Tag: ನೀರಿನ ಬಾಟಲ್

  • ಆಡಿ ಕಾರು ಅಪಘಾತ – ನೀರಿನ ಬಾಟಲ್‍ನಿಂದ 7 ಮಂದಿ ಸಾವು?

    ಆಡಿ ಕಾರು ಅಪಘಾತ – ನೀರಿನ ಬಾಟಲ್‍ನಿಂದ 7 ಮಂದಿ ಸಾವು?

    ಬೆಂಗಳೂರು: ಕೋರಮಂಗಲದ ಮಂಗಳಾ ಕಲ್ಯಾಣ ಮಂಟಪದ ಬಳಿ ನಡೆದ ಭೀಕರ ಕಾರು ಅಪಘಾತಕ್ಕೆ ನೀರಿನ ಬಾಟಲ್ ಸಹ ಕಾರಣವಾಗಿರಬಹುದು ಎಂಬ ಮಾತು ಕೇಳಿ ಬಂದಿದೆ.

    ಹೌದು. ಬೆಂಗಳೂರಿನಲ್ಲಿ ನಡೆದ ಭೀಕರ ಅಪಘಾತಗಳ ಪಟ್ಟಿಗೆ ಈ ಅಪಘಾತ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ವಿವಿಧ ಆಯಾಮಗಳಿಂದ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

     

    ಒಂದು ತಂಡ 7 ಮಂದಿ ಕಾರಿನಲ್ಲಿ ಪ್ರಯಾಣ ಮಾಡುವುದಕ್ಕೂ ಮೊದಲು ಎಲ್ಲೆಲ್ಲಿಗೆ ಹೋಗಿದ್ದರು? ಏನು ಮಾಡಿದ್ದರು ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದರೆ ಇನ್ನೊಂದು ತಂಡ ಆಡಿ ಕಾರು ಇಷ್ಟೊಂದು ವೇಗವಾಗಿ ಹೋಗಲು ಕಾರಿನಲ್ಲೇ ಯಾವುದಾದರೂ ತಾಂತ್ರಿಕ ದೋಷ ಇತ್ತೆ ಎಂಬುದರ ಬಗ್ಗೆ ತನಿಖೆ ಆರಂಭಿಸಿದೆ.

    ಈ ತನಿಖೆಯ ವೇಳೆ ನೀರಿನ ಬಾಟಲ್ ಸಿಕ್ಕಿದೆ. ನೀರಿನ ಬಾಟಲ್ ಕಾರಿನಲ್ಲಿ ಇರುವುದು ಸಾಮಾನ್ಯ. ಆದರೆ ಇಲ್ಲಿ ನೀರಿನ ಬಾಟಲ್ ಈ ಎಲ್ಲಿ ಸಿಕ್ಕಿದೆ ಎನ್ನುವುದು ಮುಖ್ಯವಾಗುತ್ತದೆ. ಈ ಪ್ರಕರಣದಲ್ಲಿ ಕಾಲಿನ ಭಾಗದಲ್ಲಿರುವ ಬ್ರೇಕ್ ಲಿವರ್ ಕೆಳಗಡೆ ವಾಟರ್ ಬಾಟಲ್ ಬಿದ್ದಿತ್ತು. ಇದರಿಂದಾಗಿ ಓವರ್ ಸ್ಪೀಡ್‍ನಲ್ಲಿದ್ದ ಕಾರನ್ನು ನಿಯಂತ್ರಣ ಮಾಡಲು ಸಾಧ್ಯವಾಗದೇ ಇದ್ದಿರಬಹುದು ಎಂದು ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನೂ ಓದಿ : ಕಾರು ಅಪಘಾತಕ್ಕೂ ಮುನ್ನ ಮದ್ಯ ಖರೀದಿಸಿದ್ದ ಇಶಿತಾ, ಬಿಂದು

    ನೀರಿನ ಬಾಟಲ್ ಪೂರ್ಣವಾಗಿ ಭರ್ತಿಯಾಗಿದ್ದರೆ ಬ್ರೇಕ್ ಹಾಕಲು ಸಾಧ್ಯವಾಗುವುದೇ ಇರುವುದಿಲ್ಲ. ಹೀಗಾಗಿ ಆಡಿ ಕಾರು ನಿಯಂತ್ರಣಕ್ಕೆ ಸಿಗದೇ ಮಿತಿ ಮೀರಿದ ವೇಗದಲ್ಲಿ ಸಂಚರಿಸಿ ಈ ದುರ್ಘಟನೆ ಸಂಭವಿಸಿರುವ ಸಾಧ್ಯತೆಯಿದೆ.

