Tag: ನೇತ್ರಾವತಿ ನದಿ

  • ಯುವಕ ಪ್ರಾಣ ಉಳಿಸಲು ನದಿಗೆ ಜಿಗಿದ ಸಾಹಸಿಗರಿಗೆ ಒಮನ್ ಕೆಸಿಎಫ್‍ಯಿಂದ ಶ್ಲಾಘನೆ

    ಯುವಕ ಪ್ರಾಣ ಉಳಿಸಲು ನದಿಗೆ ಜಿಗಿದ ಸಾಹಸಿಗರಿಗೆ ಒಮನ್ ಕೆಸಿಎಫ್‍ಯಿಂದ ಶ್ಲಾಘನೆ

    ಮಂಗಳೂರು: ದಕ್ಷಿಣ ಜಿಲ್ಲೆಯ ಬಂಟ್ವಾಳದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಸ್ಥಳೀಯ ಯುವಕರ ತಂಡ ಜೀವದ ಹಂಗು ತೊರೆದು ನದಿಗೆ ಜಿಗಿದು ಬದುಕಿಸಲು ಪ್ರಯತ್ನ ಪಟ್ಟ ಘಟನೆ ಮೆಚ್ಚುಗೆಗೆ ಪಾತ್ರವಾಗಿತ್ತು. ಇಂತಹ ಮಾನವೀಯತೆ ಮೆರೆದ ತಂಡಕ್ಕೆ ಕರ್ನಾಟಕ ಕಲ್ಚರಲ್ ಫೌಂಡೇಷನ್ ಒಮಾನ್ ರಾಷ್ಟ್ರೀಯ ಸಮಿತಿಯು ಅಭಿನಂದನೆ ಸಲ್ಲಿಸಿದೆ.

    ಮೇ 24 ರಂದು ಬಂಟ್ವಾಳದ ಪಾಣೆಮಂಗಳೂರಿನಲ್ಲಿ ನೇತ್ರಾವತಿ ನದಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ಈ ಸಂಧರ್ಭ ಗೂಡಿನಬಳಿಯ ನಿವಾಸಿಗಳಾದ ಮುಹಮ್ಮದ್, ಸಮೀರ್, ಝಾಯಿದ್, ಆರಿಫ್, ಮುಕ್ತಾರ್ ತೌಸೀಫ್ ರವರು ಜಾತಿ ಧರ್ಮವನ್ನು ಲೆಕ್ಕಿಸದೆ ಕೂಡಲೇ ತಮ್ಮ ಜೀವ ಪಣಕ್ಕಿಟ್ಟು ನದಿಗೆ ಜಿಗಿದಿದ್ದರು. ಯುವಕನನ್ನು ನದಿಯಿಂದ ದಡಕ್ಕೆ ಎಳೆತಂದು ಪ್ರಥಮ ಚಿಕಿತ್ಸಾ ವಿಧಾನಗಳನ್ನು ನೀಡುವುದರ ಮೂಲಕ ರಕ್ಷಿಸಲು ಪ್ರಯತ್ನಿಸಿದ್ದರು.

    ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. ನಂತರ ಯುವಕರು ನದಿಗೆ ಜಿಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿ ಮೆಚ್ಚುಗೆ ಗಳಿಸಿತ್ತು. ಈದುಲ್ ಫಿತ್ರ್ ಹಬ್ಬ ಆಚರಿಸುವ ದಿನದಂದು ನಡೆದ ಘಟನೆಯು ಇಸ್ಲಾಮ್ ಜಗತ್ತಿಗೆ ಶಾಂತಿ, ಸೌಹಾರ್ದತೆ, ತ್ಯಾಗವನ್ನು ನೆನಪಿಸುವ ಮಾನವೀಯತೆಯ ಸಂದೇಶವನ್ನು ನೀಡಿದ್ದಾರೆ. ಇಡೀ ನಾಡು ಹೆಮ್ಮೆಪಡುವಂತಹ ಇವರ ಸೇವೆಯು ಶ್ಲಾಘನೀಯ ಎಂದು ಕೆಸಿಎಫ್ ಒಮಾನ್ ಪ್ರತಿನಿಧಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಸ್ವಚ್ಛತಾ ಕಾರ್ಯ

    ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಸ್ವಚ್ಛತಾ ಕಾರ್ಯ

    – 6 ಲಾರಿ ಬಟ್ಟೆ, 8 ಲಾರಿ ತ್ಯಾಜ್ಯ ನದಿಯಿಂದ ಹೊರಕ್ಕೆ

    ಮಂಗಳೂರು: ಉಜಿರೆಯ ಶ್ರೀ ಜನಾರ್ದನ ಸೇವಾ ಸಮಿತಿಯು ಕಳೆದ ಕೆಲ ತಿಂಗಳ ಹಿಂದೆ ಆರಂಭಗೊಂಡಿದ್ದು, ಇದರ ಪ್ರಥಮ ಸೇವೆಯಾಗಿ ಧರ್ಮಸ್ಥಳದಲ್ಲಿ ಜೀವನದಿ ನೇತ್ರಾವತಿಯ ಸ್ವಚ್ಛತಾ ಕಾರ್ಯವನ್ನು 500 ಮಂದಿ ಸ್ವಯಂ ಸೇವಕರ ತಂಡದವರು ಸೇವೆಯಾಗಿ ಮಾಡಿದರು.

    ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸ್ವಚ್ಛತೆ ನಡೆಸಿ 6 ಲಾರಿ ಲೋಡ್ ಬಟ್ಟೆ ತ್ಯಾಜ್ಯ 2 ಲೋಡ್ ಕಟ್ಟಿಗೆ ಹಾಗೂ 8 ಲೋಡ್ ತ್ಯಾಜ್ಯವನ್ನು ನದಿಯಿಂದ ತೆಗೆದು ಸ್ವಚ್ಛಗೊಳಿಸಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಡಾ. ಬಿ. ಯಶೋವರ್ಮ ಭೇಟಿ ನೀಡಿ ಸೇವಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಉಜಿರೆಯ ಹಿರಿಯ ಸಮಾಜ ಸೇವಾಕರ್ತ ರಾಮಚಂದ್ರ ಶೆಟ್ಟಿ ಸ್ವಚ್ಛತಾ ಕಾರ್ಯವನ್ನು ಉದ್ಘಾಟಿಸಿದರು. ಶರತ್‍ಕೃಷ್ಣ ಪಡ್ವೆಟ್ನಾಯ, ಅನ್ನಪೂರ್ಣ ಛತ್ರದ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಸಾದ್, ಉಜಿರೆಯ ಉದ್ಯಮಿ ರಾಜೇಶ್ ಪೈ ಹಾಗೂ ಮೋಹನ ಕುಮಾರ್ ನೇತೃತ್ವದಲ್ಲಿ ಸ್ವಚ್ಛತಾ ಸೇವೆ ನಡೆಯಿತು.

    ಆರು ನೂರು ಮಂದಿ ಸಕ್ರಿಯ ಸ್ವಯಂ ಸೇವಕರ ತಂಡ ಶ್ರೀ ಜನಾರ್ದನ ಸ್ವಾಮಿ ಸೇವಾ ಸಮಿತಿ ಉಜಿರೆಯಲ್ಲಿ ಕಳೆದ ಜನವರಿ 21 ರಂದು ಉಜಿರೆ ಜಾತ್ರೆ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜರಿಂದ ಉದ್ಘಾಟನೆಗೊಂಡಿತ್ತು. ಕಳೆದ ಜೂನ್ ತಿಂಗಳಿನಲ್ಲಿ ಮುಂಡಾಜೆ, ಚಾರ್ಮಾಡಿ ಪರಿಸರದಲ್ಲಿ ನೆರೆ ಪೀಡಿತರಿಗೆ ಸಂಕಷ್ಟದ ಸಂದರ್ಭ ಅಭಯಹಸ್ತ ನೀಡಿ ಸಹಕರಿಸಿತ್ತು. ಪ್ರಾಕೃತಿಕ ವಿಕೋಪಗಳು ಮುಂದೆ ಸಂಭವಿಸಿದಾಗ ನೆರವು ನೀಡಲು ಹಾಗೂ ಸೇವೆ ನೀಡಲು 600 ಜನರ ವ್ಯವಸ್ಥಿತ ಸ್ವಯಂ ಸೇವಕರ ತಂಡವನ್ನು ರಚಿಸಿದೆ.

    ಈ ತಂಡ ಇನ್ನೂ ಸಾಕಷ್ಟು ಸೇವಾ ಕಾರ್ಯಗಳನ್ನು ಮಾಡಲು ತಯಾರಿ ನಡೆಸಿದ್ದು, ಈಗಾಗಲೇ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

  • ನೇತ್ರಾವತಿ ನದಿಯಲ್ಲಿ ದೋಣಿ ಪಲ್ಟಿಯಾಗಿ ಯುವತಿ ಸಾವು

    ನೇತ್ರಾವತಿ ನದಿಯಲ್ಲಿ ದೋಣಿ ಪಲ್ಟಿಯಾಗಿ ಯುವತಿ ಸಾವು

    – ಮಂಗ್ಳೂರಿನ ಉಳ್ಳಾಲ ಉಳಿಯ ಬಳಿ ದುರಂತ

    ಮಂಗಳೂರು: ನೇತ್ರಾವತಿ ನದಿಯಲ್ಲಿ ದೋಣಿ ಪಲ್ಟಿಯಾಗಿ ಯುವತಿಯೋರ್ವಳು ಮೃತಪಟ್ಟ ಘಟನೆ ಉಳ್ಳಾಲ ಸಮೀಪದ ಉಳಿಯಲ್ಲಿ ನಡೆದಿದೆ.

    ಮಂಜೇಶ್ವರ ಮಿಯಪದವು ನಿವಾಸಿ ರೆನಿಟಾ (18) ಮೃತ ಯುವತಿ. ಈ ದುರ್ಘಟನೆ ಕಲಬುರಗಿ ಜಿಲ್ಲೆಯ ನಿವಾಸಿ ಕಾವ್ಯ (20) ನೀರಿಗೆ ಬಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ. ಉಳಿದಂತೆ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ತೊಕ್ಕೊಟ್ಟು ಚರ್ಚ್ ನ ವಾರ್ಷಿಕೋತ್ಸವಕ್ಕೆಂದು ಮಂಗಳೂರಿನ ಉಳ್ಳಾಲ ಉಳಿಯದಲ್ಲಿರುವ ಸ್ಥಳೀಯ ನಿವಾಸಿ ಜಾರ್ಜ್ ಎಂಬವರ ಮನೆಗೆ ಯುವತಿಯರ ತಂಡವೊಂದು ಬಂದಿದ್ದತ್ತು. ಭಾನುವಾರ ಜಾರ್ಜ್ ಅವರ ದೋಣಿಯಲ್ಲಿ ಉಲ್ಲಾಳದ ಉಳಿಯ ದ್ವೀಪಕ್ಕೆಂದು ಸಾಗುತ್ತಿದ್ದರು. ಈ ವೇಳೆ ಆಯ ತಪ್ಪಿ ದೋಣಿ ಪಲ್ಟಿಯಾಗಿದ್ದು ದೋಣಿಯಲ್ಲಿದ್ದ 6 ಮಂದಿ ಯುವತಿಯರು ನದಿ ನೀರಿಗೆ ಬಿದ್ದಿದ್ದರು. ತಕ್ಷಣ ದೋಣಿಯ ಅಂಬಿಗ ಎಲ್ಲರನ್ನೂ ಬಚಾವ್ ಮಾಡುವ ಪ್ರಯತ್ನ ಮಾಡಿದ್ದರೂ ರೆನಿಟಾ ಸಾವನ್ನಪ್ಪಿದ್ದಾರೆ.

    ಯುವತಿ ಕಾವ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನ ಸಮೀಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅದೃಷ್ಟವಶಾತ್ ಅಂಬಿಗನ ಸಮಯ ಪ್ರಜ್ಞೆಯಿಂದ ನಾಲ್ವರು ಯುವತಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ನೇತ್ರಾವತಿ ನದಿಗೆ ಮತ್ತೊಂದು ಜೀವ ಆಹುತಿ

    ನೇತ್ರಾವತಿ ನದಿಗೆ ಮತ್ತೊಂದು ಜೀವ ಆಹುತಿ

    – ಸೂಸೈಡ್ ಪಾಯಿಂಟ್‍ನಿಂದ ನದಿಗೆ ಹಾರಿ ಯುವಕ ಆತ್ಮಹತ್ಯೆ

    ಮಂಗಳೂರು: ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ್ ಅವರ ಕಾರು ಕೊನೆಯದಾಗಿ ಪತ್ತೆಯಾದ ಮಂಗಳೂರಿನ ನೇತ್ರಾವತಿ ಸೇತುವೆ ಈಗ ಸೂಸೈಡ್ ಪಾಯಿಂಟ್ ಆಗಿ ಪರಿವರ್ತನೆಯಾಗಿದ್ದು, ಈವರೆಗೆ ಸುಮಾರು 8 ಜನ ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಯುವಕನೊಬ್ಬ ಇಂದು ಮುಂಜಾನೆ ಸೇತುವೆ ಮೇಲೆ ತನ್ನ ಬೈಕ್ ನಿಲ್ಲಿಸಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳೂರಿನ ಉಳ್ಳಾಲಬೈಲು ನಿವಾಸಿ ನವೀಶ್ ಕೊಟ್ಟಾರಿ (28) ಆತ್ಮಹತ್ಯೆ ಮಾಡಿಕೊಂಡ ಯುವಕ.

