Tag: ನೂತನ ಸಂಸತ್ ಭವನ

  • ಸಂಸತ್‌ ಉದ್ಘಾಟನೆಯನ್ನು ಪ್ರಧಾನಿ ತಮ್ಮ ಪಟ್ಟಾಭಿಷೇಕ ಅಂದುಕೊಂಡಿದ್ದಾರೆ – ಮೋದಿ ವಿರುದ್ಧ ರಾಗಾ ವಾಗ್ದಾಳಿ

    ಸಂಸತ್‌ ಉದ್ಘಾಟನೆಯನ್ನು ಪ್ರಧಾನಿ ತಮ್ಮ ಪಟ್ಟಾಭಿಷೇಕ ಅಂದುಕೊಂಡಿದ್ದಾರೆ – ಮೋದಿ ವಿರುದ್ಧ ರಾಗಾ ವಾಗ್ದಾಳಿ

    ನವದೆಹಲಿ: ನೂತನ ಸಂಸತ್‌ ಭವನ (New Parliament Building) ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪಟ್ಟಾಭಿಷೇಕದಂತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಟೀಕಿಸಿದ್ದಾರೆ.

    ಈ ಕುರಿತು ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, ಸಂಸತ್‌ ಜನರ ಧ್ವನಿ. ಸಂಸತ್ ಭವನದ ಉದ್ಘಾಟನೆಯನ್ನು ಪ್ರಧಾನಿ ಮಹಾಮಸ್ತಕಾಭಿಷೇಕ ಎಂದು ಪರಿಗಣಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಸೆಂಟ್ರಲ್ ವಿಸ್ತಾ ಉದ್ಘಾಟನೆಯ ಸವಿನೆನಪಿಗೆ ವಿಶೇಷ ಅಂಚೆ ಚೀಟಿ, 75 ರೂ. ನಾಣ್ಯ ಬಿಡುಗಡೆ

    ಹೊಸ ಸಂಸತ್‌ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಲು ಮುಂದಾದ ಕುಸ್ತಿಪಟುಗಳ ಬಂಧನ ಖಂಡಿಸಿ ಟ್ವೀಟ್‌ ಮಾಡಿರುವ ಅವರು, ಪಟ್ಟಾಭಿಷೇಕ ಮುಗಿಯಿತು. ಬೀದಿಗಿಳಿದು ಸಾರ್ವಜನಿಕರ ದನಿಯನ್ನು ತುಳಿಯುತ್ತಿರುವ ‘ಅಹಂಕಾರಿ ರಾಜ’ ಎಂದು ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ವಿರೋಧ ಪಕ್ಷಗಳ ಬಹಿಷ್ಕಾರದ ಕರೆ ನಡುವೆ ಭಾನುವಾರ ಹೊಸ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಸಂಸತ್‌ ಭವನದಲ್ಲಿ ಪೂಜೆ, ಹೋಮ-ಹವನ ಸೇರಿದಂತೆ ಕಾರ್ಯಕ್ರಮ ನಡೆಯಿತು. ಇದನ್ನೂ ಓದಿ: ದೇಶವೇ ಮೊದಲು ಎಂಬ ಧ್ಯೇಯದೊಂದಿಗೆ ಮುನ್ನುಗ್ಗಿ: ನರೇಂದ್ರ ಮೋದಿ ಕರೆ

    ಹೊಸ ಸಂಸತ್ ಭವನ ಉದ್ಘಾಟನೆಗೂ ಮುನ್ನ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಪ್ರಧಾನಿ ಮೋದಿ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಗಣಪತಿ ಹೋಮ ನೆರವೇರಿಸಿದರು. ತಮಿಳುನಾಡಿನ ವಿವಿಧ ಅಧೀನಮ್‌ಗಳ ಪ್ರಧಾನ ಅರ್ಚಕರಿಂದ ಪ್ರಧಾನಿ ಆಶೀರ್ವಾದ ಪಡೆದರು. ನಂತರ ಹೊಸ ಸಂಸತ್ತಿನ ಕಟ್ಟಡದಲ್ಲಿ ಲೋಕಸಭಾ ಸ್ಪೀಕರ್ ಕುರ್ಚಿಯ ಬಳಿ ಸೆಂಗೋಲ್ ಸ್ಥಾಪಿಸಿದರು.

  • ಸೆಂಟ್ರಲ್ ವಿಸ್ತಾ ಉದ್ಘಾಟನೆಯ ಸವಿನೆನಪಿಗೆ ವಿಶೇಷ ಅಂಚೆ ಚೀಟಿ, 75 ರೂ. ನಾಣ್ಯ ಬಿಡುಗಡೆ

    ಸೆಂಟ್ರಲ್ ವಿಸ್ತಾ ಉದ್ಘಾಟನೆಯ ಸವಿನೆನಪಿಗೆ ವಿಶೇಷ ಅಂಚೆ ಚೀಟಿ, 75 ರೂ. ನಾಣ್ಯ ಬಿಡುಗಡೆ

    ನವದೆಹಲಿ: ನೂತನ ಸಂಸತ್ (New Parliament) ಭವನದ ಉದ್ಘಾಟನೆಯ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಭಾನುವಾರ ವಿಶೇಷ ಅಂಚೆ ಚೀಟಿ (Postage Stamp) ಮತ್ತು 75 ರೂ. ನಾಣ್ಯವನ್ನು (Rs 75 Coin) ಬಿಡುಗಡೆ ಮಾಡಿದ್ದಾರೆ.