    ನೀರಿನ ಬಾಟಲ್ ಮೊದಲೇ ಕೆಳಗೆ ಬಿದ್ದಿತ್ತಾ ಅಥವಾ ಅಪಘಾತದ ರಭಸಕ್ಕೆ ಬಿದ್ದಿದ್ಯಾ ಎನ್ನುವುದು ಗೊತ್ತಿಲ್ಲ. ಆದರೆ ಬ್ರೇಕ್ ಅಡಿಯಲ್ಲೇ ಬಾಟಲ್ ಸಿಕ್ಕಿದ ಹಿನ್ನೆಲೆಯಲ್ಲಿ ಮೊದಲೇ ಬಿದ್ದಿರಬಹುದು ಎನ್ನುವುದು ಪೊಲೀಸರ ಅನುಮಾನ. ಇದನ್ನೂ ಓದಿ : ಮಿಡ್‍ನೈಟ್ ಪಾರ್ಟಿ ಮಾಡಿ ಜಾಲಿ ರೈಡ್? – ಜೊಮಾಟೊ ಡೆಲಿವರಿ ಬಾಯ್ ಜಸ್ಟ್ ಮಿಸ್

  • ಪ್ಲಾಸ್ಟಿಕ್ ವಸ್ತುಗಳಿಗೆ ಮರುಜೀವ- ಮಾದರಿ ಆಯ್ತು ಸರ್ಕಾರಿ ಶಿಕ್ಷಕನ ಕೆಲಸ

    ಪ್ಲಾಸ್ಟಿಕ್ ವಸ್ತುಗಳಿಗೆ ಮರುಜೀವ- ಮಾದರಿ ಆಯ್ತು ಸರ್ಕಾರಿ ಶಿಕ್ಷಕನ ಕೆಲಸ

    ಮಡಿಕೇರಿ: ಸರ್ಕಾರಿ ಶಿಕ್ಷಕರೊಬ್ಬರು ಕೇವಲ ವೃತ್ತಿಗೆ ಸೀಮಿತವಾಗದೆ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ವಸ್ತುಗಳಿಗೆ ಹೊಸ ರೂಪ ನೀಡುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಅವುಗಳನ್ನು ಮರುಬಳಕೆ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡು ಪರಿಸರ ಪ್ರೇಮಿಯಾಗಿ ಇತರರಿಗೆ ಮಾದರಿ ಆಗಿದ್ದಾರೆ.

    ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಮುಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎಸ್.ಸತೀಶ್ ಸರ್ಕಾರಿ ಶಿಕ್ಷಕರಾಗಿ ಪರಿಸರ ಕಾಳಜಿ ಮಾಡುತ್ತಿದ್ದಾರೆ. ಅಡುಗೆ ಎಣ್ಣೆಯ ಕ್ಯಾನ್‍ಗಳು, ನೀರಿನ ಬಾಟಲಿ ಹಾಗೂ ಕಂಫರ್ಟ್ ಡಬ್ಬಗಳನ್ನು ಬಳಸಿಕೊಂಡು ಅವುಗಳನ್ನು ಅಲಂಕಾರಿಕವಾಗಿ ಕತ್ತರಿಸಿ ಹೂ ಕುಂಡಗಳನ್ನು ನಿರ್ಮಿಸಿದ್ದಾರೆ.

    ಅವುಗಳ ಮೇಲೆ ವಿವಿಧ ಚಿತ್ರಗಳನ್ನು ಬಿಡಿಸಿದ್ದು, ನೋಡಲು ಸುಂದರವಾಗಿವೆ. ಅಲ್ಲದೇ ಸಾಮಾನ್ಯ ಹೂ ಕುಂಡಗಳಿಗಿಂತಲೂ ಇವು ಬಾಳಿಕೆಯಿಂದ ಕೂಡಿವೆ. ಕ್ಯಾನ್‍ಗಳನ್ನು ನೆಲದಲ್ಲಿಡುವ ಕುಂಡಗಳಾಗಿ ಮಾತ್ರವಲ್ಲದೇ ಹ್ಯಾಂಗಿಂಗ್ ಪಾಟ್‍ಗಳು, ಗೋಡೆ ಮತ್ತು ಕಂಬಗಳಿಗೆ ವಾಲ್ ಪಾಟ್‍ಗಳನ್ನಾಗಿಯೂ ಬಳಸಬಹುದು.

    ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರು ಒದಗಿಸುವ ಉದ್ದೇಶದಿಂದ, ಹ್ಯಾಂಗಿಂಗ್ ಪಾಟ್‍ನ ಮೇಲೆ ಸುರಿದ ನೀರು ಹೆಚ್ಚಾದರೆ ಒಂದೆಡೆ ಸಂಗ್ರಹವಾಗುವ ಹಾಗೆ ನೀರಿನ ಬಾಟಲಿಗಳ ತಳ ಭಾಗವನ್ನು ಕೊಯ್ದು ಹ್ಯಾಂಗಿಂಗ್ ಪಾಟಿನ ತಳಭಾಗದಲ್ಲಿ ಅಳವಡಿಸಲಾಗಿದೆ. ಇಲ್ಲಿ ಸಂಗ್ರಹವಾದ ನೀರನ್ನು ಪಕ್ಷಿಗಳು ಕುಡಿಯುವಂತೆ ವಿನ್ಯಾಸ ಮಾಡಲಾಗಿದೆ.

  • ಸರ್ಕಾರಿ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಸಂಪೂರ್ಣ ನಿಷೇಧ

    ಸರ್ಕಾರಿ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಸಂಪೂರ್ಣ ನಿಷೇಧ

    ಬೆಂಗಳೂರು: ರಾಜ್ಯ ಸರ್ಕಾರ ಅಧಿಕೃತ ಸಭೆ, ಸಮಾರಂಭಗಳು ಹಾಗೂ ಸರಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್‍ಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸಿದೆ.

    ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ತಕ್ಷಣದಿಂದ ಜಾರಿಗೆ ಬರುವಂತೆ ಸೆ.5 ರಂದು ಆದೇಶವನ್ನು ಪ್ರಕಟಿಸಿದೆ. ರಾಜ್ಯಾದ್ಯಂತ ಸರಕಾರಿ ಸ್ವಾಮ್ಯದ ನಿಗಮ, ಮಂಡಳಿ, ವಿಶ್ವವಿದ್ಯಾಲಯ ಹಾಗೂ ಸರಕಾರಿ ಅನುದಾನದ ಯಾವುದೇ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಾಟಲ್ ಬಳಕೆಯನ್ನು ನಿಷೇಧಿಸಲಾಗಿದೆ.

    ಪ್ಲಾಸ್ಟಿಕ್ ಬಾಟಲ್ ಬದಲಿಗೆ 20 ಲೀಟರ್ ಕ್ಯಾನ್ ಅಥವಾ ಹೆಚ್ಚಿನ ಸಾಮರ್ಥ್ಯದ ಕ್ಯಾನ್‍ಗಳಲ್ಲಿ ಶುದ್ಧೀಕರಿಸಿದ ಕುಡಿಯುವ ನೀರಿನ ವಿತರಣಾ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ.

    ಕಚೇರಿಗಳು, ಸಭೆಗಳು ನಡೆಯುವ ಜಾಗಗಳಲ್ಲಿ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿ ಗಾಜಿನ ಲೋಟ, ಸ್ಟೀಲ್ ಲೋಟ ಅಥವಾ ಪೇಪರ್ ಲೋಟದಲ್ಲಿ ನೀರು ಕುಡಿಯಲು ವ್ಯವಸ್ಥೆ ಮಾಡಬೇಕು. ಇದರಿಂದಾಗಿ ನೀರಿನ ಬಾಟಲಿ ಖರೀದಿಗೆ ಮಾಡುತ್ತಿರುವ ಖರ್ಚು ಕೂಡ ಉಳಿತಾಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv