Tag: ನೆಹರು ಓಲೇಕಾರ

  • ಎಲ್ಲರೂ ರಾಷ್ಟ್ರಭಕ್ತರೇ, ದೇಶದಲ್ಲಿರೋರ್‍ಯಾರು ದೇಶದ್ರೋಹಿಗಳಲ್ಲ: ಬಿ.ಸಿ.ಪಾಟೀಲ್

    ಎಲ್ಲರೂ ರಾಷ್ಟ್ರಭಕ್ತರೇ, ದೇಶದಲ್ಲಿರೋರ್‍ಯಾರು ದೇಶದ್ರೋಹಿಗಳಲ್ಲ: ಬಿ.ಸಿ.ಪಾಟೀಲ್

    ಹಾವೇರಿ: ಮುಂದಿನ ಸಿಎಂ ರಾಷ್ಟ್ರವಾದಿ ಆಗುತ್ತಾರೆ ಎನ್ನುವ ಸಚಿವ ಕೆ.ಎಸ್.ಈಶ್ವರಪ್ಪರ ಹೇಳಿಕೆಗೆ ಎಲ್ಲರೂ ರಾಷ್ಟ್ರಭಕ್ತರೇ, ದೇಶದಲ್ಲಿರೋರು ಯಾರೂ ದೇಶದ್ರೋಹಿಗಳಲ್ಲ, ರಾಷ್ಟ್ರ ವಿರೋಧಿಗಳಲ್ಲ ಎಂದು ನೂತನ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

    ಹಾವೇರಿಯಲ್ಲಿ ಅಸಮಾಧಾನಗೊಂಡಿದ್ದ ಬಿಜೆಪಿ ಶಾಸಕ ನೆಹರು ಓಲೇಕಾರ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಗದ್ದಕ್ಕೆ ನೆಹರು ಓಲೇಕಾರ ಅವರ ಮನೆಗೆ ಸೌಜನ್ಯದ ಭೇಟಿ ಮಾಡಿದ್ದೇನೆ. ಓಲೇಕಾರರು ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದವರು, ಎಲ್ಲ ಅರ್ಹತೆ ಇದ್ದಂಥವರು. ಮೊನ್ನೆ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಕೈ ತಪ್ಪಿದೆ. ಅವರಿಗೆ ಅಸಮಾಧಾನ, ಅಸಂತೋಷ ಆಗಿದೆ. ಬರುವ ದಿನಗಳಲ್ಲಿ ಎಲ್ಲವನ್ನು ಸರಿಪಡಿಸಿಕೊಳ್ಳಬೇಕು. ಜಿಲ್ಲೆಯ ಎಲ್ಲ ಶಾಸಕರು ಸೇರಿ ನೆಹರು ಓಲೇಕಾರ ಅವರಿಗೆ ಯಾವ ರೀತಿಯ ಸಹಾಯ ಮಾಡಬೇಕು ಎಂಬುದರ ಬಗ್ಗೆ ಕುಳಿತು ಚರ್ಚೆ ಮಾಡಿ ಸಿಎಂ ಭೇಟಿ ಮಾಡಲಿದ್ದೇವೆ. ಅದು ಅವರ ದೊಡ್ಡತನ. ಮುಂದಿನ ದಿನಗಳಲ್ಲಿ ಪಕ್ಷ ಹಾಗೂ ಹೈಕಮಾಂಡ್ ಭೇಟಿ ಮಾಡುತ್ತೇವೆ. ಈ ಬಗ್ಗೆ ಬಸವರಾಜ್ ಬೊಮ್ಮಾಯಿಯವರ ಜೊತೆಗೂ ಮಾತನಾಡುತ್ತೇವೆ ಎಂದಿದ್ದಾರೆ.

