Tag: ನೀಲಮಣಿ ರಾಜು

  • ಪೊಲೀಸ್ ಮಹಾನಿರ್ದೇಶಕರ ನಿವೃತ್ತಿಯ ದಿನ ಹೇಗಿರುತ್ತೆ ಗೊತ್ತಾ?

    ಪೊಲೀಸ್ ಮಹಾನಿರ್ದೇಶಕರ ನಿವೃತ್ತಿಯ ದಿನ ಹೇಗಿರುತ್ತೆ ಗೊತ್ತಾ?

    ಬೆಂಗಳೂರು: ಅದು ಅಂತಿಂತ ಸಾಮಾನ್ಯ ಹುದ್ದೆಯಲ್ಲ. ಐಎಎಸ್‍ನಲ್ಲಿ ಮುಖ್ಯ ಕಾರ್ಯದರ್ಶಿ ಹುದ್ದೆ ಹೇಗೋ ಐಪಿಎಸ್‍ನಲ್ಲಿ ಡಿಜಿ ಅಂಡ್ ಐಜಿಪಿ ಹುದ್ದೆಗಿರುವ ಮಹತ್ವ ಅಂತದ್ದು. ಐಪಿಎಸ್ ಆಗುವ ಪ್ರತಿಯೊಬ್ಬ ಅಧಿಕಾರಿಯ ಆಸೆ ಕೂಡ ಪೊಲೀಸ್ ಇಲಾಖೆಯ ಅತ್ಯುನ್ನತ ಹುದ್ದೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಬೇಕು ಎನ್ನುವುದು.

    ಡಿಜಿ ಅಂಡ್ ಐಜಿಪಿ ಪೋಸ್ಟ್ ನಲ್ಲಿದ್ದವರ ನಿವೃತ್ತಿಯ ದಿನ ಹೇಗಿರುತ್ತೆ ಗೊತ್ತಾ? ನಿಜಕ್ಕೂ ಇದು ಕುತೂಹಲವೇ ಸರಿ. ನಿವೃತ್ತಿಯ ದಿನದಂದು ಇಡೀ ಐಪಿಎಸ್ ಅಧಿಕಾರಿಗಳು ಡಿಜಿ ಕಚೇರಿಗೆ ಕ್ರಾಸ್ ಬೆಲ್ಟ್‌ನಲ್ಲಿ ಬಂದು ಗೌರವ ಸಲ್ಲಿಸುತ್ತಾರೆ. ಕೆಎಸ್‌ಆರ್‌ಪಿ ವತಿಯಿಂದ ಗಾರ್ಡ್ ಆಫ್ ಹಾನರ್ ಸಲ್ಲಿಸಲಾಗುತ್ತದೆ. ಅಷ್ಟೇ ಅಲ್ಲದೆ ಹಿರಿಯ ಅಧಿಕಾರಿಗಳ ಜೊತೆ ಅವತ್ತು ಟೀ ಕುಡಿಯುತ್ತಾರೆ. ಇದನ್ನೂ ಓದಿ: ಡಿಜಿ-ಐಜಿಪಿ ನೀಲಮಣಿ ಸೇರಿ ಮೂವರು ಐಪಿಎಸ್ ಅಧಿಕಾರಿಗಳು ನಿವೃತ್ತಿ

    ಡಿಜಿ ಕಚೇರಿಯನ್ನು ತಳಿರು ತೋರಣಗಳಿಂದ ಅಲಂಕೃತಗೊಳಿಸಿ, ಒಂದು ಜೀಪ್ ಅನ್ನು ಸಹ ಹೂಗಳಿಂದ ಅಲಂಕೃತಗೊಳಿಸುತ್ತಾರೆ. ಆ ಜೀಪ್‍ನ ಮುಂಭಾಗದಲ್ಲಿ ಎರಡೂ ಕಡೆ ಉದ್ದದ ಹಗ್ಗ ಕಟ್ಟುತ್ತಾರೆ. ಸಂಜೆ ವೇಳೆಗೆ ಅಲಂಕೃತ ಜೀಪ್‍ನಲ್ಲಿ ನಿರ್ಗಮಿತ ಡಿಜಿ ಅಂಡ್ ಐಜಿಪಿಯವರನ್ನ ನಿಲ್ಲಿಸಲಾಗುತ್ತದೆ. ಐಪಿಎಸ್ ಅಧಿಕಾರಿ ವರ್ಗ ತೇರು ಎಳೆದಂತೆ ಜೀಪನ್ನು ಎಳೆದುಕೊಂಡು ಹೋಗಿ ಡಿಜಿಯವರನ್ನು ಅವರ ಮನೆಗೆ ಬಿಡುತ್ತಾರೆ. ಇದೊಂಥಾರ ನೋಡಲು ರೋಮಾಂಚಕ ಅನುಭವ ಕೊಡುತ್ತದೆ. ಹೀಗೆ ನಿರ್ಗಮಿತ ಡಿಜಿ ಅಂಡ್ ಐಜಿಪಿಯವರ ಕೊನೆಯ ಸೇವಾ ದಿನವನ್ನ ಅವಿಸ್ಮರಣೀಯವಾಗಿ ನೋಡಿಕೊಳ್ಳಲಾಗುತ್ತದೆ. ಇದನ್ನೂ ಓದಿ: ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಪ್ರವೀಣ್ ಸೂದ್ ನೇಮಕ

  • ಡಿಜಿ-ಐಜಿಪಿ ನೀಲಮಣಿ ಸೇರಿ ಮೂವರು ಐಪಿಎಸ್ ಅಧಿಕಾರಿಗಳು ನಿವೃತ್ತಿ

    ಡಿಜಿ-ಐಜಿಪಿ ನೀಲಮಣಿ ಸೇರಿ ಮೂವರು ಐಪಿಎಸ್ ಅಧಿಕಾರಿಗಳು ನಿವೃತ್ತಿ

    ಬೆಂಗಳೂರು: ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕರಾಗಿ ಎರಡುವರೆ ವರ್ಷ ಮೂರು ತಿಂಗಳ ಕಾಲ ಅಧಿಕಾರ ನಡೆಸಿದ ನೀಲಮಣಿ ಎನ್.ರಾಜು ಇಂದು ಸೇವೆಯಿಂದ ನಿವೃತ್ತಿಹೊಂದಿದರು.

    ಡಿಜಿ, ಐಜಿಪಿ ಜೊತೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳು ನಿವೃತ್ತಿ ಪಡೆದರು. ಅಗ್ನಿಶಾಮಕ ದಳದ ಡಿಜಿಪಿ ಎಂ.ಎನ್.ರೆಡ್ಡಿ, ವಸತಿ ಮೂಲ ಸೌಕರ್ಯ ನಿಗಮದ ಡಿಜಿಪಿ ನಿವೃತ್ತಿಯಾದರು. ನಿವೃತ್ತಿಯಾದ ಮೂವರು ಅಧಿಕಾರಿಗಳಿಗೆ ಕೋರಮಂಗಲ ಕೆಎಸ್‌ಆರ್‌ಪಿ ಮೈದಾನದಲ್ಲಿ ಬಿಳ್ಕೋಡೆಗೆ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು.

    ಕಾರ್ಯಕ್ರಮದಲ್ಲಿ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಗೌರವ ವಂದನೆ ಸಲ್ಲಿಸಲಾಯಿತು. ಹಿರಿಯ ಅಧಿಕಾರಿಗಳ ಬಿಳ್ಕೋಡೆಗೆ ಕಾರ್ಯಕ್ರಮಕ್ಕೆ ಗೃಹ ಇಲಾಖೆ ಅಪರ ಕಾರ್ಯದರ್ಶಿ ರಜನೀಶ್ ಗೊಯಲ್, ಇಲಾಖೆಯ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

    ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಸಾರಥಿಯಾಗಿ ಕೆಲಸ ಮಾಡುವುದಕ್ಕೆ ಸಹಕಾರ ನೀಡಿದ ಸರ್ಕಾರಕ್ಕೆ ಹಾಗೂ ಸಹೋದ್ಯೋಗಿಗಳಿಗೆ ಧನ್ಯವಾದಗಳು. ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ಭದ್ರತೆಗೆ ಕೇಂದ್ರ ಚುನಾವಣಾ ಆಯೋಗ ಪ್ರಶಂಸೆಯ ಪತ್ರಕೊಟ್ಟಿದೆ. ಇದು ಕರ್ನಾಟಕ ಪೊಲೀಸರಿಗೆ ಸಿಕ್ಕ ದೊಡ್ಡಗೌರವ. ಕಳೆದ ಎರಡು ವರ್ಷ ಮೂರು ತಿಂಗಳಲ್ಲಿ ಇಲಾಖೆಯಲ್ಲಿ ಜನಸ್ನೇಹಿ ಪೊಲೀಸ್ ಸೇರಿ ಹಲವು ರೀತಿಯ ಬದಲಾವಣೆಗಳನ್ನ ಮಾಡಿದ್ದೇನೆ. ಇಲಾಖೆಯಲ್ಲಿ 100 ಪರ್ಸೆಂಟ್ ಯಶಸ್ಸು ಖಂಡಿರುವ ಹೆಮ್ಮೆ ಇದೆ ಎಂದು ತನ್ನ ಅಧಿಕಾರದ ಅವಧಿಯಲ್ಲಾದ ಕೆಲಸಗಳು ಹಾಗೂ ಘಟನೆಗಳ ಬಗ್ಗೆ ನೀಲಮಣಿ ಅವರು ಮೇಲಕು ಹಾಕಿದರು.

  • ಯಾರಾಗ್ತಾರೆ ಮುಂದಿನ ರಾಜ್ಯ ಪೊಲೀಸ್ ಮಹಾನಿರ್ದೇಶಕ?

    ಯಾರಾಗ್ತಾರೆ ಮುಂದಿನ ರಾಜ್ಯ ಪೊಲೀಸ್ ಮಹಾನಿರ್ದೇಶಕ?

    ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಸಮರ್ಥ ಅಧಿಕಾರಿ ಆಯ್ಕೆಗೆ ಸರ್ಕಾರ ಕಸರತ್ತು ಆರಂಭಿಸಿದೆ. ಹಾಲಿ ಡಿಜಿ-ಐಜಿಪಿ ನೀಲಮಣಿ ಎನ್ ರಾಜು ಅವರು ಇದೇ ತಿಂಗಳ 31ಕ್ಕೆ ನಿವೃತ್ತಿ ಹೊಂದಲಿದ್ದಾರೆ. ನೀಲಮಣಿ ಎನ್ ರಾಜು 2017ರ ಅಕ್ಟೋಬರ್‍ನಲ್ಲಿ ರಾಜ್ಯದ ಮೊದಲ ಮಹಿಳಾ ಡಿಜಿ-ಐಜಿಪಿಯಾಗಿ ನೇಮಕವಾಗಿದ್ದರು. ಇದೀಗ ನೀಲಮಣಿ ರಾಜು ನಿವೃತ್ತಿ ಹೊಂದಲಿರುವ ಹಿನ್ನೆಲೆಯಲ್ಲಿ ಡಿಜಿ ಐಜಿಪಿ ಆಯ್ಕೆಗೆ ರಾಜ್ಯ ಸರ್ಕಾರ ಮುಂದಾಗಿದೆ.

    ಡಿಜಿ-ಐಜಿಪಿ ಹುದ್ದೆಯ ರೇಸ್‍ನಲ್ಲಿ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳಿದ್ದಾರೆ. ಸೇವಾ ಹಿರಿತನ ಹೊಂದಿರುವ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಎಎಂ ಪ್ರಸಾದ್, ಸಿಐಡಿ, ಡಿಜಿಪಿ ಪ್ರವೀಣ್ ಸೂದ್, ನೇಮಕಾತಿ ವಿಭಾಗದ ಡಿಜಿಪಿ ಪಿ.ಕೆ ಗರ್ಗ್ ಹೆಸರುಗಳು ಡಿಜಿ-ಐಜಿಪಿ ರೇಸ್‍ನಲ್ಲಿ ಕೇಳಿಬಂದಿದೆ.

    ಡಿಜಿ- ಐಜಿಪಿ ಹುದ್ದೆಗೆ ಸೇವಾ ಹಿರಿತನ ಹೊಂದಿರುವ ಈ ಮೂವರು ಹಿರಿಯ ಅಧಿಕಾರಿಗಳ ಹೆಸರುಗಳನ್ನೂ ಈಗಾಗಲೇ ರಾಜ್ಯ ಸರ್ಕಾರ ಕೇಂದ್ರ ಲೋಕಸೇವಾ ಆಯೋಗಕ್ಕೆ ಕಳಿಸಿಕೊಟ್ಟಿದೆ. ಈ ಅಧಿಕಾರಿಗಳ ವೃತ್ತಿ ಬದುಕಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಕೇಂದ್ರ ಲೋಕಸೇವಾ ಆಯೋಗಕ್ಕೆ ಸರ್ಕಾರ ರವಾನೆ ಮಾಡಿದೆ.

    ಸದ್ಯದಲ್ಲೇ ಕೇಂದ್ರ ಲೋಕಸೇವಾ ಆಯೋಗವು ಲಕೋಟೆ ಮೂಲಕ ಡಿಜಿ-ಐಜಿಪಿ ಹುದ್ದೆಗೆ ಆಯ್ಕೆ ಮಾಡಬೇಕಾದ ಹೆಸರುಗಳನ್ನು ಆಯ್ಕೆ ಮಾಡಿ ಕಳಿಸಿಕೊಡಲಿದೆ. ಯುಪಿಎಸ್‍ಸಿ ಲಕೋಟೆ ಬಂದ ಬಳಿಕ ರಾಜ್ಯ ಸರ್ಕಾರ ಹೊಸ ಡಿಜಿ-ಐಜಿಪಿ ಹುದ್ದೆಗೆ ಆಯ್ಕೆ ಮಾಡಲಿದೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಕೇಂದ್ರ ಲೋಕಸೇವಾ ಆಯೋಗಕ್ಕೆ ಡಿಜಿ-ಐಜಿಪಿ ಹುದ್ದೆಗೆ ಆಯ್ಕೆ ಮಾಡಬೇಕಾದ ಸಂಭಾವ್ಯರ ಹೆಸರುಗಳನ್ನು ಆಯ್ಕೆ ಮಾಡಿತ್ತು.

    ಸದ್ಯ ಡಿಜಿ-ಐಜಿಪಿ ಹುದ್ದೆಯ ರೇಸ್‍ನಲ್ಲಿ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರು ಪ್ರಬಲವಾಗಿ ಕೇಳಿಬರ್ತಿದೆ. ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಎ.ಎಂ ಪ್ರಸಾದ್ ಮತ್ತು ಸಿಐಡಿ ಡಿಜಿಪಿ ಪ್ರವೀಣ್ ಸೂದ್ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿದೆ.

    ಈ ಪೈಕಿ 1985 ಕೇಡರ್‍ನ ಅಧಿಕಾರಿ ಎ.ಎಂ ಪ್ರಸಾದ್ ಅವರಿಗೆ ಇನ್ನೂ 9 ತಿಂಗಳ ಸೇವಾವಧಿ ಇದೆ. 1986ನೇ ಕೇಡರ್‍ನ ಅಧಿಕಾರಿಗಳಾದ ಪ್ರವೀಣ್ ಸೂದ್ ಅವರಿಗೆ ಇನ್ನೂ 2 ವರ್ಷ ಸೇವಾವಧಿ ಉಳಿದಿದ್ರೆ, ಪಿ ಕೆ ಗರ್ಗ್ ಅವರಿಗೆ 1.5 ವರ್ಷ ಸೇವಾವಧಿ ಇದೆ.

