Tag: ನೀರಾವರಿ ಯೋಜನೆ

  • ರಾಜ್ಯದ ಆರು ನೀರಾವರಿ ಯೋಜನೆಗಳಿಗೆ 11,122.76 ಕೋಟಿ ಅನುದಾನಕ್ಕಾಗಿ ಮನವಿ: ಡಿಸಿಎಂ ಡಿಕೆಶಿ

    ರಾಜ್ಯದ ಆರು ನೀರಾವರಿ ಯೋಜನೆಗಳಿಗೆ 11,122.76 ಕೋಟಿ ಅನುದಾನಕ್ಕಾಗಿ ಮನವಿ: ಡಿಸಿಎಂ ಡಿಕೆಶಿ

    – ಭದ್ರಾ ಮೇಲ್ದಂಡೆ ಯೋಜನೆಗೂ ಪರಿಷ್ಕೃತ ಅನುದಾನ ಕೇಳಿದ್ದೇವೆ

    ನವದೆಹಲಿ: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ಒಟ್ಟು 11,122.76 ಕೋಟಿ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದೇವೆ. ಕುಡಿಯುವ ನೀರಿನ ಉದ್ದೇಶದ ಎತ್ತಿನಹೊಳೆ ಯೋಜನೆಗೆ ಶೇ.25 ರಷ್ಟು ಆರ್ಥಿಕ ಸಹಾಯ, ಕಳಸಾ ಬಂಡೂರಿ ಯೋಜನೆ, ಕೃಷ್ಣಾ ನದಿ ನೀರಿನ ವಿಚಾರವಾಗಿ ಕೇಂದ್ರ ಜಲಶಕ್ತಿ ಹಾಗೂ ಪರಿಸರ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಹೇಳಿದರು.

    ನವದೆಹಲಿಯ ಕರ್ನಾಟಕ ಭವನದಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬುಧವಾರ ಮಾಧ್ಯಮಗೋಷ್ಠಿ ನಡೆಸಿ ದೆಹಲಿ ಪ್ರವಾಸ ಹಾಗೂ ಕೇಂದ್ರ ಸಚಿವರ ಭೇಟಿ ವಿಚಾರವಾಗಿ ಮಾಹಿತಿ ನೀಡಿದರು.

    ಆರು ನೀರಾವರಿ ಯೋಜನೆಗಳಾದ ಸೊನ್ನತಿ ಏತ ನೀರಾವರಿ ಯೋಜನೆಗೆ 804.66 ಕೋಟಿ, ಯುಕೆಪಿಯ ಇಂಡಿ ಶಾಖಾ ಕಾಲುವೆಗೆ 2,666.70 ಕೋಟಿ, ಮಲಪ್ರಭಾ ಕಾಲುವೆ ಮೂರನೇ ಹಂತಕ್ಕೆ 3,000 ಕೋಟಿ, ಘಟಪ್ರಭಾ ಬಲದಂಡೆ ಕಾಲುವೆ ಮತ್ತು ಚಿಕ್ಕೋಡಿ ಶಾಖಾ ನಾಲೆಗೆ 1,444.42 ಕೋಟಿ, ಬೆಣ್ಣೆಹಳ್ಳದ ಪ್ರವಾಹ ನಿಯಂತ್ರಣ ಹಾಗೂ ನಿರ್ವಹಣೆಗಾಗಿ 1,610 ಕೋಟಿ ಸೇರಿದಂತೆ ಒಟ್ಟು 11,122.76 ಕೋಟಿ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದೇವೆ. ಇದರಲ್ಲಿ ಒಂದಕ್ಕೆ ಅನುದಾನ ನೀಡಲಾಗಿದೆ ಎಂಬ ಮಾಹಿತಿ ಬಂದಿದೆ. ಆದರೆ, ನಮಗೆ ಇನ್ನು ಅಧಿಕೃತವಾಗಿ ತಿಳಿಸಿಲ್ಲ ಎಂದು ತಿಳಿಸಿದರು.

    ಎತ್ತಿನಹೊಳೆ ಯೋಜನೆಯನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಎಂದು ಅನುಮೋದಿಸಿ ಶೇ.25 ರಷ್ಟು ಆರ್ಥಿಕ ಸಹಾಯ ನೀಡಬೇಕಾಗಿ ಮನವಿ ಮಾಡಿದ್ದೇನೆ. ಈ ಯೋಜನೆ ಕಾಮಗಾರಿಯನ್ನು ತುಮಕೂರು ಹಾಗೂ ಹಾಸನ ಭಾಗದಲ್ಲಿ ನಿಲ್ಲಿಸಲಾಗಿತ್ತು. ಯೋಜನೆ ಹಾದುಹೋಗುವ ಕಡೆ ಕಂದಾಯ ಭೂಮಿ ಹೊಂದಿದ್ದ ರೈತರಿಗೆ ಪೋಡಿ ವಿತರಣೆ ಮಾಡಿ ಪರಿಹಾರವನ್ನೂ ನೀಡಲಾಗಿತ್ತು ಎಂದರು.

    ಆದರೆ, ತದನಂತರ ಅರಣ್ಯ ಇಲಾಖೆಯವರು ಇದು ನಮ್ಮ ಭೂಮಿ ಎಂದು ತಕರಾರು ತೆಗೆದರು. ಅವರ ಬಳಿ ಸಂಘರ್ಷ ಬೇಡ ಎಂದು ಬದಲಿ ಭೂಮಿ ನೀಡಿದ್ದೇವೆ. ಇದಕ್ಕೆ ಅರಣ್ಯ ಇಲಾಖೆಯವರು ಕ್ಲಿಯರೆನ್ಸ್ ಪ್ರಮಾಣ ಪತ್ರ ನೀಡಬೇಕಿತ್ತು, ಆದರೆ ಮಾಡಿಲ್ಲ. ಕೆಲವು ತಕರಾರುಗಳನ್ನು ಹಾಕಿದ್ದಾರೆ. ಈಗಾಗಲೇ ಕೇಂದ್ರ ಸಚಿವರನ್ನು ಮೂರು ಬಾರಿ ಭೇಟಿ ಮಾಡಲಾಗಿತ್ತು. ಆದರೂ ಇದಕ್ಕೆ ಒಪ್ಪಿಗೆ ಸಿಕ್ಕಿಲ್ಲ. ಕಾಲುವೆ ತೆಗೆದಾಗ ಬರುವ ಮಣ್ಣನ್ನು ಇಲ್ಲಿಯೇ ಹಾಕಲಾಗುತ್ತಿದೆ. ಬದಲಾಗಿ 25 ಕಿಲೋಮೀಟರ್ ದೂರ ಹಾಕಿ ಎಂಬುದು ಅವರ ಪ್ರಮುಖ ತಕರಾರು. ಕೇಂದ್ರ ಸಚಿವರು ಸದ್ಯದಲ್ಲೇ ಇದನ್ನು ಬಗೆಹರಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

    ಖಾತೆಗೆ ಹಣ ಬರುವವರೆಗೂ ಖಾತರಿ ಇಲ್ಲ
    ಭದ್ರಾ ಮೇಲ್ದಂಡೆ ವಿಚಾರವಾಗಿ ಕೇಳಿದಾಗ, ಈ ಬಗ್ಗೆಯೂ ಅನುದಾನ ಕೇಳಿದ್ದೇವೆ. ಕೇಂದ್ರ ಸರ್ಕಾರದಿಂದ ಪರಿಷ್ಕೃತ ಅಂದಾಜು ಪಟ್ಟಿ ಕೇಳಿದ್ದರು, ಅದನ್ನು ಕೂಡ ಸಲ್ಲಿಸಿದ್ದೇವೆ. ಈ ಹಿಂದೆ ಹೇಳಿದ್ದ 5,300 ಕೋಟಿಗಿಂತಲೂ ಹೆಚ್ಚು ಅನುದಾನದ ಪರಿಷ್ಕೃತ ಪಟ್ಟಿ ಕಳುಹಿಸಿದ್ದೇವೆ. ಈಗಾಗಲೇ 10,604 ಕೋಟಿ ಖರ್ಚು ಮಾಡಿದ್ದೇವೆ ಎಂದು ಹೇಳಿದ್ದೇವೆ. ಹಣ ನೀಡುತ್ತೇವೆ ಎಂದು ಹೇಳಿದ್ದಾರೆ. ಹಣ ಸರ್ಕಾರದ ಖಾತೆಗೆ ಬರುವವರೆಗೂ ನಂಬಿಕೆಯಿಲ್ಲ ಎಂದರು.

    ಕಳೆದ ಎರಡು ವರ್ಷದಿಂದ ಅನುದಾನದ ಬಗ್ಗೆ ಹೇಳಿದ್ದನ್ನೇ ಕೇಂದ್ರ ಸರ್ಕಾರ ಹೇಳುತ್ತಿದೆ ಎಂದು ಕೇಳಿದಾಗ, ಇದರ ಬಗ್ಗೆ ಕೇಂದ್ರ ಸರ್ಕಾರವನ್ನೇ ಕೇಳಬೇಕು. ಇದು ರಾಜಕೀಯವೇ? ಕೇಂದ್ರ ಸರ್ಕಾರದ ಬಳಿ ದುಡ್ಡಿಲ್ಲವೇ? ಎಂದು ಕೇಳಬೇಕು. ಯೋಜನೆಗೆ ಎಷ್ಟು ಖರ್ಚಾಗಿದೆ ಎಂದು ಮಾಹಿತಿ ಕೇಳಿದ್ದರು. ಅದನ್ನೂ ಸಹ ನೀಡಲಾಗಿದೆ. ಒಮ್ಮೆ ಮಾತ್ರ ಕ್ಯಾಬಿನೆಟ್ ಬಳಿ ಇದೆ ಎಂದು ಹೇಳಿದ್ದರು ಎಂದು ತಿಳಿಸಿದರು.

    ಡಿಪಿಆರ್ ಸಲ್ಲಿಸಿದ ಮೇಲೆ 5,300 ಕೋಟಿ ಘೋಷಣೆ ಮಾಡಿದ್ದರು. ಈಗ ವಿಳಂಬವಾಗುತ್ತಿರುವುದು ಏಕೆ ಎಂದು ಕೇಳಿದಾಗ, ಏನು ಮಾಡುವುದು ಅಧಿಕಾರಕ್ಕೆ ಕಾಂಗ್ರೆಸ್ ಸರ್ಕಾರ ಬಂದುಬಿಟ್ಟಿತ್ತಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದರು.

    ನಮಗೆ ಸಹಕಾರ ನೀಡಿದರೆ ಗೋವಾದವರಿಗೂ ಸಹಕಾರ
    ಗೋವಾದವರು ನಮ್ಮ ಭಾಗದಲ್ಲಿ ವಿದ್ಯುತ್ ಮಾರ್ಗ ಹಾಕಲು ನಾವು ತಕರಾರು ತೆಗೆದಿದ್ದೇವೆ ಎಂದು ಹೇಳಿದ್ದಾರೆ. ನೀವು ನಮಗೆ ಸಹಕಾರ ನೀಡುವುದಾದರೆ ನಾವು ನಿಮಗೆ ನೀಡುತ್ತೇವೆ ಎಂದು ಹೇಳಿದ್ದೇವೆ. ಒಂದು ವಾರದಲ್ಲಿ ಇದರ ಬಗ್ಗೆ ಕೇಂದ್ರ ಪರಿಸರ ಸಚಿವರು ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದಾರೆ. ಮುಂದಿನ ಸಂಸತ್ ಅಧಿವೇಶನ ನಡೆಯುವುದರ ಒಳಗಾಗಿ ಮತ್ತೆ ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದೇನೆ ಎಂದರು.

    ಕಳಸಾ ಬಂಡೂರಿ ಕಾಮಗಾರಿ ಸಂಬಂಧವಾಗಿ ಬಿಜೆಪಿ ಸರ್ಕಾರವಿದ್ದ ವೇಳೆ ಕೆಲಸ ಮಾಡಬಹುದು ಎಂದು ಹೇಳಿದರು. ಈ ಪ್ರಕಾರವಾಗಿ ನಾವು ಟೆಂಡರ್ ಅನ್ನು ಕೂಡ ಕರೆಯಲಾಯಿತು. ಆದರೆ ಗೋವಾ ಸರ್ಕಾರ 2023ರ ಜ.9 ರಂದು ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಇದಕ್ಕೆ ನಮ್ಮ ಅಧಿಕಾರಿಗಳು ತಕ್ಷಣ ಉತ್ತರ ನೀಡಿ, ‘ನೀವು ಶೋಕಾಸ್ ನೋಟಿಸ್ ನೀಡಲು ಬರುವುದಿಲ್ಲ’ ಎಂದು ಹೇಳಿದ್ದಾರೆ. ಈ ವ್ಯಾಜ್ಯ ನ್ಯಾಯಾಲಯದಲ್ಲಿದೆ ಎಂದರು.

