Tag: ನುಸ್ರತ್ ಜಹಾನ್

  • ಕುಣಿದು ಕುಪ್ಪಳಿಸಿ ದುರ್ಗಾ ಪೂಜೆ ನೆರವೇರಿಸಿದ ಸಂಸದೆ ನುಸ್ರತ್ ಜಹಾನ್

    ಕುಣಿದು ಕುಪ್ಪಳಿಸಿ ದುರ್ಗಾ ಪೂಜೆ ನೆರವೇರಿಸಿದ ಸಂಸದೆ ನುಸ್ರತ್ ಜಹಾನ್

    ಕೋಲ್ಕತ್ತಾ: ನಟಿ, ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ನುಸ್ರತ್ ಜಹಾನ್ ಅವರು ಸಾಂಸ್ಕೃತಿಕ ಉಡುಗೆ, ಸೀರೆ ತೊಟ್ಟು ಡ್ಯಾನ್ಸ್ ಮಾಡಿ ದುರ್ಗಾ ಪೂಜೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನಸೆಳೆದಿದ್ದಾರೆ.

    ಟಿಎಂಸಿ ನಾಯಕಿ ಕೆಂಪು, ಬಿಳಿ ಬಣ್ಣದ ಸೀರೆ, ಕುಂಕುಮ ಹಾಗೂ ಸಾಂಸ್ಕೃತಿಕ ಉಡುಗೆ ಧರಿಸಿ ಪೂಜೆಗೆ ಆಗಮಿಸಿದ ನುಸ್ರತ್ ಡ್ರಮ್ ಬಾರಿಸಿ, ಇತರ ಮಹಿಳೆಯರೊಂದಿಗೆ ಕುಣಿದು ಕುಪ್ಪಳಿಸಿ ದುರ್ಗಾ ಪೂಜೆ ನೆರವೇರಿಸಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ಅಲ್ಲದೆ ಕುಣಿಯುವ ಭರದಲ್ಲಿ ಕೊರೊನಾ ನಿಯಮಗಳನ್ನು ಸಹ ಬ್ರೇಕ್ ಮಾಡಿಲ್ಲ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಇತರ ಮಹಿಳೆಯರೊಂದಿಗೆ ಡ್ಯಾನ್ಸ್ ಮಾಡಿದ್ದಾರೆ.

    ಈ ಹಿಂದೆ ನುಸ್ರತ್ ಅವರು ದುರ್ಗೆಯ ರೀತಿ ವಸ್ತ್ರಾಭರಣ ಧರಿಸಿ ವಿಡಿಯೋ ಹಾಗೂ ಫೋಟೋ ಶೂಟ್ ಮಾಡಿಸಿದ್ದರು. ಇವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಹಲವರು ಅಸಭ್ಯವಾಗಿ ಕಮೆಂಟ್ ಮಾಡಿ, ಕೊಲೆ ಬೆದರಿಕೆಯನ್ನು ಸಹ ಹಾಕಿದ್ದರು.

    ಇದೇ ಮೊದಲಲ್ಲ, ಈ ಹಿಂದೆ ಸಹ ಹಲವು ಬಾರಿ ನುಸ್ರತ್ ಅವರಿಗೆ ಬೆದರಿಕೆ ಕರೆಗಳು ಬಂದಿವೆ. ಕಳೆದ ವರ್ಷ ಹಿಂದೂ ಯುವಕನನ್ನು ವಿವಾಹವಾಗಿದ್ದಕ್ಕೆ ಹಾಗೂ ಸಿಂಧೂರ ಧರಿಸಿದ್ದಕ್ಕೆ ಅಲ್ಲದೆ ರಥಯಾತ್ರೆಯಲ್ಲಿ ಭಾಗವಹಿಸಿದ್ದಕ್ಕೆ ಹಲವು ಜನ ಕೊಲೆ ಬೆದರಿಕೆ ಹಾಕಿದ್ದರು. ಇದಾವುದಕ್ಕೂ ನುಸ್ರತ್ ತಲೆ ಕೆಡಿಸಿಕೊಂಡಿಲ್ಲ. ತಮಗಿಷ್ಟವಾದ ದೇವರನ್ನು ಪೂಜಿಸುತ್ತಾರೆ. ಅಲ್ಲದೆ ಎಲ್ಲ ಹಬ್ಬಗಳನ್ನು ಆಚರಿಸುತ್ತಾರೆ.

    ವಿವಾದಗಳ ಕುರಿತು ಈ ಹಿಂದೆ ಪ್ರತಿಕ್ರಿಯಿಸಿದ್ದ ನುಸ್ರತ್, ನಾನು ದೇವರ ವಿಶೇಷ ಮಗಳು, ಎಲ್ಲ ಹಬ್ಬಗಳನ್ನೂ ಆಚರಿಸುತ್ತೇನೆ. ಎಲ್ಲದಕ್ಕಿಂತಲೂ ಮಿಗಿಲಾಗಿ ಮಾನವೀಯತೆ ಹಾಗೂ ಪ್ರೀತಿಯನ್ನು ಗೌರವಿಸುತ್ತೇನೆ ಎಂದು ತಿಳಿಸಿದ್ದರು.

  • ದುರ್ಗೆಯ ಪೋಸ್ ನೀಡಿದ್ದಕ್ಕೆ ನುಸ್ರತ್‍ಗೆ ಜೀವ ಬೆದರಿಕೆ

    ದುರ್ಗೆಯ ಪೋಸ್ ನೀಡಿದ್ದಕ್ಕೆ ನುಸ್ರತ್‍ಗೆ ಜೀವ ಬೆದರಿಕೆ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಟಿ ಹಾಗೂ ಸಂಸದೆ ನುಸ್ರತ್ ಜಹಾನ್ ದುರ್ಗೆಯ ಅವತಾರದಲ್ಲಿ ಕಾಣಿಸಿಕೊಂಡಿದ್ದಕ್ಕೆ ಕಿಡಿಗೇಡಿಗಳು ಜೀವ ಬೆದರಿಕೆ ಹಾಕುತ್ತಿದ್ದಾರೆ.

     

    View this post on Instagram

     

    Shubho mahalaya… সকল কে.