    ಎನ್.ಮಹೇಶ್ ಅವರು ಬಿಜೆಪಿ ಸರ್ಕಾರ ಬರಲು ಸಹಾಯ ಮಾಡಿದ್ದರು. ನಿನ್ನೆ ಬಿಜೆಪಿ ಸೇರಿದ್ದಾರೆ. ಪಾರ್ಟಿಗೆ ಸೇರಿದವರನ್ನು ಖರೀದಿ ಮಾಡಿದ್ದಾರೆ ಅಂತಾ ಹೇಳುವುದು ಕಾಂಗ್ರೆಸ್ ಸಂಸ್ಕೃತಿ ಹೊರತು ಬಿಜೆಪಿ ಸಂಸ್ಕೃತಿಯಲ್ಲ. ಯಾರನ್ನು ಯಾರೂ ಖರೀದಿ ಮಾಡಲು ಆಗುವುದಿಲ್ಲ. ಯಾರಿಗೆ ಯಾರೂ ಬೆಲೆ ಕಟ್ಟೋಕೆ ಆಗುವುದಿಲ್ಲ. ಇವತ್ತು ಖಾತೆ ಹಂಚಿಕೆ ಆಗುತ್ತೆ ಅಂತ ಕೇಳಿದ್ದೇನೆ. ನಿರೀಕ್ಷೆಗೆ ಯಾವ ಖಾತೆ ಕೊಡುತ್ತಾರೆ ಅದನ್ನು ಮಾಡುತ್ತೇನೆ. ಏನೇ ಮಾಡಿದರೂ ಸರ್ಕಾರದ ಕೆಲಸ. ಸರ್ಕಾರದ ಇಲಾಖೆಗಳು, ಜನಪರವಾಗಿ ಕೆಲಸ ಮಾಡುವುದು. ಮುಖ್ಯಮಂತ್ರಿಗಳು ಏನು ತೀರ್ಮಾನ ಮಾಡುತ್ತಾರೆ ನೋಡೋಣ ಎಂದು ಪ್ರತಿಕ್ರಿಯಿಸಿದ್ದಾರೆ.

    ಅಣ್ಣಾಮಲೈ ಅವರ ಹೋರಾಟ, ಹೋರಾಟ ಆಗಿರುತ್ತದೆ. ಈಗಾಗಲೇ ಕೇಂದ್ರ ಸರ್ಕಾರದಲ್ಲಿ ತೀರ್ಮಾನ ಆಗಿದೆ. ಅದು ಕರ್ನಾಟಕದ ಸ್ವತ್ತು. ಯಾವುದೇ ಕಾರಣಕ್ಕೂ ಯಾರಿಗೂ ಬಿಟ್ಟು ಕೊಡುವುದಿಲ್ಲ. ಅಲ್ಲೇನು ಕೆಲಸ ಆಗಬೇಕು, ಅದನ್ನು ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಆತ್ಮತೃಪ್ತಿಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತಿ: ಶ್ರೀನಿವಾಸ್ ಪ್ರಸಾದ್

  • ಸಂಪುಟ ವಿಸ್ತರಣೆ ವೇಳೆ ಸಿಎಂ ಅವಕಾಶದ ಭರವಸೆ ನೀಡಿದ್ದಾರೆ: ಓಲೇಕಾರ

    ಸಂಪುಟ ವಿಸ್ತರಣೆ ವೇಳೆ ಸಿಎಂ ಅವಕಾಶದ ಭರವಸೆ ನೀಡಿದ್ದಾರೆ: ಓಲೇಕಾರ

    ಹಾವೇರಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮುಂದಿನ ಸಂಪುಟ ವಿಸ್ತರಣೆ ವೇಳೆ ಅವಕಾಶ ಕಲ್ಪಿಸಿಕೊಡುವ ಭರವಸೆ ನೀಡಿದ್ದಾರೆ. ನಾನು ಅದಕ್ಕೆ ಒಪ್ಪಿಕೊಂಡಿದ್ದೇನೆ. ನಮ್ಮ ಸಮುದಾಯಕ್ಕೆ ಅವಕಾಶ ಸಿಕ್ಕಿಲ್ಲ ಎನ್ನುವ ಬೇಸರ ಉಂಟಾಗಿತ್ತು. ಆಗಿರುವ ಅನ್ಯಾಯವನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದು ಹಾವೇರಿ ಶಾಸಕ ನೆಹರು ಓಲೇಕಾರ ಹೇಳಿದ್ದಾರೆ.

