Tag: ನೆನಪು

  • ತಾಯಿಯ ನೆನಪು ಹಂಚಿಕೊಂಡ ನಟ ಜಗ್ಗೇಶ್

    ತಾಯಿಯ ನೆನಪು ಹಂಚಿಕೊಂಡ ನಟ ಜಗ್ಗೇಶ್

    ಸೋಶಿಯಲ್ ಮೀಡಿಯಾದಲ್ಲಿ ಬಹಳ ಆ್ಯಕ್ಟೀವ್ ಆಗಿರುವ ನಟರಲ್ಲೊಬ್ರು ಅಂದ್ರೆ ಅವರು ನವರಸನಾಯಕ ಜಗ್ಗೇಶ್ (Jaggesh), ತಾಯಿ ಬಗೆಗಿನ ನೆನಪಿನ ಭಾವನೆಯನ್ನು ಜಗ್ಗೇಶ್ ಆಗಾಗ ಇದೇ ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳೋದುಂಟು. ಇದೀಗ ಜಗ್ಗೇಶ್ ಪತ್ರಿಕೆಯಲ್ಲಿ ಬಂದಿದ್ದ ಒಂದು ಸುದ್ದಿಯ ಫೋಟೋ ಹಾಕಿ ಮನದ ದುಗುಡ ಹೊರಹಾಕಿದ್ದಾರೆ.

    ದೊಡ್ಡಬಳ್ಳಾಪುರದಲ್ಲಿ ಮಗನೇ ತಾಯಿಯನ್ನ ಕೊಂದ ಘಟನೆ ದಿನಪತ್ರಿಕೆಯಲ್ಲಿ ಸುದ್ದಿಯಾಗಿದೆ. ಈ ಸುದ್ದಿ ಪ್ರತಿಯನ್ನ ಹಂಚಿಕೊಂಡ ಜಗ್ಗೇಶ್ ತಮ್ಮ ತಾಯಿಯ ನೆನಪನ್ನ ಹಂಚಿಕೊಂಡು ಭಾವುಕರಾದಂತೆ ಪದಗಳನ್ನ ಬರೆದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ತಾಯಿ ಫೋಟೋ ಹಾಗೂ ಇದುವರೆಗು ತಾವು ಜೋಪಾನವಾಗಿ ಇಟ್ಟುಕೊಂಡಿರುವ ತಾಯಿಯ ಸೀರೆ ಅವರು ಬಳಸುತ್ತಿದ್ದ 10 ಪೈಸೆ ನಾಣ್ಯ ಇನ್ನಿತರ ವಸ್ತುಗಳ ಫೋಟೋವನ್ನೂ ತೋರಿಸಿದ್ದಾರೆ. ತಮಗೆ 29 ವರ್ಷ ಇದ್ದಾಗಲೇ ತಾಯಿಯನ್ನ ಕಳೆದುಕೊಂಡಿರೋದಾಗಿ ಹೇಳಿಕೊಂಡಿರುವ ಜಗ್ಗೇಶ್ ತಮ್ಮ 62ನೇ ವಯಸ್ಸಿನಲ್ಲೂ ಅಮ್ಮ ಬಳಸಿದ ವಸ್ತುಗಳನ್ನ ದೇವರ ಮನೆಯಲ್ಲಿಟ್ಟು ಈಗಲೂ ಪೂಜಿಸುವುದು ನಿತ್ಯ ಆಚರಣೆ ಎಂದಿದ್ದಾರೆ.

    ಅಮ್ಮನನ್ನೇ ಮಗ ಕೊಲೆ ಮಾಡಿದ ಎಂದು ಸುದ್ದಿ ಓದಿ ಭಾವುಕರಾದ ಜಗ್ಗೇಶ್ ದಿನಚರಿ ಮರೆತು ಸ್ನಾನ ಪೂಜೆ ಇಲ್ಲದೆ ಶವದಂತೆ ಕುಳಿತುಬಿಟ್ಟರಂತೆ, ಹೀಗಾಗಿ ನೊಂದು ಮಾತು ಮುಂದುವರೆಸಿದ ಜಗ್ಗೇಶ್ `ತಂದೆ ತಾಯಿ ನೋಯಿಸುವವರು ನರಕ ಇಲ್ಲೇ ಅನುಭವಿಸುತ್ತಾರೆ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

     

    ಹೀಗೆ ಬರಹ ಮುಂದುವರೆಸಿರುವ ಜಗ್ಗೇಶ್ ಸಮಾಜ ಎತ್ತ ಸಾಗ್ತಿದೆ, ಇನ್ನೆಂಥ ದುರ್ದಿನಗಳನ್ನ ನಾವು ನೋಡಬೇಕಿದೆ, ಸಸಿ ಇದ್ದಾಗ ಸರಿ ಮಾಡಬೇಕು ಹೆಮ್ಮರವಾದ್ಮೇಲೆ ಸರಿ ಮಾಡಲಾಗದು ಎಂದು ಬುದ್ಧಿಮಾತು ಹೇಳಿದ್ದಾರೆ ಜಗ್ಗೇಶ್. ಅಂದಹಾಗೆ ಜಗ್ಗೇಶ್ ಈಗಲೂ ತಮ್ಮ ಕತ್ತಲ್ಲಿ ತಾಯಿ ಧರಿಸುತ್ತಿದ್ದ ಮಾಂಗಲ್ಯ ಸರ ಧರಿಸುತ್ತಾರೆ. ತಾಯಿ ಬಗ್ಗೆ ಆಗಾಗ ತಮ್ಮ ನೆನಪುಗಳನ್ನ ಹಂಚಿಕೊಳ್ಳುತ್ತಲೇ ಇರುತ್ತಾರೆ.

  • ಮ್ಯಾಂಡೋಲಿನ್ ಶ್ರೀನಿವಾಸ್ ಅವರಿಗೆ ಮಾಲೆ ಹಾಕಿದ ಸಂದರ್ಭ ನೆನೆದ ಅಪ್ಪು

    ಮ್ಯಾಂಡೋಲಿನ್ ಶ್ರೀನಿವಾಸ್ ಅವರಿಗೆ ಮಾಲೆ ಹಾಕಿದ ಸಂದರ್ಭ ನೆನೆದ ಅಪ್ಪು

    ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅವರು ಮತ್ತೆ ತಂದೆಯನ್ನು ನೆನೆದಿದ್ದು, ಅಪರೂಪದ ನೆನಪನ್ನು ಹಂಚಿಕೊಂಡಿದ್ದಾರೆ. ಅಣ್ಣಾವ್ರ ಜನ್ಮದಿನ ಕಳೆದು ನಾಲ್ಕೈದು ದಿನಗಳಾದರೂ ಅಪ್ಪು ಮಾತ್ರ ಇನ್ನೂ ಅದೇ ಗುಂಗಿನಲ್ಲಿದ್ದು, ಅಣ್ಣ ಶಿವರಾಜ್‍ಕುಮಾರ್ ವಿವಾಹದ ಸಂದರ್ಭದಲ್ಲಾದ ಅಪರೂಪದ ಘಟನೆಯೊಂದನ್ನು ನೆನಪಸಿಕೊಂಡಿದ್ದಾರೆ.