  • ನೂತನ ಡಿಜಿ & ಐಜಿ ನೇಮಕ ಪ್ರಕ್ರಿಯೆ ಆರಂಭಿಸಿದ ರಾಜ್ಯ ಸರ್ಕಾರ

    ನೂತನ ಡಿಜಿ & ಐಜಿ ನೇಮಕ ಪ್ರಕ್ರಿಯೆ ಆರಂಭಿಸಿದ ರಾಜ್ಯ ಸರ್ಕಾರ

    ಬೆಂಗಳೂರು: ನೂತನ ರಾಜ್ಯ ಪೊಲೀಸ್ ಮಹಾನಿರ್ದೇಶಕರ ನೇಮಕಕ್ಕೆ ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ. ಹಾಲಿ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಅವರು 2020ರ ಜನವರಿ ಅಂತ್ಯಕ್ಕೆ ನಿವೃತ್ತರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ನೂತನ ಡಿಜಿ ನೇಮಕಕ್ಕೆ ಸರ್ಕಾರ ಪ್ರಕ್ರಿಯೆ ನಡೆಸಿದೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ನೇತೃತ್ವದಲ್ಲಿ ನಿನ್ನೆ ಉನ್ನತಾಧಿಕಾರಿಗಳ ಸಭೆ ನಡೆಯಿತು. 1983ನೇ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿರುವ ನೀಲಮಣಿ ರಾಜು ಕಳೆದ ಎರಡೂವರೆ ವರ್ಷಗಳಿಂದ ರಾಜ್ಯ ಡಿಜಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ನಿಯಮದಂತೆ ಸರ್ಕಾರ ಹಿರಿತನಕ್ಕೆ ಆದ್ಯತೆ ನೀಡಬೇಕಿದ್ದು, ಉನ್ನತಾಧಿಕಾರ ಸಮಿತಿ ಅರ್ಹರಾಗಿರುವ 3 ಹಿರಿಯ ಅಧಿಕಾರಿಗಳ ಹೆಸರುಗಳಿರುವ ಪ್ಯಾನಲ್ ಅನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಬೇಕು. ಈ ಅಧಿಕಾರಿಗಳ ಸೇವಾ ಹಿರಿತನ ಮತ್ತು ಕಾರ್ಯಕ್ಷಮತೆ ಬಗ್ಗೆ ಕೇಂದ್ರ ಸರ್ಕಾರಕ್ಕೇನಾದ್ರೂ ಆಕ್ಷೇಪಗಳಿದ್ದರೆ ವರದಿ ನೀಡುತ್ತದೆ. ವರದಿ ಬಳಿಕ ರಾಜ್ಯ ಸರ್ಕಾರ ಮೂವರ ಪೈಕಿ ಯಾರನ್ನಾದ್ರೂ ಆಯ್ಕೆ ಮಾಡಕೊಳ್ಳಬಹುದು. ಈ ನೇಮಕ ಮತ್ತು ಆಯ್ಕೆ ರಾಜ್ಯ ಸರ್ಕಾರದ ವಿವೇಚನಾಧಿಕಾರವಾದ್ರೂ ಈ ನಿಯಮಗಳನ್ನು ಪಾಲಿಸಲೇಬೇಕು.

    ನಿನ್ನೆ ನಡೆದ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ 3 ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. 1985ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿರುವ ಎಡಿಜಿಪಿ ಎ.ಎಂ.ಪ್ರಸಾದ್, 1986 ಬ್ಯಾಚ್‍ನ ಅಧಿಕಾರಿಗಳಾಗಿರುವ ಎಡಿಜಿಪಿಗಳಾದ ಪ್ರವೀಣ್ ಸೂದ್ ಮತ್ತು ಪಿ.ಕೆ.ಗರ್ಗ್ ಇವರುಗಳ ಹೆಸರನ್ನು ಅಂತಿಮಗೊಳಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ.

    ಎ.ಎಂ. ಪ್ರಸಾದ್ ಅವರಿಗೆ 2020ರ ಅಕ್ಟೋಬರ್ ತಿಂಗಳವರೆಗೆ ಸೇವೆಗೆ ಅವಕಾಶವಿದ್ದು, ಬಹುತೇಕ ಪ್ರಸಾದ್ ಅವರೇ ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗುವುದು ಖಚಿತ. ನಂತರದ ಅವಕಾಶವಿರುವ ಪ್ರವೀಣ್ ಸೂದ್ ಅವರಿಗೆ 2024ರ ಮೇ ತಿಂಗಳವರೆಗೂ ಸೇವಾವಧಿ ಇದೆ. ಪಿ.ಕೆ.ಗರ್ಗ್ ಅವರಿಗೆ 2021ರ ಏಪ್ರಿಲ್‍ವರೆಗೆ ಅವಕಾಶವಿದೆ. ಹೀಗಾಗಿ ಸೇವಾ ಹಿರಿತನ ಪರಿಗಣಿಸಿ ಎ.ಎಂ.ಪ್ರಸಾದ್ ಅವರಿಗೆ ಡಿಜಿ ಹುದ್ದೆ ಲಭಿಸುವ ಸಾಧ್ಯತೆ ಇದೆ. ಜನವರಿ ಅಂತ್ಯಕ್ಕೆ ನೂತನ ಡಿಜಿ ನೇಮಕ ಆದೇಶ ಹೊರಬೀಳಲಿದೆ.

  • ಕೊಲ್ಲೂರಿನಲ್ಲಿ ಡಿಜಿಪಿ ನೀಲಮಣಿ ರಾಜು ಕುಟುಂಬದಿಂದ ಚಂಡಿಕಾಹೋಮ

    ಕೊಲ್ಲೂರಿನಲ್ಲಿ ಡಿಜಿಪಿ ನೀಲಮಣಿ ರಾಜು ಕುಟುಂಬದಿಂದ ಚಂಡಿಕಾಹೋಮ

    ಉಡುಪಿ: ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಕುಟುಂಬ ಸಮೇತರಾಗಿ ಕೊಲ್ಲೂರಿಗೆ ಆಗಮಿಸಿ ಚಂಡಿಕಾಹೋಮ ನಡೆಸಿದ್ದಾರೆ. ಪತಿ ನಿವೃತ್ತ ಐಎಎಸ್ ಅಧಿಕಾರಿ ನರಸಿಂಹ ರಾಜು ಜೊತೆಗಿದ್ದರು.

    ಬೈಂದೂರು ತಾಲೂಕಿನಲ್ಲಿರುವ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೆ ಪತಿ ಡಿ.ಎನ್ ನರಸಿಂಹರಾಜು ಅವರೊಂದಿಗೆ ಸೋಮವಾರ ಸಂಜೆಯೇ ಬಂದು ತಂಗಿದ್ದರು. ಇಂದು ಮುಂಜಾನೆ ಕೊಲ್ಲೂರು ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಬಂದು ದೇವರ ದರ್ಶನ, ಪೂಜೆ ಮಾಡಿಸಿದ್ದಾರೆ.

    ಬೆಳಗ್ಗೆ ಏಳು ಗಂಟೆಗೆ ಚಂಡಿಕಾ ಹೋಮದ ಸಂಕಲ್ಪದಲ್ಲಿ ಸ್ವತಃ ಡಿಜಿಪಿ ಪಾಲ್ಗೊಂಡರು. ಸಂಪೂರ್ಣ ಚಂಡಿಕಾ ಹೋಮ ನಡೆಯುವವರೆಗೆ ಪತಿ ಪತ್ನಿ ಯಜ್ಞಶಾಲೆಯಲ್ಲೇ ಎಲ್ಲಾ ವಿಧಿ ವಿಧಾನಗಳಲ್ಲಿ ಭಾಗಿಯಾದರು.

    ಡಿಜಿಪಿ ನೀಲಮಣಿ ರಾಜು ದಂಪತಿಗೆ ಕೊಲ್ಲೂರು ದೇವಾಲಯದ ಆಡಳಿತ ಮಂಡಳಿ ಕಡೆಯಿಂದ ಗೌರವ ಸಮರದಪಿಸಲಾಯ್ತು. ನೀಲಮಣಿ ರಾಜು ಈ ಹಿಂದೆಯೇ ಕೊಲ್ಲೂರಿನಲ್ಲಿ ಚಂಡಿಕಾಹೋಮ ನಡೆಸುವ ಹರಕೆ ಹೊತ್ತಿದ್ದರು ಎಂದು ಆಡಳಿತ ಮಂಡಳಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದೆ.

  • ಆರ್ಡರ್ ಮಾಡಿದ ಮೂರೇ ಗಂಟೆಯಲ್ಲಿ 21 ಡಿವೈಎಸ್‌ಪಿ, 110 ಮಂದಿ ಇನ್‌ಸ್ಪೆಕ್ಟರ್‌ ವರ್ಗಕ್ಕೆ ತಡೆ

    ಆರ್ಡರ್ ಮಾಡಿದ ಮೂರೇ ಗಂಟೆಯಲ್ಲಿ 21 ಡಿವೈಎಸ್‌ಪಿ, 110 ಮಂದಿ ಇನ್‌ಸ್ಪೆಕ್ಟರ್‌ ವರ್ಗಕ್ಕೆ ತಡೆ

    – ಡಿಜಿಪಿ ನೀಲಮಣಿ ರಾಜು ಆದೇಶ

    ಬೆಂಗಳೂರು: ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ನಡೆದಿದ್ದು, ಸಂಕಷ್ಟದಲ್ಲೂ ಡಿವೈಎಸ್‍ಪಿ ಮತ್ತು ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ವರ್ಗಾವಣೆ ಆದೇಶಕ್ಕೆ ಡಿಜಿಪಿ ನೀಲಮಣಿ ರಾಜು ತಡೆ ನೀಡಿದ್ದಾರೆ.

    110 ಮಂದಿ ಇನ್‌ಸ್ಪೆಕ್ಟರ್‌ ಮತ್ತು 21 ಜನ ಡಿವೈಎಸ್‍ಪಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಡಿವೈಎಸ್‍ಪಿ ಮತ್ತು ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಅವರು ವರ್ಗಾವಣೆ ಆದೇಶಕ್ಕೆ ತಡೆ ಹಿಡಿದಿದ್ದಾರೆ.

    ಸಂಜೆ ಸುಮಾರು 7 ಗಂಟೆಗೆ ಡಿವೈಎಸ್‍ಪಿ ಮತ್ತು ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ರಾತ್ರಿ 10 ಗಂಟೆಗೆ ಸರ್ಕಾರದ ವರ್ಗಾವಣೆ ಆದೇಶವನ್ನು ನೀಲಮಣಿ ಅವರು ಕ್ಯಾನ್ಸಲ್ ಮಾಡಿದ್ದಾರೆ.

    ಉಲ್ಲೇಖಿತ ಈ ಕಚೇರಿಯ ಆದೇಶಗಳಲ್ಲಿ ವರ್ಗಾಯಿಸಿರುವ ಡಿವೈಎಸ್‍ಪಿ ಮತ್ತು ಪೊಲೀಸ್ ಇನ್‌ಸ್ಪೆಕ್ಟರ್‌ ಅವರುಗಳ ವರ್ಗಾವಣೆಯನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ತಡೆಹಿಡಿಯಲಾಗಿದೆ. ಸಂಬಂಧಪಟ್ಟ ಘಟಕಾಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವುದು ಎಂದು ನೀಲಮಣಿಯವರು ಪತ್ರ ಬರೆದಿದ್ದಾರೆ.

  • ಭಾರತ್ ಬಂದ್ – ಖಡಕ್ ಸೂಚನೆ ನೀಡಿದ ಡಿಜಿಪಿ ನೀಲಮಣಿ ರಾಜು

    ಭಾರತ್ ಬಂದ್ – ಖಡಕ್ ಸೂಚನೆ ನೀಡಿದ ಡಿಜಿಪಿ ನೀಲಮಣಿ ರಾಜು

    ಬೆಂಗಳೂರು: ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ್ ಬಂದ್ ಕರೆ ಹಿನ್ನೆಲೆಯಲ್ಲಿ ಡಿಜಿಪಿ ನೀಲಮಣಿ ರಾಜು ಅವರು ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ ಒದಗಿಸಬೇಕೆಂದು ಪೊಲೀಸರಿಗೆ ಖಡಕ್ ಸೂಚನೆಯನ್ನು ಕೊಟ್ಟಿದ್ದಾರೆ.

    ಕಾರ್ಮಿಕ ಸಂಘಟನೆಗಳು 12 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎರಡು ದಿನ ಭಾರತ್ ಬಂದ್ ಮಾಡಿದ್ದಾರೆ. ಆದ್ದರಿಂದ ಎರಡು ದಿನ ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ ಗೆ ಡಿಜಿಪಿ ನೀಲಮಣಿ ರಾಜು ಅವರು ಸೂಚನೆ ನೀಡಿದ್ದು, ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳು, ತಾಲೂಕು ಕೇಂದ್ರಗಳು ಮತ್ತು ಪಟ್ಟಣಗಳಲ್ಲಿ ಹೆಚ್ಚಿನ ಬಂದೋಬಸ್ತ್ ಒದಗಿಸಲಾಗಿದೆ. ರಾಜ್ಯಾದ್ಯಂತ ಬಂದೋಬಸ್ತ್ ಗಾಗಿ ಬರೋಬ್ಬರಿ 54 ಸಾವಿರ ಪೊಲೀಸರನ್ನು ಕೂಡ ನಿಯೋಜನೆ ಮಾಡಲಾಗಿದೆ.

    ಜಿಲ್ಲೆಗಳಲ್ಲಿ ನಗರ ಸಶಸ್ತ್ರ ಮೀಸಲು ಪಡೆ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಬಲವಂತವಾಗಿ ಬಂದ್ ಮಾಡುವುದು, ತೊಂದರೆ ಕೊಟ್ಟರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚನೆಯನ್ನು ಕೊಟ್ಟಿದ್ದಾರೆ. ಒಟ್ಟಿನಲ್ಲಿ ಈ ಬಂದ್ ನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೇಚ್ಛರಿಕೆಗೆ ವಹಿಸುವಂತೆ ಎಲ್ಲ ಜಿಲ್ಲೆಗಳ ಎಸ್‍ಪಿ, ಐಜಿಪಿಗಳು ಮತ್ತು ಕಮೀಷನರೇಟ್ ಗಳಿಗೆ ಸೂಚನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಮತಾ ಬ್ಯಾನರ್ಜಿ ಕನ್ನಡಿಗರಲ್ಲಿ ಕ್ಷಮೆ ಕೋರಬೇಕು: ಸಿಟಿ ರವಿ

    ಮಮತಾ ಬ್ಯಾನರ್ಜಿ ಕನ್ನಡಿಗರಲ್ಲಿ ಕ್ಷಮೆ ಕೋರಬೇಕು: ಸಿಟಿ ರವಿ

    ಬೆಂಗಳೂರು: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರ್ತವ್ಯ ನಿರತ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಗೆ ಅಗೌರವ ಸೂಚಿಸಿದ್ದಕ್ಕೆ ಸಾರ್ವಜನಿಕವಾಗಿ ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಎಂದು ಟ್ವಟ್ಟರ್ ನಲ್ಲಿ ಆಗ್ರಹಿಸಿದ್ದಾರೆ.

    ಸರ್ವಾಧಿಕಾರತ್ವವನ್ನು ಪಶ್ಚಿಮ ಬಂಗಾಳದ ನಿಮ್ಮ ಪಕ್ಷದಲ್ಲಿ ತೋರಿಸಿ, ಕರ್ನಾಟಕದಲ್ಲಿ ಅಲ್ಲ. ನಿಮ್ಮ ಕೈಯಲ್ಲಿ ಕೆಲಸ ಮಾಡುವರಿಗೆ ತಾವು ದೆವ್ವದ ಅಡಿಯಲ್ಲಿದ್ದೇವೆ ಎಂಬುವುದು ಗೊತ್ತಿಲ್ಲ ಎಂದು ಸಿ.ಟಿ.ರವಿ ವ್ಯಂಗ್ಯ ಮಾಡಿದ್ದಾರೆ.

    ಆಗಿದ್ದೇನು?
    ಬುಧವಾರ ಪದಗ್ರಹಣಕ್ಕೆ ಆಗಮಿಸಿದ್ದ ಮಮತಾ ಬ್ಯಾನರ್ಜಿ ಅವರಿಗೆ ಬೆಂಗಳೂರಿನ ಟ್ರಾಫಿಕ್ ಬಿಸಿ ತಟ್ಟಿತ್ತು. ಟ್ರಾಫಿಕ್ ನಲ್ಲಿ ಸಿಲುಕಿದ್ದ ಸಿಎಂ ಸಮಾರಂಭಕ್ಕೆ ತಡವಾಗುತ್ತೆಂದು ಅರಿತು ಕಾರಿನಿಂದ ಇಳಿದು ಕೆಲವು ಮೀಟರ್ ಗಳಷ್ಟು ನಡೆದುಕೊಂಡು ಬಂದ್ರು. ವೇದಿಕೆಯತ್ತ ಆಗಮಿಸುತ್ತಿದ್ದಂತೆ ಎದುರಾದ ಡಿಐಜಿ ನೀಲಮಣಿ ರಾಜು ಮೇಲೆ ಹರಿಹಾಯ್ದರು. ಹಾಗೇ ಮುಂದೆ ನಿಂತಿದ್ದ ಮಾಜಿ ಪ್ರಧಾನಿ ದೇವೇಗೌಡರು ಮತ್ತು ನೂತನ ಸಿಎಂ ಕುಮಾರಸ್ವಾಮಿ ಎದುರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.

  • ರಾಜ್ಯದ ಮೊದಲ ಮಹಿಳಾ ಡಿಜಿಯಾಗಿ ನೀಲಮಣಿ ರಾಜು ಆಯ್ಕೆ

    ರಾಜ್ಯದ ಮೊದಲ ಮಹಿಳಾ ಡಿಜಿಯಾಗಿ ನೀಲಮಣಿ ರಾಜು ಆಯ್ಕೆ

    ಬೆಂಗಳೂರು: ಪೊಲೀಸ್ ಮಹಾ ನಿರ್ದೇಶಕರ ಹುದ್ದೆಗೆ ನೀಲಮಣಿ ರಾಜು ಆಯ್ಕೆ ಆಗಿದ್ದು, ಈ ಮೂಲಕ ಈ ಹುದ್ದೆ ಏರಿದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಪೊಲೀಸ್ ಮಹಾನಿರ್ದೇಶಕ ದತ್ತಾ ಅವರ ಅಧಿಕಾರಾವಧಿ ಇಂದಿಗೆ(ಅಕ್ಟೋಬರ್ 31) ಮುಕ್ತಾಯವಾಗಲಿದ್ದು, ಈ ಹುದ್ದೆಗೆ ಹುದ್ದೆಗೆ ಹಿರಿತನದ ಆಧಾರದಲ್ಲಿ ನೀಲಮಣಿ ರಾಜು ಅವರ ಹೆಸರು ಮುಂದಿದ್ದ ಹಿನ್ನೆಲೆಯಲ್ಲಿ ಸರ್ಕಾರ ಅವರನ್ನೇ ಆಯ್ಕೆ ಮಾಡಿದೆ.

    ಉತ್ತರಾಖಂಡ್ ಮೂಲದ ನೀಲಮಣಿ ರಾಜು ನೀಲಮಣಿ ರಾಜು ಅವರು 1983ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದು 23 ವರ್ಷಗಳ ಕಾಲ ಕೇಂದ್ರ ಸೇವೆಯಲ್ಲಿ ಸೇವೆ ಸಲ್ಲಿಸಿದ್ದರು. ಎಂಎ, ಎಂಬಿಎ, ಎಂ.ಫಿಲ್ ಪದವೀಧರೆಯಾಗಿರುವ ಇವರ ಸೇವಾವಧಿಯು 2020ರ ಜನವರಿ ತಿಂಗಳವರೆಗೆ ಇರಲಿದೆ.

    ಸಂಜೆ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಿರ್ಗಮಿಸುತ್ತಿರುವ ಪೊಲೀಸ್ ಮಹಾ ನಿರ್ದೇಶಕ ರೂಪಕ್ ಕುಮಾರ್ ದತ್ತ ಅವರು ನೀಲಮಣಿ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ.

    ರಾಜ್ಯ ಪೊಲೀಸ್ ಮುಖ್ಯಸ್ಥ ಹುದ್ದೆಗೆ ಹಿರಿಯ ಐಪಿಎಸ್ ಅಧಿಕಾರಿ, ಕನ್ನಡಿಗ ಮೈಸೂರು ಮೂಲದ ಕಿಶೋರ್ ಚಂದ್ರ ಹಾಗೂ ಭ್ರಷ್ಟಾಚಾರ ನಿಗ್ರಹ ದಳ ಮುಖ್ಯಸ್ಥ ಎಂ.ಎನ್ ರೆಡ್ಡಿ ರೇಸ್‍ನಲ್ಲಿದ್ದರು.

  • ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿ ಮಹಿಳಾ ಅಧಿಕಾರಿಗಳಿಗೆ ಸಿಗುತ್ತಾ ಉನ್ನತ ಸ್ಥಾನ?

    ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿ ಮಹಿಳಾ ಅಧಿಕಾರಿಗಳಿಗೆ ಸಿಗುತ್ತಾ ಉನ್ನತ ಸ್ಥಾನ?

    ಬೆಂಗಳೂರು: ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಗಳು ರಾಜ್ಯದ ಉನ್ನತ ಸ್ಥಾನ ಅಲಂಕಾರಿಸುವ ಅವಕಾಶ ಒದಗಿ ಬಂದಿದೆ. ಪೊಲೀಸ್ ಮಹಾ ನಿರ್ದೇಶಕರ ಹುದ್ದೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಮಹಿಳಾ ಅಧಿಕಾರಿಗಳು ನೇಮಕವಾಗುವ ಸಂದರ್ಭ ಬಂದಿದೆ.

    ಪೊಲೀಸ್ ಮಹಾನಿರ್ದೇಶಕ ದತ್ತಾ ಅವರ ಅಧಿಕಾರಾವಧಿ ಈ ತಿಂಗಳ 31ಕ್ಕೆ ಮುಕ್ತಾಯವಾಗಲಿದೆ. ಖಾಲಿಯಾಗಲಿರುವ ಹುದ್ದೆಗೆ ಹಿರಿತನದ ಆಧಾರದಲ್ಲಿ ಮಹಿಳಾ ಐಪಿಎಸ್ ಅಧಿಕಾರಿ ನೀಲಮಣಿ ರಾಜು, ಹಿರಿಯ ಐಪಿಎಸ್ ಅಧಿಕಾರಿಗಳಾದ ಕಿಶೋರ್ ಚಂದ್ರ ಮತ್ತು ಎಂ.ಎನ್.ರೆಡ್ಡಿ ಹೆಸರು ರೇಸ್‍ನಲ್ಲಿದೆ. ಹಿರಿತನದಲ್ಲಿ ನೀಲಮಣಿ ರಾಜು ಅವರೇ ಮುಂದಿದ್ದಾರೆ.

    ಇನ್ನು ಸುಭಾಷ್ ಕುಂಟಿ ಅವರ ಅಧಿಕಾರ ಕೂಡಾ ಈ ತಿಂಗಳು ಅಂತ್ಯವಾಗಲಿದ್ದು, ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಮಹಿಳಾ ಐಎಎಸ್ ಅಧಿಕಾರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಹಾಗೂ ಪಟ್ನಾಯಕ್ ಹೆಸರು ರೇಸ್‍ನಲ್ಲಿದೆ. ಇಲ್ಲೂ ಹಿರಿತನದಲ್ಲಿ ಪಟ್ನಾಯಕ್ ಗಿಂತ ರತ್ನಪ್ರಭಾ ಮುಂದಿದ್ದಾರೆ. ಹೀಗಾಗಿ ಎರಡು ಹುದ್ದೆಗಳಲ್ಲಿ ಹಿರಿತನದಲ್ಲಿ ಮಹಿಳಾ ಅಧಿಕಾರಿಗಳು ಮುಂದಿದ್ದಾರೆ.

    ಹಿರಿಯತನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾಶಸ್ತ್ಯ ನೀಡಿದರೆ ಇದೇ ಮೊದಲ ಬಾರಿಗೆ ರಾಜ್ಯದ ಇತಿಹಾಸದಲ್ಲಿ ಎರಡು ಪ್ರಮುಖ ಹುದ್ದೆಗಳಿಗೆ ಮಹಿಳಾ ಅಧಿಕಾರಿಗಳು ಅಧಿಕಾರ ಪಡೆಯುವ ಕ್ಷಣಗಳಿಗೆ ಸಾಕ್ಷಿಯಾಗಲಿದೆ.

    ಚುನಾವಣೆಯ ಹೊಸ್ತಿಲಲ್ಲಿರುವ ಈ ಸಂದರ್ಭದಲ್ಲಿ ಮಹಿಳಾ ಅಧಿಕಾರಿಗಳಿಗೆ ಪ್ರಮುಖ ಹುದ್ದೆಗಳನ್ನು ನೀಡುವ ಮೂಲಕ ಮಹಿಳಾ ಮತಗಳ ಮೇಲೆ ಸಿದ್ದರಾಮಯ್ಯ ಕಣ್ಣಿಡುವ ಸಾಧ್ಯತೆ ಇದೆ. ಅಂದುಕೊಂಡಂತೆ ಎಲ್ಲವೂ ಆದರೆ ರಾಜ್ಯದಲ್ಲಿ ಪೋಲೀಸ್ ಮಹಾನಿರ್ದೇಶಕರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಹಿಳೆಯರಾಗುತ್ತಾರೆ.