    ಹಾವೇರಿ ನಗರದ ತುಳಸಿ ಐಕಾನ್ ಲೇಔಟ್‍ನಲ್ಲಿರುವ ಶಾಸಕ, ಮನೆಗೆ ಸಚಿವ ಬಿ.ಸಿ.ಪಾಟೀಲ್ ಭೇಟಿ ನೀಡಿ ಮಾತನಾಡಿದರು. ಈ ವೇಳೆ ಸಚಿವ ಸ್ಥಾನ ಸಿಗದ್ದಕ್ಕೆ ಬೊಮ್ಮಾಯಿ ವಿರುದ್ಧ ನೆಹರು ಓಲೇಕಾರ ಅಸಮಾಧಾನ ಹೊರ ಹಾಕಿದ್ದರು.

    ಪಾಟೀಲ್, ಬೊಮ್ಮಾಯಿಯವರ ಜೊತೆ ಮಾತನಾಡಿಸಿದ್ದಾರೆ. ನನಗೆ, ನಮ್ಮ ಸಮುದಾಯಕ್ಕೆ ಅನ್ಯಾಯ ಆಗಿರುವುದನ್ನು ಸಿಎಂ ಕೂಡ ಒಪ್ಪಿಕೊಂಡಿದ್ದಾರೆ. ಜಿಲ್ಲೆಗೆ ಸಿಎಂ ಸ್ಥಾನದ ಅವಕಾಶ ಸಿಕ್ಕಿದೆ. ಸಹಕಾರ ನೀಡುವಂತೆ ಕೇಳಿಕೊಂಡಿದ್ದಾರೆ. ಬೊಮ್ಮಾಯಿ ಅವರಿಗೆ ಸಹಕಾರ ನೀಡುತ್ತೇನೆ. ನಾವೆಲ್ಲರೂ ಕೂಡಿಯೇ ಇದ್ದವರು. ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ. ಸಚಿವ ಸ್ಥಾನ ಸಿಗುವವರೆಗೂ ಕಾಯುತ್ತೇನೆ. ನಾವೆಲ್ಲರೂ ಪಕ್ಷದಲ್ಲಿ ಇದ್ದಂಥವರೇ ಹೀಗಾಗಿ ಕಾಯುತ್ತೇನೆ. ಇದು ಅನಿವಾರ್ಯ ಎಂದು ನೆಹರು ಓಲೇಕಾರ ಹೇಳಿದ್ದಾರೆ. ಇದನ್ನೂ ಓದಿ: ಸಿಎಂ ಸ್ಥಾನ ಬಿಟ್ರೂ ಕೊಟ್ಟ ಮಾತನ್ನು ಬಿಎಸ್‍ವೈ ಉಳಿಸಿಕೊಂಡಿದ್ದಾರೆ: ಗೋಪಾಲಯ್ಯ

  • ಶಾಸಕ ನೆಹರು ಓಲೇಕಾರಗೆ ಸಚಿವ ಸ್ಥಾನ ನೀಡಿ – ಬೆಂಬಲಿಗರ ಒತ್ತಾಯ

    ಶಾಸಕ ನೆಹರು ಓಲೇಕಾರಗೆ ಸಚಿವ ಸ್ಥಾನ ನೀಡಿ – ಬೆಂಬಲಿಗರ ಒತ್ತಾಯ

    ಹಾವೇರಿ: ಶಾಸಕ ನೆಹರು ಓಲೇಕಾರ ಮೂರು ಬಾರಿ ಶಾಸಕರಾಗಿದ್ದಾರೆ. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಬೆಂಬಲಿಗರು ಒತ್ತಾಯಿಸಿದ್ದಾರೆ. ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯವರೇ ಸಿಎಂ ಆಗಿರೋದರಿಂದ ಓಲೇಕಾರಗೆ ಸಚಿವ ಸ್ಥಾನ ದೊರೆತರೆ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಆಗಲಿದೆ ಎಂದಿದ್ದಾರೆ.

    ಮೂರು ಬಾರಿ ಶಾಸಕರಾಗಿರೋ ಓಲೇಕಾರಗೆ ಸಚಿವ ಸ್ಥಾನ ನೀಡುವಂತೆ ನಗರಸಭೆ ನಾಮನಿರ್ದೇಶಿತ ಸದಸ್ಯರು ಹಾಗೂ ಸ್ಥಳೀಯ ಬಿಜೆಪಿ ಮುಖಂಡರಿಂದ ಒತ್ತಾಯಿಸಿದ್ದಾರೆ. ಬೇಕೇ ಬೇಕು ಸಚಿವ ಸ್ಥಾನ ಬೇಕು ಅಂತಾ ಘೋಷಣೆ ಹಾಕಿ ಸಚಿವ ಸ್ಥಾನಕ್ಕೆ ಓಲೇಕಾರ ಬೆಂಬಲಿಗರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: 2 ದಿನಗಳಲ್ಲಿ ದೆಹಲಿಗೆ ಸಿಎಂ ಬೊಮ್ಮಾಯಿ – ಕ್ರಿಯಾಶೀಲ ಕ್ಯಾಬಿನೆಟ್ ಟೀಮ್ ಬಗ್ಗೆ ಸೂಚನೆ

    ಈಗ ಹಾವೇರಿ ಜಿಲ್ಲೆಯವರೇ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ನೂತನ ಸಚಿವ ಸಂಪುಟದಲ್ಲಿ ಅನುಭವಿ ರಾಜಕಾರಣಿ ನೆಹರು ಓಲೇಕಾರ ಅವರಿಗೆ ಸಚಿವ ಸ್ಥಾನ ನೀಡಬೇಕು. ಇನ್ನು ಹಾವೇರಿ ಜಿಲ್ಲೆಗೆ ಕೈಗಾರಿಕೆಗಳನ್ನ ಸ್ಥಾಪನೆ ಉದ್ಯೋಗ ಅವಕಾಶ ಸೃಷ್ಠಿ ಮಾಡಬೇಕು. ಹೀಗಾಗಿ ನೆಹರು ಓಲೇಕಾರಗೆ ಸಚಿವ ಸ್ಥಾನ ಮಾಡಬೇಕು ಬೆಂಬಲಿಗರು ಒತ್ತಾಯಿಸಿದ್ದಾರೆ.

  • “ಗ್ರಾಮಗಳಲ್ಲಿ ಮನೆ ಮನೆ ತಪಾಸಣೆ ನಡೆಸಿ ಲಕ್ಷಣವುಳ್ಳವರನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಿ”

    “ಗ್ರಾಮಗಳಲ್ಲಿ ಮನೆ ಮನೆ ತಪಾಸಣೆ ನಡೆಸಿ ಲಕ್ಷಣವುಳ್ಳವರನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಿ”

    ಹಾವೇರಿ: ಹಾವೇರಿ ತಾಲೂಕಿನ ಎಲ್ಲ ಗ್ರಾಮಗಳ ಪ್ರತಿ ಮನೆ ಮನೆಗೆ ಭೇಟಿ ನೀಡಿ ಕೋವಿಡ್-19 ಸೋಂಕಿನ ಕುರಿತು ಸಮೀಕ್ಷೆ ನಡೆಸಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಶಾಸಕರು ಹಾಗೂ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಆಯೋಗದ ಅಧ್ಯಕ್ಷರಾದ ನೆಹರು ಓಲೇಕಾರ ಸೂಚನೆ ನೀಡಿದರು.

    ನಗರದ ತಾಲೂಕು ಪಂಚಾಂಯತ ಸಭಾಂಗಣದಲ್ಲಿ ಮಂಗಳವಾರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಗ್ರಾಮವಾರು ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳ ಕುರಿತಂತೆ ಮಾಹಿತಿ ಪಡೆದರು. ಮನೆ ಮನೆಯ ತಪಾಸಣೆಯ ಸಂದರ್ಭದಲ್ಲಿ ಲಕ್ಷಣ ರಹಿತರಿಗೆ ಸೌಮ್ಯ ರೋಗದ ಲಕ್ಷಣ ಕಂಡುಬಂದರೂ ಗೃಹ ಪ್ರತ್ಯೇಕತೆಯಲ್ಲಿ ಇರಿಸದೇ ಕಡ್ಡಾಯವಾಗಿ ಹತ್ತಿರದ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಿ ಉತ್ತಮ ಚಿಕಿತ್ಸೆ ನೀಡಿ ಗುಣಮುಖರಾಗುವ ಕುರಿತಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.

    ಪಾಸಿಟಿವ್ ಪತ್ತೆಯಾದವರ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚಿ ತ್ವರಿತ ಪರೀಕ್ಷೆ ಮಾಡಬೇಕು. ಸಂಪರ್ಕಿತರ ಬೀದಿಯಲ್ಲಿ ಪ್ರತಿ ಮನೆಯಲ್ಲೂ ತಪಾಸಣೆ ನಡೆಸುವಂತೆ ಸೂಚನೆ ನೀಡಿದರು. ಸೋಂಕಿತ ಮೃತಪಟ್ಟಲ್ಲಿ ಅಥವಾ ಸೋಂಕು ದೃಢವಾದಲ್ಲಿ ಸೋಂಕಿನ ಮೂಲವನ್ನು ಕಂಡುಹಿಡಿದು ಆ ಸೋಂಕಿನ ಸರಪಳಿಯನ್ನು ಕತ್ತರಿಸಬೇಕು. ಈ ನಿಟ್ಟಿನಲ್ಲಿ ಗ್ರಾಮ ಮಟ್ಟದ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

    ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರು ಮನಬಂದಂತೆ ಓಡಾಡುತ್ತಿದ್ದಾರೆ. ಇದರಿಂದ ಸೋಂಕು ಹೆಚ್ಚಾಗಿ ಹರಡುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಬೇಕಾಬಿಟ್ಟಿ ಓಡಾಡುವವರಿಗೆ ದಂಡವಿಧಿಸಿ. ಅಗತ್ಯಬಿದ್ದರೆ ಪೋಲೀಸ್ ಅಧಿಕಾರಿಗಳಿಗೆ ನಿಯಮ ಉಲ್ಲಂಘಿಸಿವದರ ಹೆಸರು ನೀಡಿ. ಇಂತವರ ಮೇಲೆ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಸಭೆಯಲ್ಲಿ ತಹಶೀಲ್ದಾರ್ ಗಿರೀಶ ಸ್ವಾದಿ, ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ್ ಕುಂದೂರ, ಪೌರಾಯುಕ್ತ ಚಲವಾದಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

  • ಬಜೆಟ್ ನಂತರ ಸಚಿವ ಸ್ಥಾನ ಸಿಗುವ ಭರವಸೆ ಇದೆ: ನೆಹರು ಓಲೇಕಾರ

    ಬಜೆಟ್ ನಂತರ ಸಚಿವ ಸ್ಥಾನ ಸಿಗುವ ಭರವಸೆ ಇದೆ: ನೆಹರು ಓಲೇಕಾರ

    ಹಾವೇರಿ: ರಾಜ್ಯದಲ್ಲಿ ಇನ್ನೂ ಆರು ಜನರನ್ನು ಮಂತ್ರಿ ಮಾಡಲು ಅವಕಾಶವಿದೆ. ಹೀಗಾಗಿ ಈ ಬಾರಿ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದು ಹಾವೇರಿ ಶಾಸಕ ನೆಹರು ಓಲೇಕಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಸಮುದಾಯಗಳಿಗೆ ಸಿಎಂ ಒತ್ತು ಕೊಡುತ್ತಾರೆ ಎನ್ನುವ ಭರವಸೆ ಇದೆ. ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಇತ್ತೀಚೆಗೆ ಸಿಎಂ ಭೇಟಿ ಮಾಡಿದಾಗ ಮುಂದಿನ ಬಾರಿ ನೋಡೋಣ ಎಂದು ಹೇಳಿದ್ದಾರೆ. ಹೀಗಾಗಿ ಈ ಬಾರಿ ನನಗೆ ಸಚಿವ ಸ್ಥಾನ ಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