    ತಮ್ಮ ತಂದೆಯ ಜನ್ಮ ದಿನದ ನಿಮಿತ್ತ ‘ಯಾರು ಏನು ಮಾಡುವರೂ’ ಎಂದು ಹಾಡುವ ಮೂಲಕ ಗೀತ ನಮನ ಸಲ್ಲಿಸಿದ್ದರು. ಇದೀಗ ಕೆಲವು ಫೋಟೋಗಳ ವಿಡಿಯೋ ಹಾಕಿ ಹಿಂದಿನ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಲಾಕ್‍ಡೌನ್ ನಡುವೆಯೂ ಪುನೀತ್ ತಂದೆಯ ಜನ್ಮದಿನಾಚರಣೆಯನ್ನು ವಿಶೇಷವಾಗಿ ಆಚರಣೆ ಮಾಡಿದ್ದರು. ಮನೆಯಲ್ಲೇ ಕುಳಿತು ರಾಜ್‍ಕುಮಾರ್ ಅಭಿನಯದ ಕ್ರಾಂತಿವೀರ ಸಿನಿಮಾದ ‘ಯಾರೂ ಏನೂ ಮಾಡುವರೂ, ನನಗೇನು ಕೇಡು ಮಾಡುವರೂ’ ಮತ್ತು ‘ರಾಜ ನನ್ನ ರಾಜ’ ಸಿನಿಮಾದ ‘ನಿನದೇ ನೆನಪು’ ಎಂಬ ಹಾಡಗಳನ್ನು ಹಾಡಿ ಅವರನ್ನೇ ನೆನದಿದ್ದರು.

    ಲಾಕ್‍ಡೌನ್ ಹಿನ್ನೆಲೆ ರಾಜ್‍ಕುಮಾರ್ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಲ್ಲ. ಕುಟುಂಬಸ್ಥರು ಸರಳವಾಗಿ ಪೂಜೆ ಮಾಡಿ ಕಾರ್ಯ ಮಾಡಿದ್ದರು. ಅಲ್ಲದೆ ಕನ್ನಡ ಕಣ್ಮಣಿ ರಾಜ್‍ಕುಮಾರ್ ಅವರ ಹುಟ್ಟುಹಬ್ಬಕ್ಕೆ ಚಂದನವದ ಬಹುತೇಕ ತಾರೆಯರು ಶುಭ ಕೋರಿದ್ದರು. ಅದ್ಧೂರಿಯಾಗಿ ಆಚರಿಸದಿದ್ದರೂ ಎಲ್ಲರೂ ಅವರನ್ನು ನೆನದಿದ್ದರಿಂದ ಒಂದು ರೀತಿಯ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು.

     

    View this post on Instagram

     

    A post shared by Puneeth Rajkumar (@puneethrajkumar.official) on

    ಇದೀಗ ಪುನೀತ್ ಮತ್ತೆ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಮೂಲಕ ಭಾವುಕರಾಗಿದ್ದಾರೆ. ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಎರಡು ಫೋಟೋಗಳ ಚಿಕ್ಕ ವಿಡಿಯೋವನ್ನು ಅಪ್ಪು ಹಂಚಿಕೊಂಡಿದ್ದು, ಇದರಲ್ಲಿ ತಾವೇ ಮಾತನಾಡಿದ್ದಾರೆ. ಶಿವಣ್ಣ ಅವರ ಮದುವೆಯಲ್ಲಿ ಮ್ಯಾಂಡೋಲಿನ್ ಶ್ರೀನಿವಾಸ್ ಅವರಿಗೆ ನನ್ನ ಕಡೆಯಿಂದ ಹಾರ ಹಾಕಿಸಿ, ಸನ್ಮಾನ ಮಾಡಿಸಿದ್ದರು. ಅವರು ನಮ್ಮ ತಂದೆಯ ನೆಚ್ಚಿನ ಸಂಗೀತಗಾರರಾಗಿದ್ದರು. ಶ್ರೀನಿವಾಸ್ ಅವರನ್ನು ತುಂಬಾ ಇಷ್ಟ ಪಡುತ್ತಿದ್ದರು. ಶಿವಣ್ಣ, ರಾಘಣ್ಣ ಹಾಗೂ ನನ್ನ ಮದುವೆಯಲ್ಲಿ ಸಹ ಅವರೇ ಬಂದು ಕಾರ್ಯಕ್ರಮ ಕೊಟ್ಟಿದ್ದರು ಎಂದು ಸ್ಮರಿಸಿದ್ದಾರೆ.