    ಈ ವಿಚಾರವನ್ನು ಕೇಂದ್ರ ಸಚಿವರ ಗಮನಕ್ಕೆ ತಂದು, ‘ಗೋವಾ ಸರ್ಕಾರ ನಮಗೆ ಶೋಕಾಸ್ ನೋಟಿಸ್ ನೀಡಲು ಯಾರು’ ಎಂದು ಕೇಳಿದ್ದೇನೆ. ನಮ್ಮ ಜಾಗದಲ್ಲಿ ನಾವು ಕಾಮಗಾರಿ ನಡೆಸುತ್ತೇವೆ. ನೀವು ಈ ವಿಚಾರವಾಗಿ ಅವರಿಗೆ ತಿಳಿಹೇಳಿ. ಇದರ ಬಗ್ಗೆ ಪ್ರಹ್ಲಾದ್ ಜೋಶಿ ಅವರೂ ಸಹ ಬಂದು ಮಾತನಾಡಿದರು ಎಂದು ಕೇಂದ್ರ ಸಚಿವರು ಹೇಳಿದರು. ಗೋವಾ ತಕರಾರಿನ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ನಮ್ಮ ಅರಣ್ಯ ಭೂಮಿ ಬಗ್ಗೆ ಕೇಂದ್ರ ಸರ್ಕಾರ ನಮ್ಮ ಬಳಿ ಕೇಳುತ್ತದೆ. ಗೋವಾ ನಮಗೆ ಸೂಚನೆ ನೀಡಲು ಯಾರು ಎಂದು ಪುರುಚ್ಚರಿಸಿದರು.

    ಮೇಕೆದಾಟು ವಿಚಾರವಾಗಿ ಅಪ್ರೇಸಲ್ ವರದಿಯನ್ನು ಕೇಂದ್ರ ಸರ್ಕಾರ ನೀಡಬೇಕು. ಸಿಡ್ಬ್ಯೂಸಿಗೆ ಅಪ್ರೇಸಲ್ ವರದಿ ನೀಡಿ ಡಿಪಿಆರ್‌ಗೆ ಅನುಮತಿ ನೀಡಬೇಕು ಎಂದು ಹೇಳಿದ್ದೇನೆ. ಸಿಡ್ಬ್ಯೂಎಂಎ ಅವಾರ್ಡ್ ಅನ್ನು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರವೇ ಮಾಡಿ ನೀಡಿದ್ದೇವೆ. ನೀವು ನ್ಯಾಯಾಲಯಕ್ಕೆ ಏನು ಬೇಕಾದರೂ ವರದಿ ನೀಡಿ. ನ್ಯಾಯಲಯ ತನ್ನ ತೀರ್ಮಾನ ತಿಳಿಸಲಿ ಎಂದು ಹೇಳಿದ್ದೇವೆ. ನಮಗಿಂತ ಹೆಚ್ಚು ತಮಿಳುನಾಡಿಗೆ ಉಪಯೋಗ ಎಂದು ತಿಳಿಸಿದ್ದೇವೆ. ಇದರ ಬಗ್ಗೆ ಅವರನ್ನು ಕರೆಸಿ ಮಾತನಾಡುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ ಎಂದರು.

    ಕೃಷ್ಣಾ ನದಿ ನೀರಿನ ವಿಚಾರವಾಗಿ ಸಭೆಯ ದಿನಾಂಕ ನಿಗದಿಯಾಗಿತ್ತು. ಆದರೆ ಇದ್ದಕ್ಕಿದ್ದಂತೆ ಸಭೆ ರದ್ದಾಯಿತು. ಜುಲೈ ತಿಂಗಳಿನಲ್ಲಿಯೇ ಮತ್ತೊಮ್ಮೆ ಸಭೆ ಕರೆಯುವುದಾಗಿ ಜಲಶಕ್ತಿ ಸಚಿವರು ತಿಳಿಸಿದ್ದಾರೆ. ಏಕೆಂದರೆ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳದ ಬಗ್ಗೆ ತೀರ್ಮಾನವಾಗಿದ್ದರೂ 10 ವರ್ಷದಿಂದ ನಮ್ಮ ಪಾಲಿನ ನೀರು ಸಿಗದೇ ಕಾಯುತ್ತಿದ್ದೇವೆ. 1.40 ಲಕ್ಷ ಎಕರೆಗೆ ನೀರಾವರಿ ನೀಡಲು ನಾವು ತಯಾರಿ ಮಾಡಿಕೊಂಡಿದ್ದೇವೆ. ಇದರ ಬಗ್ಗೆ ಒಪ್ಪಂದವೂ ಆಗಿದೆ. ಕೇಂದ್ರದಿಂದ ಗೆಜೆಟ್ ನೋಟಿಫಿಕೇಷನ್ ಮಾತ್ರ ಆಗಬೇಕು. ನಮ್ಮ ನೀರನ್ನು ಬಳಸಿಕೊಳ್ಳುವುದಕ್ಕೆ ಮಹಾರಾಷ್ಟ್ರ ಏಕೆ ತಕರಾರು ಹಾಕಬೇಕು. ಮಹಾರಾಷ್ಟ್ರ, ಆಂಧ್ರ, ತೆಲಂಗಾಣವನ್ನು ಕರೆದು ಮಾತನಾಡಬೇಕು ಎಂದು ಹೇಳಿದ್ದೇನೆ. ಇದರ ಬಗ್ಗೆ ಸಭೆಯನ್ನು ಸಂಸತ್ ಅಧಿವೇಶನದ ಒಳಗಾಗಿ ಕರೆಯುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ. ಕೇಂದ್ರ ಸಚಿವರು, ಸಂಸದರಿಗೆ ಈ ವಿಚಾರವಾಗಿ ಒತ್ತಡ ಏರಬೇಕು ಎಂದು ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದರು.