    ನವೀಶ್ ಕೊಟ್ಟಾರಿ ಇಂದು ಬೆಳಗ್ಗೆ ಸುಮಾರು 6.30 ಗಂಟೆಗೆ ಜಪ್ಪಿನಮೊಗರು ಸಮೀಪ ಇರುವ ನೇತ್ರಾವತಿ ಸೇತುವೆಗೆ ತನ್ನ ಬೈಕ್‍ನಲ್ಲಿ ಬಂದಿದ್ದ. ಕೆಲ ಕಾಲ ಸೇತುವೆಯ ಮೇಲೆ ನಿಂತುಕೊಂಡಿದ್ದ ನವೀಶ್ ಬಳಿಕ ಏಕಾಏಕಿ ಜನ ಸಂಚಾರ ಇದ್ದಾಗಲೇ ಸೇತುವೆಯಿಂದ ನದಿಗೆ ಹಾರಿದ್ದಾರೆ. ತಕ್ಷಣ ಸ್ಥಳೀಯ ಈಜುಗಾರರು, ಅಗ್ನಿಶಾಮಕ ದಳ, ಪೊಲೀಸರು ಶೋಧ ಕಾರ್ಯ ನಡೆಸಿದ್ದು, ನವೀಶ್ ಕೊಟ್ಟಾರಿ ಮಾತ್ರ ಪತ್ತೆಯಾಗಲಿಲ್ಲ.

    ಉಳ್ಳಾಲದ ಕೋಟೆಪುರ ಸಮುದ್ರ ಕಿನಾರೆಯಲ್ಲಿ ಮಧ್ಯಾಹ್ನ ನವೀಶ್ ಕೊಟ್ಟಾರಿಯ ಮೃತದೇಹ ಪತ್ತೆಯಾಗಿದೆ. ತೊಕ್ಕೊಟ್ಟು ಸಮೀಪದ ಕುತ್ತಾರು ಎಂಬಲ್ಲಿ ಶಾಮಿಯಾನದ ಅಂಗಡಿ ನಡೆಸುತ್ತಿದ್ದ ನವೀಶ್ ಕೊಟ್ಟಾರಿ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಲಿದೆ. ಈ ಸಂಬಂಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಪ್ರವಾಹದಲ್ಲಿ ಸಿಲುಕಿದ್ದ ಜನಾರ್ದನ ಪೂಜಾರಿ ರಕ್ಷಣೆ

    ಪ್ರವಾಹದಲ್ಲಿ ಸಿಲುಕಿದ್ದ ಜನಾರ್ದನ ಪೂಜಾರಿ ರಕ್ಷಣೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯಲ್ಲಿ ಭಾರೀ ಮಳೆ ಮುಂದುವರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಬಂಟ್ವಾಳ ತಾಲೂಕಿನಲ್ಲಿ ಹಲವೆಡೆ ನೇತ್ರಾವತಿ ನೆರೆ ನೀರು ನುಗ್ಗಿದ್ದು ನೂರಾರು ಮನೆಗಳು ಜಲಾವೃತಗೊಂಡಿವೆ.

    ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಬಂಟ್ವಾಳ ಪೇಟೆಗೆ ನೀರು ನುಗ್ಗಿರುವುದರಿಂದ ಎನ್‍ಡಿಆರ್ ಎಫ್ ತಂಡ ರಕ್ಷಣಾ ಕಾರ್ಯಾಚರಣೆಗೆ ಇಳಿದಿದೆ. ಬಿ.ಸಿ ರೋಡ್ ಬಳಿಯ ಜಕ್ರಿಬೆಟ್ಟು, ಬಡ್ಡಕಟ್ಟೆ, ಭಂಡಾರಿಬೆಟ್ಟು ಎಂಬಲ್ಲಿ ಸಂತ್ರಸ್ತರನ್ನು ಎನ್‍ಡಿಆರ್ ಎಫ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಾಂತರ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಬಿ.ಸಿ.ರೋಡ್ ಬಳಿಯ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಮನೆಗೆ ಜಲ ದಿಗ್ಬಂಧನವಾಗಿದ್ದು, ಅವರ ಕುಟುಂಬವನ್ನು ರಕ್ಷಣೆ ಮಾಡಿ ಬೋಟ್ ಮೂಲಕ ಸುರಕ್ಷಿತ ಪ್ರದೇಶಕ್ಕೆ ಕರೆತರಲಾಗಿದೆ. ಈ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿರುವ ಜನರ ರಕ್ಷಣೆಗೆ ಎನ್‍ಡಿಆರ್ ಎಫ್ ತಂಡ ನಿರಂತರವಾಗಿ ಶ್ರಮವಹಿಸುತ್ತಿದೆ.

    ಬಂಟ್ವಾಳ ಸಮೀಪ ಇರುವ ಪ್ರದೇಶ ಬಹುತೇಕ ನೀರಿನಲ್ಲಿ ಮುಳುಗಡೆಯಾಗಿದ್ದು, ಈಗಾಗಲೇ ಹಲವು ಮನೆಗಳಿಗೆ ನೀರು ನುಗ್ಗಿದೆ. ರಸ್ತೆಯಲ್ಲಿ ನಿಂತಿರುವ ಲಾರಿಗಳು ನೀರಿನಲ್ಲಿ ಮುಳುಗುಡೆಯಾಗಿರುವ ದೃಶ್ಯಗಳು ಕಾಣಸಿಗುತ್ತದೆ. ಎಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಮಾಹಿತಿ ಸಿಗುತ್ತೋ ಅಲ್ಲಿಗೆ ತೆರಳಿ ರಕ್ಷಣಾ ತಂಡಗಳು ಅವರ ನೆರವಿಗೆ ಬರುವ ಕಾರ್ಯವನ್ನು ಮಾಡುತ್ತಿವೆ. ಜಿಲ್ಲಾಡಳಿತ ಕೂಡ ನೇತ್ರಾವತಿ ನದಿ ದಡದಲ್ಲಿ ಇರುವ ನಿವಾಸಿಗಳಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚನೆ ನೀಡಿದೆ.