    A post shared by Nusrat (@nusratchirps) on

    ನಟಿಯ ಈ ವಿಡಿಯೋದಿಂದಾಗಿ ಹಿಂದೂ ಹಾಗೂ ಮುಸ್ಲಿಮರ ನಡುವೆ ಗಲಭೆಯುಂಟಾಗಿದ್ದು, ಅವರ ಸಾಮಾಜಿಕ ಜಾಲತಾಣದ ಪೋಸ್ಟ್‍ಗೆ ಹಲವರು ಕಮೆಂಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೂ ಹಲವರು ಜೀವ ಬೆದರಿಕೆ ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಹಂಚಿಕೊಂಡಿರುವ ವಿಡಿಯೋದಲ್ಲಿ ದುರ್ಗೆ ಅವತಾರದಲ್ಲಿ ಕಾಣಿಸಿಕೊಂಡಿದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

    ನುಸ್ರತ್ ಜಹಾನ್ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದು, ಹಿಂದೂ ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಹೀಗಾಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡು ಹಿಂದೂ ಧಾಮಿಕ ಹೆಸರನ್ನು ಇಟ್ಟುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ತಮ್ಮ ಹೆಸರಿನ ಮುಂದಿರುವ ಜಹಾನ್ ತೆಗೆಯುವಂತೆ ಒತ್ತಾಯಿಸಿದ್ದಾರೆ. ಮಹಾಲಯ ಅಮವಾಸ್ಯೆ ಹಿನ್ನೆಲೆ ನುಸ್ರತ್ ಅವರು ದೇವಿಯ ಅವತಾರದಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಹಂಚಿಕೊಂಡಿದ್ದರು. ಫೋಟೋಗಳನ್ನು ಸಹ ಹಂಚಿಕೊಂಡಿದ್ದರು.

    ಇದಕ್ಕೆ ಕಮೆಂಟ್ ಮಾಡಿರುವ ವ್ಯಕ್ತಿ, ನಿಮ್ಮ ಸಾವಿನ ಸಮಯ ಹತ್ತಿರ ಬಂದಿದೆ. ಅಲ್ಲಾಗೆ ಭಯಪಡಿ, ನಿಮ್ಮ ದೇಹವನ್ನು ಮುಚ್ಚಿಡಲು ಸಾಧ್ಯವಿಲ್ಲವೇ? ಚೀ ಚೀ ಚೀ ಎಂದು ಕಮೆಂಟ್ ಮಾಡಿದ್ದಾರೆ. ನಿಮ್ಮ ಹೆಸರನ್ನು ನುಸ್ರತ್ ಜಹಾನ್ ಬದಲಿಗೆ ನುಸು ದಾಸ್/ಸೇನ್/ಘೋಷ್ ಎಂಬ ಹಿಂದೂ ಹೆಸರಿಗೆ ಬದಲಿಸಿಕೊಳ್ಳಿ ಎಂದು ಮತ್ತೊಬ್ಬರು ಹೇಳಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಭಾರೀ ಚರ್ಚೆ ನಡೆಯುತ್ತಿದೆ.

    ನುಸ್ರತ್ ಜಹಾನ್ ಅವರು ಮುಸ್ಲಿಂ ಆದರೂ ಕುಂಕುಮ, ಬಳೆ ಧರಿಸುತ್ತಾರೆ. ಅಲ್ಲದೆ ಹಿಂದೂ ಸಂಸ್ಕೃತಿಯನ್ನು ಪಾಲಿಸುತ್ತಾರೆ. ನುಸ್ರತ್ ಜಹಾನ್ ಕುರಿತು ಕಿಡಿಗೇಡಿಗಳು ಆಗಾಗ ಈ ರೀತಿ ವಿರೋಧ ವ್ಯಕ್ತಪಡಿಸುತ್ತಿರುತ್ತಾರೆ. ಇತ್ತೀಚೆಗೆ ಸಂಸತ್‍ನಲ್ಲಿ ಬಳೆ, ಕುಂಕುಮ ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಸಹ ಇದೇ ರೀತಿಯ ವಿರೋಧ ವ್ಯಕ್ತವಾಗಿತ್ತು. ಆದರೆ ನುಸ್ರತ್ ಅವರು ಇದಕ್ಕೆಲ್ಲ ಸೊಪ್ಪು ಹಾಕುವುದಿಲ್ಲ.

  • ಒಪ್ಪಿಗೆಯಿಲ್ಲದೆ ಫೋಟೋ ಬಳಕೆ- ಆ್ಯಪ್ ಕಂಪನಿ ವಿರುದ್ಧ ಸಂಸದೆ ದೂರು

    ಒಪ್ಪಿಗೆಯಿಲ್ಲದೆ ಫೋಟೋ ಬಳಕೆ- ಆ್ಯಪ್ ಕಂಪನಿ ವಿರುದ್ಧ ಸಂಸದೆ ದೂರು

    ಕೋಲ್ಕತ್ತಾ: ವಿಡಿಯೋ ಚಾಟ್ ಆ್ಯಪ್ ‘ಫ್ಯಾನ್ಸಿಯೂ’ ಪ್ರಚಾರಕ್ಕಾಗಿ ಒಪ್ಪಿಗೆಯಿಲ್ಲದೆ ನನ್ನ ಫೋಟೋವನ್ನು ಬಳಸಿದೆ ಎಂದು ನಟಿ ಮತ್ತು ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಕೋಲ್ಕತ್ತಾ ಪೊಲೀಸರಿಗೆ ದೂರು ನೀಡಿದ್ದಾರೆ.

    ನಟಿ ನುಸ್ರತ್ ಜಹಾನ್ ಟ್ವೀಟ್ ಮಾಡುವ ಮೂಲಕ ತಮ್ಮ ಫೋಟೋವನ್ನು ಬಳಸಿರುವುದಾಗಿ ದೂರು ನೀಡಿದ್ದಾರೆ. ಅಲ್ಲದೇ ವಿಡಿಯೋ ಚಾಟ್ ಆ್ಯಪ್‍ಗಾಗಿ ಜಾಹೀರಾತಿ ನೀಡಿರುವ ಸ್ಕ್ರೀನ್‍ಶಾಟ್ ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋವನ್ನು ಟ್ವಿಟ್ಟರಿನಲ್ಲಿ ಶೇರ್ ಮಾಡಿದ್ದಾರೆ. ನಂತರ ಈ ಟ್ವೀಟನ್ನು ಕೋಲ್ಕತಾ ಪೊಲೀಸ್ ಆಯುಕ್ತ ಅನುಜ್ ಶರ್ಮಾ ಅವರಿಗೆ ಟ್ಯಾಗ್ ಮಾಡಿದ್ದಾರೆ.

    “ಒಪ್ಪಿಗೆಯಿಲ್ಲದೆ ಫೋಟೋಗಳನ್ನು ಬಳಸುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಹೀಗಾಗಿ ಕೋಲ್ಕತಾ ಪೊಲೀಸ್ ಸೈಬರ್ ಸೆಲ್ ಈ ಬಗ್ಗೆ ಗಮನಹರಿಸುವಂತೆ ನಾನು ವಿನಂತಿಸುತ್ತೇನೆ. ಇದನ್ನು ಕಾನೂನುಬದ್ಧವಾಗಿ ತೆಗೆದುಕೊಳ್ಳಲು ನಾನು ಸಿದ್ಧ” ಎಂದು ಜಹಾನ್ ಟ್ವೀಟ್ ಮಾಡಿದ್ದಾರೆ.