    ಕೇಂದ್ರ ಸಚಿವರನ್ನು ಭೇಟಿ ಮಾಡುವ ವೇಳೆ ಇದೇ ವೇಳೆ ಜೊತೆಯಲ್ಲಿ ಕೇಂದ್ರ ಸಚಿವರಾದ ಸೋಮಣ್ಣ ಅವರು ಸಹ ಇದ್ದರು. ಪ್ರಹ್ಲಾದ್ ಜೋಶಿ ಅವರನ್ನೂ ಭೇಟಿ ಮಾಡಲಾಯಿತು ಎಂದು ಹೇಳಿದರು.

  • ನೀರಾವರಿ ಯೋಜನೆಗಳಿಗೆ ಅನುಮತಿ ನೀಡಲು ಸಿಎಂ ಮನವಿ

    ನೀರಾವರಿ ಯೋಜನೆಗಳಿಗೆ ಅನುಮತಿ ನೀಡಲು ಸಿಎಂ ಮನವಿ

    ನವದೆಹಲಿ: ಕೇಂದ್ರ ಸರ್ಕಾರದ ಅನುಮತಿಗಾಗಿ ಬಾಕಿ ಉಳಿದಿರುವ ಮೇಕೆದಾಟು ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳ (Mekedatu and Upper Bhadra projects) ಅನುಷ್ಠಾನದ ಕುರಿತು ಗಮನ ಹರಿಸಬೇಕು ಎಂದು ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್‌ ಅವರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಮನವಿ ಮಾಡಿದ್ದಾರೆ.

    ದೆಹಲಿಯಲ್ಲಿ ಈ ಬಗ್ಗೆ ಮನವಿ ಮಾಡಿದ ಅವರು, ಕರ್ನಾಟಕ ರಾಜ್ಯದ ಬಾಕಿಯಿರುವ ಎಲ್ಲಾ ನೀರಾವರಿ ಯೋಜನೆಗಳಿಗೆ/ಪ್ರಸ್ತಾವನೆಗಳಿಗೆ ಅನುಮತಿ/ಕ್ಲಿಯರೆನ್ಸ್‌ ನೀಡಲು ಜಲಶಕ್ತಿ ಸಚಿವಾಲಯಕ್ಕೆ ತಾವು ನಿರ್ದೇಶನ ನೀಡಬೇಕು. ಈ ಯೋಜನೆಗಳು ರಾಜ್ಯದ ನೀರಾವರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆ ಮೂಲಕ ರೈತರ (Farmers) ಕಲ್ಯಾಣಕ್ಕೆ ನೆರವಾಗಲಿದೆ ಎಂದು ಹೇಳಿದರು. ಇದನ್ನೂ ಓದಿ:  ರಾಹುಲ್ ಗಾಂಧಿ ಜೊತೆ ಸಿದ್ದರಾಮಯ್ಯ ಚರ್ಚೆ – ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಲು ತೀರ್ಮಾನ

    ದೇಶದಲ್ಲೇ ರಾಜಸ್ಥಾನ ಹೊರತುಪಡಿಸಿದರೆ ಕರ್ನಾಟಕ ಅತಿ ಹೆಚ್ಚು ಒಣ ಭೂಮಿ ಹೊಂದಿರುವ ರಾಜ್ಯವಾಗಿದೆ. ಕರ್ನಾಟಕದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಹಾಗೂ ಅನುಷ್ಠಾನಗೊಳಿಸಲಾಗಿರುವ ನೀರಾವರಿ ಯೋಜನೆಗಳು ರಾಜ್ಯದ ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಿಗೆ ಕಾರಣವಾಗಿವೆ. ಇದನ್ನೂ ಓದಿ: ಬಿಜೆಪಿ ಕಾಲದ ಬೆಲೆ ಏರಿಕೆ ಬಗ್ಗೆ ಏಕೆ ಪ್ರತಿಭಟನೆ ಮಾಡುತ್ತಿಲ್ಲ? – ಡಿಕೆಶಿ

    ಉತ್ಪಾದನೆಯಲ್ಲಿನ ಹೆಚ್ಚಳ, ಆಧುನಿಕ ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ನೀರಿನ ನಿರ್ವಹಣೆಯಲ್ಲಿ ಸುಧಾರಣೆ, ಹವಾಮಾನ ವೈಪರೀತ್ಯದ ನಿರ್ವಹಣೆ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ. ರಾಜ್ಯ ಸರ್ಕಾರ ಕೃಷಿ ಉತ್ಪಾದನೆ ಹೆಚ್ಚಳ, ರೈತರ ಆದಾಯ ಹೆಚ್ಚಳ ಮಾಡಲು ಪೂರಕವಾಗಿ ನಿರಂತರ ಮತ್ತು ಸಮರ್ಪಕ ನೀರಾವರಿ ಪೂರೈಕೆಗೆ ಬದ್ಧವಾಗಿದೆ. ಹೀಗಾಗಿ ಕರ್ನಾಟಕ ರಾಜ್ಯದ ನೀರಾವರಿ ಯೋಜನೆ/ವಿಷಯಗಳಿಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

  • ಎತ್ತಿನಹೊಳೆ ಯೋಜನೆಗೆ ಮತ್ತಷ್ಟು ಹಣ ಬಿಡುಗಡೆ ಮಾಡಲು ಮುಂದಾದ ಸರ್ಕಾರ

    ಎತ್ತಿನಹೊಳೆ ಯೋಜನೆಗೆ ಮತ್ತಷ್ಟು ಹಣ ಬಿಡುಗಡೆ ಮಾಡಲು ಮುಂದಾದ ಸರ್ಕಾರ

    ಬೆಂಗಳೂರು: ಬಯಲು ಸೀಮೆ ಮಂದಿಗೆ ನೀರು ಒದಗಿಸುವ ಎತ್ತಿನಹೊಳೆ ಯೋಜನೆ(Yetthinahole Drinking Water Project) ಕಾಮಗಾರಿ ಆರಂಭವಾಗಿ ಶುರುವಾಗಿ 10 ವರ್ಷ ಕಳೆದಿದೆ. ಆದರೆ ಇದು ಪೂರ್ಣಗೊಳ್ಳುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಆದರೆ ಈ ಯೋಜನೆ ಪೂರ್ಣಗೊಳಿಸಲು ಮತ್ತಷ್ಟು ಹಣ ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರ(Karnataka Government) ಮುಂದಾಗಿದೆ.

    ಕುಂಟುತ್ತಾ ನಡೆಯುತ್ತಿರುವ ಈ ಯೋಜನೆಯ ಶೇ.50ರಷ್ಟು ಕಾಮಗಾರಿ ಇಲ್ಲಿಯವರೆಗೆ ಪೂರ್ಣಗೊಂಡಿಲ್ಲ. ಯೋಜನೆಯ ಮೂಲ ವೆಚ್ಚ 8ಸಾವಿರ ಕೋಟಿ ರೂ. ಆಗಿತ್ತು. ನಂತರ ಇದನ್ನು 13ಸಾವಿರ ಕೋಟಿ ರೂ.ಗೆ ಹೆಚ್ಚಿಸಲಾಗಿತ್ತು. ಆದರೆ ಈ ಮೊತ್ತವೂ ಈಗ ಸಾಕಾಗುತ್ತಿಲ್ಲವಂತೆ. ಹೀಗಾಗಿ ಈ ಯೋಜನೆಗೆ ಮತ್ತೆ ಅನುದಾನ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದೆ.
    ಇದನ್ನೂ ಓದಿ: ಬೆಂಗಳೂರಿನಲ್ಲಿ ಇಮ್ರಾನ್ ಖಾನ್ ಪುಸ್ತಕ ಬಿಡುಗಡೆಗೆ ವಿರೋಧ – ಹಿಂದೂ ಸಂಘಟನೆ ದೂರು, ಕಾರ್ಯಕ್ರಮ ರದ್ದು

    ಈಗ ಎತ್ತಿನ ಹೊಳೆ ಯೋಜನೆಗೆ ಹೊಸ ಹಣಕಾಸು ಪ್ರಸ್ತಾವನೆ ಸಿದ್ದಪಡಿಸಲಾಗಿದೆ. ಯೋಜನೆ ಮುಗಿಸಲು 23,251 ಕೋಟಿ ರೂ. ಬೇಕಾಗುತ್ತದೆ. ಅನುಮತಿ ನೀಡಿ ಎಂದು ಆರ್ಥಿಕ ಇಲಾಖೆಗೆ ಕಡತ ರವಾನಿಸಿದೆ. ಮೂಲಗಳ ಪ್ರಕಾರ ಈ ಮೊತ್ತ ಕೂಡ ಸಾಕಾಗುವುದು ಅನುಮಾನ. ಇದನ್ನು 25 ಸಾವಿರ ಕೋಟಿಗೆ ಹಿಗ್ಗಿಸುವ ಪ್ರಯತ್ನಗಳು ಕೂಡ ನಡೆಯುತ್ತಿದೆ.

    ಸರ್ಕಾರದ ಹೊಸ ಲೆಕ್ಕದ ಪ್ರಕಾರ 1 ಟಿಎಂಸಿ ನೀರನ್ನು ಪಶ್ಚಿಮಘಟ್ಟಗಳಿಂದ ಬಯಲು ಸೀಮೆಗೆ ತರಲು 1 ಸಾವಿರ ಕೋಟಿ ಹಣ ಖರ್ಚಾಗುತ್ತಿದೆ. ಇಂತಹ ದುಬಾರಿ ಯೋಜನೆ ಜನರಿಗೆ ಬೇಕಾ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮಯ್ಯ ಜೊತೆ ಜಗಳಕ್ಕೆ ಹೋಗಲು ನನಗೆ ಬೇರೆ ಕೆಲಸ ಇಲ್ಲವೇ?: ಹೆಚ್‍ಡಿಕೆ

    ಸಿದ್ದರಾಮಯ್ಯ ಜೊತೆ ಜಗಳಕ್ಕೆ ಹೋಗಲು ನನಗೆ ಬೇರೆ ಕೆಲಸ ಇಲ್ಲವೇ?: ಹೆಚ್‍ಡಿಕೆ

    – ಮುಸ್ಲಿಂ ಅಭ್ಯರ್ಥಿ ವಿವಾದ ಆರಂಭಿಸಿದ್ದೇ ಸಿದ್ದರಾಮಯ್ಯ

    ಕಲಬುರಗಿ: ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗಲು ನನಗೇನು ಬೇರೆ ಕೆಲಸ ಇಲ್ಲವೇ? ಮುಸ್ಲಿಂ ಅಭ್ಯರ್ಥಿಗಳ ರಾಜಕೀಯ ವಿವಾದ ಶುರು ಮಾಡಿದ್ದು ಯಾರು? ಅವರೇ ಅಲ್ಲವೇ ಎಂದು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದರು.

    ಸಿಂಧಗಿ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ತೆರಳಲು ಇಂದು ಬೆಳಗ್ಗೆ ಕಲಬುರಗಿಗೆ ಆಗಮಿಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಹಾನಗಲ್ ಮತ್ತು ಸಿಂಧಗಿಯಲ್ಲಿ ಜೆಡಿಎಸ್ ಪಕ್ಷ ಇಬ್ಬರು ಸುಶಿಕ್ಷಿತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಆದರೆ, ಜೆಡಿಎಸ್ ಸೆಕ್ಯುಲರ್ ಮತಗಳನ್ನು ವಿಭಜಿಸಿ ಬಿಜೆಪಿಗೆ ಗೆಲ್ಲಲು ಅವಕಾಶ ಮಾಡಿಕೊಡಲು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ ಎಂದು ಸಿದ್ದರಾಮಯ್ಯ ಮೊದಲು ಹುಯಿಲೆಬ್ಬಿಸಿದರು. ಅನಗತ್ಯ ವಿವಾದವನ್ನು ಸೃಷ್ಟಿಸಿ ಗೊಂದಲ ಆರಂಭ ಮಾಡಿದ್ದಾರೆ. ಬಹುಶಃ ಅದಕ್ಕೆ ನಾನೇ ಅಂತ್ಯ ಹಾಡಬೇಕಾಗುತ್ತದೆ. ಅಂತಹ ಸ್ಥಿತಿಗೆ ನನ್ನನ್ನು ದೂಡಿದ್ದಾರೆ ಎಂದು ಮಾರ್ಮಿಕವಾಗಿ ತಿಳಿಸಿದರು. ಇದನ್ನೂ ಓದಿ: ಕಾಲಿನಿಂದ ತಲೆವರೆಗೂ ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ: ರಣದೀಪ್ ಸಿಂಗ್ ಸುರ್ಜೇವಾಲಾ

    ಕಾಂಗ್ರೆಸ್ ಪಕ್ಷವೇ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬಹುದಾಗಿತ್ತಲ್ಲವೇ? ಅದನ್ನು ಮಾಡದೇ ಜೆಡಿಎಸ್ ಟಿಕೆಟ್ ಕೊಟ್ಟಿತು ಅಂತ ಕೊರಗುವುದು ಏಕೆ? ಎಂದು ಪ್ರಶ್ನಿಸಿದ ಅವರು, ಸಿಂಧಗಿಯಲ್ಲಿ ನಮ್ಮ ಪಕ್ಷದ ನಿಷ್ಠಾವಂತ ಕುಟುಂಬಕ್ಕೆ ಟಿಕೆಟ್ ಕೊಟ್ಟಿದ್ದೇವೆ. ಪಕ್ಷದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಮರಣ ಹೊಂದಿದ ನಾಯಕರ ಕುಟುಂಬದ ಹೆಣ್ಣು ಮಗಳು ನಾಜಿಯಾ ಶಕೀಲಾ ಅಂಗಡಿ ಅವರಿಗೆ ಟಿಕೆಟ್ ನೀಡಿದ್ದೇವೆ ಎಂದು ತಿಳಿಸಿದರು

    ಟಿಕೆಟ್ ಬಗ್ಗೆ ಕಾಂಗ್ರೆಸ್‍ಗೆ ಸಂಕಟವೇಕೆ? ಕ್ಷೇತ್ರದಲ್ಲಿ ಪೈಪೋಟಿ ಇರುವುದು ಜೆಡಿಎಸ್-ಬಿಜೆಪಿ ನಡುವೆ ಮಾತ್ರ. ಯಾವ ಚುನಾವಣೆಯ್ಲಲೂ ಕಾಂಗ್ರೆಸ್ ಎರಡನೇ ಸ್ಥಾನಕ್ಕೂ ಬಂದಿರಲಿಲ್ಲ. ಹಾಗಿದ್ದ ಮೇಲೆ ಜೆಡಿಎಸ್ ವಿರುದ್ಧ ಅಪಪ್ರಚಾರ ಮಾಡುವುದೇಕೆ? ಎಂದು ಕಿಡಿಕಾರಿದರು.

    ನಾನು ಯಾವುದೇ ಕಾರಣಕ್ಕೂ ಅವರ ತಂಟೆಗೆ ಹೋಗುವುದಿಲ್ಲ, ಅವರೇ ಪದೇಪದೇ ನಮ್ಮ ಸುದ್ದಿಗೆ ಬರುತ್ತಿದ್ದಾರೆ. ನಮಗೆ ಮಾಡಲು ಸಾಕಷ್ಟು ಕೆಲಸಗಳಿವೆ, ಹೇಳಲು ಅನೇಕ ವಿಚಾರಗಳಿವೆ. ಜನರ ಬಳಿ ಮತ ಕೇಳಲು ನಮ್ಮಲ್ಲಿ ಜನರಿಗಾಗಿ ಮಾಡಿದ ಸೇವೆ ಇದೆ. ಕಾಂಗ್ರೆಸ್ ಪಕ್ಷದ ಹೆಸರೇಳಿಕೊಂಡು ಮತ ಕೇಳಬೇಕಾದ ಕರ್ಮ ನಮಗಿಲ್ಲ. ಆದರೆ ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ಹೆಸರೇಳಿಕೊಂಡೇ ಮತಯಾಚನೆ ಮಾಡುತ್ತಿದ್ದಾರೆಂದು ತರಾಟೆಗೆ ತೆಗೆದುಕೊಂಡರು.

    ನೀರಾವರಿ ಯೋಜನೆ

    ನಾಗಠಾಣ ಮತ್ತು ಇಂಡಿ ವಿಧಾನಸಭೆ ಕ್ಷೇತ್ರದ ಸುಮಾರು 28,000 ಹೆಕ್ಟೇರ್ ಭೂಮಿಗೆ ನೀರೊದಗಿಸುವ ಯೋಜನೆಗೆ ನಾನು ಸಿಎಂ ಆಗಿದ್ದಾಗ ರೇವಣಸಿದ್ದೇಶ್ವರ ವೃದ್ಧಿ ಯೋಜನೆ ಅಡಿಯಲ್ಲಿ ಬಜೆಟ್ ಮೂಲಕವೇ 250 ಕೋಟಿ ರೂ.ಗಳನ್ನು ಮೀಸಲಿರಿಸಿದ್ದೆ. ಆದರೆ, ಬಿಜೆಪಿ ಸರ್ಕಾರ ಅದಕ್ಕೆ ತಡೆಯೊಡ್ಡಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ತಿಂಡಿ ಪ್ರಿಯರಿಗೆ ಹೊಸದಾಗಿ ಸೇರ್ಪಡೆಯಾಯಿತು ಬಾಹುಬಲಿ ಗೋಲ್ಡ್ ಮೊಮೊ

    ಯೋಜನೆಗೆ ಬಿಜೆಪಿ ಸರ್ಕಾರ ತಡೆಯೊಡ್ಡಿದ್ದನ್ನು ಪ್ರತಿಭಟಿಸಿ ಆ ಭಾಗದ ರೈತರು ಕಳೆದ 40 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಕೆಲ ದಿನದ ಹಿಂದೆ ಮಾಜಿ ಪ್ರಧಾನಮಂತ್ರಿಗಳಾದ ಹೆಚ್ ಡಿ ದೇವೇಗೌಡರು ಅಲ್ಲಿನ ರೈತರನ್ನು ಭೇಟಿಯಾಗಿ ಅವರ ಬೇಡಿಕೆಗೆ ದನಿಗೂಡಿಸಿದ್ದಾರೆ. ನಿಮ್ಮ ಪ್ರತಿಭಟನೆಯನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಯೋಜನೆ ಕಾರ್ಯಗತ ಮಾಡುವ ನಿಟ್ಟಿನಲ್ಲಿ ನಿಮ್ಮ ಜತೆ ನಿಂತು ಹೋರಾಟ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

    ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಮಾತನಾಡಲು ವಿಷಯವೇ ಇಲ್ಲ. ನಮಗೆ ಆ ರೀತಿಯ ಕೊರತೆ ಇಲ್ಲ. ಸಿಂಧಗಿ ವಿಧಾನಸಭೆ ಕ್ಷೇತ್ರಕ್ಕೆ ನಾನು ಮತ್ತು ನಮ್ಮ ತಂದೆಯವರು ಕೊಟ್ಟ ನೀರಾವರಿ ಯೋಜನೆಗಳು ಇನ್ನಿತರೆ ಕಾರ್ಯಕ್ರಮಗಳ ಮೂಲಕ ಜನರ ಮುಂದೆ ಹೋಗುತ್ತೇವೆ ಎಂದು ಹೇಳಿದರು.

  • ಮುಂದುವರಿದ ಶಶಿಕಲಾ ಜೊಲ್ಲೆಯವರ ಮರಾಠಿ ಭಾಷಾ ಪ್ರೇಮ – ಕನ್ನಡಿಗರು ಆಕ್ರೋಶ

    ಮುಂದುವರಿದ ಶಶಿಕಲಾ ಜೊಲ್ಲೆಯವರ ಮರಾಠಿ ಭಾಷಾ ಪ್ರೇಮ – ಕನ್ನಡಿಗರು ಆಕ್ರೋಶ

    -ಕನ್ನಡ ನಿರ್ಲಕ್ಷ್ಯಸಿದ ಸಚಿವರ ವಿರುದ್ದ ಕನ್ನಡಾಭಿಮಾನಿಗಳ ಆಕ್ರೋಶ

    ಚಿಕ್ಕೋಡಿ: ಕರ್ನಾಟಕದ ಸಚಿವೆಯಾಗಿದ್ದರೂ, ತಮ್ಮ ಕ್ಷೇತ್ರದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅವರು ಮರಾಠಿ ಪ್ರೇಮವನ್ನು ಮತ್ತೆ ಮುಂದುವರೆಸಿದ್ದಾರೆ.

    ನಿಪ್ಪಾಣಿ ಮತಕ್ಷೇತ್ರದ ಸೌಂದಲಗಾ ಗ್ರಾಮದಲ್ಲಿ ಏತ ನೀರಾವರಿ ಉದ್ಘಾಟನೆ ಸಂದರ್ಭದಲ್ಲಿ ಸಂಪೂರ್ಣವಾಗಿ ಮರಾಠಿ ಭಾಷೆಯಲ್ಲಿ ಬ್ಯಾನರ್ ಅಳವಡಿಸಿದ್ದ ಸಮಾರಂಭದಲ್ಲಿ ಶಶಿಕಲಾ ಜೊಲ್ಲೆ ಅವರು ಭಾಗಿಯಾಗುವುದರ ಜೊತೆಗೆ ಮರಾಠಿ ಭಾಷೆಯ ಪ್ರೇಮವನ್ನು ಎತ್ತಿ ತೋರಿಸಿದ್ದಾರೆ.

    ಬೆಳಗಾವಿ ಜಿಲ್ಲೆ ನಿಪ್ಪಾಣಿ ಮತಕ್ಷೇತ್ರದ ಸೌಂದಲಗಾ ಗ್ರಾಮದಲ್ಲಿ ಮಂಜೂರಾದ 1 ಕೋಟಿ 49 ಲಕ್ಷ ರೂ. ಮೊತ್ತದಲ್ಲಿ ದೂಧಗಂಗಾ ನದಿಯಿಂದ ಏತ ನೀರಾವರಿ ಯೋಜನೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆಯವರು ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಸಮಾರಂಭ ಸಂಪೂರ್ಣ ಮರಾಠಿಮಯವಾಗಿತ್ತು. ಅಧಿಕಾರ ಅನುಭವಿಸಲು ಕರ್ನಾಟಕ ಬೇಕು, ಆದರೆ ಮರಾಠಿ ವೋಟ್ ಬ್ಯಾಂಕ್ ಗಾಗಿ ಕನ್ನಡವನ್ನು ನಿರ್ಲಕ್ಷಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಚಿವೆ ಶಶಿಕಲಾ ಜೊಲ್ಲೆ ವಿರುದ್ದ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಮಳೆಯಿಂದ ಮಿನಿ ಮಲೆನಾಡಿನಂತಾದ ಸನ್ ಸಿಟಿ ಕಲಬುರಗಿ

  • ಅಥಣಿ ಕ್ಷೇತ್ರದ ಅಭಿವೃದ್ಧಿಗೆ ರಮೇಶ್ ಜಾರಕಿಹೊಳಿ ಕೊಡುಗೆ ಅಪಾರ: ಕುಮಟಳ್ಳಿ

    ಅಥಣಿ ಕ್ಷೇತ್ರದ ಅಭಿವೃದ್ಧಿಗೆ ರಮೇಶ್ ಜಾರಕಿಹೊಳಿ ಕೊಡುಗೆ ಅಪಾರ: ಕುಮಟಳ್ಳಿ

    ಚಿಕ್ಕೋಡಿ: ಅಥಣಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ಅವರ ಕೊಡುಗೆ ಅಪಾರವಾಗಿದೆ. ನೀರಾವರಿ ಇಲಾಖೆಯಡಿ ಅವರು ಅನೇಕ ಅಭಿವೃದ್ದಿ ಕಾರ್ಯಗಳಿಗೆ ಅನುದಾನ ನೀಡಿಲು ಸಹಕಾರ ನೀಡಿದ್ದಾರೆ. ಅವರ ಬೆಳವಣಿಗೆ ಸಹಿಸದೇ ರಾಜಕೀಯ ಷಡ್ಯಂತ್ರದಿಂದ ಈ ಎಲ್ಲ ಬೆಳವಣಿಗೆಗಳು ನಡೆದಿವೆ. ಆದಷ್ಟು ಬೇಗನೆ ಅವರು ಆರೋಪ ಮುಕ್ತರಾಗಲಿದ್ದಾರೆಂದು ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ್ ಕುಮಟಳ್ಳಿ ಅಭಿಪ್ರಾಯಾಪಟ್ಟಿದ್ದಾರೆ.

    ನಂದೇಶ್ವರ-ಜನವಾಡ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೆರಿಸಿ ಮಾತನಾಡಿದ ಮಹೇಶ್ ಕುಮಟಳ್ಳಿ ಅವರು, ಅಥಣಿ ಮತಕ್ಷೇತ್ರದಲ್ಲಿ ಶಿಕ್ಷಣ, ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಸುಧಾರಣೆ ಕೈಗೊಳ್ಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ನದಿ ದಂಡೆಯ ಗ್ರಾಮಗಳಿಗೆ ಶಾಪವಾಗಿರುವ ಸವಳು, ಜವಳು ಸಮಸ್ಯೆ ಹೋಗಲಾಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೂ ಆದ್ಯತೆ ನೀಡಿ ಅಭಿವೃದ್ಧಿ ಪಡಿಸಲಾಗುವುದೆಂದು ಹೇಳಿದರು. ಇದನ್ನೂ ಓದಿ: ಹತ್ತು ದಿನಗಳಲ್ಲಿ ನನ್ನ ಮುಂದಿನ ರಾಜಕೀಯ ನಿರ್ಣಯ: ರಮೇಶ್ ಜಾರಕಿಹೊಳಿ

    ಕೊರೊನಾ ನಿಯಂತ್ರಣಕ್ಕೆ ಬಂದಿದೆ ಎಂದು ಯಾರು ನಿರ್ಲಕ್ಷ್ಯ ಮಾಡಬೇಡಿ, ಯಾವ ರೂಪದಲ್ಲಿ ಬರುತ್ತದೆ ಎಂಬುದು ಗೊತ್ತಾಗುವುದಿಲ್ಲ, ಕುಟುಂಬದ ಮುಖ್ಯಸ್ಥರು, ಮನೆಯಲ್ಲಿರುವ ಹಿರಿಯರು ಮತ್ತು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕೆಂದು ಮನವಿ ಮಾಡಿಕೊಂಡರು.

    ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡ ರಮೇಶ್ ಗೌಡ ಪಾಟೀಲ್, ವಿರುಪಾಕ್ಷ ಹಿರೇಮಠ, ರಾಮಣ್ಣ ದೇವಣ್ಣವರ, ಬಾಳಾಸಾಹೇಬ ಪಾಟೀಲ್, ಪಿ.ಕೆ.ಪಿ.ಎಸ್ ಅಧ್ಯಕ್ಷ ಬಸಪ್ಪ ಮುಧೋಳ, ಶಿವಾನಂದ ಪಾಟೀಲ್, ಬಸಪ್ಪ ಚಂಡಕಿ, ಮಹೇಶಗೌಡ ಪಾಟೀಲ್, ಶ್ರೀಧರ, ಷಣ್ಮುಖ ಲಾಲಸಿಂಗಿ, ಕೆಂಚಪ್ಪ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

  • ಕೆ.ಸಿ.ವ್ಯಾಲಿ ಯೋಜನೆಯ ಮೂಲಕ ಬಂತು ಮೊದಲ ನೀರು- ಕುಣಿದು ಕುಪ್ಪಳಿಸಿದ ಕೋಲಾರದ ಮಕ್ಕಳು

    ಕೆ.ಸಿ.ವ್ಯಾಲಿ ಯೋಜನೆಯ ಮೂಲಕ ಬಂತು ಮೊದಲ ನೀರು- ಕುಣಿದು ಕುಪ್ಪಳಿಸಿದ ಕೋಲಾರದ ಮಕ್ಕಳು

    ಕೋಲಾರ: ಕೋರಮಂಗಲ ಚೆಲ್ಲಘಟ್ಟ (ಕೆ.ಸಿ.ವ್ಯಾಲಿ) ಏತ ನೀರಾವರಿ ಯೋಜನೆ ಅಡಿ ಕೋಲಾರ ಜಿಲ್ಲೆಯ ನರಸಾಪುರದ ಗ್ರಾಮಕ್ಕೆ ಮೊದಲ ಬಾರಿಗೆ ನೀರು ಬಂದಿದೆ.

    ತಮ್ಮ ಗ್ರಾಮದ ಕೆರೆಗೆ ಕೊನೆಗೂ ನೀರು ಬಂದ ಹಿನ್ನೆಲೆಯಲ್ಲಿ ನರಸಾಪುರ ಹೋಬಳಿಯ ಲಕ್ಷ್ಮೀಪುರ ಮಕ್ಕಳು ಕುಪ್ಪಳಿಸಿದ್ದಾರೆ. ಜೂನ್ 7 ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೆ.ಸಿ.ವ್ಯಾಲಿ ನೀರಾವರಿ ಯೋಜನೆ ಲೋಕಾರ್ಪಣೆ ಮಾಡಲಿದ್ದು, ಈ ಹಿನ್ನೆಯಲ್ಲಿ ಲಕ್ಷ್ಮೀಪುರ ಕೆರೆಗೆ ನೀರು ಹರಿಸಲಾಗುತ್ತಿದೆ. ಮೊದಲ ಬಾರಿ ಕೊಳವೆ ಮೂಲಕ ನೀರು ಬರುತ್ತಿರುವುದನ್ನು ಗ್ರಾಮಸ್ಥರು ಹಾಗೂ ಮಕ್ಕಳು ಕುತೂಹಲದಿಂದ ವಿಕ್ಷೀಸಿದರು.

    2016 ರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೆ.ಸಿ.ವ್ಯಾಲಿ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದರು. 12 ಸಾವಿರ ಕೋಟಿ ವೆಚ್ಚದಲ್ಲಿ ಜಿಲ್ಲೆಯ 126 ಕೆರೆಗಳಿಗೆ ನೀರು ಹರಿಸುವ ಯೋಜನೆಯ ಉದ್ದೇಶವಾಗಿದೆ. ಸ್ವಾತಂತ್ರ್ಯ ನಂತರ ಬಯಲು ಸೀಮೆ ಕೋಲಾರಕ್ಕೆ ಸಿಕ್ಕ ಮೊದಲ ನೀರಾವರಿ ಯೋಜನೆ ಇದಾಗಿದೆ.