  • ನದಿ ಪ್ರವಾಹದಲ್ಲಿ ಯುವಕರ ಹುಚ್ಚು ಸಾಹಸ

    ನದಿ ಪ್ರವಾಹದಲ್ಲಿ ಯುವಕರ ಹುಚ್ಚು ಸಾಹಸ

    ಮಂಗಳೂರು: ರಾಜ್ಯದ ಬಹುತೇಕ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ನೇತ್ರಾವತಿ ನದಿ ಸಹ ತುಂಬಿ ಹರಿಯುತ್ತಿದ್ದು, ಕೆಲ ಯುವಕರು ಸೇತುವೆ ಮೇಲಿಂದ ಜಿಗಿಯುವ ಮೂಲಕ ತಮ್ಮ ಹುಚ್ಚಾಟವನ್ನು ಪ್ರದರ್ಶಿಸುತ್ತಿದ್ದಾರೆ.

    ಬಂಟ್ವಾಳದ ಪಾಣೆಮಂಗಳೂರಿನಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಎದುರೇ ಸೇತುವೆ ಮೇಲಿಂದ ನದಿಗೆ ಜಿಗಿದು ಯುವಕರು ಈಜಾಡುತ್ತಿದ್ದಾರೆ. ಯುವಕರ ಹುಚ್ಚು ಸಾಹಸ ನೋಡಲು ಸ್ಥಳದಲ್ಲಿ ಜನ ಜಾತ್ರೆಯ ರೀತಿಯಲ್ಲಿ ಸೇರಿದ್ದಾರೆ.

    ಕೆಲವು ದಿನಗಳ ಹಿಂದೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗದ್ದಗಿ ಗ್ರಾಮದ ಯುವಕರು ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಈಜುವ ಸ್ಪರ್ಧೆ ನಡೆಸಿದ್ದರು. ಗಂಗಮ್ಮನ ಕಟ್ಟೆಯಿಂದ ಸಾಯಿ ಬಾಬಾ ಮಂದಿರದವರೆಗೆ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ಕೃಷ್ಣ ನದಿ ಬಲ ಮತ್ತು ಎಡದಂಡೆಯ ಗ್ರಾಮದ 8-10 ಯುವಕರು ಈಜಿದ್ದರು. 5-10 ಸಾವಿರ ರೂ. ಹಾಗೂ ಕುರಿಮರಿಗಾಗಿ 3 ಕಿ.ಮೀ. ಈಜಲು ಬೆಟ್ಟಿಂಗ್ ಕಟ್ಟಿಕೊಂಡಿದ್ದರು. ಪ್ರವಾಹದಲ್ಲಿ ಈಜಿ ದಂಡ ಸೇರಲು ಹರಸಾಹಸವೇ ಪಟ್ಟಿದ್ದರು.

  • ಮೊಬೈಲ್ ಸ್ವಿಚ್ಛ್ ಆಫ್ ಮಾಡಿ ನದಿಗೆ ಹಾರಿದ್ದ ಸಿದ್ಧಾರ್ಥ್ – ಪ್ಯಾಂಟ್ ಕಿಸೆಯಲ್ಲಿತ್ತು ಫೋನ್

    ಮೊಬೈಲ್ ಸ್ವಿಚ್ಛ್ ಆಫ್ ಮಾಡಿ ನದಿಗೆ ಹಾರಿದ್ದ ಸಿದ್ಧಾರ್ಥ್ – ಪ್ಯಾಂಟ್ ಕಿಸೆಯಲ್ಲಿತ್ತು ಫೋನ್

    ಮಂಗಳೂರು: ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆಯಲ್ಲಿ ತನ್ನ ಫೋನಿನಲ್ಲಿ ಮಾತನಾಡಿಕೊಂಡು ಹೋದ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಮತ್ತೆ ಹಿಂದಿರುಗಿ ಬರಲೇ ಇಲ್ಲ. ಇಂದು ಪತ್ತೆಯಾದ ಅವರ ಮೃತದೇಹದ ಪ್ಯಾಂಟಿನ ಕಿಸೆಯಲ್ಲಿ ಮೊಬೈಲ್ ಸಿಕ್ಕಿದೆ.

    ಸೋಮವಾರ ಕಾಣೆಯಾಗಿದ್ದ ಸಿದ್ಧಾರ್ಥ್ ಅವರು ಇಂದು ನೇತ್ರಾವತಿ ನದಿ ಸೇತುವೆಯ ಕೆಲ ದೂರದಲ್ಲಿರುವ ಹೊಯಿಗೆ ಬಜಾರ್ ಎಂಬಲ್ಲಿ ಮೀನುಗಾರರಿಗೆ ಶವವಾಗಿ ದೊರೆತಿದ್ದಾರೆ. ಇವರ ಮೃತದೇಹದ ಪ್ಯಾಂಟ್ ಕಿಸೆಯಲ್ಲಿ ನೋಕಿಯಾ ಕಂಪನಿಗೆ ಸೇರಿದ ಮೊಬೈಲ್ ಸಿಕ್ಕಿದ್ದು, ಆತ್ಮಹತ್ಯೆಗೂ ಮುನ್ನ ಅದೇ ಮೊಬೈಲ್ ನಲ್ಲಿ ಮಾತನಾಡಿದ್ದಾರೆ. ಆಪ್ತರ ಜೊತೆ ಕರೆ ಮಾಡಿದ ಬಳಿಕ ಫೋನ್ ಸ್ವಿಚ್ಛ್ ಆಫ್ ಮಾಡಿ ನದಿಗೆ ಜಿಗಿದಿರಬಹುದು ಎಂದು ಶಂಕಿಸಲಾಗುತ್ತಿದೆ.

    ಸದ್ಯ ಮೃತದೇಹದಲ್ಲಿನ ಗಾಯಗಳ ಬಗ್ಗೆ ಪೊಲೀಸರು ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ಆತ್ಮಹತ್ಯೆ ಮಾಡಿ 36 ಗಂಟೆ ಕಳೆದರೂ ಮುಖದಲ್ಲಿ ರಕ್ತ ಸೋರಿಕೆ ಹಿನ್ನೆಲೆಯಲ್ಲಿ ಈ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಮಧ್ಯೆ ಸಿದ್ಧಾರ್ಥ್ ಅವರು ಧರಿಸಿದ್ದ ಕಪ್ಪು ಬಣ್ಣದ ಟೀ ಶರ್ಟ್ ಇನ್ನೂ ಪತ್ತೆಯಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಮೊಬೈಲ್ ಲೊಕೇಷನ್:
    ಸಿದ್ಧಾರ್ಥ್ ಅವರು ಸೋಮವಾರ ಸಂಜೆ 6.30ರ ಸುಮಾರಿಂದ ನಾಪತ್ತೆಯಾಗಿದ್ದು, ಮಂಗಳವಾರ ಮುಂಜಾನೆಯಿಂದ ಸಿದ್ದಾರ್ಥ್ ಅವರ ಕಾರು ಚಾಲಕ ಬಸವರಾಜ್ ಅವರನ್ನು ವಿಚಾರಣೆಯನ್ನು ಪೊಲೀಸರು ನಡೆಸಿದ್ದರು. ಇತ್ತ ಸಿದ್ಧಾರ್ಥ್ ಮೊಬೈಲ್ ಲೊಕೇಷನ್ ಪರಿಶೀಲಿಸಿದಾಗ ಸೇತುವೆಯ ಮಧ್ಯಭಾಗದಲ್ಲಿ ಅವರ ಕೊನೆಯ ಮೊಬೈಲ್ ಲೊಕೇಷನ್ ಪತ್ತೆಯಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.

    ಬೆಳಗ್ಗೆ ತನಿಖೆ ನಡೆಸಲು ಆಗಮಿಸಿದ್ದ ಶ್ವಾನ ದಳದ ನಾಯಿ ಸಹ ಸೇತುವೆ ಮಧ್ಯಭಾಗದವರೆಗೆ ಬಂದಿತ್ತು. ಪೊಲೀಸ್ ವಿಚಾರಣೆ ವೇಳೆ ಡ್ರೈವರ್ ಬಸವರಾಜ್, ಸೋಮವಾರ ಸಂಜೆ ಹೊತ್ತಿನಲ್ಲಿ ಸೇತುವೆಯ ಬಳಿ ಕಾರನ್ನು ನಿಲ್ಲಿಸು ಎಂದು ಸಿದ್ಧಾರ್ಥ್ ಹೇಳಿದ್ದರು. ಕಾರಿನಿಂದ ಇಳಿದು ಸೇತುವೆಯ ಮೇಲೆ ಸಿದ್ದಾರ್ಥ್ ನಡೆದುಕೊಂಡು ಫೋನಿನಲ್ಲಿ ಮಾತನಾಡುತ್ತಾ ಹೋಗುತ್ತಿದ್ದರು. ಕೆಲ ನಿಮಿಷ ಕಳೆದರೂ ಅವರು ಬಾರದೇ ಇದ್ದಾಗ ಕರೆ ಮಾಡಿದ್ದೆ. ಈ ವೇಳೆ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ತಿಳಿಸಿದ್ದರು.

  • ಚಿಕ್ಕಮಗಳೂರಿನಲ್ಲಿ ಸಿದ್ಧಾರ್ಥ್ ಅಂತ್ಯಕ್ರಿಯೆ

    ಚಿಕ್ಕಮಗಳೂರಿನಲ್ಲಿ ಸಿದ್ಧಾರ್ಥ್ ಅಂತ್ಯಕ್ರಿಯೆ

    ಮಂಗಳೂರು/ಚಿಕ್ಕಮಗಳೂರು: ವೆನ್ ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕಾಫಿ ಕಿಂಗ್ ಸಿದ್ದಾರ್ಥ್ ಅವರ ಪಾರ್ಥಿವ ಶರೀರವನ್ನು ಚಿಕ್ಕಮಗಳೂರಿಗೆ ರವಾನೆ ಮಾಡಲಾಗುತ್ತಿದೆ.

    11 ಗಂಟೆಗೆ ಸುಮಾರಿಗೆ ಮೃತದೇಹ ಚಿಕ್ಕಮಗಳೂರಿಗೆ ರವಾನೆಯಾಗುತ್ತಿದ್ದು, ಎರಡು ಕಡೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಲ್ಲಿ ಕಾಫಿ ಡೇ ಸಿಬ್ಬಂದಿ ದರ್ಶನದ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

    ಬೇಲೂರು ಚೇತನಹಳ್ಳಿಯ ಸಿದ್ಧಾರ್ಥ್ ಕಾಫಿ ಎಸ್ಟೇಟ್ ಹಾಗೂ ಎಬಿಸಿ ಕಾಫಿ ಕ್ಯೂರಿಂಗ್ ಆವರಣದಲ್ಲಿಯೂ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ನೌಕರರು ಹಾಗೂ ಕುಟುಂಬಸ್ಥರ ಅಂತಿಮ ದರ್ಶನದ ಬಳಿಕ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರುವ ಸಾಧ್ಯೆತೆಗಳಿವೆ.

    ಸೋಮವಾರ ಸಂಜೆಯಿಂದ ಮಂಗಳೂರಿನ ನೇತ್ರಾವತಿ ನದಿ ಸೇತುವೆಯ ಬಳಿಯಿಂದ ಕಾಣೆಯಾಗಿದ್ದ ಸಿದ್ದಾರ್ಥ್ ಅವರಿಗಾಗಿ ಸತತ 36 ಗಂಟೆಗಳ ಕಾಲ ಹುಡುಕಾಟ ನಡೆಸಲಾಗಿತ್ತು. ಆದರೆ ಇದೀಗ ಅವರ ಮೃತದೇಹ ನೇತ್ರಾವತಿಯ ಹಿನ್ನೀರಿನಲ್ಲಿ ಪತ್ತೆಯಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಕಾಫಿ ಡೇ ನೌಕಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    https://www.youtube.com/watch?v=i3MTQLbm1KE

  • ಕೆಫೆ ಕಾಫಿ ಡೇ ಮಾಲೀಕ, ಎಸ್‍ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ನಾಪತ್ತೆ

    ಕೆಫೆ ಕಾಫಿ ಡೇ ಮಾಲೀಕ, ಎಸ್‍ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ನಾಪತ್ತೆ

    ಮಂಗಳೂರು/ಬೆಂಗಳೂರು: ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅಳಿಯ, ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ್ ನಿನ್ನೆ ರಾತ್ರಿಯಿಂದ ದಿಢೀರ್ ಆಗಿ ಮಂಗಳೂರಿನ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿದ್ದಾರೆ. ನೇತ್ರಾವತಿ ನದಿಗೆ ಹಾರಿರಬಹುದು ಎಂಬ ಶಂಕೆಯಲ್ಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    ಘಟನೆಯ ವಿವರ: ವ್ಯವಹಾರ ನಿಮಿತ್ತ ಸಿದ್ಧಾರ್ಥ್ ಅವರು ತಮ್ಮ ಕಾರಿನಲ್ಲಿ ಚಿಕ್ಕಮಗಳೂರಿಗೆ ತೆರಳಿದ್ದರು. ಅಲ್ಲಿಂದ ಮಂಗಳೂರಿಗೆ ಹೋಗಿದ್ದರು. ಕೇರಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಜಪ್ಪಿನಮೊಗರು ಎಂಬಲ್ಲಿ ನೇತ್ರಾವತಿ ಸೇತುವೆ ಇದ್ದು, ಇಲ್ಲಿಗೆ ತಲುಪುತ್ತಿದ್ದಂತೆ ಕಾರನ್ನು ನಿಲ್ಲಿಸಲು ಚಾಲಕನಿಗೆ ಹೇಳಿದ್ದಾರೆ. ಬಳಿಕ ಕಾರಿನಿಂದ ಇಳಿದು ಅವರು ಫೋನ್‍ನಲ್ಲಿ ಮಾತನಾಡುತ್ತಾ ಹೋಗಿದ್ದಾರೆ. ಆದರೆ ಅರ್ಧ ಗಂಟೆಯಾದರೂ ಸಿದ್ಧಾರ್ಥ್ ಅವರು ವಾಪಸ್ ಬರದೇ ಇದ್ದುದನ್ನು ಕಂಡು ಗಾಬರಿಯಾದ ಚಾಲಕ ಅವರಿಗೆ ಫೋನ್ ಮಾಡಿದ್ದಾನೆ. ಈ ವೇಳೆ ಅವರ ಫೋನ್ ಸ್ವಿಚ್ಡ್ ಆಫ್ ಆಗಿದ್ದು ಗಮನಕ್ಕೆ ಬಂದಿದೆ.

    ಕಾರು ಚಾಲಕ ತಕ್ಷಣ ಈ ವಿಚಾರವನ್ನು ಸಿದ್ಧಾರ್ಥ್ ಮನೆಯವರಿಗೆ ತಿಳಿಸಿದ್ದಾರೆ. ಸಿದ್ಧಾರ್ಥ್ ಅವರು ಕಾರಿನಿಂದ ಇಳಿದ ಜಪ್ಪಿನ ಮೊಗರು ಪ್ರದೇಶ ನೇತ್ರಾವತಿ ನದಿ ತಟದಲ್ಲೇ ಇರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ಕಾರು ಚಾಲಕನಿಂದ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸಿದ್ಧಾರ್ಥ್ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

    ಇತ್ತ ಬೆಂಗಳೂರಿನಲ್ಲಿರುವ ಎಸ್.ಎಂ.ಕೃಷ್ಣ ಅವರ ಮನೆಯಲ್ಲಿ ಆತಂಕ ಮನೆ ಮಾಡಿದೆ. ಈ ಘಟನೆಯ ಬಗ್ಗೆ ಎಸ್.ಎಂ.ಕೃಷ್ಣ ಅವರ ನಿವಾಸದ ಬಳಿ ಮಾತನಾಡಿದ ಕಾಂಗ್ರೆಸ್ ಮುಖಂಡ ಬಿಎಲ್ ಶಂಕರ್, ಕಾಫಿ ಡೇ ಉದ್ಯಮದ ಮಾಲೀಕರಾಗಿರುವ ಸಿದ್ಧಾರ್ಥ್ ಪ್ರಯಾಣ ಮಾಡುವ ವೇಳೆ ನಾಪತ್ತೆಯಾಗಿದ್ದಾರೆ. ಮಂಗಳೂರಿನ ಉಳ್ಳಾಲ ಸಮೀಪದಿಂದ ನಿನ್ನೆ ಸಂಜೆ 6 ಗಂಟೆಯಿಂದ ನಾಪತ್ತೆಯಾಗಿದ್ದಾರೆ. ಸ್ಥಳೀಯ ಪೊಲೀಸರು ಹಾಗೂ ಶಾಸಕ ಯು.ಟಿ.ಖಾದರ್ ಅವರೂ ಹುಡುಕಾಟದಲ್ಲಿ ತೊಡಗಿದ್ದಾರೆ. ನಾಪತ್ತೆಗೂ ಮೊದಲು ಅವರು ಯಾರ ಜೊತೆ ಮಾತನಾಡಿದರು ಎಂಬುದು ತಿಳಿದಿಲ್ಲ. ಅವರ ಕಚೇರಿ ತೆರೆದ ಬಳಿಕ ಏನಾದರೂ ಮಾಹಿತಿ ಸಿಗಬಹುದು. ಯಾವುದೇ ತೊಂದರೆ ಆಗದೇ ವಾಪಸ್ ಸಿಗಲಿ ಎಂಬ ನಿರೀಕ್ಷೆಯಲ್ಲಿ ನಾವೆಲ್ಲರೂ ಇದ್ದೇವೆ ಎಂದರು.

    ಸಿದ್ಧಾರ್ಥ್ ನಮ್ಮ ಊರಿನವರು ಹಾಗೂ ದೊಡ್ಡ ಉದ್ಯಮಿ. ಅವರ ಕುಟುಂಬ ಆತಂಕದಲ್ಲಿದೆ. ಹಾಗಾಗಿ ನಾವು ನೋಡಲು ಬಂದಿದ್ದೇವೆ. ಯಾವುದೇ ಸಮಸ್ಯೆ ಬಂದರೂ ಅವರು ಎದುರಿಸುತ್ತಿದ್ದರು. ಪ್ರಕರಣ ತನಿಖಾ ಹಂತದಲ್ಲಿದ್ದು ತನಿಖೆ ಬಳಿಕ ಎಲ್ಲವೂ ವಿವರವಾಗಿ ತಿಳಿಯಲಿದೆ ಎಂದರು.

    ಸಿದ್ಧಾರ್ಥ್ ಯಾರು?: ದೇಶ ವಿದೇಶಗಳಲ್ಲಿ ಕೆಫೆ ಕಾಫಿ ಡೇ ಸ್ಥಾಪಿಸಿ ಪ್ರಖ್ಯಾತರಾದವರು. ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ಪುತ್ರಿಯನ್ನು ವಿವಾಹವಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ 12 ಸಾವಿರ ಎಕರೆ ಕಾಫಿ ಎಸ್ಟೇಟ್ ಹೊಂದಿದ್ದಾರೆ. ಮಂಗಳೂರಿನ ಸಾಫ್ಟ್‌ವೇರ್ ಕಂಪೆನಿಗಳಿಗೆ ಹೂಡಿಕೆ ಮಾಡಿದ್ದಾರೆ. ಷೇರು ಮಾರುಕಟ್ಟೆ ವ್ಯವಹಾರದಲ್ಲೂ ತೊಡಗಿಸಿಕೊಂಡಿದ್ದಾರೆ.

  • ಬತ್ತುತ್ತಿದೆ ನೇತ್ರಾವತಿ ಒಡಲು: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಜನರಲ್ಲಿ ಆತಂಕ!

    ಬತ್ತುತ್ತಿದೆ ನೇತ್ರಾವತಿ ಒಡಲು: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಜನರಲ್ಲಿ ಆತಂಕ!

    -ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿಯೂ ನೀರಿಗೆ ಹಾಹಾಕಾರ
    -ಬರ ಜಿಲ್ಲೆಯ ಜನತೆಗೆ ಆಘಾತ ನೀಡಿದ ಪ್ರಕಟಣೆ

    -ಮುದುಕೃಷ್ಣ
    ಚಿಕ್ಕಬಳ್ಳಾಪುರ : ಶ್ರೀ ಧರ್ಮಸ್ಥಳದ ಮಂಜುನಾಥನ ಸನ್ನಿಧಾನದಲ್ಲೇ ನೀರಿಗೆ ಬರ ಬಂದಿದ್ದು, ಮಂಜುನಾಥ ಸ್ವಾಮಿಯನ್ನೇ ನಂಬಿದ್ದ ಕೋಲಾರ-ಚಿಕ್ಕಬಳ್ಳಾಪುರ ಜನತೆಗೆ ಈಗ ಎಲ್ಲಿಲ್ಲದ ಭಯ ಶುರುವಾಗಿದೆ.

    ಇಷ್ಟು ದಿನ ಇಂದಲ್ಲ ನಾಳೆ ಎತ್ತಿನಹೊಳೆಯ ನೀರು ಬರಬಹುದು ಅಂತ ಆಶಾವಾದದಿಂದ ಇದ್ದ ಕೋಲಾರ-ಚಿಕ್ಕಬಳ್ಳಾಪುರ ಜನತೆಗೆ ಈಗ ಎಲ್ಲಿಲ್ಲದ ಆತಂಕ ಶುರುವಾಗಿದೆ. ಕಷ್ಟ ಕಾಲಕ್ಕೆ ಶ್ರೀ ಧರ್ಮಸ್ಥಳದ ಶ್ರೀ ಮಂಜುನಾಥ ತಮ್ಮನ್ನ ಕೈ ಹಿಡಿಯಬಹುದು ಅಂತ ಬಲವಾಗಿ ನಂಬಿದ್ದರು. ಈಗ ಮಂಜುನಾಥನ ಸನ್ನಿಧಾನದಲ್ಲೇ ನೀರಿಗೆ ಬರ ಬಂದಿರೋದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಯ ಎತ್ತಿನಹೊಳೆ ಎಂಬ ಕನಸಿನ ಆಶಾಗೋಪುರ ಕಳಚಿ ಬೀಳುವಂತೆ ಮಾಡಿದೆ.

    ಕರಾವಳಿ ಭಾಗದ ನೇತ್ರಾವತಿ ನದಿಯ ಎತ್ತಿನಹೊಳೆಯ ನೀರನ್ನ ತಂದು ಕೋಲಾರ-ಚಿಕ್ಕಬಳ್ಳಾಪುರ ಸೇರಿದಂತೆ ಬರಪೀಡಿತ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಕೊಡ್ತೀವಿ ಅಂತ ಸರ್ಕಾರ ಎತ್ತಿನಹೊಳೆ ಯೋಜನೆಯನ್ನ ಆರಂಭಿಸಿದೆ. ಈಗಾಗಲೇ 13,000 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಅರಂಭವಾಗಿದ್ದರೂ. ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆಯುತ್ತಿಲ್ಲ. ಎತ್ತಿನಹೊಳೆ ಹೆಸರಲ್ಲಿ ಪರ-ವಿರೋಧದ ಹೋರಾಟಗಳು ಯೋಜನೆ ಅರಂಭದಿಂದಲೂ ನಡೆದುಕೊಂಡೇ ಬರುತ್ತಿವೆ.

    ಇದೆಲ್ಲದರ ನಡುವೆ ಎತ್ತಿನಹೊಳೆ ಯೋಜನೆಯ ರೂವಾರಿ ಕಾಂಗ್ರೆಸ್ ಮುಖಂಡ ಎಂ. ವೀರಪ್ಪ ಮೊಯ್ಲಿ ಇಗೋ ಬಂತು, ಅಗೋ ಬಂತು ಅಂತ ಎರಡು ಬಾರಿ ಸಂಸದರಾಗಿ ಮೂರನೇ ಬಾರಿ ಗೆಲ್ಲುವ ವಿಶ್ವಾಸದಲ್ಲಿಯೂ ಇದ್ದಾರೆ. ಅದರೆ ಪರ ವಿರೋಧ ಏನೇ ಇದ್ರೂ ಇಂದಲ್ಲ ನಾಳೆ ನಮ್ಮ ಭಾಗಕ್ಕೆ ಕರಾವಳಿ ಭಾಗದ ನೇತ್ರಾವತಿ ನದಿಯ ಎತ್ತಿನಹೊಳೆ ನೀರು ಬಂದೇ ಬರುತ್ತೆ ಅಂತ ಎಲ್ಲೋ ಒಂದು ಕಡೆ ಆತ್ಮವಿಶ್ವಾಸದಿಂದ ಇದ್ದ ಜನತೆಗೆ ಧರ್ಮಸ್ಥಳದ ಧರ್ಮಾಧಿಕಾರಿಯವರ ಪ್ರಕಟಣೆ ಅಘಾತ ಉಂಟುಮಾಡಿದೆ.

    ನೇತ್ರಾವತಿ ನದಿಯ ಒಡಲು ಬತ್ತಿ ಹೋದ್ರೇ ಅಲ್ಲಿನ ಎತ್ತಿನಹೊಳೆಯ ನೀರು ಕೋಲಾರ-ಚಿಕ್ಕಬಳ್ಳಾಪುರ ಭಾಗಕ್ಕೆ ಹರಿಯುವುದೇ ಸಂಶಯದ ಪ್ರಶ್ನೆ ಈಗ ಅವಳಿ ಜಿಲ್ಲೆಗಳ ಜನರಲ್ಲಿ ಮನೆ ಮಾಡುವಂತೆ ಮಾಡಿದೆ. ವಿರೇಂದ್ರ ಹೆಗೆಡೆಯವರ ಪ್ರಕಟಣೆ ಅದೆಷ್ಟೋ ಮಂದಿ ಭಕ್ತರಿಗೆ ಭಯ ತಂದಿದಿಯೋ ಇಲ್ಲವೋ ಕೋಲಾರ-ಚಿಕ್ಕಬಳ್ಳಾಪುರ ಜನರಿಗಿಂತೂ ಭಯ ತಂದಿದೆ. ಸತತ 8 ವರ್ಷಗಳಿಂದ ಬರದಿಂದ ಬಾಯಾರಿರೋ ಜನ ಮಂಜುನಾಥನ ಕರುಣೆಯಿಂದಾದಾರೂ ಕುಡಿಯುವ ನೀರು ಸಿಗಬಹುದು ಅನ್ನೋ ಭರವಸೆ ಹೊಂದಿದ್ದರು. ಆ ದೇವರಿಗೆ ಸಂಕಷ್ಟ ಬಂದೊದಗಿದ್ದು ಈ ಬಡಪಾಯಿಗಳ ಬದುಕಿಗೆ ಇನ್ಯಾರು ದಿಕ್ಕು ಅಂತ ಜನ ಚಿಂತೇಗೀಡಾಗುವಂತೆ ಮಾಡಿದೆ.

    ಯೋಜನೆಯಿಂದ ನಿರೀಕ್ಷಿತ 24 ಟಿಎಂಸಿ ಪ್ರಮಾಣ ನೀರು ಸಿಗುವುದಿಲ್ಲ ಅನ್ನೋ ಕೂಗು ಹೋರಾಟಗಾರರು ಹಾಗೂ ಪರಿಸರವಾದಿಗಳಿಂದ ಕೇಳಿ ಬರುತ್ತಲೇ ಇತ್ತು. ಅದ್ರೆ ನೀರು ಸಿಕ್ಕೆ ಸಿಗುತ್ತೆ ಅಂತ ಸಮರ್ಥನೆ ಮಾಡಿಕೊಳ್ಳುತ್ತಿದ್ದ ಎರಡೇ ವರ್ಷದಲ್ಲಿ ನೀರು ಕೊಡ್ತೀವಿ ಅಂತ ಆರು ವರ್ಷಗಳ ಕಾಲ ತಳ್ಳಿಕೊಂಡೆ ಬಂತು. ಈಗ ಧರ್ಮಸ್ಥಳದಲ್ಲೇ ನೀರಿನ ಬರ ಅಭಾವ ಪರಿಸ್ಥಿತಿ ಪರಿಸರವಾದಿಗಳು ಹೋರಾಟಗಾರರ ಮಾತು ಸತ್ಯ ಎಂಬಂತಾಗುತ್ತಿದೆ.

    ವೈರಲ್ ಆದ ಪ್ರಕಟಣೆ:
    ಕರಾವಳಿ ಭಾಗದ ಹಾಗೂ ಮಂಜುನಾಥನ ಭಕ್ತರಲ್ಲಿ ಈ ಪ್ರಕಟಣೆ ಅತಂಕ ತಂದಿತೋ ಇಲ್ಲವೋ ಕೋಲಾರ-ಚಿಕ್ಕಬಳ್ಳಾಪುರ ಭಾಗದ ಜನರಿಗಂತೂ ಅತಂಕ ತಂದಿತ್ತು. ಸೋಶಿಯಲ್ ಮೀಡಿಯಾದ ವಾಟ್ಸಾಫ್-ಫೇಸ್ ಬುಕ್ ಎಲ್ಲೂ ನೋಡಿದರೂ ಇದೇ ಪ್ರಕಟಣೆ. ಪ್ರತಿಯೊಬ್ಬರೂ ತಮ್ಮ ತಮ್ಮ ವಾಟ್ಸಾಫ್ ಖಾತೆಗಳಿಗೆ ಸ್ಟೇಟಸ್ ಅಗಿ ಪ್ರಕಟಣೆ ಪೋಸ್ಟ್ ಮಾಡಿಕೊಂಡರು. ಇರೋ ಬರೋ ಗ್ರೂಪ್ ಗಳೆಲ್ಲಾ ಇದೇ ಪ್ರಕಟಣೆ ಹರಿಬಿಟ್ಟರು. ಫೇಸ್ ಬುಕ್‍ನಲ್ಲಿ ಸಹ ಇದೇ ಪ್ರಕಟಣೆಯ ಪೋಸ್ಟ್ ಗಳು. ಹೀಗಾಗಿ ಕರಾವಳಿ ಭಾಗದ ಜನರಿಗಿಂತೂ ಇದು ಕೋಲಾರ-ಚಿಕ್ಕಬಳ್ಳಾಪುರ ಭಾಗದ ಜನರನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು.

    ಮೊಯ್ಲಿ ವಿರುದ್ಧ ಅಸಮಧಾನ:
    ಧರ್ಮಸ್ಥಳದಲ್ಲೇ ನೀರಿಗೆ ಬರ ಪ್ರಕಟಣೆ ಕಂಡ ಜೆಡಿಎಸ್ ಪಕ್ಷದ ಮಾಜಿ ಶಾಸಕ ಹಾಗೂ ಮುಖಂಡರೇ ಯೋಜನೆ ವಿರುದ್ಧ ಅಪಸ್ವರ ಎತ್ತಿದ್ದು ಎತ್ತಿನಹೊಳೆ ನೀರು ಕನಸು ಅಂತ ವೀರಪ್ಪಮೊಯ್ಲಿ ವಿರುದ್ದವೇ ಅಸಮಾಧಾನ ಹೊರಹಾಕಿದ್ದಾರೆ. ಮೊದಲಿನಿಂದಲೂ ನಾವು ಹೇಳುತ್ತಿದ್ದೀವಿ ನೀರು ಬರಲ್ಲ ಅಂತ ಈಗ ಸತ್ಯ ಅಗುತ್ತಿದೆ. ಇನ್ನಾದ್ರೂ ಬೇರೆ ಮೂಲಗಳಿಂದ ನೀರು ಹುಡುಕುವ ಪ್ರಯತ್ನ ಮಾಡಬೇಕು. ಇಲ್ಲವಾದಲ್ಲಿ ಇನ್ನೆರೆಡು ವರ್ಷಗಳಲ್ಲಿ ಜನ ನೀರಿಗಾಗಿ ಬಡಿದಾಡಿಕೊಂಡು ಸಾಯಬೇಕಾಗುತ್ತೆ ಆಕ್ರೋಶ ಹೊರಹಾಕುತ್ತಿದ್ದಾರೆ.

    https://www.youtube.com/watch?v=z0npOVG11L4