  • ಕದಿಯುವಾಗ ಶಬ್ದ ಓಡಿ ಹೋಗಿ ತಿರುಗಿದ್ರೆ ಹಂದಿ – ಕಾಡುತ್ತಿರುವ ಕಾಲೇಜಿನ ತುಂಟತನ

    ಕದಿಯುವಾಗ ಶಬ್ದ ಓಡಿ ಹೋಗಿ ತಿರುಗಿದ್ರೆ ಹಂದಿ – ಕಾಡುತ್ತಿರುವ ಕಾಲೇಜಿನ ತುಂಟತನ

    ನೆನಪುಗಳನ್ನು ಹಿಡಿಯುವ ಹಂಬಲ. ಆದರೆ ಕೈ ಸಿಗದೇ ಓಡಿ ಹೋಗುತ್ತವೆ. ಪ್ರತಿಯೊಬ್ಬರ ಜೀವನದಲ್ಲೂ ನೆನಪುಗಳು ಸದಾ ಇರುತ್ತವೆ. ಕೆಲವರಿಗೆ ಸಿಹಿ ನೆನಪುಗಳಾದ್ರೆ ಇನ್ನೂ ಕೆಲವರಿಗೆ ಕಹಿ ನೆನಪುಗಳು ಅಚ್ಚಳಿಯದೇ ಉಳಿದಿವೆ. ಆದರೆ ಮನುಷ್ಯನ ಜೀವನ ಮಾತ್ರ ನೆನಪು ಮತ್ತು ಕನಸಿನ ಮಧ್ಯೆ ಸಾಗುತ್ತದೆ.

    ನನ್ನ ಬದುಕಿನಲ್ಲಿ ಸದಾ ಹಸಿರಾಗಿ ಉಳಿದುಕೊಂಡಿರುವ ಒಂದು ಸಿಹಿ ನೆನಪಿನ ಪುಟ್ಟ ಕಥೆ ನಿಮಗಾಗಿ….

    ನಾನು ಹಳ್ಳಿಯ ಹೊಲ-ಗದ್ದೆ, ಸ್ನೇಹಿತರು, ಜಾತ್ರೆ, ಹಬ್ಬ-ಹರಿದಿನಗಳ ಮಧ್ಯೆ ಅಲೆದಾಡಿ ಬೆಳೆದಿದ್ದೆ. ಆದರೆ ಹುಟ್ಟೂರಿನಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ಕಾಲಿಟ್ಟಿದ್ದೆ. ಪಟ್ಟಣಕ್ಕಿಂತ ನಮಗೆ ಪಟ್ಟಣದ ಹಾಸ್ಟೆಲ್ ಒಂದು ಜೈಲು ಎಂದು ಅನ್ನಿಸುತ್ತಿತ್ತು. ಆದರೆ ಮೊದ ಮೊದಲು ಹೊಸ ಹಾಸ್ಟೆಲ್ ಜೀವನಕ್ಕೆ ಹೊಂದಿಕೊಳ್ಳುವಾಗ ದಿನಗಳು ವರ್ಷಗಳೇ ಕಳೆದಂತೆ ಭಾಸವಾಗುತ್ತಿತ್ತು. ಕಾಲಕ್ರಮೇಣ ದಿನ ಕಳೆದಂತೆ ತರಗತಿಯಲ್ಲಿನ ಸಹಪಾಠಿಗಳು ಮತ್ತು ಹಾಸ್ಟೆಲ್ ನ ಸ್ನೇಹಿತರು ಹತ್ತಿರವಾದರು. ಬಳಿಕ ನಮ್ಮದೇ ಆದ ಗುಂಪು ಮಾಡಿಕೊಂಡು ಕಾಲೇಜ್, ಸುತ್ತಾಟ, ತರಲೆ ಮತ್ತು ಆಟವಾಡಿಕೊಂಡು ದಿನಗಳನ್ನು ಕಳೆಯುತ್ತಿದ್ದವು.

    ಆರಂಭದಲ್ಲಿ ಹಾಸ್ಟೆಲ್ ಗೆ ಬಂದಾಗ ಭಾನುವಾರ ಬಂದರೆ ಸಾಕು ಊರಿಗೆ ಹೊರಡಲು ಸಿದ್ಧರಾಗುತ್ತಿದ್ದೆವು. ಆದರೆ ಕೆಲವು ದಿನಗಳ ನಂತರ ಯಾಕಾದರೂ ರಜೆ ಬರುತ್ತದೋ ಎಂದು ಹೇಳುವಂತಾಯಿತು. ಅಷ್ಟರ ಮಟ್ಟಿಗೆ ಸ್ನೇಹಿತರೆಲ್ಲರೂ ಹತ್ತಿರವಾಗಿದ್ದೆವು.

    ಕದ್ದ ಹಣ್ಣು ತುಂಬಾ ರುಚಿ:
    ರಜೆಯ ಒಂದು ದಿನ ಹಾಸ್ಟೆಲ್ ನಲ್ಲಿ ಕ್ರಿಕೆಟ್ ಆಡಿ ಮುಗಿದ ಬಳಿಕ ವರಾಂಡದಲ್ಲಿ ಕುಳಿತು ಸ್ನೇಹಿತರೆಲ್ಲರೂ ಹರಟೆ ಹೊಡೆಯುತ್ತಿದ್ದೆವು. ಈ ಸಮಯದಲ್ಲಿ ನಮ್ಮಲ್ಲೊಬ್ಬ ಗೆಳೆಯ ಹಾಸ್ಟೆಲ್ ಹಿಂದಿನ ತೋಟದಲ್ಲಿರುವ ಹಲಸಿನ ಹಣ್ಣಿನ ಬಗ್ಗೆ ಹೇಳಿದ್ದ. ಮೊದಲೇ ಕಾಲೇಜ್- ಹಾಸ್ಟೆಲ್ ನ ಜೀವನ. ನಮಗೆ ಆ ರಾತ್ರಿಯೇ ಹಲಸಿನ ಹಣ್ಣನ್ನು ಕದಿಯುವ ಯೋಚನೆಯಾಯಿತು.

    ಕೊನೆಗೆ ತಡರಾತ್ರಿಯೇ ಹಣ್ಣು ಕದಿಯಲು ನಿಪುಣ ಕಳ್ಳರಂತೆ ಯೋಜನೆ ರೂಪಿಸಿದೆವು. ಯಾರು ಮರ ಹತ್ತುವರು? ಹಣ್ಣನ್ನು ನೆಲಕ್ಕೆ ಬೀಳದಂತೆ ಕ್ಯಾಚ್ ಹಿಡಿಯುವುದು ಯಾರು? ಹಾಗೂ ತೋಟದ ಮಾಲೀಕ ಬರುವುದೊಳಗೆ ಹಿಂದಿರುಗಬೇಕು ಎಂದು ಪಿಸುಗುಟ್ಟುತ್ತಾ ತೋಟಕ್ಕೆ ನುಗ್ಗಿದೆವು. ಶಬ್ದ ಬರದಂತೆ ಹಣ್ಣನ್ನು ಕೀಳಲು ಪ್ರಯತ್ನಿಸುತ್ತಿದ್ದೆವು. ಆದರೆ ಕೆಲ ಹೊತ್ತಿನಲ್ಲಿ ತೋಟದೊಳಗೆ ಜೋರಾದ ಶಬ್ದ ಕೇಳಿಸಿತು. ಎಲ್ಲರು ತೋಟದ ಮಾಲೀಕ ಬಂದನೆಂದು ಹೆದರಿ ತೋಟದಿಂದ ಕಾಲ್ಕಿತ್ತೆವು.