    ನಾಣ್ಯವು ವೃತ್ತಾಕಾರದಲ್ಲಿದ್ದು, 44 ಮಿ.ಮೀ. ವ್ಯಾಸವನ್ನು ಹೊಂದಿದೆ. 50% ಬೆಳ್ಳಿ, 40% ತಾಮ್ರ, 5% ನಿಕಲ್ ಮತ್ತು 5% ಸತುವನ್ನು ಬಳಸಿ ನಾಣ್ಯ ತಯಾರಿಸಲಾಗಿದೆ. ಅಲ್ಲದೆ ಇದು 35 ಗ್ರಾಂ. ತೂಕ ಹೊಂದಿದೆ. ಇದನ್ನೂ ಓದಿ: ಹೊಸ ಸಂಸತ್ ಭವನ ಉದ್ಘಾಟನೆ ಸ್ಮರಣಾರ್ಥ 75 ರೂ. ವಿಶೇಷ ನಾಣ್ಯ ಬಿಡುಗಡೆ

    ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಮುದ್ರೆಯ ಚಿತ್ರವನ್ನು ಹೊಂದಿದೆ. ಅದರ ಸುತ್ತಲೂ ದೇವನಾಗರಿ ಲಿಪಿಯಲ್ಲಿ `ಭಾರತ್’ ಮತ್ತು ಇಂಗ್ಲಿಷ್‍ನಲ್ಲಿ `ಇಂಡಿಯಾ’ ಎಂದು ಬರೆಯಲಾಗಿದೆ. ಸಿಂಹದ ಮುದ್ರೆಯ ಕೆಳಗೆ ಅಂತಾರಾಷ್ಟ್ರೀಯ ಅಂಕಿಗಳಲ್ಲಿ 75 ಎಂದು ಮುದ್ರಿಸಲಾಗಿದೆ. ಅಲ್ಲದೆ ರೂ. ಚಿಹ್ನೆಯನ್ನು ಸಹ ಇರಿಸಲಾಗಿದೆ.

    ನಾಣ್ಯದ ಇನ್ನೊಂದು ಬದಿಯಲ್ಲಿ ಪಾರ್ಲಿಮೆಂಟ್‍ನ ಚಿತ್ರ ಮತ್ತು 2023ರ ಇಸವಿಯ ಉಲ್ಲೇಖ ಮಾಡಲಾಗಿದೆ. ಈ ವಿಶೇಷ ನಾಣ್ಯವನ್ನು ಸಂಸತ್ ಭವನದ ಉದ್ಘಾಟನೆಯ ಸ್ಮರಣಾರ್ಥವಾಗಿ ಬಿಡುಗಡೆಗೊಳಿಸುತ್ತಿರುವುದು ಮಾತ್ರವಲ್ಲದೇ, ಇದು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಭಾರತಕ್ಕೆ ಗೌರವದ ಸಂಕೇತವೂ ಆಗಿರಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಇದನ್ನೂ ಓದಿ: ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್‌ಜೆಡಿ – ಕಾನೂನು ಸಮರಕ್ಕೆ ಮುಂದಾದ ಬಿಜೆಪಿ

  • ದೇಶವೇ ಮೊದಲು ಎಂಬ ಧ್ಯೇಯದೊಂದಿಗೆ ಮುನ್ನುಗ್ಗಿ: ನರೇಂದ್ರ ಮೋದಿ ಕರೆ

    ದೇಶವೇ ಮೊದಲು ಎಂಬ ಧ್ಯೇಯದೊಂದಿಗೆ ಮುನ್ನುಗ್ಗಿ: ನರೇಂದ್ರ ಮೋದಿ ಕರೆ

    ನವದೆಹಲಿ: ದೇಶವೇ ಮೊದಲು ಎಂಬ ಗುರಿಯೊಂದಿಗೆ ಮುನ್ನುಗ್ಗಿ. ನಮ್ಮ ಅಭಿವೃದ್ಧಿಗೆ ನಾವೇ ಶ್ರಮಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆ ನೀಡಿದ್ದಾರೆ.

    ಇಂದು ನೂತನ ಸಂಸತ್ ಭವನದಲ್ಲಿ ಮಾತನಾಡಿದ ಅವರು, ಕಾರ್ಮಿಕರು (Labours) ಈ ಭವನವನ್ನು ಭವ್ಯಗೊಳಿಸಿದ್ದಾರೆ. ಇನ್ನು ಮುಂದೆ ಇಲ್ಲಿ ಕೂರುವ ಸಂಸದರು ಇದನ್ನು ದಿವ್ಯಗೊಳಿಸಬೇಕಿದೆ. ಈ ಭವನ ಮುಂದಿನ ಪೀಳಿಗೆಗೆ ಮಾರ್ಗಸೂಚಿಯಾಗಲಿದೆ. ಇಲ್ಲಿ ಕೈಗೊಳ್ಳುವ ನಿರ್ಣಯ ಭಾರತ (India) ದ ಭವಿಷ್ಯವನ್ನು ರೂಪಿಸಲಿದೆ ಎಂದು ಹೇಳಿದರು.

    ಆಧುನಿಕ ಭಾರವನ್ನು ಇಡೀ ವಿಶ್ವವೇ ಗೌರವಿಸುತ್ತಿದೆ. ನಮ್ಮಲ್ಲಿ ಕಲೆ ಇದೆ, ಕೌಶಲ್ಯ ಇದೆ. ಈ ಭವನದ ಕಣಕಣದಲ್ಲಿಯೂ ಒಗ್ಗಟ್ಟಿದೆ. ಏಕ್ ಭಾರತ್.. ಶ್ರೇಷ್ಠ್ ಭಾರತ್ ಅನುರಣಿಸುತ್ತಿದೆ. ಲೋಕಸಭೆ ವಿನ್ಯಾಸಕ್ಕೆ ನವಿಲು ಪ್ರೇರಣೆಯಾಗಿದ್ದು, ಹಳೆಯ ಸಂಸತ್ತಿನಲ್ಲಿ ಸ್ಥಳಾವಕಾಶದ ಕೊರತೆ ಇತ್ತು. ಇದೇ ಕಾರಣಕ್ಕೆ ಹೊಸ ಸಂಸತ್ ತಲೆ ಎತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ RJD ವಿರುದ್ಧ ಓವೈಸಿ ವಾಗ್ದಾಳಿ

    ಆಧುನಿಕ ತಂತ್ರಜ್ಞಾನದೊಂದಿಗೆ ಸಂಸತ್ ಭವನ (New Parliament) ನಿರ್ಮಾಣವಾಗಿದೆ. ಈ ಕಟ್ಟಡವು ಆಧುನಿಕ ಸೌಲಭ್ಯಗಳನ್ನು ಹೊಂದಿದೆ. 60,000 ಕ್ಕೂ ಹೆಚ್ಚು ಕಾರ್ಮಿಕರಿಗೆ ಉದ್ಯೋಗ ನೀಡಿದೆ. ಅವರ ಶ್ರಮವನ್ನು ಗೌರವಿಸಲು ನಾವು ಡಿಜಿಟಲ್ ಗ್ಯಾಲರಿಯನ್ನು ರಚಿಸಿದ್ದೇವೆ. ಈ ಭವನ ನೋಡಿದಾಗ ನನಗೆ ಹೆಮ್ಮೆ ಅನಿಸ್ತದೆ. ನಮ್ಮದು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಹೊಸ ಸಂಸತ್ ಪ್ರೇರಣೆಯಾಗಿದೆ. ಕರ್ತವ್ಯವೇ ನಮಗೆ ಆದ್ಯತೆ ಆಗಬೇಕು. ಸುಧಾರಣೆಯ ದಿಕ್ಕಿನಲ್ಲೇ ನಾವು ಸದಾ ಸಾಗಬೇಕು. ಲೋಕ ಕಲ್ಯಾಣವೇ ಜೀವನ ಮಂತ್ರವಾಗಬೇಕು ಎಂದರು.

    ಬಡವರಿಗಾಗಿ 4 ಕೋಟಿ ಮನೆ ನಿರ್ಮಾಣ ಮಾಡಿಕೊಟ್ಟಿದ್ದೇವೆ. ಮನೆ ಮನೆಗೆ ನೀರು ಕೊಂಡೊಯ್ದಿದ್ದೇವೆ. 30 ಸಾವಿರಕ್ಕೂ ಹೆಚ್ಚು ಪಂಚಾಯತ್ ಭವನ ನಿರ್ಮಿಸಿದ್ದೇವೆ. ಭಾರತದ ಮುಂದೆ ಅನೇಕ ಸವಾಲುಗಳಿವೆ. ಈ ಎಲ್ಲಾ ಸವಾಲುಗಳನ್ನು ವಿಶ್ವಾಸದಿಂದ ಮೆಟ್ಟಿ ನಿಂತಿದ್ದೇವೆ. ಮುಂದಿನ 25 ವರ್ಷಗಳಲ್ಲಿ ದೇಶದ ಭವಿಷ್ಯ ಬದಲಾಗಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

  • ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ RJD ವಿರುದ್ಧ ಓವೈಸಿ ವಾಗ್ದಾಳಿ

    ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ RJD ವಿರುದ್ಧ ಓವೈಸಿ ವಾಗ್ದಾಳಿ

    ನವದೆಹಲಿ: ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ರಾಷ್ಟ್ರೀಯ ಜನತಾ ದಳ (RJD) ವಿರುದ್ಧ ಇದೀಗ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (AIMIM chief Asaduddin Owaisi) ವಾಗ್ದಾಳಿ ನಡೆಸಿದ್ದಾರೆ.

    ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಜೆಡಿಯವರಿಗೆ ಯಾವುದೇ ಸ್ಪಷ್ಟ ನಿಲುವು ಇಲ್ಲ. ಯಾಕೆ ಅವರು ಸಂಸತ್ ಭವನ (New Parliament) ವನ್ನು ಶವಪೆಟ್ಟಿಗೆಗೆ ಹೋಲಿಸಬೇಕಿತ್ತು..?. ಬೇರೆ ಯಾವುದಾದರೂ ಉದಾಹರಣೆಯನ್ನು ನೀಡಬಹುದಿತ್ತು. ಇದರಲ್ಲೂ ಕೆಲವು ಕೋನವನ್ನು ತರಲಾಗಿದೆ. ಕೆಲವೊಮ್ಮೆ ಅವರು ಜಾತ್ಯತೀತವಾಗಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

    ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ (Om Birla) ಅವರು ಹೊಸ ಸಂಸತ್ ಭವನವನ್ನು ಉದ್ಘಾಟಿಸಿದರೆ ಉತ್ತಮವಾಗಿತ್ತು. ಹಳೆಯ ಸಂಸತ್ ಕಟ್ಟಡಕ್ಕೆ ದೆಹಲಿ ಅಗ್ನಿಶಾಮಕ ದಳದ ಅನುಮತಿಯೂ ಇರಲಿಲ್ಲ. ಆರ್ ಜೆಡಿಯವರು ಸಂಸತ್ತನ್ನು ಶವಪೆಟ್ಟಿಗೆ ಎಂದು ಏಕೆ ಕರೆಯುತ್ತಿದ್ದಾರೆ? ಅವರು ಇನ್ನೇನಾದರೂ ಹೇಳಬಹುದಿತ್ತು, ಈ ಕೋನವನ್ನು ಏಕೆ ತರಬೇಕು ಎಂದು ಓವೈಸಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್‌ಜೆಡಿ – ಕಾನೂನು ಸಮರಕ್ಕೆ ಮುಂದಾದ ಬಿಜೆಪಿ

    ಇದೇ ವೇಳೆ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿದ ಅವರು, ಲೋಕಸಭೆಯ ಉಸ್ತುವಾರಿ ಸ್ಪೀಕರ್ ಅವರೇ ಹೊರತು ಪ್ರಧಾನಿ ಅಲ್ಲ. ಲೋಕಸಭೆಯು ಜನರಿಗೆ ಉತ್ತರದಾಯಿಯಾಗಿದೆ. ಹೀಗಾಗಿ ಇದನ್ನು ಸ್ಪೀಕರ್ ಅವರು ಉದ್ಘಾಟಿಸಿದ್ದರೆ ಚೆನ್ನಾಗಿತ್ತು. ಆದರೆ ಪ್ರಧಾನಿ ಅವರೇ ಎಲ್ಲವನ್ನೂ ಮಾಡುತ್ತಿದ್ದಾರೆ. ಈ ಮೂಲಕ ತನ್ನಿಂದಲ್ಲದೇ ಬೇರೆ ಯಾರೂ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ತೋರಿಸಲು ಬಯಸುತ್ತಾರೆ. 2014 ಕ್ಕಿಂತ ಮೊದಲು ಭಾರತದಲ್ಲಿ ಏನೂ ಆಗಿಲ್ಲ, ಈಗ ಎಲ್ಲವೂ ನಡೆಯುತ್ತಿದೆ. ಇದು ಪ್ರಧಾನಿಯ ವೈಯಕ್ತಿಕ ಪ್ರಚಾರದ ಹೊಸ ಮಾರ್ಗವಾಗಿದೆ ಎಂದು ಕುಟುಕಿದರು.

    ಸದ್ಯ ನೂತನ ಸಂಸತ್ ಭವನವನ್ನು ಶವವಪೆಟ್ಟಿಗೆಗೆ ಹೋಲಿಸಿರುವ ಆರ್‍ಜೆಡಿ ವಿರುದ್ಧ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅನೇಕರು ಇದನ್ನು ಅಸಹ್ಯಕರ ಬೆಳವಣಿಗೆ ಎಂದಿದ್ದಾರೆ.

  • ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್‌ಜೆಡಿ – ಕಾನೂನು ಸಮರಕ್ಕೆ ಮುಂದಾದ ಬಿಜೆಪಿ

    ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್‌ಜೆಡಿ – ಕಾನೂನು ಸಮರಕ್ಕೆ ಮುಂದಾದ ಬಿಜೆಪಿ

    ನವದೆಹಲಿ: ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ (Coffin) ಹೋಲಿಸಿ ಟ್ವೀಟ್ ಮಾಡಿದ ರಾಷ್ಟ್ರೀಯ ಜನತಾ ದಳದ (Rashtriya Janata Dal) ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಲು ಬಿಜೆಪಿ (BJP) ಮುಂದಾಗಿದೆ.

    ಶವಪೆಟ್ಟಿಗೆಯ ಆಕಾರಕ್ಕೆ ಹೋಲಿಸಿದ ಟ್ವೀಟ್‍ಗೆ ಬಿಜೆಪಿ, ಆರ್‌ಜೆಡಿ (RJD) ವಿರುದ್ಧ ವಾಗ್ದಾಳಿ ನಡೆಸಿದೆ. ಅಲ್ಲದೆ ಟ್ವಿಟರ್ ಪೋಸ್ಟ್‌ನ ಹಿಂದೆ ಇರುವವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಹೇಳಿಕೊಂಡಿದೆ. ಇದನ್ನೂ ಓದಿ: ನೂತನ ಸಂಸತ್ ಉದ್ಘಾಟನೆಗೂ ಮುನ್ನ ಕಾರ್ಮಿಕರನ್ನು ಸನ್ಮಾನಿಸಿದ ಮೋದಿ

    ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿಯವರು, ಹೊಸ ಸಂಸತ್ತಿನ ಕಟ್ಟಡವನ್ನು ಸಾರ್ವಜನಿಕ ಹಣದಿಂದ ನಿರ್ಮಿಸಲಾಗಿದೆ. ಅದನ್ನು ಶವ ಪೆಟ್ಟಿಗೆಗೆ ಹೋಲಿಸಿರುವುದು ದುರದೃಷ್ಟಕರ ವಿಷಯವಾಗಿದೆ. ಅಲ್ಲದೆ ಸಂಸತ್ ಉದ್ಘಾಟನೆ ಬಹಿಷ್ಕರಿಸಿರುವವರು ಸಂಸತ್ತಿನ ಕಲಾಪಕ್ಕೆ ಹಾಜರಾಗುತ್ತಾರೆ. ಅವರೇನು ಶಾಶ್ವತವಾಗಿ ಸಂಸತ್ತನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರಾ? ಅವರ ಲೋಕಸಭೆ ಮತ್ತು ರಾಜ್ಯಸಭೆಯ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಾರೆಯೇ? ಎಂದು ಕುಟುಕಿದ್ದಾರೆ.

    ಇಂದು ಶವಪೆಟ್ಟಿಗೆಗೆ ಹೋಲಿಸಿದವರನ್ನು, ದೇಶದ ಜನರು 2024 ರಲ್ಲಿ ಅದೇ ಶವಪೆಟ್ಟಿಗೆಯಲ್ಲಿ ಹೂಳುತ್ತಾರೆ. ಜನರು ಪ್ರಜಾಪ್ರಭುತ್ವದ ಹೊಸ ಮಂದಿರವನ್ನು ಪ್ರವೇಶಿಸಲು ನಿಮಗೆ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಕಿಡಿಕಾರಿದ್ದಾರೆ.

    ಆರ್‌ಜೆಡಿಯ ಟ್ವೀಟ್ ಸಮರ್ಥಿಸಿಕೊಂಡಿರುವ ಪಕ್ಷದ ಮುಖಂಡ ಶಕ್ತಿ ಸಿಂಗ್ ಯಾದವ್, ನಮ್ಮ ಟ್ವೀಟ್‍ನಲ್ಲಿರುವ ಶವಪೆಟ್ಟಿಗೆಯು ಬಿಜೆಪಿ ಪ್ರಜಾಪ್ರಭುತ್ವವನ್ನು ಸಮಾಧಿ ಮಾಡುತ್ತಿರುವುದನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ.

    ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ ಸೇರಿದಂತೆ 20 ರಾಜಕೀಯ ಪಕ್ಷಗಳು ಹೊಸ ಸಂಸತ್ತಿನ ಉದ್ಘಾಟನೆಯನ್ನು ಬಹಿಷ್ಕರಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಹೊಸ ಕಟ್ಟಡವನ್ನು ಏಕೆ ಉದ್ಘಾಟಿಸುತ್ತಿದ್ದಾರೆ ಎಂದು ಪ್ರಶ್ನಿಸಿವೆ. ರಾಷ್ಟ್ರಧ್ಯಕ್ಷೆ ದ್ರೌಪದಿ ಮುರ್ಮು (Droupadi Murmu) ಅವರನ್ನು ಸಂಪೂರ್ಣವಾಗಿ ಬದಿಗೊತ್ತಿ ನೂತನ ಸಂಸತ್ ಭವನವನ್ನು ತಾವೇ ಉದ್ಘಾಟಿಸುವ ಪ್ರಧಾನಿ ಮೋದಿಯವರ ನಿರ್ಧಾರ ಸರಿಯಲ್ಲ. ಅಲ್ಲದೆ ಇದು ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿಯಾಗಿದೆ ಎಂದು ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ. ಇದನ್ನೂ ಓದಿ: ಭಾರತದ ನೂತನ ಸಂಸತ್ ಭವನಕ್ಕೆ ದೇಶದ ವಿವಿಧತೆಯ ಮೆರುಗು

  • New Parliament Building ಉದ್ಘಾಟನೆ – ಈ ಭವನ ಹಿರಿಮೆ, ವಿಶ್ವಾಸದ ಸಂಕೇತ: ಮೋದಿ

    New Parliament Building ಉದ್ಘಾಟನೆ – ಈ ಭವನ ಹಿರಿಮೆ, ವಿಶ್ವಾಸದ ಸಂಕೇತ: ಮೋದಿ

    ನವದೆಹಲಿ: ನೂತನ ಸಂಸತ್ ಭವನ (New Parliament) ಹಿರಿಮೆ ಹಾಗೂ ವಿಶ್ವಾಸದ ಸಂಕೇತವಾಗಿದೆ. ಈ ಐತಿಹಾಸಿಕ ಭವನ ಸಶಕ್ತ ಭಾರತದ ಸಂಕೇತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬಣ್ಣಿಸಿದ್ದಾರೆ.

    ನೂತನ ಸಂಸತ್ ಭವನ ಉದ್ಘಾಟನೆಗೊಂಡ ಬಳಿಕ ಟ್ವೀಟ್ (Tweet) ಮಾಡಿದ ಪ್ರಧಾನಿ ಮೋದಿ, ದೇಶವನ್ನು ಹೊಸ ಅಭಿವೃದ್ಧಿ ಉತ್ತುಂಗಕ್ಕೆ ಉತ್ತೇಜಿಸಲಿದೆ. ಜನರ ಅಭಿನಂದನೆಗಳಿಗೆ ನಾನು ಆಭಾರಿಯಾಗಿದ್ದೇನೆ. ಈ ಪ್ರೀತಿಯೇ ನಮ್ಮ ಸಾಧನೆಗಳಿಗೆ ಪ್ರೇರಕ ಶಕ್ತಿ. ಜೊತೆಗೆ ಮತ್ತಷ್ಟು ಸಾಧಿಸಲು ನಮಗೆ ಶಕ್ತಿ ತುಂಬಲಿದೆ ಎಂದರು.

    ನಮ್ಮ ಹೃದಯಗಳು ಮತ್ತು ಮನಸ್ಸುಗಳು ಹೆಮ್ಮೆ, ಆತ್ಮವಿಶ್ವಾಸ ಮತ್ತು ಭರವಸೆಯಿಂದ ತುಂಬಿವೆ. ಈ ಅಪ್ರತಿಮ ಕಟ್ಟಡವು ಸಬಲೀಕರಣದ ತೊಟ್ಟಿಲು ಆಗಿರಲಿ, ಕನಸುಗಳನ್ನು ಸೃಷ್ಟಿಸಿ ಮತ್ತು ಅವುಗಳನ್ನು ಈಡೇರಿಸುವಂತಾಗಲಿ. ಇದು ನಮ್ಮ ಮಹಾನ್ ರಾಷ್ಟ್ರವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಏರಿಸಲಿ ಎಂದು ಆಶಿಸಿದ್ದಾರೆ.  ಇದನ್ನೂ ಓದಿ: ನೂತನ ಸಂಸತ್ ಉದ್ಘಾಟನೆಗೂ ಮುನ್ನ ಕಾರ್ಮಿಕರನ್ನು ಸನ್ಮಾನಿಸಿದ ಮೋದಿ

    ಬೆಳಗ್ಗೆ ನಡೆದ ಪೂಜಾ ವಿಧಿ-ವಿಧಾನಗಳಲ್ಲಿ ಭಾಗವಹಿಸಿದ ಬಳಿಕ ಪ್ರಧಾನಿಯವರು ಬಳಿಕ ಐತಿಹಾಸಿಕ ಸೆಂಗೋಲ್ ಅನ್ನು ಪ್ರಧಾನಿ ಮೋದಿ ಅವರು ಲೋಕಸಭಾ ಸ್ಪೀಕರ್ ಸ್ಥಾನದ ಸಮೀಪದಲ್ಲಿ ಪ್ರತಿಷ್ಠಾಪಿಸಿ, ದೀಪ ಬೆಳಗಿದರು. ಮಂತ್ರ-ವಾದ್ಯ ಘೋಷ, ಮಂಗಳವಾದ್ಯಗಳಿಂದ ರಾಜದಂಡವನ್ನು ಪ್ರತಿಷ್ಠಾಪಿಸಲಾಯಿತು. ಈ ವೇಳೆ ಪ್ರಧಾನಿಯವರಿಗೆ ಲೋಕಸಬಾ ಸ್ಪೀಕರ್ ಓಂ ಬಿರ್ಲಾ ಸಾಥ್ ನೀಡಿದರು.

     

  • ನೂತನ ಸಂಸತ್ ಉದ್ಘಾಟನೆಗೂ ಮುನ್ನ ಕಾರ್ಮಿಕರನ್ನು ಸನ್ಮಾನಿಸಿದ ಮೋದಿ

    ನೂತನ ಸಂಸತ್ ಉದ್ಘಾಟನೆಗೂ ಮುನ್ನ ಕಾರ್ಮಿಕರನ್ನು ಸನ್ಮಾನಿಸಿದ ಮೋದಿ

    ನವದೆಹಲಿ: ನೂತನ ಸಂಸತ್ ಭವನದ (New Parliament) ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ಸನ್ಮಾನಿಸಿದ್ದಾರೆ. ನೂತನ ಸಂಸತ್ ಭವನದ ಉದ್ಘಾಟನೆಗೂ ಮುನ್ನ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಾಂಪ್ರದಾಯಿಕ ಶಾಲು ಹೊದಿಸಿ ಸ್ಮರಣಿಕೆ ನೀಡಿ ಪುರಸ್ಕರಿಸಿದ್ದಾರೆ.

    ಸುಂದರವಾಗಿ ಕಟ್ಟಲ್ಪಟ್ಟಿರುವ ನೂತನ ಸಂಸತ್ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರವನ್ನು ಈ ಮೂಲಕ ಪ್ರಧಾನಿ ಮೋದಿ ಸ್ಮರಿಸಿದ್ದಾರೆ. ದೇಶದ ಹಲವು ಕಡೆಯ ಶಿಲ್ಪಿಗಳು ಹಾಗೂ ಕಾರ್ಮಿಕರು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಅವರೆಲ್ಲರಿಗೂ ಸನ್ಮಾನಿಸುವ ಮೂಲಕ ಗೌರವ ಸೂಚಿಸಲಾಯಿತು. ಬಳಿಕ ಮುಂದಿನ ಕಾರ್ಯಕ್ರಮಕ್ಕೆ ಮೋದಿ ತೆರಳಿದ್ದಾರೆ. ಇದನ್ನೂ ಓದಿ: ಸಂಸತ್‍ನಲ್ಲಿ ಚಿನ್ನದ ರಾಜದಂಡ ಪ್ರತಿಷ್ಠಾಪನೆ

    ಬಳಿಕ ಐತಿಹಾಸಿಕ ಸೆಂಗೋಲ್ (Sengol) ಅನ್ನು ಪ್ರಧಾನಿ ಮೋದಿ ಅವರು ಲೋಕಸಭಾ ಸ್ಪೀಕರ್ ಸ್ಥಾನದ ಸಮೀಪದಲ್ಲಿ ಪ್ರತಿಷ್ಠಾಪಿಸಿ, ದೀಪ ಬೆಳಗಿದರು. ಮಂತ್ರ-ವಾದ್ಯ ಘೋಷ, ಮಂಗಳವಾದ್ಯಗಳಿಂದ ರಾಜದಂಡವನ್ನು ಪ್ರತಿಷ್ಠಾಪಿಸಲಾಯಿತು.

    ಪೂಜಾ-ವಿಧಿವಿಧಾನಗಳು ನಡೆಯುತ್ತಿದ್ದು, ವಿವಿಧ ಧರ್ಮದ ಮುಖಂಡರು ಪ್ರಾರ್ಥನೆ ಸಲ್ಲಿಸುವ ಮೂಲಕ ಸೌಹಾರ್ದತೆಯ ಸಂದೇಶವನ್ನು ಸಾರಲಾಯಿತು. ಪ್ರಾರ್ಥನಾ ಸಭೆಯಲ್ಲಿ ಪಂಡಿತರು, ಸಾಧು-ಸಂತರು ಭಾಗಿಯಾಗಿದ್ದು, 12 ಮಂದಿ ಧಾರ್ಮಿಕ ನಾಯಕರಿಂದ ಪ್ರಾರ್ಥನೆ ನಡೆಯುತ್ತಿದೆ. ಇದನ್ನೂ ಓದಿ: ನೂತನ ಸಂಸತ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಮನಸೆಳೆದ ಸರ್ವಧರ್ಮ ಸಮ್ಮಿಳನ

  • ನೂತನ ಸಂಸತ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಮನಸೆಳೆದ ಸರ್ವಧರ್ಮ ಸಮ್ಮಿಳನ

    ನೂತನ ಸಂಸತ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಮನಸೆಳೆದ ಸರ್ವಧರ್ಮ ಸಮ್ಮಿಳನ

    ನವದೆಹಲಿ: ನೂತನ ಸಂಸತ್ ಭವನ (New Parliament) ಉದ್ಘಾಟನಾ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ (Narendra Modi) ಅವರು ನಾಮಫಲಕವನ್ನು ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಸರ್ವಧರ್ಮೀಯರ ಸಮ್ಮಿಲನವು ವಿಶೇಷವಾಗಿ ಗಮನ ಸೆಳೆಯಿತು.

    ಹೌದು. ನೂತನ ಸಂಸತ್ ಭವನ ಉದ್ಘಟನಾ ಕಾರ್ಯಕ್ರಮದ ಅಂಗವಾಗಿ ಪೂಜಾ ಕೈಂಕರ್ಯಗಳು ಬೆಳಗ್ಗೆ 7.30 ರಿಂದ ಆರಂಭವಾಗಿದೆ. ಬಳಿಕ ಐತಿಹಾಸಿಕ ಸೆಂಗೋಲ್ ಅನ್ನು ಪ್ರಧಾನಿ ಮೋದಿ ಅವರು ಲೋಕಸಭಾ ಸ್ಪೀಕರ್ ಸ್ಥಾನದ ಸಮೀಪದಲ್ಲಿ ಪ್ರತಿಷ್ಠಾಪಿಸಿ, ದೀಪ ಬೆಳಗಿದರು. ಮಂತ್ರ-ವಾದ್ಯ ಘೋಷ, ಮಂಗಳವಾದ್ಯಗಳಿಂದ ರಾಜದಂಡವನ್ನು ಪ್ರತಿಷ್ಠಾಪಿಸಲಾಯಿತು. ಈ ವೇಳೆ ಪ್ರಧಾನಿಯವರಿಗೆ ಲೋಕಸಬಾ ಸ್ಪೀಕರ್ ಓಂ ಬಿರ್ಲಾ (Om Birla) ಸಾಥ್ ನೀಡಿದರು. ಇದನ್ನೂ ಓದಿ: ಭಾರತದ ನೂತನ ಸಂಸತ್ ಭವನಕ್ಕೆ ದೇಶದ ವಿವಿಧತೆಯ ಮೆರುಗು

    ಪೂಜಾ-ವಿಧಿವಿಧಾನಗಳು ನಡೆಯುತ್ತಿದ್ದು, ವಿವಿಧ ಧರ್ಮದ ಮುಖಂಡರು ಪ್ರಾರ್ಥನೆ ಸಲ್ಲಿಸುವ ಮೂಲಕ ಸೌಹಾರ್ದತೆಯ ಸಂದೇಶವನ್ನು ಸಾರಿದರು. ಪ್ರಾರ್ಥನಾ ಸಭೆಯಲ್ಲಿ ಪಂಡಿತರು, ಸಾಧು-ಸಂತರು ಭಾಗಿಯಾಗಿದ್ದು, 12 ಮಂದಿ ಧಾರ್ಮಿಕ ನಾಯಕರಿಂದ ಪ್ರಾರ್ಥನೆ ನಡೆಯುತ್ತಿದೆ. ಈ ಮಧ್ಯೆ ಕಾರ್ಮಿಕರಿಗೆ ಶಾಲು ಹೊದಿಸಿ ಪ್ರಧಾನಿಯವರು ಸನ್ಮಾನಿಸಿದರು. ಇದನ್ನೂ ಓದಿ: ಸಂಸತ್‍ನಲ್ಲಿ ಚಿನ್ನದ ರಾಜದಂಡ ಪ್ರತಿಷ್ಠಾಪನೆ

    ಕಾರ್ಯಕ್ರಮಕ್ಕೆ ಸುಮಾರು 60 ಧಾರ್ಮಿಕ ಮುಖ್ಯಸ್ಥರನ್ನು ಕರೆಸಲಾಗಿದ್ದು, ಅವರಲ್ಲಿ ಹಲವರು ತಮಿಳುನಾಡಿನವರಾಗಿದ್ದಾರೆ. ಧಾರ್ವಿಕ ಕಾರ್ಯಕ್ರಮದಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ ಋತ್ವಿಜರಾದ ಟಿ.ವಿ. ಸೀತಾರಾಮ ಶರ್ಮ, ಶ್ರೀರಾಮ ಶರ್ಮ, ಲಕ್ಷ್ಮೀಶ ತಂತ್ರಿ ಹಾಗೂ ದೆಹಲಿ ಶಾಖಾ ಮಠದ ನಾಗರಾಜ ಅಡಿಗ, ಋಷ್ಯಶೃಂಗ ಭಟ್ ಭಾಗಿಯಾಗಿದ್ದಾರೆ.

     

  • ವಿಪಕ್ಷಗಳ ಬಹಿಷ್ಕಾರಕ್ಕೆ ದೊಡ್ಡಗೌಡರ ಡೋಂಟ್ ಕೇರ್ – ಸಂಸತ್ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ನಿರ್ಧಾರ

    ವಿಪಕ್ಷಗಳ ಬಹಿಷ್ಕಾರಕ್ಕೆ ದೊಡ್ಡಗೌಡರ ಡೋಂಟ್ ಕೇರ್ – ಸಂಸತ್ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ನಿರ್ಧಾರ

    ಬೆಂಗಳೂರು: ಮೇ 28 ರಂದು ಉದ್ಘಾಟನೆಗೊಳ್ಳಲಿರುವ ನೂತನ ಸಂಸತ್ ಭವನದ (New Parliament House) ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾಜಿ ಪ್ರಧಾನಿ ದೇವೇಗೌಡರು (HD Deve Gowda) ಭಾಗಿಯಾಗಲು ನಿರ್ಧರಿಸಿದ್ದಾರೆ. ಈ ಮೂಲಕ ಕಾರ್ಯಕ್ರಮವನ್ನು ಬಹಿಷ್ಕರಿಸಿರುವ ವಿಪಕ್ಷಗಳ ನಿರ್ಧಾರಕ್ಕೆ ಅವರು ಡೋಂಟ್‍ಕೇರ್ ಎಂದಿದ್ದಾರೆ.

    ಗುರುವಾರ ಜೆಡಿಎಸ್ (JDS) ಸಭೆಯಲ್ಲಿ ಜಿಲ್ಲಾಧ್ಯಕ್ಷರು ಹಾಗೂ ಪಕ್ಷದ ಎಲ್ಲಾ ಶಾಸಕರ ಅಭಿಪ್ರಾಯವನ್ನು ಆಲಿಸಿದ್ದಾರೆ. ಈ ವೇಳೆ ಶಾಸಕರು ಹಾಗೂ ನಾಯಕರು ಕಾರ್ಯಕ್ರಮಕ್ಕೆ ಹೋಗುವಂತೆ ಸಲಹೆ ಕೊಟ್ಟಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಅಮುಲ್ ಹಾಲು ಸಂಗ್ರಹಿಸುವುದನ್ನು ನಿಲ್ಲಿಸಿ: ಅಮಿತ್‌ ಶಾಗೆ ಸ್ಟಾಲಿನ್‌ ಪತ್ರ

    ಸಲಹೆಯ ಹಿನ್ನಲೆಯಲ್ಲಿ ಅವರು ನೂತನ ಸಂಸತ್ ಭವನದ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವ ತೀರ್ಮಾನ ಕೈಗೊಂಡಿದ್ದಾರೆ. ದೇವೇಗೌಡರ ಜೊತೆ ಹಾಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಭಾಗಿಯಾಗಲಿದ್ದಾರೆ.

    ಇದೇ ತಿಂಗಳ 28ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ (Narendra Modi) ಹೊಸ ಸಂಸತ್ ಭವನ ಉದ್ಘಾಟನೆಗೊಳ್ಳಲಿದೆ. ಮೋದಿ ಉದ್ಘಾಟನೆಗೆ ಆಕ್ಷೇಪ ವ್ಯಕ್ತಪಡಿಸಿರುವ 19 ವಿಪಕ್ಷಗಳು ಈ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರು ಸಂಸತ್ ಕಟ್ಟಡವನ್ನು ಲೋಕಾರ್ಪಣೆ ಮಾಡಬೇಕೆಂದು ಆಗ್ರಹಿಸಿವೆ. ಇದನ್ನೂ ಓದಿ: New Parliament Building – ಕರ್ನಾಟಕ ವಿಧಾನಸೌಧದ ಉದಾಹರಣೆ ನೀಡಿ ಕಾಂಗ್ರೆಸ್‌ಗೆ ಸಂಬಿತ್‌ ಪಾತ್ರ ತಿರುಗೇಟು