    ಅಲ್ಲದೇ ಶೀಘ್ರವೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ನಟಿ, ಸಂಸದೆ ನುಸ್ರತ್ ಜಹಾನ್ ಮನವಿಗೆ ಹಿರಿಯ ಅಧಿಕಾರಿಯೊಬ್ಬರು ಸ್ಪಂದಿಸಿದ್ದು, ಸೈಬರ್ ಸೆಲ್ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.

  • ಬಡವರಿಗೆ ಉಚಿತ ಮಾಸ್ಕ್ ಹಂಚಿದ ಸಂಸದೆ ನುಸ್ರತ್ ಜಹಾನ್

    ಬಡವರಿಗೆ ಉಚಿತ ಮಾಸ್ಕ್ ಹಂಚಿದ ಸಂಸದೆ ನುಸ್ರತ್ ಜಹಾನ್

    ಕೋಲ್ಕತ್ತಾ: ಟಿಎಂಸಿ ಸಂಸದೆ, ನಟಿ ನುಸ್ರತ್ ಜಹಾನ್ ಬಡವರಿಗೆ ಉಚಿತ ಮಾಸ್ಕ್ ಹಂಚುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ನುಸ್ರತ್ ತಮ್ಮ ಇನ್‍ಸ್ಟಾದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ನುಸ್ರತ್ ಕೊರೊನಾದಿಂದ ತಪ್ಪಿಸಿಕೊಳ್ಳಲು ಜನರಿಗೆ ಉಚಿತ ಮಾಸ್ಕ್ ಹಂಚುತ್ತಿದ್ದಾರೆ. ನುಸ್ರತ್ ಅವರ ಈ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಇನ್‍ಸ್ಟಾದಲ್ಲಿ ನುಸ್ರತ್, ಬನ್ನಿ. ಈ ವೈರಸ್‍ನಿಂದ ತಪ್ಪಿಸಿಕೊಳ್ಳಲು ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗಳ್ಳೋಣ ಹಾಗೂ ಅಗತ್ಯ ಇರುವವರಿಗೆ ಸಹಾಯ ಮಾಡೋಣ. ಇಂತಹ ಸಂದರ್ಭಗಳಲ್ಲಿ ತರಕಾರಿಗಳನ್ನು ಮತ್ತು ದೈನಂದಿನ ಜೀವನದ ವಸ್ತುಗಳನ್ನು ಒದಗಿಸುವ ಜನರಿಗೆ ಸಹಾಯ ಮಾಡಲು ಮುಂದಾಗಿ ಎಂದು ಬರೆದುಕೊಂಡಿದ್ದಾರೆ.

    ಅಲ್ಲದೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಎಲ್ಲರಿಗೂ ಸಹಾಯ ಮಾಡಿ ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ಅಗತ್ಯವಿರುವವರಿಗೆ ಸಹಾಯ ಮಾಡಲು ಮುಂದಾಗಿ. ಹಾಗೆಯೇ ನಿಮ್ಮ ಆರೋಗ್ಯ ಹಾಗೂ ಎಲ್ಲರ ಆರೋಗ್ಯವನ್ನು ನೋಡಿಕೊಳ್ಳಿ ಮತ್ತು ಒಟ್ಟಾಗಿ ಹೋರಾಡಿ ಎಂದು ಪೋಸ್ಟ್ ಮಾಡಿದ್ದಾರೆ.

    ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಪತ್ರಿದಿನ ಹೆಚ್ಚಾಗುತ್ತಿದೆ. ಕೊರೊನಾ ಭಯದಿಂದ ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಮನೆಯಲ್ಲಿಯೇ ತಮ್ಮ ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿದ್ದಾರೆ. ಹೀಗಿರುವಾಗ ನುಸ್ರತ್ ಜನರಿಗೆ ಸಹಾಯ ಮಾಡಲು ರಸ್ತೆಗೆ ಇಳಿದಿದ್ದನು ನೋಡಿ ನೆಟ್ಟಿಗರು ಅವರನ್ನು ಹೊಗಳುತ್ತಿದ್ದಾರೆ.

  • ಸಂಸದೆ ನುಸ್ರತ್ ಜಹಾನ್ ಆಸ್ಪತ್ರೆಗೆ ದಾಖಲು

    ಸಂಸದೆ ನುಸ್ರತ್ ಜಹಾನ್ ಆಸ್ಪತ್ರೆಗೆ ದಾಖಲು

    ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ನುಸ್ರತ್ ಜಹಾನ್ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಭಾನುವಾರ ನುಸ್ರತ್ ಅವರ ಆರೋಗ್ಯದಲ್ಲಿ ಏಕಾಏಕಿ ಏರುಪೇರು ಕಂಡಿದೆ. ಅಲ್ಲದೆ ಅವರಿಗೆ ಉಸಿರಾಡಲು ಕಷ್ಟವಾಗುತ್ತಿದ್ದರಿಂದ ಅವರನ್ನು ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಯಿತು. ನುಸ್ರತ್ ಈಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ಕುಟುಂಬಸ್ಥರ ಪ್ರಕಾರ, ನುಸ್ರತ್ ಅವರನ್ನು ಭಾನುವಾರ ಬೆಳಗ್ಗೆ ಸುಮಾರು 9.30ಕ್ಕೆ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಈ ಮೊದಲು ನುಸ್ರತ್ ಅಸ್ತಮಾದಿಂದ ಬಳಲುತ್ತಿದ್ದರು. ಹಾಗಾಗಿ ಅವರಿಗೆ ಉಸಿರಾಡಲು ಕಷ್ಟವಾಯಿತು ಎಂದು ಕುಟುಂಬಸ್ಥರು ಹೇಳಿದ್ದಾರೆ. ಆಸ್ಪತ್ರೆಗೆ ದಾಖಲಾದ ಕಾರಣ ನುಸ್ರತ್ ಅವರು ಸಂಸತ್‍ನಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸುತ್ತಿಲ್ಲ.

    ನುಸ್ರತ್ ಜಹಾನ್ ಇದೇ ವರ್ಷ ಜೂನ್ 19ರಂದು ಉದ್ಯಮಿ ನಿಖಿಲ್ ಜೈನ್ ಜೊತೆ ಟರ್ಕಿಯ ಬೋದ್ರಮ್‍ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಬಗ್ಗೆ ನುಸ್ರತ್ ತಮ್ಮ ಟ್ವಿಟ್ಟರಿನಲ್ಲಿ ಮದುವೆ ಫೋಟೋ ಹಾಕಿ ಅಧಿಕೃತವಾಗಿ ಎಲ್ಲರಿಗೂ ತಿಳಿಸಿದ್ದರು. ಜುಲೈ 4ರಂದು ನುಸ್ರತ್ ಹಾಗೂ ನಿಖಿಲ್ ಜೈನ್ ಕೋಲ್ಕತ್ತಾದಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಬೆಂಗಾಲಿ ಕಲಾವಿದರು ಹಾಗೂ ರಾಜಕೀಯ ನಾಯಕರು ಆಗಮಿಸಿದ್ದರು.

  • ನಾನು ದೇವರ ವಿಶೇಷ ಮಗು- ನುಸ್ರತ್ ಜಹಾನ್

    ನಾನು ದೇವರ ವಿಶೇಷ ಮಗು- ನುಸ್ರತ್ ಜಹಾನ್

    ನವದೆಹಲಿ: ಸಂಸದೆಯಾದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿರುವ ನಟಿ  ನುಸ್ರತ್ ಜಹಾನ್ ಅವರು ಇದೀಗ ನಾನು ದೇವರ ವಿಶೇಷ ಮಗು ಎಂದು ಹೇಳಿದ್ದಾರೆ.

    ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ‘ಸಿಂಧೂರ್ ಖೇಲಾ’ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಸದೆ, ನಾನು ದೇವರ ವಿಶೇಷ ಮಗು ಎಂದು ಹೇಳಿದ್ದಾರೆ. ಇದೇ ವೇಳೆ ಮಾನವೀಯತೆ ಬಗ್ಗೆ ಮಾತನಾಡಿದ ಅವರು, ನಾನು ಮಾನವೀಯತೆಯನ್ನು ಹೆಚ್ಚಾಗಿ ಗೌರವಿಸುತ್ತೇನೆ. ಎಲ್ಲದಕ್ಕಿಂತಲೂ ಹೆಚ್ಚು ನಾನು ಅದನ್ನು ಪ್ರೀತಿಸುತ್ತೇನೆ. ವಿವಾದಗಳಿಗೆ ನಾನು ತಲೆಕೆಡಿಸಿಕೊಳ್ಳಲ್ಲ. ಅದರಿಂದ ನನಗೆ ಯಾವುದೇ ಪರಿಣಾಮ ಬೀರಲ್ಲ ಎಂದು ತಿಳಿಸಿದ್ದಾರೆ.

    ದೇವರ ಮಗಳಾಗಿರುವ ನಾನು ಯಾವುದೇ ಮುಜುಗರವಿಲ್ಲದೆ ಎಲ್ಲಾ ಹಬ್ಬಗಳನ್ನು ಆಚರಿಸುತ್ತೇನೆ. ಇದರಿಂದ ನಾನು ತುಂಬಾ ಸಂತೋಷವಾಗುತ್ತೇನೆ. ಏನೇ ವಿವಾದಗಳು ಆಗಲಿ, ನಾನು ಯಾವುದನ್ನೂ ಕೇರ್ ಮಾಡಲ್ಲ ಎಂದು ಅವರು ಹೇಳಿದ್ದಾರೆ.

    ಬಂಗಾಳಿ ಮಹಿಳೆಯರು ವಿಜಯದಶಮಿ ದಿನದಂದು ‘ಸಿಂಧೂರ್ ಖೇಲಾ’ವನ್ನು ಆಚರಣೆ ಮಾಡುತ್ತಾರೆ. ಕೊನೆಯ ದಿನವಾದ ದುರ್ಗಾ ಪೂಜೆಯಂದು ಮಹಿಳೆಯರು ಪರಸ್ಪರ ಸಿಂಧೂರವನ್ನು ಹಚ್ಚಿ, ಸಿಹಿ ತಿನ್ನಿಸುವ ಸಂಪ್ರದಾಯವಿದೆ. ಈ ಕಾರ್ಯಕ್ರಮಕ್ಕೆ ಸಂಸದೆಯ ಜೊತೆ ಆಕೆಯ ಪತಿ ನಿಖಿಲ್ ಜೈನ್ ಕೂಡ ಭಾಗವಹಿಸಿ, ಅದ್ಧೂರಿಯಾಗಿ ಹಬ್ಬ ಆಚರಣೆ ಮಾಡಿದ್ದಾರೆ.

    ಇತ್ತೀಗಷ್ಟೇ ನುಸ್ರತ್ ತಮ್ಮ ಪತಿ ಜೊತೆ ದುರ್ಗಾ ಪೂಜೆ ಕೂಡ ನೆರವೇರಿಸಿ ಸಾಕಷ್ಟು ಚರ್ಚೆಗೆ ಗ್ರಾಸರಾಗಿದ್ದರು. ದುರ್ಗಾ ಪೂಜೆ ಮಾಡಿದ್ದಕ್ಕೆ ಇಸ್ಲಾಂ ಧರ್ಮ ಗುರು ಕಿಡಿಕಾರಿದ್ದರು. ಆದರೆ ಸಂಸದೆ ತಮ್ಮ ನಡೆಯನ್ನು ಸಮರ್ಥಿಸಿಕೊಂಡು ಸಖತ್ ತಿರುಗೇಟು ಕೂಡ ನೀಡಿದ್ದರು.

    ಅಲ್ಲಾಹು ಹೊರತುಪಡಿಸಿ ಇತರೆ ದೇವರುಗಳನ್ನು ಪೂಜಿಸಲು ಇಸ್ಲಾಂ ಧರ್ಮದಲ್ಲಿ ಅನುಮತಿ ನೀಡಿಲ್ಲ. ಆದರೆ, ನುಸ್ರತ್ ದುರ್ಗಾ ಪೂಜೆಯನ್ನು ನೆರವೇರಿಸಿದ್ದಾರೆ. ಇದು ಸಂಪೂರ್ಣವಾಗಿ ಇಸ್ಲಾಂ ವಿರೋಧಿಯಾಗಿದೆ. ಅವರು ಇಸ್ಲಾಂ ಅನ್ನು ಅನುಸರಿಸುತ್ತಿಲ್ಲ. ಇದಲ್ಲದೆ ಮುಸ್ಲಿಮೇತರ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಹೀಗಾಗಿ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಲಿ, ಅದನ್ನು ಬಿಟ್ಟು ಇಸ್ಲಾಂಗೆ ಅಪಮಾನ ಮಾಡುವುದು ಸರಿಯೇ ಎಂದು ಮುಫ್ತಿ ಅಸಾದ್ ಕಾಸ್ಮಿ ಪ್ರಶ್ನಿಸಿದ್ದರು.

    ಇದಕ್ಕೆ ಪ್ರತಿಕ್ರಿಯಿಸಿದ್ದ ನುಸ್ರತ್, ಎಲ್ಲ ಧರ್ಮದ ಸೌಹಾರ್ದತೆ ಸಾರಲು ನನ್ನದೇ ಆದ ದಾರಿಯಲ್ಲಿ ನಾನು ಹೋಗುತ್ತಿದ್ದೇನೆ. ನಾನು ಮಾಡುತ್ತಿರುವ ಸರಿಯೆಂದು ನನಗೆ ಅನಿಸುತ್ತಿದೆ. ನಾವು ಎಲ್ಲಾ ಧರ್ಮದ ಹಬ್ಬಗಳನ್ನು ಆಚರಿಸಬೇಕು. ಅವರು ನನಗೆ ಹೆಸರು ಇಟ್ಟಿಲ್ಲ. ಹೀಗಾಗಿ ನಿನ್ನ ಹೆಸರನ್ನು ಬದಲಿಸಿಕೋ ಎಂದು ಹೇಳುವ ಹಕ್ಕು ಅವರಿಗಿಲ್ಲ ಎಂದು ಮಾತಿನ ಚಾಟಿ ಬೀಸಿದ್ದರು.

  • ದುರ್ಗಾ ಪೂಜೆ ಮಾಡಿದಕ್ಕೆ ಕಿಡಿಕಾರಿದ ಮೌಲ್ವಿಗಳಿಗೆ ನುಸ್ರತ್ ತಿರುಗೇಟು

    ದುರ್ಗಾ ಪೂಜೆ ಮಾಡಿದಕ್ಕೆ ಕಿಡಿಕಾರಿದ ಮೌಲ್ವಿಗಳಿಗೆ ನುಸ್ರತ್ ತಿರುಗೇಟು

    ಕೋಲ್ಕತ್ತಾ: ದುರ್ಗಾ ಪೂಜೆ ಮಾಡಿದ್ದಕ್ಕೆ ತೃಣಮೂಲ ಕಾಂಗ್ರೆಸ್ ಸಂಸದೆ, ನಟಿ ನುಸ್ರತ್ ಜಹಾನ್ ವಿರುದ್ಧ ಮತ್ತೊಮ್ಮೆ ಇಸ್ಲಾಂ ಧಾರ್ಮಿಕ ಗುರುಗಳು ಕಿಡಿಕಾರಿದ್ದಾರೆ. ಆದರೆ ನುಸ್ರತ್ ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡು ಮೌಲ್ವಿಗಳಿಗೆ ಸಖತ್ ತಿರುಗೇಟು ಕೊಟ್ಟಿದ್ದಾರೆ.

    ಕೋಲ್ಕತ್ತಾದಲ್ಲಿ ನಡೆದ ದುರ್ಗಾ ಪೂಜೆ ಪತಿ ಜೊತೆಗೂಡಿ ಪೂಜೆ ಸಲ್ಲಿಸಿದ್ದರು. ಈ ರೀತಿ ಕಾಣಿಸಿಕೊಂಡು ಇಸ್ಲಾಂ ಧರ್ಮವನ್ನು ಅವಮಾನಿಸುವ ಬದಲು ಹೆಸರನ್ನು ಬದಲಾಯಿಸಿಕೊಳ್ಳಿ ಎಂದು ಮೌಲ್ವಿ ಮುಫ್ತಿ ಅಸಾದ್ ಕಾಸ್ಮಿ ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನುಸ್ರತ್ ಅವರು, ಎಲ್ಲ ಧರ್ಮದ ಸೌಹಾರ್ದತೆ ಸಾರಲು ನನ್ನದೇ ಆದ ದಾರಿಯಲ್ಲಿ ನಾನು ಹೋಗುತ್ತಿದ್ದೇನೆ. ನಾನು ಮಾಡುತ್ತಿರುವ ಸರಿಯೆಂದು ನನಗೆ ಅನಿಸುತ್ತಿದೆ. ನಾವು ಎಲ್ಲಾ ಧರ್ಮದ ಹಬ್ಬಗಳನ್ನು ಆಚರಿಸಬೇಕು ಎಂದು ತಿರುಗೇಟು ನೀಡಿದ್ದಾರೆ.

    ಅವರು ನನಗೆ ಹೆಸರು ಇಟ್ಟಿಲ್ಲ, ನಿನ್ನ ಹೆಸರನ್ನು ಬದಲಿಸಿಕೊ ಎಂದು ಹೇಳುವ ಹಕ್ಕು ಅವರಿಗಿಲ್ಲ ಎಂದು ಮಾತಿನ ಚಾಟಿ ಬೀಸಿದ್ದಾರೆ. ಹಿಂದೂ, ಮುಸ್ಲಿಂ ಎಂಬ ಧರ್ಮದ ಬೇಧ ಬೇಡ. ಪೂಜೆಯನ್ನು ಖುಷಿಯಿಂದ ಆಚರಿಸಿ. ಇದಕ್ಕೆ ರಾಜಕೀಯ ಬಣ್ಣ ಹಚ್ಚಬೇಡಿ, ಇದು ಹಬ್ಬವನ್ನು ಸಂಭ್ರಮಿಸುವ ಸಮಯ ಎಂದು ಹೇಳಿದ್ದಾರೆ.

    ಅಲ್ಲಾಹು ಹೊರತುಪಡಿಸಿ ಇತರೆ ದೇವರುಗಳನ್ನು ಪೂಜಿಸಲು ಇಸ್ಲಾಂ ಧರ್ಮದಲ್ಲಿ ಅನುಮತಿ ನೀಡಿಲ್ಲ. ಆದರೆ, ನುಸ್ರತ್ ದುರ್ಗಾ ಪೂಜೆಯನ್ನು ನೆರವೇರಿಸಿದ್ದಾರೆ. ಇದು ಸಂಪೂರ್ಣವಾಗಿ ಇಸ್ಲಾಂ ವಿರೋಧಿಯಾಗಿದೆ. ಅವರು ಇಸ್ಲಾಂ ಅನ್ನು ಅನುಸರಿಸುತ್ತಿಲ್ಲ. ಇದಲ್ಲದೆ ಮುಸ್ಲಿಮೇತರ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಹೀಗಾಗಿ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಲಿ, ಅದನ್ನು ಬಿಟ್ಟಿ ಇಸ್ಲಾಂಗೆ ಅಪಮಾನ ಮಾಡುವುದು ಸರಿಯೇ ಎಂದು ಮುಫ್ತಿ ಅಸಾದ್ ಕಾಸ್ಮಿ ಪ್ರಶ್ನಿಸಿದ್ದರು.

    ಎಲ್ಲರನ್ನೂ ಒಳಗೊಂಡ ಭಾರತದ ಪ್ರತಿನಿಧಿ ಎಂದು ಈ ಹಿಂದೆ ಸಂಸದೆ ನುಸ್ರತ್ ಜಹಾನ್ ಹೇಳಿದ್ದರು. ಉದ್ಯಮಿ ನಿಖಿಲ್ ಜೈನ್ ಅವರನ್ನು ನುಸ್ರತ್ ಅವರು ಮದುವೆಯಾದ ಬಳಿಕ ಹಿಂದೂ ಧಾರ್ಮಿಕ ಆಚರಣೆ, ಪೂಜೆ ಪುನಸ್ಕಾರಗಳಲ್ಲಿ ಅವರು ತೊಡಗಿಕೊಂಡಿದ್ದರು. ಆದ್ದರಿಂದ ಅವರ ವಿರುದ್ಧ ಭಾರಿ ಟೀಕೆಗಳು ಕೇಳಿಬಂದಿತ್ತು.

    ಸಂಸದರಾದ ಬಳಿಕ ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಹಣೆಗೆ ಸಿಂಧೂರ ಇಟ್ಟುಕೊಂಡು ಬಂದಿದ್ದಕ್ಕೆ ಕೂಡ ನುಸ್ರತ್ ವಿರುದ್ಧ ಮೌಲ್ವಿಗಳು ಕಿಡಿಕಾರಿದ್ದರು. ಈಗ ಸಾಂಪ್ರದಾಯಿಕ ಸೀರೆಯನ್ನುಟ್ಟು, ಹಣೆಗೆ ಸಿಂಧೂರ ಹಾಗೂ ಮಂಗಳಸೂತ್ರವನ್ನು ಹಾಕಿಕೊಂಡು ನುಸ್ರತ್ ಅವರು ದುರ್ಗಾ ಪೂಜೆ ಮಾಡಿದ್ದೂ ಕೂಡ ಮೌಲ್ವಿಗಳ ಕೆಂಗಣ್ಣಿಗೆ ಕಾರಣವಾಗಿದೆ.

  • ಟಿಎಂಸಿ ಸಂಸದೆಯ ಹನಿಮೂನ್ ಫೋಟೋಗಳು ವೈರಲ್

    ಟಿಎಂಸಿ ಸಂಸದೆಯ ಹನಿಮೂನ್ ಫೋಟೋಗಳು ವೈರಲ್

    ನವದೆಹಲಿ: ಮೊದಲ ಬಾರಿಗೆ ಸಂಸದೆ ಆಗಿ ಆಯ್ಕೆಯಾಗಿರುವ ತೃಣಮೂಲ ಕಾಂಗ್ರೆಸ್ ಸಂಸದೆ(ಟಿಎಂಸಿ) ನುಸ್ರತ್ ಜಹಾನ್ ಅವರು ಸದಾ ಸುದ್ದಿಯಲ್ಲಿರುತ್ತಾರೆ. ಹಾಗೆಯೇ ಈ ಬಾರಿ ಅವರು ರೊಮ್ಯಾಂಟಿಕ್ ಲುಕ್‍ನಲ್ಲಿ ಪತಿ ಜೊತೆ ಕಾಣಿಸಿಕೊಂಡಿರುವ ಫೋಟೋಗಳ ಮೂಲಕ ಸುದ್ದಿಯಾಗಿದ್ದಾರೆ.

    ಬಂಗಾಳಿ ನಟಿ ಹಾಗೂ ಸಂಸದೆ ನುಸ್ರತ್ ಅವರು ರಾಜಕೀಯಕ್ಕೆ ಪ್ರವೇಶ ಮಾಡಿದ ಬಳಿಕ ನಿರಂತರ ಚರ್ಚೆಯಲ್ಲಿದ್ದಾರೆ. ಮೊದಲು ಡ್ರೆಸ್ ವಿಚಾರಕ್ಕೆ ನುಸ್ರತ್ ಚರ್ಚೆಗೆ ಬಂದಿದ್ದರು. ನಂತರ ಹಣೆಗೆ ಸಿಂಧೂರ, ಕೈಗೆ ಬಳೆ ತೊಟ್ಟು ಕಲಾಪಕ್ಕೆ ಬಂದಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಇತ್ತೀಚಿಗಷ್ಟೆ ನುಸ್ರತ್ ಅವರು ತಮ್ಮ ಬಹುಕಾಲದ ಗೆಳೆಯ ನಿಖಿಲ್ ಜೈನ್ ಅವರನ್ನು ವರಿಸಿದ್ದರು. ಆದರೆ ರಾಜಕೀಯದಲ್ಲಿ ಬ್ಯುಸಿಯಿದ್ದ ಕಾರಣಕ್ಕೆ ಮದುವೆಯಾದ ಎರಡು ತಿಂಗಳ ಬಳಿಕ ಬ್ರೆಕ್ ತೆಗೆದುಕೊಂಡು ನುಸ್ರತ್ ಪತಿಯೊಂದಿಗೆ ಹನಿಮೂನ್‍ಗೆ ಹೋಗಿದ್ದಾರೆ. ಅಲ್ಲಿ ನುಸ್ರತ್ ಅವರು ಪತಿಯೊಂದಿಗೆ ತೆಗೆಸಿಕೊಂಡಿರುವ ರೊಮ್ಯಾಂಟಿಕ್ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    https://www.instagram.com/p/B0nSOhnHZ_-/?utm_source=ig_embed

    ಪತಿಯೊಂದಿಗೆ ನುಸ್ರತ್ ಕಳೆದಿರುವ ಮಧುರ ಕ್ಷಣಗಳ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಹಾಗೂ ಇತರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅವರ ಪತಿ ನಿಖಿಲ್ ಅವರು ಕೂಡ ಕೆಲ ಫೋಟೋಗಳನ್ನು ತಮ್ಮ ಇನ್‍ಸ್ಟಾ ಹಾಗೂ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ನುಸ್ರತ್ ಅವರು ಪೋಸ್ಟ್ ಮಾಡಿರುವ ಫೋಟೋದಲ್ಲಿ ಅವರು ಕಪ್ಪು ಹಾಗೂ ಬಿಳಿ ಬಣ್ಣದ ಸ್ಟ್ರೈಪ್ಸ್ ಇರುವ ಟಾಪ್ ಹಾಗೂ ಬಿಳಿ ಶಾಟ್ಸ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ನುಸ್ರತ್ ಜಹಾನ್ ಅವರು ಅಂತರ ಧರ್ಮ ವಿವಾಹವಾಗಿರುವುದು ಈ ಹಿಂದೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಆಗ ಧೈರ್ಯದಿಂದ ನುಸ್ರತ್ ಅವರು ಇದು ನನ್ನ ವೈಯಕ್ತಿಕ ವಿಚಾರ, ಬೇರೆಯವರು ತಲೆಹಾಕುವುದು ಸರಿಯಲ್ಲ. ನನ್ನ ಜೀವನದ ನಿರ್ಧಾರವನ್ನು ಯಾರು ತೆಗೆದುಕೊಳ್ಳಲು ಆಗುವುದಿಲ್ಲ. ನಾನು ಜನರನ್ನು ಮನುಷ್ಯತ್ವದಿಂದ ಅಳಿಯುತ್ತೇನೆ. ನಿಖಿಲ್ ಅವರು ಒಳ್ಳೆಯ ಮನುಷ್ಯ, ಆದ್ದರಿಂದ ನಾನು ಈ ನಿರ್ಧಾರಕ್ಕೆ ಬಂದೆ. ಈಗಿನ ಕಾಲದಲ್ಲೂ ಜನ ಧರ್ಮದ ಚೌಕಟ್ಟಿನಲ್ಲಿ ಬದುಕುತ್ತಿದ್ದಾರೆ ಎಂದರೆ ಅಚ್ಚರಿಯಾಗುತ್ತೆ ಎಂದು ತಿರುಗೇಟು ನೀಡಿದ್ದರು.

    ನುಸ್ರತ್ ಅವರು ಸಂಸದೆಯಾದ ಬಳಿಕ ಹಲವು ವಿವಾದಗಳನ್ನು ಮಾಡಿಕೊಂಡಿದ್ದಾರೆ. ಅವರ ಉಡುಗೆ, ತೊಡುಗೆ, ಮದುವೆಯಾದ ಬಳಿಕ ಪತಿಯ ಜೈನ್ ಕುಟುಂಬಕ್ಕೆ ಸೇರಿದ್ದು ಹಾಗೂ ಹಿಂದೂ ಸಂಪ್ರದಾಯಗಳಲ್ಲಿ ಭಾಗಿಯಾಗಿರುವುದು ಸಖತ್ ಸುದ್ದಿಯಾಗಿತ್ತು. ಹಲವು ಟೀಕೆ ಟಿಪ್ಪಣಿಗಳ ನಡುವೆಯೂ ನುಸ್ರತ್ ಜಹಾನ ಇಸ್ಕಾನ್ ಮಂದಿರದ ಜಗನ್ನಾಥ ಯಾತ್ರೆಯಲ್ಲಿ ಭಾಗಿಯಾಗಿದ್ದರು. ಈ ಮೂಲಕ ತಮ್ಮ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಧರ್ಮಗುರುಗಳು ಮತ್ತು ಟೀಕಾಕಾರರಿಗೆ ಖಡಕ್ ಉತ್ತರ ನೀಡಿದ್ದರು.

  • ನೂತನ ಸಂಸದೆಯ ಅದ್ಧೂರಿ ಆರತಕ್ಷತೆ – ಮಮತಾ ಬ್ಯಾನರ್ಜಿ ಆಗಮನ

    ನೂತನ ಸಂಸದೆಯ ಅದ್ಧೂರಿ ಆರತಕ್ಷತೆ – ಮಮತಾ ಬ್ಯಾನರ್ಜಿ ಆಗಮನ

    ಕೋಲ್ಕತ್ತಾ: ನೂತನ ಸಂಸದೆ, ನಟಿ ನುಸ್ರತ್ ಜಹಾನ್ ಗುರುವಾರ ಅದ್ಧೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದಾರೆ. ಇವರ ಆರತಕ್ಷತೆಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಕೂಡ ಆಗಮಿಸಿ ನವಜೋಡಿಗೆ ಆಶೀರ್ವಾದ ಮಾಡಿದ್ದಾರೆ.

    ಕೋಲ್ಕತ್ತಾದ ಐಟಿಸಿ ರಾಯಲ್‍ನಲ್ಲಿ ನುಸ್ರತ್ ಜಹಾನ್ ತಮ್ಮ ಆರತಕ್ಷತೆಯನ್ನು ಆಯೋಜಿಸಿದ್ದರು. ಈ ವೇಳೆ ಮಮತಾ ಬ್ಯಾನರ್ಜಿ ಅವರು ಆಗಮಿಸಿ ನವಜೋಡಿ ಜೊತೆ ಫೋಟೋಗೆ ಪೋಸ್ ಕೊಟ್ಟಿರುವ ಇದೀಗ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಫೋಟೋದಲ್ಲಿ ನಟಿ, ಸಂಸದೆ ಮಿಮಿ ಚಕ್ರವರ್ತಿ ಕೂಡ ಕಾಣಿಸಿಕೊಂಡಿದ್ದಾರೆ.

    ಈ ಆರತಕ್ಷತೆಯಲ್ಲಿ ನುಸ್ರತ್ ಜಹಾನ್ ಅವರು ಸಸ್ಯಹಾರ, ಮಾಂಸಾಹಾರ, ಬೆಂಗಾಲಿ, ಇಟಾಲಿಯನ್ ಆಹಾರವನ್ನು ಆಯೋಜಿಸಿದ್ದರು. ನುಸ್ರತ್ ಅವರ ಪತಿ ಹಾಗೂ ಕುಟುಂಬದವರು ಸಸ್ಯಹಾರಿಗಳಾದ ಕಾರಣ ಅವರಿಗಾಗಿ ಸಸ್ಯಹಾರಿ ಆಹಾರವನ್ನು ಮಾಡಿಸಿದ್ದರು.

    ನುಸ್ರತ್ ಜಹಾನ್ ಕಳೆದ ಜೂನ್ ತಿಂಗಳಿನಲ್ಲಿ ಉದ್ಯಮಿ ನಿಖಿಲ್ ಜೈನ್ ಜೊತೆ ಟರ್ಕಿಯ ಬೋದ್ರಮ್‍ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಬಗ್ಗೆ ನುಸ್ರತ್ ತಮ್ಮ ಟ್ವಿಟ್ಟರಿನಲ್ಲಿ ಮದುವೆ ಫೋಟೋ ಹಾಕಿ ಅಧಿಕೃತವಾಗಿ ಎಲ್ಲರಿಗೂ ತಿಳಿಸಿದ್ದರು. ತಮ್ಮ ಮದುವೆಯ ಕಾರಣದಿಂದ ಪ್ರಮಾಣ ವಚನವನ್ನೂ ಮುಂದೂಡಿದ್ದರು.

    ಮದುವೆಯ ಬಳಿಕ ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ನುಸ್ರತ್, ಬುರ್ಖಾ ಧರಿಸದೆ ಸಂಸತ್ ಪ್ರವೇಶಿಸಿರುವುದು, ಸಿಂಧೂರ ಇಟ್ಟಿರುವುದು ಹಾಗೂ ಕೈಗೆ ಬಳೆ ತೊಟ್ಟಿದ್ದಕ್ಕೆ ಮುಸ್ಲಿಂ ಧರ್ಮ ಗುರುಗಳು ಸೇರಿದಂತೆ ಹಲವರು ಟೀಕಿಸಿದ್ದರು. ಇದಕ್ಕೆ ಉತ್ತರಿಸಿರುವ ಸಂಸದೆ, ನಾನು `ಅಂತರ್ಗತ ಭಾರತ’ವನ್ನು ಪ್ರತಿನಿಧಿಸುತ್ತೇನೆ ಎಂದು ಟೀಕಾಕಾರರಿಗೆ ಖಾರವಾಗಿ ತಿರುಗೇಟು ನೀಡಿದ್ದರು.

  • ಜಗನ್ನಾಥ ಯಾತ್ರೆಯಲ್ಲಿ ನುಸ್ರತ್ ಜಹಾನ್- ನನ್ನ ಧರ್ಮ ಯಾವುದು ಅಂತ ನನಗೆ ಗೊತ್ತು

    ಜಗನ್ನಾಥ ಯಾತ್ರೆಯಲ್ಲಿ ನುಸ್ರತ್ ಜಹಾನ್- ನನ್ನ ಧರ್ಮ ಯಾವುದು ಅಂತ ನನಗೆ ಗೊತ್ತು

    -ಜನ್ಮದಿಂದಲೂ ಮುಸ್ಲಿಂ, ಈಗಲೂ ಮುಸ್ಲಿಂ
    -ಫತ್ವಾ ಹೊರಡಿಸಿದವ್ರಿಗೆ ಸಂಸದೆ ತಿರುಗೇಟು

    ಕೋಲ್ಕತ್ತಾ: ಹಲವು ಟೀಕೆ ಟಿಪ್ಪಣಿಗಳ ನಡುವೆಯೂ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ ಇಸ್ಕಾನ್ ಮಂದಿರದ ಜಗನ್ನಾಥ ಯಾತ್ರೆಯಲ್ಲಿ ಭಾಗಿಯಾದರು. ಈ ಮೂಲಕ ತಮ್ಮ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಧರ್ಮಗುರುಗಳು ಮತ್ತು ಟೀಕಾಕಾರರಿಗೆ ಖಡಕ್ ತಿರುಗೇಟು ನೀಡಿದರು.

    ಸಂಸದೆಯಾಗಿ ಆಯ್ಕೆಯಾಗಿರುವ ನಟಿ ನುಸ್ರತ್ ಜಹಾನ್ ಅವರನ್ನು ಇಸ್ಕಾನ್ ದೇವಾಲಯ ಮಂಡಳಿ ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಿತ್ತು. ಕೆಲವು ದಿನಗಳ ಹಿಂದೆ ನುಸ್ರತ್ ಜಹಾನ್ ಕೋಲ್ಕತ್ತಾ ಹಿಂದೂ ಉದ್ಯಮಿ ನಿಖಿಲ್ ಜೈನ್ ರನ್ನು ವಿವಾಹವಾಗಿದ್ದರು. ವಿವಾಹದ ಬಳಿಕ ಸೀರೆ ತೊಟ್ಟು, ಸಿಂಧೂರವಿಟ್ಟು, ಕೈ ಬಳೆ ಹಾಕಿ ನವ ವಧುವಿನಂತೆ ಸಂಸತ್ತಿಗೆ ಆಗಿಸಿ ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಬುರ್ಖಾ ಧರಿಸದೇ ಬಂದಿದ್ದಕ್ಕೆ ಕೆಲವು ಮುಸ್ಲಿಂ ಧರ್ಮಗುರುಗಳ ಕೆಂಗಣ್ಣಿಗೆ ನುಸ್ರತ್ ಜಹಾನ್ ಗುರಿಯಾಗಿದ್ದರು.

    ಯಾತ್ರೆಯಲ್ಲಿ ಭಾಗಿಯಾಗಿದ್ದ ವೇಳೆ ತಮ್ಮ ವಿರುದ್ಧ ಹೊರಡಿಸಲಾಗಿರುವ ಫತ್ವಾಗೆ ಪ್ರತಿಕ್ರಿಯಿಸಿದ ಸಂಸದೆ, ಆಧಾರರಹಿತ ವಿಚಾರಗಳತ್ತ ನಾನು ಗಮನ ನೀಡಲ್ಲ. ನನಗೆ ನನ್ನ ಧರ್ಮ ಯಾವುದು ಎಂಬುವುದು ಗೊತ್ತಿದೆ. ನಾನು ಜನ್ಮದಿಂದಲೂ ಮುಸ್ಲಿಂ, ಇಂದಿಗೂ ಮುಸ್ಲಿಂ ಧರ್ಮದಲ್ಲಿ ನಾನಿದ್ದೇನೆ. ಇದು ಧರ್ಮ ಮತ್ತು ನಂಬಿಕೆಯ ಪ್ರಶ್ನೆಯಾಗಿದ್ದು, ಕೆಲವರು ಈ ಕುರಿತು ತಮ್ಮನ್ನೇ ತಾವು ಪ್ರಶ್ನಿಸಿಕೊಳ್ಳುವುದು ಉತ್ತಮ ಎಂದು ತಿರುಗೇಟು ನೀಡಿದರು.

    ಪೂಜೆ ಸಲ್ಲಿಸಿದ ಸಂಸದೆ:
    ಯಾತ್ರೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಸಾಥ್ ನೀಡಿದ ನುಸ್ರತ್ ಜಹಾನ್ ಪೂಜೆ ಸಲ್ಲಿಸಿ ತೆಂಗಿನಕಾಯಿ ಒಡೆದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿಯೂ ನುಸ್ರತ್ ಜಹಾನ್ ಮಂಗಲಸೂತ್ರ, ಸಿಂಧೂರವಿಟ್ಟು ಆಗಮಿಸಿದ್ದರು. ಹಿಂದೂ ಮಹಿಳೆಯರಂತೆ ವೇಷಭೂಷಣ ತೊಟ್ಟಿದ್ದಕ್ಕೆ ಸ್ಥಳೀಯ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

    ನಾವು ಅಭಿವೃದ್ಧಿಯತ್ತ ಸಾಗುತ್ತಿರುವ ಹೊಸ ಭಾರತದ ನವ ನಾಗರೀಕರು. ಹಾಗಾಗಿ ಎಲ್ಲ ಧರ್ಮ ಮತ್ತು ಸಂಸ್ಕೃತಿಗೆ ಗೌರವ ನೀಡುವುದು ಅವಶ್ಯಕ. ಕೆಲವರು ಮತಗಳಿಗಾಗಿ ದೇವರನ್ನು ವಿಗಂಡನೆ ಮಾಡಲು ಹೊರಟಿದ್ದಾರೆ. ನಾನು ಮುಸ್ಲಿಂ ಮತ್ತು ಜಾತ್ಯಾತೀತ ಭಾರತದ ಮಹಿಳೆ. ದೇವರ ಹೆಸರಿನಲ್ಲಿ ಜನರನ್ನು ವಿಭಜಿಸುವುದು ನನ್ನ ಧರ್ಮ ಎಲ್ಲಿಯೂ ಹೇಳಿಲ್ಲ ಎಂದು ನುಸ್ರತ್ ಜಹಾನ್ ತಿಳಿಸಿದರು.