    ನಾವು ಓಡಿ ಹೋಗುತ್ತಿದ್ದಂತೆ ನಮ್ಮ ಹಿಂದೆಯೇ ಯಾರೋ ಇದ್ದಾರೆಂದು ಭಾಸವಾಯಿತು. ಒಮ್ಮೆ ಎಲ್ಲರೂ ಧೈರ್ಯ ಮಾಡಿ ಹಿಂದೆ ತಿರುಗಿ ನೋಡಿದರೆ ಗುಟುರಾಕುತ್ತಿದ್ದ ಹಂದಿಗಳು. ನಕ್ಕರೇ ತೋಟದ ಮಾಲೀಕ ಬರುತ್ತಾರೆ ಎಂದು ಮನಸಿನಲ್ಲೇ ನಕ್ಕು ಅವುಗಳನ್ನು ಓಡಿಸಿದೆವು. ಬಳಿಕ ಹಲಸಿನ ಹಣ್ಣಿನ ಜೊತೆ ಸಪೋಟ ಹಣ್ಣನ್ನು ಕಿತ್ತು ತೋಟದಿಂದ ಬಂದೆವು. ‘ಕದ್ದು ತಿನ್ನುವ ರುಚಿಯೇ ಬೇರೆ’ ಎಂಬ ಗಾದೆಯಂತೆ ತಂದಿಟ್ಟ ಹಣ್ಣುಗಳು ಕೇವಲ ಮೂರು ದಿನಗಳಲ್ಲಿ ಖಾಲಿಯಾಗುತ್ತಿದ್ದವು. ಯಾರನ್ನು ಕೇಳಿದರು ‘ತಿಂದವರ್ಯಾರು’ ಎಂಬ ಮರು ಪ್ರಶ್ನೆ ಹುಟ್ಟಿಕೊಳ್ಳುತ್ತಿತ್ತು.

    ಹಾಸ್ಟೆಲ್ ನ ಸಪ್ಪೆ ಊಟ ತಿಂದು ಮರಗಟ್ಟಿದ್ದ ನಾಲಗೆಗೆ ರುಚಿ ಬೇಕೆನಿಸಿದಾಗ ಕೋಳಿ ಸುಟ್ಟು ತಿನ್ನುವ ಖಯಾಲಿ. ಉಪ್ಪು-ಖಾರ ಸರಿಯಾಗಿಲ್ಲ ಎಂದರೂ ಹಾಸ್ಟೆಲ್ ಊಟಕ್ಕಿನ್ನ ಮೋಸವಿಲ್ಲ ಎಂದು ಬಾಯಿ ಚಪ್ಪರಿಸಿಕೊಂಡು ತಿನ್ನುವಾಗ ಬಿಸಿ ಕೋಳಿ ತುಟಿ ಸುಟ್ಟ ನೆನಪು. ಆದರೆ ಹಳ್ಳಿಯಿಂದ ಕಾಲೇಜಿಗೆ ಈಗ ಬಂದಂತೆ ಭಾವನೆ, ನೋಡಿದರೆ ಕಾಲೇಜು ಜೀವನವೇ ಮುಗಿದು ಹೋಯಿತು.

    ಕದ್ದು ತಿಂದ ಹಣ್ಣು, ತುಟಿ ಸುಟ್ಟ ಕೋಳಿ, ಕಾಲೇಜಿನಲ್ಲಿ ಸ್ನೇಹಿತರ ಕೋಳಿ ಜಗಳ, ಸೆಂಡಾಫ್ ದಿನದ ಹುಚ್ಚು ಕುಣಿತ, ಪಕ್ಕದ ಡಿಪಾರ್ಟ್ ಮೆಂಟಿನ ಊಟ, ಜೂನಿಯರ್ ಗಳ ಹರಟೆ… ಇವೆಲ್ಲವೂ ಈಗ ಬರೀ ನೆನಪು ಮಾತ್ರ…

     – ಪವನ್ 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv 

  • 33 ವರ್ಷದ ಹಿಂದಿನ ನೆನಪು ಮಾಡಿಕೊಂಡು ಮುಗಳ್ನಕ್ಕ ಪವರ್ ಸ್ಟಾರ್

    33 ವರ್ಷದ ಹಿಂದಿನ ನೆನಪು ಮಾಡಿಕೊಂಡು ಮುಗಳ್ನಕ್ಕ ಪವರ್ ಸ್ಟಾರ್

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ 33 ವರ್ಷದ ಹಿಂದಿನ ನೆನಪು ಮಾಡಿಕೊಂಡು ಖುಷಿಯಲ್ಲಿದ್ದಾರೆ.

    ಪುನೀತ್ ರಾಜ್‍ಕುಮಾರ್ ಬಾಲ ನಟರಾಗಿ ‘ಬೆಟ್ಟದ ಹೂವು’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಅವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ದೊರೆತ್ತಿತ್ತು. ಸದ್ಯ ಪುನೀತ್ ಬೆಟ್ಟದ ಹೂವು ಚಿತ್ರದ ದಿನಗಳನ್ನು ನೆನಪಿಸಿಕೊಂಡು ಫೇಸ್‍ಬುಕ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಸಂತಸದಲ್ಲಿದ್ದಾರೆ.

    ಬೆಟ್ಟದ ಹೂವು ಚಿತ್ರ 1985ರಲ್ಲಿ ಬಿಡುಗಡೆಯಾಗಿ ಇಂದಿಗೆ 33 ವರ್ಷಗಳು ಆಗಿದೆ. ಪುನೀತ್ ರಾಜ್‍ಕುಮಾರ್ ಅವರು ಬೆಟ್ಟದ ಹೂವು ಚಿತ್ರೀಕರಣ ಜಾಗಕ್ಕೆ ಭೇಟಿ ಮಾಡಿ ತಮ್ಮ ಬಾಲ್ಯದ ನೆನಪುಗಳನ್ನು ವಿಡಿಯೋ ಮೂಲಕ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

    ಇತ್ತೀಚೆಗೆ ಪುನೀತ್ ‘ನಟಸಾರ್ವಭೌಮ’ ಚಿತ್ರದ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಬೆಟ್ಟದ ಹೂವು ಚಿತ್ರದ ಚಿತ್ರೀಕರಣ ಸ್ಥಳದ ನೆನಪಾಗಿ ಕೂಡಲೇ ಕಾರನ್ನು ಅತ್ತಿಗುಂಡಿ ಕಡೆಗೆ ತಿರುಗಿಸಿದ್ದಾರೆ.

    ಪುನೀತ್ ಆ ಸ್ಥಳಕ್ಕೆ ಹೋದ ನಂತರ ಶೂಟಿಂಗ್ ಸ್ಥಳ, ಶೂಟಿಂಗ್ ಸೆಟ್ ಎಲ್ಲಿ ಹಾಕಿದ್ದು ಹಾಗೂ ಚಿತ್ರದಲ್ಲಿ ಯಾರ್ಯಾರು ಯಾವ ಪಾತ್ರ ಮಾಡಿದ್ದರು ಎಂಬುದನ್ನು ವಿವರಿಸಿದ್ದಾರೆ. 33 ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಬೆಟ್ಟದ ಹೂವು ಚಿತ್ರೀಕರಣ ನೆನಪನ್ನು ಮೆಲುಕು ಹಾಕಿದ್ದಾರೆ.

    ಪುನೀತ್ ಚಿತ್ರೀಕರಣ ಜಾಗಕ್ಕೆ ಭೇಟಿ ನೀಡಿದ್ದಲ್ಲದೇ ಅತ್ತಿಗುಂಡಿಯ ಗ್ರಾಮಸ್ಥರನ್ನು ಮಾತನಾಡಿಸಿ ಚಿತ್ರೀಕರಣದ ಸ್ಥಳ ಹಾಗೂ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews