Tag: ನೀರು ಹಂಚಿಕೆ

  • ಕಾವೇರಿ ನನಗೊಬ್ಬನಿಗೆ ಸೇರಿದ್ದಲ್ಲ, ಲೋಕಸಭೆಯಲ್ಲಿ ಚರ್ಚಿಸಿ ಪ್ರಾಧಿಕಾರ ರಚನೆಯಾಗಬೇಕು: ಎಚ್‍ಡಿಡಿ

    ಕಾವೇರಿ ನನಗೊಬ್ಬನಿಗೆ ಸೇರಿದ್ದಲ್ಲ, ಲೋಕಸಭೆಯಲ್ಲಿ ಚರ್ಚಿಸಿ ಪ್ರಾಧಿಕಾರ ರಚನೆಯಾಗಬೇಕು: ಎಚ್‍ಡಿಡಿ

    ಬೆಂಗಳೂರು: ಕಾವೇರಿ ನನಗೊಬ್ಬನಿಗೆ ಸೇರಿದ್ದಲ್ಲ. 35 ತಾಲೂಕಿಗೆ ಸೇರಿದ್ದು. ಹೀಗಾಗಿ ನೀರು ಹಂಚಿಕೆ ವಿಚಾರದ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಸಿ ಪ್ರಾಧಿಕಾರ ರಚನೆ ಮಾಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.

    ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ಮಾತನಾಡಿದ ಅವರು, ಸಂಸತ್ತಿನಲ್ಲಿ ಕಾವೇರಿ ಪ್ರಾಧಿಕಾರದ ಕುರಿತು ಚರ್ಚೆ ಆಗಬೇಕು. ಇತ್ತೀಚೆಗೆ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಕೂಡಾ ಈ ವಿಚಾರವಾಗಿ ಮಾತನಾಡಿದ್ದಾರೆ. ಕಾವೇರಿ ವ್ಯಾಜ್ಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕರ್ನಾಟಕದ ಸಂಸದರಿಗೆ ಮಾಹಿತಿ ನೀಡಲು ಪುಸ್ತಕವೊಂದನ್ನು ಹೊರತರುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿರುವೆ ಎಂದು ಅವರು ಹೇಳಿದರು.

    ಕಾವೇರಿ ವ್ಯಾಜ್ಯಕ್ಕೆ ಸಂಬಂಧಿಸಿದ ಮಾಹಿತಿ, ಚರ್ಚೆ ಮತ್ತು ದಾಖಲೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲು ಹೇಳಿರುವೆ. ನಮ್ಮ ರಾಜ್ಯಕ್ಕೆ ಕಾವೇರಿ ನೀರು ಎಷ್ಟು ಉಳಿಸಲು ಸಾಧ್ಯವೋ ಅಷ್ಟು ಉಳಿಸಲು ನಾನು ಶ್ರಮಿಸುತ್ತೇನೆ ಎಂದು ಹೇಳಿದ ಅವರು, ಉಜಿರೆಯಲ್ಲಿ ಬಜೆಟ್ ಮತ್ತು ರೈತರ ಸಾಲ ಮನ್ನಾ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿ, ಅದೆಲ್ಲವನ್ನು ನಾನು ಈಗ ಮಾತನಾಡುವುದಿಲ್ಲ ಎಂದು ಸಿಟ್ಟು ವ್ಯಕ್ತಪಡಿಸಿದರು.

  • ಕಾವೇರಿ ನೀರು ಹಂಚಿಕೆ ವಿವಾದಕ್ಕೆ ತಾರ್ಕಿಕ ಅಂತ್ಯ – ನಿರ್ವಹಣಾ ಮಂಡಳಿ ಅಧಿಕೃತಗೊಳಿಸಿದ ಕೇಂದ್ರ ಸರ್ಕಾರ

    ಕಾವೇರಿ ನೀರು ಹಂಚಿಕೆ ವಿವಾದಕ್ಕೆ ತಾರ್ಕಿಕ ಅಂತ್ಯ – ನಿರ್ವಹಣಾ ಮಂಡಳಿ ಅಧಿಕೃತಗೊಳಿಸಿದ ಕೇಂದ್ರ ಸರ್ಕಾರ

    ನವದೆಹಲಿ: ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಕಾವೇರಿ ನೀರು ನಿರ್ವಹಣಾ ಸಮಿತಿಯನ್ನು ಭಾರತ ಸರ್ಕಾರದ ಗೆಜೆಟ್ ನಲ್ಲಿ ಅಧಿಕೃತವಾಗಿ ಇಂದು ಸೇರ್ಪಡೆ ಮಾಡಲಾಗಿದೆ. ಕೇಂದ್ರ ಜಲ ಸಂಪನ್ಮೂಲ ಇಲಾಖೆ ಗೆಜೆಟ್ ಸೇರಿಸಲು ಸೂಚಿಸಿದ ಬೆನ್ನೆಲ್ಲೇ ಕೇಂದ್ರ ಸರ್ಕಾರದ ತನ್ನ ಅಧಿಕೃತ ಗೆಜೆಟ್ ಗೆ ಕಾವೇರಿ ನೀರು ನಿರ್ವಹಣಾ ಸಮಿತಿಯನ್ನು ಸೇರ್ಪಡೆ ಮಾಡಿಕೊಂಡಿದೆ. ಈ ಮೂಲಕ ಮೂರು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ನಡುವೆ ಇದ್ದ ಹಗ್ಗ ಜಗ್ಗಾಟಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡಲಾಗಿದೆ.

    ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಫೆಬ್ರವರಿ 16 ರಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ನೀರು ಹಂಚಿಕೆಗೆ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಸುಪ್ರೀಂ ಸೂಚನೆ ಹಿನ್ನೆಲೆ ಅಂತರಾಜ್ಯ ನದಿ ನೀರು ವಿವಾದ 1956 ರ ಕಾಯ್ದೆ ಅನ್ವಯ ಕರಡು ತಯಾರಿಸಿದ್ದ ಕೇಂದ್ರ ಸರ್ಕಾರ ಮೇ ಮೊದಲ ವಾರದಲ್ಲಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿತ್ತು. ಈ ವೇಳೆ ಕೆಲ ಮಾರ್ಪಾಡುಗಳೊಂದಿಗೆ ಒಪ್ಪಿಗೆ ಸೂಚಿಸಿದ್ದ ಸುಪ್ರೀಂ ಕೋರ್ಟ್ ಸಮಿತಿ ಅನುಷ್ಠಾನಕ್ಕೆ ತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

    ಇಂದು ಗೆಜೆಟ್ ಮುದ್ರಣ ವಿಭಾಗದ ಹಿರಿಯ ಜಂಟಿ ಆಯುಕ್ತ ಆರ್ ಕೆ ಕನೋಡಿಯಾ ಭಾರತ ಸರ್ಕಾರಿ ಮುದ್ರಣದ ಮ್ಯಾನೇಜರ್‍ಗೆ ಪ್ರಾಧಿಕಾರ ರಚನೆ ಕುರಿತಾಗಿ ಗ್ಯಾಜೆಟ್ ನಲ್ಲಿ ಪ್ರಕಟಿಸಲು ನಿರ್ದೇಶನ ನೀಡಿದರು. ಅದರಂತೆ ಗೆಜೆಟ್ ಮುದ್ರಣವಾಗಿದ್ದು ಅಧಿಕೃತವಾಗಿ ಕಾವೇರಿ ನೀರು ನಿರ್ವಹಣಾ ಸಮಿತಿ ಕಾರ್ಯನಿರ್ವಹಿಸಲಿದೆ.

    ಸ್ಕೀಂ ಕರಡಿನ ಮುಖ್ಯಾಂಶಗಳೇನು..?

    ಸ್ಕೀಂ ರಚನೆ: ನ್ಯಾಯಮಂಡಳಿ ಆದೇಶ ಮಾರ್ಪಡಿಸಿ ತೀರ್ಪನ ಅನ್ವಯ ಪ್ರಾಧಿಕಾರದ ಸ್ವರೂಪದ ಸ್ಕೀಂ ರಚನೆ ಮಾಡಲಾಗಿದೆ. ಪ್ರಾಧಿಕಾರವು ಕಾವೇರಿ ನೀರಿನ ಸಂಗ್ರಹ, ಹಂಚಿಕೆ ಮತ್ತು ನಿಯಂತ್ರಣ ಕುರಿತು ಗಮನಹರಿಸಲಿದೆ. ಜಲಾಶಯಗಳ ಮೇಲುಸ್ತುವಾರಿ ಹಾಗೂ ನೀರು ಬಿಡುಗಡೆಗೆ ಸಮಿತಿಯ ಸಹಕಾರ ಪಡೆಯಲಿದೆ. ಬಿಳಿಗುಂಡ್ಲು ಮಾಪಕ ಕೇಂದ್ರದ ಮೂಲಕ ನೀರಿನ ಅಳತೆ ಮಾಡುವ ಜವಾಬ್ದಾರಿ ಕೂಡ ಪ್ರಾಧಿಕಾರದ್ದಾಗಿರುತ್ತದೆ. ಪ್ರಾಧಿಕಾರ ತನ್ನ ಸಹಾಯಕ್ಕಾಗಿ ಒಂದು ಅಥವಾ ಎರಡು ಸಮಿತಿ ನೇಮಿಸಿಕೊಳ್ಳುವ ಅಧಿಕಾರ ಹೊಂದಿರುತ್ತದೆ. ನೀರಿನ ಒಳಹರಿವು, ಸಂಗ್ರಹ, ಬಳಕೆ ಮತ್ತು ಬಿಡುಗಡೆ ಕುರಿತಂತೆ ಪ್ರಾಧಿಕಾರವು 10 ದಿನಕ್ಕೊಮ್ಮೆ ಪರಿಶೀಲಿಸಿ, ಸಂಬಂಧಿಸಿದ ರಾಜ್ಯಗಳಿಗೆ ನಿಯಮಿತವಾಗಿ ನೀರನ್ನು ಪಡೆಯಲು ಅವಕಾಶ ನೀಡಲಿದೆ. ಹಂಚಿಕೆಯಾದ ನೀರನ್ನು ಸಂಬಂಧಿಸಿದ ರಾಜ್ಯಗಳಿಗೆ ಕೊಡಿಸಲು ಪ್ರಾಧಿಕಾರವು ಪ್ರಯತ್ನಿಸಲಿದೆ. ಮಳೆ ಕೊರತೆಯನ್ನು ಪರಿಶೀಲಿಸಿ ಅರಿಯಲಿರುವ ಪ್ರಾಧಿಕಾರವು ಕೊರತೆಗೆ ಅನುಗುಣವಾಗಿಯೇ ನೀರು ಹಂಚಲಿದೆ.

    ಮಾಹಿತಿ ಹಂಚಿಕೆ: ಪ್ರಮುಖವಾಗಿ ಆಯಾ ರಾಜ್ಯಗಳ ಬೆಳೆಯ ಪ್ರಮಾಣ, ಬೆಳೆ ಪದ್ಧತಿ, ನೀರಾವರಿ ಅವಲಂಬನೆ ಅರಿತು ಮತ್ತು ಕುಡಿಯುವ ನೀರು ಹಾಗೂ ಕೈಗಾರಿಕೆಗೂ ಮಳೆಯ ಪ್ರಮಾಣ ಆಧರಿಸಿಯೇ ನಿರ್ಧರಿಸಲಿದೆ. ಪ್ರಾಧಿಕಾರವು ಅತ್ಯುತ್ತಮ ಸಂವಹನ ಜಾಲ ರೂಪಿಸಿ ಎಲ್ಲಾ ಅಂಕಿ ಅಂಶಗಳು ಕಣಿವೆ ವ್ಯಾಪ್ತಿಯ ನಾಲ್ಕು ರಾಜ್ಯಗಳಿಗೆ ಲಭ್ಯವಾಗುವಂತೆ ಮಾಡಲಿದೆ. ಇದಕ್ಕಾಗಿ ಕೇಂದ್ರ ಜಲ ಆಯೋಗ ಮತ್ತು ಕೇಂದ್ರ-ರಾಜ್ಯ ಸರ್ಕಾರದ ಸಂಬಂಧಿಸಿದ ಇಲಾಖೆಗಳ ನೆರವು ಪಡೆಯಲಿದೆ.

    ಬೇಡಿಕೆ ಪಟ್ಟಿ: ಕಣಿವೆ ವ್ಯಾಪ್ತಿಯ ರಾಜ್ಯಗಳು ಆಯಾ ವರ್ಷದ ಬೇಡಿಕೆ ಪಟ್ಟಿಯನ್ನು ಜಲವರ್ಷದ ಆರಂಭದಲ್ಲೇ ಪ್ರಾಧಿಕಾರಕ್ಕೆ ನೀಡುವುದು ಕಡ್ಡಾಯ. ಬೇರೆ ಬೇರೆ ಜಲಾನಯನ ಪ್ರದೇಶಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಸುರಿಯುವ ಮಳೆಯ ಪ್ರಮಾಣ ಆಧರಿಸಿ ಬೇಡಿಕೆ ಪಟ್ಟಿ ತಯಾರಿಸುವುದು ಕಡ್ಡಾಯ. ಕಾವೇರಿ ಕಣಿವೆಯಲ್ಲಿ ಕೈಗೊಳ್ಳುವ ಯಾವುದೇ ಕಾಮಗಾರಿಯನ್ನು ಪರಿಶೀಲಿಸುವ ಪ್ರಾಧಿಕಾರ ಹಾಗೂ ಅದರ ಸದಸ್ಯರಿಗೆ ಇರುತ್ತದೆ. ರಾಜ್ಯಗಳು ತೀರ್ಪಿನ ಅನುಷ್ಠಾನಕ್ಕೆ ಸಮ್ಮತಿಸದಿದ್ದರೆ ಮತ್ತೆ ಕೇಂದ್ರ ಸರ್ಕಾರದ ಮೊರೆ ಹೋಗುವುದು. ನೀರಿನ ಸದ್ಬಳಕೆ ಮತ್ತು ಸಂಗ್ರಹ ಕುರಿತಂತೆ ಪ್ರಾಧಿಕಾರವು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡುವ ಅಧಿಕಾರ ಹೊಂದಿದೆ. ಕಾವೇರಿ ಜಲ ನಿಯಂತ್ರಣ ಸಮಿತಿ ಅಗತ್ಯ ಎಂದು ಕಂಡುಬಂದಲ್ಲಿ ಅದನ್ನು ರಚಿಸುವ ಅಧಿಕಾರ ಪ್ರಾಧಿಕಾರಕ್ಕೆ ಇರುತ್ತದೆ.

    ಬೆಳೆ ಪದ್ಧತಿ: ಬೆಳೆಯ ಪದ್ಧತಿಯಲ್ಲಿ ಬದಲಾವಣೆ ಹಾಗೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ನೀರಿನ ನಿಯಮಿತ ಬಳಕೆ ಬಗ್ಗೆ ಪ್ರಾಧಿಕಾರವು ಸಲಹೆ ನೀಡಬೇಕು. ಪ್ರಾಧಿಕಾರವು ಪ್ರತಿವರ್ಷ ಸೆಪ್ಟೆಂಬರ್ 30ರೊಳಗೆ ತನ್ನ ಕಾರ್ಯಚಟುವಟಿಕೆಯನ್ನು ಒಳಗೊಂಡ ಪಟ್ಟಿಯನ್ನು ಕಣಿವೆ ವ್ಯಾಪ್ತಿಯ ನಾಲ್ಕು ರಾಜ್ಯಗಳಿಗೆ ನೀಡಬೇಕು. ಪ್ರಾಧಿಕಾರದಲ್ಲಿ ಇರುವ ಮಾಹಿತಿಯನ್ನು ರಾಜ್ಯಗಳು ಬಯಸಿದಾಗ ಕೊಡಬೇಕು.

    ವೆಚ್ಚ: ನೀರಿನ ಸಂಗ್ರಹ, ಬಳಕೆ, ಬಿಡುಗಡೆ, ಮಾಪನ ಕೇಂದ್ರಗಳ ಅಳವಡಿಕೆಯ ಖರ್ಚು ವೆಚ್ಚವನ್ನು ಆಯಾ ವ್ಯಾಪ್ತಿಯ ರಾಜ್ಯಗಳೇ ಭರಿಸಬೇಕಿದೆ. ಪ್ರಾಧಿಕಾರದ ಸಭೆ ಮತ್ತು ಚಟುವಟಿಕೆಗಳ ಎಲ್ಲಾ ದಾಖಲೆಗಳು ಹಾಗೂ ಲೆಕ್ಕಪತ್ರ ಸಂಗ್ರಹಿಸಿಡಲು ಸೂಕ್ತವಾದ ಕಚೇರಿ ಸ್ಥಾಪಿಸಬೇಕು. ದಾಖಲೆಗಳು ಮತ್ತು ಮಾಪನ ದತ್ತಾಂಶಗಳು ಈ ಕಚೇರಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಲಭ್ಯ ಇರಬೇಕು. ಈ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸಲಿರುವ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಗಳು ನೇಮಕ ಪ್ರಕ್ರಿಯೆ ಕೇಂದ್ರ ಸರ್ಕಾರದ ನಿಯಾಮವಳಿಗಳ ಪ್ರಕಾರ ಆಗಬೇಕು ಹಾಗೂ ಪ್ರಾಧಿಕಾರದ ಕೇಂದ್ರ ಕಚೇರಿಯು ದೆಹಲಿಯಲ್ಲೇ ಇರಬೇಕು ಎಂಬ ಅಂಶಗಳಿವೆ.