    ಯಡಿಯೂರಪ್ಪನವರಿಗೆ ವಯಸ್ಸಾದರೂ ಇನ್ನೂ ಮೂರುವರೆ ವರ್ಷ ಅಧಿಕಾರ ಮಾಡುತ್ತಾರೆ. ಅವರು ಅಧಿಕಾರ ಮಾಡುವುದಿಲ್ಲ ಎನ್ನುವ ಹಾಗಿಲ್ಲ. ಸಿ.ಎಂ.ಉದಾಸಿ ಅವರಿಗೆ 85 ವಯಸ್ಸು ಆಗಿದೆ. ಅದರೂ ಯುವಕರಂತೆ ಓಡಾಡುತ್ತಾರೆ. ಬಿ.ಎಸ್.ಯಡಿಯೂರಪ್ಪನವರು ಸಹ ಅದೇ ರೀತಿ ಕೆಲಸ ಮಾಡಿ ದಾಖಲೆ ನಿರ್ಮಿಸುತ್ತಾರೆ. ಈ ಬಗ್ಗೆ ಯಾರೂ ಪ್ರಶ್ನೆ ಮಾಡುವಂತಿಲ್ಲ, ಅವರೇ ನಮ್ಮ ನಾಯಕರು ಎಂದು ಓಲೆಕಾರ ತಿಳಿಸಿದ್ದಾರೆ.

  • ಸಚಿವ ಸಂಪುಟದಲ್ಲಿ ಕುಮಟಳ್ಳಿ ಸೇರಿಸಿಕೊಂಡಿದ್ರೆ ಇನ್ನಷ್ಟು ಗೌರವ ಬರ್ತಿತ್ತು: ನೆಹರು ಓಲೇಕಾರ

    ಸಚಿವ ಸಂಪುಟದಲ್ಲಿ ಕುಮಟಳ್ಳಿ ಸೇರಿಸಿಕೊಂಡಿದ್ರೆ ಇನ್ನಷ್ಟು ಗೌರವ ಬರ್ತಿತ್ತು: ನೆಹರು ಓಲೇಕಾರ

    ಹಾವೇರಿ: ಸಚಿವ ಸಂಪುಟ ವಿಸ್ತರಣೆಯಲ್ಲಿ ಮಹೇಶ್ ಕುಮಟಳ್ಳಿ ಅವರನ್ನ ಸೇರಿಸಿಕೊಂಡಿದ್ದರೆ ಇನ್ನಷ್ಟು ಗೌರವ ಬರುತ್ತಿತ್ತು ಎಂದು ಹಾವೇರಿ ಶಾಸಕ ನೆಹರು ಓಲೇಕಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಹಾವೇರಿಯಲ್ಲಿ ಮಾತನಾಡಿದ ಅವರು, ಗುರುವಾರ ಸಚಿವ ಸಂಪುಟದ ವಿಸ್ತರಣೆಯಲ್ಲಿ ಮಹೇಶ್ ಕುಮಟಳ್ಳಿ ಅವರನ್ನ ಸೇರಿಸಿಕೊಂಡಿದ್ದರೆ ಇನ್ನಷ್ಟು ಗೌರವ ಬರುತ್ತಿತ್ತು. ಅವರನ್ನ ಯಾಕೆ ಕೈಬಿಟ್ಟಿದ್ದಾರೋ ಗೊತ್ತಿಲ್ಲ. ಯಾರಿಂದ ಸರ್ಕಾರ ಬಂದಿದೆಯೋ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ, ಅದು ಒಳ್ಳೆಯದು. ಉತ್ತಮ ಕೆಲಸ ಮಾಡಲು ಹಾರೈಕೆ ಮಾಡಿದ್ದೇವೆ. ಬಿಜೆಪಿ ಸರ್ಕಾರಕ್ಕೆ ಉತ್ತಮ ಹೆಸರು ಬರುವಂತೆ ಕೆಲಸ ಮಾಡಿ. ಹತ್ತು ಜನ ಸಚಿವರಿಗೂ ಶುಭ ಹಾರೈಸಿದ್ದೇವೆ ಎಂದು ನೆಹರು ಓಲೇಕಾರ ಹೇಳಿದರು.

    ನಾನು ಸಿಎಂ ಯಡಿಯೂರಪ್ಪ ಅವರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ. ನಾವು ಮನವಿ ಮಾಡಿದ್ದೇವೆ, ಅವರು ಮುಂದೆ ನಮಗೆ ಅವಕಾಶ ಕೊಡುತ್ತೇನೆ ಎಂದಿದ್ದಾರೆ. ನಿಗಮ ಮಂಡಳಿ ಕೊಡುತ್ತಾರೋ ಅಥವಾ ಸಚಿವ ಸ್ಥಾನ ಕೊಡುತ್ತಾರೋ ಅದು ಸಿಎಂಗೆ ಬಿಟ್ಟಿದ್ದು ಎಂದರು.

  • ಸಚಿವ ಸ್ಥಾನ ನೀಡುವಂತೆ ಸಿಎಂಗೆ ಮನವಿ ಸಲ್ಲಿಸಿದ ನೆಹರು ಓಲೇಕಾರ

    ಸಚಿವ ಸ್ಥಾನ ನೀಡುವಂತೆ ಸಿಎಂಗೆ ಮನವಿ ಸಲ್ಲಿಸಿದ ನೆಹರು ಓಲೇಕಾರ

    ಹಾವೇರಿ: ಇಂದು ಸಿಎಂ ಯಡಿಯೂರಪ್ಪ ಅವರ ಬಳಿ ಶಾಸಕ ನೆಹರು ಓಲೇಕಾರ ಅವರು ತಮಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ನೆಹರು ಓಲೇಕಾರ ಅವರು ಸಿಎಂಗೆ ಮನವಿ ಸಲ್ಲಿಸಿದ್ದಾರೆ.

    3 ಬಾರಿ ಶಾಸಕನಾಗಿ, 2 ಬಾರಿ ಆಯೋಗದ ಅಧ್ಯಕ್ಷನಾಗಿ ಆಡಳಿತದ ಅನುಭವ ಹೊಂದಿರುವ ನನಗೆ ಈ ಬಾರಿ ಅವಕಾಶ ಕಲ್ಪಿಸಿಕೊಡಬೇಕೆಂದು ನೆಹರು ಓಲೇಕಾರ ಸಿಎಂ ಬಳಿ ವಿನಂತಿಸಿದರು.

    ಈ ಬಗ್ಗೆ ಮಾತನಾಡಿದ ಅವರು, ನಾಡಿನ ಸಮಸ್ತ ಛಲವಾದಿ ಸಮಾಜದ ಪರವಾಗಿ ಸಚಿವ ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ. ಅವಕಾಶ ಸಿಗದಿದ್ದರೆ ಯಡಿಯೂರಪ್ಪನವರ ಬಲಗೈ ಬಂಟನಾಗಿ, ನನ್ನ ಹಾವೇರಿ ಮತ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ಯಾವುದೇ ಭಿನ್ನಮತ ಹಾಗೂ ರಾಜೀನಾಮೆ ನೀಡಿ ಬಿಎಸ್‍ವೈ ಸರ್ಕಾರಕ್ಕೆ ಮತ್ತು ಅವರ ಗೌರವಕ್ಕೆ ಚ್ಯುತಿ ತರುವಂತ ಕಾರ್ಯಗಳನ್ನು ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

    ಇಂದು ನೆಹರು ಓಲೇಕಾರ ಅವರ ಅಭಿಮಾನಿಗಳು ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನೆಹರು ಓಲೇಕಾರ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು.

  • ನಾನೂ ಸೀನಿಯರ್, ನನಗೆ ಸಚಿವಸ್ಥಾನ ನೀಡಿ: ನೆಹರು ಓಲೇಕಾರ

    ನಾನೂ ಸೀನಿಯರ್, ನನಗೆ ಸಚಿವಸ್ಥಾನ ನೀಡಿ: ನೆಹರು ಓಲೇಕಾರ

    ಹಾವೇರಿ: ನಾನೂ ಸೀನಿಯರ್ ಇದ್ದೇನೆ, ಮೂರು ಬಾರಿ ಶಾಸಕನಾಗಿದ್ದೇನೆ. ನನಗೆ ಸಚಿವಸ್ಥಾನ ನೀಡಿ ಎಂದು ಹಾವೇರಿ ಶಾಸಕ ನೆಹರು ಓಲೇಕಾರ ಆಗ್ರಹಿಸಿದ್ದಾರೆ.

    ಜನವರಿ 29ಕ್ಕೆ ಸಚಿವ ಸಂಪುಟ ವಿಸ್ತರಣೆ ಮಾಡೋದಾಗಿ ಸಿಎಂ ಹೇಳಿದ್ದಾರೆ ಎಂದು ಓಲೇಕಾರ ಅವರು ತಿಳಿಸಿದರು. ಹಾವೇರಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಎಲ್ಲಾ ಸಮುದಾಯದವರು ಇದ್ದರೆ ಗೌರವ ಇರುತ್ತೆ. ಸಚಿವ ಸ್ಥಾನಕ್ಕೆ ಮಠಾದೀಶರು ಸೇರಿದಂತೆ ಎಲ್ಲರೂ ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಸಮಸ್ಯೆ ಇದೆ. ಹದಿನೇಳು ಜನರಿಂದಲೇ ಬಿಜೆಪಿ ಸರ್ಕಾರ ಬಂದಿದೆ. ಅವರ ತ್ಯಾಗದಿಂದಲೇ ಯಡಿಯೂರಪ್ಪ ಅವರು ಸಿಎಂ ಆಗಿದ್ದಾರೆ. ಅವರಿಗೆ ಸಚಿವ ಸ್ಥಾನ ಕೊಡಲು ತಕರಾರಿಲ್ಲ ಎಂದು ಓಲೇಕಾರ ಹೇಳಿದರು.

    ಸೋತವರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ಕೊಟ್ಟು ತೃಪ್ತಿ ಮಾಡಬೇಕು. ಸೋತವರಿಗೆ ಸಚಿವ ಸ್ಥಾನ ಕೊಟ್ಟರೆ ಜನರು ತಪ್ಪಾಗಿ ಮಾತನಾಡಿಕೊಳ್ತಾರೆ. ಹಿರಿಯರಿಗೆ ಪಕ್ಷ ಸಂಘಟನೆ ಜವಾಬ್ದಾರಿ ಕೊಡುವ ಬಗ್ಗೆ ಪಕ್ಷದ ನಾಯಕರು ಚರ್ಚಿಸಿದ್ದಾರೆ. ಹಿರಿಯರನ್ನ ಕೈಬಿಟ್ಟು ಹೊಸಬರಿಗೆ ಕೊಡೋ ವಿಚಾರವಿದೆ ಎಂದು ನೆಹರು ಓಲೇಕಾರ ತಿಳಿಸಿದರು.

  • ಪೌರತ್ವ ಕಾಯ್ದೆ ಬೆಂಬಲಿಸಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ನೆಹರು ಓಲೇಕಾರ

    ಪೌರತ್ವ ಕಾಯ್ದೆ ಬೆಂಬಲಿಸಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ನೆಹರು ಓಲೇಕಾರ

    ಹಾವೇರಿ: ಹಾವೇರಿ ನಗರದ ಬಸ್ ನಿಲ್ದಾಣದ ಮುಂದೆ ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ಸಾರ್ವಜನಿಕರ ಸಹಿ ಸಂಗ್ರಹ ಅಭಿಯಾನಕ್ಕೆ ಸಹಿ ಮಾಡುವ ಮೂಲಕ ಶಾಸಕ ನೆಹರು ಓಲೇಕಾರ ಅಭಿಯಾನಕ್ಕೆ ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ನೆಹರು ಓಲೇಕಾರ, ಪೌರತ್ವ ಕಾಯ್ದೆ ಭಾರತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಪೂರಕವಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪೌರತ್ವ ಕಾಯ್ದೆಯನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವದು ದುರದೃಷ್ಟಕರ ಸಂಗತಿಯಾಗಿದೆ ಎಂದರು.

    ಈ ಸಂದರ್ಭದಲ್ಲಿ ನಗರಾಭಿದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ್ ಸಂಗೂರ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾದ ನಜೀರ್ ಹುಸೇನ್ ನದಾಫ, ಬಾಬುಸಾಬ್ ಮೋಮಿನಗಾರ, ಮುಖಂಡರಾದ ಜಗದೀಶ್ ಮಲಗೊಡ, ಗಿರೀಶ್ ತುಪ್ಪದ, ಮಂಜುನಾಥ್ ಇಟಗಿ, ನಂಜುಂಡೇಶ್ವರ್ ಕಳ್ಳೆರ, ಅಶೋಕ್ ಬಣಕಾರ, ಶ್ರೀಕಾಂತ್ ಪೂಜಾರ, ಎನ್ ಪಿ ಚಾವಡಿ, ಶಿವರಾಜ್ ಮತ್ತಿಹಳ್ಳಿ, ನಾಗರಾಜ್ ಹಿರೇಮಠ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.