ಮಂಗಳೂರು: ಉದ್ಯಮಿ ಸಿದ್ದಾರ್ಥ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಕಾರಿನ ಡ್ರೈವರ್ ಬಸವರಾಜ್ ಅವರನ್ನು ಕಂಕನಾಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಏಕಾಏಕಿ ಸಿದ್ದಾರ್ಥ್ ನಾಪತ್ತೆಯಾಗಿದ್ದರಿಂದ ನೇತ್ರಾವತಿ ಸೇತುವೆಯ ಬಳಿ ತೀವ್ರ ಆತಂಕ ಎದುರಾಗಿದ್ದು, ಇತ್ತ ಕಂಕನಾಡಿ ಪೊಲೀಸರು ಬಸವರಾಜ್ ನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯ ವೇಳೆ ಬಸವರಾಜ್, `ಸಾಹೇಬ್ರು ಇಂಗ್ಲೀಷ್ ನಲ್ಲಿ ಮಾತನಾಡುತ್ತಿದ್ದರು. ಹೀಗಾಗಿ ನನಗೆ ಅದು ಅರ್ಥವಾಗಲಿಲ್ಲ’ ಎಂದು ಹೇಳಿದ್ದಾರೆ.

    ಸಿದ್ದಾರ್ಥ್ ಅವರು ತಮ್ಮ ಪರ್ಸ್ ಹಾಗೂ ಇನ್ನಿತರ ವಸ್ತುಗಳನ್ನು ಕಾರಿನಲ್ಲೇ ಬಿಟ್ಟು ಮೊಬೈಲ್ ನಲ್ಲಿ ಮಾತನಾಡಿಕೊಂಡು ಸೇತುವೆಯ ಮೇಲೆ ಏಕಾಂಗಿಯಾಗಿ ಹೋಗಿದ್ದಾರೆ. ಹೀಗೆ ಹೋದವರು ಕೆಲ ಹೊತ್ತು ಬರದಿದ್ದರಿಂದ ಅವರನ್ನು ಬಸರಾಜ್ ಅವರು ಕಾರಿನಲ್ಲೇ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಈ ವೇಳೆ ಸಿದ್ದಾರ್ಥ್ ಅವರು `ನೀನು ಬರಬೇಡ ಇಲ್ಲೇ ಇರು’ ಎಂದು ಹೇಳಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ತಮ್ಮ ಡ್ರೈವರ್ ಗೆ ಬರಬೇಡ ಎಂದು ತಿಳಿಸಿ ಹೋದ ಸಿದ್ದಾರ್ಥ್ ಮತ್ತೆ ಬರದೇ ಇದ್ದಾಗ ಆತಂಕಗೊಂಡ ಬಸವರಾಜ್, ಸಿದ್ದಾರ್ಥ್ ಅವರ ಕುಟುಂಬಸ್ಥರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೆಫೆ ಕಾಫಿ ಡೇ ಮಾಲೀಕ, ಎಸ್‍ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ನಾಪತ್ತೆ

    ಕೂಡಲೇ ಪೊಲೀಸರು ದೌಡಾಯಿಸಿದ್ದಾರೆ. ಆದರೆ ಒಂದೆ ಕತ್ತಲು ಹಾಗೂ ಇನ್ನೊಂದೆಡೆ ಮಳೆ ಸುರಿಯುತ್ತಿದ್ದರಿಂದ ಹುಡುಕಾಟ ನಡೆಸಲು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದಲೇ ಸ್ಥಳಕ್ಕೆ ಸಾಕಷ್ಟು ಮಂದಿ ಪೊಲೀಸರು, ಅಗ್ನಿಶಾಮಕ ದಳ, ಹಾಗೂ ಸಾರ್ವಜನಿಕರು ದೌಡಾಯಿಸಿ ಸಿದ್ದಾರ್ಥ್ ಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. 2 ಬೋಟ್ ಗಳಲ್ಲಿ ಈಜು ತಜ್ಞರು ಶೋಧ ಕಾರ್ಯ ಕೈಗೊಂಡಿದ್ದಾರೆ.

  • ಧರ್ಮಸ್ಥಳದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಸರ್ಕಾರ ಚಿಂತನೆ

    ಧರ್ಮಸ್ಥಳದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಸರ್ಕಾರ ಚಿಂತನೆ

    ಬೆಂಗಳೂರು: ಧರ್ಮಸ್ಥಳದಲ್ಲಿ ಚೆಕ್ ಡ್ಯಾಂ ನಿರ್ಮಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

    ಈ ಬಾರಿ ಧರ್ಮಸ್ಥಳದಲ್ಲೂ ನೀರಿನ ಅಭಾವ ಉಂಟಾಗಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಸರ್ಕಾರ ಚೆಕ್ ಡ್ಯಾಂ ನಿರ್ಮಿಸಿ ನೀರಿನ ಸಮಸ್ಯೆ ಪರಿಹರಿಸಲು ಮುಂದಾಗಿದೆ.

    ಮುಖ್ಯಮಂತ್ರಿ ಸಲಹೆ ಮೇರೆಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಧರ್ಮಸ್ಥಳದಲ್ಲಿರುವ ನೀರಿನ ಅಭಾವದ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಇನ್ನೊಂದು ಚೆಕ್‍ಡ್ಯಾಂ ನಿರ್ಮಾಣ ಮಾಡಿಕೊಡುವಂತೆ ಶ್ರೀ ಹೆಗ್ಗಡೆಯವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳ ಸೂಚನೆಯಂತೆ ದ.ಕ. ಜಿ.ಪಂ. ಸಿಇಒ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆಗಾಗಿ ಇಂದು ಸಂಜೆ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಟ್ವಿಟ್ಟರ್‍ ನಲ್ಲಿ ತಿಳಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಡಾ.ಡಿ ವೀರೇಂದ್ರ ಹೆಗ್ಗಡೆ ಅವರು, 15 ದಿನ ಮಳೆ ಬರದಿದ್ದರೆ ಮಂಜುನಾಥನ ಅಭಿಷೇಕಕ್ಕೂ ನೀರಿಲ್ಲ. ಈಗ ಅಭಿಷೇಕಕ್ಕೆ ನೇತ್ರಾವತಿಯಲ್ಲಿ ತಾತ್ಕಲಿಕವಾಗಿ ನೀರಿದೆ ಎಂದು ತಮ್ಮ ಕಳವಳವನ್ನು ಹೊರಹಾಕಿದ್ದರು.

    ಶ್ರೀ ಕ್ಷೇತ್ರದಲ್ಲಿ ನೀರಿನ ಅಭಾವ ಇರುವ ಹಿನ್ನೆಲೆ ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳ ಉಪಯೋಗಕ್ಕೆ ಅಧಿಕ ಪ್ರಮಾಣದ ನೀರು ಬೇಕಾಗುತ್ತದೆ. ಆದ್ದರಿಂದ ಭಕ್ತಾದಿಗಳು ಹಾಗೂ ಪ್ರವಾಸಿಗರು ತಮ್ಮ ಪ್ರವಾಸವನ್ನು ಕೆಲವು ದಿನಗಳ ಕಾಲ ಮುಂದೂಡಿ ಸಹಕರಿಸುವಂತೆ ವೀರೇಂದ್ರ ಹೆಗ್ಗಡೆಯವರು ಮನವಿಯನ್ನು ಮಾಡಿಕೊಂಡಿದ್ದರು.