Tag: ನೀರಿನ ಬಾಟಲಿ

  • ಕನಿಷ್ಠ ಬೆಲೆ ನೀಡಿ ನೀರಿನ ಬಾಟಲಿ ಹಿಂಪಡೆಯಲು ನಿಯಮ ರೂಪಿಸಿ: ಈಶ್ವರ ಖಂಡ್ರೆ

    ಕನಿಷ್ಠ ಬೆಲೆ ನೀಡಿ ನೀರಿನ ಬಾಟಲಿ ಹಿಂಪಡೆಯಲು ನಿಯಮ ರೂಪಿಸಿ: ಈಶ್ವರ ಖಂಡ್ರೆ

    ಬೆಂಗಳೂರು: ನೀರು ಕುಡಿದ ಬಳಿಕ ಪ್ಲಾಸ್ಟಿಕ್ ಬಾಟಲಿಗಳನ್ನು (Plastic Water Bottles) ಎಲ್ಲೆಂದರಲ್ಲಿ ಎಸೆಯುವುದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ (Eshwar Khandre), ನೀರಿನ ಬಾಟಲಿ ಮಾರುವ ಮಳಿಗೆಗಳು ಕಡ್ಡಾಯವಾಗಿ ಖಾಲಿ ನೀರಿನ ಬಾಟಲಿಗೆ ಕನಿಷ್ಠ ಬೆಲೆ ನೀಡಿ ಮರು ಖರೀದಿಸುವಂತೆ ನಿಯಮ ರೂಪಿಸಲು ಸೂಚನೆ ನೀಡಿದ್ದಾರೆ.

    ತತ್ಸಂಬಂಧ ನಿಯಮ ರೂಪಿಸಲು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿರುವ ಅವರು, ಬಾಟಲಿಗಳ ಮೂಲಕ ಕುಡಿಯುವ ನೀರನ್ನು ಮಾರಾಟ ಮಾಡುವ ಕಂಪನಿಗಳಿಗೆ ಆ ಪ್ಲಾಸ್ಟಿಕ್ ಬಾಟಲಿಯ ವೈಜ್ಞಾನಿಕ ವಿಲೇವಾರಿಯ ಜವಾಬ್ದಾರಿಯೂ ಇರುತ್ತದೆ. ಈ ಹಿನ್ನೆಲೆಯಲ್ಲಿ ಖಾಲಿ ಬಾಟಲಿಗಳನ್ನು ಕನಿಷ್ಠ ದರ ನೀಡಿ ಮರಳಿ ಖರೀದಿಸುವಂತೆ ನಿಯಮ ರೂಪಿಸಿದಲ್ಲಿ ಪ್ಲಾಸ್ಟಿಕ್ ಬಾಟಲಿಯ ಹಾವಳಿ ತಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಐಪಿಎಲ್‌ 10 ಸೆಕೆಂಡ್‌ ಜಾಹೀರಾತಿಗೆ ಲಕ್ಷ ಲಕ್ಷ – 4,500 ಕೋಟಿ ಆದಾಯ ನಿರೀಕ್ಷೆಯಲ್ಲಿ ಜಿಯೋಸ್ಟಾರ್‌

    ಮಣ್ಣಲ್ಲಿ ಮಣ್ಣಾಗದ, ನೀರಿನಲ್ಲಿ ಕರಗದ, ಸುಟ್ಟರೆ ಪ್ರಾಣವಾಯುವಿಗೆ ವಿಷಕಾರಿ ಅಂಶಗಳನ್ನು ಸೇರ್ಪಡೆ ಮಾಡುವ ಪ್ಲಾಸ್ಟಿಕ್ ಪ್ರಕೃತಿ ಪರಿಸರಕ್ಕೆ ಅಷ್ಟೇ ಅಲ್ಲದೆ ಜನ, ಜಾನುವಾರಗಳ ಆರೋಗ್ಯಕ್ಕೂ ಮಾರಕವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿರ್ದಿಷ್ಟ ಏಕ ಬಳಕೆ ಪ್ಲಾಸ್ಟಿಕ್ ತಯಾರಿಕೆ, ದಾಸ್ತಾನು, ಮಾರಾಟ, ಬಳಕೆಯನ್ನು ನಿಷೇಧಿಸಿದ್ದು, ರಾಜ್ಯ ಸರ್ಕಾರ ಕೂಡ ಈ ಸಂಬಂಧ ನಿಯಮಗಳನ್ನು ರೂಪಿಸಿದೆ. ಆದಾಗ್ಯೂ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಪರಿಸರಕ್ಕೆ ಹಾನಿ ಆಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: Karnataka Bandh| ಮೈಸೂರಲ್ಲಿ ಪ್ರತಿಭಟನಾಕಾರರು ಪೊಲೀಸರ ವಶಕ್ಕೆ

    ಮೊದಲಿಗೆ ರಸ್ತೆಯ ಬದಿಯಲ್ಲಿ ಎಲ್ಲೆಂದರಲ್ಲಿ ಬಿದ್ದು ಪರಿಸರ ಹಾಳು ಮಾಡುತ್ತಿರುವ, ಖನಿಜಯುಕ್ತ ನೀರಿನ ಬಾಟಲಿಗೆ (Mineral Water Bottles) ಕಡಿವಾಣ ಹಾಕಬೇಕಾಗಿದೆ. ಹೊಸ ನೀರಿನ ಬಾಟಲಿ ಖರೀದಿಸಲು ಬರುವ ಗ್ರಾಹಕರಿಂದ ಬಾಟಲಿ ನೀರು ಮಾರುವ ಚಿಲ್ಲರೆ ಮಳಿಗೆಗಳು ಯಾವುದೇ ಕಂಪನಿಯ ನೀರಿನ ಬಾಟಲಿ ನೀಡಿದರೂ ಅದಕ್ಕೆ ಕನಿಷ್ಠ ಬೆಲೆ ನೀಡಿ/ಅಷ್ಟು ದರ ಕಡಿತ ಮಾಡಿ ಹೊಸ ಬಾಟಲಿ ಮಾರಾಟ ಮಾಡುವಂತೆ ಮತ್ತು ಈ ರೀತಿ ಸಂಗ್ರಹಿಸಲಾದ ಖಾಲಿ ಬಾಟಲಿಗಳನ್ನು ನೀರು ಮಾರಾಟ ಮಾಡುವ ಕಂಪನಿಗಳೇ ಹಿಂಪಡೆದು, ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದನ್ನು ಕಡ್ಡಾಯಗೊಳಿಸಲು ಸೂಚಿಸಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳೇ ನಮ್ಮನೆ ದೇವ್ರು – ಎರಡು ಕೈ ಜೋಡಿಸಿ ಪಾಟಿದಾರ್‌ ಕೃತಜ್ಞತೆ

    ಉತ್ಪಾದಕರ ವಿಸ್ತರಿತ ಜವಾಬ್ದಾರಿಯಂತೆ ಯಾವುದೇ ಉತ್ಪನ್ನವನ್ನು ತಯಾರಿಸುವವರು, ತಮ್ಮ ಉತ್ಪನ್ನಗಳಿಂದ ಪರಿಸರ ಮೇಲಾಗುವ ಪರಿಣಾಮಗಳನ್ನು ಉತ್ಪನ್ನವು ಗ್ರಾಹಕರ ಕೈಸೇರಿದ ನಂತರವೂ ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತಾರೆ. ಈ ಹಿನ್ನೆಲೆಯಲ್ಲಿ ಖಾಲಿ ಬಾಟಲಿಗಳನ್ನು ನೀರು ಮಾರಾಟ ಮಾಡುವ ಕಂಪನಿಗಳೇ ಮರು ಖರೀದಿ ಮಾಡಿ ವಿಲೇವಾರಿ ಮಾಡಿದಲ್ಲಿ ಬೃಹತ್ ಪ್ರಮಾಣದಲ್ಲಿ ಸಂಗ್ರಹವಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಿಸಬಹುದು ಎಂಬುದು ಈಶ್ವರ ಖಂಡ್ರೆ ಅವರ ಅಭಿಮತವಾಗಿದೆ. ಇದನ್ನೂ ಓದಿ: ಕರ್ನಾಟಕ ಬಂದ್ ಎಫೆಕ್ಟ್ – ಸ್ಯಾಟಲೈಟ್, ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆ

  • ನೀರೆಂದು ಭಾವಿಸಿ ಆ್ಯಸಿಡ್ ಕುಡಿದು ಮೃತಪಟ್ಟ 11ರ ಬಾಲಕಿ!

    ನೀರೆಂದು ಭಾವಿಸಿ ಆ್ಯಸಿಡ್ ಕುಡಿದು ಮೃತಪಟ್ಟ 11ರ ಬಾಲಕಿ!

    ನವದೆಹಲಿ: 11 ವರ್ಷದ ಬಾಲಕಿಯೊಬ್ಬಳು ಶಾಲೆಯಲ್ಲಿ ಗೆಳತಿ ತಂದಿದ್ದ ಬಾಟಲ್‍ನಲ್ಲಿ ನೀರು ಕುಡಿದು ಸಾವನ್ನಪ್ಪಿದ್ದು, ಬಾಟಲಿಯಲ್ಲಿ ಆ್ಯಸಿಡ್ ಮಿಶ್ರಿತ ನೀರು ಇತ್ತು ಎಂದು ಪೊಲೀಸರು ಶಂಕಿಸಿದ್ದಾರೆ.

    ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಬಾಲಕಿ ಮೃತಪಟ್ಟಿದ್ದಾಳೆ. ಈಶಾನ್ಯ ದೆಹಲಿಯ ಹರ್ಷ್ ವಿಹಾರ್ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬುಧವಾರದಂದು ವಿದ್ಯಾರ್ಥಿನಿಯೊಬ್ಬಳು ಗೊತ್ತಿಲ್ಲದೆ ಆ್ಯಸಿಡ್ ಮಿಶ್ರಿತ ನೀರು ತುಂಬಿದ್ದ ಬಾಟಲಿಯನ್ನು ಶಾಲೆಗೆ ತಂದಿದ್ದಳು. ಮಧ್ಯಾಹ್ನ ಊಟಕ್ಕೆ ಸಮಯದಲ್ಲಿ ವಿದ್ಯಾರ್ಥಿನಿ ತನ್ನ ಗೆಳತಿಯರ ಜೊತೆ ಕೂತು ಊಟ ಮಾಡುತ್ತಿದ್ದಳು. ಈ ವೇಳೆ ಆಕೆಯ ಗೆಳತಿಯೊಬ್ಬಳು ಈ ಆ್ಯಸಿಡ್ ಮಿಶ್ರಿತ ನೀರನ್ನು ಕುಡಿದಿದ್ದಾಳೆ. ಬಳಿಕ ಒದ್ದಾಡುತ್ತ ನೆಲಕ್ಕೆ ಬಿದ್ದಿದ್ದಾಳೆ.

    ತಕ್ಷಣ ಬಾಲಕಿಯನ್ನು ಶಾಲಾ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

    ಸದ್ಯ ಬಾಲಕಿ ಕುಡಿದ ನೀರಿನ ಬಾಟಲಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿದ್ದು, ನೀರಿನಲ್ಲಿ ಯಾವ ಆ್ಯಸಿಡ್ ಅಂಶವಿತ್ತು ಎಂದು ನಿಖರ ಮಾಹಿತಿ ಲ್ಯಾಬ್ ರಿಪೋರ್ಟ್ ಬಂದ ಮೇಲೆ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜನವರಿ 1ರಿಂದ ನೀವು ಸಿನಿಮಾ ಹಾಲ್‍ಗಳಲ್ಲಿ ನೀರಿನ ಬಾಟಲಿಗೆ ಎಂಆರ್‍ಪಿಗಿಂತ ಹೆಚ್ಚಿನ ಹಣ ಕೊಡ್ಬೇಕಾಗಿಲ್ಲ

    ಜನವರಿ 1ರಿಂದ ನೀವು ಸಿನಿಮಾ ಹಾಲ್‍ಗಳಲ್ಲಿ ನೀರಿನ ಬಾಟಲಿಗೆ ಎಂಆರ್‍ಪಿಗಿಂತ ಹೆಚ್ಚಿನ ಹಣ ಕೊಡ್ಬೇಕಾಗಿಲ್ಲ

    ನವದೆಹಲಿ: ಏರ್‍ಪೋರ್ಟ್, ಮಾಲ್ ಹಾಗೂ ಮಲ್ಟಿಪ್ಲೆಕ್ಸ್‍ಗಳಲ್ಲಿ ನೀರಿನ ಬಾಟಲಿಯನ್ನ ನಿಗದಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗ್ತಿರೋ ಬಗ್ಗೆ ಸಾಕಷ್ಟು ದೂರುಗಳಿವೆ. ಇದೀಗ ಒಂದೇ ಉತ್ಪನ್ನವನ್ನ ಬೇರೆ ಬೇರೆ ಎಂಆರ್‍ಪಿಗಳಲ್ಲಿ ಮಾರಾಟ ಮಾಡದಂತೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದ್ದು ಗ್ರಾಹಕರಿಕೆ ರಿಲೀಫ್ ಸಿಕ್ಕಂತಾಗಿದೆ.

    ಲೀಗಲ್ ಮೆಟ್ರೋಲಜಿ(ಪ್ಯಾಕೇಜ್ಡ್ ಕಮಾಡಿಟೀಸ್) ನಿಯಮ 2011ರ ತಿದ್ದುಪಡಿಯ ಭಾಗವಾಗಿ ಈ ನಿರ್ದೇಶನ ನೀಡಲಾಗಿದ್ದು, 2018ರ ಜನವರಿ 1ರಿಂದ ಜಾರಿಗೆ ಬರಲಿದೆ.

    ಯಾವುದೇ ವ್ಯಕ್ತಿ ಕಾನೂನಿನ ಅಡಿಯಲ್ಲಿ ಅನುಮತಿ ಇಲ್ಲದೆ, ಒಂದೇ ಪ್ಯಾಕೇಜ್ಡ್ ಉತ್ಪನ್ನಕ್ಕೆ ಎರಡೆರೆಡು ಎಂಆರ್‍ಪಿ ಹಾಕುವಂತಿಲ್ಲ ಎಂದು ನಿಯಮದಲ್ಲಿ ಹೇಳಲಾಗಿದೆ. ಅಲ್ಲದೆ ಗ್ರಾಹಕರಿಗೆ ಓದಲು ಸುಲಭವಾಗುವಂತೆ ಎಂಆರ್‍ಪಿ ದರದ ಅಕ್ಷರಗಳು ಹಾಗೂ ಸಂಖ್ಯೆಗಳ ಗಾತ್ರವನ್ನು ದೊಡ್ಡದಾಗಿಸಬೇಕು ಎಂದು ಸರ್ಕಾರ ಆದೇಶಿಸಿದೆ.

    ಚಿತ್ರಮಂದಿರ, ಏರ್ಪೋರ್ಟ್, ಮಾಲ್ ಹಾಗೂ ಇನ್ನಿತರ ಸ್ಥಳಗಳಲ್ಲಿ ಒಂದೇ ಉತ್ಪನ್ನವನ್ನ ಎರಡೆರಡು ಎಂಆರ್‍ಪಿ ಯಲ್ಲಿ ಮಾರಾಟ ಮಾಡ್ತಿದ್ದ ಬಗ್ಗೆ ದೂರುಗಳನ್ನ ನೀಡ್ತಿದ್ದ ಗ್ರಾಹಕರಿಗೆ ಇದರಿಂದ ನೆರವಾಗಲಿದೆ ಎಂದು ಹೇಳಿದೆ.

    ಆದ್ರೆ ಈ ನಿಯಮ ನಮಗೆ ಅನ್ವಯವಾಗುವುದಿಲ್ಲ. ಯಾಕಂದ್ರೆ ಜಿಎಸ್‍ಟಿ ಅಡಿಯಲ್ಲಿ ಇದು ಸಪಲೈಯರ್ ಸರ್ವೀಸ್ ಅಡಿಯಲ್ಲಿ ಬರುತ್ತದೆ ಎಂದು ರೆಸ್ಟೊರೆಂಟ್ ಮಾಲೀಕರು ಹೇಳಿದ್ದಾರೆ. ಹಾಗೂ ಈ ನಿಮಯ ಗ್ರಾಹಕರು ಕೌಂಟರ್‍ಗಳಲ್ಲಿ ಕೊಳ್ಳುವಂತಹ ಚಿಲ್ಲರೆ ವ್ಯಾಪಾರಸ್ಥರಿಗೆ ಅನ್ವಯವಾಗುತ್ತದೆ ಎಂದು ನ್ಯಾಷನಲ್ ರೆಸ್ಟೊರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾದ ಕಾರ್ಯದರ್ಶಿ ರಾಹುಲ್ ಸಿಂಗ್ ಹೇಳಿದ್ದಾರೆ.

    ಇದಲ್ಲದೆ ವೈದ್ಯಕೀಯ ಉಪಕರಣಗಳಾದ ಸ್ಟೆಂಟ್, ವಾಲ್ವ್‍ಗಳು, ಸಿರಿಂಜ್‍ಗಳು ಹಾಗೂ ಶಸ್ತ್ರಚಿಕಿತ್ಸೆಯ ಸಲಕರಣೆಗಳ ಮೇಲೆ ಎಂಆರ್‍ಪಿಯನ್ನು ಹಾಕಬೇಕೆಂದು ಗ್ರಾಹಕ ವ್ಯವಹಾರಗಳ ಇಲಾಖೆ ಆದೇಶಿಸಿದೆ.

  • ನೀರಿನ ಬಾಟಲಿಗೆ 50 ರೂ. ಸ್ವೀಕರಿಸಿದ ಐನಾಕ್ಸ್ ಮಲ್ಟಿಪ್ಲೆಕ್ಸ್ ಗೆ 5,000 ರೂ. ದಂಡ

    ನೀರಿನ ಬಾಟಲಿಗೆ 50 ರೂ. ಸ್ವೀಕರಿಸಿದ ಐನಾಕ್ಸ್ ಮಲ್ಟಿಪ್ಲೆಕ್ಸ್ ಗೆ 5,000 ರೂ. ದಂಡ

    ಹೈದರಾಬಾದ್: ನೀರಿನ ಬಾಟಲಿಗೆ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಸ್ವೀಕರಿಸಿದ್ದಕ್ಕೆ ಹೈದರಾಬಾದ್ ಗ್ರಾಹಕರ ವೇದಿಕೆ ಇಲ್ಲಿನ ಬಂಜಾರಾ ಹಿಲ್ಸ್ ನ ಜಿವಿಕೆ ಮಾಲ್‍ನಲ್ಲಿರುವ ಐನಾಕ್ಸ್ ಮಲ್ಟಿಪ್ಲೆಕ್ಸ್ ಗೆ 5 ಸಾವಿರ ರೂ. ದಂಡ ವಿಧಿಸಿದೆ. ಜೊತೆಗೆ ದೂರುದಾರರಿಗೆ 1 ಸಾವಿರ ರೂ. ಪರಿಹಾರ ನೀಡಬೇಕೆಂದು ಆದೇಶಿಸಿದೆ.

    ವಿಜಯ್ ಗೋಪಾಲ್ ಎಂಬವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬಳಿಕ ಈ ದಂಡ ವಿಧಿಸಲಾಗಿದೆ. ನನ್ನ ಸ್ವಂತ ಬಾಟಲಿಯಲ್ಲಿ ನೀರು ತೆಗೆದುಕೊಂಡು ಹೋಗಲು ಅವಕಾಶ ನೀಡಲಿಲ್ಲ. ಹಾಗೆ ಒಂದು ನೀರಿನ ಬಾಟಲಿಗೆ ಮಲ್ಟಿಪ್ಲೆಕ್ಸ್ ನೊಳಗೆ 50 ರೂ. ತೆಗೆದುಕೊಂಡ್ರು. ಇದೇ ಬಾಟಲಿಗೆ ಹೊರಗಡೆ 20 ರೂ. ಎಂಆರ್‍ಪಿ ಇದೆ ಎಂದು ವಿಜಯ್ ಗ್ರಾಹಕರ ವೇದಿಕೆಗೆ ತಿಳಿಸಿದ್ದರು. ಕಳೆದ ಜೂನ್‍ನಲ್ಲಿ ವಿಜಯ್ ಮಲ್ಟಿಪ್ಲೆಕ್ಸ್ ಗೆ ಭೇಟಿ ನೀಡಿದ್ದು , ಮಾಲ್‍ಗಳು ಗ್ರಾಹಕರಿಂದ ಹೆಚ್ಚಿನ ಹಣ ಪಡೆದು ಜನರನ್ನ ಲೂಟಿ ಮಾಡುತ್ತಿವೆ ಎಂದು ಆರೋಪಿಸಿದ್ದರು.

    ಒಂದೇ ಬಾಟಲಿಗೆ ಎರಡು ಎಂಆರ್‍ಪಿ ಇರಬಾರದು ಎಂಬುದನ್ನು ಸ್ಪಷ್ಟಪಡಿಸಿರುವ ಗ್ರಾಹಕರ ವೇದಿಕೆ, ನಿಗದಿತ ದರಕ್ಕಿಂತ ಹೆಚ್ಚಿನ ಹಣ ಸ್ವೀಕರಿಸದಂತೆ ಐನಾಕ್ಸ್ ಗೆ ಸೂಚಿಸಿದೆ. ಅಲ್ಲದೆ ಗ್ರಾಹಕರಿಗೆ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಥಿಯೇಟರ್ ನಿರ್ವಾಹಕರಿಗೆ ಹೇಳಿದೆ ಎಂದು ವರದಿಯಾಗಿದೆ.

    ಕಳೆದ ತಿಂಗಳಷ್ಟೆ ಹೈದರಾಬಾದ್‍ನ ಶಾಹ್ ಗೌಸ್ ರೆಸ್ಟೊರೆಂಟ್‍ನಲ್ಲಿ ತಂಪು ಪಾನೀಯಕ್ಕೆ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಸ್ವೀಕರಿಸಿದ್ದಕ್ಕೆ 10 ಸಾವಿರ ರೂ. ದಂಡ ವಿಧಿಸಲಾಗಿತ್ತು. ಅಲ್ಲದೆ ಫೆಬ್ರವರಿಯಲ್ಲಿ ಇಲ್ಲಿನ ಬಂಜಾರಾ ಹಿಲ್ಸ್ ನ ಸಾರ್ವಿ ಹೋಟೆಲ್‍ನಲ್ಲಿ 20 ರೂ. ಎಂಆರ್‍ಪಿ ಇದ್ದ ನೀರಿನ ಬಾಟಲಿಗೆ 40 ರೂ. ಸ್ವೀಕರಿಸಿದ್ದಕ್ಕೆ ಹೋಟೆಲ್‍ನವರಿಗೆ 20 ಸಾವಿರ ರೂ ದಂಡ ವಿಧಿಸಲಾಗಿತ್ತು ಎಂದು ವರದಿಯಾಗಿದೆ.

    ವಿಜಯ್ ಗೋಪಾಲ್ ಈ ಹಿಂದೆ ಹೈದರಾಬಾದ್‍ನ ಕಾಚಿಗುಡದಲ್ಲಿ ವೆಂಕಟರಮಣ ಥಿಯೇಟರ್ ಹಾಗೂ ತಾರಕರಾಮ ಥಿಯೇಟರ್‍ನಲ್ಲಿ ಎಂಆರ್‍ಪಿಗಿಂತ ಹೆಚ್ಚಿನ ಬೆಲೆಗೆ ಆಹಾರ ಮಾರಾಟ ಮಾಡಿದ್ದಕ್ಕೆ ದೂರು ದಾಖಲಿಸಿದ್ದರು.

  • ಇನ್ಮುಂದೆ ಹೋಟೆಲ್, ಏರ್‍ಪೋರ್ಟ್, ಮಾಲ್‍ಗಳಲ್ಲಿ ನೀರಿನ ಬಾಟಲಿಗಳಿಗೆ ಎಂಆರ್‍ಪಿ ಹಣವನ್ನು ಮಾತ್ರ ಕೊಡಿ

    ಇನ್ಮುಂದೆ ಹೋಟೆಲ್, ಏರ್‍ಪೋರ್ಟ್, ಮಾಲ್‍ಗಳಲ್ಲಿ ನೀರಿನ ಬಾಟಲಿಗಳಿಗೆ ಎಂಆರ್‍ಪಿ ಹಣವನ್ನು ಮಾತ್ರ ಕೊಡಿ

    ನವದೆಹಲಿ: ಇನ್ಮುಂದೆ ಹೋಟೆಲ್, ಏರ್‍ಪೋರ್ಟ್ ಹಾಗೂ ಮಾಲ್‍ಗಳಲ್ಲಿ ನೀರಿನ ಬಾಟಲಿಗಳು ಒಂದೇ ಬೆಲೆಯಲ್ಲಿ ಲಭ್ಯವಿರಲಿದೆ ಎಂದು ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಾಮ್‍ವಿಲಾಸ್ ಪಾಸ್ವಾನ್ ಹೇಳಿದ್ದಾರೆ.

    ಈ ಬಗ್ಗೆ ಸೋಮವಾರದಂದು ಟ್ವೀಟ್ ಮಾಡಿರೋ ಪಾಸ್ವಾನ್, ವಿವಿಧ ಕಡೆ ನೀರಿನ ಬಾಟಲಿಯನ್ನು ಬೇರೆ ಬೇರೆ ದರಗಳಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಇಲಾಖೆಯಡಿ ಬರುವ ಗ್ರಾಹಕರ ವೇದಿಕೆಗೆ ಅನೇಕ ದೂರುಗಳು ಬರುತ್ತಿವೆ. ಕಂಪೆನಿಗಳು ಒಂದೇ ರೀತಿಯ ಮಿನರಲ್ ವಾಟರ್ ಬಾಟಲಿಗಳನ್ನು ಏರ್‍ಪೋರ್ಟ್ ಮಾಲ್‍ಗಳಂತಹ ವಿವಿಧ ಸ್ಥಳಗಳಲ್ಲಿ ವಿವಿಧ ದರದಲ್ಲಿ ಮಾರಲು ಅವುಗಳ ಮೇಲೆ ಬೇರೆ ಬೇರೆ ಎಂಆರ್‍ಪಿಯನ್ನ ಮುದ್ರಿಸಿವೆ. ಈ ಬಗ್ಗೆ ವಿವರಣೆ ನೀಡುವಂತೆ ಕಂಪೆನಿಗಳಿಗೆ ಇಲಾಖೆ ಸೂಚಿಸಿದೆ ಎಂದು ಹೇಳಿದ್ದಾರೆ.

    ಅಲ್ಲದೆ ಇನ್ಮುಂದೆ ಏರ್‍ಪೋರ್ಟ್, ಮಾಲ್‍ಗಳು ಹಾಗೂ ಹೋಟೆಲ್‍ಗಳಲ್ಲಿ ಮಿನರಲ್ ವಾಟರ್ ಬಾಟಲಿಗಳು ಒಂದೇ ದರದಲ್ಲಿ ಸಿಗಲಿವೆ ಎಂದು ಪಾಸ್ವಾನ್ ಹೇಳಿದ್ದಾರೆ.

    ಕಳೆದ ವರ್ಷ ಅಕ್ಟೋಬರ್‍ನಲ್ಲಿ ಪಾಸ್ವಾನ್, ಏರ್‍ಪೋರ್ಟ್, ಮಲ್ಟಿಪ್ಲೆಕ್ಸ್ ಹಾಗೂ ಹೋಟೆಲ್‍ಗಳಲ್ಲಿ ಎಂಆರ್‍ಪಿಗಿಂತ ಹೆಚ್ಚಿನ ದರದಲ್ಲಿ ತಂಪು ಪಾನೀಯ ಹಾಗು ನೀರಿನ ಬಾಟಲಿಗಳನ್ನು ಮಾರಾಟ ಮಾಡಿದರೆ ಜೈಲು ಶಿಕ್ಷೆ ಹಾಗೂ ದಂಡ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದರು. ಎಂಆರ್‍ಪಿ ಗಿಂತ ಹೆಚ್ಚಿನ ಹಣ ಪಡೆಯುವುದು ಕಾನೂನಿನ ಉಲ್ಲಂಘನೆಯಾಗುತ್ತದೆ. ಆದ್ರೂ ಏರ್‍ಪೋರ್ಟ್, ಮಲ್ಟಿಪ್ಲೆಕ್ಸ್ ಹಾಗೂ ಹೋಟೆಲ್‍ಗಳಲ್ಲಿ ನೀರಿನ ಬಾಟಲಿಗಳನ್ನ ಎಂಆರ್‍ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದು ನಿಲ್ಲಬೇಕು ಎಂದು ಹೇಳಿದ್ದರು.

    ನೀರಿನ ಬಾಟಲಿಗಳನ್ನು ನಿಗದಿತ ದರಕ್ಕಿಂತ ಶೇ.10 ರಿಂದ ಶೇ.20 ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗ್ತಿದೆ. ಕೆಲವೊಮ್ಮೆ ನೀರಿನ ಬಾಟಲಿಗಳ ಮೇಲೆ ಎಂಆರ್‍ಪಿಯನ್ನು ನಮೂದಿಸಿರುವುದಿಲ್ಲ. ಅಲ್ಲದೆ ತಂಪು ಪಾನೀಯವನ್ನು ಹೆಚ್ಚಿನ ಬೆಲೆಗೆ ಮಾರ್ತಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ನಮಗೆ ಎಲ್ಲಾ ರೀತಿಯ ಅಧಿಕಾರವಿದೆ. ಗ್ರಾಹಕರು ಈ ಬಗ್ಗೆ ದೂರು ನೀಡಿದ್ರೆ ಖಂಡಿತ ಕ್ರಮ ತೆಗೆದುಕೊಳ್ಳುತ್ತೇವೆ. ಅವರಿಗೆ ದಂಡ ಹಾಕಲಾಗುತ್ತದೆ. ಅಲ್ಲದೆ ಜೈಲು ಶಿಕ್ಷೆ ಕೂಡ ಇದೆ ಎಂದು ಪಾಸ್ವಾನ್ ಹೇಳಿದ್ದರು.